ಸೋಮವಾರ, ಆಗಸ್ಟ್ 26, 2019

ಬೆಳಕು ಸೃಜಿಸುವ ಶಾಪಗ್ರಸ್ಥೆ ದೇವಕನ್ಯೆ.ಈ ಬಿಸಿಲು ಕಾಲದ ಮಧ್ಯಾಹ್ನದ ಉರಿ ಬಿಸಿಲಿನಲ್ಲಿ, ತೊಡೆಯ ಮೇಲೆ ಲ್ಯಾಪ್‌ಟಾಪ್ ಇಟ್ಟುಕೊಂಡು ಬರಹದಲ್ಲಿ ಟೈಪಿಸಲಾ ಇಲ್ಲ ನುಡಿ ಆದೀತಾ ಎನ್ನುವ ಪುಟ್ಟ ಗೊಂದಲವನ್ನಿಟ್ಟುಕೊಂಡು, ಹೊತ್ತಲ್ಲದ ಹೊತ್ತಿನಲ್ಲಿ ಒಂದು ಬಿಸಿಲು ಕೋಲು ಮುಖದ ಮೇಲೆ ಸುಮ್ಮನೆ ಹಾಯ್ದು ಹೋಗಲಿ ಎಂದು ಸುಳ್ಳೇ ಸುಳ್ಳು ನಿರೀಕ್ಷಿಸುತ್ತಾ ನಮ್ಮೂರ ಒಬ್ಬ ಚೆಂದದ ಹೆಂಗಸಿನ ಕುರಿತೂ, ಆಕೆಯ ಒಳ್ಳೆಯತನಗಳ ಕುರಿತೂ, ಕಮಟು ವಾಸನೆಯ ಜೋಳಿಗೆಯ ಕುರಿತೂ, ಆಕೆಯ ಬಾಯಿಯಿಂದ ಸದಾ ತೇಲಿಬರುವ ಯಾವುದೋ ಸಾರಾಯಿಯ ವಾಸನೆಯ ಕುರಿತೂ ಯೋಚಿಸುತ್ತಿದ್ದೇನೆ.

ನಮ್ಮೂರ ಪ್ರತಿ ಮದುವೆಯಲ್ಲೂ ಬರ ಬರ ಸೀರೆಯ ಸದ್ದು ಮಾಡುತ್ತಾ, ನಿಮಿಷಕ್ಕೊಮ್ಮೆ ಓಲೆ ಕಿವಿಯನ್ನು ಬಿಗಿಯಾಗಿ ಅಪ್ಪಿಕೊಂಡಿದೆಯಾ ಎಂದು ಪರೀಕ್ಷಿಸುತ್ತಾ ಸಂಭ್ರಮದಿಂದ ಓಡಾಡುವ ಸುಂದರಿಯೆಂದರೆ ಊರವರಿಗೆಲ್ಲಾ ವಿಶೇಷ ಆಸ್ಥೆ. ಸದಾ ಪಾಡ್ದನ ಹಾಡುವ, ಪ್ರಪಂಚದ ಪ್ರತಿ ಆಗು ಹೋಗಿಗೂ ತನ್ನದೇ ವಿಶಿಷ್ಟ ಶೈಲಿಯಲ್ಲಿ ‌ಪ್ರತಿಕ್ರಿಯಿಸುವ ,ಪ್ರತಿ ಘಟನೆಯ ಹಿಂದಿನ ಗೂಢ ಕಾರಣಗಳನ್ನು ಕಂಡುಹಿಡಿದು ಬೊಚ್ಚು ಬಾಯಿ ಅಗಲಿಸಿ ನಗುವ ಆಕೆಯ ಬಳಿ ಮಾತಿಗೆ ಕೂತರೆ ಬಹುದೊಡ್ಡ ಅನುಭವದ ಖಜಾನೆಯೇ ತೆರೆದಂತಾಗುತ್ತದೆ. ಕರಾವಳಿಯ ಹವೆ, ಪಂಚಾಯತ್ ರಾಜಕೀಯ, ಯಾರದೋ ಮನೆಯ ಪ್ರೇಮ‌, ಜಾತಿ ಸಂಘರ್ಷ ಹೀಗೆ ಸುಂದರಿಗೆ ಗೊತ್ತಿಲ್ಲದ ಸಂಗತಿಗಳೇ ಇಲ್ಲ. ಯಾವ ಕಿಟಕಿಯಿಂದ ನೋಡಿದರೂ, ಯಾವ ಬಾಗಿಲಿನಿಂದ ಕಣ್ಣು ಹಾಯಿಸಿದರೂ ಆಕೆ ನಿಬ್ಬೆರಗಾಗುವ ಬೆಳಕು.

ಬೆವರು ಹನಿಗಳ ತೂಗುಯ್ಯಾಲೆಯ ಮೇಲೆ ನಾಜೂಕಿನಿಂದ ಹೆಣೆದ ಶ್ರಮದ ಬದುಕು ಆಕೆಯದು. ಪುಟ್ಟ ಪುಟ್ಟ ಹೆಜ್ಜೆಯಿಟ್ಟು ಬಾಲ್ಯದ ಎದೆಯ ಮೇಲೆ ಶಾಶ್ವತ ಗುರುತು ಮೂಡಿಸಬೇಕಾಗಿದ್ದ ಕಾಲದಲ್ಲೇ ಗಂಡನ‌ ಮನೆ ಸೇರಿದ್ದಳು ಸುಂದರಿ. ಮಣ್ಣಿನ ಮನೆ ಮಾಡಿ, ಬೆಳಕಿಗೂ ಗಾಳಿಗೂ ಪುಟ್ಟ ಕಿಟಕಿಯಿಟ್ಟು, ಆ ಮನೆಗೊಂದು ಚಂದದ ಹೆಸರಿಟ್ಟು ಆಟ ಆಡಿಕೊಳ್ಳಬೇಕಾದ ವಯಸ್ಸಿನಲ್ಲಿ ಹಾಸಿಗೆ ಹಿಡಿದ ಅತ್ತೆಯನ್ನೂ, ಪರಮ ಕೋಪಿಷ್ಠ ಮಾವನನ್ನೂ ಬೇಜಾವಾಬ್ದಾರಿಯ ಗಂಡನನ್ನೂ ಸಂಭಾಳಿಸುವ ಹೊಣೆ ಅವಳ ಮೇಲೆ ಬಿದ್ದಿತ್ತು. ಈ ಹೊತ್ತು ಕೂತು ಮಾತಾಡಿದರೆ, ಬಾಲ್ಯ ವಿವಾಹವನ್ನು ಖಡಾಖಂಡಿತವಾಗಿ ವಿರೋಧಿಸುವ ಸುಂದರಿ ತನ್ನ ಮದುವೆಯ ವಿಷಯಕ್ಕೆ ಬಂದಾಗ ಮಾತ್ರ ಅದೊಂದು ಬದುಕಿನ ಅತಿ ಸುಂದರ  ಘಳಿಗೆ ಎಂದೇ ನಂಬುತ್ತಾಳೆ, ಅಥವಾ ನಮ್ಮನ್ನು ನಂಬಿಸಲು ಪ್ರಯತ್ನಿಸುತ್ತಾಳೆ.

ಅಷ್ಟು ಸಣ್ಣ ವಯಸ್ಸಲ್ಲಿ ಸಂಸಾರಕ್ಕೆ ಹೆಗಲು ಕೊಡಲು ನಿನಗೆ ಕಷ್ಟವಾಗಲಿಲ್ಲವೇ ಎಂದು ಕೇಳಿದರೆ " ತವರಲ್ಲೇನು ಸುಖ ಕಾಲು ಮುರಿದುಕೊಂಡು ಬಿದ್ದಿತ್ತೇ? ಮೂರು ಹೆಣ್ಣು ಮಕ್ಕಳ ನಂತರ ಯಾರಿಗೂ ಬೇಡದ ನಾಲ್ಕನೆಯ ಹೆಣ್ಣಾಗಿ ಜನಿಸಿದವಳು ನಾನು. ಅಪ್ಪ-ಅಮ್ಮನ ಅನಾದಾರ, ಅಕ್ಕಂದಿರ ಮೂದಲಿಕೆ, ತಮ್ಮನ ಉಡಾಫೆ ಇವೆಲ್ಲದರ ಮಧ್ಯೆ ಒಂದು ವಜ್ಜೆಯಂತೆ ಬೆಳೆದವಳಿಗೆ ಬೆಂಕಿಯಿಂದ ಬಾಣಲೆಗೆ ಬಿದ್ದಂತಾಗಿತ್ತು ಅಷ್ಟೆ. ಸುಡುವುದೇ ಆಗಿದ್ದರೂ ನೇರವಾಗಿ ಸುಡದು ಅನ್ನುವ ನಂಬಿಕೆ ಇತ್ತು.‌ ಮೇಲಾಗಿ ಗಂಡನ ಮನೆಯಲ್ಲಿ ಮೂದಲಿಕೆಗಳಿಂದಂತೂ ನಾನು ಮುಕ್ತಳಾಗಿದ್ದೆ" ಎನ್ನುತ್ತಾಳೆ. ಉರಿವ ಬೆಂಕಿಗಾದರೂ ಕೈಯೊಡ್ಡಿ ಬದುಕು ಕಟ್ಟಿಕೊಳ್ಳುತ್ತೇನೆ ಅನ್ನುವಷ್ಟು ಛಲವಿರುವ ನಮ್ಮ ಸುಂದರಿಗೆ ಬೆಂಕಿ ಕಡ್ಡಿ ಕೈಯಲ್ಲಿ ಕೊಟ್ಟು ದೀಪ ಹಚ್ಚು ಎಂದರೆ ಬೆಳಕು ಸೃಜಿಸದೇ ಇರುವಳೇ?

ಇಂತಹ ಸುಂದರಿ ಒಮ್ಮೆ‌ ಮದುವೆ ಮನೆ ಹೊಕ್ಕಳೆಂದರೆ ಸಾಕು ಸಂಭ್ರಮ ಛಿಲ್ಲನೆ ಚಿಮ್ಮುತ್ತದೆ. ಧಾರೆ, ನಿಖಾಹ್ ಹೀಗೆ ಯಾವ ಧಾರ್ಮಿಕ ವಿಧಿವಿಧಾನಗಳಿದ್ದರೂ ಆಕೆ ಯಾವ ಗೋಜಲುಗಳೂ ಇಲ್ಲದೆ ಗಲ ಗಲ ಓಡಾಡುವುದನ್ನು ನೋಡುವುದೇ ಒಂದು ಚೆಂದ. ನಡು ನಡುವೆ ಊಟ ಚೆನ್ನಾಗಿಲ್ಲವೆಂದೋ ಅಥವಾ ಆತಿಥ್ಯ ಸರಿಯಾಗಲಿಲ್ಲವೆಂದೋ ಯಾರಾದರೂ ಮೂಗುಮುರಿಯುತ್ತಿದ್ದರೆ ಅವರನ್ನು ಎಲ್ಲರೆದುರು ಯಾವ ಮುಲಾಜೂ ಇಲ್ಲದೆ ತರಾಟೆಗೆ ತೆಗೆದುಕೊಳ್ಳುತ್ತಾಳೆ. ಸುಂದರಿ ಮದುವೆ ಮನೆಯಲ್ಲಿದ್ದಾಳೆಂದರೆ ಮಧುಮಗಳ ಚಿನ್ನ, ವರನ ಡ್ರೆಸ್ಸು, ಊಟದ ಮೆನುವಿನಲ್ಲಿನ ಕೊರತೆ ಯಾವುದರ ಬಗ್ಗೆಯೂ ಸುಖಾಸುಮ್ಮನೆ ಟೀಕಿಸಲು ಜನ ಹಿಂದೆ ಮುಂದೆ ನೋಡುತ್ತಾರೆ

ಆದರೆ ಅವಳ ವ್ಯಕ್ತಿತ್ವದ ಹೊಳಹು ಪೂರ್ತಿಯಾಗಿ ದಕ್ಕಬೇಕೆಂದರೆ ಮದುವೆಯ ರೀತಿ ರಿವಾಜುಗಳೆಲ್ಲಾ ಮುಗಿದು ಅಲ್ಲೆಲ್ಲಾ ಒಂದು  ಮುಗಿಯದ ಮೌನ ವ್ಯಾಪಿಸಬೇಕು. ಆಗಾಕೆ ಇಷ್ಟಿಷ್ಟೇ ಬಿಚ್ಚಿಕೊಳ್ಳುತ್ತಾಳೆ; ಕೆಲವೊಮ್ಮೆ ಸೌಮ್ಯವಾಗಿ ಮತ್ತೂ ಕೆಲವೊಮ್ಮ ರೌದ್ರವಾಗಿ. ಮೊನ್ನೆಯೂ ಹೀಗೆಯೇ ಆಯ್ತು ನೋಡಿ.

ಸಂತೆ ಮುಗಿದ ಮೇಲೆ ಉಳಿದು ಬಿಡುವ ನೀರವ ರಸ್ತೆಯಂತೆ ಮದುವೆ ಸಂಭ್ರಮ‌ ಮುಗಿದ ಮೇಲೆ‌ ಮದುವೆ ಮನೆ ಬಣಗುಟ್ಟುತ್ತಿರಬೇಕಾದರೆ ಆಕೆ ಹಾಡಿಕೊಳ್ಳುತ್ತಾ, ಆಗಾಗ ಎಲೆ ಅಡಿಕೆಯನ್ನು ಪಿಚಕ್ಕಂತ ಉಗುಳುತ್ತಾ, ಕೆಲವೊಮ್ಮೆ ಕಣ್ಣು ಕೆಂಪಗೆ ಮಾಡಿಕೊಂಡು ಯಾರ್ಯಾರಿಗೋ ಬಯ್ಯುತ್ತಾ ಸೀರೆ ಎತ್ತಿಕಟ್ಟಿ ಪಾತ್ರೆ ತಿಕ್ಕುತ್ತಿದ್ದರೆ ನನಗೆ ಯಾವುದೋ ಋಷಿ ಮುನಿಯ ಕೋಪಕ್ಕೆ ತುತ್ತಾಗಿ ಶಾಪಗ್ರಸ್ಥೆಯರಾಗಿ ಭುವಿಗಿಳಿದು ಬರುವ ದೇವಕನ್ನಿಕೆಯರು ನೆನಪಾದರುಹಣೆಯ ಮೇಲೆ ಸುಮ್ಮನೆ ಹೊಳೆವ ಬೆವರ ಹನಿಗಳು, ಅತ್ತಿಂದಿತ್ತ ಹಾರಾಡುವ ಗುಂಗುರು ಕೂದಲು, ಹಿಂದೊಮ್ಮೆ ಕನಸುಗಳ ದೊಡ್ಡ ಗಣಿಯೇ ಆಗಿದ್ದಿರಬಹುದಾದ ಕಡು ಕಪ್ಪು ಕಣ್ಣುಗಳು, ಮೂಗು, ಅದರ ತುದಿಯಲ್ಲಿ‌ ಫಳ ಫಳ ಮಿಂಚುವ ನತ್ತು, ಆಕೆಯ ಪಾಡ್ದನಕ್ಕೆ ಸರಿಯಾಗಿ ಕಿಣಿ ಕಿಣಿ ಸದ್ದು ಮಾಡುವ ಹಸಿರು ಗಾಜಿನ ಬಳೆಗಳು... ಸ್ವರ್ಗ ಅನಾಮತ್ತಾಗಿ ಮನೆಯ ಅಂಗಳದಲ್ಲಿ ಹರಡಿಕೊಂಡಿತ್ತು. ನಾನು ಪಡಬಾರದ ಪಾಡು ಪಟ್ಟುಕೊಂಡು ಉಟ್ಟಿದ್ದ ಸೀರೆ ಬಿಚ್ಚಿ ಒಂದು ಚೂಡಿದಾರ್ ಏರಿಸಿಕೊಂಡು ಆಕೆಗೆ ಸಹಾಯ ಮಾಡುವ ನೆಪದಲ್ಲಿ ಅದಕ್ಕಿಂತಲೂ ಹೆಚ್ಚಾಗಿ ಅವಳಿಂದ ಸಾವಿರದ ಕಥೆ ಕೇಳುವ ಹುಕಿಯಲ್ಲಿ ಅವಳೇ ಸೃಷ್ಟಿಸಿದ ಸ್ವರ್ಗದ ಬಾಗಿಲನ್ನು ನಾಜೂಕಾಗಿ ಬಡಿದೆ.

ಆಕೆ "ಬಾ" ಎಂದು ಕರೆದು ಒಂದು ಸಣ್ಣ ಪ್ಲಾಸ್ಟಿಕ್ ಮಣೆಯನ್ನು ನನ್ನತ್ತ ತಳ್ಳುತ್ತಲೇ ಯಾವುದೋ ಅಗ್ಗದ ಸರಾಯಿ ವಾಸನೆ ತೇಲಿಬಂತು. ವಾಕರಿಕೆ ಬಂದಂತಾಗಿ "ದೊಡ್ಡಾ ಕುಡಿದು ಬಂದಿದ್ದೀರಾ?" ಎಂದು ಕೇಳಿದೆ. ಅಷ್ಟಕ್ಕೇ ಕಣ್ಣು ಕೆಂಪಗೆ ಮಾಡಿಕೊಂಡು "ಹುಂ ಕುಡಿದಿದ್ದೇನೆ" ಎಂದಳು.
 "ಯಾಕೆ ಕುಡಿಯುತ್ತೀರಿ? ಅದು ಆರೋಗ್ಯಕ್ಕೆ ಒಳ್ಳೆಯದಲ್ಲ
"ಹೋ ಹೌದಾ? ನಂಗೆ ಗೊತ್ತೇ ಇರ್ಲಿಲ್ಲ. ಇಲ್ಲಿ ಬಾ ಈ ಪಾತ್ರೆ ಸ್ವಲ್ಪ ಎತ್ತಿ‌ ಕೊಡು" ಎಂದು ದೊಡ್ಡ ಕಡಾಯಿಯತ್ತ ಕೈ ತೋರಿದಳು. ನಾನು ಆ ಎಂದು ಬಾಯಿ ತೆರೆಯುತ್ತಿದ್ದಂತೆ "ಆಗಲ್ಲ ತಾನೇ? ನೀನು ಕುಡಿಯುವುದಿಲ್ಲ, ನನ್ನ ಅರ್ಧದಷ್ಟು ವಯಸ್ಸೂ ನಿಂಗಾಗಿಲ್ಲ, ಕಡಾಯಿಯನ್ನು ಎತ್ತಲಾಗದಷ್ಟು ತುಂಬು ಆರೋಗ್ಯವಂತೆ ನೀನು" ಎಂದು ವ್ಯಂಗ್ಯವಾಗಿ ನಕ್ಕಳುಆಕೆಯ ವ್ಯಂಗ್ಯಕ್ಕೆ ಉತ್ತರಿಸುವ ಸಾಹಸಕ್ಕೆ ಇಳಿದರೆ ಮತ್ತಷ್ಟು ಜನ್ಮ‌ ಜಾಲಾಡಿಬಿಡುತ್ತಾಳೆ ಅನ್ನುವುದು ಮೊದಲೇ ಅನುಭವಕ್ಕೆ ಬಂದಿದ್ದರಿಂದಾಗಿ ಏನೊಂದೂ ಮಾತಾಡದೆ ಸುಮ್ಮನಾದೆ.

ಸುಂದರಿ ಇರುವುದೇ ಹಾಗೆ. ಮಾತಾಡುವ ಮೂಡ್ ಇದ್ದಾಗ ಚಿನಕುರುಳಿಯಂತೆ ಹರಟುವ ಆಕೆ ಕೆಲವೊಮ್ಮೆ ಮೌನ ಹೊದ್ದು ಕುಳಿತು ಬಿಟ್ಟರೆ ತಾನು ಆರಾಧಿಸುವ ಶಿವನೇ ಬಂದು ಅವಳೆದುರು ಚಕ್ಕಳಮಕ್ಕಳ ಹಾಕಿ ಕೂತು ಮಾತಿಗೆಳೆದರೂ ಅವಳು ಜುಳು ಜುಳು ಹರಿವ ಮಾತಾಗಲಾರಳು. ಅವಳ ಮೌನದಲ್ಲಿ ಏನೇನಿದೆಯೋ ಅವಳಿಗಷ್ಟೇ ಗೊತ್ತು. ಕುಡಿದೂ ಕುಡಿದೂ ಸತ್ತೇ ಹೋದ ಗಂಡ, ಓದು ಬಾರದ ಇವಳಿಂದ ಹೆಬ್ಬೆಟ್ಟು ಹಾಕಿಸಿ ಪೂರ್ತಿ ಆಸ್ತಿ ದಕ್ಕಿಸಿಕೊಂಡ ಗಂಡನ‌ ಅಣ್ಣ, ಶಾಶ್ವತವಾಗಿ ಮುಚ್ಚಿದ ತವರಿನ ಬಾಗಿಲು ಅದೆಲ್ಲಕ್ಕಿಂತಲೂ ಹೆಚ್ಚಾಗಿ ಒಂದು ಪುಟ್ಟ ಮಗುವನ್ನು ಇವಳ ಮಡಿಲಿಗೆ ಹಾಕಿ ಓಡಿ ಹೋದ ಸೊಸೆ, ಆ ಕೊರಗಲ್ಲೇ ಆತ್ಮಹತ್ಯೆ ಮಾಡಿಕೊಂಡ ಮಗ... ಅದೆಷ್ಟು ಸಂಗತಿಗಳು ಆ ಮೌನದಲ್ಲಿ ಮಗ್ಗುಲು ಬದಲಾಯಿಸುತ್ತಿರುತ್ತದೋಹಾಗೆ ಮೌನಗೌರಿಯಾದಾಗೆಲ್ಲಾ ಮತ್ತಷ್ಟು ಕುಡಿಯುವ, ಕುಡಿದರೂ ಒಂದು ಹಿಡಿ ಹೆಚ್ಚು ಮಾತಾಡದ ಅವಳೊಂದು ಬಿಡಿಸಲಾಗದ ಒಗಟು

ಶಿವನನ್ನು ನಂಬುವಷ್ಟೇ ಗಾಢವಾಗಿ ಊರಿನ ಮಸೀದಿಯನ್ನೂ ನಂಬುವ ಆಕೆ ಅಲ್ಲಿನ ಗುರುಗಳು 'ಕುಡೀಬೇಡ' ಎಂದಾಗ ಮಾತ್ರ ಕೆಂಡಾಮಂಡಲವಾಗುತ್ತಾಳೆ. ಜಗದ ಎಲ್ಲ‌ ದೇವರುಗಳಿಗೂ, ದರ್ಗಾಗಳಿಗೂ, ಸತ್ತ ಗಂಡನಿಗೂ, ಅವನಿಗೆ ತನ್ನನ್ನು ಮದುವೆ ಮಾಡಿಕೊಟ್ಟ ಅಪ್ಪನಿಗೂ, ಹೆಂಡತಿಯನ್ನು ಬಾಳಿಸಲಾರದ ತನ್ನ‌ ಮಗನಿಗೂ, ಓಡಿ ಹೋದ ಸೊಸೆಗೂ, ಓಡಿಸಿಕೊಂಡ ಹೋದ 'ಘಟ್ಟದಾಯೆ' ಮರ್ಲ ಸಾಬಿಗೂ, ಅವಳು ಬಿಟ್ಟು ಹೋದ ಮಗುವಿಗೂ ವಾಚಾಮಗೋಚರ ಬಯ್ಯುತ್ತಾಳೆ. ಅವಳ ಒಡಲ ಕಿಚ್ಚು ತಣಿದ ಮೇಲೆ, ಅಥವಾ ತಾನಾಗಿಯೇ ತಣಿಸಿದ ಮೇಲೆ ಅವಳು ಶಾಂತಮೂರ್ತಿ, ಕರುಣಾಮಯಿ ಅಮ್ಮ; ಮಗುವಿಗೂ, ಜಗತ್ತಿಗೂ.

ಈಗೀಗ ತುಸು ಇಳಿದುಹೋಗಿರುವಂತೆ ಕಾಣುವ ಸುಂದರಿ, ಮಗಳನ್ನು ಮದುವೆ ಮಾಡಿಕೊಟ್ಟು ಒಂದೆರಡು ತಿಂಗಳುಗಳು‌ ಕಳೆದ ಬಳಿಕ‌ ಅವಳನ್ನು ನೋಡಲೆಂದು ಅವಳ ಮನೆಗೆ ಹೋಗಿದ್ದಳಂತೆ. ಅವಳದೇ ತದ್ರೂಪಿಯಂತಿರುವ ಮಗಳು ಮನೆಯ ಹೊರಗೆ ಕೊಟ್ಟಿಗೆಯಲ್ಲಿ ಕೂತಿರುವುದನ್ನು ನೋಡಿ ಕರುಳು ಚುರುಕ್ಕೆಂದು ಮತ್ತಷ್ಟು ವಿಚಾರಿಸಿದಾಗ ಆ ಮನೆಯಲ್ಲಿ ಮುಟ್ಟಾದ ಹೆಣ್ಣುಮಕ್ಕಳು ಮುಟ್ಟಿಸಿಕೊಳ್ಳುವಂತಿಲ್ಲ ಎನ್ನುವುದು ತಿಳಿದು ಬಂತು. ಮೊದಲು ಸಾವಧಾನದಿಂದ ಆಮೇಲೆ ಸ್ವಲ್ಪ ಏರಿದ ಧ್ವನಿಯಲ್ಲಿ ತಿಳಿ ಹೇಳಲು ಪ್ರಯತ್ನಿಸಿದಳಂತೆ. ಅವಳ ಎಲ್ಲ ಪ್ರಯತ್ನಗಳು ನಿಷ್ಫಲವಾದಾಗ ಮಾತ್ರ ಚಾಮುಂಡಿ ಅವತಾರ ತಾಳಿದ ಸುಂದರಿ, ಹೆಣ್ಣುಮಕ್ಕಳಿಗೆ ಗೌರವಿಲ್ಲವದ ಕಡೆ, ಪ್ರಕೃತಿ ಸಹಜ ಪ್ರಕ್ರಿಯೆಯ ಬಗ್ಗೆ ನಕಾರಾತ್ಮಕ ನಿಲುವುಗಳು ಇರುವ ಕಡೆ ನನ್ನ ಮಗಳು ಇರುವುದು ಸರಿಯಲ್ಲ ಎಂದು ಅವಳನ್ನು ಆ ಕ್ಷಣವೇ ಅಲ್ಲಿಂದ ಕರೆದುಕೊಂಡು ಬಂದಿದ್ದಳಂತೆ. ಅದಾಗಿ ಕೆಲದಿನಗಳ ನಂತರ ಎಲ್ಲ ಸರಿ ಹೋಗಿ ಮಗಳು ಮತ್ತೆ ಗಂಡನ‌ ಮನೆ ಸೇರಿದಳುಆದರೆ ಈಗಲೂ ಸುಂದರಿ, ಋತುಸ್ರಾವ, ಆ ದಿನಗಳ ಹೊಟ್ಟೆನೋವು, ಸಂಕಟಗಳ ಬಗ್ಗೆ ಮಾತಾಡುವಾಗೆಲ್ಲಾ ಮಗಳು ಕೊಟ್ಟಿಗೆಯಲ್ಲಿದ್ದುದು, ಅವಳಿಗೆ ಅಂತಲೇ ಪ್ರತ್ಯೇಕ ತಟ್ಟೆ, ಲೋಟ ಎತ್ತಿಟ್ಟದ್ದು ಎಲ್ಲ ನೆನಪಿಸಿ ಕಣ್ಣು ತುಂಬಿಕೊಳ್ಳುತ್ತಾಳೆ. ಆದರೆ ನನಗೆ ಆಕೆ ಹಾಗೆ ಮಾತಾಡುವಾಗೆಲ್ಲಾ, ಅನೀತಿಯನ್ನು ವಿರೋಧಿಸುವ ಗಟ್ಟಿ ನಿಲುವಿನ ಸುಂದರಿಯಂತಹವರ ಮುಂದೆ ಜಗತ್ತಿನ ತಥಾಕಥಿತ ಸ್ತ್ರೀವಾದವನ್ನು ನಿವಾಳಿಸಿ ಎಸೆಯಬೇಕು ಅನಿಸುತ್ತದೆ

ಈಗ್ಗೆ ಮೂರು ದಿನಗಳ ಹಿಂದೆ ಇಂಥದ್ದೇ ಬಿಸಿಲಿನಲ್ಲಿ ಕೂತು ಸುಂದರಿಯ ಬಗ್ಗೆ, ಅವಳ ಬದುಕಿನ ಬಗ್ಗೆ ಯೋಚಿಸುತ್ತಿರಬೇಕಾದರೆ ಕರೆ ಮಾಡಿದ್ದ ಅಮ್ಮ, ಸುಂದರಿ ಕಾಲು‌ ಮುರಿದುಕೊಂಡು ನಗರದ ಆಸ್ಪತ್ರೆ ಸೇರಿದ್ದಾಳೆ ಅಂದಿದ್ದರು. ನಿನ್ನೆ ಅವಳನ್ನು ನೋಡಿಕೊಂಡು ಬರಲೆಂದು ಹೋಗಿದ್ದೆ. ಪಕ್ಕದ ಕ್ಯಾಂಟೀನ್ ನಿಂದ ಮುಸಂಬಿ ಜ್ಯೂಸ್ ತರಿಸಿ ಗ್ಲಾಸಿಗೆ ಬಗ್ಗಿಸುತ್ತಿರಬೇಕಾದರೆ ಆಕೆ, ಕ್ಷೀಣವಾಗಿ " ಇದಕ್ಕಿಂತಲೂ ಪ್ಯಾಕೆಟ್ ಜ್ಯೂಸೇ ನನಗಿಷ್ಟ" ಎಂದಳು. ನಾನು ಹುಸಿಕೋಪದಿಂದ ಮತ್ತು ಹೆಚ್ಚೇ ಪ್ರೀತಿಯಿಂದ "ದೊಡ್ಡಾ" ಎಂದು ಕರೆದೆ. ಅವಳ ಕಡು ಕಪ್ಪುಕಣ್ಣುಗಳು ಸುಮ್ಮನೆ ಹೊಳೆದವು, ನಾನು ಗ್ಲಾಸ್ ಅವಳ ತುಟಿಗಿಟ್ಟೆ. ಒಂದೊಂದು ಗುಟುಕು ಕುಡಿಯುವಾಗಲೂ ಅವಳ ಅಂಗೈ ನನ್ನನ್ನು ಮತ್ತಷ್ಟು ಬಿಗಿಯಾಗಿ ಸುತ್ತಿಕೊಳ್ಳುತ್ತಿತ್ತು. ಕುಡಿದರೆ ಬೇಗ ಸಾಯುತ್ತಾರೆ ಎಂಬುವುದು ನಿಜವೇ ಆಗಿದ್ದರೆ ಕುಡಿದೇ ಸಾಯುತ್ತೇನೆ ಎಂದು ತೀರ್ಮಾನಿಸಿಕೊಂಡ ಅವಳು ಮತ್ತು ಕುಡಿತ ಹರಾಮಾಗಿರುವ ನಾನು... ಪ್ರಪಂಚ ನಮ್ಮಿಬ್ಬರ ಸಂಬಂಧಕ್ಕೆ ಏನು ಹೆಸರಿಡುತ್ತೋ ಗೊತ್ತಿಲ್ಲ, ನಾನು ಮಾತ್ರ ದಿನೇ ದಿನೇ ಅವಳ‌ ಮಡಿಲಲ್ಲಿ ಮತ್ತಷ್ಟು ಮಗುವಾಗುತ್ತಿದ್ದೇನೆ.

ಒಂದು ಮದುವೆಯ ಸಂಭ್ರಮ ಮತ್ತು ಮೂರು ಸಾವಿನ ಶೂನ್ಯ.


ಈಗಷ್ಟೇ ಕಟ್ಟಿದ ಮಲ್ಲಿಗೆ ಮಾಲೆಯೊಂದರಿಂದ ಹಗೂರ ಜಾರಿದ ಹೂವೊಂದು ಗಾಳಿ ಬೀಸಿದಲ್ಲೆಲ್ಲಾ ತನ್ನ ಘಮವೊಂದನ್ನು ಉಳಿಸಿಕೊಳ್ಳುವಂತೆ ಚಳಿಗಾಲ ಆವರಿಸಿಕೊಂಡಿದೆ. ಪಾಳಿಯ ವ್ಯತ್ಯಾಸವೇ ಗೊತ್ತಾಗದ ಹಾಗೆ ಸುರಿಯುವ ಮಂಜು, ಕಿರಿದಾದ ಹಗಲು, ದೀರ್ಘ ರಾತ್ರಿ, ಕೌದಿಯೊಳಗಿಂದ ಮೆಲ್ಲನೆ ಹೊಯ್ದಾಡುವ ಜೋಡಿ ಉಸಿರು, ಬೆಳಗಿನ ತಣ್ಣನೆಯ ಚಳಿ, ಹಗಲಿನ ಹಿತವಾದ ಬಿಸಿಲು, ಬಿರುಕು ಬಿಟ್ಟ ಪಾದಗಳು, ಒಡೆದ ತುಟಿ... ಗರಿಕೆಯ ಗರ್ಭವೂ ಕೊನರುವ ಕಾಲದಲ್ಲಿ ಏನು ಬರೆಯಬೇಕೆಂದು ತೋಚದೆ ಸುಮ್ಮನೆ ಆಕಾಶ ದಿಟ್ಟಿಸುತ್ತಿರುವ ನಾನು, ಅಸೀಮ ಸಾಧ್ಯತೆಗಳ ಒಂದು ಪುಟ್ಟ ಮೌನ ಮತ್ತು ಇಷ್ಟು ವರ್ಷಗಳಾದ ಮೇಲೂ ಬೆಂಬಿಡದೆ ಕಾಡುವ ಒಂದು ಮದುವೆಯ ಸಂಭ್ರಮ ಮತ್ತದರ ಬೆನ್ನ ಹಿಂದೆಯೇ ದಾಂಗುಢಿಯಿಡುವ ಸಾವಿನ ಖಾಲಿತನ... ಯಾವುದರ ಬಗ್ಗೆ ಬರೆಯಲಿ? ಮದುವೆಯ ವೈಭವವನ್ನೇ? ಅಥವಾ ಸಾವಿನ ಶೂನ್ಯತೆಯನ್ನೇ?

ಅದೊಂದು ಇಂಥದ್ದೇ ಚಳಿಗಾಲ. ದೂರದ ಮಡಿಕೇರಿಯಿಂದ ಓದಲೆಂದು ಕಡಲೂರಿಗೆ ಬಂದ ಗೆಳತಿ ತನ್ನಣ್ಣನ ಮದುವೆಗೆಂದು ಆಮಂತ್ರಿಸಿದ್ದಳು. ಬದುಕಿನ ಪ್ರತೀ ಥ್ರಿಲ್ಲನ್ನೂ ಅನುಭವಿಸಬೇಕು ಅನ್ನುವ ಉತ್ಸಾಹವಿದ್ದ ವಯಸ್ಸದು. ಹಿಂದು ಮುಂದು ಯೋಚಿಸದೆ ಅವಳ ಆಮಂತ್ರಣವನ್ನು ಕಣ್ಣು ಮುಚ್ಚಿ ಒಪ್ಪಿಕೊಂಡೆವು. ಆದರೆ ಸಮಸ್ಯೆ ಇದ್ದುದು ನಮ್ಮ ನಮ್ಮ ಮನೆಯವರನ್ನು ಒಪ್ಪಿಸುವುದರಲ್ಲಿ. ಮೊದಲೇ ಹೋದಲ್ಲೆಲ್ಲಾ ಏನಾದರೊಂದು ಕಿತಾಪತಿ ಮಾಡಿ ಹೆಸರು ಕೆಡಿಸಿಕೊಂಡಿದ್ದವರು ನಾವು. ಅಷ್ಟು ಸುಲಭವಾಗಿ ಮನೆಯಲ್ಲಿ ಒಪ್ಪಿಗೆ ಸಿಗುವುದಿಲ್ಲ ಅನ್ನುವುದು ಸ್ಪಷ್ಟವಾಗಿಯೇ ಗೊತ್ತಿತ್ತು. ಹಾಗಾಗಿ ಸ್ಟಡಿ ಟೂರ್ ನ ನೆಪದಲ್ಲಿ, ಅದೂ 'ಕ್ಲಾಸಿನ ಎಲ್ಲಾ ವಿದ್ಯಾರ್ಥಿಗಳು ಹೋಗ್ತಿದ್ದಾರೆ, ನನ್ನನ್ನು ಕಳುಹಿಸದೇ ಇದ್ರೆ ನಾನು ಕಲಿಕೆಯಲ್ಲಿ ಹಿಂದುಳಿಯುತ್ತೇನೆ. ನನಗೆ ಹೋಗಲೇಬೇಕಂತೇನಿಲ್ಲ, ನೀವು ಸಂತೋಷದಿಂದ ಕಳುಹಿಸಿಕೊಟ್ಟರೆ ಮಾತ್ರ ಹೋಗುತ್ತೇನೆ' ಅಂತ ಎಲ್ಲರ ಮನೆಯಲ್ಲೂ ಹೇಳುವುದೆಂದು ಮೊದಲೇ ನಿರ್ಧರಿಸಿಕೊಂಡು ಹಾಗೆಯೇ ಉರು ಹೊಡೆದು  ಒಂದು ರೀತಿಯಲ್ಲಿ ಇಮೋಷನಲ್ ಬ್ಲಾಕ್ ಮೇಲ್ ಮಾಡಿ ಮನೆಯವರನ್ನು ಒಪ್ಪಿಸಿ ಒಂದು ಸಂಜೆ ಮಡಿಕೇರಿಗೆ ಹೊರಟು ನಿಂತೆವು.

ಮಡಿಕೇರಿಯಲ್ಲಿ ಸೂರ್ಲಬ್ಬಿ ಅನ್ನುವ ಊರೊಂದಿದೆ ಅನ್ನುವುದು ತಿಳಿದದ್ದೇ ಬಸ್ ಹತ್ತಿ ಗೆಳತಿ ಅಲ್ಲಿಗೆ ಆರು ಟಿಕೆಟ್ ಮಾಡಿಸಿದಾಗಷ್ಟೇ. ಹಾಗೆ ಪ್ರಯಾಣ ಆರಂಭಿಸಿದಾಗಲೂ ಹೆಸರೊಂದನು ಹೊರತುಪಡಿಸಿ ಇನ್ಯಾವ ವಿಚಾರವೂ ಗೊತ್ತಿರಲಿಲ್ಲ. ಆದರೆ ಬಸ್ ಇಳಿದ ನಮ್ಮನ್ನು ಸ್ವತಃ ಮದುಮಗನೇ ಮನೆಗೆ ಕರೆದುಕೊಂಡು ಹೋಗುತ್ತಾನೆ ಅನ್ನುವುದು ನಮಗಾಗ ಒಂದು ದೊಡ್ಡ ಥ್ರಿಲ್.  ಅದಕ್ಕೆ ಸರಿಯಾಗಿ ಗೆಳತಿ  ಮನೆ, ಮನೆಯ ದೊಡ್ಡ ಅಂಗಳ, ಚಪ್ಪರ, ಅಡುಗೆ ಮನೆ, ಕೆಜಿಗಟ್ಟಲೆ ಅನ್ನ ಬೇಯಿಸಬಹುದಾದಂತಹ ಬಾಂಡ್ಲಿಗಳ ಬಗ್ಗೆ ತಿಂಗಳುಗಳ ಮೊದಲೇ ಗಂಟೆಗಟ್ಟಲೆ ಮಾತನಾಡಿದ್ದರಿಂದ, ಅಷ್ಟು ಕೆಲಸಗಳ ಮಧ್ಯೆಯೂ ಮದುಮಗನೇ ನಮ್ಮನ್ನು ಕರೆದೊಯ್ಯುತ್ತಾನೆ ಅನ್ನುವುದು ಥ್ರಿಲ್ ಹುಟ್ಟಿಸದೇ ಇದ್ದೀತೇ? ಮೇಲಾಗಿ ಅವನು ನೋಡಲೂ ಸಿನಿಮಾ ಹೀರೋ ತರಾನೇ ಇದ್ದ.

ಮೊದಲ ಬಾರಿ ಕೊಡಗನ್ನೂ ಮಡಿಕೇರಿಯನ್ನೂ ನೋಡುತ್ತಿದ್ದೆವಾದ್ದರಿಂದ ನಮ್ಮ ಉತ್ಸಾಹಕ್ಕೆ ಮೇರೆಯೇ ಇರಲಿಲ್ಲ. ಮನೆ ತಲುಪಿದ ಕೂಡಲೇ ಜೀಪಿನಿಂದ ಇಳಿಯುವಷ್ಟು ತಾಳ್ಮೆ ಇಲ್ಲದ ನಾವು ಒಬ್ಬೊಬ್ಬರಾಗಿ ಜಿಗಿಯತೊಡಗಿದೆವು. ಆದರೆ ನಮ್ಮ ಗುಂಪಿನಲ್ಲಿ  ನಾಲ್ಕಿಂಚು ಎತ್ತರದ ಚಪ್ಪಲಿ ಧರಿಸಿದ್ದ ಒಬ್ಬ ಗೆಳತಿ ಮಾತ್ರ ಜಿಗಿಯಲು ಪ್ರಯತ್ನಿಸುತ್ತಿದ್ದವಳು  ಮುಗ್ಗರಿಸಿ ಬಿದ್ದಳು. ಬಿದ್ದವಳು ಹಾಗೇ ಜಾರಿಕೊಂಡು ಹೋಗಿ, ಮದುವೆಯಂದು ಕೈ ತೊಳೆಯಲೆಂದು ಮಾಡಿದ್ದ ಸಣ್ಣ ಹೊಂಡಕ್ಕೆ ಬಿದ್ದಳು. ತಡೆಯಲಾಗದೆ ನಾವು ನಗುತ್ತಿದ್ದರೆ ಅವಳು ಅಳು ಮುಖ ಮಾಡಿ ಗುಂಡಿಯಿಂದ ಎದ್ದು ಬಂದು ಪೂರ್ತಿ ಕೆಸರಾಗಿದ್ದ ಬಟ್ಟೆ ತೊಳೆಯಲು ಅಲ್ಲೇ ಇದ್ದ ನಲ್ಲಿಯ ಹತ್ತಿರ ಹೋದಳು. ಎಷ್ಟು ತೊಳೆದರೂ ಹೋಗಲೊಲ್ಲದ ಕೆಸರಿಗೆ ಬಯ್ಯುತ್ತಲೇ ತಲೆ ಎತ್ತಿ ನೋಡಿದರೆ, ನಮ್ಮ ಮಂಗಾಟವನ್ನು ನೋಡುತ್ತಾ ಇಡೀ ಮದುವೆ ಮನೆಯ  ಹೆಂಗಸರು ಅಂಗಳದಲ್ಲಿ ನೆರೆದಿದ್ದರು. ಅವರೆಲ್ಲರ ತಲೆಯನ್ನೂ ಒಂದು ಕೆಂಪು ಬಟ್ಟೆ ಅಲಂಕರಿಸಿತ್ತು. ಅಷ್ಟು ಹೊತ್ತಾಗುವಾಗ ಅದೆಲ್ಲಿಂದಲೋ ಓಡಿ ಬಂದ ಅಜ್ಜಿಯೊಬ್ಬರನ್ನು ನಮ್ಮನ್ನು ಆತ್ಮೀಯವಾಗಿ ಮನೆಯೊಳಗೆ ಕರೆದು ಕೂರಿಸಿ ತಿಂಡಿ ಕೊಟ್ಟರು.

ನಿಜಕ್ಕೂ ಆಕೆ ಅನುಭವದ ಖಜಾನೆ. ಎಷ್ಟು ಮಾತಾಡಿದರೂ ಅವರ ಮಾತು ಮುಗಿಯುತ್ತಲೇ ಇರಲಿಲ್ಲ. ನಮ್ಮನ್ನೂ ಸೇರಿಸಿ ಮನೆಗೆ ಬರುವ ಎಲ್ಲಾ ಅತಿಥಿಗಳನ್ನು ವಿಚಾರಿಸಿಕೊಳ್ಳುತ್ತಾ, ಅವರಿವರಿಗೆ ಸೂಕ್ತ ನಿರ್ದೇಶಗಳನ್ನು ನೀಡುತ್ತಾ ಓಡಾಡುತ್ತಿದ್ದರು. ಕುಂದನ್ ಕುಸುರಿಯಿದ್ದ ತಲೆ ವಸ್ತ್ರ ಧರಿಸಿದ್ದ ಅವರನ್ನು ಐದು ನಿಮಿಷ ಕೂರಿಸಿ ಅದರ ಬಗ್ಗೆ ವಿಚಾರಿಸುವಷ್ಟರಲ್ಲಿ ಸಾಕುಬೇಕಾಯಿತು. ಹಾಗೆ ವಿಚಾರಿಸಿದಾಗಲೇ  'ಅವ್ವಯ್ಯ' "ಹಿಂದೆಲ್ಲಾ ಕೊಡವ ಮಹಿಳೆಯರು ಬಿಡುವಿನ ಸಮಯದಲ್ಲಿ 'ವಸ್ತ್ರ'ದ ಮೇಲೆ ಸುಂದರವಾಗಿ ಕಸೂತಿ ಬಿಡಿಸುತ್ತಿದ್ದರು, ಕುಂದನ್ ಹಾಕುತ್ತಿದ್ದರು. ಈಗ ಹಾಳು ಧಾರವಾಹಿಗಳು ನಮ್ಮ ಕೊಡವ ಮಹಿಳೆಯರನ್ನೂ ಸೋಮಾರಿಗಳನ್ನಾಗಿಸಿವೆ" ಎಂದು ಗೊಣಗಿದರು. ನಾವು ಅವ್ವಯ್ಯಳನ್ನು ಇಂಪ್ರೆಸ್ ಮಾಡಲೆಂದು "ಅಜ್ಜೀ, ನಮಗೂ ಈ ಕಸೂತಿ ಕಲಿಸಿಕೊಡುತ್ತೀರಾ?" ಎಂದು ವೈಯ್ಯಾರದಿಂದ ಕೇಳಿದೆವು‌‌. ತುಸು ಖಾರವಾಗಿ ಆಕೆ " ಏನು ಆಟ ಅಂದುಕೊಂಡಿದ್ದೀರಾ? ಜೀಪಿಂದ ನೆಟ್ಟಗೆ ಇಳಿಯುವಷ್ಟು ತಾಳ್ಮೆ ನಿಮಗಿಲ್ಲ, ಇನ್ನು ಕಸೂತಿ ಕಲಿಯೋಕೆ ಇರುತ್ತದಾ?" ಎಂದು ದಬಾಯಿಸಿದರು. ಕಿಟಕಿಯ ಪಕ್ಕದಲ್ಲಿ ಹೂವಿನ ಮಾಲೆ ಇಳಿಬಿಡುತ್ತಿದ್ದ ಹೆಂಗಸು ನಮ್ಮನ್ನು ನೋಡಿ ಮುಸಿ ಮುಸಿ ನಕ್ಕರು. ನಾವು ತಲೆ ಅಡಿಗೆ ಹಾಕಿಕೊಂಡು ನಮಗಾಗಿ ಸಿದ್ಧಪಡಿಸಿದ ರೂಮಿಗೆ ಹೋಗಿ ಬಾಗಿಲ ಬಳಿ ಯಾರೂ ಇಲ್ಲವೆಂಬುವುದನ್ನು ಕನ್ಫರ್ಮ್ ಮಾಡಿಕೊಂಡು ಎಷ್ಟು ಧಿಮಾಕು ಆ ಅಜ್ಜಿಗೆ ಎಂದು ಗೊಣಗಿಕೊಂಡೆವು.

ಹಾಗೆ ಗೊಣಗಿಕೊಂಡ ಐದೇ ನಿಮಿಷಕ್ಕೆ ಅದೇ ಅವ್ವಯ್ಯ ಒಂದು ತಂಬಿಗೆಯಲ್ಲಿ ಬಿಸಿ ಬಿಸಿ ಹಾಲು  ಮತ್ತು  ಐದು ಲೋಟ ಹಿಡಿದುಕೊಂಡು ನಾವಿದ್ದಲ್ಲಿಗೇ ಬಂದು ಹಾಲು ಕೊಟ್ಟು ಇನ್ನೇನಾದರೂ ಬೇಕಿದ್ದರೆ ನನ್ನನ್ನು ಕರೆಯಿರಿ ಎಂದು ಬಾಗಿಲು ಓರೆ ಮಾಡಿ ಹೋದರು. ಕೆಲವೇ‌ ನಿಮಿಷಗಳ ಹಿಂದೆ ನಮ್ಮನ್ನೂ, ನಮ್ಮ ತಾಳ್ಮೆಗೇಡಿತನವನ್ನೂ ಜಾಡಿಸಿದ್ದ  ಅವರು ಇಷ್ಟು ಪ್ರೀತಿಯಿಂದಲೂ ನಮ್ಮನ್ನು ನೋಡಿಕೊಳ್ಳಲು ಸಾಧ್ಯಾನಾ ಅನ್ನಿಸಿತು. ತಂಬಿಗೆಯಲ್ಲಿದ್ದ ಕೆನೆಗಟ್ಟಿದ ಹಾಲು ಸಾಧ್ಯ ಅಂದಿತು.

ಹಾಲಿನ ಲೋಟ ಕೆಳಗಿಡುವಷ್ಟರಲ್ಲಿ ಮತ್ತೆ ಊರು ಸುತ್ತುವ ನಮ್ಮ ಉತ್ಸಾಹ ಗರಿಗೆದರಿತ್ತು. ಚಪ್ಪರದ ಸುತ್ತ ಕುಳಿತಿದ್ದವರಲ್ಲೆಲ್ಲಾ ಗೋಗೆರೆದೂ ಆಯಿತು, ಅವರು ನಮ್ಮೊಂದಿಗೆ ಹೊರಡಲೂ ಸಿದ್ಧವಾದರು. ಆದರೆ ಮತ್ತೆ ನಮ್ಮ ತಿರುಗಾಟಕ್ಕೆ ತೊಡರುಗಾಲು ಹಾಕಿದ್ದು ಅವ್ವಯ್ಯನೇ. "ಇನ್ನೂ ಪ್ರಯಾಣದ ಸುಸ್ತೇ ಆರಿರುವುದಿಲ್ಲ. ಅದಲ್ಲದೆ ಈ ರಾತ್ರಿ ಊರು ತಿರುಗಬೇಕೆಂದಿಲ್ಲ. ಮಡಿಕೇರಿ ಎಲ್ಲೂ ಓಡಿಹೋಗುವುದಿಲ್ಲ. ಮದುವೆ ಮುಗಿಸಿದ  ಮೇಲೆ ಮಡಿಕೇರಿಯೇಕೆ, ಇಡೀ ಕೊಡಗನ್ನೇ ನೋಡಬಹುದು. ಈಗ ಸ್ವಲ್ಪ ಹೊತ್ತು ಮಲಗಿ ವಿಶ್ರಾಂತಿ ತೆಗೆದುಕೊಳ್ಳಿ" ಎಂದು ನಮ್ಮ ಉತ್ಸಾಹಕ್ಕೆ ತಣ್ಣೀರೆರಚಿದರು. ನಾವು ಇನ್ನು ವಾದಿಸಿ ಪ್ರಯೋಜನವಿಲ್ಲ ಎಂದು ಅರಿತುಕೊಂಡವರಂತೆ ಕೋಣೆಗೆ ಹೋಗಿ ಅಕ್ಷರಶಃ ಬಿದ್ದುಕೊಂಡೆವು.


ಮರುದಿನ ಮದುವೆಯ ಸಂಭ್ರಮ.‌‌ ರಾತ್ರಿ ಮಲಗುವಾಗ , ಮನೆಯೊಳಗೆ ಕೆಂಡದ ಅಗ್ಗಿಷ್ಟಿಕೆ ಹಾಕಿಕೊಂಡೆ ಮೈ ಬಿಸಿಯಾಗಿಸಿಕೊಳ್ಳಬೇಕಾದ, ತಣ್ಣೀರನ್ನು ಮುಟ್ಟುವಂತಿಲ್ಲದ, ಟ್ಯಾಪ್‌ಗಳಲ್ಲಿ ಬರೋ ನೀರು ಐಸ್‌ಗಿಂತಲೂ ಕೋಲ್ಡ್ ಇರುವ, ನಮ್ಮೂರಿನ ಜಿಟಿ ಜಿಟಿ ಮಳೆಯಂತೆ ಮಂಜು ಸುರಿಯುವ ಈ ಊರಿನಲ್ಲಿ ಬೆಳಗಾಗುವುದು ಯಾವಾಗಲೋ, ಮದುವೆ‌ ಕಾರ್ಯ ಶುರುವಾಗುವುದು ಯಾವಾಗಲೋ ಅಂತೆಲ್ಲಾ ಅಂದುಕೊಂಡಿದ್ದೆವು. ಆದರೆ ಹೊತ್ತು ಮೂಡುವ ಮುಂಚೆಯೇ ಎಲ್ಲರೂ ಶಿಸ್ತಾಗಿ ರೆಡಿಯಾಗಿದ್ದರು. ಶೌರ್ಯ, ಸಾಹಸಗೊಂದಿಗೆ ಶಿಸ್ತೂ ಕೊಡಗು ಮಣ್ಣಿನ ವಿಶಿಷ್ಟತೆಯೇನೋ ಅನ್ನಿಸುವಷ್ಟರಮಟ್ಟಿಗೆ ನೀಟಾಗಿ ತಯಾರಾಗಿದ್ದರು.

ಮದುವೆ ಮಂಟಪದಲ್ಲಿ ಮದುಮಕ್ಕಳನ್ನು ನೋಡುವುದೇ ಒಂದು ಹಬ್ಬ. ವರನು ಬಿಳಿ ಕುಪ್ಪಸ, ತಲೆಗೆ ‘ಪಾನಿಮಂಡೆತುಣಿ’, ಸೊಂಟಕ್ಕೆ ಕತ್ತಿ, ಕೊರಳಿಗೆ  ಸರ ಹಾಗೂ ಕೈಗೆ ಬಳೆ, ಕೈ ಬೆರಳಿಗೆ ಉಂಗುರ ಧರಿಸಿದ್ದರೆ, ವಧು ಸೀರೆಯ ಜೊತೆಗೆ ತಲೆಗೆ 'ಮುಸ್ಕೋಲಿ' ಧರಿಸಿ, ತೋಳಿನ ಹಿಂದಿನಿಂದ ತಂದು ಸೊಂಟಕ್ಕೆ ಸಿಕ್ಕಿಸಿದ್ದರು. ಕೊಡಗಿನ ವಿಶಿಷ್ಟ ಆಚರಣೆಗಳಿಗೆ ಮನಸೋಲುತ್ತಿರಬೇಕಾದರೆ ತರಾತುರಿಯಿಂದ ಬಂದ ವಧುವಿನ ಅತ್ತಿಗೆ ಮಧುಮಗಳ ಕೈಬೆರಳ ಉಗುರು ಕತ್ತರಿಸಿ ಹಾಲಿನಲ್ಲಿ ಹಾಕಿ ಒಂದು ಮರದ ಬುಡಕ್ಕೆ ಚೆಲ್ಲಿದರು. ವಧುವಿಗೆ ದೃಷ್ಟಿಯಾಗದಿರಲಿ ಎಂದು ಈ ಕ್ರಮವಂತೆ.

ಕೊಡವ ವಿವಾಹದ ಅಷ್ಟೂ ಸಂಪ್ರದಾಯಗಳಲ್ಲಿ ನನಗೆ ಆಪ್ತ ಎನಿಸಿದ್ದು ಅವರ ಭೋಜನಾ ಕ್ರಮ. ಮದುವೆಗೆ ಬಂದ ಬಂಧು ಬಳಗದವರು, ನೆಂಟರು ಹಾಗೂ ದೂರದ ಊರುಗಳಿಂದ ಬಂದವರು ಮೊದಲು ಕುಳಿತು ಊಟ ಮಾಡುವುದು ಕ್ರಮ. ಅನಂತರವಷ್ಟೇ ಆದೇ ಊರಿನವರು, ಮನೆಯವರು ಮತ್ತು ಇತರರು ಊಟ ಮಾಡಬೇಕು. ಅದೂ ಎಲೆಗೆ ಬಡಿಸಿದ ತಕ್ಷಣವೇ ಊಟ ಮಾಡುವಂತಿಲ್ಲ, ಯಾರಾದರೂ ಹಿರಿಯ ವ್ಯಕ್ತಿ ಉಣ್ಣೋಣವೇ ಎಂದು ಕೇಳಿ ಅದಕ್ಕೆ ಉಳಿದವರಿಂದ ಸಮ್ಮತಿ ಪಡೆದ ನಂತರವಷ್ಟೇ ಭೋಜನ ಶುರುವಾಗುತ್ತದೆ. ಮೊದಲು ತನಗಿರಲಿ ಅಂದುಕೊಳ್ಳುವವರೇ ಇರುವ ಈ ಕಾಲದಲ್ಲೂ ಇಂಥದ್ದೊಂದು ಸಂಪ್ರದಾಯವೂ ಇದೆ ಅನ್ನುವುದೇ ನಮಗೆ ಒಂದು ದೊಡ್ಡ ಅಚ್ಚರಿಯ ಸಂಗತಿ.

ಮದುವೆಯ ಸಂಭ್ರಮ, ದಿಬ್ಬಣ, ಸಂಪ್ರದಾಯ, ರೀತಿ ರಿವಾಜುಗಳು, ಕಟ್ಟಳೆಗಳು ಎಲ್ಲವನ್ನೂ ವಿವರಿಸುತ್ತಾ ಮೊಮ್ಮಗನ ಮದುವೆಯ ಪ್ರತಿ ಕ್ಷಣವನ್ನೂ ಇಡಿಇಡಿಯಾಗಿ ಅನುಭವಿಸಲು ನಮಗನುವು ಮಾಡಿಕೊಟ್ಟವರು ಅವ್ವಯ್ಯ. ನಮ್ಮೊಂದಿಗೇ ಹಾಡುತ್ತಾ, ನಾವು ಕುಣಿದಾಗ ನಮ್ಮೊಂದಿಗೆ ಹೆಜ್ಜೆ ಹಾಕುತ್ತಾ, ನಾವು ಕಿರುಚಿದಾಗ ಮತ್ತಷ್ಟು ಧ್ವನಿ ಸೇರಿಸುತ್ತಾ, ನಮಗಿಂತಲೂ ಜೋರಾಗಿ ವಿಷಲ್ ಹೊಡೆಯುತ್ತಾ ಇಡೀ ಮದುವೆಯಲ್ಲಿ ಉಲ್ಲಾಸದಿಂದ ಓಡಾಡುತ್ತಾ ಜೊತೆಗೆ ನಮ್ಮನ್ನೂ ಓಡಾಡಿಸುತ್ತಾ ಒಂದು ಕ್ಷಣವೂ ಅಪರಿಚಿತ ಭಾವ ನಮ್ಮನ್ನು ಕಾಡದಂತೆ ನೋಡಿಕೊಂಡರು. ಜನರೇಷನ್ ಗ್ಯಾಪ್, ಗೊತ್ತಿಲ್ಲದ ಸಂಪ್ರದಾಯಗಳು ಯಾವುದೂ ನಮ್ಮ ನಡುವೆ ಬರಲೇ ಇಲ್ಲ.

ಅತ್ತಿಗೆಯನ್ನು ಮನೆ ತುಂಬಿಸಿಕೊಂಡ ಮೇಲಂತೂ ಅಜ್ಜಿಯ ಸಂಭ್ರಮಕ್ಕೆ ಪಾರವೇ ಇರಲಿಲ್ಲ. ಇಡೀ ದಿನ ಕೆಲಸ ಮೈಗೆಳೆದುಕೊಂಡು ಓಡಾಡುವುದೇನು, ನಮ್ಮೆಲ್ಲರನ್ನು ಅವರಿಗೆ ಪರಿಚಯಿಸುವುದೇನು, ಆಗಾಗ ಕೆಲಸದವರನ್ನು ಕರೆದು ಆಗಬೇಕಾಗಿರುವ ಕೆಲಸ ಪಟ್ಟಿ ಕೊಡುವುದೇನು, ಒಮ್ಮೆ ಚಪ್ಪರಕ್ಕೆ ಮತ್ತೊಮ್ಮೆ ಅಡುಗೆ ಮನೆಗೆ ಮತ್ತೊಮ್ಮೆ ಮಹಡಿ ಮೇಲಿರುವ ಅತಿಥಿಗಳನ್ನು ಸುಧಾರಿಸೋಕೆ ಅಂತ ಓಡಾಡುತ್ತಿದ್ದರೆ ಆಗಷ್ಟೇ ಇಪ್ಪತ್ತೊಂದನೇ ವರ್ಷದ ಬರ್ತ್ ಡೇ ಕ್ಯಾಂಡಲ್ ಊದಿದ್ದ ನಮ್ಮ ಎದೆಯೊಳಗೆ ಸಣ್ಣಗೆ ಅವಲಕ್ಕಿ ಕುಟ್ಟಿದ್ದಂತಾಗುತ್ತಿತ್ತು.‌ ನವ ವಧು-ವರರನ್ನು ದೇವಸ್ಥಾನಗಳಿಗೆ, ಪ್ರೇಕ್ಷಣೀಯ ಸ್ಥಳಗಳಿಗೆ ಕರೆದೊಯ್ಯುವುದರಲ್ಲೂ ಅಜ್ಜಿಯದೇ ಮುಂದಾಳುತನ. ಅಜ್ಜಿಯ ಬಾಲದಂತೆ ನಾವೂ ಅವರ ಜೊತೆ ಊರು ಸುತ್ತಲು ಹೊರಡುತ್ತಿದ್ದೆವು. ಮಂದಾಲಪಟ್ಟಿಗೆ ಹೋದಾಗಲಂತೂ ಮಧುಮಗಳನ್ನು ಸೇರಿಸಿ ನಾವೆಲ್ಲರೂ ಬೆಟ್ಟ ಹತ್ತಲಾಗದೆ ಏದುಸಿರು ಬಿಡುತ್ತಾ ಅರ್ಧದಲ್ಲೇ ನಿಂತಿರಬೇಕಾದರೆ ಅವರು ನಮಗಿಂತ ಇಪ್ಪತ್ತೈದು ಹೆಜ್ಜೆ ಮುಂದಿದ್ದರು.

ಇಷ್ಟು ಜೀವನೋತ್ಸಾಹ, ಬದುಕಿನ ಪ್ರತಿ ಕ್ಷಣಗಳನ್ನೂ ಅನುಭವಿಸಬೇಕೆಂಬ ತುಡಿತ, ತನಗಿಂತ ಚಿಕ್ಕವರಲ್ಲೂ ಸಲೀಸಾಗಿ ಬೆರೆಯುತ್ತಿದ್ದ ಮನೋಭಾವ, ಬದುಕಿನೆಡೆಗಿನ ಇಷ್ಟೊಂದು ಅಗಾಧ ಬದ್ಧತೆ ಬೆಳೆಸಿಕೊಳ್ಳಲು ಅವರಿಗೆ ಹೇಗೆ ಸಾಧ್ಯವಾಯಿತು ಅಂತ ಒಮ್ಮೊಮ್ಮೆ ಯೋಚನೆಗಿಟ್ಟುಕೊಳ್ಳುತ್ತಿತ್ತು. ಅವೆಲ್ಲಾ ಬೆಳೆಸಿಕೊಂಡಿರುವುದಲ್ಲ, ಅವರ ಬದುಕಿನ ಸಹಜ ರೀತಿಯದು ಅಂತ ಈಗ ಅರ್ಥವಾಗುತ್ತಿದೆ.

ಮೂರೇ ದಿನಗಳಿಗೆಂದು ಮನೆಯಲ್ಲಿ ಕಾಡಿ ಬೇಡಿ ಒಪ್ಪಿಸಿದ್ದ ನಾವು ಒಂದು ವಾರ ಅಲ್ಲಿ ಹೇಗೆ ಕಳೆದವೋ ಗೊತ್ತಿಲ್ಲ. ವಾರ ಕಳೆಯುವಷ್ಟರಲ್ಲಿ ಅಲ್ಲಿಯವರೆಲ್ಲರೂ ನಮ್ಮವರೇ ಆಗಿಬಿಟ್ಟದ್ದರು. ಆದರೆ ಮತ್ತೆ ನಮ್ಮ ನಮ್ಮ ಮನೆಗಳಿಗೆ ಹಿಂದಿರುಗಲೇಬೇಕಿತ್ತು. ಒಲ್ಲದ ಮನಸ್ಸಿನಿಂದಲೇ  ರಾತ್ರಿ ಮಲಗುವ ಮುನ್ನ ಬ್ಯಾಗ್ ಪ್ಯಾಕ್ ಮಾಡಿ, ಮುಂಜಾನೆ ಹೊರಟು ನಿಂತಾಗ ಎಲ್ಲರ ಕಣ್ಣೂ ಒದ್ದೆ ಒದ್ದೆ. ನಮ್ಮನ್ನು ಬೀಳ್ಕೊಡಲೆಂದು ಗೆಳತಿಯ ಅಣ್ಣ ಜೀಪ್ ಹತ್ತುತ್ತಿದ್ದಂತೆ ಓಡಿ ಬಂದ ಅಜ್ಜಿಯೂ ಜೀಪ್ ಹತ್ತಿದರು. ಬಸ್ ಸ್ಟಾಂಡ್ ತಲುಪುವಷ್ಟರಲ್ಲಿ ನಾವು ಹೋಗಬೇಕಿದ್ದ ಬಸ್ಸೂ ಬಂದು ನಿಂತಿತ್ತು. ಜೀಪಿನಿಂದ ಇಳಿದ ನಾವು ಬಸ್ ಹತ್ತಿ ಮತ್ತೊಮ್ಮೆ ಅಜ್ಜಿಗೆ ಕೈ ಬೀಸಿದಾಗ ಅವರ ಕಣ್ಣಲ್ಲೂ ತೆಳು ನೀರು. ಮೋಜಿನಿಂದ ಆರಂಭವಾದ ನಮ್ಮ ಮಡಿಕೇರಿಯ ಪಯಣ ತುಂಬು ಭಾವುಕವಾಗಿ ಕೊನೆಗೊಂಡಿತ್ತು. ಅಲ್ಲಿ ಅನುಭವಿಸಿದ ಪ್ರತಿಯೊಂದು ಘಟನೆಗಳೂ ಬದುಕಿರುವವರೆಗೂ ನಮ್ಮೊಂದಿಗೆ ಬೆಚ್ಚಗಿರುತ್ತವೆ.

ಊರು ತಲುಪಿದ ಮೇಲೂ ಅಜ್ಜಿಯೊಂದಿಗಿನ ನಮ್ಮ ಸಂಬಂಧ ಗಾಢವಾಗಿಯೇ ಇತ್ತು. ಆಗಾಗ ಫೋನ್ ನಲ್ಲಿ ಮಾತನಾಡುತ್ತಾ, ಅವರನ್ನು ನಮ್ಮೂರಿಗೆ ಕರೆಯುತ್ತಾ, ಅವರು ಬಂದೇ ಬರುತ್ತೇನೆ ಪ್ರಾಮಿಸ್ ಮಾಡುತ್ತಾ, ನಮ್ಮನ್ನು ಮತ್ತೆ ಮಡಿಕೇರಿಗೆ ಕರೆಯುತ್ತಾ, ತಮಾಷೆ, ಚೋದ್ಯ, ತೆಳು ಹಾಸ್ಯದೊಂದಿಗೆ ಒಂದು ಚಂದದ ಸಂವಹನ ನಡೆಯುತ್ತಿತ್ತು. ಅಜ್ಜಿಯೊಂದಿಗೆ ಅತ್ತಿಗೆಯೂ ನಮಗೆ ತುಂಬಾ ಆತ್ಮೀಯರಾಗಿದ್ದರು.ಈ ಮಧ್ಯೆ ಅಣ್ಣ ಮತ್ತೆ ಬೆಂಗಳೂರಿಗೆ ಹೊರಡುವ ಸಮಯ ಬಂತು. ಅತ್ತಿಗೆಗೆ ಬೆಂಗಳೂರು ಹೊಸದು, ಮೇಲಾಗಿ ಮನೆಯಲ್ಲಿ ಒಬ್ಬಳೇ ಇದ್ದು ಅಭ್ಯಾಸವೇ ಇಲ್ಲ. ಅಜ್ಜಿ ಎಷ್ಟು ಬೇಡಿಕೊಂಡರೂ ಬಿಡದೆ ಅವರಿಬ್ಬರೂ ಒತ್ತಾಯದಿಂದ ಅವರನ್ನು ಬೆಂಗಳೂರಿಗೆ ಕರೆದೊಯ್ದರು. ಸಾಮಾನ್ಯವಾಗಿ ಮೊದಲ ಸಲ ಬೆಂಗಳೂರು ಹೋದವರೆಲ್ಲಾ ಅಲ್ಲಿನ ಹವೆಗೋ, ಹಗಲು ರಾತ್ರಿ ವ್ಯತ್ಯಾಸವಿಲ್ಲದ ಬದುಕಿಗೋ ಹೊಂದಿಕೊಳ್ಳಲಾಗದೇ ರಾಜಧಾನಿಯನ್ನ ಹಳಿಯುತ್ತಾರಾದರೆ ನಮ್ಮ ಅಜ್ಜಿ ಮಾತ್ರ ಆರಾಮವಾಗಿ ಹೊಂದಿಕೊಂಡಿದ್ದರು. ಹಾಗೆ ಹೇಳುವುದಾದರೆ ಅಜ್ಜಿಗಿಂತ ಹೆಚ್ಚು ಕಷ್ಟವಾದದ್ದು ಅತ್ತಿಗೆಗೇ.

ಅಜ್ಜಿ ಪೂರ್ತಿಯಾಗಿ ಬೆಂಗಳೂರಲ್ಲೇ ಜಾಂಡಾ ಹೂಡುತ್ತಾರೇನೋ ಅಂತೆಲ್ಲಾ ನಾವು ತಮಾಷೆ ಮಾಡುತ್ತಿದ್ದೆವು. ಹಾಗಿರುವಾಗಲೇ‌ ಒಂದು ಬೆಳ್ಳಂಬೆಳಗ್ಗೆ ಗೆಳತಿ ಕರೆ ಮಾಡಿದ್ದಳು. ಅನ್ಯಮನಸ್ಕತೆಯಲ್ಲೇ ಫೋನ್ ರಿಸೀವ್ ಮಾಡಿದ್ರೆ ಆ ಕಡೆಯಿಂದ ಅವಳ ಬಿಕ್ಕುವಿಕೆ ಮಾತ್ರ ಕೇಳಿಸುತ್ತಿತ್ತು. ನನಗೋ ಗಾಬರಿ. ಸ್ವಲ್ಪ ಸುಧಾರಿಸಿಕೊಂಡು ಏನಾಯ್ತು ಅಂತ ಕೇಳಿದಾಗ ಆಕೆ ಮತ್ತೆ ಜೋರಾಗಿ ಅಳುತ್ತಾ " ಅಜ್ಜಿ, ಅಣ್ಣ, ಅತ್ತಿಗೆ ತೀರಿಕೊಂಡರು. ನಿನ್ನೆ ರಾತ್ರಿ ಮೂವರೂ ಕಾರಲ್ಲಿ ಹೋಗುತ್ತಿರಬೇಕಾದರೆ ವೇಗವಾಗಿ ಬಂದ ಲಾರಿ ಕಾರಿನ ಮೇಲೆ ಹರಿದು ಮೂವರೂ ಸ್ಥಳದಲ್ಲಿ ಮೃತಪಟ್ಟಿದ್ದಾರೆ. ನೀನು ಉಳಿದ ಗೆಳತಿಯರಿಗೆಲ್ಲಾ ತಿಳಿಸಿಬಿಡು" ಎಂದಳು. ಹಾಗೆ ಹೇಳಿ ಸುಮಾರು ಹೊತ್ತಾದ ಬಳಿಕವೂ ಆಕೆ ಬಿಕ್ಕಳಿಸುತ್ತಿದ್ದುದು ಕೇಳಿಸುತ್ತಿತ್ತು.

ಅವಳಿಗೆ ಸಮಾಧಾನದ ಜರೂರಿತ್ತೋ ಏನೋ ಆದರೆ ನಾನು ಆಕೆಗೆ ಸಮಾಧಾನ ಮಾಡುವುದು ಬಿಡಿ ನನಗೇ ಯಾವುದಾದರೊಂದು ಆಸರೆ ಸಿಗುತ್ತದಾ ಎಂಬ ಹುಡುಕಾಟದಲ್ಲಿದ್ದೆ. ಫೋನ್ ಹಿಡಿದ ಕೈ ಅನೈಚ್ಛಿಕವಾಗಿ ನಡುಗುತ್ತಿತ್ತು, ಕಾಲು ಬವಳಿ ಬಂದು ಬಿಡುತ್ತೇನೇನೋ ಅನ್ನಿಸುತ್ತಿತ್ತು, ಮಾತನಾಡಬೇಕಂದರೆ ಗಂಟಲಿನ ಶಬ್ಧವೇ ಹುಟ್ಟುತ್ತಿರಲಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಇಂಥದ್ದೊಂದು ಸನ್ನಿವೇಶವನ್ನು ಉಳಿದವರಿಗೆಲ್ಲಾ ತಿಳಿಸುವುದಾದರೂ ಹೇಗೆ ಅನ್ನುವುದೇ ಅರ್ಥವಾಗುತ್ತಿರಲಿಲ್ಲ.

ಪ್ರತೀ ಸಾವೂ ಒಂದು ವಿವರಿಸಲಾಗದ ಶೂನ್ಯವನ್ನೂ, ತಲ್ಲಣವನ್ನೂ ಸೃಷ್ಟಿಸುತ್ತದೆ. ಹಾಗೆ ನೋಡುವುದಾದರೆ ಯಾರ ಸಾವೂ, ಯಾವ ಸಾವೂ ನೆಮ್ಮದಿಯನ್ನು, ಸಂಭ್ರಮವನ್ನು ತರುವುದಿಲ್ಲ. ವರ್ಷಗಳ ಕಾಲ ಹಾಸಿಗೆ ಹಿಡಿದವನು, ಕೋಮಾದಲ್ಲಿದ್ದವನು ಮರಣ ಹೊಂದಿದರೂ ಒಂದು ಬಗೆಯ ಶೂನ್ಯತೆ ಕಾಡದೇ ಇರದು. ಅವನು ಮಲಗಿದ್ದಲ್ಲೇ ಅನೂಹ್ಯವಾದ ಯಾವುದೋ ಸಂಬಂಧವೊಂದು ಬೆಳೆದು ಬಿಟ್ಟಿರುತ್ತದೆ, ಅದನ್ನು ಸುಲಭವಾಗಿ ಕತ್ತರಿಸಲಾಗುವುದಿಲ್ಲ. ಬದುಕೆಂಬ ಅಗಾಧ ಸಂತೆಯೊಳಗೆ ಸಾವೆಂಬುವುದು ಸಂತನಂತೆ, ಅದಕ್ಕೆ ಅಬ್ಬರವಿಲ್ಲ, ವೈಭವವಿಲ್ಲ, ಕೂಗಿ ಕರೆದು ವ್ಯಾಪಾರ ಕುದುರಿಸಬೇಕೆಂದಿಲ್ಲ. ಮೂಲೆಯಲ್ಲಿ ಮೌನವಾಗಿಯೇ ಕೂತು ಎಲ್ಲವನ್ನೂ ನೋಡುತ್ತಾ , ಮನನ ಮಾಡಿಕೊಳ್ಳುತ್ತಾ ಒಂದು ನಿಶ್ಚಿತ ಸಮಯದಲ್ಲಿ ಮೌನವಾಗಿಯೇ ಎದ್ದು ಬಂದು ಕೈ ಹಿಡಿದು ಕರೆದುಕೊಂಡು ಹೋಗುತ್ತದೆ. ಆದರೆ ಅದು ಬದುಕಿರುವವರ ಎದೆಯಲ್ಲಿ ಉಳಿಸಿಬಿಡುವ ಒಂದು ಖಾಲಿತನವಿದೆಯಲ್ಲಾ, ಅದನ್ನು ಒಮ್ಮೆ ಅನುಭವಿಸಿದರೆ ಸ್ವತಃ ಸಾವೂ ಕೂಡ ಬೆಚ್ಚಿ ಬಿದ್ದೀತು.

ಅದರಲ್ಲೂ ಆ ಅಜ್ಜಿಯಂತಹ ತುಂಬು ಜೀವನೋತ್ಸಾಹದ ಜೀವಗಳನ್ನು ಕಳೆದುಕೊಂಡರಾಗುವ ನೋವನ್ನು ಯಾವ ಪದಗಳೂ ಸಶಕ್ತವಾಗಿ ವ್ಯಕ್ತಪಡಿಸಲಾರವು. ಕೆಲವೇ ವಾರಗಳ ಹಿಂದೆ ಅಕ್ಷತೆ ಕಾಳು ಹಾಕಿಸಿಕೊಂಡಿದ್ದ ಮದುಮಗಳು, ಅವಳನ್ನು ಹೊಟ್ಟೆಯಲ್ಲಿ ಹುಟ್ಟಿದ ಮಗಳೇನೋ ಎಂಬಂತೆ ನೋಡಿಕೊಂಡ ಅಜ್ಜಿ, ಬದುಕಿನ ಪೂರ್ತಿ ಜೊತೆಗಿರುತ್ತೇನೆ ಎಂದು ಭಾಷೆ ಕೊಟ್ಟ ಗಂಡ ಕ್ಷಣಗಳೊಳಗಾಗಿ ಪ್ರಪಂಚ ತೊರೆದು ಹೊರಟು ಬಿಡುತ್ತಾರೆಂದರೆ ಒಪ್ಪುವುದು ಕಷ್ಟ. ಹಾಗೆ ಕಷ್ಟವಾಗಿರುವುದಕ್ಕೇ ಇಷ್ಟು ವರ್ಷಗಳಾದ ಮೇಲೂ ಆ ಮೂರು ಜೀವಗಳ ಸಾವು ನಿರಂತರ ಕಾಡುತ್ತಿರುವುದು. ಈಗಲೂ ನಾವು ಗೆಳತಿಯರು ಒಟ್ಟಾದರೆ  ನಮ್ಮ ಮಾತಲ್ಲಿ ಅಜ್ಜಿ ಬಂದೇ ಬರುತ್ತಾರೆ, ಕಣ್ಣು ತುಂಬಿಕೊಳ್ಳಬಾರದು ಅಂದುಕೊಳ್ಳುತ್ತಿರುವಾಗಲೇ ಕಣ್ಣೀರು ಕೆನ್ನೆಯನ್ನು ತೋಯಿಸಿಬಿಡುತ್ತದೆ. ತುಂಬು ಜೀವಕ್ಕೆ ಅಶ್ರುತರ್ಪಣ ಸಲ್ಲಿಸುವಾಗೆಲ್ಲಾ ಅಜ್ಜಿ ಅಲ್ಲೆಲ್ಲೋ ನಿಂತು ನೋಡುತ್ತಿರುತ್ತಾರೆ, ಓಡಿ ಬಂದು ಹೆಗಲು ತಟ್ಟಿ ಕಣ್ಣೀರೊರೆಸಿ "ಅಳ್ಬೇಡ ಪಾಪಚ್ಚಿ, ಬದುಕು ದೊಡ್ಡದಿದೆ" ಅನ್ನುತ್ತಾರೇನೋ ಅನಿಸುತ್ತದೆ. ತೀರಿಕೊಂಡವರೆಲ್ಲಾ  ನಕ್ಷತ್ರವಾಗುತ್ತಾರೆ ಅನ್ನುವುದೇ ನಿಜವಾಗಿದ್ದರೆ ಆಕೆ ಸ್ವಂತಿಕೆಯ ನಕ್ಷತ್ರ, ತನ್ನ ತಾನೇ ಸುಟ್ಟಕೊಂಡು ಆಕಾಶ ಲೋಕವ ಪೂರ್ತಿ ಬೆಳಗುವ ದೀಪದಂತಹ ನಕ್ಷತ್ರ.

ಗುರುವಾರ, ಮೇ 30, 2019

ಕಡಲ ಭೋರ್ಗರೆತ ಮತ್ತು ಗೆಳತಿಯ ಪ್ರೇಮ ನೈರಾಶ್ಯ.

ರಾತ್ರಿಯ ಮೂರನೇ ಜಾವದಲ್ಲಿ ದೂರದ ಕಡಲಿನ  ಭೋರ್ಗರೆತ ಕೇಳಿತೆಂದರೆ ಸಾಕು ಸುಮ್ಮನೆ ಎದ್ದು ಕೂತುಬಿಡುತ್ತೇನೆ ನಾನು. ಸದ್ದಾಗದಂತೆ  ಬಾಲ್ಕನಿಯಿಂದ ಕೆಳಗೆ ಜಿಗಿದು ಯಾರಿಗೂ ಹೇಳದೇ ಕಡಲಿನೆಡೆಗೆ ಹೋಗಿ ತೀರದ ಪೂರ್ತಿ ಸುಸ್ತಾಗುವಷ್ಟು ನಡೆಯಬೇಕು, ಇನ್ನು ಒಂದು ಹೆಜ್ಜೆಯೂ ಮುಂದಿಡಲಾರೆ ಅನ್ನುವಷ್ಟು ನಡೆಯುತ್ತಲೇ ಇರಬೇಕು, ಕೊನೆಗೆ ಸುಸ್ತಾಗಿ ಮರಳ ಮೇಲೆ ಬಿದ್ದು ನಿದ್ದೆ ಹೋಗಬೇಕು, ಆ ರಾತ್ರಿಯ ಶೀತಲ ಗಾಳಿ ಕೆನ್ನೆ ಸವರಿದಂತೆಲ್ಲಾ ಯಾವುದೋ ಕನವರಿಕೆಯಲ್ಲಿದ್ದಂತೆ ಮಗ್ಗುಲು ಬದಲಾಯಿಸಬೇಕು, ನಡು ನಡುವೆ ಎಚ್ಚರಾದಾಗೆಲ್ಲಾ ಯಾರಿಗೂ ಕೇಳಿಸದ ಕಡಲಿನ ಸಂಗೀತಕ್ಕೆ ಕಿವಿಗೊಡಬೇಕು, ಅನಾದಿಕಾಲದಿಂದಲೂ ಇಲ್ಲೇ ವಾಸ್ತವ್ಯವಾಗಿದ್ದೇವೆ ಎಂಬಂತೆ ಪೋಸ್ ಕೊಡುವ ಮರಿ ಏಡಿಗಳನ್ನು ಕಾಲ ಮೇಲೆ ಹತ್ತಿಸಿಕೊಂಡು ಕಚ್ಚಿಸಿಕೊಳ್ಳುವ ವಿಚಿತ್ರ ಸುಖ ಅನುಭವಿಸಬೇಕು, ಜೇಬಿನ ಪೂರ್ತಿ ಮರಳು ತುಂಬಿಕೊಂಡು ದೂರ ಹೋಗಿ ಮನೆಕಟ್ಟಬೇಕು, ಇಲ್ಲದ ಕಡಲಿನ ದೆವ್ವವನ್ನು ಕಲ್ಪಿಸಿಕೊಂಡು ಸುಳ್ಳೇ ಸುಳ್ಳು ಹೆದರಬೇಕು ಅಂತೆಲ್ಲಾ ಅಂದುಕೊಳ್ಳುತ್ತೇನೆ.

ಹೀಗೆ ಅನ್ನಿಸಿದಾಗೆಲ್ಲಾ ಒಂದೋ ಪಕ್ಕದಲ್ಲಿ ಪವಡಿಸಿರುವ ಗಂಡನನ್ನು ಎಬ್ಬಿಸಿ 'ಗಂಟೆ ಎಷ್ಟಾಯ್ತು' ಅಂತ ಕೇಳಿ ಮತ್ತೆ ಮಲಗಲು ಪ್ರಯತ್ನಿಸುತ್ತೇನೆ ಇಲ್ಲ ಕಾಣದ ಕಡಲಿಗೆ ಬಯ್ಯುತ್ತಾ ಮತ್ತೆ ಕೌದಿ ಎಳೆದುಕೊಳ್ಳುತ್ತೇನೆ. ಆಷಾಢದ ಆ ರಾತ್ರಿಯೂ  ಗಂಡನನ್ನು ಎಬ್ಬಿಸಲಾ ಅಥವಾ ಸುಮ್ಮನೆ ಮಲಗಿಕೊಳ್ಳಲಾ ಎಂಬ ಗೊಂದಲದಲ್ಲಿರುವಾಗಲೇ ಮೊಬೈಲ್ ಬೀಪ್ ಎಂದಿತ್ತು. ತೆರೆದು ನೋಡಿದರೆ ಜೀವದ ಗೆಳತಿಯ ಮೆಸೇಜ್. "ನನಗೆ ಮತ್ತೆ ಲವ್ ಆಗಿದೆ ಕಣೇ, ಈ ಬಾರಿ ಮಾತ್ರ ಸೀರಿಯಸ್ ಲವ್" ಅಂತಿತ್ತು.

ಕಳೆದ ಬಾರಿ ಲವ್ ಬ್ರೇಕ್ ಆದಾಗ ಇದೇ ಗೆಳತಿ ಇನ್ಮುಂದೆ ಜಾತಕ ನೋಡದೇ ಲವ್ ಮಾಡೋದೇ ಇಲ್ಲ, ಜಾತಕ ಕೂಡಿ ಬಂದರಷ್ಟೇ ಪ್ರೀತಿ, ಮದುವೆ ಇತ್ಯಾದಿ ಅಂದದ್ದು ನೆನಪಾಗಿ, ಎಷ್ಟನೇ ಬಾರಿ ನಿನಗೆ ಸೀರಿಯಸ್ ಲವ್ ಆಗ್ತಿರೋದು? ಅಂತ ಮೆಸೇಜ್ ಕುಟ್ಟಬೇಕು ಅಂದುಕೊಂಡೆ. ಆದರೆ ದೂರದ ಕಡಲಿನ ಮೊರೆತ, ಕಿವಿಯ ಪಕ್ಕದಲ್ಲೇ ಗುಂಯ್ ಗುಡುವ ಸೊಳ್ಳೆ, ಅಪರಾತ್ರಿಯ ಅವಳ ಲವ್ ಎಲ್ಲಾ ಸೇರಿ ಒಂದು ರೀತಿಯ ರೇಜಿಗೆ ಹುಟ್ಟಿಸಿ ಅವಳನ್ನು ನಾಳೆ ವಿಚಾರಿಸಿಕೊಂಡರಾಯಿತು ಎಂದು ಸುಮ್ಮನೆ ಮಲಗಿದೆ.

ಮೊದಲೇ ಹೇಳಿದಂತೆ ಅವಳಿಗೆ ಪ್ರೀತಿಯಾಗೋದು, ಬ್ರೇಕ್ ಅಪ್ ಆಗೋದು, ಎರಡು ದಿನ ಅಳೋದು, ಮೂರನೇ ದಿನ ಇನ್ಯಾರನ್ನೂ ಕಣ್ಣೆತ್ತಿಯೂ ನೋಡುವುದಿಲ್ಲ, ಯಾರ ಕನಸಲ್ಲೂ ಇನ್ಮುಂದೆ ಹೋಗುವುದೇ ಇಲ್ಲ ಅಂತೆಲ್ಲಾ ಪ್ರತಿಜ್ಞೆ ಮಾಡುವುದು, ಮತ್ತೆ ಪ್ರೀತಿಯಾಗುವುದೆಲ್ಲಾ ಹೊಸತಲ್ಲ. ಉಕ್ಕಿ ಹರಿಯುವ ಜೀವನ ಪ್ರೀತಿ, ಅವಳ ತುಂಟತನ, ಆಪ್ತತೆ ಉಕ್ಕಿಸುವ ಮಾತು, ಮುಗ್ಧ ಮುಖಭಾವ, ಬದುಕನ್ನು ಉತ್ಕಟತೆಯಿಂದ ಬದುಕಬೇಕು ಎನ್ನುವ ಮನೋಭಾವ  ಎಂಥವರ ಎದೆಯಲ್ಲೂ ಪ್ರೀತಿ ಹುಟ್ಟಿಸಬಲ್ಲದು. ತಿಳಿ ಬಣ್ಣವನ್ನು ಇಷ್ಟಪಟ್ಟು ಧರಿಸುವ ಅವಳ ಬದುಕಿನ ಆಯ್ಕೆಯೂ ತಿಳಿಗೊಳದಷ್ಟೇ ಪ್ರಶಾಂತವಾಗಿರುತ್ತದೆ ಎಂದು ನಾನು ಬಲವಾಗಿ ನಂಬುತ್ತೇನೆ. ಹೊಟ್ಟೆ ಕಿಚ್ಚಾಗುವಷ್ಟು ಚಂದದ ಪ್ರೇಮ ಕವಿತೆ ಬರೆಯುವ, ಸದಾ ನಗುವ, ನಗಿಸುವ, ಚೈತನ್ಯದ ಚಿಲುಮೆಯಂತಿರುವ, ಸಣ್ಣ ಸ್ವರದಲ್ಲಿ ಭಾವಗೀತೆ ಹಾಡಿಕೊಳ್ಳುವ, ಒಪ್ಪವಾಗಿ ರಂಗೋಲಿ ಹಾಕುವ ಅವಳು ನನಗೆ ಹೈಸ್ಕೂಲಿನಿಂದಲೂ ಜೀವದ ಗೆಳತಿ.

ಅಂಕಗಣಿತಕ್ಕೂ ಬದುಕಿಗೂ ಯಾವುದೋ ಸಂಬಂಧ ಇದೆ ಅಂತ ಅಂಕೆಗಳಲ್ಲಿ ಮುಳುಗುತ್ತಿದ್ದ ನಾನು ಮತ್ತು ಗಣಿತವನ್ನೇ ನಖಶಿಖಾಂತ ದ್ವೇಷಿಸುತ್ತಿದ್ದ ಅವಳು ನಡುವೆ ಒಂದಿಷ್ಟು ಖಾಸಗಿ ಇಷ್ಟಾನಿಷ್ಟಗಳು... ನಾವಿಬ್ಬರೂ ಗೆಳತಿಯರಾಗಿದ್ದು ಹೇಗೆ ಅನ್ನುವುದು ಇವತ್ತಿನವರೆಗೂ ಬಗೆಹರಿಯದ ಮಿಸ್ಟರಿ. ನಮ್ಮಿಬ್ಬರ ಅಭಿರುಚಿಯಲ್ಲಿ ಸಾಮ್ಯತೆ ಇದ್ದುದು ಜಿದ್ದಿಗೆ ಬಿದ್ದವರಂತೆ ಕವಿತೆ ಓದುವುದರಲ್ಲಿ ಮಾತ್ರ. ಹಾಗಿದ್ದರೂ ನಾವಿಬ್ಬರೂ ಪರಸ್ಪರರ ಕ್ರೈಂಗಳಲ್ಲಿ ಸಮಾನ ಪಾಲುದಾರರು.

ಆಟ, ಪಾಠ, ತುಂಟಾಟ, ಹಾಡು, ಕವಿತೆ, ಆ ವಯಸ್ಸಿನ ಭಾವದೇರಿಳಿತಗಳು, ಸುಲಭವಾಗಿ ಅರ್ಥವಾಗದ ದೈಹಿಕ ಬದಲಾವಣೆಗಳು, ಯೌವ್ವನಕ್ಕೆ ಹೊರಳಿಕೊಳ್ಳುವ ಬದುಕು, ಅಪಾಯಕಾರಿಯಲ್ಲದ ಕ್ರಶ್, ಹೆಸರಿಲ್ಲದ ಕೆಲವು ಇನ್ಫ್ಯಾಚುಯೇಷನ್ಸ್ ಎಲ್ಲವುಗಳ ನಡುವೆ ಅವಳಂತಹ ಜೀವನ್ಮುಖಿ ಹುಡುಗಿಗೆ ಪ್ರೀತಿಯಾಗಲು ಎಷ್ಟು ಹೊತ್ತು?

ಅತ್ತ ಅವಳ ಬದುಕಲ್ಲಿ ಸದ್ದಿಲ್ಲದೆ ಪ್ರೇಮ ಚಿಗುರೊಡೆಯುತ್ತಿದ್ದರೆ ಇತ್ತ ನನಗೆ ಅವಳ ಪ್ರೀತಿಯನ್ನು ನಾನು ಓದಿರುವ ಕೆಲವು ಜನಪ್ರಿಯ ಕಾದಂಬರಿಗಳ ಪಾತ್ರಗಳೊಂದಿಗೆ ಹೋಲಿಸಿ ನೋಡುವ ಉಮೇದು. ಅವಳಿಗೂ ಕೆಲವು ಪುಸ್ತಕಗಳನ್ನು ಓದಲು ಕೊಟ್ಟು 'ಹೀಗೆಲ್ಲಾ ಇದ್ಯಾ?' ಅಂತ ಕುತೂಹಲದಿಂದ ಕೇಳಿದ್ದೂ ಇದೆ. ಆಗೆಲ್ಲಾ ಅವಳು ನಕ್ಕು ಸುಮ್ಮನಾಗುತ್ತಿದ್ದರೆ ನನ್ನ ಕಲ್ಪನೆಯ ರೆಕ್ಕೆಗಳಿಗೆ ಮತ್ತೊಂದಿಷ್ಟು ಗರಿಗಳು ಸೇರಿಕೊಳ್ಳುತ್ತಿದ್ದವು.

ಶುದ್ಧ ಹುಡುಗಾಟ ಮತ್ತು ಭಾವುಕತೆಯ ಸಮಾಗಮದ ಒಂದು ಸುಂದರ ಘಳಿಗೆಯಲ್ಲಿ ಅವಳ ಬದುಕಿನೊಳಗೆ ಕಾಲಿಟ್ಟ ಪ್ರೀತಿ ಎಂಬ ಮಾಯಾ ವಿದ್ಯೆ ನನ್ನ ಯೋಚನೆಗಳನ್ನೂ ಬದಲಾಯಿಸಲು ಹೆಚ್ಚಿನ ಸಮಯವನ್ನೇನೂ ತೆಗೆದುಕೊಳ್ಳಲಿಲ್ಲ. ಅಪ್ಪಟ ರೈತನ ಮಗ ಮತ್ತು ಮೀರಾಳಿಗಿಂತಳೂ ಚೆಂದಗೆ ಹಾಡಿಕೊಳ್ಳುತ್ತಿದ್ದ ಹುಡುಗಿ... ಕೃಷ್ಣನಿಗೂ ಅಸೊಯೆಯಾಗುವಂತಿತ್ತು ಜೋಡಿ. ಮಧ್ಯೆ ಅವರ ಪ್ರೀತಿಗೆ, ಮುನಿಸಿಗೆ, ಹುಸಿ ಕೋಪಕ್ಕೆ,  ಜಗಳಗಳಿಗೆ ಮಧ್ಯವರ್ತಿಯಾಗಿ ನಾನು. ಬದುಕು ತುಂಬಾ ಸುಂದರವಾಗಿತ್ತು.

ಹೀಗಿರುವ ದಿನಗಳಲ್ಲೇ ಅವನ ಹಟ್ಟಿಗೆ ಒಂದು ಹೊಸ ಎತ್ತು ಸೇರಿಕೊಂಡಿತು. ಅವನು ತುಂಬು ಸಂಭ್ರಮದಿಂದ ಎತ್ತನ್ನೂ, ಅದರ ಮುಗ್ಧತೆಯನ್ನೂ, ಅದಕ್ಕಿಡಬಹುದಾದ ಹೆಸರನ್ನೂ ಹೇಳಿಕೊಳ್ಳುತ್ತಿದ್ದರೆ ನಮ್ಮಿಬ್ಬರ ತಲೆಯಲ್ಲಿ ಹೊಸ ಯೋಚನೆಯೊಂದು ಓಡುತ್ತಿತ್ತು. ಕೆಲವು ವಾರಗಳಷ್ಟು ಹಿಂದೆ ಊರ ಹೊರಗೆ ಆಯೋಜಿಸಿದ್ದ ಕಂಬಳ, ಓಡುತ್ತಿದ್ದ ಎತ್ತುಗಳು, ಅದರ ಸಾರಥಿಯ ಗತ್ತು ಗೈರತ್ತುಗಳು ನಮ್ಮಲ್ಲೂ ಎತ್ತು ಓಡಿಸುವ ಆಸೆ ಹುಟ್ಟಿಸಿದ್ದವು. ಈಗ ಅನಾಯಾಸವಾಗಿ ನಮ್ಮ ಆಸೆ ಕೈಗೂಡುತ್ತದೆ ಅಂದರೆ ಯಾಕೆ ಅವಕಾಶ ಕಳೆದುಕೊಳ್ಳಬೇಕು ಅನ್ನಿಸಿ ನಮ್ಮ ಯೋಚನೆಯನ್ನು ಅವನ ಮುಂದಿಟ್ಟೆವು. ಮೊದ ಮೊದಲು ನಮ್ಮ ವಿಚಿತ್ರ ಬೇಡಿಕೆಯನ್ನು ಖಡಾಖಂಡಿತವಾಗಿ ನಿರಾಕರಿಸಿದರೂ ಕೊನೆಗೆ ಸಂಜೆ ಮೂರರ ಒಳಗೆ ಎತ್ತನ್ನು ಅವನಿಗೆ ಮರಳಿಸಬೇಕು ಅನ್ನುವ ಕರಾರಿನೊಂದಿಗೆ ನಮ್ಮ ಬೇಡಿಕೆಗೆ ಮಣಿದ.

ಮುಂದಿನ ಭಾನುವಾರ ಸ್ಪೆಶಲ್ ಕ್ಲಾಸ್ ನೆಪದಲ್ಲಿ ನಾವಿಬ್ಬರು ಶಾಲೆಯ ಕಾಲುದಾರಿಯ ಪಕ್ಕದಲ್ಲಿನ ಕೆಸರುಗದ್ದೆಯಲ್ಲಿ ಸೇರುವುದೆಂದೂ, ಅವನು ಮೀಯಿಸುವ ನೆಪದಲ್ಲಿ ಎತ್ತನ್ನು ಅಲ್ಲಿಗೆ ಕರೆದುಕೊಂಡು ಬರುವುದೆಂದೂ ನಿರ್ಧಾರವಾಯಿತು. ಹಾಗೆ ನಿರ್ಧರಿಸಿಕೊಂಡ ಮೇಲೆ ಇಡೀ ದಿನ ನಮ್ಮ ಯೋಚನೆಗಳಲ್ಲಿ ನಾವು ಮಾಡಲಿರುವ ಹೊಸ ಸಾಹಸದ ರೂಪು ರೇಷೆಗಳಷ್ಟೇ ಓಡಾಡುತ್ತಿದ್ದವು. ಆ ಭಾನುವಾರ ಕಾಲುದಾರಿಯಲ್ಲಿ ನಾವಿಬ್ಬರೂ ಸೇರುತ್ತಿದ್ದಂತೆ ಪ್ರೇಮಿಯ ಕೋರಿಕೆ ಪೂರೈಸುತ್ತಿರುವ ಹೆಮ್ಮೆಯಿಂದ ಅವನೂ ಎತ್ತು ಕರೆದುಕೊಂಡು ಬಂದು ಬಿಟ್ಟ.

ಅವನು ಎತ್ತಿನ ಬಗ್ಗೆ ವರ್ಣಿಸುತ್ತಿದ್ದಾಗ ನಮ್ಮಷ್ಟೇ ಎತ್ತರ ಇರಬಹುದೇನೋ ಅಂತ ಅಂದುಕೊಂಡಿದ್ದ ನಮ್ಮ ನಿರೀಕ್ಷೆ ಅದರ ಗಾತ್ರ, ಎತ್ತರ, ಕೋಡು ನೋಡಿದಾಗಲೇ ಸುಳ್ಳಾಗಿತ್ತು. ಆದರೆ ಎತ್ತು ಓಡಿಸುವ ಹುಚ್ಚು ಎಲ್ಲಾ ನಿರೀಕ್ಷೆಗಳಿಗಿಂತಲೂ ಎತ್ತರದಲ್ಲಿದ್ದುದರಿಂದ ಅವನನ್ನು ಕಳುಹಿಸಿ ನಾವು ಓಡಿಸಲು ಸಿದ್ಧರಾದೆವು.  ಆ ಹೊತ್ತು ಯಾವ ಧೈರ್ಯದ ಭೂತ ನಮ್ಮೊಳಗೆ ಹೊಕ್ಕಿತ್ತೋ ಗೊತ್ತಿಲ್ಲ, ಮೆಲ್ಲಗೆ ಅದರ ಬಾಲ ಹಿಡಿದೆಳೆದೆ, ಹಿಂದಿನಿಂದ ಪ್ರೋತ್ಸಾಹಿಸಲು ಗೆಳತಿಯ ಚಪ್ಪಾಳೆ.

ಅವನು ಗದ್ದೆಯಂಚು ತಲುಪುವ ಮುನ್ನವೇ ನಾನು  ಎತ್ತು ಎಳೆದ ರಭಸಕ್ಕೆ ಮೈಮೇಲಿಡೀ ತರಚು ಗಾಯ ಮಾಡಿಕೊಂಡು ಮತ್ತೊಂದು ಗದ್ದೆಗೆ ಬಿದ್ದಿದ್ದೆ.   ಮಂಡಿಯ ಮೇಲೆ ತರಚು ಗಾಯಗಳಾಗಿವೆ ಅಷ್ಟೇ ಎಂದು ಸಮಾಧಾನ ಪಟ್ಟುಕೊಳ್ಳುತ್ತಿರುವಾಗಲೇ ಛಳ್ಳೆಂದ ಎಡಗೈಗೆ ಆಚೀಚೆ ಸರಿಸಲೂ ಆಗದಷ್ಟು ನೋವು. "ಅಮ್ಮಾ" ಎಂದೆ, ಓಡಿ ಬಂದ ಗೆಳತಿ ನನ್ನನ್ನು ಎಬ್ಬಿಸಿ ಮನೆಗೆ ಕರೆದುಕೊಂಡು ಬಂದಳು. ಶಾಲೆಯಲ್ಲಿ ಕೈ ಮುರಿದುಕೊಂಡಿದ್ದೇನೇನೋ ಅಂದುಕೊಂಡ ಅಪ್ಪ ಕೈಗೆ ಬ್ಯಾಂಡೇಜ್ ಹಾಕಿಸಿ ಮನೆಗೆ ಕರೆತಂದರು. ನಾವು ಕಂಬಳದ ಸಾರಥಿಗಳಾಗಬಹುದಾಗಿದ್ದ ಅಪರೂಪದ ಅವಕಾಶ ತಪ್ಪಿಸಿದ ಎತ್ತಿನ ಮೇಲೆ ಅಸಾಧ್ಯ ಕೋಪ ನನಗೆ. ಕೈಗೆ ಏರಿಸಿಕೊಂಡ ಸಿಮೆಂಟ್ ಬ್ಯಾಂಡೇಜನ್ನು ನೋಡುವಾಗೆಲ್ಲಾ ಆ ಕೋಪ ಮತ್ತಷ್ಟು ಜಾಸ್ತಿಯಾಗುತ್ತಿತ್ತು.

ಹಾಗಂತ ನಮ್ಮಿಬ್ಬರ ಬದುಕಿನಲ್ಲಿ ಗಂಭೀರತೆಗಳು ಇರಲೇ ಇಲ್ಲ ಅಂತಲ್ಲ. ಬೇಜಾವಾಬ್ದಾರೀ ಅಪ್ಪ, ಇಡೀ ಸಂಸಾರದ ಹೊಣೆಯನ್ನು ಹೆಗಲ ಮೇಲೆ ಹೊತ್ತ ಅಮ್ಮ, ಬೆನ್ನ ಹಿಂದೆ ಪುಟ್ಟ ತಮ್ಮ, ಮಾತಿನಿಂದಲೇ ತಿವಿಯುವ ಸಂಬಂಧಿಕರು, ಅವಳ ಹಾಡನ್ನೂ, ಕವಿತೆಯನ್ನೂ ಅನುಮಾನದ ಕಣ್ಣಿಂದಲೇ ನೋಡುವ ಸಮಾಜ, ತನ್ನ ಬದುಕನ್ನು ಯಾರ ಹಂಗೂ ಇಲ್ಲದೆ ಕಟ್ಟಿಕೊಳ್ಳಲೇಬೇಕಾದ ಅನಿವಾರ್ಯತೆ, ಇವೆಲ್ಲದರ ಮಧ್ಯೆಯೂ ಬದುಕಿನ ಉತ್ಸಾಹವನ್ನು ಉಳಿಸಿಕೊಳ್ಳಲೇಬೇಕಾದ ಒತ್ತಡ, ಮಧ್ಯೆ ಹೈಸ್ಕೂಲ್ ದಾಟಿ ಕಾಲೇಜಿಗೆ ಕಾಲಿಟ್ಟೆವು. 

ಆ ಹೊತ್ತಿಗಾಗುವಾಗ  ಅವಳ ಪ್ರೀತಿ ತೆಳುವಾಗತೊಡಗಿತು, ಅವನಿಗೂ ಇದು ಕೈಗೂಡುವಂಥದ್ದಲ್ಲ ಅಂತ ಅನಿಸಿತೋ ಏನೋ, ಒಬ್ಬರಿಗೊಬ್ಬರು ಬೈದುಕೊಳ್ಳದೆ ಇಬ್ಬರೂ ದೂರಾದರು. ಈ ಮಧ್ಯೆ ಒಂದು ವಿಚಿತ್ರ ತಿರುವಿನಲ್ಲಿ ನನ್ನಮ್ಮ ಸ್ತನ ಕ್ಯಾನ್ಸರ್ ಎಂಬ ದುರಂತಕ್ಕೆ ಮುಖಾಮುಖಿಯಾದರು. ಆಸ್ಪತ್ರೆ, ಅದರ ವಿಚಿತ್ರ ವಾಸನೆ, ಅಸಹನೀಯ ಮೌನ, ತಾಳಿಕೊಳ್ಳಲಾಗದ ನಿಟ್ಟುಸಿರು, ಕಾರಣವಿಲ್ಲದೆ ಅಲ್ಲಿಂದಿಲ್ಲಿಗೆ ಸಂಚರಿಸುವ ಅನಾಥ ಭಾವ, ನಡುವೆ ನನ್ನೆಲ್ಲಾ ನೋವುಗಳಿಗೆ ಹೆಗಲಾಗಿ ನಿಲ್ಲುತ್ತಿದ್ದ ಗೆಳತಿ ಒಂದು ದಿನ ಸಂಕಟ ತಡೆಯಲಾಗದೆ 'ಅಮ್ಮ ಬದುಕುತ್ತಾರೇನೇ?' ಎಂದು ಕೇಳಿದಳು. ನಾನು 'ಬದುಕಲೇ ಬೇಕು, ಬದುಕುತ್ತಾರೆ' ಎಂದು ಎದ್ದು ಬಂದೆ. ಅಮ್ಮ ಬದುಕಿದರು, ಅವಳು ನನಗೆ ಮತ್ತಷ್ಟು ಹತ್ತಿರವಾದಳು.

ಮುಂದೆ ಓದು, ಉದ್ಯೋಗ, ಮದುವೆ, ಸಂಸಾರ ಅಂತೆಲ್ಲಾ ನಮ್ಮಿಬ್ಬರ ದಾರಿ ಕವಲೊಡೆದರೂ ನಮ್ಮ ಆತ್ಮೀಯತೆಯಲ್ಲಿ ಯಾವ ದೂರವೂ ತಲೆದೋರಿರಲಿಲ್ಲ. ಆದರೆ ಆಷಾಢದ ಆ ರಾತ್ರಿ ಅವಳು ಮಾಡಿದ್ದ ಮೆಸೇಜ್ ನಲ್ಲಿದ್ದ 'ಸೀರಿಯಸ್ ಪ್ರೀತಿ' ನಿಜಕ್ಕೂ ಗಂಭೀರ ಪ್ರೀತಿಯೇ. ಇವಳು ಕೆಲಸ ಮಾಡುತ್ತಿದ್ದ ಕಂಪೆನಿಯಲ್ಲೇ ಕೆಲಸ ಉತ್ತರ ಭಾರತದ ಹುಡುಗ ಅವನು. ಇವಳಿಗಿಂತ ಎರಡು ವರ್ಷ ಕಿರಿಯ. ಪ್ರೀತಿಗೆ ವಯಸ್ಸಿನ ಹಂಗಿಲ್ಲ ಅಂತ ಅವಳೆಷ್ಟೇ ಹೇಳಿಕೊಂಡರೂ ನನಗೊಂದು ಅಳುಕು ಇದ್ದೇ ಇತ್ತು. ಅವನ ಪ್ರೀತಿ, ಮನೆಯವರು ಒಪ್ಪಿದರೂ ಒಪ್ಪದಿದ್ದರೂ ಒಟ್ಟಿಗೆ ಬದುಕುತ್ತೇವೆ ಅನ್ನುತ್ತಿದ್ದಾಗ ಅವನ ಮಾತಿನಲ್ಲಿರುತ್ತಿದ್ದ ದೃಢತೆ, ಅವಳೆಡೆಗೆ ಅವನಿಗಿದ್ದ ಕಾಳಜಿ ಎಲ್ಲಾ ನೋಡುವಾಗ ನನ್ನ ಅಳುಕು ಸುಳ್ಳಾಗಲಿದೆ ಎಂದು ನನಗೂ ಅನಿಸುತ್ತಿತ್ತು. ಹಾಗಾಗಲಿ ಎಂದು ನಾನು ಕಾಣದ ದೇವರಲ್ಲಿ ಕೇಳಿಕೊಳ್ಳುತ್ತಲೂ ಇದ್ದೆ.

ಈಗ ಋತುಗಳು ತಿರುಗಿಬಿದ್ದಿವೆ, ಆಷಾಢದಲ್ಲಿ ಚಿಗುರಿದ ಪ್ರೀತಿಗೆ ಕಾರ್ತಿಕದಲ್ಲಿ ಒಪ್ಪಿಗೆಯ ಮೊಹರು ಬೀಳಲಿ ಎಂದು ಎರಡೂ ಮನೆಯವರ ಮುಂದೆ ಮದುವೆ ಪ್ರಸ್ತಾಪ ಇಡುವುದೆಂದು ಒಂದು ಬೆಳಗ್ಗೆ ಇಬ್ಬರೂ ನಿರ್ಣಯಿಸಿದರು ಮತ್ತು ಆ ನಿರ್ಣಯದಂತೆ ನಡೆದುಕೊಂಡರು ಕೂಡ. ಇವಳ ಮನೆಯಲ್ಲಿ ಸುಲಭವಾಗಿ ಒಪ್ಪಿಗೆ ಸಿಗಲಿಲ್ಲ, ಹಾಗೆ ಸುಲಭವಾಗಿ ಸಿಗುತ್ತದೆ ಎನ್ನುವ ನಿರೀಕ್ಷೆ ಅವಳಿಗೆ ಇರಲೂ ಇಲ್ಲ. ಆದರೆ ಹೇಗಾದರೂ ಒಪ್ಪಿಸಿಯೇನು ಎನ್ನುವ ನಂಬಿಕೆ ಇತ್ತು, ಹಾಗೆ ಒಪ್ಪಿಸಿದಳು ಕೂಡ. ಆದರೆ ಅವನ ಮನೆಯಲ್ಲಿ ಯಾವ ಬೃಹನ್ನಾಟಕ ನಡೆಯಿತೋ ಗೊತ್ತಿಲ್ಲ, ಒಂದೆರಡು ದಿನಗಳು ಕಳೆದ ಮೇಲೆ 'ಲೆಟ್ಸ್ ಬ್ರೇಕಪ್' ಅನ್ನುವ ಮೆಸೇಜ್ ಬಂತು.

ಯಾವುದು ಆಗಬಾರದು ಅಂದುಕೊಂಡಿದ್ದೆನೋ ಮತ್ತೆ ಅವಳ ಬದುಕಲ್ಲಿ ಅದೇ ಘಟಿಸಿತ್ತು‌. ಏನು ಮಾತಾಡಲಿ, ಹೇಗೆ ಮಾತಾಡಲಿ ಅನ್ನುವ ನೂರು ಅನುಮಾನದ ಮೂಟೆಗಳನ್ನು ಹೊತ್ತುಕೊಂಡೇ ಅವಳಿಗೆ ಕರೆ ಮಾಡಿದರೆ ಅವಳು ಎಂದಿನ ತಣ್ಣನೆಯ ಧ್ವನಿಯಲ್ಲಿ 'ಅವ್ನ ಮನೇಲಿ ಒಪ್ಲಿಲ್ಲಂತೆ ಕಣೇ' ಅಂದ್ಳು. ನನಗೆ ಗೊತ್ತಿರುವ ವಿಷಯವೇ ಆಗಿದ್ದರೂ ಇಷ್ಟು ಸಹಜವಾಗಿ ಅವಳದನ್ನು ಸ್ವೀಕರಿಸುತ್ತಾಳೆ ಅಂತ ಅನಿಸಿರಲಿಲ್ಲ. "ಮುಂದೇನು?" , "ಏನಾಗಬೇಕೋ ಅದೇ ಆಗುತ್ತದೆ. ಬಗಲಲ್ಲೊಂದು ಕೊಳ್ಳಿ ಸದಾ ಇಟ್ಟುಕೊಂಡು ನಡೆಯುವವಳಿಗೆ ಬೆಳಕಿಗಾಗಿ ಕಂದೀಲು ಹುಡುಕಬೇಕಾಗಿ ಬರುವುದಿಲ್ಲ" ಅಂದಳು. ಪ್ರೇಮ ಕವಿತೆ ಬರೆಯುತ್ತಿದ್ದವಳ ಬದುಕು ಅವಳಿಗೇ ಗೊತ್ತಾಗದಂತೆ ನವ್ಯ ಕಾವ್ಯವೊಂದನ್ನು  ಬರೆಯಲು ಶುರು ಹಚ್ಚಿತು. ನಾನು ಕಾವ್ಯದೊಳಗೆ ಕಳೆದುಹೋಗಲು ತಯಾರಾಗುತ್ತಿದ್ದೇನೆ...

ಎಲ್ಲಿಂದಲೋ ಬಂದ ಬೇಬಿಯಣ್ಣ...

ಅಂಗಳದ ಒಂದು ಮೂಲೆಯಲ್ಲಿ ಹಾಕಿದ ಚಪ್ಪರದ ಅಡಿಯಲ್ಲಿ ಚೆನ್ನಪ್ಪಣ್ಣನನ್ನೂ, ಅವರು ಕೂತಿದ್ದ ಮಟ್ಟುಗತ್ತಿಯನ್ನೂ, ಸಲೀಸಾಗಿ ಸುಲಿದು ಬೀಳುತ್ತಿದ್ದ ಅಡಕೆಗಳನ್ನೂ, ಪಕ್ಕದಲ್ಲಿ ದೊಡ್ಡ ರಾಶಿಯೇ ಆಗಿದ್ದ ಅದರ ಸಿಪ್ಪೆಗಳನ್ನೂ, ನಡು ನಡುವೆ ಒಂದು ಲಯದಲ್ಲಿ ವೀಳ್ಯದೆಲೆ ಹಾಕಿಕೊಂಡು ಬಾಯಾಡಿಸುತ್ತಿದ್ದ ಅವರ ಬಾಯನ್ನೂ ಒಂದು ರೀತಿಯ ಅಚ್ಚರಿ ಮತ್ತು ಏಕಾಗ್ರತೆಯಿಂದ ದಿಟ್ಟಿಸುತ್ತಿದ್ದ ನಮ್ಮ ಮಕ್ಕಳ ಸೈನ್ಯದ ಗಮನವನ್ನು ಅಜ್ಜನ ಹೆಜ್ಜೆ ಸದ್ದು ನಿಧಾನವಾಗಿ ತಪ್ಪಿಸಿತ್ತು. ತುಸು ಅಸಹನೆಯಿಂದ ಮತ್ತು ಹೆಚ್ಚೇ ಗೌರವದಿಂದ, ಅಜ್ಜ ನಮಗೆ ಯಾವ ಹೆಚ್ಚುವರಿ ಕೆಲಸವೂ ನೀಡದಿರಲಿ ಎಂದು ಕಾಣದ ದೇವರಲ್ಲಿ ಬೇಡಿಕೊಳ್ಳುತ್ತಾ ಅವರಿಗೆ ಜಾಗ ಮಾಡಿಕೊಡಲು ಸರಿದು ಕೂತೆವು. ಅಜ್ಜ ಕೂರುತ್ತಿದ್ದಂತೆ ವೀಳ್ಯದೆಲೆ ಉಗುಳಿ ತನ್ನ ಕೆಂಪು ಬಾಯನ್ನು ತೊಳೆದು ಬಂದ ಚೆನ್ನಪ್ಪಣ್ಣ "ತೋಟದ ಕೆಲಸಕ್ಕೆ ಹೆಚ್ಚುವರಿ ಆಳು ಬೇಕು ಅಂದಿದ್ರಲ್ಲಾ, ನಾಳೆ ಚಿಕ್ಕಮಗಳೂರಿನಿಂದ 'ಬೇಬಿ' ಅಂತ ಹೊಸ ಆಳು ಬರ್ತಿದ್ದಾನೆ" ಅಂದರು.

ಅದುವರೆಗೂ ಚೆನ್ನಪ್ಪ, ವೆಂಕಪ್ಪ, ಸಂಕು, ಗೀತಕ್ಕ, ರತ್ನ, ಚೆನ್ನಿ ಇವೇ ಮುಂತಾದ ಹೆಸರುಗಳನ್ನು ಕೇಳಿದ್ದ ನಮಗೆ ಈ 'ಬೇಬಿ' ಅನ್ನುವುದು ನಮ್ಮ ಪ್ರಪಂಚದಲ್ಲಿ ಎಲ್ಲೂ ಇಲ್ಲದ ಹೆಸರು ಅನ್ನಿಸುತ್ತಿತ್ತು. ಇಂಗ್ಲಿಷಿನ ಬೇಬಿಗೂ, ಈ ಬೇಬಿಗೂ ಬಾದರಾಯಣ ಸಂಬಂಧ ಕಲ್ಪಿಸಿ, ಕಂಡೇ ಇರದ ಆ ವ್ಯಕ್ತಿಯನ್ನು ನಮ್ಮ ಮನಸ್ಸು ಇಂಗ್ಲಿಷಿನವನಾಗಿ ತೀರ್ಮಾನಿಸಿಬಿಟ್ಟಿತು. ಎಷ್ಟು ಬೇಡ ಬೇಡ ಅಂದರೂ ಬಿಳಿ ಚರ್ಮ, ಕೆಂಚು ಕೂದಲು, ತಿಳಿ ಹಸಿರು ಅಥವಾ ನೀಲಿ ಬಣ್ಣದ ಕಣ್ಣುಗಳುಳ್ಳ ಮನುಷ್ಯನ ಚಿತ್ರವೇ ಕಣ್ಣ ಮುಂದೆ ಓಡಾಡುತ್ತಿತ್ತು. ಬಿಳಿ ಟಿಷರ್ಟ್, ನೀಲಿ ಜೀನ್ಸ್ ಧರಿಸುವ 'ಬೇಬಿ' ನಮ್ಮ ತೋಟದಲ್ಲಿ ಬಂದು ಮಾಡುವುದಾದರೂ ಏನು ಎಂಬ ಪ್ರಶ್ನೆಯೂ ಕಾಡುತ್ತಿತ್ತು. ಅದಕ್ಕಿಂತಲೂ ದೊಡ್ಡ ಸಮಸ್ಯೆ, ಇನ್ನೂ ಎ.ಬಿ.ಸಿ.ಡಿಯೇ ಕಲಿತಿಲ್ಲದ ನಾವು  ಈ ಇಂಗ್ಲಿಷಿನ ಬೇಬಿಯ ಬಳಿ ಹೇಗೆ ಸಂವಹನ ಮಾಡುವುದು ಎಂಬುವುದಾಗಿತ್ತು.

ಆ ರಾತ್ರಿಯಿಡೀ ನಮಗೆ ಬೇಬಿಯದೇ ಚಿಂತೆ. ಬೆಳಗಾಗುತ್ತಿದ್ದಂತೆ ನಾವು ಬೇಬಿಗಾಗಿ ಗೇಟು ಕಾಯುತ್ತಾ ಕೂತೆವು. ಒಮ್ಮೆ ರಸ್ತೆಯತ್ತ ಮತ್ತೊಮ್ಮೆ ಭರ್ರೆಂದು ಧೂಳೆಬ್ಬಿಸುತ್ತಾ ಬರುವ ಬಸ್ಸಗಳತ್ತ, ಅಂಬಾಸಿಡರ್ ಕಾರುಗಳತ್ತಾ ದಿಟ್ಟಿಸುತ್ತಾ ನಮ್ಮ ಪಾಲಿಗೆ ಅವತಾರ ಪುರುಷನೇ ಆಗಿದ್ದ ಬೇಬಿಯ ಬರವನ್ನು ನಿರೀಕ್ಷಿಸುತ್ತಿದ್ದೆವು. ಗಂಟೆ ಹತ್ತಾಗುತ್ತಿದ್ದಂತೆ ಹೊಟ್ಟೆ ಚುರುಗುಟ್ಟಲಾರಂಭಿಸಿತು, ಇನ್ನು ಈ ಇಂಗ್ಲಿಷಿನವ ಬರಲಾರ ಎಂದು ನಿರ್ಧರಿಸಿಕೊಂಡು ಮನೆಗೆ ವಾಪಾಸಾದೆವು. ಕೈ ತೊಳೆದು ಮಣೆ ಎಳೆದು ನಾಸ್ಟಾ ಮಾಡಲು ಕೂರಬೇಕು ಅನ್ನುವಷ್ಟರಲ್ಲಿ, "ಬೇಬಿ ಬಂದಿದ್ದಾನೆ, ಇಲ್ಲೇ ಕೂರಲು ಹೇಳಿದ್ದೇನೆ" ಅನ್ನುವ ಚೆನ್ನಪ್ಪಣ್ಣನ ಮಾತು ಕೇಳಿತು. ಒಂದೇ ಉಸಿರಿಗೆ ನಾವು ಮನೆಯ ಅಂಗಳದಲ್ಲಿದ್ದೆವು.

ಸೂಟು-ಬೂಟು ಧರಿಸಿದ ಇಂಗ್ಲಿಷಿನವನ ನಿರೀಕ್ಷೆಯಲ್ಲಿದ್ದ, ಅವನಿಗೋಸ್ಕರವೇ 'ಹಲೋ ಮೈ ನೇಮ್ ಈಸ್.... ಯುವರ್ ಗುಡ್ ನೇಮ್ ಪ್ಲೀಸ್' ಉರು ಹೊಡೆದಿದ್ದ ನಮಗೆ ಒಂದು ದೊಡ್ಡ ಶಾಕ್! ಮಾಸಲು ಅಂಗಿ, ಚೌಕುಳಿ ಲುಂಗಿ, ಕೈಯಲ್ಲೊಂದು ಗೋಣಿಯಂತಹ ಕಟ್ಟು ಹಿಡಿದು ಪೆಕರು ಪೆಕರಾಗಿ ನಿಂತಿದ್ದ ಬೇಬಿ ನಮ್ಮ ಕುತೂಹಲಕ್ಕೆಲ್ಲಾ ಒಂದೇ ಏಟಿಗೆ ತಣ್ಣೀರೆರಚಿದ್ದರು. ಬೇಬಿ ನಮ್ಮಂತೆಯೇ ಸಾಮಾನ್ಯ ಭಾರತೀಯ ಅನ್ನುವುದು ಗೊತ್ತಾಗುತ್ತಿದ್ದಂತೆ 'ನಮ್ಮನೆಯಲ್ಲೂ ಒಬ್ಬ ಫಾರಿನರ್ ಇದ್ದಾರೆ' ಅಂತ ಶಾಲೆಯಲ್ಲಿ ಕೊಚ್ಚಿಕೊಳ್ಳಲು ಇದ್ದ ಒಂದು ಅಪೂರ್ವ ಅವಕಾಶ ತಪ್ಪಿಸಿದರು ಎಂದು ಅವರ ಮೇಲೆ ಅಕಾರಣ ಸಿಟ್ಟು ನಮಗೆ.

ಚಿಕ್ಕಮಗಳೂರಿನಿಂದ ಬಂದಿದ್ದರೂ ಬೇಬಿ ಮೂಲತಃ ಹಾಸನದವರು. ಅವರ ಸಂಸಾರ ಪೂರ್ತಿ ಹಾಸನದಲ್ಲೇ ನೆಲೆಸಿತ್ತು. ಹೊಟ್ಟೆಪಾಡಿಗಾಗಿ ಕೆಲಸ ಹುಡುಕುತ್ತಾ ಶೃಂಗೇರಿ ತಲುಪಿದ್ದವರು ಅಲ್ಲಿಂದ ಘಟ್ಟ ಇಳಿದು ನಮ್ಮನೆ ತಲುಪಿದ್ದರು. ಅವರ ಮಾತು, ಕನ್ನಡ ಭಾಷೆ ನಮಗೆ ವಿಚಿತ್ರ ಅನ್ನಿಸುತ್ತಿತ್ತು. ಇಡೀ ಪ್ರಪಂಚದಲ್ಲಿ ತುಳು ಮತ್ತು ಬ್ಯಾರಿ ಭಾಷೆ ಬಿಟ್ಟು ಉಳಿದ ಯಾವ ಭಾಷೆಗಳೂ 'ಸರಿ' ಇಲ್ಲ ಎಂದು ತೀರ್ಮಾನಿಸಿಕೊಂಡ ವಯಸ್ಸದು. ಸಾಲದೆಂಬಂತೆ, ಉಳಿದ ಕೆಲಸಗಾರರೆಲ್ಲಾ ಬೇಬಿಯ ಹಿಂದೆ ಆಡಿಕೊಳ್ಳುತ್ತಾ 'ಘಟ್ಟದಾಯೆ (ಘಟ್ಟದವನು)' ಎಂದು ನಗುತ್ತಿದ್ದರೆ ನಮಗೆ ಈತ ಬೇರೆಯದೇ ಪ್ರಪಂಚದವನು ಅನ್ನುವುದು ಕನ್ಫರ್ಮ್ ಆಗಿತ್ತು‌. ಹಾಗಾಗಿಯೇ ಬಂದು ವಾರ ಕಳೆದಿದ್ದರೂ ನಮ್ಮ ಮಧ್ಯೆ ಒಂದು ಬಂಧ ಬೆಳೆದಿರಲಿಲ್ಲ.

ಆದರೆ ಅಜ್ಜ, ಒಂದು ಭಾನುವಾರ ಕೊಯ್ಯಿಸಿದ ಅಡಕೆ ಹೆಕ್ಕಲು ನಮ್ಮನ್ನು ಬೇಬಿಯ ಜೊತೆ ಕಳುಹಿಸಿದ್ದರು. ಆಟದ ಅಮೂಲ್ಯ ಸಮಯ ಹಾಳಾದ ಸಿಟ್ಟು ಒಂದು ಕಡೆಯಾದರೆ, ಮಾತೇ ಆಡದ ಬೇಬಿಗೆ ಸಹಾಯ ಮಾಡಬೇಕಲ್ಲಾ ಅನ್ನುವ ದುಃಖ ಮತ್ತೊಂದು ಕಡೆ. ಸಾಲದಕ್ಕೆ "'ಬೇಬಿಯಣ್ಣ' ಅಂತಲೇ ಕರೆಯಬೇಕು, ಬೇಬಿ ಅಂತ ಎಲ್ಲಾದರೂ ಏಕವಚನದಲ್ಲಿ ಮಾತಾಡಿಸಿದರೆ ಬೆನ್ನಿನ ಚರ್ಮ ಸುಲಿದು ಕೈಯಲ್ಲಿ ಕೊಡಬೇಕಾಗುತ್ತದೆ" ಎಚ್ಚರಿಕೆ ಬೇರೆ ಕೊಟ್ಟಿದ್ದರು. ಹಿಂದೊಮ್ಮೆ ಯಾರನ್ನೋ ಏಕವಚನದಲ್ಲಿ ಮಾತಾಡಿಸಿದ್ದಕ್ಕೆ ಅಜ್ಜ ನಮ್ಮಲ್ಲೊಬ್ಬರ ಕಣ್ಣಿಗೆ ಹಸಿ ಮೆಣಸು ಹಾಕಿ ಚೆನ್ನಾಗಿ ಹೊಡೆದ ಘಟನೆ ಇನ್ನೂ ಹಸಿಹಸಿಯಾಗಿಯೇ ಇದ್ದ ಕಾರಣ ಅಜ್ಜ ಚರ್ಮ ಸುಲಿಯಲು ಹಿಂದೆ ಸರಿಯುವವರಲ್ಲ ಅನ್ನುವ ಸ್ಪಷ್ಟ ನಂಬಿಕೆ ನಮ್ಮದು. 

ಚೆನ್ನಪ್ಪ, ಸಂಕು, ವೆಂಕಪ್ಪ ಎಲ್ಲರನ್ನೂ ಅಣ್ಣ ಎಂದೇ ಕರೆಯುತ್ತಿದ್ದ ನಾವು ಈ ಬೇಬಿಯನ್ನು ಮಾತ್ರ ಅಣ್ಣ ಎಂದು ಕರೆಯಲು ಯಾಕೆ ತಕರಾರು ಮಾಡುತ್ತಿದ್ದೆವು? ತುಳುವನೋ, ಬ್ಯಾರಿಯೋ ಆಗಿಲ್ಲದ ಕಾರಣಕ್ಕಾ? 'ಘಟ್ಟದಾಯೆ' ಎಂದೋ? ಅದಾಗಲೇ ನಮ್ಮ ಮನಸ್ಸಿನಲ್ಲಿ ಮೇಲರಿಮೆಯ ಬೀಜ ಮೊಳಕೆಯೊಡೆದಿತ್ತೇ? ಅಥವಾ ಬೇಬಿ ಇಂಗ್ಲಿಷಿನವನಲ್ಲದೇ ಹೋದ 'ಹಳೆಯ' ಸಿಟ್ಟು ಇನ್ನೂ ನಮ್ಮ ಮನಸ್ಸಿನಲ್ಲಿ ಉಳಿದಿತ್ತೇ? ಕಾರಣವೇನೇ ಇದ್ದರೂ, ತೋರಿಕೆಗಾದರೂ ನಾನು ಅವರನ್ನು 'ಅಣ್ಣಾ' ಎಂದೇ ಕರೆಯಬೇಕಿತ್ತು.

ಅಜ್ಜನ ಆಣತಿಯಂತೆ ಆ ಭಾನುವಾರ ಬೇಬಿ ಅಧಿಕೃತವಾಗಿ ಬೇಬಿಯಣ್ಣ ಆದರು‌. ಆಮೇಲೆ ಅವರೊಂದಿಗಿನ ನಮ್ಮ ಬಾಂಧವ್ಯ ಸುಧಾರಿಸಿತು ಅಂದರೆ ತಪ್ಪಾಗುತ್ತದೆ. ಉಳಿದವರೊಂದಿಗೆ ಬೆರೆತಷ್ಟು ಸಹಜವಾಗಿ, ಸಲೀಸಾಗಿ ನಾವು ಅವರ ಜೊತೆ ಬೆರೆಯಲಾಗುತ್ತಲೇ ಇರಲಿಲ್ಲ. 

ಆದರೆ ನಮ್ಮ ಬಾಲ್ಯದ ಹುಚ್ಚಾಟಗಳಿಗೆ ಲೈಟಾಗಿ ಅವರು ನೀಡುತ್ತಿದ್ದ ಬೆಂಬಲ, ನಮ್ಮ ಅಧಿಕಪ್ರಸಂಗಿತನಗಳನ್ನು ಅಜ್ಜನವರೆಗೆ ತಲುಪಲು ಬಿಡದೇ ಇದ್ದದ್ದು... ಮುಂತಾದ ಸಂಗತಿಗಳಿಂದಾಗಿ ನಿಧಾನವಾಗಿ ಅವರು ನಮಗೆ ಹತ್ತಿರವಾಗತೊಡಗಿದರು. ಅಷ್ಟು ಹೊತ್ತಿಗಾಗುವಾಗ 'ಘಟ್ಟದಾಯೆ'ಯೂ ನಮ್ಮಂತಹ ಸಾದಾ ಮನುಷ್ಯ, ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ ಉಳಿದೆಲ್ಲರಿಗಿಂತಲೂ ಹೆಚ್ಚಿನ ಅಂತಃಕರಣ ಉಳ್ಳ ಮನುಷ್ಯ ಅನ್ನುವುದು ಅರ್ಥವಾಗಿತ್ತು. ಮತ್ತು ಅಷ್ಟು ಹೊತ್ತಿಗಾಗುವಾಗ ಎಲ್ಲರೂ ಅಚ್ಚರಿಪಡುವಷ್ಟು ತುಳು ಮತ್ತು ಬ್ಯಾರಿ ಭಾಷೆ ಕಲಿತಿದ್ದರು. ಅವರು ಎಷ್ಟು ನಿರರ್ಗಳವಾಗಿ ಮಾತನಾಡುತ್ತಿದ್ದರೆಂದರೆ, ಕರಾವಳಿಗರಲ್ಲ ಅಂತ ಅನ್ನಿಸುತ್ತಲೇ ಇರಲಿಲ್ಲ.

ಅಜ್ಜನಿಗಂತೂ ಆತ ನಂಬುಗೆಯ ಬಂಟ. ತೋಟಕ್ಕೆ ಗೊಬ್ಬರ ಹಾಕಿಸುವುದಾದರೂ, ತೆಂಗಿನಕಾಯಿ ಕೀಳಿಸುವುದಾದರೂ, ದನಗಳಿಗೆ ಹುಲ್ಲು ತರಬೇಕಾದರೂ ಬೇಬಿಯ ಸಲಹೆ ಅವರಿಗೆ ಬೇಕೇ ಬೇಕು. ಅಜ್ಜನ ಪ್ರೀತಿಯ ದನ 'ಕೆಂಪಿ' ಸತ್ತಾಗ ಬೇಬಿಯಣ್ಣ ಮೂರು ದಿನ ಊಟ ಬಿಟ್ಟಿದ್ದರು. ನಾಲ್ಕನೇ ದಿನ ತೀರಾ ನಿತ್ರಾಣಗೊಳ್ಳುತ್ತಾರೇನೋ ಅಂತ ಅಜ್ಜನೇ ಬಯ್ದು ಊಟ ಮಾಡಿಸಿದ್ದರು. "ಸೂತಕ ಕಳೆಯಿತಾ?" ಅಂತ ನೆರಮನೆಯವರು ಕಿಚಾಯಿಸಿದಾಗ "ಒಂದಿಡೀ ಬದುಕು ಸೂತಕ ಆಚರಿಸಿದರೂ ಕೆಂಪಿಯ ಸಾವಿನ ಸೂತಕ ಕಳೆಯುವಂಥದ್ದಲ್ಲಾ" ಎಂದು ವೇದಾಂತಿಯಂತೆ ಮಾತಾಡಿದ್ದರು. 

ನಾನ್-ವೆಜ್ ಪ್ರಿಯ ಬೇಬಿ, ಒಂದು ಶನಿವಾರ ಅಂಜುತ್ತಾ ಅಳುಕುತ್ತಾ ಅಜ್ಜನ ಹತ್ತಿರ ಒಂದು ಊರ ಕೋಳಿ ಬೇಕೆಂದು ಕೇಳಿದರು. ವಾರಕ್ಕೊಮ್ಮೆ ತಪ್ಪದೆ ಕೆಲಸದವರಿಗೆಲ್ಲರಿಗೂ ತುಪ್ಪದೂಟ ಕೋಳಿ ಕರಿ ನೀಡುತ್ತಿದ್ದರೂ ಬೇಬಿಯಣ್ಣನಿಗೆ ಯಾಕೆ  ಊರ ಕೋಳಿ ಬೇಕು ಅನ್ನುವ ಕುತೂಹಲ ನಮಗೆ. ಕೋಳಿ ಸಾಕಣಿಕೆ ಮಾಡುತ್ತಾರೇನೋ ಅಂತ ಅನ್ನಿಸಿ ಅವರನ್ನು ಕೇಳಿಯೇ ಬಿಟ್ಟೆ.

"ಸಂಜೆ ನಾಟಿ ಕೋಳಿ ಸಾರು, ರಾಗಿ ಮುದ್ದೆ ಮಾಡೋಕೆ ಇದೆ" ಅಂದರು. ನಮಗೆ ಮುದ್ದೆ ನೋಡಿಯೇ ಗೊತ್ತಿಲ್ಲ. ಸಾವಿರದ ಪ್ರಶ್ನೆಗಳನ್ನು ತಲೆಯಲ್ಲಿಟ್ಟುಕೊಂಡೇ ಶಾಲೆಗೆ ಹೋದೆವು. ಶಾಲೆಯಲ್ಲಿದ್ದ ಅಷ್ಟೂ ಹೊತ್ತು ನ ಬೇಬಿಯಣ್ಣ, ನಾಟಿ ಕೋಳಿ, ರಾಗಿ ಮುದ್ದೆಯ ಬಗ್ಗೆ ಯೋಚನೆ. ಒಮ್ಮೆ ಕೊನೆಯ ಬೆಲ್ ಹೊಡೆಯಬಾರದಾ ಅನ್ನಿಸುತ್ತಿತ್ತು. ಅಂತೂ ಶಾಲೆ ಬಿಟ್ಟು ಮನೆಗೆ ಬಂದು ಬ್ಯಾಗ್ ಎಸೆದು ನೇರ ಬೇಬಿಯಣ್ಣನನ್ನು ಕಾಣಲು ಹೊರಟರೆ ಅವರು ಮುದ್ದೆಯ ತಯಾರಿಯಲ್ಲಿದ್ದರು.

ಒಲೆಯಲ್ಲಿ ಕುದಿಯುತ್ತಿದ್ದ ಕೋಳಿ ಸಾರಿನ ಘಮ ಆ ಪರಿಸರಕ್ಕೆ ಒಂದು ವಿಶೇಷ ಮೆರುಗು ನೀಡಿತ್ತು. ಒಂದು ಸೌಟು ಕೊಟ್ಟರೆ ಈಗಲೇ ಸಾರು ಕುಡಿದು ಮುಗಿಸುತ್ತೇವೆ ಎನ್ನುವ ಉಮೇದು ಹುಟ್ಟಿಸುವಂತಹ ಪರಿಮಳವದು. ಕೋಳಿ ಕೊಯ್ದು, ಕ್ಲೀನ್ ಮಾಡಿಕೊಟ್ಟ ಅಪ್ಪ ಪಕ್ಕದಲ್ಲಿ ಕೂತಿದ್ದರು.‌ 

ಉರಿಯುತ್ತಿರುವ ಒಲೆ, ಕುದಿಯುತ್ತಿರುವ ಸಾರು, ತಯಾರುಗುತ್ತಿದ್ದ ಮುದ್ದೆ, ಕಮಾಂಡಿಂಗ್ ಪೊಸಿಸನ್ ನಲ್ಲಿ ಬೇಬಿಯಣ್ಣ, ಹತ್ತಿರ ಕೂತು ಸಹಾಯ ಮಾಡುತ್ತಿರುವ ಅಪ್ಪ, ದೂರ ನಿಂತು ಎಲ್ಲಾ ನೋಡುತ್ತಿರುವ ಅಜ್ಜ, ಆಗೊಮ್ಮೆ ಈಗೊಮ್ಮೆ ಇಣುಕಿ ಹೋಗುವ ಚೆನ್ನಕ್ಕ. ನಮಗೆ ಪ್ರಪಂಚದ ಪರಮಾದ್ಭುತವೊಂದು ನಮ್ಮೆದುರಲ್ಲಿ ಘಟಿಸುತ್ತಿರುವ ಅನುಭವ. ಮೋಡ ಸೀಳಿ ಬಂದ ಸಿಡಿಲೊಂದು ನಮ್ಮ ಸಂಭ್ರಮವನ್ನು ನೋಡಿ ಮತ್ತೆ ಮೋಡದೊಳಗೇ ಸೇರಿಕೊಂಡ ಭಾವ. 

ಎಲ್ಲಾ ತಯಾರಾದ ಮೇಲೆ ಮಕ್ಕಳೆಲ್ಲರನ್ನು ಹತ್ತಿರ ಕರೆದು ಕೂರಿಸಿ ಬಾಳೆ ಎಲೆ ಹಾಕಿ ಮುದ್ದೆ ಮತ್ತು ಸಾರು ಬಡಿಸಿದರು. ಆ ರುಚಿಯನ್ನು ಇವತ್ತು ಎಷ್ಟು ಪದಗಳನ್ನು ಎರವಲು ಪಡೆದುಕೊಂಡರೂ ವಿವರಿಸಲಾಗದು, ಯಾವ ಮಲ್ಟಿ ಸ್ಟಾರ್ ಹೋಟೆಲ್ ಗಳೂ ಒದಗಿಸದ ರುಚಿ ಅದು. ಹದವಾಗಿ ಬೆರೆತ ಖಾರ, ರುಚಿಗೆ ತಕ್ಕಷ್ಟು ಉಪ್ಪು, ಧಾರಾಳವಾಗಿ ಬೆರೆಸಿದ ಅಕ್ಕರೆ.... ಮನಸ್ಸಿಗೆ ತೃಪ್ತಿಯಾಗಲು ಮತ್ತೇನು ಬೇಕು? ಇಷ್ಟು ವರ್ಷ ಕಳೆದಾದಮೇಲೆ ಬಾಲ್ಕನಿಯ ಮೂಲೆಯಲ್ಲಿ ಕೂತು ಇದನ್ನು ಬರೆಯುವಾಗ ನನಗೆ ಪ್ರಪಂಚದಲ್ಲಿ ಜರುಗುವ ಯಾವ ಸಂಗತಿಯೂ ಆತ್ಯಂತಿಕವಲ್ಲ, ಪ್ರತಿಯೊಂದೂ ಒಂದಕ್ಕೊಂದು ಸಂಬಂಧಿಸಿದ್ದೇ ಆಗಿವೆ, ಯಾವುದೂ ಯಾವುದನ್ನೂ ಅಳಿಸುವುದಿಲ್ಲ, ಎಲ್ಲವೂ ರೂಪಾಂತರಗೊಳ್ಳುತ್ತಲೇ ಇರುತ್ತದೆ ಅನಿಸುತ್ತದೆ. ಆ ರೂಪಾಂತರ ಒಂದು ಭಾಗವೇ ಅಜ್ಜ, ಕೆಂಪಿ, ಬೇಬಿಯಣ್ಣ, ಅಪ್ಪ, ಚೆನ್ನಕ್ಕ, ನಾನು, ನೀವು...ಎಲ್ಲರೂ.