ಶುಕ್ರವಾರ, ಮೇ 19, 2017

ಕಾಫಿ, ಹಕ್ಕಿ, ಚಿಟ್ಟೆ ಇತ್ಯಾದಿ...

ಒಂದು ದೊಡ್ಡ ಮಗ್ ನ ಪೂರ್ತಿ ಕಾಫಿ ತುಂಬಿಕೊಂಡು, ಬಾಲ್ಕನಿಯ ಮೂಲೆಯಲ್ಲಿ ಕಾಫಿಯ ಹಬೆಯಲ್ಲಿನ ಪರಿಮಳವನ್ನು ಆಸ್ವಾದಿಸುತ್ತಾ ಬೆಳ್ಳಂಬೆಳಗನ್ನು ನನ್ನೊಳಗೆ ಇಷ್ಟಿಷ್ಟಾಗಿ ಸುರುವಿಕೊಳ್ಳುವುದು ನನ್ನಿಷ್ಟದ ಹವ್ಯಾಸಗಳಲ್ಲೊಂದು. ಆ ಹೊತ್ತಿನಲ್ಲಿ ಕಾಫಿಯೊಂದಿಗೆ 'ಕರ್ವಾಲೋ' ಕೂಡ ಇದ್ದರೆ ನನ್ನ ಕಲ್ಪನಾ ಜಗತ್ತಿನ ಸರ್ವ ಬೇರುಗಳೂ ಅನೂಹ್ಯವಾದ ಯಾವುದೋ ಒಂದನ್ನು ಪಡೆದುಕೊಳ್ಳಲಿದ್ದೇನೇನೋ ಅನ್ನುವಂತೆ ಸನ್ನದ್ಧಗೊಂಡುಬಿಡುತ್ತವೆ.

ಅರ್ಧ ರಾತ್ರಿಯಲ್ಲಿ ಸುರಿವ ಮಳೆಗೂ ಬೊಗಸೆಯೊಡ್ಡಿ ರುಚಿ ನೋಡುವ ನನಗೆ ಮೊದಲಿನಿಂದಲೂ ಬಾಲ್ಕನಿಯೆಂದರೆ ಒಂದು ವಿಚಿತ್ರ ಆಕರ್ಷಣೆ. ಅಷ್ಟುದ್ದ ಮೈ ಹರವಿ ಬಿದ್ದಿರುವ ನೀಲಾಗಸವನ್ನೂ, ಅದರ ಪೂರ್ತಿ ಹರಡಿಕೊಂಡಿರುವ ನಕ್ಷತ್ರಗಳನ್ನೂ,  ಯಾವುದೋ ಊರಿನ ಕಡಲಿನ ಕನಲಿಕೆಗೆ ಕೊಸರಾಡುತ್ತಿರುವಂತೆ ಕಾಣುವ ಚಂದ್ರನನ್ನೂ ಚೌಕಟ್ಟಿಲ್ಲದೆ ನೋಡುವುದೆಂದರೆ ನನಗೊಂಥರಾ ಹಬ್ಬ.

ಇಂದೂ ಅಷ್ಟೇ, ಕಾಫಿಯ ಮಗ್ ನೊಂದಿಗೆ ಬಾಲ್ಕನಿಯ ಒಂದು ಮೂಲೆಯಲ್ಲಿ ಹೋಗಿ ನಿಂತಾಗ ಪಕ್ಕದ ಹುಣಸೇ ಮರದಲ್ಲಿದ್ದ ಎರಡು ಹಕ್ಕಿಗಳಲ್ಲಿ ಒಂದು ಹಕ್ಕಿ ತಲೆ ಬಗ್ಗಿಸಿ ಏನನ್ನೋ ಹುಡುಕುತ್ತಿತ್ತು. ಪಕ್ಕದಲ್ಲಿದ್ದ ಮತ್ತೊಂದು ಹಕ್ಕಿಯದೋ ಅನ್ಯಮನಸ್ಕತೆ.

ನಿಜಕ್ಕೂ ಅದು ಏನನ್ನು ಹುಡುಕುತ್ತಿತ್ತು? ಹಾಗೆ ಹುಡುಕಲು ಏನನ್ನಾದರೂ ಕಳೆದುಕೊಂಡಿತ್ತಾ? ಆ ಹುಡುಕಾಟಕ್ಕೂ ಮತ್ತೊಂದು ಹಕ್ಕಿಯ ಅನ್ಯಮನಸ್ಕತೆಗೂ ಏನಾದರೂ ಸಂಬಂಧವಿದೆಯಾ?

ಮನುಷ್ಯರಂತೆ ಇಂದಿಗೂ ಇರಲಿ, ನಾಳೆಗೂ ಇರಲಿ, ನನಗೂ ಇರಲಿ, ಮುಂದಿನ ಹತ್ತು ತಲೆಮಾರುಗಳಿಗೂ ಇರಲಿ ಅಂತೆಲ್ಲಾ ಸ್ವಾರ್ಥಪರವಾಗಿ ಚಿಂತಿಸದ ಹಕ್ಕಿಗಳು ನಿಜಕ್ಕೂ ಕಳೆದುಕೊಂಡದ್ದನ್ನು ಹುಡುಕಲು ಸಾಧ್ಯವೇ?ಅಥವಾ ಕಳೆದುಕೊಂಡರಷ್ಟೇ ಹುಡುಕಬೇಕು, ಹುಡುಕಾಟವೆನ್ನುವುದು ಹೊಸದಕ್ಕೆ ಯಾವುದಕ್ಕೂ ಅನ್ವಯಿಸಲಾರದು ಅನ್ನುವ ನನ್ನ ಯೋಚನಾ ಕ್ರಮವೇ ತಪ್ಪೇನೋ?

ಊಹೂಂ, ಒಂದೂ ಗೊತ್ತಾಗದೇ ತಲೆಕೊಡವಿ, ಅತ್ತ ಕಡೆ ಕತ್ತು ಹೊರಳಿಸಿದೆ. ಎಣಿಸಿ ನೋಡಿದರೆ ಒಂದು ನೂರು ಬಣ್ಣಗಳನ್ನಾದರೂ ತನ್ನ ಮೇಲೆ ಹೊತ್ತುಕೊಂಡಿರುವ ಚಿಟ್ಟೆಯೊಂದು, ತನಗೂ ಮಕರಂದಕ್ಕೂ ಯಾವುದೋ ದಾಖಲಾಗದ ಒಪ್ಪಂದವಿದೆಯೇನೋ ಅನ್ನುವಂತೆ ಹೂವಿನ ಮೇಲೆ ಕುಳಿತು ಮೌನರಾಗ ಹಾಡತೊಡಗಿತು. ಏನನ್ನೋ ಹುಡುಕಾಡುತ್ತಿದ್ದ, ಅಥವಾ ಹಾಗಂತ ನಾನಂದುಕೊಂಡಿದ್ದ ಹಕ್ಕಿ ಹುಣಸೇ ಮರದಿಂದ ಹಾರಿ ಹೋಯಿತು. ಆ ಸದ್ದಿಗೆ ಪ್ರತಿಕ್ರಿಯೆಯೇನೋ ಎಂಬಂತೆ ಚಿಟ್ಟೆಯೂ ಒಮ್ಮೆ ಪಟಪಟನೇ ರೆಕ್ಕೆ ಬಡಿಯಿತು. ಯಾರಿಗೆ ಗೊತ್ತು? ಹೂವಿನೆದೆಯಲ್ಲೂ ಒಂದು ಸಣ್ಣ ಕಂಪನ ಉಂಟಾಗಿರಲೂಬಹುದು.