ಶನಿವಾರ, ಜುಲೈ 30, 2016

ಕುದಿವ ಮೌನ.

ಕುದಿವ ಮೌನದ ತುದಿಗೆ
ಪದಗಳ ಪೋಣಿಸಿ
ಮೈದಾಳಿದ ಕವಿತೆಯೊಂದು
ಬೀದಿಬದಿಯಲಿ ಹೆಣವಾಗಿ ಮಲಗಿದೆ

ಕನಸ ಕಸಿದ ಮನಸಲೀಗ
ಕೋಟಿ ಸಂಭ್ರಮದಲೆಗಳ ಅಬ್ಬರ
ಕವನ ಕಟ್ಟುವ ಕೈಗಳು
ನಿಶ್ಚಲ, ನಿಶ್ಚೇಟಿತ

ಉಸುಕಿನ ದಿಣ್ಣೆಯ ಮೇಲೆ
ಸತ್ತಂತೆ ಮಲಗಿದ
ಮೊಸಳೆಯ ತುಟಿಯಂಚಲಿ
ಹಸಿ ರಕ್ತದ ಕಲೆ

ಇನ್ನಷ್ಟೇ ಅರಳಬೇಕಿದ್ದ ಮೊಗ್ಗನ್ನು
ಕಾಲಡಿಯಲಿ ಹಿಸುಕಿ ಕೊಂದ
ಪುಣ್ಯಾತ್ಮರ ಕಣ್ಣಲ್ಲಿನ್ನೂ
ಸ್ವರ್ಗ ಸುಖದ ಕಿಚ್ಚು ಆರಿಲ್ಲ

ಎಲ್ಲಾ ಸಂಭ್ರಮ, ನಾಟಕ
ಸುಖದ ನರಳಿಕೆ ಮೀರಿ
ಕಟುಕರೆದೆಯ ಪಾಪವ ನೋಡಿ
ಮಗುವೊಂದು ಕೈ ತಟ್ಟಿ ನಗುತಿದೆ

ಸತ್ತ ಕವಿತೆ ಮತ್ತೆ ಜೀವಪಡೆದಿದೆ
ಆ ಪುಟ್ಟ ಪಾದಗಳಲಿ; ಧೂಳ ಕಣಗಳಲಿ
ಕವಿತೆ ಧರಿಸಿದ ಹಸುಳೆ
ಸುಮ್ಮನೆ ನಡೆಯುತಿದೆ ಅನೂಹ್ಯತೆಯೆಡೆಗೆ.

ಶುಕ್ರವಾರ, ಜುಲೈ 29, 2016

ಮಧುರ ಸಂಬಂಧವೊಂದು ಉಳಿಯುತ್ತದೆ ಅಂತಾದರೆ ವಿನೀತರಾಗುವುದರಲ್ಲಿ ತಪ್ಪೇನಿದೆ?

ಒಮ್ಮೊಮ್ಮೆ ಹೀಗಾಗುತ್ತದೆ ನೋಡಿ...
ತುಂಬಾ ಹಚ್ಚಿಕೊಂಡ ಗೆಳೆಯ/ತಿ ಸಣ್ಣದಾಗಿ ನಮ್ಮನ್ನು ಅವಾಯ್ಡ್ ಮಾಡುತ್ತಿದ್ದಾರೆ ಅನಿಸಿಬಿಡುತ್ತದೆ. ಒಂದೆರಡು ದಿನ ಕಾದು ನಿಧಾನವಾಗಿ ಮಾತಾಡಿಸೋಣ ಅಂದರೆ ಕೈಗೆ ಸಿಗುವುದೇ ಇಲ್ಲ. ಹೋಗಲಿ ಫೋನ್‍ನಲ್ಲಾದರೂ ಮಾತಾಡೋಣ ಅಂದುಕೊಂಡು ಕರೆ ಮಾಡಿದರೆ ಅದನ್ನೂ ಸ್ವೀಕರಿಸುವುದಿಲ್ಲ. ವಾಟ್ಸಾಪ್ ಮೆಸೇಜ್‍ಗಳಿಗೂ, ಎಫ್.ಬಿ ಕಮೆಂಟ್‍ಗಳಿಗೂ, ಈ-ಮೈಲ್‍ಗಳಿಗೂ ಸರಿಯಾದ ಉತ್ತರವಿಲ್ಲ.

ಹೀಗಾದಾಗೆಲ್ಲಾ, ಎಷ್ಟೇ ಬೇಡ ಬೇಡ ಅಂದರೂ ಮನಸ್ಸು ಅಳುಕಿಗೆ ಬಿದ್ದು ಬಿಡುತ್ತದೆ. ಯಾಕೆ ಹೀಗೆ ಅವಾಯ್ಡ್ ಮಾಡುತ್ತಿದ್ದಾರೆ ಅನ್ನುವ ಪ್ರಶ್ನೆಗೆ ಸುಳಿಗೆ ಬಿದ್ದು ಚಡಪಡಿಸತೊಡಗುತ್ತದೆ. ಪದೇ ಪದೇ ಆ ಗೆಳೆಯ/ತಿಯ ಜೊತೆಗಿದ್ದ ಮಧುರ ಸಂಬಂಧವನ್ನೂ, ಅದು ಈಗಿಲ್ಲ ಅನ್ನುವ ಕೊರಗನ್ನೂ ಹಚ್ಚಿಕೊಂಡು ಹಳಹಳಿಸತೊಡಗುತ್ತದೆ. ಆ ಕಡೆ ಇರುವವರ ಮನಸ್ಥಿತಿ, ಪರಿಸ್ಥಿತಿ ಯಾವುದನ್ನೂ ವಿವೇಚಿಸದೆ ನಾಲ್ಕು ಜನರ ಬಳಿ ಅದರ ಬಗ್ಗೆ ಮಾತಾಡಿಯೂ ಬಿಡುತ್ತೇವೆ.

ಆಮೇಲೆ, ಒಂದಿಷ್ಟು ದಿನಗಳ ಕಾಲ ನಮ್ಮಿಂದೇನಾದರೂ ತಪ್ಪಾಗಿರಬಹುದಾ? ಅವನ/ಳ ಬಗ್ಗೆ ಆಡಬಾರದ ಮಾತು ಆಡಿದ್ದೀನಾ? ವೃಥಾ ನಾಲಗೆ ಹರಿಯಬಿಟ್ಟು ಅವನ/ಳನ್ನೇನಾದರೂ ನೋಯಿಸಿದ್ದೇನಾ? ಹಾಸ್ಯ ಮಾಡಲು ಹೋಗಿ ಅದು ಎಲ್ಲರೆದುರು ಅಪಹಾಸ್ಯವಾಗಿದೆಯಾ? ನನ್ನೊಬ್ಬನಲ್ಲಿ ಹಂಚಿಕೊಂಡ ವಿಷಯವನ್ನು ಇನ್ನಾರದೋ ಕಿವಿಗೆ ಹಾಕಿದ್ದೇನಾ? ಅನ್ನುವ ಪ್ರಶ್ನೆಗಳನ್ನೆಲ್ಲಾ ನಮಗೆ ನಾವೇ ಹಾಕಿಕೊಂಡು, ಇಲ್ಲ ಅಂತಹದ್ದೇನೂ ಮಾಡೇ ಇಲ್ಲ ಎಂದು ನಮ್ಮ ನಾವೇ ಸಮಾಧಾನಿಸಿಕೊಳ್ಳುತ್ತೇವೆ.

ಈ ಹಂತದಲ್ಲಿ, ನಮ್ಮದೇನೂ ತಪ್ಪಿಲ್ಲ ಅಂದಮೇಲೆ, ನಾನೇಕೆ ಅವನ/ಳ ಬೆನ್ನು ಹತ್ತಿ ಕಾಡಿಸಿ, ಪೀಡಿಸಿ ಮಾತಾಡಬೇಕು? ಅವನಿ/ಳಿಗೆ ಬೇಕಿಲ್ಲದ ಸಂಬಂಧ ನನಗೇಕೆ ಬೇಕು? ಅನ್ನುವ ಪುಟ್ಟ ಅಹಂ ತಲೆಯೆತ್ತುತ್ತದೆ. ಆ ಕಡೆಯ ನಿರಂತರ ಅವಾಯ್ಡೆನ್ಸ್ ಆ ಅಹಂಗೆ ತುಪ್ಪ ಸುರಿಯುತ್ತದೆ. ಬೆಂಕಿ ಭಗ್ಗನೆ ಹತ್ತಿಕೊಂಡು ಉರಿಯತೊಡಗುತ್ತದೆ. ನಮಗೇ ಗೊತ್ತಾಗದಂತೆ ಅವರ ಬಗ್ಗೆ ಒಂದು ಉಡಾಫೆ ಬೆಳೆದು ಬಿಡುತ್ತದೆ. ಬೇಕಿದ್ದರೆ ಅವನೇ/ಳೇ ಬಂದು ಮಾತಾಡಿಸಲಿ ಅಂದುಕೊಂಡು ಸುಮ್ಮನಾಗುತ್ತೇವೆ.

ಆ ಕಡೆ ಅವನ/ಳ ಕಿವಿಗೆ, ನಾವು ಇನ್ಯಾರ ಜೊತೆಗೋ ಮಾತಾಡುತ್ತಾ, ವಿನಾಕಾರಣ ನನ್ನ ಅವಾಯ್ಡ್ ಮಾಡುತ್ತಿದ್ದಾರೆ ಅಂತ ಹೇಳಿರುವುದೇ ಮತ್ತೊಂದಿಷ್ಟು ಉಪ್ಪು ಖಾರಗಳೊಂದಿಗೆ ಬಿದ್ದಿರುತ್ತದೆ. ಏನನ್ನೂ ಹೇಳಲಾಗದ, ಕೇಳಲಾಗದ ಮನಸ್ಥಿತಿಯಲ್ಲಿ ಒಂದಿಷ್ಟು ಮೌನವಾಗಿದ್ದುದನ್ನೇ ಅವಾಯ್ಡೆನ್ಸ್ ಅಂದುಕೊಂಡು ಅದನ್ನು ಮೂರನೆಯವರ ಬಳಿ ಹಂಚಿಕೊಳ್ಳೋದೇನಿತ್ತು? ನನ್ನ ಮೇಲೆ ನಿಜಕ್ಕೂ ಅಷ್ಟೊಂದು ಕಾಳಜಿ ಇರುವುದಾದರೆ ನನ್ನನ್ನೇ ಕೇಳಬಹುದಿತ್ತಲ್ಲಾ? ಅಷ್ಟೂ ಬೇಕೆನಿಸಿದರೆ, ನಿಜಕ್ಕೂ ನನ್ನ ಫ್ರೆಂಡೇ ಆಗಿದ್ದರೆ ಅವರೇ ಬಂದು ಮಾತಾಡಿಸಲಿ ಅನ್ನುವ ಸೆಡವಿಗೆ ಅವರೂ ಬಿದ್ದು ಬಿಡುತ್ತಾರೆ.

ಪರಿಣಾಮ, ಮಧುರ ಸಂಬಂಧವೊಂದರ ಅಕಾಲ ಮೃತ್ಯು. ಅಹಮಿಕೆಯ ಕೋಟೆಯೊಳಗೆ ಬಂಧಿಯಾಗಿ ಇಷ್ಟು ಪ್ರೀತಿ, ಅಷ್ಟೂ ಸ್ನೇಹ,  ಹಿಡಿಯಷ್ಟರ ಒಲವು ಉಸಿರಾಡಲಾಗದೆ ವಿಲವಿಲ ಒದ್ದಾಡತೊಡಗುತ್ತವೆ. ಒಣ ಪ್ರತಿಷ್ಠೆ ಸಾವಿರದೊಂದು ಸಂಬಂಧವನ್ನು ಮಾತಿಲ್ಲದೆ ಸಾಯಿಸಿಬಿಡುತ್ತದೆ.

ಆಗಲೇ ವಾಟ್ಸಾಪ್ ಗ್ರೂಪ್‍ಗಳು ಅದಲು ಬದಲಾಗುವುದು. ಆಗಲೇ ಫೇಸ್‍ಬುಕ್‍ನ ಪ್ರತೀ ಸ್ಟೇಟಸ್‍ನಲ್ಲೂ ಕೊಂಕು ಕಾಣಿಸತೊಡಗುವುದು. ಈಕಡೆ ಇರುವವನು/ಳು ತನ್ನಿಂದ ಅವರಿಗಾದ ಉಪಕಾರಗಳ ಪಟ್ಟಿ ತಯಾರಿಸಿಕೊಂಡು ಬೊಂಬಡ ಬಜಾಯಿಸುವುದು, ಆಕಡೆ ಇರುವವನು ಅವನಿ/ಳಿಗೋಸ್ಕರ ತಾನು ಮಾಡಿದ ತ್ಯಾಗಗಳ ಕುರಿತು ಹೇಳಲಾರಂಭಿಸುವುದು. ತೀರಾ ವೈಯಕ್ತಿಕ ಮಟ್ಟಕ್ಕಿಳಿದು ಪರಸ್ಪರರ ಮೇಲೆ ಕೆಸರೆರಚಿಕೊಳ್ಳುವುದು, ಸಾರ್ವಜನಿಕವಾಗಿ ಕಿತ್ತಾಡಿಕೊಂಡು ಮನಸ್ಸನ್ನು ಅಶಾಂತಿ, ಗೊಂದಲಗಳ ಗೂಡಾಗಿಸಿಕೊಳ್ಳುವುದು.

ಅಹಮಿಕೆಯ, ಸಲ್ಲದ ಪ್ರತಿಷ್ಠೆಯ ಕೈಗೆ ಬುದ್ದಿ ಕೊಟ್ಟಾಗೆಲ್ಲಾ ಆಗುವುದಿಷ್ಟೇ. ನಮ್ಮನ್ನೂ ಸೇರಿಸಿ, ಈ ಜಗತ್ತಿನಲ್ಲಿ ಯಾರೂ ಪರಿಪೂರ್ಣರಲ್ಲ ಅನ್ನುವ ಸಣ್ಣ ಸತ್ಯವನ್ನು ಅರಿತುಕೊಂಡು, ಗೆಳೆಯ/ತಿಯನ್ನೋ ಎದುರಾ ಎದುರು ಕೂರಿಸಿಕೊಂಡು ಮಾತಾಡಿ ಸಮಸ್ಯೆ ಬಗೆಹರಿಸಿಕೊಂಡರೆ ಸಂಬಂಧವೂ ಉಳಿಯುತ್ತದೆ, ಮನಶ್ಯಾಂತಿಯೂ ಹಾಳಾಗುವುದಿಲ್ಲ. ಇಷ್ಟಾಗಿಯೂ ಆತ/ಕೆ ನಿಮ್ಮ ಮಾತು ಕೇಳಲು ತಯಾರಿಲ್ಲ ಅಂದರೆ, ಸುಮ್ಮನೆ ಕೈಕಟ್ಟಿ ನಿಂತು ಒಂದು sorry ಹೇಳಿಬಿಡಿ. ಮತ್ತೂ ಅದೇ ಸೆಡವಿನಲ್ಲಿದ್ದರೆ ಮತ್ತೊಮ್ಮೆ  sorry ಕೇಳಿ. ಮತ್ತೂ ಕನ್ವಿನ್ಸ್ ಆಗದಿದ್ದರೆ ನಿನ್ನೊಂದಿಗಿನ ಸಂಬಂಧವನ್ನು ಉಳಿಸಿಕೊಳ್ಳಬೇಕಿದ್ದರೆ ನಾನು ಮತ್ತಷ್ಟು ವಿನಮ್ರನಾಗಬೇಕು ಅಂತಿದ್ದರೆ ಅದಕ್ಕೂ ಸಿದ್ಧ ಅಂದುಬಿಡಿ. ನಿಮ್ಮ ಒಳ್ಳೆಯತನದ ಮುಂದೆ, ನಿಸ್ಪೃಹತೆಯ ಮುಂದೆ, ನಿರ್ವಾಜ್ಯ ಸ್ನೇಹದ ಮುಂದೆ, ಅದು ಎಂತಹ ಅಹಂಕಾರವೇ ಆದರೂ ಪೊರೆ ಕಳಚಿ ಬಿದ್ದೇ ಬಿಡುತ್ತದೆ, ಬೀಳಲೇ ಬೇಕು.

ಇಷ್ಟಕ್ಕೂ, ಮಧುರ ಸಂಬಂಧವೊಂದು ಉಳಿಯುತ್ತದೆ ಅಂತಾದರೆ, ಒಂದು sorry ಕೇಳುವುದರಲ್ಲಿ, ವಿನೀತರಾಗುವುದರಲ್ಲಿ ತಪ್ಪೇನಿದೆ, ಅಲ್ಲವೇ? 

ಭಾನುವಾರ, ಜುಲೈ 24, 2016

ಹೊಸ ಜೀವ ಸಂಚಾರ

ಬಲಗೆನ್ನೆಯ ಮೇಲಿನ
ಕಂಡೂ ಕಾಣದಂತಿರುವ
ಪುಟ್ಟ ಮಚ್ಚೆ ಏನನ್ನೋ
ಬೇಡುತ್ತಿರುವಂತಿದೆ ಎಂದನಾತ

ಒಂದಿಷ್ಟು ಯೋಚಿಸಿ, ತಲೆಕೆರೆದು
ಮಲಗಿದವಳಿಗೋ ಗಾಢ ನಿದ್ದೆ
ಮುಗಿಯದ ಕನಸಿನ ಪೂರ್ತಿ
ಮುಗಿಲು ಬಿರಿವ ಮಳೆಯ ಸದ್ದು

ಅಲ್ಲಿ ಅವನ ಕಣ್ಣಲಿ
ಮಚ್ಚೆಯ ಮೇಲೊಮ್ಮೆ
ಬೆಚ್ಚನೆಯ ಅಂಗೈ ಸವರಿ
ಪುಟ್ಟ ಬೊಟ್ಟಿಟ್ಟ ಕನಸು

ಕನಸಿಗೂ ನನಸಿಗೂ ಎಷ್ಟು ಹೊತ್ತು?
ಕೂಡಿಸಿ ಕಳೆದು ಗುಣಿಸೋ
ಲೆಕ್ಕ ಬಾರದವಳ ಪೇಚಾಟ
ಕಂಡು ಕನ್ನಡಿಗೂ ಹುಸಿನಗು

ಕಿವಿಯ ಪಕ್ಕದಲಿ ಕದಪುಗಳ
ಅವುಚಿಕೊಂಡಿರುವ ತುಂಟ
ಮುಂಗುರುಳು ಅವಳ
ತುದಿ ಮೂಗನು ತೀಡಿದಂತೆಲ್ಲಾ

ಮಚ್ಚೆಯ ಜೀವಾತ್ಮದೊಳಗೆ
ಅವನ ಬಿಸಿಯುಸಿರ ಸ್ಪರ್ಶದ ತವಕ
ಅಲ್ಲವನ ಪ್ರತಿ ನರನಾಡಿಯಲೂ
ಹೊಸ ಜೀವಸಂಚಾರದ ಪುಳಕ.

ಶುಕ್ರವಾರ, ಜುಲೈ 15, 2016

ಗೋಡೆ



ಮೌನದ ಮುದ್ರೆ ಹೊತ್ತ
ನಿಸ್ತೇಜ ಗೋಡೆಯ ಅಂಚಿನ
ಸುಮ್ಮನೆ ನಗುವ ಸ್ತಬ್ಧಚಿತ್ರ
ಆಗೊಮ್ಮೆ ಈಗೊಮ್ಮೆ ಕದಲುತ್ತಿರುತ್ತದೆ

ಸುರಿವ ಮಳೆಗೆ ಮುಖವೊಡ್ಡಿ
ಜಗದ ಅರೆಕೊರೆಗಳಿಗೆ ಸ್ಪಂದಿಸುವ
ಆ ಹೃನ್ಮನಸಿಗೂ ಒಮೊಮ್ಮೆ
ಕತ್ತಲು ಕವಿಯುತ್ತದೆ

ನಿಶ್ಚಲ ಸಂಜೆಯ ದೀರ್ಘ ಮೌನಕ್ಕೆ
ಚಿತ್ರದ ಜೀವಝರಿಯೂ
ಜುಮ್ಮೆನ್ನುತ್ತದೆ
ಸುತ್ತೆಲ್ಲಾ ಗಾಢ ಅಂಧಕಾರ

ಆ ಕತ್ತಲ ಅಸ್ತಿತ್ವದಾಚೆಗೂ
ನಕ್ಷತ್ರದ ಮಡಿಲಿನಲಿ
ಅರಳುವ ಹಾಲ್ಬೆಳಕ ಕೂಸಿನ
ಕನಸಿಗೆ ಕಾಳಿರುಳೂ ಮಬ್ಬಾಗುತ್ತದೆ

ಅಷ್ಟಿಷ್ಟು ಮಿಂಚಿ ಅಲ್ಲೆಲ್ಲೋ ಹೊಳೆದು
ನಿಶೆಯ ಜಡವನು ತೊಳೆವ
ಮಿಂಚು ಹುಳುವಿನ
ಬದುಕಿನೊಂದಿಗಿನ ತೀವ್ರ ಹಂಬಲಕೆ

ಎದೆಯ ದುಗುಡವ ಮರೆತು
ಉದ್ವಿಗ್ನ ಆತ್ಮಕೆ
ಒಂದಿಷ್ಟು ಭರವಸೆ ತುಂಬಿ
ಸ್ತಬ್ಧಚಿತ್ರ ಮತ್ತೆ ನಗುತ್ತದೆ

ನಿಸ್ತೇಜ ಗೋಡೆಯ ಮೊಗದಲೂ
ಕಿರು ಮಂದಹಾಸ.

ಭಾನುವಾರ, ಜುಲೈ 10, 2016

ಯಾಕುಂದೇದು ತುಷಾರ ಹಾರ ಧವಳಾ...


ಹಂಡೆಯೊಲೆಗೆ ಒಡ್ಡಿದ ತುಸು ಹಸಿಯಾಗಿಯೇ ಇದ್ದ ಕಟ್ಟಿಗೆ ’ಸರ್ರ್’ ಎಂದು ಸದ್ದು ಮಾಡುತ್ತಾ ಉರಿಯುತ್ತಿತ್ತು. ತನ್ನನ್ನೇ ಬೆಂಕಿಗೊಡ್ಡುತ್ತಾ ಮನೆ ಮಂದಿಗೆಲ್ಲಾ ದಿನಪೂರ್ತಿ ಬಿಸಿ ನೀರು ಒದಗಿಸುವ ಹಂಡೆಯೆಂದರೆ ಪೂಜಾಳಿಗೆ ಬಾಲ್ಯದಿಂದಲೇ ಅದೇನೋ ವಿಚಿತ್ರ ಆಕರ್ಷಣೆ. ಪೂರ್ತಿ ಕಪ್ಪಾಗಿರುವ ಅದರ ತಳ, ಸದಾ ಬೆಂಕಿಯುಗುಳುವ ಕಟ್ಟಿಗೆ, ಮುಟ್ಟಿದರೆ ಕೈ ಸುಟ್ಟು ಹೋಗುವಷ್ಟು ಬಿಸಿ ಇರುವ ಅದರ ಮುಚ್ಚಳ, ಹಬೆಯಾಡುವ ನೀರು... ಇವೆಲ್ಲಾ ಮೊದಲಿನಿಂದಲೂ ಅವಳಲ್ಲಿ ಒಂದು ವಿಲಕ್ಷಣ ಆಸಕ್ತಿಯನ್ನು ಹುಟ್ಟುಹಾಕುತ್ತಿತ್ತು. ಈಗಲೂ ಅಷ್ಟೆ ರಜೆಗೆಂದು ಹಾಸ್ಟೆಲಿನಿಂದ ಊರಿಗೆ ಬಂದಾಗಲೆಲ್ಲಾ ಅವಳು ನೀರೊಲೆಯ ಮುಂದೆ ಕೂತು ಉರಿವ ಒಲೆಯನ್ನೂ, ನಿಗಿ ನಿಗಿ ಕೆಂಡವನ್ನೂ, ಹೊಳೆವ ಬೆಳಕನ್ನೂ, ಮತ್ತದೇ ಹಂಡೆಯನ್ನು ನೋಡುತ್ತಾ ಮೈ ಕಾಸಿಕೊಳ್ಳುತ್ತಿದ್ದಳು.

ಇಂದೂ ಅಷ್ಟೇ, ಮಾಗಿಯ ಚಳಿಯ ಸ್ತಬ್ಧ ಮುಂಜಾವಿನಲ್ಲಿ, ಮಂಜು ಮುಸುಕಿದ ಆಕಾಶವನ್ನೂ, ಇನ್ನೂ ಕಣ್ಣು ಬಿಡದ ಸೂರ್ಯನನ್ನೂ, ಇಬ್ಬನಿ ತಬ್ಬಿದ ಹಾದಿಯ ವಿಹಂಗಮತೆಯನ್ನೂ ಕಣ್ಣಿನ ಪೂರ್ತಿ ತುಂಬಿಕೊಂಡು ಕುಳಿತಿದ್ದಳು. ಅಮ್ಮ ಆಗಷ್ಟೇ ದೇವರ ಮನೆಯಲ್ಲಿ ಕೂತು ’ಯಾಕುಂದೇದು ತುಷಾರ ಹಾರ ಧವಳಾ’  ಶುರುವಿಟ್ಟುಕೊಂಡಿದ್ದರು. ಅಮ್ಮನ ಸುಪ್ರಭಾತದ ಸ್ವರವನ್ನೂ ಮೀರಿಸುವಂತೆ  ’ಅಮ್ಮೋರೇ’ ಎಂದು ಕರೆಯುವುದು ಕೇಳಿಸಿತು. ಅತ್ತ ತಿರುಗಿದ ಪೂಜಾಳ ಹೊಗೆ ತುಂಬಿದ ಕಣ್ಣುಗಳಿಗೆ ಕೆಲಸದಾಳು ನಂಜಪ್ಪ ತನ್ನ ಹರಕು ಪಂಚೆಯನ್ನು ಮಂಡಿಗಿಂತಲೂ ಮೇಲಕ್ಕೆ ಎತ್ತಿ ಕಟ್ಟಿ, ಹಿಮ್ಮಡಿ ಪೂರ್ತಿ ಸವೆದು ಹೋದ ಚಪ್ಪಲಿ ಧರಿಸಿ ಹಿತ್ತಲಿನಿಂದ ಮಾರು ದೂರ ನಿಂತಿರುವುದು ಕಾಣಿಸಿತು. ಸಣ್ಣದಾದ ಅಸಹನೆಯೊಂದು ಅವಳ ಮನಸ್ಸಲ್ಲಿ ಹಾದು ಹೋಯಿತು.

ಮರುಕ್ಷಣ ಮೊಬೈಲ್  ರಿಂಗಣಿಸತೊಡಗಿತು. ಆ ಕಡೆಯಿಂದ ವಾರಪತ್ರಿಕೆಯ ಸಂಪಾದಕರು ’ಮೇಡಂ, ವಿಶೇಷಾಂಕದ ಕಥೆ ನಿನ್ನೆಯೇ ತಲುಪಬೇಕಿತ್ತು, ಆದ್ರೆ ಇನ್ನೂ ತಲುಪಿಲ್ಲವಲ್ಲಾ’ ಅಂದರು. ಪೂಜಾ ತಡವರಿಸುತ್ತಲೇ ’ಇವತ್ತು ಸಂಜೆ ತಲುಪುತ್ತೆ ಸರ್’ ಅಂತಂದು ಕರೆ ಕಟ್ ಮಾಡಿ ನಾನಿನ್ನೂ ಕಥೆ ಬರೆದೇ ಇಲ್ಲ, ಇನ್ನು ಸಂಪಾದಕರಿಗೆ ತಲುಪಿಸುವುದಾದರೂ ಹೇಗೆ? ಕಳೆದ ವರ್ಷವಷ್ಟೇ ಉತ್ತಮ ಯುವ ಕಥೆಗಾರ್ತಿ ಪ್ರಶಸ್ತಿ ಪಡೆದಿದ್ದೆ, ಈಗ ಕಥೆಗೆ ವಸ್ತು ಹೊಳೆದಿಲ್ಲ ಎಂದರೆ ನನ್ನ ಪ್ರತಿಷ್ಟೆ ಏನಾಗಬೇಕು ಎಂದು ಯೋಚಿಸುತ್ತಾ ಕುಳಿತಳು.

ಕಳೆದೆರಡು ವಾರಗಳಿಂದಲೂ ಹೀಗೆಯೇ. ಏನನ್ನೂ ಬರೆಯಲಾಗುತ್ತಿಲ್ಲ, ಅದೆಷ್ಟೇ ಯೋಚಿಸಿದರೂ ಏನೂ ಹೊಳೆಯುತ್ತಿಲ್ಲ. ಅದೇ ಕಿಟಕಿ, ಅದೇ ಆಕಾಶ, ಅದೇ ಸದ್ದು ಗದ್ದಲ, ಉದ್ದಕ್ಕೆ ಮಲಗಿಕೊಂಡಿರೋ ರಸ್ತೆ, ಮಾಸಲು ಜನ, ಬೀಡಾಡಿ ದನಗಳು ಥೂ! ಎಲ್ಲಾದರೂ ಪ್ರಶಾಂತ ಜಾಗಕ್ಕೆ ಹೋದರೆ ಕಥೆ ಹೊಳೆದೀತೇನೋ ಅನ್ನಿಸಿ ಚಪ್ಪಲಿ ಮೆಟ್ಟಿ ’ ಅಮ್ಮಾ, ದೇವಸ್ಥಾನಕ್ಕೆ ಹೋಗಿ ಬರುತ್ತೇನೆ’ ಅಂತಂದು ಮನೆಯಿಂದ ಹೊರಗಡಿಯಿಟ್ಟವಳು, ಏನು ಬರೆಯಲಿ? ಹೇಗೆ ಬರೆಯಲಿ? ಎಲ್ಲಿಂದ ಶುರು ಮಾಡಲಿ ಎಂದೆಲ್ಲಾ ಯೋಚಿಸುತ್ತಲೇ ಶಿವ ಮಂದಿರ ತಲುಪಿದಳು.

ಅಲ್ಲಿ ಮತ್ತದೇ ಜನಜಂಗುಳಿ, ಅದೇ ಧಾವಂತ. ಪ್ರಸಾದಕ್ಕಾಗಿ ಆಸೆ ಕಣ್ಣಿಂದ ಕಾಯುತ್ತಾ ಕುಳಿತ ಬಸುರಿ, ಅಲ್ಲೇ ಪಕ್ಕದಲ್ಲಿ ಜಾರುತ್ತಿದ್ದ ಚೆಡ್ಡಿಯನ್ನು ಮತ್ತೆ ಮತ್ತೆ ಮೇಲಕ್ಕೆಳೆದುಕೊಳ್ಳುತ್ತಾ ಭಿಕ್ಷೆ ಬೇಡುವ ಹುಡುಗ, ಮಗುವನ್ನು ಕಂಕುಳಲ್ಲೆತ್ತಿಕೊಂಡು ಆರ್ದ್ರ ನೋಟ ಬೀರುವ ಪುಟ್ಟ ಬಾಲಕಿ, ಭಕ್ತರು ಕೊಡುವ ಪುಡಿಗಾಸಿಗಾಗಿ ಮುಂದೆ ನೋಡುತ್ತಾ ಚಪ್ಪಲಿ ಕಾಯುತ್ತಿದ್ದ ಮುದುಕ... ಪೂಜಾಳಿಗೆ ಅಸಹ್ಯ ಹೊಟ್ಟೆಯಾಳದಿಂದ ಎದ್ದು ಬಂತು. ನಾನೇನೋ ಇಲ್ಲಿ ಕಥೆ ಹುಡುಕಲೆಂದು ಬಂದೆ. ಆದ್ರೆ ಇಲ್ಲಿ ನೋಡಿದರೆ, ದೇವರಿಗೇ ಶಾಂತಿಯಿಲ್ಲ ಎಂಬಂತಾಗಿದೆ,  ಇಂತಹವರಿಂದಲೇ ಮಂದಿರದ ಸೌಂದರ್ಯ ಹಾಳಾಗುವುತ್ತಿರುವುದು ಅಂದುಕೊಳ್ಳುತ್ತಾ ಚಪ್ಪಲಿ ಕಳಚಿಟ್ಟು ದೇವಸ್ಥಾನದ ಒಳಹೊಕ್ಕು ದೇವರ ಪ್ರತಿಮೆಯ ಮುಂದೆ ನಿಂತು ಕೈ ಮುಗಿದಳು. ಮೆಟ್ಟಿಲಿಳಿಯುವಾಗ ’ಅರೆ! ಹೌದಲ್ಲಾ, ಇಲ್ಲೇ ಯಾರನ್ನಾದರೂ ಮಾತನಾಡಿಸಿದರೆ ಕಥೆ ಸಿಗಲೂಬಹುದು. ಆದರೆ ಮಾತನಾಡಿಸುವುದಾದರೂ ಯಾರನ್ನು? ಅವರ ಬಟ್ಟೆ, ವೇಷಗಳನ್ನು ನೋಡುವಾಗಲೇ ವಾಕರಿಕೆ ಬರುತ್ತದೆ. ಇನ್ನು ಕೂತು ಕಥೆ ಕೇಳುವುದಾದರೂ ಹೇಗೆ? ಆದರೆ ತನಗೀಗ ಕಥೆ ಅನಿವಾರ್ಯ. ಸ್ವಲ್ಪ ಕಷ್ಟವಾದರೂ ಸರಿ, ಅಡ್ಜಸ್ಟ್ ಮಾಡಿಕೊಳ್ಳೋಣ’ ಅಂದುಕೊಳ್ಳುತ್ತಾ ಸುತ್ತ ದೃಷ್ಟಿಸಿದಳು. ಇದ್ದುದರಲ್ಲೇ ಚಪ್ಪಲಿ ಕಾಯುವ ಮುದುಕನೇ ವಾಸಿ ಅನ್ನಿಸಿ ಪೂಜಾ ಆ ಮುದುಕನ ಬಳಿ ಬಂದು ಕೂತು ನಿಧಾನವಾಗಿ ಮಾತಿಗೆಳೆದಳು. ಮೊದ ಮೊದಲು ಅವರು ಇವಳ ಕಡೆ ಗಮನವನ್ನೇ ಕೊಡದಿದ್ದರೂ ನಂತರ ತನ್ನ ಮೌನದ ಚಿಪ್ಪೊಡೆದು ಕಥೆ ಹೇಳಲು ಶುರುವಿಟ್ಟುಕೊಂಡರು.

" ಆರು ಹೆಣ್ಣು ಮಕ್ಕಳ ನಂತರ ಹರಕೆಯ ಫಲವಾಗಿ ಮನೆಗೆ ಏಳನೇ ಮಗುವಾಗಿ ಹುಟ್ಟಿದವನು ನಾನು.ಹುಟ್ಟುತ್ತಲೇ ಅಕ್ಕಂದಿರ ರೂಪದಲ್ಲಿ ಆರು ಅಮ್ಮಂದಿರ ಪಡೆದ ಅದೃಷ್ಟವಂತ. ನಮ್ಮವ್ವಂಗೆ ಮಗ ’ಓದು ಬರ ಕಲ್ತು ದೊಡ್ಮನ್ಸ’ ಆಗ್ಲಿ ಅನ್ನುವ ಆಸೆ. ನಾನೋ ನಾಲ್ಕರಲ್ಲೇ ನಾಲ್ಕು ಬಾರಿ ಡುಮ್ಕಿ ಹೊಡೆಯುವಷ್ಟು ಬುದ್ಧಿವಂತ. ’ಗೇಯ್ದು ತಿನ್ನೋ ಕಾಲ ಮುಗ್ದೋಗಿ ಬೋ ವರ್ಸ ಆಯ್ತು ಕಣ್ ಮಗಾ, ಅದ್ನೇ ನಂಬ್ಕೊಂಡು ನಾವು ಗೆದ್ಲು ಹತ್ತಿದ್ದು ಸಾಕು, ನೀನಾದ್ರೂ ನಾಲ್ಕಕ್ಸರ ಕಲ್ತು ದೊಡ್ಡೋನಾಗು’ ಅಂತ ಆಗಾಗ ಹೇಳುತ್ತಲೇ ಇದ್ದಳು. ಅದರ ಫಲವೇನೋ ಎಂಬಂತೆ ಅಂತೂ ಇಂತೂ ಊರಿಗೊಬ್ಬನೇ ಆಗಿ ಏಳನೇ ಕ್ಲಾಸ್ ಪಾಸಾಗಿ ಪಕ್ಕದೂರಿನ ಹೈಸ್ಕೂಲ್ ಸೇರಿಕೊಂಡೆ. ಹೊಸ ಊರು, ಹೊಸ ಪರಿಚಯ, ಹೊಸ ಗೆಳೆತನ ನನ್ನಲ್ಲಿ ಬದಲಾವಣೆಯ ಗಾಳಿ ಬೀಸಿತ್ತೋ ಏನೋ, ಡುಮ್ಕಿ ಹೊಡೆಯುವ ಚಾಳಿ ಬಿಟ್ಟು ಮೂರೇ ವರ್ಷದಲ್ಲಿ ಹೈಸ್ಕೂಲ್ ಮುಗಿಸಿ ಕಾಲೇಜಿಗೆ ಕಾಲಿಟ್ಟೆ.

ಅಷ್ಟು ಹೊತ್ತಿಗಾಗುವಾಗ ಅಪ್ಪ, ಅಕ್ಕಂದಿರ ಮದುವೆ ಬಾಣಂತನ ಅಂತೆಲ್ಲಾ ಕೈ ಖಾಲಿ ಮಾಡಿಕೊಂಡಿದ್ದ. ಅಪ್ಪನ ಬಳಿ ಮುಂದಿನ ಓದಿಗಾಗಿ ದುಡ್ಡು ಕೇಳುವಂತಿರಲಿಲ್ಲ. ಕೇಳಿದರೂ ಕೊಡಲು ಅವನಲ್ಲೇನೂ ಉಳಿದಿರಲಿಲ್ಲ. ಆದ್ರೆ ಅವ್ವನಿಗೆ ನನ್ನ 'ದೊಡ್ಮನ್ಸ' ಮಾಡುವ ಆಸೆ ಇನ್ನೂ ಕಮರಿರಲಿಲ್ಲ. ಅವರಿವರ ಕೈಕಾಲು ಹಿಡಿದು, ಕಾಡಿ ಬೇಡಿ, ಅಪ್ಪನ ಕಣ್ಣು ತಪ್ಪಿಸಿ ಕಾಳು ಕಡ್ಡಿ ಮಾರಿ ನನಗೆ ಹಣ ಹೊಂದಿಸಿ ಕೊಡುತ್ತಿದ್ದಳು.  ಇಷ್ಟಾದರೂ ಪದವಿಯ ಹೊತ್ತಿಗಾಗುವಾಗ ಅಮ್ಮ ಕೊಡುತ್ತಿದ್ದ ದುಡ್ಡು ರಾವಣನ ಹೊಟ್ಟೆಗೆ ಅರೆ ಕಾಸಿನ ಮಜ್ಜಿಗೆಯಂತಾಗುತ್ತಿತ್ತಷ್ಟೆ. ಹಾಗಾಗಿ ನನ್ನ ಅಲ್ಪ ಖರ್ಚನ್ನು ತೂಗಿಸಿಕೊಳ್ಳಲು ದುಡಿಮೆ ಅನಿವಾರ್ಯವಾಯಿತು. ಕಾಲೇಜು ಪಕ್ಕದಲ್ಲಿದ್ದ ದಿನಸಿ ಅಂಗಡಿಯೊಂದರಲ್ಲಿ ಕೆಲಸಕ್ಕೆ ಸೇರಿಕೊಂಡೆ. ಹಗಲು ಓದು, ರಾತ್ರಿ ದುಡಿಮೆ. ಅಂತೂ ಮೂರು ವರ್ಷಗಳ ಬಳಿಕ ಇಡೀ ಊರಿಗೆ ಡಿಗ್ರಿ ಪಡೆದ ಮೊದಲಿಗನಾಗಿ ಪದವಿಯೊಂದಿಗೆ ಊರು ಸೇರಿದೆ.

ಊರ ತಲೆಬಾಗಿಲಲ್ಲೇ ಅವ್ವ 'ದೊಡ್ಮನ್ಸ' ಆಗಿದ್ದ ಮಗನನ್ನು ಆರತಿ ಎತ್ತಿ ಸ್ವಾಗತಿಸಿದ್ದಳು. ಊರ ಪೂರ್ತಿ ಹಬ್ಬದ ವಾತಾವರಣ.ನಾನು ನಾಲ್ಕು ಸಲ ಡುಮ್ಕಿ ಹೊಡೆದ ಪ್ರೈಮರಿ ಶಾಲೆಯಲ್ಲಿ ನನಗೆ ಸನ್ಮಾನವೂ ಆಯ್ತು. ಅವ್ವ ಹೊಸ ಹುಟ್ಟು ಪಡೆದಂತೆ ನನ್ನ ಪದವಿಯ ಬಗ್ಗೆ ಊರಿಡೀ ಡಂಗುರ ಸಾರುತ್ತಲೇ ಇದ್ದಳು. ಆದರೆ ಇವೆಲ್ಲಾ ಮೂರುದಿನಗಳ ಸಂಭ್ರಮ, ಮಗ ಊರಿಗ ಆಗುತ್ತಿದ್ದಂತೆ ಈ ಸಂಭ್ರಮವೂ ಹಳತಾಗುತ್ತದೆ ಅನ್ನುವ ಸತ್ಯ ಗೊತ್ತಿದ್ದುದರಿಂದಲೋ ಏನೋ ಅಪ್ಪ ಮಾತ್ರ ನನಗೆ ಮದುವೆ ಮಾಡುವ ಲೆಕ್ಕಾಚಾರದಲ್ಲಿದ್ದ.

ಅವ್ವ ಆಗಲೂ ' ನೀ ಇವನ್ನೆಲ್ಲಾ ಅಚ್ಕೊಂಡು ಬ್ಯಾಸ್ರ ಮಾಡ್ಕೋಬೇಡ ಕಣ್ ಮಗಾ' ಎಂದು ನನ್ನ ಮತ್ತೆ ಓದೋಕೆ ಕಳುಹಿಸಿದ್ದಳು. ಹಗಲಿನ ಓದು, ರಾತ್ರಿಯ ದುಡಿತ ಅಂತೆಲ್ಲಾ ಕಣ್ಣು ಮುಚ್ಚಿ ತೆರೆಯುವಷ್ಟರಲ್ಲಿ ಸ್ನಾತಕೋತ್ತರ ಪದವಿಯೂ ಮುಗಿದೇ ಹೋಯಿತು.  ನನ್ನ ಅದೃಷ್ಟವೇನೋ ಎಂಬಂತೆ ಓದಿದ ಕಾಲೇಜಲ್ಲೇ ಉಪನ್ಯಾಸಕ ಹುದ್ದೆಯನ್ನೂ ಗಿಟ್ಟಿಸಿಕೊಂಡೆ. ಕೆಲಸಕ್ಕಿದ್ದ ಅಂಗಡಿಯವರು ಮಗಳನ್ನೇ ಪ್ರೀತಿಸಿ ಎಲ್ಲರ ಸಮ್ಮುಖದಲ್ಲಿ ಮದುವೆಯೂ ಆದೆ.

ಹೆಂಡತಿಯೇನೋ ಒಳ್ಳೆಯವಳೇ. ಆದ್ರೆ ಮದುವೆಯಾಗಿ ಊರಲ್ಲಿದ್ದ ನನ್ನನ್ನು ಬೆಂಗಳೂರಿನ ತಳಕುಬಳುಕು ಸೆಳೆಯತೊಡಗಿತ್ತು. ಕೆಲಸದ ನೆಪ ಹೇಳಿ ಅಪ್ಪನನ್ನು ಒಪ್ಪಿಸಿ ಮತ್ತೆ ಬೆಂಗಳೂರಿಗೆ ಹೊರಡುವ ತಯಾರಿ ನಡೆಸಿದೆ. ಅವ್ವ, ಮಗ ಸೊಸೆಯನ್ನು ಬಾಯ್ತುಂಬಾ ಹರಸಿ ಕಳುಹಿಸಿಕೊಟ್ಟಳು.

ಬೆಂಗಳೂರಿಗೆ ಹೋದಮೇಲೆ ಮತ್ತೆ ಅವ್ವ, ಅಪ್ಪ ನೆನಪಾಗಾಲಾರಂಭಿಸಿದರು. ಅವರು ಪಟ್ಟ ಕಷ್ಟ, ಅನುಭವಿಸಿದ ಅವಮಾನಗಳು ಮತ್ತೆ ಮತ್ತೆ ಕಾಡಲಾರಂಭಿಸಿದವು. ಒಂದು ಭಾನುವಾರ ಅವರಿಬ್ಬರನ್ನೂ ಕರೆದೊಯ್ಯಲು ಮತ್ತೆ ಊರಿಗೆ ಬಂದು ಬಲವಂತವಾಗಿ ಅವರಿಬ್ಬರನ್ನು ಬೆಂಗಳೂರಿನ ಕಾರು ಹತ್ತಿಸಿದೆ.

ಆದರೆ ತಲೆ ಎತ್ತಿದಷ್ಟೂ ಎತ್ತರಕ್ಕಿರುವ ಕಟ್ಟಡಗಳು, ಹಡಗಿನಂತಹ ಕಾರುಗಳು, ತಮ್ಮೂರಿನಲ್ಲಿ ವರ್ಷಕ್ಕೊಮ್ಮೆ ನಡೆಯುವ ಜಾತ್ರೆಗೂ ಸೇರದಷ್ಟು ಜನ ಇಲ್ಲಿ ಪ್ರತಿದಿನ ನೆರೆಯುತ್ತಾರೆ ಅನ್ನುವ ಅಚ್ಚರಿ, ಈ ಊರು ನಿದ್ರಿಸುವುದೇ ಇಲ್ಲವೇ ಅನ್ನುವ ಬೆರಗುಗಳೆಲ್ಲವೂ ನಿಧಾನವಾಗಿ ನೀರಸವೆನಿಸತೊಡಗಿ ಇಬ್ಬರಿಗೂ ದಿನ ಬೆಳಗಾದರೆ ಕೂಗುತ್ತಿದ್ದ ಕೋಳಿ, ಕುಣಿಕೆ ಬಿಚ್ಚಿದ ಕೂಡಲೇ ಕೆಚ್ಚಲಿಗೆ ಬಾಯಿ ಹಾಕುತ್ತಿದ್ದ ಕರು, ಅಕ್ಕ ಪಕ್ಕದ ಮನೆಯವರೊಂದಿಗೆ ಆಡುತ್ತಿದ್ದ ಜಗಳ, ಇಡೀ ಊರ ವಿಷಯ ಚರ್ಚೆಯಾಗುತ್ತಿದ್ದ ತಮ್ಮ ಹೊಲಗಳು ನೆನಪಾಗತೊಡಗಿ ಮತ್ತೆ ಊರಿಗೆ ಹೊರಡುತ್ತೇವೆ ಎಂದು ಪಟ್ಟುಹಿಡಿದು ಕೂತರು. ನಾನು ಗತ್ಯಂತರವಿಲ್ಲದೆ ಅವರನ್ನು ಕಳುಹಿಸಿಕೊಟ್ಟೆ. ಅದಾಗಿ ಎರಡೇ ತಿಂಗಳಲ್ಲಿ ಇಬ್ಬರೂ ಗದ್ದೆಯ ಬದುವಿನಲ್ಲಿ ಹರಿದಾಡುತ್ತಿದ್ದ ಹಾವು ಕಚ್ಚಿ ಸತ್ತು ಹೋದರು. ಅಂತ್ಯ ಸಂಸ್ಕಾರ ಮುಗಿಸಿ ಮತ್ತೆ ಬೆಂಗಳೂರಿಗೆ ಬಂದ ನಂತರ ಊರಿನ ಸಂಬಂಧ ಸಂಪೂರ್ಣ ಕಡಿದೇ ಹೋಯಿತು. ಮುಂದೆ ಊರು ನೆನಪಾದದ್ದು ನಾನು ರಿಟೈರ್ ಆದಮೇಲಷ್ಟೇ.

ಅತ್ತ ಕಾಲೇಜಿಗೂ ಹೋಗಲಾಗದೆ, ಇತ್ತ ಮನೆಯಲ್ಲೂ ಇರಲಾಗದಿದ್ದಾಗ ಮತ್ತೆ ಹುಟ್ಟಿದೂರು ಕಾಡತೊಡಗಿ ಒಂದು ಮುಂಜಾವು ಹೆಂಡತಿ ಮಕ್ಕಳನ್ನು ಕರೆದುಕೊಂಡು ಊರ ದಾರಿ ಹಿಡಿದೆ. ಆದರೆ ಆ ಇಪ್ಪತ್ತೈದು ವರ್ಷಗಳ ಕಾಲದ ಹರಿವಿನಲ್ಲಿ ನನ್ನೂರು ಪೂರ್ತಿ  ಬದಲಾಗಿತ್ತು. ರಾತ್ರಿಯಾದರೂ ಖಾಲಿಯಾಗದಿರುತ್ತಿದ್ದ ಯಲ್ಲಮ್ಮನ ಗುಡಿಯ ಮುಂದಿನ ಅರಳಿಕಟ್ಟೆ ಹಾಡು ಹಗಲಲ್ಲೇ ಬಿಕೋ ಅನ್ನುತ್ತಿತ್ತು. ಅಪರಿಚಿತರನ್ನು ಕ್ಷಣಮಾತ್ರದಲ್ಲಿ ತನ್ನವರನ್ನಾಗಿಸುತ್ತಿದ್ದ ನನ್ನೂರಿನ ಜನರು ನನ್ನ ನೋಡುತ್ತಿದ್ದಂತೆ ಕಿಟಕಿ ಬಾಗಿಲುಗಳನ್ನು ಭದ್ರವಾಗಿ ಮುಚ್ಚುತ್ತಿದ್ದರು. ಊರಿಡೀ ಅವ್ಯಕ್ತ ಭೀತಿಯೊಂದು ಮನೆ ಮಾಡಿದೆಯೇನೋ ಎಂದು ಅನಿಸುತ್ತಿತ್ತು. ಸದಾ ಗಿಜಿಗುಟ್ಟುತ್ತಿದ್ದ ಊರ ಸಂತೆಯಲ್ಲೂ ಸ್ಮಶಾನ ಮೌನ. ಬಯಸೀ ಬಯಸಿ ಊರಿಗೆ ಬಂದರೆ, ಇಲ್ಲಿ ನಾನು ಕಾಣುತ್ತಿರುವುದಾದರೂ ಏನು ಅನ್ನುವ ಗೊಂದಲಕ್ಕೆ ಬಿದ್ದು ಮನೆ ತಲುಪಿ ಇನ್ನೇನು ಬೀಗ ತೆರೆದು ಒಳಗೆ ಕಾಲಿಡಬೇಕು ಅನ್ನುವಷ್ಟರಲ್ಲಿ ಮನೆಯೊಳಗೆ ಏನೋ ಸದ್ದಾದಂತೆ ಅನ್ನಿಸಿತು. ಅಂಜುತ್ತಲೇ ಒಳಗಡಿಯಿಟ್ಟರೆ, ಅಲ್ಲಿದ್ದ ಪಾತ್ರೆ ಪರಡಿಗಳು, ಬಳಸಿ ಬಿಸಾಕಿದ್ದ ಸೋಪ್ ತೀರಾ ಇತ್ತೀಚಿನವರೆಗೂ ಮನುಷ್ಯ ವಾಸವಿದ್ದ ಸ್ಪಷ್ಟ ಕುರುಹನ್ನ್ನು ನೀಡಿತು.

ಒಂದು ಕ್ಷಣ ಭಯವಾದರೂ ನನ್ನವ್ವ ಅಪ್ಪ ಬಾಳಿ ಬದುಕಿದ ಊರಿದು, ಅಕ್ಕಂದಿರು ಬದುಕುತ್ತಿರುವ ಊರಿದು ಅನ್ನುವ ಅಭಿಮಾನದಲ್ಲಿ ಎಲ್ಲಾ ಭಯಗಳು ತೂರಿಹೋದವು. ಊರಲ್ಲಿ ಯಾವುದೋ ಒಂದು ಅಸ್ಪಷ್ಟ ಭೀತಿಯ ಛಾಯೆಯಿದೆ ಎಂದೆನಿಸಿದರೂ ಮೊದಲ ಕೆಲ ದಿನಗಳು ಮನೆಯಲ್ಲೇನೂ ವಿಶೇಷ ಘಟಿಸಲಿಲ್ಲ. ನಾನೂ ಅವೆಲ್ಲಾ ನನ್ನ ಭ್ರಮೆ ಇರಬಹುದೇನೋ ಅಂದುಕೊಂಡು ಸುಮ್ಮನಾದೆ. ಮೇಲಾಗಿ ಅಕ್ಕಂದಿರನ್ನು ಇನ್ನೇನು ನೋಡೇಬಿಡುತ್ತೇನೆ ಅನ್ನುವ ಖುಶಿಯಲ್ಲಿ ಇದ್ದ ಅಲ್ಪ ಸ್ವಲ್ಪ ಅನುಮಾನಗಳು ಕೊಚ್ಚಿಹೋದವು.

ಆದರೆ ಒಂದಿಷ್ಟು ದಿನಗಳು ಕಳೆಯುತ್ತಿದ್ದಂತೆ ಹಳೆ ಗೆಳೆಯರು, ಊರ ತುಂಬಾ ನಕ್ಸಲರು ತುಂಬಿಕೊಂಡದ್ದನ್ನೂ, ಜನವಾಸವಿಲ್ಲದೆ ಪಾಳು ಬಿದ್ದಿದ್ದ ನನ್ನ ಮನೆಯೇ ಅವರ ಕಾರ್ಯಸ್ಥಾನವಾಗಿತ್ತು ಅನ್ನುವುದನ್ನೂ ನಿಧಾನವಾಗಿ ಬಾಯಿಬಿಟ್ಟರು. ಮಾತ್ರವಲ್ಲ ನನ್ನ ಹಿರಿಯಕ್ಕನ ಮಗನೂ ಅವರ ಪಾಳಯ ಸೇರಿಕೊಂಡಿದ್ದಾನೆ ಅನ್ನುವ ಕಟುಸತ್ಯವನ್ನೂ ತಿಳಿಸಿದರು. ಆ ಕ್ಷಣಕ್ಕೆ ನನಗೆ ಭೂಮಿಯೇ ಬಾಯಿ ತೆರೆದು ನನ್ನನ್ನು ನುಂಗಬಾರದೇ ಅನ್ನಿಸುತ್ತಿತ್ತು. ಮುಂದೇನು ಮಾಡಬೇಕು ಅನ್ನುವುದೇ ತೋಚಲಿಲ್ಲ. ಬೆಂಗಳೂರಿನ ಬದುಕಿನ ಧಾವಂತದಿಂದ ತಪ್ಪಿಸಿಕೊಳ್ಳಲು ಊರಿಗೆ ಬಂದರೆ ಅಲ್ಲಿ ಜೀವ ಕೈಯಲ್ಲಿ ಹಿಡಿದು ಬದುಕುವಂತಹ ಸ್ಥಿತಿ ಎದುರಾಗಿತ್ತು. ನಗರದಲ್ಲಿ ಹುಟ್ಟಿ ಬೆಳೆದ ಹೆಂಡತಿ ಮಕ್ಕಳು ನನ್ನ ಹಳ್ಳಿಗಿನ್ನೂ ಹೊಂದಿಕೊಳ್ಳಲು ಕಷ್ಟಪಡುತ್ತಲೇ ಇದ್ದರು. ಅದರ ಮಧ್ಯೆ ಈ ವಿಚಾರವನ್ನೂ ಹೇಳಿದರೆ ಮತ್ತಷ್ಟು ಭಯಪಟ್ಟುಕೊಳ್ಳುತ್ತಾರೆ ಅಂತಂದುಕೊಂಡು ಅವರಿಂದ ವಿಷಯ ಮುಚ್ಚಿಟ್ಟೆ. ಆದ್ರೆ ಏನಾದರೂ ಮಾಡಲೇಬೇಕಿತ್ತು, ಮೇಲಾಗಿ ಸೋದರಳಿಯನನ್ನು ಮತ್ತೆ ಮುಖ್ಯವಾಹಿನಿಗೆ ಕರೆತಂದು ಈ ಹಿಂಸಾಚಾರಗಳಿಂದ ಅವನನ್ನು ವಿಮುಖನಾಗಿಸಲೇಬೇಕಿತ್ತು.

ಸರಿ, ಆದದ್ದಾಗಲಿ ಎಂದು ಅವನನ್ನು ಹುಡುಕುತ್ತಾ ಹೊರಟೆ. ಯಾರ ಬಳಿ ಅವರ ಬಗ್ಗೆ ವಿಚಾರಿಸಿದರೂ ನಮಗೇನೂ ಗೊತ್ತಿಲ್ಲ ಅನ್ನುವ ಸಿದ್ಧ ಉತ್ತರವೇ ಸಿಗುತ್ತಿತ್ತು. ಅಂತೂ ಇಂತೂ ಕಷ್ಟಪಟ್ಟು ಕಾಡಿನ ಒಂದು ಮೂಲೆಯಲ್ಲಿ ಅವನನ್ನು ಕಂಡುಹಿಡಿದೆ. ಬೆನ್ನಲ್ಲಿ ಮಣಭಾರದ ಬ್ಯಾಗ್, ಬಗಲಲ್ಲಿ ಕೋವಿ, ಕಣ್ಣಲ್ಲಿ ಕ್ರಾಂತಿಯ ಕಿಚ್ಚು, ಮನುಷ್ಯತ್ವವನ್ನೇ ತಿಂದು ತೇಗುವಂತಹ ಗಾಂಭೀರ್ಯ. ಮಾತೆತ್ತಿದರೆ ಲೆನಿನ್, ಚಿಗುವೆರಾ, ಮಾರ್ಕ್ಸ್ ಎಂದೆಲ್ಲಾ ದೊಡ್ಡವರ ಮಾತುಗಳನ್ನು ತನಗೆ ಬೇಕಾದಂತೆ ತಪ್ಪು ತಪ್ಪಾಗಿ ಹೇಳುತ್ತಿದ್ದ. ಈ ದೇಶ ಉದ್ಧಾರವಾಗಬೇಕಾದರೆ ರಕ್ತಕ್ರಾಂತಿ ಆಗಲೇಬೇಕು ಅನ್ನುತ್ತಿದ್ದ. ಹಳ್ಳಿಯ ಏನೂ ಅರಿಯದ ಮುಗ್ಧನೊಬ್ಬನನ್ನು ಬ್ರೈನ್?ವಾಶ್ ಈ ಪರಿ ಬದಲಾಯಿಸಿಬಿಡುತ್ತಾದಾ? ಮನೆಯ ಅಂಗಳದಲ್ಲಿ ಸಕ್ಕರೆ ಚೆಲ್ಲಿ ಇರುವೆಯೂ ಬದುಕಿಕೊಳ್ಳಲಿ ಬಿಡಿ ಅನ್ನುತ್ತಿದ್ದವನ ಬಾಯಲ್ಲಿ ಈಗ ರಕ್ತ ಕ್ರಾಂತಿಯ ಮಾತು! ಎಂತಹ ವೈಚಿತ್ರ್ಯವಲ್ಲವೇ ಅಂತ ಅನ್ನಿಸುತ್ತಿದ್ದಂತೆ ಅವನು,  'ಹೌದೂ ಈಟ್ ದಿನ ಇಲ್ಲದ್ ನಂಟು ಇದ್ಕಿಂದಗ್ಗೆ ಈಗ್ ನೆನಕೊಂಡ್ ಬರೋ ಅಕ್ಕಿಗತ್ತೇನು? ಮನೆಯಾಗೇನಾದ್ರೂ ಕ್ಯಾಮಿತ್ತಾ?' ಎಂದು ವ್ಯಂಗ್ಯವಾಗಿ ಕೇಳಿದ. ಏನೊಂದೂ ಉತ್ತರಿಸದೆ ನಾನು ಸುಮ್ಮನೆ ಅವನನ್ನೇ ನೋಡುತ್ತಾ ನಿಂತೆ. ಅವನವ್ವ ಬಯ್ಯುತ್ತಿದ್ದರೂ ಇವನನ್ನೇ ಅಲ್ಲವೇ ನಾನು ಮೊದಲ ಸೋದರಳಿಯ ಎಂದು ವಿಪರೀತ ಮುದ್ದು ಮಾಡುತ್ತಿದ್ದುದು? ಇವನಾದರೂ ಅಷ್ಟೆ ಅವನ ಅಪ್ಪನಿಗಿಂತಲೂ ಹೆಚ್ಚಾಗಿ ನನ್ನನ್ನೇ ಹಚ್ಚಿಕೊಂಡಿದ್ದ. ಈಗ ತನಗೂ ಅವನಿಗೂ ಯಾವುದೇ ಸಂಬಂಧವಿಲ್ಲವೆಂಬಂತೆ ಮಾತಾನಾಡುತ್ತಿದ್ದಾನೆ. ನಾನು ಅವನ ಪಕ್ಕ ಕೂತು ಗಲ್ಲ ಹಿಡಿದೆತ್ತಿ, ’ಇವೆಲ್ಲಾ ಬುಟ್ಬುಡು ಮಗಾ, ಬಾ ಮನೆಗೆ ಹೋಗೋಣ’ಅಂದೆ. ಅವನು ಮತ್ತಷ್ಟು ಕೊಸರಿಕೊಳ್ಳುತ್ತಾ ನನ್ನಿಂದ ದೂರ ಸರಿದು, ಮತ್ತೆ ಕ್ರಾಂತಿ, ನ್ಯಾಯ ಅಂತೆಲ್ಲಾ ಬಡಬಡಿಸತೊಡಗಿದ. ಇನ್ನಿವನಲ್ಲಿ ಮಾತನಾಡಿ ಪ್ರಯೋಜನವಿಲ್ಲವೆಂದರಿತು, ಇವನ ಅವ್ವನ ಮೂಲಕವಾದರೂ ಇವನನ್ನು ಸರಿದಾರಿಗೆ ತರಲು ಪ್ರಯತ್ನಿಸೋಣ ಅಂದುಕೊಂಡು, ’ಹೋಗ್ಲಿ ಬುಡು. ಅಕ್ಕಯ್ಯ ಎಲ್ಲಿ?’ ಅಂತ ಕೇಳಿದೆ. ಅವನು ಮುಖ ತಿರುಗಿಸಿ, ’ಎರಡು ವರ್ಷಗಳ ಹಿಂದೆ ಅವ್ವ, ಚಿಗವ್ವಂದಿರು ಪೊಲೀಸ್ ಕಾರ್ಯಾಚರಣೆಯಲ್ಲಿ ಸತ್ತೋದ್ರು’ ಅಂತಂದು ನಡೆದುಹೋದ. ಕ್ರಾಂತಿಯ ಬಗ್ಗೆ ಮಾತನಾಡುತ್ತಿದ್ದವನ ಕಣ್ಣಲ್ಲೂ ನೀರು ಗಿರಿಗಿಟ್ಲೆಯಾಡುತ್ತಿತ್ತಾ? ನಿಲ್ಲಿಸಿ ನೋಡುವಷ್ಟು ಧೈರ್ಯ ನನಗಿರಲಿಲ್ಲ.

ತೀರಾ ಎದೆಯೊಳಗೆ ಕೈ ಹಾಕಿ ಹೃದಯವನ್ನು ಹಿಂಡಿ ಮಧ್ಯರಸ್ತೆಯಲ್ಲಿ ಬಿಸುಟಿ ಹೋದಂಥಾ ಯಾತನೆ. ಅಂತ್ಯಸಂಸ್ಕಾರದಂದು ಮೃತದೇಹದ ಮೇಲೆ ಬಿದ್ದು ಅತ್ತು ಕರೆಯುತ್ತಿದ್ದ, ನಾನು ಚಿಕ್ಕವನಿದ್ದಾಗ ಹೆಗಲ ಮೇಲೆ ಕೂರಿಸಿ ಮೆರವಣಿಗೆ ಮಾಡುತ್ತಿದ್ದ, ಅವ್ವನಿಗೆ ಗೊತ್ತಾಗದಂತೆ ಸಾಸಿವೆ ಡಬ್ಬದಲ್ಲಿದ್ದ ಐದೋ ಹತ್ತೋ ಪೈಸೆಯನ್ನು ನನಗೆ ಕದ್ದು ಮುಚ್ಚಿ ಕೊಡುತ್ತಿದ್ದ, ನಾನು ಶಾಲೆಗೆ ಹೋಗುವುದಿಲ್ಲವೆಂದು ಹಠ ಹಿಡಿದಾಗೆಲ್ಲಾ ಗೋಡಂಬಿಯ ಆಸೆ ತೋರಿಸಿ ನನ್ನ ಶಾಲೆಗೆ ಕಳುಹಿಸುತ್ತಿದ್ದ ಅಕ್ಕಂದಿರ ಮುಖವನ್ನು ನೆನಪಿಸಿಕೊಳ್ಳಲು ಅದೆಷ್ಟೇ ಪ್ರಯತ್ನಪಟ್ಟರೂ ರಕ್ತದ ಮಡುವಲ್ಲಿ ಬಿದ್ದು ಅವರು ಒದ್ದಾಡಿರಬಹುದಾದ ಚಿತ್ರ ಮರೆಯಾಗುತ್ತಲೇ ಇರಲಿಲ್ಲ. ತಪ್ಪೆಲ್ಲಾ ನನ್ನದೇ, ಅವ್ವ-ಅಪ್ಪ ಹೋದನಂತರ ಈ ಊರಿನ ಕಡೆಗೆ ತಲೆಹಾಕದೇ ತಪ್ಪು ಮಾಡಿಬಿಟ್ಟೆ ಅನ್ನುವ ಅಪರಾಧೀ ಭಾವ ನನ್ನ ಕಾಡತೊಡಗಿ ಕೊನೆಯ ಪ್ರಯತ್ನವೆಂಬಂತೆ ಕೆಲದಿನಗಳಲ್ಲೇ ಮತ್ತೆ ಅವನ ಜಾಡು ಹಿಡಿದು ಹೊರಟೆ. ಅವನೊಬ್ಬನನ್ನಾದರೂ ಈ ನರಕದಿಂದ ಮುಕ್ತಗೊಳಿಸಿ ನಾನು ಮತ್ತೆ ಸಂಸಾರ ಸಮೇತನಾಗಿ ಬೆಂಗಳೂರಿಗೆ ಹೋಗಿಬಿಡೋಣ ಅಂದುಕೊಂಡೆ. ಮೇಲಾಗಿ  ಸಾಯಿಸುವಂತಹ ಯಾವ ತಪ್ಪನ್ನು ಅಕ್ಕಂದಿರು ಮಾಡಿದ್ದರು ಅನ್ನುವುದನ್ನೂ ನನಗೆ ತಿಳಿದುಕೊಳ್ಳಬೇಕಿತ್ತು. ಆದ್ರೆ ಅವನು ನನ್ನ ಯಾವ ಪ್ರಶ್ನೆಗಳಿಗೂ ಉತ್ತರಿಸಲು ತಯಾರಿರಲಿಲ್ಲ. ಇವಕ್ಕೆಲ್ಲಾ ನೀನೇ ಕಾರಣ ಅನ್ನುವ ಸ್ಪಷ್ಟ ತಿರಸ್ಕಾರ ಅವನ ಕಣ್ಣುಗಳಲ್ಲಿ ಎದ್ದು ಕಾಣುತ್ತಿತ್ತು. ಇವನಿನ್ನು ಹಿಂದಿರುಗಿ ಬರಲಾರದಷ್ಟು ಮುಂದುವರಿದಿದ್ದಾನೆ ಅನ್ನಿಸಿ ಅಲ್ಲಿಂದ ಹಿಂದಿರುಗಿ ಬಂದೆ. ತೀರಾ ಕಾಡು ದಾಟುವ ಮುನ್ನ ಹಿಂದಿನಿಂದ ಓಡಿ ಬಂದು ’ ಮಾವ ಈ ಊರಾಗೆ ಯಾವ್ ಹೊತ್ತಲ್ಲಿ ಏನ್ ಆಗ್ತಾದೋ ಹೇಳಕೊ ಆಗೋಲ್ಲ, ಇಲ್ಲಿಂದ ಹೊಳ್ಳಿ ಹೋಗಿ ನೀನಾದ್ರೂ ಬದ್ಕೊ’  ಅಂದ. ನಾನು ’ ನಮ್ಮ ಜೋಡಿ ನೀನೂ ಬರ್ತಿ ಅಂಥಾದ್ರೆ ಊರು ಬಿಟ್ಟ್ ಹೋಗ್ತೇವೆ. ಇಲ್ಲ್ದಿದ್ದರೆ ಅದೇನಾಗುತ್ತೈತೋ ಆಗ್ಲಿ, ನಾವಿಲ್ಲೆ ಇರ್ತೀವಿ’ ಅಂದೆ. ಅವನು ನಿರ್ಲಿಪ್ತನಂತೆ ’ನಿಮ್ಮಿಷ್ಟ’ ಅಂತಂದು ಬೆನ್ನು ತಿರುಗಿಸಿ ನಡೆಯತೊಡಗಿದ. ಅವನ ನಿರ್ವಿಕಾರದಲ್ಲೂ ತನ್ನವರು ಅನ್ನುವ ಆರ್ದ್ರತೆಯಿತ್ತಾ? ಗೊತ್ತಿಲ್ಲ.

ಅರಗಿಸಿಕೊಳ್ಳಲಾಗದ ಸತ್ಯವನ್ನು ಅರಗಿಸಿಕೊಳ್ಳಲೆತ್ನಿಸುತ್ತಾ ಮನೆ ತಲುಪಿದೆ. ಮನೆಯ ಮನೆಯ ಮೂಲೆ ಮೂಲೆಯಲ್ಲಿಯೂ ಅಕ್ಕಂದಿರ ನರಳಾಟ, ಚೀರಾಟ ಕೇಳಿಸುತ್ತಿದೆ ಅನಿಸುತಿತ್ತು. ನನಗೊತ್ತಿರುವ ಸತ್ಯವನ್ನು ಹೆಂಡತಿ ಮಕ್ಕಳ ಜೊತೆ ಹಂಚಿಕೊಳ್ಳಲಾರದ ಸಂಧಿಗ್ಧತೆ. ಕೊನೇಪಕ್ಷ ಇವರನ್ನಾದರೂ ಉಳಿಸಿಕೊಳ್ಳೋಣ ಅನ್ನಿಸಿ ಪತ್ನಿಯ ಬಳಿ ’ಸಾಮಾನೆಲ್ಲಾ ಪ್ಯಾಕ್ ಮಾಡು, ಈ ಊರು ನನಗೀಗ ಸರಿಬರುತ್ತಿಲ್ಲ, ನಾವು ನಾಳೆ ಬೆಂಗಳೂರಿಗೆ ಹಿಂದಿರುಗೋಣ’ ಅಂದೆ. ಆಕೆ ಇವೆಲ್ಲಾ ಏನು ಎಂಬಂತೆ ನನ್ನತ್ತ ನೋಡಿದಳು. ನಾನು ಮುಖ ತಿರುಗಿಸಿ ಗೋಡೆಯ ಮೇಲಿದ್ದ ಅಪ್ಪನ ಫೋಟೋವನ್ನೊಮ್ಮೆ, ಅವ್ವನ ಫೋಟೋವನ್ನೊಮ್ಮೆ ನೋಡಿ ಕೈ ಮುಗಿದೆ.

ರಾತ್ರಿಯ ವಿಚಿತ್ರ ತಳಮಳ ಮುಗಿದು ಬೆಳಗಾಯ್ತು, ಇನ್ನೇನು ಎಲ್ಲಾ ತಯಾರಿ ಮುಗಿಸಿ ಹೊರಡಬೇಕು ಅನ್ನುವಷ್ಟರಲ್ಲಿ ಬಾಗಿಲು ಬಡಿದ ಸದ್ದಾಯಿತು, ಅದರ ಬೆನ್ನಹಿಂದೆಯೇ ’ದಫ್ ದಫ್’ ಅಂತ ಬೂಟುಗಾಲುಗಳ ಸದ್ದೂ ಕೇಳಿಸಿತು. ನಾನು ಬಾಗಿಲ ಬಳಿ ತಲುಪುವ ಮುನ್ನವೇ ಕೋವಿಧಾರಿ ಯುವಕರ ಗುಂಪೊಂದು ಮನೆಯೊಳಗೆ ಪ್ರವೇಶಿಸಿ ಒಳಗಿನಿಂದ ಚಿಲಕ ಹಾಕಿಕೊಂಡರು. ಹೊರಗೆ ಮನೆಯ ಸುತ್ತಲೂ ಪೊಲೀಸರು. ಏನೊಂದೂ ಅರ್ಥವಾಗದ ಹೆಂಡತಿ ಮತ್ತು ನನ್ನಿಬ್ಬರು ಮಕ್ಕಳು ಅಲ್ಲೇ ಪ್ರಜ್ಞೆ ತಪ್ಪಿ ಬಿದ್ದುಬಿಟ್ಟರು. ಹೊರಗಿಂದ ಶರಣಾಗತಿಗೆ ಕರೆಕೊಡುತ್ತಿದ್ದರೆ, ಒಳಗಿಂದ ಗ್ರೆನೇಡ್ ಸಿಡಿಸುವ ಬೆದರಿಕೆ ಒಡ್ಡುತ್ತಿದ್ದರು. ಏನೂ ಮಾಡಲಾಗದ ಅಸಹಾಯಕತೆಯಲ್ಲಿ ನಾನು ಕೈ ಚೆಲ್ಲಿ ಕುಳಿತಿದ್ದೆ.

ಎರಡೂ ಕಡೆಗಳ ಅಹಂಗಳ ಮೇಲಾಟದಲ್ಲಿ ಮನುಷ್ಯತ್ವ ಇಂಚಿಂಚಾಗಿ ಸಾಯುತ್ತಿತ್ತು. ಆ ಕಡೆ ಇರುವವರು ಮೊದಲು ಫೈರಿಂಗ್ ಮಾಡಿದರೋ ಅಥವಾ ಈ ಕಡೆ ಇರುವವರೇ ಮಾಡಿದರೋ ನನಗೊತ್ತಿಲ್ಲ, ಆದ್ರೆ ಮಾನವೀಯತೆಯ ಬೇಟೆಗೆ ಎರಡೂ ಕಡೆಯವರು ಟೊಂಕ ಕಟ್ಟಿದ್ದರು. ಆ ಕಾಳಗದಲ್ಲಿ ನನ್ನವರು ಅನ್ನಿಸಿಕೊಂಡವರನ್ನೆಲ್ಲಾ ಕಳೆದುಕೊಂಡೆ. ಯಾವ ಊರಿಗೆ ನೆಮ್ಮದಿಯನ್ನು ಅರಸಿಕೊಂಡು ಹೋಗಿದ್ದೆನೋ ಅದೇ ಊರು ನನ್ನ ಸರ್ವಸ್ವವನ್ನೂ ನನ್ನಿಂದ ಕಿತ್ತುಕೊಂಡಿತ್ತು. ಅಲ್ಲಿ ಅದೆಷ್ಟು ಜೀವ ಧರೆಗುರುಳಿತೋ ಗೊತ್ತಿಲ್ಲ, ಅದೆಷ್ಟು ರಕ್ತ ನೆಲ ಸೇರಿತೋ ಗೊತ್ತಿಲ್ಲ. ಆದ್ರೆ ಇಡೀ ಮನೆಯಲ್ಲಿ ಜೀವ ಅಂತ ಉಳಿದುದು ನನ್ನದು ಮಾತ್ರ. ವಿಧಿಗೆ, ಕಾಲವೆಂಬ ಕಠೋರ ಹಣೆಬರಕ್ಕೆ ನನ್ನ ಮೇಲೆ ಅದೆಷ್ಟು ದಿನಗಳ ಸಿಟ್ಟಿತ್ತೋ ಏನೋ, ಅಕ್ಷರಶಃ ಜಮಖಾನೆಯ ಮೇಲೆ ನಡೆದುಬಂದಂತೆ ಶವಗಳನ್ನು ದಾಟಿ ಬಂದ ಪೊಲೀಸರು ನನಗೆ ನಕ್ಸಲನೆಂಬ ಹಣೆಪಟ್ಟಿ ಕಟ್ಟಿ ಕೈತೋಳ ತೊಡಿಸಿದರು.

ನಾನು ಏನೊಂದೂ ಮಾತಾಡದೆ ಅವರ ಹಿಂದೆ ಕುರಿಯಂತೆ ನಡೆದು ಹೋದೆ. ವಕೀಲರನ್ನು ನೇಮಿಸಿ ಹೋರಾಡುವ ಶಕ್ತಿಯಾಗಲಿ, ಚೈತನ್ಯವಾಗಲಿ ನನ್ನಲ್ಲಿ ಉಳಿದಿರಲಿಲ್ಲ. ಇಷ್ಟಕ್ಕೂ ನನ್ನವರೆಲ್ಲರನ್ನೂ ಕಳೆದುಕೊಂಡ ಮೇಲೆ ನಾನು ಯಾರಿಗಾಗಿ ಹೋರಾಡಬೇಕಿತ್ತು? ಯಾರಿಗಾಗಿ ಬದುಕಬೇಕಿತ್ತು? ಇವೆಲ್ಲವನ್ನೂ ಮೀರಿ ನಾನು ಸಮಾಜದ್ರೋಹಿ ಕೆಲಸ ಮಾಡಿಲ್ಲವೆಂದರೆ ಅದನ್ನು ನಂಬುವವರಾದರೂ ಯಾರಿದ್ದರು? ಎಲ್ಲಾ ಕಳೆದುಕೊಂಡು ಅಕ್ಷರಶಃ ಅನಾಥನಾದ ಮೇಲೆ ನನ್ನ ನಿರಪರಾಧಿತನವನ್ನು ಸಾಬೀತುಪಡಿಸಿ ನಾನು ಏನನ್ನು ಪಡಕೊಳ್ಳುವುದಿತ್ತು? ನಾನು ಮಾತಿದ್ದೂ ಮೂಗನಾದೆ. ಪೊಲೀಸರು ಕೊಡುತ್ತಿದ್ದ ಯಮಯಾತನೆಗಳನ್ನೆಲ್ಲಾ ಸುಮ್ಮನೆ ಸಹಿಸಿಕೊಳ್ಳುತ್ತಿದ್ದೆ. ಹೊರ ಪ್ರಪಂಚದಿಂದ ಸಂಪೂರ್ಣ ದೂರವೇ ಉಳಿದುಬಿಟ್ಟೆ. ನನ್ನವರು ಇಲ್ಲವೆಂದಾದಮೇಲೆ ನನ್ನ ಯಾರೂ ಬಿಡಿಸಿಕೊಂಡು ಹೋಗಲಾರರು ಅಂದುಕೊಂಡು ಒಂದು ರೀತಿಯಲ್ಲಿ ನೆಮ್ಮದಿಯಾಗಿಯೇ ಇದ್ದೆ. ಆದ್ರೆ ವಿಧಿಗೆಲ್ಲಿದೆ ದಯೆ? ಅದೇನು ಕಾರಣವೋ ಏನೋ ಗೊತ್ತಿಲ್ಲ, ಒಂದು ಬೆಳ್ಳಂಬೆಳಗ್ಗೆ ನನ್ನ ಜೈಲಿನಿಂದ ಬಿಡುಗಡೆ ಮಾಡಿದರು. ನಾನು ಮತ್ತೆ ಕುರಿಯಂತೆ ತಲೆತಗ್ಗಿಸಿ ಹೊರ ಪ್ರಪಂಚಕ್ಕೆ ಬಂದೆ. ಜೈಲಲ್ಲಿರುವಾಗ ಕನಿಷ್ಠಪಕ್ಷ ಊಟವಾದರೂ ನನಗೆ ದೊರಕುತ್ತಿತ್ತು. ಆದರೆ ಹೊರಗಡೆ ಅದಕ್ಕೂ ಸಂಚಾಕಾರ ಬಂದಿತ್ತು. ದುಡಿಯುವ ಆಸಕ್ತಿ, ಸಾಮರ್ಥ್ಯ ಎರಡೂ ನನ್ನಲಿರಲಿಲ್ಲ. ನಾನು ದುಡಿಯುತ್ತೇನೆ ಅಂದರೂ ಒಂಟಿ ಕಾಲಿನ ಕುಂಟನಿಗೆ ಕೆಲಸ ಕೊಡುವವರಾರು? ಹಾಗೆಂದು ಭಿಕ್ಷೆ ಬೇಡಿ ತಿನ್ನುವುದು ನನ್ನ ಜಾಯಮಾನಕ್ಕೆ ಒಗ್ಗಲೇ ಇಲ್ಲ. ಹಾಗಾಗಿ ಅಲೆಯುತ್ತಾ ಅಲೆಯುತ್ತಾ ಇಲ್ಲಿ ಬಂದು ಈ ದೇವಸ್ಥಾನದಲ್ಲಿ ಭಕ್ತರು ಒಳಕ್ಕೆ ಬಿಟ್ಟು ಹೋದ ಚಪ್ಪಲಿ ಕಾಯುತ್ತಾ ಅವರು ಕೊಟ್ಟ ದುಡ್ಡನ್ನು ಪಡೆದು ಇರುವಷ್ಟು ದಿನ ಬದುಕುತ್ತೇನೆ. ಒಂದು ಹೊತ್ತಿನ ಊಟಕ್ಕೆ, ಒಂದು ಕಟ್ಟು ಬೀಡಿಗೆ ನನಗದು ಸಾಕಾಗುತ್ತದೆ. ಆದರೆ ಇಲ್ಲಿ ಬಂದು ಇಷ್ಟು ವರ್ಷವಾದ ಮೇಲೆ ಇದೇ ಮೊದಲ ಬಾರಿ ನಾನು ನನ್ನ ಕಥೆಯನ್ನು ಒಬ್ಬರ ಮುಂದೆ ಬಿಚ್ಚಿಟ್ಟಿದ್ದೇನೆ ಅನ್ನುತ್ತಾ ಕಿವಿಯ ಮೇಲಿದ್ದ ಮೋಟು ಬೀಡಿ ತೆಗೆದು ಬೆಂಕಿ ಹಚ್ಚಿ ತುಟಿಗಿಟ್ಟುಕೊಂಡ.

ಕಥೆ ಸಿಕ್ಕ ಖುಶಿಯಲ್ಲಿ ಪೂಜಾ ಧಿಗ್ಗನೆ ಎದ್ದು ಬೇಗ ಬೇಗನೇ ಹೆಜ್ಜೆ ಹಾಕುತ್ತಾ ಮನೆ ತಲುಪಿ ಕಥೆ ಬರೆದು ಮೈಲ್ ಮಾಡಿ ಲ್ಯಾಪ್?ಟಾಪ್ ಮುಚ್ಚಿ  ಒಂದು ನಿಡಿದಾದ ಉಸಿರುಬಿಟ್ಟು ಸಂತೃಪ್ತಿಯಿಂದ ಕಣ್ಣು ಮುಚ್ಚಿದಳು.

ಹಿಂದಿನಿಂದ ಬಂದ ಅಮ್ಮ ಮೆಲ್ಲನೆ ತಲೆ ನೇವರಿಸುತ್ತಾ ’ಕಥೆಗೆ ವಿಷಯ ಸಿಕ್ತಾ ಮಗಳೇ?’ ಎಂದು ಪ್ರಶ್ನಿಸಿದರು. ಪೂಜಾ 'ಕಥೆ ಬರೆದೂ ಆಯ್ತು, ಕಳುಹಿಸಿಯೂ ಆಯ್ತು' ಅಂದು ಮಂದಿರದಲ್ಲಿ ನಡೆದ ಘಟನೆಯನ್ನು ಸವಿಸ್ತಾರವಾಗಿ ತಿಳಿಸಿದಳು.  ಎಲ್ಲವನ್ನೂ ತಾಳ್ಮೆಯಿಂದ ಕೇಳಿಸಿಕೊಂಡ ಅಮ್ಮ ತುಸು ಹೊತ್ತು ಸುಮ್ಮನೆ ಕೂತು, ಮತ್ತೆ ಅವಳನ್ನು 'ಸರಿ ಅವರಿಗೆ ನೀನೇನು ಕೊಟ್ಟೆ?' ಎಂದು ಪ್ರಶ್ನಿಸಿದರು. ಪೂಜಾ 'ಇಲ್ಲಮ್ಮ, ಕಥೆ ಸಿಕ್ಕ ಖುಶಿಯಲ್ಲಿ ಅವನಿಗೇನಾದರೂ ಕೊಡಬೇಕು ಅನ್ನುವುದೇ ಮರೆತುಹೋಗಿತ್ತು, ಆದ್ರೆ ದಾರಿಯಲ್ಲಿ ಬರ್ತಾ ಬರಿಗಾಲಿಗೆ ಚುಚ್ಚಿದ ಮುಳ್ಳು ಚಪ್ಪಲಿ ಅಲ್ಲೇ ಬಿಟ್ಟು ಬಂದ ಸಂಗತಿಯನ್ನು ನೆನಪಿಸಿತು. ಹಿಂದುರುಗಿ ಹೋದರೆ ಕಥೆ ಬರೆಯುವ ಈ ಅದ್ಭುತ ಮೂಡು ಹಾಳಾಗಬಹುದೆಂದು ನಿನ್ನೆಯಷ್ಟೇ ಖರೀದಿಸಿದ ಚಪ್ಪಲಿಯನ್ನೂ ನಾಳೆ ಸಿಕ್ಕೀತು ಅಂದುಕೊಂಡು ಮುಳ್ಳನ್ನೂ ಲೆಕ್ಕಿಸದೆ ಬಂದೆ. ಇನ್ನು ಇಂದೋ ನಾಳೆಯೋ ಸಾಯಬಹುದಾದ ಮುದುಕನಿಗೆ ಏನಾದರೂ ಕೊಡಬೇಕೆಂದು ಹಿಂದಿರುಗಿ ಹೋಗುವುದೆಲ್ಲಿಂದ ಬಂತು?' ಎಂದು ಮರು ಪ್ರಶ್ನಿಸಿದಳು.

ಅಮ್ಮ ತಟ್ಟನೆ ಕೈ  ಕೊಡವಿ ’ನೀನೇನೋ ಅವರ ಬದುಕನ್ನು ಕಥೆಯಾಗಿಸಿ ಒಂದಿಷ್ಟು ಹೆಸರು ಸಂಪಾದಿಸುತ್ತಿ. ಆದ್ರೆ ಅದರಿಂದ ಅವರ ಬದುಕೇನೂ ಸುಧಾರಣೆಯಾಗುವುದಿಲ್ಲ. ಕಳೆದುಹೋದ ಸಂಬಂಧಗಳೂ, ಜೀವಗಳೂ ಮತ್ತೆ ಅವರಿಗೆ ದೊರೆಯುವುದಿಲ್ಲ. ಇರಲಿ, ಅವನ್ನೆಲ್ಲಾ ಬಿಟ್ಬಿಡೋಣ. ಅವರ ಕಥೆಗಲ್ಲ, ಕನಿಷ್ಠ ಶ್ರಮಕ್ಕಾದರೂ ಮೌಲ್ಯ ಕಲ್ಪಿಸಬೇಕು ಎಂದು ನಿನಗನಿಸಲಿಲ್ಲ. ನಿನ್ನ ಕಥೆ ಬರೆಯುವ ಮೂಡ್ ಹಾಳಾಗಬಾರದೆಂದು, ಕಳೆದ ವರ್ಷವಷ್ಟೇ ಪಡೆದ ಪ್ರಶಸ್ತಿಯ ಪ್ರತಿಷ್ಟೆ ಮುಕ್ಕಾಗಬಾರದೆಂದು ಮತ್ತೆ  ಹಿಂದಿರುಗಿ ಅವರತ್ತ ನೋಡದೆ ನಿಷ್ಕರುಣೆಯಿಂದ ಬಂದವಳು ನೀನು. ಮುಂದೆ ಯಾವತ್ತಾದರೂ ಒಂದಿನ ಸಂವೇದನೆ, ಸೂಕ್ಷ್ಮತೆ, ಅನುಭಾವಗಳ ಬಗ್ಗೆ ಬರೆಯುವಾಗೆಲ್ಲಾ ನಿನ್ನ ಆತ್ಮಸಾಕ್ಷಿಯಿಂದ ಎದ್ದು ಬಂದ ಅವೇ ಅಕ್ಷರಗಳು ಇವನ್ನೆಲ್ಲಾ ಬರೆಯುವ ಯೋಗ್ಯತೆ ನಿನಗೆಲ್ಲಿದೆ ಎಂದು ಪ್ರಶ್ನಿಸಿದರೆ ಆಗೇನು ಮಾಡುತ್ತಿ? ಬದುಕು ಒಂದು ಹಂತದಲ್ಲಿ ಯಾವುದೋ ಒಂದು ವಿಚಿತ್ರ ತಿರುವಿನಲ್ಲಿ ನಿನ್ನ ನಿಲ್ಲಿಸಿ ಭೂತದ ಅಷ್ಟೂ ಅಪರಾಧಗಳಿಗೆ, ಸ್ವಾರ್ಥಪರತೆಗೆ, ನಿಷ್ಕರುಣೀ ಮನಸತ್ವಕ್ಕೆ ಕಂದಾಯ ಕಟ್ಟಿಸುತ್ತದೆ. ಆಗೆಲ್ಲಾ ಬದುಕಿನ ಪ್ರಾಮಾಣಿಕ ಪ್ರಶ್ನೆಗಳಿಗೆ, ಸವಾಲುಗಳಿಗೆ ನೀನು ಸುಳ್ಳು ಸಮಜಾಯಿಷಿಗಳಿಲ್ಲದ ನೇರ ಉತ್ತರ ಕೊಡಲೇಬೇಕಾಗುತ್ತದೆ... ಅಮ್ಮ ಹೇಳುತ್ತಲೇ ಇದ್ದರು.

ಅಮ್ಮನ ಅಂತಃಕರಣದ ಕುಲುಮೆಯಲ್ಲಿ ಕಥೆಗಾರ್ತಿಯ ಅಂತರಂಗ ನಿಧಾನವಾಗಿ ಕುದಿಯಲಾರಂಭಿಸಿತು. ಯಾವುದೋ ಟ್ರಾನ್ಸ್?ಗೊಳಗಾದಂತೆ ಎದ್ದ ಪೂಜಾ , ಅಮ್ಮನ ಕರೆಯನ್ನೂ ಮೀರಿ ಮತ್ತದೇ ದೇವಸ್ಥಾನದತ್ತ ಓಡಲಾರಂಭಿಸಿದಳು. ಈ ಬಾರಿ ಅವಳೊಳಗೆ ಯಾವ ಗೊಂದಲಗಳೂ ಇರಲಿಲ್ಲ. ಓಡಿ ಓಡಿ ದೇವಸ್ಥಾನ ತಲುಪಿದ ಪೂಜಾ, ಅದೇ ಚಪ್ಪಲಿ ಸ್ಟ್ಯಾಂಡ್?ಗಾಗಿ, ಮುದುಕನಿಗಾಗಿ ಅತ್ತ ಇತ್ತ ಕಣ್ಣಾಡಿಸಿದಳು. ಚಪ್ಪಲಿ ಕಾಯುವ ಮುದುಕ ಅಲ್ಲೇ ನೆಲದ ಮೇಲೆ ತಲೆ ಇಟ್ಟು ಮಲಗಿದ್ದ. ಅವನ ಬಾಯಿಯಿಂದ ಇಳಿದ ಜೊಲ್ಲು ನಿಧಾನವಾಗಿ ನೆಲ ಸೇರುತ್ತಿತ್ತು. ಯಾವ ಅಸಹ್ಯವೂ ಇಲ್ಲದೆ ಪೂಜಾ ತಾನು ಧರಿಸಿದ್ದ ಚೂಡಿದಾರ್?ನ ವೇಲ್?ನಿಂದಲೇ ಅವನ ಜೊಲ್ಲೊರೆಸಿ, ತಲೆ ನೇವರಿಸುತ್ತಾ 'ತಾತಾ' ಎಂದು ಕರೆದಳು, ಅವನ ತಲೆ ಸುಮ್ಮನೆ ಹೊರಳಿಬಿತ್ತು. ಒಂದು ಹನಿ ನೀರು ಕಣ್ಣಿಂದ ಜಾರಿಬಿದ್ದು ಅವನ ಕೆನ್ನೆಯ ಮೇಲೆ ಹರಿದು ಅಲ್ಲೇ ಅನಾಥವಾಗಿ ಬಿದ್ದಿದ್ದ ಅವಳದೇ ಚಪ್ಪಲಿಯ ಮೇಲಿದ್ದ ಧೂಳಿನೊಳಗೆ ಇಂಗಿ ಹೋಯಿತು.

(ಸುಧಾ ವಾರಪತ್ರಿಕೆಯಲ್ಲಿ ಪ್ರಕಟಿತ ಕಥೆ)