ಶನಿವಾರ, ಜುಲೈ 15, 2017

ಸೋಲು.

ಧೋ ಎಂದು ಸುರಿದ ಮಳೆಗೆ
ಹಸನಾದ ನೆಲದ ಒದ್ದೆಯ
ಕುರಿತು ಬರೆಯುವಾಗೆಲ್ಲಾ
ನಾನು ಸಂಪೂರ್ಣ ಸೋಲುತ್ತೇನೆ

ಹಾಗೆ ಹೇಳುವುದಾದರೆ, ಇದೇನು ಹೊಸತಲ್ಲ
ಸೋಲುವುದು ನನಗೀಗ ಅಭ್ಯಾಸವಾಗಿಬಿಟ್ಟಿದೆ

ಬಣ್ಣ ಬಣ್ಣದ ಗೊಂಬೆ ಮಾರುವ
ಹುಡುಗನ ಕಣ್ಣಿನ ಬಣ್ಣಗೇಡಿ
ಕನಸನ್ನು ಚಿತ್ರಿಸುವಾಗಲೂ
ನಾನು ಸೋತಿದ್ದೇನೆ

ವೃದ್ಧಾಶ್ರಮದ ಗೋಡೆಗೆ ಒರಗಿ ನಿಂತ
ಅಜ್ಜಿಯ ಕಣ್ಣಂಚಲ್ಲಿ ಹರಿದುಹೋದ
ಹನಿಯ ಲೆಕ್ಕವಿಡುವಲ್ಲೂ
ನಾನು ಸೋತಿದ್ದೇನೆ

ಕಲ್ಲು ತೂರುವವರ ಮತ್ತು
ಜೀಪಿಗೆ ಕಟ್ಟಿ ಎಳೆದೊಯ್ಯುವವರ
ಕ್ರೌರ್ಯವನ್ನು ಅಕ್ಷರಕ್ಕಿಳಿಸುವಾಗಲೂ
ಸೋತು ತಡವರಿಸಿದ್ದಿದೆ

ಸಿರಿಯಾ, ಇಥಿಯೋಪಿಯಾ, ಪ್ಯಾಲೆಸ್ತೀನ್,
ಪಕ್ಕದ ಬಾಂಗ್ಲಾ, ಲಂಕೆಯ ತಮಿಳರು
ನಿರಾಶ್ರಿತ ಪಂಡಿತರು, ಸದಾ ದೇಶಭಕ್ತಿಯ
ಸಾಕ್ಷಿ ಒದಗಿಸಲೇಬೇಕಾದ ಮುಹಮ್ಮದನ
ಬಗ್ಗೆ ಬರೆಯುವಾಗಲೂ ನಾನು ಸೋತಿದ್ದೇನೆ

ಇರಲಿ, ಸೋಲೆಂಬುವುದು ಮದ್ಯದಂತೆ
ಮೊದಲು ಒಗರೊಗರಾದರೂ
ಅಭ್ಯಾಸವಾಗಿಬಿಟ್ಟರೆ ಎಂತಹ
ದೇಹಕ್ಕೂ ಒಗ್ಗಿಬಿಡುತ್ತದೆ

ಅಷ್ಟೇಕೆ, ಧರ್ಮಾಗಳಾಚೆಗೆ ಸಾವೊಂದು
ಶೂನ್ಯತೆಯ ಹುಟ್ಟಿಸದ ಈ ಹೊತ್ತಲ್ಲೂ
ರಮ್ಯ ಕವಿತೆಯ ಬರೆಯ ಹೊರಟದ್ದೂ ಒಂದು ಸೋಲೇ
ನಿರ್ಲಜ್ಜ ಮನಸು ಆ ಸೋಲಿಗೂ
ಹೇಗೆ ಒಗ್ಗಿಕೊಂಡಿದೆ ನೋಡಿ

ಗೋಡೆಗಳ ಕೆಡವಿ, ಬರಿ ಮನುಷ್ಯತ್ವವ
ಬಯಲಲಿ ಉಳಿಸುವ ಕನಸೊಂದು
ಇನ್ನೂ ಉಸಿರಾಡುತ್ತಿದೆ
ಅದಾದರೂ ಸೋಲದಿರಲಿ, ಸಾಯದಿರಲಿ.

ಮಂಗಳವಾರ, ಜುಲೈ 11, 2017

ಲಂಕೇಶರ ಸುತ್ತಮುತ್ತ.

"ಎಂಥ ಅಪ್ಪನಿಗೆ ಎಂಥಾ ಮಗ", "ಹುಲಿ ಹೊಟ್ಟೆಯಲ್ಲಿ ನರಿ ಹುಟ್ಟಿದೆ", " ಅಧಿಕಾರದಾಸೆಯ ಮುಂದೆ ಅಪ್ಪನ ಆದರ್ಶಗಳೂ ಲೆಕ್ಕಕ್ಕಿಲ್ಲ"... ಹೀಗೆ ಕಳೆದೆರಡು ದಿನಗಳಿಂದ ಪುಂಖಾನುಪುಂಖವಾಗಿ ಸಾಮಾಜಿಕ ಜಾಲತಾಣಗಳಲ್ಲಿ ವಿಷಾದದಿಂದಲೋ, ಸಂಕಟದಿಂದಲೋ, ಹೇವರಿಕೆಯಿಂದಲೋ, ಪ್ರೀತಿಯಿಂದಲೋ, ದ್ವೇಷದಿಂದಲೋ, ಅಸಹನೆಯಿಂದಲೋ ಪೋಸ್ಟ್ ಗಳು, ಹೇಳಿಕೆಗಳು ಹರಿದಾಡುತ್ತಿವೆ.

ಯಾವಾಗ ಇಂದ್ರಜಿತ್ ಲಂಕೇಶರು ವೇದಿಕೆಯೊಂದರಲ್ಲಿ ತಾನು ಯಡಿಯೂರಪ್ಪನವತ ಹಿಂಬಾಲಕನಾಗುತ್ತೇನೆ ಅಂದರೋ, ಮಾಧ್ಯಮಗಳಲ್ಲಿ ಯಾವಾಗ ಆ ಸುದ್ದಿ ರೆಕ್ಕೆ-ಪುಕ್ಕಗಳೊಂದಿಗೆ ಪ್ರಸಾರವಾಯಿತೋ, ಆ ಕ್ಷಣದಲ್ಲೇ ಜಾಲತಾಣಗಳಲ್ಲಿ ಸಣ್ಣ ಕಂಪನವೆದ್ದುಬಿಟ್ಟಿತ್ತು. ಇಂದ್ರಜಿತರ ವಿರುದ್ಧವಾಗಿ ಮತ್ತು ಪರವಾಗಿ ಒಂದೆರಡು ಪೋಸ್ಟ್ಗ್ ಗಳು ಬರುತ್ತಿದ್ದಂತೆ ಆ ಸಣ್ಣ ಕಂಪನವೇ ಭೂಕಂಪವೇನೋ ಎಂಬಂತೆ ಬಿಂಬಿಸಲ್ಪಟ್ಟಿತು. ಇವತ್ತಿಗಾಗುವಾಗ ಫೇಸ್ ಬುಕ್, ವಾಟ್ಸಾಪ್ ಅಂತ ಎಲ್ಲಾ ಗೋಡೆಗಳಲ್ಲೂ ಅವರೇ ರಾರಾಜಿಸುತ್ತಿದ್ದಾರೆ.

ಬಹುಶಃ ನಾವು ಭಾರತೀಯರ ಮನಸ್ಥಿತಿಯೇ ಹೀಗೆಯೇ ಏನೋ? ವೈಭವೀಕರಿಸಿ ತಲೆಯ ಮೇಲೆ ಹೊತ್ತುಕೊಂಡು ತಿರುಗಲು ಅಥವಾ ಹಿಗ್ಗಾಮುಗ್ಗ ಬೈದು ನಮ್ಮೊಳಗಿನ ದುರ್ಬಲತೆಯನ್ನು ಮುಚ್ಚಿಟ್ಟುಕೊಳ್ಳಲು ಸದಾ ಒಂದು ಮಾಧ್ಯಮವನ್ನು ಬಯಸುತ್ತಿರುತ್ತೇವೆ. ಅದು ಮೋದಿ, ಟ್ರಂಪ್, ಪುತಿನ್, ಅರ್ನಬ್, ಬರ್ಖಾ ದತ್, ಯಡಿಯೂರಪ್ಪ, ಸಿದ್ಧರಾಮಯ್ಯ, ಇಂದ್ರಜಿತ್ ಅಷ್ಟೇಕೆ ಆಚೆ ಬೀದಿಯ ಮೂವತ್ತೈದರ ವಿಧವೆ... ಯಾರೂ ಆಗಿರಬಹುದು. ನಮ್ಮ ಆಡಿಕೊಳ್ಳುವ ಚಪಲಕ್ಕೊಬ್ಬ ಮನುಷ್ಯ ಬೇಕಷ್ಟೆ.

ಇಷ್ಟಕ್ಕೂ ಇಂದ್ರಜಿತರೇನು ಮಾಡಬಾರದ್ದನ್ನು ಮಾಡಿಲ್ಲ. ಒಂದು ವೇದಿಕೆಯ ಮೇಲೆ ನಿಂತು ಯಡಿಯೂರಪ್ಪರವರನ್ನು ತಮ್ಮ ನಾಯಕರೆಂದರು ಅಷ್ಟೆ. ಅದು ಅವರ ವೈಯಕ್ತಿಕ ನಿಲುವು. ಅಥವಾ ಅಧಿಕಾರದಾಸೆಗೇ ಹಾಗಂದರು ಅಂತಲೇ ಅಂದುಕೊಂಡರೂ, ಅದೂ ಅವರ ವೈಯಕ್ತಿಕ ಬಯಕೆಯೇ. ಯಾರ ವೈಯಕ್ತಿಕ ನಿಲುವುಗಳನ್ನು ಪ್ರಶ್ನಿಸುವ ಅಧಿಕಾರ ಯಾರಿಗೂ ಇಲ್ಲ. ದುರಂತವೆಂದರೆ, ಅವರು ಇದೇ ಮಾತುಗಳನ್ನು ಸಿದ್ಧರಾಮಯ್ಯನವರ ಬಗ್ಗೆ ಆಡಿದ್ದರೆ ಹೊತ್ತು ತಿರುಗುವವರ ಮತ್ತು ವಿರೋಧಿಸುವವರ ಪಾತ್ರ ಅದಲು ಬದಲಾಗಿರುತ್ತಿತ್ತು ಅಷ್ಟೆ.  ಒಬ್ಬ ಮನುಷ್ಯನ ಸಾವು, ಧರ್ಮಗಳಾಚೆಗೆ ನಮ್ಮಲ್ಲಿ ಒಂದು ಶೂನ್ಯತೆಯನ್ನು, ವಿಷಾದವನ್ನು ಹುಟ್ಟು ಹಾಕದ ಈ ವಿಷಮ ಪರಿಸ್ಥಿತಿಯಲ್ಲ್ಲೂ ಪರ-ವಿರೋಧದ ರಾಜಕೀಯ ತೀರಾ ಅಸಹ್ಯವೆನಿಸುತ್ತದೆ.

ಇಷ್ಟಕ್ಕೂ ಅವರು ಲಂಕೇಶರ ಉತ್ತರಾಧಿಕಾರಿ, ತಂದೆಯ ಆದರ್ಶಗಳನ್ನೆಲ್ಲಾ ಪಾಲಿಸಬೇಕು, ಅವರಂತೆಯೇ ಬದುಕಬೇಕು ಅಂತೆಲ್ಲಾ ನಾವೇಕೆ ಬಯಸಬೇಕು? ಇಂದ್ರಜಿತ್, ಲಂಕೇಶರ biological ವಾರಸ್ದಾರರಷ್ಟೇ, ಅವರ ವಿಚಾರಗಳ, ವಿವೇಕದ ವಾರಸುದಾರರಲ್ಲ.

ಲಂಕೇಶರೆಂದರೆ, ಒಂದಿಡೀ ತಲೆಮಾರಿಗೆ ರಾಜಕೀಯ ಪ್ರಜ್ಣೆಯನ್ನೂ, ಸಾಂಸ್ಕೃತಿಕ ಪ್ರಜ್ಞೆಯನ್ನೂ, ಕರ್ನಾಟಕ ಪ್ರಜ್ಞೆಯನ್ನೂ ಸದ್ದಿಲ್ಲದೆ ದಾಟಿಸಿದವರು. ಇನ್ನೊಂದು ತಲೆಮಾರಿನವರ ಪ್ರಜ್ಞೆಯಲ್ಲಿ, ತಮ್ಮ ಬರಹ, ಬದುಕಿನ ಮೂಲಕವೇ ಮೊಗೆದಷ್ಟೂ ಮುಗಿಯದ ಬೆರಗಾಗಿ, ಅಚ್ಚರಿಯಾಗಿ ಪ್ರತಿ ಕ್ಷಣ ಹುಟ್ಟುತ್ತಲೇ ಇರುವವರು. ಅವರ 'ಅವ್ವ' ಪದ್ಯ ನಮ್ಮೆಲ್ಲರ ತಾಯಿಯನ್ನು ಪ್ರತಿನಿಧಿಸುವ ಒಂದು ಅಮರ ಕಾವ್ಯ. ನಾಲ್ಕೇ ನಾಲ್ಕು ಸಾಲುಗಳಲ್ಲಿ ಕಲೆ, ಸಾಹಿತ್ಯ, ರಾಜಕೀಯ, ಇತಿಹಾಸ, ಪುರಾಣ, ಪ್ರೇಮ, ಕಾಮ, ವ್ಯಂಗ್ಯ, ವಿಡಂಬನೆ, ಹಾಸ್ಯ ಎಲ್ಲವನ್ನೂ ಕಟ್ಟಿಕೊಟ್ಟ ಅವರ 'ನೀಲು' ಕವಿತೆಗಳಂತೂ ಅತ್ಯದ್ಭುತ. ಲಂಕೇಶ್ ಎಂಬ ಸಾಕ್ಷೀಪ್ರಜ್ಞೆಯನ್ನು, ನಮ್ಮೊಳಗಿನ ಜಾಗೃತಿಯನ್ನು ಅವರ ಮಕ್ಕಳ ಹೇಳಿಕೆ, ನಿಲುವು, ಬದುಕಿನ ಕನ್ನಡಕದ ಮೂಲಕ ನೋಡುವುದೇ ಮೂರ್ಖತನ.

ಹೀಗಿದ್ದೂ, ಮಗ ತಂದೆಯಂತೆಯೇ ಇರಬೇಕು ಅನ್ನುವ ಸಿದ್ಧ ಸೂತ್ರಕ್ಕೆ ನಾವು ಕಟ್ಟು ಬೀಳುತ್ತೇವೆ ಅನ್ನುವುದಾದರೆ ಲಂಕೇಶರಂತಹ ಪರಮ ಗುರು ಈ ನಾಡಿಗೆ ದಕ್ಕುತ್ತಲೇ ಇರಲಿಲ್ಲ, ಕನ್ನಡ ಸಾಹಿತ್ಯ ಹೊಸದೊಂದು ಹಾದಿಗೆ ಹೊರಳುತ್ತಲೇ ಇರಲಿಲ್ಲ. ಯಾಕೆಂದರೆ ಅವರ ತಂದೆಯಂತೆ ಅವರೂ ಶಿವಮೊಗ್ಗದ ಹಳ್ಳಿಯೊಂದರ ರೈತನಾಗಿ ಯಾರಿಗೂ ಗೊತ್ತಿಲ್ಲದೆ ಬದುಕಿ, ಯಾರಿಗೂ ಗೊತ್ತಾಗದಂತೆ ಸತ್ತೂ ಹೋಗಬೇಕಿತ್ತು. ಹಾಗಾಗದಿರುವುದಕ್ಕೆ ಕಾರಣ, ಅವರ ಸ್ವತಂತ್ರ ನಿಲುವು ಹಾಗೂ ಯೋಚನೆಗಳೇ ಆಗಿವೆ. ಕೆಲವೊಮ್ಮೆ ಬಣ್ಣ, ಇನ್ನೂ ಕೆಲವೊಮ್ಮೆ ಎತ್ತರಗಳಷ್ಟೇ ವಂಶ ಪಾರಂಪರ್ಯವಾಗಿ ಬಂದಿರುತ್ತದೆ ವಿನಃ ಪ್ರಜ್ಞಾವಂತಿಕೆ, ವಿವೇಕ ಮತ್ತು ಚಿಂತನಾಶೀಲತೆಯಲ್ಲ ಅನ್ನುವ ಸಣ್ಣ ಸತ್ಯವನ್ನು ನಾವು ಮೊದಲು ಅರ್ಥಮಾಡಿಕೊಳ್ಳಬೇಕು.

ಎಲ್ಲಕ್ಕಿಂತ ಮುಖ್ಯವಾಗಿ ಯಾವುದೇ ರಾಜಕೀಯ ಸಿದ್ಧಾಂತದ ಆಯ್ಕೆ ಮತ್ತು ಅನುಸರಿಸುವಿಕೆ ವ್ಯಕ್ತಿಯೊಬ್ಬನ ವೈಯಕ್ತಿಕ ಇಚ್ಛೆಯ ವಿಚಾರ. ಅದಕ್ಕೆ ಮೂಗು ತೂರಿಸುವುದಾಗಲೀ, ಸಲಹೆ ಕೊಡುವುದಾಗಲೀ ಮಾಡುವ ಯಾವ ಅರ್ಹತೆಯೂ ಮೂರನೇಯವನಿಗಿಲ್ಲ. ಹಾಗೆ ಪ್ರಶ್ನಿಸುವುದು, ತಪ್ಪೆಂದು ವಾದಿಸುವುದು ನಮ್ಮಂತಹ ಪ್ರಜಾಪ್ರಭುತ್ವ ದೇಶದ ಆರೋಗ್ಯಕ್ಕೆ ಒಳ್ಳೆಯದೂ ಅಲ್ಲ. ಇಂದ್ರಜಿತ್ ರ ಹೇಳಿಕೆಯಲ್ಲಿ ಸೈದ್ಧಾಂತಿಕ, ರಾಜಕೀಯ, ತಾತ್ವಿಕ ಭಿನ್ನಾಭಿಪ್ರಾಯಗಳಿದ್ದರೆ ಅದನ್ನು ಸಮರ್ಥವಾಗಿ, ತರ್ಕಬದ್ಧವಾಗಿ ವಿರೋಧಿಸಲಿ. ಆದರೆ ಅಪ್ಪನಂತೆ ಮಗನಿರಬೇಕು ಅಂತ ಬಯಸುವುದು ಮತ್ತು ಹಾಗಿರದಿರುವುದಕ್ಕೆ ನಿಂದಿಸುವುದು ಸರ್ವಥಾ ಸರಿಯಲ್ಲ ಮತ್ತು ತೀರಾ ಅಪ್ರಬುದ್ಧ. ರಾಜಕೀಯ ನಿಲುವೆಂಬುವುದು ವ್ಯಕ್ತಿಯೊಬ್ಬನ ಸ್ವಂತ ಅಭಿಪ್ರಾಯಗಳ ಮೇಲೆ ಅವಲಂಬಿಸಿರಬೇಕು. ಅದು ಲಂಕೇಶರ ಮಕ್ಕಳಾದರೂ ಅಷ್ಟೆ, ರಾಜ್ ಕುಮಾರ್ ರ ಮಕ್ಕಳಾದರೂ ಅಷ್ಟೇ, ನಾವಾದರೂ ಅಷ್ಟೆ, ನಮ್ಮ ಮಕ್ಕಳಾದರೂ ಅಷ್ಟೆ.