ಬುಧವಾರ, ಅಕ್ಟೋಬರ್ 23, 2019

ತಾಯಿಬೇರು.


"ಈ ಮನೆಯ ಅಳಿಯ ನಾನು, ನನ್ನ ಮಾತಿಗೆ ಕಿಂಚಿತ್ತು ಬೆಲೆಯೂ ಇಲ್ಲ. ಓದುವುದೇ ಬೇಡ ಎಂದಿದ್ದೆ ನಾನು. ನೀವು ಕೇಳಿಲ್ಲ. ಶಾಲೆಗೆ ಕಳುಹಿಸಿದ್ರಿ. ಪಾಪ ಅಂತ ಸುಮ್ಮನಿದ್ದೆ. ಈಗ ಎಲ್ಲಾ ಬಿಟ್ಟು ಕೆಲಸಕ್ಕೆ ಹೋಗಲು ಬಿಟ್ರೆ  ನನ್ನ ಮರ್ಯಾದೆ ಏನಾದೀತು?" ಡೆಂಟಲ್  ಕ್ಲಿನಿಕಿನ ಈಸೀ ಛೇರಿನಲ್ಲಿ ಕೂತು ಸಮಿಯ್ಯಾ ಒಮ್ಮೆ ಕ್ಲಿನಿಕಿನ ಮೇಲ್ಛಾವಣಿಯನ್ನೂಮತ್ತೊಮ್ಮೆ ಸೆಲ್ಫ್‌ನಲ್ಲಿ ಪೇರಿಸಿಟ್ಟ ದಂತ ಚಿಕಿತ್ಸೆಯ ವಿವಿಧ ಹತ್ಯಾರಗಳನ್ನೂ ದಿಟ್ಟಿಸುತ್ತಾ ಗೋಡೆಗೆ ಅಂಟಿಕೊಂಡಂತಿರುವ ಗಡಿಯಾರವನ್ನು ಆಗಾಗ ನೋಡಿಕೊಳ್ಳುತ್ತಾ ತನ್ನ ಸರದಿಗಾಗಿ ಕಾಯುತ್ತಿದ್ದ ಸಮಿಯ್ಯಾಳ ಕಿವಿಯೊಳಗೆ ಹಿರಿ ಭಾವನ ಚೀರಾಟ ಮತ್ತೊಮ್ಮೆ ಪ್ರತಿಧ್ವನಿಸಿತ್ತು. ಕ್ಲಿನಿಕಿನ ಹೊರಗೆ ವರಾಂಡದಲ್ಲಿ ಕೂತ ಅಕ್ಕ ಸುರಯ್ಯಾ ಇವಳನ್ನು ಒಳಗೆ ಕಳುಹಿಸುವ ಮುನ್ನ ’ಇದೊಂದು ಬಾರಿ ಸಹಕರಿಸಿಬಿಡು’ ಎಂದು ಕೇಳಿಕೊಳ್ಳದೇ ಇದ್ದಿದ್ದರೆ ಸಮಿಯ್ಯಾ ಐದು ನಿಮಿಷಕ್ಕೆಲ್ಲಾ ಸೀಟಿನಿಂದ ಎದ್ದು ಬಂದಾಗಿಬಿಡುತ್ತಿತ್ತು.

ಪದೇ ಪದೇ ಸಮಯ ನೋಡಿಕೊಳ್ಳುತ್ತಾ ಚಡಪಡಿಸುತ್ತಿದ್ದ ಸಮಿಯ್ಯಾಳಿಗೆ ಮದುವೆ ಬ್ರೋಕರ್ ಅಬ್ಬು  ಕಾಕನ ಮೇಲೆ ಸಕಾರಣ ಸಿಟ್ಟು. ಇದೆಲ್ಲಾ ಶುರುವಾದದ್ದು ಅವನಿಂದಲೇ ಎನ್ನುವುದು ಅವಳ ನಂಬಿಕೆ. ಮೊನ್ನೆ ಡಿಗ್ರೀ ಪರೀಕ್ಷೆಯ ರಿಸಲ್ಟ್ ಬಂದ ಕೂಡಲೇ ಇಂಟರ್‌ನೆಟ್‌ನಿಂದ ಅಂಕಪಟ್ಟಿ ಡೌನ್‌ಲೋಡ್ ಮಾಡಿಕೊಂಡು ಊರಿಗೆ ಮಂಜೂರಾಗಿದ್ದ ಹೊಸ ಹೈಸ್ಕೂಲಿನಲ್ಲಿ ಸಹಾಯಕಿ ಶಿಕ್ಷಕಿ ಸ್ಥಾನಕ್ಕೆ ಅರ್ಜಿ ಹಾಕಿ ಬಂದಿದ್ದಳು. ಬರುವಾಗ ದಾರಿಯಲ್ಲಿ ಸಿಗುವ ಮಸೀದಿಯ ಹರಕೆ ಡಬ್ಬಿಗೆ ಹನ್ನೊಂದು ರೂಪಾಯಿ ಹಾಕಿ ’ನನ್ನ ರಬ್ಬೇ ಈ ಕೆಲಸ ನನಗೆ ಸಿಗುವಂತೆ ಮಾಡು’ ಎಂದು ಪ್ರಾರ್ಥಿಸಿ ಪಕ್ಕದಲ್ಲೇ ಇರುವ ಸುಬ್ರಾಯ ಭಟ್ಟರ ಅಂಗಡಿಯಲ್ಲಿ ಎರಡು ಕೆ.ಜಿ ಲಾಡು ಕಟ್ಟಿಸಿಕೊಂಡಿದ್ದಳು.
ಮನೆಗೆ ಬಂದವಳು ಅದರಿಂದ ನಾಲ್ಕು ಲಡ್ಡುಗಳನ್ನು ಅಮ್ಮನಿಗೂ, ಅಕ್ಕನ ಮಕ್ಕಳಿಗೂ ಹಂಚಿ ಉಳಿದಿರುವುದನ್ನು ಮತ್ತೆ ಕಟ್ಟಿ ಅಮ್ಮನ ಕೈಯಲ್ಲಿ ಕೊಟ್ಟು "ನಾಳೆ ಮದ್ರಸದ ಮಕ್ಕಳಿಗೆ ಹಂಚಬೇಕು, ಜೋಪಾನವಾಗಿ ತೆಗೆದಿಡು" ಎಂದು ಕೈ ಬಾಯಿಗೆಲ್ಲಾ ಲಡ್ಡು ಮೆತ್ತಿ ಸಂಭ್ರಮ ಪಡುತ್ತಿದ್ದ ಪ್ಯಾಂಪರ್ಸ್ ಹಾಕಿ ಗೊತ್ತೇ ಇಲ್ಲದ ಮಗುವನ್ನು ಎತ್ತಿಕೊಂಡು "ನಂಗೆ ಕೆಲಸ  ಸಿಕ್ಕಿದ್ರೆ ನಿಂಗೆ ದಿನಾ ಚಾಕಲೇಟ್ ಕೊಡಿಸ್ತೇನೆ" ಎಂದು ಲಲ್ಲೆಗೆರೆಯುತ್ತಾ ಬಚ್ಚಲು ಮನೆಗೆ ನಡೆದಳು.

ಬಚ್ಚಲು ಮನೆಯಿಂದ ಹೊರಬರುತ್ತಿದ್ದಂತೆ  ಹೊರಗೆ ಛಾವಡಿಯಲ್ಲಿ ಭಾವನ ಅಪರೂಪದ ಧ್ವನಿಯೂ, ಅಡುಗೆ ಮನೆಯಲ್ಲಿ ಅಮ್ಮ ಮತ್ತು ಅಕ್ಕನ ಪಿಸಪಿಸ ಮಾತೂ, ಪಾತ್ರೆಗಳ ಭರಭರ ಸದ್ದೂ ಕೇಳುತಿತ್ತು. ’ವರ್ಷಕ್ಕೊಮ್ಮೆ ಬಂದು ಮುಖ ತೋರಿಸಿ ಹೋಗುವ ಈ ಭಾವನಿಗೆ ಇಷ್ಟು ಸನ್ಮಾನವೇಕೋ?’ ಎಂದು ಮನಸ್ಸಲ್ಲೇ ಕಟಕಿಯಾಡಿದಳು. ಆದರೆ ಜೋರು ಜೋರು ಕೇಳುತ್ತಿರುವ ಮತ್ತೊಂದು ಧ್ವನಿ ಯಾರದ್ದು? ಗೊತ್ತಾಗಲಿಲ್ಲ ಅವಳಿಗೆ.

ಅದನ್ನೇ ಕೇಳಲೆಂದು ಅಡುಗೆ ಮನೆಗೆ ನುಗ್ಗಿದರೆ , ಅಮ್ಮ "ಶ್! ಮೆಲ್ಲ ಮಾತಾಡು. ಬ್ರೋಕರ್ ಅಬ್ಬು ಬಂದಿದ್ದಾನೆ. ನಿನಗೊಂದು ಒಳ್ಳೆಯ ಪೊದು ನೋಡಿದ್ದಾನಂತೆ. ಹುಡುಗ ಸೌದಿಯಲ್ಲಿರುವುದು, ತಿಂಗಳಿಗೆ ಐವತ್ತು ಸಾವಿರ ರೂಪಾಯಿ ದುಡೀತಾನಂತೆ. ನಿಂದೊಂದು ಫೊಟೋ ಕೇಳ್ತಿದ್ದಾನೆ" ಅಂದಳು. ಮೊನ್ನೆಯಷ್ಟೇ ಸೌದಿ ಕ್ರಿಸಿಸ್ ಬಗ್ಗೆ ಪೇಪರಲ್ಲಿ ಓದಿದ್ದ ಅವಳಿಗೆ ಎಲ್ಲಾ ಸುಳ್ಳು ಅಂತ ಹೇಳಬೇಕೆನಿಸಿತು. ಅದಕ್ಕಿಂತ ಮುಖ್ಯವಾಗಿ ಕೆಲಸ ಸಿಗುವವರೆಗೂ ಮದುವೆಯಾಗುವುದಿಲ್ಲ ಎಂದು ನಿರ್ಧರಿಸಿಕೊಂಡವಳಿಗೆ ಅಚಾನಕ್ಕಾಗಿ ಮದುವೆ ಪ್ರಸ್ತಾಪವೊಂದು ಬಂದು ನಿಂತಾಗ ಏನು ಮಾಡಬೇಕೆಂದೇ ತೋಚಲಿಲ್ಲ.

ಕಲ್ಲಿನಂತೆ ನಿಂತಿದ್ದ ಅವಳನ್ನು ದಾಟಿ ಹೋದ ಅಮ್ಮ ಅಬ್ಬು ಕಾಕನ ಕೈಗೆ ಕಾಫಿ ಕಪ್ ಕೊಟ್ಟು ಫೋಟೋ ನಾಳೆ ಕಳುಹಿಸುತ್ತೇನೆ ಅಂದಳು. ಸಮಿಯ್ಯಾಳನ್ನು ಹೊರಗೆ ಛಾವಡಿಗೆ ಕರೆಸಿಕೊಂಡ ಅಬ್ಬು ಅವಳನ್ನು ನೋಡಿ ಒಮ್ಮೆ ದೇಶಾವರಿಯಾಗಿ ನಕ್ಕು ಬಂದ ಕೆಲಸ ಮುಗಿಯಿತೆಂಬಂತೆ ಮನೆಯಿಂದ ಹೊರಗಡಿಯಿಟ್ಟ. ಅವಳ ಅಂತರಾಳದಲ್ಲಿ ಚಳ್ಳನೆ ಎದ್ದ ಮುಳ್ಳನ್ನು ಹೇಗೆ ಸುಮ್ಮನಾಗಿಸಬೇಕೆಂದು ಅರ್ಥವಾಗದ ಸಮಿಯ್ಯಾ ’ಫೊಟೋ ತಾನೆ ಕೊಟ್ಟರಾಯಿತು, ಮದುವೆ ಮಾತ್ರ ಕೆಲಸ ಸಿಕ್ಕ ಮೇಲೆಯೇ’ ಅಂದುಕೊಂಡಳು.
ಮರುದಿನ ಮದುವೆ, ಅಬ್ಬು ಕಾಕ, ಭಾವ ಎಲ್ಲರನ್ನೂ ಮರೆತ ಸಮಿಯ್ಯಾ ಹೈಸ್ಕೂಲಿನಲ್ಲಿ ಕೆಲಸ ಖಾತ್ರಿಪಡಿಸಿಕೊಂಡಳು. ಪಾಠದ ತಯಾರಿಗೆಂದು ನೋಟ್ ಪುಸ್ತಕ ಕೊಳ್ಳಲು ಹೋದವಳ ಮನದಲ್ಲಿ ನೂರು ಆಸೆಯ ಬಲೂನು. ಮೊದಲ ಸಂಬಳದಲ್ಲಿ, ಮುರಿದು ಹೋಗಿರುವ ಅಮ್ಮನ ಅಲೀಖತ್ತು ಸರಿಪಡಿಸಬೇಕು, ಸುರಯ್ಯಾಳ ಪುಟ್ಟ ಮಗುವಿಗೊಂದು ಪ್ರಿನ್ಸೆಸ್ ಫ್ರಾಕ್, ಎಸ್.ಎಸ್.ಎಲ್.ಸಿ ಓದುತ್ತಿರುವ ಪಕ್ಕದ ಮನೆ ಹುಡುಗಿಗೆ ಒಂದು ಚಂದದ ಕಂಪಾಸ್ ಬಾಕ್ಸ್, ಮತ್ತೂ ಹಣ ಮಿಕ್ಕಿದರೆ ತನಗಾಗಿ ಒಂದು ಮೊಬೈಲ್ ಕೊಳ್ಳಬೇಕು ಎಂದೆಲ್ಲಾ ಲೆಕ್ಕಾಚಾರ ಹಾಕಿಕೊಂಡೇ ಮನೆ ತಲುಪಿದಳು.

ಆದರೆ ಮನೆ ಬಾಗಿಲಲ್ಲಿ ಭಾವ ರೌರವ ನರಕವನ್ನೇ ಸೃಷ್ಟಿಸಿದ್ದ. ದಿನ ಪೂರ್ತಿ ಆಟ ಆಡಿಕೊಳ್ಳುತ್ತಿದ್ದ ಮಕ್ಕಳು ಯಾವುದೋ ಭೀತಿಗೆ ಸಿಕ್ಕಂತೆ ಮೂಲೆ ಸೇರಿದ್ದರು, ಅಕ್ಕ ಅಡುಗೆ ಮನೆಯಲ್ಲಿ ಒಬ್ಬಂಟಿಯಾಗಿ ಕೂತು ಕಣ್ಣೀರಿಡುತ್ತಿದ್ದಳು. ಇದೆಲ್ಲಾ ಏನು ಎಂಬಂತೆ ಸಮಿಯ್ಯಾ ಅಮ್ಮನ ಮುಖ ನೋಡಿದರೆ ಆಕೆ ಪರಮ ಅಸಹಾಯಕತೆಯಿಂದ ನಿಂತಿದ್ದಳು. "ಏನಾಯ್ತಮ್ಮಾ?"ಸಮಿಯ್ಯಾ ಕೇಳಿದಳು. "ಇನ್ನೇನಾಗಬೇಕು? ಈ ಮನೆಯ ಅಳಿಯ ನಾನು, ಮನೆಗಿರುವ ಒಬ್ಬನೇ ಗಂಡು ದಿಕ್ಕು ಎನ್ನುವ ಕನಿಷ್ಠ ಗೌರವವಿಲ್ಲ, ನನ್ನ ಮಾತಿಗೆ ಕಿಂಚಿತ್ತು ಬೆಲೆಯೂ ಇಲ್ಲ. ಓದುವುದೇ ಬೇಡ ಎಂದೆ, ನನ್ನ ಮಾತೂ ಯಾರೂ ಕೇಳಿಲ್ಲ. ಹೋಗ್ಲಿ ಪಾಪ ಅಂತ ಸುಮ್ಮನಾದರೆ ಈಗ ಎಲ್ಲಾ ಬಿಟ್ಟು ಕೆಲಸಕ್ಕೆ ಹೋಗುತ್ತೇನೆಂದರೆ ನನ್ನ ಮರ್ಯಾದೆ ಏನಾಗಬೇಡ? ಈಗ್ಲೇ ಗಂಡು ಬೀರಿ ಅಂತ ಊರಿಡೀ ಮಾತಿದೆ. ಇನ್ನು ನಿನ್ನ ಮದುವೆ ಆದಂತೆಯೇ. ಎಲ್ಲಾ ಬಿಟ್ಟು ಮನೆಯಲ್ಲಿದ್ದರೆ ಸರಿ, ಇಲ್ಲಾ ನಾನೇ ಮನೆ ಬಿಟ್ಟು ಹೋಗುತ್ತೇನೆ" ಭಾವ ಆರ್ಭಟಿಸಿದ.
"ದುಡಿಯದೆ ಇನ್ನೇನು ನಿಮ್ಮಂತೆ ಭಂಡ ಬಾಳು ಬಾಳಬೇಕೆ? ಅಪ್ಪನ ಮುಖ ಪರಿಚಯವೇ ಇಲ್ಲದ ಮಕ್ಕಳು, ಹೆಂಡತಿಯನ್ನು ಒಂದೇ ಒಂದು ದಿನಕ್ಕೂ ನೆಟ್ಟಗೆ ನೋಡಿಕೊಳ್ಳಲಾಗದ ನಿಮ್ಮದೂ ಒಂದು ಬದುಕೇ? ಇಷ್ಟು ವರ್ಷಗಳ ಕಾಲ ನಮ್ಮ ಹೊಟ್ಟೆ ತುಂಬಿಸಿದ್ದು ಅಮ್ಮನ ಬೀಡಿ ಸೂಪು, ನಿಮ್ಮ ಒಣ ಅಹಂಕಾರವಲ್ಲ. ಹೋಗುವುದಾದರೆ ಹೋಗಿಬಿಡಿ. ನೀವಿದ್ದರೂ ಹೋದರೂ ನಮ್ಮ ಬದುಕಲ್ಲೇನೂ ದೊಡ್ಡ ವ್ಯತ್ಯಾಸವಾಗುವುದಿಲ್ಲ" ಸಮಿಯ್ಯಾ ಮುಂದುವರಿಸುತ್ತಿದಳೋ ಏನೋ, ಆದರೆ ತಾನು ಮಾಡದ ತಪ್ಪಿಗೆ ಗಂಡ ಬಿಟ್ಟವಳು ಅನ್ನಿಸಿಕೊಂಡು ಊರವರಿಂದಲೂ, ಕುಟುಂಬದಿಂದಲೂ ತಿರಸ್ಕೃತಳಾದದ್ದು, ಅದರಿಂದಾಗಿ ತನ್ನ ಮಕ್ಕಳು ಪಡಬಾರದ ಪಾಡು ಪಟ್ಟದ್ದು ಅಮ್ಮನ ಕಣ್ಣ ಮುಂದೆ ತಣ್ಣಗೆ ಕದಲಿದಂತಾಯಿತು. ಅಳಿಯ ಮನೆಗೆ ಬರುತ್ತಾನೋ ಇಲ್ಲವೋ, ಆದರೆ ಮಗಳಿಗೆ ಗಂಡ ಅಂತ ಒಬ್ಬನಿರಲಿ, ಮೊಮ್ಮಕ್ಕಳಿಗೆ ಗುರುತಿಗಾಗಿಯಾದರೂ ಅಪ್ಪ ಅಂತ ಒಬ್ಬನಿರಲಿ. ನನ್ನ ಮಕ್ಕಳು ಅನುಭವಿಸಿದ್ದನ್ನು ಸುರಯ್ಯಾಳ ಮಕ್ಕಳು ಅನುಭವಿಸುವುದು ಬೇಡ ಅಂದುಕೊಂದು ಸಮಿಯ್ಯಾಳ ಬಾಯಿ ಮುಚ್ಚಿಸಿ ಕಳುಹಿಸಿದ ಅವಳು ಅಳಿಯನ ಮುಂದೆ ನಿಂತು "ಅವಳದಿನ್ನೂ ಹುಡುಗು ಬುದ್ಧಿ. ಅವಳ ಮಾತಿಗೆಲ್ಲಾ ತಲೆಕೆಡಿಸಿಕೊಳ್ಳಬೇಡಿ. ಅವಳಿಗೆ ನಾನು ಬುದ್ಧಿ ಹೇಳುತ್ತೇನೆ" ಎಂದರು. ಅವನು ಧಾಷ್ಟ್ರ್ಯದಿಂದ " ಮದುವೆ ಆಗಿದಿದ್ದರೆ ಇಷ್ಟು ಹೊತ್ತಿಗಾಗುವಾಗ ನಾಲ್ಕು ಮಕ್ಕಳ ತಾಯಿಯಾಗುತ್ತಿದ್ದಳು. ಎಲ್ಲಾ ನಿಮ್ಮ ಸದರ. ಗಾದೆಯೇ ಇದೆಯಲ್ವಾ ತಾಯಿಯಂತೆ ಮಗಳು ಅಂತ" ಎಂದು ವ್ಯಂಗ್ಯವಾಡಿದ.

ಅಮ್ಮನ ಜೀವ ಒಳಗೊಳಗೇ ವಿಲ ವಿಲ ಒದ್ದಾಡುತ್ತಿತ್ತು. ಸಮಿಯ್ಯಾಳ ಜೀವನ ತನ್ನಂತೆ, ಅವಳ ಅಕ್ಕನಂತೆ ಆಗಬಾರದೆಂದು ಹೊಟ್ಟೆ ಬಟ್ಟೆ ಕಟ್ಟಿ ಓದಿಸಿದರೆ ಈಗ ಈ ಕಷ್ಟ. ಅವಳ ಬೆನ್ನಿಗೆ ನಿಲ್ಲಬೇಕು, ಹಾಗೆ ನಿಲ್ಲುವುದೇ ನ್ಯಾಯ ಅಂತ ಅನ್ನಿಸಿದರೂ, ಇಲ್ಲಿ ಅವಳೇ ಸರಿ ಅನ್ನುವುದು ಗೊತ್ತಿದ್ದರೂ ಅವಳಿಗೆ ಬೆಂಬಲವಾಗಿ ನಿಲ್ಲಲಾಗುವುದಿಲ್ಲ. ಹಾಗೆ ನಿಲ್ಲುತ್ತೇನೆಂದು ಹೋದರೆ ಈಗಾಗಲೇ ಬೆಂದು ಬಸವಳಿದಿರುವ ಸುರಯ್ಯಾ ಮತ್ತವಳ ಮಕ್ಕಳ  ಬದುಕು ಮಕಾಡೆ ಮಲಗಿಬಿಡುತ್ತದೆ. ಇತ್ತ ಕೈಗೆ ಸಿಕ್ಕ ಕೆಲಸವನ್ನು ಬಿಡಲಾರೆ ಎಂಬ ಸಮಿಯ್ಯಾಳ ಹಠವನ್ನು ಕರಗಿಸಿದ್ದು ಅಮ್ಮನ ಈ ಅಸಾಹಯಕತೆಯೇ. ಒಂದು ನಿರ್ಧಾರಕ್ಕೆ ಬರಲಾಗದೆ ಅಮ್ಮ ಒದ್ದಾಡುತ್ತಾಳೆ ಅನ್ನುವುದು ಗೊತ್ತಿರುವುದಕ್ಕೇ ಅವಳು ಸದ್ಯಕ್ಕೆ ಕೆಲಸದ ಆಸೆ ಕೈ ಬಿಟ್ಟು ಮದುವೆ ಆದ್ಮೇಲೆ ನೋಡೋಣ ಎಂಬ ನಿರ್ಧಾರಕ್ಕೆ ಬಂದು ನಿರಾಳವಾದದ್ದು, ಆದರೆ ಮನೆಯ ವಾತಾವರಣವೇನೂ ತಿಳಿಯಾಗಿರಲಿಲ್ಲ.

ಒಳಗೊಳಗೇ ಕೊರಗುತ್ತಿರುವ ಸುರಯ್ಯಾ, ಏನೂ ಅಗಿಲ್ಲವೆಂಬಂತೆ ನಟಿಸುವ ಅಮ್ಮ, ಈಗೀಗ ದಿನಾ ಬಂದು ಹಾಜರಿ ಹಾಕುವಂತೆ ಹಕ್ಕು ಚಲಾಯಿಸುವ ಭಾವ, ಯಾವುದೋ ಕೀಳರಿಮೆಯನ್ನು ಮುಚ್ಚಿ ಹಾಕಲು ಆಗಾಗ ಅವನು ಹಾಕಿಕೊಳ್ಳುವ ಠೇಂಕಾರದ ಮುಖವಾಡ... ಮನೆ ಒಂದು ರೀತಿಯ ಬಿಗುವಿನ ವಾತಾವರಣದಲ್ಲಿರುವಾಗಲೇ ಅಬ್ಬು ಕಾಕ ಮತ್ತೆ ಮನೆಗೆ ಬಂದಿದ್ದ. "ನಿಮ್ಮ ಹುಡುಗಿಯನ್ನು ಹುಡುಗ ಇಷ್ಟಪಟ್ಟಿದ್ದಾನೆ, ಪುಣ್ಯಕ್ಕೆ ವರದಕ್ಷಿಣೆ ವರೋಪಚಾರ ಏನೂ ಬೇಡವಂತೆ. ಆದರೆ ತುಸು ಉಬ್ಬಿದಂತಿರುವ ಅವಳ ಹಲ್ಲಿಗೆ ಕ್ಲಿಪ್ ಹಾಕಿಸಿಬಿಡಿ. ಆರು ತಿಂಗಳಲ್ಲಿ ಅವನು ಊರಿಗೆ ಬರುತ್ತಾನೆ" ಎಂದು ಉಪಕಾರ ಮಡುತ್ತಿರುವ ಧ್ವನಿಯಲ್ಲಿ ಹೇಳಿ ಕಮಿಷನ್‌ಗಾಗಿ ಕೈ ಚಾಚಿದ. ವಿಚಿತ್ರ ಗಲಿಬಿಲಿಯೊಂದು ಅಮ್ಮನನ್ನು ಮುತ್ತಿಕೊಂಡಿತು. ಮರುಕ್ಷಣ ಮಗಳು ಮದುವೆಯಾದ ಮೇಲಾದ್ರೂ ಸುಖವಾಗಿರುತ್ತಾಳೇನೋ ಎಂಬ ದೂರದ ಆಸೆಯೊಂದು ಮೂಡಿ ಮರೆಯಾಯಿತು.

ಆದರೆ ಸಮಿಯ್ಯಾಳಿಗೆ ಮತ್ತೆ ಧರ್ಮ ಸಂಕಟ. ತಮಗಾಗಿ ಇಡೀ ಜೀವನವನ್ನು ಮುಡಿಪಿಟ್ಟ ಅಮ್ಮನಿಗೂ ನಿರಾಶೆ ಮಾಡಲಾಗದೆ, ಬದುಕಿನಲ್ಲಿ ಒಮ್ಮೆಯೂ ಭೇಟಿಯಾಗದ ವ್ಯಕ್ತಿಗಾಗಿ ಇಷ್ಟೂ ವರ್ಷಗಳ ಕಾಲ ಜೊತೆಗಿದ್ದ ಚಹರೆಯನ್ನು ಬದಲಿಸಲೂ ಆಗದೆ ಒಂದು ಬೇಗುದಿಯಲ್ಲೇ ಸುರಯ್ಯಾಳನ್ನೂ ಕರೆದುಕೊಂಡು ಕ್ಲಿನಿಕ್‌ಗೆ ಬಂದಿದ್ದಳು.

ಅಲ್ಲಿನ ವಿಪರೀತ ರಶ್ಶು, ಎದ್ದು ಕಾಣುವ ನಿರ್ಲಕ್ಶ್ಯ ಅವಳ ತಾಳ್ಮೆಯನ್ನೂ, ಅಸಹಾಯಕತೆಯನ್ನೂ ಆಡಿಕೊಂಡು ನಗುತ್ತಿರುವಂತೆ ಅನ್ನಿಸುತ್ತಿತ್ತು. ಸಣ್ಣದೊಂದು ಪರಿಚಯವೂ ಇಲ್ಲದ ವ್ಯಕ್ತಿಯೊಬ್ಬ ಬದುಕನ್ನು ಪ್ರವೇಶಿಸುತ್ತಾನೆ ಎಂದರೆ ಇಷ್ಟೊಂದು ತಯಾರಿ ಮಾಡಿಕೊಳ್ಳಲೇಬೇಕಾ? ತನ್ನ ಸ್ವಾಭಿಮಾನವನ್ನೂ, ಕನಸುಗಳನ್ನೂ ಕೊಂದುಕೊಂಡ ಬದುಕು ಎಷ್ಟೇ ಸುಂದರವಾಗಿದ್ದರೂ ಅದು ನೆಮ್ಮದಿಯನ್ನೂ, ತೃಪ್ತಿಯನ್ನೂ ಕೊಡಬಲ್ಲುದೇ? ಅಂತಹ ಬದುಕು ನನ್ನಿಡೀ ಅಸ್ತಿತ್ವವನ್ನೇ ನುಂಗಿ ಹಾಕಲಾರದೇ? ಪ್ರಶ್ನೆಗಳು ಬೆಳೆಯುತ್ತಿದ್ದಂತೆ ಬಿಳಿ ಕೋಟ್ ಧರಿಸಿದ ಡಾಕ್ಟರ್ ಇವಳ ಹಲ್ಲು ಪರೀಕ್ಷಿಸಿ ನೋಡಿ, "ಕ್ಲಿಪ್ ಹಾಕಬೇಕೆಂದರೆ ನಾಲ್ಕು ಹಲ್ಲು ಕೀಳಬೇಕಾಗುತ್ತದೆ. ಈಗಲೇ ಕೀಳಿಸುತ್ತಿಯಾ ಇಲ್ಲ ಇನ್ನೊಮ್ಮೆ ಬರುತ್ತೀಯಾ?" ಕೇಳಿದರು. ’ಏನು ಜೀವ ಇರುವ, ಚೆನ್ನಾಗಿರುವ ಹಲ್ಲುಗಳನ್ನು ಕೀಳುವುದೇ? ಅದೂ ವಿನಾಕಾರಣ? ಹಾಗೆ ಕೀಳುವುದೆಂದರೆ ನನ್ನ ಭಾವನೆಗಳನ್ನೂ, ಸ್ವಾಭಿಮಾನವನ್ನೂ ಮತ್ತೆಂದೂ ಬೆಳೆಯದಂತೆ ಕಿತ್ತು ಬಿಸಾಕಿದಂತೆ ಅಲ್ಲವೇ? ಬೇರನ್ನೇ ಕಳೆದುಕೊಂಡ ಮೇಲೆ ಯಾಕಾದರೂ ಬದುಕಬೇಕು?’ ಅವಳಿಗೇ ಗೊತ್ತಾಗದಷ್ಟು ವೇಗವಾಗಿ ಒಂದು ಸ್ಪಷ್ಟ ಗುರಿ ರೂಪುಗೊಳ್ಳುತ್ತಿದ್ದಂತೆ ಅವಳ ಜಗತ್ತಿನಲ್ಲಿ ಕಳೆಯಂತೆ ಬೇರು ಬಿಟ್ಟಿದ್ದ ಭಾವ, ಅಬ್ಬು ಕಾಕ ಮತ್ತು ನೋಡೇ ಇಲ್ಲದ ಸೌದಿಯ ಹುಡುಗ ಎಲ್ಲಾ ಮುಸುಕು ಮುಸುಕಾಗುತ್ತಾ ಹೋದರು. ನಿರ್ಧಾರ ಸಾಂದ್ರವಾಗುತ್ತಿದ್ದಂತೆ ಸಮಿಯ್ಯಾ ಅಕ್ಕನನ್ನೂ ಕರೆದುಕೊಂಅಡು ಕ್ಲಿನಿಕ್‌ನಿಂದ ಹೊರಗಡಿಯಿಟ್ಟಳು. ಎಲ್ಲಾ ಅರ್ಥವಾದಂತಿದ್ದ ಸುರಯ್ಯಾ ಪುಟ್ಟ ಭರವಸೆ ಎಂಬಂತೆ ಅವಳ ಹೆಗಲು ಬಳಸಿದಳು. ಕ್ಲಿನಿಕ್ಕೂ, ಅದರಾಚೆಗಿನ ಜಗತ್ತೂ ನೋಡ ನೋಡುತ್ತಿರುವಂತೆಯೇ ಅಕ್ಕ ತಂಗಿಯರಿಬ್ಬರೂ ಸಮಿಯ್ಯಾ ಕೆಲಸ ಗಿಟ್ಟಿಸಿಕೊಂಡಿದ್ದ ಹೈಸ್ಕೂಲಿನ ಕಾಲು ದಾರಿ ಹಿಡಿದರು.



ಗುಬ್ಬಿಯಂತಹ ಗೀತಕ್ಕ ದೇವತೆಯಂತೆ ನಗುತ್ತಿದ್ದರು.


ವಿಚಿತ್ರ ಮೌನ, ವಿವರಿಸಲಾಗದ ಅಸಹಾಯಕತೆಯನ್ನು ಮೈವೆತ್ತಿಕೊಂಡೇ ಇರುವ ಆಸ್ಪತ್ರೆಗಳಿಂದ ಕಲಿತುಕೊಳ್ಳುವಂತಹ ಬದುಕಿನ ಪಾಠಗಳನ್ನು ಮನುಷ್ಯ ಬಹುಶಃ ಬೇರೆಲ್ಲೂ ಕಲಿಯಲಾರ. ಸಾವಿನಿಂದ ಕೆಲವೇ ಕೆಲವು ಇಂಚುಗಳಷ್ಟು ದೂರ ನಿಂತು ಬದುಕು ನಿಟ್ಟುಸಿರಿಡುವಾಗ, ಒಂದು ಕ್ಷಣವಾದರೂ ಹೆಚ್ಚು ಬದುಕಬೇಕೆಂದು ಹೋರಾಡುವಾಗ ಸಾವಿನಂತಹ ಸಾವಿನೆದೆಯಲ್ಲೂ ಒಮ್ಮೆಯಾದರೂ ಒಂದು ಸಣ್ಣ ಛಳಕು ಹುಟ್ಟುತ್ತದೇನೋ. ಬದುಕಿಗೂ ಸಾವಿಗೂ ಇರುವ ಅಂತರ ಉಚ್ವಾಸ ನಿಶ್ವಾಸಗಳ ನಡುವಿನ ಅರೆಘಳಿಗೆಯಷ್ಟು ಸಣ್ಣದು.ಇಂತಹಾ ಸಾವಿನ‌ ಮನೆಯಲ್ಲಿ ಅಥವಾ ಬದುಕು ಕಲಿಸುವ ಮನೆಯಲ್ಲಿ, ಕಣ್ಣೆದುರಿರುವ ಗೋರಿಯ ನೆತ್ತಿಯ ಮೇಲಿಂದಲೇ ಬದುಕು ಕಟ್ಟಿಕೊಳ್ಳುವ, ಜೀವನ ಸ್ಪೂರ್ತಿ ಸ್ಪುರಿಸುವ ವ್ಯಕ್ತಿತ್ವಗಳು ಅಚನಾಕ್ಕಾಗಿ ಸಿಕ್ಕು ಒಂದಿಡೀ ಬದುಕು ನೆನಪಿಟ್ಟುಕೊಳ್ಳುವಂತಹಾ ಬೆರಗು ಉಳಿಸಿ ಅಷ್ಟೇ ಅಚಾನಕ್ಕಾಗಿ ಮತ್ತೆಂದೂ ಬಾರದಂತೆ ಎದ್ದು ಹೋಗುತ್ತರಲ್ಲಾ ಆಗೆಲ್ಲಾ, ಇಂತಹ ವ್ಯಕ್ತಿತ್ವವನ್ನು ಪರಿಚಯಿಸಿದ್ದಕ್ಕೆ ಬದುಕನ್ನು ಕಣ್ಣಿಗೊತ್ತಿ ಒಂದು ಚಂದದ ತ್ಯಾಂಕ್ಸ್ ಹೇಳಬೇಕಾ ಅಥವಾ ಅಷ್ಟು ಬೇಗ ವಿಯೋಗವನ್ನೂ ಹೇರಿದ್ದಕ್ಕೆ ಬದುಕನ್ನು ದೂಷಿಸಬೇಕಾ ಎನ್ನುವುದೇ ಅರ್ಥವಾಗುವುದಿಲ್ಲ.

ಅಮ್ಮನ ಕ್ಯಾನ್ಸರ್ ಆಪರೇಶನ್ ಮುಗಿದು ಮೊದಲ ಕಿಮೋಥೆರಪಿಗೆಂದು ವಾರ್ಡ್ ಗೆ ಶಿಫ್ಟ್ ಆದಾಗ, ಕಿಟಕಿ ಪಕ್ಕದ ಕೊನೆಯ ಹಾಸಿಗೆಯಲ್ಲಿ, ಮಹಿಳೆಯೊಬ್ಬರು ಈಗಷ್ಟೇ ಇಸ್ತ್ರಿ ಮಾಡಿದಂತಹ ಕೈಮಗ್ಗದ ಸೀರೆ, ಅದಕ್ಕೊಪ್ಪುವ ರವಕೆ, ಮೂಗಿನ ಮೇಲೊಂದು ಕನ್ನಡಕ ಧರಿಸಿ, ಮಂಚಕ್ಕೆ ಒರಗಿ, ಕಾಲು ಚಾಚಿ ಕೂತು, ಮುಖ ಕಾಣಿಸದಂತೆ  'The home and the world' ಓದುತ್ತಿದ್ದ ಭಂಗಿ ನೋಡುತ್ತಿದ್ದರೆ ಕುವೆಂಪು ಕಾದಂಬರಿಯಲ್ಲಿನ ಹೆಗ್ಗಡತಿ  ನೆನಪಾಗಿದ್ದರು. ಇಡೀ ವಾರ್ಡ್ ಒಂದು ರೀತಿಯ ಸಂಕಟವನ್ನು ಹೊದ್ದು ಮಲಗಿಕೊಂಡಿದ್ದರೆ ಅವರೊಬ್ಬರು ಮಾತ್ರ ನೋವಿನ ಈ ಪ್ರಪಂಚಕ್ಕೂ ತನಗೂ ಸಂಬಂಧವೇ ಇಲ್ಲವೇನೋ ಎಂಬಂತೆ ಪುಸ್ತಕದಲ್ಲಿ ಮುಳುಗಿ ಹೋಗಿದ್ದರು. ಅವರ ಭಾವ ಭಂಗಿ, ಓದಿನ ತಲ್ಲೀನತೆ ನೋಡುತ್ತಿದ್ದರೆ ಈಗಲೇ ಪರಿಚಯಿಸಿಕೊಳ್ಳಬೇಕು ಅನ್ನಿಸುತ್ತಿತ್ತು.‌ ಆದರೆ ಹಾಗೆ ಏಕಾಏಕಿ ಮಾತನಾಡಿಸಿದರೆ ಎಲ್ಲಿ ಅವರೇ ಸೃಷ್ಟಿಸಿಕೊಂಡಿರುವ ಖಾಸಗಿ ಪ್ರಪಂಚದೊಳಕ್ಕೆ ಅತಿಕ್ರಮ ಪ್ರವೇಶ ಮಾಡಿದಂತಾಗುತ್ತದೋ ಎಂದೂ ಅನ್ನಿಸುತ್ತಿತ್ತು.

ಆ ಗೊಂದಲದ ನಡುವೆ ಯಾವಾಗ ಅವರು ಹಾಸಿಗೆಯಿಂದ ಎದ್ದು ಬಂದು ನಮ್ಮ ಪಕ್ಕ ನಿಂತಿದ್ದರೋ ಗೊತ್ತಾಗಲಿಲ್ಲ. "ಯಾವಾಗ ಆಪರೇಶನ್ ನಡೆಯಿತು?" ಅನ್ನುವ ಖಚಿತ ಧ್ವನಿ ಕೇಳಿ ತಲೆ ಎತ್ತಿ ನೋಡಿದರೆ, ಕೃಶ ದೇಹಿ, ನೀಳ ನಾಸಿಕ ಮತ್ತು ತಲೆ ಪೂರ್ತಿ ಒಂದೂ ಕೂದಲಿಲ್ಲದ ಮಹಿಳೆಯೊಬ್ಬರು ನಮ್ಮ ಎದುರುಗಡೆ ನಿಂತಿದ್ದರು. ತಮ್ಮನ್ನು, ಗೀತಾ ಭಟ್ ಎಂದು ಪರಿಚಯಿಸಿಕೊಂಡ ಅವರ ಮುಖದಲ್ಲಿನ ಗಂಭೀರತೆ, ಪ್ರೌಢ ಕಳೆ ಮಾತಿಗೂ ಮುನ್ನವೇ ನಮ್ಮೊಳಗೊಂದು ಸಂಬಧ ಬೆಸೆದಿತ್ತು. ಆಗಿನ್ನೂ, ಕಿಮೋಥೆರಪಿ ದೇಹದಲ್ಲಿನ ಕೂದಲುಗಳನ್ನು ಪೂರ್ತಿಯಾಗಿ ಕೀಳುತ್ತದೆ ಅನ್ನುವುದು ಗೊತ್ತೇ ಇರಲಿಲ್ಲ. ನನ್ನ ಕಣ್ಣುಗಳು ಅವರ ಕುತ್ತಿಗೆಯಿಂದ ಮೇಲೆ ಹೋಗುತ್ತಿದ್ದಂತೆ ವಿಚಿತ್ರ ಭಯವೊಂದು ದೇಹವಿಡೀ ಆವರಿಸಿ ಕಣ್ಣುಗಳು ತಾವೇ ತಾವಾಗಿ ಮುಚ್ಚಿಕೊಂಡುಬಿಡುತ್ತಿದ್ದವು. ಇನ್ನು ಇಪ್ಪತ್ತನಾಲ್ಕು ಗಂಟೆಯೊಳಗಾಗಿ ನನ್ನಮ್ಮನನ್ನೂ ಇದೇ ಸ್ಥಿತಿಯಲ್ಲಿ ನೋಡಬೇಕಾದೀತು ಎನ್ನುವ ಕಲ್ಪನೆಯೂ ಇರಲಿಲ್ಲ ನನಗಾಗ.

ಆದರೆ ಇಡೀ ವಾರ್ಡನ್ನು ಮತ್ತಷ್ಟು ಸೂಕ್ಷ್ಮವಾಗಿ ನೋಡಿದರೆ ಯಾರೊಬ್ಬರ ದೇಹದ ಮೇಲೂ ಒಂದೆಳೆ ಕೂದಲೂ ಇಲ್ಲ ಅನ್ನುವುದು ಅರಿವಾಗುತ್ತಿತ್ತು. ಸಣ್ಣ ವ್ಯತ್ಯಾಸವೆಂದರೆ ಅವರೆಲ್ಲರೂ ತಲೆಗೆ ವಿಗ್ ಧರಿಸಿ ಅಥವಾ ತಲೆಯನ್ನು ಸಣ್ಣ ಬಟ್ಟೆಯಿಂದ ಮುಚ್ಚಿದ್ದರು. ಹಾಗಾಗಿ ಮೊದಲ ನೋಟಕ್ಕೆ ಏನೂ ಅರ್ಥವಾಗಿರಲಿಲ್ಲ. ಅವರೆಲ್ಲರ ನಡುವೆ ಒಂದು ನಿರ್ಭಿಡತೆಯನ್ನೂ, ನಿರಾತಂಕವನ್ನೂ ಮೈಗೂಡಿಸಿಕೊಂಡು ಅತ್ಯಂತ ಸಹಜವಾಗಿಯೇ ಇದ್ದ ಗೀತಕ್ಕ ಮಾತ್ರ ತುಂಬ ಹತ್ತಿರದವರು ಅಂತ ಮೊದಲ ಭೇಟಿಗೇ ಅನ್ನಿಸುವಂತಹ ವಿಶೇಷ ವ್ಯಕ್ತಿತ್ವ ಹೊಂದಿದ್ದರು. ತನ್ನ ವ್ಯಾಪ್ತಿಯೊಳಕ್ಕೆ ಬರುವ ಎಲ್ಲರಲ್ಲೂ ಸುಲಭವಾಗಿ ಆಪ್ತತೆ ಹುಟ್ಟಿಸುವ ಗುಣ ಅವರದು ಅನ್ನುವುದು ಅರ್ಥವಾಗಲು ಹೆಚ್ಚಿನ ಸಮಯವೇನೂ ತಗುಲಲಿಲ್ಲ.

ಗೀತಕ್ಕ ಮೂಲತಃ ದಕ್ಷಿಣಕನ್ನಡ ಜಿಲ್ಲೆಯವರು. ಮತದಾನದ ಹಕ್ಕು ಲಭಿಸುವ ಮುನ್ನವೇ ರೈಲ್ವೇ ಉದ್ಯೋಗಿಯ ಕೈ ಹಿಡಿದು ಯಾವ ತಯಾರಿಯೂ ಇಲ್ಲದೆ ಸಂಸಾರ ಸಾಗರಕ್ಕೆ ಧುಮುಕಿದರು. ಮದುವೆ ಸಂದರ್ಭದಲ್ಲಿ ಗಂಡ ದೂರದ ಬಂಗಾಳದಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಹಾಗಾಗಿ ಮದುವಣಗಿತ್ತಿಯ ಕಣ್ಣೊಳಗಿನ ಕನಸುಗಳು ಅಂಗೈಯಲ್ಲಿ  ಚಿತ್ರ ವಿಚಿತ್ರ ಆಕಾರ ತಳೆಯುವ ಮುನ್ನವೇ ಬದುಕು ಅವರನ್ನು ಪರಿಚಯ ಇಲ್ಲದ ಊರು, ಅರ್ಥವೇ ಆಗದ ಭಾಷೆಯ ಜನರ ನಡುವೆ ತಂದು ನಿಲ್ಲಿಸಿತ್ತು. ಕುವೆಂಪು, ಕಾರಂತರನ್ನು ಆಗಲೇ ಓದಿಕೊಂಡಿದ್ದ ಅವರ ಮುಂದೆ ಬಂಗಾಳ, ಅಲ್ಲಿನ ಬದುಕು, ಸಾಹಿತ್ಯಕ ಪರಿಸರ ಹೊಸ ಬೌದ್ಧಿಕ ಪ್ರಪಂಚವನ್ನೇ ತೆರೆದಿತ್ತು. ಟಾಗೋರರನ್ನು ಓದಲೆಂದೇ ಹಠ ಹಿಡಿದು ಬಂಗಾಳಿ ಭಾಷೆ ಕಲಿತರು. ಈ ಮಧ್ಯೆ ಪಿ.ಯು.ಸಿಯಲ್ಲಿ ನಿಂತಿದ್ದ ಓದನ್ನೂ ಮುಂದುವರೆಸಿದರು.

ಸಾಹಿತ್ಯ, ಓದು, ಒಂದೊಂದು ಹನಿ ಒಲವನ್ನೂ ಜತನದಿಂದ ಕಾಪಿಟ್ಟುಕೊಳ್ಳುವ ಗಂಡ, ಸ್ವರ್ಗಕ್ಕೆ ಕಿಚ್ಚು ಹಚ್ಚುವಂತಹಾ ಸಂಸಾರ... ನಡುವೆ ಒಂದು ಚೈತ್ರ ಕಾಲದಲ್ಲಿ ಗೀತಕ್ಕನ ಒಡಲೊಳಗೆ ಅವರಿಬ್ಬರ ಒಲವಿನ ಸಾಕ್ಷಿ ಕುಡಿಯೊಡೆದಿತ್ತು. ಬದುಕು ಹೊಸದಾಗಿ ಪ್ರಾರಂಭವಾಗುವುದರಲ್ಲಿತ್ತು, ಆ ಸಂಭ್ರಮಕ್ಕೆ ಊರಲ್ಲಿ ಸೀಮಂತನ ಹಮ್ಮಿಕೊಂಡಿದ್ದರು. ನಿರಂತರವಾಗಿ ಚಲನೆಯಲ್ಲಿರುವ ಬದುಕು ಒಮ್ಮೆಗೆ ನಿಂತುಬಿಡುತ್ತದೆ ಎಂದು ಆಗ ಯಾರೂ ಅಂದುಕೊಂಡಿರಲಿಲ್ಲ. ಇತ್ತ ಗೀತಕ್ಕನನ್ನು ರೈಲು ಹತ್ತಿಸಿ ಕೆಲಸಕ್ಕೆ ಮರಳಿದ್ದ ಗಂಡ ಎರಡು ರಾಜಕೀಯ ಪಕ್ಷಗಳ ಗಲಭೆಗೆ ತುತ್ತಾಗಿ ದಾರಿ ಮಧ್ಯೆಯೇ ಕೊನೆಯುಸಿರೆಳೆದಿದ್ದರು. ತಾನು ಅಷ್ಟು ಪ್ರೀತಿಯಿಂದ ಹೇಳಿ ಬಂದ ವಿದಾಯ ಶಾಶ್ವತ ವಿಯೋಗವಾಗಿರುತ್ತದೆ ಎನ್ನುವುದೇ ಗೊತ್ತೇ ಇಲ್ಲದ  ಗೀತಕ್ಕ ಊರಿಗೆ ಮರಳುವಾಗ ಇಲ್ಲಿ ಸೂತಕದ ಛಾಯೆ, ಸೀಮಂತನ ರದ್ದಾಗಿತ್ತು. ವಿಷಯ ತಿಳಿದ ಅವರು ಕುಸಿದು ಬಿದ್ದರು, ಒಡಲೊಳಗಿನ ಕುಡಿ ಉಸಿರು ಚೆಲ್ಲಿತ್ತು.‌ ಕೆಲವೇ ದಿನಗಳ ಹಿಂದೆ ಸಂತಸ ಮಾತ್ರ ತುಂಬಿದ್ದ ಬದುಕೀಗ ಖಾಲಿ ಖಾಲಿ, ಉಸಿರಿನ ಭಾರವನ್ನೇ ತಡೆದುಕೊಳ್ಳಲಾಗದಷ್ಟು ನಿತ್ರಾಣವಾಗಿಬಿಟ್ಟರು.

ಆದರೆ ಜೀವನ ಇನ್ನೂ ಉದ್ದ ಇತ್ತು, ಇಲಾಖೆ ಅನುಕಂಪದ ಆಧಾರದಲ್ಲಿ ಮತ್ತೆ ಕರೆದು ಕೆಲಸ ಕೊಟ್ಟಿತು. 23ರ ಹಸಿ ವಿಧವೆ ಮನೆಯವರ, ಊರವರ ವಿರೋಧ ಕಟ್ಟಿಕೊಂಡು ಮತ್ತೆ ರೈಲು ಹತ್ತಿ ತನ್ನ ಖಾಲಿ ಗೂಡಿಗೆ ಹಿಂದಿರುಗಿದರು. ಗಂಡನಿಲ್ಲದ ಮನೆ ಮೊದ ಮೊದಲು ಬಿಕೋ ಅನ್ನಿಸುತ್ತಿದ್ದರೂ ಬದುಕಲೇಬೇಕಾದ ಅನಿವಾರ್ಯ ಎಲ್ಲ ನೋವುಗಳನ್ನು ಮೆಟ್ಟಿನಿಲ್ಲಲು ಕಲಿಸಿತು. ಒಂಟಿತನವನ್ನು ಭರಿಸುತ್ತಲೇ ಅಖಂಡ ಮೂವತ್ತೇಳು ವರ್ಷಗಳನ್ನು ಕೊಲ್ಕತ್ತಾದ ಬೀದಿಗಳಲ್ಲಿ ಅಸಹಾಯಕ ಹೆಣ್ಣು ಮಕ್ಕಳ ಕಣ್ಣೀರೊರೆಸುತ್ತಾ, ರಾಜಕೀಯ ಗೂಂಡಾಗಳನ್ನು ವಿರೋಧಿಸುತ್ತಾ ಕಳೆದರು.

ಸೇವೆಯಿಂದ ನಿವೃತ್ತಿ ಪಡೆದ ನಂತರ ಊರಿಗೆ ಮರಳಲೇಬೇಕಾಯಿತು. ಈ ನಡುವೆ ಒಂಟಿ ಬಾಳಿನ ಆ ಮೂವತ್ತೇಳು ವರ್ಷಗಳಲ್ಲಿ ಎಂದೂ ಭಾದಿಸದ ದೈಹಿಕ ಸುಸ್ತು, ಆಯಾಸ ಒಮ್ಮೆಲೆ ಕಾಣಿಸಿಕೊಂಡಂತಾಯಿತು. ಮೊದ ಮೊದಲು ವಯಸ್ಸಿನ ಕಾರಣದಿಂದಲೇ ಹೀಗಾಗುತ್ತಿದೆ ಅಂದುಕೊಂಡರೂ ಪರೀಕ್ಷಿಸಿದಾಗ ಅನ್ನ ನಾಳದ ಕ್ಯಾನ್ಸರ್ ಕೊನೆಯ ಹಂತದಲ್ಲಿರುವುದು ತಿಳಿದು ಬಂದಿತ್ತು. ಎಲ್ಲ ಮುಗಿಯಿತು ಅಂದುಕೊಳ್ಳುತ್ತಿರುವಾಗ ಬದುಕು ಹೊಸ ಸವಾಲನ್ನು ಒಡ್ಡಿತ್ತು. ದೂರವಾದ ಸಂಬಂಧಿಕರು, ಸ್ನೇಹಿತರೇ ಇಲ್ಲದ ಜಗತ್ತಿನಲ್ಲಿ ಬದುಕಿದ ಗೀತಕ್ಕನಿಗೆ ಮೊದಲಿಗೆ ಇವೆಲ್ಲಾ ದೊಡ್ಡ ಸವಾಲೇ ಅಲ್ಲ ಅಂತ ಅನ್ನಿಸಿದರೂ ರೇಡಿಯೋ ಥೆರಪಿ ದೇಹದ ಪ್ರತಿ ಅಣುವಲ್ಲೂ ನರಕ ಯಾತನೆ ಸೃಷ್ಟಿಸುತ್ತಿರುವಾಗ ಮಾತ್ರ ಇಡೀ ಪ್ರಪಂಚದಲ್ಲಿ ತಾನೆಷ್ಟು ಒಂಟಿ ಅಂತ ಅನ್ನಿಸುತ್ತಿತ್ತಂತೆ. ಆದರೆ ಬೆಟ್ಟವೇ ಕುಸಿದು ತಲೆ ಮೇಲೆ ಬಿದ್ದರೂ ಎಡಗೈಯಿಂದ ಸರಿಸಿ ಎದ್ದು ಬಂದೇನು ಅನ್ನುವ ಅವರಲ್ಲಿದ್ದ ಧೀಶಕ್ತಿಯ ಮುಂದೆ ಉಳಿದೆಲ್ಲಾ ವಿಚಾರಗಳು ಗೌಣವಾಯಿತು. ತಾನು ನೋವಿನಲ್ಲಿ ಮುಲುಗುಟ್ಟುತ್ತಿರುವಾಗಲೂ ಉಳಿದ ರೋಗಿಗಳಲ್ಲಿ ಅವರು ತುಂಬುತ್ತಿದ್ದ ಆತ್ಮಸ್ಥೈರ್ಯ, ಉತ್ಸಾಹ, ಎಣೆಯಿಲ್ಲದ ಜೀವನಸ್ಪೂರ್ತಿ ದೊಡ್ಡದು.

ಕೈ ಬಿಟ್ಟು ಹೋದ ಪ್ರೀತಿಗಾಗಿ, ಕಳೆದುಕೊಂಡ ಸಂಬಂಧಕ್ಕಾಗಿ, ಮುರಿದು ಬಿದ್ದ ಸ್ನೇಹಕ್ಕಾಗಿ, ನಿರುದ್ಯೋಗದ ಕಾರಣಕ್ಕಾಗಿ, ಸದ್ದಿಲ್ಲದೆ ಜರುಗಿ ಹೋದ ಮೋಸಕ್ಕಾಗಿ, ಮಾರಾಮಾರಿ ವಂಚನೆಗಾಗಿ ಜೀವ ಕಳೆದುಕೊಳ್ಳುವವರು, ಆತ್ಮಹತ್ಯೆ ಮಾಡಿಕೊಳ್ಳುವವರು, ಮತ್ತೊಬ್ಬರ ಜೀವ ತೆಗೆಯುವವರ ನಡುವೆ, ಎಲ್ಲ ಕಳೆದುಕೊಂಡ ಮೇಲೂ ಯಾವುದೋ ಮಹತ್ತರವಾದ ಕಾರಣವೊಂದಕ್ಕಾಗಿ ಬದುಕಬೇಕು, ಬದುಕುತ್ತೇವೆ ಎಂದು ನಿರ್ಧರಿಸಿಕೊಂಡು ಹಾಗೆಯೇ ಬದುಕಲು ಒಂದು ಗಟ್ಟಿ ಸಂಕಲ್ಪ ಬೇಕಾಗುತ್ತದೆ. ತಣ್ಣಗೆ ಸಿಂಬಿ ಸುತ್ತಿ ಮಲಗಿರುವ ಹಾವಿನಂತಹ ದ್ವೇಷವನ್ನೂ, ಅಸೊಯೆಯನ್ನೂ, ಕೆಲವು ವ್ಯಸನಗಳನ್ನೂ ಎಲ್ಲ 'ತೊರೆದ' ಸೋಗಿನ ಮಧ್ಯೆಯೂ ತಣ್ಣಗೆ ಪೋಷಿಸುವವರ ನಡುವೆ ಜಾತಿ ಧರ್ಮಗಳ ಎಲ್ಲೆಗಳನ್ನು 'ನಿಜಕ್ಕೂ' ಮೀರಿ ಬದುಕುವ ಗೀತಕ್ಕನಂತಹವರು ಗ್ರೇಟ್ ಅನ್ನಿಸುವುದು ಆ ಸಂಕಲ್ಪದ ಕಾರಣದಿಂದಾಗಿಯೇ.



ನೋವಿನಲ್ಲಿ ನಲುಗುತ್ತಿರುವವರ ಹೆಗಲು ಬಳಸಿ ಅವರಾಡುತ್ತಿದ್ದ ಮಾತುಗಳು, ತುಂಬುತ್ತಿದ್ದ ಭರವಸೆ, ಸಾವಿರ ಸಂಕಟಗಳನ್ನು ಇಲ್ಲವಾಗಿಸುತ್ತಿದ್ದ ಅವರ ಒಂದು ಸ್ಪರ್ಶ ನನಗೆ ಮದರ್ ಥೆರೇಸಾ ಅವರನ್ನು ನೆನಪಿಸುತ್ತಿತ್ತು. ಒಮ್ಮೆ ಮಾತಿನ‌ ನಡುವೆ ಈ ಬಗ್ಗೆ ಹೇಳಿಯೂ ಇದ್ದೆ. ಆಗವರು  "ನಮ್ಮ ಇಡೀ ಕುಷ್ಠ ವ್ಯವಸ್ಥೆಗೇ ಪರಿಹಾರವಾಗಿ ಬಂದ ಮಹಾಮಾತೆ ಥೆರೆಸಾ. ಕ್ರೌರ್ಯದಿಂದ,   ಅಮಾನವೀಯತೆಯಿಂದ ಗಿಜಿಗುಡುತ್ತಿದ್ದ ಕೊಲ್ಕತ್ತಾದ ಬೀದಿಗಳನ್ನು ಶುದ್ಧೀಕರಿಸಲು ಒಂದಿಡೀ ಬದುಕನ್ನು ಪಣವಾಗಿಟ್ಟ ಅವರಿಗೆ ನನ್ನನ್ನು ಹೋಲಿಸಬೇಡ. ಬದುಕು ನನಗೆ ಅಳಲು ನೂರು ಕಾರಣಗಳನ್ನು ನೀಡಿದರೆ ನಗಲು ಸಾವಿರ ಕಾರಣಗಳನ್ನು ನೀಡಿತ್ತು. ಆದರೆ ಥೆರೆಸಾ ಹಾಗಲ್ಲ, ಎಲ್ಲ ಅನುಮಾನಗಳನ್ನು, ಅವಮಾನಗಳನ್ನು ನುಂಗಿಕೊಂಡು ತನ್ನದಲ್ಲದ ದೇಶದ ಸೇವೆಗೆ ನಿಂತವರು, ಅವರನ್ನು ನನ್ನ ಜೊತೆ ಅಂತಲ್ಲ, ಯಾರ ಜೊತೆಗೂ ಹೋಲಿಸಬೇಡ" ಎಂದು ಸುಮ್ಮನಾದರು. ನಾನು ಮತ್ತೇನೋ ಹೇಳಲು ಬಾಯಿ ತೆರೆಯುವ ಮುಂಚೆ ಅವರು ಮತ್ತೆ " ನೀನಿನ್ನೂ ಸಣ್ಣ ಹುಡುಗಿ ಇವೆಲ್ಲ ನಿನಗೆ ಅರ್ಥ ಆಗುವುದಿಲ್ಲ " ಎಂದು ನನ್ನ ಬಾಯಿ ಮುಚ್ಚಿಸಿದರು. ನಮ್ಮ ಸಂಭಾಷಣೆಯನ್ನು ಕೇಳಿಸಿಕೊಳ್ಳುತ್ತ ಪಕ್ಕದಲ್ಲೇ ಇದ್ದ ಅಮ್ಮ ಸುಮ್ಮನೆ ನಕ್ಕರು.

ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ಮರಳುವಾಗ ಗೀತಕ್ಕ ಇನ್ಮುಂದೆ ಸಿಗುವುದೇ ಇಲ್ಲವೇನೋ ಅನ್ನುವ ಸಂಕಟದಲ್ಲೇ ಹೊರಟಿದ್ದೆವು. ವಿಳಾಸ, ಫೋನ್ ನಂಬರ್ ಕೇಳಿದಾಗ ಅವರು ಕೊಡಲು ಸುತಾರಾಮ್  ಒಪ್ಪಿರಲಿಲ್ಲ. ಅಮ್ಮನೂ ಒಳ್ಳೆಯತನದ ವಿಳಾಸ ಬಲವಂತವಾಗಿ ಕೇಳಬಾರದು ಅಂತ ನನಗೆ ಕಟ್ಟು ನಿಟ್ಟಾಗಿ ಹೇಳಿಬಿಟ್ಟಿದ್ದರು. ಗೀತಕ್ಕ ಎಂಬ ಸ್ಥಾಯೀಭಾವ ಆಗಾಗ ಕಾಡುತ್ತಿರುವಂತೆಯೇ ವರ್ಷವೊಂದು ಕಳೆದು ಮತ್ತೆ ಅದೇ ಆಸ್ಪತ್ರೆಗೆ ಅಮ್ಮ ಚೆಕ್ ಅಪ್ ಗೆಂದು ದಾಖಲಾದರು‌. ಯಾವ ಋಣಾನುಬಂಧವೋ ಏನೋ ಗೀತಕ್ಕ ಮತ್ತೆ ಸಿಕ್ಕರು. ಆದರೆ ಈ ಬಾರಿ ಮಾತ್ರ ಅನ್ನನಾಳದ ಕ್ಯಾನ್ಸರ್ ಗಂಟಲುವರೆಗೆ ಹಬ್ಬಿ ಅವರ ಮಾತನ್ನು ಕಸಿದುಕೊಂಡಿತ್ತು. ಅವರನ್ನು ಮಾತಾಡಿಸಲು ಪ್ರಯತ್ನಿಸಿದರೆ, ಅವರು ನನ್ನ ಕೈ ಮೇಲೆ ಅವರ ಸೋಲೊಪ್ಪದ ಕೃಶ ಅಂಗೈಯನ್ನಿಟ್ಟು ಮೆಲ್ಲಗೆ ಅದುಮಿದರು. ನನ್ನ ಗಂಟಲುಬ್ಬಿ ಬಂತು, ಇಡೀ ಕ್ಯಾನ್ಸರ್ ವಾರ್ಡನಲ್ಲಿದ್ದ ರೋಗಿಗಳಿಗೆ ಆತ್ಮಸ್ಥೈರ್ಯ ತುಂಬುತ್ತಿದ್ದ ಗೀತಕ್ಕನ ಯಾವ ಅಂಗವನ್ನಾದರೂ ಕಿತ್ತುಕೋ ಭಗವಂತಾ, ಆದರೆ ಮಾತು ಮಾತ್ರ ಮರಳಿಸು ಎಂದು ಮೌನವಾಗಿ ಮೊರೆಯಿಟ್ಟು ಬವಳಿ ಬಂದಂತಾಗಿ ಪಕ್ಕದಲ್ಲಿದ್ದ ಅಮ್ಮನ ಹೆಗಲು ಬಳಸಿದೆ. ಕಣ್ಣು ಹೊರಳಿಸಿ ನೋಡಿದರೆ, ಗುಬ್ಬಿಯಂತೆ ಮಲಗಿದ್ದ ಗೀತಕ್ಕ ಪುಟ್ಟ ದೇವತೆಯಂತೆ ನಗುತ್ತಿದ್ದರು.


ಕಂಬಳಿ ಹುಳ.


ಇಳಿ ಸಂಜೆಯ ಹೊತ್ತು. ಹೊಂಗೆ ಮರದಡಿಯಲ್ಲಿ ಕೂತ ಯುವ ಕವಿ ಪದ್ಯ ಬರೆಯುತ್ತಿದ್ದ. ಅವನ ಕವಿತೆಯ ಪೂರ್ತಿ, ಇಂದು ಮುಂಜಾನೆ ಅಕಸ್ಮಾತ್ತಾಗಿ ಚಿಟ್ಟೆಯನ್ನು ಕೊಂದ ಹಳಹಳಿಕೆಗಳೇತುಂಬಿದ್ದವು. ಒಂದು ಸುದೀರ್ಘ ಪಶ್ಚಾತ್ತಾಪವದು. ಪೂರ್ತಿ ಬರೆದಾದ ಮೇಲೆ ಒಂದು ಕ್ಷಣ ಕಣ್ಣುಮುಚ್ಚಿ ನಿಡಿದಾದ ಉಸಿರೆಳೆದುಕೊಂಡು ಮತ್ತೆ  ಕಣ್ಣು ತೆರೆದು ಈಗಷ್ಟೇ ಬರೆದ ಕವಿತೆ ಓದಿ ತೃಪ್ತಿಯಿಂದ ಎದ್ದು ನಿಂತ. ಅವನ ಧ್ವನಿಯ ತುಂಬ ಪ್ರಾಯಶ್ಚಿತ್ತದಭಾವವಿತ್ತು. ಕವಿತೆ ಕೇಳಿದ ಕಂಬಳಿ ಹುಳವೊಂದು ಇಷ್ಟು ಪಶ್ಚಾತ್ತಾಪ ಪಡುವ ಅವನನ್ನೊಮ್ಮೆ ನೋಡಬೇಕು ಎಂದು ಎಲೆಯ ಮರೆಯಿಂದ ಮೆಲ್ಲನೆ ಹೊರಗಿಣುಕಿತು. ಕೂಡಲೇ ಮರ, "ಮನುಷ್ಯರಿಗೆ ಚಿಟ್ಟೆಯನ್ನು ಕೊಂದಾಗ ಕಾಡುವ ಪಾಪಪ್ರಜ್ಞೆ ಕಂಬಳಿ ಹುಳವನ್ನು ಕೊಂದಾಗ ಕಾಡದು ಮಗೂ" ಎಂದಿತು. ಈ ಮರಕ್ಕೇನೂ ಈರ್ಷ್ಯೆ ಇರಬೇಕು ಅಂದುಕೊಂಡ ಕಂಬಳಿ ಹುಳ ಅವನನ್ನು ನೋಡಲೆಂದು ಮತ್ತಷ್ಟು ಬಾಗಿತು. ಹಾಗೆ ಬಾಗುತ್ತಲೇ ಅವನ ಹೆಗಲ ಮೇಲೆ ಬಿತ್ತು. ಬಲಗೈಯಲ್ಲಿ ಕವಿತೆಯ ಹಾಳೆ ಹಿಡಿದುಕೊಂಡ ಕವಿ  ಎಡಗೈಯಲ್ಲಿ  ಹುಳವನ್ನು ಕೊಡವಿ ಕಾಲಲ್ಲಿ ಕಿವುಚಿ ಮುಂದೆ ಹೋದ.



ಕಾಷ್ಠಮೌನಿಯ ಕಥನ


ದಾ ಸುದ್ದಿಯಲ್ಲಿರುವ, ಪೊಲೀಸ್ ವ್ಯಾನ್ ತಪ್ಪದ ನಮ್ಮೂರಿಗೆ  ಪೊಲೀಸರ, ಊರವರ ಕಣ್ಣು ತಪ್ಪಿಸಿ ಮುಖೇಶನೆಂಬ ಅರೆ ಹುಚ್ಚ ಯಾವಾಗ ಕಾಲಿಟ್ಟನೋ ಗೊತ್ತಿಲ್ಲ, ಖಾಲಿ ಬೀಳುತ್ತಿದ್ದ ಬಸ್ ಸ್ಟಾಂಡ್ ಗೆ ಒಂದು ವಿಚಿತ್ರ ಕಳೆ ಬಂದುಬಿಟ್ಟಿತ್ತು. ದೊಗಳೆ ಅಂಗಿ, ಕೊಳೆಕೊಳೆಯಾದ ಪ್ಯಾಂಟು, ಪ್ಯಾಂಟಿನ ಒಂದು ಬದಿಯ ಜೇಬಿಗೆ ಸಿಕ್ಕಿಸಿಕೊಂಡಿದ್ದ ಹ್ಯಾಟ್, ಕೆದರಿದ ತಲೆಗೂದಲು, ಏನನ್ನೋ ನೋಡಿ ಬೆದರಿದಂತಿರುವ ಕಣ್ಣುಗಳು, ಸದಾ ಮಣಗುಡುವ ತುಟಿಗಳು, ಕಾಲಲ್ಲಿ ಆ ಕಾಲಕ್ಕೆ ದುಬಾರಿ ಅನ್ನಿಸಿದ್ದ ಬಾಟಾ ಚಪ್ಪಲಿಗಳು... ಮುಖೇಶ ನಿಜಕ್ಕೂ ಅರೆ ಹುಚ್ಚನಾ ಅಥವಾ ಹಾಗೆ ನಟಿಸುತ್ತಿದ್ದನಾ? ಒಂದು ಅರ್ಥವಾಗುತ್ತಿರಲಿಲ್ಲ.

ಮುಖೇಶ ನಮ್ಮೂರಿಗೆ ಕಾಲಿಟ್ಟದ್ದೇ ಒಂದು ವಿಚಿತ್ರ ಸನ್ನಿವೇಶದಲ್ಲಿ. ಅಷ್ಟಮಿಯಂದು ಒಂದು ಕೋಮಿನವನು ಮತ್ತೊಂದು ಕೋಮಿನವನ್ನು ಗುರಾಯಿಸಿ ನೋಡಿದ ಎಂಬ ಕಾರಣಕ್ಕೆ ಶುರುವಾದ ಜಗಳ ಭಜನಾಮಂದಿರದ ಗಾಜಿಗೆ ಬಾಟ್ಲಿ ಬೀಳುವುದರೊಂದಿಗೆ ಮತ್ತು ಮಸೀದಿಯ ಕಿಟಕಿಗಳಿಗೆ ಕಲ್ಲು ತೂರಾಟ ನಡೆಯುವುದರೊಂದಿಗೆ ತಾರಕಕ್ಕೇರಿತ್ತು. ರಾತ್ರಿ ಹೊತ್ತಿಗಾಗುವಾಗ ಕರ್ಪ್ಯೂ ಜಾರಿಯಾಗಿ ಮೂರು ಪೊಲೀಸ್ ಜೀಪುಗಳು ಮತ್ತೊಂದು ವ್ಯಾನ್ ಊರ ಹೆಬ್ಬಾಗಿಲನ್ನೂ, ಮಸೀದಿಯ ಮೆಟ್ಟಿಲುಗಳನ್ನೂ, ಭಜನಾಮಂದಿರದ ಬಾಗಿಲನ್ನೂ ಕಾಯುತ್ತಿದ್ದವು. ಇಡೀ ಊರು ಅಘೋಷಿತ ಶೋಕಾಚರಣೆಯಲ್ಲಿದ್ದರೆ ಮುಖೇಶನೆಂಬ ಅಪರಿಚಿತ ಯಾವುದೋ ಮಾಯದಲ್ಲಿ ಊರು ಸೇರಿದ್ದ. ಅಥವಾ ಜಗಳ ಕಾಯಲು ಕಾಲು ಕೆದರಿಕೊಂಡು ಕಾಯುತ್ತಿರುವವರ ಊರಿಗೆ ಯಾವ ಗಲಭೆಯೂ ಬೇಕಿಲ್ಲದ ಪರಮ ಮೌನಿಯೊಬ್ಬ ಕಾಲಿಟ್ಟಿದ್ದ.

ಮೊದಮೊದಲು ಇವರು ಮುಖೇಶನನ್ನು ಅವರ ಕಡೆಯವನೆಂದೂ, ಅವರು ಇವರ ಕಡೆಯವನೆಂದೂ ಒಂದು ರೀತಿಯ ಗುಮಾನಿಯಿಂದಲೇ ನೋಡುತ್ತಿದ್ದರು‌. ಆಮೇಲೆ ಒಬ್ಬೊಬ್ಬರಾಗಿ ಬೆಳಗಿನ ತಿಂಡಿ, ಊಟ ಅಂತ ಅವನಿಗೆ ನೀಡತೊಡಗಿದರು. ಹಾಗೆ ನೀಡುವಾಗಲೂ ಅವರ ಕಡೆ ಹೋಗಬೇಡ ಅವರು ಕೆಟ್ಟವರು ಎಂದು ಎರಡೂ ಕಡೆಯವರು ಹೇಳುತ್ತಿದ್ದರು. ಒಳ್ಳೆಯತನಕ್ಕೂ ಕೆಟ್ಟತನಕ್ಕೂ ಅತೀತನಾದ, ಯಾವ ಸೀಮೆಗಳೂ ಇಲ್ಲದ, ಬೌದ್ಧ ಭಿಕ್ಕುವಿನಂತಿದ್ದ ಮುಖೇಶ ಮಾತ್ರ ತಿಂಡಿ,  ಊಟಕ್ಕಿಂತಲೂ ಹೆಚ್ಚು ಸಂತುಷ್ಟನಾಗುತ್ತಿದ್ದುದು ಮೋಟು ಬೀಡಿ ಸಿಕ್ಕಿದಾಗ. ಮಂತ್ರವೊಂದನ್ನು ಜಪಿಸುತ್ತಿರುವಂತೆ, ಪ್ರಪಂಚದ ಆದಿ ಮತ್ತು ಅತ್ಯಂದ ಎಲ್ಲಾ ಕಥೆಗಳೂ ಗೊತ್ತಿರುವಂತೆ ಸದಾ ಚಲಿಸುವ ಅವನ ತುಟಿಗಳು ಯಾರಾದರೂ ಬೀಡಿ ಕೊಟ್ಟರೆ ಇಷ್ಟಗಲ‌ ಅರಳುತ್ತಿತ್ತು. 

ಮುಖೇಶನ ಬಗ್ಗೆ ದಿನಕ್ಕೊಂದರಂತೆ ಕಥೆಗಳು ಹುಟ್ಟಿ ಊರು ತುಂಬಾ ಹಾರಾಡುತ್ತಿದ್ದವು. ಆಗಿನ್ನೂ ಮಕ್ಕಳೇ ಆಗಿದ್ದ ನಮಗೆ ಅವೆಲ್ಲವನ್ನೂ ಹೆಕ್ಕಿ ಒಂದು ಕಡೆ ರಾಶಿ ಹಾಕಿ, ಊಟದ ವಿರಾಮಕ್ಕೆಂದು ಮನೆ ಕಡೆ ಬರುವಾಗಲೋ ಅಥವಾ ಆಟಕ್ಕೆಂದು ಮೀಸಲಿಟ್ಟ ಕೊನೆಯ ಪಿರಿಯಡ್ನಲ್ಲೋ  ಆ ರಾಶಿಯಲ್ಲಿನ ಒಂದೊಂದು ಕಥೆಗಳನ್ನೂ ಆರಿಸಿ ಹೇಳುವ, ಕೇಳಿಸಿಕೊಳ್ಳುವ ಹುಚ್ಚು. ಅವನು ದೊಡ್ಡ ಜ್ಞಾನಿಯಂತೆ, ದೆಹಲಿಯ ಯಾವುದೋ ಒಂದು ವೈಜ್ಞಾನಿಕ ಸಂಸ್ಥೆಯಲ್ಲಿ ಉದ್ಯೋಗಕ್ಕಿದ್ದನಂತೆ, ನಾಲ್ಕು ಫಾರಿನ್ ಭಾಷೆಗಳನ್ನು ಮಾತಾಡಬಲ್ಲನಂತೆ, ಓದಿನ ಗೀಳು ಹೆಚ್ಚಾಗಿ ಕೊನೆಗೆ ಈ ಸ್ಥಿತಿ ತಲುಪಿದ್ದಾನಂತೆ ಅಂತೆಲ್ಲಾ ಒಂದು ಕಡೆ ಗುಲ್ಲಿದ್ದರೆ, ಮತ್ತೊಂದು ಕಡೆ ಅವನೊಬ್ಬ ದೊಡ್ಡ ಶ್ರೀಮಂತ, ಶೋಕಿಲಾಲ. ಆಸ್ತಿಗಾಗಿ ಅಣ್ಣ ತಮ್ಮಂದಿರೇ ಅವನಿಗೆ ಯಾವುದೋ ಮೆಡಿಸಿನ್ ಕೊಟ್ಟು ಹುಚ್ಚನನ್ನಾಗಿ ಮಾಡಿದ್ದಾರೆ ಅನ್ನುವ ಕಥೆಯೂ ಇತ್ತು.  ಮುಂಬೈಯಲ್ಲಿ ಯಾವುದೋ ಒಂದು ಖಾಸಗಿ ಶಾಲೆಯ ಬಸ್  ಡ್ರೈವರ್ ಆಗಿದ್ದ, ಆ ಬಸ್ ಆಕ್ಸಿಡೆಂಟ್ ಆದಮೇಲೆ ಹೀಗಾಗಿದ್ದಾನೆ ಅನ್ನುವ ಕಥೆಗಳೂ ಓಡಾಡುತ್ತಿದ್ದವು. ಇವೆಲ್ಲಕ್ಕಿಂತಲೂ ಹೆಚ್ಚು ಇಂಟರೆಸ್ಟಿಂಗ್ ಅಂತ ನಮಗನ್ನಿಸಿದ ಸಂಗತಿಯೇನೆಂದರೆ, ಆತ ಭಾರತ ಸರಕಾರವೇ ನೇಮಿಸಿ ಪಾಕಿಸ್ತಾನಕ್ಕೆ ಕಳುಹಿಸಿದ್ದ ಗೂಢಾಚಾರಿ, ಗೂಢಾಚಾರಿಕೆ ಮಾಡಿ ಮಾಡಿ ಈ ಸ್ಥಿತಿ ತಲುಪಿದ ಅನ್ನುವುದು.

ಬೆಳ್ಳಂಬೆಳಗ್ಗೆ ಯಾರದಾದರೂ ಮನೆಯ ಮುಂದೆ ಬಿದ್ದಿದ್ದ ಇಂಗ್ಲಿಷ್ ಪೇಪರ್ ಕಾಣೆಯಾಗಿದ್ದರೆ ಅದು ರಾಜಾರೋಶವಾಗಿ ಮುಖೇಶನ ಕಂಕುಳಲ್ಲಿದ್ದುಕೊಂಡು ಊರು ಸುತ್ತುತ್ತಿದ್ದುದು ಅವನು ಓದಿರುವವನು ಅನ್ನುವ ಮಾತಿಗೆ ಪೂರಕ ಸಾಕ್ಷಿ ಒದಗಿಸುತ್ತಿದ್ದರೆ, ಪಾರ್ಕಿಂಗ್ ಮಾಡಿರುತ್ತಿದ್ದ ಲಾರಿ ಹತ್ತಿ  ಸಲೀಸಾಗಿ ಸ್ಟೇರಿಂಗ್ ತಿರುಗಿಸುವ ಅವನ ಗತ್ತು ನೋಡಿದರೆ ಡ್ರೈವರೇ ಏನೋ‌ ಅನ್ನಿಸಿಬಿಡುತ್ತಿತ್ತು. 

ಆದರೆ ಮುಖೇಶ ನಿಜಕ್ಕೂ ಏನಾಗಿದ್ದ? ಜ್ಞಾನಿಯೋ, ಅರೆಹುಚ್ಚನೋ, ಮಾಜಿ ಗೂಢಾಚಾರಿಯೋ? ಅಥವಾ ಜಗದ ಯಾವ ಜಂಜಡವೂ ಬೇಡ ಎಂದು ಪ್ರತೀ ಮಾತಿನ ತುತ್ತ  ತುದಿಯಲ್ಲಿ ಉಳಿದು ಬಿಡುವ ಮೌನವನ್ನಷ್ಟೇ ಹೆಕ್ಕಿಕೊಂಡು ಬದುಕಿಬಿಡುತ್ತೇನೆ ಎಂದು ನಿರ್ಧರಿಸಿಕೊಂಡ ಧ್ಯಾನಿಯೇ? ಅವನ ಧ್ಯಾನವನ್ನೂ, ಕಾಷ್ಠಮೌನವನ್ನೂ, ಅಸಂಖ್ಯ ತಿರುವುಗಳಲ್ಲೂ ನಿಲ್ಲದ ಬದುಕಿನ ವೇಗವನ್ನೂ, ನಿರಂತರತೆಯನ್ನೂ ಅರ್ಥ ಮಾಡಿಕೊಳ್ಳುವ ಸಾಮರ್ಥ್ಯ ಇಲ್ಲದ ನಿಜದ ಹುಚ್ಚರನ್ನೇ ತುಂಬಿಕೊಂಡಿರುವ ಈ ಜಗತ್ತು ಅವನಿಗೆ ಹುಚ್ಚನ ಪಟ್ಟ ಕಟ್ಟಿ ತನ್ನ ಕೀಳರಿಮೆಯನ್ನೂ ಅಹಂಕಾರವನ್ನೂ ಸಂತೈಸಿಕೊಂಡಿತೇ? ಈ ಪ್ರಪಂಚದ ಎಲ್ಲಾ ಅರೆಕೊರೆಗಳನ್ನು ಮೀರಿದ ಶುದ್ಧ ಜಾಗೃತಿಯ ಸ್ಥಿತಿಯೊಂದನ್ನು ಆತ ಸಿದ್ಧಿಸಿಕೊಂಡಿದ್ದನೇ? ಮತ್ತು ಆ ಕಾರಣಕ್ಕಾಗಿಯೇ ಎಲ್ಲ ಬಂಧನಗಳನ್ನು ಕಳಚಿ ಬಂದು ಹುಚ್ಚನಂತೆ, ವಿರಾಗಿಯಂತೆ ವೇಷ ತೊಟ್ಟನೇ? ಊಹೂಂ, ಗೊತ್ತಿಲ್ಲ.

ಇವತ್ತಿಗೂ ಒಂದು ದೊಡ್ಡ ಮಿಸ್ಟರಿಯಂತೆ ಕಾಡುವ ಮುಖೇಶ ಒಂದು ದಿನ ಸರಕಾರಿ ಶಾಲೆಯ ಮೈದಾನದಲ್ಲಿ ಆಟ ಆಡಿಕೊಳ್ಳುತ್ತಿದ್ದ ಮಕ್ಕಳ ಮುಂದೆ ಮಲಯಾಳಂ ಹಾಡೊಂದನ್ನು ತುಂಬ ಅಚ್ಚುಕಟ್ಟಾಗಿ ಹಾಡಿದ್ದ. ಅದು ಅವನ ಅಸ್ತಿತ್ವದ ಬಗ್ಗೆ ಮತ್ತೊಂದು ಹೊಳಹನ್ನು ನೀಡಿತ್ತು. ಮುಂಬೈಯವನೋ ದೆಹಲಿಯವನೋ ಆಗಿದ್ದರೆ ಅವನು ಹಿಂದಿ ಹಾಡಬೇಕಿತ್ತು, ಮಲಯಾಳಂ ಹಾಡಿದ್ದಾನೆ ಅಂದ ಮೇಲೆ ಅವನಿಗೂ ಪಕ್ಕದ ಕೇರಳಕ್ಕೂ ಏನೋ ಸಂಬಂಧವಿರಬೇಕು ಎಂದು ಊರ ಕೆಲವರು ಕೇರಳದ ಪತ್ರಿಕೆಗಳಲ್ಲಿ ಅವನ ಬಗ್ಗೆ ಜಾಹೀರಾತು ಕೊಟ್ಟರು. ಮತ್ತೊಂದಿಷ್ಟು ಮಂದಿ ಒಂದು ಹೆಜ್ಜೆ ಮುಂದೆ ಹೋಗಿ ಅವನು ಊರು ಸೇರಿದ್ದ ಸಮಯದ ಮಲಯಾಳಂ ಪತ್ರಿಕೆಗಳ 'ಕಾಣೆಯಾಗಿದ್ದಾರೆ' ಕಾಲಂನಲ್ಲಿ ಅವನ ಬಗ್ಗೆ ವಿವರಗಳು ಏನಾದರೂ ಇವೆಯಾ ಎಂದು ಹುಡುಕಿದರು. ಆದರೆ ಅವನ ಪೂರ್ವಾಶ್ರಮವನ್ನು ಪತ್ತೆ ಹಚ್ಚುವಲ್ಲಿ ಅವು ಯಾವ ನೆರವನ್ನೂ ನೀಡಲಿಲ್ಲ. ಆಗಲೂ ಮುಖೇಶ ಯಾವುದರ ಪರಿವೆಯೂ ಇಲ್ಲದೆ ಏನನ್ನೋ ಹುಡುಕಾಡುವವನಂತೆ ಅಲ್ಲಿಂದ ಇಲ್ಲಿಗೂ ಇಲ್ಲಿಂದ ಅಲ್ಲಿಗೂ ಎಂದಿನಂತೆ ನಡೆಯುತ್ತಲೇ ಇದ್ದ.

ಸದಾ ಕೋಮು ಸೌಹಾರ್ದತೆ ಕೆಡಿಸಿಕೊಂಡು ಸುದ್ದಿಯಲ್ಲಿರುವ ನಮ್ಮೂರು ಮುಖೇಶನನ್ನು ಮಾತ್ರ ಶುದ್ಧ ಮಾನವೀಯತೆಯಿಂದ ನಡೆಸಿಕೊಳ್ಳುತ್ತಿತ್ತು. ಕೆಲ ಯುವಕರು ಅವನನ್ನು ವರ್ಷಕ್ಕೊಂದು ಬಾರಿ  ಇಷ್ಟಿಷ್ಟು ಉದ್ದ ಇರುತ್ತಿದ್ದ ಉಗುರು ಕತ್ತರಿಸಿ, ಒಪ್ಪವಾಗಿ ಕೂದಲಿಗೆ ಕತ್ತರಿಯಾಡಿಸಿ, ಮೀಯಿಸಿ, ಹೊಸ ಬಟ್ಟೆ ತೊಡಿಸುತ್ತಿದ್ದರು. ಆಗೆಲ್ಲಾ ಅವನ ಮುಖದಲ್ಲಿ ರಾಜಕಳೆ. ಊರ ಕೆಲ ಹಿರಿಯರು ಅವನನ್ನು ಮಾನಸಿಕ ಚಿಕಿತ್ಸಾಲಯಗಳಿಗೂ ಸೇರಿಸಿದ್ದರು. ಆದರೆ ಅವನು ಅದು ಹೇಗೋ ಅಲ್ಲಿಂದ ತಪ್ಪಿಸಿಕೊಂಡು ಮತ್ತೆ ಇಲ್ಲಿಗೇ ಬಂದು ಬಿಡುತ್ತಿದ್ದ. 

ಹೀಗೆ ಪ್ರತಿಯೊಬ್ಬರ ಬದುಕಲ್ಲೂ ಒಂದು ಅವ್ಯಕ್ತ ಪಾತ್ರ ನಿಭಾಯಿಸಿದ್ದ ಮುಖೇಶ ಒಂದು ದಿನ ಹಠಾತ್ತಾಗಿ ಕಾಣೆಯಾದ. ಇಲ್ಲೇ ಎಲ್ಲೋ ಹೋಗಿರುತ್ತಾನೆ, ಬಂದೇ ಬರುತ್ತಾನೆ ಅಂತಲೇ ಎಲ್ಲರೂ ಭಾವಿಸಿದ್ದರು. ಒಂದು, ಎರಡು, ಮೂರು ದಿನಗಳೇ ಕಳೆದರೂ ಆತ ಬರದೇ ಇದ್ದಾಗ ಅವನ ಬಗ್ಗೆ ಮತ್ತಷ್ಟು ಪುಕಾರುಗಳೆದ್ದವು. ಮಸೀದಿಯ ಕಾಣಿಕೆ ಡಬ್ಬಿಯ ದುಡ್ಡನ್ನು ಕದಿಯುತ್ತಿದ್ದ, ಅದಕ್ಕೇ ಅವನನ್ನು ಯಾವುದೋ ಲಾರಿ ಹತ್ತಿಸಿ ಕಳುಹಿಸಿಬಿಟ್ಟಿದ್ದಾರೆ, ಭಜನಾ ಮಂದಿರ ದುಡ್ಡು ಕದ್ದು ಅಲ್ಲೇ ಕೂತು ಎಣಿಸುತ್ತಿದ್ದ, ಅದನ್ನು ನೋಡಿದ ಯಾರೋ ಅವನನ್ನು ದೂರ ಎಲ್ಲೋ ಬಿಟ್ಟು ಬಂದಿದ್ದಾರೆ, ರಾತ್ರಿ ಊರಿಗೇ ನಿದ್ರೆ ಕವಿದ ಮೇಲೆ ಚೆಂದಗೆ ಡ್ರೆಸ್ ಮಾಡಿಕೊಂಡು ಅವನೇ ಮುಂಬೈ ಬಸ್ ಹತ್ತಿ ಹೊರಟು ಹೋಗಿದ್ದಾನೆ ಅಂತೆಲ್ಲಾ ವಾದಗಳಿತ್ತು. ಕಣ್ಣ ಮುಂದೆಯೇ ಪರ್ಸ್ ಬಿದ್ದು ಸಿಕ್ಕರೂ ವಿಸಿಟಿಂಗ್ ಕಾರ್ಡ್ಗಳನ್ನು ಮಾತ್ರ ಕಿಸೆಯೊಳಗೆ ಸೇರಿಸಿಕೊಂಡು ಪರ್ಸ್ ಬಿಸುಟಿ ಹೋಗುತ್ತಿದ್ದ, ನಿಂತಿರೋ ಲಾರಿಗಳಿಗೆ ಹತ್ತಿ ಬೀಡಿ ಮಾತ್ರ ಕೈಗೆತ್ತಿಕೊಂಡು ಇಳಿಯುತ್ತಿದ್ದ ಮುಖೇಶ ದುಡ್ಡು ಕದ್ದಿದ್ದಾನೆ ಅನ್ನುವ ವಾದವನ್ನ ಇವತ್ತಿನವರೆಗೂ ಯಾರೂ ಒಪ್ಪಿಕೊಂಡಿಲ್ಲ. ಅವನನ್ನು ಯಾರಾದರೂ ದೂರ ಕಳುಹಿಸಿದರೋ, ಅಥವಾ ಎಲ್ಲಾ ನೆನಪುಗಳು ಮರುಕಳಿಸಿ ಅವನಾಗಿಯೇ ಮರಳಿ ಹೋದನೋ? ಗೊತ್ತಿಲ್ಲ. ಒಂದಿಷ್ಟು ವರ್ಷಗಳ ಕಾಲ ಬೈರಾಗಿಯಂತೆ ಬದುಕಿ, ಪ್ರಶ್ನೆಗಳನ್ನೂ ಉತ್ತರಗಳನ್ನೂ ಉಳಿಸಿಹೋದ ಮುಖೇಶ ಈಗಲೂ ಊರಿಗೆ ಹೋದಾಗೆಲ್ಲಾ ಕಾಡುತ್ತಾನೆ, ಕಣ್ಣುಗಳು ಅನಪೇಕ್ಷಿತವಾಗಿ ಅವನನ್ನು ಹುಡುಕುತ್ತವೆ. ಎಲ್ಲಾ ಇದ್ದು ನೆನಪಿಸಿಕೊಳ್ಳಲು ಒಂದು ಹಿಡಿಯಷ್ಟೂ ನೆನಪುಗಳನ್ನು ಉಳಿಸದವರ ನಡುವೆ ಏನೂ ಇಲ್ಲದೆ ಒಂದು ತಲೆಮಾರಲ್ಲಿ ಅಸ್ತಿತ್ವದ ಕುರುಹನ್ನು ಉಳಿಸಿಹೋದ ಮುಖೇಶ ಸಾಧಕ ಅನಿಸುತ್ತಾನೆ.  


ಬಿಡದೆ ಸುರಿವ ಮಳೆ ಮತ್ತು ಐಸ್ ಕ್ಯಾಂಡಿ ತಿಮ್ಮಪ್ಪಣ್ಣ.

ಭೀಕರ ನೆರೆಗೆ ಊರು ಕೇರಿ‌ ಮುಳುಗುತ್ತಿದ್ದಂತೆ, ಆಕಾಶ ಕೊರೆದು ಸುರಿಯುವ ಮಳೆ ನಿಲ್ಲುವ ಸೂಚನೆಗಳೇ ಕಾಣದೇ ಇದ್ದಂತೆ, ಆಳುವ ಸರಕಾರ 'ಕಡಲ ತೀರದಲ್ಲಿ ಯಾರೂ ಸುಳಿಯುವಂತಿಲ್ಲ' ಎಂದು ಫರ್ಮಾನು ಹೊರಡಿಸಿಬಿಡುತ್ತದೆ. ಆನಂತರದ ಕಡಲಿನ ಗತ್ತೇ ಬೇರೆ, ಗೈರತ್ತೇ ಬೇರೆ. ಮನುಷ್ಯನ ಒಡನಾಟವಿಲ್ಲದ, ಆಳ ಸಮುದ್ರ ಮೀನುಗಾರಿಕೆಯ ಅಬ್ಬರವಿಲ್ಲದ, ಬೀಚ್ ನೋಡಲು ಬರುವ, ದುಗುಡ ಹೇಳಿಕೊಳ್ಳಲು ಬರುವ, ಒಂದು ಸುಂದರ ಸಂಜೆಯನ್ನು ಕಳೆಯಲು ಬರುವ, ಕಡಲ ಹಾಡು ಕೇಳಿಸಿಕೊಳ್ಳಲು ಬರುವ, ತೀರವನ್ನು ಕೊಳಕಾಗಿಸಲು ಬರುವ, ಕಡಲ ನೀರಿಗೂ ಧರ್ಮಕ್ಕೂ ನಂಟು‌ ಕಲ್ಪಿಸುವ ಮನುಷ್ಯ ಜೀವಿ ಇಲ್ಲದ, ದೂರದಲ್ಲಿ ಕೂತ ಗಾರ್ಡ್ ಆಗೊಮ್ಮೆ ಈಗೊಮ್ಮೆ ಊದುವ ಸೀಟಿಯ ಸಣ್ಣಗಿನ ಸದ್ದು ಬಿಟ್ಟರೆ ಇಡೀ ಕಡಲು ನಿರ್ಮಾನುಷ್ಯ, ನಿರಾಡಂಬರ.

ಮಳೆಯೇ ಕಡಲಾದಂತೆ, ಕಡಲೇ ಮಳೆಯಾದಂತೆ ಭ್ರಮೆ ಹುಟ್ಟಿಸುವ ವಿಹಂಗಮ ದೃಶ್ಯ ಕಾವ್ಯವನ್ನು ಹೂಬೇಹೂಬು ಕಾಣಬೇಕೆಂದರೆ ಮಳೆಯಲಿ ಕಡಲನೂ, ಕಡಲಲಿ ಮಳೆಯನೂ ನೋಡಬೇಕು, ಅನುಭಾವಿಸಬೇಕು. ಆಕಾಶದೆತ್ತರಕ್ಕೆ ಚಿಮ್ಮುವ ಕಡಲ ನೀರು, ಅಷ್ಟೇ ರಭಸದಿಂದ ಸುರಿಯುವ ಮಳೆ, ತೀರದ ತೋಟದಲ್ಲಿ ಯಾವುದೋ ಭ್ರಮೆಗೊಳಗಾದಂತೆ ಓಲಾಡುವ ಕಂಗು, ಜೋರು ಗಾಳಿಗೆ ಬೀಳದಂತೆ ನೆಟ್ಟಗೆ ನಿಲ್ಲಲು ಶಕ್ತಿ ಮೀರಿ ಪ್ರಯತ್ನಿಸುವ ತೆಂಗು ಮತ್ತದರ ಗರಿಗಳು, ಬುಡ ಸಮೇತ ಉರುಳಿ ಬೀಳುವ ಬಾಳೆ ಗಿಡಗಳು, ಕಿನಾರೆಯಲ್ಲಿ ಸಹಸ್ರ ಸಹಸ್ರ ವರ್ಷಗಳಿಂದಲೂ ಬೀಡು ಬಿಟ್ಟಿರುವ, ಸೃಷ್ಟಿಯ ಪರಮ ರಹಸ್ಯವನ್ನೂ, ಕೌತುಕವನ್ನೂ, ಸೌಂದರ್ಯವನ್ನೂ, ಅತಿಮಾನುಷತೆಯನ್ನೂ ಶತ ಶತಮಾನಗಳಿಂದಲೂ ಒಡಲೊಳಗೆ ಬಚ್ಚಿಕೊಂಡಿರುವ ಕಲ್ಲುಗಳನ್ನು, ಪುಟ್ಟ ಬಂಡೆಗಳನ್ನು ಅಪ್ಪಿ ಹಿಡಿದಿರುವ ಕಡಲ ಏಡಿಗಳು, ಉಬ್ಬರ ಇಳಿದಾಗೊಮ್ಮೆ ಹೊಳೆವ ಅವುಗಳ ಕಡು ಕಪ್ಪು ಮೈ, ಬಳಕ್ಕನೆ ನೆಗೆದು ಪಟ್ಟನೆ ಮಾಯವಾಗುವ ಬೆಳ್ಳನೆಯ ಮೀನುಗಳು, ತೀರಕ್ಕೆ ತಂದು ಸುರಿದ ರಾಶಿ ರಾಶಿ ತ್ಯಾಜ್ಯ, ಮನುಷ್ಯನ ಆಸೆ ಬುರುಕತನಕ್ಕೆ ಸಾಕ್ಷ್ಯ ಹೇಳುವ ಅವನದೇ ಅವಶೇಷಗಳು, ಬಸ್‌ಗಳ ಓಡಾಟಕ್ಕೆ ಹೆದರಿ ಮುದುರಿರುವ ತಾರು ರಸ್ತೆಗಳ ಮೇಲೆ ಈಗಷ್ಟೇ ಬಿಡಿಸಿದ ರಂಗೋಲಿಯ ಚುಕ್ಕಿಗಳ ಹಾಗೆ ಪಿಳಿಪಿಳಿ‌ ಕಣ್ಣು ಬಿಡುತ್ತಿರುವ ಮನುಷ್ಯನಿನ್ನೂ ಹೆಸರಿಟ್ಟಲ್ಲದ ಅಸಂಖ್ಯಾತ ಕಡಲ ಜೀವಿಗಳು... ಕಡಲತಡಿಯ ಊರು ಒಂದು ಅಕಾಲದ ಮೌನ ಹೊದ್ದು ಕೊಂಡು ಕೂತಿರಬೇಕಾದರೆ, ಕಡಲು ಭೋರ್ಗರೆಯುವ ಸದ್ದಿನ ಸೆರಗನ್ನು ಇಡೀ ಊರಿನ ಮೇಲೆ ಹೊದಿಸುವ ಬೆಚ್ಚನೆಯ ಭಾವವನ್ನು, ಈ ಜೋರು ಮಳೆಯಲಿ ಕಡಲಿಲ್ಲದೂರಲಿ ಕೂತು ಧೇನಿಸುತ್ತಿರಬೇಕಾದರೆ ಇನ್‌ಬಾಕ್ಸಲ್ಲಿ ಬಂದು ಕೂತ ಮೆಸೇಜೊಂದು "ಐಸ್‌ಕ್ಯಾಂಡಿ ತಿಮ್ಮಪ್ಪಣ್ಣ ತೀರಿಹೋದರು" ಎಂದು ಸಣ್ಣಗೆ ಉಸಿರಿತ್ತು ; ಧ್ಯಾನ ಅದುರಿಬಿತ್ತು.

ಹೇಳಿ-ಕೇಳಿ, ಅನುಮತಿ ಪಡೆದು ಬರದ ಸಾವಿಗೂ, ಪಟ್ಟೆಂದು ಸುರಿವ ಮಳೆಗೂ ಅವಿನಾಭಾವ. ಮಧ್ಯೆ ರೋಗದ್ದೋ, ಮೋಡದ್ದೋ ಪಾರುಪತ್ಯವಿರುತ್ತದ್ದಾರೂ ಕೆಲವೊಮ್ಮೆ ಯಾವ ಪಾರುಪತ್ಯವೂ ಇಲ್ಲದಂತೆ ಎರಡೂ ಆವರಿಸಿಕೊಂಡು ಬಿಡುತ್ತದೆ ; ಈಗಷ್ಟೇ ಸರಿಯಿದ್ದ ತಂತಿಯೊಂದು ಕಣ್ಣು ಹೊರಳಿಸುವಷ್ಟರಲ್ಲಿ ತಟ್ಟನೆ ಕಡಿದು ಬಿದ್ದಂತೆ. ಮಳೆ-ಸಾವು ಎರಡನ್ನೂ ಬೇಡ ಎಂದು ತಡೆದು ನಿಲ್ಲಿಸುವ, ಬೇಕು ಎಂದು ಬರಸೆಳೆದು ಅಪ್ಪಿಕೊಳ್ಳುವ ಯಾವ ಶಕ್ತಿಯೂ ಪ್ರಪಂಚದಲ್ಲಿಲ್ಲ. ಇಷ್ಟ ಇದ್ದರೂ, ಇರದಿದ್ದರೂ ಬಂದಾಗ ಎರಡನ್ನೂ ಒಪ್ಪಿಕೊಳ್ಳಲೇಬೇಕು, ಒಪ್ಪಿಸಿಕೊಳ್ಳಲೇಬೇಕು.

ನಾಲ್ಕೂವರೆ ಅಡಿ ಎತ್ತರವಿದ್ದ ಬಹುದೊಡ್ಡ ವ್ಯಕ್ತಿತ್ವದ ತಿಮ್ಮಪ್ಪಣ್ಣನದು ಒಂಭತ್ತು ದಶಕಗಳ ಸಾರ್ಥಕ ಜೀವನ. ಬದುಕಿನ ಬಹುಪಾಲು ಅವಧಿಯನ್ನು ಅವರಿವರ ಗದ್ದೆಯಲ್ಲಿ ದುಡಿಯುತ್ತ ಕಳೆದ ಅವರು ಬದುಕಿನ ಇಳಿ ಸಂಜೆಯಲ್ಲಿ ಐಸ್‌ಕ್ಯಾಂಡಿ ಮಾರಾಟದತ್ತ ಹೊರಳಿಕೊಂಡಿದ್ದರು. ಶಾಲೆ ಬಿಡುವ ಹೊತ್ತಾಗುತ್ತಿದ್ದಂತೆ ಸೈಕಲ್‌ಗೆ ದೊಡ್ಡ ಶಬ್ದದ ಬೆಲ್ ಸಿಕ್ಕಿಸಿಕೊಂಡು ಹಿಂಬದಿಯಲ್ಲಿ ಐಸ್‌ಕ್ಯಾಂಡಿ ಡಬ್ಬ ಪೇರಿಸಿ ಶಾಲೆಯ ಹತ್ತಿರ ಬಂದು ಬಿಡುತ್ತಿದ್ದರು. ಎಲ್ಲಾ ಕ್ಯಾಂಡಿ ಮಾರಾಟವಾದ ಮೇಲೆ ಅರ್ಧ ಕಿಲೋಮೀಟರ್ ಸೈಕಲ್ ತುಳಿದು ಹಳೆಯ ಶರಾಬು ಅಂಗಡಿಯ ಜಗಲಿಯಲ್ಲಿ ಕುಳಿತು ಹರಟೆ ಹೊಡೆದು ಅಗ್ಗದ ಸರಾಯಿ ಕೊಂಡು ಮತ್ತೆ ಮನೆ ತಲುಪಿಬಿಡುತ್ತಿದ್ದರು. ಆಮೇಲೆ ನಿರುಪದ್ರವಿ ತಿಮ್ಮಪ್ಪಣ್ಣ ಕಾಣಲು ಸಿಗುತ್ತಿದ್ದುದು ಮರುದಿನ ಮಧ್ಯಾಹ್ನವೇ.

ಐಸ್‌ಕ್ಯಾಂಡಿಗೆಂದೇ ಹುಟ್ಟಿದಂತಿದ್ದ ನಾವೊಂದಿಷ್ಟು ಹುಡುಗಿಯರು ಎಷ್ಟು ಗಹನವಾಗಿ ಪಾಠದಲ್ಲಿ ಮುಳುಗಿದ್ದರೂ ತಿಮ್ಮಪ್ಪಣ್ಣನ ಬೆಲ್ ಸದ್ದು ಕೇಳಿಸುತ್ತಿದ್ದಂತೆ ಎಲ್ಲಾ ಗಮನ ಆ ಕಡೆ ಸರಿದುಬಿಡುತ್ತಿತ್ತು. ಕಡು ಗುಲಾಬಿ ಬಣ್ಣದ ಕ್ಯಾಂಡಿ ಅಥವಾ ಬೆಲ್ಲ ಕ್ಯಾಂಡಿ ಕೊಂಡು‌ ಅಲ್ಲೇ ಇದ್ದ ಕಲ್ಲಿನ‌ ಮೇಲೆ ಕೂತು ಅವನು ಹೇಳುತ್ತಿದ್ದ ಕಥೆಗಳನ್ನೂ, ಪಾಡ್ದನಗಳನ್ನೂ ಕೇಳುತ್ತಿದ್ದರೆ ಸಮಯ ಸರಿದದ್ದೇ ಗೊತ್ತಾಗುತ್ತಿರಲಿಲ್ಲ. ಆಗಷ್ಟೇ ಬೀದಿ ಬದಿಯ ಕನಸುಗಳನ್ನೂ ಹೆಕ್ಕಲು ಕಲಿಯುತ್ತಿದ್ದ ನಾವು ನಿಜಕ್ಕೂ‌ ಮುಗಿ ಬೀಳುತ್ತಿದ್ದುದು ಅವನು ಮಾರುತ್ತಿದ್ದ ಕ್ಯಾಂಡಿಗೋ ಅಥವಾ ಅವನ ಕಥೆಗಳಿಗೋ ಅನ್ನುವುದೂ ಇವತ್ತಿಗೂ ಅರ್ಥವಾಗುವುದಿಲ್ಲ. ಮೊನ್ನೆ ಮಂಗಳೂರಿನ 'ಐಡಿಯಲ್'ನಲ್ಲಿ ಬೆಲ್ಲ ಕ್ಯಾಂಡಿ ಸಿಗುತ್ತೆ ಅಂತ ಸುದ್ದಿ ಆದಾಗ ತುಂಬ ಆಸೆ ಪಟ್ಟು ಕೊಂಡಿದ್ದೆವು. ಎಳೆಯ ಮಗುವೊಂದು ಇದ್ದುದರಲ್ಲಿ ದೊಡ್ಡದನ್ನು ಆರಿಸಿ ತಿನ್ನುವಂತೆ ಅಲ್ಲಿದ್ದ ಅಷ್ಟೂ ಕ್ಯಾಂಡಿಗಳನ್ನು ಪರಿಶೀಲಿಸಿ, ಕೊಂಡು ಬಾಯಿಗಿಡುತ್ತಿದ್ದಂತೆ ಮುಖ ಹುಳ್ಳಹುಳ್ಳಗೆ. ಯಾಕೋ ತಿಮ್ಮಪ್ಪಣ್ಣನ ಐಸ್‌ಕ್ಯಾಂಡಿಯಂತಿಲ್ಲ ಎಂದು ನಮ್ಮ‌ನಮ್ಮಲ್ಲೇ ಲೊಚಗುಟ್ಟುತ್ತಿರುವಾಗ, ಒಂದು ಕ್ಯಾಂಡಿಗಾಗಿ ದೊಡ್ಡ ಸಿದ್ಧತೆಯೊಂದನ್ನೇ ಮಾಡಿಕೊಂಡು ಬಂದಂತೆ ವರ್ತಿಸುತ್ತಿದ್ದ ನಮ್ಮನ್ನು ಸುಮಾರು ಹೊತ್ತಿನಿಂದ ಗಮನಿಸುತ್ತಿದ್ದ ಕ್ಯಾಶ್ ಕೌಂಟರ್‌ನಲ್ಲಿದ್ದ ಹುಡುಗ ಮುಸಿ ಮುಸಿ ನಗುತ್ತಿದ್ದ.‌ ಹಿಂದೊಮ್ಮೆ ರಂಝಾನಿನಲ್ಲಿ 'ಉಪವಾಸಿಗನ ಹಸಿವು ತಣಿಸಿದವನಿಗೂ ಉಪವಾಸಿಗನಷ್ಟೇ ಪುಣ್ಯವಿದೆ' ಅನ್ನುವ ನಂಬಿಕೆಗೆ ಮತ್ತೊಂದಿಷ್ಟು ರೆಕ್ಕೆ ಪುಕ್ಕ ಸೇರಿಸಿ ತಿಮ್ಮಪ್ಪಣ್ಣನಿಗೆ ಹೇಳಿದ್ದು, ಅವನು ನಮ್ಮ ಅಭೋದ 'ಪುಣ್ಯದ' ಕಥೆಯನ್ನು ನಂಬಿದಂತೆ ನಟಿಸಿ ಒಂದೆರಡು ಕ್ಯಾಂಡಿ ಜಾಸ್ತಿ ಕೊಟ್ಟದ್ದು, ನಮ್ಮ ಬುದ್ಧಿವಂತಿಕೆಗೆ ನಾವೇ ಬೆನ್ನುತಟ್ಟಿಕೊಂಡ ಬೋಳೇತನ ನೆನಪಾಗಿ ನನಗೂ ನಗು ಬಂತು. ಬಿಡಿ, ಅದೊಂಥರಾ ಇಡೀ ಪ್ರಪಂಚ ದಡ್ಡರ ಸಂತೆ, ಇಲ್ಲಿ ನಾನು ಮತ್ತು ನನ್ನ ಗೆಳೆಯರ ಬಳಗ ಮಾತ್ರ ಬುದ್ಧಿವಂತರು ಎಂದು ನಂಬಿಕೊಂಡಿದ್ದ ಕಾಲ.

ಆಗೆಲ್ಲಾ ಮಂಗಳಮುಖಿಯರು ಊರೊಳಗೆ, ಅದರಲ್ಲೂ ನಮ್ಮಂತಹ ಹಳ್ಳಿಯೆಡೆಗೆ ಬರುತ್ತಿರಲಿಲ್ಲ. ಹಾಗೊಂದು ವೇಳೆ ಬಂದು ಬಿಟ್ಟರೆ ಊರ ಎಲ್ಲಾ ಮನೆಗಳ ಕಿಟಕಿಗಳು ಮುಚ್ಚಿಕೊಂಡುಬಿಡುತ್ತಿದ್ದವು. ಯಾವುದೋ ಅರಿಯದ ಭೀತಿ, ಅನ್ಯಗ್ರಹ ಜೀವಿಗಳೇನೋ ಅನ್ನುವ ರೀತಿಯಲ್ಲಿ ಇಡೀ ಊರು ಅವರೊಂದಿಗೆ ವರ್ತಿಸುತ್ತಿದ್ದರೆ ಮುಚ್ಚಿದ ಕಿಟಕಿಗಳ ಹಿಂದಿನ ಸಂದಿನಿಂದ ಒಂದು ಭಯಮಿಶ್ರಿತ ಕುತೂಹಲದಿಂದಲೇ ಅವರನ್ನು ನಾವು ಮಕ್ಕಳು ನೋಡಿ , ದೊಡ್ಡವರಿಗೆ ಗೊತ್ತಾಗದಂತೆ ನಮ್ಮನಮ್ನಲ್ಲೇ ಮೆಲ್ಲಗೆ ಚರ್ಚಿಸುತ್ತಿದ್ದೆವು. ಯಾವ ಕಾರಣಕ್ಕಾಗಿ ಅವರನ್ನು ಊರಿಂದ ದೂರ ಇಡುತ್ತಿದ್ದಾರೆ ಎನ್ನುವ ಕೌತುಕ ನಮಗೆ. ಮನುಷ್ಯ,ಅವನ ಅಭದ್ರತಾ ಭಾವ, 'ತನ್ನದು ಮಾತ್ರ' ಅನ್ನುವ ಅತಿ ಸ್ವಾರ್ಥ, ಅಂತಸ್ತು, ಜಾತಿ, ಕುಟುಂಬ ಕೊನೆಗೆ ತನ್ನ‌‌ ಲಿಂಗದ ಬಗ್ಗೆಯೂ ಅವನಿಗಿರುವ ಮೇಲರಿಮೆ, ಸಹ ಮನುಷ್ಯರ ಬಗೆಗೆ ಇರುವ ತಾತ್ಸಾರ ಇವೆಲ್ಲಾ ಅರ್ಥವಾಗುವ ವಯಸ್ಸು ಅದು ಅಲ್ಲವೇ ಅಲ್ಲ. ಹೀಗಿದ್ದೂ ಎಲ್ಲರ ಕಣ್ಣು ತಪ್ಪಿಸಿ ಒಮ್ಮೆ ಅವರ ಜೊತೆ, ದೂರ ನಿಂತುಕೊಂಡಾದರೂ ಸರಿ ಮಾತಾಡಬೇಕು‌ ಅಂದುಕೊಳ್ಳುತ್ತಿದ್ದೆ.

ಹೀಗಿರುವಾಗಲೇ ಒಂದು ದಿನ ಸಂಜೆ ಶಾಲೆ ಬಿಟ್ಟ ಮೇಲೆ ತಿಮ್ಮಪ್ಪಣ್ಣನ ಕಥೆ ಕೇಳುತ್ತಾ ಕ್ಯಾಂಡಿ ಮೆಲ್ಲುತ್ತಿರಬೇಕಾದರೆ ಅದೇ ಕಡೆಯಿಂದ ಮಂಗಳಮುಖಿಯೊಬ್ಬರು ನಡೆದುಕೊಂಡು ಹೋಗುತ್ತಿದ್ದರು.‌ ಅವರೊಮ್ಮೆ ನಿಂತುಕೊಂಡು ನಮ್ಮತ್ತ ನೋಡಿದೊಡನೆ ನಮ್ಮ‌ ಕುತೂಹಲವೆಲ್ಲ ಉಡುಗಿ ವಿಚಿತ್ರ ಭಯ ಹುಟ್ಟಿಕೊಂಡಿತು.‌ ಅಲ್ಲಿಂದ ಓಡುವ ಹವಣಿಕೆಯಲ್ಲಿದ್ದಾಗ ತಿಮ್ಮಪ್ಪಣ್ಣ ಅವರನ್ನು ಹತ್ತಿರ ಕರೆದು ಒಂದು ಕ್ಯಾಂಡಿ‌ ಕೊಟ್ಟು, ಹೆಗಲು ಬಳಸಿ ಯಾವುದೋ ಜನ್ಮದ ಆತ್ಮೀಯ ಮಿತ್ರನೆಂಬಂತೆ ಮಾತಿಗೆ ನಿಂತರು. ನಮ್ಮ ಮುಂದೆ ಪ್ರಪಂಚದ ಅತ್ಯದ್ಭುತ ಘಟನೆಯೊಂದು ಸದ್ದಿಲ್ಲದೆ ಘಟಿಸುತ್ತಿರುವ ಭಾವ. ಮಂಗಳಮುಖಿಯರೂ ನಮ್ಮಂತೆಯೇ ಮನುಷ್ಯರು, ತಾನಾಗಿ ಎಂದೂ ತೊಂದರೆ ಕೊಡುವವರಲ್ಲ ಅಂತ ಬದುಕಿನಲ್ಲಿ ಮೊದಲ ಬಾರಿ ಅನಿಸಿದ್ದು ಆ ದಿನ. ಲಿಂಗ ಸಮಾನತೆಯ ಬಗ್ಗೆ ಉದ್ದುದ್ದ ಭಾಷಣ ಬಿಗಿದು, ಪ್ರಶಸ್ತಿ ಗಿಟ್ಟಿಸಿ ತನ್ನ ಮೂಗಿನಡಿಯಲ್ಲೇ ನಡೆಯುವ ಅಸಮಾನತೆಯನ್ನು ಅತೀವವಾಗಿ ನಿರ್ಲಕ್ಷ್ಯಿಸುವವರ ಮುಂದೆ ಓದು ಬರಹ ಬಾರದ, ಒಂದು ಪುಸ್ತಕವನ್ನೂ ಓದಿರದ, ವೇದಿಕೆ ಹತ್ತಿ‌ ಗೊತ್ತೇ ಇಲ್ಲದ ತಿಮ್ಮಪ್ಪಣ್ಣನಂತಹ ಕಾಯಕ‌ ಜೀವಿಗಳು ದೊಡ್ಡವರು ಅನ್ನಿಸುತ್ತಾರೆ.

ಕಳೆದ ಬಾರಿ ಊರಿಗೆ ಬಂದಿದ್ದಾಗ ಅಪ್ಪ "ತಿಮ್ಮಪ್ಪಣ್ಣ ಈಗ ಮೊದಲಿನಂತಿಲ್ಲ. ಮನೆ ಬಿಟ್ಟು ಹೊರಗೆ ಬರುವುದೇ ಇಲ್ಲ, ಅರಳುಮರಳು ಆದಂತಿದೆ" ಅಂದಿದ್ದರು. ನಾವು ದಂಡು ಕಟ್ಟಿ ಅವರನ್ನು ಒಮ್ಮೆ ಭೇಟಿಯಾಗಲೆಂದು ಹೋದೆವು. ಅವರ ಮನೆಯ ವಿನ್ಯಾಸ ಸಂಪೂರ್ಣ ಬದಲಾಗಿತ್ತು. ಹಂಚಿನ ಪುಟ್ಟ ಮನೆಯಿದ್ದ ಜಾಗದಲ್ಲಿ ತಾರಸಿ ಮನೆ ತಲೆ ಎತ್ತಿತ್ತು. ಮನೆಯ ಪಕ್ಕದಲ್ಲಿ ಇದ್ದಿದ್ದ ಹಲಸಿನ ಮರ ಕಾಣೆಯಾಗಿತ್ತು. ಆದರೆ ನಮ್ಮ ಹಲವು ಕಲ್ಪನೆಗಳಿಗೆ, ತಿಮ್ಮಪ್ಪಣ್ಣನೇ ಹೇಳುತ್ತಿದ್ದ ನಾಗರಾಜನ ಕಥೆಗಳಿಗೆ ಮೂಲಾಧಾರವಾಗಿದ್ದ ಸಂಪಿಗೆ ಮರ ಅಲ್ಲೇ ಬಿಮ್ಮನೆ ನಿಂತಿತ್ತು. ಆ ಮರದಡಿಯಲ್ಲಿ ಹಳೆಯ ಬಿದಿರಿನ ಖುರ್ಚಿಯೊಂದರಲ್ಲಿ ಏನನ್ನೋ ಕೈಯಲ್ಲಿ ಹಿಡಿದುಕೊಂಡು ಸೂಕ್ಷ್ಮವಾಗಿ ನೋಡುತ್ತಾ ಕನ್ನಡಕ ಧರಿಸಿ ಕೂತಿದ್ದ ಅವನು. ಹತ್ತಿರ ಹೋಗಿ ನೋಡಿದರೆ ಹೊಚ್ಚ ಹೊಸತರಂತಿದ್ದ ಬಟ್ಟೆಯೊಂದನ್ನು ಹೊಲಿಯುತ್ತಿದ್ದ, ಬಾಯಲ್ಲಿ ಅದೇನೋ ಮಣಗುಟ್ಟುತ್ತಿದ್ದ.

ಅವನ ಪಕ್ಕದಲ್ಲಿ ಮೊಣಕಾಲೂರಿ ಕೂತು ನನ್ನ ಪರಿಚಯ ಹೇಳಿದೆ. ಅವನಿಗೆಷ್ಟು ಅರ್ಥವಾಯಿತೋ ಬಿಟ್ಟಿತೋ ಗೊತ್ತಿಲ್ಲ , ಒಮ್ಮೆ ಬೊಚ್ಚು ಬಾಯಿ ಬಿಟ್ಟು ನಕ್ಕ. ನಾನು "ನನಗೆ ಕ್ಯಾಂಡಿ ಬೇಕು" ಅಂದೆ. ಅವನು ಮತ್ತೆ ನಕ್ಕ. ಆ ನಗುವಿನಲ್ಲಿ ಬಾಲ್ಯ, ಯೌವ್ವನ ಮತ್ತು ವೃದ್ಧಾಪ್ಯದ ಬ್ರಹ್ಮಾಂಡ‌ ಕಂಡಂತಾಯಿತು. ನಾನು ಬೆಚ್ಚಿ ಬಿದ್ದು ಒಂದು ಹೆಜ್ಜೆ ಹಿಂದೆ ಸರಿದ. ಅಷ್ಟರಲ್ಲಿ ಅವನ‌ ಮೊಮ್ಮಗ ಕಾಫಿ ತಂದು ಕೈಗಿತ್ತ. ತಿಮ್ಮಪ್ಪಣ್ಣ ನಡುಗುತ್ತಿರುವ ಕೈಯಿಂದಲೇ ಸನ್ನೆ ಮಾಡಿ ಹತ್ತಿರ ಕರೆದು, "ನನಗೊಂದು ಹೊಸ ಬಟ್ಟೆ ಬೇಕಿತ್ತು, ತಂದು ಕೊಡುತ್ತೀಯಾ?" ಕೇಳಿದ. ನಾನು ಆಗಲಿ‌ ಎಂದು ತಲೆಯಾಡಿಸಿದೆ. ಅಲ್ಲೇ ಇದ್ದ ಮೊಮ್ಮಗ "ಹೊಸ ಬಟ್ಟೆ ತರೋದು, ಅದನ್ನು ಬೇಕಂತಲೇ  ಕತ್ತರಿಸುವುದು, ಮತ್ತೆ ಹೊಲಿಯುವುದು, ಮತ್ತೆ ಹರಿಯುವುದು. ಇದೇ ಕೆಲ್ಸ ಇವ್ರಿಗೆ, ಮಧ್ಯೆ ನಿಂದೇನು?" ಅಂತ ಸಿಡಿಸಿಡಿಯಾದ. ಕೈಯಲ್ಲಿದ್ದ ಕಾಫಿ ಯಾಕೋ ಕಹಿ ಎನಿಸಿತು. ಒಂದೇ ಗುಟುಕಿಗೆ ಅದನ್ನು ಕುಡಿದು ಕಪ್ ಕೊಟ್ಟು ವಾಪಾಸ್ ಬಂದೆ.‌ ಮನೆ ತಲುಪುವ ಹೊತ್ತಿಗೆ ಮನಸ್ಸೂ ಕಹಿ ಕಹಿ.

ಇಲ್ಲೀಗ ಸುರಿಯುತ್ತಿರುವ ಮಳೆಯಲ್ಲಿ ಕೊನೆಯ ಬಾರಿ ಅವನನ್ನೊಮ್ಮೆ ನೋಡಿಕೊಂಡು ಬರುತ್ತೇನೆ ಎಂದು ಹೊರಟು ನಿಂತೆ. ಆರ್ದ್ರ ಮನಸ್ಸು ಪದೇ‌ಪದೇ ಅವನನ್ನು ನೆನೆದು ಭಾವುಕವಾಗುತ್ತಿದ್ದರೆ, ಅಪ್ಪ "ತುಂಬಿ ಹರಿಯುತ್ತಿರುವ ತೋಡು ದಾಟಿ ನೀನೀಗ ಹೋಗಕೂಡದು" ಎಂದು ಹೇಳಿಬಿಟ್ಟರು. ಅವನ‌ ಮನೆಯ ಪಕ್ಕ ಹರಿಯುತ್ತಿರುವ ತೋಡು ಅಲ್ಲೆಲ್ಲೋ‌ ದೂರ ಹರಿದು, ಮೊನ್ನೆ ಕಾಫಿ ಡೇಯ ಸಿದ್ಧಾರ್ಥ ಹಾರಿ ಆತ್ಮಹತ್ಯೆ ‌ಮಾಡಿಕೊಂಡರಲ್ಲಾ, ಅದೇ ನೇತ್ರಾವತಿಯನ್ನು ಸೇರುತ್ತದೆ. ‌ಅವಳು ಸಮುದ್ರ ರಾಜನ‌ ಪ್ರಿಯ ಸಖಿಯಂತೆ, ನನಗದು ಗೊತ್ತಿಲ್ಲ. ಅರಬ್ಬೀ ಕಡಲನ್ನು ಸೇರುವ ಅವಳು ಅಲ್ಲಿ ನದಿಯೆಂಬ ಅಸ್ತಿತ್ವ ಕಳೆದುಕೊಳ್ಳುತ್ತಾಳೆ, ಭೋರ್ಗರೆಯುತ್ತಾಳೆ, ಮತ್ತೆ ಮಳೆಯಾಗುತ್ತಾಳೆ, ಯಾರದೋ ಬದುಕಲ್ಲಿ ಹಸಿರಾಗುತ್ತಾಳೆ. ನದಿ ಮೂಲ ಹುಡುಕಬಾರದು ಅಂತಾರೆ, ನನ್ನಂತಹ ಪರಮ ದಡ್ಡರಿಗೆ‌ ಅದೂ ಅರ್ಥವಾಗುವುದಿಲ್ಲ. ಆದರೆ ಮನುಷ್ಯತ್ವದಂತಹ ಎಂದೂ ಬತ್ತದ ನದಿಗಳ ಮೂಲ ಮಾತ್ರ ತಿಮ್ಮಪ್ಪಣ್ಣನಂತಹ ಮನುಷ್ಯರ ಎದೆಯ ಕವಾಟವೇ ಆಗಿರುತ್ತದೆ.

ಸೋಮವಾರ, ಆಗಸ್ಟ್ 26, 2019

ಬೆಳಕು ಸೃಜಿಸುವ ಶಾಪಗ್ರಸ್ಥೆ ದೇವಕನ್ಯೆ.



ಈ ಬಿಸಿಲು ಕಾಲದ ಮಧ್ಯಾಹ್ನದ ಉರಿ ಬಿಸಿಲಿನಲ್ಲಿ, ತೊಡೆಯ ಮೇಲೆ ಲ್ಯಾಪ್‌ಟಾಪ್ ಇಟ್ಟುಕೊಂಡು ಬರಹದಲ್ಲಿ ಟೈಪಿಸಲಾ ಇಲ್ಲ ನುಡಿ ಆದೀತಾ ಎನ್ನುವ ಪುಟ್ಟ ಗೊಂದಲವನ್ನಿಟ್ಟುಕೊಂಡು, ಹೊತ್ತಲ್ಲದ ಹೊತ್ತಿನಲ್ಲಿ ಒಂದು ಬಿಸಿಲು ಕೋಲು ಮುಖದ ಮೇಲೆ ಸುಮ್ಮನೆ ಹಾಯ್ದು ಹೋಗಲಿ ಎಂದು ಸುಳ್ಳೇ ಸುಳ್ಳು ನಿರೀಕ್ಷಿಸುತ್ತಾ ನಮ್ಮೂರ ಒಬ್ಬ ಚೆಂದದ ಹೆಂಗಸಿನ ಕುರಿತೂ, ಆಕೆಯ ಒಳ್ಳೆಯತನಗಳ ಕುರಿತೂ, ಕಮಟು ವಾಸನೆಯ ಜೋಳಿಗೆಯ ಕುರಿತೂ, ಆಕೆಯ ಬಾಯಿಯಿಂದ ಸದಾ ತೇಲಿಬರುವ ಯಾವುದೋ ಸಾರಾಯಿಯ ವಾಸನೆಯ ಕುರಿತೂ ಯೋಚಿಸುತ್ತಿದ್ದೇನೆ.

ನಮ್ಮೂರ ಪ್ರತಿ ಮದುವೆಯಲ್ಲೂ ಬರ ಬರ ಸೀರೆಯ ಸದ್ದು ಮಾಡುತ್ತಾ, ನಿಮಿಷಕ್ಕೊಮ್ಮೆ ಓಲೆ ಕಿವಿಯನ್ನು ಬಿಗಿಯಾಗಿ ಅಪ್ಪಿಕೊಂಡಿದೆಯಾ ಎಂದು ಪರೀಕ್ಷಿಸುತ್ತಾ ಸಂಭ್ರಮದಿಂದ ಓಡಾಡುವ ಸುಂದರಿಯೆಂದರೆ ಊರವರಿಗೆಲ್ಲಾ ವಿಶೇಷ ಆಸ್ಥೆ. ಸದಾ ಪಾಡ್ದನ ಹಾಡುವ, ಪ್ರಪಂಚದ ಪ್ರತಿ ಆಗು ಹೋಗಿಗೂ ತನ್ನದೇ ವಿಶಿಷ್ಟ ಶೈಲಿಯಲ್ಲಿ ‌ಪ್ರತಿಕ್ರಿಯಿಸುವ ,ಪ್ರತಿ ಘಟನೆಯ ಹಿಂದಿನ ಗೂಢ ಕಾರಣಗಳನ್ನು ಕಂಡುಹಿಡಿದು ಬೊಚ್ಚು ಬಾಯಿ ಅಗಲಿಸಿ ನಗುವ ಆಕೆಯ ಬಳಿ ಮಾತಿಗೆ ಕೂತರೆ ಬಹುದೊಡ್ಡ ಅನುಭವದ ಖಜಾನೆಯೇ ತೆರೆದಂತಾಗುತ್ತದೆ. ಕರಾವಳಿಯ ಹವೆ, ಪಂಚಾಯತ್ ರಾಜಕೀಯ, ಯಾರದೋ ಮನೆಯ ಪ್ರೇಮ‌, ಜಾತಿ ಸಂಘರ್ಷ ಹೀಗೆ ಸುಂದರಿಗೆ ಗೊತ್ತಿಲ್ಲದ ಸಂಗತಿಗಳೇ ಇಲ್ಲ. ಯಾವ ಕಿಟಕಿಯಿಂದ ನೋಡಿದರೂ, ಯಾವ ಬಾಗಿಲಿನಿಂದ ಕಣ್ಣು ಹಾಯಿಸಿದರೂ ಆಕೆ ನಿಬ್ಬೆರಗಾಗುವ ಬೆಳಕು.

ಬೆವರು ಹನಿಗಳ ತೂಗುಯ್ಯಾಲೆಯ ಮೇಲೆ ನಾಜೂಕಿನಿಂದ ಹೆಣೆದ ಶ್ರಮದ ಬದುಕು ಆಕೆಯದು. ಪುಟ್ಟ ಪುಟ್ಟ ಹೆಜ್ಜೆಯಿಟ್ಟು ಬಾಲ್ಯದ ಎದೆಯ ಮೇಲೆ ಶಾಶ್ವತ ಗುರುತು ಮೂಡಿಸಬೇಕಾಗಿದ್ದ ಕಾಲದಲ್ಲೇ ಗಂಡನ‌ ಮನೆ ಸೇರಿದ್ದಳು ಸುಂದರಿ. ಮಣ್ಣಿನ ಮನೆ ಮಾಡಿ, ಬೆಳಕಿಗೂ ಗಾಳಿಗೂ ಪುಟ್ಟ ಕಿಟಕಿಯಿಟ್ಟು, ಆ ಮನೆಗೊಂದು ಚಂದದ ಹೆಸರಿಟ್ಟು ಆಟ ಆಡಿಕೊಳ್ಳಬೇಕಾದ ವಯಸ್ಸಿನಲ್ಲಿ ಹಾಸಿಗೆ ಹಿಡಿದ ಅತ್ತೆಯನ್ನೂ, ಪರಮ ಕೋಪಿಷ್ಠ ಮಾವನನ್ನೂ ಬೇಜಾವಾಬ್ದಾರಿಯ ಗಂಡನನ್ನೂ ಸಂಭಾಳಿಸುವ ಹೊಣೆ ಅವಳ ಮೇಲೆ ಬಿದ್ದಿತ್ತು. ಈ ಹೊತ್ತು ಕೂತು ಮಾತಾಡಿದರೆ, ಬಾಲ್ಯ ವಿವಾಹವನ್ನು ಖಡಾಖಂಡಿತವಾಗಿ ವಿರೋಧಿಸುವ ಸುಂದರಿ ತನ್ನ ಮದುವೆಯ ವಿಷಯಕ್ಕೆ ಬಂದಾಗ ಮಾತ್ರ ಅದೊಂದು ಬದುಕಿನ ಅತಿ ಸುಂದರ  ಘಳಿಗೆ ಎಂದೇ ನಂಬುತ್ತಾಳೆ, ಅಥವಾ ನಮ್ಮನ್ನು ನಂಬಿಸಲು ಪ್ರಯತ್ನಿಸುತ್ತಾಳೆ.

ಅಷ್ಟು ಸಣ್ಣ ವಯಸ್ಸಲ್ಲಿ ಸಂಸಾರಕ್ಕೆ ಹೆಗಲು ಕೊಡಲು ನಿನಗೆ ಕಷ್ಟವಾಗಲಿಲ್ಲವೇ ಎಂದು ಕೇಳಿದರೆ " ತವರಲ್ಲೇನು ಸುಖ ಕಾಲು ಮುರಿದುಕೊಂಡು ಬಿದ್ದಿತ್ತೇ? ಮೂರು ಹೆಣ್ಣು ಮಕ್ಕಳ ನಂತರ ಯಾರಿಗೂ ಬೇಡದ ನಾಲ್ಕನೆಯ ಹೆಣ್ಣಾಗಿ ಜನಿಸಿದವಳು ನಾನು. ಅಪ್ಪ-ಅಮ್ಮನ ಅನಾದಾರ, ಅಕ್ಕಂದಿರ ಮೂದಲಿಕೆ, ತಮ್ಮನ ಉಡಾಫೆ ಇವೆಲ್ಲದರ ಮಧ್ಯೆ ಒಂದು ವಜ್ಜೆಯಂತೆ ಬೆಳೆದವಳಿಗೆ ಬೆಂಕಿಯಿಂದ ಬಾಣಲೆಗೆ ಬಿದ್ದಂತಾಗಿತ್ತು ಅಷ್ಟೆ. ಸುಡುವುದೇ ಆಗಿದ್ದರೂ ನೇರವಾಗಿ ಸುಡದು ಅನ್ನುವ ನಂಬಿಕೆ ಇತ್ತು.‌ ಮೇಲಾಗಿ ಗಂಡನ ಮನೆಯಲ್ಲಿ ಮೂದಲಿಕೆಗಳಿಂದಂತೂ ನಾನು ಮುಕ್ತಳಾಗಿದ್ದೆ" ಎನ್ನುತ್ತಾಳೆ. ಉರಿವ ಬೆಂಕಿಗಾದರೂ ಕೈಯೊಡ್ಡಿ ಬದುಕು ಕಟ್ಟಿಕೊಳ್ಳುತ್ತೇನೆ ಅನ್ನುವಷ್ಟು ಛಲವಿರುವ ನಮ್ಮ ಸುಂದರಿಗೆ ಬೆಂಕಿ ಕಡ್ಡಿ ಕೈಯಲ್ಲಿ ಕೊಟ್ಟು ದೀಪ ಹಚ್ಚು ಎಂದರೆ ಬೆಳಕು ಸೃಜಿಸದೇ ಇರುವಳೇ?

ಇಂತಹ ಸುಂದರಿ ಒಮ್ಮೆ‌ ಮದುವೆ ಮನೆ ಹೊಕ್ಕಳೆಂದರೆ ಸಾಕು ಸಂಭ್ರಮ ಛಿಲ್ಲನೆ ಚಿಮ್ಮುತ್ತದೆ. ಧಾರೆ, ನಿಖಾಹ್ ಹೀಗೆ ಯಾವ ಧಾರ್ಮಿಕ ವಿಧಿವಿಧಾನಗಳಿದ್ದರೂ ಆಕೆ ಯಾವ ಗೋಜಲುಗಳೂ ಇಲ್ಲದೆ ಗಲ ಗಲ ಓಡಾಡುವುದನ್ನು ನೋಡುವುದೇ ಒಂದು ಚೆಂದ. ನಡು ನಡುವೆ ಊಟ ಚೆನ್ನಾಗಿಲ್ಲವೆಂದೋ ಅಥವಾ ಆತಿಥ್ಯ ಸರಿಯಾಗಲಿಲ್ಲವೆಂದೋ ಯಾರಾದರೂ ಮೂಗುಮುರಿಯುತ್ತಿದ್ದರೆ ಅವರನ್ನು ಎಲ್ಲರೆದುರು ಯಾವ ಮುಲಾಜೂ ಇಲ್ಲದೆ ತರಾಟೆಗೆ ತೆಗೆದುಕೊಳ್ಳುತ್ತಾಳೆ. ಸುಂದರಿ ಮದುವೆ ಮನೆಯಲ್ಲಿದ್ದಾಳೆಂದರೆ ಮಧುಮಗಳ ಚಿನ್ನ, ವರನ ಡ್ರೆಸ್ಸು, ಊಟದ ಮೆನುವಿನಲ್ಲಿನ ಕೊರತೆ ಯಾವುದರ ಬಗ್ಗೆಯೂ ಸುಖಾಸುಮ್ಮನೆ ಟೀಕಿಸಲು ಜನ ಹಿಂದೆ ಮುಂದೆ ನೋಡುತ್ತಾರೆ

ಆದರೆ ಅವಳ ವ್ಯಕ್ತಿತ್ವದ ಹೊಳಹು ಪೂರ್ತಿಯಾಗಿ ದಕ್ಕಬೇಕೆಂದರೆ ಮದುವೆಯ ರೀತಿ ರಿವಾಜುಗಳೆಲ್ಲಾ ಮುಗಿದು ಅಲ್ಲೆಲ್ಲಾ ಒಂದು  ಮುಗಿಯದ ಮೌನ ವ್ಯಾಪಿಸಬೇಕು. ಆಗಾಕೆ ಇಷ್ಟಿಷ್ಟೇ ಬಿಚ್ಚಿಕೊಳ್ಳುತ್ತಾಳೆ; ಕೆಲವೊಮ್ಮೆ ಸೌಮ್ಯವಾಗಿ ಮತ್ತೂ ಕೆಲವೊಮ್ಮ ರೌದ್ರವಾಗಿ. ಮೊನ್ನೆಯೂ ಹೀಗೆಯೇ ಆಯ್ತು ನೋಡಿ.

ಸಂತೆ ಮುಗಿದ ಮೇಲೆ ಉಳಿದು ಬಿಡುವ ನೀರವ ರಸ್ತೆಯಂತೆ ಮದುವೆ ಸಂಭ್ರಮ‌ ಮುಗಿದ ಮೇಲೆ‌ ಮದುವೆ ಮನೆ ಬಣಗುಟ್ಟುತ್ತಿರಬೇಕಾದರೆ ಆಕೆ ಹಾಡಿಕೊಳ್ಳುತ್ತಾ, ಆಗಾಗ ಎಲೆ ಅಡಿಕೆಯನ್ನು ಪಿಚಕ್ಕಂತ ಉಗುಳುತ್ತಾ, ಕೆಲವೊಮ್ಮೆ ಕಣ್ಣು ಕೆಂಪಗೆ ಮಾಡಿಕೊಂಡು ಯಾರ್ಯಾರಿಗೋ ಬಯ್ಯುತ್ತಾ ಸೀರೆ ಎತ್ತಿಕಟ್ಟಿ ಪಾತ್ರೆ ತಿಕ್ಕುತ್ತಿದ್ದರೆ ನನಗೆ ಯಾವುದೋ ಋಷಿ ಮುನಿಯ ಕೋಪಕ್ಕೆ ತುತ್ತಾಗಿ ಶಾಪಗ್ರಸ್ಥೆಯರಾಗಿ ಭುವಿಗಿಳಿದು ಬರುವ ದೇವಕನ್ನಿಕೆಯರು ನೆನಪಾದರುಹಣೆಯ ಮೇಲೆ ಸುಮ್ಮನೆ ಹೊಳೆವ ಬೆವರ ಹನಿಗಳು, ಅತ್ತಿಂದಿತ್ತ ಹಾರಾಡುವ ಗುಂಗುರು ಕೂದಲು, ಹಿಂದೊಮ್ಮೆ ಕನಸುಗಳ ದೊಡ್ಡ ಗಣಿಯೇ ಆಗಿದ್ದಿರಬಹುದಾದ ಕಡು ಕಪ್ಪು ಕಣ್ಣುಗಳು, ಮೂಗು, ಅದರ ತುದಿಯಲ್ಲಿ‌ ಫಳ ಫಳ ಮಿಂಚುವ ನತ್ತು, ಆಕೆಯ ಪಾಡ್ದನಕ್ಕೆ ಸರಿಯಾಗಿ ಕಿಣಿ ಕಿಣಿ ಸದ್ದು ಮಾಡುವ ಹಸಿರು ಗಾಜಿನ ಬಳೆಗಳು... ಸ್ವರ್ಗ ಅನಾಮತ್ತಾಗಿ ಮನೆಯ ಅಂಗಳದಲ್ಲಿ ಹರಡಿಕೊಂಡಿತ್ತು. ನಾನು ಪಡಬಾರದ ಪಾಡು ಪಟ್ಟುಕೊಂಡು ಉಟ್ಟಿದ್ದ ಸೀರೆ ಬಿಚ್ಚಿ ಒಂದು ಚೂಡಿದಾರ್ ಏರಿಸಿಕೊಂಡು ಆಕೆಗೆ ಸಹಾಯ ಮಾಡುವ ನೆಪದಲ್ಲಿ ಅದಕ್ಕಿಂತಲೂ ಹೆಚ್ಚಾಗಿ ಅವಳಿಂದ ಸಾವಿರದ ಕಥೆ ಕೇಳುವ ಹುಕಿಯಲ್ಲಿ ಅವಳೇ ಸೃಷ್ಟಿಸಿದ ಸ್ವರ್ಗದ ಬಾಗಿಲನ್ನು ನಾಜೂಕಾಗಿ ಬಡಿದೆ.

ಆಕೆ "ಬಾ" ಎಂದು ಕರೆದು ಒಂದು ಸಣ್ಣ ಪ್ಲಾಸ್ಟಿಕ್ ಮಣೆಯನ್ನು ನನ್ನತ್ತ ತಳ್ಳುತ್ತಲೇ ಯಾವುದೋ ಅಗ್ಗದ ಸರಾಯಿ ವಾಸನೆ ತೇಲಿಬಂತು. ವಾಕರಿಕೆ ಬಂದಂತಾಗಿ "ದೊಡ್ಡಾ ಕುಡಿದು ಬಂದಿದ್ದೀರಾ?" ಎಂದು ಕೇಳಿದೆ. ಅಷ್ಟಕ್ಕೇ ಕಣ್ಣು ಕೆಂಪಗೆ ಮಾಡಿಕೊಂಡು "ಹುಂ ಕುಡಿದಿದ್ದೇನೆ" ಎಂದಳು.
 "ಯಾಕೆ ಕುಡಿಯುತ್ತೀರಿ? ಅದು ಆರೋಗ್ಯಕ್ಕೆ ಒಳ್ಳೆಯದಲ್ಲ
"ಹೋ ಹೌದಾ? ನಂಗೆ ಗೊತ್ತೇ ಇರ್ಲಿಲ್ಲ. ಇಲ್ಲಿ ಬಾ ಈ ಪಾತ್ರೆ ಸ್ವಲ್ಪ ಎತ್ತಿ‌ ಕೊಡು" ಎಂದು ದೊಡ್ಡ ಕಡಾಯಿಯತ್ತ ಕೈ ತೋರಿದಳು. ನಾನು ಆ ಎಂದು ಬಾಯಿ ತೆರೆಯುತ್ತಿದ್ದಂತೆ "ಆಗಲ್ಲ ತಾನೇ? ನೀನು ಕುಡಿಯುವುದಿಲ್ಲ, ನನ್ನ ಅರ್ಧದಷ್ಟು ವಯಸ್ಸೂ ನಿಂಗಾಗಿಲ್ಲ, ಕಡಾಯಿಯನ್ನು ಎತ್ತಲಾಗದಷ್ಟು ತುಂಬು ಆರೋಗ್ಯವಂತೆ ನೀನು" ಎಂದು ವ್ಯಂಗ್ಯವಾಗಿ ನಕ್ಕಳುಆಕೆಯ ವ್ಯಂಗ್ಯಕ್ಕೆ ಉತ್ತರಿಸುವ ಸಾಹಸಕ್ಕೆ ಇಳಿದರೆ ಮತ್ತಷ್ಟು ಜನ್ಮ‌ ಜಾಲಾಡಿಬಿಡುತ್ತಾಳೆ ಅನ್ನುವುದು ಮೊದಲೇ ಅನುಭವಕ್ಕೆ ಬಂದಿದ್ದರಿಂದಾಗಿ ಏನೊಂದೂ ಮಾತಾಡದೆ ಸುಮ್ಮನಾದೆ.

ಸುಂದರಿ ಇರುವುದೇ ಹಾಗೆ. ಮಾತಾಡುವ ಮೂಡ್ ಇದ್ದಾಗ ಚಿನಕುರುಳಿಯಂತೆ ಹರಟುವ ಆಕೆ ಕೆಲವೊಮ್ಮೆ ಮೌನ ಹೊದ್ದು ಕುಳಿತು ಬಿಟ್ಟರೆ ತಾನು ಆರಾಧಿಸುವ ಶಿವನೇ ಬಂದು ಅವಳೆದುರು ಚಕ್ಕಳಮಕ್ಕಳ ಹಾಕಿ ಕೂತು ಮಾತಿಗೆಳೆದರೂ ಅವಳು ಜುಳು ಜುಳು ಹರಿವ ಮಾತಾಗಲಾರಳು. ಅವಳ ಮೌನದಲ್ಲಿ ಏನೇನಿದೆಯೋ ಅವಳಿಗಷ್ಟೇ ಗೊತ್ತು. ಕುಡಿದೂ ಕುಡಿದೂ ಸತ್ತೇ ಹೋದ ಗಂಡ, ಓದು ಬಾರದ ಇವಳಿಂದ ಹೆಬ್ಬೆಟ್ಟು ಹಾಕಿಸಿ ಪೂರ್ತಿ ಆಸ್ತಿ ದಕ್ಕಿಸಿಕೊಂಡ ಗಂಡನ‌ ಅಣ್ಣ, ಶಾಶ್ವತವಾಗಿ ಮುಚ್ಚಿದ ತವರಿನ ಬಾಗಿಲು ಅದೆಲ್ಲಕ್ಕಿಂತಲೂ ಹೆಚ್ಚಾಗಿ ಒಂದು ಪುಟ್ಟ ಮಗುವನ್ನು ಇವಳ ಮಡಿಲಿಗೆ ಹಾಕಿ ಓಡಿ ಹೋದ ಸೊಸೆ, ಆ ಕೊರಗಲ್ಲೇ ಆತ್ಮಹತ್ಯೆ ಮಾಡಿಕೊಂಡ ಮಗ... ಅದೆಷ್ಟು ಸಂಗತಿಗಳು ಆ ಮೌನದಲ್ಲಿ ಮಗ್ಗುಲು ಬದಲಾಯಿಸುತ್ತಿರುತ್ತದೋಹಾಗೆ ಮೌನಗೌರಿಯಾದಾಗೆಲ್ಲಾ ಮತ್ತಷ್ಟು ಕುಡಿಯುವ, ಕುಡಿದರೂ ಒಂದು ಹಿಡಿ ಹೆಚ್ಚು ಮಾತಾಡದ ಅವಳೊಂದು ಬಿಡಿಸಲಾಗದ ಒಗಟು

ಶಿವನನ್ನು ನಂಬುವಷ್ಟೇ ಗಾಢವಾಗಿ ಊರಿನ ಮಸೀದಿಯನ್ನೂ ನಂಬುವ ಆಕೆ ಅಲ್ಲಿನ ಗುರುಗಳು 'ಕುಡೀಬೇಡ' ಎಂದಾಗ ಮಾತ್ರ ಕೆಂಡಾಮಂಡಲವಾಗುತ್ತಾಳೆ. ಜಗದ ಎಲ್ಲ‌ ದೇವರುಗಳಿಗೂ, ದರ್ಗಾಗಳಿಗೂ, ಸತ್ತ ಗಂಡನಿಗೂ, ಅವನಿಗೆ ತನ್ನನ್ನು ಮದುವೆ ಮಾಡಿಕೊಟ್ಟ ಅಪ್ಪನಿಗೂ, ಹೆಂಡತಿಯನ್ನು ಬಾಳಿಸಲಾರದ ತನ್ನ‌ ಮಗನಿಗೂ, ಓಡಿ ಹೋದ ಸೊಸೆಗೂ, ಓಡಿಸಿಕೊಂಡ ಹೋದ 'ಘಟ್ಟದಾಯೆ' ಮರ್ಲ ಸಾಬಿಗೂ, ಅವಳು ಬಿಟ್ಟು ಹೋದ ಮಗುವಿಗೂ ವಾಚಾಮಗೋಚರ ಬಯ್ಯುತ್ತಾಳೆ. ಅವಳ ಒಡಲ ಕಿಚ್ಚು ತಣಿದ ಮೇಲೆ, ಅಥವಾ ತಾನಾಗಿಯೇ ತಣಿಸಿದ ಮೇಲೆ ಅವಳು ಶಾಂತಮೂರ್ತಿ, ಕರುಣಾಮಯಿ ಅಮ್ಮ; ಮಗುವಿಗೂ, ಜಗತ್ತಿಗೂ.

ಈಗೀಗ ತುಸು ಇಳಿದುಹೋಗಿರುವಂತೆ ಕಾಣುವ ಸುಂದರಿ, ಮಗಳನ್ನು ಮದುವೆ ಮಾಡಿಕೊಟ್ಟು ಒಂದೆರಡು ತಿಂಗಳುಗಳು‌ ಕಳೆದ ಬಳಿಕ‌ ಅವಳನ್ನು ನೋಡಲೆಂದು ಅವಳ ಮನೆಗೆ ಹೋಗಿದ್ದಳಂತೆ. ಅವಳದೇ ತದ್ರೂಪಿಯಂತಿರುವ ಮಗಳು ಮನೆಯ ಹೊರಗೆ ಕೊಟ್ಟಿಗೆಯಲ್ಲಿ ಕೂತಿರುವುದನ್ನು ನೋಡಿ ಕರುಳು ಚುರುಕ್ಕೆಂದು ಮತ್ತಷ್ಟು ವಿಚಾರಿಸಿದಾಗ ಆ ಮನೆಯಲ್ಲಿ ಮುಟ್ಟಾದ ಹೆಣ್ಣುಮಕ್ಕಳು ಮುಟ್ಟಿಸಿಕೊಳ್ಳುವಂತಿಲ್ಲ ಎನ್ನುವುದು ತಿಳಿದು ಬಂತು. ಮೊದಲು ಸಾವಧಾನದಿಂದ ಆಮೇಲೆ ಸ್ವಲ್ಪ ಏರಿದ ಧ್ವನಿಯಲ್ಲಿ ತಿಳಿ ಹೇಳಲು ಪ್ರಯತ್ನಿಸಿದಳಂತೆ. ಅವಳ ಎಲ್ಲ ಪ್ರಯತ್ನಗಳು ನಿಷ್ಫಲವಾದಾಗ ಮಾತ್ರ ಚಾಮುಂಡಿ ಅವತಾರ ತಾಳಿದ ಸುಂದರಿ, ಹೆಣ್ಣುಮಕ್ಕಳಿಗೆ ಗೌರವಿಲ್ಲವದ ಕಡೆ, ಪ್ರಕೃತಿ ಸಹಜ ಪ್ರಕ್ರಿಯೆಯ ಬಗ್ಗೆ ನಕಾರಾತ್ಮಕ ನಿಲುವುಗಳು ಇರುವ ಕಡೆ ನನ್ನ ಮಗಳು ಇರುವುದು ಸರಿಯಲ್ಲ ಎಂದು ಅವಳನ್ನು ಆ ಕ್ಷಣವೇ ಅಲ್ಲಿಂದ ಕರೆದುಕೊಂಡು ಬಂದಿದ್ದಳಂತೆ. ಅದಾಗಿ ಕೆಲದಿನಗಳ ನಂತರ ಎಲ್ಲ ಸರಿ ಹೋಗಿ ಮಗಳು ಮತ್ತೆ ಗಂಡನ‌ ಮನೆ ಸೇರಿದಳುಆದರೆ ಈಗಲೂ ಸುಂದರಿ, ಋತುಸ್ರಾವ, ಆ ದಿನಗಳ ಹೊಟ್ಟೆನೋವು, ಸಂಕಟಗಳ ಬಗ್ಗೆ ಮಾತಾಡುವಾಗೆಲ್ಲಾ ಮಗಳು ಕೊಟ್ಟಿಗೆಯಲ್ಲಿದ್ದುದು, ಅವಳಿಗೆ ಅಂತಲೇ ಪ್ರತ್ಯೇಕ ತಟ್ಟೆ, ಲೋಟ ಎತ್ತಿಟ್ಟದ್ದು ಎಲ್ಲ ನೆನಪಿಸಿ ಕಣ್ಣು ತುಂಬಿಕೊಳ್ಳುತ್ತಾಳೆ. ಆದರೆ ನನಗೆ ಆಕೆ ಹಾಗೆ ಮಾತಾಡುವಾಗೆಲ್ಲಾ, ಅನೀತಿಯನ್ನು ವಿರೋಧಿಸುವ ಗಟ್ಟಿ ನಿಲುವಿನ ಸುಂದರಿಯಂತಹವರ ಮುಂದೆ ಜಗತ್ತಿನ ತಥಾಕಥಿತ ಸ್ತ್ರೀವಾದವನ್ನು ನಿವಾಳಿಸಿ ಎಸೆಯಬೇಕು ಅನಿಸುತ್ತದೆ

ಈಗ್ಗೆ ಮೂರು ದಿನಗಳ ಹಿಂದೆ ಇಂಥದ್ದೇ ಬಿಸಿಲಿನಲ್ಲಿ ಕೂತು ಸುಂದರಿಯ ಬಗ್ಗೆ, ಅವಳ ಬದುಕಿನ ಬಗ್ಗೆ ಯೋಚಿಸುತ್ತಿರಬೇಕಾದರೆ ಕರೆ ಮಾಡಿದ್ದ ಅಮ್ಮ, ಸುಂದರಿ ಕಾಲು‌ ಮುರಿದುಕೊಂಡು ನಗರದ ಆಸ್ಪತ್ರೆ ಸೇರಿದ್ದಾಳೆ ಅಂದಿದ್ದರು. ನಿನ್ನೆ ಅವಳನ್ನು ನೋಡಿಕೊಂಡು ಬರಲೆಂದು ಹೋಗಿದ್ದೆ. ಪಕ್ಕದ ಕ್ಯಾಂಟೀನ್ ನಿಂದ ಮುಸಂಬಿ ಜ್ಯೂಸ್ ತರಿಸಿ ಗ್ಲಾಸಿಗೆ ಬಗ್ಗಿಸುತ್ತಿರಬೇಕಾದರೆ ಆಕೆ, ಕ್ಷೀಣವಾಗಿ " ಇದಕ್ಕಿಂತಲೂ ಪ್ಯಾಕೆಟ್ ಜ್ಯೂಸೇ ನನಗಿಷ್ಟ" ಎಂದಳು. ನಾನು ಹುಸಿಕೋಪದಿಂದ ಮತ್ತು ಹೆಚ್ಚೇ ಪ್ರೀತಿಯಿಂದ "ದೊಡ್ಡಾ" ಎಂದು ಕರೆದೆ. ಅವಳ ಕಡು ಕಪ್ಪುಕಣ್ಣುಗಳು ಸುಮ್ಮನೆ ಹೊಳೆದವು, ನಾನು ಗ್ಲಾಸ್ ಅವಳ ತುಟಿಗಿಟ್ಟೆ. ಒಂದೊಂದು ಗುಟುಕು ಕುಡಿಯುವಾಗಲೂ ಅವಳ ಅಂಗೈ ನನ್ನನ್ನು ಮತ್ತಷ್ಟು ಬಿಗಿಯಾಗಿ ಸುತ್ತಿಕೊಳ್ಳುತ್ತಿತ್ತು. ಕುಡಿದರೆ ಬೇಗ ಸಾಯುತ್ತಾರೆ ಎಂಬುವುದು ನಿಜವೇ ಆಗಿದ್ದರೆ ಕುಡಿದೇ ಸಾಯುತ್ತೇನೆ ಎಂದು ತೀರ್ಮಾನಿಸಿಕೊಂಡ ಅವಳು ಮತ್ತು ಕುಡಿತ ಹರಾಮಾಗಿರುವ ನಾನು... ಪ್ರಪಂಚ ನಮ್ಮಿಬ್ಬರ ಸಂಬಂಧಕ್ಕೆ ಏನು ಹೆಸರಿಡುತ್ತೋ ಗೊತ್ತಿಲ್ಲ, ನಾನು ಮಾತ್ರ ದಿನೇ ದಿನೇ ಅವಳ‌ ಮಡಿಲಲ್ಲಿ ಮತ್ತಷ್ಟು ಮಗುವಾಗುತ್ತಿದ್ದೇನೆ.