ಗುರುವಾರ, ಜನವರಿ 15, 2015

ಎದೆಗೂಡ ಅಗ್ನಿಪರ್ವತ

ಎದೆಗೂಡಲಿ ಅಗ್ನಿ ಪರ್ವತ ಮುಚ್ಚಿಟ್ಟು
ತಡವರಿಸುತಿರುವೆ ಕತ್ತಲಲಿ ನಾನಿಂದು
ಬೆಳಕಿಲ್ಲದೇ ಅಲ್ಲ
ಬೆಳಕು ಸಲ್ಲದೆ
ಬೆಳಕಿಗೆ ಕಣ್ಣು ತೆರೆಯಲಾರದೆ

ಬಿರುಬೆಳಕು ದರ್ಶಿಸೋ ಸತ್ಯಗಳು
ಬರಿಗಣ್ಣ ಮುಚ್ಚಿಸುತಿವೆ
ಎದೆಯೊಳಗಿನ ಅಗ್ನಿ ದೀಪವಾಗುತ್ತಿಲ್ಲ

ಹರಿದು ಹಾರಿ ಹೋದ ಭಾವಗಳ
ಬಿಡಿಬಿಡಿಯಾಗಿ ಆರಿಸಿ ಮೂಟೆ ಕಟ್ಟಿ
ಹೊರಲಾರದೆ ಹೊತ್ತುಕೊಂಡಿರುವೆ
ತುಸು ಬಾಗಿದ ಬೆನ್ನ ಮೇಲೆ

ಅರೆಗಣ್ಣ ಮುಚ್ಚಿ ಗುರಿ ಇಲ್ಲದೆ
ಹೊರಟ ಈ ನಿರ್ಮಾನುಷ ಪಯಣ
ಕೊನೆಗಾದರೂ ಸೇರೀತೆ ತಾಣ
ಇಲ್ಲ ಭಾವ ಮೂಟೆ ಭಾರವಾಗಿ
ಬೆನ್ನ ಮೂಳೆಯ ಇಕ್ಕೆಲ ಸವೆದು
ನಡುಬೀದಿಯಲ್ಲೇ ಚೆಲ್ಲಾಪಿಲ್ಲಿಯಾಗಿ
ನಿಷ್ಕರುಣಿ ಪಾದಗಳಡಿಸಿಕ್ಕು
ಉಸಿರುಗಟ್ಟಿ ಬಿಡಬಹುದೇ ಪ್ರಾಣ