ಗುರುವಾರ, ಅಕ್ಟೋಬರ್ 1, 2020

ಮಹಾತ್ಮ ಗಾಂಧಿ: ಅನುದಿನದ ರೂಪಕಗಳಲ್ಲಿ ಅಜರಾಮರ


ತರಗತಿಯ ವಿಧೇಯ ವಿದ್ಯಾರ್ಥಿಯನ್ನು 'ಅವನು/ಳು ಒಬ್ಬ ದೊಡ್ಡ ಗಾಂಧಿ' ಎಂದು ಶಾಲೆಯಲ್ಲಿ ತಣ್ಣಗೆ ಮೂದಲಿಸುತ್ತಿದ್ದಾಗಲೂ, ಮನೆಯಲ್ಲಿ ಮಾತಿನ ಮಧ್ಯೆ ಯಾರಾದರೂ ತುಂಬು ಸಂಭಾವಿತರ ಬಗ್ಗೆ ಮಾತಾಡುವಾಗ 'ಅವನನ್ನು ಕಣ್ಣು ಮುಚ್ಚಿ ನಂಬಬಹುದು, ಗಾಂಧಿಯಂತ ಮನುಷ್ಯನಾತ' ಎಂದು ಮಾವ ಹೇಳುತ್ತಿದ್ದಾಗಲೂ ನಮಗೆ ದಕ್ಕುತ್ತಿದ್ದ ಗಾಂಧಿಜಿ ಅವರ ಸುಕ್ಕುಗಟ್ಟಿದ ಕೆನ್ನೆ, ಬೊಚ್ಚು ನಗುವಿನಷ್ಟೇ ಆಪ್ತ. ಬಣ್ಣದ ಕಾರಣಕ್ಕಾಗಿ ರೈಲು ಬೋಗಿಯಿಂದ ಹೊರದಬ್ಬಿಸಿಕೊಳ್ಳದೇ ಇದ್ದಿದ್ದರೆ ಗಾಂಧಿ ಈ ಹೋರಾಟಕ್ಕೆ ಇಳಿಯುತ್ತಲೇ ಇರಲಿಲ್ಲವೇ? ಎನ್ನುವ ಪ್ರಶ್ನೆ ಆಗ ಒಮ್ಮೆಯೂ ಮೂಡಿರಲಿಲ್ಲ.


ಗಾಂಧೀಜಿ ಸತ್ಯಾಗ್ರಹಗಳಿಂದ, ಚಳುವಳಿಗಳಿಂದ, ಘೋಷಣೆಗಳಿಂದ ನಮಗೆ ಆಪ್ತವಾಗುವ ಮೊದಲು ಅವರ ಊರುಗೋಲಿನಿಂದ, ಕನ್ನಡಕದಿಂದ, ನಗುವಿನಿಂದ, ಅವರ ಮೂರು ಮಂಗಗಳಿಂದ, ಮಕ್ಕಳಿಗೆ ಮಾತ್ರ ಅರ್ಥವಾಗುವ ದಂತಕಥೆಗಳಿಂದ ಆವರಿಸಿಕೊಂಡು ಬಿಟ್ಟಿದ್ದರು, ಅದೂ ಯಾವ ಪರಿಚಯದ ಹಂಗೂ ಇಲ್ಲದೆ.


ನೋಟಿನ ಗಾಂಧಿ, ಶಾಲೆಯ ಸ್ಟಾಫ್ ರೂಮಿನ ಪ್ರವೇಶ ದ್ವಾರದಲ್ಲಿನ ಗಾಂಧಿ, ಪಠ್ಯಪುಸ್ತಕದಲ್ಲಿನ ಗಾಂಧಿ, ಅಜ್ಜನ ಕಪಾಟಿನ ಬಾಗಿಲ ಮೇಲಿನ ಗಾಂಧಿ, ಮಾವನ ಮಾತಿನಲ್ಲಿ ಪದೇ ಪದೇ ಪ್ರಸ್ತಾಪವಾಗುತ್ತಿದ್ದ ಗಾಂಧಿ... ಎಷ್ಟು ತರಹೇವಾರಿ ಗಾಂಧಿ ಇದ್ದರೂ ಎಲ್ಲರನ್ನೂ ಒಳಗೊಳ್ಳುತ್ತಿದ್ದುದು,ಎಲ್ಲರಲ್ಲೂ ಒಂದು ಭರವಸೆ ತುಂಬುತ್ತಿದ್ದುದು ಮನೆಯ ಹಿರಿಯಜ್ಜನಂತಹ ಅವರ ನಗುವೇ ಏನೋ!


ಗಾಂಧಿ ಎಂದರೆ ನಮ್ಮಂತಹ ಒಬ್ಬ ಸಹಜ ಮನುಷ್ಯನೇ ಏರಿದ ಅತ್ಯದ್ಭುತ ಎತ್ತರ ಎಂಬುವುದನ್ನು ಅರಿತುಕೊಳ್ಳದ ವಯಸ್ಸಿನಲ್ಲಿ ಒಂದು ದಿನ ಮಾವನ ಹತ್ರ 'ಗಾಂಧಿ ಆಗುವುದು ಹೇಗೆ?' ಕೇಳಿದ್ದೆ. ಅವರು 'ಸತ್ಯವನ್ನು ಮಾತ್ರ ಹೇಳುವುದು' ಅಂದಿದ್ದರು. ಆ ಮೂಲಕ ಗಾಂಧಿಯಾಗುವುದೆಂದರೆ ಸತ್ಯ ಮಾತ್ರ ಹೇಳುವುದು ಎನ್ನುವ ಚಂದದ ಸುಳ್ಳನ್ನು ನನ್ನೊಳಗೆ ದಾಟಿಸಿಬಿಟ್ಟಿದ್ದರು. ಅವತ್ತೇ ರಾತ್ರಿ ನಾನು ಗಾಂಧಿಯಾಗುತ್ತೇನೆ ಎಂದು ತೀರ್ಮಾನಿಸಿದ್ದೆ.


ಆಮೇಲಿಂದ ಸುಳ್ಳು ಹೇಳಿಯೇ ಇಲ್ಲ ಅಂತಲ್ಲ. ಮರುದಿನ ಬೆಳಗ್ಗೆ ಕಾಪಿ ಬರೆಯದಿರಲು ನೆಪ ಹುಡುಕುವಾಗಲೇ ರಾತ್ರಿಯ ತೀರ್ಮಾನ ಮರೆತುಹೋಗಿತ್ತು. ಆದರೆ ಪ್ರತಿ ಬಾರಿ ಸುಳ್ಳಾಡುವಾಗಲೂ ಗಾಂಧಿ ಸುಮ್ಮನೆ ಬಂದು ಗಂಟಲಲ್ಲಿ ಕೂತು ಬಿಡುತ್ತಿದ್ದರು. ಸ್ಪೆಷಲ್ ಕ್ಲಾಸಿನ ಕಾರಣ ಕೊಟ್ಟು ಡೊಂಬಯ್ಯಣ್ಣನ ಅಂಗಡಿಯಲ್ಲಿ ಕೂತು 'ಇದೊಂದೇ ಪೇಜು' ಅನ್ನುತ್ತಲೇ ಕಥೆ ಪುಸ್ತಕ ಓದಿದ್ದುದನ್ನು ಎರಡು ದಿನ‌ ಕಳೆದಮೇಲಾದರೂ ಮನೆಯಲ್ಲಿ ಹೇಳಬೇಕು ಎನ್ನುವ ನೈತಿಕ ಪ್ರಜ್ಞೆಯನ್ನು ಗಾಂಧಿ ಬಿತ್ತಿದ್ದರು. ಪ್ರತಿ ರವಿವಾರ ಬೆಳಗ್ಗೆ ಮದ್ರಸಕ್ಕೆ ಹೊರಡುವ ಸಮಯದಲ್ಲಿ ಧುತ್ತನೆ ಕಾಣಿಸಿಕೊಳ್ಳುತ್ತಿದ್ದ ಹೊಟ್ಟೆ ನೋವು ವರ್ಷಕ್ಕೆ ಎರಡೋ ಮೂರೋ ಬಾರಿ ಬರುವುದಕ್ಕೆ ಸೀಮಿತವಾಯಿತು.


ಗಾಂಧಿ ದಿಢೀರೆಂದು ಈ ದೇಶದ ಬಾಪು ಆದದ್ದಲ್ಲ. ಅದೊಂದು ನಿರಂತರ ಪ್ರಕ್ರಿಯೆ, ನೋಟಿನಲ್ಲಿ, ಪುಸ್ತಕದಲ್ಲಿರುವ ಗಾಂಧಿ ಎಲ್ಲರ ಮನೆಯ ಬಾಪು ಆದದ್ದು ಕೆಲವು ಚಂದ ಚಂದದ ರೂಪಕಗಳ ಮೂಲಕ. ಮೂರು‌ ಮಂಗಗಳ ಮೂಲಕ ಎಷ್ಟು ಸರಳವಾಗಿ ಕೆಟ್ಟದ್ದನ್ನು ನೋಡಬಾರದು, ಕೇಳಬಾರದು, ಹೇಳಬಾರದು ಎಂದರು! ನಾನು ಮತ್ತು ಈ ದೇಶದ ಲಕ್ಷಾಂತರ ಮಕ್ಕಳು ಗಾಂಧಿಯನ್ನು ಅರಿತುಕೊಂಡದ್ದೇ ಮನಸ್ಸಲ್ಲಿ ಸದಾ ಹಸಿರಾಗಿರುವ ಇಂತಹ ರೂಪಕಗಳಿಂದ.


ಹಠವಾದಿ ಗಾಂಧೀಜಿಯದು ಸರಳ ಬದುಕು. ಒಂದು ತುಂಡು ಬಟ್ಟೆ ಧರಿಸಿಕೊಂಡೇ ಅತಿದೊಡ್ಡ ಸಾಮ್ರಾಜ್ಯಶಾಹಿಯನ್ನು ಎದುರು ಹಾಕಿಕೊಳ್ಳಬಹುದು ಎನ್ನುವುದನ್ನೂ ಜಗತ್ತಿಗೇ ತೋರಿಸಿಕೊಟ್ಟರು. ಆ ಬಟ್ಟೆ ಈ ದೇಶದ ಬಡತನದ ಪ್ರತೀಕವೋ ಅಥವಾ ಬದುಕಿನ ಸರಳತೆಯೋ ಎನ್ನುವುದೆಲ್ಲಾ ವಿಚಾರ ಮಾಡುವುದಕ್ಕೆ ಮುನ್ನವೇ ಅವರ ಉಡುಪಿನ ಸರಳತೆ ಮನಸ್ಸಿಗಂಟಿಕೊಂಡು ಕೂತು ಬಿಟ್ಟಿತು.‌ ಒಮ್ಮೆ ಮಾವನ ಬಳಿ ಮಾತಾಡುತ್ತಾ "ಐದು ವರ್ಷಗಳ ಒಂದಿಡೀ ಇಂಜಿನಿಯರ್ ಪದವಿಯನ್ನು ಎರಡೇ ಜೊತೆ ಬಟ್ಟೆಗಳಲ್ಲಿ ಹೇಗೆ ಕಳೆದಿರಿ?" ಎಂದು ನಾನು ಇಷ್ಟಿಷ್ಟು ದೊಡ್ಡ ಕಣ್ಣು ಬಿಟ್ಟು  ಕೇಳಿದ್ದಾಗ ಅವರು, "ಗಾಂಧಿ ಅಷ್ಟನ್ನೂ ಉಡುತ್ತಿರಲಿಲ್ಲವಲ್ಲಾ" ಎಂದು ತಣ್ಣಗೆ ಉತ್ತರಿಸಿದ್ದರು. ಬಹುಶಃ ಗಾಂಧೀಜಿ ಬಳಸುತ್ತಿದ್ದ ರೂಪಕಗಳು ಹೀಗೆಯೇ ಏನೋ, ಅಂಗೈಗೆ ಅಂಟಿಕೊಂಡು ಸದಾ ಆತ್ಮವನ್ನು ಎಚ್ಚರಗೊಳಿಸುವಂಥದ್ದು!


'ಮೈ ಎಕ್ಸ್‌ಪರಿಮೆಂಟ್ ವಿದ್ ಟ್ರುತ್'ನಲ್ಲಿ ಗಾಂಧೀಜಿ "ನಿಮ್ಮ ಕೆಲಸವನ್ನು ನೀವೇ ಮಾಡಿಕೊಳ್ಳಬೇಕು" ಎಂದಿದ್ದಾರೆ. ನನ್ನ ಬದುಕಿನಲ್ಲಿ ತುಂಬಾ ಪ್ರಭಾವ ಬೀರಿದ ಅವರ ಮಾತು ಇದು.  ಹಲವು ಬಾರಿ ನನ್ನ ಕೈಲಾಗದು ಅಂದುಕೊಂಡಿದ್ದ ಕೆಲಸವನ್ನು ಕಲಿತುಕೊಂಡ ಹೆಮ್ಮೆಯನ್ನೂ ಇನ್ನೂ ಕೆಲವು ಬಾರಿ 'ಅಧಿಕಪ್ರಸಂಗಿ' ಎನ್ನುವ ಬಿರುದನ್ನೂ ನನಗದು ನೀಡಿದೆ.


ಮತ್ತೊಂದು ಕಡೆ ಅವರು 'ಸಹಜೀವಿಗಳನ್ನು ಅವರ ದೌರ್ಬಲ್ಯಗಳನ್ನು ಒಪ್ಪಿಕೊಂಡು ಸ್ವೀಕರಿಸಬೇಕು" ಎನ್ನುತ್ತಾರೆ. ಬದುಕು ಸಹ್ಯವಾಗುವುದಕ್ಕೆ, ಚೆಂದಗಾಣುವುದಕ್ಕೆ ಎಷ್ಟು ಸರಳ ಸೂತ್ರವದು! ಸಹಜೀವಿಗಳ ದೌರ್ಬಲ್ಯವನ್ನು ಸುಮ್ಮನೆ ಸ್ವೀಕರಿಸಿಬಿಟ್ಟರೆ ಅನಗತ್ಯದ ವಾದ, ವಿವಾದ, ಜಗಳಗಳು ಇಲ್ಲದೆ ಸಂಬಂಧಗಳಲ್ಲಿ ಗೋಜಲುಗಳೇ ಇಲ್ಲವಾಗಿ ಬದುಕೂ ಸರಳವಾಗುತ್ತದೆ.


ಬಾಲ್ಯದಲ್ಲಿ ಗೊತ್ತಿದ್ದೋ ಗೊತ್ತಿಲ್ಲದೆಯೋ ಎಸಗಿದ ತಪ್ಪುಗಳಿಂದ ಹಿಡಿದು  ಸ್ವಾತಂತ್ರ್ಯ ಹೋರಾಟದಲ್ಲಿ ಇಡೀ ದೇಶಕ್ಕೆ ನೇತೃತ್ವ ಒದಗಿಸುವಲ್ಲಿ ತನ್ನಿಂದಾದ ತಪ್ಪುಗಳನ್ನು ಒರೆಗಲ್ಲಿಗೆ ಹಚ್ಚುವ, ತೆರೆದಿಡುವ ಧೈರ್ಯ ಮತ್ತು ಪಾರದರ್ಶಕತೆ ಮಹಾತ್ಮನಿಗೆ ಮಾತ್ರ ಇರಲು ಸಾಧ್ಯ. ಹಾಗೆಂದೇ ಅವರು ಅಷ್ಟು ದೃಢವಾಗಿ 'ನಮ್ಮೊಳಗಿನ ನೈತಿಕತೆಯೇ ನಮ್ಮ ಬಲ' ಎಂದು ಹೇಳಲು ಸಾಧ್ಯವಾಗಿದ್ದಿರಬಹುದು. ಗಾಂಧಿ ಹುಟ್ಟಿದ, ಬದುಕಿದ, ಕೊನೆಯುಸಿರೆಳೆದ ಕಾಲಘಟ್ಟದಲ್ಲಿ ನಾನು ಇರಲಿಲ್ಲ . ಗಾಂಧಿ ಇಲ್ಲದ ನಾಡಿನಲ್ಲಿ ಎರಡು ಪೀಳಿಗೆಯ ನಂತರ ಹುಟ್ಟಿದ  ನಮ್ಮಂಥವರ ಕಣ್ಣೂ ಅವರ ಸಾವು, ಎಲುಬುಗೂಡಿನ ಎದೆಯೊಳಗಿಳಿದ ಮೂರು ಕಾಡತೂಸುಗಳ ಶಬ್ದ ಕೇಳಿದಂತಾದಾಗೆಲ್ಲಾ ಹನಿಗೂಡುತ್ತವೆ ಎಂದರೆ ಇನ್ನೆಷ್ಟು ಶತಮಾನ ಕಳೆದರೂ ಮಹಾತ್ಮ ಅಜರಾಮರರಾಗಿಯೇ ಇರುತ್ತಾರೆ ಅನಿಸುತ್ತದೆ.