ಗುರುವಾರ, ಡಿಸೆಂಬರ್ 28, 2017

ಬುದ್ಧನಿಂದ ಅಂಗುಲಿಮಾಲನವರೆಗೆ

ಹಿಂಸೆಯಿಂದ ಅಹಿಂಸೆಯತ್ತ ಹೊರಳಲು, ತಾನೇ ಸೃಷ್ಟಿಸಿಕೊಂಡ ಅಹಮ್ಮಿನ ಕೋಟೆಯಿಂದ ಹೊರಬರಲು, ಬದುಕಿನ ಎಲ್ಲಾ ಲಕ್ಸುರಿಗಳೂ ಕ್ಷುಲ್ಲಕ ಅನಿಸಲು, ತಾನು-ತನ್ನದು-ತನ್ನವರು ಅನ್ನುವ ಭ್ರಮೆಗಳೆಲ್ಲಾ ಕಳಚಿ ಬೀಳಲು ಅನಾಥ ಭಾವವೊಂದೇ ಸಾಕಾಗುತ್ತದೆ.

ಸಿದ್ದಾರ್ಥ ಬುದ್ದನಾಗಲು ಕಾರಣವಾದದ್ದು, ಬಾಹುಬಲಿ ರಾಜ್ಯ ತೊರೆಯಲು ಕಾರಣವಾದದ್ದೂ ಈ ಅನಾಥ ಭಾವವೇ. ಜ್ಞಾನೋದಯ, ಬೋಧಿ ವೃಕ್ಷ, ವೈರಾಗ್ಯ ಇವೆಲ್ಲಾ ಶಬ್ಧವೈಭವಗಳಷ್ಟೇ. ನಿಜಕ್ಕೂ ಮನುಷ್ಯ ಆತ್ಮವಿಮರ್ಶೆ ಮಾಡಿಕೊಂಡಷ್ಟು, ಒಂಟಿತನದ ಸಂಕಟವನ್ನು ಅನುಭವಿಸಿದಷ್ಟು , ಯಾವುದೂ ಶಾಶ್ವತವಲ್ಲ ಅನ್ನುವ ಭಾವ ಗಟ್ಟಿಯಾದಷ್ಟು, ಬದುಕಿನ ಬರ್ಬರತೆಯನ್ನೂ ಎಂಜಾಯ್ ಮಾಡುವಷ್ಟು ಪಕ್ವವಾದಂತೆ ಅವನ ಮನಸ್ಸು ಸೂಕ್ಷ್ಮವಾಗುತ್ತಾ ಹೋಗುತ್ತದೆ, ಸುತ್ತಲಿನ ಪ್ರತೀ ಕ್ರಿಯೆಗಳಿಗೂ ಸ್ಪಂದಿಸುತ್ತಾ ಹೋಗುತ್ತಾನೆ. ಕಣ್ಣೆದುರಿಗೆ ವಿಲ ವಿಲ ಒದ್ದಾಡುತ್ತಾ ಗುಬ್ಬಿ ಮರಿಯೊಂದು ಪ್ರಾಣ ಬಿಟ್ಟಾಗ ಎಷ್ಟು ನೋವಾಗುತ್ತೋ ಅದೇ ತೀವ್ರತೆಯನ್ನು ಕೋಳಿ ಮರಿ ಸತ್ತಾಗಲೂ ಅನುಭವಿಸುತ್ತಾನೆ. ಆಗ ಅವನೊಳಗೇ ಒಂದು ಬೋಧಿ ವೃಕ್ಷ ಚಿಗುರುತ್ತದೆ, ಅರಿವಿನ ಜ್ಞಾನ ತನ್ನಿಂತಾನಾಗಿಯೇ ಹಬ್ಬಿಕೊಳ್ಳುತ್ತದೆ. ಬಹುಶಃ ಬುದ್ಧನಿಗೂ, ಬಾಹುಬಲಿಗೂ ಕೊನೆಗೆ ಅಂಗುಲಿ ಮಾಲನಿಗೂ ಆದದ್ದು ಇದೇ ಇರಬೇಕು.

ಧ್ಯಾನವೆಂಬುವುದು ಹಿಮಾಲಯ ಏರಿ ಯಾವುದೋ ವೃಕ್ಷದಡಿಯಲ್ಲಿ ವರ್ಷಗಟ್ಟಲೆ ಕಣ್ಣು ಮುಚ್ಚಿ ಕೂತು ಒಳಗಿನ ಆಗುಹೋಗುಗಳನ್ನು ಅರಿತುಕೊಳ್ಳುವುದಷ್ಟೇ ಅಲ್ಲ. ಅದು ನಮ್ಮ ಪ್ರತೀ ಕ್ರಿಯೆಗಳ ಬಳಿಕ ಉಳಿದು ಬಿಡುವ ಒಂದು ಕ್ಷಣದ ನಿಶಬ್ದ. ದಿನದ ಯಾವುದೋ ಒಂದು ತಿರುವಿನಲ್ಲಿ ಸುಮ್ಮನೆ ಕಾಡುವ ಚಣ ಹೊತ್ತಿನ ಮೌನ. ಎರಡು ನಿಡಿದಾದ ಉಸಿರಿನ ಮಧ್ಯೆ ಕಣ್ಣು ಬಿಡುವ ಪುಟ್ಟ ನೀರವತೆ. ಶಬ್ದಗಳ ಸಂತೆಯೊಳಗೂ ಹುಟ್ಟುವ ಶಾಂತತೆ.  ಜಗತ್ತಿನ ಮಹಾನುಭಾವರೆಲ್ಲರ ಭಾವಗಳು ಪರಿಪಕ್ವವಾದದ್ದು ಇಂತಹ ಕೆಲವು ನೀರವ, ನಿಶಬ್ದ,  ಮೌನ ಮತ್ತು ಶಾಂತತೆಯಲ್ಲೇ.  ಕಣ್ಣಿಗೆ ಕಾಣದ ಮಾನವತಾ ಲೋಕದ ಅರಿವು ಒಳಗಣ್ಣುಗಳಲ್ಲಿ ಪ್ರತಿಬಿಂಬಿಸುವುದು ಇಂತಹ ಕ್ಷಣಗಳಲ್ಲೇ.

ಎಲ್ಲಾ ಇದ್ದೂ ಯಾವುದೂ ತನ್ನದಲ್ಲ ಅನ್ನುವ ಭಾವ ಬಲಿತಂತೆ ಮನುಷ್ಯನ ಅಹಂಕಾರ ಇಂಚು ಇಂಚಾಗಿ ಸಾಯತೊಡಗುತ್ತದೆ. ಕೊನೆಗೊಂದು ದಿನ ಎಲ್ಲಾ ಅಹಂ, ಸಿಟ್ಟು, ಸೆಡವು, ಅನಗತ್ಯದ ಆವೇಶ ಎಲ್ಲಾ ಖಾಲಿಯಾಗುತ್ತದೆ. ಆಗವನು ನಿಜಾರ್ಥದಲ್ಲಿ ಮನುಷ್ಯನಾಗುತ್ತಾನೆ, ಬುದ್ಧ ಅರಮನೆ ತೊರೆದು ಹೊರಟದ್ದೂ ಎಲ್ಲಾ ಬರಿದಾದ ಒಂದು ಸಂಧಿಕಾಲದಲ್ಲೇ. ರೋಗ, ಮುಪ್ಪು, ಸಾವು ಇವೆಲ್ಲಾ ಬರೀ ನೆಪಗಳಷ್ಟೇ.

ಹಾಗೆ ಬರಿದಾಗಲು, ಖಾಲಿಯಾಗಲು ಬೇಕಾಗಿರುವುದು ಬೋಧಿವೃಕ್ಷವಲ್ಲ, ಇತರರೂ ತಮ್ಮಂತೆಯೇ ಅನ್ನುವ ಸಣ್ಣ ಅರಿವು. ಆ ಅರಿವು ಎಲ್ಲರಲ್ಲೂ ಮೂಡಬೇಕಾಗಿರುವುದು, ಎಲ್ಲರನ್ನೂ ಒಳಗೊಳ್ಳಬೇಕಾಗಿರುವುದು ಈ ಹೊತ್ತು ಜಗತ್ತು ಬಯಸುತ್ತಿರುವ ತುರ್ತು.

ಎಲ್ಲರನ್ನೂ ಅಂದರೆ, ಬುದ್ಧನ ಅನುಯಾಯಿ ಅನ್ನುತ್ತಲೇ ಅಮಾಯಕರ ಮಾರಣ ಹೋಮ ನಡೆಸುತ್ತಿರುವ ಮಯನ್ಮಾರಿಗರನ್ನೂ, ಪ್ರವಾದಿಯವರ ಸಂದೇಶ ಪಾಲಿಸುತ್ತೇನೆ ಅನ್ನುತ್ತಲೇ ರಕ್ತಕಾಲುವೆ ಹರಿಸುವ ಹಿಂಸಾಪ್ರಶುಗಳನ್ನೂ, ಗುರುನಾನಕರ ಕರುಣೆ ಮರೆತ ಅವರ ಶಿಷ್ಯರನ್ನೂ, ಏಸುವಿನ ಹಿಂಬಾಲಕರಾಗಿದ್ದೂ ದ್ವೇಷ ಹರಡುವವರನ್ನು, ಕೃಷ್ಣನ ಭಕ್ತರೆನ್ನುತ್ತಲೇ ಮುಗ್ಧರ ಪ್ರಾಣ ಬಲಿಪಡೆಯುವವರನ್ನು ...  ಎಲ್ಲರನ್ನೂ ಒಳಗೊಳ್ಳಬೇಕು.

ಆಗಷ್ಟೇ ಪ್ರತಿ ಅಂಗುಲಿಮಾಲನಲ್ಲೂ ಗುಪ್ತವಾಗಿ ಪ್ರವಹಿಸುವ ಬುದ್ದರು ಪ್ರಕಟಗೊಳ್ಳಲು ಸಾಧ್ಯ.

ಬುಧವಾರ, ಡಿಸೆಂಬರ್ 13, 2017

ಪ್ರತೀ ರಾಜಕುಮಾರಿಯ ಬದುಕೂ ಬೆಳಗಲಿ.

ಹಾಡು, ಹಸೆ, ರಂಗೋಲಿ, ಓದು , ಮನೆ ಮುಂದಿನ ಗಾರ್ಡನ್, ಬಾಲ್ಕನಿಯ ಮೂಲೆಯಲ್ಲಿನ ಗುಬ್ಬಚ್ಚಿ ಗೂಡು, ಮೋಡದ ಮರೆಯ ಸೂರ್ಯ ಇವೆಷ್ಟೇ ಪ್ರಪಂಚ ಅಂದುಕೊಂಡಿದ್ದ ಅವಳ ಬದುಕು ನಾಳೆ ಬೆಳಗಾಗುವ ಹೊತ್ತಿಗೆ ಬದಲಾಗಲಿದೆ. ಹಗಲುಗನಸು, ಹುಸಿಮುನಿಸು, ಕೀಟಲೆ, ಅಧಿಕಪ್ರಸಂಗಿತನ ಇಷ್ಟಕ್ಕೇ ಸೀಮಿತವಾಗಿದ್ದ ಅವಳ ಜಗತ್ತು ನಾಳೆ ಆಗುವಷ್ಟರಲ್ಲಿ ಬದಲಾಗಲಿದೆ.  ಕನ್ನಡಿಯ ಮುಂದೆ ನಿಂತಿರುವವಳ ಕಣ್ಣುಗಳಲ್ಲೀಗ ನೂರು ಕನಸು, ರೆಪ್ಪೆಗಳೊಳಗೆ ಸುಳ್ಳೇ ಸುಳ್ಳು ಆತಂಕ. ಇಡೀ ರಾತ್ರಿ ಸುರಿದ ಮಳೆಗೆ ಹಸನಾದ ಒದ್ದೆ ಮಣ್ಣಿನ ಕಂಪು ಅವಳನ್ನೊಮ್ಮೆ ಬಳಸಿ ಅಲ್ಲೇ ಅಂತರ್ಧಾನವಾಯಿತು. ನಾಳೆ ಹಸೆಯೇರುವವಳ ಮುಂದೀಗ ನೆನಪುಗಳ ರಾಶಿ.

ಮನೆ ಪಕ್ಕದ ಚಿಲ್ಟೆ ಪಲ್ಟೆಗಳನ್ನೆಲ್ಲಾ ಸೇರಿಸಿ ಕಾಡಿಗೆ ಅಣಬೆ ಹೆಕ್ಕಲು ಹೋದದ್ದು, ಒಂದಿಡೀ ದಿನವನ್ನು ನದಿ ತೀರದಲ್ಲಿ ನವಿಲುಗರಿ ಹುಡುಕುತ್ತಾ ಕಳೆದದ್ದು, ಹರಿವ ತೊರೆಯ ಮುಂದೆ ಹೊಂಬಣ್ಣದ ಮೀನಿಗಾಗಿ ಗಂಟೆಗಟ್ಟಲೆ ಕಾದು ಕೂತದ್ದು, ಮಣ ಭಾರದ ಕಿರೀಟ, ಸುತ್ತಿದಷ್ಟೂ ಮುಗಿಯದ ಸೀರೆ ಉಟ್ಟುಕೊಂಡು ಶಾಲೆಯ ವೇದಿಕೆಯಲ್ಲಿ ರಾಣಿ ಅಬ್ಬಕ್ಕನಾಗಿ ಅಬ್ಬರಿಸಿದ್ದು, ಉದ್ದ ಲಂಗಕ್ಕಾಗಿ ಅಪ್ಪನ ಜೊತೆ ಜಗಳ ಮಾಡಿದ್ದು,  ಮಂಡಿ ಮೇಲಾದ ತರಚು ಗಾಯವನ್ನು ಅಮ್ಮನಿಂದ ಮುಚ್ಚಿಡಲು ಪಟ್ಟ ಪರಿಪಾಡಲು... ಎಲ್ಲಾ ನಿನ್ನೆ ಮೊನ್ನೆ ನಡೆದದ್ದೇನೋ ಅನ್ನುವಷ್ಟು ಹಸಿರಾಗಿರುವಾಗಲೇ ಅವಳ ಮುಂದೆ ಈಗ ರಾಜಕುಮಾರನೊಬ್ಬ ಬಿಳಿ ಕುದುರೆ ಏರಿ ಬರುವ ಕನಸು, ಅಥವಾ ಬರಲೇಬೇಕಾದ ಅನಿವಾರ್ಯತೆ.

ಶಾಲೆ, ಕಾಲೇಜು, ಓದು, ಬದುಕಿನ ಅನಿವಾರ್ಯತೆಗಳು, ಅಗತ್ಯದ ಹೊಂದಾಣಿಕೆ, ಅಥವಾ ಇನ್ಯಾವುದೇ ಚೆಂದದ ಹೆಸರಿಟ್ಟರೂ ಒಂದು ದಿನ ಎಲ್ಲರೂ ತಮ್ಮಲ್ಲಿನ ಮುಗ್ಧತೆಯನ್ನು ಕಳೆದುಕೊಳ್ಳಲೇಬೇಕಾಗುತ್ತದೆ. ಹಾಡಿ, ಕುಣಿದು, ನಲಿದ ದಿನಗಳು ಬರಿ ನೆನಪಾಗಿಯೇ ಉಳಿದುಬಿಡುತ್ತವೆ. ಬಹುಶಃ ದೊಡ್ಡವರಾಗುವ, ಬದುಕುವ ಪ್ರಕ್ರಿಯೆಗೆ ನಾವು ತೆರಬೇಕಾಗಿರುವ ಬಹುದೊಡ್ಡ ಬೆಲೆ ಮುಗ್ಧತೆಯನ್ನು ಕಳೆದುಕೊಳ್ಳುವುದೇ ಆಗಿದೆ.

ಮನೆ, ಸುತ್ತಲಿನ ಪ್ರಕೃತಿ, ಅದರ ಚೈತನ್ಯ, ಅದು ಉಕ್ಕಿಸುವ ಹುಮ್ಮಸ್ಸು ಒಂದು ರೀತಿಯಲ್ಲಿ ಪ್ರತಿಯೊಬ್ಬರ ಬದುಕಲ್ಲೂ ಪ್ರಭಾವ ಬೀರಿದಂತೆ, ಹಾಸ್ಟೆಲ್, ಪಿ.ಜಿ ಗಳು ಮತ್ತೊಂದು ರೀತಿಯ ಪ್ರಭಾವ ಉಳಿಸಿಬಿಡುತ್ತದೆ. ಅದರಲ್ಲೂ ಹುಡುಗಿಯರ ಹಾಸ್ಟೆಲ್, ಪಿ.ಜಿಗಳೆಂದರೆ ಅದೊಂದು ಕಲರ್ಫುಲ್ ಲೋಕ.

ರಾಶಿ ರಾಶಿ ಗೊಂದಲಗಳು, ಸಣ್ಣ ಮಟ್ಟಿಗಿನ ಅಸೂಯೆ, ತಣ್ಣಗೆ ಹೊಗೆಯಾಡುವ ಮತ್ಸರ, ಗೋಡೆಗಳಿಗೂ ಗೊತ್ತಾಗದಂತೆ ಹುಟ್ಟಿಕೊಳ್ಳುವ ಗಾಸಿಪ್ ಗಳು, ಅದು ಸರಿಯಿಲ್ಲ, ಇದು ಸರಿಯಾಗಿಲ್ಲ ಎಂದೆಲ್ಲಾ ಗೊಣಗುವ ಮನಸ್ಸುಗಳು, ಮೂರ್ಹೊತ್ತೂ ಕನ್ನಡಿಗೆ ಅಂಟಿಕೊಂಡಿರುವ ಜೀವಗಳು, ಆಗಾಗ ಕಣ್ಣಕೊಳವ ಕದಡುವ ಕಾಡಿಗೆ, ಕಣ್ಣು ಒಂದಿಷ್ಟು ದೊಡ್ಡದಾಗಿದ್ದಿದ್ದರೆ, ಮೂಗು ತುಸು ನೀಳವಾಗಿದ್ದಿದ್ದರೆ, ಸ್ವಲ್ಪ ಬೆಳ್ಳಗಿದ್ದಿದ್ದರೆ... ಗಳಂತಹ 'ರೆ' ಸಾಮ್ರಾಜ್ಯದ ಹಳಹಳಿಕೆಗಳು, ಇವೆಲ್ಲದರ ನಡುವೆ 'ಮೊದಲಿನಂತೆ ಸ್ವಚ್ಛಂದವಾಗಿ ಇರಲಾಗುತ್ತಿಲ್ಲ, ನಾನು ಇನ್ಯಾರದೋ ಬದುಕನ್ನು ಬದುಕುತ್ತಿದ್ದೇನೆ' ಅನ್ನುವ ಕೊರಗು ಅವಳ ಮನಸ್ಸನ್ನು ಒಡೆದ ಕನ್ನಡಿಯಾಗಿಸುತ್ತದೆ; ಮುಟ್ಟಿದಲ್ಲೆಲ್ಲಾ ಸೂಕ್ಷ್ಮ ಗೀರುಗಳು.

ಕಾಣದ ನೋವು, ಹತಾಶೆಗಳನ್ನು ಪಿ.ಜಿಯ ಹೊಸ್ತಿಲೊಳಗೆ ಹೂತಿಡಬೇಕಾದ ಅಸಹಾಯಕತೆಯ ಮಧ್ಯೆಯೇ ಒಂದು ದಿನ ಅಪ್ಪನೋ, ಅಮ್ಮನೋ ಕರೆ ಮಾಡಿ ನಾಳೆ ವರಪರೀಕ್ಷೆಗೆ ರೆಡಿಯಾಗು ಅನ್ನುತ್ತಾರೆ. ಅವಳೂ ತನ್ನ ಹೊಯ್ದಾಟಗಳನ್ನೆಲ್ಲಾ ಮುಚ್ಚಿಟ್ಟು, ಸೀರೆ ಉಟ್ಟು, ಮಲ್ಲಿಗೆ ಮುಡಿದು ರೆಡಿಯಾಗುತ್ತಾಳೆ. ಹುಡುಗ ಒಪ್ಪಿ, ಅವಳಿಗೂ ಇಷ್ಟವಾದರೆ ಭಾವನದಿಯ ಹರಿವು ಸರಾಗ. ಒಪ್ಪದಿದ್ದರೆ ಮತ್ತೊಂದು ಪರೀಕ್ಷೆವರೆಗೂ ಅದೇ ಹೊಯ್ದಾಟ. ಕೆಲವೊಮ್ಮೆ ಯಾರದೋ ಒತ್ತಾಯಕ್ಕೆ ಕಟ್ಟುಬಿದ್ದು ಇಷ್ಟವಿಲ್ಲದ ಹುಡುಗನ‌ ಕೈ ಹಿಡಿಯಬೇಕಾದ ಅನಿವಾರ್ಯತೆಯೂ ಸೃಷ್ಟಿಯಾಗುತ್ತದೆ. ಆಗಲೇ ಅವಳ ಮನದ ಕನ್ನಡಿಯ ಗೀರು ಸ್ಪಷ್ಟವಾಗುವುದು, ಅವಳೆದೆಯ ನದಿ ಸದ್ದಿಲ್ಲದೆ ಬತ್ತಿ ಹೋಗುವುದು.

ಎಲ್ಲಾ ನೋವುಗಳ ಮೀರಿ ಜಗತ್ತನ್ನು ಚೆಂದಗಾಣಿಸುತ್ತೇನೆಂದು ಹೊರಡುವ ಪ್ರತಿ ಹೆಣ್ಣುಮಗಳ ಮನಸ್ಸೂ ಮದುವೆಯ ಹೊಸ್ತಿಲಲ್ಲೊಮ್ಮೆ ಗೊಂದಲಕ್ಕೆ ಬಿದ್ದು ಬಿಡುತ್ತದೆ. ಅದು 'ಅಡುಗೆ ಬರಲ್ಲ' ಅನ್ನುವಲ್ಲಿಂದ ಹಿಡಿದು, 'ಪರಿಚಯವಿರದವರ ಮಧ್ಯ ಹೇಗಪ್ಪಾ ಬದುಕಲಿ?' ಅನ್ನುವವರೆಗಿನ ಹಿಂಜರಿಕೆ. 'ಮನೆಯವರನ್ನೆಲ್ಲಾ ಬಿಟ್ಟು ಹೇಗಿರಲಿ?' ಎಂಬಲ್ಲಿಂದ 'ಎಲ್ಲಿ, ಏನು ಮಾತಾಡಿದರೆ ತಪ್ಪಾಗಿಬಿಡುತ್ತೋ' ಎಂಬಲ್ಲಿವರೆಗಿನ ಕಳವಳ. 'ಹವ್ಯಾಸಗಳನ್ನೆಲ್ಲಾ ಬಿಡಬೇಕಾಗುತ್ತದೇನೋ?' ಅಂತನ್ನುವಲ್ಲಿಂದ 'ಅಡುಗೆ ಮನೆಗಷ್ಟೇ ಸೀಮಿತವಾಗಿಬಿಡುತ್ತೇನೇನೋ?' ಅಂತನ್ನುವವರೆಗಿನ ದಿಗಿಲು. ಸರ್ವ ಆತಂಕ, ಹಿಂಜರಿಕೆ, ದಿಗಿಲು, ಕಳವಳಗಳ ಮೀರಿ, ಎಲ್ಲಾ ಬಂಧಗಳನ್ನು ತೊರೆದು, ಎಲ್ಲಾ ನೆನಪುಗಳನ್ನು ಕಟ್ಟಿಹಾಕಿ ಮತ್ತೊಂದು ಮನೆ ಬೆಳಗ  ಹೊರಡುವ ಪ್ರತಿ ಮನೆಯ ರಾಜಕುಮಾರಿಯ ಬದುಕೂ ಬೆಳಗಲಿ.

ಮಂಗಳವಾರ, ಡಿಸೆಂಬರ್ 12, 2017

ಕತ್ತಲಿದ್ದರೇ ಬೆಳಕಿಗೆ ಅಸ್ತಿತ್ವ; ಬೆಳಕಿದ್ದರೆ ಮಾತ್ರ ಕತ್ತಲೆಗೆ ತೂಕ

ಕತ್ತಲಿನ ಗರ್ಭದಿಂದಲೇ ಬೆಳಕಿನ ಹುಟ್ಟು, ಬೆಳಕಿನ ಗರ್ಭಕುಸುಮದಿಂದಲೇ ಕತ್ತಲಿನ ಉಗಮ. ಅವೆರಡೂ ವಿರುದ್ಧ ಪದಗಳಲ್ಲ. ಒಂದೇ ಸ್ಥಿತಿಯ ಒಂದಕ್ಕೊಂದು ಪೂರಕವಾದ ಎರಡು ಧ್ರುವಗಳು. ಕತ್ತಲು ಅಜ್ಞಾನ, ಬೆಳಕು ಜ್ಞಾನ ಅನ್ನುವುದೆಲ್ಲಾ ಮನುಷ್ಯನ ಅಲ್ಪ ತಿಳುವಳಿಕೆಗಳಷ್ಟೇ. ಅವನ ಅರಿವು, ತಿಳುವಳಿಕೆ ಗಾಢವಾದಷ್ಟು, ಆಳವಾದಷ್ಟು ಅವನು ಕತ್ತಲಲ್ಲಿ ಬೆಳಕನ್ನೂ, ಬೆಳಕಲ್ಲಿ ಕತ್ತಲನ್ನೂ ಕಾಣಬಲ್ಲ. ಇಷ್ಟಕ್ಕೂ 'ಕಾಣ್ಕೆ' ಅನ್ನುವುದೇ ಅಂತರಂಗದ ಅರಿವಲ್ಲವೇ?

'ತಮಸೋಮ ಜ್ಯೋತಿರ್ಗಮಯ' ಅನ್ನುವುದನ್ನು ಶಿಶು ವಿಹಾರದಲ್ಲೇ ಕೇಳುತ್ತಾ ಬೆಳೆದವರು ನಾವು. ಅಷ್ಟೇಕೆ? 'ಕರುಣಾಳು ಬಾ ಬೆಳಕೇ ಮುಸುಕಿದೀ ಮಬ್ಬಿನಲಿ...' ಅನ್ನುವ ಹಾಡನ್ನು ಕೇಳದ, ಹಾಡದ ಕನ್ನಡದ ಮನಸ್ಸುಗಳೇ ಇಲ್ಲವೇನೋ? ಬೆಳಕೆಂದರೆ ನಮಗೆ ಅಷ್ಟು ಸಂಭ್ರಮ, ಅದು ಭವ್ಯತೆಯ ಸಂಕೇತ. ನಮ್ಮ ಪಾಲಿಗದು ಎಲ್ಲವನ್ನೂ ಒಳಗೊಳ್ಳುವ ಜಗದ ಮೂಲ ಸೆಲೆ.

ಬೆಳಕಿಲ್ಲದಿದ್ದರೆ ಪ್ರಕೃತಿಯ ರಮಣೀಯತೆ, ರೌದ್ರತೆ, ವಿಹಂಗಮತೆ, ಸೌಂದರ್ಯ, ಹಸಿರು ಯಾವುದೂ ಯಾರ ಅರಿವಿಗೂ ನಿಲುಕುತ್ತಿರಲಿಲ್ಲ. ಗುಡಿಸಲಿನ ಸೂರನು ಹೊದೆಯ ಬೆಳಕು, ಅರಮನೆಯ ಛಾವಣಿಯನ್ನೂ ಹೊದೆಸುತ್ತದೆ. ಮಗುವ ತೂಗುವ ತೊಟ್ಟಿಲು, ಅಜ್ಜನ ಕೋಲು, ಅಜ್ಜಿಯ ಸುಕ್ಕುಗಟ್ಟಿದ ಮುಖ, ಪೇಪರ್ ಮಾರುವ ಹುಡುಗನ ಹಣೆ, ಪಾತ್ರೆ ತಿಕ್ಕುವ ಹುಡುಗಿಯ ಕೈಬಳೆ, ತರಕಾರಿ ಗಾಡಿಯವನ ಸಂತೃಪ್ತ ಕಣ್ಣು... ಹೀಗೆ ಬೆಳಕು ಆವರಿಸಿಕೊಳ್ಳದ, ತನ್ನನು ಆವಾಹಿಸಿಕೊಳ್ಳದ ಪ್ರದೇಶವೇ ಇಲ್ಲವೇನೋ?

ಹಾಗಿದ್ದರೆ ಬೆಳಕೆಂದರೆ ಇಷ್ಟೇನಾ? ಊಹೂಂ, ಅಲ್ಲ. ಕತ್ತಲಿನ ಗರ್ಭಪಾತ್ರೆಯಿಂದ ಹೊರಳುವ ಬೆಳಕು ಒಂದು ಮಗ್ಗುಲಾಗುವಷ್ಟರಲ್ಲಿ ಜಗವಿಡೀ ವ್ಯಾಪಿಸಿ, ಎಲ್ಲವನ್ನೂ ಬೆತ್ತಲಾಗಿಸುವುದೇ ಒಂದು ಚೆಂದ. ಬಹುಶಃ ಆ ಸೌಂದರ್ಯವನ್ನು ಪ್ರಪಂಚದ ಯಾವ ಭಾಷೆಯೂ ವಿವರಿಸಲಾರದೇನೋ. ಅಥವಾ ಯಾವ ಭಾಷೆಗೂ ಆ ಸೌಂದರ್ಯವನ್ನು ದಕ್ಕಿಸಿ, ವಿವರಿಸುವಷ್ಟು ಸಾಮರ್ಥ್ಯ ಇಲ್ಲವೇನೋ?

ನೀವೇ ಹೇಳಿ, ಹಂಚಿನ ಸಂದಿಯಿಂದ ಇಳಿದು ನೆಲವ ತಬ್ಬುವ ಬಿಸಿಲ ಕೋಲಿನ ಸೌಂದರ್ಯವನ್ನಾಗಲೀ, ಪಾರಿಜಾತ ದಳದ ಮೇಲಿನ ಹನಿಯಲಿ ಪ್ರತಿಫಲಿಸುವ ಬೆಳಕಿನ ಅನನ್ಯತೆಯನ್ನಾಗಲೀ, ಚಂದಿರನ ಶೀತಲತೆಯನ್ನಾಗಲೀ , ಅದು ಇದ್ದಂತೆಯೇ ಇಡಿ ಇಡಿಯಾಗಿ ವಿವರಿಸುವ ಭಾಷೆಯೊಂದಾದರೂ ಈ ಜಗದಲ್ಲಿರಬಹುದೇ;  ಮೌನವನ್ನು ಹೊರತುಪಡಿಸಿ?

ಅದಕ್ಕೇ, ಬೆಳಕೆಂದರೆ ಅದು ಧ್ಯಾನಸ್ಥ ಮನದ ಮೂಲೆಯಲ್ಲಿ ಚಕ್ಕಳ-ಮಕ್ಕಳ ಹಾಕಿ ಕುಳಿತುಕೊಂಡಿರುವ ಮೌನವೇನೋ ಅಂತ ಆಗಾಗ ನನಗನ್ನಿಸುತ್ತಿರುತ್ತದೆ. ಹಾಗಿದ್ದರೆ ಕತ್ತಲು? ಅದು ಶಬ್ದವೇ? ನಿಶಬ್ದವೇ? ಅಜ್ಞಾನವೇ? ಸಾವೇ?

ಅಲ್ಲ, ಕತ್ತಲೆಂಬುವುದು ಹುಟ್ಟಿನ ಗರ್ಭಕೋಶ, ಹಲವು ನಿಜದ ಕಥೆಗಳ ಭ್ರೂಣ.

ಕೆಲವೊಮ್ಮೆ ಕತ್ತಲೆಂದರೆ ಏಕಾಂತ. ಅದು ಬುದ್ಧನ ಧ್ಯಾನದಷ್ಟೇ ಗಾಢ... ಪ್ರಪಂಚದ ಪ್ರತಿಯೊಂದು ಚರಾಚರಗಳೂ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿರುವುದೇ ಕತ್ತಲೆಂಬ ಅನನ್ಯತೆಯ ಮೂಲಕ.

ಇನ್ನೂ ಕೆಲವೊಮ್ಮೆ ಕತ್ತಲೆಂದರೆ ಕರುಣೆ ಕೂಡ. ಎಲ್ಲಾ ಸತ್ಯಗಳನ್ನೂ ಬಿಡುಬೀಸಾಗಿ ಬಿಚ್ಚಿಡುವ ಬೆಳಕಿನ ಕ್ರೌರ್ಯಕ್ಕಿಂತ, ಸುಳ್ಳೇ ಆದರೂ, ಭ್ರಮೆಯೇ ಆದರೂ ಕಟುಸತ್ಯಗಳನ್ನು ಕಣ್ಣಿಂದ ದೂರವಿರಿಸುವ ಕತ್ತಲಿನ ಭ್ರಾಮಕ ಸಹನೂಭೂತಿಯೇ ಆಪ್ತವಾಗುತ್ತದೆ.
ಮತ್ತೂ ಕೆಲವೊಮ್ಮೆ ಕತ್ತಲೆಂದರೆ ಪ್ರೀತಿಯ ದರ್ಶಕ. ಪ್ರೀತಿಯ ಚರಮ ಸೀಮೆಗಳ ಸ್ಪರ್ಶ ಸಾಧ್ಯವಾಗೋದು ಕತ್ತಲಲ್ಲಿ ಮಾತ್ರ ಅಥವಾ ಸಾಧ್ಯವಾಗಿಸುವುದು ಕತ್ತಲು ಮಾತ್ರ. ಇನ್ನೊಂದಿಷ್ಟು ಸಮಯಗಳಲ್ಲಿ ಕತ್ತಲೆಂದರೆ ಒಂದು ಹನಿ ಮೋಹ. ಕತ್ತಿನ ಸೆರೆಯಲ್ಲೆಲ್ಲೋ ಸಾಂದ್ರವಾಗಿ ಇನ್ನೇನು ಹರಿಯಬೇಕು ಅನ್ನುವಷ್ಟರಲ್ಲಿ ಮತ್ತಿನ್ನೊಂದಿಷ್ಟು ಹೊತ್ತು ಇದ್ದುಬಿಡಬೇಕು ಅನ್ನುವ ಆಸೆ ಹುಟ್ಟಿಸುವ ಬಿಂಕ. ಮತ್ತೂ ಕೆಲವೊಮ್ಮೆ ಕತ್ತಲೆಂದರೆ ಯಾವ ಅಕ್ಷರಗಳಿಗೂ, ಪದಗಳಿಗೂ, ವ್ಯಾಖ್ಯೆಗಳಿಗೂ ನಿಲುಕದ ಅನಂತತೆ. ಇನ್ನೂ ಕೆಲವೊಮ್ಮೆ ಕತ್ತಲೆಂದರೆ ಅಪಧಮನಿ ಅಭಿದಮನಿಗಳ ಅಸ್ಪಷ್ಟ ತಿರುವುಗಳಲ್ಲಿ ಚಿಗೊರೊಡೆದ ಕನಸುಗಳು ಬಲಿತು ದೇಹವಿಡೀ ಹಬ್ಬುವ ವಿಹಂಗಮ ಸಮಯ.

ಕತ್ತಲನ್ನುವುದೇ ಪರಿಪೂರ್ಣತೆ. ಗಣಿತದ ' ಇನ್ಫಿನಿಟಿ' ಅನ್ನುವ ಪರಿಕಲ್ಪನೆ ಇದೆಯಲ್ಲಾ ಅದರಷ್ಟೇ ಅಗಾಧ. ಎಷ್ಟು ಕಳೆದರೂ, ಎಷ್ಟು ಕೂಡಿದರೂ ವ್ಯತ್ಯಾಸವೇನೂ ಆಗದು. ಅಲ್ಲಿ ಕೂಡುವ, ಕಳೆಯುವ ಲೆಕ್ಕಾಚಾರಗಳೆಲ್ಲವೂ ವ್ಯರ್ಥ; ಕತ್ತಲಿದ್ದರೇ ಬೆಳಕಿಗೆ ಅಸ್ತಿತ್ವ, ಬೆಳಕಿದ್ದರೆ ಮಾತ್ರ ಕತ್ತಲೆಗೆ ತೂಕ ಅನ್ನುವ ಅರಿವನ್ನು ಹೊರತುಪಡಿಸಿ.

ಭಾನುವಾರ, ಡಿಸೆಂಬರ್ 10, 2017

ಬಾ ಕುಳಿತುಕೋ

ಸಖೀಗೀತದ ಸಖಿಯರಿಗೆಲ್ಲಾ
ದೀರ್ಘ ರಜೆ

ಬಾ ಕುಳಿತುಕೋ
ಹಾಸು ಸಿದ್ಧವಾಗಿದೆ
ಒಂದು ಪಗಡೆಯಾಡೋಣ

ಇರು, ಅವಸರ ಬೇಡ
ಇಷ್ಟಿಷ್ಟೇ ಬೆಳಗುವ
ಹಣತೆಗೆ ಎಣ್ಣೆ ಹೊಯ್ಯುತ್ತೇನೆ

ದಣಿದ ಹಣೆಯ ಬೆವರನು
ಬೆರಳ ತುದಿಯಿಂದ ಕೊಡೆಯುವ
ಸುಖವ ಕಲಿಸಬೇಕಿದೆ ನಿನಗೆ

ತಂಗಾಳಿ ಸೋಕಿ ಹಗುರಾದ
ಸಂಪಿಗೆಯ ಮೆಲ್ಲುಸಿರ ಕೇಳು.
ಏನು ಕೇಳಿಸದೆ?
ಉಸಿರಿಗೆ ಉಸಿರ ದಾಟಿಸು ಒಮ್ಮೆ

ಚೆದುರಿದ ಹುಬ್ಬುಗಳ ತೀಡಬೇಕಿಲ್ಲ
ಪಾದಗಳ ಹೊಸೆದು ತನುವ ತಾಕಿ
ಹೊತ್ತು ಹರಿಯುವವರೆಗೆ ಹೀಗೆ
ಕುಳಿತಿರು ಸಾಕು.

ಶನಿವಾರ, ಡಿಸೆಂಬರ್ 9, 2017

'ಓದುಗ ದೊರೆ'ಗೆ ಮೋಸ ಮಾಡಿದ ಬರಹ ಮಾಂತ್ರಿಕ.

ಅದು 2003. ನಾನಿನ್ನೂ ಆಗ ಹೈಸ್ಕೂಲ್ ಹುಡುಗಿ. ಬದುಕಿನ ಅಂಗಳದೊಳಕ್ಕೆ 'ಹರೆಯ' ಕಳ್ಳ ಹೆಜ್ಜೆಯಿಟ್ಟು ಪ್ರವೇಶಿಸುತ್ತಿತ್ತಷ್ಟೆ. ಕಪ್ಪು ಬಿಳುಪು ಕನಸುಗಳಿಗೆಲ್ಲಾ ಹರೆಯದ ರಂಗು. ಎಳೆ ಬಿಸಿಲು, ಅರಳುತ್ತಿರುವ ಪಾರಿಜಾತ, ಜಾಜಿ ಮಲ್ಲಿಗೆ, ಇಬ್ಬನಿ, ಹೊಂಬಣ್ಣದ ಧೂಳು, ಬಾಗಿ ನಿಂತ ಪೈರು, ಹಸುವಿನ ಗೊರಸು ಹೀಗೆ ಎಲ್ಲದರಲ್ಲೂ ಕಾವ್ಯ ಕಾಣಿಸುತ್ತಿತ್ತು.

ಇಂತಹ ಕಂಬಳಿ ಹುಳ ಚಿಟ್ಟೆಯಾಗಿ ರೂಪಾಂತರವಾಗುವ ಸಮಯದಲ್ಲಿ ನನಗೆ ಸಿಕ್ಕಿದ್ದು ' ಓ ಮನಸೇ' ಪಾಕ್ಷಿಕ, ಅದರ ಜೊತೆಜೊತೆಗೆ 'ರವಿ ಬೆಳಗೆರೆ' ಎಂಬ ಅಕ್ಷರ ಮಾಂತ್ರಿಕ. ಆ ಪುಸ್ತಕದ ಪ್ರತಿ ಅಕ್ಷರಗಳೂ ಕಂಠಪಾಠ ಆಗುವಷ್ಟು ಬಾರಿ ಅದನ್ನು ಓದುತ್ತಿದ್ದೆ. ಪ್ರತಿ ಬಾರಿ ಓದಿದಾಗಲೂ ಅದೆಷ್ಟು ಚೆನ್ನಾಗಿ ಬರೆಯುತ್ತಾರಲ್ಲಾ ಎಂಬ ಬೆರಗಿಗೆ ಬಿದ್ದು ಬಿಡುತ್ತದೆ. ಅದೇ ಸಮಯದಲ್ಲಿ 'ವಿಜಯ ಕರ್ನಾಟಕ' ಪತ್ರಿಕೆಯಲ್ಲಿ ಪ್ರತಿ ಭಾನುವಾರ ಪ್ರಕಟವಾಗುತ್ತಿದ್ದ ಅವರ 'ಸೂರ್ಯ ಶಿಕಾರಿ' ಅಂಕಣ ಓದಬೇಕೆಂದು ಸೂರ್ಯ ಹುಟ್ಟುವ ಮೊದಲೇ ಎದ್ದು ಕೂರುತ್ತಿದ್ದೆ.

ಹೀಗೆ ರವಿ ಬೆಳಗೆರೆಯೆಂಬ ಅದ್ಭುತ ಶೈಲಿಯ ‌ಬರಹಗಾರನ ಪ್ರತಿ ಅಕ್ಷರಗಳು ನನ್ನೊಳಗೆ ಇಳಿಯುತ್ತಿದ್ದಾಗ ನನ್ನ ಪುಸ್ತಕ ಪ್ರಪಂಚವನ್ನು ಹೊಕ್ಕ ಪುಸ್ತಕವೇ 'ಹೇಳಿ ಹೋಗು ಕಾರಣ'. ಅದುವರೆಗೆ ಕನ್ನಡದ ಕೆಲವು 'ಕ್ಲಾಸಿಕ್' ಪುಸ್ತಕಗಳನ್ನಷ್ಟೇ ಓದಿದ್ದ ನನ್ನ ಮುಂದೆ ಮತ್ತೊಂದು ಪ್ರಪಂಚವೇ ತೆರೆದುಕೊಂಡಂತಾಗಿತ್ತು.

ಅದೆಷ್ಟು ಚೆನ್ನಾಗಿ ಸಂಬಂಧಗಳ ಬಗ್ಗೆ, ಪ್ರೀತಿಯ ಬಗ್ಗೆ ಬರೆಯುತ್ತಾರಲ್ಲಾ ಅಂತ ಅಂದುಕೊಳ್ಳುವಾಗ ಮತ್ತೆ ನನ್ನ ಪುಸ್ತಕ ಸಂಗ್ರಹಕ್ಕೆ ಸೇರಿದ್ದು 'ಮಾಂಡೋವಿ'. ಹರೆಯದಲ್ಲಿ ಪ್ರೀತಿಸಿದ ಹುಡುಗಿಯನ್ನು ಜೀವನದ ಸಂಧ್ಯಾಕಾಲದಲ್ಲಿ ಸಂಗಾತಿಯಾಗಿ ಪಡೆದುಕೊಂಡ ಅದ್ಭುತ ಪ್ರೇಮದ ಬಗೆಗಿನ ಅತ್ಯದ್ಭುತ ಪುಸ್ತಕವದು. ಅವರೇ ಮುನ್ನುಡಿಯಲ್ಲಿ ಅಂದಂತೆ ಕೈ ಇಟ್ಟಲ್ಲೆಲ್ಲಾ ಪ್ರೇಮದ ಹುಡಿ ಅಂಟಿಕೊಳ್ಳುತ್ತಿತ್ತು.

'ನೀ ಹಿಂಗ ನೋಡಬೇಡ ನನ್ನ' 'ಅಮ್ಮ ಸಿಕ್ಕಿದ್ಳು', 'ಬಾಟಂ ಐಟಂ', 'ಖಾಸ್ ಬಾತ್' ಹೀಗೆ ಬೆಳಗೆರೆ ಎಂಬ ಹೆಸರು ಹೊತ್ತು ಬರುತ್ತಿದ್ದ ಎಲ್ಲಾ ಪುಸ್ತಕಗಳನ್ನು ಜಿದ್ದಿಗೆ ಬಿದ್ದಂತೆ ಓದತೊಡಗಿದೆ. ಈ ನಡುವೆ ಬದುಕು ಮಾಗಿತು, ಕಳ್ಳ ಹೆಜ್ಜೆಯಿಟ್ಟು ಬರುತ್ತಿದ್ದ ಹರೆಯ ನನ್ನ ಸಂಪೂರ್ಣ ಆವರಿಸಿಕೊಂಡಿತು. ಹೈಸ್ಕೂಲ್ ನಿಂದ ಡಿಗ್ರಿಯವರೆಗಿನ ಪಯಣದಲ್ಲಿ ನಿರಂತರವಾಗಿ ನನ್ನ ಜೊತೆಗಿದ್ದ ಬೆಳಗೆರೆ ಪುಸ್ತಕಗಳು ಯಾಕೋ ಹೇಳಿದ್ದನ್ನೇ ಹೇಳುತ್ತಿವೆ ಅನಿಸತೊಡಗಿತು. ಅದಾಗ್ಯೂ ಗುರುಗಳು, ಕೆಲ ಸ್ನೇಹಿತರು ಅವರ ವೈಯಕ್ತಿಕ ಬದುಕಿನ ಅಪಸವ್ಯಗಳ ಬಗ್ಗೆ ಮಾತಾಡುವಾಗೆಲ್ಲಾ ನಾನು 'ಅದು ಅವರ ವೈಯಕ್ತಿಕ ಬದುಕು, ನನಗೂ ಅವರ ಖಾಸಗಿ ಜೀವನಕ್ಕೂ ಯಾವ ಸಂಬಂಧವೂ ಇಲ್ಲ, ನನ್ನೇದೇನಿದ್ದರೂ ಪುಸ್ತಕ ಪ್ರೀತಿ' ಅಂತ ಬಲವಾಗಿಯೇ ವಾದ ಮಂಡಿಸುತ್ತಿದ್ದೆ.

ಆದರೆ ಆ ಹೊತ್ತಿಗಾಗುವಾಗಾಗಲೇ ಕ್ಲಾಸಿಕ್ ಕೃತಿಗಳ ಮತ್ತು ಜನಪ್ರಿಯ ಪುಸ್ತಕಗಳ ನಡುವಿನ ವ್ಯತ್ಯಾಸ ತುಂಬಾ ಸ್ಪಷ್ಟವಾಗಿ ಅರ್ಥವಾಗಿತ್ತು. ಗಟ್ಟಿ ಚಿಂತನೆ, ಅಧ್ಯಯನ ಶೀಲತೆ, ಆಳದ ಜ್ಞಾನ ಇವ್ಯಾವುದೂ ಬೆಳಗೆರೆ ಬರಹಕ್ಕೆ ದಕ್ಕಿಸಿಕೊಳ್ಳಲಾಗದು ಅನ್ನುವ ಸತ್ಯ ಅರ್ಥವಾಗಿತ್ತು. ಹರೆಯದ ಭಾವೋದ್ವೇಗ, ಮಾಟ-ಮಂತ್ರ, ಸರ್ಪಸಂಬಂಧಗಳ ರೋಚಕತೆ, ಪ್ರೇಮಿಯ ನೋವು, ಸಂಬಂಧಗಳನ್ನು ಕಳೆದುಕೊಂಡಾಗಿನ ಸಂಕಟ, ಅವಾಸ್ತವ ಆಪ್ತತೆ, ಹಸಿ ಹಸಿ ಕ್ರೌರ್ಯ.... ಇದಾರಾಚೆಗೆ ಬೆಳಗೆರೆ ಬರಹಗಳು ಒಂದು ದೊಡ್ಡ ಶೂನ್ಯವಷ್ಟೇ ಅಂತ ಅನಿಸತೊಡಗಿತು. ಅಲ್ಲಿಗೆ ಬೆಳಗೆರೆ ಪುಸ್ತಕಗಳನ್ನು ಓದುವುದನ್ನೇ ನಿಲ್ಲಿಸಿಬಿಟ್ಟೆ. ಇಷ್ಟಾಗಿಯೂ ಅವರ ಅಂಕಣಗಳನ್ನು (ಕೊಂಡು ಓದದ್ದಿದರೂ) ಓದುವ ಹವ್ಯಾಸ ನಿಂತಿರಲಿಲ್ಲ. ಆದರೆ ಯಾವಾಗ ಆತ್ಮರತಿ ಮಿತಿ ಮೀರಿತೋ ಆಗಲೇ ಅವರ ಅಂಕಣಳನ್ನು ಓದುವುದನ್ನೂ ನಿಲ್ಲಿಸಿಬಿಟ್ಟೆ.

ಈಗ್ಗೆ ಕೆಲವು ಸಮಯಗಳಿಂದ ಅವರ ಯಾವ ಬರಹವನ್ನೂ ಓದಿಲ್ಲ, ಓದಬೇಕೆಂದು ಅನಿಸಿಯೂ ಇಲ್ಲ. ಆದರೆ ಒಂದಿಷ್ಟು ವರ್ಷಗಳ ಕಾಲ ನನ್ನನ್ನು ಅವರ ಬರಹಗಳು ಎಂಗೇಜ್ ಆಗಿಸಿದ್ದವು. (ಸೂಕ್ಷ್ಮವಾಗಿ ಗಮನಿಸಿದರೆ, ನನ್ನ ಬರಹಗಳಲ್ಲೂ ಅವರ ಶೈಲಿಯ ಪ್ರಭಾವ ಕಾಣುತ್ತದೆ.) ಈಗ ತಿರುಗಿ ನೋಡಿದರೆ, ಭಾಷೆಯ ಬಳಕೆಯಲ್ಲಿ ಅವರಿಗಿದ್ದ ನೈಪುಣ್ಯತೆಯನ್ನು ಹೊರತುಪಡಿಸಿ ಇನ್ಯಾವ ವಿಚಾರವೂ ಕಾಡುವುದಿಲ್ಲ.

ಲಂಕೇಶರು ಕನ್ನಡದ ಮಣ್ಣಲ್ಲಿ ಬಿತ್ತಿ ಹೋದ 'ಟ್ಯಾಬ್ಲಾಯ್ಡ್' ಸಂಸ್ಕೃತಿಯನ್ನು ಯಶಸ್ವಿಯಾಗಿ ಮುಂದುವರೆಸಿಕೊಂಡು ಹೋಗಬಲ್ಲ ಎಲ್ಲಾ ಛಾತಿ ಹಾಗೂ ಅವಕಾಶವಿದ್ದ ಬೆಳಗೆರೆಯವರು ಅತಿರೇಕದ, ಅತಿರಂಜನೀಯತೆಯ, ಅತಿ ಭಾವುಕತೆಯ ಸಾಹಿತ್ಯದ ಕಡೆಗೆ ಒಲವು ಬೆಳೆಸಿಕೊಂಡು, ಟ್ಯಾಬ್ಲಾಯ್ಡ್ ಗಳೆಂದರೆ ವಿಕ್ಷಿಪ್ತತೆಯ ಅನಾವರಣವಷ್ಟೇ ಅನ್ನುವ ಅರ್ಥಕ್ಕೆ ಸೀಮಿತಗೊಳಿಸಿದರು.

ಇವತ್ತು ಆ ಸೀಮಿತತೆಯೇ ಅವರನ್ನು ನಿಲ್ಲಬಾರದ ಜಾಗದಲ್ಲಿ ನಿಲ್ಲಿಸಿದೆ. ತಪ್ಪು ಮಾಡಿದ್ದರೆ ಶಿಕ್ಷೆ ಆಗಲೇಬೇಕು. ಅವರದೇ ಮಾತಿನಲ್ಲಿ ಹೇಳುವುದಾದರೆ 'ಎಸಗಿದ ತಪ್ಪುಗಳಿಗೆಲ್ಲಾ ಬದುಕು ಕಡ್ಡಾಯವಾಗಿ ಕಂದಾಯ ಕಟ್ಟಿಸಿಕೊಳ್ಳುತ್ತದೆ'.