ಬುಧವಾರ, ಡಿಸೆಂಬರ್ 26, 2018

ಮಣಿಕಂಠನ ನಂಬಿದ್ದ ಫಕೀರಮ್ಮ.

ಹಿಂದೆಲ್ಲಾ ನಮ್ಮ ಕರಾವಳಿಯಲ್ಲಿ ಸಂಜೆಯಾಗುತ್ತಿದ್ದಂತೆ ಹಿತ್ತಲುಗಳಿಗೆ ವಿಶೇಷ ಕಳೆ ಬಂದುಬಿಡುತ್ತಿದ್ದವು. ಆಚೀಚೆ ಮನೆಗಳ ನಾಲ್ಕು ಮಹಿಳಾಮಣಿಗಳು, ಗದ್ದೆ ಕೆಲಸ ಮುಗಿಸಿ ಈಗಷ್ಟೇ ಮನೆಗೆ ಮರಳುತ್ತಿರುವ ಹೆಂಗಸರು, ಕ್ಷಣ ಮಾತ್ರದಲ್ಲಿ ಅಡಕೆ ಸುಲಿಯುವ, ತೆಂಗಿನ ಸಿಪ್ಪೆ ಬಿಡಿಸುವ ಪ್ರತಿಭಾವಂತರು ಕಾರಣವಿಲ್ಲದೆಯೇ ಯಾವುದಾದರೊಂದು ಮನೆಯ ಜಗಲಿ ಸೇರಿಬಿಡುತ್ತಿದ್ದರು. ಅಲ್ಲಿ ಇಡೀ ಊರಿನ ಚರ್ಚೆ ಗಹನವಾಗಿ ನಡೆಯುತ್ತಿದ್ದರೆ ಇತ್ತ ಅಂಗಳದಲ್ಲಿ ಆ ಎಲ್ಲಾ ಮಹಿಳೆಯರ ಮಕ್ಕಳು ಒಂದು ಮಿನಿ‌ ಒಲಿಂಪಿಕ್ ಗ್ರಾಮವನ್ನೇ ಸೃಷ್ಟಿಸಿಬಿಡುತ್ತಿದ್ದರು.

ಆಗ ಆಡುತ್ತಿದ್ದ ಆಟಗಳಾದರೂ ಎಂಥವು? ಚಿನ್ನಿದಾಂಡು, ಮರಕೋತಿ ಆಟ, ಮುಟ್ಟಾಟ, ಗೋಲಿಯಾಟ, ಅಪ್ಪಟ ಮಣ್ಣಿನ ಘಮದ ಕಬಡ್ಡಿ, ಆಗಷ್ಟೇ ಹಳ್ಳಿಯ ಮನದ ಅಂಗಳ ಪ್ರವೇಶಿಸಿದ್ದ ಕ್ರಿಕೆಟ್... ಹೀಗೆ ತರಹೇವಾರಿ ಆಟಗಳು ಪಟ್ಟಿಯಲ್ಲಿದ್ದರೂ ಮೊದಲ ಆದ್ಯತೆ ಮಾತ್ರ ಲಗೋರಿಗೇ.

ಪ್ರತಿ ಗುಂಪಿನಲ್ಲೂ ಇರುತ್ತಿದ್ದ ಒಬ್ಬ ಚಾಣಾಕ್ಷ ಆಟಗಾರ, ಅವನನ್ನು ತಮ್ಮ ತಂಡಕ್ಕೇ ಸೇರಿಸಿಕೊಳ್ಳಬೇಕು ಅಂತ ಮಾಡುವ ಕಸರತ್ತುಗಳು, ಅವನಿಗೆ ಒಡ್ಡುವ ಮಾವಿನಕಾಯಿ, ಪೇರಳೆ ಹಣ್ಣುಗಳ ಲಂಚ, ಅವನ ಗತ್ತು ಗೈರತ್ತುಗಳದೇ ಒಂದು ತೂಕವಾದರೆ, ಅವನದೇ ತಂಡದಲ್ಲಿದ್ದು ಅವನ ವಿರುದ್ಧವೇ ಸೈಲೆಂಟಾಗಿ ಕತ್ತಿ ಮಸೆಯುವ ಹಿತಶತ್ರು, ಅವನ ಸುಳ್ಳು, ಸಣ್ಣಪುಟ್ಟ ಮಸಲತ್ತುಗಳದೇ ಒಂದು ತೂಕ.

ಏಳು ಬಿಲ್ಲೆಗಳು, ಕಾಗದವನ್ನು ಉಂಡೆ ಮಾಡಿ, ಅದರ ಮೇಲೆ ಪ್ಲಾಸ್ಟಿಕ್ ಸುತ್ತಿ, ಬಾಳೆ ಎಲೆಯ ಹಗ್ಗದಿಂದ ಬಲವಾಗಿ ಕಟ್ಟಿ, ಅಂಗಳದ ಮಧ್ಯದಲ್ಲಿ ವೃತ್ತ ಎಳೆದು, ಅಲ್ಲಿ ಬಿಲ್ಲೆಗಳನ್ನಿಟ್ಟು, ಸರಿಯಾಗಿ ಹದಿನೈದು ಹೆಜ್ಜೆಗಳಷ್ಟು ದೂರದಲ್ಲಿ ಮತ್ತೊಂದು ಗೆರೆ ಎಳೆದರೆ ನಮ್ಮ ಲಗೋರಿ ಅಂಕಣ ಸಿದ್ಧವಾಗಿಬಿಡುತ್ತಿತ್ತು.

ಆಮೇಲೆ ಶುರುವಾಗುತ್ತಿತ್ತು ಶುದ್ಧ ಟಪೋರಿ ಆಟ ಲಗೋರಿ. ಪ್ರತಿ ಪಾಯಿಂಟ್‌ ಗೂ ಏರುತ್ತಿದ್ದ ಉತ್ಸಾಹ, ನಿನ್ನಿಂದಾಗಿಯೇ ಸೋತೆವು ಅನ್ನುವ ಎದುರು ಟೀಮಿನ ಆರೋಪ, ಪ್ರತ್ಯಾರೋಪ, ನಗು, ಕೇಕೆ, ಕಿರುಚಾಟಗಳ ಗೊಂದಲದಲ್ಲಿ ಹೊತ್ತು ಮುಳುಗಿದ್ದೇ ಗೊತ್ತಾಗುತ್ತಿರಲಿಲ್ಲ. ಅಮ್ಮಂದಿರು ಬಂದು ಕಿವಿಹಿಡಿದು ಎಳೆದೊಯ್ಯವಾಗಲೇ ಮರುದಿನದ ಶಾಲೆ, ಬಾರದ ಮಗ್ಗಿ, ತಲೆ ಹುಣ್ಣಾಗಿಸುವ ಲೆಕ್ಕ ನೆನಪಾಗುತ್ತಿದ್ದುದು.

ಮೊದಲೇ ಒಂದು ಬಿಲ್ಲೆ ಎಗರಿಸಿ ಕಿಸೆಯಲ್ಲಿಟ್ಟುಕೊಳ್ಳುವುದು, ಒಂದು ಹೆಜ್ಜೆ ಮುಂದೆ ನಿಂತು ಕೊಂಡು ಬಿಲ್ಲೆಗಳಿಗೆ ಬಾಲ್ ಎಸೆಯುವುದು, ಮೈಗೆ ಚೆಂಡು ತಾಗಿಯೇ ಇಲ್ಲ ಅಂತ ಸುಳ್ಳು ಹೇಳುವುದು ಹೀಗೆ ಮೋಸದಾಟಗಳೂ ಧಾರಾಳವಾಗಿಯೇ ನಡೆಯುತ್ತಿದ್ದವು. ಆದರೆ ಇಂತಹ ಸಣ್ಣ ಪುಟ್ಟ ಸಂಗತಿಗಳು ನಮ್ಮ ಆಟದ ಉತ್ಸಾಹವನ್ನು ಕಸಿಯುವಷ್ಟು ಪ್ರಭಾವಶಾಲಿಯಾಗಿರಲಿಲ್ಲ. ಮೇಲಾಗಿ ಹಲವು ದಾಯಾದಿ ಕಲಹಗಳನ್ನು ಲಗೋರಿ ಅಂಕಣ ರಾಜಿಯಲ್ಲಿ ಕೊನೆಗೊಳಿಸಿದ್ದೂ ಇವೆ. ಜಗಳ, ಹೊಡದಾಟ, ಕಿತ್ತಾಟ ಏನೇ ಆದ್ರೂ ಆಟ ನಿಲ್ಲುತ್ತಿರಲಿಲ್ಲ. ಒಂದು ಪಕ್ಷದವರು ಜಗಳದ ಮೂಡಲ್ಲಿದ್ದರೆ ಮತ್ತೊಂದು ಪಕ್ಷದವರು ಜಗಳ ಕೊನೆಗೊಳಿಸಿ ಆಟ ಮುಂದುವರೆಸುವ ಮೂಡಲ್ಲಿರುತ್ತಿದ್ದರು.‌ ಆದರೆ ಊರ ಹೊರಗೆ ಕುಂಬಾರ ಮಹಿಳೆ ಫಕೀರಮ್ಮ‌ನ ಸ್ವರ ಕೇಳುತ್ತಿದ್ದಂತೆ ನಮ್ಮ ಉತ್ಸಾಹಕ್ಕೂ ಆಟಕ್ಕೂ ತಾತ್ಕಾಲಿಕ ಬ್ರೇಕ್!  ಅಮ್ಮನ ಚಾಟಿಯೇಟಿಗೂ ಬಗ್ಗದ ನಮ್ಮ ಮೊಂಡುತನ ಫಕೀರಮ‌್ಮನ ಮುಂದೆ ಮಂಡಿಯೂರಿಬಿಡುತ್ತಿದ್ದುದಾದರೂ ಹೇಗೆ ಅನ್ನುವುದೇ ಒಂದು ದೊಡ್ಡ ಅಚ್ಚರಿ ನನಗೀಗ.

ಸುಭಗರು, ಶಿಷ್ಟರು, ಸಭ್ಯರು ಅಂತೆಲ್ಲಾ ವಿಶೇಷಣ ಭಾರಗಳನ್ನು ನಮ್ಮ ಹೆಗಲ ಮೇಲೆ ನಾವೇ ಹೊತ್ತಿಕೊಂಡಿರುವ ದಕ್ಷಿಣ ಕನ್ನಡದ ಮಹಿಳೆಯರ ನಡುವೆ, ಉತ್ತರ ಕರ್ನಾಟಕದ ಯಾವುದೋ ಹಳ್ಳಿಯ, ಮಂಡಿಯವರೆಗೆ ಸೀರೆ ಎತ್ತಿಕಟ್ಟುತ್ತಿದ್ದ ಫಕೀರಮ್ಮ ನಮಗೆಲ್ಲಾ ಆಪ್ತ ಅನ್ನಿಸಿಬಿಡುತ್ತಿದ್ದಳು. ಯಾಕೋ ಗೊತ್ತಿಲ್ಲ ಅವಳ ಹಾವ ಭಾವ, ಮಾತು, ಕೆಲ ಪದಗಳು ಎಲ್ಲಾ ನಮ್ಮನ್ನು ಒಂದು ವಿಚಿತ್ರ ಆಕರ್ಷಣೆಗೆ ದೂಡಿದ್ದವು. ಅಮ್ಮಂದಿರೆಲ್ಲಾ ನಮ್ಮನ್ನು ಆಕೆಯಿಂದ ದೂರವಿಡಲು ಪ್ರಯತ್ನಿಸುತ್ತಿದ್ದರೆ ನಾವು ಆಕೆಗೆ ಮತ್ತಷ್ಟು ಹತ್ತಿರವಾಗುತ್ತಿದ್ದೆವು. ಮಡಕೆ ಮಾರುತ್ತಾ ಮಾರುತ್ತಾ ಆಕೆ ಬಂದು ಜಗಲಿಯಲ್ಲಿ ಕುಳಿತುಕೊಂಡು ಮಡಕೆ ಕೊಂಡರೂ, ಕೊಳ್ಳದಿದ್ದರೂ ಒಂದಿಷ್ಟು ಊರಿನ ಕಥೆಗಳನ್ನು ಹೇಳುತ್ತಿದ್ದಳು. ಆಕೆ ಮಾತಾಡಲು ಪ್ರಾರಂಭಿಸುತ್ತಿದ್ದರೆ ನಾವೇಕೆ , ದೊಡ್ಡವರೇ ಬಾಯಿ ತೆರೆದುಕೊಂಡು ಕೂತು ಬಿಡುತ್ತಿದ್ದರು.ಅವಳ ಬತ್ತಳಿಕೆಯಲ್ಲಿನ ಕಥೆಗಳಾದರೂ ಹಾಗೆಯೇ ಇರುತ್ತಿದ್ದವು.

ಆಕೆ ಅಯ್ಯಪ್ಪನ ಪರಮಭಕ್ತೆ. ಎಷ್ಟೆಂದರೆ ಮಣಿಕಂಠನ ಹೆಸರಿನ ಹಚ್ಚೆಯನ್ನು ಕತ್ತಿನ ಕೆಳಗೆ ಹಾಕಿಸಿಕೊಳ್ಳುವಷ್ಟು. ಆಕೆ ಮಡಕೆ ಮಾರಲು ಬಂದಾಗೆಲ್ಲಾ ಕತ್ತಿನ ಸೆರಗು ಸರಿಸಿ, ಹಚ್ಚೆ ತೋರಿಸಿ ಈ ಅಯ್ಯಪ್ಪ ನನ್ನನ್ನು ಕಾಯುತ್ತಾನೆ ನೋಡ್ತಾ ಇರಿ ಎಂದು ನಗುತ್ತಿದ್ದರೆ ನಾವವಳ ಮುಖ ನೋಡುತ್ತಾ ಸುಮ್ಮನೆ ಕುಳಿತುಕೊಳ್ಳುತ್ತಿದ್ದೆವು.

ನಮಗಾಕೆ ನಾವೆಂದೂ ಕಾಣದ ಕಥೆಗಳ ಜಗತ್ತು ಮತ್ತು ನಮ್ಮ ನಡುವಿನ ಕೊಡಿಯಂತಿದ್ದಳು. ಆಕೆ ಕೆಂಪು ಸಿಮೆಂಟ್ ನೆಲದ ಮೇಲೆ ಮಡಕೆಗಳ ಕಟ್ಟನ್ನಿಟ್ಟು ತಾನೂ ಕುಳಿತು ಸೆರಗಿನಿಂದ ಗಾಳಿ ಬೀಸಲು ಪ್ರಾರಂಭಿಸಿದಳೆಂದರೆ ಅಲ್ಲೊಂದು ಕಥಾಜಗತ್ತು ತಾನೇ ತಾನಾಗಿ ಹರವಿಕೊಳ್ಳುತ್ತಿತ್ತು. ಮಳೆ ಇರದ ತನ್ನೂರು ಮತ್ತು ಸುಖಾ ಸುಮ್ಮನೆ ನೀರು ಪೋಲು ಮಾಡುವ ನಮ್ಮೂರು ಎರಡನ್ನೂ ಹೋಲಿಸಿ ಅದೇ ಸೆರಗಿನ ತುದಿಯಿಂದ ಕಣ್ಣು ಒರೆಸಿಕೊಳ್ಳುತ್ತಿದ್ದಳು.

ಅವಳೆದೆಯೊಳಗೆ ಯಾವ ನೋವಿತ್ತೋ ಗೊತ್ತಿಲ್ಲ. ಒಮ್ಮೊಮ್ಮೆ ತನ್ನೂರನ್ನು, ತಾನು ಮದುವೆಯಾಗಿ ಬರುವಾಗ ತನ್ನ ಅಯ್ಯ ವರದಕ್ಷಿಣೆಯಾಗಿ ಕೊಟ್ಟಿದ್ದ ಜಮೀನನ್ನು, ನೀರಿಲ್ಲದ ಕೆರೆಯನ್ನು ನೆನೆಸಿಕೊಂಡು ಭಾವುಕಳಾಗುತ್ತಿದ್ದುದೂ ಇತ್ತು.  ಆದರೆ ಅವೆಲ್ಲಾ ಕ್ಷಣಮಾತ್ರದ ಭಾವದೇರಿಳಿತಗಳಷ್ಟೇ. ನಿಜಕ್ಕೂ ಆಕೆ ಉಸುಕಿನ ದಿಣ್ಣೆಯ ಮೇಲೂ ಹೆಜ್ಜೆ ಗುರುತು ಮೂಡಿವಸುವಂತಹ ದಿಟ್ಟೆ. ಅಷ್ಟಿಲ್ಲದಿದ್ದರೆ ಎಲ್ಲಿಂದಲೋ ಬಂದು ಇಲ್ಲಿ ಬದುಕು ಕಟ್ಟಿಕೊಳ್ಳಲಾಗುತ್ತಿತ್ತೇ?

ಕೆಲವೊಮ್ಮೆ ಅವಳು ಶುದ್ಧ ತತ್ವಜ್ಞಾನಿಯಂತೆ ಮಾತಾಡುತ್ತಿದ್ದಳು. ಮಣಿಕಂಠನೂ ತಿಳಿಸಿಕೊಡದ ನನ್ನ ಯೋಗ್ಯತೆಯನ್ನು ಈ ಮಣ್ಣು ನನಗೆ ತಿಳಿಸಿಕೊಟ್ಟಿದೆ. ಹಾಗಾಗಿಯೇ ನೆಲದ ನೆಂಟನ್ನು ನಾನಿನ್ನೂ ಕಳೆದುಕೊಂಡಿಲ್ಲ ಅನ್ನುತ್ತಿದ್ದಳು. ನಮಗಾಗ ತತ್ವಜ್ಞಾನವೊಂದೂ ಅರ್ಥವಾಗುವ ವಯಸ್ಸಲ್ಲ. ಅವಳ ಕೈಯಲ್ಲಿ ಮಣ್ಣು ಮಡಕೆಯಾಗುವುದಕ್ಕಿಂತ ದೊಡ್ಡ ತತ್ವಜ್ಞಾನ ನಮಗೆ ಬೇಕಿರಲೂ ಇಲ್ಲ. ಬರ್ತ್ಡೇ ಕಪ್ ಗಳಿನ್ನೂ ಚಾಲ್ತಿಯಲ್ಲಿರದ ಆ ಕಾಲದಲ್ಲಿ ಆಕೆ ಮಡಕೆಯ ಮೇಲೆ ನಮ್ಮ ಕಣ್ಣುಮುಂದೆಯೇ ನಾಲ್ಕು ಬಣ್ಣದ ಗೆರೆ ಎಳೆದು ಕೊಟ್ಟುಬಿಟ್ಟರೆ ನಮ್ಮ ಪಾಲಿಗದೇ ಅಮೂಲ್ಯ ಕಲಾಕೃತಿ.

ಒಂದು ಸಂಜೆ ಬೆಳಕಿನ ನಡುವೆ, ಏದುಸಿರು ಬಿಡುತ್ತಾ ಕ್ಷಣಕ್ಕೊಮ್ಮೆ ಯಾರಿಗೋ ಬಯ್ಯುತ್ತಾ ಧುಮುಗುಟ್ಟುತ್ತಾ ಬಂದ ಫಕೀರಮ್ಮ ನೆಲ ಯಾವುದು ಮಣ್ಣು ಯಾವುದು ಎಂದೂ ಯೋಚಿಸದೆ ದೊಪ್ಪನೆ ಕುಳಿತು ತೀರದ ದಾಹದಿಂದ ಬಳಲುತ್ತಿರುವಂತೆ "ಅಮ್ಮಾ ನೀರು" ಎಂದಳು. ಆ ಸಂಜೆ ಅವಳು ಎಂದಿನಂತಿರಲಿಲ್ಲ. ಹಣೆಯ ನೆರಿಗೆ, ಮೂಗಿನ ಕೆಳಗೆ ಹರಿಯುತ್ತಿದ್ದ ಬೆವರು, ಸಣ್ಣಗೆ ಉಬ್ಬಿದ ಗಂಟಲು ಅವಳಿಗೆ ಹೊಸ ಅವತಾರವನ್ನು ಕೊಟ್ಟಿತ್ತು.

ಅಜ್ಜಿ ಒಳಗಿಂದ ಹೆಸರು ಬೇಳೆಯ ಪಾನಕ ತಂದುಕೊಟ್ಟರು. ಅವಳು ಅವರೊನ್ನಮ್ಮೆ ಕೃತಜ್ಞತೆಯಿಂದ ಆಪಾದಮಸ್ತಕ ದಿಟ್ಟಿಸಿ ಗಟಗಟನೆ ಕುಡಿದು ಲೋಟ ಕೆಳಗಿಟ್ಟಳು. ನಮಗೆಲ್ಲಾ ಸಣ್ಣ ಅಚ್ಚರಿ. ಅಜ್ಜಿ ಅವಳ ಪಕ್ಕ ಕೂತು ಏನಾಯ್ತು ಅಂತ ಕೇಳಿದ್ರು. ಆಕೆ ಯಾವ ಪೀಠಿಕೆಯೂ ಇಲ್ಲದೆ "ನಾಚಿಕೆ ಇಲ್ಲದ ಈ ಗಂಡು ಜಾತಿಗೇ ವಿಷ ಇಕ್ಕಿಬಿಡಬೇಕು, ಪ್ರಪಂಚದಲ್ಲಿ ಒಂದೇ ಒಂದು ಗಂಡಸೂ ಉಳಿಯಬಾರದು" ಅಂದಳು. ನಾವು ನಮ್ಮ ಗುಂಪಿನಲ್ಲಿದ್ದ ಅಷ್ಟೂ ಗಂಡು ಮಕ್ಕಳನ್ನು ಪಿಳಿ ಪಿಳಿ ಕಣ್ಣುಬಿಡುತ್ತಾ ನೋಡುತ್ತಿದ್ದರೆ, ಆಕೆ "ಏನ್ರೇ, ಅವರನ್ಯಾಕೆ ನೋಡ್ತಿದೀರಿ, ಗಂಡು ಜಾತೀನ ಒಂದು ಚಣಕ್ಕೂ ನಂಬಬೇಡ್ರವ್ವಾ" ಎಂದು ಮತ್ತೆ ಉರಿದು ಬಿದ್ದಳು.

"ನನಗೇನಾದ್ರೂ ಅಯ್ಯಪ್ಪ ವರ ಕೊಟ್ರೆ ಇಡೀ ಗಂಡು ಕುಲವನ್ನು ಸುಟ್ಟುಬಿಡುವ ವರ ಕೇಳುತ್ತೇನೆ" ಎಂದು ಮತ್ತೆ ಅಜ್ಜಿ ಮುಖ ನೋಡಿದಳು. ಮಟ್ಟುಗತ್ತಿಯ ಮೇಲೆ ಕುಳಿತು ಅಡಕೆ ಸುಲಿಯುತ್ತಿದ್ದ ಅಮ್ಮನೂ ಕತ್ತಿ ಪಕ್ಕಕ್ಕಿಟ್ಟು ಅವಳ ಪಕ್ಕ ಬಂದು ಕೂತರು. ಅಷ್ಟಾಗುವಾಗ ನಮಗೂ ಇದ್ಯಾವುದೋ ಗಹನ ವಿಚಾರವೇ ಇರಬೇಕು ಅನ್ನಿಸಿ ಹುಡುಗರಿಗೆಲ್ಲಾ ದೂರ ಹೋಗುವಂತೆ ಸನ್ನೆ ಮಾಡಿ ನಾವು ಚಕ್ಕಳಮಕ್ಕಳ ಹಾಕಿ ಅಲ್ಲೇ ಕುಳಿತುಕೊಂಡೆವು. ಇಷ್ಟು ಸಿಟ್ಟಾಗಲು ಕಾರಣವಾದರೂ ಏನಿರಬಹುದು ಅನ್ನುವ ಪ್ರಶ್ನೆಗೆ ಉತ್ತರ ಸಿಗುವುದರ ಮುಂದೆ ಉಳಿದೆಲ್ಲಾ ಸಂಗತಿಗಳು ಗೌಣವಾಗಿಬಿಟ್ಟವು.

ಆದದ್ದಿಷ್ಟೇ... ಫಕೀರಮ್ಮ ಮಡಕೆ ಎತ್ತಿಕೊಂಡು ಬರಬೇಕಾದರೆ ಪಕ್ಕದಲ್ಲೇ ನಡೆಯುತ್ತಿದ್ದ ಕಟ್ಟಡ ಕೆಲಸಗಾರ ನಡು ವಯಸ್ಕನೊಬ್ಬ ಆಗಷ್ಟೇ ಲಂಗ ದಾವಣಿ ತೊಡಲಾರಂಭಿಸಿದ್ದ ಬಾಯಿ ಬರದ, ಕಿವಿ ಕೇಳದ ಹುಡುಗಿಯ ಮೈ ಮೇಲೆ ಕೈ ಹಾಕಿದ್ದ. ಪ್ರತಿಭಟಿಸಬೇಕು ಅನ್ನುವುದೂ ಗೊತ್ತಾಗದ ಆ ಹುಡುಗಿ ಸುಮ್ಮನೆ ಕೊಸರಾಡುತ್ತಿದ್ದಳು. ದೂರದಿಂದಲೇ ಇದನ್ನು ನೋಡಿದ್ದ ಫಕೀರಮ್ಮನ ಹೊಟ್ಟೆಯೊಳಗೆ ಬೆಂಕಿ ಹತ್ತಿಕೊಂಡಿತ್ತು. ಆಚೀಚೆ ನೋಡದ ಆಕೆ ಸೀದಾ ಅವನ ಬಳಿ ಧಾವಿಸಿ ಅವಳನ್ನು ಪಕ್ಕಕ್ಕೆಳೆದು ಅವನ ಕೆನ್ನೆಗೆರಡು ಬಾರಿಸಿದ್ದಳು. ಅಷ್ಟಕ್ಕೇ ಸುಮ್ಮನಾಗದೇ ಅಲ್ಲಿದ್ದ ಅಷ್ಟೂ ಮಂದಿಯನ್ನು ಸೇರಿಸಿ ಉಗಿದು ಬಂದಿದ್ದಳು. ಅಷ್ಟಾಗಿಯೂ ಅವಳ ಕೋಪ ತಣ್ಣಗಾದಂತೆ ಕಾಣುತ್ತಿರಲಿಲ್ಲ. ಗಂಡು ಜಾತಿಯ ಅಹಂಕಾರವನ್ನು ಮರ್ಯಾದೆಯ ಹೆಸರಲ್ಲಿ ಮೌನವಾಗಿ ಸಹಿಸಿಕೊಂಡೇ ಬಂದಿರುವ ಬುದ್ಧಿವಂತರ ಜಿಲ್ಲೆಯ ಎಲ್ಲಾ ಹೆಂಗಸರಿಗೆ ಸಹಸ್ರ ನಾಮಾರ್ಚನೆ ಮಾಡುತ್ತಿದ್ದರೆ ಅಜ್ಜಿ, ಅಮ್ಮ ಎದ್ದು ಒಳನಡೆದು ಅಡುಗೆ ಮನೆ ಸೇರಿಕೊಂಡರು. ಅಮ್ಮ ಅಡಕೆ ಸುಲಿಯುತ್ತಿದ್ದ ಮಟ್ಟುಗತ್ತಿ ತನ್ನ ಗಂಟಲಿಗೆ ಅಡಕೆ ಸಿಕ್ಕಿಸಿಕೊಂಡು ಸುಲಿಯಲೂ ಆಗದೆ ಸುಲಿಯದಿರಲೂ ಆಗದೆ ಒದ್ದಾಡುತ್ತಿತ್ತು.

ಆಕೆ ನೆನಪಾದಂತೆಲ್ಲಾ  ಈಗಿನ #metoo ಅಭಿಯಾನಕ್ಕೆ ಫಕೀರಮ್ಮನಂತಹ ಗಟ್ಟಿ ಧ್ವನಿಯ, ಮರ್ಯಾದೆಗಳಂತಹ ಕಾಟಾಚಾರಗಳಿಗೆ ಬಲಿಯಾಗದ, ಅನ್ಯಾಯವನ್ನು ಖಂಡಿಸುವ ಛಾತಿ ಮತ್ತು ಪ್ರಾಮಾಣಿಕತೆ ಇದ್ದ ಸ್ವತಂತ್ರ ಮಹಿಳೆಯರು ದಶಕಗಳಷ್ಟು ಹಿಂದೆಯೇ ಬೀಜ ಬಿತ್ತಿದ್ದರೇನೋ ಅನಿಸುತ್ತದೆ. ಇಂಟರ್ನೆಟ್, ಸೋಶಿಯಲ್ ಮೀಡಿಯಾ, ತಮಗಾದ ಅನ್ಯಾಯವನ್ನು ಹೇಳಿಕೊಳ್ಳಲು  ಶಿಷ್ಟ ಭಾಷೆ ಮುಂತಾದ ಯಾವ ಸವಲತ್ತುಗಳೂ ಇಲ್ಲದೆ ಅನಾಚಾರಗಳನ್ನೂ, ದೌರ್ಜನ್ಯವನ್ನೂ ಭಿಡೆಯಿಲ್ಲದೆ ಖಂಡಿಸುತ್ತಿದ್ದರು, ವಿರೋಧಿಸುತ್ತಿದ್ದರು.

ಓಡುತ್ತಿದ್ದ ಕಾಲುಗಳು ನಡೆಯಲು ಪ್ರಾರಂಭಿಸಿದಂತೆ ಬದುಕು ನಿಧಾನವಾಗಲಾರಂಭಿಸಿತು. ನಿರ್ಮಲ ಸಂಜೆಗಳನ್ನು ಮತ್ತು ಅದರೊಡಲಿನ‌ ಚೇತೋಹಾರಿ ಆಟಗಳನ್ನು ಬದುಕಿನ ಕಾರ್ಯತತ್ಪರತೆಗಳು ಕಬಳಿಸಿದಂತೆ ಫಕೀರಮ್ಮ ಮತ್ತವಳ ಕಥೆಗಳೂ ಆಕರ್ಷಣೆ ಕಳೆದುಕೊಂಡವು. ಇತ್ತ  ಅಜ್ಜಿ ಕಾಲವಾದ ನಂತರ ಮಣ್ಣಿನ ಮಡಕೆಯ ಬಳಕೆ ಬಹಳಷ್ಟು ಕಡಿಮೆಯಾಯಿತು. ತಳ ಹಿಡಿಯದ, ಎಣ್ಣೆ ಬೇಕಿಲ್ಲದ ನಾನ್-ಸ್ಟಿಕ್ ಪಾತ್ರೆ ಬಂದ ಮೇಲಂತೂ ಮಣ್ಣಿನ ಪಾತ್ರೆಗಳನ್ನು ಕೇಳುವವರೇ ಇಲ್ಲ, ಜೊತೆಗೆ ಫಕೀರಮ್ಮನ ಅಸ್ತಿತ್ವವೂ ನಮ್ಮ ಜೀವನದಿಂದ ಮರೆಯಾಗಿಹೋಯಿತು. ಅಮ್ಮ ಈಗಲೂ ಕೆಲವೊಮ್ಮೆ  ಫಕೀರಮ್ಮ‌ನನ್ನೂ, ಮಣ್ಣಿನ ಹೂಜಿಯನ್ನೂ,  ಅದರ ಮೇಲಿನ ಕುಸುರಿಯನ್ನೂ, ತಣ್ಣನೆಯ ನೀರನ್ನೂ, ಅವಳ ಕಥೆಗಳನ್ನೂ ನೆನಪಿಸಿಕೊಳ್ಳುತ್ತಾರೆ, ಮಣ್ಣಿನ ಮಡಕೆಯಲ್ಲಿ ಮೀನು ಸಾರು ಮಾಡಿದರಷ್ಟೇ ರುಚಿ ಎಂದು ಗೊಣಗುತ್ತಿರುತ್ತಾರೆ ಅನ್ನುವುದು ಹೊರತುಪಡಿಸಿದರೆ ನಮ್ಮ ನೆನಪಿನ ಕೋಶದಲ್ಲಿ ಅವಳಿಲ್ಲವೇ ಇಲ್ಲ ಅನ್ನಬಹುದು.

ಆದರೆ ಈ ಬಾರಿ ಊರಿಗೆ ಹೋಗಿದ್ದಾಗ, ಮುಂಜಾವು ಮೆಲ್ಲ ಮೆಲ್ಲನೆ ಕಣ್ಣುಬಿಡುವ ಹೊತ್ತು ಹಂಡೆಯೊಲೆಯ ಮುಂದೆ ಕೂತು ಚಳಿ ಕಾಯಿಸುತ್ತಿದ್ದಾಗ ಪಕ್ಕದ ಮದರಸದಲ್ಲಿ  ಹಿಂದಿನ ದಿನದ ಪಾಠವನ್ನು ಮಕ್ಕಳು ರಾಗವಾಗಿ ಒಪ್ಪಿಸುತ್ತಿದ್ದುದು ಕೇಳಿ ಬರುತ್ತಿತ್ತು. ಪಕ್ಕನೆ ನೆನಪು ಬಾಲ್ಯಕ್ಕೋಡಿತು. ಆ ದಿನಗಳ ಸಂಜೆ, ಹರಟೆ, ಆಟ, ಹೆಂಚಿನ ಮನೆಗಳು, ಫಕೀರಮ್ಮ, ಆಕೆಯ ಮಡಕೆ ಎಲ್ಲಾ ನೆನಪಾದವು. ಒಮ್ಮೆ ಆಕೆಯನ್ನು ಕಾಣಬೇಕು, ಮಾತಾಡಬೇಕು ಅಂತ ತೀವ್ರವಾಗಿ ಅನಿಸತೊಡಗಿತು. ಅವಳನ್ನು ಮತ್ತೆ ಹುಡುಕಬೇಕು ಅಂದುಕೊಳ್ಳುತ್ತಲೇ ಇದ್ದೆ, ಆದರೆ ಆ ದಿನ ಬರಲೇ ಇಲ್ಲ. ನಾನು ಊರಿನಿಂದ ಮತ್ತೆ ಮರಳುವ ಗಳಿಗೆಯೂ ಬಂತು. ಫಕೀರಮ್ಮನ ಹುಡುಕಾಟವನ್ನು ಮುಂದಿನ ಸಲಕ್ಕೆ ಮುಂದೂಡಿ ಕಾರು ಹತ್ತಿ ಕುಳಿತುಕೊಂಡೆ. 

ಆದರೆ ಆಕೆ ನನಗೆ ಸಿಗಲೇಬೇಕು ಅನ್ನುವುದು ಮೊದಲೇ ನಿರ್ಧಾರವಾಗಿದ್ದರೆ ಯಾರಾದರೂ ತಡೆಯಲು  ಸಾಧ್ಯವೇ?  ಒಂದೆರಡು ಕಿ.ಮೀ ಬರುವಷ್ಟರಲ್ಲಿ ಕಾರು ಕೆಟ್ಟು ನಿಂತಿತು. ಹೊತ್ತು ಬೇರೆ ಮೀರಿತ್ತು. ಮೆಕ್ಯಾನಿಕ್ ಅನ್ನು ಕರೆದುಕೊಂಡು ಬರುವಷ್ಟರಲ್ಲಿ ನನ್ನ ತಾಳ್ಮೆ ಸಂಪೂರ್ಣ ಒಡೆದುಹೋಗಿತ್ತು. ಒಳಗಿನ್ನು ಕೂತಿರಲಾರೆ ಅನ್ನಿಸಿ ಕೆಳಗಿಳಿದು ಅಲ್ಲೇ ಇದ್ದ ಮೈಲಿಗಲ್ಲೊಂದರ ಮೇಲೆ ಕುಳಿತುಕೊಂಡ.

ಮುಸ್ಸಂಜೆಯ ತಂಪುಗಾಳಿ ಕದಪುಗಳನ್ನು ಸವರುತ್ತಿದ್ದಂತೆ ಹಿತವಾದ ಅನುಭಾವವೊಂದು ಕಚಗುಳಿ ಇಡಲಾರಂಭಿಸಿತು. ಆ ಗಾಳಿಯಲ್ಲಿ, ಶೀತಲತೆಯಲ್ಲಿ ಕಳೆದುಹೋಗುವ ಮುನ್ನ ಒಂದು ನಿಡಿದಾದ ಉಸಿರುಬಿಟ್ಟು ಕಣ್ಣು ಮುಚ್ಚಬೇಕು ಅನ್ನುವಷ್ಟರಲ್ಲಿ ಅಸ್ಪಷ್ಟ ಆಕೃತಿ, ಪರಿಚಿತ ನಡಿಗೆಯೊಂದು ನಮ್ಮೆಡೆಗೆ ಬರುವುದು ಕಾಣಿಸಿತು. ಕಣ್ಣುಜ್ಜಿ ಮತ್ತೆ ನೋಡಿದೆ, ಕಾಲ ಒಂದು ಕ್ಷಣದ ಮಟ್ಟಿಗೆ ಸ್ತಂಭಿಸಿತು.

ಮರುಕ್ಷಣ ನಾನು ಆಕೆಯ ಪಕ್ಕದಲ್ಲಿದ್ದೆ. ಯಾವ ಫಕೀರಮ್ಮನನ್ನು ಹುಡುಕಲು ಕಾಲವನ್ನು ಮುಂದೂಡಿದ್ದೆನೋ ಅದೇ ಫಕೀರಮ್ಮ ಕಾಲವನ್ನು ಹಿಂದಿಕ್ಕಿ ನನ್ನ ಮುಂದೆ ನಿಂತಿದ್ದಳು. ಹೆಗಲಲ್ಲಿ ಮಡಕೆ ಇರಲಿಲ್ಲ ಅನ್ನುವುದು ಬಿಟ್ಟರೆ ಆಕೆ ಹಿಂದಿನಂತೆಯೇ ಇದ್ದಳು. ಕಂಡೂ ಕಾಣದಂತೆ ನೆರಿಗಟ್ಟಿದ ಮುಖ ಅವಳಿಗೆ ವಯಸ್ಸಾಗಿದೆ ಎಂದು ಸೂಚಿಸುತ್ತಿದ್ದರೂ ಅವಳೇನು ತೀರಾ ಇಳಿದು ಹೋಗಿರಲಿಲ್ಲ. ನಾನು ಪರಿಚಯ ಹೇಳಿ ಹಳೆಯ ಆತ್ಮೀಯತೆಯಿಂದ ಮಾತಿಗಿಳಿಯಲು ಯತ್ನಿಸಿದೆ. 

ಮೊದ-ಮೊದಲು ಆಕೆಗೆ ನಾನ್ಯಾರೆಂದು ತಿಳಿಯಲೇ ಇಲ್ಲ. ಅಜ್ಜಿ, ಅಮ್ಮ, ತೋಡು ಎಲ್ಲಾ ನೆನಪಿಸಿದಂತೆ ಅವಳಿಗೂ ನನ್ನ ನೆನಪಾಯಿತೇನೋ? ಅಮ್ಮನನ್ನೂ, ಅಜ್ಜಿಯನ್ನೂ ಪದೇ ಪದೇ ಕೇಳಿದಳು.‌ ಅವಳಿಲ್ಲ ಎಂದಾಗ ಮಾತ್ರ ಒಮ್ಮೆ ಬೆಚ್ಚಿದಂತೆ ಕಂಡುಬಂದಳು. ಅವಳ ಕತ್ತಿನ ಸೆರಗು ಸರಿಸಿ ಹಚ್ಚೆಯನ್ನು ನೋಡಬೇಕು ಅಂತ ಅನ್ನಿಸುತ್ತಿದ್ದರೂ ಯಾವುದೋ ಮುಜುಗರವೊಂದು ಅಡ್ಡ ಬಂದು ಕೇಳಲಾಗದೆ ಸುಮ್ಮನಿದ್ದೆ. 

ಆದರೆ ಆಕೆ ಮಾತಾಡುತ್ತಲೇ ಇದ್ದಳು. ಇಷ್ಟು ವರ್ಷಗಳ ಅಂತರ ಅವಳಲ್ಲಿ ಯಾವ ಬದಲಾವಣೆಯನ್ನೂ ಹುಟ್ಟುಹಾಕಿರಲಿಲ್ಲ. ನಾನು ಮಾತ್ರ ಇಷ್ಟು ಬೇಗ ಮಾತೆಲ್ಲಾ ಖಾಲಿಯಾದಂತೆ ಅವಳ ಮಾತಿಗೆ ಬರಿದೇ ಹೂಂಗುಟ್ಟುತ್ತಿದ್ದೆ. ನಡು ನಡುವೆ ಈಕೆ ಇಷ್ಟು ಜೀವನ್ಮುಖಿಯಾಗಿರಲು ಯಾವ ಅಂಶ ಕಾರಣವಾಗಿರಬಹುದು ಎಂದು ಅಚ್ಚರಿಯಿಂದ ಅವಳ ಮುಖ ನೋಡುತ್ತಿದ್ದೆ.

ಈ ನಡುವೆ ಯಾಕೋ ಗೊತ್ತಿಲ್ಲ, ಅವಳ ಊರು, ಜಮೀನು, ಕೆರೆ ನೆನಪಾದವು. ಊರಿಗೆ ಹೋಗಿಲ್ವಾ ಅಂತ ಕೇಳಿದೆ. ಆಕೆ ನನಗೀಗ ಇದೇ ನನ್ನೂರು,  ಅಲ್ಲಿ ಸಿಕ್ಕ ಬೆಲೆಗೆ ಎಲ್ಲಾ ಮಾರಿ ಇಲ್ಲೇ ಬಂದು ಇದ್ದೇನೆ ಈಗ ಅಂದಳು. ನನಗೋ ಎಲ್ಲಾ ಅಯೋಮಯ. ತನ್ನ ಅಪ್ಪ ಕೊಟ್ಟಿದ್ದ, ಅಷ್ಟೊಂದು ಪ್ರೀತಿಸುತ್ತಿದ್ದ ಜಮೀನನ್ನು ಆಕೆ ಮಾರುವಂತದ್ದು ಏನಾಯಿತು ಅಂತ ಅನಿಸಿತು. ಹಿಂದಿನಂತೆಯೇ ಮತ್ತೆ ಕೇಳಲಾಗದೆ ಸುಮ್ಮನಾದೆ. ಆದರೆ ಆಕೆಯೇ "ಇಲ್ಲಿನ ಬದುಕು ಸಾಕು ಅನ್ನಿಸಿ ಮತ್ತೆ ನಮ್ಮೂರಿಗೇ ಹೋಗಿದ್ದೆ. ಜಮೀನು, ಕಂಬಾರಿಕೆ ಅಂತ ಖುಶಿಯಾಗಿಯೇ ಇದ್ದೆ. ಆದರೆ ಇದ್ದೊಬ್ಬ ಮಗ ಯಾವಾಗ ಕುಡಿತ ಕಲಿತನೋ ಗೊತ್ತಿಲ್ಲ, ದಿನಪೂರ್ತಿ ಹಟ್ಟಿಯಲ್ಲಿ ಕುಡಿದು ಬಿದ್ದುಕೊಳ್ಳುತ್ತಿದ್ದ. ನೋಡುವಷ್ಟು ನೋಡಿ ಒಂದು ದಿನ ಕುಡಿದರೆ ಊಟ ಹಾಕಲಾರೆ ಎಂದು ಮಡಕೆ ಮಾರಲು ಹೋದೆ. ಕುಡಿದ ಅಮಲಿನಲ್ಲಿದ್ದನೋ ಅಥವಾ ನಿಜಕ್ಕೂ ಅವನಿಗೆ ಬದುಕು ಸಾಕೆನ್ನಿಸಿತ್ತೋ ಗೊತ್ತಿಲ್ಲ, ಸಂಜೆ ಬರುವಷ್ಟರಲ್ಲಿ ಅವನ ಹೆಣ ಮರದಲ್ಲಿ ನೇತಾಡುತ್ತಿತ್ತು. ಎಷ್ಟು ಅತ್ತರೂ ಕರೆದರೂ ಮಗ ಮರಳಿ ಬಾರನು ಎನ್ನುವ ಸತ್ಯ ತಿಳಿಯುತ್ತಿದ್ದಂತೆ ಎಲ್ಲಾ ಮಾರಿ ಆ ಊರಿನ ಋಣ ಹರಿದುಕೊಂಡು ಇಲ್ಲಿಗೇ ಮತ್ತೆ ಬಂದೆ.  ಈ ಬದುಕಿನ ಋಣ ಇರುವಷ್ಟು ದಿನ ಇಲ್ಲೇ ಇರುತ್ತೇನೆ" ಅಂದಳು. ಎಲ್ಲಾ ಮುಗಿದ ಮೇಲೂ ಯಾವುದೋ ಉಳಿದಿದೆ ಎಂಬಂತೆ ಬದುಕುವ ಫಕೀರಮ್ಮನಂಥವರು ಮತ್ತು ಸಣ್ಣ ಪುಟ್ಟ ವಿಚಾರಗಳಿಗೆಲ್ಲಾ ಮನಸು ಕೆಡಿಸಿಕೊಂಡು ಬದುಕು ಇಷ್ಟೇ ಅಂತ ನಿರ್ಧರಿಸಿಬಿಡುವ ನಮ್ಮಂಥವರು, ಮಧ್ಯೆ ಸಂಜೆಯ ಕುಳಿರ್ಗಾಳಿ... ಒಂದು ಕೇಂದ್ರದಿಂದ ಆರಂಭವಾದ ಬದುಕು ನಿಶ್ಚಿತ ಪರಿಧಿಯಲ್ಲೇ ಸಾಗಿ ಒಂದು ಸುತ್ತು ಬಂದಿತೇನೋ ಅಂತ ಅನಿಸಿತು. ಸುಮ್ಮನೆ ಅವಳ ಕತ್ತಿನ ಸೆರಗು ಸರಿಸಿದೆ, ಮಣಿಕಂಠ ಎಂದಿನಂತಿರದೆ ನಗುತ್ತಿದ್ದ, ಫಕೀರಮ್ಮನ ಮುಖ ನೋಡಿದೆ ಅವನಿಗಿಂತಲೂ ಚೆಂದ ಅವಳು ನಗುತ್ತಿದ್ದಳು.

ಮಂಗಳವಾರ, ಡಿಸೆಂಬರ್ 25, 2018

ಆಕೆ ನನ್ನ ರತ್ನಕ್ಕ ಆಗಿರಲಿಲ್ಲ.

"ರತ್ನಕ್ಕ..."
ಹಾಗಂತ ಆಕೆಯನ್ನು ಯಾರು ಮೊದಲು ಕರೆದಿದ್ದರೋ ಗೊತ್ತಿಲ್ಲ. ಆಕೆಯಂತೂ ಅಪ್ಪಟ ರತ್ನ; ಅಕ್ಕರೆಯ ಅಕ್ಕ. ತಿಳಿ ಹಸಿರು ಬಣ್ಣದ ಸೀರೆ, ಅದಕ್ಕೊಪ್ಪುವ ಅರ್ಧ ತೋಳಿನ ರವಿಕೆ, ಮಧ್ಯಕ್ಕೆ ತೆಗೆದ ಬೈತಲೆ, ಹುಬ್ಬುಗಳ ಮಧ್ಯೆ ಒಂದು ಸಣ್ಣ ಬೊಟ್ಟು.... ಇಷ್ಟಾದರೆ ಅವಳ ಅಲಂಕಾರ ಮುಗಿಯುತ್ತಿತ್ತು. ಅವಳ ನಿಜವಾದ ಹೆಸರೇನು? ಎಲ್ಲಿಯವಳು? ಸಂಸಾರ-ಮಕ್ಕಳಿವೆಯಾ? ವಿವರಗಳು ಯಾರಿಗೂ ಲಭ್ಯವಿರಲಿಲ್ಲ.

ವಾರಕ್ಕೆ ಮೂರು ದಿನವಷ್ಟೇ ಕಾಣಬರುತ್ತಿದ್ದ ಆಕೆ ಹಿತ್ತಲಲ್ಲಿ ನಿಂತು " ಅಕ್ಕಾ ಕಾಫಿ..." ಅನ್ನುತ್ತಿದ್ದರೆ ಅರಿಯದ ಸಂಭ್ರಮವೊಂದು ಅವಳೊಂದಿಗೆ ಮನೆಯೊಳಗೆ ಪ್ರವೇಶಿಸುತ್ತಿತ್ತು. ಕುಳಿತೇ ಅಡುಗೆ ಮಾಡಬೇಕಿದ್ದ ಒಲೆ, ಅದರ ಹತ್ತಿರವೇ ಇರುತ್ತಿದ್ದ ಸಣ್ಣ ಮಣೆಯಲ್ಲಿ ಕೂತು ಅಮ್ಮ ಅಡುಗೆ ಮಾಡುತ್ತಿದ್ದರೆ ಪಕ್ಕದಲ್ಲಿ ಮತ್ತೊಂದು ಮಣೆಯೆಳೆದು ಮಾತಿಗೆ ಕೂರುತ್ತಿದ್ದ ರತ್ನಕ್ಕಳೆಂದರೆ ನನಗೆ ಬಾಲಮಂಗಳದ 'ಲಂಬೋದರ' ಕಥೆಯ ವೈದ್ಯರಿಗಿತಲೂ ಒಂದು ತೂಕ ಜಾಸ್ತಿಯೇ ಕುತೂಹಲ.

ಸದಾ ತುರುಬು ಕಟ್ಟಿಯೇ ಇರುವ ರತ್ನಕ್ಕನ ಕೂದಲು ಎಷ್ಟುದ್ದ ಇರ್ಬಹುದು ಅನ್ನುವುದು ಮೊದಲ ಕುತೂಹಲವಾಗಿದ್ದರೆ,  ನನಗೆ ಮಲ್ಲಿಗೆ ಹೆಣೆದು ತರುವ ಈಕೆ ಯಾಕೆ ಹೂವು ಮುಡಿಯುವುದೇ ಇಲ್ಲ ಅನ್ನುವುದು ಎರಡನೆಯ ಪ್ರಶ್ನೆ. ದಿನಕ್ಕೆ ಎರಡು ಮೂರಾದರೂ ಕಥೆ ಹೇಳುತ್ತಿದ್ದ ಆಕೆಗೆ ಅಷ್ಟೊಂದು ಕಥೆಗಳು ಹೇಗೆ ಗೊತ್ತು ಅನ್ನುವುದು ನನಗೆ ಆಗ ಒಂದು ದೊಡ್ಡ ಬೆರಗು.  'ನಿನ್ನ ಮಗು ಎಲ್ಲಿ? ಆಟ ಆಡೋಕೆ ಕರ್ಕೊಂಡು ಬಾ' ಅಂದ್ರೆ 'ನೀನೇ ನನ್ನ ಮಗು' ಅಂತ ಬರಸೆಳೆದು ತಾಂಬೂಲ ಜಗಿದ ಬಾಯಲ್ಲೇ ನನ್ನ ಕೆನ್ನೆಗೊಂದು ಮುತ್ತಿಟ್ಟಾಗ ಮಾತ್ರ ಈ ರತ್ನಕ್ಕ ಕೊಳಕು ಅಂತ ನನಗೆ ಅನಿಸುತ್ತಿತ್ತು. ಅದನ್ನೇ ಒಂದೆರಡು ಬಾರಿ ಅಮ್ಮನಿಗೂ ಹೇಳಿ ಅವರಿಂದ ಬೈಸಿಕೊಂಡಿದ್ದೆ.

ಮಾತಿಗೆ ಕೂತರೆ  ರತ್ನಕ್ಕ ಮಹಾ ವಾಚಾಳಿ. ನನ್ನನ್ನು ಹೊರತುಪಡಿಸಿ ಮತ್ತೊಂದು ಹೆಣ್ಣು ಜೀವವಿಲ್ಲದ ಮನೆಯಲ್ಲಿ ಅಮ್ಮನಿಗೆ ಆಕೆಯೇ ಅಂತರಂಗದ ಸಖಿ. ಅಬ್ಬುಕಾಕ ಕೊಟ್ಟ ಕೊಳೆತ ಮೀನಿನ ಕಥೆ, ರಾತ್ರಿ ಊಟ ಮಾಡದೆ ಬಿಸ್ಕೆಟ್ ತಿಂದು ಮಲಗಿದ ನನ್ನ ಹಠ, ಅಪ್ಪ ಮನೆಗೆ ರಾತ್ರಿ ಲೇಟಾಗಿ ಬಂದದ್ದು, ಮುಂದಿನ ವಾರ ಊರಿಗೆ ಬರಲಿರುವ ಮಾವನಿಗೆ ಮಾಡಿಟ್ಟರಬೇಕಾದ ತಿಂಡಿಯ ಪಟ್ಟಿ, ಅಜ್ಜನ ಮಾತ್ರೆ, ಯಾರೋ ಕದ್ದುಕೊಂಡು ಹೋಗಿರುವ ಅಮ್ಮನ ಪ್ರೀತಿಯ ಹೇಂಟೆ, ತೋಟದ ಕೆಲಸಕ್ಕೆ ಹೇಳದೇ ಕೇಳದೇ ರಜೆ ಮಾಡಿದ ತಿಮ್ಮಣ್ಣ, ಕಾಲಿಗೆ ಮುಳ್ಳು ಚುಚ್ಚಿಸಿಕೊಂಡು ಬಂದು ಪಡಬಾರದ ಪಾಡು ಪಟ್ಟ ಮನೆಯ ದನ... ಹೀಗೆ ವಾರದ ಕಥೆಯನ್ನು ಅವಳ ಮುಂದೆ ಹೇಳಿಕೊಂಡರೆ ಅಮ್ಮನಿಗೆ ನಿರಾಳ.

ಅವಳಾದರೂ ಅಷ್ಟೆ, ಅಮ್ಮ ಮಾತಾಡುತ್ತಿದ್ದರೆ ಬರಿಯ ಹೂಂಗಟ್ಟದೆ, ಅಬ್ಬುಕಾಕ ತನಗೂ ಕೊಳೆತ ಮೀನು ಕೊಟ್ಟ ಬಗ್ಗೇನೋ, ಕೋಳಿ ಕಳ್ಳರ ಬಗ್ಗೆಯೋ, ಮುಳ್ಳು ಚುಚ್ಚಿಸಿಕೊಂಡ ದನಕ್ಕೆ ಮಾಡಬಹುದಾದ ಹಳ್ಳಿ ಮದ್ದು... ಹೀಗೆ ಅಮ್ಮನ ಮಾತಿಗೆ ಜೊತೆಯಾಗುತ್ತಿದ್ದಳು. ನಡು-ನಡುವೆ ನಾನು ಅದು-ಇದು ಅಂತ ಹೋದ್ರೆ ನನ್ನನ್ನು ಮಡಿಲಲ್ಲಿ ಕೂರಿಸಿ ಮುದ್ದುಗರೆಯುತ್ತಿದ್ದಳು.

ಸದಾ ನಗುವ ಆಕೆ ಒಮ್ಮೊಮ್ಮೆ ಮಾತ್ರ ಮುಖ ಗಂಟಿಕ್ಕಿಕೊಂಡೇ ಮನೆಯೊಳಗೆ ಬರುತ್ತಿದ್ದಳು.ಆಗೆಲ್ಲಾ ಅಮ್ಮನಿಗೆ ಅವಳ ನೋವು ಮೊದಲೇ ಗೊತ್ತಿತ್ತೇನೋ ಎಂಬಂತೆ ತಾನೇ ಮಣೆ ಎಳೆದು ಅವಳನ್ನು ಕೂರಿಸಿ ಕಾಫಿ, ನೀರು ದೋಸೆ, ಮೀನಿನ ಸಾರು ಕೊಟ್ಟು ತಿನ್ನು ಎಂದು ಅಕ್ಕರೆಯಿಂದ ಬೆನ್ನು ನೀವುತ್ತಿದ್ದಳು. ಮಾತಿನ ಮಲ್ಲಿ ರತ್ನಕ್ಕ ಮೌನವಾದರೆ ಅಮ್ಮನ ಕರುಳೂ ಚುರುಕ್ಕನ್ನುತ್ತಿತ್ತೇನೋ? ಅವಳೇ ಮಾತು ಶುರು ಹಚ್ಚಿಕೊಳ್ಳಲಿ ಎಂದು ಸುಮ್ಮನಾಗಿಬಿಡುತ್ತಿದ್ದರು.

ಹಾಗೆ ಅವಳು ನಾಸ್ಟಾ ಮಾಡಿ ಬಟ್ಟಲು ತೊಳೆದಿಟ್ಟು ಬರುವಷ್ಟರಲ್ಲಿ ಅಮ್ಮನ ಮಧ್ಯಾಹ್ನದ ಅಡುಗೆ ತಯಾರಿ ಶುರುವಾಗಿಬಿಡುತ್ತಿತ್ತು. ಒಮ್ಮೆ ಅತ್ತಿತ್ತ ನೋಡಿ, ಯಾರೂ ಇಲ್ಲ ಅನ್ನುವುದನ್ನು ಖಾತ್ರಿ ಪಡಿಸಿ, ನನ್ನನ್ನು ಆಟ ಆಡಿಕೋ ಎಂದು ದೂರ ಕಳುಹಿಸಿ ಇಬ್ಬರೂ ಮಾತಿಗೆ ಕೂರುತ್ತಿದ್ದರು. ನಡು ನಡುವೆ ರತ್ನಕ್ಕ ಬಿಕ್ಕುತ್ತಿದ್ದರೆ ಅಮ್ಮನ ಕಣ್ಣಲ್ಲೂ ತೆಳು ನೀರು. ಅಲ್ಲವಳ ಖಾಸಗಿ ಬದುಕಿನ ಖಾಸ್ ಬಾತ್ ಬಿಚ್ಚಿಕೊಳ್ಳುತ್ತಿದ್ದರೆ ಅಮ್ಮನ ಮನದಲ್ಲೂ ಕಡಲೊಂದು ಸುಮ್ಮನೆ ಹೊಯ್ದಾಡುತ್ತಿತ್ತೇನೋ? ಆಗ ಇವೆಲ್ಲಾ ಅರ್ಥ ಆಗುತ್ತಿರಲಿಲ್ಲ. ಒಲೆಯಲ್ಲಿ ಆರಿಹೋಗಿರುವ ಬೆಂಕಿಯನ್ನು ಮತ್ತೆ ಹೊತ್ತಿಸಲೆಂದು ಊದುಗೊಳವೆಯಲ್ಲಿ ಗಾಳಿ ಹಾಕಿದ್ದಕ್ಕೇ ಅಮ್ಮನ ಕಣ್ಣುಗಳು ಕೆಂಪುಂಡೆಗಳಾಗಿವೆ ಅಂತ ಅಂದುಕೊಳ್ಳುತ್ತಿದ್ದೆ. ''ನಾನು ಊದ್ಲಾ ಅಮ್ಮಾ'' ಅಂತ ಕೇಳಿದ್ರೆ, ಅವರಿಗಿಂತ ಮೊದಲು ರತ್ನಕ್ಕನೇ "ನಿನಗಿವೆಲ್ಲಾ ಬೇಡ" ಎಂದು ದೂರ ಕಳುಹಿಸಿಬಿಡುತ್ತಿದ್ದಳು. ಈಗ ಒಮ್ಮೊಮ್ಮೆ "ಏನಿತ್ತು ಅಂತಹಾ ಗುಟ್ಟು?" ಅಂತ ಅಮ್ಮನನ್ನು ಕೇಳಬೇಕು ಅನಿಸಿದರೂ ಕೇಳಲಾಗದೆ ಸುಮ್ಮನಾಗುತ್ತೇನೆ.

ಹೀಗಿರುವಾಗಲೇ ಒಂದು ದಿನ ರತ್ನಕ್ಕ ಎಂದಿಗಿಂತ ಬೇಗ ಮನೆಯ ದಾರಿ ಹಿಡಿದಿದ್ದಳು. ನಾನು ಅಜ್ಜನ ಕೈ ಹಿಡಿದುಕೊಂಡು ಅಂಗಳದಲ್ಲಿ ಅಡ್ಡಾಡುತ್ತಿರಬೇಕಾದರೆ ಆಕೆ ಓಡೋಡಿ ಬರುತ್ತಿದ್ದುದು ಕಾಣಿಸುತ್ತಿತ್ತು. ನನಗೋ ಅವಳಿಂದ ಕಥೆ ಹೇಳಿಸುವ ಉಮೇದು. ಅವಳು ನನ್ನ ಇರುವಿಕೆಯನ್ನು ಗಮನಿಸಲೇ ಇಲ್ಲವೇನೋ ಎಂಬಂತೆ ಅಮ್ಮನ ಹತ್ತಿರ ಹೋಗಿ ಪಿಸ ಪಿಸ ಮಾತಾಡತೊಡಗಿದಳು. ಹಣೆಯಲ್ಲಿ ಎಂದೂ ಕಾಣದ ಕುಂಕುಮ ಆವತ್ತು ಕಾಣಿಸಿತ್ತು. ಅಮ್ಮ ಏನೂ ಮಾತಾಡುತ್ತಲೇ ಇರಲಿಲ್ಲ. ನನಗೋ ಎಲ್ಲವೂ ಆಯೋಮಯ. ಸ್ವಲ್ಪ ಹೊತ್ತಾದ ಮೇಲೆ ಪೇಟೆಗೆ ಹೋದ ಅಪ್ಪ ವಾಪಾಸ್ ಬಂದ್ರು. ಅಜ್ಜನೂ ಈಸಿಛೇರಿನಲ್ಲಿ ಕೂತು ಏನನ್ನೋ ಓದುತ್ತಿದ್ದರು. ಅಮ್ಮ ಯಾವ ಪೀಠಿಕೆಯೂ ಇಲ್ಲದೆ ಒಂದು ನಿರ್ಧಾರದ ಧ್ವನಿಯಲ್ಲಿ "ರತ್ನಕ್ಕ ಇನ್ಮುಂದೆ ಇಲ್ಲೇ ಇರುತ್ತಾಳೆ. ತೋಟದಲ್ಲಿರುವ ಹಳೆ ಮನೆಯಲ್ಲಿ ಬದುಕು ಕಟ್ಟಿಕೊಳ್ಳಲಿ" ಅಂದರು. ಅಪ್ಪ "ಒಂಟಿ ಹೆಂಗಸನ್ನು ಹೇಗೆ ತೋಟದಲ್ಲಿ ಇರಿಸುವುದು, ಇವೆಲ್ಲಾ ಆಗದ ಮಾತು" ಅಂದರು. ಅಮ್ಮ ಮತ್ತೆ "ಆಕೆ ಒಂಟಿಯಲ್ಲ, ಅವಳ ಗಂಡನೂ ಜೊತೆಗಿರುತ್ತಾನೆ" ಅಂದರು. ಒಂದೆರಡು ಕ್ಷಣ ಯೋಚಿಸಿ, ಅಮ್ಮ ಯಾವ ಮಾತಿಗೂ ಜಗ್ಗಲಾರರು ಎಂದು ಅರ್ಥ ಮಾಡಿಕೊಂಡ ಅಪ್ಪ, ಅಜ್ಜ ರತ್ನಕ್ಕ ನಮ್ಮ ತೋಟದಲ್ಲಿ ಇರಲು ಒಪ್ಪಿಗೆ ಕೊಟ್ಟರು.

ನನಗೆ ರತ್ನಕ್ಕ ಪ್ರತಿ ದಿನ ನಮ್ಮ ಜೊತೆ ಇರುತ್ತಾಳೆ ಅನ್ನುವುದೇ ದೊಡ್ಡ ಸಂಭ್ರಮ. ಅಷ್ಟು ದಿನ ಇಲ್ಲದ ಗಂಡ ಈಗ ಧುತ್ತೆಂದು ಹೇಗೆ ಬಂದ? ಇಷ್ಟು ದಿನ ಎಲ್ಲಿದ್ದ? ಅವರ ನಡುವೆ ಏನಾದ್ರೂ ಜಗಳ ಆಗಿತ್ತಾ? ಅವೆಲ್ಲಾ ನನಗೆ ಆ ಹೊತ್ತಿಗೆ ಕಾಡುವ ಪ್ರಶ್ನೆಗಳು ಆಗಿರಲಿಲ್ಲ, ಆಗಿದ್ದರೂ ಅವೇನು ತುಂಬಾ ಮಹತ್ವದ ಸಂಗತಿಗಳು ಅನ್ನಿಸುತ್ತಿರಲಿಲ್ಲ. ಆದರೆ ಊರ ತುಂಬಾ ರತ್ನಕ್ಕಳ ಬಗ್ಗೆ, ಅವಳ ಗಂಡನ‌ ಬಗ್ಗೆ ಅತಿರಂಜಿತ ಸುದ್ದಿಗಳು ಓಡಾಡುತ್ತಿದ್ದವು. ಒಂದಿಬ್ಬರು ಅಮ್ಮನ ಹತ್ತಿರವೂ ಅವಳ ಬಗ್ಗೆ ಚಾಡಿ ಹೇಳಿದ್ದರು. ಅಮ್ಮನದು ಎಂದಿನ ನಿರ್ಲಿಪ್ತತೆ. ತನ್ನ ಅಂತರಂಗದ ಗೆಳತಿಯ ಬಗ್ಗೆ ಇದ್ದ ನಂಬಿಕೆಯ ಮುಂದೆ ಉಳಿದೆಲ್ಲಾ ಸಂಗತಿಗಳು ಗೌಣವಾಗಿದ್ದಿರಬೇಕು ಅಥವಾ ಕೆಲವು ತೀರಾ ಖಾಸಗಿ ಸಂಗತಿಗಳಲ್ಲಿ ಅತಿಕ್ರಮ ಪ್ರವೇಶ ಮಾಡಬಾರದು ಅಂತ ಅನ್ನಿಸಿರಬೇಕು.

ರತ್ನಕ್ಕ ತೋಟದ ಮನೆಗೆ ಬಂದ ನಂತರ ಅಮ್ಮನ ದಿನಚರಿಯಲ್ಲಿ ಸಾಕಷ್ಟು ಬದಲಾವಣೆಗಳಾಗಿದ್ದವು. ತೋಟದ ಕೇಲಸಗಾರರಿಗೆ ಬುತ್ತಿ ಒಯ್ಯುವುದು, ಕೊಟ್ಟಿಗೆಯ ಮೇಲೊಂದು ನಿಗಾ ಇಡುವುದು,  ದನಗಳಿಗೆ ಸೊಪ್ಪು, ಹುಲ್ಲು ತರುವುದು ಮುಂತಾದ ಕೆಲಸಗಳನ್ನೆಲ್ಲಾ ತಾನೇ ವಹಿಸಿಕೊಂಡು ಬಿಟ್ಟಿದ್ದಳು. ನನ್ನನ್ನು ಶಾಲೆಗೆ ಕರೆದೊಯ್ಯುವುದು ಮತ್ತು ಅಲ್ಲಿಂದ ಕರೆತರುವುದನ್ನೂ ಆಕೆಯೇ ಮಾಡುತ್ತಿದ್ದಳು. ಕಾಲುದಾರಿಯಲ್ಲಿ ಅವಳೊಂದಿಗೆ ಹೆಜ್ಜೆ ಹಾಕುತ್ತಿದ್ದರೆ ನನಗೆ ಅಮ್ಮನೇ ಕಿರುಬೆರಳಿಡಿದು ನಡೆಸುತ್ತಿದ್ದಾಳೇನೋ  ಅನ್ನುವ ಭಾವ.

ಸಂಜೆ ನಾಲ್ಕಾಗುತ್ತಿದ್ದಂತೆ ಎಲ್ಲಾ ಕೆಲಸ ಬದಿಗಿಟ್ಟು ಆಕೆ ಒಂದು ಹಿಡಿ ನೆಲಗಡಲೆಯೊಂದಿಗೆ ನಮ್ಮ‌ ಮನೆಗೆ ಬರುತ್ತಿದ್ದಳು. ಕೊಟ್ಟಿಗೆಯಲ್ಲಿನ ದನಗಳನ್ನೊಮ್ಮೆ ನೋಡಿ, ಮೈದಡವಿ ಹಿತ್ತಲು ಮನೆಯ ಮೆಟ್ಟಿಲ ಮೇಲೆ ಕೂತು ನನ್ನ ಕೂದಲು ಬಿಚ್ಚಿ, ಸಣ್ಣ ಕತ್ತರಿಯಲ್ಲಿ ಹೇನು ಹುಡುಕುತ್ತಾ ಕಥೆ ಹೇಳುತ್ತಿದ್ದಳು. ಒಮ್ಮೊಮ್ಮೆ ಅಮ್ಮನೂ ಪಕ್ಕ ಕೂತು ಅವಳ ಕಥೆಗೆ ಕಿವಿಯಾಗುತ್ತಿದ್ದರು. ಮತ್ತೂ ಕೆಲವೊಮ್ಮೆ ಕಥೆ ಹೇಳುತ್ತಾ ಹೇಳುತ್ತಾ ಅವಳೇ ಕಥೆಯ ಪಾತ್ರವಾಗಿಬಿಡುತ್ತಿದ್ದಳು. ಬಿಳಿ ಬಣ್ಣದ ಕುದುರೆ ಏರಿ ಏಳು ಸಮುದ್ರ ದಾಟಿ ಬಂದ ರಾಜಕುಮಾರ ಪಾಪದ ರಾಜಕುಮಾರಿಯನ್ನು ಹೊತ್ತೊಯ್ದ ಕಥೆ ಹೇಳಿದ ಮೇಲೆ ಪ್ರತಿ ಬಾರಿಯೂ ಆಕೆ ಹನಿಗಣ್ಣಾಗುತ್ತಿದ್ದಳು. ಆಗೆಲ್ಲಾ ಅಮ್ಮನೂ ಮಾತು ಬೇಡವೆಂದು ಸುಮ್ಮನಾಗುತ್ತಿದ್ದಳು. ಯಾರಿಗೆ ಗೊತ್ತು ರತ್ನಕ್ಕಳ ಬಾಲ್ಯವೂ ಫೇರಿಟೇಲ್ ಗಳ ರಾಜಕುಮಾರಿಯ ಬದುಕಿನಷ್ಟೇ ಸಂಭ್ರಮದಿಂದ ಕೂಡಿತ್ತೇನೋ?

ಈ ಮಧ್ಯೆ ಅವಳ ನಡವಳಿಕೆಯಲ್ಲಿ ಸೂಕ್ಷ್ಮ ಬದಲಾವಣೆ ಗೋಚರಿಸಿತ್ತು. ಅರ್ಧ ತೋಳಿನ ರವಕೆಯ ಜಾಗದಲ್ಲಿ ಕೈ ಪೂರ್ತಿ ಮುಚ್ಚುವ, ಬೆನ್ನು ಮುಚ್ಚುವ ರವಕೆ ತೊಡಲಾರಂಭಿಸಿದ್ದಳು.  ನನ್ನ ಶಾಲೆಗೆ ಕರೆದೊಯ್ಯವಲ್ಲೂ ಹಿಂದಿನ ಲವಲವಿಕೆ ಇರಲಿಲ್ಲ. ಅವಳ ಮನೆಯಲ್ಲಿ ಅರ್ಧರಾತ್ರಿಯವರೆಗೂ ಉರಿಯುತ್ತಿದ್ದ ದೀಪ, ಸದಾ ಬಾತುಕೊಂಡಿರುವ ಕಣ್ಣುಗಳು ನನಗೆ ಗೊತ್ತಿಲ್ಲದ ಕಥೆಯೊಂದಕ್ಕೆ ಮುನ್ನುಡಿ ಬರೆದಿತ್ತೇನೋ? ಯಾವ ನೋವನ್ನು ಮರೆಮಾಚಲೋ ಏನೋ ಸಹಜ ಸುಂದರಿ ರತ್ನಕ್ಕ ಕಣ್ಣಿಗೆ ಕಾಡಿಗೆ ಹಚ್ಚಲು ಶುರು ಮಾಡಿದ್ದಳು.‌ ಇವೆಲ್ಲದರ ಪರಿಣಾಮ ಅವಳ ಆರೋಗ್ಯದ ಮೇಲೂ ಬೀರಿತ್ತು. ಸದಾ ಲವಲವಿಕೆಯಿಂದಿರುತ್ತಿದ್ದವಳು ಮಂಕಾಗಿಬಿಟ್ಟಿದ್ದಳು. ಅಮ್ಮ ಅವಳ ಅಳಲಿಗೆ ಕಿವಿಯಾಗುವುದನ್ನು ಬಿಟ್ಟರೆ ಮತ್ತೇನೂ ಮಾಡಲು ಸಾಧ್ಯವಿರಲಿಲ್ಲ. ಒಮ್ಮೆ "ಇವೆಲ್ಲಾ ಯಾಕೆ ಬೇಕಿತ್ತು ರತ್ನಕ್ಕಾ" ಅಂತ ಅಮ್ಮ ಕೇಳಿದ್ದು ನನ್ನ ಕಿವಿಗೂ ಬಿದ್ದಿತ್ತು. ರತ್ನಕ್ಕ ಅಷ್ಟೇ ನೋವಿನಿಂದ "ನನ್ನ ಹಣೆಬರಹ ಅಕ್ಕಾ, ಬಿಡಿ" ಎಂದಿದ್ದಳು. 

ಒಮ್ಮೆ ಗಂಟೆ ನಾಲ್ಕೂವರೆಯಾದರೂ ರತ್ನಕ್ಕ ಮನೆಗೆ ಬರದಿದ್ದುದನ್ನು ಕಂಡು ಅವಳನ್ನು ಹುಡುಕುತ್ತಾ ನಾನೇ ಅವಳ ಮನೆಗೆ ಹೋಗಿದ್ದೆ. ಶಾಲೆಯಲ್ಲಿ ಟೀಚರ್ ಕಲಿಸಿದ್ದ 'ಒಂದು ಎರಡು ಬಾಳೆಲೆ ಹರಡು...' ಹಾಡನ್ನು ಅವಳಿಗೆ ಹಾಡಿ ತೋರಿಸಬೇಕು, ಅವಳಿಂದ ಶಹಬ್ಬಾಸ್ ಗಿಟ್ಟಿಸಿಕೊಳ್ಳಬೇಕು ಅನ್ನುವ ಹಿಡನ್ ಅಜೆಂಡಾವೂ ಇತ್ತು‌. ಆದರೆ ಅಲ್ಲಿನ ದೃಶ್ಯ ನೋಡಿದ ಮೇಲೆ ನನ್ನ ಉತ್ಸಾಹವೆಲ್ಲಾ ಜರ್ರನೆ ಇಳಿದುಹೋಯಿತು.

ನಾನು ಹೋಗುವ ಮುಂಚೆ ಅವಳ ಮನೆಯಲ್ಲಿ ಏನು ನಡೆದಿತ್ತೋ ಗೊತ್ತಿಲ್ಲ. ಗಟ್ಟಿಗಿತ್ತಿ ರತ್ನಕ್ಕ ಗೋಡೆಗೆ ಹಣೆ ಚಚ್ಚಿಕೊಡು ಅಳುತ್ತಿದ್ದಳು. ಅವಳ ಗಂಡ ತನಗೂ ಅದಕ್ಕೂ ಸಂಬಂಧವೇ ಇಲ್ಲವೇನೋ ಎಂಬಂತೆ ಬೀಡಿ ಎಳೆಯುತ್ತಾ ಎತ್ತಲೋ ನೋಡುತ್ತಿದ್ದ. ನಾನು ಸ್ವಲ್ಪ ಹೊತ್ತು ಅಲ್ಲೇ ನಿಂತೆ. ಮುಂದೇನು ಮಾಡಬೇಕು ಎನ್ನುವುದು ಅರ್ಥವಾಗದೆ ತಿರುಗಿ ಮನೆಗೆ ಬಂದೆ. ನನ್ನ ಅನ್ಯಮನಸ್ಕತೆಯನ್ನು ನೋಡಿ ಅಮ್ಮ "ಏನಾಯ್ತು? ರತ್ನಕ್ಕ ಎಲ್ಲಿ?" ಅಂತ ಕೇಳಿದ್ರು. ನಾನು ನಡೆದ ವೃತ್ತಾಂತವನ್ನೆಲ್ಲಾ ವಿವರಿಸಿದೆ. ಅಮ್ಮ ಏನೂ ಪ್ರತಿಕ್ರಿಯಿಸದೆ ನನ್ನ ಕರೆದುಕೊಂಡು ನಡುಮನೆಗೆ ಬಂದು ರೆಡಿಯೋ ಹಚ್ಚಿ ಕೂತರು.

ಮರುದಿನ ರತ್ನಕ್ಕ ಬಂದಾಗ ನಿನ್ನೆ ಯಾಕೆ ಅಳ್ತಿದ್ರಿ ಅಂತ ಕೇಳಬೇಕು ಅನ್ನಿಸುತ್ತಿತ್ತು. ಆದರೆ ಯಾಕೋ ಯಾವುದೋ ಅಂಜಿಕೆಯೊಂದು ನನ್ನನ್ನು ತಡೆಯುತ್ತಿತ್ತು. ಅಮ್ಮನ ಬಳಿ ಒಂದೆರಡು ಸಾರಿ ಕೇಳಿದೆನಾದರೂ ಅವರಿಂದಲೂ ಸ್ಪಷ್ಟ ಕಾರಣ ತಿಳಿಯಲಿಲ್ಲ. ಆದರೆ ಆ ಘಟನೆ ನಡೆದ ನಂತರ ಅವಳ ಮನೆಗೆ ನಾನು ಹೋಗುವುದಕ್ಕೆ ಅಮ್ಮ ಸಂಪೂರ್ಣ ನಿಷೇಧ ಹೇರಿದರು. ಇಷ್ಟಾಗಿಯೂ ನಮ್ಮ ಮತ್ತು ರತ್ನಕ್ಕಳ ಸಂಬಂಧ ಹಾಗೇ ಉಳಿದಿತ್ತು.

ಆದರೆ ಕಾರಣಾಂತರಗಳಿಂದ ಕೆಲವು ತಿಂಗಳುಗಳ ಬಳಿಕ ಆ ಊರನ್ನೂ, ತೋಟವನ್ನೂ, ಮನೆಯನ್ನೂ ಮಾರಬೇಕಾಗಿ ಬಂತು. ತೋಟಕ್ಕೆ ಹಿಡಿದ ಹುಳು ಭಾದೆ, ನಮ್ಮಿಬ್ಬರನ್ನೇ ಅಲ್ಲಿ ಉಳಿಸಲಾಗದ ಅನಿವಾರ್ಯತೆ ಎಲ್ಲವನ್ನೂ ತೊರೆದು ಬರುವಂತೆ ಮಾಡಿತು. ಅಜ್ಜ, ಅಪ್ಪ, ಅಮ್ಮ ಮನೆ ಖಾಲಿ ಮಾಡುತ್ತಿದ್ದರೆ ನನಗೆ ರತ್ನಕ್ಕಳನ್ನು ಬಿಟ್ಟು ಹೇಗೆ ಹೋಗಲಿ ಎನ್ನುವುದೇ ದೊಡ್ಡ ಚಿಂತೆಯಾಗಿತ್ತು. ಸಾಮಾನು ಪ್ಯಾಕ್ ಮಾಡುವುದರಲ್ಲಿ ರತ್ನಕ್ಕ ಅಮ್ಮನಿಗೆ ಸಹಾಯ ಮಾಡುತ್ತಿದ್ದಳಾದರೂ ಆಗಾಗ ದುಃಖ ತಡೆಯಲಾರದೆ ಧುಮುಗುಡುತ್ತಿದ್ದಳು. ಅಮ್ಮನಾದರೂ ಅಷ್ಟೇ, ಎಲ್ಲಾ ಭಾವಗಳಿಗೆ ಕಟ್ಟೆ ಕಟ್ಟಿರುವಂತೆ ಮುಗುಮ್ಮಾಗಿದ್ದರು. ಎಲ್ಲಾ ಮುಗಿಸಿ, ಆ ತೋಟಕ್ಕೆ, ಮನೆಗೆ, ಊರಿಗೆ ವಿದಾಯ ಹೇಳಿ ವ್ಯಾನ್ ಹತ್ತಬೇಕು ಅನ್ನುವಷ್ಟರಲ್ಲಿ ತನ್ನ ಮನೆಯಿಂದ ಓಡಿ ಬಂದ ರತ್ನಕ್ಕ ಒಂದು ಬೆಳ್ಳಿ ಕಾಲ್ಗೆಜ್ಜೆ ತಂದು ನನಗೆ ತೊಡಿಸಿ ನಕ್ಕಳು. ಅವಳ ಕಣ್ಣ ಕಾಡಿಗೆ ಕದಡಿತ್ತು, ಅವಳು ಹೇಳುತ್ತಿದ್ದ ಕಥೆಗಳಲ್ಲಿನ ಎಲ್ಲಾ ಕಷ್ಟ ಪರಿಹರಿಸುವ ದೇವತೆಯಂತೆಯೇ ನನಗವಳು ಕಾಣುತ್ತಿದ್ದಳು.

ಮುಂದೆ ಹೊಸ ಜಾಗ, ಹೊಸ ಮನೆ, ಹೊಸ ಕುತೂಹಲಗಳು ರತ್ನಕ್ಕಳ ನೆನಪುಗಳನ್ನು ಇಂಚಿಂಚಾಗಿ ಕಬಳಿಸಿದ್ದರೂ ಅವಳಿನ್ನೂ ನನ್ನ ಮನದಿಂದ ಪೂರ್ತಿಯಾಗಿ ಮಾಯವಾಗಿರಲಿಲ್ಲ. ಆಗೊಮ್ಮೆ ಈಗೊಮ್ಮೆ ಅವಳು ಕಾಡಿದಾಗೆಲ್ಲಾ ಝಲ್ಲೆಂದು ಸದ್ದು ಮಾಡುತ್ತಿದ್ದ ಕಾಲ್ಗೆಜ್ಜೆ ನಿಶಬ್ದವಾಗಿಬಿಡುತ್ತಿತ್ತು. ಸ್ವಲ್ಪ ದೊಡ್ಡವಳಾದಂತೆ ರತ್ನಕ್ಕ, ಅವಳ ಬದುಕು ನನಗೆ ಒಂದು ದೊಡ್ಡ ಮಿಸ್ಟರಿ ಅಂತ ಅನಿಸುತ್ತಿತ್ತು. ಈ ಬಗ್ಗೆ ಅಮ್ಮನ ಹತ್ರ ಕೇಳಿದರೆ ಹೆಚ್ಚಿನ ಮಾಹಿತಿಯೇನೂ ಸಿಗುತ್ತಿರಲಿಲ್ಲ.

ಈಗ್ಗೆ ಮೂರು ವರ್ಷಗಳ ಹಿಂದೆ ಒಂದು ಮುಂಜಾನೆ ಮನೆಯ ಬಾಲ್ಕನಿಯಲ್ಲಿ ಕೂತಿದ್ದಾಗ ಮನೆಗೆ ಬೆನ್ನು ಹಾಕಿ ತಿಳಿ ಹಸಿರು ಸೀರೆ ಉಟ್ಟ ಹೆಂಗಸೊಬ್ಬಳು ನಡೆಯುತ್ತಿದ್ದಳು. ನನ್ನ ಬಾಯಿಯಿಂದ ಅನಾಯಾಸವಾಗಿ "ರತ್ನಕ್ಕ" ಎನ್ನುವ ಪದ ಹೊರಬಿತ್ತು. ಅಲ್ಲೇ ಇದ್ದ ಅಮ್ಮ ತಿರುಗಿ ನೋಡಿದರು. ಓಡಿ ಹೋಗಿ ಆ ಹೆಂಗಸನ್ನು ನಿಲ್ಲಿಸಿ ನೋಡಿದರೆ ಆಕೆ ನನ್ನ ರತ್ನಕ್ಕ ಆಗಿರಲಿಲ್ಲ. ನಿರಾಸೆಯೊಂದು ಮೆದುಳನ್ನು ದಾಟಿ ಹೃದಯದಲ್ಲಿ ಸ್ಥಾಪಿತವಾಯಿತು.

ಅಲ್ಲಿಂದ ನಂತರ, ಒಮ್ಮೆ ರತ್ನಕ್ಕನನ್ನು ನೋಡಬೇಕು, ಮಾತಾಡಬೇಕು ಅಂತ ಬಲವಾಗಿ ಅನಿಸತೊಡಗಿತು. ಹೇಗೂ ಅಪ್ಪನನ್ನು ಒಪ್ಪಿಸಿ ಒಂದು ಶುಭ ಶುಕ್ರವಾರ ಅವಳನ್ನು ಹುಡುಕಿ ಕೊಂಡು ಹೊರಟೆವು. ತೊರೆದು ಬಂದ ಊರು, ಜನ, ತೋಟ ಮನದಂಗಳದಲ್ಲಿ ಹಾದುಹೋಗುತ್ತಿತ್ತು. ದಾರಿಗುಂಟ ರತ್ನಕ್ಕ ಸಿಗಲಿ ಅಂತ ಎಷ್ಟು ಬಾರಿ ದೇವರನ್ನು ಕೇಳಿಕೊಂಡಿದ್ದೇನೋ ಗೊತ್ತಿಲ್ಲ. 


ನಾವಿದ್ದ ಮನೆ ತಲುಪಿದಾಗ ಅಲ್ಲಿ ನಮ್ಮಿಂದ ಆ ಜಾಗ ಕೊಂಡವರು ಅಲ್ಲಿರಲಿಲ್ಲ. ಅದನ್ನು ಮತ್ಯಾರಿಗೋ ಮಾರಿ ಅವರೂ ಊರು ತೊರೆದಿದ್ದರು. ಪಕ್ಕದ ಮನೆಯವರಲ್ಲಿ ರತ್ನಕ್ಕಳ ಬಗ್ಗೆ ವಿಚಾರಿಸಿದಾಗ ಆಕೆ ಊರ ಹೊರವಲಯದಲ್ಲಿ ವಾಸಿಸುತ್ತಿದ್ದಾಳೆ ಅಂದರು. ಅಲ್ಲಿ ಹೋದಾಗ ಅವಳ ಗಂಡ ಇರಲಿಲ್ಲ. ಹರೆಯದ ಹುಡುಗನೊಬ್ಬ ಮಲಗಿದ್ದ ರತ್ನಕ್ಕನಿಗೆ ಊಟ ಮಾಡಿಸುತ್ತಿದ್ದ. ನಾವು ಹೋದದ್ದು ನೋಡಿ ಎದ್ದು ನಿಂತ, ಅಪ್ಪ ಅವನಿಗೆ ನಮ್ಮ ಪರಿಚಯ ಹೇಳಿ ಒಮ್ಮೆ ರತ್ನಕನನ್ನು ಮಾತಾಡಿಸಬೇಕಿತ್ತು ಅಂದರು. ಅವನು "ಅಮ್ಮ ನಿಮ್ಮ ಬಗ್ಗೆ ತುಂಬಾ ಹೇಳುತ್ತಿದ್ದಳು, ಆಕೆಯೀಗ ಮಾತಾಡುವ ಪರಿಸ್ಥಿತಿಯಲ್ಲಿಲ್ಲ, ಪಾರ್ಶ್ವವಾಯು ಅವಳ ಮಾತನ್ನು ಕಸಿದುಬಿಟ್ಟಿದೆ" ಅಂದ. ನಾನು ಅಷ್ಟು ಹೊತ್ತಿಗಾಗುವಾಗ ರತ್ನಕ್ಕ ಮಲಗಿದ್ದ ಹಾಸಿಗೆ ಬಳಿ ಕೂತಿದ್ದೆ. ನಡುಗುತ್ತಲೇ ಅವಳ ಕೈ ನನ್ನ ಕೈಯೊಳಗೆ ಇರಿಸಿಕೊಂಡು, ಮಾತಿನ ಮಲ್ಲಿ ರತ್ನಕ್ಕ ಈಗ ಮಾತಾಡಲಾರಳು ಅನ್ನುವ ಸತ್ಯವನ್ನು ಅರಗಿಸಿಕೊಳ್ಳಲಾಗದೆ ಮುಖ ತಿರುವಿದೆ. ಅಮ್ಮ ಅವಳ ಹೆಗಲು ಬಳಸಿ ಕೂರಿಸಿ "ರತ್ನಕ್ಕಾ" ಎಂದು ಆರ್ದ್ರವಾಗಿ ಕರೆದಳು. ಎಷ್ಟು ವರುಷಗಳಿಂದ ಇದೊಂದು ಕರೆಗಾಗಿ ಕಾಕಾಯುತ್ತಿದ್ದಳೇನೋ ಎಂಬಂತೆ ರತ್ನಕ್ಕ ಇಷ್ಟಗಲ ಬಾಯಿ ಬಿಟ್ಟು ನಕ್ಕಳು. ಅವಳ ನಗು ನೋಡಿ ನನಗೆ ಒಳಗೊಳಗೇ ಅಳು. ಅಪ್ಪ ನಮ್ಮ ಮೂವರನ್ನು ಬಿಟ್ಟು ಅವಳ ಮಗನನ್ನು ಕರೆದುಕೊಂಡು ಊರು ನೋಡಲು, ಹಳೆಯ ಗೆಳೆಯರನ್ನು ಭೇಟಿಯಾಗಲು ಹೋದ. ಅದೆಷ್ಟು ಹೊತ್ತು ನಾವು ಅವಳ ಬಳಿ ಕುಳಿತಿದ್ದೆವೋ ಗೊತ್ತಿಲ್ಲ, ಅಪ್ಪ ಬಂದು ಹೊರಡೋಣವೇ ಎಂದು ಕೇಳಿದಾಗಷ್ಟೇ ಸಮಯದ ಅರಿವಾದ್ದು. ಊರು ತೊರೆಯುವಾಗ ಅವಳು ಕೊಟ್ಟಿದ್ದ ಪುಟ್ಟ ಗೆಜ್ಜೆಯನ್ನು ಮತ್ತೆ ಅವಳೆದುರು ಹಿಡಿದೆ. ಮಗುವಂತೆ ನಕ್ಕು ಬಿಟ್ಟಳು. ಅವಳ ನಗುವನ್ನು ತುಂಬಿಕೊಂಡು ನಾವಲ್ಲಿಂದ ತಿರುಗಿ ನೋಡದೆ ಹೊರಟು ಬಂದೆವು. ನೋಡಿದರೆಲ್ಲಿ ಅವಳ ಕಣ್ಣ ಹನಿ ನನ್ನನ್ನು ಕಟ್ಟಿ ಹಾಕುತ್ತದೋ ಅನ್ನುವ ಭಯವದು.

ಮತ್ತೆ ಅವಳನ್ನು ಭೇಟಿಯಾಗಲು ಆಗಲೇ ಇಲ್ಲ. ಭೇಟಿಯಾಗಬೇಕು ಅಂದುಕೊಳ್ಳುತ್ತಲೇ ತಿಂಗಳುಗಳು ಉರುಳಿದವು. ಒಂದು ಸಂಜೆ ನಾನು ಎಕ್ಸಾಂ ಮುಗಿಸಿ ಮನೆಗೆ  ಬಂದಾಗ ಅಮ್ಮ "ರತ್ನಕ್ಕ ಹೋಗ್ಬಿಟ್ಳು, ಅಪ್ಪ ಅವಳ ಅಂತಿಮ ದರ್ಶನಕ್ಕೆ ಹೋಗಿದ್ದಾರೆ" ಅಂದಳು. ನನಗೆ ಕರುಳು ಬಳ್ಳಿ ಕಳಚಿದ ಭಾವ. ಅಳಲೂ ಆಗದೆ, ಅಳದಿರಲೂ ಆಗದ ವಿಚಿತ್ರ ಭಾವದಲ್ಲಿ ಬಿದ್ದು ಬಿಟ್ಟಿದ್ದೆ. ಅವಳೊಂದಿಗೆ ಕಳೆದ ಬಾಲ್ಯ, ಅವಳ ನೆನಪುಗಳೊಂದಿಗೆ ಕಳೆದ ಕೌಮಾರ್ಯ, ಅನಿರೀಕ್ಷಿತ ಭೇಟಿ ಇವೆಲ್ಲಾ ನನ್ನ ಬದುಕಿನ ಬುತ್ತಿಯ ಬೆಚ್ಚನೆಯ ಕೈ ತುತ್ತುಗಳು. ಫೇರಿಟೇಲ್ ಗಳ ರಾಜಕುಮಾರಿಯಾಗಿ, ಕಣ್ಣ ಕೊನೆಯ ಹನಿಯ ತೊಡೆವ ತೋರುಬೆರಳಾಗಿ, ಪ್ರಣತಿಯಾಗಿ, ನೂರು ಬಣ್ಣಗಳುಳ್ಳ ಚಿಟ್ಟೆಯ ರೆಕ್ಕೆಯಾಗಿ ರತ್ನಕ್ಕ ಸದಾ ತಾಕುತ್ತಿರುತ್ತಾಳೆ, ಥೇಟ್ ಅವಳು ಕೊಟ್ಟ ಕಾಲ್ಗೆಜ್ಜೆಯ ಘಲುವಂತೆ.

ಮಂಗಳವಾರ, ನವೆಂಬರ್ 27, 2018

ನನ್ನುಪ್ಪಾಪನ ಕೆಂಪಿ

ಹಸಿರ ಬಯಲಿನ ತುಂಬಾ ಸಂಜೆಗೆಂಪು ತುಂಬುತ್ತಿದ್ದಂತೆ ಅಜ್ಜ, "ಕೆಂಪಿಯನ್ನೊಮ್ಮೆ ಕರೆದುಕೊಂಡು
ಬನ್ನಿರೋ" ಎನ್ನುವ ಹುಕುಂ ಹೊರಡಿಸಿಬಿಡುತ್ತಿದ್ದರು. "ಯಾರಿಗೆ ಗೊತ್ತು, ಈಗ ದಬದಬನೆ ಮಳೆ
ಸುರಿಯಲೂಬಹುದು" ಎಂದು ನಮ್ಮನ್ನು ಗುಡ್ಡ ಹತ್ತಿಸಿಬಿಡುತ್ತಿದ್ದರು. ನಾವೂ ಇದೇ ಸಮಯಕ್ಕೆ
ಕಾಯುತ್ತಿದ್ದೆವೇನೋ ಎಂಬಂತೆ ಮೆಟ್ಟಿಲ ಮೂಲೆಯಲ್ಲಿರುವ ಚಪ್ಪಲಿ ಮೆಟ್ಟಿ , ಹಟ್ಟಿಯಿಂದ ತುಸು
ದೂರದ ಮಣ್ಣು ದಾರಿಯನ್ನು ಬಳಸಿ ಸಾಗುತ್ತಿದ್ದೆವು. ದಾರಿಯಲ್ಲಿ ಸಿಗುವ ಚುಕ್ಕಿ ಕಾಯಿ,
ನೇರಳೆ ಹಣ್ಣು ನಮ್ಮ ಪಾಲಿಗೆ ಆಗ ಮೃಷ್ಟಾನ್ನ. ನೀರವ ಮೌನ, ಗುಡ್ಡದ ಕೆಳಗಿನ ಶಂಕರ ಭಟ್ಟರ
ಮನೆಯ ಹಂಚಿನ ಮೇಲೆ ಕೂತ ಕಾಜಾಣ, ಮೈ ಒಣಗಿಸಿಕೊಳ್ಳುತ್ತಿರುವ ಮಿಂಚುಳ್ಳಿ, ಪಟ ಪಟನೆ ರೆಕ್ಕೆ
ಬಡಿದು ಹಾರುವ ದೊಡ್ಡ ಗಾತ್ರದ ನೀಲಿ ಬಣ್ಣದ ಚಿಟ್ಟೆ ಇವೆಲ್ಲವನ್ನೂ ದಾಟಿ, ಕೆಲವೊಮ್ಮೆ
ಹಿಡಿಯಲು ಪ್ರಯತ್ನಿಸಿ ಮುಂದೆ ಸಾಗುವ ಖುಶಿ ನಮ್ಮದು. ಅಪ್ಪಿ ತಪ್ಪಿ ನವಿಲನ್ನೇನಾದರೂ ನೋಡಿ
ಬಿಟ್ಟರೆ ಸ್ವರ್ಗಕ್ಕೆ ಮೂರೇ ಗೇಣು! ಉದ್ದ ಕೋಲಂದನ್ನು ಹೆಗಲಿಗೆರೇಸಿಕೊಂಡರೆ ಮುಖದಲ್ಲಿ
ಶಿಕಾರಿಯ ಕಳೆ ಬಂದೇ ಬಿಟ್ಟಿದೆಯೇನೋ ಅನ್ನುವ ಭ್ರಮೆ. ಆದರೆ ಗುಡ್ಡ ಹತ್ತಿ ನಿಂತು ಅಜ್ಜನ
ಪ್ರೀತಿಯ ಕೆಂಪಿಯನ್ನು ಸಾಮ-ದಾನ-ಭೇದ-ದಂಡ ಪ್ರಯೋಗಿಸಿದರೂ ಅದು ಗುಡ್ಡ ಇಳಿಯಲೊಪ್ಪದೇ
ಇದ್ದಾಗ ಶಿಕಾರಿಯ ಉತ್ಸಾಹ ಟುಸ್ ಪಟಾಕಿ ಆಗಿಬಿಡುತ್ತಿತ್ತು. ಕೊನೆಗೆ ಗತ್ಯಂತರವಿಲ್ಲದೆ
ಅಜ್ಜನಿಗೆ ಬುಲಾವ್ ಹೋಗುತ್ತಿತ್ತು. ನಾವು ಕರೆದಾಗೆಲ್ಲಾ ಬಿಂಕ ತೋರಿಸುತ್ತಿದ್ದ ಕೆಂಪಿ,
ಅಜ್ಜ ಗುಡ್ಡದ ತಿರುವಿನಲ್ಲಿ ನಿಂತು "ಕೆಂಪಿ...." ಎಂದರೆ ಸಾಕು ಕತ್ತಿಗೆ ಕಟ್ಟಿರುವ
ಗಂಟೆಯನ್ನು ಸದ್ದುಮಾಡುತ್ತಾ ನೆಗೆದುಕೊಂಡು ಹೋಗಿ ಅವರ ಮೈ ಉಜ್ಜುತ್ತಾ ನಿಂತುಬಿಡುತ್ತಿತ್ತು.

ನಿಜಕ್ಕೂ ಈ ಕೆಂಪಿ ನಮ್ಮ ಮನೆ ಸೇರಿದ್ದೇ ಒಂದು ವಿಚಿತ್ರ ಸನ್ನಿವೇಶದಲ್ಲಿ. ನಮ್ಮ ಮನೆಯಿಂದ
ಅರ್ಧ ಕಿಲೋಮೀಟರ್ನಷ್ಟು ದೂರದಲ್ಲಿರುವ ಸಣ್ಣ ರೈತ ಚೆನ್ನಪ್ಪಣ್ಣ ತನ್ನ ಚಿಕ್ಕ ಮಗಳ ಮನೆಗೆ
ಹೋಗುವಾಗ ಈ ಕೆಂಪಿಯನ್ನು ಪಕ್ಕದೂರಿನಲ್ಲಿನ ದೊಡ್ಡ ಮಗಳ ಹಟ್ಟಿಯಲ್ಲಿ ಕಟ್ಟಿ ಹೋಗಿದ್ದರು.
ಅಲ್ಲಿಂದ ಯಾವ ಮಾಯದಿಂದ ಅವಳು ತಪ್ಪಿಸಿಕೊಂಡಿದ್ದಳೋ ಗೊತ್ತಿಲ್ಲ, ಅಜ್ಜ ಲುಹುರ್
(ಮಧ್ಯಾಹ್ನದ) ನಮಾಜಿಗೆಂದು ಮಸೀದಿಗೆ ಹೊರಟಿದ್ದಾಗ ಪಕ್ಕದಲ್ಲಿ ಹರಿಯುತ್ತಿರುವ ತೋಡಿನ ಬದಿ
ಪೆಕರು ಪೆಕರಾಗಿ ನಿಂತುಕೊಂಡಿದ್ದಳಂತೆ. ಉಸ್ತಾದರನ್ನೂ, ಒಂದಿಬ್ಬರು ಮಕ್ಕಳನ್ನೂ ಸೇರಿಸಿ
ಅವಳ ಸುತ್ತ ಒಂದು ಹಗ್ಗ ಬಿಗಿದು ತೋಡು ದಾಟಿಸಿ ಮನೆಯ ಹಟ್ಟಿಯಲ್ಲಿ ಕಟ್ಟಿ ಹಾಕಿದ್ದರು.
ಆಮೇಲೆ ಚೆನ್ನಪ್ಪಣ್ಣ ಊರಿಗೆ ಬರುವವರೆಗೂ ಆಕೆ ನಮ್ಮ ಹಟ್ಟಿಯಲ್ಲೇ ಇರುತ್ತಾಳೆ ಅನ್ನುವ
ನಿರ್ಧಾರವನ್ನೂ ತೆಗೆದುಕೊಂಡು ಬಿಟ್ಟರು. ಈ ಹೊತ್ತು ಕೂತು, ಕೆಂಪಿ ನಮ್ಮ ಹಟ್ಟಿ ಸೇರಿದ
ಸನ್ನಿವೇಶವನ್ನು ನೆನೆಸಿದರೆ,  ಈವತ್ತಿನ ಕಾಲದಲ್ಲೇನಾದರೂ ಈ ಘಟನೆ ನಡೆದಿದ್ದರೆ ಅಜ್ಜ
ಹಸುಗಳ್ಳತನದ ಆರೋಪದಲ್ಲಿ ಜೈಲು ಸೇರುತ್ತಿದ್ದರೇನೋ ಅನಿಸುತ್ತದೆ.

ಕೆಲ ದಿನಗಳ ನಂತರ ಚೆನ್ನಪ್ಪಣ್ಣ ಊರಿಗೆ ಮರಳಿದರು. ನಡೆದ ವೃತ್ತಾಂತವನ್ನೆಲ್ಲಾ ತಿಳಿದು
ಸೀದಾ ನಮ್ಮನೆಗೆ ಬಂದು ಕೆಂಪಿಯನ್ನು ಕರೆದೊಯ್ಯುತ್ತೇನೆ ಅಂದರು. ಅಷ್ಟರಲ್ಲಾಗಲೇ ಅವಳು ನಮ್ಮ
ಹಟ್ಟಿಯ, ಮನೆಯ ಅವಿಭಾಜ್ಯ ಅಂಗವಾಗಿಬಿಟ್ಟಿದ್ದಳು. ಅಜ್ಜನಿಗಂತೂ ಅವಳು ಬಲು ಅಚ್ಚುಮೆಚ್ಚು.
ಬಿಸಿ ಬಿಸಿ ಅಕ್ಕಚ್ಚು, ಉಳಿದ ಅನ್ನ, ಬೇಯಿಸಿದ ಹುರುಳಿ ಅಂತೆಲ್ಲಾ ಆಗಾಗ ಅವಳಿಗೆ
ತಿನ್ನಿಸುವ ನೆಪದಲ್ಲಿ ಮೈ ದಡವಿ ಬರುತ್ತಿದ್ದರು. ನನಗೋ ಅಣ್ಣ ಶಾಲೆಗೆ ಹೋದ ನಂತರ ನನ್ನ
ಒಂಟಿತನವನ್ನು ನೀಗಿಸುತ್ತಿದ್ದ ಕಾಮಧೇನು ಆಕೆ. 'ಯಾಕಾದ್ರೂ ಈ ಚೆನ್ನಪ್ಪಣ್ಣ ಬಂದ್ರೋ' ಅಂತ
ಆಗ ಅನಿಸಿದ್ದು ಸುಳ್ಳೇನಲ್ಲ‌.

ಅವರು ಹಟ್ಟಿಯ ಒಳಗೆ ಹೋಗಿ ಅವಳನ್ನು ಕಟ್ಟಿದ ಹಗ್ಗಕ್ಕೆ ಕೈ ಇಡಬೇಕು ಅನ್ನುವಷ್ಟರಲ್ಲಿ ಅಜ್ಜ
'ಚೆನ್ನಪ್ಪಾ ಕೆಂಪೀನ ನಂಗೆ ಕೊಟ್ಟು ಬಿಡ್ತೀಯಾ? ಅದೆಷ್ಟಾದರೂ ಸರಿ, ಕೊಂಡುಕೊಳ್ಳುತ್ತೇನೆ'
ಅಂದರು. ಹಗ್ಗ ಬಿಚ್ಚಲು ಹೊರಟವರ ಕೈ ಒಮ್ಮೆ ತಡವರಿಸಿತೇನೋ. ಹಟ್ಟಿಯಿಂದ ನಿಧಾನವಾಗಿ ಹೊರಬಂದ
ಚೆನ್ನಪ್ಪಣ್ಣ " ನಿಮ್ಮ ಋಣದಲ್ಲಿ ಬದುಕುತ್ತಿರುವವನು ನಾನು. ನಿಮಗೇ ಕೆಂಪಿಯನ್ನು
ಮಾರುವುದೇ? ಸಾಧ್ಯವಾಗದ ಮಾತಿದು. ಕೆಂಪಿ ನಿಮ್ಮ ಬಳಿಯೇ ಇರಲಿ, ಅವಳ ಮೊದಲ ಕರುವನ್ನು ನನಗೆ
ಕೊಟ್ಟರಾಯಿತು, ದುಡ್ಡೇನೂ ಬೇಡ" ಎಂದು ತಲೆ ಆಡಿಸಿದರು. ಅಜ್ಜ ಒಂದೂ ಮಾತಾಡದೆ ಒಂದಿಷ್ಟು
ನೋಟುಗಳನ್ನು ಅವರ ಕಿಸೆಗೆ ತುರುಕಿ ಹೆಗಲು ತಟ್ಟಿದರು. ರಾಜಕಾರಣಿಗಳ, ದೊಡ್ಡದೊಡ್ಡವರ ಭಾಷಣದ
ಸರಕಾಗಿದ್ದ  'ಸೌಹಾರ್ದ' ನನ್ನ ಮುಂದೆ ಭೌತಿಕವಾಗಿ ಸಂಭವಿಸಿತ್ತು. ಕೆಂಪಿಗೆಷ್ಟು
ಅರ್ಥವಾಯಿತೋ ಗೊತ್ತಿಲ್ಲ, ಒಮ್ಮೆ 'ಅಂಬಾ' ಎಂದು ಕೂಗಿದಳು. ಅಂದಿನಿಂದ ಕೆಂಪಿ ನಮ್ಮ ಮನೆಯ
ಅಧಿಕೃತ ಸದಸ್ಯೆಯಾಗಿಬಿಟ್ಟಳು.

ಆಮೇಲೆ ಅವಳಿಗೆ ಸಿಗುತ್ತಿದ್ದ ಮರ್ಯಾದೆಗೆ ಮನೆಯ ಮುದ್ದಿನ ಬೆಕ್ಕಿಗೂ
ಅಸೊಯೆಯಾಗುತ್ತಿದ್ದರಬಹುದು. ಬೆಳಗ್ಗಿನ ನಮಾಜಿಗೆಂದು ಅಜ್ಜ ಏಳುವ ಮುನ್ನವೇ ಅವಳು ಎದ್ದು
ಬಿಡುತ್ತಿದ್ದಳು.  ಒಂದರ್ಥದಲ್ಲಿ ಅವಳ ಕೂಗಿಲ್ಲದೆ ಅಜ್ಜನಿಗೆ ಬೆಳಗಾಗುತ್ತಲೇ ಇರಲಿಲ್ಲ.
ಅವಳಿಗೋಸ್ಕರ ಎಂದೂ ಹುಲ್ಲು ಕೊಳ್ಳುವ ಪ್ರಸಂಗ ಬಂದೇ ಇಲ್ಲವೇನೋ. ಅವಳು ರಸ್ತೆ ಬದಿಯಲ್ಲೋ,
ಬೇಲಿ ಸಂಧಿಯಲ್ಲೋ, ಗುಡ್ಡದಲ್ಲೋ, ಹೊಳೆಬದಿಯಲ್ಲೋ ಹುಲ್ಲು ಸೊಪ್ಪು ತಿಂದು ಹೊಟ್ಟೆ
ತುಂಬಿಸಿಕೊಳ್ಳುತ್ತಿದ್ದಳು. ಎಷ್ಟೋ ಬಾರಿ ಅಜ್ಜ ಬಣವೆಯ ಹುಲ್ಲು ಕೊಯ್ದು ಅವಳ ಮುಂದಿಟ್ಟಾಗ
ಮುಖ ತಿರುಗಿಸಿದ್ದಳು ಕೆಂಪಿ. ಬಹುಶಃ ಅವಳಿಗೆ ತನ್ನ ಮೇವನ್ನು ನಿಸರ್ಗದತ್ತವಾಗಿ
ಪಡೆದುಕೊಳ್ಳುವುದೇ ಹೆಚ್ಚು ಇಷ್ಟವಾಗುತ್ತಿತ್ತೇನೋ.

ಒಂದು ದಿನ ಅಜ್ಜ ಊರಲ್ಲಿಲ್ಲದಿದ್ದಾಗ ಸಂಜೆ ಆರಾದರೂ ಕೆಂಪಿ ಮನೆಗೆ ಬರಲಿಲ್ಲ ಎಂದು ಕೆಲಸದವರ
ಬಳಿ ಅಮ್ಮ ಅಲವತ್ತುಕೊಳ್ಳುತ್ತಿದ್ದರೆ, ಅವರು "ಬರುತ್ತಾಳೆ ಬಿಡಿ ಅಕ್ಕಾ" ಎಂದು ಮಾತು
ತೇಲಿಸಿಬಿಡುತ್ತಿದ್ದರು. ಅಷ್ಟರಲ್ಲಿ ಅಪ್ಪನೂ ತೋಟದಿಂದ ಮರಳಿ ಬಂದರು. ಅವರಿಗೂ ವಿಷಯ
ತಿಳಿದು ಆತಂಕವಾಗಿ ಗುಡ್ಡ, ಗದ್ದೆಯಂಚು, ತೋಟ, ತೋಡಿನ ಬದಿ ಎಲ್ಲಾ ಕಡೆ ಅವಳನ್ನು
ಹುಡುಕಿದರು. ಆದರೂ ಅವಳ ಸುಳಿವೇ ಇಲ್ಲ. ಮುಸ್ಸಂಜೆ ಕರಗಿ ಕತ್ತಲು ಹುಟ್ಟಿಕೊಂಡಂತೆ ಅಜ್ಜನೂ
ಮರಳಿದರು. ಅವಳೆಲ್ಲಿ ಹೋಗಿರಬಹುದು ಅನ್ನುವ ಆತಂಕದಲ್ಲಿ ರಾತ್ರಿಯಿಡೀ ಜಾಗರಣೆಯಿದ್ದರು. 
ಆದರೆ ಮುಂಜಾನೆದ್ದು ಕೆಂಪಿಯ ಬಗ್ಗೆ ಯೋಚಿಸುತ್ತಾ ಬೆಳಗ್ಗಿನ ನಮಾಜಿಗೆಂದು ಹೊರಟಾಗ ಆಕೆ
ಗೇಟಿನ ಪಕ್ಕ ತಲೆತಗ್ಗಿಸಿ ನಿಂತುಕೊಂಡಿದ್ದಳು. ಅಜ್ಜ ಓಡಿ ಹೋಗಿ ಅವಳನ್ನು ಬರಸೆಳೆದು
ತಬ್ಬಿದರು. ಆ ಜಡಿ ಮಳೆಯನ್ನು ತಾಳಿಕೊಂಡು ರಾತ್ರಿಯಿಡೀ ಕೆಂಪಿ ಅಲ್ಲೇ ನಿಂತಿದ್ದಳಾ?
ಊಹೂಂ,  ಇವತ್ತಿಗೂ ಗೊತ್ತಾಗ್ತಿಲ್ಲ‌.



ಕೆಂಪಿಗೆ ಐದು ವರ್ಷ ತುಂಬಿ, ಆರು ಕಳೆದು ಏಳು ತುಂಬಿ ಒಂದೆರಡು ತಿಂಗಳಾದರೂ ಗರ್ಭ ಧರಿಸಿಲ್ಲ
ಎಂದಾದಾಗ ಕೊಂಚ ಅಧೀರರಾದ ಅಜ್ಜ ಅವಳನ್ನು ಪಶು ವೈದ್ಯರ ಬಳಿ ಕರೆದೊಯ್ದರು. ಅವಳನ್ನು
ಪರೀಕ್ಷಿಸಿದ ವೈದ್ಯರು ಆಕೆ ಗರ್ಭ ಧರಿಸುವ ಸಂಭವ ಕಡಿಮೆಯೆಂದರು. ಆಗೊಮ್ಮೆ ಅವರಿಗೆ
ಪಿಚ್ಚೆನಿಸಿದರೂ ಕೆಂಪಿಯನ್ನೆಂದೂ ಕಡೆಗಣಿಸಿರಲಿಲ್ಲ.

ಆದರೆ ಊರ ಕಸಾಯಿಯವರ ಕಿವಿಗೆ ಈ ಸಂಗತಿ ಹೇಗೆ ಬಿತ್ತೋ ಗೊತ್ತಿಲ್ಲ, ಆಗಲೇ ಮಸಾಲೆ
ಅರೆಯಲಾರಂಭಿಸಿದರು. ಒಂದೆರಡು ಬಾರಿ ಅಜ್ಜನಲ್ಲಿ ಕೆಂಪಿಯನ್ನು ಮಾರುತ್ತೀರಾ ಎಂದು ಕೇಳಿಯೂ
ಬಿಟ್ಟರು. ಆದರೆ ಮಾರಲಾರೆ ಎಂಬುವುದು ಅವರ ಅಚಲ ನಿರ್ಧಾರ. "ಹಾಗೆ ಕಸಾಯಿಯವರಿಗೆ ಕೊಟ್ಟರೆ
ಚೆನ್ನಪ್ಪನ ಕರುಳು ಕತ್ತರಿಸಿದಂತಾಗುತ್ತದೆ. ಕರುಳು ಬಳ್ಳಿಯ ಸಂಬಂಧ ನಿಮಗೆಲ್ಲಿ
ಅರ್ಥವಾಗಬೇಕು?" ಎಂದು ಉರಿದು ಬೀಳುತ್ತಿದ್ದರು.

ಕೆಂಪಿಯಿಂದ ಯಾವ ಉಪಯೋಗವೂ ಇಲ್ಲ ಎಂದು ನಿರ್ಧರಿಸಿಕೊಂಡ ಕೆಲಸದವರೆಲ್ಲಾ ಆಗಲೇ ಅವಳ ಬಗ್ಗೆ
ಅಸಡ್ಡೆ ತೋರಲಾರಂಭಿಸಿದ್ದರು. ಇದನ್ನು ಸೂಕ್ಷ್ಮವಾಗಿ ಅರ್ಥ ಮಾಡಿಕೊಂಡ ಅಜ್ಜ ಅವಳ ಸಂಪೂರ್ಣ
ಉಸ್ತುವಾರಿಯನ್ನು ತಮ್ಮ ಕೈಗೆ ತೆಗೆದುಕೊಂಡರು. ನನಗಾಗ ವ್ಯಾಪಾರ, ಕಸಾಯಿ, ಗೋ ರಾಜಕೀಯ
ಇವ್ಯಾವುವೂ ಅರ್ಥವಾಗುವ ವಯಸ್ಸಲ್ಲ. ನನಗೇನಿದ್ದರೂ ಆಗ ಅವಳ ಮೇಲೆ ಸವಾರಿ ಮಾಡುವುದು, ಅವಳು
ಈಜುತ್ತಿದ್ದರೆ ಚಪ್ಪಾಳೆ ತಟ್ಟಿ ನಗುವುದಷ್ಟೇ ಗೊತ್ತಿದ್ದುದು. ಅದರಾಚೆ ಅವಳದೂ ನನ್ನದೂ
ಶುದ್ಧ ಭಾವುಕ ಸಂಬಂಧ.

ಹಾಗಿರುವಾಗಲೇ, ಒಂದು ಆಷಾಢದ ಸಂಜೆ ಬಾನಿಗೆ ತೂತು ಬಿದ್ದಂತೆ ಮಳೆ ಸುರಿಯುತ್ತಿತ್ತು.
ಮಧ್ಯಾಹ್ನದ ಹೊತ್ತಿಗೇ ರಾತ್ರಿಯನ್ನು ಸೃಷ್ಟಿಸಿಬಿಡುವ ಮೋಡ , ಸಂಜೆಯಾಗುವಾಗ ಗವ್ವೆನ್ನುವ
ಕತ್ತಲೆಯನ್ನೇ ಸೃಷ್ಟಿಸಿಬಿಟ್ಟಿತ್ತು. ಭರ್ರೆಂದು ಬೀಸುವ ಗಾಳಿ, ಕೆಂಪು ನೀರಿನಿಂದ ತುಂಬಿ
ಹರಿಯುವ ತೋಡಿನ ಸದ್ದು, ಇನ್ನೇನು ಬಿದ್ದೇಬಿಡುತ್ತದೇನೋ ಅನ್ನುವಂತೆ ತೊನೆದಾಡುವ ತೆಂಗು,
ಒಲೆಯಲ್ಲಿ ಹಪ್ಪಳ ಸುಡುವ ಘಮ, ಹಂಡೆಯೊಲೆಯೊಳಗೆ 'ಚುರ್ ಚುರ್' ಸದ್ದು ಮಾಡುತ್ತಾ
ಉರಿಯಲೆತ್ನಿಸುವ ಹಸಿ ಕಟ್ಟಿಗೆ, ಮಳೆಯ ಸಪ್ಪಳವನ್ನೂ ಮೀರಿ ವಟರುಗುಟ್ಟುವ ಕಪ್ಪೆ.... ಎಲ್ಲಾ
ಸೇರಿ ಒಂದು ವಿಲಕ್ಷಣ ವಾತಾವರಣವನ್ನು ಸೃಷ್ಟಿ ಮಾಡಿತ್ತು. ಮಗ್ರಿಬ್ ಬಾಂಗ್ ಗೆ ಮುನ್ನ
ಹಟ್ಟಿ ಸೇರುವ ಕೆಂಪಿ ಆ ದಿನ ಬಂದಿರಲಿಲ್ಲ. ಅಜ್ಜ ಐದೈದು ನಿಮಿಷಕ್ಕೊಮ್ಮೆ ತಲೆಬಾಗಿಲಲ್ಲಿ
ನಿಂತು ಕತ್ತು ಉದ್ದಮಾಡಿ ನೋಡುತ್ತಿದ್ದರು. ಒಮ್ಮೆ ಕಾಲುದಾರಿಯತ್ತ, ಮತ್ತೊಮ್ಮೆ ಹಟ್ಟಿಯತ್ತ
ನೋಡಿ ನಿಟ್ಟುಸಿರು ಬಿಡುತ್ತಿದ್ದರು. ಮಳೆ ಇಳಿಯುವ ಲಕ್ಷಣಗಳೇ ಇರಲಿಲ್ಲ. ಲ್ಯಾಂಡ್ ಫೋನ್,
ಕರೆಂಟ್ ಬೇರೆ ಕೈಕೊಟ್ಟಿತ್ತು. ಸಾಲದಕ್ಕೆ ಅಲ್ಲಿ ಝರಿ ಕುಸಿಯಿತು, ಇಲ್ಲಿ ಗುಡ್ಡ ಜರಿದು
ಬಿತ್ತು ಅನ್ನುವ ಅಂತೆಕಂತೆಗಳೆಲ್ಲಾ ಚಿಂತೆಯನ್ನು ಮತ್ತಷ್ಟು ಹೆಚ್ಚಿಸಿತ್ತು. ಆ ದಿನ
ಮಗ್ರಿಬ್ ನ ಸೂರ್ಯ ಕಾಣಲೇ ಇಲ್ಲ. ರಾತ್ರಿಯಿಡೀ ಬಿಡದೆ ಸುರಿದ ಮಳೆ ಮಣ್ಣನ್ನು ಎಷ್ಟು
ಹದಗೊಳಿಸಿತ್ತೆಂದರೆ ಹೆಜ್ಜೆ ಊರಿದಲೆಲ್ಲಾ ಚಪ್ಪಲಿ ಮಣ್ಣೊಳಗೆ ಸೇರಿಕೊಳ್ಳುತ್ತಿತ್ತು.

ಮುಂಜಾನೆ ಆಗುವಷ್ಟರಲ್ಲಿ ಮಳೆಯ ಅಬ್ಬರ ಕೊಂಚ ಕಡಿಮೆಯಾಗಿತ್ತು. ಆದರೆ ಗಾಳಿ, ಮಿಂಚು,
ಗುಡುಗಿನ ಗದ್ದಲ ಹಾಗೇ ಮುಂದುವರಿದಿತ್ತು. ಹಿಂದಿನಂತೆಯೇ ಈ ಬಾರಿಯೂ ಕೆಂಪಿ ಬಂದೇ
ಬರುತ್ತಾಳೆ ಅನ್ನುವ ನಿರೀಕ್ಷೆಯಲ್ಲಿ ಗೇಟಿನ ಬಳಿ ಹೋದರೆ ಅವಳ ಪತ್ತೆಯೇ ಇಲ್ಲ. ಜರಿದು
ಬಿದ್ದ ಮಣ್ಣು, ಕೊಂಬೆ ಮುರಿದುಕೊಂಡ ಅಗಾಧ ಗಾತ್ರದ ಮಾವಿನ ಮರ, ಮಧ್ಯದಲ್ಲಿ ಕತ್ತರಿಸಿ
ಬಿದ್ದ ತೆಂಗು, ಗಾಳಿಯ ಒತ್ತಡ ತಾಳಲಾರದೆ ಮಗುಚಿ ಬಿದ್ದ ತಾಳೆ ಮರ ಆ ದಿನದ ಪ್ರಕೃತಿಗೆ ಒಂದು
ವಿಲಕ್ಷಣತೆಯನ್ನು ತಂದಿತ್ತು.

ಬೆಳಗ್ಗೆ ಹನ್ನೊಂದಾಗುವಾಗ ಊರು ಸ್ವಲ್ಪ ಬೆಳಗಿತ್ತು. ಮೋಡಗಳ ಮಧ್ಯೆ ತೂರಿಬಂದ ಸೂರ್ಯ ಜಗಲಿಯ
ಮೇಲೆ ಬಿಸಿಲನ್ನು ಚೆಲ್ಲಿದ್ದ. ಎರಡು ಆಳುಗಳನ್ನು ಒಟ್ಟುಗೂಡಿಸಿ, ಪಂಚೆ ಎತ್ತಿ ಕಟ್ಟಿ
ಕೆಂಪಿಯನ್ನು ಹುಡುಕಲು ಹೊರಟರು. ಆಕೆ ಸಿಗುತ್ತಾಳೆನ್ನುವ ಆಶಾವಾದದಲ್ಲಿ ನಾವೂ ಅವರ ದಾರಿ
ಕಾಯುತ್ತಿದ್ದೆವು.

ಆದರ ಅಜ್ಜ ಮರಳಿದ್ದು ಅವಳ ಹೆಣದೊಂದಿಗೆ.  ಹಿಂದಿನ ದಿನ ತುಂಬಿ ಹರಿಯುತ್ತಿದ್ದ ತೋಡು
ದಾಟಲಾರದೆ ಕೆಂಪಿ ತೇಲುತ್ತಿದ್ದುದನ್ನು ಊರ ಭಜನಾಮಂದಿರದ ಮುಖ್ಯಸ್ಥರು ನೋಡಿದ್ದರಂತೆ.
ಜಿರುಗುಟ್ಟುವ ಮಳೆಯಲ್ಲಿ ಅವಳನ್ನು ರಕ್ಷಿಸಲಾರದ ಅಸಹಾಯಕತೆ ಅವರನ್ನು ಎಷ್ಟು ಹಣ್ಣು
ಮಾಡಿತ್ತೆಂದರೆ ಗಳಗಳನೆ ಅತ್ತುಬಿಟ್ಟರಂತೆ. ತನ್ನ ಪ್ರೀತಿಯ ಕೆಂಪಿ ಬದುಕಿಲ್ಲ ಅನ್ನುವ
ಕಟುಸತ್ಯವನ್ನು ಅರಗಿಸಿಕೊಳ್ಳಲಾಗದ ಅಜ್ಜ ಅಲ್ಲೇ ಕುಸಿದು ಕುಳಿತರು.  ಕೆಲ ಹೊತ್ತಾದ ಬಳಿಕ
"ನನ್ನ ಕೆಂಪಿ ಅನಾಥೆಯಲ್ಲ, ಹೇಗಾದರೂ ಅವಳನ್ನು ಹುಡುಕಿ ಸಂಸ್ಕಾರ ಮಾಡುತ್ತೇನೆ"  ಎಂದು
ಹುಡುಕಲಾರಂಭಿಸಿದರು. ಸಂಜೆ ಹೊತ್ತಿಗಾಗುವಾಗ ಆಕೆ ಊರಾಚೆಯ ಹೊಳೆಯಲ್ಲಿ ಸತ್ತು
ತೇಲುತ್ತಿದ್ದುದು ಪತ್ತೆಯಾಯಿತು. ಅಜ್ಜ, ಅವಳನ್ನು ಅಲ್ಲಿಂದ ಎತ್ತಿಕೊಂಡು ಬಂದು ಹಟ್ಟಿಯ
ಮುಂದೆ ಮಲಗಿಸಿ ಮೌನವಾಗಿ ಕಣ್ಣೀರಿಡುತ್ತಿದ್ದರು. ಅವರ ಕಣ್ಣೀರು ಸಾವಿರದ ಕಥೆಗಳನ್ನು
ಹೇಳುತ್ತಿದ್ದರೆ ನಾವು ಮೌನವಾಗುಳಿದೆವು.

ಮತ್ತೆ ಜೋರು ಮಳೆಸುರಿಯಲಾರಂಭಿಸಿತು. ಅವರನ್ನು ಕೈ ಹಿಡಿದು ಎಬ್ಬಿಸಿದ ಅಪ್ಪ, ಜಗಲಿಯಲ್ಲಿ
ಕೂರಿಸಿ, ನೆರಮನೆಯವರ ಸಹಾಯದಿಂದ ಆಳೆತ್ತರದ ಹೊಂಡ ತೋಡಿ ಅವಳನ್ನು ಮೆತ್ತಗೆ ಮಲಗಿಸಿ ಮಣ್ಣು
ಹಾಕಿ ಮುಚ್ಚಿದರು. ಅಜ್ಜನಿಗೆ ಏನನಿಸಿತೋ ಗೊತ್ತಿಲ್ಲ, ಕಣ್ಣೀರೊರೆಸಿಕೊಂಡು ಎದ್ದು, ಅವಳ
ಸಮಾಧಿಯ ಮೇಲೆ ಒಂದು ಮದರಂಗಿ ಗಿಡವನ್ನೂ ಮತ್ತೊಂದು ಬೇವಿನ ಗಿಡವನ್ನೂ ನೆಟ್ಟು ನಮ್ಮತ್ತ
ನೋಡಿ, "ಎಲ್ಲಾ ಅವನ ನಿರ್ಧಾರ" ಎಂದು ಒಳ ನಡೆದರು.

ಈಗ ಅಜ್ಜ ಬದುಕಿಲ್ಲ. ಆದರೆ ಅವರು ನೆಟ್ಟ ಮದರಂಗಿ ಗಿಡ ಹಲವು ಮದುಮಕ್ಕಳ ಕೈ ಕೆಂಪಾಗಿಸಿದೆ.
ಅವರೆಲ್ಲರ ಕಣ್ಣಕನಸಿನಲ್ಲಿ‌ ಕೆಂಪಿ ನಿರ್ಮಲವಾಗಿ ತೊನೆಯುತ್ತಿರುತ್ತಾಳೆ‌ ಅಂತ ನನಗೆ ಆಗಾಗ
ಅನ್ನಿಸುತ್ತಿರುತ್ತದೆ.

(ಕೆಂಡ ಸಂಪಿಗೆ ಇ-ಪೇಪರ್ ನಲ್ಲಿ ಪ್ರಕಟಿತ)
(ಚಿತ್ರ ಕೃಪೆ: ಕೆಂಡಸಂಪಿಗೆ)

ಬುಧವಾರ, ಸೆಪ್ಟೆಂಬರ್ 5, 2018

ಎಲ್ಲಿರುವೆ ಪರಮಗುರು?

ಆಗಿನ್ನೂ ಲಕ್ಸುರಿ ಅಂತಲೇ ಅನ್ನಿಸಿಕೊಂಡಿದ್ದ ಬೂದಿ ಬಣ್ಣದ ಬಜಾಜ್ ಚೇತಕ್ ನಿಂದ ಕಟ್ಟುಮಸ್ತಾದ ವ್ಯಕ್ತಿಯೊಬ್ಬರು ಇಳಿಯುತ್ತಿದ್ದರೆ ಇಡೀ ಶಾಲೆ ಒಮ್ಮೆ ಅವರನ್ನು ತಿರುಗಿ ನೋಡಿತ್ತು. ಗಂಭೀರ ಭಾವ, ಅದಕ್ಕೊಪ್ಪುವ ಕನ್ನಡಕ, ಟಾಕು-ಟೀಕು ಉಡುಗೆ, ಶಿಸ್ತಿನ ನಡಿಗೆ, ನಡೆಯುವಾಗ ಟಕ-ಟಕ ಸದ್ದು ಮಾಡುವ ಮಿರಿ ಮಿರಿ ಮಿಂಚುವ ಶೂ, ಕುತೂಹಲದ ನೂರು ಕಣ್ಣುಗಳು ತನ್ನನ್ನು ಹಿಂಬಾಲಿಸುತ್ತಿದ್ದುದು ಗೊತ್ತಿದ್ದೂ ಒಂದಿನಿತೂ ಬದಲಾಗದ ಮುಖಭಾವ... 'ಡೇಸಾ ಸರ್' ಅನ್ನುವಾಗೆಲ್ಲಾ ನನಗೆ ಮೊದಲು ನೆನಪಾಗುವ ಚಿತ್ರಣಗಳಿವು.

ಸುಮಾರು ಸಾವಿರದ ಇನ್ನೂರರಷ್ಟು ವಿದ್ಯಾರ್ಥಿಗಳಿದ್ದ ನಮ್ಮ ಶಾಲೆಗೆ ಹೊಸದಾಗಿ ಸೇರಿದ್ದ ಶಿಕ್ಷಕರವರು. ಮುಖ್ಯೋಪಾಧ್ಯಾಯರು ಮೊದಲ ಬಾರಿ ನಮಗವರನ್ನು ಪರಿಚಯಿಸಿದಾಗ, ಹತ್ತರಲ್ಲಿ ಹನ್ನೊಂದನೆಯವರಾಗಿ ಇವರೂ ಉಳಿದುಬಿಡುತ್ತಾರೆ ಅಂತ ಅನ್ನಿಸಿತ್ತಷ್ಟೇ. ಮೇಲಾಗಿ ಬೂಟಿನ ಶಬ್ಧವೊಂದನ್ನು ಬಿಟ್ಟರೆ ನಮ್ಮ ಗಮನಕ್ಕೆ ಪಾತ್ರವಾಗುವಂತಹ 'ವಿಶೇಷ' ಲಕ್ಷಣಗಳು ಅವರಲ್ಲಿ ಇರಲೂ ಇಲ್ಲ.

ಆದರೆ ಅವರು ಬಂದ ಮರುದಿನ ಸೀನಿಯರ್ ಹುಡುಗರಿಂದ ದೊರೆತ ಅಮೂಲ್ಯ ಮಾಹಿತಿಯೊಂದು ನಮ್ಮನ್ನು ಕುತೂಹಲ ಮತ್ತು ಚಿಂತೆ ಎರಡಕ್ಕೂ ಏಕಕಾಲದಲ್ಲಿ ದೂಡಿತ್ತು. ಈ ಫ್ರಾನ್ಸಿಸ್ ಡೇಸಾ ಮಿಲಿಟರಿ ಸೇವೆಯಲ್ಲಿದ್ದರು, ಈಗ ಶಿಕ್ಷಕರಾಗಿ ನಮ್ಮ ಶಾಲೆ ನಿಯೋಜಿತರಾಗಿದ್ದಾರೆ ಅನ್ನುವುದು ಅವರು ಕೊಟ್ಟ ಮಾಹಿತಿಯ ಒಟ್ಟು ಸಾರಾಂಶ. ಅಪರಿಮಿತ ಧೈರ್ಯಶಾಲಿಗಳು, ಶೂರರು, ವೀರರು ಅಂತೆಲ್ಲಾ ಮನೆಯಲ್ಲಿ ಸೈನಿಕರ ಬಗ್ಗೆ ಮಾತಾಡುವುದನ್ನು ಕೇಳಿಸಿಕೊಂಡಿದ್ದ ನಮಗೀಗ ಮಾಜಿ ಸೈನಿಕನೊಬ್ಬನನ್ನು ನಮ್ಮದೇ ಶಾಲೆಯಲ್ಲಿ ನೋಡುತ್ತಿದ್ದೇವೆ ಅನ್ನುವ ಸೋಜಿಗ.

ಸೈನಿಕರ್ಯಾರೂ ಊಟ ಮಾಡುವುದಿಲ್ಲ, ಯಾವುದೋ ಗುಳಿಗೆ ನುಂಗಿ ಹಸಿವು ನೀಗಿಸುತ್ತಾರೆ ಅಂತೆಲ್ಲಾ ಚಂದಮಾಮ, ಬಾಲಮಂಗಳದ ಕಥೆಗಳು ನಮಗೆ ಹೇಳಿದ್ದರಿಂದಾಗಿ ಒಮ್ಮೆ ಅವರನ್ನು ಕೇಳಬೇಕು, ರೈಫಲ್ ಹಿಡಿಯೋದು ಹೇಗೆ?, ಶಾಲೆಯ ಮೈದಾನವನ್ನೂ ಅದರಾಚೆಗಿನ ಸರ್ಕಾರೀ ನಿವೇಶನವನ್ನೂ ಪ್ರತ್ಯೇಕಿಸುವ ಮುಳ್ಳು ಬೇಲಿಯಂತೆಯೇ ದೇಶದ ಗಡಿಯೂ ಇರುತ್ತದಾ?, ಸೈನಿಕರ್ಯಾರೂ ರಾತ್ರಿ ನಿದ್ರೆ ಮಾಡಲ್ವಾ? ನಮ್ಮ ದೇಶದವರ ತರಾನೇ ಡ್ರೆಸ್ ಮಾಡ್ಕೊಂಡು ಬಂದ್ರೆ ಶತ್ರುಗಳನ್ನು ಗುರುತಿಸುವುದು ಹೇಗೆ? ನೀವ್ಯಾರೂ ದೇವರನ್ನು ನಂಬುವುದಿಲ್ಲವಂತೆ ಹೌದಾ? ವೀರಪ್ಪನೂ ನಿಮ್ಗೆ ಹೆದರ್ತಾನಂತೆ ಹೌದಾ?....ಅಂತೆಲ್ಲಾ ಅವರನ್ನು ಕೇಳಿ ತಿಳಿದುಕೊಳ್ಳಬೇಕು ಅಂತ ಯೋಚಿಸುತ್ತಿದ್ದಾಗ ಬೇರೆ ಒಂದಿಬ್ಬರು ಹುಡುಗರು ಮತ್ತೊಂದು ಸುದ್ದಿ ಹೊತ್ತು ತಂದರು.


ಅವರು ತುಂಬಾ ಕೋಪಿಷ್ಟರಂತೆ, ಸಿಟ್ಟು ಬಂದ್ರೆ ಕಬ್ಬಿಣದ ಸ್ಕೇಲ್ ನಲ್ಲಿ ಹೊಡೀತಾರಂತೆ, ಯಾವುದೋ ಶಾಲೆಯಲ್ಲಿ ಯಾರಿಗೋ ಹೊಡೆದು ತಲೆಯಲ್ಲಿ ರಕ್ತ ಬಂದಿದೆಯಂತೆ ಅಂದರು. ಅಲ್ಲಿಗೆ ನಮ್ಮ ಕುತೂಹಲವೆಲ್ಲಾ ಇಳಿದು ಹೋಗಿ ಆ ಜಾಗವನ್ನು ಭಯ ಆವರಿಸಿತು.

ಸ್ಕೂಲ್‌ಗೆ ಬಂದು  ವಾರ ಕಳೆದರೂ ಅವರಿನ್ನೂ ಯಾವ ತರಗತಿಗೂ ಶಿಕ್ಷಕರಾಗಿ ನಿಯೋಜನೆಯಾಗಿರಲಿಲ್ಲ.‌ ಬೆಳಗ್ಗೆ ಸರಿಯಾಗಿ ಒಂಭತ್ತು ಗಂಟೆಗೆ ಶಾಲೆಯ ಅಂಗಳ ತಲುಪುತ್ತಿದ್ದ ಅವರ ಸ್ಕೂಟರ್, ಮೆಟ್ಟಿಲು ಹತ್ತುತ್ತಿದ್ದಾಗಿನ ಬೂಟಿನ ಶಬ್ದ ಬಿಟ್ಟರೆ ಶಾಲೆಯ ತುಂಬಾ ಹರಿದಾಡುತ್ತಿದ್ದುದು ಗಾಳಿ ಸುದ್ದಿ ಮಾತ್ರ. ಗಟೆಗೆ ಹತ್ತರಂತೆ ಅವರ ಬಗ್ಗೆ ಹುಟ್ಟಿಕೊಳ್ಳುತ್ತಿದ್ದ ಗುಲ್ಲು, ಅಂತೆ-ಕಂತೆಗಳು, ತಲೆ ಬುಡವಿಲ್ಲದ ಸುದ್ದಿಗಳು ಬ್ರೇಕಿಂಗ್ ನ್ಯೂಸ್ ಗಳಿನ್ನೂ ಹುಟ್ಟಿಕೊಳ್ಳದ ಆ ಕಾಲದಲ್ಲಿ ಅವರನ್ನು ಒಂದು ಒಳ್ಳೆಯ ಕವರ್ ಸ್ಟೋರಿಯನ್ನಾಗಿಸಿತ್ತು.
ಅಂತೂ  ವಾರ ಕಳೆದು ಎರಡು ದಿನಗಳಾದಂತೆ ನೇರ ಅವರು ನಮ್ಮ ತರಗತಿಗೇ ಬಂದರು. ತಲೆಯಲ್ಲಿ ಕಬ್ಬಿಣದ ಸ್ಕೇಲ್‌, ರಕ್ತ ಒಸರುವ ವಿದ್ಯಾರ್ಥಿಯ ಚಿತ್ರಣಗಳೇ ಓಡುತ್ತಿದ್ದವು. ಸರಿಯಾಗಿ ಉಸಿರಾಡಲೂ ಭಯವಾಗುತ್ತಿತ್ತು. ಸಹಪಾಠಿಗಳತ್ತ ತಿರುಗಿ ಮಾತನಾಡುವುದು ಬಿಡಿ, ಕಣ್ಣೆತ್ತಿ ನೋಡಲೂ ಭಯವಾಗುತ್ತಿತ್ತು. ಆವತ್ತಿನವರೆಗೂ ಮಹಿಳೆಯರನ್ನೇ ಶಿಕ್ಷಕರಾಗಿ ಪಡೆದಿದ್ದ ನಮಗೆ ಅವರ ಪಾಠ ಒಂದು ಹೊಸ ಅನುಭವ. ಒಪ್ಪವಾಗಿ ಸೀರೆ ಉಡುತ್ತಿದ್ದ ಶಿಕ್ಷಕಿಯರೆಲ್ಲಾ 'ಎಷ್ಟು ಅಮ್ಮನಂತಿದ್ದಾರೆ' ಅಂತ ಅನ್ನಿಸಿಬಿಡುತ್ತಿದ್ದರೆ, ಇವರೊಬ್ಬರು ಮಾತ್ರ ತೀರಾ ಅಪರಿಚಿತರು ಅನಿಸುತ್ತಿತ್ತು. ಅವರ ಬಗ್ಗೆ ಹಬ್ಬಿದ್ದ ಗಾಳಿ ಸುದ್ದಿಗಳು ಆ 'ಅಪರಿಚಿತತೆಯನ್ನು' ಮಾತಷ್ಟು ಗಾಢವಾಗಿಸುತ್ತಿತ್ತು.

ಆದರೆ ನಮ್ಮೆಲ್ಲಾ ಅಪನಂಬಿಕೆ, ಅಭದ್ರತೆಗಳನ್ನು ಮೀರಿ ಅರ್ಧಗಂಟೆಯಲ್ಲೇ ನಮಗವರು ಆಪ್ತರಾದರು. ಶುದ್ಧ ಕನ್ನಡ, ಸರಳ ಭಾಷೆ, ಆಕರ್ಷಣೀಯ ವ್ಯಕ್ತಿತ್ವ, ಪಾಠದ ಶೈಲಿ ನಿಧಾನವಾಗಿ ನಮ್ಮನ್ನು ಅವರತ್ತ ಸೆಳೆದಿತ್ತು. ಇಷ್ಟಾಗುವಾಗ ಇಡೀ ತರಗತಿಯ ಭಯ ಮಾಯವಾಗಿ ಸಹಜ ಸಲುಗೆ ಬೆಳೆದಿತ್ತು. ಎಂದಿನಂತೆ ಗದ್ದಲವೂ ಪ್ರಾರಂಭವಾಯಿತು.ಒಮ್ಮೆ ಮೇಜು ಕುಟ್ಟಿ ಸುಮ್ಮನಿರಲು ಎಚ್ಚರಿಸಿದರೂ ಅದು ಕೆಲವೇ ಕ್ಷಣಗಳ ನಿಶಬ್ದ, ಮತ್ತೆ ಅದೇ ಕಲರವ. ನಮ್ಮನ್ನೊಮ್ಮೆ ತೀಕ್ಷ್ಣವಾಗಿ ದಿಟ್ಟಿಸಿದ ಅವರು ನನ್ನನ್ನು ಉದ್ದೇಶಿಸಿ "ಏ ಬಿಳಿ ಜಿರಳೆ ನಿಂತು ಕೋ" ಅಂದರು.

ನನಗೆ ಗಾಬರಿಯಲ್ಲಿ ನಿಲ್ಲೋಕೂ ಆಗದೆ ಕೂರೋಕೂ ಆಗದೆ ತಡವರಿಸ್ತಾ ಇದ್ದೆ. ಮತ್ತೊಮ್ಮೆ ಗದರಿದರು‌. ನಿಧಾನಕ್ಕೆ ಎದ್ದು ನಿಂತೆ. "ನಿಲ್ಲೋಕೆ ಇಷ್ಟು ಹೊತ್ತು ಬೇಕಾ? ನಿಮ್ಮ ಧಿಮಾಕು ನನ್ನ ಹತ್ರ ನಡೆಯೋದಿಲ್ಲ. ನನ್ನ ಕ್ಲಾಸ್ ನಲ್ಲಿ ಒಂದು ಶಬ್ದ ಮಾತಾಡಿದ್ರೂ ಫುಟ್ಬಾಲ್ ಒದ್ದಂತೆ ಒದ್ದು ಹೊರಹಾಕುತ್ತೇನೆ" ಅಂದು ಎದ್ದು ಬಂದರು.  ನನಗೆ ಕೈಕಾಲು ನಡುಗುವುದಕ್ಕೆ ಶುರುವಾಯಿತು. 'ಈ ಆಜಾನುಬಾಹು ನನ್ನನ್ನು ಫುಟ್‌ಬಾಲ್‌ ಒದ್ದಂತೆ ಒದ್ದರೆ ನಾನು ಶಾಲೆಯ ಕಾಂಪೌಂಡ್ ದಾಟಿ ಹೊರಗೆ ಬೀಳುತ್ತೇನೇನೋ? ಮೊದಲೇ ವಾಚಾಳಿ ಅಂತ ಎಲ್ಲರಿಂದಲೂ ಬೈಸಿಕೊಳ್ಳುತ್ತಿದ್ದೇನೆ, ಇನ್ನು ಹೀಗೆ ಒದೆಸಿಕೊಂಡರೆ ಮನೆಯಲ್ಲಿ ಏನು ಉತ್ತರ ಹೇಳ್ಳಿ? ಈಗ ಈ ಸಮಸ್ಯೆಯಿಂದ ಪಾರಾಗುವುದಾದರೂ ಹೇಗೆ?' ಅಂತ ಅಂದುಕೊಳ್ಳುತ್ತಿದ್ದೆ. ಅವರೋ ಸುಮ್ಮನೆ ಹತ್ತಿರ ಬಂದು ಒಮ್ಮೆ ಗುರಾಯಿಸಿ ತಿರುಗಿ ಹೋದರು. ನಾನು ನೆಮ್ಮದಿಯ ಉಸಿರು ಬಿಟ್ಟು ಅಲ್ಲೇ ಕುಳಿತುಕೊಂಡೆ. ಆದರೆ ಒಳಗೊಳಗೇ ಅಸಹಾಯಕತೆ, ಅವಮಾನ ಹೊಗೆಯಾಡುತ್ತಿತ್ತು.

ಅದಾಗಿ ಕೆಲವೇ ದಿನಗಳಲ್ಲಿ ಸ್ಕೂಲ್ ಟ್ರಿಪ್ ಅರೇಂಜ್ ಆಗಿತ್ತು. ನಮ್ಮ ಬಸ್ ಗೆ ಇದೇ ಡೇಸಾ ಸರ್ ಮೇಲ್ವಿಚಾರಕರು.'ಶಾಲೆಯ ಪ್ರವಾಸಕ್ಕೆ ಜೈ' ಎಂದು ಯಾರೂ ಚೀಟಿ ಎಸೆಯುವಂತಿಲ್ಲ ಎಂದು ಮೊದಲೇ ಫರ್ಮಾನ್ ಹೊರಡಿಸಿದ್ದರು. ಉಗುಳಲೂ ಆಗದ, ನುಂಗಲೂ ಆಗದ ಪರಿಸ್ಥಿತಿ ನಮ್ಮದು. ಓರೆಗಣ್ಣಿನಿಂದ ಅವರನ್ನು ನೋಡುತ್ತಾ ನಾವು ನಮ್ಮ ಕಿತಾಪತಿ ಶುರು ಹಚ್ಚಿಕೊಂಡೆವು. ಆದರೆ ಅಚ್ಚರಿ ಎಂಬಂತೆ ಅವರೇ ತಮ್ಮ ಬಿಗುವನ್ನೆಲ್ಲಾ ಮರೆತು ನಮ್ಮೊಂದಿಗೆ ಹೆಜ್ಜೆ ಹಾಕೋಕೆ, ಹಾಡೋಕೆ ಶುರು ಮಾಡಿದರು. ನಮಗೋ ಸ್ವರ್ಗಕ್ಕೆ ಮೂರೇ ಗೇಣು!

ಅಂತೂ ಹಾಡುತ್ತಾ ಕುಣಿಯುತ್ತಾ ಪಿಕ್ನಿಕ್ ಸ್ಪಾಟ್ ತಲುಪಿದೆವು. ಪಾರ್ಕ್, ನಿಸರ್ಗಧಾಮ, ಏರ್ಪೋರ್ಟ್, ಹಳೆಯ ದೇವಾಲಯ ಅಂತೆಲ್ಲಾ ಸಾಧ್ಯವಿರುವಷ್ಟು ಕಡೆ ಭೇಟಿ ನೀಡಿ ಕೊನೆಗೆ ಸೂರ್ಯಾಸ್ತದ ಹೊತ್ತಿಗೆ ಬೀಚ್ ತಲುಪಿದೆವು. ಮೊದಲೇ ವಿಪರೀತ ತುಂಟರೆಂದು ಹೆಸರು ಗಳಿಸಿದ್ದ ಕ್ಲಾಸ್ ನಮ್ಮದು. ನಮ್ಮ ಮೇಲೆ ಹದ್ದಿನ ಕಣ್ಣು ಇಡಲೇಬೇಕೆಂದು ಮುಖ್ಯೋಪಾಧ್ಯಾಯರು ಟ್ರಿಪ್ ಹೊರಡುವ ಮುನ್ನವೇ ಸೂಚನೆ ಕೊಟ್ಟಿದ್ದರು. ಹಾಗಾಗಿ  ನಮ್ಮ ಮೇಷ್ಟ್ರು ತುಸು ಹೆಚ್ಚೇ ಜಾಗರೂಕರಾಗಿದ್ದರು. ನಮಗೋ ನೀರೆಂದರೆ ವಿಪರೀತ ಮೋಹ, ಅರಿಯದ ಸಂಭ್ರಮ. ಕಡಲ ತಡಿಗೆ ಮೊದಲ ಬಾರಿ ಬಂದಿದ್ದ ಹುಮ್ಮಸ್ಸು ಬೇರೆ. ತೀರದಲ್ಲಿ ಅಲೆಗಳು ಮಾತಾಡಿರೆಂದು ಗೋಗರೆಯುತ್ತಿದ್ದರೆ ನಾವಾದರೂ ಹೇಗೆ ಸುಮ್ಮನಿರುವುದು? ಅವರ ಕಣ್ಣು ತಪ್ಪಿಸಿ ನೀರಿಗೆ ಇಳಿದೇ ಬಿಟ್ಟೆ.

ಅಲೆಗಳಿಗೆಲ್ಲಿತ್ತೋ ಆವೇಶ? ಕಣ್ಣು ಮುಚ್ಚಿ ತೆರೆಯುವಷ್ಟರಲ್ಲಿ ಉಬ್ಬರವಿಳಿತಗಳ ಮಧ್ಯೆ ತೇಲತೊಡಗಿದೆ. ಸತ್ತೇ ಹೋಗುತ್ತೇನೇನೋ ಅನ್ನುವ ಗಾಬರಿಯಲ್ಲಿ ಧ್ವನಿಯೇ ಹೊರಡುತ್ತಿರಲಿಲ್ಲ. ಉಳಿದ ವಿದ್ಯಾರ್ಥಿಗಳ ಗಲಾಟೆಯಿಂದ ನಮ್ಮ ಮೇಷ್ಟ್ರಿಗೂ ಆಗಲಿರುವ ಅನಾಹುತದ ಬಗ್ಗೆ ತಿಳಿದು ನೀರಿಗೆ ಧುಮುಕಿದರು. ಬದುಕುತ್ತೇನೆ ಅನ್ನುವ ಆಶಾವಾದ ಮೂಡುತ್ತಿದ್ದಂತೆ ನಾನು ಕಣ್ಣುಮುಚ್ಚಿದೆ.

ಕಣ್ಣುಬಿಟ್ಟಾಗ ಅವರ ಮಡಿಲಲ್ಲಿದ್ದೆ. ತೊಯ್ದು ತೊಪ್ಪೆಯಾಗಿದ್ದ ಅದಕ್ಕಿಂತಲೂ ಹೆಚ್ಚಾಗಿ ಗಾಬರಿಯಿಂದ ಪೂರ್ತಿ ಬಿಳುಚಿಹೋಗಿದ್ದ ನನ್ನನ್ನು ಬೆಚ್ಚಗಾಗಿಸುವ ಪ್ರಯತ್ನದಲ್ಲಿ ಅವರಿದ್ದರು. ಅವರ ತಲೆಗೂದಲಿಂದ ತೊಟ್ಟಿಕ್ಕುತ್ತಿದ್ದ ನೀರು ನನ್ನ ಗಲ್ಲದ ಮೇಲೆ ಹರಿದು ಮರಳಿನೊಳಗೆ ಇಂಗುತ್ತಿತ್ತು.   ಜೊತೆ ಜೊತೆಗೆ ಅವರೆಡೆಗೆ ನನಗಿದ್ದ ಸಿಟ್ಟು ನಿಧಾನವಾಗಿ ಕರಗಿ ಅರಿಯದ ಹೆಮ್ಮೆಯೊಂದು ಮೂಡತೊಡಗಿತು, ಸಂಜೆಗೆಂಪಿನ ಸೂರ್ಯ ಪಶ್ಚಿಮದಲ್ಲಿ ನೆಮ್ಮದಿಯ ನಗೆ ಚೆಲ್ಲಿ ಕರಗಿಹೋದ.

ಇತ್ತ ಸರ್, "ಏನಾಯ್ತೇ ಹುಡುಗಿ, ನೀರಿಗೆ ಇಳಿಯಬಾರದೆಂದು ಹೇಳಿದ್ದರೂ ಯಾಕೀ ಸಾಹಸ? ಹಾಗೆ ಹೇಳಿದ್ದರೆ ನಾನೇ ನಿನ್ನನ್ನು ನೀರೊಳಗೆ ಕರೆದುಕೊಂಡು ಹೋಗುತ್ತಿದ್ದೆನಲ್ಲಾ?" ಎಂದು ಅಕ್ಕರೆಯಿಂದ ಕೇಳುತ್ತಿದ್ದರೆ ನನಗೆ ಟಿ.ವಿಯಲ್ಲಿ ಬರುವ ಹೀ ಮ್ಯಾನ್ ಇವರೇ ಏನೋ ಅನ್ನುವ ಅನುಮಾನ. ಬಹುಶಃ ಬದುಕಿಗೊಬ್ಬ ಪರಮಗುರು ಇರುತ್ತಾನೆ ಅನ್ನುವ ಕಲ್ಪನೆ ಮೊದಲು ನನ್ನೊಳಗೆ ಮೊಳಕೆಯೊಡೆದದ್ದೇ ಆ ಕ್ಷಣದಲ್ಲಿ.

ಆ ಘಟನೆ ನಡೆದ ಮೇಲೆ ನನಗವರು ಮೆಚ್ಚಿನ ಗುರು, ಅವರು ಹೇಳಿದ್ದನ್ನೆಲ್ಲಾ ಚಾಚೂ ತಪ್ಪದೆ ಪಾಲಿಸುತ್ತಿದ್ದೆ. ನನಗವರೇ ದೊಡ್ಡ ರೋಲ್ ಮಾಡೆಲ್. ಅವರಂತೆ ನಡೆಯುವ, ಮಾತಾಡುವ ಪ್ರಯತ್ನವೂ ಮಾಡುತ್ತಿದ್ದೆ. ನಡು ನಡುವೆ ನೀರಲ್ಲಿ ತೇಲುತ್ತಿದ್ದುದನ್ನು ನೆನಪಿಸಿ ನಗುವುದೂ ಇತ್ತು. ಅಕಾಡೆಮಿಕ್ ವಿಚಾರಗಳಲ್ಲಿ  ಮೊದಲಸಾಲಿನಲ್ಲೇ ಇರುತ್ತಿದ್ದರೂ ನನ್ನ ವಿಪರೀತ ಓದಿನ ಗೀಳನ್ನು ಯಾರೂ ಪತ್ತೆಹಚ್ಚಿರಲಿಲ್ಲ. ಆದ್ರೆ ಡೇಸಾ ಸರ್ ನನಗೆ ಪುಸ್ತಕಗಳನ್ನು ನೀಡಿ ಓದಲು ಮತ್ತಷ್ಟು ಪ್ರೇರೇಪಣೆ ನೀಡುತ್ತಿದ್ದರು. ಶಾಲೆಯ ವಾರ್ಷಿಕೋತ್ಸವ ಸಮಾರಂಭದಲ್ಲಿ ಪ್ರದರ್ಶಿಸಲು ಉದ್ದೇಶಿಸಿದ್ದ ನಾಟಕದಲ್ಲಿ ರಾಣಿ ಅಬ್ಬಕ್ಕಳಾಗಿ ನನ್ನನ್ನು ಆಯ್ಕೆ ಮಾಡಿದ್ದಾಗ ನಾನು ಪಾತ್ರ ನಿಭಾಯಿಸಲಾರೆ ಎಂದು ಹಿಂಜರಿದಿದ್ದೆ. ಆಗಲೂ ಅವರು ಪಕ್ಕ ಕೂತು ಪ್ರೀತಿಯಿಂದಲೇ ಅಭಿನಯಿಸಲು ಒಪ್ಪಿಸಿದ್ದರು.

ವಿಜ್ಞಾನದ ಬಗ್ಗೆ, ಅದರಲ್ಲೂ ಖಗೋಳ ವಿಜ್ಞಾನದ ಬಗ್ಗೆ ವಿಪರೀತ ಆಸಕ್ತಿ ಇದ್ದ ಅವರು ಇಸ್ರೋ, ರಾಕೆಟ್, ಕೃತಕ ಉಪಗ್ರಹ ಅಂತೆಲ್ಲಾ ಸರಳವಾಗಿ ವಿವರಿಸುತ್ತಿದ್ದರೆ ಇಡೀ ತರಗತಿ ಮೈ ಮರೆಯುತ್ತಿತ್ತು. ಹಾರುವ ತಟ್ಟೆಗಳು ಇವೆ, ಇಲ್ಲ ಅನ್ನುವ ವಾದ ಚಾಲ್ತಿಯಲ್ಲಿದ್ದ ಆ ಕಾಲದಲ್ಲಿ  ಅವರು ಅದನ್ನು ವರ್ಣಿಸುತ್ತಿದ್ದರೆ ನಾವು ವಿಮಾನದ ಸಣ್ಣ ಸದ್ದಾದರೂ ಅನ್ಯಗ್ರಹ ಜೀವಿಗಳಿರಬಹುದೇನೋ ಅನ್ನುವ ಕುತೂಹಲದಲ್ಲಿ ನೋಡುತ್ತಿದ್ದೆವು. ಕ್ಲಿಷ್ಟ ವಿಷಯಗಳನ್ನೂ ತೀರಾ ಸರಳವಾಗಿ ನಮಗರ್ಥವಾಗುವಂತೆ ವಿವರಿಸುತ್ತಿದ್ದ ಅವರ ಸಾಮರ್ಥ್ಯದ ಬಗ್ಗೆ ಇವತ್ತಿಗೂ ನನಗೊಂದು ಅಚ್ಚರಿ ಉಳಿದುಬಿಟ್ಟಿದೆ.

ಮುಂದೆ ಏಳನೇ ತರಗತಿಯಲ್ಲಿ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಭಾಷಣ ಮಾಡುತ್ತಾ ಅವರ ಬದುಕಿನ ಮೊದಲ ಮೆಚ್ಚಿನ ಶಿಷ್ಯೆ ನಾನು ಅಂದಾಗ ಅತ್ತೇ ಬಿಟ್ಟಿದ್ದೆ. ಬಹುಶಃ ಅದು ನನ್ನ ಬದುಕಿನ ಮೊದಲ ಹೆಮ್ಮೆಯ ಕ್ಷಣ. ಮುಂದೆ, ಹೈಸ್ಕೂಲ್, ಕಾಲೇಜ್ ಅಂತೆಲ್ಲಾ ಹೊಸ ಕಲಿಕೆಯಲ್ಲಿ ಮುಳುಗಿ ಹೋದರೂ ಆಗೊಮ್ಮೆ ಈಗೊಮ್ಮೆ ಅವರು ನೆನಪಾಗಿ ಕಾಡುತ್ತಿದ್ದರು. ಕಷ್ಟ ಅನ್ನಿಸಿದಾಗೆಲ್ಲಾ ಹಿಂದೆ ನಿಂತು ಬೆನ್ನು ತಟ್ಟುತ್ತಿದ್ದಾರೇನೋ ಅಂತ ಅನ್ನಿಸುತ್ತಿತ್ತು. ಆಗ ಉತ್ಸಾಹ ಮತ್ತೆ ಗರಿಗೆದರುತ್ತಿತ್ತು. ನನ್ನ ವಿದ್ಯಾಭ್ಯಾಸ ಮುಗಿದ ನಂತರ ಅವರನ್ನು ಒಮ್ಮೆ ಭೇಟಿಯಾಗಬೇಕೆಂದು ಪಟ್ಟ ಪ್ರಯತ್ನ ಅಷ್ಟಿಷ್ಟಲ್ಲ.  ಆದ್ರೆ ಇವತ್ತಿನವರೆಗೂ ಅವರನ್ನು ಭೇಟಿಯಾಗಲು ಸಾಧ್ಯವಾಗಿಲ್ಲ.

ಮುಂದೊಂದು ದಿನ ಭೇಟಿಯಾದಾಗ ಹಳೆ ನೆನಪುಗಳನ್ನೊಮ್ಮೆ ಮೆಲುಕು ಹಾಕಬೇಕು, ಹಿಂದಿನಂತೆಯೇ ಅವರಿಂದೊಮ್ಮೆ ಬೆನ್ನು ತಟ್ಟಿಸಿಕೊಳ್ಳಬೇಕು, ಮತ್ತೊಂದು ಖುಶಿಯ ಕ್ಷಣವನ್ನು ನನ್ನ ಬದುಕಿನ ಜೋಳಿಗೆಯೊಳಕ್ಕೆ ತುಂಬ ಬೇಕು. ಅಲ್ಲಿಯವರೆಗೆ, ಎದೆಯ ಹಣತೆಯಲ್ಲಿ ಅರಿವಿನ ದೀವಿಗೆ ಹಚ್ಚಿದ ನನ್ನೆಲ್ಲಾ ಶಿಕ್ಷಕರಿಗೂ, ನನಗೊಂದು ವ್ಯಕ್ತಿತ್ವ ರೂಪಿಸಿಕೊಟ್ಟ ನನ್ನ ಪ್ರೀತಿಯ ಪುಸ್ತಕಗಳಿಗೂ ಮತ್ತು  ಪೆಟ್ಟು ಕೊಡುತ್ತಲೇ ಪಾಠ ಕಲಿಸಿದ ಬದುಕೆಂಬ ಮಹಾಗುರುವಿಗೂ ಶಿಕ್ಷಕರ ದಿನಾಚರಣೆಯ ಶುಭಾಶಯ.

(ಕೆಂಡ ಸಂಪಿಗೆ e-paperನಲ್ಲಿ ಪ್ರಕಟಿತ)
(ಚಿತ್ರಕೃಪೆ: ಕೆಂಡಸಂಪಿಗೆ)

ಭಾನುವಾರ, ಮಾರ್ಚ್ 18, 2018

ಕಣ್ಣ ತೇವ.

ಕಣ್ಣ ತೇವಕ್ಕೆಲ್ಲಾ ಅರ್ಥ ಹುಡುಕಬಾರದು

ಒಮ್ಮೊಮ್ಮೆ ಅದು ಹೆತ್ತೊಡಲ ಉರಿ
ಒಮ್ಮೆ ಸುಮ್ಮನೆ ಹಾದು ಹೋಗುವ
ಒಂದು ನೆನಪು, ಹಳೆಯ ಬಂಧ
ಮುಗಿಲು ಬಿರಿವ ಮಳೆ ಸುರಿದ
ನಂತರ ಉಳಿದು ಬಿಡುವ ನಿಶಬ್ಧ

ಚಳಿಗಾಲದ ದೀರ್ಘ ರಾತ್ರಿಯಲಿ ಹೊದ್ದ
ಬೆಚ್ಚನೆಯ ಕೌದಿಯೊಳಗೆ ಸೇರಿಕೊಂಡ ಚೇಳು
ಒಂದು ಮಗ್ಗುಲು ಬದಲಿಸುವಷ್ಟರಲ್ಲಿ
ಚುಚ್ಚಿದ ಇಷ್ಟುದ್ದದ ಮುಳ್ಳು

ಬಸಿದ ಬೆವರ ಲೆಕ್ಕ
ಅಪರಾತ್ರಿಯ ಸುಖದ ನರಳಿಕೆಯ
ಮಧ್ಯದಲ್ಲೆಲ್ಲೋ ಕೇಳಿ ಬಂದ
ಒಂದು ವಿಷಾದದ ನಿಟ್ಟುಸಿರು
ಮುರಿದ ಗೋಡೆಯೊಳಗಿನ ಸಣ್ಣ ಬಿಕ್ಕಳಿಕೆ

ಈಗಷ್ಟೇ ಆರಿದ ದೀಪ
ಒಡೆದು ಬಿದ್ದ ಕೊಳಲು
ತಂತಿ‌ ಹರಿದ ವೀಣೆ
ಒಂದು ಹನಿ‌‌ ಪ್ರೇಮ

ಅಥವಾ ಕಣ್ಣ ತೇವಕ್ಕೆಲ್ಲಾ
ಅರ್ಥ ಇರಲೇಬೇಕಿಲ್ಲವೇನೋ?

(ಸುಧಾ ಯುಗಾದಿ ವಿಶೇಷಾಂಕ 2018ರಲ್ಲಿ ಪ್ರಕಟಿತ.)
(ಚಿತ್ರಕೃಪೆ: ಸುಧಾ ಯುಗಾದಿ ವಿಶೇಷಾಂಕ.)

ಬುಧವಾರ, ಫೆಬ್ರವರಿ 28, 2018

ಸಮಚಿತ್ತೆ ಊರ್ಮಿಳೆ

ಇರುವಿಕೆ ಮತ್ತು ಇಲ್ಲದಿರುವಿಕೆಯ
ಧ್ಯಮ ಮಾಧ್ಯಮದಲ್ಲಿ
ನಿಂತು ಒಮ್ಮೆ ಗೈರಿನತ್ತ
ತ್ತೊಮ್ಮೆ ಅಸ್ತಿತ್ವದತ್ತ 
ದೃಷ್ಟಿ ಹಾಯಿಸಬೇಕು

ಎಷ್ಟು ಅಂತರವಿದ್ದೀತು?
ಅಜ-ಗಜಗಳ ಗುಣಾಕಾರ
ಭಾಗಾಕಾರಗಳೊಂದೂ ಲೆಕ್ಕಕ್ಕೆ ಬಾರದಿಲ್ಲಿ

ಎರಡು ಧ್ರುವಗಳ ನಡುವೆ
ತೇಲಿ ಹೋದ ತಣ್ಣನೆಯ ಗಾಳಿ
ಎಷ್ಟು ಸುನೀತ ಕನಸುಗಳ
ಮೈ ಸವರಿ ಆಸೆ ಹುಟ್ಟಿಸಿ
ಕತ್ತು ಹಿಸುಕಿ ಸಾಯಿಸಿರಬಹುದು?

ಪಂಜರದೊಳಗಿನ ಹಕ್ಕಿಗೂ
ಬಿಡುಗಡೆಯ ಆಸೆಯಿರಬಹುದು
ಅಥವಾ ಪರಾಧೀನತೆಯ ಅಸಹ್ಯ

ನಿಷಿದ್ಧ ಸಂಗತಿಗಳಿಗೂ ಒಮ್ಮೊಮ್ಮೆ
ಗೆರೆ ದಾಟುವ ಖಯಾಲಿ
ನಿಡುಸುಯ್ಯುವ ಊರ್ಮಿಳೆಯ
ಉಸಿರನು ತಾಕುವ ಎದೆಗಾರಿಕೆ
ಈ ಜಗದ ಯಾವ ಲೆಕ್ಕಾಚಾರಕ್ಕಿದ್ದೀತು?

ಬಿಡಿ, ಎಲ್ಲಾ ಇರುವಿಕೆ ಮತ್ತು
ಇಲ್ಲದಿರುವಿಕೆಗಳ ಮಧ್ಯೆ 
ತಣ್ಣಗೆ ಬೆಳಗುವ ಸಮಚಿತ್ತೆ ಊರ್ಮಿಳೆ.

ಆದಿತ್ಯನಾಥರ ಉ.ಪ್ರ ಮತ್ತು ಮತ್ತೊಂದು ಕೊಲೆ.

ಸತ್ತಿರೋ ಶ್ರೀದೇವಿಯವರನ್ನು ಮತ್ತೆ ಮತ್ತೆ ಅತಿರಂಜಕವಾಗಿ ಸಾಯಿಸ್ತಿರುವ ಈ ದೇಶದ ಎಲ್ಲಾ ಮಾಧ್ಯಮಗಳಿಗೂ (ಈ ಪ್ರಕರಣದಲ್ಲಿ ದುಬೈ ಮಾಧ್ಯಮಗಳಿಗೂ) ಸಾಷ್ಟಾಂಗ ಪ್ರಣಾಮಗಳನ್ನು ಸಲ್ಲಿಸುತ್ತಾ ಒಂದು ಘಟನೆಯ ಬಗ್ಗೆ ಮಾತಾಡಬೇಕಿದೆ ನನಗೆ.

ಮೊನ್ನೆ ಫೆಬ್ರವರಿ 22ರಂದು ಕಮ್ಯೂನಿಸ್ಟರ ಕೇರಳದಲ್ಲಿ ಮಧು ಎಂಬ ಆದಿವಾಸಿ ಯುವಕನೊಬ್ಬ ಹಸಿವಿನ ಕಾರಣದಿಂದ ಅಕ್ಕಿ ಕದ್ದದ್ದಕ್ಕಾಗಿ ಕೊಲೆಯಾಗಿ ಹೋದ್ನಲ್ಲಾ ಅದೇ ದಿನ ಯೋಗಿ ಆದಿತ್ಯನಾಥರ ಉತ್ತರ ಪ್ರದೇಶದ ಉನ್ನಾವೋದಲ್ಲಿ ಹದಿನೆಂಟರ ಹುಡುಗಿಯೊಬ್ಬಳು ಬೆಂಕಿಯಲ್ಲಿ ಬೆಂದು ಕರಕಲಾಗಿ ಹೋದಳು.

ತರಕಾರಿ ತರಲೆಂದು ಮಾರ್ಕೆಟ್ ಗೆ ಹೋದ ಹುಡುಗಿಯ ಮೇಲೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿ ಜೀವಂತ ಸುಟ್ಟರು ಕೊಲೆಗಾರರು. ಜೀವ ಉಳಿಸಿಕೊಳ್ಳಲು ಓಡಿದ ಅವಳು ಒಂದಿಷ್ಟು ದೂರ ಓಡುವಷ್ಟರಲ್ಲಿ ಸುಟ್ಟು ಕರಕಲಾಗಿ ಬಿಟ್ಟಳು. ಈವತ್ತಿನವರೆಗೂ ಆ ಭೀಕರ ಕೊಲೆಗೆ ಕಾರಣವೇನೆಂದು ತಿಳಿದುಬಂದಿಲ್ಲ.

ದಿನ ಪತ್ರಿಕೆ ಓದುವ, ನ್ಯೂಸ್ ಚಾನೆಲ್ ನೋಡುವ ನಮ್ಮಲ್ಲಿ ಎಷ್ಟು ಮಂದಿಗೆ ಈ ಘಟನೆಯ ಬಗ್ಗೆ ಗೊತ್ತಿದೆ? ಮಧುವಿನ ಸಾವು ದಿನಪತ್ರಿಕೆಗಳ ಮುಖಪುಟ ಸುದ್ದಿಯಾಯಿತು, ನ್ಯೂಸ್ ಚಾನಲ್ ಗಳ ಪ್ರೈಮ್ ಟೈಮ್ ನ್ಯೂಸ್ ಆಯ್ತು. ಆದರೆ ಬಾಳಬೇಕಿದ್ದ, ಬದುಕಬೇಕಿದ್ದ ಆ ಹುಡುಗಿಯ ಜೀವಂತ ದಹನ ಪತ್ರಿಕೆಗಳಲ್ಲಿ ಕಣ್ಣಿಗೆ ಕಾಣದಂತೆ ಒಂದು ಮೂಲೆಯಲ್ಲಿ ಪ್ರಕಟವಾಯಿತು.

ಎರಡೂ ಘಟನೆಗಳು ನಾಗರಿಕ ಸಮಾಜ ತಲೆತಗ್ಗಿಸುವಂತಹ ಸಂಗತಿಗಳು. ಎರಡರಲ್ಲೂ ಜೀವ ಕಳೆದುಕೊಂಡದ್ದು ಈ ದೇಶದ ಭವಿಷ್ಯವಾಗಿರುವ ಎರಡು ಯುವ ಜೀವಗಳು. ಎರಡೂ ಪ್ರಕರಣಗಳಲ್ಲಿ ಕಳೆದುಕೊಂಡಿರುವುದು ಎರಡು ಅಮೂಲ್ಯ ಜೀವಗಳನ್ನು. ಎಲ್ಲಕ್ಕಿಂತ ಮುಖ್ಯವಾಗಿ ಎರಡೂ ಕಡೆ ಕೊಲ್ಲಲ್ಪಟ್ಟವರು ಮನುಷ್ಯರು.

ಹಾಗಾಗಿಯೇ ಎರಡೂ ಸಂಗತಿಗಳು ಸಮಾನವಾಗಿ ಚರ್ಚೆಯಾಗಬೇಕಿತ್ತು, ಖಂಡಿಸಲ್ಪಡಬೇಕಿತ್ತು, ಪ್ರಶ್ನಿಸಲ್ಪಡಬೇಕಿತ್ತು. ಆದರೆ ಹಾಗಾಗಲಿಲ್ಲ, ಕೇರಳದ ಘಟನೆಗೆ ಸಿಕ್ಕ ಪ್ರಾಮುಖ್ಯತೆ ಉನ್ನಾವೋದ ಘಟನೆಗೆ ಸಿಗಲಿಲ್ಲ.

ಯಾಕೆ ಹೀಗಾಯ್ತು? ದಿನಂಪ್ರತಿ ಅತ್ಯಾಚಾರದ, ಹೆಣ್ಣಿನ ಮೇಲಿನ ಕೊಲೆಯ, ದೌರ್ಜನ್ಯದ ಸುದ್ದಿ ಓದುತ್ತಿರುವ, ಕೇಳುತ್ತಿರುವ, ನೋಡುತ್ತಿರುವ ನಮಗೆ ಇದೊಂದು ತೀರಾ ಕ್ಷುಲ್ಲಕ ವಿಷಯ ಅಂತನಿಸಿತಾ? ಅಥವಾ ಹೆಣ್ಣೊಬ್ಬಳ ಕೊಲೆ ಅದೂ ಹಾಡು ಹಗಲೇ ಬೆಂಕಿ ಹಚ್ಚಿ ಸುಟ್ಟು ಕರಕಲಾಗಿಸಿದ್ದು ಸುದ್ದಿಯೇ ಅಲ್ಲವಾಯಿತೇ? ಅಥವಾ ಕೊಲೆಗಳಿಗೂ ಲಿಂಗ ಭಿನ್ನತೆಯಿದೆಯೇ? ಅಥವಾ ರಾಜಕೀಯ ಕಾರಣಗಳಿಗಾಗಿ ಅದು ಸುದ್ದಿಯಾಗದೇ ಹೋಯಿತೇ? ಒಂದು ಪ್ರಾಮಾಣಿಕ ಆತ್ಮವಿಮರ್ಶೆ ಮಾಡಿಕೊಳ್ಳೋಣ.

ಅಭಿಪ್ರಾಯ ಉತ್ಪಾದನೆ ಎಂಬ ನವವ್ಯಾಪಾರಕ್ಕೆ ನಾವು ನಮಗೇ ಗೊತ್ತಿಲ್ಲದಂತೆ ಬಲಿಯಾಗುತ್ತಿದ್ದೇವಾ? ನಮ್ಮ ಸಂವೇದನೆಗಳು, ಸೂಕ್ಷ್ಮತೆಗಳು, ನಿಲುವುಗಳು ಆಯಾಯ ಪ್ರದೇಶವನ್ನು ಆಳುತ್ತಿರುವ ರಾಜಕೀಯ ಪಕ್ಷಗಳನ್ನು ಅವಲಂಬಿಸಿ ರೂಪುಗೊಳ್ಳುತ್ತಿವೆಯಾ? ನಮ್ಮ ಪ್ರತಿಕ್ರಿಯೆಗಳು ಲಿಂಗಾಧಾರಿತವಾಗುತ್ತಿವೆಯಾ?ಧರ್ಮ, ಜಾತಿ, ಮತ,  ಸಿದ್ಧಾಂತಗಳಾಚೆಗಿನ‌ ಮಾನವೀಯತೆಯನ್ನು ನಾವೆಂದೂ ನಮ್ಮದಾಗಿಸಿಕೊಳ್ಳಲಾರೆವಾ?

ಶನಿವಾರ, ಫೆಬ್ರವರಿ 24, 2018

ಕಮ್ಯೂನಿಸ್ಟರ ಕೇರಳ ಮತ್ತು ಒಂದು ಕೊಲೆ.

ಕಮ್ಯೂನಿಸ್ಟರ ಕೇರಳದಲ್ಲೂ ಹೀಗೆಲ್ಲಾ ನಡೆಯುತ್ತದಾ ಎಂದು ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವವರು ಒಮ್ಮೆ ಪಶ್ಚಿಮ ಬಂಗಾಳದತ್ತ ನೋಡುವುದು ಒಳಿತು. ಸಾಂಸ್ಕೃತಿಕವಾಗಿ, ಬೌದ್ಧಿಕವಾಗಿ ಇಡೀ ಭಾರತಕ್ಕಿಂತ ನಾಲ್ಕು ಹೆಜ್ಜೆ ಮುಂದಿದ್ದ ಬಂಗಾಳ ಇವತ್ತು ಪ್ರಗತಿಯ ಓಟದಲ್ಲಿ ಹಿಂದಿದೆ ಅಂದರೆ ಅದಕ್ಕೆ, ಮೂರು ದಶಕಗಳಷ್ಟು ಬಂಗಾಳವನ್ನು, ಬಂಗಾಳಿಗರನ್ನು ಆಳಿದ ಎಡಪಕ್ಷಗಳೇ ಕಾರಣ ಎಂದರೆ ಅತಿಶಯೋಕ್ತಿ ಆಗಲಾರದು. ಜನಪರ, ಜೀವಪರ, ಕಾರ್ಮಿಕ ಪರ, ಬಡವರ ಪರ ಎಂದು ರಾಜಕೀಯ ಮಾಡುವವರ ರಾಜಕಾರಣ ಎಷ್ಟು ಗಬ್ಬೆದ್ದು ಹೋಗಿದೆ, ಅಂತರಾಳದಲ್ಲಿ ಎಷ್ಟು ಕ್ರೌರ್ಯ ಮಡುಗಟ್ಟಿದೆ ಅನ್ನುವುದಕ್ಕೆ ಬಂಗಾಳ ಜೀವಂತ ಸಾಕ್ಷಿ.


ನಿನ್ನೆ ಕೇರಳದಲ್ಲಿ ನಡೆದ ಕೊಲೆಯ ಬಗ್ಗೆ ಮರುಗುವವರನ್ನು, ಕರುಣೆ ತೋರುವವರನ್ನು, ಮೊಸಳೆ ಕಣ್ಣೀರು ಸುರಿಸುವವರನ್ನು, ಈ ದೇಶದ ನಗರಗಳ ರಾಜ ರಸ್ತೆಯಲ್ಲಿ ಮಧ್ಯರಾತ್ರಿಯಲ್ಲೊಮ್ಮೆ ನಡೆದಾಡಿಸಬೇಕು. ಹೆಚ್ಚೇನೂ ದೂರ ಹೋಗಬೇಕಿಲ್ಲ, ಒಂದು ರಾತ್ರಿ ನಗರ ಕಣ್ಣುಮುಚ್ಚಿದ ಮೇಲೆ ನಮ್ಮ ಮಂಗಳೂರಿನ ರಸ್ತೆಯಲ್ಲೊಮ್ಮೆ ನಡೆದಾಡಿದರೆ ಸಾಕು, ಭಾರತದ ಬಡತನದ ವಿರಾಟ್ ದರ್ಶನವಾಗುತ್ತದೆ.


ರೋಡ್ ಡಿವೈಡರ್ ಗಳಲ್ಲಿ ಟೆಂಟ್ ಹಾಕಿದ ಕುಟಂಬ, ರಾತ್ರಿಯಾಗುತ್ತಲೇ ಬಸ್ ಸ್ಟಾಂಡ್ ಗಳನ್ನೇ ತಮ್ಮ ಮನೆಯಾಗಿಸುವ ಅನಿವಾರ್ಯಕ್ಕೆ ಸಿಲುಕಿರುವ ಕುಟುಂಬಗಳು, ಗಟಾರದ ಪಕ್ಕದಲ್ಲೇ ಅಡುಗೆ ಮಾಡಿಕೊಳ್ಳುವವರು, ಸ್ಲಂ ಅಲ್ಲದ ಸ್ಲಂ ಕುದ್ರೋಳಿಯ ರಾತ್ರಿ ಜಗತ್ತು, ಶೌಚಕ್ಕಾಗಿ ಕಡಲ ಕಿನಾರೆಯನ್ನೇ ಆಶ್ರಯಿಸಬೇಕಾದ ಮಹಿಳೆಯ ದಯನೀಯತೆ, ಪುಡಿಗಾಸಿಗಾಗಿ ಇಡೀ ದಿನ ದುಡಿದು ಆಕಾಶವನ್ನೇ ಸೂರಾಗಿಸಿದವರ ಅಸಹಾಯಕತೆಗಳೇ ಸಾಕು ಬುದ್ಧಿವಂತರ ಜಿಲ್ಲೆಯ ಬಡವರ ದಾರುಣತೆಯನ್ನು ಸಾರಲು.


ನಾವೇನೋ ಎ.ಸಿ ರೂಮಿನಲ್ಲಿ ಕೂತು, ದುಡಿದರೆ ಅವರ ಬಡತನವೂ ದೂರವಾಗುತ್ತದೆ ಎಂದು ವಿವೇಚನೆ ಮಾಡದೆ ಶರಾ ಬಿಡಬಹುದು. ಆದರೆ ಹಸಿವು ನೀಗಲು ದುಡಿತ ಒಂದೇ ಅಲ್ಲ ಒಂದಿಷ್ಟು ಬುದ್ಧಿವಂತಿಕೆಯೂ ಬೇಕಾಗುತ್ತದೆ ಅನ್ನುವುದನ್ನು ನಾವು ಪ್ರಜ್ಞಾಪೂರ್ವಕವಾಗಿ ಮರೆತು ಬಿಡುತ್ತೇವೆ. ಒಂದು ಹೊತ್ತಿನ ಅನ್ನಕ್ಕಾಗಿ ಪರದಾಡುವವರ ಮುಂದೆ ವಿದ್ಯೆಯ ಉಪಯುಕ್ತತೆಯನ್ನೂ, ಅದು ಮನುಷ್ಯನ ಮೂಲಭೂತ ಅವಶ್ಯಕ ಅನ್ನುವುದನ್ನೂ ವಿವರಿಸುತ್ತಾ ಅವರಿಗೆ ಮನಗಾಣಿಸುತ್ತೇವೆ ಅನ್ನುವುದೇ  ಒಂದು ದೊಡ್ಡ ವಿಡಂಬನೆ.


ರಾಜಕಾರಣಿಗಳೇ ಸೃಷ್ಟಿಸಿರುವ ನೂರಾರು ಸ್ಲಂಗಳು, ಉಳ್ಳವರ ಕೃಪಾಪೋಷಿತ ಪುಡಿ ರೌಡಿಗಳ ಗುಂಪು, ಸೆಲೆಬ್ರಿಟಿಗಳ ಅಹಂಕಾರ... ಇವೆಲ್ಲದರ ಮಧ್ಯೆ ಹಸಿವಿಗಾಗಿ ಜೀವ ತೆರುವ, ಅತ್ಯಂತ ದಾರುಣವಾಗಿ ಕೊಲೆಯಾಗಲ್ಪಡುವ 'ಮಧು'ವಿನಿಂತ ಹಸಿದವರು... ಕೂಗುಮಾರಿತನವನ್ನೇ ಪತ್ರಿಕೋದ್ಯಮ ಅಂತ ಬಿಂಬಿಸಿಕೊಳ್ಳುತ್ತಿರುವ ಈ ದೇಶದಲ್ಲಿ ಹಸಿವು ಬಡತನದ ಬಗ್ಗೆ ಒಂದು ಉಪಯುಕ್ತ ಚರ್ಚೆಯಾಗುತ್ತದೇನೋ ಅಂತ ಅಂದುಕೊಂಡರೆ ಅದೂ ಇಲ್ಲ. ಕೆಲವು ಅತಿ ಬುದ್ಧಿವಂತರು ಮಲ್ಯ, ನೀರವ್ ಮೋದಿಯ ಪಲಾಯನವನ್ನೂ ಮಧುವಿನ ಕೊಲೆಯನ್ನೂ ಸಮೀಕರಿಸುತ್ತಿದ್ದಾರೆ, ಆ ಮೂಲಕ ಗೊತ್ತಿದ್ದೋ ಗೊತ್ತಿಲ್ಲದೆಯೋ ಚರ್ಚೆಯ ದಿಕ್ಕನ್ನು ಸಂಪೂರ್ಣವಾಗಿ ತಪ್ಪಿಸುತ್ತಿದ್ದಾರೆ.


ಎಲ್ಲಿಯ ಮೋದಿ, ಎಲ್ಲಿ ಮಧು? ಎಲ್ಲಿಯ ಹಸಿವು, ಎಲ್ಲಿಯ ಐಶಾರಾಮಿ ಜೀವನ? ಎಲ್ಲಿಯ ಪೈಸೆ, ಎಲ್ಲಿಯ ಕೋಟಿಗಳ ಲೆಕ್ಕಾಚಾರ? ಮಧುವಿನಂತಹ ಬಡವ, ಹಸಿದವ ಸಾಯುತ್ತಿರುವಾಗ ಸೆಲ್ಫಿ ತೆಗೆದುಕೊಳ್ಳಲು ಪ್ರೇರೇಪಿಸಿದ ವ್ಯವಸ್ಥೆಯ ಕ್ರೌರ್ಯ, ವಿಕಾರತೆಗಳು ಚರ್ಚೆಯಾಗಬೇಕಾದಲ್ಲಿ ಬಡತನದ, ಹಸಿವಿನ ಕಲ್ಪನೆಯೂ ಇಲ್ಲದ  ಮಲ್ಯ, ಮೋದಿಗಳ ಅಹಂಕಾರದ ಜೊತೆ ಹೋಲಿಸಲಾಗುತ್ತಿರುವುದು ನಮ್ಮ ಬೌದ್ಧಿಕತೆಯ ದುರಂತ.


ಎಲ್ಲಕ್ಕಿಂತ ಹೆಚ್ಚಾಗಿ, ವ್ಯವಸ್ಥೆಯ ರಕ್ತ ಪಿಪಾಸತೆ, ಕ್ರೌರ್ಯತೆಯ ಬಗ್ಗೆ ತಿರುಗಿ ಬೀಳಾಬೇಕಾಗಿದ್ದ, ನಮ್ಮೊಳಗೆ ಒಂದು ಮುಗಿಯದ ಆಕ್ರೋಶವನ್ನು ಹುಟ್ಟು ಹಾಕಬೇಕಿದ್ದ ಘಟನೆಯೊಂದು ಬರಿಯ ಮರುಕ ಮತ್ತು ಕರುಣೆಯನ್ನು ಮಾತ್ರ ಉಕ್ಕಿಸುತ್ತದೆ ಅಂದರೆ ನಾವು ಪ್ರಜಾಪ್ರಭುತ್ವವನ್ನು ಅಷ್ಟರ ಮಟ್ಟಿಗೆ ದುರ್ಬಲಗೊಳಿಸುತ್ತಿದ್ದೇವೆ ಎಂದೇ ಅರ್ಥ.

ಸೋಮವಾರ, ಜನವರಿ 8, 2018

DOs ಮತ್ತು DONTs ಗಳ ಮಧ್ಯೆ ಅನಾಥ 'ಅಳು'.

ಹದಿನೆಂಟು ಚಿಲ್ಲರೆ ವರ್ಷಗಳನ್ನು ಅಮ್ಮನ ಮಡಿಲಲ್ಲಿ, ಅಪ್ಪನ ಆಶ್ರಯದಲ್ಲಿ, ಸಂಬಂಧಗಳ ಸುತ್ತ ಕಳೆದ ಹುಡುಗನೊಬ್ಬನ ಕಣ್ಣುಗಳು, ಉನ್ನತ ವಿದ್ಯಾಭ್ಯಾಸಕ್ಕೆಂದೋ,  ಕೆಲಸಕ್ಕೆಂದೋ ಮನೆಯಿಂದ ಹೊರಟಾಗ ತುಂಬಿ ಬರುತ್ತವೆ. ಅದು ಕೆಲ ದಿನಗಳ ಮಟ್ಟಿಗಾದರೂ ಎಲ್ಲರನ್ನೂ, ಎಲ್ಲವನ್ನೂ ತೊರೆದು ಬದುಕಬೇಕಲ್ಲಾ ಅನ್ನುವ ನೋವು ಕಾಡುವಾಗಿನ ಸಹಜ ಕಣ್ಣೀರು.

ಗೆಳೆಯನಂತಿರುವ ಚಿಕ್ಕಪ್ಪ ಹೆಗಲು ತಟ್ಟಿ "ಯಾಕೋ ಹುಡುಗಿಯರ ತರಹ ಅಳುತ್ತೀಯಾ?" ಎಂದು ಪ್ರಶ್ನಿಸುತ್ತಾರೆ. ಹಾಗೆ ಕೇಳುವಾಗ ಅವರ ಧ್ವನಿಯೂ ಗದ್ಗದಿತವಾಗಿತ್ತು ಅನ್ನುವುದು ಬೇರೆ ವಿಷಯ. ಆದರೆ ಹುಡುಗ ಕಣ್ಣೀರು ಒರೆಸಿಕೊಂಡು ಬಲವಂತದ ನಗು ಬೀರುತ್ತಾನೆ. 

ಅಷ್ಟರ ಮಟ್ಟಿಗೆ ನಾವು 'ಅಳು'ವನ್ನು ಹುಡುಗಿಯರದಷ್ಟೇ ಹಕ್ಕು ಅಥವಾ ಹುಡುಗಿಯರ ಅನಿವಾರ್ಯತೆಯೇನೋ ಎಂಬಂತೆ ಬಿಂಬಿಸಿದ್ದೇವೆ. ಅಷ್ಟೇಕೆ 'ನಗುವ ಹೆಂಗಸನ್ನೂ ಅಳುವ ಗಂಡಸನ್ನೂ ನಂಬಬೇಡ' ಅನ್ನುವ ಗಾದೆ ಮಾತು ನಮ್ಮಲ್ಲಿ ತಲೆ ತಲಾಂತರದಿಂದಲೂ ಚಾಲ್ತಿಯಲ್ಲಿದೆ. ಮತ್ತದಕ್ಕೆ ನಮ್ಮ ದೇಹ, ಮನಸ್ಸು, ಹೃದಯ ಎಷ್ಟು ಟ್ಯೂನ್ ಆಗಿ ಬಿಟ್ಟಿದೆಯೆಂದರೆ, ವ್ಯತಿರಿಕ್ತವಾಗಿ ಏನಾದರೂ ನಡೆದು ಬಿಟ್ಟರೆ ನಮಗದು ತೀರಾ ಅಸಹಜ ಅನಿಸಿಬಿಡುತ್ತದೆ.

ಮನುಷ್ಯ ಸಂಘಜೀವಿ, ಅವನು ಯಾವತ್ತೂ ಏಕಾಂಗಿಯಾಗಿ ಬದುಕಲಾರ. ಈ ಸಮಾಜದೊಂದಿಗೆ ಅವನಿಗೆ ಭಾವನಾತ್ಮಕ ಕೊಡು ಕೊಳ್ಳುವಿಕೆ ಇದ್ದರಷ್ಟೇ ಅವನ ಬದುಕು ಸರಾಗ. ಎಲ್ಲಾ ನಿಜಾನೇ, ಆದರೆ ಸಹಜಾತಿಸಹಜ ಭಾವ ಪ್ರಕಟನೆಗಳಿಗೂ ಹೀಗೆ DOs ಮತ್ತು DONTs ಗಳ ಪ್ರತಿಬಂಧಕ ವಿಧಿಸಿದರೆ ಹೇಗೆ?

ಕಾಡುವ ನೋವಿಗೆ, ಜೊತೆಯಾಗುವ ಸಂಕಟಗಳಿಗೆ, ಅಹಿತ ಸಂದರ್ಭಗಳಿಗೆ, ಭಾವೋತ್ಕರ್ಷಗಳಿಗೆ ಹೆಣ್ಣು ಗಂಡೆಂಬ ಬೇಧವಿಲ್ಲ. ಅದು ಸರ್ವವ್ಯಾಪಿ, ಸರ್ವಾಂತರ್ಯಾಮಿ. ಮತ್ತೇಕೆ ಗಂಡಸು ಅತ್ತ ಕೂಡಲೇ ಪ್ರಳಯವಾಯಿತೇನೋ ಎಂಬಂತೆ ವರ್ತಿಸುವುದು?

ನೋವಾದಗಷ್ಟೇ ಕಣ್ಣೀರು ಹರಿಯುತ್ತದೆ ಅನ್ನುವುದು ಶುದ್ಧ ಮೌಢ್ಯ. ಹಾಗೆ ಭಾವಿಸಿಕೊಂಡವರು ಒಮ್ಮೆ , ಒಲಿಂಪಿಕ್ ಪದಕ  ವಿಜೇತರ ಕಣ್ಣಲ್ಲಿ ತುಳುಕುವ ಕಣ್ಣೀರನ್ನೊಮ್ಮೆ ಮಾತಾಡಿಸಿ ನೋಡಬೇಕು. ಅದು ಸಾಧನೆಯ ಸಂಭ್ರಮವನ್ನೂ, ಅದರ ಹಿಂದಿನ ಪರಿಶ್ರಮವನ್ನೂ, ಅಖಂಡ ಬದ್ಧತೆಯನ್ನೂ, ಹಲವು ಸುಖಗಳ ತ್ಯಾಗದ ಕಥೆಗಳನ್ನೂ ಎಷ್ಟು ಸಾದ್ಯಂತವಾಗಿ ವಿವರಿಸುತ್ತದೆ ಅಂದರೆ, ನಗು-ಅಳುವಿನ ಬಗೆಗಿನ ಸರ್ವ ಪೂರ್ವಾಗ್ರಹಗಳನ್ನು ನಿವಾಳಿಸಿ ಎಸೆದು ಬಿಡುತ್ತದೆ.

ಕಣ್ಣೀರಿಗೂ ಅದೆಷ್ಟು ತರಹೇವಾರಿ ಕಾರಣಗಳಿರುತ್ತವೆ! ನೋವಿನ ಕಣ್ಣೀರು, ಯಾರನ್ನೋ/ಯಾವುದನ್ನೋ ಕಳೆದುಕೊಂಡಾಗಿನ ಕಣ್ಣೀರು, ಅವಮಾನದ ಕಣ್ಣೀರು, ತಿರಸ್ಕಾರದ ಕಣ್ಣೀರು, ಖುಶಿಯ ಕಣ್ಣೀರು, ಸಾಧನೆಯ ಕಣ್ಣೀರು... ಹೃದಯದಲ್ಲಿ ಮಿಡಿಯುವ ಪ್ರತಿ ನೋವು, ನಲಿವು ಸಹಜವಾಗಿ ವ್ಯಕ್ತವಾಗುವುದು ಕಣ್ಣ ಕೊಳಗಳಲ್ಲಿ. ಅದು ಕದಡಿದರೆ ಪ್ರತೀ ಬಿಂಬವೂ ಅಸ್ಪಷ್ಟ.

ನಗುವಿನಷ್ಟೇ ಸಹಜ ಪ್ರತಿಕ್ರಿಯೆ 'ಅಳು'. ಅದನ್ನು ಅದುಮಿಡುವುದರಲ್ಲಿ, ತಡೆಹಿಡಿಯುವುದರಲ್ಲಿ, ಅವಮಾನವೆಂದು ಭಾವಿಸಿಕೊಳ್ಳುವುದರಲ್ಲಿ ಯಾವ ಅರ್ಥವೂ ಇಲ್ಲ. ಭಾವಗಳೆಂಬ ತಾಯಿ ಬೇರು ಟಿಸಿಲೊಡೆದಾಗ ನಗುವೆಂಬ ಮಗು ಕಣ್ಣು ಬಿಟ್ಟರೆ ನಿರ್ಮಲವಾಗಿ ನಕ್ಕುಬಿಡಿ, ಅಳುವೆಂಬ ಕೂಸು ಹುಟ್ಟಿದರೆ... ಆಗಲೂ ಒಮ್ಮೆ ಮನಸಾರೆ ಅತ್ತುಬಿಡಿ.

ಶನಿವಾರ, ಜನವರಿ 6, 2018

ಎರಡೇ ನಿಮಿಷದ ಮ್ಯಾಗಿ ಮತ್ತು ಧಾವಂತದ ಬದುಕು.

ಸರಿಯಾಗಿ ಇಪ್ಪತ್ತೈದು ತುಂಬೋದಕ್ಕೇ ಇನ್ನೂ ಆರು ತಿಂಗಳಿವೆ ಈಗ್ಲೇ ತುಂಬಾ defeat ಆದ ಭಾವ', ತೀರಾ ಮೂವತ್ತು ಆಗುವುದಕ್ಕಿಂತ ಮುನ್ನವೇ ಎಲ್ಲಾ ಮುಗಿದು ಹೋದ ಸ್ಥಿತಿ', 'ಕೆಲಸ ಗಿಟ್ಟಿಸಿ ಒಂದು ವರ್ಷ ಆಗುವಷ್ಟರಲ್ಲೇ ಬದುಕು ನೀರಸ ಅನ್ನಿಸೋಕೆ ಶುರುವಾಗಿದೆ', 'ಬಿಡಿ, ಏನೇ ಮಾಡಿದ್ರೂ ಜೀವನ ಇದ್ದಲ್ಲೇ ಇರುತ್ತದೆ'. ಇಂತಹ ಮಾತುಗಳನ್ನು ನಾವು ಆಗಾಗ ಕೇಳುತ್ತಲೇ ಇರುತ್ತೇವೆ. ಅಷ್ಟೇಕೆ? ನಾವೇ ಹಲವು ಬಾರಿ ಹೀಗೆ ಮಾತಾಡಿರುತ್ತೇವೆ. ದುರಂತ ಅಂದ್ರೆ ಹೀಗೆ ಮಾತನಾಡುವವರಲ್ಲಿ ಹೆಚ್ಚಿನವರು ಈಗಷ್ಟೇ ಬದುಕು ನೋಡಲು ಆರಂಭಿಸಿದ ಹುಡುಗ/ಗಿಯಾಗಿರುತ್ತಾರೆ.

ಯಾಕೆ ಹೀಗಾಗುತ್ತಿದೆ? ಬದುಕೇಕೆ ಅಷ್ಟು ಬೇಗ ನೀರಸ ಅನಿಸೋಕೆ ಶುರುವಾಗುತ್ತದೆ? ಧಾವಂತದ ಬದುಕು, ವಿಪರೀತದ ಓಡಾಟ, ಅನಾರೋಗ್ಯಕರ ಪೈಪೋಟಿ, ಸಲ್ಲದ ಸ್ಪರ್ಧೆ ನಮ್ಮನ್ನು ಹೈರಾಣಾಗಿಸಿವೆಯಾ? ಅಥವಾ ಬದುಕಿನ ಆಳದಲ್ಲೆಲ್ಲೋ ನಡೆಯುತ್ತಿರುವ ಪಲ್ಲಟಗಳು, ತಲ್ಲಣಗಳು, ಸಂಘರ್ಷಗಳು ನಮ್ಮ ಯೋಚನಾಕ್ರಮವನ್ನು ನೇರವಾಗಿ ಪ್ರಭಾವಿಸುತ್ತಿವೆಯಾ? ಸುತ್ತಲಿನ ಕೌತುಕುಗಳಿಗೆ, ಪ್ರಕೃತಿಯ ಸಣ್ಣ ಪುಟ್ಟ ಆಗುಹೋಗುಗಳಿಗೆ ತೆರೆದುಕೊಳ್ಳದ ಮನಸ್ಸು ನಿಧಾನವಾಗಿ ಕುತೂಹಲಗಳನ್ನೆಲ್ಲಾ ಕಳೆದುಕೊಂಡು ಮೂರು ಮತ್ತೊಂದು ಎಂಬಂತೆ ಯಂತ್ರವಾಗಿ ಮಾರ್ಪಾಡಾಗುತ್ತಿದೆಯಾ?

ಇತ್ತೀಚೆಗಷ್ಟೇ ನೌಕರಿ ಗಿಟ್ಟಿಸಿಕೊಂಡ ಹುಡುಗ, ಮೊನ್ನೆ ಮೊನ್ನೆಯೆಂಬಂತೆ ಸಂಭ್ರಮದಿಂದ 22ರ birthday ಆಚರಿಸಿಕೊಂಡ ಹುಡುಗಿ ಬದುಕು ಪ್ರಾರಂಭವಾಗುವ ಮುನ್ನವೇ ವೈರಾಗ್ಯದ ಮಾತುಗಳನ್ನಾಡುವಾಗ ಕಸಿವಿಸಿಯಾಗುತ್ತದೆ. ಎರಡೇ ನಿಮಿಷಗಳಲ್ಲಿ ತಯಾರಾಗಬಲ್ಲಂತಹ ಅಥವಾ ಹಾಗೆ ಬಿಂಬಿಸಲ್ಪಟ್ಟಂತಹ ಮ್ಯಾಗಿಯಷ್ಟೇ ಆತುರದ, ಯಾವುದಕ್ಕೂ ಸಮಯವಿಲ್ಲದ ಬದುಕು ನಮ್ಮನ್ನು ಎಲ್ಲಿಗೆ ತಂದು ನಿಲ್ಲಿಸಿದೆ?

ಅದೇ ಒಮ್ಮೆ ಆಸ್ಪತ್ರೆಗಳ ಅದರಲ್ಲೂ ಹೃದಯ, ಕಿಡ್ನಿ, ಕ್ಯಾನ್ಸರ್ ಚಿಕಿತ್ಸಲಾಯಗಳತ್ತ ಕಣ್ಣು ಹಾಯಿಸಿ ನೋಡಿ. ಅಲ್ಲಿ ಜೀವಂತಿಕೆ ತುಂಬಿ ತುಳುಕುತ್ತಿರುತ್ತದೆ. ಭರಿಸಲಾಗದ ನೋವು, ಕಿತ್ತು ತಿನ್ನುವ ಸಂಕಟ, ಸಣ್ಣದಾಗಿ ಹೊರಳಿಕೊಳ್ಳಲೂ ಸಾಧ್ಯವಾಗದಂಥ ಯಾತನೆ ಕಾಡುತ್ತಿದ್ದರೂ ಬದುಕಿನ ಬಗೆಗಿನ ನಿರೀಕ್ಷೆ, ಬದುಕಬೇಕೆನ್ನುವ ತುಡಿತ ಅವರಲ್ಲಿ ಸತ್ತಿರುವುದಿಲ್ಲ. ಮಾತಿಗೆ ಕೂತರೆ, ಮಾಡಿ ಮುಗಿಸಬೇಕಾದ ಕೆಲಸಗಳು, ಭೇಟಿ ನೀಡಬೇಕಾಗಿರುವ ಸ್ಥಳಗಳು, ಓದಬೇಕಿರುವ ಪುಸ್ತಕಗಳ ಪಟ್ಟಿಯನ್ನೇ ಮುಂದಿಡುತ್ತಾರೆ.

ಹೃದಯ ಶಸ್ತ್ರಚಿಕಿತ್ಸೆ ನಡೆದ ಸುಸ್ತಿನ್ನೂ ಆರುವ ಮುಂಚೆಯೇ ಮೊಮ್ಮಗುವನ್ನು ಮುದ್ದಾಡುವ ತಾತ, ಉಸಿರಾಡಲೇ ಕಷ್ಟವಾಗುತ್ತಿದ್ದರೂ ಮುಂದಿನ ಬದುಕಿನ ಬಗ್ಗೆ ಮಾತಾಡುವ ಕೃಶದೇಹಿ ಅಜ್ಜಿ, ಬದುಕಿಡೀ ಹೋರಾಡಿದರೂ ದಣಿದಿಲ್ಲವೇನೋ ಎಂದೇ ತೋರುವ ಕ್ಯಾನ್ಸರ್ ಪೇಷಂಟ್, ಅಕಾಲದಲ್ಲಿ ಕೈಯೋ ಕಾಲೋ ಕಳೆದುಕೊಂಡ ನೋವಲ್ಲೂ ನಿರಮ್ಮಳವಾಗಿ ನಗುವ ಮಧುಮೇಹ ರೋಗಿ ನಮ್ಮ ಮುಂದೆ ಬೇರೆಯದೇ ಲೋಕವನ್ನು ತೆರೆದಿಡುತ್ತಾರೆ.

ನಿಜಕ್ಕೂ ಅವರಲ್ಲಿ ಅಂತಹಾ ಜೀವನೋತ್ಸಾಹ ಹೇಗೆ ಉಕ್ಕುತ್ತದೆ? ಬದುಕಲೇಬೇಕೆಂಬ ಉತ್ಕಟತೆ ಎಲ್ಲಿಂದ ಮೊಳಕೆಯೊಡೆಯುತ್ತದೆ? ಗೋರಿಯ ನೆತ್ತಿಯ ಮೇಲಿಂದಲೂ ಬದುಕು ಕಟ್ಟಿಕೊಳ್ಳಬಲ್ಲೆ ಅನ್ನುವ ಅದಮ್ಯ ಜೀವನ ಪ್ರೀತಿಯ ಮೂಲ ಸೆಲೆ ಯಾವುದು? ಬದುಕು ಪ್ರತಿ ಕ್ಷಣದ ಅಚ್ಚರಿ ಎಂಬಂತೆ ಹೇಗೆ ಬದುಕುತ್ತಾರೆ? ತೀರಾ ಸಾವಿನ ಸನಿಹಕ್ಕೆ ಹೋಗಿ ಬದುಕಿಗೆ ಮರಳಿದ ಅನುಭವವೇ ಅವರನ್ನು ಜೀವನ್ಮುಖಿಯಾಗಿಸುತ್ತವೆಯಾ? ಅಥವಾ ಹುಟ್ಟು, ಹೋರಾಟ, ಬದುಕು, ಸಾವು ಅದರಾಚೆಗಿನ ನೋವು ನಲಿವು ಎಲ್ಲಾ ಮೀರಿದ ನಿಸ್ತಂತು ಭಾವವೊಂದು ಅವರನ್ನು ಮತ್ತೆ ಮತ್ತೆ ಬದುಕಿನ ಅಂಗಳಕ್ಕೆ ಎಳೆದು ತರುತ್ತದಾ?

ಅವರನ್ನೆಂದೂ ಈ ಸ್ಯಾಚುರೇಷನ್, ಬದುಕು ಸಾಕೆನ್ನುವ ಭಾವ, ಜೀವನ ತೀರಾ ಸಪ್ಪೆ ಅನ್ನುವುದೆಲ್ಲಾ ಕಾಡಿಯೇ ಇಲ್ವಾ? ಊಹೂಂ, ಹಾಗೇನಿಲ್ಲ. ಆದರೆ ಅವರಿಗೆ ಎಲ್ಲವನ್ನೂ ಮೀರಿ ಬದುಕು ಮುಂದೆ ಸಾಗುತ್ತದೆ ಅನ್ನುವ ನಂಬಿಕೆ ಇತ್ತು, ಎರಡು ದಿನದ ನಿರಾಶೆ ಒಂದಿಡೀ ಬದುಕನ್ನು ಆಪೋಶನ ತೆಗೆದುಕೊಳ್ಳಲು ಬಿಡಬಾರದು ಅನ್ನುವ ವಿವೇಚನೆ ಇತ್ತು. 'ಸಾಕು ಬಿಡು, ಈ ಬದುಕು' ಅನ್ನುವ ಹಳಹಳಿಕೆ ಮನಸ್ಸಲ್ಲಿ ಬೇರೂರುವ ಸೂಚನೆ ಸಿಕ್ಕ ಕೂಡಲೇ ಹೊಸ ಹುರುಪಿನಿಂದ ಮತ್ತೆ ತಮ್ಮ ಕೆಲಸಗಳಲ್ಲಿ ಮೈ ಮರೆಯುತ್ತಿದ್ದರು. ಪ್ರತಿ ದಿನವೂ, ಪ್ರತಿ ಕ್ಷಣವೂ ಒಂದು ಹೊಸ ಅನುಭವವನ್ನು, ವಿಸ್ತಾರವನ್ನು ಬದುಕಿಗೆ ಕಟ್ಟಿಕೊಡುತ್ತದೆ ಅನ್ನುವ ಸರಳ ಸತ್ಯವನ್ನು ಮನಗಂಡಿದ್ದರು.

ಒಂದು ಪ್ರೇಮ ವೈಫಲ್ಯಕ್ಕೆ, ಮತ್ತೊಂದು ವಿಶ್ವಾಸದ್ರೋಹಕ್ಕೆ, ಕಳೆದುಕೊಂಡ ನೌಕರಿಗಾಗಿ, ಮುರಿದುಬಿದ್ದ ಸಂಬಂಧಕ್ಕಾಗಿ ಬದುಕನ್ನೇ ಮುಗಿಸಹೊರಡುವವರು ಈಗ ಮನಗಾಣಬೇಕಿರುವುದು ಇದೇ ಸತ್ಯವನ್ನು. ಬದುಕು ಮ್ಯಾಗಿಯಂತೆ ಎರಡೇ ನಿಮಿಷಗಳಲ್ಲಿ ತಯಾರಾಗುವಂಥದ್ದಲ್ಲ, ಅದು ರೂಪುಗೊಳ್ಳಲು ಪ್ರತಿ ದಿನದ ಶ್ರದ್ಧೆಯನ್ನು, ಕಸುವನ್ನು ಬೇಡುತ್ತದೆ.

ಬುಧವಾರ, ಜನವರಿ 3, 2018

ಹೌ ಬ್ರೇವ್ ಶಿ ಈಸ್!

ಬೆಟ್ಟವೇ ಕುಸಿದು ತಲೆ ಮೇಲೆ ಬಿದ್ರೂ ಬಲಮೊಣಗೈ ನೆಲಕ್ಕೂರಿ ಎಡಗೈಯಿಂದ ಬೆಟ್ಟ ಸರಿಸಿ ಈಚೆ ಬಂದೇನು ಅನ್ನುವಷ್ಟು ಆತ್ಮವಿಶ್ವಾಸ. ಎಂತಹಾ ಕಗ್ಗಾಡಲ್ಲೂ ಒಬ್ಬಳೇ ಇರಬಲ್ಲೆ ಎಂಬ ಧೈರ್ಯ. ಅಪಾಯಗಳನ್ನು ಮೈ ಮೇಲೆ ಎಳೆದುಕೊಳ್ಳುವುದೆಂದರೆ ಎಲ್ಲಿಲ್ಲದ ಖುಶಿ. ಎದುರಿಗಿರುವವರ ಕಣ್ಣಲ್ಲಿ 'how brave she is!' ಅನ್ನುವ ಒಂದು ಮೆಚ್ಚುಗೆ ಇರಬೇಕು ಅಷ್ಟೆ. 

ಕೆಲವು ಹುಡುಗಿಯರು ಇರುವುದೇ ಹೀಗೆ. ಅಪಾರ ಆತ್ಮವಿಶ್ವಾಸ, ಎಲ್ಲವನ್ನೂ ಎದುರಿಸಬಲ್ಲೆನೆಂಬ ಕಿಚ್ಚು. ಅವರೆಂದೂ ಯಾರ ಮುಂದೆಯೂ ಕಣ್ಣೀರುಗೆರೆದಿರುವುದಿಲ್ಲ, ಬದುಕಿನ ಬಗ್ಗೆ complaint ಗೊಣಗಿರುವುದಿಲ್ಲ. ಕಷ್ಟ ಬಂದಾಗ 'ನನಗೇ ಏಕೆ ಹೀಗಾಯಿತು' ಎಂದು ಹಳಹಳಿಸುವುದಿಲ್ಲ. ಹತ್ತು ಮಂದಿಯ ಗುಂಪಿನಲ್ಲಿದ್ದರೂ ಪ್ರತ್ಯೇಕ ಅಸ್ತಿತ್ವ ಕಾಪಾಡಿಕೊಂಡು ಬಂದಿರುತ್ತಾರೆ. ಎಲ್ಲರನ್ನೂ ತನ್ನತ್ತ ಸೆಳೆಯುವ ಒಂದು ಶಕ್ತಿ ಅವರಲ್ಲಿರುತ್ತದೆ. ಯಾವುದೇ ಕಾರಣಕ್ಕೂ ಎದೆಗುಂದಲಾರೆ ಎನ್ನುವ ಹಠ, ಎಲ್ಲಕ್ಕೂ ಮುನ್ನುಗ್ಗುವ ಛಾತಿ, ಒಂದು ಅಭೂತಪೂರ್ವ ನಾಯಕತ್ವ ಗುಣ, ತನ್ನ ನಿರ್ಭಯ ಮಾತಿನಿಂದಲೇ ಎಲ್ಲರ ಗಮನ ಸೆಳೆಯುವ ಕಲೆ ಅವರಿಗೆ ಒಲಿದಿರುತ್ತದೆ, ಅಥವಾ ಅವರ ವ್ಯಕ್ತಿತ್ವವೇ ಹಾಗಿರುತ್ತದೆ. ಅಂತಹ ಹುಡುಗಿಯರನ್ನು ಸಮಾಜ 'ಬ್ರೇವ್ ಗರ್ಲ್' ಎಂದೇ ಕರೆಯುತ್ತದೆ.

ಆದರೆ ಹೀಗೆ ದಿಟ್ಟ ಹುಡುಗಿ ಅನ್ನಿಸಿಕೊಳ್ಳುವುದು ಸುಲಭವೇನಲ್ಲ. ತೀರಾ ಕಣ್ಣೀರು ನುಗ್ಗಿ ಬರುವಾಗಲೂ ತುಟಿ ಕಚ್ಚಿ ಸಹಿಸಿಕೊಳ್ಳಬೇಕು, ಅದೆಷ್ಟೇ ನೋವು ತನ್ನನ್ನು ಕೊರೆಯುತ್ತಿದ್ದರೂ ನಗುವಿನ ಮುಖವಾಡ ಹಾಕಿಕೊಳ್ಳಬೇಕು, ಸಮಸ್ಯೆಗಳ ಮಧ್ಯೆ ಬೇಯುತ್ತಿರುವಾಗಲೂ ಏನೂ ನಡೆದೇ ಇಲ್ಲವೆಂಬಂತೆ ನಡೆದುಕೊಳ್ಳಬೇಕು, ಎಲ್ಲಕ್ಕಿಂತ ಮುಖ್ಯವಾಗಿ ನೋವಾದಾಗ ಅಳುವ, ದುಃಖ ತೋಡಿಕೊಳ್ಳುವ ಯಾವ ಸ್ವಾತಂತ್ರ್ಯವೂ ಅವರಿಗಿರುವುದಿಲ್ಲ. ಒಂದರ್ಥದಲ್ಲಿ ಬ್ರೇವ್ ಗರ್ಲ್ ಅನ್ನಿಸಿಕೊಳ್ಳುವ ಭರದಲ್ಲಿ ತನ್ನತನವನ್ನೇ ಕಳೆದುಕೊಂಡು ಬದುಕುತ್ತಾರೆ. ಯಾರದೋ ನೋವು, ಯಾರದೋ ಸಂಕಟಗಳಿಗೆ ಧ್ವನಿಯಾಗುತ್ತಾ ತನ್ನ ಬೇಕು ಬೇಡಗಳಿಗೆಲ್ಲಾ ಮೌನವಾಗಿ ಸಮಾಧಿ ಕಟ್ಟುತ್ತಾರೆ. ಹಾಗಂತ ಅಂತಹವರು ಸದಾ ನಾಟಕವಾಡುತ್ತಿರುತ್ತಾರೆ ಅಂತಲ್ಲ.

ಬಾಲ್ಯದಲ್ಲಿ ಕೇಳಿದ ಯಾವುದೋ ಕಥೆ ಅಥವಾ ನೋಡಿದ ಯಾವುದೋ ಘಟನೆ, ಅಳುವುದು ಹೇಡಿತನ ಎಂಬ ಭಾವನೆ ಬೆಳೆಯುವಂತೆ ಮಾಡಿರುತ್ತದೆ. ಹಲವು ಬಾರಿ ಪೋಷಕರೇ ಎಳೆಯ ಮಕ್ಕಳ ಮನಸ್ಸಿನಲ್ಲಿ ಅಂಥದ್ದೊಂದು ಕಲ್ಪನೆಯ ಬೀಜ ಬಿತ್ತುತ್ತಾರೆ. ಕೆಲವೊಮ್ಮೆ ತಾನು ಹೇಡಿ ಅಂತ ಸಮಾಜ ಮಾತಾಡಿಕೊಳ್ಳಬಾರದು ಅನ್ನುವ ಭಾವವೇ ಬಲಿತು 'ಬ್ರೇವ್ ಗರ್ಲ್' ಅನ್ನಿಸಿಕೊಳ್ಳಲೇಬೇಕು ಎಂಬ ಹಂತದವರೆಗೆ ತಂದು ನಿಲ್ಲಿಸುವುದೂ ಇದೆ.

ಹಾಗೆ ಒಮ್ಮೆ ಅನ್ನಿಸಿಕೊಂಡಮೇಲೆ ಶುರುವಾಗುವುತ್ತದೆ ನೋಡಿ ಆ ಪಟ್ಟವನ್ನು ಉಳಿಸಿಕೊಳ್ಳುವ ಹೋರಾಟ. ಅನ್ನಿಸಿದ್ದನ್ನು ಮಾಡಲಾಗದ ಅಸಹಾಯಕತೆ, ತನ್ನ ಭಾವನೆಗಳನ್ನು ಮುಕ್ತವಾಗಿ ತೆರೆದಿಡಲಾರದ ಬಿಗುವು , ಸದಾ ನಗುವಿನ ಮುಖವಾಡ ಧರಿಸಿರಲೇಬೇಕಾದ ಅನಿವಾರ್ಯತೆ, ಎಲ್ಲಾ ನೋವುಗಳನ್ನು ತನ್ನೊಳಗೇ ಹೊತ್ತುಕೊಳ್ಳಬೇಕಾದ ಅನಿವಾರಣೀಯತೆ, ಎಲ್ಲಾ ಅಳುಕುಗಳನ್ನೂ ಮೆಟ್ಟಿ ನಿಲ್ಲಬೇಕಾದ ಅನಿವಾರ್ಯತೆ ಮಾನಸಿಕ ಒತ್ತಡವನ್ನು ಸೃಷ್ಟಿಬಿಡಿಸುತ್ತದೆ. ಸದಾ ನಗುವ ಹುಡುಗಿಯ ಮನದ ನವಿರು ಭಾವಗಳು ಗೊತ್ತೇ ಆಗದಂತೆ ಸಾಯತೊಡಗುತ್ತದೆ. ಕೊನೆಗೊಂದು ದಿನ, ಎಲ್ಲಾ ಒತ್ತಡ, ಖಿನ್ನತೆಗಳು ಒಳಗೊಳಗೇ ಕುದಿದು ಸ್ಪೋಟವಾಗುತ್ತದೆ. ಅಲ್ಲಿಗೆ ಆ ಹುಡುಗಿಯ ಸ್ವಾಭಿಮಾನ ಮುಂದೆಂದೂ ಚೇತರಿಸಿಕೊಳ್ಳಲಾಗದಷ್ಟು ಘಾಸಿಗೊಳ್ಳುತ್ತದೆ.

ಹಾಗಂತ ಬ್ರೇವ್ ಗರ್ಲ್ ಆಗಿರುವುದೇ ತಪ್ಪು ಅಂತಲ್ಲ. ಸುಖಾ ಸುಮ್ಮನೆ ಸೋಲೊಪ್ಪುವುದು, ಪ್ರಯತ್ನವನ್ನೇ ಪಡದೆ ಕೈಚೆಲ್ಲುವುದು, 'ತನ್ನಿಂದಾಗದು' ಅನ್ನುವ ಭಾವನೆಯನ್ನು ಬೆಳೆಸಿಕೊಳ್ಳುವುದು, ವಿಪರೀತ ಕೀಳರಿಮೆಯಿಂದ ನರಳುವುದು... ಎಲ್ಲಾ ತಪ್ಪೇ. ಬದುಕನ್ನು ಎದುರಿಸುವ ಧೈರ್ಯ, ಸಮಸ್ಯೆಗಳನ್ನು ಪರಿಹರಿಸುವ ಛಾತಿ, ಸ್ವತಂತ್ರ ಯೋಚನಾಕ್ರಮವನ್ನು ಪ್ರತೀ ಹುಡುಗಿಯೂ ಬೆಳೆಸಿಕೊಳ್ಳಲೇಬೇಕು. ಆದರೆ   ಶರಣಾಗತಿಯೊಂದೇ ಬದುಕಲ್ಲ ಅನ್ನುವುದು ಎಷ್ಟು ನಿಜವೋ, ಪ್ರತಿ ಸಂದರ್ಭದಲ್ಲೂ ಗೆಲುವು ನಮ್ಮದಾಗಬೇಕು ಅಂತ ಬಯಸಲೂಬಾರದು ಅನ್ನುವುದೂ ಅಷ್ಟೇ ನಿಜ.

ಮಂಗಳವಾರ, ಜನವರಿ 2, 2018

ಚೇತನ್ ಭಗತ್ ಎಂಬ ಲೇಖಕನೂ, ಅಡುಗೆ ಮನೆಯ ಗಂಡಸರೂ..

"ಭಾರತೀಯ ಪೋಷಕರು ಅದೇಕೆ ತಮ್ಮ ಗಂಡು ಮಕ್ಕಳನ್ನು ಅಷ್ಟೊಂದು ದ್ವೇಷಿಸುತ್ತಾರೆ ಅನ್ನುವ ಸಂಗತಿ ನನ್ನನ್ನು ಸದಾ ಚಕಿತಗೊಳಿಸುತ್ತದೆ. ಒಂದು ಹೊತ್ತಿನ ಅನ್ನ ಬೇಯಿಸುವುದು ಬಿಡಿ, ತಮಗಾಗಿ ಒಂದು ಕಪ್ ಚಹಾವನ್ನು ಅವರು ತಯಾರಿಸಲಾರರು. ಮನೆ ಸ್ವಚ್ಛ ಮಾಡುವ, ಬಟ್ಟೆ ಒಗೆಯುವ ಮಾತು ಹಾಗಿರಲಿ ತಮ್ಮನ್ನು ತಾವೇ ಒಪ್ಪವಾಗಿ ಇಟ್ಟುಕೊಳ್ಳಲಾರರು ನಮ್ಮ ಗಂಡಸರು. ಇನ್ನೊಬ್ಬರ ಕರುಣೆಯಲ್ಲೇ ಬದುಕಬೇಕಾದ ಅನಿವಾರ್ಯತೆ ಅವರದು. ಸಣ್ಣದೊಂದು ಟ್ರಿಪ್ ಹೊರಡಬೇಕಿದ್ದರೂ ಪತ್ನಿ  ಬ್ಯಾಗ್ ಪ್ಯಾಕ್ ಮಾಡಿಕೊಡಬೇಕಾದ ಸ್ಥಿತಿ ಇದೆ ನಮ್ಮಲ್ಲಿ. ಒಂದಿಡೀ ಪೀಳಿಗೆಯ ಭಾರತೀಯ ಗಂಡಸರನ್ನು  ಅವರಷ್ಟಕ್ಕೇ ಬಿಟ್ಟುಬಿಟ್ಟರೆ ಬದುಕುವುದೇ ಅಕ್ಷರಶಃ ಕಷ್ಟ ಅನ್ನುವ ಪರಿಸ್ಥಿತಿ ಇದೆ.

ಪೋಷಕರು ತಮ್ಮೆಲ್ಲಾ ಮಕ್ಕಳನ್ನು ಸಮಾನವಾಗಿ ಪ್ರೀತಿಸುತ್ತಾರೆ ಅನ್ನುವುದು ನನ್ನ ಯೋಚನೆಯಾಗಿತ್ತು. ಆದರೆ ಪರಿಸ್ಥಿತಿ ಹಾಗಿಲ್ಲ. ಅವರು ತಮ್ಮ ಹೆಣ್ಣುಮಕ್ಕಳಿಗೆ ಯಾವುದೇ ಪರಿಸ್ಥಿತಿಯನ್ನು ಎದುರಿಸಿ ಬದುಕುವುದನ್ನು ಹೇಳಿಕೊಡುತ್ತಾರೆ. ಆದರೆ ಗಂಡುಮಕ್ಕಳನ್ನು ಪರಾವಲಂಬಿಗಳಾಗಿಯೇ ಬೆಳೆಸುತ್ತಾರೆ."

ಹಾಗಂತ ಚೇತನ್ ಭಗತ್ ತಮ್ಮ ಫೇಸ್ಬುಕ್ ಗೋಡೆಯಲ್ಲಿ ಬರೆದುಕೊಂಡ ಕೂಡಲೇ ಪರವಿರೋಧದ ಚರ್ಚೆಗಳು ಶುರುವಾದವು. ಸತ್ಯಾಸತ್ಯತೆ ಚರ್ಚೆ ಆಗಬೇಕಾದಲ್ಲಿ, ಎಂದಿನಂತೆ ಚೇತನ್ ಅವರನ್ನು ಇಷ್ಟಪಡುವವರ ಮತ್ತು ಇಷ್ಟಪಡದವರ ಮಧ್ಯ ಅಕಾರಣ ವಾಗ್ಯುದ್ಧ ಆರಂಭವಾಯಿತು. (ಬಿಡಿ, ಬಹುತೇಕ ಎಫ್.ಬಿ ಪೋಸ್ಟ್ ಗಳ ಹಣೆಬರಹವೇ ಇದು. ಕಾಳನ್ನೂ ಸಾರಾಸಗಟಾಗಿ ತಿರಸ್ಕರಿಸುವ ಮತ್ತು ಜೊಳ್ಳನ್ನೂ ವಿವೇಚನಾರಹಿತವಾಗಿ ಪುರಸ್ಕರಿಸುವ ಮನಸ್ಥಿತಿಯ ಎರಡು ವರ್ಗ ಇರುವವರೆಗೂ ಇದು ಹೀಗೆಯೇ ಮುಂದುವರಿಯುತ್ತದೆ.)

ಎಲ್ಲಾ ಚರ್ಚೆಗಳಾಚೆ ನಿಜಕ್ಕೂ ನಾವಿಲ್ಲಿ ಯೋಚಿಸಬೇಕಾಗಿರುವುದು ಅವರ ಮಾತಿನಲ್ಲಿ, ಕಾಳಜಿಯಲ್ಲಿ ಎಷ್ಟು ಹುರುಳಿದೆ ಅನ್ನುವುದರ ಬಗ್ಗೆ. ನಮ್ಮ ಗಂಡು ಮಕ್ಕಳನ್ನು ಅಡುಗೆ ಮನೆಯೊಳಗೆ ಬಿಟ್ಟರೆ ಯಾವುದೂ ಅರ್ಥವಾಗದ ಅಯೋಮಯ ಸ್ಥಿತಿಗೆ ಒಳಗಾಗುತ್ತಾರಾ? ಸ್ಟವ್ ಹೇಗೆ ಹೊತ್ತಿಸಬೇಕು, ಟೀ/ಕಾಫಿ ಹೇಗೆ ತಯಾರಿಸಬೇಕು ಅನ್ನುವಷ್ಟರ ಕನಿಷ್ಠಜ್ಞಾನವೂ ಅವರಿಗಿಲ್ವಾ? ನಮ್ಮ ಪೋಷಕರು ಅಡುಗೆ ಮನೆಯ ಎ,ಬಿ,ಸಿ,ಡಿಯೂ ಅರ್ಥವಾಗದಂತೆ ಗಂಡು ಮಕ್ಕಳನ್ನು ಬೆಳೆಸಿದ್ದಾರಾ? 

ಹೀಗೆಂದು ಪ್ರಶ್ನಿಸಿದರೆ, ಬಹುಶಃ ಉತ್ತರ 'ಹಾಗೇನಿಲ್ಲ' ಅನ್ನುವುದೇ ಆಗಿರುತ್ತದೆ. ಸುಮಾರು 10-15 ವರ್ಷಗಳಷ್ಟು ಹಿಂದಕ್ಕೆ ಹೋದರೆ ಟೀ/ಕಾಫಿ, ಅಡುಗೆ ಮಾಡಿಕೊಳ್ಳುವುದು ಬಿಡಿ, ಅಡುಗೆಮನೆಯೊಳಗೆ ಗಂಡಸರು ಪ್ರವೇಶಿಸುವುದೇ ಅವಮಾನ ಅಂದುಕೊಂಡಿದ್ದರು. 'ಉದ್ಯೋಗಂ ಪುರುಷ ಲಕ್ಷಣಂ' ಅನ್ನುವುದು ಶತಾಯಗತಾಯ ಜಾರಿಯಲ್ಲಿರಲೇಬೇಕು ಅಂತ ಬಯಸುತ್ತಿದ್ದ ಕಾಲಘಟ್ಟವದು. ಹೋಟೆಲ್, ಮದುವೆ ಮನೆ, ಛತ್ರ ಅಂತೆಲ್ಲಾ ರುಚಿರುಚಿಯಾಗಿ ಅಡುಗೆ ಮಾಡಿ ಬಡಿಸುತ್ತಿದ್ದ ಗಂಡಸರೂ ಮನೆಯಲ್ಲಿ ಒಂದು ಲೋಟ ಎತ್ತಿ ಆಚೀಚೆ ಇಡುತ್ತಿರಲಿಲ್ಲ. ಅಡುಗೆಮನೆಯ ಆಗುಹೋಗು, ಕಾರುಬಾರು, ಅನ್ನದ ಜೊತೆ ಜೊತೆಗೇ ಬೇಯುತ್ತಿದ್ದ ಅಡುಗೆ ಮನೆ ರಾಜಕಾರಣ, ಹೊಗೆಯಾಡುವ ಮತ್ಸರಗಳೆಲ್ಲಾ ಮಹಿಳೆಯರಿಗಷ್ಟೇ ಸೀಮಿತವಾಗಿತ್ತು. ಚೇತನ್ ಭಗತ್ ರ ಪೋಸ್ಟ್ ಆ ಕಾಲಕ್ಕೆ ಪ್ರತಿಶತ ನೂರರಷ್ಟು ಒಪ್ಪುತ್ತದೆ.

ಆದರೆ ಈಗ ಪರಿಸ್ಥಿತಿ ಹಾಗಿಲ್ಲ. ಹೆಣ್ಣು ದುಡಿಯಲೆಂದು ಹೊರಗೆ ಕಾಲಿಟ್ಟಕೂಡಲೇ ಮನೆಯ ಸಮೀಕರಣಗಳೆಲ್ಲಾ ಬದಲಾದವು. ಅಡುಗೆ ಮನೆಗೆ ಹೊಂದಿಕೊಳ್ಳುವ ನಿರ್ಬಂಧಕ್ಕೆ ಗಂಡಸರೂ ಒಳಗಾದರು. ಕಾಲದ ಬೇಡಿಕೆಯೋ ಅಥವಾ ಬದುಕಿನ ಅನಿವಾರ್ಯತೆಯೋ, ಒಟ್ಟಿನಲ್ಲಿ ಈ ಬದಲಾವಣೆಯನ್ನು ಸಮಾಜವೂ ಒಪ್ಪಿಕೊಂಡಿತು.

ವರ್ಷವಿಡೀ ನಡೆಯುತ್ತಿದ್ದ ಕೃಷಿ ಚಟುವಟಿಕೆಗಳು, ಅವಿಭಕ್ತ ಕುಟುಂಬದ ಒಗ್ಗಟ್ಟು, ಮನೆ ಪೂರ್ತಿ ತುಂಬಿಕೊಂಡಿರುತ್ತಿದ್ದ ಹೆಂಗಸರ ಕಲರವ, ತೋಟ-ಗದ್ದೆ ಅಂತ ಮಾತ್ರ ಸೀಮಿತವಾಗಿದ್ದ ಬದುಕು, ಊರ ತಂಟೆ-ತಕರಾರುಗಳು, ನ್ಯಾಯ ಪಂಚಾಯತಿಕೆಗಳು ಅಡುಗೆ ಮನೆಯ ಕಡೆ ತಲೆಹಾಕಲೂ ಅವಕಾಶ ಮಾಡಿಕೊಡುತ್ತಿರಲಿಲ್ಲ ಅನ್ನುವುದೂ ಸತ್ಯ. ಯಾವಾಗ ಮನೆ ಮಂದಿ ಬದುಕು ಅರಸಿಕೊಂಡು ಪಟ್ಟಣ ಸೇರಲಾರಂಭಿಸಿದರೋ, ಕೃಷಿ ಜೀವನೋಪಾಯ ಅಲ್ಲ ಅನಿಸಲಾರಂಭಿಸಿತೋ, ಅವಿಭಕ್ತ ಕುಟುಂಬಗಳು ಅಪರೂಪವಾಗತೊಡಗಿತೋ ಗಂಡಸರೂ ಸಣ್ಣ ಪುಟ್ಟದಾಗಿ ಅಡುಗೆ ಮಾಡುವುದನ್ನು ಕಲಿತುಕೊಂಡರು. ಅಥವಾ ಹೊರ ದೇಶದಲ್ಲಿ, ಹೊರ ಊರಿನಲ್ಲಿ ದುಡಿಯಬೇಕಾದ ಅನಿವಾರ್ಯತೆಯಿಂದಾಗಿ ಬದುಕು ಎಲ್ಲವನ್ನೂ ಕಲಿಸಿತು.

ಇನ್ನು ಗಂಡಸರು ಮನೆ ಒಪ್ಪವಾಗಿ ಇಡಲಾರರು ಅನ್ನುವವರು ಬ್ಯಾಚುಲರ್ ಗಳ ರೂಮನ್ನೊಮ್ಮೆ ನೋಡಬೇಕು. ಅಲ್ಲಲ್ಲಿ ರಾಶಿ ಬಿದ್ದಿರುವ ಒಗೆಯದ ಬಟ್ಟೆಗಳು, ಮೂಲೆಯಲ್ಲಿನ ರಾಶಿ ಕಸಗಳು, ಪ್ರಿಯಕರನನ್ನು ಭೇಟಿಯಾಗ ಬಂದವಳು ಅವನು ಸ್ನಾನ ಮುಗಿಸಿ ಬರುವಷ್ಟರಲ್ಲಿ ರೂಮ್ ಕ್ಲೀನ್ ಮಾಡಿರೋದು (ಆತ ಸ್ನಾನಕ್ಕೆ ಹೋದಾಗ ರೂಂ ಬಾಗಿಲು ತೆರೆಯುವುದ್ಯಾರೆಂದು ನಿರ್ದೇಶಕರಿಗಷ್ಟೇ ಗೊತ್ತು.) ನೋಡಿ ಅವನಿಗೆ ತಾಯಿಯ ನೆನಪಾಗಿ ಭಾವುಕನಾಗಿ ಅವಳನ್ನು ತಬ್ಬಿಕೊಳ್ಳೋದೆಲ್ಲಾ ಈಗ ಹಳೆ ಸಿನಿಮಾಗಳಲ್ಲಿ ಮಾತ್ರ ಕಾಣಸಿಗುವ ಸೀನ್.

ಈಗಿನ ಬ್ಯಾಚುಲರ್ ಗಳ ರೂಮಿನ ಗೋಡೆಯನ್ನು ಅಲಂಕರಿಸಿರುವ ತೈಲ ಚಿತ್ರ, ತನ್ನ ಮೆಚ್ವಿನ ನಟನದೋ, ನಟಿಯದೋ, ಆಟಗಾರನದೋ ಪಟ, ಒಂದು ಟೇಬಲ್, ಅದರ ಮೇಲೊಂದು ಚಂದನೆಯ ಲ್ಯಾಂಪ್, ಎಲ್ಲಕ್ಕೂ ಕಲಶವಿಟ್ಟಂತಿರುವ ಪೆನ್ ಸ್ಟಾಂಡ್, ಒಪ್ಪವಾಗಿ ಜೋಡಿಸಿರುವ ಅಡುಗೆ ಮನೆಯ ಸಾಮಾಗ್ರಿಗಳು ನಮ್ಮನ್ನು ಬೇರೆಯದೇ ಲೋಕಕ್ಕೆ ಕರೆದೊಯ್ಯುತ್ತವೆ. ಅಲ್ಲಿಗೆ, ಗಂಡಸರಿಗೆ ಮನೆ ಚೆನ್ನಾಗಿಟ್ಟುಕೊಳ್ಳಲು ಬರುವುದಿಲ್ಲ ಅನ್ನುವ ವಾದವೂ ಬಿದ್ದುಹೋಗುತ್ತದೆ.

ಎಲ್ಲಾ ನಿಜ. ಆದರೆ ಈ ಎಲ್ಲಾ ಬದಲಾವಣೆಗಳು, ಪರಿವರ್ತನೆಗಳು ಮನಃಪೂರ್ವಕವಾಗಿ ಆಗಿರುವುದಾ? ಅಡುಗೆ ಮನೆ ಪ್ರವೇಶಿಸಿದ/ಸುವ ಗಂಡಸರು, ಮನೆಯ ಹೆಣ್ಣುಮಕ್ಕಳ ಕೆಲಸಗಳನ್ನು ತೀರಾ ಹಗುರವಾಗಿ ಪರಿಗಣಿಸುವುದು ನಿಂತು ಹೋಗಿದಾ? 'ಅವಳಾ ಬಿಡು ಮನೆಯಲ್ಲಿದ್ದಾಳೆ' ಅನ್ನುವ ತಾತ್ಸಾರ ಕೊನೆಯಾಗಿದಾ? ಗಳಿಕೆಯೊಂದೇ ಮಾಡುವ ಕೆಲಸದ ಮಾನದಂಡವಲ್ಲ ಅನ್ನುವ ಭಾವನೆ ಹುಟ್ಟಿದೆಯಾ? ಮನೆಯ ಗಂಡಸರು ಅಡುಗೆ ಮಾಡುವುದು ಅವಮಾನವಲ್ಲ, ಒಂದೊಳ್ಳೆಯ ಶಿಷ್ಟಾಚಾರ ಎಂಬ ಅರಿವು ಮೂಡಿದೆಯಾ? ಮನೆ ವಾರ್ತೆ ನೋಡಿಕೊಳ್ಳುವುದೂ ಒಂದು ಕ್ರಿಯೇಟಿವಿಟಿ ಅನ್ನುವುದನ್ನು ನಾವು ಒಪ್ಪಿಕೊಂಡಿದ್ದೇವಾ?

ಒಮ್ಮೆ ನಮ್ಮನ್ನೇ ಕೇಳಿಕೊಳ್ಳಬೇಕು.