ಗುರುವಾರ, ಮಾರ್ಚ್ 19, 2015

ಹೀಗೊಂದು ದಿನ...

ನನ್ನ ಎಂಟನೇ ತರಗತಿಯ ಮಧ್ಯಾವಧಿ ಪರೀಕ್ಷೆಗಳು ಮುಗಿದು ರಜೆ ಸಿಕ್ಕು ಒಂದೇ ವಾರ ಆಗಿತ್ತು. ಅಜ್ಜಿಯ ಮೂರನೇ ವರ್ಷದ ಶ್ರಾದ್ದಕ್ಕೆಂದು ಮನೆ ತುಂಬಾ ನೆಂಟರಿಷ್ಟರು ಸೇರಿದ್ದರು. ಅತ್ತೆಯಂದಿರಿಗೆಲ್ಲಾ ಶ್ರಾದ್ಧದ ನೆಪದಲ್ಲಾದರೂ ತವರಿಗೆ ಬಂರ ಸಂಭ್ರಮ. ಅನಿರೀಕ್ಷಿತವಾಗಿ ದೊಡ್ಡವರ ಮಾತಿನ ಮಧ್ಯ ಅಜ್ಜಿ ನೆನಪು ಆಗೊಮ್ಮೆ ಈಗೊಮ್ಮೆ ಬಂದು ಹೋಗುತ್ತಿತ್ತಾದರೂ ಆಗಿನ್ನೂ ಮಕ್ಕಳೇ ಆಗಿದ್ದ ನಾವು ಮಾತ್ರ ಯಾವ ಯೋಚನೆಯೂ ಇಲ್ಲದೆ ಮನೆ ಅಂಗಳದಿ ಹಾಕಿದ್ದ ಚಪ್ಪರದಡಿಯಲ್ಲಿ ಸಂಗೀತ ಖುರ್ಚಿ ಆಡುವುದರಲ್ಲಿಯೇ ಮಗ್ನವಾಗಿದ್ದೆವು.

ಇದ್ದಕ್ಕಿದ್ದಂತೆ ಹೊಟ್ಟೆಯಲ್ಲಿ ಏನೋ ಸಂಕಟವಾಗಲಾರಂಭಿಸಿತು. ನನಗೇ ಗೊತ್ತಿಲ್ಲದ ಹಾಗೆ ನನ್ನ ದೇಹದೊಳಗೆ ಏನೋ ನಡೆಯುತ್ತಿದೆ ಅನಿಸಲಾರಂಭಿಸಿತು. ನನ್ನೆರಡೂ ಕೈಗಳು ತನ್ನಿಂತಾನೇ ಹೊಟ್ಟೆಯನ್ನು ಗಟ್ಟಿಯಾಗಿ ತಬ್ಬಿಕೊಂಡವು. ನನಗೇನಾಗುತ್ತಿದೆ ಅನ್ನುವುದು ಗೊತ್ತಾಗದೆ ನಾನು ಅಡುಗೆ ಮನೆಯಲ್ಲಿ ಅತ್ತೆ-ಚಿಕ್ಕಮ್ಮಂದಿರ ಜೊತೆ ಕುಳಿತಿದ್ದ ಅಮ್ಮನ ಬಳಿ ಹೋಗಿ "ನನಗೇನೋ ಆಗುತ್ತಿದೆ, ಹೊಟ್ಟೆಯೊಳಗೇನೋ ವಿಚಿತ್ರ ಸಂಕಟವಾಗುತ್ತಿದೆ" ಅಂದೆ.

ಅಮ್ಮನ ಮುಖದಲ್ಲಿ ಗಲಿಬಿಲಿಯುಕ್ತ ಸಂತಸ, ಕಣ್ಣಂಚಲಿ ತೆಳುವಾಗಿ ಕಣ್ಣೀರು. ನನ್ನನ್ನು ತಬ್ಬಿಕೊಂಡೇ ಒಳಕೋಣೆಗೆ ಕರೆದುಕೊಂಡು ಹೋಗಿ ನಿಧಾನವಾಗಿ ಮಲಗಿಸಿದರು. ಯಾವುದೋ ಟ್ರಾನ್ಸ್ ಗೊಳಗಾದಂತೆ ಮತ್ತೆ ಅಡುಗೆ ಮನೆಗೆ ಹೋಗಿ ಅದೆಲ್ಲಿಂದಲೋ, ಯಾವ್ಯಾವುದೋ ಬೇರುಗಳನ್ನು ಬೆರೆಸಿ ಕಡು ಹಸಿರು ಬಣ್ಣದ ಕಷಾಯ ಮಾಡಿಕೊಟ್ಟರು.  ನಾನಿಲ್ಲಿ ನೋವಿಂದ ಒದ್ದಾಡುತ್ತಿದ್ದರೆ ಅಮ್ಮನ ಮುಖದಲ್ಲೇಕೆ ನಗು? ಎಂದೂ ಇಲ್ಲದ 'ವಿಶೇಷ' ಕಾಳಜಿ ಈಗೇಕೆ ತೋರುತ್ತಿದ್ದಾರೆ? ನಾನು ಬೇಡ ಅನ್ನುತ್ತಿದ್ದರೂ ಕಷಾಯ ಕುಡಿಯಲೇಬೇಕೆಂದು ಯಾಕೆ ಇಷ್ಟೊಂದು  ಒತ್ತಾಯ ಮಾಡುತ್ತಿದ್ದಾರೆ? ಮನೆಯಲ್ಲಿ ಸಮಾರಂಭ ನಡೆಯುತ್ತಿದ್ದರೂ ಅಮ್ಮ ನನ್ನನ್ನು ಬಿಟ್ಟು ಒಂದರೆಕ್ಷಣವೂ ಯಾಕೆ ದೂರ ಹೋಗ್ತಿಲ್ಲ? ಎಂಬೆಲ್ಲಾ ಪ್ರಶ್ನೆಗಳು ತಲೆ ತುಂಬಾ ಓಡುತ್ತಿದ್ದವು. ಅಮ್ಮನ ಈ ಮುಖ ನನಗೆ ತೀರಾ ಹೊಸದಾಗಿತ್ತು. ಈ ಎಲ್ಲಾ 'ಅನುಭವ'ಗಳನ್ನು ದಾಟಿ ಬಂದಿರುವ ಅಕ್ಕಂದಿರು ಬೇರೆ ಪಿಸ-ಪಿಸ ಅನ್ನುತ್ತಿದ್ದರು.

ನನಗೆಲ್ಲಾ ಆಯೋಮಯ ಅನ್ನಿಸುತ್ತಿತ್ತು. ದುಗುಡದಿಂದ ಕೋಣೆಯೊಳಗೆ ಬಂದ ದೊಡ್ಡತ್ತೆ ಏನಾಯಿತೆಂದು ಕೇಳಿದರು. ಅಮ್ಮ ಸಂಭ್ರಮದಿಂದ ನನ್ನ ಮಗಳು ದೊಡ್ಡವಳಾಗಿದ್ದಾಳೆ ಅಂದು ಬಿಟ್ಟರು.  ಅಮ್ಮ ಹೇಳ್ತಿರೋದನ್ನು ನಂಬೋಕೆ ಒಂದು ಕ್ಷಣ ಹಿಡಿಯಿತು ನನಗೆ. ಕಿಬ್ಬೊಟ್ಟೆಯ ಆಳದಲ್ಲಿ ಕಿವುಚುತ್ತಿರೋ ನೋವು, ಇನ್ನೇನು ಬಿದ್ದೇ ಹೋಗುತ್ತದೆ ಅನ್ನುವಷ್ಟು ಸೆಳೆಯುತ್ತಿದ್ದ ಸೊಂಟ ನನ್ನನ್ನು ಭ್ರಮಾಧೀನ ಸ್ಥಿತಿಯಿಂದ ಹೊರಗೆ ತಂದು ವಾಸ್ತವಕ್ಕಭಿಮುಖವಾಗಿ ನಿಲ್ಲಿಸಿತು. ಜತೆಗೆ ಸಾಯಿಸುತೆ ಕಾದಂಬರಿಗಳಲ್ಲಿ ಬರುತ್ತಿದ್ದ ನಾಯಕಿಯ ಚಿತ್ರಣದಲ್ಲಿ ಇವೆಲ್ಲಾ ಇರುತ್ತದೆ ಅನ್ನುವುದು ನೆನಪಾಗಿ ಅಮ್ಮನಿಗೆ ಕನ್ಫ್ಯೂಸ್ ಆಗಿರುವುದಲ್ಲ, ನಾನು ನಿಜಕ್ಕೂ ದೊಡ್ಡವಳಾಗಿದ್ದೇನೆ ಅನಿಸಿತು. ಆ ಕ್ಷಣಕ್ಕೆ ನನ್ನಲ್ಲಿದ್ದ ಭಾವ ಯಾವುದು? ನನಗಾಗ ಸಂಕೋಚವಾಗಿತ್ತೇ, ಸಂತಸವಾಗಿತ್ತೇ, ಭಯವಾಗಿತ್ತೇ, ಮುಜುಗರವಾಗಿತ್ತೇ...? ಸರಿಯಾಗಿ ನೆನಪಾಗುತ್ತಿಲ್ಲ ಈಗ. ಆದರೆ ಅಂತರಾಳದಲ್ಲೆಲ್ಲೋ ನಾ ಸ್ವಾತಂತ್ರ್ಯ ಕಳೆದುಕೊಂಡು ಬಿಡುತ್ತೇನೇನೋ ಅನ್ನಿಸುತ್ತಿತ್ತು. ಎಲ್ಲರ ಜೊತೆ ಅನಾಯಾಸವಾಗಿ ಬೆರೆಯುತ್ತಿದ್ದ ನನ್ನ ನಿರ್ಭಿಡತ್ವಕ್ಕೆ ಎಲ್ಲಿ ಧಕ್ಕೆಯಾಗುತ್ತೋ ಅನ್ನಿಸುತ್ತಿತ್ತು. ಯಾವತ್ತೂ ನನ್ಮೇಲಿನ ಪ್ರೀತಿಯನ್ನು ಬಹಿರಂಗವಾಗಿ ವ್ಯಕ್ತಪಡಿಸದ ಅಪ್ಪ ಅವತ್ಯಾಕೋ ಭಾವುಕರಾಗಿ ನನ್ನ ತಬ್ಬಿಕೊಂಡು ಕಣ್ಣೀರಿಟ್ಟರು.  ಏನೇನೋ ಅರ್ಥವಾಗದಂತಿದ್ದ ಅಣ್ಣ ದೂರದಲ್ಲಿ ನಿಂತು ಕಣ್ಣಲ್ಲೇ ಇದೆಲ್ಲಾ ಏನು ಎಂಬಂತೆ ನನ್ನ ಪ್ರಶ್ನಿಸುತ್ತಿದ್ದರೆ ಎಲ್ಲಾ ಅರ್ಥವಾದಂತ್ತಿದ್ದ ಚಿಕ್ಕಪ್ಪ ವಿಷಾದವೇ ಮೂರ್ತೀಭವಿಸಿದಂತಿದ್ದರು.

ಹೊಸ ಅನುಭವದ ಕಿರಿ ಕಿರಿ,  ರಜೆ ಮುಗಿದು ಶಾಲೆ ಶುರುವಾದ ಮೇಲೆ ಏನು ಅನ್ನುವ ಗೊಂದಲ ಎಲ್ಲಾ ಸೇರಿ ಮನಸು ಬಿರುಗಾಳಿಗೆ ಸಿಕ್ಕ ತರಗೆಲೆಯಂತಾಗಿತ್ತು. ತೆಂಗಿನ ಗರಿಗಳ ಮಧ್ಯ ಇಣುಕುತ್ತಿದ್ದ ಚಂದ್ರನೂ ಅಸಹನೀಯ ಅನಿಸತೊಡಗಿದ. ಅಕ್ಕಂದಿರು ಬೇರೆ 'ಮಾಡಬಾರದ' ಮತ್ತು 'ಮಾಡಲೇಬಾರದ' ಕೆಲಸಗಳ ದೊಡ್ಡ ಪಟ್ಟಿಯನ್ನು ಕೊಟ್ಟಿದ್ದರು. ಆ ಪಟ್ಟಿಯಲ್ಲಿದ್ದುದು ಯಾವುದೂ ಮಾಡದೇ ಇರಲು ನನ್ನಿಂದ ಸಾಧ್ಯವೇ ಇರಲಿಲ್ಲ. ಹಾಗೂ ಹೀಗೂ ಇರುಳು ಕಳೆದು ಮತ್ತೆ ಬೆಳಕು ಹರಿಯಿತು.  ಎಂದಿನಂತೆದ್ದು ನಮಾಜಿಗೆಂದು ಸಿದ್ಧವಾದಾಗ ಹೊಟ್ಟೆಯೊಳಗಿನ ಸಂಕಟ ಇವತ್ತು ನಮಾಜು ಮಾಡುವ ಹಾಗಿಲ್ಲ ಅನ್ನುವುದನ್ನು ಒದ್ದು ಹೇಳಿದಂತೆನಿಸಿತು. ಒಂದು ಕ್ಷಣ ಮುಖ ಮುಚ್ಚಿ ಸುಮ್ಮನೆ ಕೂತೆ. ಮೊದಲ ಬಾರಿ ಯಾಕಾದರೂ ದೊಡ್ಡವಳಾದೆನೋ ಅನಿಸಿತು. ಮರುಕ್ಷಣ ಮನಸು ಸಾಯಿಸುತೆ ಕಾದಂಬರಿ ಓದಿದಾಗೆಲ್ಲಾ 'ಋತುಮತಿಯಾದ ಕೂಡಲೇ ಈ ಹುಡುಗಿಯರೇಕೆ ಹೀಗೆ ವಿಪರೀತವಾಗಿ ಆಡುತ್ತಾರೆ, ನಾನಂತೂ ಹಾಗೆ ಮಾಡಲ್ಲ' ಅನ್ನುವ ಶಪಥ ಮಾಡಿದ್ದನ್ನು ನೆನಪಿಸಿತು.

ಎಲ್ಲಾ ಗೊಂದಲಗಳನ್ನು ಅಲ್ಲೇ ಬಿಟ್ಟು ಎಂದಿನಂತೆ ಅಣ್ಣನ ಜತೆ ಕ್ರಿಕೆಟ್ ಆಡಲೆಂದು ಅಂಗಳಕ್ಕಿಳಿದೆ. ಇನ್ನೇನು ಟಾಸ್ ಹಾಕಬೇಕು ಅನ್ನುವಷ್ಟರಲ್ಲಿ ಎಲ್ಲಿಂದಲೋ ಬಂದ ದೊಡ್ಡತ್ತೆ "ನೀನೀಗ ದೊಡ್ಡವಳಾಗಿದ್ದಿ, ಹೀಗೆಲ್ಲಾ ಹುಡುಗರ ಜತೆ ಬೇಕಾಬಿಟ್ಟಿ ಆಟ ಆಡುವಂತಿಲ್ಲ, ಇವತ್ತಿಂದಲೇ ಮನೆಕೆಲಸ ಮಾಡುವುದನ್ನು ಅಭ್ಯಾಸ ಮಾಡಿಕೋ" ಅಂದರು. ನಿಜಕ್ಕೂ ದೊಡ್ಡವಳಾಗಿರುವುದಕ್ಕೆ ನಾ ತೆರಬೇಕಾಗಿದ್ದ ಬೆಲೆ ಏನೆಂಬುವುದು ನನಗರ್ಥ ಆದದ್ದು ಆಗಲೇ. ಆದರೂ ನನಗೆ ಆಡಲೇಬೇಕೆಂದು ವಾದ ಮಾಡಿದೆ, ಕಿರುಚಾಡಿದೆ. ಕೊನೆಗೆ ಅಪ್ಪ ಬಂದ್ರು. ಅತ್ತೆ ಅಪ್ಪನ ಹತ್ರ ದೂರು ಹೇಳಿದ್ರು. ಅಪ್ಪ ನನ್ನ ಬಳಿ ಬಂದು "ಅವಳು ಅತ್ತೆಯ ಮಗಳ ಮದುವೆ ಮುಗಿಸಿ ಇನ್ನೇನು ಒಂದು ವಾರದಲ್ಲಿ ಅವಳ ಮನೆಗೆ ಹೊರಟು ಹೋಗುತ್ತಾಳೆ, ಅಲ್ಲಿಯವರೆಗೆ ಸುಮ್ಮನಿದ್ದು ಬಿಡು. ಆಮೇಲೆ ಅದೆಷ್ಟು ಬೇಕಾದರೂ ಆಡಿಕೋ. ಈಗ ಮನೆಯೊಳಗೆ ಹೋಗು" ಅಂದರು. ಅಪ್ಪನಿಗೆ ತಂಗಿ ಸಂಬಂಧ ಉಳಿಸಿಕೊಳ್ಳುವುದು ಅನಿವಾರ್ಯವಾಗಿತ್ತು ಮತ್ತು ನಿನ್ನೆಯಷ್ಟೇ ಮೈನೆರೆದ ಮಗಳು ಪ್ರಕೃತಿಧರ್ಮದ ವಿರುದ್ಧ ಹೋಗಿ ಎಲ್ಲಿ ಆರೋಗ್ಯ ಹಾಳು ಮಾಡಿಕೊಂಡು ಬಿಡುತ್ತಾಳೋ ಅನ್ನುವ ಭಯವೂ ಕಾಡಿರಬಹುದು. ಆದರೆ ತಪ್ಪೇ ಮಾಡದ ನಾನ್ಯಾಕೆ ಆಟ ಆಡಬಾರದು ಅನ್ನುವ ನನ್ನ ಪ್ರಶ್ನೆ ಹೇಳೋರಿಲ್ಲದೆ, ಕೇಳೋರಿಲ್ಲದೆ ಬೇಲಿಯಂಚಲಿ ಅರಳಿದ ಕಾಗದದ ಹೂವಿನಂತೆ ಅನಾಥವಾಯಿತು.

ಅಪ್ಪನ ಮಾತಿಗೆ ಬೆಲೆ ಕೊಟ್ಟು ನಾನೇನೋ ಮನೆಯೊಳಗಡೆ ಹೋದೆ. ಆದರೆ ಆತ್ಮಸಾಕ್ಷಿ ಪದೇ ಪದೇ ಇಷ್ಟು ಬೇಗ ಸೋತು ಬಿಟ್ಟೆಯಾ ಎಂದು ಪ್ರಶ್ನಿಸುತ್ತಿತ್ತು. ಆದರೆ ಏನೂ ಮಾಡದವಳಾಗಿದ್ದೆ. ಮನಸೆಲ್ಲಾ ಭಾರ ಭಾರ. ಪುಸ್ತಕ ಹಿಡಿದು ಕೂತರೂ ಅಕ್ಷರಗಳೊಂದೂ ಅಕ್ಷಿಪಟಲವ ದಾಟಿ ಮುಂದೆ ಹೋಗುತ್ತಿರಲಿಲ್ಲ. ಯಾವ ಕ್ಷಣ ನಿದ್ದೆಹೋದೆನೋ ನನಗೆ ಗೊತ್ತಿಲ್ಲ. ಆದರೆ ಕಣ್ಣು ಬಿಡುವಾಗ ಪಕ್ಕದಲ್ಲಿ ಅಣ್ಣ ಕೂತಿದ್ದ. ನಾ ಗಳಗಳನೇ ಅತ್ತುಬಿಟ್ಟೆ.

ನನ್ನ ಕಣ್ಣೀರನ್ನು ನನಗಿಂತಲೂ ಹೆಚ್ವು ದ್ವೇಷಿಸುತ್ತಿದ್ದ ಅಣ್ಣ, ಚಿಕ್ಕಪ್ಪನ ಮನಸಲ್ಲಿ ಬಹುಶಃ ಆಗಲೇ ಕಿಚ್ಚು ಹತ್ತಿರಬೇಕು. ನನಗೊಂದೂ ಮಾತು ಹೇಳದೆ ಅವರಿಬ್ಬರೂ ಸೂಕ್ತ ಸಮಯಕ್ಕಾಗಿ ಕಾಯುತ್ತಿದ್ದರು. ಅಪ್ಪನ ಮಾವನ ಮಗಳ ಮದುವೆಗೆ ಉಡಲೆಂದು ಅತ್ತೆ ತಂದಿದ್ದ ಸೀರೆಯನ್ನು ಅವರಿಬ್ಬರೂ ಸೇರಿ ಅಲ್ಲಲ್ಲಿ ಹರಿದು ಹಾಕಿ ಮತ್ತೆ ಪೆಟ್ಟಿಗೆಯೊಳಗೆ ನೀಟಾಗಿ ಮಡಚಿ ಇಟ್ಟುಬಿಟ್ಟಿದ್ದರು. ಮದುವೆಯ ದಿನ ಬೆಳಗ್ಗೆದ್ದು ನೋಡುವಾಗ ಹೊಸ ಸೀರೆ ಅಲ್ಲಲ್ಲಿ ಇಲಿ ತಿಂದಂತೆ ಹರಿದು ಹೋಗಿತ್ತು. ಅತ್ತೆ ಪೇಚಾಡುತ್ತಿದ್ದರೆ ಅವರಿಬ್ಬರೂ ತಮ್ಮ ತಮ್ಮಲ್ಲೇ ನಗುತ್ತಿದ್ದರು.  ಅಮ್ಮನಿಗೆ ಸ್ವಲ್ಪ ಅನುಮಾನವಿತ್ತಾದರೂ ನಿಜಕ್ಕೂ ನಡೆದದ್ದೇನೆಂದು ಯಾರಿಗೂ ಗೊತ್ತಾಗಲೇ ಇಲ್ಲ.

ಆದರೆ ಎಲ್ಲಾ ಗೊತ್ತಿದ್ದ ನಾನು ಸುಮ್ಮನೆ ತಲೆತಗ್ಗಿಸಿದೆ. ಆ ಕ್ಷಣಕ್ಕೆ ಅವರಿಬ್ಬರೂ ಗೆದ್ದಿದ್ದರೂ ನಾ ಬಯಸಿದ್ದು ಕ್ಷಣಿಕ ಗೆಲುವಾಗಿರಲಿಲ್ಲ. ನನಗೆ ತಾರ್ಕಿಕ ಗೆಲುವು ಬೇಕಿತ್ತೇ ಹೊರತು ಅತ್ತೆಯನ್ನು ಅವಮಾನ ಮಾಡುವ ಉದ್ದೇಶ ನನಗಿರಲಿಲ್ಲ. ನನ್ನ ಬೆನ್ನ ಹಿಂದಿದ್ದ ಅಷ್ಟೂ ತಂಗಿಯಂದಿರಿಗೆ 'ದೊಡ್ಡವರಾಗು'ವ ಪ್ರಕೃತಿ ಸಹಜ ಪ್ರಕ್ರಿಯೆ ಅವರ ಮಾನಸಿಕ ಬೆಳವಣಿಗೆಗೆ ತಡೆಗೋಡೆ ಆಗಬಾರದು ಅನ್ನುವುದೇ ನನ್ನ ಉದ್ದೇಶವಾಗಿತ್ತು.  ವಯಸ್ಸಿನಲ್ಲಿ ನನಗಿಂತ ಹಿರಿಯರಾಗಿದ್ದ ಅತ್ತೆಯ ಜೊತೆ ಜಗಳ ಮಾಡಿದ್ದು, ವಾದ ಮಾಡಿದ್ದು, ಕಿರುಚಾಡಿದ್ದು ಎಲ್ಲಾ ಅದಕ್ಕಾಗಿಯೇ. ನನ್ನ ತಾತ್ವಿಕ ಜಗಳದ ಕಾರಣ ಕೊನೆಗೂ ಅವರಿಗೆ ಅರ್ಥ ಆಗಲೇ ಇಲ್ಲ. ಅಥವಾ ಅರ್ಥ ಮಾಡಿಸುವಲ್ಲಿ ನಾನೇ ವಿಫಲಳಾದೆ.

ಇವೆಲ್ಲಾ ಆಗಿ ತುಂಬಾ ವರ್ಷಗಳೇ ಕಳೆದು ಹೋಗಿವೆ. ಆದ್ರೂ ಇವೆತ್ತೇ ಇದೆಲ್ಲಾ ಯಾಕೆ ನೆನಪಾಯ್ತು ಅಂದ್ರೆ ಎಸ್.ಎಸ್.ಎಲ್.ಸಿ ಸಿದ್ಧತಾ ಪರೀಕ್ಷೆಗೆ ನಮ್ಮನೆಗೆ ಓದಲೆಂದು ಬಂದ ಅದೇ ಅತ್ತೆಯ ಮೊಮ್ಮಗಳು ಇವತ್ತು ಋತುಮತಿಯಾದಳು. ಗೊಂದಲ, ಗಲಿಬಿಲಿಯಲ್ಲಿ ಅವಳು ಕೇಳಿದ "ದೀದೀ, ನನಗೇನೂ ಆಗಲ್ಲ ಅಲ್ವಾ? ಅಜ್ಜಿ ನನ್ನನ್ನು ಶಾಲೆಗೆ ಹೋಗುವುದು ಬೇಡ ಅನ್ನಲ್ಲ ಅಲ್ವಾ?" ಅನ್ನುವ ಪ್ರಶ್ನೆ ನಾ 'ದೊಡ್ಡವ'ಳಾದ ಆ ಕ್ಷಣವನ್ನು ನೆನಪಿಸಿ ಇಷ್ಟೆಲ್ಲಾ ಬರೆಯಿಸಿತು

1 ಕಾಮೆಂಟ್‌: