ಗುರುವಾರ, ಮೇ 30, 2019

ಕಡಲ ಭೋರ್ಗರೆತ ಮತ್ತು ಗೆಳತಿಯ ಪ್ರೇಮ ನೈರಾಶ್ಯ.

ರಾತ್ರಿಯ ಮೂರನೇ ಜಾವದಲ್ಲಿ ದೂರದ ಕಡಲಿನ  ಭೋರ್ಗರೆತ ಕೇಳಿತೆಂದರೆ ಸಾಕು ಸುಮ್ಮನೆ ಎದ್ದು ಕೂತುಬಿಡುತ್ತೇನೆ ನಾನು. ಸದ್ದಾಗದಂತೆ  ಬಾಲ್ಕನಿಯಿಂದ ಕೆಳಗೆ ಜಿಗಿದು ಯಾರಿಗೂ ಹೇಳದೇ ಕಡಲಿನೆಡೆಗೆ ಹೋಗಿ ತೀರದ ಪೂರ್ತಿ ಸುಸ್ತಾಗುವಷ್ಟು ನಡೆಯಬೇಕು, ಇನ್ನು ಒಂದು ಹೆಜ್ಜೆಯೂ ಮುಂದಿಡಲಾರೆ ಅನ್ನುವಷ್ಟು ನಡೆಯುತ್ತಲೇ ಇರಬೇಕು, ಕೊನೆಗೆ ಸುಸ್ತಾಗಿ ಮರಳ ಮೇಲೆ ಬಿದ್ದು ನಿದ್ದೆ ಹೋಗಬೇಕು, ಆ ರಾತ್ರಿಯ ಶೀತಲ ಗಾಳಿ ಕೆನ್ನೆ ಸವರಿದಂತೆಲ್ಲಾ ಯಾವುದೋ ಕನವರಿಕೆಯಲ್ಲಿದ್ದಂತೆ ಮಗ್ಗುಲು ಬದಲಾಯಿಸಬೇಕು, ನಡು ನಡುವೆ ಎಚ್ಚರಾದಾಗೆಲ್ಲಾ ಯಾರಿಗೂ ಕೇಳಿಸದ ಕಡಲಿನ ಸಂಗೀತಕ್ಕೆ ಕಿವಿಗೊಡಬೇಕು, ಅನಾದಿಕಾಲದಿಂದಲೂ ಇಲ್ಲೇ ವಾಸ್ತವ್ಯವಾಗಿದ್ದೇವೆ ಎಂಬಂತೆ ಪೋಸ್ ಕೊಡುವ ಮರಿ ಏಡಿಗಳನ್ನು ಕಾಲ ಮೇಲೆ ಹತ್ತಿಸಿಕೊಂಡು ಕಚ್ಚಿಸಿಕೊಳ್ಳುವ ವಿಚಿತ್ರ ಸುಖ ಅನುಭವಿಸಬೇಕು, ಜೇಬಿನ ಪೂರ್ತಿ ಮರಳು ತುಂಬಿಕೊಂಡು ದೂರ ಹೋಗಿ ಮನೆಕಟ್ಟಬೇಕು, ಇಲ್ಲದ ಕಡಲಿನ ದೆವ್ವವನ್ನು ಕಲ್ಪಿಸಿಕೊಂಡು ಸುಳ್ಳೇ ಸುಳ್ಳು ಹೆದರಬೇಕು ಅಂತೆಲ್ಲಾ ಅಂದುಕೊಳ್ಳುತ್ತೇನೆ.

ಹೀಗೆ ಅನ್ನಿಸಿದಾಗೆಲ್ಲಾ ಒಂದೋ ಪಕ್ಕದಲ್ಲಿ ಪವಡಿಸಿರುವ ಗಂಡನನ್ನು ಎಬ್ಬಿಸಿ 'ಗಂಟೆ ಎಷ್ಟಾಯ್ತು' ಅಂತ ಕೇಳಿ ಮತ್ತೆ ಮಲಗಲು ಪ್ರಯತ್ನಿಸುತ್ತೇನೆ ಇಲ್ಲ ಕಾಣದ ಕಡಲಿಗೆ ಬಯ್ಯುತ್ತಾ ಮತ್ತೆ ಕೌದಿ ಎಳೆದುಕೊಳ್ಳುತ್ತೇನೆ. ಆಷಾಢದ ಆ ರಾತ್ರಿಯೂ  ಗಂಡನನ್ನು ಎಬ್ಬಿಸಲಾ ಅಥವಾ ಸುಮ್ಮನೆ ಮಲಗಿಕೊಳ್ಳಲಾ ಎಂಬ ಗೊಂದಲದಲ್ಲಿರುವಾಗಲೇ ಮೊಬೈಲ್ ಬೀಪ್ ಎಂದಿತ್ತು. ತೆರೆದು ನೋಡಿದರೆ ಜೀವದ ಗೆಳತಿಯ ಮೆಸೇಜ್. "ನನಗೆ ಮತ್ತೆ ಲವ್ ಆಗಿದೆ ಕಣೇ, ಈ ಬಾರಿ ಮಾತ್ರ ಸೀರಿಯಸ್ ಲವ್" ಅಂತಿತ್ತು.

ಕಳೆದ ಬಾರಿ ಲವ್ ಬ್ರೇಕ್ ಆದಾಗ ಇದೇ ಗೆಳತಿ ಇನ್ಮುಂದೆ ಜಾತಕ ನೋಡದೇ ಲವ್ ಮಾಡೋದೇ ಇಲ್ಲ, ಜಾತಕ ಕೂಡಿ ಬಂದರಷ್ಟೇ ಪ್ರೀತಿ, ಮದುವೆ ಇತ್ಯಾದಿ ಅಂದದ್ದು ನೆನಪಾಗಿ, ಎಷ್ಟನೇ ಬಾರಿ ನಿನಗೆ ಸೀರಿಯಸ್ ಲವ್ ಆಗ್ತಿರೋದು? ಅಂತ ಮೆಸೇಜ್ ಕುಟ್ಟಬೇಕು ಅಂದುಕೊಂಡೆ. ಆದರೆ ದೂರದ ಕಡಲಿನ ಮೊರೆತ, ಕಿವಿಯ ಪಕ್ಕದಲ್ಲೇ ಗುಂಯ್ ಗುಡುವ ಸೊಳ್ಳೆ, ಅಪರಾತ್ರಿಯ ಅವಳ ಲವ್ ಎಲ್ಲಾ ಸೇರಿ ಒಂದು ರೀತಿಯ ರೇಜಿಗೆ ಹುಟ್ಟಿಸಿ ಅವಳನ್ನು ನಾಳೆ ವಿಚಾರಿಸಿಕೊಂಡರಾಯಿತು ಎಂದು ಸುಮ್ಮನೆ ಮಲಗಿದೆ.

ಮೊದಲೇ ಹೇಳಿದಂತೆ ಅವಳಿಗೆ ಪ್ರೀತಿಯಾಗೋದು, ಬ್ರೇಕ್ ಅಪ್ ಆಗೋದು, ಎರಡು ದಿನ ಅಳೋದು, ಮೂರನೇ ದಿನ ಇನ್ಯಾರನ್ನೂ ಕಣ್ಣೆತ್ತಿಯೂ ನೋಡುವುದಿಲ್ಲ, ಯಾರ ಕನಸಲ್ಲೂ ಇನ್ಮುಂದೆ ಹೋಗುವುದೇ ಇಲ್ಲ ಅಂತೆಲ್ಲಾ ಪ್ರತಿಜ್ಞೆ ಮಾಡುವುದು, ಮತ್ತೆ ಪ್ರೀತಿಯಾಗುವುದೆಲ್ಲಾ ಹೊಸತಲ್ಲ. ಉಕ್ಕಿ ಹರಿಯುವ ಜೀವನ ಪ್ರೀತಿ, ಅವಳ ತುಂಟತನ, ಆಪ್ತತೆ ಉಕ್ಕಿಸುವ ಮಾತು, ಮುಗ್ಧ ಮುಖಭಾವ, ಬದುಕನ್ನು ಉತ್ಕಟತೆಯಿಂದ ಬದುಕಬೇಕು ಎನ್ನುವ ಮನೋಭಾವ  ಎಂಥವರ ಎದೆಯಲ್ಲೂ ಪ್ರೀತಿ ಹುಟ್ಟಿಸಬಲ್ಲದು. ತಿಳಿ ಬಣ್ಣವನ್ನು ಇಷ್ಟಪಟ್ಟು ಧರಿಸುವ ಅವಳ ಬದುಕಿನ ಆಯ್ಕೆಯೂ ತಿಳಿಗೊಳದಷ್ಟೇ ಪ್ರಶಾಂತವಾಗಿರುತ್ತದೆ ಎಂದು ನಾನು ಬಲವಾಗಿ ನಂಬುತ್ತೇನೆ. ಹೊಟ್ಟೆ ಕಿಚ್ಚಾಗುವಷ್ಟು ಚಂದದ ಪ್ರೇಮ ಕವಿತೆ ಬರೆಯುವ, ಸದಾ ನಗುವ, ನಗಿಸುವ, ಚೈತನ್ಯದ ಚಿಲುಮೆಯಂತಿರುವ, ಸಣ್ಣ ಸ್ವರದಲ್ಲಿ ಭಾವಗೀತೆ ಹಾಡಿಕೊಳ್ಳುವ, ಒಪ್ಪವಾಗಿ ರಂಗೋಲಿ ಹಾಕುವ ಅವಳು ನನಗೆ ಹೈಸ್ಕೂಲಿನಿಂದಲೂ ಜೀವದ ಗೆಳತಿ.

ಅಂಕಗಣಿತಕ್ಕೂ ಬದುಕಿಗೂ ಯಾವುದೋ ಸಂಬಂಧ ಇದೆ ಅಂತ ಅಂಕೆಗಳಲ್ಲಿ ಮುಳುಗುತ್ತಿದ್ದ ನಾನು ಮತ್ತು ಗಣಿತವನ್ನೇ ನಖಶಿಖಾಂತ ದ್ವೇಷಿಸುತ್ತಿದ್ದ ಅವಳು ನಡುವೆ ಒಂದಿಷ್ಟು ಖಾಸಗಿ ಇಷ್ಟಾನಿಷ್ಟಗಳು... ನಾವಿಬ್ಬರೂ ಗೆಳತಿಯರಾಗಿದ್ದು ಹೇಗೆ ಅನ್ನುವುದು ಇವತ್ತಿನವರೆಗೂ ಬಗೆಹರಿಯದ ಮಿಸ್ಟರಿ. ನಮ್ಮಿಬ್ಬರ ಅಭಿರುಚಿಯಲ್ಲಿ ಸಾಮ್ಯತೆ ಇದ್ದುದು ಜಿದ್ದಿಗೆ ಬಿದ್ದವರಂತೆ ಕವಿತೆ ಓದುವುದರಲ್ಲಿ ಮಾತ್ರ. ಹಾಗಿದ್ದರೂ ನಾವಿಬ್ಬರೂ ಪರಸ್ಪರರ ಕ್ರೈಂಗಳಲ್ಲಿ ಸಮಾನ ಪಾಲುದಾರರು.

ಆಟ, ಪಾಠ, ತುಂಟಾಟ, ಹಾಡು, ಕವಿತೆ, ಆ ವಯಸ್ಸಿನ ಭಾವದೇರಿಳಿತಗಳು, ಸುಲಭವಾಗಿ ಅರ್ಥವಾಗದ ದೈಹಿಕ ಬದಲಾವಣೆಗಳು, ಯೌವ್ವನಕ್ಕೆ ಹೊರಳಿಕೊಳ್ಳುವ ಬದುಕು, ಅಪಾಯಕಾರಿಯಲ್ಲದ ಕ್ರಶ್, ಹೆಸರಿಲ್ಲದ ಕೆಲವು ಇನ್ಫ್ಯಾಚುಯೇಷನ್ಸ್ ಎಲ್ಲವುಗಳ ನಡುವೆ ಅವಳಂತಹ ಜೀವನ್ಮುಖಿ ಹುಡುಗಿಗೆ ಪ್ರೀತಿಯಾಗಲು ಎಷ್ಟು ಹೊತ್ತು?

ಅತ್ತ ಅವಳ ಬದುಕಲ್ಲಿ ಸದ್ದಿಲ್ಲದೆ ಪ್ರೇಮ ಚಿಗುರೊಡೆಯುತ್ತಿದ್ದರೆ ಇತ್ತ ನನಗೆ ಅವಳ ಪ್ರೀತಿಯನ್ನು ನಾನು ಓದಿರುವ ಕೆಲವು ಜನಪ್ರಿಯ ಕಾದಂಬರಿಗಳ ಪಾತ್ರಗಳೊಂದಿಗೆ ಹೋಲಿಸಿ ನೋಡುವ ಉಮೇದು. ಅವಳಿಗೂ ಕೆಲವು ಪುಸ್ತಕಗಳನ್ನು ಓದಲು ಕೊಟ್ಟು 'ಹೀಗೆಲ್ಲಾ ಇದ್ಯಾ?' ಅಂತ ಕುತೂಹಲದಿಂದ ಕೇಳಿದ್ದೂ ಇದೆ. ಆಗೆಲ್ಲಾ ಅವಳು ನಕ್ಕು ಸುಮ್ಮನಾಗುತ್ತಿದ್ದರೆ ನನ್ನ ಕಲ್ಪನೆಯ ರೆಕ್ಕೆಗಳಿಗೆ ಮತ್ತೊಂದಿಷ್ಟು ಗರಿಗಳು ಸೇರಿಕೊಳ್ಳುತ್ತಿದ್ದವು.

ಶುದ್ಧ ಹುಡುಗಾಟ ಮತ್ತು ಭಾವುಕತೆಯ ಸಮಾಗಮದ ಒಂದು ಸುಂದರ ಘಳಿಗೆಯಲ್ಲಿ ಅವಳ ಬದುಕಿನೊಳಗೆ ಕಾಲಿಟ್ಟ ಪ್ರೀತಿ ಎಂಬ ಮಾಯಾ ವಿದ್ಯೆ ನನ್ನ ಯೋಚನೆಗಳನ್ನೂ ಬದಲಾಯಿಸಲು ಹೆಚ್ಚಿನ ಸಮಯವನ್ನೇನೂ ತೆಗೆದುಕೊಳ್ಳಲಿಲ್ಲ. ಅಪ್ಪಟ ರೈತನ ಮಗ ಮತ್ತು ಮೀರಾಳಿಗಿಂತಳೂ ಚೆಂದಗೆ ಹಾಡಿಕೊಳ್ಳುತ್ತಿದ್ದ ಹುಡುಗಿ... ಕೃಷ್ಣನಿಗೂ ಅಸೊಯೆಯಾಗುವಂತಿತ್ತು ಜೋಡಿ. ಮಧ್ಯೆ ಅವರ ಪ್ರೀತಿಗೆ, ಮುನಿಸಿಗೆ, ಹುಸಿ ಕೋಪಕ್ಕೆ,  ಜಗಳಗಳಿಗೆ ಮಧ್ಯವರ್ತಿಯಾಗಿ ನಾನು. ಬದುಕು ತುಂಬಾ ಸುಂದರವಾಗಿತ್ತು.

ಹೀಗಿರುವ ದಿನಗಳಲ್ಲೇ ಅವನ ಹಟ್ಟಿಗೆ ಒಂದು ಹೊಸ ಎತ್ತು ಸೇರಿಕೊಂಡಿತು. ಅವನು ತುಂಬು ಸಂಭ್ರಮದಿಂದ ಎತ್ತನ್ನೂ, ಅದರ ಮುಗ್ಧತೆಯನ್ನೂ, ಅದಕ್ಕಿಡಬಹುದಾದ ಹೆಸರನ್ನೂ ಹೇಳಿಕೊಳ್ಳುತ್ತಿದ್ದರೆ ನಮ್ಮಿಬ್ಬರ ತಲೆಯಲ್ಲಿ ಹೊಸ ಯೋಚನೆಯೊಂದು ಓಡುತ್ತಿತ್ತು. ಕೆಲವು ವಾರಗಳಷ್ಟು ಹಿಂದೆ ಊರ ಹೊರಗೆ ಆಯೋಜಿಸಿದ್ದ ಕಂಬಳ, ಓಡುತ್ತಿದ್ದ ಎತ್ತುಗಳು, ಅದರ ಸಾರಥಿಯ ಗತ್ತು ಗೈರತ್ತುಗಳು ನಮ್ಮಲ್ಲೂ ಎತ್ತು ಓಡಿಸುವ ಆಸೆ ಹುಟ್ಟಿಸಿದ್ದವು. ಈಗ ಅನಾಯಾಸವಾಗಿ ನಮ್ಮ ಆಸೆ ಕೈಗೂಡುತ್ತದೆ ಅಂದರೆ ಯಾಕೆ ಅವಕಾಶ ಕಳೆದುಕೊಳ್ಳಬೇಕು ಅನ್ನಿಸಿ ನಮ್ಮ ಯೋಚನೆಯನ್ನು ಅವನ ಮುಂದಿಟ್ಟೆವು. ಮೊದ ಮೊದಲು ನಮ್ಮ ವಿಚಿತ್ರ ಬೇಡಿಕೆಯನ್ನು ಖಡಾಖಂಡಿತವಾಗಿ ನಿರಾಕರಿಸಿದರೂ ಕೊನೆಗೆ ಸಂಜೆ ಮೂರರ ಒಳಗೆ ಎತ್ತನ್ನು ಅವನಿಗೆ ಮರಳಿಸಬೇಕು ಅನ್ನುವ ಕರಾರಿನೊಂದಿಗೆ ನಮ್ಮ ಬೇಡಿಕೆಗೆ ಮಣಿದ.

ಮುಂದಿನ ಭಾನುವಾರ ಸ್ಪೆಶಲ್ ಕ್ಲಾಸ್ ನೆಪದಲ್ಲಿ ನಾವಿಬ್ಬರು ಶಾಲೆಯ ಕಾಲುದಾರಿಯ ಪಕ್ಕದಲ್ಲಿನ ಕೆಸರುಗದ್ದೆಯಲ್ಲಿ ಸೇರುವುದೆಂದೂ, ಅವನು ಮೀಯಿಸುವ ನೆಪದಲ್ಲಿ ಎತ್ತನ್ನು ಅಲ್ಲಿಗೆ ಕರೆದುಕೊಂಡು ಬರುವುದೆಂದೂ ನಿರ್ಧಾರವಾಯಿತು. ಹಾಗೆ ನಿರ್ಧರಿಸಿಕೊಂಡ ಮೇಲೆ ಇಡೀ ದಿನ ನಮ್ಮ ಯೋಚನೆಗಳಲ್ಲಿ ನಾವು ಮಾಡಲಿರುವ ಹೊಸ ಸಾಹಸದ ರೂಪು ರೇಷೆಗಳಷ್ಟೇ ಓಡಾಡುತ್ತಿದ್ದವು. ಆ ಭಾನುವಾರ ಕಾಲುದಾರಿಯಲ್ಲಿ ನಾವಿಬ್ಬರೂ ಸೇರುತ್ತಿದ್ದಂತೆ ಪ್ರೇಮಿಯ ಕೋರಿಕೆ ಪೂರೈಸುತ್ತಿರುವ ಹೆಮ್ಮೆಯಿಂದ ಅವನೂ ಎತ್ತು ಕರೆದುಕೊಂಡು ಬಂದು ಬಿಟ್ಟ.

ಅವನು ಎತ್ತಿನ ಬಗ್ಗೆ ವರ್ಣಿಸುತ್ತಿದ್ದಾಗ ನಮ್ಮಷ್ಟೇ ಎತ್ತರ ಇರಬಹುದೇನೋ ಅಂತ ಅಂದುಕೊಂಡಿದ್ದ ನಮ್ಮ ನಿರೀಕ್ಷೆ ಅದರ ಗಾತ್ರ, ಎತ್ತರ, ಕೋಡು ನೋಡಿದಾಗಲೇ ಸುಳ್ಳಾಗಿತ್ತು. ಆದರೆ ಎತ್ತು ಓಡಿಸುವ ಹುಚ್ಚು ಎಲ್ಲಾ ನಿರೀಕ್ಷೆಗಳಿಗಿಂತಲೂ ಎತ್ತರದಲ್ಲಿದ್ದುದರಿಂದ ಅವನನ್ನು ಕಳುಹಿಸಿ ನಾವು ಓಡಿಸಲು ಸಿದ್ಧರಾದೆವು.  ಆ ಹೊತ್ತು ಯಾವ ಧೈರ್ಯದ ಭೂತ ನಮ್ಮೊಳಗೆ ಹೊಕ್ಕಿತ್ತೋ ಗೊತ್ತಿಲ್ಲ, ಮೆಲ್ಲಗೆ ಅದರ ಬಾಲ ಹಿಡಿದೆಳೆದೆ, ಹಿಂದಿನಿಂದ ಪ್ರೋತ್ಸಾಹಿಸಲು ಗೆಳತಿಯ ಚಪ್ಪಾಳೆ.

ಅವನು ಗದ್ದೆಯಂಚು ತಲುಪುವ ಮುನ್ನವೇ ನಾನು  ಎತ್ತು ಎಳೆದ ರಭಸಕ್ಕೆ ಮೈಮೇಲಿಡೀ ತರಚು ಗಾಯ ಮಾಡಿಕೊಂಡು ಮತ್ತೊಂದು ಗದ್ದೆಗೆ ಬಿದ್ದಿದ್ದೆ.   ಮಂಡಿಯ ಮೇಲೆ ತರಚು ಗಾಯಗಳಾಗಿವೆ ಅಷ್ಟೇ ಎಂದು ಸಮಾಧಾನ ಪಟ್ಟುಕೊಳ್ಳುತ್ತಿರುವಾಗಲೇ ಛಳ್ಳೆಂದ ಎಡಗೈಗೆ ಆಚೀಚೆ ಸರಿಸಲೂ ಆಗದಷ್ಟು ನೋವು. "ಅಮ್ಮಾ" ಎಂದೆ, ಓಡಿ ಬಂದ ಗೆಳತಿ ನನ್ನನ್ನು ಎಬ್ಬಿಸಿ ಮನೆಗೆ ಕರೆದುಕೊಂಡು ಬಂದಳು. ಶಾಲೆಯಲ್ಲಿ ಕೈ ಮುರಿದುಕೊಂಡಿದ್ದೇನೇನೋ ಅಂದುಕೊಂಡ ಅಪ್ಪ ಕೈಗೆ ಬ್ಯಾಂಡೇಜ್ ಹಾಕಿಸಿ ಮನೆಗೆ ಕರೆತಂದರು. ನಾವು ಕಂಬಳದ ಸಾರಥಿಗಳಾಗಬಹುದಾಗಿದ್ದ ಅಪರೂಪದ ಅವಕಾಶ ತಪ್ಪಿಸಿದ ಎತ್ತಿನ ಮೇಲೆ ಅಸಾಧ್ಯ ಕೋಪ ನನಗೆ. ಕೈಗೆ ಏರಿಸಿಕೊಂಡ ಸಿಮೆಂಟ್ ಬ್ಯಾಂಡೇಜನ್ನು ನೋಡುವಾಗೆಲ್ಲಾ ಆ ಕೋಪ ಮತ್ತಷ್ಟು ಜಾಸ್ತಿಯಾಗುತ್ತಿತ್ತು.

ಹಾಗಂತ ನಮ್ಮಿಬ್ಬರ ಬದುಕಿನಲ್ಲಿ ಗಂಭೀರತೆಗಳು ಇರಲೇ ಇಲ್ಲ ಅಂತಲ್ಲ. ಬೇಜಾವಾಬ್ದಾರೀ ಅಪ್ಪ, ಇಡೀ ಸಂಸಾರದ ಹೊಣೆಯನ್ನು ಹೆಗಲ ಮೇಲೆ ಹೊತ್ತ ಅಮ್ಮ, ಬೆನ್ನ ಹಿಂದೆ ಪುಟ್ಟ ತಮ್ಮ, ಮಾತಿನಿಂದಲೇ ತಿವಿಯುವ ಸಂಬಂಧಿಕರು, ಅವಳ ಹಾಡನ್ನೂ, ಕವಿತೆಯನ್ನೂ ಅನುಮಾನದ ಕಣ್ಣಿಂದಲೇ ನೋಡುವ ಸಮಾಜ, ತನ್ನ ಬದುಕನ್ನು ಯಾರ ಹಂಗೂ ಇಲ್ಲದೆ ಕಟ್ಟಿಕೊಳ್ಳಲೇಬೇಕಾದ ಅನಿವಾರ್ಯತೆ, ಇವೆಲ್ಲದರ ಮಧ್ಯೆಯೂ ಬದುಕಿನ ಉತ್ಸಾಹವನ್ನು ಉಳಿಸಿಕೊಳ್ಳಲೇಬೇಕಾದ ಒತ್ತಡ, ಮಧ್ಯೆ ಹೈಸ್ಕೂಲ್ ದಾಟಿ ಕಾಲೇಜಿಗೆ ಕಾಲಿಟ್ಟೆವು. 

ಆ ಹೊತ್ತಿಗಾಗುವಾಗ  ಅವಳ ಪ್ರೀತಿ ತೆಳುವಾಗತೊಡಗಿತು, ಅವನಿಗೂ ಇದು ಕೈಗೂಡುವಂಥದ್ದಲ್ಲ ಅಂತ ಅನಿಸಿತೋ ಏನೋ, ಒಬ್ಬರಿಗೊಬ್ಬರು ಬೈದುಕೊಳ್ಳದೆ ಇಬ್ಬರೂ ದೂರಾದರು. ಈ ಮಧ್ಯೆ ಒಂದು ವಿಚಿತ್ರ ತಿರುವಿನಲ್ಲಿ ನನ್ನಮ್ಮ ಸ್ತನ ಕ್ಯಾನ್ಸರ್ ಎಂಬ ದುರಂತಕ್ಕೆ ಮುಖಾಮುಖಿಯಾದರು. ಆಸ್ಪತ್ರೆ, ಅದರ ವಿಚಿತ್ರ ವಾಸನೆ, ಅಸಹನೀಯ ಮೌನ, ತಾಳಿಕೊಳ್ಳಲಾಗದ ನಿಟ್ಟುಸಿರು, ಕಾರಣವಿಲ್ಲದೆ ಅಲ್ಲಿಂದಿಲ್ಲಿಗೆ ಸಂಚರಿಸುವ ಅನಾಥ ಭಾವ, ನಡುವೆ ನನ್ನೆಲ್ಲಾ ನೋವುಗಳಿಗೆ ಹೆಗಲಾಗಿ ನಿಲ್ಲುತ್ತಿದ್ದ ಗೆಳತಿ ಒಂದು ದಿನ ಸಂಕಟ ತಡೆಯಲಾಗದೆ 'ಅಮ್ಮ ಬದುಕುತ್ತಾರೇನೇ?' ಎಂದು ಕೇಳಿದಳು. ನಾನು 'ಬದುಕಲೇ ಬೇಕು, ಬದುಕುತ್ತಾರೆ' ಎಂದು ಎದ್ದು ಬಂದೆ. ಅಮ್ಮ ಬದುಕಿದರು, ಅವಳು ನನಗೆ ಮತ್ತಷ್ಟು ಹತ್ತಿರವಾದಳು.

ಮುಂದೆ ಓದು, ಉದ್ಯೋಗ, ಮದುವೆ, ಸಂಸಾರ ಅಂತೆಲ್ಲಾ ನಮ್ಮಿಬ್ಬರ ದಾರಿ ಕವಲೊಡೆದರೂ ನಮ್ಮ ಆತ್ಮೀಯತೆಯಲ್ಲಿ ಯಾವ ದೂರವೂ ತಲೆದೋರಿರಲಿಲ್ಲ. ಆದರೆ ಆಷಾಢದ ಆ ರಾತ್ರಿ ಅವಳು ಮಾಡಿದ್ದ ಮೆಸೇಜ್ ನಲ್ಲಿದ್ದ 'ಸೀರಿಯಸ್ ಪ್ರೀತಿ' ನಿಜಕ್ಕೂ ಗಂಭೀರ ಪ್ರೀತಿಯೇ. ಇವಳು ಕೆಲಸ ಮಾಡುತ್ತಿದ್ದ ಕಂಪೆನಿಯಲ್ಲೇ ಕೆಲಸ ಉತ್ತರ ಭಾರತದ ಹುಡುಗ ಅವನು. ಇವಳಿಗಿಂತ ಎರಡು ವರ್ಷ ಕಿರಿಯ. ಪ್ರೀತಿಗೆ ವಯಸ್ಸಿನ ಹಂಗಿಲ್ಲ ಅಂತ ಅವಳೆಷ್ಟೇ ಹೇಳಿಕೊಂಡರೂ ನನಗೊಂದು ಅಳುಕು ಇದ್ದೇ ಇತ್ತು. ಅವನ ಪ್ರೀತಿ, ಮನೆಯವರು ಒಪ್ಪಿದರೂ ಒಪ್ಪದಿದ್ದರೂ ಒಟ್ಟಿಗೆ ಬದುಕುತ್ತೇವೆ ಅನ್ನುತ್ತಿದ್ದಾಗ ಅವನ ಮಾತಿನಲ್ಲಿರುತ್ತಿದ್ದ ದೃಢತೆ, ಅವಳೆಡೆಗೆ ಅವನಿಗಿದ್ದ ಕಾಳಜಿ ಎಲ್ಲಾ ನೋಡುವಾಗ ನನ್ನ ಅಳುಕು ಸುಳ್ಳಾಗಲಿದೆ ಎಂದು ನನಗೂ ಅನಿಸುತ್ತಿತ್ತು. ಹಾಗಾಗಲಿ ಎಂದು ನಾನು ಕಾಣದ ದೇವರಲ್ಲಿ ಕೇಳಿಕೊಳ್ಳುತ್ತಲೂ ಇದ್ದೆ.

ಈಗ ಋತುಗಳು ತಿರುಗಿಬಿದ್ದಿವೆ, ಆಷಾಢದಲ್ಲಿ ಚಿಗುರಿದ ಪ್ರೀತಿಗೆ ಕಾರ್ತಿಕದಲ್ಲಿ ಒಪ್ಪಿಗೆಯ ಮೊಹರು ಬೀಳಲಿ ಎಂದು ಎರಡೂ ಮನೆಯವರ ಮುಂದೆ ಮದುವೆ ಪ್ರಸ್ತಾಪ ಇಡುವುದೆಂದು ಒಂದು ಬೆಳಗ್ಗೆ ಇಬ್ಬರೂ ನಿರ್ಣಯಿಸಿದರು ಮತ್ತು ಆ ನಿರ್ಣಯದಂತೆ ನಡೆದುಕೊಂಡರು ಕೂಡ. ಇವಳ ಮನೆಯಲ್ಲಿ ಸುಲಭವಾಗಿ ಒಪ್ಪಿಗೆ ಸಿಗಲಿಲ್ಲ, ಹಾಗೆ ಸುಲಭವಾಗಿ ಸಿಗುತ್ತದೆ ಎನ್ನುವ ನಿರೀಕ್ಷೆ ಅವಳಿಗೆ ಇರಲೂ ಇಲ್ಲ. ಆದರೆ ಹೇಗಾದರೂ ಒಪ್ಪಿಸಿಯೇನು ಎನ್ನುವ ನಂಬಿಕೆ ಇತ್ತು, ಹಾಗೆ ಒಪ್ಪಿಸಿದಳು ಕೂಡ. ಆದರೆ ಅವನ ಮನೆಯಲ್ಲಿ ಯಾವ ಬೃಹನ್ನಾಟಕ ನಡೆಯಿತೋ ಗೊತ್ತಿಲ್ಲ, ಒಂದೆರಡು ದಿನಗಳು ಕಳೆದ ಮೇಲೆ 'ಲೆಟ್ಸ್ ಬ್ರೇಕಪ್' ಅನ್ನುವ ಮೆಸೇಜ್ ಬಂತು.

ಯಾವುದು ಆಗಬಾರದು ಅಂದುಕೊಂಡಿದ್ದೆನೋ ಮತ್ತೆ ಅವಳ ಬದುಕಲ್ಲಿ ಅದೇ ಘಟಿಸಿತ್ತು‌. ಏನು ಮಾತಾಡಲಿ, ಹೇಗೆ ಮಾತಾಡಲಿ ಅನ್ನುವ ನೂರು ಅನುಮಾನದ ಮೂಟೆಗಳನ್ನು ಹೊತ್ತುಕೊಂಡೇ ಅವಳಿಗೆ ಕರೆ ಮಾಡಿದರೆ ಅವಳು ಎಂದಿನ ತಣ್ಣನೆಯ ಧ್ವನಿಯಲ್ಲಿ 'ಅವ್ನ ಮನೇಲಿ ಒಪ್ಲಿಲ್ಲಂತೆ ಕಣೇ' ಅಂದ್ಳು. ನನಗೆ ಗೊತ್ತಿರುವ ವಿಷಯವೇ ಆಗಿದ್ದರೂ ಇಷ್ಟು ಸಹಜವಾಗಿ ಅವಳದನ್ನು ಸ್ವೀಕರಿಸುತ್ತಾಳೆ ಅಂತ ಅನಿಸಿರಲಿಲ್ಲ. "ಮುಂದೇನು?" , "ಏನಾಗಬೇಕೋ ಅದೇ ಆಗುತ್ತದೆ. ಬಗಲಲ್ಲೊಂದು ಕೊಳ್ಳಿ ಸದಾ ಇಟ್ಟುಕೊಂಡು ನಡೆಯುವವಳಿಗೆ ಬೆಳಕಿಗಾಗಿ ಕಂದೀಲು ಹುಡುಕಬೇಕಾಗಿ ಬರುವುದಿಲ್ಲ" ಅಂದಳು. ಪ್ರೇಮ ಕವಿತೆ ಬರೆಯುತ್ತಿದ್ದವಳ ಬದುಕು ಅವಳಿಗೇ ಗೊತ್ತಾಗದಂತೆ ನವ್ಯ ಕಾವ್ಯವೊಂದನ್ನು  ಬರೆಯಲು ಶುರು ಹಚ್ಚಿತು. ನಾನು ಕಾವ್ಯದೊಳಗೆ ಕಳೆದುಹೋಗಲು ತಯಾರಾಗುತ್ತಿದ್ದೇನೆ...

ಎಲ್ಲಿಂದಲೋ ಬಂದ ಬೇಬಿಯಣ್ಣ...

ಅಂಗಳದ ಒಂದು ಮೂಲೆಯಲ್ಲಿ ಹಾಕಿದ ಚಪ್ಪರದ ಅಡಿಯಲ್ಲಿ ಚೆನ್ನಪ್ಪಣ್ಣನನ್ನೂ, ಅವರು ಕೂತಿದ್ದ ಮಟ್ಟುಗತ್ತಿಯನ್ನೂ, ಸಲೀಸಾಗಿ ಸುಲಿದು ಬೀಳುತ್ತಿದ್ದ ಅಡಕೆಗಳನ್ನೂ, ಪಕ್ಕದಲ್ಲಿ ದೊಡ್ಡ ರಾಶಿಯೇ ಆಗಿದ್ದ ಅದರ ಸಿಪ್ಪೆಗಳನ್ನೂ, ನಡು ನಡುವೆ ಒಂದು ಲಯದಲ್ಲಿ ವೀಳ್ಯದೆಲೆ ಹಾಕಿಕೊಂಡು ಬಾಯಾಡಿಸುತ್ತಿದ್ದ ಅವರ ಬಾಯನ್ನೂ ಒಂದು ರೀತಿಯ ಅಚ್ಚರಿ ಮತ್ತು ಏಕಾಗ್ರತೆಯಿಂದ ದಿಟ್ಟಿಸುತ್ತಿದ್ದ ನಮ್ಮ ಮಕ್ಕಳ ಸೈನ್ಯದ ಗಮನವನ್ನು ಅಜ್ಜನ ಹೆಜ್ಜೆ ಸದ್ದು ನಿಧಾನವಾಗಿ ತಪ್ಪಿಸಿತ್ತು. ತುಸು ಅಸಹನೆಯಿಂದ ಮತ್ತು ಹೆಚ್ಚೇ ಗೌರವದಿಂದ, ಅಜ್ಜ ನಮಗೆ ಯಾವ ಹೆಚ್ಚುವರಿ ಕೆಲಸವೂ ನೀಡದಿರಲಿ ಎಂದು ಕಾಣದ ದೇವರಲ್ಲಿ ಬೇಡಿಕೊಳ್ಳುತ್ತಾ ಅವರಿಗೆ ಜಾಗ ಮಾಡಿಕೊಡಲು ಸರಿದು ಕೂತೆವು. ಅಜ್ಜ ಕೂರುತ್ತಿದ್ದಂತೆ ವೀಳ್ಯದೆಲೆ ಉಗುಳಿ ತನ್ನ ಕೆಂಪು ಬಾಯನ್ನು ತೊಳೆದು ಬಂದ ಚೆನ್ನಪ್ಪಣ್ಣ "ತೋಟದ ಕೆಲಸಕ್ಕೆ ಹೆಚ್ಚುವರಿ ಆಳು ಬೇಕು ಅಂದಿದ್ರಲ್ಲಾ, ನಾಳೆ ಚಿಕ್ಕಮಗಳೂರಿನಿಂದ 'ಬೇಬಿ' ಅಂತ ಹೊಸ ಆಳು ಬರ್ತಿದ್ದಾನೆ" ಅಂದರು.

ಅದುವರೆಗೂ ಚೆನ್ನಪ್ಪ, ವೆಂಕಪ್ಪ, ಸಂಕು, ಗೀತಕ್ಕ, ರತ್ನ, ಚೆನ್ನಿ ಇವೇ ಮುಂತಾದ ಹೆಸರುಗಳನ್ನು ಕೇಳಿದ್ದ ನಮಗೆ ಈ 'ಬೇಬಿ' ಅನ್ನುವುದು ನಮ್ಮ ಪ್ರಪಂಚದಲ್ಲಿ ಎಲ್ಲೂ ಇಲ್ಲದ ಹೆಸರು ಅನ್ನಿಸುತ್ತಿತ್ತು. ಇಂಗ್ಲಿಷಿನ ಬೇಬಿಗೂ, ಈ ಬೇಬಿಗೂ ಬಾದರಾಯಣ ಸಂಬಂಧ ಕಲ್ಪಿಸಿ, ಕಂಡೇ ಇರದ ಆ ವ್ಯಕ್ತಿಯನ್ನು ನಮ್ಮ ಮನಸ್ಸು ಇಂಗ್ಲಿಷಿನವನಾಗಿ ತೀರ್ಮಾನಿಸಿಬಿಟ್ಟಿತು. ಎಷ್ಟು ಬೇಡ ಬೇಡ ಅಂದರೂ ಬಿಳಿ ಚರ್ಮ, ಕೆಂಚು ಕೂದಲು, ತಿಳಿ ಹಸಿರು ಅಥವಾ ನೀಲಿ ಬಣ್ಣದ ಕಣ್ಣುಗಳುಳ್ಳ ಮನುಷ್ಯನ ಚಿತ್ರವೇ ಕಣ್ಣ ಮುಂದೆ ಓಡಾಡುತ್ತಿತ್ತು. ಬಿಳಿ ಟಿಷರ್ಟ್, ನೀಲಿ ಜೀನ್ಸ್ ಧರಿಸುವ 'ಬೇಬಿ' ನಮ್ಮ ತೋಟದಲ್ಲಿ ಬಂದು ಮಾಡುವುದಾದರೂ ಏನು ಎಂಬ ಪ್ರಶ್ನೆಯೂ ಕಾಡುತ್ತಿತ್ತು. ಅದಕ್ಕಿಂತಲೂ ದೊಡ್ಡ ಸಮಸ್ಯೆ, ಇನ್ನೂ ಎ.ಬಿ.ಸಿ.ಡಿಯೇ ಕಲಿತಿಲ್ಲದ ನಾವು  ಈ ಇಂಗ್ಲಿಷಿನ ಬೇಬಿಯ ಬಳಿ ಹೇಗೆ ಸಂವಹನ ಮಾಡುವುದು ಎಂಬುವುದಾಗಿತ್ತು.

ಆ ರಾತ್ರಿಯಿಡೀ ನಮಗೆ ಬೇಬಿಯದೇ ಚಿಂತೆ. ಬೆಳಗಾಗುತ್ತಿದ್ದಂತೆ ನಾವು ಬೇಬಿಗಾಗಿ ಗೇಟು ಕಾಯುತ್ತಾ ಕೂತೆವು. ಒಮ್ಮೆ ರಸ್ತೆಯತ್ತ ಮತ್ತೊಮ್ಮೆ ಭರ್ರೆಂದು ಧೂಳೆಬ್ಬಿಸುತ್ತಾ ಬರುವ ಬಸ್ಸಗಳತ್ತ, ಅಂಬಾಸಿಡರ್ ಕಾರುಗಳತ್ತಾ ದಿಟ್ಟಿಸುತ್ತಾ ನಮ್ಮ ಪಾಲಿಗೆ ಅವತಾರ ಪುರುಷನೇ ಆಗಿದ್ದ ಬೇಬಿಯ ಬರವನ್ನು ನಿರೀಕ್ಷಿಸುತ್ತಿದ್ದೆವು. ಗಂಟೆ ಹತ್ತಾಗುತ್ತಿದ್ದಂತೆ ಹೊಟ್ಟೆ ಚುರುಗುಟ್ಟಲಾರಂಭಿಸಿತು, ಇನ್ನು ಈ ಇಂಗ್ಲಿಷಿನವ ಬರಲಾರ ಎಂದು ನಿರ್ಧರಿಸಿಕೊಂಡು ಮನೆಗೆ ವಾಪಾಸಾದೆವು. ಕೈ ತೊಳೆದು ಮಣೆ ಎಳೆದು ನಾಸ್ಟಾ ಮಾಡಲು ಕೂರಬೇಕು ಅನ್ನುವಷ್ಟರಲ್ಲಿ, "ಬೇಬಿ ಬಂದಿದ್ದಾನೆ, ಇಲ್ಲೇ ಕೂರಲು ಹೇಳಿದ್ದೇನೆ" ಅನ್ನುವ ಚೆನ್ನಪ್ಪಣ್ಣನ ಮಾತು ಕೇಳಿತು. ಒಂದೇ ಉಸಿರಿಗೆ ನಾವು ಮನೆಯ ಅಂಗಳದಲ್ಲಿದ್ದೆವು.

ಸೂಟು-ಬೂಟು ಧರಿಸಿದ ಇಂಗ್ಲಿಷಿನವನ ನಿರೀಕ್ಷೆಯಲ್ಲಿದ್ದ, ಅವನಿಗೋಸ್ಕರವೇ 'ಹಲೋ ಮೈ ನೇಮ್ ಈಸ್.... ಯುವರ್ ಗುಡ್ ನೇಮ್ ಪ್ಲೀಸ್' ಉರು ಹೊಡೆದಿದ್ದ ನಮಗೆ ಒಂದು ದೊಡ್ಡ ಶಾಕ್! ಮಾಸಲು ಅಂಗಿ, ಚೌಕುಳಿ ಲುಂಗಿ, ಕೈಯಲ್ಲೊಂದು ಗೋಣಿಯಂತಹ ಕಟ್ಟು ಹಿಡಿದು ಪೆಕರು ಪೆಕರಾಗಿ ನಿಂತಿದ್ದ ಬೇಬಿ ನಮ್ಮ ಕುತೂಹಲಕ್ಕೆಲ್ಲಾ ಒಂದೇ ಏಟಿಗೆ ತಣ್ಣೀರೆರಚಿದ್ದರು. ಬೇಬಿ ನಮ್ಮಂತೆಯೇ ಸಾಮಾನ್ಯ ಭಾರತೀಯ ಅನ್ನುವುದು ಗೊತ್ತಾಗುತ್ತಿದ್ದಂತೆ 'ನಮ್ಮನೆಯಲ್ಲೂ ಒಬ್ಬ ಫಾರಿನರ್ ಇದ್ದಾರೆ' ಅಂತ ಶಾಲೆಯಲ್ಲಿ ಕೊಚ್ಚಿಕೊಳ್ಳಲು ಇದ್ದ ಒಂದು ಅಪೂರ್ವ ಅವಕಾಶ ತಪ್ಪಿಸಿದರು ಎಂದು ಅವರ ಮೇಲೆ ಅಕಾರಣ ಸಿಟ್ಟು ನಮಗೆ.

ಚಿಕ್ಕಮಗಳೂರಿನಿಂದ ಬಂದಿದ್ದರೂ ಬೇಬಿ ಮೂಲತಃ ಹಾಸನದವರು. ಅವರ ಸಂಸಾರ ಪೂರ್ತಿ ಹಾಸನದಲ್ಲೇ ನೆಲೆಸಿತ್ತು. ಹೊಟ್ಟೆಪಾಡಿಗಾಗಿ ಕೆಲಸ ಹುಡುಕುತ್ತಾ ಶೃಂಗೇರಿ ತಲುಪಿದ್ದವರು ಅಲ್ಲಿಂದ ಘಟ್ಟ ಇಳಿದು ನಮ್ಮನೆ ತಲುಪಿದ್ದರು. ಅವರ ಮಾತು, ಕನ್ನಡ ಭಾಷೆ ನಮಗೆ ವಿಚಿತ್ರ ಅನ್ನಿಸುತ್ತಿತ್ತು. ಇಡೀ ಪ್ರಪಂಚದಲ್ಲಿ ತುಳು ಮತ್ತು ಬ್ಯಾರಿ ಭಾಷೆ ಬಿಟ್ಟು ಉಳಿದ ಯಾವ ಭಾಷೆಗಳೂ 'ಸರಿ' ಇಲ್ಲ ಎಂದು ತೀರ್ಮಾನಿಸಿಕೊಂಡ ವಯಸ್ಸದು. ಸಾಲದೆಂಬಂತೆ, ಉಳಿದ ಕೆಲಸಗಾರರೆಲ್ಲಾ ಬೇಬಿಯ ಹಿಂದೆ ಆಡಿಕೊಳ್ಳುತ್ತಾ 'ಘಟ್ಟದಾಯೆ (ಘಟ್ಟದವನು)' ಎಂದು ನಗುತ್ತಿದ್ದರೆ ನಮಗೆ ಈತ ಬೇರೆಯದೇ ಪ್ರಪಂಚದವನು ಅನ್ನುವುದು ಕನ್ಫರ್ಮ್ ಆಗಿತ್ತು‌. ಹಾಗಾಗಿಯೇ ಬಂದು ವಾರ ಕಳೆದಿದ್ದರೂ ನಮ್ಮ ಮಧ್ಯೆ ಒಂದು ಬಂಧ ಬೆಳೆದಿರಲಿಲ್ಲ.

ಆದರೆ ಅಜ್ಜ, ಒಂದು ಭಾನುವಾರ ಕೊಯ್ಯಿಸಿದ ಅಡಕೆ ಹೆಕ್ಕಲು ನಮ್ಮನ್ನು ಬೇಬಿಯ ಜೊತೆ ಕಳುಹಿಸಿದ್ದರು. ಆಟದ ಅಮೂಲ್ಯ ಸಮಯ ಹಾಳಾದ ಸಿಟ್ಟು ಒಂದು ಕಡೆಯಾದರೆ, ಮಾತೇ ಆಡದ ಬೇಬಿಗೆ ಸಹಾಯ ಮಾಡಬೇಕಲ್ಲಾ ಅನ್ನುವ ದುಃಖ ಮತ್ತೊಂದು ಕಡೆ. ಸಾಲದಕ್ಕೆ "'ಬೇಬಿಯಣ್ಣ' ಅಂತಲೇ ಕರೆಯಬೇಕು, ಬೇಬಿ ಅಂತ ಎಲ್ಲಾದರೂ ಏಕವಚನದಲ್ಲಿ ಮಾತಾಡಿಸಿದರೆ ಬೆನ್ನಿನ ಚರ್ಮ ಸುಲಿದು ಕೈಯಲ್ಲಿ ಕೊಡಬೇಕಾಗುತ್ತದೆ" ಎಚ್ಚರಿಕೆ ಬೇರೆ ಕೊಟ್ಟಿದ್ದರು. ಹಿಂದೊಮ್ಮೆ ಯಾರನ್ನೋ ಏಕವಚನದಲ್ಲಿ ಮಾತಾಡಿಸಿದ್ದಕ್ಕೆ ಅಜ್ಜ ನಮ್ಮಲ್ಲೊಬ್ಬರ ಕಣ್ಣಿಗೆ ಹಸಿ ಮೆಣಸು ಹಾಕಿ ಚೆನ್ನಾಗಿ ಹೊಡೆದ ಘಟನೆ ಇನ್ನೂ ಹಸಿಹಸಿಯಾಗಿಯೇ ಇದ್ದ ಕಾರಣ ಅಜ್ಜ ಚರ್ಮ ಸುಲಿಯಲು ಹಿಂದೆ ಸರಿಯುವವರಲ್ಲ ಅನ್ನುವ ಸ್ಪಷ್ಟ ನಂಬಿಕೆ ನಮ್ಮದು. 

ಚೆನ್ನಪ್ಪ, ಸಂಕು, ವೆಂಕಪ್ಪ ಎಲ್ಲರನ್ನೂ ಅಣ್ಣ ಎಂದೇ ಕರೆಯುತ್ತಿದ್ದ ನಾವು ಈ ಬೇಬಿಯನ್ನು ಮಾತ್ರ ಅಣ್ಣ ಎಂದು ಕರೆಯಲು ಯಾಕೆ ತಕರಾರು ಮಾಡುತ್ತಿದ್ದೆವು? ತುಳುವನೋ, ಬ್ಯಾರಿಯೋ ಆಗಿಲ್ಲದ ಕಾರಣಕ್ಕಾ? 'ಘಟ್ಟದಾಯೆ' ಎಂದೋ? ಅದಾಗಲೇ ನಮ್ಮ ಮನಸ್ಸಿನಲ್ಲಿ ಮೇಲರಿಮೆಯ ಬೀಜ ಮೊಳಕೆಯೊಡೆದಿತ್ತೇ? ಅಥವಾ ಬೇಬಿ ಇಂಗ್ಲಿಷಿನವನಲ್ಲದೇ ಹೋದ 'ಹಳೆಯ' ಸಿಟ್ಟು ಇನ್ನೂ ನಮ್ಮ ಮನಸ್ಸಿನಲ್ಲಿ ಉಳಿದಿತ್ತೇ? ಕಾರಣವೇನೇ ಇದ್ದರೂ, ತೋರಿಕೆಗಾದರೂ ನಾನು ಅವರನ್ನು 'ಅಣ್ಣಾ' ಎಂದೇ ಕರೆಯಬೇಕಿತ್ತು.

ಅಜ್ಜನ ಆಣತಿಯಂತೆ ಆ ಭಾನುವಾರ ಬೇಬಿ ಅಧಿಕೃತವಾಗಿ ಬೇಬಿಯಣ್ಣ ಆದರು‌. ಆಮೇಲೆ ಅವರೊಂದಿಗಿನ ನಮ್ಮ ಬಾಂಧವ್ಯ ಸುಧಾರಿಸಿತು ಅಂದರೆ ತಪ್ಪಾಗುತ್ತದೆ. ಉಳಿದವರೊಂದಿಗೆ ಬೆರೆತಷ್ಟು ಸಹಜವಾಗಿ, ಸಲೀಸಾಗಿ ನಾವು ಅವರ ಜೊತೆ ಬೆರೆಯಲಾಗುತ್ತಲೇ ಇರಲಿಲ್ಲ. 

ಆದರೆ ನಮ್ಮ ಬಾಲ್ಯದ ಹುಚ್ಚಾಟಗಳಿಗೆ ಲೈಟಾಗಿ ಅವರು ನೀಡುತ್ತಿದ್ದ ಬೆಂಬಲ, ನಮ್ಮ ಅಧಿಕಪ್ರಸಂಗಿತನಗಳನ್ನು ಅಜ್ಜನವರೆಗೆ ತಲುಪಲು ಬಿಡದೇ ಇದ್ದದ್ದು... ಮುಂತಾದ ಸಂಗತಿಗಳಿಂದಾಗಿ ನಿಧಾನವಾಗಿ ಅವರು ನಮಗೆ ಹತ್ತಿರವಾಗತೊಡಗಿದರು. ಅಷ್ಟು ಹೊತ್ತಿಗಾಗುವಾಗ 'ಘಟ್ಟದಾಯೆ'ಯೂ ನಮ್ಮಂತಹ ಸಾದಾ ಮನುಷ್ಯ, ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ ಉಳಿದೆಲ್ಲರಿಗಿಂತಲೂ ಹೆಚ್ಚಿನ ಅಂತಃಕರಣ ಉಳ್ಳ ಮನುಷ್ಯ ಅನ್ನುವುದು ಅರ್ಥವಾಗಿತ್ತು. ಮತ್ತು ಅಷ್ಟು ಹೊತ್ತಿಗಾಗುವಾಗ ಎಲ್ಲರೂ ಅಚ್ಚರಿಪಡುವಷ್ಟು ತುಳು ಮತ್ತು ಬ್ಯಾರಿ ಭಾಷೆ ಕಲಿತಿದ್ದರು. ಅವರು ಎಷ್ಟು ನಿರರ್ಗಳವಾಗಿ ಮಾತನಾಡುತ್ತಿದ್ದರೆಂದರೆ, ಕರಾವಳಿಗರಲ್ಲ ಅಂತ ಅನ್ನಿಸುತ್ತಲೇ ಇರಲಿಲ್ಲ.

ಅಜ್ಜನಿಗಂತೂ ಆತ ನಂಬುಗೆಯ ಬಂಟ. ತೋಟಕ್ಕೆ ಗೊಬ್ಬರ ಹಾಕಿಸುವುದಾದರೂ, ತೆಂಗಿನಕಾಯಿ ಕೀಳಿಸುವುದಾದರೂ, ದನಗಳಿಗೆ ಹುಲ್ಲು ತರಬೇಕಾದರೂ ಬೇಬಿಯ ಸಲಹೆ ಅವರಿಗೆ ಬೇಕೇ ಬೇಕು. ಅಜ್ಜನ ಪ್ರೀತಿಯ ದನ 'ಕೆಂಪಿ' ಸತ್ತಾಗ ಬೇಬಿಯಣ್ಣ ಮೂರು ದಿನ ಊಟ ಬಿಟ್ಟಿದ್ದರು. ನಾಲ್ಕನೇ ದಿನ ತೀರಾ ನಿತ್ರಾಣಗೊಳ್ಳುತ್ತಾರೇನೋ ಅಂತ ಅಜ್ಜನೇ ಬಯ್ದು ಊಟ ಮಾಡಿಸಿದ್ದರು. "ಸೂತಕ ಕಳೆಯಿತಾ?" ಅಂತ ನೆರಮನೆಯವರು ಕಿಚಾಯಿಸಿದಾಗ "ಒಂದಿಡೀ ಬದುಕು ಸೂತಕ ಆಚರಿಸಿದರೂ ಕೆಂಪಿಯ ಸಾವಿನ ಸೂತಕ ಕಳೆಯುವಂಥದ್ದಲ್ಲಾ" ಎಂದು ವೇದಾಂತಿಯಂತೆ ಮಾತಾಡಿದ್ದರು. 

ನಾನ್-ವೆಜ್ ಪ್ರಿಯ ಬೇಬಿ, ಒಂದು ಶನಿವಾರ ಅಂಜುತ್ತಾ ಅಳುಕುತ್ತಾ ಅಜ್ಜನ ಹತ್ತಿರ ಒಂದು ಊರ ಕೋಳಿ ಬೇಕೆಂದು ಕೇಳಿದರು. ವಾರಕ್ಕೊಮ್ಮೆ ತಪ್ಪದೆ ಕೆಲಸದವರಿಗೆಲ್ಲರಿಗೂ ತುಪ್ಪದೂಟ ಕೋಳಿ ಕರಿ ನೀಡುತ್ತಿದ್ದರೂ ಬೇಬಿಯಣ್ಣನಿಗೆ ಯಾಕೆ  ಊರ ಕೋಳಿ ಬೇಕು ಅನ್ನುವ ಕುತೂಹಲ ನಮಗೆ. ಕೋಳಿ ಸಾಕಣಿಕೆ ಮಾಡುತ್ತಾರೇನೋ ಅಂತ ಅನ್ನಿಸಿ ಅವರನ್ನು ಕೇಳಿಯೇ ಬಿಟ್ಟೆ.

"ಸಂಜೆ ನಾಟಿ ಕೋಳಿ ಸಾರು, ರಾಗಿ ಮುದ್ದೆ ಮಾಡೋಕೆ ಇದೆ" ಅಂದರು. ನಮಗೆ ಮುದ್ದೆ ನೋಡಿಯೇ ಗೊತ್ತಿಲ್ಲ. ಸಾವಿರದ ಪ್ರಶ್ನೆಗಳನ್ನು ತಲೆಯಲ್ಲಿಟ್ಟುಕೊಂಡೇ ಶಾಲೆಗೆ ಹೋದೆವು. ಶಾಲೆಯಲ್ಲಿದ್ದ ಅಷ್ಟೂ ಹೊತ್ತು ನ ಬೇಬಿಯಣ್ಣ, ನಾಟಿ ಕೋಳಿ, ರಾಗಿ ಮುದ್ದೆಯ ಬಗ್ಗೆ ಯೋಚನೆ. ಒಮ್ಮೆ ಕೊನೆಯ ಬೆಲ್ ಹೊಡೆಯಬಾರದಾ ಅನ್ನಿಸುತ್ತಿತ್ತು. ಅಂತೂ ಶಾಲೆ ಬಿಟ್ಟು ಮನೆಗೆ ಬಂದು ಬ್ಯಾಗ್ ಎಸೆದು ನೇರ ಬೇಬಿಯಣ್ಣನನ್ನು ಕಾಣಲು ಹೊರಟರೆ ಅವರು ಮುದ್ದೆಯ ತಯಾರಿಯಲ್ಲಿದ್ದರು.

ಒಲೆಯಲ್ಲಿ ಕುದಿಯುತ್ತಿದ್ದ ಕೋಳಿ ಸಾರಿನ ಘಮ ಆ ಪರಿಸರಕ್ಕೆ ಒಂದು ವಿಶೇಷ ಮೆರುಗು ನೀಡಿತ್ತು. ಒಂದು ಸೌಟು ಕೊಟ್ಟರೆ ಈಗಲೇ ಸಾರು ಕುಡಿದು ಮುಗಿಸುತ್ತೇವೆ ಎನ್ನುವ ಉಮೇದು ಹುಟ್ಟಿಸುವಂತಹ ಪರಿಮಳವದು. ಕೋಳಿ ಕೊಯ್ದು, ಕ್ಲೀನ್ ಮಾಡಿಕೊಟ್ಟ ಅಪ್ಪ ಪಕ್ಕದಲ್ಲಿ ಕೂತಿದ್ದರು.‌ 

ಉರಿಯುತ್ತಿರುವ ಒಲೆ, ಕುದಿಯುತ್ತಿರುವ ಸಾರು, ತಯಾರುಗುತ್ತಿದ್ದ ಮುದ್ದೆ, ಕಮಾಂಡಿಂಗ್ ಪೊಸಿಸನ್ ನಲ್ಲಿ ಬೇಬಿಯಣ್ಣ, ಹತ್ತಿರ ಕೂತು ಸಹಾಯ ಮಾಡುತ್ತಿರುವ ಅಪ್ಪ, ದೂರ ನಿಂತು ಎಲ್ಲಾ ನೋಡುತ್ತಿರುವ ಅಜ್ಜ, ಆಗೊಮ್ಮೆ ಈಗೊಮ್ಮೆ ಇಣುಕಿ ಹೋಗುವ ಚೆನ್ನಕ್ಕ. ನಮಗೆ ಪ್ರಪಂಚದ ಪರಮಾದ್ಭುತವೊಂದು ನಮ್ಮೆದುರಲ್ಲಿ ಘಟಿಸುತ್ತಿರುವ ಅನುಭವ. ಮೋಡ ಸೀಳಿ ಬಂದ ಸಿಡಿಲೊಂದು ನಮ್ಮ ಸಂಭ್ರಮವನ್ನು ನೋಡಿ ಮತ್ತೆ ಮೋಡದೊಳಗೇ ಸೇರಿಕೊಂಡ ಭಾವ. 

ಎಲ್ಲಾ ತಯಾರಾದ ಮೇಲೆ ಮಕ್ಕಳೆಲ್ಲರನ್ನು ಹತ್ತಿರ ಕರೆದು ಕೂರಿಸಿ ಬಾಳೆ ಎಲೆ ಹಾಕಿ ಮುದ್ದೆ ಮತ್ತು ಸಾರು ಬಡಿಸಿದರು. ಆ ರುಚಿಯನ್ನು ಇವತ್ತು ಎಷ್ಟು ಪದಗಳನ್ನು ಎರವಲು ಪಡೆದುಕೊಂಡರೂ ವಿವರಿಸಲಾಗದು, ಯಾವ ಮಲ್ಟಿ ಸ್ಟಾರ್ ಹೋಟೆಲ್ ಗಳೂ ಒದಗಿಸದ ರುಚಿ ಅದು. ಹದವಾಗಿ ಬೆರೆತ ಖಾರ, ರುಚಿಗೆ ತಕ್ಕಷ್ಟು ಉಪ್ಪು, ಧಾರಾಳವಾಗಿ ಬೆರೆಸಿದ ಅಕ್ಕರೆ.... ಮನಸ್ಸಿಗೆ ತೃಪ್ತಿಯಾಗಲು ಮತ್ತೇನು ಬೇಕು? ಇಷ್ಟು ವರ್ಷ ಕಳೆದಾದಮೇಲೆ ಬಾಲ್ಕನಿಯ ಮೂಲೆಯಲ್ಲಿ ಕೂತು ಇದನ್ನು ಬರೆಯುವಾಗ ನನಗೆ ಪ್ರಪಂಚದಲ್ಲಿ ಜರುಗುವ ಯಾವ ಸಂಗತಿಯೂ ಆತ್ಯಂತಿಕವಲ್ಲ, ಪ್ರತಿಯೊಂದೂ ಒಂದಕ್ಕೊಂದು ಸಂಬಂಧಿಸಿದ್ದೇ ಆಗಿವೆ, ಯಾವುದೂ ಯಾವುದನ್ನೂ ಅಳಿಸುವುದಿಲ್ಲ, ಎಲ್ಲವೂ ರೂಪಾಂತರಗೊಳ್ಳುತ್ತಲೇ ಇರುತ್ತದೆ ಅನಿಸುತ್ತದೆ. ಆ ರೂಪಾಂತರ ಒಂದು ಭಾಗವೇ ಅಜ್ಜ, ಕೆಂಪಿ, ಬೇಬಿಯಣ್ಣ, ಅಪ್ಪ, ಚೆನ್ನಕ್ಕ, ನಾನು, ನೀವು...ಎಲ್ಲರೂ.

ಮಂಗಳವಾರ, ಮೇ 28, 2019

ಪುಟ್ಟ ಪುಟ್ಟ ಕಥೆಗಳು

1.ಸ್ವರ್ಗದ ಹಾದಿ

'ಸ್ವರ್ಗದ ಹಾದಿ' ಪಾಠ ಮಾಡುತ್ತಿದ್ದ ಉಸ್ತಾದರು ಬಾಗಿಲ ಬಳಿ ಸಣ್ಣ ಸದ್ದು ಕೇಳಿದಂತಾಗಿ ತಿರುಗಿ ನೋಡಿದರು. ಏದುಸಿರು ಬಿಡುತ್ತಾ ಅವರದೇ ವಿದ್ಯಾರ್ಥಿ 'ಒಳಗೆ ಬರಲೇ' ಎಂಬಂತೆ ದೈನ್ಯವಾಗಿ ನೋಡುತ್ತಿದ್ದ. ಉಸ್ತಾದರ ಕಣ್ಣು ಗೋಡೆ ಗಡಿಯಾರದತ್ತ ಚಲಿಸಿತು. ಈಗಾಗಲೇ ಹದಿನೈದು ನಿಮಿಷ ತಡ ಆಗಿದೆ. ಈ ಹುಡುಗ ಕಳೆದ ಒಂದು ವಾರದಿಂದಲೂ ತಡವಾಗಿಯೇ ಬರ್ತಿದ್ದಾನೆ. ನಾಳೆ ಮಹತ್ವದ ತರಗತಿಯಿದೆ, ಸಮಯಕ್ಕೆ ಸರಿಯಾಗಿ ತಲುಪಲೇಬೇಕೆಂದು‌ ನಿನ್ನೆಯೇ ಹೇಳಿದ್ದರು. ಹಾಗಿದ್ದೂ ಇವತ್ತು ತಡವಾಗಿಯೇ ಬಂದಿದ್ದಾನೆ ಅಂದರೆ ಎಷ್ಟು ಅಹಂಕಾರವಿರಬೇಕು ಇವನಿಗೆ. ಕೈ ಟೇಬಲ್ ಮೇಲಿದ್ದ ಬೆತ್ತದತ್ತ ಚಲಿಸಿತು. ಅವನನ್ನು ಒಳಗೆ ಕರೆದು ಎರಡೇಟು ಹೊಡೆದು "ಯಾಕೆ ಲೇಟ್? 'ಸ್ವರ್ಗದ ಹಾದಿಯ' ಪಾಠ ತಪ್ಪಿಸಿಕೊಂಡಿಯಲ್ಲಾ? " ಗದರಿದರು. ಅವನು ಅಳುತ್ತಾ " ಬಚ್ಚಲು‌ ಮನೆಯಲ್ಲಿ‌ ಜಾರಿ ಬಿದ್ದು ಅಮ್ಮ ಹಾಸಿಗೆ ಹಿಡಿದಿದ್ದಾರೆ.  ಅವರಿಗೆ ನಮಾಜು ಮಾಡಲು ಉಝೂ ಮಾಡಿಸಿ ಬರುವಾಗ ತಡ ಆಯ್ತು". ಉಸ್ತಾದರಿಗೆ ಹಿಂದೊಮ್ಮೆ ತಾನೇ 'ಅಮ್ಮನ ಕಾಲಡಿಯಲ್ಲಿ ಸ್ವರ್ಗ' ಎಂದು ಪ್ರವಚನ ನೀಡಿದ್ದು ನೆನಪಾಯಿತು. ಹುಡುಗ ಅದಾಗಲೇ ಸ್ವರ್ಗದ ಹಾದಿಯಲ್ಲಿದ್ದ.


2. ದೀಪ ಪತಂಗ

ಸಣ್ಣಗೆ ಉರಿಯುತ್ತಿದ್ದ ದೀಪ  ಪತಂಗ ಹತ್ತಿರ ಬರುತ್ತಿದ್ದಂತೆ ಆರಿ ಹೋಯಿತು. ಗಾಳಿ ಬೀಸಿತೋ, ದೀಪಕ್ಕೇ ಉರಿಯಲು ಇಷ್ಟವಿರಲಿಲ್ಲವೋ ಅಥವಾ ತಾನು ಹತ್ತಿರವಾಗುವುದು ಇಷ್ಟವಿಲ್ಲವೋ ಒಂದು ಅರ್ಥವಾಗದ ಪತಂಗ ಪಥ ಬದಲಿಸಿ ಹಾರಿತು. ಮತ್ತೆ ಬಂದು ಮತ್ತೆ ದೀಪ ಹಚ್ಚಿದರು. ಪತಂಗ ಮರಳುತ್ತಿದ್ದಂತೆ ದೀಪ,
" ಅಲ್ಲೇ ನಿಲ್ಲು ಹತ್ತಿರ ಬರಬೇಡ"
"ಯಾಕೆ ಬರಬಾರದು?"
"ಸುಟ್ಟು ಹೋಗುವುದೇ‌ ಪ್ರೇಮವಲ್ಲ, ದೂರ ನಿಂತೇ ಪ್ರೇಮಿಸು"
"ಸುಟ್ಟುಕೊಳ್ಳಲಲ್ಲ, ನಿನ್ನ ಬೆಳಕ ಹೀರಿಕೊಂಡು ಅಹಂಕಾರ ತೊರೆಯಲು. ನಿನ್ನದೇ ಪುಟ್ಟ ಕಣವಾಗಲು" ಎಂದು ಹಾರಿ ಬಂದು ದೀಪದಲ್ಲಿ ಲೀನವಾಯಿತು.
ದೀಪವೇ ಪತಂಗವೀಗ.
ಪತಂಗವೇ ಬೆಳಕೀಗ.

3. ನೋವಿನ ಬದುಕು

ಬದುಕು ಮತ್ತು ನೋವು
ನಿನ್ನೆಯಷ್ಟೇ ನೋವುಂಡ ಬದುಕು ಕಡಲ ತೀರದಲ್ಲಿ ಸುಮ್ಮನೆ ಶತಪಥ ಹಾಕುತ್ತಿತ್ತು. ಪಾದ ಸೋಕಿ ಹೋಗುವ ಅಲೆಗಳು, ಬಾನಿಡೀ ಹೊಂಬಣ್ಣ ಹಂಚಿದ್ದ ಸೂರ್ಯ, ಬಾನಿಂದಲೇ ತುಸು ಬಣ್ಣ ಕಡ ಪಡೆದುಕೊಂಡು ಬಂಗಾರದಂತೆ ಹೊಳೆಯುತ್ತಿದ್ದ ಮರಳು ಯಾವುದೂ ಬೆಂದ ಬದುಕನ್ನು ಸಾಂತ್ವನಗೊಳಿಸುವಷ್ಟು ಶಕ್ತವಾಗಿರಲಿಲ್ಲ. ಎಲ್ಲಿಂದಲೋ ಧೂಳಿನಂತೆ ಮತ್ತೆ ತೂರಿ ಬಂದ ನೋವು ಬದುಕಿನ ಹೆಗಲು ಬಳಸಿ
"ನಿನಗೆ ನನ್ನ ಕಂಡರೆ ಅಸಹ್ಯವೇ?"
"ಏಕೆ ಅಸಹ್ಯಿಸಬೇಕು ನಿನ್ನ?"
"ಪ್ರತಿ ಬಾರಿ ನಿನ್ನನ್ನು ಭೇಟಿಯಾದಾಗೆಲ್ಲಾ ನಿನ್ನ ನೆಮ್ಮದಿಯನ್ನು ಕದಡಿ ಹಾಕುತ್ತೇನಲ್ಲಾ?"
"ಇಲ್ಲ ನೋವೇ, ನನಗೆ ಖುಶಿಗಿಂತಲೂ ನೀನೇ ಹೆಚ್ಚು ಇಷ್ಟ. ನೀನು ಪ್ರತಿ ಬಾರಿ ಬಂದು ಹೋಗುವಾಗಲೂ ನನ್ನನ್ನು ಮತ್ತಷ್ಟು ಬೇರಿಗಂಟಿಕೊಳ್ಳುವಂತೆ ಮಾಡುತ್ತಿ. ನಾನು ಬೇರಿನ ನಂಟು ಕಳೆದುಕೊಳ್ಳದೆ ಗಟ್ಟಿಯಾದದ್ದೇ ನಿನ್ನಿಂದ. ನೀನಿಲ್ಲದಿದ್ದರೆ ನಾನೆಂದೋ ಖಾಲಿಯಾಗಿಬಿಡುತ್ತಿದ್ದೆ. ಖಾಲಿಯಾಗುವುದೆಂದರೆ ಗೊತ್ತಲ್ಲಾ? ಉಳಿಯಲೂ ಅಳಿಯಲೂ ಏನೂ ಇಲ್ಲದಿರುವುದು".
ಕಡಲು ಒಂದು ಕ್ಷಣಕ್ಕೆ ಸ್ಥಬ್ಧವಾಯಿತಾ? ಗೊತ್ತಿಲ್ಲ, ನೋವು ಮಾತ್ರ ಬದುಕಿನ ಮುಂದೆ ಮಂಡಿಯೂರಿತು.

4. ಉಪವಾಸ

ಮದ್ರಸ ಬಿಟ್ಟು ಬಂದ ಮಗಳಿಗೆ ಹೊಟೇಲಿಂದ ತರಿಸಿದ ಎರಡು‌‌ ಇಡ್ಲಿ ಸಾಂಬಾರ್  ಕೊಟ್ಟ ಅಮ್ಮ‌ ಮತ್ತೆ ಮನೆಗೆಲಸದಲ್ಲಿ ಮುಳುಗಿ ಹೋದಳು. ಬೆಳಗ್ಗಿಂದಲೂ ಅಷ್ಟೇ, ಜೇಡನ ಬಲೆ ತೆಗೆದು , ಮನೆಯ ಮೂಲೆ ಮೂಲೆಯನ್ನು ಸ್ವಚ್ಛವಾಗಿ ಗುಡಿಸಿ, ಒರೆಸಿ ಥಳ ಥಳ ಹೊಳೆಯುವಂತೆ ಮಾಡುತ್ತಿದ್ದಾಳೆ. ಕಿಟಕಿ, ಬಾಗಿಲುಗಳ ಕರ್ಟನ್, ಸೋಫಾ ಕವರ್, ನೆಂಟರಿಗೆಂದೇ ತೆಗೆದಿಟ್ಟ ದಿಂಬು, ಬೆಡ್ಶೀಟ್ ಎಲ್ಲ ಒಗೆದು ಹಾಕಿದ್ದಳು. ಒಟ್ಟಿನಲ್ಲಿ ಇಡೀ ಮನೆಗೆ ಹೊಸ ಕಳೆ ಬಂದಿತ್ತು. ಕುತೂಹಲ ತಡೆಯಲಾಗದೆ ಮಗಳು "ಅಮ್ಮಾ ಮನೆಗೆ ಯಾರಾದ್ರೂ ಹೊಸ ನೆಂಟರು ಬರುತ್ತಿದ್ದಾರಾ?" ಎಂದು ಕೇಳಿದಳು.
"ಹುಂ ಮಗಳೇ, ಅಲ್ಲಾಹುವೇ ನೆಂಟರನ್ನು ಕಳುಹಿಸುತ್ತಿದ್ದಾನೆ. ಪವಿತ್ರ ಮಾಸ ರಂಜಾನ್ ಬರುತ್ತಿದೆ. ಉಪವಾಸದಲ್ಲಿನ ಒಂದು ಪುಣ್ಯ ಕಾರ್ಯಕ್ಕೆ ಅವನು ಎಪ್ಪತ್ತರಷ್ಟು ಪ್ರತಿಫಲ ಕೊಡುತ್ತಾನೆ. ಹೀಗಿರುವಾಗ ರಂಜಾನ್ ನನ್ನು ಸ್ವಾಗತಿಸದೇ ಇರಲಾದೀತೇ?"
"ಹೌದಾ ಅಮ್ಮಾ? ಎಪ್ಪತ್ತರಷ್ಟು ಪ್ರತಿಫಲಾನಾ? ಹಾಗಿದ್ದರೆ ಶಾಲೆಯಲ್ಲಿನ ನನ್ನ ಗೆಳತಿ ತುಂಬಾ ಪುಣ್ಯವಂತೆ. ಅವಳಪ್ಪ ತೀರಿ ಹೋದ ನಂತರ ವಾರದಲ್ಲಿ ನಾಲ್ಕು ದಿನ ಅವರಿಗೆ ಉಪವಾಸವಂತೆ" ಎಂದು ಮುಗ್ಧತೆಯಿಂದ ನಕ್ಕಳು.

5. ತೀರದ ದಾಹ

ತೀರದ ದಾಹದಿಂದ ಬಳಲುತ್ತಿದ್ದ ಮರಳನ್ನು ಗಾಳಿ ಕೇಳಿತು
" ಪಕ್ಕದಲ್ಲೇ ಸಮುದ್ರ ಇದ್ದರೂ ಇಷ್ಟು ದಾಹವೇ ನಿನಗೆ? ಬೊಗಸೆಯೊಡ್ಡಿದರೆ ಸಾಕು  ದಾಹವೂ ತೀರುವಷ್ಟು ನೀರಿದೆ".
"ತನ್ನ ಮೀರಿದವರಿಲ್ಲ ಎನ್ನುವ ಅಹಂಕಾರದಿಂದ ಭೋರ್ಗರೆವ ನೀರಿನಲ್ಲಿ ಪ್ರತಿಬಿಂಬವೇ ಮೂಡುತ್ತಿಲ್ಲ. ಇನ್ನು ದಾಹ ತೀರೀತೇ?" ತಣ್ಣಗೆ ಉತ್ತರಿಸಿತು ಮರಳು.

6. ಪ್ರತಿಬಿಂಬ

ಕನ್ನಡಿ ಮಾರುವ ಅಂಗಡಿಯಲ್ಲಿ ಅವಳು ಎಲ್ಲ ಕನ್ನಡಿಯ ಮುಂದೆ ನಿಂತು ಪ್ರತಿಬಿಂಬ ನೋಡಿ ಪರೀಕ್ಷಿಸಿ ನಿರಾಸೆಯಿಂದ ಹೊರಡಲನುವಾದಳು. ಅಂಗಡಿಯವನು" ಏನು ಬೇಕಿತ್ತು ಮೇಡಂ?"
"ಒಡೆದು ಚೂರಾದರೂ ಒಡಕು ಬಿಂಬ ತೋರದ ಕನ್ನಡಿ ಬೇಕಿತ್ತು. ಇಲ್ಲಿ ಹುಡುಕಿದೆ, ಸಿಗಲಿಲ್ಲ." ಎಂದಳು ಅವಳು.
"ಇಲ್ಲಿ ಅಂತಲ್ಲ, ಎಲ್ಲೂ ಸಿಗದು. ಒಮ್ಮೆ ಅಂತರಂಗದಲ್ಲಿ ಹುಡುಕಿಕೊಳ್ಳಿ. ಸಿಗುವುದಿದ್ದರೆ ಅಲ್ಲೇ" ಎಂದ ಅಂಗಡಿಯವನು.

7. ಅಸ್ತಿತ್ವದ ಪ್ರಶ್ನೆ

"ಅಸ್ತಿತ್ವ ಕಳೆದುಕೊಳ್ಳುವುದೆಂದರೇನು?" ಮೋಡದ ಒಳಗಿಂದ ಭೂಮಿಗೆ ಬರಲು ಹೊರಟ ಎರಡು ಪುಟ್ಟ ಪುಟ್ಟ ಮಳೆ ಹನಿಗಳು ಮಾತಾಡಿಕೊಳ್ಳುತ್ತಿದ್ದವು. ಈಗಷ್ಟೇ ಬೀಸಿದ ಗಾಳಿಗೆ ಮೋಡದಿಂದ ತಪ್ಪಿಸಿಕೊಂಡ ದೊಡ್ಡ ಹನಿಯೊಂದು‌ ಭೂಮಿಯತ್ತ ಜಾರುತ್ತಾ "ಇದ್ದೂ ಇಲ್ಲದಂತಾಗುವುದೇ ಅಸ್ತಿತ್ವ ಕಳೆದುಕೊಳ್ಳುವುದು" ಅಂದಿತು. ಏನೂ ಅರ್ಥವಾಗದ ಪುಟ್ಟ ಹನಿಗಳು ಒಂದರ ಮುಖ ಇನ್ನೊಂದು ನೋಡುತ್ತಿರುವಂತೆಯೇ ಮತ್ತೆ ಗಾಳಿ ಬೀಸಿತು. ಅವರೆಡೂ ಜೊತೆಯಾಗಿ ಉದುರಿದವು. ದಾರಿಯಲ್ಲಿ ಗಾಳಿಗೂ, ಧೂಳಿಗೂ, ಗುಡುಗಿನ ಆರ್ಭಟಕ್ಕೂ ಹೆದರಿ ಕಣ್ಣು ಮುಚ್ಚಿದವು.ಕಣ್ಣು ಬಿಟ್ಟು ನೋಡಿದಾಗ ಎರಡೂ ಹನಿಗಳು ಸಾಗರ ಸೇರಿದ್ದವು. ಎತ್ತ ನೋಡಿದರತ್ತ ನೀರು. ತಮ್ಮ‌ ಮೈ ನೋಡಿಕೊಂಡವು, ಹನಿ ಯಾವುದು ಸಾಗರ ಯಾವುದು ಗೊತ್ತಾಗಲಿಲ್ಲ. ಅವೆರಡಕ್ಕೂ ಈಗ ಅಸ್ತಿತ್ವ ಕಳೆದುಕೊಳ್ಳುವುದೆಂದರೇನೆಂದು ಅರ್ಥವಾಗಿತ್ತು.

(2019 ಜೂನ್ ತಿಂಗಳ ತುಷಾರದಲ್ಲಿ ಪ್ರಕಟಿತ ಕಥೆಗಳು.)