ಗುರುವಾರ, ಮಾರ್ಚ್ 31, 2016

ಈ ಆರ್ದ್ರ ಭಾವಕ್ಕೆ ಸಾವಿಲ್ಲ.

ಇನ್ನೂ ಒಂದು ಕೈ ಮುಸುಕು ಮುಸುಕು ಬಣ್ಣದ, ಅಕ್ಷರಗಳು ಮಬ್ಬಾಗಿರುವ ಪತ್ರಗಳ ಕಟ್ಟಿನ ಮೇಲಿದೆ. ಅಂಗೈ ಪೂರ್ತಿ ನವಿರು ನೆನಪಿನ ಹುಡಿ. ಮನಸ್ಸಿನ ತುಂಬಾ  nostalogia ಗಳ ಕಲರವ. ಮೆದುಳಿನ ಪದರು ಪದರುಗಳಲ್ಲೂ ಒಂದು ಕಾಲಘಟ್ಟದ ಸ್ಥೂಲ ಚಿತ್ರಣ ತಣ್ಣಗೆ ಕದಲುತ್ತಿದೆ. ಪ್ರಪಂಚದ ಅಷ್ಟೂ ಮಧುರ ಅನುಭೂತಿಗಳು ನನ್ನೊಳಗೆ ಆವಿರ್ಭವಿಸಿ ನಾನೆಲ್ಲೋ ಗಾಳಿಯಲ್ಲಿ ತುಂಬಾ ಹಗುರಾಗಿ ತೇಲುತ್ತಿದ್ದೇನೇನೋ ಅನ್ನುವ ಭಾವ. ಅದೆಷ್ಟು ಹೊತ್ತಿಂದ ಹೀಗೆ ಪತ್ರಗಳ ಮೇಲೆ ಕೈಯಿಟ್ಟು ಒಂದು ಅನಿವರ್ಚನೀಯತೆಯನ್ನು ಅನುಭವಿಸುತ್ತಿದ್ದೇನೋ ನನಗೇ ಗೊತ್ತಿಲ್ಲ.

ಪತ್ರಗಳಿಗೆ, ಕೈ ಬರಹಗಳಿಗಿರುವ ಅಸಲೀ ತಾಕತ್ತೇ ಅದು. ಅದೆಷ್ಟು ವರ್ಷ ಕಳೆದ ಮೇಲೆ ಓದಿಕೊಂಡರೂ ಅವು ನಮ್ಮಲ್ಲೊಂದು ಆರ್ದ್ರ, ಆಪ್ತ ಭಾವವನ್ನು ಹುಟ್ಟಿಸುತ್ತವೆ. ಪತ್ರ ಬರೆದವರು ಇಲ್ಲೆಲ್ಲೋ ಇದ್ದರೇನೋ ಅನ್ನುವ ಮಧುರ ಅನುಭೂತಿಯನ್ನು ಸೃಷ್ಟಿಸುತ್ತದೆ. ಯಾಕೆಂದರೆ ಪತ್ರ ಬರೆಯುವಾಗ ಬರೆಯುವವನ ಮನಸ್ಥಿತಿಯಲ್ಲಿ ಏನು ಬರೆಯಬೇಕು, ಹೇಗೆ ಬರೆಯಬೇಕು ಅನ್ನುವ ಸ್ಪಷ್ಟ ಕಲ್ಪನೆಗಳಿರುತ್ತವೆ. ಪತ್ರ ಬರೆಯುವುದಕ್ಕಾಗಿಯೇ ಆತ ಒಂದು ಸಿದ್ಧತೆಯನ್ನು ಮಾಡಿಕೊಂಡಿರುತ್ತಾನೆ. ಆ ಸಿದ್ಧತೆಯೇ ಪತ್ರದ ಆಪ್ತತೆಯನ್ನು ವರ್ಷಗಟ್ಟಲೆ ಕಾಪಿಟ್ಟುಕೊಳ್ಳುವುದು.

ಈಗ ನನ್ನ ಕೈಯಲ್ಲಿರುವ ಪತ್ರಗಳು ಸರಿ ಸುಮಾರು ಮೂವತ್ತು ವರ್ಷಗಳಷ್ಟು ಹಿಂದಿನವು ಅಂದರೆ  1984-85 ರ ಆಸುಪಾಸಿನವು. ಅವಿನ್ನೂ ಅಮ್ಮನ ತಾರುಣ್ಯದ ದಿನಗಳು, ಬಹುಶಃ ಆಗಷ್ಟೇ ಮದುವೆಯಾಗಿ ಗಂಡನ ಮನೆಗೆ ಕಾಲಿಟ್ಟಿದ್ದರು. ’ಪ್ರೀತಿಯ ಮಗಳೇ’ ಅಂತ ಪ್ರಾರಂಭವಾಗುವ ಪತ್ರದ ಪೂರ್ತಿ ತುಂಬಿರುವುದು ಅಮ್ಮನೆಡೆಗೆ ಅಜ್ಜನಿಗಿರುವ ವಾತ್ಸಲ್ಯ ಮತ್ತು ಅಂತ:ಕರಣಗಳೇ. ಗಂಡನ ಮನೆಯಲ್ಲಿ ಹೇಗೆ ನಡ್ಕೊಳ್ಳಬೇಕು ಅಂತ ಎಲ್ಲೂ ನೇರವಾಗಿ ವಿವರಿಸದಿದ್ದರೂ ಪ್ರತಿ ಪತ್ರದ ಆಂತರ್ಯದಲ್ಲಿ ಸುತ್ತಿ ಬಳಸಿ ಸಂಸ್ಕಾರ, ಸಂಸ್ಕೃತಿಗಳ ಬಗ್ಗೆ ಒಂದು ಪುಟ್ಟ ಸಂದೇಶ ಇದ್ದೇ ಇದೆ. ಅತ್ತೆ, ಮಾವ, ನಾದಿನಿಯರು, ಮೈದುನಂದಿರು, ಓರಗಿತ್ತಿ ಹೀಗೆ ತುಂಬಿದ ಸಂಸಾರಕ್ಕೆ ಸೊಸೆಯಾಗಿ ಹೋದ ಮಗಳ ನಡೆ-ನುಡಿಯಲ್ಲಿ ಇರಬೇಕಾದ ನಾಜೂಕುತನ, ಹೊಂದಾಣಿಕೆಯ ಬದುಕಲ್ಲಿರುವ ಖುಶಿ, ತವರು ಮನೆಯೆಂಬ comfort zone ನಿಂದ ಹೊರಬಂದಾಗಾಗುವ ಸಹಜ ಚಡಪಡಿಕೆಗಳನ್ನು ಮೀರುವ ಬಗೆ, ನಾಲ್ಕು-ಐದು ಸಾಲುಗಳ ಪುಟ್ಟ ಪುಟ್ಟ ಝೆನ್ ಕಥೆಗಳು... ಹೀಗೆ ಅಕ್ಷರಗಳಲ್ಲೇ ಜೀವ, ಜೀವನ ಎರಡೂ ತುಂಬಿ ಕಳಿಸಿದಂತಿವೆ ಈ ಪತ್ರಗಳು. ಇನ್ನು ಅಮ್ಮ ಮೊದಲ ಬಾರಿ ಗರ್ಭಧರಿಸಿದಾಗಿನ ಪತ್ರಗಳ ತೂಕವೇ ಬೇರೆ. ಅವು ಹಾಲು ಕುಡಿ ಎಂಬಲ್ಲಿಂದ ಒಳ್ಳೆಯ ಪುಸ್ತಕಗಳನ್ನು ಓದು ಅನ್ನುವವರೆಗಿನ ಅತೀವ ಕಾಳಜಿ, ಇನ್ನೂ ಹುಟ್ಟದ ಮಗುವಿನ ಬಗ್ಗೆ ಅಜ್ಜ ನೇಯ್ದಿರಬಹುದಾದ ಕನಸಿನ ಕುಲಾವಿ, ಗರ್ಭಿಣಿ ಎಂದು ಗೊತ್ತಾದಮೇಲೂ ನೀನು ತವರಿಗೆ ಬಂದಿಲ್ಲ ಅನ್ನುವ ಹುಸಿಮುನಿಸು, ಮೊದಲ ಮೊಮ್ಮಗುವಿನ ನಿರೀಕ್ಷೆಯಲ್ಲಿ ಮನೆಯಲ್ಲಿ ಆರಂಭವಾಗಿರುವ ಸಿದ್ಧತೆ, ಹೊಟ್ಟೆಯಲ್ಲೊಂದು ಜೀವವಿದೆ ಅನ್ನುವುದನ್ನು ನೆನಪಿಟ್ಟುಕೊಂಡು ಇನ್ನಾದರೂ ಹತ್ತುವುದು-ಇಳಿಯುವುದನ್ನು ಕಡಿಮೆ ಮಾಡು ಅನ್ನುವ ಗದರಿಕೆಗಳ ಜೀವಂತ ಪ್ರತಿನಿಧಿಯಂತಿದೆ. ಉಳಿದಂತೆ ಮಾವನಿಗೆ ಪ್ರಮೋಷನ್ ಸಿಕ್ಕಿರುವುದು, ಚಿಕ್ಕಮ್ಮ ಋತುಮತಿಯಾಗಿರುವುದು, ಮನೆಯ ಕಪ್ಪು ಬೆಕ್ಕು ನಾಲ್ಕು ಮರಿ ಹಾಕಿರುವುದು, ಕೊಟ್ಟಿಗೆಯ ಮೂಲೆಯಲ್ಲಿ ಕಟ್ಟುವ ದನದ ಕಾಲಿಗೆ ಊರಿನ ಪೋಲಿ ಹುಡುಗರು ಕಲ್ಲೆಸೆದಿರುವುದು, ಮನೆಯ ಹಂಚು ಬದಲಾಯಿಸಿದ್ದು, ಪೆನ್ಷನ್ ಐವತ್ತು ರೂಪಾಯಿಗಳಷ್ಟು ಏರಿಕೆಯಾಗಿರುವುದು, ಪಂಚಾಯತ್ ಚುನಾವಣೆಯಲ್ಲಿ ಶಿಕ್ಷಿತರು ಆರಿಸಿ ಬಂದದ್ದು, ಊರ ಲೈಬ್ರೆರಿಯಲ್ಲಿ ಹೊಸ ಪುಸ್ತಕ ಬಂದಿರುವುದು, ಇನ್ನೂ ಓದಬೇಕಾಗಿರುವ ಅಬ್ರಹಾಂ ಲಿಂಕನ್ ನ ಜೀವನ ಚರಿತ್ರೆ... ಹೀಗೆ ಅಲ್ಲಿ ಉಲ್ಲೇಖವಾಗದ ವಿಷಯಗಳೇ ಇಲ್ಲ ಅನ್ನಬಹುದೇನೋ! ಅವನ್ನೆಲ್ಲಾ ಓದಿ ಸುಮ್ಮನೆ ಕಣ್ಣು ಮುಚ್ಚಿ ಕುಳಿತಾಗ, ನಾನು ಒಮ್ಮೆಯೂ ನೋಡಿಲ್ಲದ, ನೊಡಲಾಗದ ಕಾಲಘಟ್ಟದಲ್ಲೊಮ್ಮೆ ತಿರುಗಿ ಬಂದಂತಾಯಿತು. ಎಲ್ಲಕ್ಕಿಂತ ಹೆಚ್ಚಾಗಿ ನನ್ನನ್ನು ಹಿಡಿದಿಟ್ಟುಕೊಂಡದ್ದು ಆ ಪತ್ರಗಳಲ್ಲಿನ ಆಪ್ತತೆ ಮತ್ತು ಆರ್ದ್ರತೆ. ಅಸಂಘಟಿತ ಬದುಕು ಅದೆಷ್ಟು ಅರ್ಥಪೂರ್ಣವಾಗಿ ದಾಖಲಿಸಲ್ಪಟ್ಟಿದೆಯಲ್ಲಾ ಅನ್ನುವ ಅಚ್ಚರಿ. ಪತ್ರಗಳು ಬದುಕನ್ನು ಈ ಪರಿ ಬಂಧಿಸಿಟ್ಟ, ಪ್ರಭಾವಿಸಿದ್ದ ಕಾಲದಲ್ಲಿ ನಾನಿನ್ನೂ ಹುಟ್ಟಿರಲಿಲ್ಲವಲ್ಲಾ ಅನ್ನುವ ಪುಟ್ಟ ಅಸೊಯೆ.

ಎಲ್ಲಿ ಹೋಯ್ತು ಆ ಆತ್ಮೀಯತೆ? ಆರ್ದ್ರತೆ? ಸಲಿಗೆ? ಇನ್ನೇನು ಪತ್ರ ಬಂದೇ ಬಿಡುತ್ತದೆ ಅನ್ನುವ ಕಾತುರತೆ? ಅಂಚೆಯಣ್ಣನ ಸೈಕಲ್ ಗಂಟೆಯ ಸದ್ದು ಕೇಳಿಸಿದಾಗೆಲ್ಲಾ ಗೇಟಿನ ಬಳಿ ಓಡಿ ಹೋಗಿ "ಅಣ್ಣಾ, ಪತ್ರ ಇದೆಯಾ?" ಅಂತ ಕೇಳುವ ತನ್ನವರೆಡೆಗಿನ ನಿರ್ಮಲ ಕಾಳಜಿಗಳು? ಪತ್ರ ಬರೆಯುವಾಗಿನ ಪ್ರೀತಿ, ಸ್ನೇಹ, ಹಸಿ ಹಸಿ ಪ್ರೇಮ? ಪತ್ರ ತಲುಪಿದ ಕೂಡಲೇ ಆ ಕಡೆ ಇರುವವರು ಪಡಬಹುದಾದ ಸಂಭ್ರಮದ ರಮ್ಯ ಕಲ್ಪನೆ? ಕಲ್ಪನೆಗಳಿಗಷ್ಟೇ ದಕ್ಕಬಹುದಾದ ಅನೂಹ್ಯತೆ? ಇನ್‍ಲ್ಯಾಂಡ್ ಲೆಟರ್‌ನ ಸಂದುಗೊಂದುಗಳಲ್ಲೂ ಬರೆದು ಪತ್ರದ ಪೂರ್ತಿ ಅಕ್ಷರ ತುಂಬುವ ಖುಶಿ? ವರ್ಷಗಟ್ಟಲೆ ಉಳಿದುಕೊಳ್ಳುವ ಮಾಧುರ‍್ಯತೆ? ಪ್ರತಿ fullstopನ ನಂತರ ಹೊಸದಾಗಿ ಆರಂಭವಾಗುವ ವಾಕ್ಯಗಳಂತೆ ಹೊಸತನಗಳಿಗೆ ಬದುಕು ತೆರೆದುಕೊಳ್ಳುವ ಪ್ರಕ್ರಿಯೆ?

Phone, email, SMS, mobile, whtasapp...ಮುಂತಾದವುಗಳು ನಮ್ಮಿಂದ ಪತ್ರ ಬರೆಯುವ ಸಂಸ್ಕೃತಿಯನ್ನು ಕಿತ್ತುಕೊಂಡಿವೆ ಅಂತ ನಾವೇನೋ ಸುಲಭವಾಗಿ ಅನ್ನುತ್ತೇವೆ. ಆದ್ರೆ ಅವೆಲ್ಲಾ ನಮ್ಮ ಭಾವಶೂನ್ಯತೆಗಳನ್ನು ಮುಚ್ಚಿ ಹಾಕಲು ನಾವು ಮುಂದಿಡುವ ನೆಪಗಳಷ್ಟೆ. ಈ ಧಾವಂತದ ಜೀವನದಲ್ಲಿ ಎಲ್ಲರನ್ನೂ, ಎಲ್ಲವನ್ನೂ ಯಾಂತ್ರೀಕೃತವನ್ನಾಗಿಸಿದ ನಮ್ಮಲ್ಲೀಗ ಇಲ್ಲದಿರುವುದು, ಪತ್ರ ಬರೆಯಲು ಬೇಕಾಗಿರುವ ತನ್ಮಯತೆ, ಅದನ್ನು ತಲುಪಿಸುವಲ್ಲಿನ ತಾದಾತ್ಮ್ಯತೆ, ಪ್ರತಿಪತ್ರದ ನಿರೀಕ್ಷಣೆ ಬೇಡುವ ತಾಳ್ಮೆ... ಇವೇ ಮುಂತಾದ ಸಹಜ ಭಾವುಕ ಅಭಿವ್ಯಕ್ತಿಗಳು. ನಾವೀಗ ಕಳೆದುಕೊಂಡಿರುವುದು, ಪತ್ರಗಳ ಮುಖೇನ ಇದಿರುಗೊಳ್ಳುವ ಸಂಭ್ರಮದ ಗಳಿಗೆಗಳನ್ನು ಹಾಗೇ ಇಡಿಇಡಿಯಾಗಿ ಹೃದಯದೊಳಕ್ಕೆ ಇಳಿಸಿಕೊಳ್ಳುವ ಅನನ್ಯ ಕಲೆಗಾರಿಕೆಯನ್ನು. 

ಈಗಾಗಲೇ ಕಾಲದ ಹರಿವಿನೊಂದಿಗೆ ಟೆಲಿಗ್ರಾಂ ಕೊನೆಯುಸಿರೆಳೆದಿದೆ. ನಮ್ಮ ಅಜ್ಜ, ಅಜ್ಜಿ, ಅಪ್ಪ, ಅಮ್ಮನ ಜತೆಗೆ ಕರುಳುಬಳ್ಳಿಗಳಿರುವ ಪತ್ರವೂ ಇನ್ನೊಂದಿಷ್ಟು ವರ್ಷಗಳ ನಂತರ ಅಸುನೀಗದಿರಬಾರದೆಂದರೆ ಕನಿಷ್ಠಪಕ್ಷ ವರ್ಷಕ್ಕೊಂದೆರಡು ಬಾರಿಯಾದರೂ ನಮ್ಮಾಪ್ತರಿಗೆ ಪತ್ರ  ಬರೆಯುವ ಪ್ರಯತ್ನಮಾಡೋಣ. ಯಾರಿಗೆ ಗೊತ್ತು ಕಳೆದು ಹೋದ ಸಂಬಂಧಗಳ ಮಾಧುರ್ಯಗಳು ಮತ್ತೆ ದಕ್ಕಲೂಬಹುದು.

ಬುಧವಾರ, ಮಾರ್ಚ್ 30, 2016

ಕೊಚ್ಚುವ, ಕೊಲ್ಲುವ, ಸುಡುವ ಈ ಕಾಲದಲ್ಲೂ...

ಬದುಕು ಅಪ್ಪನಂತೆ. ತಲೆ ನೇವರಿಸಿ ಮುದ್ದು ಮಾಡದೆ, ಲಾಲಿ ಹಾಡುತ್ತಾ ತಟ್ಟಿ ಮಲಗಿಸದೆ, ತಬ್ಬಿ ಕಣ್ಣೀರಿಡದೆ, ಪ್ರೈಜ್ ತಗೊಂಡಾಗೆಲ್ಲಾ ಪ್ರಶಂಸಿಸದೆ, ಒಂದು ನಿರ್ದಿಷ್ಟ ಅಂತರ ಕಾಯ್ದುಕೊಂಡೇ ಪಾಠ ಕಲಿಸುತ್ತದೆ, ಅಪರಿಚಿತರನ್ನು ಪರಿಚಿತರನ್ನಾಗಿಸುತ್ತದೆ. ಅದು ಕ್ಷಣ ಹೊತ್ತಿದ್ದು, ಮತ್ತೆ ಮರೆಯುವಂತಹ ಪರಿಚವಲ್ಲ. ತೋಳಮೇಲಿನ ಮಚ್ಚೆಯಂತೆ ಜೀವನ ಪೂರ್ತಿ ಕಾಡುವ, ಕಾಡಿಸುವ, ಬಿಟ್ಟೂ ಬಿಡದೆ ನೆನಪಾಗಿ ಉಳಿಯುವಂತಹ ಪರಿಚಯಗಳು. ಬದುಕಿನ ಪರಿಚಯಗಳಿಗೆ ಕ್ರಮಸಂಖ್ಯೆ, ಪುಟ ಸಂಖ್ಯೆ, ಪರಿವಿಡಿ, ಮುನ್ನುಡಿ, ಶಬ್ದಾರ್ಥ, ಆಮೇಲೊಂದಿಷ್ಟು ಪ್ರಶ್ನೆಗಳು... ಊಹೂಂ, ಯಾವುವೂ ಇರುವುದಿಲ್ಲ. ಅದು ಆಕಸ್ಮಿಕವಾಗಿ ಯಾರನ್ನೋ ಪರಿಚಯಿಸಿ ಅಷ್ಟೇ ಅನಿರೀಕ್ಷಿತವಾಗಿ ಒಂದು ಸಣ್ಣ ಸುಳಿವೂ ಕೊಡದಂತೆ ನಮ್ಮ ಜೀವನದಿಂದ ನಿರ್ಗಮಿಸುವಂತೆ ಮಾಡಿಬಿಡುತ್ತದೆ. ಆದ್ರೆ ಬದುಕು ಪರಿಚಯಿಸುವ ಕೆಲ ಪರಿಚಯಗಳು ಕೆಲವೇ ಗಂಟೆ ಅಥವಾ ನಿಮಿಷಗಳದಾಗಿದ್ದರೂ ಅದು ಕಾಡುವ ಪರಿ, ಉಳಿಸುವ ನೆನಪುಗಳು ಅನಂತ, ಅಪರಿಮಿತ.

ನಾನೀಗ ನಿಮಗೆ ಹೇಳಹೊರಟಿರುವುದೂ ಅನೀರಿಕ್ಷಿತವಾಗಿ ಭೇಟಿಯಾಗಿ, ಒಂದಿಷ್ಟು ನೆನಪುಗಳನ್ನು ಉಳಿಸಿ , ಅಷ್ಟೇ ಅನಿರೀಕ್ಷಿತವಾಗಿ ಬದುಕಿಂದ ಎದ್ದು ಹೋದ ಹಿರಿಯರೊಬ್ಬರ ಕುರಿತು. ಅವು ಪದವಿ ತರಗತಿಯ ಮೊದಲ ದಿನಗಳು. ಒಂದಿಡೀ ಸೆಮಿಸ್ಟರ್ ಹೊಸ ಪ್ರಪಂಚ, ಹೊಸ ಸ್ನೇಹ, ಹೊಸ ಸಂಬಂಧ, ಆಟ, ಹುಡುಗಾಟ, ಕಾಡು ಹರಟೆಗಳಲ್ಲೇ ಕಳೆದುಹೋಗಿತ್ತು. ಪರೀಕ್ಷೆಗೆ ಇನ್ನೇನು ಎರಡು ದಿನಗಳು ಉಳಿದಿವೆ ಅನ್ನುವಷ್ಟಾಗುವಾಗಲೇ ಪ್ರಯೋಗಾಲಯದ ಕೆಲಸಗಳು ಇನ್ನೂ ಮುಗಿದಿಲ್ಲ, ಸಬ್ಮಿಟ್ ಮಾಡಬೇಕಾದ ರೆಕಾರ್ಡ್ ಇನ್ನೂ ಸಿದ್ಧವಾಗಿಲ್ಲ ಅನ್ನುವುದು ತಿಳಿದದ್ದು. ಪರೀಕ್ಷೆಗಳಿಗೆ ಕೂರಬೇಕೆಂದರೆ ರೆಕಾರ್ಡ್ ಸಬ್ಮಿಟ್ ಮಾಡಲೇಬೇಕಿತ್ತು. ಸರಿ, ನಮ್ಮ ನಮ್ಮಲ್ಲೇ ಕೆಲಸ ಹಂಚಿಕೊಂಡು, ಒಂದೇ ದಿನದಲ್ಲಿ ಎಲ್ಲಾ ಕೆಲ್ಸ ಮುಗಿಸಿ, ಬೈಡಿಂಗ್ ಗೆಂದು ಕೊಡಲೇಬೇಕೆಂದು, ಅವುಡುಗಚ್ಚಿ ಕುಳಿತು, ಇಲ್ಲದ ಗಂಭೀರತೆಯನ್ನು ನಮ್ಮೊಳಗೆ ಆವಾಹಿಸಿಕೊಂಡು, ಬಾರದ ಔಟ್ ಪುಟ್, ಎರರ್ ತೋರಿಸುವ ಪ್ರೋಗ್ರಾಂ ಗಳನ್ನು ಬಯ್ಯುತ್ತಾ, ಅಂತೂ ಇಂತೂ ರೆಕಾರ್ಡ್ ಕೆಲಸ ಮುಗಿಸಿ, ಬೈಂಡಿಂಗ್ ಗೆಂದು ಕೊಟ್ಟು ಲ್ಯಾಬಿಂದ ಹೊರಬರುವಾಗ ಸರಿಯಾಗಿ ಆರು ಗಂಟೆ.

ಕಾಲೇಜಿಂದ ನಮ್ಮೂರಿಗೆ ಬರಲು ಎರಡು ಬಸ್ ಗಳನ್ನು ಮಧ್ಯದಲ್ಲಿ ಬದಲಾಯಿಸಬೇಕಿತ್ತು. ಅದೇಕೋ ಅವತ್ತು ಒಂದು ಬಸ್ ಬೇಗನೇ ಬಂದು ನಾನು ಆರೂವರೆ ಆಗುವಷ್ಟರಲ್ಲಿ ಮತ್ತೊಂದು ಬಸ್ ಸ್ಟಾಂಡ್ ಗೆ ತಲುಪಿಬಿಟ್ಟೆ. ಆದ್ರೆ ಇನ್ನೊಂದು ಬಸ್ ಗಾಗಿ ಎಷ್ಟು ಕಾದರೂ ಬರಲೇ ಇಲ್ಲ. ಸಮಯ ಸುಮ್ಮನೆ ಓಡುತ್ತಲೇ ಇತ್ತು. ಕೈಲಿದ್ದ ಮೊಬೈಲ್ ಚಾರ್ಜ್ ಇಲ್ಲದೆ ಸ್ವಿಚ್ ಆಫ್ ಆಗಿತ್ತು. ಅದು ಬೇರೆ ರಂಝಾನ್ ತಿಂಗಳು. ಇಫ್ತಾರ್ ಸಮಯಕ್ಕಾಗುವಾಗಾದರೂ ಮನೆ ತಪುಪದಿದ್ದರೆ ಅಮ್ಮ ಗಾಬರಿ ಬಿದ್ದು ಬಿಡುತ್ತಾರೆ. ಮೇಲಾಗಿ ನಮ್ಮೂರಿಂದ ನಮ್ಮ ಕಾಲೇಜ್ ಗೆ ಹೋಗುವವಳು ನಾನೊಬ್ಬಳೇ ಇದ್ದುದ್ದರಿಂದ ಇನ್ಯಾರಿಂದಾದರೂ ಕೇಳಿ ತಿಳ್ಕೊಳ್ಳುವುದೂ ಸಾಧ್ಯ ಇರ್ಲಿಲ್ಲ. ಬಸ್ ಬೇಗ ಬರ್ಲಿ ಅಂತ ಪ್ರಾರ್ಥಿಸುವುದನ್ನು ಬಿಟ್ರೆ ನನಗಿನ್ಯಾವ ದಾರಿಯೂ ಉಳಿದಿರ್ಲಿಲ್ಲ.

ಒಂದಿಷ್ಟು ಹೊತ್ತು ಕಾದನಂತರ ಬಸ್ ಬಂತು, ಹತ್ತಿ ಕುಳಿತು, ಒಂದು ಮೆಸೇಜ್ ಮಾಡುವಷ್ಟಾದರೂ ಚಾರ್ಜ್ ಉಳಿದಿದ್ದರೆ... ಅನ್ನುವ ಆಸೆಬುರುಕತನದಿಂದ ಮೊಬೈಲ್ ಆನ್ ಮಾಡೋಕೆ ಪ್ರಯತ್ನಿಸಿ, ಅದು ಆಗುವುದಿಲ್ಲ ಅನ್ನುವುದು ಮತ್ತೊಮ್ಮೆ ಸ್ಪಷ್ಟವಾಗಿ, ಎನೂ ಮಾಡಲಾಗದ ಅಸಹಾಯಕತೆಯಲ್ಲಿ ಧುಮುಗುಡುತ್ತಾ ಇರಬೇಕಾದರೆ, ಬಸ್ ಹೊರಟೇಬಿಟ್ಟಿತು. ತುಸು ರಿಲಾಕ್ಸ್ ಅನ್ನಿಸಿ ಇನ್ನೇನು ಸೀಟಿಗೆ ಒರಗಬೇಕು ಅನುವಷ್ಟರಲ್ಲಿ, ಬಸ್ ಒಮ್ಮೆಲೇ ನಿಂತಂತಾಯಿತು. ಕಂಡಕ್ಟರ್ ಇಳಿದು ಚೆಕ್ ಮಾಡಿ ನನಗರ್ಥವಾಗದ ಯಾವುದೋ ತಾಂತ್ರಿಕ ದೋಷವಾಗಿದೆ ಅಂತ ಡ್ರೈವರ್ ಗಂದು, ಪ್ರಯಾಣಿಕರನ್ನು ಉದ್ದೇಶಿಸಿ, ಈ ಬಸ್ ಮುಂದೆ ಹೋಗುವುದಿಲ್ಲ, ಇನ್ನೊಂದು ಬಸ್ ವ್ಯವಸ್ಥೆ ಮಾಡಿಕೊಡುತ್ತೇವೆ, ಅಲ್ಲಿಯವರೆಗೆ ಕಾಯಲೇಬೇಕು ಅಂದರು.

ನನ್ನ ಪರಿಸ್ಥಿತಿಗೆ ನನ್ನನ್ನೇ ಹಳಿದುಕೊಳ್ಳುತ್ತಾ, ನಡೆದಾದರೂ ಮನೆಗೆ ತಲುಪಬಹುದಾ ಅಂದುಕೊಳ್ಳುತ್ತಾ ಬಸ್ಸಿಂದ ಇಳಿದು ನೋಡಿದ್ರೆ, ಊಹೂಂ ನಡೆದು ತಲುಪಲಾಗದಷ್ಟು ದೂರದಲ್ಲಿ ಬಸ್ ಕೆಟ್ಟು ನಿಂತಿತ್ತು. ಮತ್ತೊಂದಿಷ್ಟು ಹೊತ್ತು ಅಲ್ಲಿ ಸುಮ್ಮನೆ ಕಾಲಹರಣ ಮಾಡಿ, ಏನು ಮಾಡಬೇಕೆಂದು ತೋಚದೆ ಅತ್ತಿತ್ತ ನೋಡುತ್ತಿರಬೇಕಾದರೆ ಮತ್ತೊಂದು ಬಸ್ ಬಂತು.

ಇನ್ನಾದರೂ ಮನೆ ತಲುಪಬಹುದಲ್ಲಾ ಅಂತ ನಿರಾಳವಾಗಿ, ಬಸ್ ಹತ್ತಿ ಕುಳಿತುಕೊಳ್ಳುವಷ್ಟರಲ್ಲಿ ಮಕ್ಕದ ಮಸೀದಿಯಿಂದ ಬಾಂಗ್ ಕೇಳಿಸಿತು. ಮತ್ತೆ ಅಮ್ಮನ ನೆನಪಾಗಿ ದಿಗಿಲು ಕಾಡತೊಡಗಿತು. ಎರಡು ಸೆಕೆಂಡ್ ಮಾತಾಡುವಷ್ಟಾದರೂ ಚಾರ್ಜ್ ಉಳಿದಿದ್ದರೆ ಅನ್ನುವ ’ರೆ’ ಸಾಮ್ರಾಜ್ಯದಲ್ಲಿ ವಿಹರಿಸುತ್ತಾ ಅಕ್ಕ ಪಕ್ಕ ಕಣ್ಣಾಡಿಸಿದೆ. ನನ್ನ ಹೊರತುಪಡಿಸಿ, ಪ್ರಯಾಣಿಕರು ಅಂತ ಬಸ್ಸಲ್ಲಿದ್ದುದು ಐವರು ಮಾತ್ರ. ಒಬ್ಬರೂ ಪರಿಚಯಸ್ಥರಿರಲಿಲ್ಲ.

ಮಸೀದಿ ಮಿನಾರದಿಂದ ಬಾಂಗ್ ಮೊಳಗುತ್ತಿತ್ತು. ನೇಸರ ಅದಾಗಲೇ ಪೂರ್ತಿ ಮರೆಯಾಗಿಬಿಟ್ಟಿದ್ದ. ಹೊರಗಿನ ಮ್ಲಾನ ಮುಸ್ಸಂಜೆಯ ವಿಷಣ್ಣತೆ ನನ್ನೊಳಗೂ ಆವರಿಸುತ್ತಿದೆಯೇನೋ ಅನಿಸತೊಡಗಿತು. ಅಷ್ಟರಲ್ಲಿ "ಮನೆಗೆ ಕಾಲ್ ಮಾಡೋಕಿತ್ತಾ?" ಅನ್ನುವ ಪ್ರಶ್ನೆಯೊಂದಿಗೆ, ಕಣ್ಣಮುಂದೆ ಮೊಬೈಲ್ ಹಿಡಿದು ಹಿರಿಯೊಬ್ಬರು ನಿಂತಿದ್ದರು. ತಲೆ ಎತ್ತಿ ನೋಡಿದೆ, ಅರ್ಧ ತೋಳಿನ ಅಚ್ಛ ಬಿಳಿ ಶರ್ಟ್, ಅಷ್ಟೇ ಬಿಳುಪಾಗಿದ್ದ ಧೋತಿ, ಕೊರಳಲ್ಲೊಂದು ರುದ್ರಾಕ್ಷಿ (ಅಥವಾ ಅದು ರುದ್ರಾಕ್ಷಿಯೇ ಅಂತ ನಾನಂದುಕೊಂಡಿದ್ದೆ) ಸರ, ಕೂದಲ ತುದಿಯಿಂದ ಹುಬ್ಬುಗಳ ಮಧ್ಯಕ್ಕೆ ಎಳೆದ ಕೆಂಪು ನಾಮ, ಕಣ್ಣಲ್ಲಿ ಸಾತ್ವಿಕ ಕಳೆ... ನನಗಾಗ ಹೆಚ್ಚಿನದೇನನ್ನೂ ಯೋಚಿಸುವಷ್ಟು ಸಮಯ ಇರಲಿಲ್ಲ.

ಮೊಬೈಲ್ ಇಸ್ಕೊಂಡು ಅಮ್ಮನಿಗೊಂದು ಫೋನ್ ಮಾಡಿ "ರೆಕಾರ್ಡ್ ಆಗಿರ್ಲಿಲ್ಲ, ಹಾಗಾಗಿ ಕಾಲೇಜಿಂದ ಹೊರಡುವಾಗ ಸ್ವಲ್ಪ ಲೇಟಾಯ್ತು, ಈಗ ಬಸ್ಸಲ್ಲಿದ್ದೇನೆ, ಇನ್ನೇನು ಇಪ್ಪತೈದು ನಿಮಿಷಗಳಲ್ಲಿ ಮನೆ ತಲುಪಿಬಿಡುತ್ತೇನೆ" ಅಂತ ಒಂದೇ ಉಸಿರಿಗೆ ಹೇಳಿ ಕಾಲ್ ಕಟ್ ಮಾಡಿ ಆ ಹಿರಿಯರಿಗೆ ಒಂದು ಥ್ಯಾಂಕ್ಸ್ ನೊಂದಿಗೆ ಫೋನ್ ಮರಳಿಸಿದೆ. ಮನೆ ತಲುಪಿದ ಮೇಲೆ ಜವಾಬ್ದಾರಿಗಳ ಬಗ್ಗೆ ಅಮ್ಮ ನೀಡುವ ಉಪನ್ಯಾಸ ಕೇಳೋದಕ್ಕೆ ಅದಾಗಲೇ ನಾನು ಮಾನಸಿಕ ತಯಾರಿ ಮಾಡಿಕೊಳ್ಳತೊಡಗಲಾರಂಭಿಸಿಯಾಗಿತ್ತು.

ಮತ್ತೊಂದೆರಡು ನಿಮಿಷ ಕಳೆಯುವಷ್ಟರಲ್ಲಿ ಅದೇ ಹಿರಿಯರು ಎರಡು ಹೋಳು ಸೇಬು, ಒಂದು ಬಾಟಲಿ ನೀರು, ಮತ್ತೊಂದು ಖರ್ಜೂರದೊಂದಿಗೆ ಮತ್ತೆ ನನ್ನ ಮುಂದೆ ಬಂತು ನಿಂತು  "ಈಗಾಗ್ಲೆ ಬಾಂಗ್ ಆಗಿದೆ, ಇಫ್ತಾರ್ ಸಮಯವೂ ಆಗಿಹೋಗಿದೆ, ಬಹುಶಃ ನೀನೂ ಉಪವಾಸಿಗಳೇ, ಇವಿಷ್ಟನ್ನೂ ತೆಗೆದುಕೊಂಡು ಇವತ್ತಿನ ಇಫ್ತಾರನ್ನು ಪ್ಪೊರೈಸಿಬಿಡು" ಅಂದರು. ನನಗೆ ಒಂದು ಕಡೆ ಅಚ್ಚರಿ, ಇನ್ನೊಂದು ಕಡೆಯಿಂದ ಅನುಮಾನ ಕಾಡತೊಡಗಿತು. ತೆಗೆದುಕೊಳ್ಳಬೇಕೋ ಬೇಡವೋ ಅನ್ನುವ ಸಂಘರ್ಷದಲ್ಲಿ ನಾನಿದ್ದೆ. ನಿರಾಕರಿಸಿದರೆ ಅವರ ಹಿರಿಯತನವನ್ನು ಅಗೌರವಿಸಿದಂತಾಗುತ್ತದೆ, ಹಾಗಂತ ಸ್ವೀಕರಿಸೋಕೆ ಅವರೇನು ನನ್ನ ಪರಿಚಯಸ್ಥರಲ್ಲ.

ಏನು ಮಾಡಬೇಕೆಂದು ತೋಚದೆ ನಾನು ಸುಮ್ಮನೆ ಕುಳಿತೆ, ಅವರೇ ಮೊದಲು ಖರ್ಜೂರ ನನ್ನ ಕೈಗಿತ್ತು ತಿನ್ನು ಅಂದರು, ಏನೂ ಮಾಡಲಾಗದೆ ನಾನು ನಿಧಾನವಾಗಿ ಖರ್ಜೂರ ಬಾಯಿಗಿಟ್ಟೆ, ಮತ್ತೆ ಅವರೇ ನೀರನ್ನೂ, ಸೇಬನ್ನೂ ಕೊಟ್ಟು ಮುಖ ತಿರುಗಿಸಿ ಕೂತು ಬಿಟ್ಟರು. ಅಷ್ಟು ಹೊತ್ತಿಗಾಗುವಾಗ ಅವರ ಮೇಲೆ ನನಗಿದ್ದ ಅನುಮಾನಗಳು ನಿಧಾನವಾಗಿ ಕರಗಲಾರಂಭಿಸಿತ್ತು.

ಮತ್ತೆ ಬಾಟಲ್ ಅವರ ಕೈಗೆ ಮರಳಿಸುತ್ತಾ ನಾನು "ಥ್ಯಾಂಕ್ಯೂ ಅಂಕಲ್, ನಿಮ್ಮ ಉಪಯೋಗಕ್ಕೆ ಅಂತ ತಂದಿದ್ದುದನ್ನು ನನ್ಗೆ ಕೊಟ್ರಲ್ಲಾ, ನೀವು ಒಳ್ಳೆಯತನಕ್ಕೆ ಏನನ್ನಬೇಕೋ" ತಿಳಿಯುತ್ತಿಲ್ಲ ಅಂದೆ. ಅವರು "ಅಂತಹ ದೊಡ್ಡ ಮಾತೆಲ್ಲಾ ಬೇಡ, ಇದು ಒಳ್ಳೆಯತನವಲ್ಲ, ನನ್ನ ಮನಸ್ಸಮಾಧಾನಕ್ಕಾಗಿ ಮಾಡುತ್ತಿರುವ ಕೆಲಸವಷ್ಟೆ. ಸರಿಯಾಗಿ ಐದು ವರ್ಷಗಳ ಹಿಂದೆ ಇಂಥದ್ದೇ ಒಂದು ರಂಝಾನ್ ತಿಂಗಳಲ್ಲಿ ಎದೆಯುದ್ದಕ್ಕೆ ಬೆಳೆದಿದ್ದ ಮಗನನ್ನು ಒಂದು ಆಕ್ಸಿಡೆಂಟ್ ನಲ್ಲಿ ಕಳೆದುಕೊಂಡು ಬಿಟ್ಟೆ. ನನಗಾದ ನೋವು, ಸಂಕಟಗಳನ್ನೆಲ್ಲಾ ಮರೆಯಲು ಅವತ್ತಿಂದ ಪ್ರತಿ ವರ್ಷ ರಂಝಾನ್ ತಿಂಗಳಲ್ಲಿ ಮನೆಯಿಂದ ಹೊರಡುವಾಗೆಲ್ಲಾ ಒಂದು ಖರ್ಜೂರ, ಸೇಬು ಮತ್ತು ನೀರಿನ ಬಾಟಲಿನೊಂದಿಗೆ ಹೊರಡುತೊಡಗಿದೆ. ಹೀಗೆ ನಿನ್ನಂತೆ ಬಸ್ಸಲ್ಲಿ, ಬಸ್ ಸ್ಟ್ಯಾಂಡಲ್ಲಿ ಯಾವುಯಾವುದೋ ಕಾರಣಗಳಿಂದ ಬಾಕಿಯಾಗುವವರು ಸಿಕ್ಕರೆ ಕೊಟ್ಟುಬಿಡುತ್ತೇನೆ. ಇಫ್ತಾರ್ ಮುಗಿಸಿದ ತೃಪ್ತಿ ಅವರದಾದರೆ, ಅವರ ತೃಪ್ತಿಯಲ್ಲಿ ನಾನೂ ಪಾಲುದಾರನಾದೆನಲ್ಲಾ ಅನ್ನುವ ಖುಷಿ ನನಗೆ. ಸತ್ತು ಬೂದಿಯಾದ ಮಗನ ಆತ್ಮ ಅಲ್ಲೆಲ್ಲೋ ನಳನಳಿಸುತ್ತಿರುತ್ತದೆ ಅನ್ನುವ ನಂಬಿಕೆ ನನ್ನದು, ಅಷ್ಟೆ" ಅಂದು ಮತ್ತೆ ಮೌನವಾದರು.

ಪರಸ್ಪರರನ್ನು ಅನುಮಾನಿಸುವ, ಕೊಚ್ಚುವ, ಕೊಲ್ಲುವ, ಸುಡುವ, ನಡುಬೀದಿಯಲ್ಲಿ ಬೆತ್ತಲಾಗಿಸುವ, ಧರ್ಮದ ಹೆಸರಿನಲ್ಲಿ ರಕ್ತದೋಕುಳಿಯಾಡುವ ಈ ಕಾಲದಲ್ಲೂ ಮಾನವ ಸಹಜ ಬಾಂಧವ್ಯಗಳು, ವಿಶ್ವ ಮಾನವನಾಗಿ ಹುಟ್ಟುವ ಮನುಷ್ಯನ ಸಹಜ ಅನುಭೂತಿಗಳು, ಮಾನವನಿಷ್ಠ ಸಂವೇದನೆಗಳು ಇಂತಹವರ ಹೃದಯದಲ್ಲಿ ಇನ್ನೂ ಉಸಿರಾಡುತ್ತಿವೆಯಲ್ಲಾ ಅನಿಸಿತು. ’ಅಂಕಲ್, ನಿಮ್ಮ ಹೆಸರು, ಊರು?’ ಅಂತ ಒಮ್ಮೆ ಕೇಳಹೊರಟೆ, ಮರುಕ್ಷಣ ಮನಸ್ಸು ’ಒಳ್ಳೆಯತನಕ್ಕೆ ವಿಳಾಸವಿಲ್ಲ, ಅದು ಹೆಸರು, ಊರು, ಕೇರಿ, ವಿಶೇಷಣಗಳ ಹಂಗಿಲ್ಲದೆ ಅರಳಿ ಸುತ್ತ ಹಗುರ ಸುಗಂಧ ಹಬ್ಬುವ ಹೂವಿನಂತೆ’ ಅಂದಿತು. ಅಷ್ಟು ಹೊತ್ತಿಗಾಗುವಾಗಾಗಲೇ ನಾನು ಇಳಿಯುವ ಸ್ಟಾಪ್ ಬಂತು. ಅವರಿಗೆ ಕೈ ಬೀಸಿ ಇಳಿದು, ಕತ್ತಲಲ್ಲೇ ತಡವರಿಸುತ್ತಾ ಮನೆ ತಲುಪಿ ಕಾಲಿಂಗ್ ಬೆಲ್ ಒತ್ತಿದೆ. ಅಮ್ಮ ಬಾಗಿಲು ತೆರೆದು "ಇಫ್ತಾರ್ ರೆಡಿಮಾಡಿಟ್ಟಿದ್ದೇನೆ, ಹೋಗಿ ಉಪವಾಸ ತೊರೆದುಬಿಡು" ಎಂದರು. ನಾನು "ಆಗ್ಲೇ ಬಸ್ಸಲ್ಲಿ ತೊರೆದಾಯ್ತು" ಅಂದೆ. ಅಮ್ಮ "ಬಸ್ಸಲ್ಲಾ?" ಪ್ರಶ್ನಿಸಿದರು. "ಹೂಂ, ತಾಯಿ ಮನಸ್ಸಿನ ಹಿರಿಯೊಬ್ಬರು ಬದುಕಲ್ಲಿ ಎಂದೂ ಮರೆಯಲಾಗದಂತಹ ಇಫ್ತಾರ್ ಆಯೋಜಿಸಿದ್ದರು" ಎಂದು ಒಳಸರಿದೆ. ಅಮ್ಮ ನನ್ನ ನೋಡುತ್ತಾ ನಿಂತರು.

ಸುಮ್ಮನೆ....