ಬುಧವಾರ, ಜೂನ್ 15, 2016

ಸಂತೆ

ಹೀಗೆ,
ಸಂತೆಯಲ್ಲಿ, ಗದ್ದಲದಲ್ಲಿ
ಕಳೆದುಹೋದಾಗೆಲ್ಲಾ
ನಿಶಬ್ಧ ತಾಕುತ್ತಿರುತ್ತದೆ
ಭಾವಬಿಗಿತಗಳಿಗೆಲ್ಲಾ ಸ್ಪಷ್ಟ ಹರಿವು

ನಿನ್ನೆ ಕೇಳಿದ್ದು
ಮೊನ್ನೆ ಕಂಡಿದ್ದು
ಇಂದಿಲ್ಲೇ ದಕ್ಕಿದ್ದು
ಮುಗಿಯದ ಕಥೆಗಳಿಗೆಲ್ಲಾ
ಒಂದು ಸಣ್ಣ ತಿರುವು

ಗೋರಿಯ ನೆತ್ತಿಯೊಳಗಿಂದಲೂ
ಉಕ್ಕುವ ಕೊನೆಯಿಲ್ಲದ
ಯಥೇಚ್ಛ ಜೀವನಪ್ರೀತಿ
ಒಂದಿಷ್ಟು ಅಚ್ಚರಿ ಬೆರಗುಗಳಿಗೆ
ಕಾರಣವಾಗುತ್ತದೆ

ಯಾವ ಮೂಲದಿಂದ ಜೀವ ಜೀಕುತ್ತದೋ
ಯಾವ ಕೋನದಲ್ಲಿ ಪ್ರೀತಿ ಹರಿಯುತ್ತದೋ
ಯಾವ ನೆನಪುಗಳಿಗೆ ಎಷ್ಟು ಉಮ್ಮಳಿಕೆಯೋ
ಶಬ್ಧದ ಒಡಲಾಳದ ನಿಶಬ್ಧದಷ್ಟೇ
ಅಸಂಕಲ್ಪಿತ, ಅಯೋಮಯ.

ಶನಿವಾರ, ಜೂನ್ 11, 2016

ಮತ್ತೆ ನೋಡು...

ಅದೆಷ್ಟು ಬಾರಿ ಛಾಯಾಚಿತ್ರವ
ನೋಡಿ ನಿನ್ನ ನೀ ನೋಯಿಸಿಕೊಳ್ಳುತ್ತೀಯಾ?
ಬೇಡ ಬಿಟ್ಟು ಬಿಡು ಈ ದ್ವಂದ್ವವ
ಮತ್ತೆ ಮತ್ತೆ ಛಿದ್ರವಾಗುವ ಆಸೆಯೇತಕೆ?

ಸಲ್ಲದ ಆಸೆಯ ಸುಟ್ಟು
ಸುಮ್ಮನೆ ನಿರಮ್ಮಳವಾಗಿಬಿಡು
ಎಂದೂ ದಕ್ಕದ ನವ್ಯ ಕಾವ್ಯವ
ಅಂತರಗಕ್ಕಿಳಿಸುವ ಹುಕಿ ಏತಕೆ?

ಸ್ತಬ್ಧ ಕಾಳಿರುಳಿನ ದುರ್ಭರ
ಕ್ಷಣಗಳನು ಒಮ್ಮೆ ಭರಿಸಿಬಿಡು
ಕಣ್ಣ ಹನಿಯ ಇಂಗಿಸಿ
ಮಳೆ ಹನಿಸುವ ಹುಚ್ಚು ಕನಸೇತಕೆ?

ಕೂಡುವ ಮುನ್ನವೇ ಕವಲೊಡೆದ ನಿಸ್ತೇಜ
ಹಾದಿಯ ಒಂದುಗೂಡಿಸುವ ಹಂಬಲ ಬಿಡು
ಹರಿಯದ ನದಿಗೆ ವಿಶಾಲ ಶರಧಿಯ
ಸೇರುವ ಹುಸಿ ಕನವರಿಕೆಯೇತಕೆ?

ಕತ್ತಲ ಬೆರಳುಗಳು ಉತ್ಖನನ
ಮಾಡಿದರಷ್ಟೇ ಜಗಕೆ ಬೆಳಕು
ಕಂಬಳಿ ಹುಳವೂ ರೂಪಾಂತರಗೊಂಡು
ಪಟಪಟ ರೆಕ್ಕೆ ಬಡಿವ ಚಿಟ್ಟೆಯಾಗುತ್ತದೆ

ನೀನಾಗಲಾರೆ ಬಾನೆತ್ತರಕ್ಕೆಹಾರಲಾರೆ
ಅನ್ನೋ ನಿರಾಸೆಯ ಬಿಡು
ಭರವಸೆಯ ಬೆನ್ನು ಹತ್ತಿ
ಒಮ್ಮೆ ರೆಕ್ಕೆ ಕೊಡವಿಬಿಡು

ಮತ್ತೆ ನೋಡು,
ನೀನಾಕಾಶದಲ್ಲಿ, ಜಗ ನಿನ್ನ ಪದತಲದಲ್ಲಿ

ಶುಕ್ರವಾರ, ಜೂನ್ 10, 2016

ಹೀಗೇಕೆ ಮನಸ್ಸು ಬಿಸಿಲುಗುದುರೆಯ ಬೆನ್ನು ಹತ್ತುತ್ತದೆ?

ಅಂಕಣ ಬರೆಯಲು ಕುಳಿತರೆ ಅರ್ಧ ಬರೆದಿಟ್ಟ ಕಥೆ ಕೈ ಹಿಡಿದು ಜಗ್ಗುತ್ತದೆ, ನಿನ್ನೆ ರಾತ್ರಿಯ ಯಾವುದೋ ಒಂದು ಕ್ಷಣದಲ್ಲಿ ಮನಸ್ಸೊಳಗೆ ಮೂಡಿದ ಕವನದ ಸಾಲೊಂದು ಮತ್ತೆ ಪ್ರತಿಧ್ವನಿಸುತ್ತದೆ, ಇನ್ನೇನು ಅದನ್ನೇ ಕೈಗೆತ್ತಿಕೊಳ್ಳೋಣ ಅನ್ನುವಷ್ಟರಲ್ಲಿ ಮುಂದಿನ ತಿಂಗಳು ಬರ್ತ್‍ಡೇ ಆಚರಿಸಿಕೊಳ್ಳಲಿರುವ ಗೆಳತಿಗಾಗಿ ಸಿದ್ಧಪಡಿಸಬೇಕಿರುವ ಶುಭಾಶಯ ಪತ್ರ ನೆನಪಾಗುತ್ತದೆ, ತಟ್ಟನೆ ಸಮಾನ ಮನಸ್ಕ ಸ್ನೇಹಿತರೊಬ್ಬರು ನಿನ್ನ ಅಭಿಪ್ರಾಯ ತಿಳಿಸು ಎಂದು ಕಳುಹಿಸಿದ ಬರಹಕ್ಕೆ ಇನ್ನೂ ಪ್ರತಿಕ್ರಿಯೆ ನೀಡಿಲ್ಲ ಅನ್ನುವ ವಿಚಾರ ನೆನಪಿಗೆ ಬರುತ್ತದೆ, ಅಷ್ಟರಲ್ಲೇ ಮನಸ್ಸು ಮತ್ತೆ, ಬರೆಯದ ಅಂಕಣದ ಕಡೆಗೇ ವಾಲುತ್ತದೆ.

ಹೀಗೇಕೆ ಮನಸ್ಸು ಕೆಲವೊಮ್ಮೆ ಬಿಸಿಲುಗುದುರೆಯ ಬೆನ್ನು ಹತ್ತುತ್ತದೆ? ಎಲ್ಲಾ ಕೆಲಸಗಳನ್ನೂ ಮಾಡಲೆಂದು ಹೊರಟು ಏನನ್ನೂ ಮಾಡಲಾಗದೆ ಕೈ ಚೆಲ್ಲಿ ಕುಳಿತುಕೊಳುತ್ತದೆ? ಕಣ್ಣೆದುರಿಗಿನ ಗುರಿ ನಿಚ್ಚಳವಾಗಿದ್ದರೂ ಅದರತ್ತ ತಲುಪಲಾಗದೆ ಒದ್ದಾಡಿಬಿಡುತ್ತದೆ?  ಸೇರಬೇಕಾದ ಗಮ್ಯಕ್ಕಿಂತ ಒಂದೇ ಹೆಜ್ಜೆ ಹಿಂದಿದ್ದರೂ ಯಾಕೆ ಮುಂದಡಿಯಿಡದೆ ಸುಮ್ಮನಿರುತ್ತದೆ? ಕೈಯಳತೆಯಲ್ಲೇ ಇರುವ ಇರಾದೆಯನ್ನು ಪೂರೈಸಲಾಗದೆ ಕೈ ಕಟ್ಟಿ ಕುಳಿತುಕೊಳ್ಳುತ್ತದೆ?

ಇದು ಕೇವಲ ಬರವಣಿಗೆಯೊಂದಕ್ಕೆ ಸಂಬಂಧಪಟ್ಟ ವಿಚಾರವಲ್ಲ. ಎಲ್ಲರ ಬದುಕಿನ ಪ್ರತಿ ಆಯಾಮದಲ್ಲೂ ಮನಸ್ಸು ಇಂತಹದ್ದೊಂದು ಎಡೆಬಿಡಂಗಿ ಸ್ಥಿತಿಗೆ ಇಳಿದುಬಿಡುತ್ತದೆ. ನಾಳೆ ಗಣಿತ ಪರೀಕ್ಷೆ ಇಟ್ಟುಕೊಂಡು , ಇವತ್ತು ವಿಜ್ಞಾನದ ಮೇಲೆ ಒಂದು, ಇಂಗ್ಲಿಷಿನ ಮೇಲೆ ಮತ್ತೊಂದು ಕೈ ಇಟ್ಟು ಯಾವುದನ್ನೂ ಓದಲಾಗದ ಎಸ್.ಎಸ್.ಎಲ್.ಸಿ ಹುಡುಗನ ಮನಸ್ಥಿತಿಯಲ್ಲೂ, ಮಧ್ಯಾಹ್ನದ ಅಡುಗೆಗಿನ್ನೂ ತರಕಾರಿ ಕತ್ತರಿಸದೆ, ರಾತ್ರಿ ಊಟಕ್ಕೆ, ನಾಳೆ ಬೆಳಗ್ಗಿನ ತಿಂಡಿಗೆ ಏನು ಮಾಡಲಿ ಎಂದು ಚಿಂತಿಸುತ್ತಿರುವ ಗೃಹಣಿಯ ಮನಸ್ಥಿತಿಯಲ್ಲೂ, ಇನ್ನೆರಡು ದಿನಕ್ಕೆ ಒಪ್ಪಿಸಲೇಬೇಕಾಗಿರುವ ಪ್ರೊಜೆಕ್ಟನ್ನು ಮುಂದಿಟ್ಟುಕೊಂಡು, ಮುಂದಿನ ವರ್ಷ ಕೈಗೆತ್ತಿಕೊಳ್ಳಬೇಕಾಗಿರುವ ಪ್ರೊಜೆಕ್ಟಿನ ಕೋಡ್ ಬಗ್ಗೆ ತಲೆ ಕೆಡಿಸಿಕೊಳ್ಳುವ ಸಾಫ್ಟ್‌ವೇರ್ ಉದ್ಯೋಗಿಯ ಮನಸ್ಥಿತಿಯಲ್ಲೂ, ಈ ವಾರದ ಕೊನೆಗೆ ಸಿಲೆಬಸ್ ಮುಗಿಸಲೇಬೇಕಾಗಿರುವ ಒತ್ತಡದಲ್ಲಿದ್ದೂ, ಮುಂದಿನ ಸೆಮಿಸ್ಟರ್ ಬಗ್ಗೆ ಯೋಚಿಸತೊಡಗುವ ಲೆಕ್ಚರರ್ ಮನಸ್ಥಿತಿಯಲ್ಲೂ... ಮನೆ ಮಾಡಿಕೊಂಡಿರುವುದು ಇದೇ ಎಡೆಬಿಡಂಗಿತನ.

ನಾವು ಈ ಎಡೆಬಿಡಂಗಿತನಕ್ಕೆ, ಕ್ರಿಯೇಟಿವಿಟಿಯ ಒಂದು ಭಾಗ ಅಂತಲೋ, ಇಲ್ಲ ಓದುವ ಹುಮ್ಮಸ್ಸು ಅಂತಲೋ, ಜವಾಬ್ದಾರಿತನದ ಚರಮ ಸೀಮೆ ಅಂತಲೋ, ದೂರಾಲೋಚನೆ ಅಂತಲೋ, ಮುಂದಿನ ದಿನಗಳಿಗಾಗಿ ಮಾಡಿಕೊಳ್ಳುವ ದಿವ್ಯ ಸಿದ್ಧತೆ ಅಂತಲೋ ಬಗೆ ಬಗೆಯ ಸುಂದರ ಹೆಸರಿಟ್ಟುಕೊಂಡರೂ, ಅವೆಲ್ಲಾ ಶುದ್ಧ ಸುಳ್ಳು ಅನ್ನುವುದು ಮನಸ್ಸಿಗೆ ತುಂಬಾ ಚೆನ್ನಾಗಿ ಗೊತ್ತಿರುತ್ತದೆ. ಯಾವ ಕ್ರಿಯೇಟಿವಿಟಿಯ ಭಾಗವಾಗಿಯೂ ಒಂದು ಕೆಲಸವನ್ನು ಅರ್ಧಕ್ಕೆ ನಿಲ್ಲಿಸಿ ಮತ್ತೊಂದರತ್ತ ಮನಸ್ಸು ಛಂಗನೆ ಹಾರಿಬಿಡುವುದಿಲ್ಲ ಅನ್ನುವುದು ತುಂಬಾ ಹಿಂದೆಯೇ ಸ್ಪಷ್ಟವಾಗಿ ಸಾಬೀತಾಗಿರುತ್ತದೆ. ಬದುಕಿನ ಯಾವ ಸಾಂಪ್ರದಾಯಿಕ, ಅಸಾಂಪ್ರದಾಯಿಕ ಮೂಲಗಳನ್ನು ಕೆದಕಿದರೂ ಅದು ಪಾಸಿಟಿವಿಟಿಯೆಂದು ಅನ್ನಿಸಿಕೊಳ್ಳುವುದೇ ಇಲ್ಲ.

ಇಷ್ಟಿದ್ದರೂ ಮನಸ್ಸು ಕೆಲವೊಮ್ಮೆ ಜಿದ್ದಿಗೆ ಬಿದ್ದಂತೆ ಮಾಡುತ್ತಿರೋ ಕೆಲಸದಿಂದ ತಪ್ಪಿಸಿಕೊಳ್ಳಲು, ವಿನಾಕಾರಣ ಮತ್ತೊಂದರತ್ತ ಹೊರಳಿಕೊಳ್ಳಲು ನೂರು ಕಳ್ಳ ನೆಪಗಳನ್ನು, ಅನಗತ್ಯದ ಕಾರಣಗಳನ್ನು, ಅನುಪಯುಕ್ತ ಸಬೂಬುಗಳನ್ನು, ಅಸಮಂಜಸ ನಿಮಿತ್ತಗಳನ್ನು ಒಡ್ಡುತ್ತವೆ. ಮತ್ತವುಗಳನ್ನು ತುಂಬಾ ಶಕ್ತಿಯುತವಾಗಿ ಸಮರ್ಥಿಸಿಕೊಳ್ಳುತ್ತದೆ ಕೂಡ.

ಹೀಗೆ ಮನಸ್ಸು ಕಳ್ಳ ನೆವಗಳಿಗೆ ಬಿದ್ದು ಮಾಡಬೇಕಿರುವ ಕೆಲಸದಿಂದ ತಪ್ಪಿಸಿಕೊಳ್ಳಲು, ಹೊತ್ತಿರುವ ಜವಾಬ್ದಾರಿಗಳಿಂದ ನುಣುಚಿಕೊಳ್ಳಲಾರಂಭಿಸಿದಾಗೆಲ್ಲಾ, ಅದರ ತಲೆ ಮೇಲೊಂದು ಮೊಟಕಿ, ಅಸಂಬದ್ಧ ರೇಜಿಗೆಗಳನ್ನು ಜಾಡಿಸಿ ಒದ್ದು, ಮನಸ್ಸನ್ನು ಮತ್ತೆ ಎಬ್ಬಿಸಿ ನಡೆದು, ನಡೆಯಿಸಬೇಕು. ದಣಿದರೆಷ್ಟೇ ಊಟ ರುಚಿಸುತ್ತದೆ ಅನ್ನುವ ಸತ್ಯವನ್ನು ಸಾದ್ಯಂತವಾಗಿ ಮನಗಾಣಿಸಬೇಕು. ಆಗ ಮನಸ್ಸು ಮತ್ತೆ ಪುಟಿದೇಳುತ್ತದೆ, ರೆಕ್ಕೆ ಕೊಡವಿಕೊಂಡು ಜಗದಗಲ ಹಾರುತ್ತದೆ.