ಗುರುವಾರ, ಮಾರ್ಚ್ 30, 2017

ಅಜ್ಜ

ಹೀಗೆ ಒಂದು ಸಂಜೆ ಅಜ್ಜ
ನನ್ನೊಳಗೆ ಬರಹದ
ಬೀಜ ಬಿತ್ತಿದ್ದ

ಬಹುಶಃ ಅದು ಮೊದಲು
ಅವನಲ್ಲಿ ಹುಟ್ಟಿದ
ಕನಸಾಗಿರಬೇಕು
ಸದ್ದಿಲ್ಲದೆ ನನಗೆ ದಾಟಿಸಿ ಬಿಟ್ಟಿದ್ದ

ನಾ ಸುಮ್ಮನೆ ಪುಸ್ತಕ
ಕೈಗೆತ್ತಿದಾಗೆಲ್ಲಾ ಅವನ
ಕಣ್ಣು ಅಕಾರಣ ಹೊಳೆಯುತ್ತಿತ್ತು
ಒಂದು ಸ್ಪಷ್ಟ ಕನಸು ಆಗಲೇ
ರೂಪುಗೊಂಡಿರಲೂ ಬಹುದು

ಅವನ ಧೀಮಂತ ನಿಲುವು
ನನಗಿನ್ನೂ ನೆನಪಿದೆ
ಎಷ್ಟು ಬಾರಿ ಬೆರಗಾದದ್ದಿದೆಯೋ
ಅಷ್ಟೂ ಬಾರಿ ಅವನು
ಆಶ್ಚರ್ಯಸೂಚಕ ಚಿಹ್ನೆಯಾಗಿಯೇ
ಉಳಿದುಬಿಡುತ್ತಿದ್ದ

ಇಷ್ಟೇ ಇದ್ದ ಕರಗಳ ಮಧ್ಯೆ
ಪುಸ್ತಕವಿಟ್ಟಾಗಲೇ ಅಕ್ಷರಗಳೊಂದಿ‌ನ
ಅವನ ಜೀವ ಪ್ರಜ್ಞೆ
ನನ್ನೊಳಗೆ ಸಂಚಲಾರಭಿಸಿತ್ತು
ಈಗೇನಿದ್ದರೂ ಅದರ ಪುನರ್ನವೀಕರಣ ಅಷ್ಟೆ
ಒಮ್ಮೊಮ್ಮೆ ಸರಳ, ಸುಲಭ
ಇನ್ನೂ ಕೆಲವೊಮ್ಮೆ ಜಟಿಲ, ಸಂಕೀರ್ಣ

ನಿಜ, ನನ್ನ ಯಾವ ಕವಿತೆಗೂ
ಅವನನ್ನು ಸಂಪೂರ್ಣ ದಕ್ಕಿಸಿಕೊಳ್ಳಲಾಗದು
ಅವನ ಮಾತು, ಮೌನ
ಚರ್ಯೆ, ಬದುಕಿನ ಕುರುಹು
ಕೊನೆಗೊಂದು ಕಣ್ಣೋಟವಾದರೂ
ಕವಿತೆಯ ಪರಿಧಿಯೊಳಗೆ ಬಂದರೆ
ಅವ ಬಿತ್ತಿದ ಬೀಜ
ಭೋದಿ ವೃಕ್ಷವಾಯಿತೆಂದು ಸಂತಸಿಸುತ್ತೇನೆ.

ಬುಧವಾರ, ಮಾರ್ಚ್ 29, 2017

ಋತು

ಅಲ್ಲೆಲ್ಲೋ ಇಟ್ಟು ಮರೆತ
ಬೀಜವೊಂದು ಮೊಳಕೆಯೊಡೆದಾಗ
ಎದೆಯೊಳಗೊಂದು ಸಂಕಟದ
ಮುಳ್ಳು ಚಳ್ಳೆನ್ನುತ್ತದೆ

ಸಂಭ್ರಮದಿಂದ ರಜಸ್ಸನು
ಹಿಂದೊಮ್ಮೆ ಇದಿರುಗೊಳ್ಳುತ್ತಿದ್ದುದು
ಸುಳ್ಳೇ ಸುಳ್ಳೇನೋ?

ಕಿಬ್ಬೊಟೆಯಾಳದ ಹಸಿ ಹಸಿ
ನೋವನ್ನೂ ಹೆಣ್ತನದ ಹೆಮ್ಮೆಯಂತೆ
ಸ್ವೀಕರಿಸಿದ್ದೂ ನೆನಪೇ ಈಗ

ಅರ್ಥವಿಲ್ಲದ ಭಾವದೇರಿಳಿತಗಳು
ಸುಮ್ಮನೆ ಹುಟ್ಟುವ ಯಮಯಾತನೆ
ಎಲ್ಲಾ ನಗುತ್ತಾ ಸಹಿಸಿದ್ದೂ ನಿಜವೆನಿಸುವುದಿಲ್ಲ

ಮ್ಲಾನ ಸಂಜೆಯ ಬೇಗುದಿಗಳನ್ನೆಲ್ಲಾ
ಎದೆಯೊಳಗಿಳಿಸಿಕೊಂಡು ಪ್ರತಿ
ಋತು ತಿರುಗಿಬಿದ್ದಂತೆ ಹರಿವ ನದಿ
ಕಡಲಿನಾಸರೆಯೂ ಬೇಡವೆಂಬಂತೆ
ಮೌನವಾಗುತ್ತದೆ

ಮತ್ತೆ ಎಣಿಕೆ ಶುರುವಾದಂತೆ
ಜೀವ ಭವ ಪಡೆಯುತ್ತದೆಂಬ
ನಂಬಿಕೆಯ ನದಿಯ ಹರಿವು ಸರಾಗ
ಮತ್ತೊಂದು ಋತು ತಿರುಗಿ ಬೀಳುವವರೆಗೆ

ಸೋಮವಾರ, ಮಾರ್ಚ್ 6, 2017

ಮತ್ತೆ ಬೇಕು ಒಂದು ಏಕಾಂತ.

ಮತ್ತೆ ಬೇಕು ಏಕಾಂತ
ಬಿಸಿಲ ಕೋಲಿನ ಧೂಳ ಕಣಗಳ
ಮುಷ್ಟಿಯಲಿ ಬಂಧಿಸಲೆತ್ನಿಸುವ
ನಿರ್ಮಲ ಸುಖ

ಸಂಜೆಗೆಂಪು ಹೆಪ್ಪುಗಟ್ಟಿದ ಹೊತ್ತಲ್ಲಿ
ಗುರಿಯಿರದೆ ಸಾಗುವ ಮೋಡಗಳ
ನಿಲ್ಲಿಸಿ ಮಾತಾಡಿಸಿ ಬೀಳ್ಕೊಡಬೇಕು
ಮತ್ತೆ ಬೇಕು ಏಕಾಂತ

ಆಕಾಶದ ಅಂಗಳದ ತುಂಬಾ
ಹರಡಿರುವ ನಕ್ಷತ್ರಗಳ
ಬೆರಳುಗಳಲಿ ಎಣಿಸಬೇಕು
ಮತ್ತೆ ಬೇಕು ಏಕಾಂತ

ಸ್ತಬ್ಧ ರಾತ್ರಿಯಲಿ ಎದ್ದು ಕೂತು
ಉದ್ದಕ್ಕೆ ಹರಡಿರುವ ಕತ್ತಲಿನ
ಗರ್ಭ ಸೀಳಬೇಕು
ಮತ್ತೆ ಬೇಕು ಏಕಾಂತ

ಮಿನುಗುವ ಮಿಂಚುಹುಳದ
ಜಾಡರಸಿ ಹಗಲಿಡೀ ಅಲೆದು
ಹುಚ್ಚುತನಕೆ ಬೇಸ್ತು ಬೀಳಬೇಕು
ಮತ್ತೆ ಬೇಕು ಏಕಾಂತ

ತಪ್ತ ಹೃದಯಕ್ಕೊಂದು ಅನುಸಂಧಾನ
ಸಮಯದ ಸಬೂಬಿಗೊಂದು ವಿರಾಮ
ನನ್ನಲಿ ನಾ ಏಕೀಭವಿಸಬೇಕು
ಹೌದು, ಮತ್ತೆ ಬೇಕು ಒಂದು ಏಕಾಂತ.