ಬುಧವಾರ, ಸೆಪ್ಟೆಂಬರ್ 15, 2021

ಆರು ಪುಟ್ಟ ಪುಟ್ಟ ಕಥೆಗಳು

 



ಗಾಂಧಿ ಆಶಯಗಳು


"ಗಾಂಧಿ ಆಶಯಗಳೇಕೆ ಬೇಕು?" ಪಡಸಾಲೆಯಲ್ಲಿ ಅಪ್ಪ ಜೋರು ಧ್ವನಿಯಲ್ಲಿ ಗೆಳೆಯರೊಂದಿಗೆ ಚರ್ಚಿಸುತ್ತಿದ್ದ. ಅಮ್ಮನಿಲ್ಲದ ಪಕ್ಕದ ಮನೆಯ ಪುಟ್ಟ ಮಗುವನ್ನು ಲಾಲಿ ಹಾಡಿ ಮಲಗಿಸುತ್ತಿದ್ದ ಎಂಟು ವರ್ಷದ ಅವನ ಮಗ ತೊಟ್ಟಿಲು ತೂಗುವುದನ್ನು ನಿಲ್ಲಿಸಿ ಅಪ್ಪನತ್ತ ಉರಿಗಣ್ಣು ಬೀರಿದ. ಚರ್ಚೆ ನಿಂತಿತು. ಗೋಡೆಯ ಮೇಲಿದ್ದ ಗಾಂಧಿ ತಣ್ಣಗೆ ನಕ್ಕಂತಾಯಿತು.

____________________


ನಿರ್ಲಿಪ್ತ


"ಕಾಲ ಸರಿಯಿಲ್ಲ, ಹಾಗೆಲ್ಲಾ ಬೀದಿ ತಿರುಗಬಾರದು ಅಜ್ಜಾ, ಬನ್ನಿ ನಾನೇ ನಿಮ್ಮನ್ನು ಮನೆಗೆ ಡ್ರಾಪ್ ಮಾಡುತ್ತೇನೆ" 

ಕರ್ತವ್ಯದಲ್ಲಿದ್ದ ಪೊಲೀಸನದು ಅಪ್ಪಟ ಮಾನವೀಯ ಕಳಕಳಿ. 

"ದಾನಿಗಳ ಕೈ ಖಾಲಿಯಾಗಿ ವೃದ್ಧಾಶ್ರಮ ಮುಚ್ಚಿದ್ದಾರೆ" 

ತುಂಬು ನಿರ್ಲಿಪ್ತನಾತ.

_________________


ಆಸ್ತಿಕ-ನಾಸ್ತಿಕ


"ಪ್ರಪಂಚದ ಕಷ್ಟಗಳಿಗೆಲ್ಲಾ ಆಸ್ತಿಕರೇ ಕಾರಣ" ನಾಲ್ಕು ಜನರನ್ನು ಸೇರಿಸಿ ಭಾಷಣ ಅವನು ಭಾಷಣ ಬಿಗಿಯುತ್ತಿದ್ದ. ಪಕ್ಕದಲ್ಲೇ‌ ಒಂದು ಸಣ್ಣ ಟೆಂಟ್ ಹಾಸಿ 'ದೇವರ ಭಯ'ದಿಂದ ಆಹಾರ ಪೊಟ್ಟಣಗಳನ್ನು ಹಂಚುತ್ತಿದ್ದ ದಾನಿಯ ಕೈಯಿಂದ ಹಾಲು‌ ಇಸಿದುಕೊಂಡ ಅವನ ಮಗ ಕಳೆದೆರಡು ದಿನಗಳಿಂದ ಎದೆಹಾಲು ಬತ್ತಿದೆ, ಹಸುಗೂಸಿಗೆ ಹಾಲುಡಿಸಲಾಗುತ್ತಿಲ್ಲ ಎಂದು ಸಂಕಟ ಪಡುತ್ತಿದ್ದ ಅಮ್ಮನ ಕೈಗಿತ್ತು ನಿಟ್ಟುಸಿರಿಟ್ಟ.

_________________


ಸಾರ್ಥಕ್ಯ


"ಮೂರು‌ ಮಕ್ಕಳ ತಾಯಿ ನಾನು, ಎರಡು ಸ್ವಂತದ್ದು, ಒಬ್ಬಳನ್ನು ದತ್ತು ಪಡೆದುಕೊಂಡಿದ್ದೇನೆ"‌ ಸಮಾಜ ಸೇವಕಿಗೆ ತನ್ನ ಬಗ್ಗೆ‌‌ ಒಂದು ಸಾರ್ಥಕ್ಯ. 

"ಮತ್ತೆ ಮಕ್ಕಳೇನು ಮಾಡುತ್ತಿದ್ದಾರೆ?" ಅವರು ಕೇಳಿದರು.

"ಇಬ್ಬರು ಮೆಡಿಕಲ್ ಓದುತ್ತಿದ್ದಾರೆ, ಮತ್ತೊಬ್ಬಳು ಮನೆಯಲ್ಲೇ ಇದ್ದಾಳೆ".

ತುಂಬ ದಿನಗಳಿಂದ ಉಪಯೋಗಿಸದೇ ಇದ್ದ ಶೂಗಳ ಮೇಲಿನ ಧೂಳು ಹೊಡೆಯುತ್ತಿದ್ದ ದತ್ತು ಮಗಳ ಕಣ್ಣು ತುಂಬಿದ್ದು ಧೂಳಿಗೋ ಸಂಕಟಕ್ಕೋ ಅರ್ಥ ಆಗಲಿಲ್ಲ.

_______________


ಉಪವಾಸವೆಂದರೆ


"ಉಪವಾಸವೆಂದರೆ ಕರುಣೆ, ಸತ್ಯ, ದುಷ್ಟತನದಿಂದ ದೂರವಿರುವುದು" ಉಸ್ತಾದರು ವಿವರಿಸುತ್ತಿದ್ದರು.

ಕಳೆದ ವರ್ಷದ ರಂಝಾನಿನಲ್ಲಿ ತಮ್ಮ‌ ಜತೆಗಿದ್ದು ತಾನು ಸಹರಿಗೂ ಉಣ್ಣದೆ ಉಳಿದವರ ಹೊಟ್ಟೆ ತುಂಬಿಸುತ್ತಿದ್ದ ಆದರೆ ಈಗಿಲ್ಲದ   ಅಮ್ಮನ ನೆನಪಾಗಿ ಮೊದಲ ಬಾರಿ ಉಪವಾಸ ಹಿಡಿದ ಮಗುವಿನ ಕಣ್ಣು ತುಂಬಿ ಬಂತು.

_____________


ಶವ್ವಾಲಿನ ಚಂದ್ರ


"ಶವ್ವಾಲಿನ ಚಂದ್ರದರ್ಶನ ಸಂಭ್ರಮದ ಬಗ್ಗೆ ಬರೆಯಿರಿ..."

ನಾಲ್ಕು ಮಾರ್ಕಿನ‌ ಪ್ರಶ್ನೆಗೆ "ಫಿತ್ರ್ ಝಕಾತಿನ ಅಕ್ಕಿ ಮನೆ ತಲುಪುವುದು" ಒಂದು ವಾಕ್ಯದ ಉತ್ತರ ಬರೆದಿದ್ದಳು ಹುಡುಗಿ.