ಶನಿವಾರ, ಡಿಸೆಂಬರ್ 9, 2017

'ಓದುಗ ದೊರೆ'ಗೆ ಮೋಸ ಮಾಡಿದ ಬರಹ ಮಾಂತ್ರಿಕ.

ಅದು 2003. ನಾನಿನ್ನೂ ಆಗ ಹೈಸ್ಕೂಲ್ ಹುಡುಗಿ. ಬದುಕಿನ ಅಂಗಳದೊಳಕ್ಕೆ 'ಹರೆಯ' ಕಳ್ಳ ಹೆಜ್ಜೆಯಿಟ್ಟು ಪ್ರವೇಶಿಸುತ್ತಿತ್ತಷ್ಟೆ. ಕಪ್ಪು ಬಿಳುಪು ಕನಸುಗಳಿಗೆಲ್ಲಾ ಹರೆಯದ ರಂಗು. ಎಳೆ ಬಿಸಿಲು, ಅರಳುತ್ತಿರುವ ಪಾರಿಜಾತ, ಜಾಜಿ ಮಲ್ಲಿಗೆ, ಇಬ್ಬನಿ, ಹೊಂಬಣ್ಣದ ಧೂಳು, ಬಾಗಿ ನಿಂತ ಪೈರು, ಹಸುವಿನ ಗೊರಸು ಹೀಗೆ ಎಲ್ಲದರಲ್ಲೂ ಕಾವ್ಯ ಕಾಣಿಸುತ್ತಿತ್ತು.

ಇಂತಹ ಕಂಬಳಿ ಹುಳ ಚಿಟ್ಟೆಯಾಗಿ ರೂಪಾಂತರವಾಗುವ ಸಮಯದಲ್ಲಿ ನನಗೆ ಸಿಕ್ಕಿದ್ದು ' ಓ ಮನಸೇ' ಪಾಕ್ಷಿಕ, ಅದರ ಜೊತೆಜೊತೆಗೆ 'ರವಿ ಬೆಳಗೆರೆ' ಎಂಬ ಅಕ್ಷರ ಮಾಂತ್ರಿಕ. ಆ ಪುಸ್ತಕದ ಪ್ರತಿ ಅಕ್ಷರಗಳೂ ಕಂಠಪಾಠ ಆಗುವಷ್ಟು ಬಾರಿ ಅದನ್ನು ಓದುತ್ತಿದ್ದೆ. ಪ್ರತಿ ಬಾರಿ ಓದಿದಾಗಲೂ ಅದೆಷ್ಟು ಚೆನ್ನಾಗಿ ಬರೆಯುತ್ತಾರಲ್ಲಾ ಎಂಬ ಬೆರಗಿಗೆ ಬಿದ್ದು ಬಿಡುತ್ತದೆ. ಅದೇ ಸಮಯದಲ್ಲಿ 'ವಿಜಯ ಕರ್ನಾಟಕ' ಪತ್ರಿಕೆಯಲ್ಲಿ ಪ್ರತಿ ಭಾನುವಾರ ಪ್ರಕಟವಾಗುತ್ತಿದ್ದ ಅವರ 'ಸೂರ್ಯ ಶಿಕಾರಿ' ಅಂಕಣ ಓದಬೇಕೆಂದು ಸೂರ್ಯ ಹುಟ್ಟುವ ಮೊದಲೇ ಎದ್ದು ಕೂರುತ್ತಿದ್ದೆ.

ಹೀಗೆ ರವಿ ಬೆಳಗೆರೆಯೆಂಬ ಅದ್ಭುತ ಶೈಲಿಯ ‌ಬರಹಗಾರನ ಪ್ರತಿ ಅಕ್ಷರಗಳು ನನ್ನೊಳಗೆ ಇಳಿಯುತ್ತಿದ್ದಾಗ ನನ್ನ ಪುಸ್ತಕ ಪ್ರಪಂಚವನ್ನು ಹೊಕ್ಕ ಪುಸ್ತಕವೇ 'ಹೇಳಿ ಹೋಗು ಕಾರಣ'. ಅದುವರೆಗೆ ಕನ್ನಡದ ಕೆಲವು 'ಕ್ಲಾಸಿಕ್' ಪುಸ್ತಕಗಳನ್ನಷ್ಟೇ ಓದಿದ್ದ ನನ್ನ ಮುಂದೆ ಮತ್ತೊಂದು ಪ್ರಪಂಚವೇ ತೆರೆದುಕೊಂಡಂತಾಗಿತ್ತು.

ಅದೆಷ್ಟು ಚೆನ್ನಾಗಿ ಸಂಬಂಧಗಳ ಬಗ್ಗೆ, ಪ್ರೀತಿಯ ಬಗ್ಗೆ ಬರೆಯುತ್ತಾರಲ್ಲಾ ಅಂತ ಅಂದುಕೊಳ್ಳುವಾಗ ಮತ್ತೆ ನನ್ನ ಪುಸ್ತಕ ಸಂಗ್ರಹಕ್ಕೆ ಸೇರಿದ್ದು 'ಮಾಂಡೋವಿ'. ಹರೆಯದಲ್ಲಿ ಪ್ರೀತಿಸಿದ ಹುಡುಗಿಯನ್ನು ಜೀವನದ ಸಂಧ್ಯಾಕಾಲದಲ್ಲಿ ಸಂಗಾತಿಯಾಗಿ ಪಡೆದುಕೊಂಡ ಅದ್ಭುತ ಪ್ರೇಮದ ಬಗೆಗಿನ ಅತ್ಯದ್ಭುತ ಪುಸ್ತಕವದು. ಅವರೇ ಮುನ್ನುಡಿಯಲ್ಲಿ ಅಂದಂತೆ ಕೈ ಇಟ್ಟಲ್ಲೆಲ್ಲಾ ಪ್ರೇಮದ ಹುಡಿ ಅಂಟಿಕೊಳ್ಳುತ್ತಿತ್ತು.

'ನೀ ಹಿಂಗ ನೋಡಬೇಡ ನನ್ನ' 'ಅಮ್ಮ ಸಿಕ್ಕಿದ್ಳು', 'ಬಾಟಂ ಐಟಂ', 'ಖಾಸ್ ಬಾತ್' ಹೀಗೆ ಬೆಳಗೆರೆ ಎಂಬ ಹೆಸರು ಹೊತ್ತು ಬರುತ್ತಿದ್ದ ಎಲ್ಲಾ ಪುಸ್ತಕಗಳನ್ನು ಜಿದ್ದಿಗೆ ಬಿದ್ದಂತೆ ಓದತೊಡಗಿದೆ. ಈ ನಡುವೆ ಬದುಕು ಮಾಗಿತು, ಕಳ್ಳ ಹೆಜ್ಜೆಯಿಟ್ಟು ಬರುತ್ತಿದ್ದ ಹರೆಯ ನನ್ನ ಸಂಪೂರ್ಣ ಆವರಿಸಿಕೊಂಡಿತು. ಹೈಸ್ಕೂಲ್ ನಿಂದ ಡಿಗ್ರಿಯವರೆಗಿನ ಪಯಣದಲ್ಲಿ ನಿರಂತರವಾಗಿ ನನ್ನ ಜೊತೆಗಿದ್ದ ಬೆಳಗೆರೆ ಪುಸ್ತಕಗಳು ಯಾಕೋ ಹೇಳಿದ್ದನ್ನೇ ಹೇಳುತ್ತಿವೆ ಅನಿಸತೊಡಗಿತು. ಅದಾಗ್ಯೂ ಗುರುಗಳು, ಕೆಲ ಸ್ನೇಹಿತರು ಅವರ ವೈಯಕ್ತಿಕ ಬದುಕಿನ ಅಪಸವ್ಯಗಳ ಬಗ್ಗೆ ಮಾತಾಡುವಾಗೆಲ್ಲಾ ನಾನು 'ಅದು ಅವರ ವೈಯಕ್ತಿಕ ಬದುಕು, ನನಗೂ ಅವರ ಖಾಸಗಿ ಜೀವನಕ್ಕೂ ಯಾವ ಸಂಬಂಧವೂ ಇಲ್ಲ, ನನ್ನೇದೇನಿದ್ದರೂ ಪುಸ್ತಕ ಪ್ರೀತಿ' ಅಂತ ಬಲವಾಗಿಯೇ ವಾದ ಮಂಡಿಸುತ್ತಿದ್ದೆ.

ಆದರೆ ಆ ಹೊತ್ತಿಗಾಗುವಾಗಾಗಲೇ ಕ್ಲಾಸಿಕ್ ಕೃತಿಗಳ ಮತ್ತು ಜನಪ್ರಿಯ ಪುಸ್ತಕಗಳ ನಡುವಿನ ವ್ಯತ್ಯಾಸ ತುಂಬಾ ಸ್ಪಷ್ಟವಾಗಿ ಅರ್ಥವಾಗಿತ್ತು. ಗಟ್ಟಿ ಚಿಂತನೆ, ಅಧ್ಯಯನ ಶೀಲತೆ, ಆಳದ ಜ್ಞಾನ ಇವ್ಯಾವುದೂ ಬೆಳಗೆರೆ ಬರಹಕ್ಕೆ ದಕ್ಕಿಸಿಕೊಳ್ಳಲಾಗದು ಅನ್ನುವ ಸತ್ಯ ಅರ್ಥವಾಗಿತ್ತು. ಹರೆಯದ ಭಾವೋದ್ವೇಗ, ಮಾಟ-ಮಂತ್ರ, ಸರ್ಪಸಂಬಂಧಗಳ ರೋಚಕತೆ, ಪ್ರೇಮಿಯ ನೋವು, ಸಂಬಂಧಗಳನ್ನು ಕಳೆದುಕೊಂಡಾಗಿನ ಸಂಕಟ, ಅವಾಸ್ತವ ಆಪ್ತತೆ, ಹಸಿ ಹಸಿ ಕ್ರೌರ್ಯ.... ಇದಾರಾಚೆಗೆ ಬೆಳಗೆರೆ ಬರಹಗಳು ಒಂದು ದೊಡ್ಡ ಶೂನ್ಯವಷ್ಟೇ ಅಂತ ಅನಿಸತೊಡಗಿತು. ಅಲ್ಲಿಗೆ ಬೆಳಗೆರೆ ಪುಸ್ತಕಗಳನ್ನು ಓದುವುದನ್ನೇ ನಿಲ್ಲಿಸಿಬಿಟ್ಟೆ. ಇಷ್ಟಾಗಿಯೂ ಅವರ ಅಂಕಣಗಳನ್ನು (ಕೊಂಡು ಓದದ್ದಿದರೂ) ಓದುವ ಹವ್ಯಾಸ ನಿಂತಿರಲಿಲ್ಲ. ಆದರೆ ಯಾವಾಗ ಆತ್ಮರತಿ ಮಿತಿ ಮೀರಿತೋ ಆಗಲೇ ಅವರ ಅಂಕಣಳನ್ನು ಓದುವುದನ್ನೂ ನಿಲ್ಲಿಸಿಬಿಟ್ಟೆ.

ಈಗ್ಗೆ ಕೆಲವು ಸಮಯಗಳಿಂದ ಅವರ ಯಾವ ಬರಹವನ್ನೂ ಓದಿಲ್ಲ, ಓದಬೇಕೆಂದು ಅನಿಸಿಯೂ ಇಲ್ಲ. ಆದರೆ ಒಂದಿಷ್ಟು ವರ್ಷಗಳ ಕಾಲ ನನ್ನನ್ನು ಅವರ ಬರಹಗಳು ಎಂಗೇಜ್ ಆಗಿಸಿದ್ದವು. (ಸೂಕ್ಷ್ಮವಾಗಿ ಗಮನಿಸಿದರೆ, ನನ್ನ ಬರಹಗಳಲ್ಲೂ ಅವರ ಶೈಲಿಯ ಪ್ರಭಾವ ಕಾಣುತ್ತದೆ.) ಈಗ ತಿರುಗಿ ನೋಡಿದರೆ, ಭಾಷೆಯ ಬಳಕೆಯಲ್ಲಿ ಅವರಿಗಿದ್ದ ನೈಪುಣ್ಯತೆಯನ್ನು ಹೊರತುಪಡಿಸಿ ಇನ್ಯಾವ ವಿಚಾರವೂ ಕಾಡುವುದಿಲ್ಲ.

ಲಂಕೇಶರು ಕನ್ನಡದ ಮಣ್ಣಲ್ಲಿ ಬಿತ್ತಿ ಹೋದ 'ಟ್ಯಾಬ್ಲಾಯ್ಡ್' ಸಂಸ್ಕೃತಿಯನ್ನು ಯಶಸ್ವಿಯಾಗಿ ಮುಂದುವರೆಸಿಕೊಂಡು ಹೋಗಬಲ್ಲ ಎಲ್ಲಾ ಛಾತಿ ಹಾಗೂ ಅವಕಾಶವಿದ್ದ ಬೆಳಗೆರೆಯವರು ಅತಿರೇಕದ, ಅತಿರಂಜನೀಯತೆಯ, ಅತಿ ಭಾವುಕತೆಯ ಸಾಹಿತ್ಯದ ಕಡೆಗೆ ಒಲವು ಬೆಳೆಸಿಕೊಂಡು, ಟ್ಯಾಬ್ಲಾಯ್ಡ್ ಗಳೆಂದರೆ ವಿಕ್ಷಿಪ್ತತೆಯ ಅನಾವರಣವಷ್ಟೇ ಅನ್ನುವ ಅರ್ಥಕ್ಕೆ ಸೀಮಿತಗೊಳಿಸಿದರು.

ಇವತ್ತು ಆ ಸೀಮಿತತೆಯೇ ಅವರನ್ನು ನಿಲ್ಲಬಾರದ ಜಾಗದಲ್ಲಿ ನಿಲ್ಲಿಸಿದೆ. ತಪ್ಪು ಮಾಡಿದ್ದರೆ ಶಿಕ್ಷೆ ಆಗಲೇಬೇಕು. ಅವರದೇ ಮಾತಿನಲ್ಲಿ ಹೇಳುವುದಾದರೆ 'ಎಸಗಿದ ತಪ್ಪುಗಳಿಗೆಲ್ಲಾ ಬದುಕು ಕಡ್ಡಾಯವಾಗಿ ಕಂದಾಯ ಕಟ್ಟಿಸಿಕೊಳ್ಳುತ್ತದೆ'.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ