ಶುಕ್ರವಾರ, ನವೆಂಬರ್ 17, 2017

ನಾಕುತಂತಿಯ ತುಡಿತ

ಹೀಗೆ ಕಿಟಕಿ ಸರಳಿಗೆ
ಹಬ್ಬಿದ ಮಾತ್ರಕೆ
ನೀನೇನು ಪರಮಪ್ರಿಯೆ
ಆಗಿಬಿಡುವುದಿಲ್ಲ

ಹೇ ಜಾಜಿ ತಾಳು,
ಇಲ್ಲಿ ಸ್ವಲ್ಪ ಕೇಳಿಸಿಕೋ
ವಿರಹುದುರಿಯಲಿ ಕನಲುವಾಗಷ್ಟೆ
ನಿನ್ನ ನೆನಪೆನಗೆ

ಅದರಾಚೆ ಅವನ ಬೆವರ
ಘಮವೇ ಹಿತ
ತಣ್ಣನೆಯ ಇರುಳ ಕೊರೆವ ಚಳಿಯಲಿ
ನಿನ್ನ ಎಂದಾದರೂ ಬಯಸಿದ್ದಿದೆಯೇ?

ನೋಡು, ಇಳಿಯ ಬಿಟ್ಟಿರುವ ಪರದೆಯ
ಹಿಂದೀಗ ಸರ್ವ ಸ್ವತಂತ್ರೆ ನಾನು
ಚಂದ್ರ ತಾರೆಯರೂ ನನ್ನ
ಏಕಾಂತವ ಭಗ್ನಗೊಳಿಸಲಾರರು

ಮತ್ತೆ ಕಿಟಕಿಯೊಳಗೆ ಹೊರಳಬೇಡ ಜಾಜಿ
ಬಿಚ್ಚಿಟ್ಟ ಕಾಲ್ಗೆಜ್ಜೆಯ ನೂಪುರದೊಳಗೀಗ
ನಾಕುತಂತಿಯ ತುಡಿತ
ಉಶ್! ಸದ್ದು ಬೇಡ

ಯಾವ ಗಾಳಿಗೆ ಯಾವ ಗಂಧವೋ
ಒಲವಿಂದ ಶೃತಿಗೊಂಡ ವೀಣೆಗೀಗ
ನದಿಯೊಂದು ಕಡಲ ಸೇರಿದಂತೆ
ನಿಶಬ್ಧದಲಿ ಲೀನವಾಗಬೇಕಿದೆ

ಅಷ್ಟೆ.

ಮಂಗಳವಾರ, ನವೆಂಬರ್ 14, 2017

ದೊಡ್ಡವರೇ, ಒಂದಿಷ್ಟು ಯೋಚಿಸಿ

'ಮಕ್ಕಳಾಟವು ಚಂದ
ಮತ್ತೆ ಯೌವನ ಚಂದ
ಮುಪ್ಪಿನಲಿ ಚಂದ ನರೆಗಡ್ಡ
ಜಗದೊಳಗೆ ಎತ್ತ ನೋಡಿದರೂ ನಗು ಚಂದ'
ಅನ್ನುವ ಜನಪದ ಹಾಡು ತೀರಾ ಸರಳವಾಗಿ ಮತ್ತು ಸುಲಭಗ್ರಾಹ್ಯವಾಗಿ ಯಾವ ಯಾವ ಕಾಲದಲ್ಲಿ ಯಾವುದು ಚಂದ ಎನ್ನುವುದನ್ನು ಹೇಳುತ್ತದೆ. ಎಲ್ಲಾ ಚಂದಗಳ ಮಧ್ಯೆ ಮತ್ತೆ ಮತ್ತೆ ಕಾಡುವುದು ಬಾಲ್ಯ. ಸರಿರಾತ್ರಿ ಎಬ್ಬಿಸಿ ಸಮೀಕ್ಷೆ ನಡೆಸಿದರೂ ಬಹುಶಃ ಬಾಲ್ಯ ಮತ್ತೆ ಬೇಕು ಅನ್ನದವರು ಸಿಗಲಾರರೇನೋ? ಅಷ್ಟರ ಮಟ್ಟಿಗೆ ನಾವು ಬಾಲ್ಯವನ್ನು ಪ್ರೀತಿಸುತ್ತೇವೆ.

ಜಗತ್ತಿನ ಆಗು ಹೋಗುಗಳು, ಮೋಸ, ಅನ್ಯಾಯ, ವಂಚನೆ, ಬೂಟಾಟಿಕೆ...ಇವ್ಯಾವುವೂ ಅರಿಯದ ವಯಸ್ಸದು. ಆಟ, ತಿರುಗಾಟ, ಚೇಷ್ಟೆ, ಜೊತೆಗೊಂದಿಷ್ಟು ಬದುಕಿನ ಪಾಠ... ಎಷ್ಟು ಚೆನ್ನಾಗಿತ್ತು ಆ ಬದುಕು.

ನಮ್ಮ ಬಾಲ್ಯದಲ್ಲಿ ಮನೆಯಷ್ಟೇ ಆಪ್ತ ವಾತಾವರಣ ಸಿಗುತ್ತಿದ್ದುದು ಶಾಲೆಯಲ್ಲಿ. ಈಗಿನಂತೆ ಮಣ ಭಾರದ ಬ್ಯಾಗ್, ಮಾಡಿದಷ್ಟೂ ಮುಗಿಯದ ಹೋಂವರ್ಕ್, ವರ್ಷಪೂರ್ತಿ ಮಾಡಬೇಕಾಗಿರುವ ಪ್ರೊಜೆಕ್ಟ್ ಇವ್ಯಾವುದರ ಕಾಟವೂ ಇರಲಿಲ್ಲ. ಇದ್ದ ಒಂದೇ ಯುನಿಫಾರ್ಮ್ ಅನ್ನು ಅಂದಂದೇ ಒಗೆದು ವಾರ ಪೂರ್ತಿ ಬಳಸುವ ಜಾಣ್ಮೆ, ಮಾವಿನ ಮರದಡಿ ಕೂತು ಉಣ್ಣುತ್ತಿದ್ದ ಮಧ್ಯಾಹ್ನದ ಬುತ್ತಿಯೂಟ, ಹಳೆಯ ನೋಟ್ ಪುಸ್ತಕಗಳಲ್ಲಿ ಉಳಿದ ಹಾಳೆಗಳನ್ನು ಹರಿದು ಮಾಡುತ್ತಿದ್ದ ರಫ್ ಪುಸ್ತಕ, ಊರಿನ ಎಲ್ಲಾ ಮಕ್ಕಳು ಗುಂಪಾಗಿ ಮೈಲಿಗಟ್ಟಲೆ ನಡೆದು ಶಾಲೆ ಸೇರುತ್ತಿದ್ದುದು, ಶಾಲೆಯ ಆಶೋಕ ಮರ, ಆಳ ಬಾವಿ, ವಿಶಾಲವಾದ ಆಟದ ಮೈದಾನ ಮುಂತಾದವುಗಳನ್ನು, ಅವು ನಮ್ಮ ಇಡೀ ಬದುಕನ್ನು ಹೇಗೆ ಪ್ರೇರಿಪಿಸಿದೆ ಎಂಬುವುದನ್ನು ವಿವರಿಸುತ್ತಾ ಕೂತರೆ ಈವತ್ತಿನ ಕಾನ್ವೆಂಟ್ ಕಂದಮ್ಮಗಳಿಗೆ ಏನೂ ಅರ್ಥವಾಗದು.

ಇನ್ನು ಶಾಲೆಗಳಲ್ಲಿ ಸಂಭ್ರಮದಿಂದ ಆಚರಿಸುತ್ತಿದ್ದ ರಾಷ್ಟ್ರೀಯ ಹಬ್ಬಗಳ ಕಥೆಗಳು ವರ್ಣಿಸಲಸದಳ. ಒಂದರ್ಥದಲ್ಲಿ ನಮ್ಮ ಇಡೀ ಶಾಲಾ ಜೀವನಕ್ಕೆ ಸಂಭ್ರಮದ ಬಣ್ಣ ತುಂಬಿದ್ದೇ ಆ ಹಬ್ಬಗಳು. ಅದರಲ್ಲೂ ಸಂಪೂರ್ಣ ಸ್ವಾತಂತ್ರ್ಯ ಸಿಗುತ್ತಿದ್ದ 'ಮಕ್ಕಳ ದಿನಾಚರಣೆ'ಯಂತೂ ನಮ್ಮ ಪಾಲಿಗೆ ರಾಜ ಹಬ್ಬ.

ಅದು, 'ಕಾಂಗ್ರೆಸ್'ನ ನೆಹರೂ, 'ನಾಸ್ತಿಕ' ಭಗತ್ ಸಿಂಗ್, 'ಹಿಂದೂ' ತಿಲಕ್, 'ಮುಸ್ಲಿಂ' ಮೌಲಾನಾ ಆಜಾದ್, 'ಕ್ರಿಶ್ಚಿಯನ್' ಅನಿಬೆಸೆಂಟ್, 'ಉತ್ತರ'ದ ರಾಣಿ ಲಕ್ಷ್ಮೀಬಾಯಿ, 'ದಕ್ಷಿಣ'ದ ರಾಣಿ ಚೆನ್ನಮ್ಮ... ಇವೆಲ್ಲಾ ಅರಿವಿದ್ದ ವಯಸ್ಸಲ್ಲ, ಅಥವಾ ಆ ಹೊತ್ತಿನ ಪಠ್ಯ ಪುಸ್ತಕಗಳು ಎಳೆ ಮನಸ್ಸುಗಳ ತುಂಬಾ ಇಂತಹ ವಿಷ ತುಂಬುತ್ತಿರಲಿಲ್ಲವೇನೋ? ಆವತ್ತು ನಮ್ಮ ಪಾಲಿಗೆ ಅವರೆಲ್ಲಾ ಈ ದೇಶಕ್ಕಾಗಿ ದುಡಿದ ಮಹಾಪುರುಷರಷ್ಟೇ.

ಭಾಷಣ, ಹಾಡುಗಾರಿಕೆ, ಆಟೋಟಗಳು, ಪ್ರಬಂಧ ರಚನೆ, ಚಿತ್ರ ರಚನೆ ಮುಂತಾದ ಅನೇಕ ಸ್ಪರ್ಧೆಗಳಿದ್ದರೂ ನಮಗೆ ಹೆಚ್ಚು ಆಕರ್ಷಣೀಯ ಅನಿಸುತ್ತಿದ್ದುದು ಛದ್ಮವೇಷ ಸ್ಪರ್ಧೆ. ಮೇಷ್ಟ್ರ ನೆಹರೂ ವರ್ಣನೆಯಲ್ಲಿ, ಪಾಠ ಪುಸ್ತಕದಲ್ಲಿ, ಅಥವಾ ಬಾಲಮಂಗಳದಲ್ಲಿ ಪ್ರಕಟವಾಗುತ್ತಿದ್ದ ಕಥೆಗಳಲ್ಲಿ ನೆಹರೂ ಬಗ್ಗೆ ಓದಿ, ಕೇಳಿ ತಿಳಿದಿದ್ದ ನಮಗೆ ಅವರ ಬಗೆಗೊಂದು ಸ್ಪಷ್ಟ ಇಮೇಜ್ ಮನಸ್ಸಿನಲ್ಲಿ ರೂಪುಗೊಂಡಿತ್ತು. ಅದೇ ಇಮೇಜ್ ಛದ್ಮವೇಷವಾಗಿ ವೇದಿಕೆ ಮೇಲೂ ಬರುತ್ತಿತ್ತು.

ಅವರು ಧರಿಸುತ್ತಿದ್ದಂತಹುದೇ ನಿಲುವಂಗಿ, ಕಿಸೆಯಲ್ಲೊಂದು ಗುಲಾಬಿ ಹೂವು (ಗುಲಾಬಿ ಸಿಗದಿದ್ದರೆ ಕೆಂಪು ದಾಸವಾಳವೂ ನಡೆಯುತ್ತಿತ್ತು.) , ಗಣಿತದ ನೋಟ್ ಪುಸ್ತಕದ ಮಧ್ಯದ ಹಾಳೆ ಹರಿದು ಮಾಡುತ್ತಿದ್ದ ಟೋಪಿ ಧರಿಸಿಬಿಟ್ಟರೆ ನಮ್ಮ ನೆಹರೂ ಗೆಟಪ್ ಸುಸಂಪನ್ನ. ನಮ್ಮ ಬುದ್ಧಿವಂತಿಕೆಯ, ಅರಿವಿನ ಮಟ್ಟಕ್ಕಂತೂ ಆವತ್ತು ನಾವೇ ನೆಹರೂ, ನಾವೇ ಚಾಚಾ. ಆಮೇಲೆ ನಿಧಾನವಾಗಿ ನಡೆದುಕೊಂಡು ಸ್ಟೇಜ್ ಮೇಲೆ ಬಂದು ಸಭೆಯತ್ತ ಒಮ್ಮೆ ಕೈ ಬೀಸಿದರೆ ಯಾವುದೋ ಅರಿಯದ ಹೆಮ್ಮೆಯ ಭಾವವೊಂದು ಮೈಮನಸ್ಸಿನ ಪೂರ್ತಿ ತುಂಬಿಕೊಂಡು ಬಿಡುತ್ತಿತ್ತು. ಅಪ್ಪಿ ತಪ್ಪಿ ಛದ್ಮವೇಷಕ್ಕೆ ಬಹುಮಾನ ಬಂದರೆ ಅದರ ಗತ್ತೇ ಬೇರೆ.

ಆದರೆ ಈ ಎಲ್ಲಾ ನಾಸ್ಟಾಲ್ಜಿಕ್ ಹಳಹಳಿಕೆ ಮಧ್ಯೆಯೂ ನಾವು ನಮ್ಮಷ್ಟೇ ಚೆಂದದ ಅಥವಾ ಅದಕ್ಕಿಂತಲೂ ಉತ್ತಮವಾದ ಬಾಲ್ಯವನ್ನು ನಮ್ಮ ಮಕ್ಕಳಿಗೆ ಒದಗಿಸಿದ್ದೇವೆಯೇ? ಮಕ್ಕಳ ಆಟವನ್ನು ಕಣ್ತುಂಬಿಕೊಳ್ಳುತ್ತಾ ಅವರೊಂದಿಗೆ ನಾವೂ ಮಕ್ಕಳಾಗುತ್ತೇವಾ? ಅಸಲಿಗೆ ಓದು, ಟ್ಯೂಷನ್, ಮತ್ಯಾವುದೋ ಕ್ಲಾಸ್ ಗಳ ಮೂಲಕ ಮಕ್ಕಳನ್ನು 'ಸೂಪರ್‌ ಕಿಡ್' ಮಾಡಿಬಿಡುವ ಭರದಲ್ಲಿ, ಭ್ರಮೆಯಲ್ಲಿ ವರಿಗೆ ಆಟ ಆಡಲು ಸಮಯವನ್ನಾದರೂ ಕೊಟ್ಟಿದ್ದೇವಾ? ಮಕ್ಕಳಿಗೆ ಅಂತ ದಿನದ ಒಂದಿಷ್ಟು ನಿಮಿಷಗಳನ್ನು ಎತ್ತಿಟ್ಟಿದ್ದೇವಾ? ಟಿ.ವಿ, ನ್ಯೂಸ್, ಕ್ರಿಕೆಟ್, ಧಾರವಾಹಿ, ಕೆಲಸ, ಅನಗತ್ಯದ ಸೈದ್ದಾಂತಿಕ ಚರ್ಚೆ ಇವರಲ್ಲವುಗಳ ಮಧ್ಯೆ ಮಕ್ಕಳ ಇರುವು ನಮ್ಮ ಗಮನಕ್ಕೂ ಬಾರದಂತೆ ಕಳೆದುಹೋಗುತ್ತಿದೆಯಾ?ಒಮ್ಮೆ ತಣ್ಣಗೆ ಕೂತು ಯೋಚಿಸಿ. ನಾಳೆ ಆತ್ಮಸಾಕ್ಷಿಯ ಮುಂದೆ ಮಂಡಿಯೂರುವಂತಾಗಬಾರದು ಅಂದರೆ ನಾವಿವತ್ತು ಎಚ್ಚೆತ್ತುಕೊಳ್ಳಬೇಕು, ನಮ್ಮನ್ನೇ ತಿದ್ದಿಕೊಳ್ಳಬೇಕು.

ಇವತ್ತು ಮಕ್ಕಳ ದಿನಾಚರಣೆ ಆಚರಿಸಿಕೊಳ್ಳುವ ಎಲ್ಲಾ ಮುದ್ದು ಮಕ್ಕಳಿಗೂ, ಮಗು ಮನಸ್ಸಿನ ದೊಡ್ಡವರಿಗೂ ಮಕ್ಕಳ ದಿನಾಚರಣೆಯ ಶುಭಾಶಯ.

ಸೋಮವಾರ, ನವೆಂಬರ್ 13, 2017

ಕವಿ ಶೈಲ

ಇಳಿ ಸಂಜೆಯ ಸೂರ್ಯ ನಿಚ್ಛಳವಾಗಿ ನಗುತ್ತಿದ್ದ. ಬಾಲ್ಕನಿಯ ಹೊಸ್ತಿಲ ಮೇಲೆ ಬಿದ್ದ ಬಿಸಿಲು ಕೋಲು ಸುಮ್ಮನೆ ಹೊಯ್ದಾಡುತ್ತಿತ್ತು. ಮೊಬೈಲ್ ಎತ್ತಿಕೊಂಡು ಬಾಲ್ಕನಿಗೆ ಬಂದ ಸಮೀರ, ತನ್ನ ಭಾವೀ ಪತಿ ಸಾದಿಕ್ ಜೊತೆ ಮಾತಾಡುತ್ತಾ, "ಸಂಜೆ ಮುಗಿಲಿನ ಭಾವ ಕಿರಣಗಳಲ್ಲಿ ಮೀಯುತ್ತಿದ್ದೇನೆ. ನೀವೀಗ ಜೊತೆಗಿರಬೇಕಿತ್ತು" ಅಂದಳು. ಅವನು "ಈ ಕವಿತೆ-ಗಿವಿತೆಗಳೆಲ್ಲಾ ನನಗೆ ಅರ್ಥ ಆಗುವುದಿಲ್ಲ, ಅರ್ಥ ಮಾಡಿಕೊಳ್ಳುವ ಆಸಕ್ತಿಯೂ ಇಲ್ಲ. ಅವೆಲ್ಲಾ ನಿನಗೇ ಇರಲಿ" ಅಂದ. ಅವನ ಧ್ವನಿಯಲ್ಲಿದ್ದ ಶುದ್ಧ ಪ್ರಾಕ್ಟಿಕಾಲಿಟಿಗೆ ಅವಳ ನವಿರು ಭಾವಗಳು ಒಮ್ಮೆ ಅಲ್ಲಾಡಿಬಿಟ್ಟವು.

ಹಾಗೆ ನೋಡುವುದಾದರೆ ಇದೇನೂ ಮೊದಲಲ್ಲ. ಎಂಗೇಜ್ಮೆಂಟ್ ದಿನಾನೇ ಓದಿನ ಬಗೆಗಿನ ಅವನ ಅನಾಸಕ್ತಿ ಅವಳಿಗೆ ತಿಳಿದುಬಿಟ್ಟಿತ್ತು. ತಾನು ಇಷ್ಟೊಂದು ಪ್ರೀತಿಸುವ ಸಾಹಿತ್ಯವನ್ನು ಅವನು ಬೋರಿಂಗ್ ಅಂದಾಗ ಅವಳು ಧರೆಗಿಳಿದುಬಿಟ್ಟಿದ್ದಳು. ಆದರೆ ಅಪ್ಪ ನೋಡಿದ ಸಂಬಂಧ ಒಲ್ಲೆ ಎನ್ನಲಾಗದೆ ಒಪ್ಪಿಕೊಂಡಿದ್ದಳು. ಅಂದಿನಿಂದಲೂ ಪುಸ್ತಕ ಪ್ರೀತಿಯೆಡೆಗೆ ಅವನನ್ನು ಸೆಳೆಯುವ ಅವಳ ಪ್ರಯತ್ನ ಜಾರಿಯಲ್ಲೇ ಇತ್ತು.

ಆದರೆ ಈಗೀಗ ಒಪ್ಪಿ ತಪ್ಪು ಮಾಡಿದೆನೇನೋ ಅಂತೆಲ್ಲಾ ಬಲವಾಗಿ ಅನ್ನಿಸಲಾರಂಭಿಸಿತ್ತು. ಓದದ ವ್ಯಕ್ತಿಯ ಜೊತೆ ಜೀವನ ಪೂರ್ತಿ ಹೇಗೆ ಏಗಲಿ ಅಂತ ಯೋಚಿಸುತ್ತಿದ್ದಳು. ಅದನ್ನೇ ನಿನ್ನೆ ಅಪ್ಪನ ಬಳಿಯೂ ಹೇಳಿದ್ದಳು. ಅಪ್ಪ ಅವಳ ತಲೆ ನೇವರಿಸುತ್ತಾ "ಓದದವನೂ ಚೆನ್ನಾಗಿ ಬದುಕುತ್ತಾನೆ ಮಗೂ. ಅದಕ್ಕಿಂತ ಹೆಚ್ಚಾಗಿ ನನ್ನ ಮಗಳಿಗೆ ಚಂದದ ಒಂದು ಬದುಕು ಕಟ್ಟಿಕೊಳ್ಳಲು ನೆರವಾಗುತ್ತಾನೆ ಅನ್ನುವ ವಿಶ್ವಾಸ ನನ್ನದು. ಇಷ್ಟಕ್ಕೂ ಅವನೇನೂ ನಿನ್ನಿಷ್ಟಗಳಿಗೆ ಅಡ್ಡಿಯಾಗಿಲ್ಲ. ಅವನದು ಪ್ರಾಕ್ಟಿಕಲ್ ಬದುಕು ಅಷ್ಟೆ. ಆದರೆ ನಿನಗೆ ಈ ಸಂಬಂಧ ಇಷ್ಟವಿಲ್ಲದಿದ್ದರೆ ಬೇಡ, ಬಿಟ್ಟುಬಿಡೋಣ. ನಿನ್ನ ಸಂಪೂರ್ಣ ಒಪ್ಪಿಗೆಯಿಲ್ಲದೆ ನಾವು ಮುಂದುವರಿಯುವುದಿಲ್ಲ. ಇವತ್ತಿನವರೆಗೂ ನಿನ್ನೆಲ್ಲಾ ನಿರ್ಧಾರಗಳನ್ನು ಗೌರವಿಸಿದ ಹಾಗೆಯೇ ಈ ನಿರ್ಧಾರವನ್ನೂ ಒಪ್ಪಿಕೊಂಡು ಗೌರವಿಸುತ್ತೇನೆ. ಆದರೆ ಆತುರ ಬೇಡ. ಸಾವಧಾನದಿಂದ ಯೋಚಿಸು. ಬೇಕಿದ್ದರೆ ಒಮ್ಮೆ ಹೊರಗೆಲ್ಲಾದರೂ ಹೋಗಿ ಬಾ" ಅಂದಿದ್ದರು.

ಅಪ್ಪನ ಮಾತನ್ನು ಒಪ್ಪಿಕೊಳ್ಳಲೂ ಆಗದೆ, ಪೂರ್ತಿ ತಿರಸ್ಕರಿಸಲೂ ಆಗದೆ ತುಮುಲವೊಂದು ಅವಳೊಳಗೆ ಮಗ್ಗುಲು ಬದಲಾಯಿಸುತ್ತಿತ್ತು. ಈಗಷ್ಟೇ ಕರೆ ಮಾಡಿದ ಅವನು ಕವಿತೆಯ ಬಗೆಗಿನ ತನ್ನ ನಿರಾಸಕ್ತಿಯನ್ನು ವ್ಯಕ್ತಪಡಿಸಿದಾಗ ಮತ್ತೆ ಯೋಚನೆಗೆ ಬಿದ್ದಳು.

ಸಂಜೆ ಸತ್ತು ಆಗಲೇ ಕತ್ತಲೆ ಹುಟ್ಟಿಕೊಳ್ಳಲಾರಂಭಿಸಿತ್ತು. ಯೋಚನೆಗಳಲ್ಲಿ ಮೈಮರೆತವಳನ್ನು ಒಮ್ಮೆ ಬೀಪ್ ಆಗಿ ಸುಮ್ಮನಾದ ಮೊಬೈಲ್ ಎಚ್ಚರಿಸಿತು. ನೋಟಿಫಿಕೇಷನ್,  ಫೇಸ್ಬುಕ್ ಗೆಳೆಯನ ಮೆಸೇಜ್ ತೋರಿಸುತ್ತಿತ್ತು. ಸಮೀರ ಅವನ ಮೆಸೇಜ್ ಅನ್ನು ನಿರ್ಲಕ್ಷಿಸಿ ಗಲ್ಲಕ್ಕೆ ಕೈ ಹೊತ್ತು ಮತ್ತೆ ಯೋಚನೆಗಳಲ್ಲಿ ಮುಳುಗಿ ಹೋದಳು. ಮತ್ತೆ ಮೊಬೈಲೆ ಬೀಪ್ ಆಯ್ತು, ತೆರೆದು ನೋಡಿದರೆ ಅದೇ ಫೇಸ್ಬುಕ್ ಗೆಳೆಯ ರಫಿಯ ಮೆಸೇಜ್.

"ಯಾಕೆ ಗೆಳತಿ ಈ ಮೌನ? ಅದೆಷ್ಟು ಅಕ್ಷರಗಳು ನಿನ್ನ ಮಾತು ಕೇಳಲು ಕಾದು ಕುಳಿತಿವೆ ನೋಡು" ಅಂತಿತ್ತು. ಅವಳು "ಕತ್ತಲು ಹುಟ್ಟುತ್ತಿದೆ. ಈ ಮೌನ ಹಿತವಾಗಿದೆ. ತನ್ನ ಗಡಿ ದಾಟಿದ ಮೇಲೆ ಮಾತೂ ಮೌನಕ್ಕೆ ಶರಣಾಗಲೇಬೇಕಲ್ಲವೇ?" ಎಂದು ಟೈಪಿಸಿದಳು. ಆ ಕಡೆಯಿಂದ ಅವನು "ಕತ್ತಲೆಗೇಕೆ ಭಯ? ನೀನೇ ಬೆಳಕಿನ ಒಂದು ಪುಟ್ಟ ಕವಿತೆ" ಎಂದು ಮಾರುತ್ತರಿಸಿದ. "ಕತ್ತಲಿಗೆ ಬೆಳಕನುಣ್ಣಿಸುವ ಹುಂಬತನ ನನ್ನಲ್ಲಿಲ್ಲ. ಕತ್ತಲಾದರೂ ಅಷ್ಟೆ, ಬೆಳಕಾದರೂ ಅಷ್ಟೆ, ಅವೆರಡನ್ನೂ ಇರುವಷ್ಟೇ ಸಹಜವಾಗಿ ಸ್ವೀಕರಿಸುತ್ತೇನೆ" ಅಂದಳು. "ನೋಡು ನೀನಿಷ್ಟವಾಗುವುದೇ ಇದಕ್ಕೆ. ಅದೆಷ್ಟು ಚೆನ್ನಾಗಿ ಬರೆಯುತ್ತಿಯಾ! ನಿನ್ನ ಪ್ರತೀ ಅಕ್ಷರಗಳಲ್ಲೂ ನನಗೆ ಉಕ್ಕಿ ಹರಿಯುವ ಜೀವನ ಪ್ರೀತಿ ಕಾಣಿಸುತ್ತದೆ. ನೀ ಹೀಗೆಯೇ ಬರೆಯುತ್ತಿದ್ದರೆ ನಾನು ಜೀವನ ಪೂರ್ತಿ ನಿನ್ನನ್ನೇ ಓದುತ್ತಾ ಕುಳಿತುಬಿಡುತ್ತೇನೆ " ಅಂದ. ಅವಳು "ಹೊಗಳಿಕೆಯ ಹೊನ್ನ ಶೂಲಕ್ಕೆ ಏರಿಸಬೇಡ. ನಾನೀಗಾಗಲೇ ಗೊಂದಲ್ದಲ್ಲಿದ್ದೇನೆ " ಅಂದಳು. "ನಿಶ್ಚಿತಾರ್ಥ ಮುಗಿಸಿಕೊಂಡು ಮದುವೆ ಮುಂದೆ ನೋಡುತ್ತಿರುವ ಹೆಣ್ಣಿಗೇನು ಗೊಂದಲ? ಒಂದು ನಿಡಿದಾದ ಉಸಿರುಬಿಟ್ಟು ಕಣ್ಣು ಮುಚ್ಚಿ ಅವನನ್ನೊಮ್ಮೆ ನೆನೆಸಿಕೋ, ಕಣ್ಣು ತೆರೆಯುವಷ್ಟರಲ್ಲಿ ಒಂದು ಚಂದದ ಪ್ರೇಮ ಕಾವ್ಯ ನಿನ್ನೊಳಗೆ ಮೂಡಿರುತ್ತದೆ" ಅಂದ. ಅವಳು, ನನ್ನ ಎದೆಗುದಿಗಳು ನಿನಗೆ ಅರ್ಥವಾಗದು ಅಂತ ಅಂದುಕೊಳ್ಳುತ್ತಾ "ನಾ ಬರ್ಲಾ?" ಕೇಳಿದಳು. ಅವನು "ಹುಮ್ ಹೋಗು, ಮತ್ತೆ ಬರುವಾಗ ನಿನ್ನ ಅಣು ಅಣುವಿನೊಳಗೂ ಹರಡಿಕೊಂಡಿರುವ ಕವಿತೆಗಳ ಹೆಕ್ಕಿ ತಾ. ನಾನು ಈ ಸಂಪಿಗೆ ಮರದಡಿಯಲ್ಲಿ ಕಾಯುತ್ತಿರುತ್ತೇನೆ" ಅಂದ. ಅವಳೊಂದು ಶುಷ್ಕ ನಗುವಿನ ಇಮೋಜಿ ಕಳುಹಿಸಿ ಸುಮ್ಮನಾದಳು.

ತಿಂಗಳ ಹಿಂದೆಯಷ್ಟೇ ಫೇಸ್‍ಬುಕ್‍ನ ತೇಜಸ್ವಿ ಬರಹಗಳ ಚರ್ಚೆಯೊಂದರಲ್ಲಿ ಸಮೀರಾಳಿಗೆ ರಫಿಯ ಪರಿಚಯವಾಗಿತ್ತು. ಅವನ ಬರವಣಿಗೆಯ ಶೈಲಿ, ಭಾಷಾ ಶುದ್ಧತೆ ಅವಳ ಅಚ್ಚರಿಗೆ ಕಾರಣವಾಗಿದ್ದರೆ, ಅವಳ ನಿರ್ಭಿಡತೆ ಅವನಲ್ಲೊಂದು ಕುತೂಹಲವನ್ನು ಹುಟ್ಟು ಹಾಕಿತ್ತು. ಅಲ್ಲಿಂದಾಚೆ ಇಬ್ಬರೂ ತಮಗರಿಯದೇ ಆತ್ಮೀಯರಾದರು. ಬಹುಶಃ ಈ ಒಂದು ತಿಂಗಳಲ್ಲಿಅವರು ಚರ್ಚಿಸದ ವಿಷಯವೇ ಇಲ್ಲವೇನೋ? ಈಗ ಅವಳ ತೇಜಸ್ವಿ ಅವನಿಗೆ ಮತ್ತು ಅವನ ಲಂಕೇಶ್ ಇವಳಿಗೆ ಪರಮಪ್ರಿಯರಾಗಿದ್ದರು. ಅವನ ಮಾತುಗಳಲ್ಲಿ ಆಗಾಗ ಇಣುಕುತ್ತಿದ್ದ ಅವಳ ಬಗೆಗಿನ ಆಸಕ್ತಿ, ವಿಶೇಷ ಆಸ್ಥೆ, ಅತಿ ಹೊಗಳಿಕೆಗಳು ಅವಳಿಗೆ, ಇವನೇನಾದರೂ ತನ್ನನ್ನು ಪ್ರೀತಿಸುತ್ತಿರಬಹುದೇ ಅಂತ ಅನ್ನಿಸುವಂತೆ ಮಾಡುತ್ತಿತ್ತು. ಅವೆಲ್ಲಕ್ಕೂ ಇಂಬು ಕೊಡುವಂತೆ ಒಂದು ವಾರದ ಹಿಂದೆಯಷ್ಟೇ "ಮದುವೆಯಾಗಬೇಕು, ಕವಿ ಮನಸ್ಸಿನ ಹೆಣ್ಣು ಬೇಕು" ಅಂತ ಸ್ಟೇಟಸ್ ಅಪ್ಡೇಟ್ ಮಾಡಿದ್ದ. ಆ ಬಗ್ಗೆಯೆಲ್ಲಾ ಅವಳು ಯಾವತ್ತೂ ಹೆಚ್ಚು ಯೋಚಿಸಿದವಳೇ ಅಲ್ಲ. ಆದರೆ ಇವತ್ತು ಮಾತ್ರ ’ಅರೆ! ನಾನ್ಯಾಕೆ ರಫಿಯನ್ನೇ ಮದುವೆಯಾಗಬಾರದು?’ ಅನ್ನುವ ಯೋಚನೆಯೊಂದು ಅವಳ ಮನದಲ್ಲಿ ಕ್ಷಣ ಕಾಲ ನಿಂತು ಹೋಯಿತು.

’ಹೌದಲ್ವಾ? ಈ ಬಗ್ಗೆ ನಾನು ಯೋಚಿಸಿರಲೇ ಇಲ್ಲ. ನನಗಿಷ್ಟು ಆತ್ಮೀಯ, ಸಮಾನ ಮನಸ್ಕ, ಮೇಲಾಗಿ ಸಭ್ಯ. ನಾನೇಕೆ ಇವನ ಮುಂದೆ ವಿವಾಹ ಪ್ರಸ್ತಾಪ ಇಡಬಾರದು ಅನ್ನಿಸಿ, "ನಾಳೆ ಕವಿ ಶೈಲಕ್ಕೆ ಹೋಗುತ್ತಿದ್ದೇನೆ. ಒಮ್ಮೆ  ಭೇಟಿಯಾಗೋಣವೇ? ನಿನ್ನೊಂದಿಗೆ ಒಂದಿಷ್ಟು ವಿಷಯಗಳನ್ನು ಚರ್ಚಿಸಬೇಕಿದೆ" ಎಂದು ಸಂದೇಶ ಕಳುಹಿಸಿಸಿದಳು. ಮರುಕ್ಷಣ ಅತ್ತಲಿಂದ " ಆಕಾಶ ದಿಟ್ಟಿಸುತ್ತಾ ಇನ್ನೂ ಬಾರದ ನಿನ್ನ ಕವಿತೆಗಳನ್ನು ಕಾಯುತ್ತಿದ್ದೆ. ಈಗ ನಿನ್ನಿಂದ ಭೇಟಿಯ ಆಫರ್! ದೇವನಿಗೊಂದು ಕೃತಜ್ಞತೆ ಸಲ್ಲಿಸೋಣವೆಂದು ಮೇಲೆ ನೋಡಿದರೆ ಮತ್ಸರದಿಂದ ನಕ್ಷತ್ರಗಳೆಲ್ಲಾ ಮಾಯವಾದವು. ಈಗ ಖಾಲಿ ಆಕಾಶದ ತುಂಬಾ ನಿನ್ನ ಪ್ರತಿಬಿಂಬ. ನಾಳೆ ನೀ ಬರುವ ಮುಂಚೆಯೇ ನಿನಗಾಗಿ ಕಾಯುತ್ತಿರುತ್ತೇನೆ. ನಾನೀಗ ಸಂತೃಪ್ತ" ಎಂದು ಮರುತ್ತರಿಸಿದ. ಯಾವುದೋ ಅರಿಯದ ಭಾವವೊಂದು ಅವಳನ್ನು ಬಳಸಿ ಅಲ್ಲೆ ಅಂತರ್ಧಾನವಾಯಿತು. ದೂರದಲ್ಲೆಲ್ಲೋ ಬಾಗಿ ನಿಂತ ಪೈರೊಂದು ಹಿತಾವಾಗಿ ಭೂಮಿಯನ್ನು ಸ್ಪರ್ಶಿಸಿದಂತಾಯಿತು.

ಆ ರಾತ್ರಿ ಪೂರ್ತಿ ಅವಳ ಕಣ್ಣಿನ ಕಪ್ಪು ಬಿಳುಪಿ ಕನಸುಗಳೆಲ್ಲಾ ಬಣ್ಣ ಪಡೆದುಕೊಂಡಿದ್ದವು. ಚಿತ್ರಕಾರನೊಬ್ಬ ತನ್ನ ಕುಂಚದಿಂದ ಆಕಾಶದ ಪೂರ್ತಿ ಚಿತ್ತಾರ ಬಿಡಿಸುತ್ತಿದ್ದ.

ಮರುದಿನ ಬೇಗ ಎದ್ದು ರೆಡಿಯಾಗಿ, ಎಂದಿಗಿಂತಲೂ ನಾಜೂಕಾಗಿ ಅಲಂಕಾರ ಮುಗಿಸಿ ತನ್ನ ಪ್ರೀತಿಯ ಕೈನಿ ಹತ್ತಿ ಕವಿಶೈಲಕ್ಕೆ ಹೊರಟಳು. ದಾರಿ ಮಧ್ಯೆ ಇಳಿದು ಅವನಿಗಂತಲೇ ಲಂಕೇಶರ ನೀಲು ಕವಿತೆಗಳ ಸಂಗ್ರಹವೊಂದನ್ನು ಕೊಂಡು ಮತ್ತೆ ಲಗುಬಗೆಯಿಂದ ಹೊರಟಳು.




ಕವಿಶೈಲ ತಲುಪುವ ಹೊತ್ತಿಗಾಗುವಾಗಲೇ ರಫಿ, ಅಚ್ಚ ಬಿಳಿ ಗುಲಾಭಿ ಹೂವಿನ ಬೊಕ್ಕೆ ಹಿಡಿದು ಶುಭ್ರವಾಗಿ ನಗುತ್ತಾ ನಿಂತಿದ್ದ. ಹಿಂದೆ ಒಮ್ಮೆಯೂ ಭೇಟಿಯಾಗದ, ತನ್ನದೊಂದು ಪಟವನ್ನೂ ನೋಡಿರದ ನನ್ನನ್ನು ಹೇಗೆ ಕಂಡುಹಿಡಿದ ಎಂದು ಅಚ್ಚರಿಪಡುತ್ತಲೇ ಅವನನ್ನು ಕೇಳಿದಳು. ಅವನು "ಬಿಡು ಗೆಳತೀ, ನೋಡಬೇಕೆಂದಿಲ್ಲ. ನಿನ್ನಿರುವಿಕೆಯೇ ಈ ಗಾಳಿಯಲ್ಲಿ ಕವಿತೆಯ ಘಮವನ್ನು ಹೊತ್ತು ತಂದಿದೆ" ಅಂದ. ಭಾವುಕಳಾದ ಸಮೀರಾ ಸುಮ್ಮನೆ ನಡೆಯತೊಡಗಿದಳು. ಯಾವ ತಲ್ಲಣವು ಯಾವ ರೂಪ ತಾಳುತ್ತದೋ ಅನ್ನುವ ಆತಂಕವೊಂದು ಸುಮ್ಮನೆ ಹೊಯ್ದಾಡುತ್ತಲೇ ಇತ್ತು.

ಮತ್ತೆ ಮೌನ ಮುರಿದ ರಫಿ " ಮಾತಾಡು ಸಮೀರಾ, ನೀ ಹೀಗೆ ಮೌನವಾಗಿದ್ದರೆ ನನಗೇನೂ ತಿಳಿಯುವುದಿಲ್ಲ. ನಿನ್ನ ಮೌನವನ್ನು ತಲುಪುವ ದಾರಿ ನನಗೆ ಗೊತ್ತಿಲ್ಲ" ಅಂದ. ಸಮೀರಾ "ಶ್! ಸುಮ್ಮನಿರು. ನಿನ್ನ ಮಾತು ಮುಗಿದ ಮೇಲೆ ಉಳಿಯುವ ಮೌನವನ್ನು ಹೆಕ್ಕುವ ಕಾಯಕವಷ್ಟೇ ನನ್ನದು. ನನ್ನ ಮಾತಾಡಿಸಬೇಡ" ಎಂದು ಅಲ್ಲೇ ಇದ್ದ ಕಲ್ಲು ಬೆಂಚಿನ ಮೇಲೆ ಕೂತು ಮಧುರ ಭಾವದಲ್ಲಿ ಕಳೆದು ಹೋದಳು.

ತುಸು ಹೊತ್ತು ಕಳೆದ ಮೇಲೆ ಅವಳು "ಹೇಳು ರಫಿ, ನೀನೇನೋ ಹೇಳುತ್ತಿದ್ದಿಯಲ್ಲಾ?" ಅಂದಳು. ಅವನು " ಊಹೂಂ ಕಣೆ, ಹೀಗೆ ಸುಮ್ಮನಿರಲು ನನ್ನಿಂದ ಸಾಧ್ಯವೇ ಇಲ್ಲ. ನೀನು ಬರೆಯುತ್ತಿರಬೇಕು ಇಲ್ಲ ಮಾತಾಡುತ್ತಿರಬೇಕು. ನಾನಿಡೀ ಬದುಕನ್ನು ನಿನ್ನ ಕವಿತೆಗಳನ್ನು ಕೇಳುತ್ತಲೇ, ಓದುತ್ತಲೇ ಇರಬೇಕು" ಅಂದ.

"ನನ್ನ ಪ್ರೀತಿಸುತ್ತೀಯಾ?" ಅವಳದು ನೇರ ಪ್ರಶ್ನೆ. ಒಂದಿಷ್ಟೂ ಗಲಿಬಿಲಿಗೊಳ್ಳದ ಆತ "ಅಫ್‍ಕೋರ್ಸ್, ಅದರಲ್ಲಿ ಕೇಳೋದೇನಿದೆ? ನಿನ್ನ ಅಕ್ಷರ ಪ್ರೀತಿ, ಹುಚ್ಚುತನ, ಬದುಕನ್ನು ಸ್ವೀಕರಿಸುವ ರೀತಿ ಎಲ್ಲವೂ ನನಗಿಷ್ಟ. ಈ ಜೀವ ಇರುವವರೆಗೂ ನಿನ್ನ ಪ್ರೀತಿಸುತ್ತಲೇ ಇರುತ್ತೇನೆ" ಅಂದ.

ಒಂದು ಕ್ಷಣ ತಡೆದ ಸಮೀರಾ ಮತ್ತೆ ಕೇಳಿದಳು "ನನ್ನ ಮದುವೆಯಾಗುತ್ತೀಯಾ? ಮನೆಯಲ್ಲಿ ಮಾತಾಡಲಾ?". ಅವನ ಮಾತು ನಿಂತಿತು. ಗಂಟಲ ಪಸೆ ಆರಿತೆಂಬಂತೆ ಒಮ್ಮೆ ಕೆಮ್ಮಿ ಗಂಟಲು ಸರಿಪಡಿಸಿಕೊಂಡು ಎತ್ತಲೋ ನೋಡುತ್ತಾ "ಆದರೆ ನೀನೀಗಾಗಲೇ ನಿಶ್ಚಿತಾರ್ಥ ಆಗಿರುವ ಹುಡುಗಿ, ನನ್ನ ಮದುವೆ ಆಗುವುದಾದರೂ ಹೇಗೆ?" ಎಂದು ಕೇಳಿದ. ಅವಳು " ನಾನು ಅಪ್ಪನೊಂದಿಗೆ ಮಾತಾಡಿ ಎಲ್ಲ ಸರಿ ಮಾಡುತ್ತೇನೆ, ಪ್ರಶ್ನೆ ಅದಲ್ಲ. ನೀನು ನನ್ನ ಮದುವೆಯಾಗೋಕೆ ಸಿದ್ಧನಿದ್ದೀಯಾ ಅನ್ನುವುದಷ್ಟೇ ನನಗೆ ಬೇಕಿರುವುದು" ಅಂದಳು. "ವೆಲ್ ಸಮೀರಾ, ನಿನ್ನ ಬರಹ. ಮಾತು, ಕವಿತೆಗಳೆಲ್ಲಾ ನನಗಿಷ್ಟವೇ. ನಿನ್ನನ್ನು ನಾನು ಪ್ರೀತಿಸುತ್ತೇನೆ ಅನ್ನುವುದು ನಿಜವೇ. ಆದರೆ, ಮದುವೆಯ ವಿಷಯಕ್ಕೆ ಬಂದಾಗ, ತನ್ನ ಎಲ್ಲಾ ಹವ್ಯಾಸಗಳಿಗೆ ಪೂರ್ಣ ವಿರಾಮ ಹಾಕಿ ಅಚ್ಚುಕಟ್ಟಾಗಿ ಸಂಸಾರ ನಡೆಸಿಕೊಂಡು ಹೋಗುವವರಿಗಷ್ಟೆ ನನ್ನ ಆದ್ಯತೆ. ಕಥೆ-ಕವಿತೆ ಬರೆಯುತ್ತಾ ಕೂತರೆ ನಾಳೆ ನನ್ನ ಕುಟುಂಬವನ್ನು ನೋಡಿಕೊಳ್ಳುವವರು ಯಾರು?" ಎಂದು ಕೇಳಿದ. ದಿಗ್ಭ್ರಮೆಗೊಳಗಾದ ಸಮೀರ "ಮತ್ತೆ, ಫೇಸ್‍ಬುಕ್‍ನಲ್ಲಿ ಕವಿ ಮನಸ್ಸಿನ ಹುಡುಗಿ ಬೇಕು ಅಂತ ಸ್ಟೇಟಸ್ ಹಾಕಿಕೊಂಡಿದ್ದಿಯಲ್ಲಾ ಅದೇನು?" ಅಂತ ಪ್ರಶ್ನಿಸಿದಳು. ಅವನು "ಸಮೀರಾ, ಇವೆಲ್ಲಾ ನಿನಗೆ ಗೊತ್ತಿಲ್ಲದಿರುವುದೇನಲ್ಲ. ಅದು ಫೇಸ್‍ಬುಕ್ ಆದರ್ಶ ಅಷ್ಟೆ. ಅದನ್ನೆಲ್ಲಾ ಬದುಕಿಗೆ ಅನ್ವಯಿಸುವುದಕ್ಕಾಗುತ್ತಾ? ಮೇಲಾಗಿ ಬರೆದಂತೆ ಬದುಕಬೇಕು ಅನ್ನುವ ನಿಯಮವೇನೂ ಇಲ್ವಲ್ಲಾ?" ಎಂದು ಮರು ಪ್ರಶ್ನಿಸಿದ.

ಬದುಕಿಗೊಂದು, ಫೇಸ್‍ಬುಕ್‍ಗೊಂದು, ಇನ್ನಾವುದೋ ಅಪ್ಲಿಕೇಷನ್‍ಗೆ ಮತ್ತೊಂದು ಅಂತೆಲ್ಲಾ ಆದರ್ಶಗಳಲ್ಲೂ ವೆರೈಟಿಗಳು ಇವೆಯಾ ಎಂಬ ಯೋಚನೆಯೇ ಅವಳ ಹೃದಯದಲ್ಲಿ ವಿಷಣ್ಣತೆಯೊಂದನ್ನು ಹುಟ್ಟು ಹಾಕಿತು. "ಬರೆದಂತೆಯೇ ಬದುಕುತ್ತಾರೆ ಅನ್ನುವ ನನ್ನ ಸುಂದರ ಭ್ರಮೆಯನ್ನು ಒಡೆದು ಹಾಕಿರುವುದಕ್ಕೆ ತ್ಯಾಂಕ್ಸ್ ಹೇಳಬೇಕಾ ಇಲ್ಲ ಹಾಗೆ ಬದುಕಬೇಕಿಲ್ಲ ಅನ್ನುವ ಬದುಕಿನ ಅತಿದೊಡ್ಡ ಪ್ರಾಕ್ಟಿಕಾಲಿಟಿಯನ್ನು ಕಲಿಸಿರುವುದಕ್ಕೆ ತ್ಯಾಂಕ್ಸ್ ಹೇಳಬೇಕಾ ಅನ್ನುವುದು ನನಗರ್ಥವಾಗುತ್ತಿಲ್ಲ ರಫಿ" ಅನ್ನುತ್ತಾ ಅವನ ಹೆಗಲುತಟ್ಟಿ ಕೂತಲ್ಲಿಂದ ಎದ್ದಳು. ಅಷ್ಟರಲ್ಲಿ ಫೋನ್ ರಿಂಗಣಿಸಿತು. ನೋಡಿದರೆ ಸಾದಿಕ್. "ನೀನು ಕವಿ ಶೈಲಕ್ಕೆ ಹೋಗಿದ್ದಿ ಅಂತ ಅಪ್ಪ ಹೇಳಿದ್ರು. ಆ ಜಾಗ ನಿನಗೆಷ್ಟು ಮಹತ್ವಪೂರ್ಣ ಅನ್ನುವುದು ನನಗೊತ್ತು. ಇವತ್ತಿಡೀ ನಾನು ನಿನಗೆ ಕರೆ ಮಾಡುವುದಿಲ್ಲ. ರಿಲಾಕ್ಸ್ ಆಗಿರು, ಖುಶಿ ಆಗಿರು" ಎಂದು ಅವಳ ಉತ್ತರಕ್ಕೂ ಕಾಯದೆ ಫೋನ್ ಇಟ್ಟ.

ಎಂತಹ ಮೂರ್ಖತನದ ಕೆಲಸ ಮಾಡುತ್ತಿದ್ದೆ. ಬರೆಯದವನೂ ಚೆನ್ನಾಗಿಯೇ ಬದುಕುತ್ತಾನೆ ಅನ್ನುವ ಅಪ್ಪನ ಮಾತಿನಲ್ಲಿ ಎಷ್ಟು ಸತ್ಯ ಇದೆ. ಇಂಥದ್ದೊಂದು ಸರಳ ಸಂಗತಿ ನನಗೇಕೆ ಅರ್ಥ ಆಗದೇ ಹೋಯಿತು? ಸಾಹಿತ್ಯದೆಡೆಗಿನ ತನ್ನ ಅನಾಸಕ್ತಿಯನ್ನು ತಿಳಿಸುವಾಗಲೂ ಅವನ ಧ್ವನಿಯಲ್ಲಿದ್ದ ಪ್ರಾಮಾಣಿಕತೆ ನನಗೇಕೆ ತಿಳಿಯದೇ ಹೋಯಿತು? ಅಂತೆಲ್ಲಾ ಯೋಚಿಸುತ್ತಾ ಸಮೀರಾ ಅಪ್ಪನಿಗೆ ಕರೆ ಮಾಡಿ "ಅಪ್ಪಾ, ಕುವೆಂಪಜ್ಜ ನನಗೆ ಸ್ಪಷ್ಟ ದಾರಿಯನ್ನೇ ತೋರಿಸಿದರು. ಈ ಸಂಬಂಧ ನನಗೆ ಸಂಪೂರ್ಣ ಒಪ್ಪಿಗೆ" ಎಂದು ಡಿಸ್‍ಕನೆಕ್ಟ್ ಮಾಡಿ, ಹಾಗೆಯೇ ಗೇಟಿನ ಬಳಿ ನಿಲ್ಲಿಸಿದ್ದ ಕೈನಿ ಹತ್ತಿ "ತ್ಯಾಂಕ್ಸ್ ಫಾರ್ ದಿ ಬ್ಯೂಟಿಫುಲ್ ರೋಸಸ್" ಅನ್ನುತ್ತಾ ರಫಿಯತ್ತ ಕೈ ಬೀಸಿ ಕೈನಿ ಸ್ಟಾರ್ಟ್ ಮಾಡಿದಳು. ವ್ಯಾನಿಟಿ ಬ್ಯಾಗಿನೊಳಗೆ ಭದ್ರವಾಗಿದ್ದ ಲಂಕೇಶರ 'ನೀಲು' ಯಾಕೋ ಒಮ್ಮೆ ನಿರ್ಮಲವಾಗಿ ನಕ್ಕಂತಾಯಿತು.

(ಸುಧಾ ವಾರಪತ್ರಿಕೆಯಲ್ಲಿ ಪ್ರಕಟಿತ)