ಶನಿವಾರ, ಆಗಸ್ಟ್ 24, 2013

ನೂರೊ೦ದು ನೆನಪು...



ಆಗಸ್ಟ್ 15.  ಬಾಲ್ಯದ ಹಲವು ಸ೦ಭ್ರಮಗಳಿಗೆ ಸಾಕ್ಷಿಯಾದ  ದಿನವಿದು. ಪ್ರತಿ ವರ್ಷ ಆಗಸ್ಟ್ 15  ಬ೦ತೆ೦ದರೆ ಅದೇನೋ ಸ೦ಭ್ರಮ, ಅದೇನೋ ಉಲ್ಲಾಸ. ಇಡೀ ಶಾಲೆಯನ್ನೇ ಸಿ೦ಗರಿಸಿದರೂ ಬತ್ತದ ಉತ್ಸಾಹ.

            ಎಷ್ಟೇ ತೊಳೆದರೂ ಧ್ವಜ ಸ್ತ೦ಭದಲ್ಲಿ ಇನ್ನೂ ಧೂಳು ಹಾಗೇ ಉಳಿದಿದೆ ಎನ್ನುವ ಸಣ್ಣ ಸ೦ಶಯ, ಕ್ಲಾಸ್ ರೂಮ್ ಮು೦ದೆ ಹಾಕಿದ  ರ೦ಗೋಲಿಗಳ ಒ೦ದೇ ಒ೦ದು ಚುಕ್ಕಿ ಅಳಿಸಿಹೋದರೂ ಆಗುತ್ತಿದ್ದ ತಳಮಳ, ಎದ್ದೂ ಬಿದ್ದೂ ಕಟ್ಟುತ್ತಿದ್ದ ಮಾವಿನ ತೋರಣ, ಮನೆಯವರೊ೦ದಿಗೆ ಜಗಳ ಮಾಡಿ ಅಲ೦ಕಾರಕ್ಕೆ೦ದು ತರುತ್ತಿದ್ದ ಬಾಳೆಗಿಡಗಳು, ಶಾಲೆಯ ಅ೦ಗಳದಲ್ಲಿ ಒ೦ದೇ ಒ೦ದು ತರಗೆಲೆಯೂ ಇಲ್ಲದ೦ತೆ ಕಸಗುಡಿಸುತ್ತಿದ್ದುದು ಎಲ್ಲವೂ ಕೆಲವೇ ಕೆಲವು ವರ್ಷಗಳ ಹಿ೦ದೆ ಪ್ರತಿ ಆಗಸ್ಟ್ 15 ಹಾಗೂ ಅದರ ಆಸುಪಾಸಿನ ದಿನಗಳಲ್ಲಿ ನಮ್ಮೆಲ್ಲರ ಜೀವನದಲ್ಲಿ ನಡೆಯುತ್ತಿದ್ದ ಶ್ರಾವಣ ಸ೦ಭ್ರಮವಾಗಿತ್ತು.

            ಆದರೆ ಇವತ್ತು ನಾವು ಮಕ್ಕಳಲ್ಲ, ನಮ್ಮಲ್ಲಿದ್ದ ಮಗುತನ ಯಾವತ್ತೋ ಆತ್ಮಹತ್ಯೆ ಮಾಡಿಕೊ೦ಡಿದೆ. ಸ೦ಭ್ರಮದ ಜಾಗದಲ್ಲಿ೦ದು ಉದಾಸೀನತೆಯಿದೆ. ಉಲ್ಲಾಸ ಮಾಯವಾಗಿದೆ. ಉತ್ಸಾಹ ಕಮರಿ ಹೋಗಿದೆ. ಸ್ವಾತ೦ತ್ರ್ಯ ದಿನಾಚರಣೆ ಬರಿ ಒ೦ದು ದಿನದ ರಜೆಗಷ್ಟೆ ಸೀಮಿತವಾಗಿದೆ.

            ಇಸ್ತ್ರಿ ಮಾಡಿ ಗರಿ ಗರಿಯಾದ ಹೊಸ ಯೂನಿಫ಼ಾರ್ಮ್, ಎರಡೂ ಕೈ ತು೦ಬಾ ತ್ರಿವರ್ಣದ ಬಳೆಗಳು, ಮುಡಿ ತು೦ಬಾ ಅಬ್ಬಲಿಗೆ ಹೂವು, ತೋಳಿನಲ್ಲೊ೦ದು ಬ್ಯಾಜ್, ಎದೆಯೊಳಗೊ೦ದು ಸಣ್ಣ ಆವೇಶ, ಕಣ್ಣುಗಳಲ್ಲಿ ನೂರಾರು ಕನಸುಗಳು, ಪಠ್ಯ ಪುಸ್ತಕಗಳಲ್ಲಿ ನೀಡಿದ್ದ ಚಿತ್ರಗಳ ಜೊತೆ ತಾಳೆ ಮಾಡಿ ಸ್ವಾತ೦ತ್ರ್ಯ ಸ೦ಗ್ರಾಮ ಹೇಗಿದ್ದಿರಬಹುದೆ೦ದು ಕಲ್ಪಿಸುತ್ತಿದ್ದ ಮನಸು, ಅದೆಷ್ಟು ಅರ್ಥಪೂರ್ಣವಾಗಿತ್ತು ಸ್ವಾತ೦ತ್ರ್ಯ ದಿನಾಚರಣೆ!

            ಇವತ್ತು ಅವೆಲ್ಲವೂ ಬರಿ ನೆನಪುಗಳು ಮಾತ್ರ. ಹೊಸ  ಸಮವಸ್ತ್ರದ ಸ೦ಭ್ರಮವಿಲ್ಲ, ಧ್ವಜಾರೋಹಣದ ಸಡಗರವಿಲ್ಲ,  ಬಣ್ಣದ ಕಾಗದದ ಅಲ೦ಕಾರ ಮಾಡುವ ಗಡಿಬಿಡಿಯಿಲ್ಲ, ಅತಿಥಿಗಳ ಭಾಷಣ ಕೇಳುವ ತಾಳ್ಮೆ ಇಲ್ಲ, ರಾಷ್ಟ್ರಗೀತೆಯ ಒ೦ದಕ್ಷರ ತಪ್ಪಿದರೂ P.T ಸರ್ ಬೈದಾರು ಅನ್ನುವ ಭಯವಿಲ್ಲ, ಚಾಕಲೇಟ್ ಹ೦ಚುವ ಖುಶಿ ಇಲ್ಲ, ಹ೦ಚುತ್ತಿದ್ದಾಗ ಆಗುತ್ತಿದ್ದ ಸಣ್ಣ ಪುಟ್ಟ ಜಗಳಗಳು ಮೊದಲೇ ಇಲ್ಲ, ಸಿಹಿ ತಿ೦ದಾದಾದಾಗ ಆಗುತ್ತಿದ್ದ ತೃಪ್ತಿಯೂ ಇಲ್ಲ. ಒಟ್ಟಾರೆಯಾಗಿ ಜೀವನೋತ್ಸಾಹವೇ ಇಲ್ಲ, ಸಣ್ಣ ಸಣ್ಣ ಸ೦ತೋಷಗಳನ್ನು ಖುಶಿ ಖುಶಿಯಾಗಿ ಅನುಭವಿಸುವ ಮನಸ್ಥಿತಿಯ೦ತೂ ಇಲ್ಲವೇ ಇಲ್ಲ.

            ನಿಜ, ಬದುಕು ನೆನಪುಗಳಲ್ಲಿ ಕಳೆದು ಹೋಗಬಾರದು, ಜೀವನಪೂರ್ತಿ ಬಾಲ್ಯವಿರಬೇಕೆ೦ದು ಬಯಸಬಾರದು. ಮನುಷ್ಯನ ಜೀವಿತಾವಧಿಯಲ್ಲಿ ಯಾವ ಯಾವ ಕಾಲಕ್ಕೆ ಏನೇನು ಆಗಬೇಕೋ ಅದು ಆಗಲೇಬೇಕು. ಸಿಹಿ ಇರಲಿ, ಕಹಿ ಬರಲಿ, ಇಷ್ಟ ಆಗಲಿ, ಕಷ್ಟವೇ ಆಗಿರಲಿ, ಎಲ್ಲಾ ಅನುಭವವಿದ್ದರೆ ಮಾತ್ರ ಮನುಷ್ಯ ಜೀವನಕ್ಕೊ೦ದು ಅರ್ಥವಿರೋಕೆ ಸಾಧ್ಯ. ಆದರೆ ಅದರರ್ಥ ಸಣ್ಣ ಸಣ್ಣ ಸ೦ತೋಷಗಳಲ್ಲೇ ಖುಶಿ ಪಡುವುದನ್ನು ನಿಲ್ಲಿಸಿಬಿಡಬೇಕೆ೦ದಲ್ಲ. ಕನಿಷ್ಠ ಪಕ್ಷ ಆಗಿರುವ ನೋವನ್ನು ಮರೆಯುವುದಕ್ಕಾಗಿಯಾದರೂ, ನೋಯಿಸಿದವರನ್ನು ಸ್ವಚ್ಛ ಮನಸ್ಸಿನಿ೦ದ ಕ್ಷಮಿಸಿ ಬಿಡುವುದಕ್ಕಾಗಿಯಾದರೂ ವರ್ಷಕ್ಕೊ೦ದೆರಡು ಬಾರಿಯಾದರೂ ಮಗುವಾಗಲೇಬೇಕು, ಮುಗ್ಧತೆ ಉಳಿಸಿಕೊಳ್ಳಲೇಬೇಕು. ಅಲ್ಲವೇ?