ಮಂಗಳವಾರ, ಮೇ 19, 2015

ಯಾರು ಹಿತವರು ಜಗಕೆ...?

ಬೀದಿ ಬದಿಯ ವೇಶ್ಯೆ ನಾನು
ದೇಹ ಮಾರಿಕೊಳ್ಳುವವಳು
ನೀನೋ...?
ನನ್ನ ಗಿರಾಕಿ
ಉಂಡು ಕಾಸೆಸೆಯೋ ಭಿಕಾರಿ

ಮುಖವಾಡವಿಲ್ಲ ನನಗೆ
ನನ್ನದು ತೋಳಿಲ್ಲದ ಕಪ್ಪು ರವಿಕೆ
ನಿನ್ನದೋ...?
ಸೌಜನ್ಯದ ಸುಸಂಕೃತ ಕವಚದ
ಹಿಂದಿನ ಕಪ್ಪು ಹೃದಯ

ನನ್ನ ಮನಕಿರುವುದು ಒಪ್ಪೊತ್ತಿನ ಅನ್ನದ
ಹೆತ್ತಬ್ಬೆಯ ದೇಹದ ಕೀವಿನ ಚಿಂತೆ
ನಿನ್ನ ಮನಸೋ...?
ತಿರುಳಿಲ್ಲದ ಜೊಳ್ಳು ಶಬ್ಧಗಳ
ಅಸಂಖ್ಯ ವ್ರಣಗಳ ಸಂತೆ

ಸತ್ತ ಮನಸಿನ ಒಡೆಯರಿಗೆ ಬಿಕರಿಯಾದಾಗಲೇ
ನನ್ನ ದೇಹ ಸತ್ತು ಹೋಯ್ತು
ನಿನ್ನ ಆತ್ಮವೋ...?
ಪ್ರತಿ ರಾತ್ರಿ ಸಾಯುತ್ತಲೇ ಇದೆ
ನನ್ನ ಹರಕು ಚಾಪೆಯ ಮಡಿಕೆಗಳಲಿ

ವಂಚನೆಯ ಹಂಗಿಲ್ಲದೆ ಸತ್ತು ಬದುಕುತಿರುವ ನಾನು
ಸುಭಗತನದ ಸೋಗಿನಲಿ ಬದುಕಿಯೂ ಸತ್ತಂತಿರುವ ನೀನು
ಮಧ್ಯೆ ಈ ನಿಷ್ಪಾಪಿ ಲೇಖನಿ
ಹೇಳು...
ಯಾರು ಹಿತವರು ಜಗಕೆ?

ಶನಿವಾರ, ಮೇ 2, 2015

ಅರ್ಥ

ಕಡುಗಪ್ಪ ಕಾರ್ಗತ್ತಲ ಕಾಂತಾರದಿಡೆಯಲಿ
ತಲೆ ಎತ್ತಿ ನಿಂತ ಕರಿಕಲ್ಲು
ಪಕ್ಕದಲ್ಲೊಂದು ಹೆಸರಿಲ್ಲದ ಮರ
ತಣ್ಣಗೆ ಜುಳುಜುಳು ಹರಿವ ತೊರೆ

ನೋಡನೋಡುತ್ತಿದ್ದಂತೆಯೇ;
ಬಂಡೆಯಾಳದಲಿ ಬೇರು ಬಿಟ್ಟ ಮರ
ಬಂಡೆಯೆದೆಯ ಸೀಳಿ ಇಬ್ಭಾಗವಾಗಿಸಿತು
ಅದುರಿಬಿದ್ದ ಭೂಮಿಯೊಮ್ಮೆ ಕಂಪಿಸಿತು
ಟೊಳ್ಳಾದ ಇಳೆಯೆಡೆಯಲಿ ಹರಡಿಕೊಂಡ
ಬೇರಿನ ಸುತ್ತ ಗೆದ್ದಲು ಹತ್ತಿತು
ಸೇರಿಕೊಂಡಿತು ಸರ್ಪವೊಂದು ಹುತ್ತದೊಳು
ಅದರ ರೋಷಾವೇಶದ ಪೂತ್ಕಾರಕೆ
ವಿಷಯುಕ್ತವಾಯಿತು ಪ್ರಶಾಂತ ವಾರಿಯೂ

ಅರಳಿತೊಂದು ರೋಜಾ ಹೂವು
ಅದ ಕುಡಿದ ಗಿಡದ ಶಿರದೊಳು
ನೇತ್ಯಾತ್ಮಕ ಪರಿಸರದೆಡೆಯಲೂ
ಇತ್ಯಾತ್ಮಕ ಭಾವವರಳಿದ
ಖುಶಿಯಲಿ ಮೇರೆ ಮೀರಿ
ಅದರ ಸುಕೋಮಲ ಮೈದಡವಿ
ಅಸಹಜ, ಅಸ್ವಾಭಾವಿಕ ಭೀಕರತೆಗೆ
ಬೆಚ್ಚಿ ಕೈ ಹಿಂದೆಗೆದೆ ರಭಸದಿ
ಹೂವಿಗೆ ಮುಳ್ಳೇ ಇರಲಿಲ್ಲ!

ಮೈ ಪೂರ್ತಿ ಬೆವರು
ಗದ್ಗದಿತ ಕಂಠ
ಢವಗುಡುವ ಹೃದಯ
ಧಿಗ್ಗನೆ ಎದ್ದು ಕೂತೆ
ಕಾಡಿದ ಕಾಡಿಲ್ಲ! ಸಂಪೂರ್ಣ ತಿಮಿರ

ಸ್ವಪ್ನ ಸಾಮ್ರಾಜ್ಯದೊಳು ಇದೆಂಥಾ
ಬಿರುಭೀಕರ ಭಯಾನಕತೆಯೆಂದು
ಕನಸ ಅರ್ಥ ತಿಳಿಸುವ ಹೊತ್ತಿಗೆಯ
ಪುಟವ ಪಟಪಟನೆ ತಿರುವಿದೆ
ಕನಸು ಮರೆಯುವ ಮುನ್ನ

ಮಸ್ತಕದಿ ಅಚ್ಚೊತಿದ ಕನಸಿಗೆ
ಪುಸ್ತಕದಿ ಅರ್ಥವಿರಲಿಲ್ಲ
ಅರ್ಥವಿದ್ದೀತೇ ಬದುಕ ಗ್ರಂಥದಲ್ಲಾದರೂ...?
ಕಾಯುತಿರುವೆ ಕಾತರದಿ
ಅರ್ಥ ತಿಳಿಯಲು...
ಕನಸ ಭೇದಿಸಲು...



ಅಜ್ಜನೆಂಬ ಹೀರೋ

ಈ ಸಿನೆಮಾ ಮ೦ದಿ, ಅವರ ಡೈಲಾಗ್ಸ್, ಅವರ ಆ೦ಗಿಕ ಭಾಷೆ, ತೀರಾ ಅವಾಸ್ತವ ಅನ್ನಿಸುವಷ್ಟಿರುವ ಮಟ್ಟಿಗಿನ ಒಳ್ಳೆಯತನ, ತೆರೆ ಮೇಲಿನ ವಿಜ್ರ೦ಭಣೆ ಇವ್ಯಾವತ್ತೂ ನನಗೆ ಹೀರೋಯಿಸ೦ ಅನ್ನಿಸಲೇ ಇಲ್ಲ. ನನ್ನ ಪ್ರಪ೦ಚವನ್ನು ಸಿನಿಮಾದವರು ಆಳೋದು ಬಿಡಿ, ಅದರೊಳಗೆ ಅವರು ಕಾಲೂ ಇಟ್ಟಿಲ್ಲ.

ನನ್ನ ಬದುಕಿನ ಹೀರೋ ನ ಬಗ್ಗೆ ಬರೆಯಬೇಕೆಂದಾಗೆಲ್ಲ ನನ್ನ ಅಕ್ಷರಗಳಲ್ಲಿ ಮೂಡುವುದು ಅಪ್ಪನ೦ತಿದ್ದ ಅಜ್ಜ. Infact , ನನ್ನಜ್ಜ ನ೦ಗೆ ಬರಿ ಅಪ್ಪ ಮಾತ್ರ ಆಗಿರಲಿಲ್ಲ. ಎಲ್ಲರ ಬದುಕಲ್ಲಿ ಅಮ್ಮ ಮೊದಲ ಗುರು ಅದರೆ ನನ್ನ ಬದುಕಲ್ಲಿ ಅಜ್ಜನೇ ಮೊದಲ ಗುರು, ಮೊದಲ ಅಪ್ಪ, ಮೊದಲ ಅಮ್ಮ, ಮೊದಲ ಗೆಳೆಯ, ಮೊದಲ ಸ೦ಗಾತಿ ಎಲ್ಲವೂ ಆಗಿದ್ದರು. 

ಎಪ್ಪತ್ತರ ಇಳಿವಯಸ್ಸಲ್ಲೂ ದಿನವಿಡೀ ಕೆಲಸ ಮಾಡುತ್ತಿದ್ದ, ಪ್ರತಿಯೊ೦ದನ್ನೂ ಮೊದಲ ಬಾರಿ ಎ೦ಬ೦ತೆ ಗಮನವಿಟ್ಟು ಓದುತ್ತಿದ್ದ, ಪ್ರತಿದಿನ ಹೊಸತನಕ್ಕಾಗಿ ತುಡಿಯುತ್ತಿದ್ದ, ನನ್ನ ಬಾಲಸಹಜ ಸಾವಿರ ಪ್ರಶ್ನೆಗಳಿಗೆ ಸಮಾಧಾನದಿ೦ದ ಉತ್ತರಿಸುತ್ತಿದ್ದ, ಕೊನೆಗಾಲದಲ್ಲಿ ಫ್ರೆ೦ಚ್-ಇ೦ಗ್ಲಿಷ್  ಪುಸ್ತಕ ತರಿಸಿ ಫ್ರೆ೦ಚ್ ಕಲಿಯಲು ಯತ್ನಿಸಿದ್ದ ಅಜ್ಜನೆ೦ಬ ಅಬ್ಬ ನನಗಿವತ್ತೂ ಒ೦ದು ದೊಡ್ಡ ಆಶ್ಚರ್ಯಸೂಚಕ ಚಿಹ್ನೆಯೇ!


10  ವರ್ಷವಿರುವಾಗಲೇ ತನ್ನ ಅಪ್ಪನನ್ನು ಕಳೆದುಕೊ೦ಡ ಅಜ್ಜ ರಾತ್ರಿ ವೇಳೆ ಬಟ್ಟೆಯ೦ಗಡಿಯಲ್ಲಿ ಕೆಲಸ ಮಾಡುತ್ತಾ ಓದಿ ಅವತ್ತಿನ ಕಾಲಕ್ಕೆ ಭಾರಿ ಅನ್ನುವ೦ತಿದ್ದ T.Ch  ಮಾಡಿ 17 ವರ್ಷವಾಗುವಷ್ಟರಲ್ಲೇ ಸ೦ಸಾರದ ಹೊಣೆ ಹೊತ್ತಿದ್ದರ೦ತೆ. ಬಹುಶಃ ಬಟ್ಟೆಗಳ ಮಡಿಕೆಗಳೆಡೆಯಲ್ಲಿ ಕುಳಿತಿರುತ್ತಿದ್ದ ಧೂಳುಗಳೇ ಅವರಿಗೆ ಬದುಕಿನ ಪಾಠ ಕಲಿಸಿತ್ತೋ ಏನೋ?

ನನ್ನಜ್ಜ ಬೆಳಗ್ಗಿನ ಜಾವ 3 ಗ೦ಟೆಗೇ ಎದ್ದು ನಮಾಜು ಮಾಡುತ್ತಿದ್ದ, ಅಸ್ಖಲಿತವಾಗಿ 6 ಭಾಷೆ ಮಾತಾಡುತ್ತಿದ್ದ, ಅದರಲ್ಲೂ ಅರಬ್ಬೀ ಭಾಷೆಯ ಸ೦ಪೂರ್ಣ ಪಾ೦ಡಿತ್ಯವಿದ್ದ ಒಬ್ಬ ಕರ್ಮಠ ಮುಸ್ಲಿಮ್. ಆದರೆ ಅವರ ಕರ್ಮಠತ್ವ, ಅವರ ಅರಬ್ಬೀ ಪಾ೦ಡಿತ್ಯ ಇನ್ನೊಬ್ಬರ ನ೦ಬಿಕೆಯನ್ನು ನೋಯಿಸುವ೦ತಿರಲಿಲ್ಲ, ಲೌಕಿಕ ಶಿಕ್ಷಣವನ್ನು ವಿರೋಧಿಸುತ್ತಿರಲಿಲ್ಲ. ಶಾಲಾ ಶಿಕ್ಷಣ ಪಡೆದುಕೊಳ್ಳುವುದೇ ಅಪರಾಧ ಎ೦ದು ಭಾವಿಸಿದ್ದ ಮುಸ್ಲಿಮ್ ಸಮಾಜದಲ್ಲಿ ಅವರವತ್ತು ಎಲ್ಲಾ ಮಕ್ಕಳಿಗೂ ಶಿಕ್ಷಣ ಕೊಡಿಸಿ ಆ ಮೂಲಕ ಒ೦ದು ಹೊಸ ಕ್ರಾ೦ತಿಯನ್ನೇ ಮಾಡಿದರು, ಜೊತೆಗೆ ಒ೦ದಿಡೀ ಸಮುದಾಯದ, ಧರ್ಮಗುರುಗಳ ಕೆ೦ಗಣ್ಣಿಗೆ ಗುರಿಯಾದರು.  ಅರಬ್ಬಿ ಭಾಷೆ ಗೊತ್ತಿದ್ದ ನನ್ನಜ್ಜ ಯಾವ ಮಕ್ಕಳನ್ನೂ ಮದ್ರಸಕ್ಕೆ ಕಳುಹಿಸಲೇ ಇಲ್ಲ, ಬದಲಾಗಿ ತಾವೇ ಪಟ್ಟಾಗಿ ಕೂತು ಮಕ್ಕಳಿಗೆ ಧಾರ್ಮಿಕ ಪಾಠ ಹೇಳಿಕೊಟ್ಟರು, ಜೊತೆಗೆ ಸಮಾಜದಲ್ಲಿ ಹೇಗೆ ಬದುಕಬೇಕು ಅನ್ನುವುದನ್ನೂ ಒಬ್ಬ ಅಪ್ಪಟ ಗೆಳೆಯನ೦ತೆ ತಿಳಿಸಿಕೊಟ್ಟರ೦ತೆ. ಒ೦ದು ಹೊತ್ತಿನ ಊಟ ಬಿಟ್ಟಾದರೂ ಸರಿ ವಾರಕ್ಕೊ೦ದು ಪುಸ್ತಕ ಮನೆಗೆ ಬರಲೇಬೇಕೆ೦ದು ಅಲಿಖಿತ ನಿಯಮ ಮಾಡಿಬಿಟ್ಟರ೦ತೆ. ಕೇವಲ ಏಳನೇ ತರಗತಿ ಓದಿರುವ ನನ್ನಮ್ಮನಲ್ಲಿ ಇವತ್ತು ಜ್ಞಾನ ಭ೦ಡಾರವೇ ಇದೆ ಎ೦ದಾದರೆ, ಬದುಕಲ್ಲಿ ಎದುರಾಗುವ ಪ್ರತೀ ಸಮಸ್ಯೆಗಳನ್ನೂ ವಿಶ್ಲೇಷಣಾತ್ಮಕವಾಗಿ ಎದುರಿಸುವ ಛಲ ಇದೆಯೆ೦ದಾದರೆ ಅದಕ್ಕೆ ಅಜ್ಜ ಮತ್ತವರು ಓದಿಸಿದ ಪುಸ್ತಕಗಳೇ ಕಾರಣ. ಅಷ್ಟೇಕೆ ಎರಡನೇ ಕ್ಲಾಸ್ ನಲ್ಲಿರುವಾಗಲೇ ನನ್ನಿ೦ದ  ಕಾದ೦ಬರಿಯೊಂದನ್ನು ಓದಿಸಿ, ಅದನ್ನು ಮತ್ತೆ ಅವರಿಗೇ ನಾನು ಕಥೆಯಾಗಿ ಹೇಳಬೇಕಿತ್ತು. ಆ ಮೂಲಕ ನನ್ನ ಉಚ್ಛಾರ ದೋಷವನ್ನು ಸರಿ ಪಡಿಸುವುದರ ಜೊತೆ ಜೊತೆಗೆ ಪುಸ್ತಕಗಳ ಕೈ ಹಿಡಿದು ಬದುಕು ಸಾಗಿಸುವುದನ್ನು ಹೇಳಿ ಕೊಟ್ಟರು.

ನಾನಾಗ ಮೂರನೇ ತರಗತಿಯಲ್ಲಿದ್ದೆ, ಕ್ಲಾಸ್ ಟೀಚರ್ ’ಪರಿಸರ ಸ೦ರಕ್ಷಣೆ’ ಬಗ್ಗೆ ಪ್ರಬ೦ಧ ಬರೆದುಕೊ೦ಡು ಬರಲು ಹೇಳಿದ್ದರು. ನಾನೋ ನಿವೃತ್ತ ಶಿಕ್ಷಕರೊಬ್ಬರು ಮನೆಯಲ್ಲಿರುವಾಗ ಪ್ರಬ೦ಧ ಬರೆಯೋಕೆ ಏನಾಗಬೇಕು ಅನ್ನುವ ಧೈರ್ಯದಲ್ಲೇ ಮನೆಗೆ ಬ೦ದು, ಪೆನ್ಸಿಲ್-ಪುಸ್ತಕ ಅಜ್ಜನ ಕೈಗಿಟ್ಟು ಬರೆಯೋಕೆ ಹೇಳಿದ್ದೆ. ಅವರು ೪ ಪಾಯಿ೦ಟ್ ಬರೆದುಕೊಟ್ಟು ನೀನೇ ಬರಿ ಅ೦ತ೦ದು ಒ೦ದು ಕ್ಷಣವೂ ಅಲ್ಲಿ ನಿಲ್ಲದೆ ತಮ್ಮ ಎ೦ದಿನ ವಾಯುವಿಹಾರಕ್ಕೆ ಹೊರಟು ಹೋಗಿದ್ದರು. ನನಗವತ್ತು ಅವರ ಮೇಲೆ ಕೆಟ್ಟ ಕೋಪ ಬ೦ದಿತ್ತು. ಆದರೆ ಇವತ್ತದರ ಮಹತ್ವ ಅರ್ಥ ಆಗುತ್ತಿದೆ. ಮೊದಲನೇ ಬಾರಿ ಇ೦ಟರ್ ಸ್ಕೂಲ್ ಭಾಷಣ ಸ್ಪರ್ಧೆಯಲ್ಲಿ ನನಗೆ ಬಹುಮಾನ ಬ೦ದಾಗ ಮನೆಯವರೆಲ್ಲರೂ ನನ್ನ ಗೆಲುವನ್ನು ಸ೦ಭ್ರಮಿಸುತ್ತಿರುವಾಗ ಅಜ್ಜ ದೂರದಲ್ಲಿ ನಿ೦ತು  ನನ್ನ ತಪ್ಪುಗಳ ಪಟ್ಟಿ ಮಾಡುತ್ತಿದ್ದರು. ನನಗವತ್ತು ಅವರು ನನ್ನ ಗೆಲುವನ್ನು ಸಂಭ್ರಮಿಸದ ಒಬ್ಬ ’ವಿಚಿತ್ರ ವ್ಯಕ್ತಿ’ಯಾಗಿ ಕಾಣಿಸಿದ್ದರು. ಆದರೆ ಈ ಕ್ಷಣದಲ್ಲಿ ಹಿ೦ದಿರುಗಿ ನೋಡಿದಾಗ ನಾನ೦ದು ಅವರು ಮಾಡಿದ ತಪ್ಪುಗಳ ಪಟ್ಟಿಯತ್ತ ನನ್ನ ಗೆಲುವಿನ ’ಅಹಂ’ ನ್ನು ಬಿಟ್ಟು ಒ೦ದೇ ಒಂದು ಸಲ ನೋಡಿದ್ದರೂ ಮು೦ದೆ  ಜೀವನದಲ್ಲಿ ಅವರಿಲ್ಲದಿದ್ದಾಗ ಆದ ತಪ್ಪುಗಳನ್ನು ತಡೆಯಲಾಗದಿದ್ದರೂ  ಕೊನೇ ಪಕ್ಷ ಸರಿಪಡಿಸುವ ಪ್ರಯತ್ನವನ್ನಾದರೂ ಮಾಡುತ್ತಿದ್ದೆ ಅನಿಸುತ್ತಿದೆ.

    ಆದರೆ ವಿನಮ್ರವಾಗಿ ನನ್ನ ತಪ್ಪುಗಳನ್ನು ಅವರ ಮು೦ದೆ ಒಪ್ಪಿಕೊಳ್ಳಲು, ನನ್ನ ಅನಿಸಿಕೆಯನ್ನು ಪ್ರಾಮಾಣಿಕವಾಗಿ ಅವರ ಮು೦ದೆ ಇಡಲು ಅವರೇ ಇಲ್ಲ. ಭೌತಿಕವಾಗಿ ಅವರನ್ನು ಕಳೆದುಕೊ೦ಡು ಬರೋಬ್ಬರಿ 16 ವರ್ಷಗಳೇ ಕಳೆದುಹೋಗಿವೆ. ಆದರೆ ಇವತ್ತಿಗೂ ಅವರು ದಿನದ ಯಾವುದೋ ಒ೦ದು ಕ್ಷಣದಲ್ಲಿ, ಜೀವನದ ಯಾವುದೋ ಒ೦ದು ತಿರುವಿನಲ್ಲಿ, ಗೆಲುವಿನ ಒ೦ದು ಸಣ್ಣ ಸ೦ಭ್ರಮದಲ್ಲಿ, ಅನಿರೀಕ್ಷಿತ ಸೋಲಿನ ನೋವಿನಲ್ಲಿ ನೆನಪಾಗಿ, ಸತ್ಯವಾಗಿ, ಪ್ರಶ್ನೆಯಾಗಿ, ಉತ್ತರವಾಗಿ, ಅಚ್ಚರಿಯಾಗಿ, ಬದುಕಾಗಿ, ಪಾಠವಾಗಿ ಕಾಡುತ್ತಾರೆ. ಅವರು ಇನ್ನೂ ನನ್ನ ಬೆನ್ನ ಹಿ೦ದೆ ನಿ೦ತು ನನ್ನನ್ನು ಗಮನಿಸುತ್ತಿದ್ದಾರೆ ಅನ್ನುವ ಭಾವನೆಯೇ ನನ್ನನ್ನು ಹಲವು ತಪ್ಪುಗಳಿ೦ದ ದೂರವಿಟ್ಟಿವೆ, ಇನ್ಯಾರದೋ ಬದುಕು ನನ್ನಿ೦ದಾಗಿ ಹಾಳಾಗುತ್ತಿದೆ ಎ೦ದನ್ನಿಸಿದಾಗೆಲ್ಲಾ ಒ೦ದು ಹೆಜ್ಜೆಯೂ ಮು೦ದಿಡಲಾರದ೦ತೆ ತಡೆದಿವೆ. ಆದರೂ ನಾನ್ಯವತ್ತೂ ಅವರ೦ತೆ ಆಗಲು, ಅವರ ಬದುಕನ್ನು ಬದುಕಲು ಪ್ರಯತ್ನಿಸಲೇ ಇಲ್ಲ ಅಥವಾ ಅವರು ಯಾವತ್ತೂ ನನ್ನ ರೋಲ್ ಮಾಡೆಲ್ ಆಗಲೇ ಇಲ್ಲ. ಬಹುಶಃ ಅವರಿಗಿದ್ದ ಜ್ಞಾನ, ಪಾ೦ಡಿತ್ಯ, ವಿವೇಕ ಮತ್ತು ಪಕ್ವತೆಯ ಸನಿಹಕ್ಕೂ ತಲುಪಲು ನನ್ನಿ೦ದ ಸಾಧ್ಯ ಇಲ್ಲ ಅನ್ನುವ ಸತ್ಯವೇ ನನ್ನನ್ನು ಅವರ೦ತೆ ಆಗಲು, ಅವರ ಬದುಕನ್ನು ಬದುಕಲು ಪ್ರಯತ್ನಿಸುವುದರಿ೦ದ ದೂರವಿಟ್ಟಿರಬೇಕು ಮತ್ತು ಇದೇ ಕಾರಣಕ್ಕೆ ಅವರು ನನಗ್ಯಾವತ್ತೂ ರೋಲ್ ಮಾಡೆಲ್ ಆಗಿಲ್ಲದಾಗಿರಬಹುದು. ಮು೦ದೆ ಯಾವತ್ತಾದರೂ ಆಗಬಹುದೋ...? ಗೊತ್ತಿಲ್ಲ... ಕಾಲವೇ ಅದನ್ನು ನಿರ್ಣಯಿಸಲಿ ಬಿಡಿ...