ಬುಧವಾರ, ಅಕ್ಟೋಬರ್ 23, 2019

ಗುಬ್ಬಿಯಂತಹ ಗೀತಕ್ಕ ದೇವತೆಯಂತೆ ನಗುತ್ತಿದ್ದರು.


ವಿಚಿತ್ರ ಮೌನ, ವಿವರಿಸಲಾಗದ ಅಸಹಾಯಕತೆಯನ್ನು ಮೈವೆತ್ತಿಕೊಂಡೇ ಇರುವ ಆಸ್ಪತ್ರೆಗಳಿಂದ ಕಲಿತುಕೊಳ್ಳುವಂತಹ ಬದುಕಿನ ಪಾಠಗಳನ್ನು ಮನುಷ್ಯ ಬಹುಶಃ ಬೇರೆಲ್ಲೂ ಕಲಿಯಲಾರ. ಸಾವಿನಿಂದ ಕೆಲವೇ ಕೆಲವು ಇಂಚುಗಳಷ್ಟು ದೂರ ನಿಂತು ಬದುಕು ನಿಟ್ಟುಸಿರಿಡುವಾಗ, ಒಂದು ಕ್ಷಣವಾದರೂ ಹೆಚ್ಚು ಬದುಕಬೇಕೆಂದು ಹೋರಾಡುವಾಗ ಸಾವಿನಂತಹ ಸಾವಿನೆದೆಯಲ್ಲೂ ಒಮ್ಮೆಯಾದರೂ ಒಂದು ಸಣ್ಣ ಛಳಕು ಹುಟ್ಟುತ್ತದೇನೋ. ಬದುಕಿಗೂ ಸಾವಿಗೂ ಇರುವ ಅಂತರ ಉಚ್ವಾಸ ನಿಶ್ವಾಸಗಳ ನಡುವಿನ ಅರೆಘಳಿಗೆಯಷ್ಟು ಸಣ್ಣದು.ಇಂತಹಾ ಸಾವಿನ‌ ಮನೆಯಲ್ಲಿ ಅಥವಾ ಬದುಕು ಕಲಿಸುವ ಮನೆಯಲ್ಲಿ, ಕಣ್ಣೆದುರಿರುವ ಗೋರಿಯ ನೆತ್ತಿಯ ಮೇಲಿಂದಲೇ ಬದುಕು ಕಟ್ಟಿಕೊಳ್ಳುವ, ಜೀವನ ಸ್ಪೂರ್ತಿ ಸ್ಪುರಿಸುವ ವ್ಯಕ್ತಿತ್ವಗಳು ಅಚನಾಕ್ಕಾಗಿ ಸಿಕ್ಕು ಒಂದಿಡೀ ಬದುಕು ನೆನಪಿಟ್ಟುಕೊಳ್ಳುವಂತಹಾ ಬೆರಗು ಉಳಿಸಿ ಅಷ್ಟೇ ಅಚಾನಕ್ಕಾಗಿ ಮತ್ತೆಂದೂ ಬಾರದಂತೆ ಎದ್ದು ಹೋಗುತ್ತರಲ್ಲಾ ಆಗೆಲ್ಲಾ, ಇಂತಹ ವ್ಯಕ್ತಿತ್ವವನ್ನು ಪರಿಚಯಿಸಿದ್ದಕ್ಕೆ ಬದುಕನ್ನು ಕಣ್ಣಿಗೊತ್ತಿ ಒಂದು ಚಂದದ ತ್ಯಾಂಕ್ಸ್ ಹೇಳಬೇಕಾ ಅಥವಾ ಅಷ್ಟು ಬೇಗ ವಿಯೋಗವನ್ನೂ ಹೇರಿದ್ದಕ್ಕೆ ಬದುಕನ್ನು ದೂಷಿಸಬೇಕಾ ಎನ್ನುವುದೇ ಅರ್ಥವಾಗುವುದಿಲ್ಲ.

ಅಮ್ಮನ ಕ್ಯಾನ್ಸರ್ ಆಪರೇಶನ್ ಮುಗಿದು ಮೊದಲ ಕಿಮೋಥೆರಪಿಗೆಂದು ವಾರ್ಡ್ ಗೆ ಶಿಫ್ಟ್ ಆದಾಗ, ಕಿಟಕಿ ಪಕ್ಕದ ಕೊನೆಯ ಹಾಸಿಗೆಯಲ್ಲಿ, ಮಹಿಳೆಯೊಬ್ಬರು ಈಗಷ್ಟೇ ಇಸ್ತ್ರಿ ಮಾಡಿದಂತಹ ಕೈಮಗ್ಗದ ಸೀರೆ, ಅದಕ್ಕೊಪ್ಪುವ ರವಕೆ, ಮೂಗಿನ ಮೇಲೊಂದು ಕನ್ನಡಕ ಧರಿಸಿ, ಮಂಚಕ್ಕೆ ಒರಗಿ, ಕಾಲು ಚಾಚಿ ಕೂತು, ಮುಖ ಕಾಣಿಸದಂತೆ  'The home and the world' ಓದುತ್ತಿದ್ದ ಭಂಗಿ ನೋಡುತ್ತಿದ್ದರೆ ಕುವೆಂಪು ಕಾದಂಬರಿಯಲ್ಲಿನ ಹೆಗ್ಗಡತಿ  ನೆನಪಾಗಿದ್ದರು. ಇಡೀ ವಾರ್ಡ್ ಒಂದು ರೀತಿಯ ಸಂಕಟವನ್ನು ಹೊದ್ದು ಮಲಗಿಕೊಂಡಿದ್ದರೆ ಅವರೊಬ್ಬರು ಮಾತ್ರ ನೋವಿನ ಈ ಪ್ರಪಂಚಕ್ಕೂ ತನಗೂ ಸಂಬಂಧವೇ ಇಲ್ಲವೇನೋ ಎಂಬಂತೆ ಪುಸ್ತಕದಲ್ಲಿ ಮುಳುಗಿ ಹೋಗಿದ್ದರು. ಅವರ ಭಾವ ಭಂಗಿ, ಓದಿನ ತಲ್ಲೀನತೆ ನೋಡುತ್ತಿದ್ದರೆ ಈಗಲೇ ಪರಿಚಯಿಸಿಕೊಳ್ಳಬೇಕು ಅನ್ನಿಸುತ್ತಿತ್ತು.‌ ಆದರೆ ಹಾಗೆ ಏಕಾಏಕಿ ಮಾತನಾಡಿಸಿದರೆ ಎಲ್ಲಿ ಅವರೇ ಸೃಷ್ಟಿಸಿಕೊಂಡಿರುವ ಖಾಸಗಿ ಪ್ರಪಂಚದೊಳಕ್ಕೆ ಅತಿಕ್ರಮ ಪ್ರವೇಶ ಮಾಡಿದಂತಾಗುತ್ತದೋ ಎಂದೂ ಅನ್ನಿಸುತ್ತಿತ್ತು.

ಆ ಗೊಂದಲದ ನಡುವೆ ಯಾವಾಗ ಅವರು ಹಾಸಿಗೆಯಿಂದ ಎದ್ದು ಬಂದು ನಮ್ಮ ಪಕ್ಕ ನಿಂತಿದ್ದರೋ ಗೊತ್ತಾಗಲಿಲ್ಲ. "ಯಾವಾಗ ಆಪರೇಶನ್ ನಡೆಯಿತು?" ಅನ್ನುವ ಖಚಿತ ಧ್ವನಿ ಕೇಳಿ ತಲೆ ಎತ್ತಿ ನೋಡಿದರೆ, ಕೃಶ ದೇಹಿ, ನೀಳ ನಾಸಿಕ ಮತ್ತು ತಲೆ ಪೂರ್ತಿ ಒಂದೂ ಕೂದಲಿಲ್ಲದ ಮಹಿಳೆಯೊಬ್ಬರು ನಮ್ಮ ಎದುರುಗಡೆ ನಿಂತಿದ್ದರು. ತಮ್ಮನ್ನು, ಗೀತಾ ಭಟ್ ಎಂದು ಪರಿಚಯಿಸಿಕೊಂಡ ಅವರ ಮುಖದಲ್ಲಿನ ಗಂಭೀರತೆ, ಪ್ರೌಢ ಕಳೆ ಮಾತಿಗೂ ಮುನ್ನವೇ ನಮ್ಮೊಳಗೊಂದು ಸಂಬಧ ಬೆಸೆದಿತ್ತು. ಆಗಿನ್ನೂ, ಕಿಮೋಥೆರಪಿ ದೇಹದಲ್ಲಿನ ಕೂದಲುಗಳನ್ನು ಪೂರ್ತಿಯಾಗಿ ಕೀಳುತ್ತದೆ ಅನ್ನುವುದು ಗೊತ್ತೇ ಇರಲಿಲ್ಲ. ನನ್ನ ಕಣ್ಣುಗಳು ಅವರ ಕುತ್ತಿಗೆಯಿಂದ ಮೇಲೆ ಹೋಗುತ್ತಿದ್ದಂತೆ ವಿಚಿತ್ರ ಭಯವೊಂದು ದೇಹವಿಡೀ ಆವರಿಸಿ ಕಣ್ಣುಗಳು ತಾವೇ ತಾವಾಗಿ ಮುಚ್ಚಿಕೊಂಡುಬಿಡುತ್ತಿದ್ದವು. ಇನ್ನು ಇಪ್ಪತ್ತನಾಲ್ಕು ಗಂಟೆಯೊಳಗಾಗಿ ನನ್ನಮ್ಮನನ್ನೂ ಇದೇ ಸ್ಥಿತಿಯಲ್ಲಿ ನೋಡಬೇಕಾದೀತು ಎನ್ನುವ ಕಲ್ಪನೆಯೂ ಇರಲಿಲ್ಲ ನನಗಾಗ.

ಆದರೆ ಇಡೀ ವಾರ್ಡನ್ನು ಮತ್ತಷ್ಟು ಸೂಕ್ಷ್ಮವಾಗಿ ನೋಡಿದರೆ ಯಾರೊಬ್ಬರ ದೇಹದ ಮೇಲೂ ಒಂದೆಳೆ ಕೂದಲೂ ಇಲ್ಲ ಅನ್ನುವುದು ಅರಿವಾಗುತ್ತಿತ್ತು. ಸಣ್ಣ ವ್ಯತ್ಯಾಸವೆಂದರೆ ಅವರೆಲ್ಲರೂ ತಲೆಗೆ ವಿಗ್ ಧರಿಸಿ ಅಥವಾ ತಲೆಯನ್ನು ಸಣ್ಣ ಬಟ್ಟೆಯಿಂದ ಮುಚ್ಚಿದ್ದರು. ಹಾಗಾಗಿ ಮೊದಲ ನೋಟಕ್ಕೆ ಏನೂ ಅರ್ಥವಾಗಿರಲಿಲ್ಲ. ಅವರೆಲ್ಲರ ನಡುವೆ ಒಂದು ನಿರ್ಭಿಡತೆಯನ್ನೂ, ನಿರಾತಂಕವನ್ನೂ ಮೈಗೂಡಿಸಿಕೊಂಡು ಅತ್ಯಂತ ಸಹಜವಾಗಿಯೇ ಇದ್ದ ಗೀತಕ್ಕ ಮಾತ್ರ ತುಂಬ ಹತ್ತಿರದವರು ಅಂತ ಮೊದಲ ಭೇಟಿಗೇ ಅನ್ನಿಸುವಂತಹ ವಿಶೇಷ ವ್ಯಕ್ತಿತ್ವ ಹೊಂದಿದ್ದರು. ತನ್ನ ವ್ಯಾಪ್ತಿಯೊಳಕ್ಕೆ ಬರುವ ಎಲ್ಲರಲ್ಲೂ ಸುಲಭವಾಗಿ ಆಪ್ತತೆ ಹುಟ್ಟಿಸುವ ಗುಣ ಅವರದು ಅನ್ನುವುದು ಅರ್ಥವಾಗಲು ಹೆಚ್ಚಿನ ಸಮಯವೇನೂ ತಗುಲಲಿಲ್ಲ.

ಗೀತಕ್ಕ ಮೂಲತಃ ದಕ್ಷಿಣಕನ್ನಡ ಜಿಲ್ಲೆಯವರು. ಮತದಾನದ ಹಕ್ಕು ಲಭಿಸುವ ಮುನ್ನವೇ ರೈಲ್ವೇ ಉದ್ಯೋಗಿಯ ಕೈ ಹಿಡಿದು ಯಾವ ತಯಾರಿಯೂ ಇಲ್ಲದೆ ಸಂಸಾರ ಸಾಗರಕ್ಕೆ ಧುಮುಕಿದರು. ಮದುವೆ ಸಂದರ್ಭದಲ್ಲಿ ಗಂಡ ದೂರದ ಬಂಗಾಳದಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಹಾಗಾಗಿ ಮದುವಣಗಿತ್ತಿಯ ಕಣ್ಣೊಳಗಿನ ಕನಸುಗಳು ಅಂಗೈಯಲ್ಲಿ  ಚಿತ್ರ ವಿಚಿತ್ರ ಆಕಾರ ತಳೆಯುವ ಮುನ್ನವೇ ಬದುಕು ಅವರನ್ನು ಪರಿಚಯ ಇಲ್ಲದ ಊರು, ಅರ್ಥವೇ ಆಗದ ಭಾಷೆಯ ಜನರ ನಡುವೆ ತಂದು ನಿಲ್ಲಿಸಿತ್ತು. ಕುವೆಂಪು, ಕಾರಂತರನ್ನು ಆಗಲೇ ಓದಿಕೊಂಡಿದ್ದ ಅವರ ಮುಂದೆ ಬಂಗಾಳ, ಅಲ್ಲಿನ ಬದುಕು, ಸಾಹಿತ್ಯಕ ಪರಿಸರ ಹೊಸ ಬೌದ್ಧಿಕ ಪ್ರಪಂಚವನ್ನೇ ತೆರೆದಿತ್ತು. ಟಾಗೋರರನ್ನು ಓದಲೆಂದೇ ಹಠ ಹಿಡಿದು ಬಂಗಾಳಿ ಭಾಷೆ ಕಲಿತರು. ಈ ಮಧ್ಯೆ ಪಿ.ಯು.ಸಿಯಲ್ಲಿ ನಿಂತಿದ್ದ ಓದನ್ನೂ ಮುಂದುವರೆಸಿದರು.

ಸಾಹಿತ್ಯ, ಓದು, ಒಂದೊಂದು ಹನಿ ಒಲವನ್ನೂ ಜತನದಿಂದ ಕಾಪಿಟ್ಟುಕೊಳ್ಳುವ ಗಂಡ, ಸ್ವರ್ಗಕ್ಕೆ ಕಿಚ್ಚು ಹಚ್ಚುವಂತಹಾ ಸಂಸಾರ... ನಡುವೆ ಒಂದು ಚೈತ್ರ ಕಾಲದಲ್ಲಿ ಗೀತಕ್ಕನ ಒಡಲೊಳಗೆ ಅವರಿಬ್ಬರ ಒಲವಿನ ಸಾಕ್ಷಿ ಕುಡಿಯೊಡೆದಿತ್ತು. ಬದುಕು ಹೊಸದಾಗಿ ಪ್ರಾರಂಭವಾಗುವುದರಲ್ಲಿತ್ತು, ಆ ಸಂಭ್ರಮಕ್ಕೆ ಊರಲ್ಲಿ ಸೀಮಂತನ ಹಮ್ಮಿಕೊಂಡಿದ್ದರು. ನಿರಂತರವಾಗಿ ಚಲನೆಯಲ್ಲಿರುವ ಬದುಕು ಒಮ್ಮೆಗೆ ನಿಂತುಬಿಡುತ್ತದೆ ಎಂದು ಆಗ ಯಾರೂ ಅಂದುಕೊಂಡಿರಲಿಲ್ಲ. ಇತ್ತ ಗೀತಕ್ಕನನ್ನು ರೈಲು ಹತ್ತಿಸಿ ಕೆಲಸಕ್ಕೆ ಮರಳಿದ್ದ ಗಂಡ ಎರಡು ರಾಜಕೀಯ ಪಕ್ಷಗಳ ಗಲಭೆಗೆ ತುತ್ತಾಗಿ ದಾರಿ ಮಧ್ಯೆಯೇ ಕೊನೆಯುಸಿರೆಳೆದಿದ್ದರು. ತಾನು ಅಷ್ಟು ಪ್ರೀತಿಯಿಂದ ಹೇಳಿ ಬಂದ ವಿದಾಯ ಶಾಶ್ವತ ವಿಯೋಗವಾಗಿರುತ್ತದೆ ಎನ್ನುವುದೇ ಗೊತ್ತೇ ಇಲ್ಲದ  ಗೀತಕ್ಕ ಊರಿಗೆ ಮರಳುವಾಗ ಇಲ್ಲಿ ಸೂತಕದ ಛಾಯೆ, ಸೀಮಂತನ ರದ್ದಾಗಿತ್ತು. ವಿಷಯ ತಿಳಿದ ಅವರು ಕುಸಿದು ಬಿದ್ದರು, ಒಡಲೊಳಗಿನ ಕುಡಿ ಉಸಿರು ಚೆಲ್ಲಿತ್ತು.‌ ಕೆಲವೇ ದಿನಗಳ ಹಿಂದೆ ಸಂತಸ ಮಾತ್ರ ತುಂಬಿದ್ದ ಬದುಕೀಗ ಖಾಲಿ ಖಾಲಿ, ಉಸಿರಿನ ಭಾರವನ್ನೇ ತಡೆದುಕೊಳ್ಳಲಾಗದಷ್ಟು ನಿತ್ರಾಣವಾಗಿಬಿಟ್ಟರು.

ಆದರೆ ಜೀವನ ಇನ್ನೂ ಉದ್ದ ಇತ್ತು, ಇಲಾಖೆ ಅನುಕಂಪದ ಆಧಾರದಲ್ಲಿ ಮತ್ತೆ ಕರೆದು ಕೆಲಸ ಕೊಟ್ಟಿತು. 23ರ ಹಸಿ ವಿಧವೆ ಮನೆಯವರ, ಊರವರ ವಿರೋಧ ಕಟ್ಟಿಕೊಂಡು ಮತ್ತೆ ರೈಲು ಹತ್ತಿ ತನ್ನ ಖಾಲಿ ಗೂಡಿಗೆ ಹಿಂದಿರುಗಿದರು. ಗಂಡನಿಲ್ಲದ ಮನೆ ಮೊದ ಮೊದಲು ಬಿಕೋ ಅನ್ನಿಸುತ್ತಿದ್ದರೂ ಬದುಕಲೇಬೇಕಾದ ಅನಿವಾರ್ಯ ಎಲ್ಲ ನೋವುಗಳನ್ನು ಮೆಟ್ಟಿನಿಲ್ಲಲು ಕಲಿಸಿತು. ಒಂಟಿತನವನ್ನು ಭರಿಸುತ್ತಲೇ ಅಖಂಡ ಮೂವತ್ತೇಳು ವರ್ಷಗಳನ್ನು ಕೊಲ್ಕತ್ತಾದ ಬೀದಿಗಳಲ್ಲಿ ಅಸಹಾಯಕ ಹೆಣ್ಣು ಮಕ್ಕಳ ಕಣ್ಣೀರೊರೆಸುತ್ತಾ, ರಾಜಕೀಯ ಗೂಂಡಾಗಳನ್ನು ವಿರೋಧಿಸುತ್ತಾ ಕಳೆದರು.

ಸೇವೆಯಿಂದ ನಿವೃತ್ತಿ ಪಡೆದ ನಂತರ ಊರಿಗೆ ಮರಳಲೇಬೇಕಾಯಿತು. ಈ ನಡುವೆ ಒಂಟಿ ಬಾಳಿನ ಆ ಮೂವತ್ತೇಳು ವರ್ಷಗಳಲ್ಲಿ ಎಂದೂ ಭಾದಿಸದ ದೈಹಿಕ ಸುಸ್ತು, ಆಯಾಸ ಒಮ್ಮೆಲೆ ಕಾಣಿಸಿಕೊಂಡಂತಾಯಿತು. ಮೊದ ಮೊದಲು ವಯಸ್ಸಿನ ಕಾರಣದಿಂದಲೇ ಹೀಗಾಗುತ್ತಿದೆ ಅಂದುಕೊಂಡರೂ ಪರೀಕ್ಷಿಸಿದಾಗ ಅನ್ನ ನಾಳದ ಕ್ಯಾನ್ಸರ್ ಕೊನೆಯ ಹಂತದಲ್ಲಿರುವುದು ತಿಳಿದು ಬಂದಿತ್ತು. ಎಲ್ಲ ಮುಗಿಯಿತು ಅಂದುಕೊಳ್ಳುತ್ತಿರುವಾಗ ಬದುಕು ಹೊಸ ಸವಾಲನ್ನು ಒಡ್ಡಿತ್ತು. ದೂರವಾದ ಸಂಬಂಧಿಕರು, ಸ್ನೇಹಿತರೇ ಇಲ್ಲದ ಜಗತ್ತಿನಲ್ಲಿ ಬದುಕಿದ ಗೀತಕ್ಕನಿಗೆ ಮೊದಲಿಗೆ ಇವೆಲ್ಲಾ ದೊಡ್ಡ ಸವಾಲೇ ಅಲ್ಲ ಅಂತ ಅನ್ನಿಸಿದರೂ ರೇಡಿಯೋ ಥೆರಪಿ ದೇಹದ ಪ್ರತಿ ಅಣುವಲ್ಲೂ ನರಕ ಯಾತನೆ ಸೃಷ್ಟಿಸುತ್ತಿರುವಾಗ ಮಾತ್ರ ಇಡೀ ಪ್ರಪಂಚದಲ್ಲಿ ತಾನೆಷ್ಟು ಒಂಟಿ ಅಂತ ಅನ್ನಿಸುತ್ತಿತ್ತಂತೆ. ಆದರೆ ಬೆಟ್ಟವೇ ಕುಸಿದು ತಲೆ ಮೇಲೆ ಬಿದ್ದರೂ ಎಡಗೈಯಿಂದ ಸರಿಸಿ ಎದ್ದು ಬಂದೇನು ಅನ್ನುವ ಅವರಲ್ಲಿದ್ದ ಧೀಶಕ್ತಿಯ ಮುಂದೆ ಉಳಿದೆಲ್ಲಾ ವಿಚಾರಗಳು ಗೌಣವಾಯಿತು. ತಾನು ನೋವಿನಲ್ಲಿ ಮುಲುಗುಟ್ಟುತ್ತಿರುವಾಗಲೂ ಉಳಿದ ರೋಗಿಗಳಲ್ಲಿ ಅವರು ತುಂಬುತ್ತಿದ್ದ ಆತ್ಮಸ್ಥೈರ್ಯ, ಉತ್ಸಾಹ, ಎಣೆಯಿಲ್ಲದ ಜೀವನಸ್ಪೂರ್ತಿ ದೊಡ್ಡದು.

ಕೈ ಬಿಟ್ಟು ಹೋದ ಪ್ರೀತಿಗಾಗಿ, ಕಳೆದುಕೊಂಡ ಸಂಬಂಧಕ್ಕಾಗಿ, ಮುರಿದು ಬಿದ್ದ ಸ್ನೇಹಕ್ಕಾಗಿ, ನಿರುದ್ಯೋಗದ ಕಾರಣಕ್ಕಾಗಿ, ಸದ್ದಿಲ್ಲದೆ ಜರುಗಿ ಹೋದ ಮೋಸಕ್ಕಾಗಿ, ಮಾರಾಮಾರಿ ವಂಚನೆಗಾಗಿ ಜೀವ ಕಳೆದುಕೊಳ್ಳುವವರು, ಆತ್ಮಹತ್ಯೆ ಮಾಡಿಕೊಳ್ಳುವವರು, ಮತ್ತೊಬ್ಬರ ಜೀವ ತೆಗೆಯುವವರ ನಡುವೆ, ಎಲ್ಲ ಕಳೆದುಕೊಂಡ ಮೇಲೂ ಯಾವುದೋ ಮಹತ್ತರವಾದ ಕಾರಣವೊಂದಕ್ಕಾಗಿ ಬದುಕಬೇಕು, ಬದುಕುತ್ತೇವೆ ಎಂದು ನಿರ್ಧರಿಸಿಕೊಂಡು ಹಾಗೆಯೇ ಬದುಕಲು ಒಂದು ಗಟ್ಟಿ ಸಂಕಲ್ಪ ಬೇಕಾಗುತ್ತದೆ. ತಣ್ಣಗೆ ಸಿಂಬಿ ಸುತ್ತಿ ಮಲಗಿರುವ ಹಾವಿನಂತಹ ದ್ವೇಷವನ್ನೂ, ಅಸೊಯೆಯನ್ನೂ, ಕೆಲವು ವ್ಯಸನಗಳನ್ನೂ ಎಲ್ಲ 'ತೊರೆದ' ಸೋಗಿನ ಮಧ್ಯೆಯೂ ತಣ್ಣಗೆ ಪೋಷಿಸುವವರ ನಡುವೆ ಜಾತಿ ಧರ್ಮಗಳ ಎಲ್ಲೆಗಳನ್ನು 'ನಿಜಕ್ಕೂ' ಮೀರಿ ಬದುಕುವ ಗೀತಕ್ಕನಂತಹವರು ಗ್ರೇಟ್ ಅನ್ನಿಸುವುದು ಆ ಸಂಕಲ್ಪದ ಕಾರಣದಿಂದಾಗಿಯೇ.



ನೋವಿನಲ್ಲಿ ನಲುಗುತ್ತಿರುವವರ ಹೆಗಲು ಬಳಸಿ ಅವರಾಡುತ್ತಿದ್ದ ಮಾತುಗಳು, ತುಂಬುತ್ತಿದ್ದ ಭರವಸೆ, ಸಾವಿರ ಸಂಕಟಗಳನ್ನು ಇಲ್ಲವಾಗಿಸುತ್ತಿದ್ದ ಅವರ ಒಂದು ಸ್ಪರ್ಶ ನನಗೆ ಮದರ್ ಥೆರೇಸಾ ಅವರನ್ನು ನೆನಪಿಸುತ್ತಿತ್ತು. ಒಮ್ಮೆ ಮಾತಿನ‌ ನಡುವೆ ಈ ಬಗ್ಗೆ ಹೇಳಿಯೂ ಇದ್ದೆ. ಆಗವರು  "ನಮ್ಮ ಇಡೀ ಕುಷ್ಠ ವ್ಯವಸ್ಥೆಗೇ ಪರಿಹಾರವಾಗಿ ಬಂದ ಮಹಾಮಾತೆ ಥೆರೆಸಾ. ಕ್ರೌರ್ಯದಿಂದ,   ಅಮಾನವೀಯತೆಯಿಂದ ಗಿಜಿಗುಡುತ್ತಿದ್ದ ಕೊಲ್ಕತ್ತಾದ ಬೀದಿಗಳನ್ನು ಶುದ್ಧೀಕರಿಸಲು ಒಂದಿಡೀ ಬದುಕನ್ನು ಪಣವಾಗಿಟ್ಟ ಅವರಿಗೆ ನನ್ನನ್ನು ಹೋಲಿಸಬೇಡ. ಬದುಕು ನನಗೆ ಅಳಲು ನೂರು ಕಾರಣಗಳನ್ನು ನೀಡಿದರೆ ನಗಲು ಸಾವಿರ ಕಾರಣಗಳನ್ನು ನೀಡಿತ್ತು. ಆದರೆ ಥೆರೆಸಾ ಹಾಗಲ್ಲ, ಎಲ್ಲ ಅನುಮಾನಗಳನ್ನು, ಅವಮಾನಗಳನ್ನು ನುಂಗಿಕೊಂಡು ತನ್ನದಲ್ಲದ ದೇಶದ ಸೇವೆಗೆ ನಿಂತವರು, ಅವರನ್ನು ನನ್ನ ಜೊತೆ ಅಂತಲ್ಲ, ಯಾರ ಜೊತೆಗೂ ಹೋಲಿಸಬೇಡ" ಎಂದು ಸುಮ್ಮನಾದರು. ನಾನು ಮತ್ತೇನೋ ಹೇಳಲು ಬಾಯಿ ತೆರೆಯುವ ಮುಂಚೆ ಅವರು ಮತ್ತೆ " ನೀನಿನ್ನೂ ಸಣ್ಣ ಹುಡುಗಿ ಇವೆಲ್ಲ ನಿನಗೆ ಅರ್ಥ ಆಗುವುದಿಲ್ಲ " ಎಂದು ನನ್ನ ಬಾಯಿ ಮುಚ್ಚಿಸಿದರು. ನಮ್ಮ ಸಂಭಾಷಣೆಯನ್ನು ಕೇಳಿಸಿಕೊಳ್ಳುತ್ತ ಪಕ್ಕದಲ್ಲೇ ಇದ್ದ ಅಮ್ಮ ಸುಮ್ಮನೆ ನಕ್ಕರು.

ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ಮರಳುವಾಗ ಗೀತಕ್ಕ ಇನ್ಮುಂದೆ ಸಿಗುವುದೇ ಇಲ್ಲವೇನೋ ಅನ್ನುವ ಸಂಕಟದಲ್ಲೇ ಹೊರಟಿದ್ದೆವು. ವಿಳಾಸ, ಫೋನ್ ನಂಬರ್ ಕೇಳಿದಾಗ ಅವರು ಕೊಡಲು ಸುತಾರಾಮ್  ಒಪ್ಪಿರಲಿಲ್ಲ. ಅಮ್ಮನೂ ಒಳ್ಳೆಯತನದ ವಿಳಾಸ ಬಲವಂತವಾಗಿ ಕೇಳಬಾರದು ಅಂತ ನನಗೆ ಕಟ್ಟು ನಿಟ್ಟಾಗಿ ಹೇಳಿಬಿಟ್ಟಿದ್ದರು. ಗೀತಕ್ಕ ಎಂಬ ಸ್ಥಾಯೀಭಾವ ಆಗಾಗ ಕಾಡುತ್ತಿರುವಂತೆಯೇ ವರ್ಷವೊಂದು ಕಳೆದು ಮತ್ತೆ ಅದೇ ಆಸ್ಪತ್ರೆಗೆ ಅಮ್ಮ ಚೆಕ್ ಅಪ್ ಗೆಂದು ದಾಖಲಾದರು‌. ಯಾವ ಋಣಾನುಬಂಧವೋ ಏನೋ ಗೀತಕ್ಕ ಮತ್ತೆ ಸಿಕ್ಕರು. ಆದರೆ ಈ ಬಾರಿ ಮಾತ್ರ ಅನ್ನನಾಳದ ಕ್ಯಾನ್ಸರ್ ಗಂಟಲುವರೆಗೆ ಹಬ್ಬಿ ಅವರ ಮಾತನ್ನು ಕಸಿದುಕೊಂಡಿತ್ತು. ಅವರನ್ನು ಮಾತಾಡಿಸಲು ಪ್ರಯತ್ನಿಸಿದರೆ, ಅವರು ನನ್ನ ಕೈ ಮೇಲೆ ಅವರ ಸೋಲೊಪ್ಪದ ಕೃಶ ಅಂಗೈಯನ್ನಿಟ್ಟು ಮೆಲ್ಲಗೆ ಅದುಮಿದರು. ನನ್ನ ಗಂಟಲುಬ್ಬಿ ಬಂತು, ಇಡೀ ಕ್ಯಾನ್ಸರ್ ವಾರ್ಡನಲ್ಲಿದ್ದ ರೋಗಿಗಳಿಗೆ ಆತ್ಮಸ್ಥೈರ್ಯ ತುಂಬುತ್ತಿದ್ದ ಗೀತಕ್ಕನ ಯಾವ ಅಂಗವನ್ನಾದರೂ ಕಿತ್ತುಕೋ ಭಗವಂತಾ, ಆದರೆ ಮಾತು ಮಾತ್ರ ಮರಳಿಸು ಎಂದು ಮೌನವಾಗಿ ಮೊರೆಯಿಟ್ಟು ಬವಳಿ ಬಂದಂತಾಗಿ ಪಕ್ಕದಲ್ಲಿದ್ದ ಅಮ್ಮನ ಹೆಗಲು ಬಳಸಿದೆ. ಕಣ್ಣು ಹೊರಳಿಸಿ ನೋಡಿದರೆ, ಗುಬ್ಬಿಯಂತೆ ಮಲಗಿದ್ದ ಗೀತಕ್ಕ ಪುಟ್ಟ ದೇವತೆಯಂತೆ ನಗುತ್ತಿದ್ದರು.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ