ಬುಧವಾರ, ಏಪ್ರಿಲ್ 29, 2015

ಮೌನಗಳ ಹಾಡು ಮಧುರ...

'ಬಚ್ಚಿಕೋ ನಿನ್ನಲಿ ನಿನ್ನೆದೇ ಗೂಡಲಿ...' ಶ್ರೇಯಾ ಘೋಷಾಲ್ ಮತ್ತು ಆರ್.ಪಿ. ಪಟ್ನಾಯಕ್ ಹಾಡುತ್ತಿದ್ದರೆ ಮನಸು ಅಪಧಮನಿ, ಅಭಿದಮನಿಗಳ ಹೆಸರು ಗೊತ್ತಿಲ್ಲದ ಗಲ್ಲಿ ಗಲ್ಲಿಗಳಲ್ಲಿ ತಿರುಗಿ ತನ್ನ ವಿಳಾಸವನ್ನು ತಾನೇ ಕಳೆದುಕೊಂಡು ಪ್ರೀತಿಯ ಚಿಪ್ಪಲಿ ಗೊತ್ತೇ ಆಗದಂತೆ ಸ್ವಾತಿ ಮುತ್ತಾಗಿಬಿಡುತ್ತೆ.

ಕೆಲವು ಹಾಡುಗಳೇ ಹಾಗೆ, ಕೇಳುತ್ತಿದ್ದಂತೆಯೇ ಮನದ ತುಂಬಾ ನೆನಪಿನ ಚಿತ್ತಾರವ ಬಿಡಿಸಿ ಬಿಡುತ್ತವೆ. ಮೌನವಾಗಿದ್ದಾಗ ಸುಮ್ಮನೆ ಕಾಡುವ, ಗುಂಪಲ್ಲಿದ್ದಾಗ ಹುಚ್ಚೆಬ್ಬಿಸುವ, ಸುರಿವ ಜಡಿ ಮಳೆಯಲಿ ವಿಚಿತ್ರ ಸುಖ ನೀಡುವ, ನಡುಗೋ ಚಳಿಯಲಿ ಬೆಚ್ಚಗಾಗಿಸುವ, ಸುಡು ಬಿಸಿಲಲ್ಲಿ ನೆರಳಾಗುವ ಈ ಹಾಡುಗಳದೊಂದು ವಿಚಿತ್ರ ಲೋಕವೇ ಸರಿ. ಹಾಡುಗಳ ಸಾಂಗತ್ಯದಲ್ಲಿ ನಾವೇ ರಾಗವಾದಾಗೆಲ್ಲಾ ಮನದ ಮ್ಯೂಸಿಕ್ ಪ್ಲೇಯರ್ನಲ್ಲಿ ಪದೇ ಪದೇ ನೆನಪಿನ ಗಝಲ್ ಗಳು ತಾನೇ ತಾನಾಗಿ ಪ್ಲೇ ಆಗುತ್ತಿರುತ್ತವೆ.

ಕಾಡೋ ಪ್ರತಿ ಹಾಡಿನ ಹಿಂದೆಯೂ ನೂರೊಂದು ನೆನಪುಗಳಿರುತ್ತವೆ. ಬ್ರೆಡ್ ನ ಒಂದು ಬದಿಗೆ ಬೆಣ್ಣೆ ಹಚ್ಚಿ ಮೇಲೆ ಮತ್ತೊಂದು ಬ್ರೆಡ್ ಇಟ್ಟು ಅದಕ್ಕೊಂದು ಚೌಕಟ್ಟು ಹಾಕಿ ಇದು ನನಗಿಷ್ಟ ಅಂದಂತೆ ಒಂದೇ ಹಾಡನ್ನು ಪ್ರಸ್ತುತಪಡಿಸಿ ಇದೊಂದೇ ಗೀತೆ ನನ್ನ ಮೆಚ್ಚಿನ ಹಾಡು ಅನ್ನಲಾಗದು. ನನ್ನ ಪಾಲಿಗೆ ಹಾಡುಗಳೆಲ್ಲವೂ ಚೌಕಟ್ಟಿಲ್ಲದ ಚಿತ್ರಪಟುಗಳು. ಇಚ್ಛೆ ಬಂದಲ್ಲಿಂದ ಆರಂಭವಾಗಿ ತನ್ನಿಚ್ಛೆಯಂತೆಯೇ ಅಂತ್ಯವಾಗುವ ಸರ್ವಸ್ವತಂತ್ರ ಕಲಾಕೃತಿಗಳು.

ಒಂದೊಂದು ಹಾಡು ಕೇಳುವಾಗಲೂ ಒಂದೊಂದು ರೀತಿಯ ಭಾವಗಳು... ಹಾಡು ಕೇಳುತ್ತಾ ಸುಮ್ಮನೆ ಕಣ್ಣು ಮುಚ್ಚಿ ಆಸ್ವಾದಿಸುತ್ತಾ ನಡು ನಡುವೆ ಟೈಪಿಸುತ್ತಾ ಸಮಯದ ಪರಿವೆಯೇ ಇಲ್ಲದ ಲ್ಯಾಪ್ ಟಾಪ್ ಮಡಿಲಲ್ಲಿಟ್ಟುಕೊಂಡು ತಾಸುಗಟ್ಟಲೆ ಕುಳಿತಿದ್ದೇನೆ. ಹಾಡು ಕೇಳುತ್ತಾ ಕೇಳುತ್ತಾ ಅದರ ಬಗ್ಗೆಯೇ ಬರೆಯುವ ಸುಂದರ ಮತ್ತು ವಿಚಿತ್ರ ಪುಳಕ ಅನುಭವಿಸುತ್ತಿದ್ದೇನೆ ನಾನೀಗ.

ಇಹದ ಪರಿವೇ ಮರೆಸುವ ಈ ಹಾಡುಗಳ ಮೋಡಿಯಾದರೂ ಎಂತಹುದು... 'ನೀನೆಂದರೆ ನನ್ನೊಳಗೆ ಏನೋ ಒಂದು ಸಂಚಲನ...' ಸೋನು ನಿಗಂ ನ ಧ್ವನಿ ನನ್ನದೇ ಎದೆ ಬಡಿತವೆಂಬಂತೆ ಭಾಸವಾಗುತ್ತದೆ. ಪ್ರತಿ ಸಲಾನೂ ಈ ಹಾಡಿನ 'ಹೇ ಜೀವವೇ ಹೇಳಿಬಿಡು ನಿನಗೂ ಕೂಡ ಹೀಗೇನಾ ' ಅನ್ನುವ ಸಾಲು ಕೇಳುವಾಗೆಲ್ಲಾ ನನ್ನ ಅನುಮತಿಯಲ್ಲದೆ ನನ್ನ  ಅಂತರಂಗದ ಅಂತಃಪುರ ಪ್ರವೇಶಿಸಿದವನ ಕಣ್ಣಲ್ಲಿ ಕಣ್ಣ ನೆಟ್ಟು ಇದೇ ಸಾಲನ್ನು ಕೇಳಬೇಕೆನಿಸುತ್ತದೆ. ಮರುಕ್ಷಣವೇ ಉತ್ತರ ಗೊತ್ತಿದ್ದೂ ಗೊತ್ತಿದ್ದೂ ಕೇಳಬೇಕೆನಿಸುವ ನನ್ನ ಹುಚ್ಚುತನದ ಬಗ್ಗೆ ನನಗೇ ಮರುಕ ಹುಟ್ಟುತ್ತದೆ. ಇತ್ತೀಚೆಗೆ ನನ್ನ ಬಗ್ಗೆ ನನಗೇ ಮರುಕ ಹುಟ್ಟಿಸುವ ಮತ್ತೊಂದು ಹಾಡು 'ಎಲ್ಲೋ ಮಳೆಯಾಗಿದೆ ಇಂದು...'.

ಕುರುಚಲು ಗಡ್ಡದ ಅರ್ಜಿತ್ ಸಿಂಗ್ ನ 'ಹಮ್ ತೆರೆ ಬಿನ್ ಅಬ್ ರೆಹ್ ನಹಿ ಸಕ್ತೆ....' ಹಾಡು ಕೇಳುವಾಗೆಲ್ಲಾ ಮೈ ಮನ ಹಗುರಾಗಿ ಎಲ್ಲೋ ತೇಲಿದ ಅನುಭವ. ಇವನ ಹಾಡುಗಳೋ ಒಂದಕ್ಕಿಂತ ಒಂದು ಮಧುರ. ಅವನ ಗಡ್ಡದಷ್ಟೇ ಸುಂದರ. 'ತೆರೆ ಸಾಸೊ ಮೆ', 'ಮುಸ್ಕ್ರಾನೇ ಕೊ ವಜಹ್ ತುಮ್ ಹೋ', 'ತು ಹಿ ಹೆ ಆಶಿಕಿ' ... ಯಾವುದನ್ನೂ ಲಿಸ್ಟಿಂದ ಹೊರಗಿಡುವ ಹಾಗೆ ಇಲ್ಲ. ಗಾಯಕನಾರೆಂದೇ ಗೊತ್ತಿಲ್ಲದೆಯೂ ನನ್ನನ್ನು ವಿಪರೀತವಾಗಿ ಕಾಡುವ ಮತ್ತೊಂದು ಹಿಂದಿ ಹಾಡು 'ಕ್ಯೋಂಕಿ ಇತ್ನಾ ಪ್ಯಾರ್ ತುಮ್ಸೆ...' ನಿಜಕ್ಕೂ ಹೇಳು ಸಖ ನಿನ್ಮೇಲೆ ನನಗ್ಯಾಕೆ ಇಷ್ಟೊಂದು ಪ್ರೀತಿ?

ಲವ್ ಬ್ರೇಕ್ ಆದಾಗ ಶಿಶಿರ ಋತುವಿನ ಮಾಘ ಮಾಸದ ಬೆನ್ನು ಹುರಿಯನ್ನೂ ನಡುಗಿಸಿ ಬಿಡುವ ದಟ್ಟ ಚಳಿಯ ಮಧ್ಯ ರಾತ್ರಿ ಎದ್ದು ಅವನೇ ಕೊಡಿಸಿದ ತಿಳಿ ಆಕಾಶ ನೀಲಿ ಬಣ್ಣದ ಸ್ವೆಟರ್ ತೊಟ್ಟು ಇಯರ್ ಫೋನ್ ಸಿಕ್ಕಿಸಿ ಇನ್ನೆಂದೂ ಹೃದಯದ ಬಯಲಲಿ ಅವನ ಬಿಸಿಯುಸಿರ ತಂಗಾಳಿ ಬೀಸದೆಂಬ ಸತ್ಯವನ್ನು ಒಪ್ಪಿಕೊಳ್ಳಲು ಹರಸಾಹಸ ಮಾಡುತ್ತಾ ಮತ್ತೆ ಮತ್ತೆ ಕೇಳುತ್ತಿದ್ದ 'ಅರಿಞ್ಞಿರುನ್ನಿಲ್ಲ ಞಾನ್ ಇಙನೊರು ಸ್ನೇಹಂ...' ಹಾಡನ್ನು ಹೇಗೆ ಮರೆಯಲು ಸಾಧ್ಯ?

'ಬೆಳ್ಳಿ ರಥದಲಿ ಸೂರ್ಯ ತಂದ ಕಿರಣ...' ಇದು ಪದಗಳ ಅರ್ಥ ಮಾತ್ರ ತಿಳಿದು ಭಾವ ಎಟುಕಲಾರದ ಬಾಲ್ಯದಲ್ಲಿ ಕೇಳಿ ಇಷ್ಟ ಪಟ್ಟು ನಿಜವೆಂದೇ ನಂಬಿ ಬೆಳ್ಳಿ ರಥದಲ್ಲಿ ಸೂರ್ಯ ಬರುವುದನ್ನು ನೋಡಬೇಕೆಂದು ಬೆಳಗ್ಗೆ ಸೂರ್ಯೋದಯಕ್ಕಿಂತ ಮೊದಲೇ ನಿದ್ರೆ ಬಿಟ್ಟು ಏಳುವಂತೆ ಹಪಹಪಿಸುವಂತೆ ಮಾಡಿದ ಹಾಡು. ಇದನ್ನೇ ಎನ್ ಕ್ಯಾಶ್ ಮಾಡ್ಕೊಂಡ ಅಜ್ಜಿ ನಾವು ಲೇಟಾಗಿ ಎದ್ದಾಗೆಲ್ಲಾ ಇವತ್ತು ಸೂರ್ಯ ಬೆಳ್ಳಿ ರಥದಲ್ಲಿ ಬಂದಿದ್ದ ಅನ್ನುತ್ತಿದ್ದರು. ನಿರಾಶೆಯ ಕಡಲಲ್ಲಿ ಮುಳುಗುತ್ತಿದ್ದ ನಾವು ಇನ್ಯಾವತ್ತೂ ಲೇಟಾಗಿ ಏಳಲೇ ಬಾರದು ಅನ್ನುವಂತೆ ಹಠ ಹಿಡಿದು ಬೇಗ ಏಳುತ್ತಿದ್ದೆವು... ಬೇಗನೆ ಏಳುವ ಹವ್ಯಾಸ ಬೆಳೆಯಲೆಂದು ಅಜ್ಜಿ ಹೇಳುತ್ತಿದ್ದ ವಿವೇಚನಾಭರಿತ ಸುಳ್ಳು ನೆನಪಾಗುವಾಗೆಲ್ಲಾ ಈಗ ನಗು ಉಕ್ಕಿ ಬರುತ್ತದೆ.

ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾಗಿ, ಮೊಬೈಲ್ ಸ್ಕ್ರೀನಿನಲ್ಲಿ ಅಕ್ಷರಗಳು ಒಡಮೂಡಿ, ಆ ಅಕ್ಷರಗಳ ಮೂಲಕವೇ ವ್ಯಕ್ತಿತ್ವದ ದಿಗ್ದರ್ಶನವಾಗಿ ಮನದ ಸ್ಕ್ರೀನಿನಲ್ಲಿ ಸ್ಥಿರವಾಗಿ ನಿಂತವನ ನೆನಪಾಗುವಾಗೆಲ್ಲಾ ಮನಸು 'ನೀನೊಂದು ಮುಗಿಯದ ಮೌನ ನಾ ಹೇಗೆ ತಲುಪಲಿ ನಿನ್ನ...' ಹಾಡನ್ನು ಗುಣುಗುಣಿಸಿದರೆ ಹೃದಯ 'ಒಂದಾ ಎರಡಾ ಆಸೆ ನಂದು' ಹಾಡಿನ 'ಒಂದು ಸ್ಪರ್ಶ ಸಾಕಿನ್ನು ನೂರು ವರುಷ ಕಾಯುವೆನು' ಸಾಲನ್ನು ಪಿಸುಗುಟ್ಟುತ್ತದೆ.


ಲ್ಯಾಬಲ್ಲಿ ಜೊತೆಗೇ ಕೂತು 'ಅರಳುತಿರು ಜೀವದ ಗೆಳೆಯ...' ಹಾಡು ಪ್ಲೇ ಮಾಡಿ ಜೊತೆಗೆ ನನ್ನನ್ನು ಹಾಡಿಸಿ ಎಕ್ಸಾಕ್ಟಾಗಿ 'ಬೇಡ ಗೆಳೆಯ ನಂಟಿಗೆ ಹೆಸರು' ಅನ್ನುವಲ್ಲಿ ಹಾಡು ನಿಲ್ಲಿಸಿ "ಐ ಲವ್ ಯೂ ಚಿಟ್ಟೆ " ಅನ್ನುತ್ತಿದ್ದ ಜೀವದ ಗೆಳೆಯ, ಕಾಲೇಜಿನ ಬೀಳ್ಕೊಡುಗೆ ಸಮಾರಂಭದಲ್ಲಿ ಗಾಡ್ ಗಿಫ್ಟ್ ಅಣ್ಣ ಹಾಡಿದ 'ತಂಗಿ ನಿನ್ನ ಕಣ್ಣಲೊಂದು ಪುಟ್ಟ ಕನಸಿದೆ...'ಹಾಡು, ನನ್ನನ್ನು ರೇಗಿಸಲೆಂದೇ ಕಾಲೇಜ್ ಫ್ರೆಂಡ್ಸ್ ಹಾಡುತ್ತಿದ್ದ 'ಬಟರ್ ಫ್ಲೈ ಬಟರ್ ಫ್ಲೈ ಮೈ ಡಿಯರ್ ಬಟರ್ ಫ್ಲೈ' , ಅಮ್ಮನ ಫೇವರಿಟ್ 'ದೀವಾನಾ ಹುಯೀ ಬಾದಲ್...' ಎಲ್ಲವೂ ಸುಮಧುರ ಹಾಡುಗಳೇ, ಮಧುರ ನೆನಪುಗಳೇ... ಇಂತಹ ಹಾಡುಗಳ ಲೋಕದಲ್ಲಿ ಪಯಣಿಸುತ್ತಿದ್ದರೆ ಅದೊಂದು ಕೊನೆ ಮೊದಲಿಲ್ಲದ ಭಾವ ಯಾನವೇ ಸರಿ. ಆ ಯಾನದಲ್ಲಿ ಮುಳುಗುತ್ತಾ, ಏಳುತ್ತಾ, ತೇಲುತ್ತಾ, ಮೀಯುತ್ತಾ ಪುಳಕಿತರಾಗುತ್ತಾ ನಮ್ಮ ನಾವೇ ಮರೆತು ಕನಸುಗಳಿಗೆ ಸೇತುವೆ ಕಟ್ಟುತ್ತಾ ಇರಬೇಕು. ಆಗಷ್ಟೆ ಹಾಡು ಬರೆದ, ಸಂಗೀತ ಸಂಯೋಜಿಸಿದ, ಹಾಡಿದ ಕಲಾಕಾರನ ಕುಸುರಿಗೆ ಸಾರ್ಥಕ್ಯದ ರಂಗೇರಲು ಸಾಧ್ಯ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ