ಸೋಮವಾರ, ಮಾರ್ಚ್ 30, 2015

ಮರಳಿ ಬರಲಾರೆಯಾ ಬಾಲ್ಯ...?

ಬಾಲ್ಯ ಅನ್ನುವುದೇ ಒಂದು ಸಂಭ್ರಮ. ಆ ಸಂಭ್ರಮಕ್ಕೆ ಬಣ್ಣ ತುಂಬುತ್ತಿದ್ಧುದು  ಹಳ್ಳಿಗಳಲಿ ಮಾತ್ರ ಕಾಣ ಸಿಗುವ ಕಾಡ ಎಡೆಯಲಿ, ಗುಡ್ಡದ ತುದಿಯಲಿ ಸಿಗುತ್ತಿದ್ದ ನೇರಳೆ, ಪೇರಳೆಗಳಂತಹ ಹಣ್ಣುಗಳು.

ಪಕ್ಕಾ ಠಪೋರಿಯಾಗಿದ್ದ ನಾನು ಮತ್ತು ನನ್ನ ವಾನರ ಸೈನ್ಯ ಮನೆಯವರ ಕಣ್ಣು ತಪ್ಪಿಸಿ ನೇರಳೆ ಹಣ್ಣು ಕೊಯ್ಯಲು ಮನೆ ಹಿಂದೆ ಇರುವ ಕಾಡಿಗೆ ಹೋದೆವು ಅಂದ್ರೆ ಅವತ್ತು ಏನಾದರೂ ಒಂದು ಅನಾಹುತ ಗ್ಯಾರಂಟಿ. ಹೀಗೆ ಒಂದು ದಿನ ಕಾಡಿಗೆ ಹೋದಾಗ ಅಲ್ಲಲ್ಲಿ ಬಿದಿರಿನ ಮುಳ್ಳು ನಮ್ಮನ್ನು ತಡೀತಾ ಇತ್ತು. ಪುಟ್ಟ ತಂಗಿ ಕಾಲಿಗೆ ಅದ್ಯಾವುದೋ ಒಂದು ಮುಳ್ಳು ತಾಗಿ ಜೋರಾಗಿ ಅಳೋಕೆ ಶುರು ಮಾಡಿದ್ಳು. ನಮ್ಮ ಸೈನ್ಯದಲ್ಲಿದ್ದ 'ದೊಡ್ಡವರು' ಅಂದ್ರೆ ಎಂಟನೇ ತರಗತಿಯಲ್ಲಿ ಓದುತ್ತಿದ್ದ ಚಿಕ್ಕಪ್ಪ. ಹೇಗೂ ಕಷ್ಟಪಟ್ಟು ಅವ್ಳ ಕಾಲಿನಿಂದ ಮುಳ್ಳು ತೆಗ್ದು ಅವತ್ತಿನ ಪ್ರೋಗ್ರಾಂ ಕ್ಯಾನ್ಸಲ್ ಮಾಡಿ ಮನೆಗೆ ವಾಪಾಸಾದೆವು.

ಆದ್ರೆ ನೇರಳೆ ಹಣ್ಣಿನ ಸೆಳೆತ ಬಿದಿರಿನ ಮುಳ್ಳಿಗಿಂತಲೂ  ಬಲವಾಗಿತ್ತು. ಹೇಗಾದ್ರೂ ಮಾಡಿ ಕಾಡಿಗೆ ಹೋಗ್ಲೇ ಬೇಕಿತ್ತು. ಆಗ ಬಿದಿರನ್ನು ನಮ್ಮ ದಾರಿಯಿಂದ ಮುಳ್ಳಿಗಿಂತಲೂ ನಮ್ಮ ಕೋಟಿ ಬಾಳುವ ತಲೆಗೆ ಹೊಳೆದ ಮಾಸ್ಟರ್ ಪ್ಲಾನ್ ಬಿದಿರಿನ ಬೊಡ್ಡೆಗೆ ಬೆಂಕಿ ಹಚ್ಚುವುದು. ಸರಿ, ಸೈನ್ಯದಲ್ಲಿದ್ದ ಒಬ್ಬೊಬ್ಬರೂ ಒಂದೊಂದು ಸಲಹೆ ನೀಡಿದರು. ಕೊನೆಗೆ ಶುಕ್ರವಾರ ಮಧ್ಯಾಹ್ನ ಎಲ್ಲರೂ ಮಸೀದಿಗೆ ಹೋದ ಸಮಯ ನೋಡಿ ಬೆಂಕಿ ಹಚ್ಚುವುದು ಎಂದು  ಒಂದು ಮುಹೂರ್ತ ಫಿಕ್ಸ್ ಮಾಡಿ ನಮ್ಮ ಘನಂದಾರಿ ಕೆಲಸದ ಬಗ್ಗೆ ಯಾರ ಹತ್ರಾನೂ ಬಾಯಿ ಬಿಡ್ಬಾರ್ದು ಅಂತ ಪ್ರತಿಜ್ಣೆ ಮಾಡ್ಕೊಂಡ್ವಿ.

ಶುಕ್ರವಾರ ಬಂತು, ನಮ್ಮ ಸೈನ್ಯದಲ್ಲಿದ್ದ ಮರಿ ವಾನರಗಳನ್ನೂ ಸೇರಿಸಿ ಎಲ್ರೂ ಸ್ನಾನ ಮಾಡಿ ನಮಾಜ್ ಗೆ ಹೋಗೋಕೆ ರೆಡಿ ಆದ್ರು. ನಿಜ ಏನಂದ್ರೆ ಅವತ್ತು ಬೆಳಗ್ಗಿನ ನಮಾಜಲ್ಲೇ ಮಧ್ಯಾಹ್ನ ಮಸೀದಿಗೆ ಬರಕ್ಕಾಗಲ್ಲ ಅಂತ ದೇವರನ್ನ ಕೇಳಿ ರಜೆ ತಂಗೊಡಾಗಿತ್ತು. ಸ್ನಾನ ಆದ ಕೂಡ್ಲೇ ಮಸೀದಿಗೆ ಬನ್ನಿ ಅಂತಂದು ದೊಡ್ಡವರೆಲ್ರೂ ಮಸೀದಿಗೆ ಹೋದ್ರು. ಅಚ್ಛ ಬಿಳಿ ಶರ್ಟ್ ಮತ್ತು ಲುಂಗಿ ಧರಿಸಿದ ಹುಡುಗರು ಜೊತೆಗೆ ಒಂದಿಷ್ಟು ಹುಡುಗಿಯರು ಸೇರಿ ಸೀಮೆ ಎಣ್ಣೆ ಬೆಂಕಿ ಪೆಟ್ಟಿಗೆಯೊಂದಿಗೆ ಕಾಡಿಗೆ ಹೋಯ್ತು ನಮ್ಮ ವಾನರ ಸೈನ್ಯ.

ಬಿದಿರಿನ ಬೊಡ್ಡೆಗೆ ಅಲ್ಲಿದ್ದ ತರಗೆಲೆಗಳನ್ನೆಲ್ಲಾ ಒಟ್ಟು ಸೇರಿಸಿ ಹಾಕಿ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿ ಬಿಟ್ವಿ. ಬೆಂಕಿ ಉರೀತಾ ಇದ್ದುದನ್ನು ನೋಡ್ತಾ ನೋಡ್ತಾ ನಮ್ಮ ಉತ್ಸಾಹ ಮತ್ತಷ್ಟು ಜಾಸ್ತಿ ಆಯಿತು. ಮತ್ತೆ ಸೀಮೆ ಎಣ್ಣೆ ಸುರಿದು ಬೆಂಕಿ ಜಾಸ್ತಿ ಮಾಡಿದೆವು.  ಮೊದಮೊದಲು ಬೆಂಕಿ ನೋಡಿ ಖುಶಿ ಆಗಿದ್ರೆ ಈಗ ಬೆಂಕಿ ಪಕ್ಕದ ಬೊಡ್ಡೆಗೂ ಹರಡಿರುವುದನ್ನು ನೋಡಿ ಭಯ ಆಗೋಕೆ ಶುರು ಆಯ್ತು. ಎಲ್ರೂ ಮುಂದೇನು ಅಂತ ಚಿಕ್ಕಪ್ಪನ ಮುಖ ನೋಡಿದ್ರೆ ಅವ್ರೂ ಬ್ಲಾಂಕ್ ಆಗಿ ನಿಂತಿದ್ರು.

ಅಷ್ಟರಲ್ಲಿ ಮಸೀದಿಗೆ ಹೋಗಿದ್ದ ಅಪ್ಪ ಅಲ್ಲಿ ಯಾವ ಹುಡುಗರೂ ಇಲ್ಲದನ್ನು ನೋಡಿ ನಮಾಜ್ ಮುಗಿಸಿ ಕೆಂಡಾಮಂಡಲವಾಗಿ ಮನೆಗೆ ಬಂದಿದ್ರು. ಮನೆಯಲ್ಲೂ ಮಕ್ಕಳಿಲ್ಲ. ಅಪಾಯದ ವಾಸನೆ ಬಡಿಯಿತವರಿಗೆ. ನಮ್ಮನ್ನು ಹುಡುಕೋಕೆ ಅಂತ ಹೊರಟವರಿಗೆ ಕಾಡಿನಲ್ಲಿ ಹೊಗೆ ಬರ್ತಿರುವುದು ಕಾಣಿಸಿತು. ಮನೆಗೆ ಕೆಲಸಕ್ಕೆ ಬರುವವರನ್ನು ಜೊತೆಗೆ ಕರ್ಕೊಂಡು ಅಪ್ಪ ಕಾಡಿಗೆ ಹೋದ್ರು.

ಅಷ್ಟು ಹೊತ್ತಿಗೆ ಆಗುವಾಗ್ಲೇ ಬೆಂಕಿ ಹಚ್ಚಿರುವುದು ನಾವೇ ಅನ್ನುವುದು ಗೊತ್ತಾಗಿಬಿಡುತ್ತೆ ಅಂದ್ಕೊಂಡು ಚಪ್ಲಿ, ಸೀಮೆ ಎಣ್ಣೆ ಕ್ಯಾನ್ ಎಲ್ಲಾ ಬಿಟ್ಟು ಇನ್ನೊಂದು ದಾರಿಯಿಂದ ಎದ್ವೋ ಬಿದ್ವೋ ಅಂತ ಓಡಿ ಹೋಗಿ ಸೇಫಾಗಿ ಮನೆ ಸೇರಿಕೊಂಡಾಗಿತ್ತು ನಾವು.

ಆಚೆ-ಈಚೆ ಮನೆಯವರನ್ನೆಲ್ಲಾ ಸೇರಿಸಿ ಹೇಗೂ ಕಷ್ಟಪಟ್ಟು ಬೆಂಕಿ ಆರಿಸಿದ್ರು. ಈಗ ಅಪ್ಪನಿಗೆ ಮತ್ತೆ ನಮ್ಮ ಚಿಂತೆ ಶುರುವಾಯ್ತು. ಮನೆಗೆ ಕೆಲಸಕ್ಕೆ ಬರುವವರು ಬೇರೆ ನಾವು ಈ ಕಡೆಗೆ ಹೋಗಿರುವುದನ್ನು ನೋಡಿದ್ದೇವೆ ಅಂದಿದ್ದರು. ಒಬ್ಬೊಬ್ಬರು ಒಂದೊಂದು ಕಡೆ ನಮ್ಮನ್ನು ಹುಡುಕೋಕೆ ಶುರು ಮಾಡಿದ್ರು. ಅಲ್ಲಿ ಬಿಟ್ಟು ಬಂದಿದ್ದ ಚಪ್ಪಲಿಗಳು, ಸೀಮೆ ಎಣ್ಣೆ ಕ್ಯಾನ್ ಇಂತಹ ಒಳ್ಳೆಯ ಕೆಲಸ ಮಾಡಿದ್ದು ನಾವೇ ಅನ್ನುವುದನ್ನು ಸಾರಿ ಸಾರಿ ಹೇಳುತ್ತಿತ್ತು.

ಇತ್ತ ಬೆಂಕಿ ಹೆಚ್ಚಾಗೋಕೆ ಕಾರಣ ಏನು ಅನ್ನುವುದನ್ನು ಚರ್ಸಿಸೋಕೆ ಮನೆಯ ಕೊಟ್ಟಿಗೆಯಲ್ಲಿ ನಾವು ಮತ್ತೆ ಸಭೆ ಸೇರಿದೆವು. ಒಬ್ಬಬ್ಬೊರು ಒಂದೊಂದು ಕಾರಣ ಊಹಿಸಿದರು, ನೀಡಿದರು. ಕೊನೆಗೆ ನಮಾಜ್ ಗೆ ಹೋಗುತ್ತೇವೆ ಎಂದು ಸುಳ್ಳು ಹೇಳಿರುವುದಕ್ಕೆ ಅಲ್ಲಾಹು ನಮಗೆ ನೀಡಿದ ಶಿಕ್ಷೆಯಿದೆಂದು ಒಮ್ಮತದ ತೀರ್ಮಾನಕ್ಕೆ ಬರಲಾಯಿತು. ಮನೆಯವರಿಂದ ನಮಗಾಗಬಹುದಾದ ಪೂಜೆಯ ಸ್ವರೂಪವನ್ನು ಚರ್ಚಿಸುತ್ತಾ ಯಾರು ಏನೇ ಕೇಳಿದರೂ ನಮಗೂ ಇದಕ್ಕೂ ಸಂಬಂಧವೇ ಇಲ್ಲ ಅಂದುಬಿಡಬೇಕು ಅನ್ನುವ ತೀರ್ಮಾನ ತಗೊಂಡು ಏನೂ ಗೊತ್ತಿಲ್ಲದ ಹಾಗೆ ಊಟ ಮಾಡಿ ಲಗೋರಿ ಆಡೋಕೆ ಶುರು ಮಾಡಿದೆವು.

ಕಾಡಲ್ಲಿ ನಾವೆಲ್ಲೂ ಸಿಗದೇ ಇದ್ದಾಗ ಬೇರೆ ದಾರಿ ಇಲ್ಲದೆ ಆತಂಕದಿಂದಲೇ ಅಪ್ಪ ಮನೆಗೆ ಬಂದ್ರು. ಅಷ್ಟೊತ್ತಿಗಾಗ್ಲೇ ಲಗೋರಿಯಲ್ಲಿ ಸಂಪೂರ್ಣ ಮುಳುಗಿ ಹೋಗಿದ್ದ ನಮ್ಗೆ ಅಪ್ಪ ಬಂದ್ದದ್ದು, ಬೆತ್ತ ಕೈಗೆ ತಗೊಂಡಿದ್ದು ಯಾವುದೂ ಗೊತ್ತಾಗ್ಲಿಲ್ಲ. ಚಿಕ್ಕಪ್ಪನ ಬೆನ್ನಿಗೆ ಛಟೀರನೆ ಬಿದ್ದಾಗ್ಲೇ ನಮಗೆ ಗೊತ್ತಾದ್ದು. ಇನ್ನೇನು ಎಲ್ರಿಗೂ ಮಂಗಳಾರತಿ ಗ್ಯಾರಂಟಿ ಅಂದ್ಕೊಂಡ್ವಿ. ಆದ್ರೆ ಅಪ್ಪ ವಿಚಾರಣೆ ಶುರು ಮಾಡಿಬಿಟ್ರು. ಯಾಕೆ ಬೆಂಕಿ ಹಚ್ಚಿದ್ದು ಅಂತ ಸತ್ಯ ಹೇಳಿದ್ರೆ ಸುಮ್ನೆ ಬಿಡ್ತೇನೆ ಅಂದ್ರು. ನಾವೋ ಮೊದಲೇ ಡಿಸೈಡ್ ಮಾಡಿದ ಹಾಗೆ ನಮಗೆ ಗೊತ್ತೇ ಇಲ್ಲ, ನಾವೇನೂ ಮಾಡೇ ಇಲ್ಲ ಅಂತ ವಾದ ಮಾಡಿದ್ವಿ. ಈ ಬಾರಿ ಅಪ್ಪನ ಬೆತ್ತ ಕಿಸ್ ಕೊಟ್ಟದ್ದು ಅಣ್ಣನ ಬೆನ್ನಿಗೆ. ಎಲ್ರ ಹತ್ರಾನೂ ಕೇಳಿದ್ರು, ಇಂತಹ ಅನಾಹುತಕಾರೀ ಐಡಿಯಾ ಕೊಟ್ಟವರಾರು ಅಂತ ಪದೇ ಪದೇ ಕೇಳಿದ್ರು. ಎಲ್ರದೂ ಅದೇ ರಾಗ ಅದೇ ತಾಳ. ತಾಳ್ಮೆ ಕಳಕೊಂಡು ಎಲ್ರಿಗೂ ಚೆನ್ನಾಗಿ ಉಗಿದ್ರು. ಕೊನೆ ಕೊನೆಗೆ ಅತ್ತೇ ಬಿಟ್ರು, ಬೆತ್ತನಾ ನಾಲ್ಕು ತುಂಡು ಮಾಡಿ ಬಿಸಾಕಿ ನಮ್ಮ ಕಡೆ ತಿರುಗಿಯೂ ನೋಡದೆ ಹೊರಟು ಹೋದ್ರು. ಆದಾದ್ಮೇಲೆ ನಾಲ್ಕು ದಿನ ನಾವ್ಯಾರೂ ಅಪ್ಪನ ಕಣ್ಣೆದುರೇ ಸುಳಿಯಲಿಲ್ಲ.


ಅವತ್ತು ನಮ್ಮ ಸೈನ್ಯದ ಮೂರ್ಖಂಡನಾಗಿದ್ದ ಚಿಕ್ಕಪ್ಪನಿಗೆ,  ಕೆಲವು ಅಕ್ಕಂದಿರಿಗೆ, ಇನ್ನು ಕೆಲವು ಅಣ್ಣಂದಿರಿಗೆ ಮತ್ತು ಮುಳ್ಳು ಚುಚ್ಚಿಸಿಕೊಂಡ ತಂಗಿಗೆ ಈಗ ಮದುವೆ ಆಗಿ ಅವರ ಮಕ್ಕಳು ನೇರಳೆ ಹಣ್ಣಿಗಾಗಿ ಕಿತ್ತಾಡುವಷ್ಟು ದೊಡ್ಡವರಾಗಿದ್ದಾರೆ. ಮನಸು ಪದೇ ಪದೇ ಮರಳಿ ಬರಲಾರೆಯಾ ಬಾಲ್ಯ ಅಂತ ಕೇಳುವಷ್ಟು ಕುದ್ದು ಹೋಗಿದೆ. ಆದ್ರೆ ನಾವವತ್ತು ತಿಂದ ಹಣ್ಣಿನ ಸ್ವಾದ ಮತ್ತು ಬಣ್ಣ ಇನ್ನೂ ಮನಸ್ಸಿಂದ ಮಾಸಿಲ್ಲ. ಆದ್ರೆ ಇವತ್ತಿಗೂ ನನಗೆ ಅರ್ಥ ಆಗದೇ ಇರುವುದು ಒಂದೇ. ಅವತ್ತು ಅಪ್ಪ ಯಾಕತ್ರು...? ನಾವು ಮಾಡಿದ್ದ ಘನಂದಾರಿ ಕೆಲಸಕ್ಕಾ ಅಥವಾ ಏನೂ ಅಪಾಯ ಆಗದೆ ವಾಪಾಸಾಗಿದ್ದೇವೆ ಅನ್ನುವ ಖುಶಿಗಾ...?

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ