ಮಂಗಳವಾರ, ನವೆಂಬರ್ 27, 2018

ನನ್ನುಪ್ಪಾಪನ ಕೆಂಪಿ

ಹಸಿರ ಬಯಲಿನ ತುಂಬಾ ಸಂಜೆಗೆಂಪು ತುಂಬುತ್ತಿದ್ದಂತೆ ಅಜ್ಜ, "ಕೆಂಪಿಯನ್ನೊಮ್ಮೆ ಕರೆದುಕೊಂಡು
ಬನ್ನಿರೋ" ಎನ್ನುವ ಹುಕುಂ ಹೊರಡಿಸಿಬಿಡುತ್ತಿದ್ದರು. "ಯಾರಿಗೆ ಗೊತ್ತು, ಈಗ ದಬದಬನೆ ಮಳೆ
ಸುರಿಯಲೂಬಹುದು" ಎಂದು ನಮ್ಮನ್ನು ಗುಡ್ಡ ಹತ್ತಿಸಿಬಿಡುತ್ತಿದ್ದರು. ನಾವೂ ಇದೇ ಸಮಯಕ್ಕೆ
ಕಾಯುತ್ತಿದ್ದೆವೇನೋ ಎಂಬಂತೆ ಮೆಟ್ಟಿಲ ಮೂಲೆಯಲ್ಲಿರುವ ಚಪ್ಪಲಿ ಮೆಟ್ಟಿ , ಹಟ್ಟಿಯಿಂದ ತುಸು
ದೂರದ ಮಣ್ಣು ದಾರಿಯನ್ನು ಬಳಸಿ ಸಾಗುತ್ತಿದ್ದೆವು. ದಾರಿಯಲ್ಲಿ ಸಿಗುವ ಚುಕ್ಕಿ ಕಾಯಿ,
ನೇರಳೆ ಹಣ್ಣು ನಮ್ಮ ಪಾಲಿಗೆ ಆಗ ಮೃಷ್ಟಾನ್ನ. ನೀರವ ಮೌನ, ಗುಡ್ಡದ ಕೆಳಗಿನ ಶಂಕರ ಭಟ್ಟರ
ಮನೆಯ ಹಂಚಿನ ಮೇಲೆ ಕೂತ ಕಾಜಾಣ, ಮೈ ಒಣಗಿಸಿಕೊಳ್ಳುತ್ತಿರುವ ಮಿಂಚುಳ್ಳಿ, ಪಟ ಪಟನೆ ರೆಕ್ಕೆ
ಬಡಿದು ಹಾರುವ ದೊಡ್ಡ ಗಾತ್ರದ ನೀಲಿ ಬಣ್ಣದ ಚಿಟ್ಟೆ ಇವೆಲ್ಲವನ್ನೂ ದಾಟಿ, ಕೆಲವೊಮ್ಮೆ
ಹಿಡಿಯಲು ಪ್ರಯತ್ನಿಸಿ ಮುಂದೆ ಸಾಗುವ ಖುಶಿ ನಮ್ಮದು. ಅಪ್ಪಿ ತಪ್ಪಿ ನವಿಲನ್ನೇನಾದರೂ ನೋಡಿ
ಬಿಟ್ಟರೆ ಸ್ವರ್ಗಕ್ಕೆ ಮೂರೇ ಗೇಣು! ಉದ್ದ ಕೋಲಂದನ್ನು ಹೆಗಲಿಗೆರೇಸಿಕೊಂಡರೆ ಮುಖದಲ್ಲಿ
ಶಿಕಾರಿಯ ಕಳೆ ಬಂದೇ ಬಿಟ್ಟಿದೆಯೇನೋ ಅನ್ನುವ ಭ್ರಮೆ. ಆದರೆ ಗುಡ್ಡ ಹತ್ತಿ ನಿಂತು ಅಜ್ಜನ
ಪ್ರೀತಿಯ ಕೆಂಪಿಯನ್ನು ಸಾಮ-ದಾನ-ಭೇದ-ದಂಡ ಪ್ರಯೋಗಿಸಿದರೂ ಅದು ಗುಡ್ಡ ಇಳಿಯಲೊಪ್ಪದೇ
ಇದ್ದಾಗ ಶಿಕಾರಿಯ ಉತ್ಸಾಹ ಟುಸ್ ಪಟಾಕಿ ಆಗಿಬಿಡುತ್ತಿತ್ತು. ಕೊನೆಗೆ ಗತ್ಯಂತರವಿಲ್ಲದೆ
ಅಜ್ಜನಿಗೆ ಬುಲಾವ್ ಹೋಗುತ್ತಿತ್ತು. ನಾವು ಕರೆದಾಗೆಲ್ಲಾ ಬಿಂಕ ತೋರಿಸುತ್ತಿದ್ದ ಕೆಂಪಿ,
ಅಜ್ಜ ಗುಡ್ಡದ ತಿರುವಿನಲ್ಲಿ ನಿಂತು "ಕೆಂಪಿ...." ಎಂದರೆ ಸಾಕು ಕತ್ತಿಗೆ ಕಟ್ಟಿರುವ
ಗಂಟೆಯನ್ನು ಸದ್ದುಮಾಡುತ್ತಾ ನೆಗೆದುಕೊಂಡು ಹೋಗಿ ಅವರ ಮೈ ಉಜ್ಜುತ್ತಾ ನಿಂತುಬಿಡುತ್ತಿತ್ತು.

ನಿಜಕ್ಕೂ ಈ ಕೆಂಪಿ ನಮ್ಮ ಮನೆ ಸೇರಿದ್ದೇ ಒಂದು ವಿಚಿತ್ರ ಸನ್ನಿವೇಶದಲ್ಲಿ. ನಮ್ಮ ಮನೆಯಿಂದ
ಅರ್ಧ ಕಿಲೋಮೀಟರ್ನಷ್ಟು ದೂರದಲ್ಲಿರುವ ಸಣ್ಣ ರೈತ ಚೆನ್ನಪ್ಪಣ್ಣ ತನ್ನ ಚಿಕ್ಕ ಮಗಳ ಮನೆಗೆ
ಹೋಗುವಾಗ ಈ ಕೆಂಪಿಯನ್ನು ಪಕ್ಕದೂರಿನಲ್ಲಿನ ದೊಡ್ಡ ಮಗಳ ಹಟ್ಟಿಯಲ್ಲಿ ಕಟ್ಟಿ ಹೋಗಿದ್ದರು.
ಅಲ್ಲಿಂದ ಯಾವ ಮಾಯದಿಂದ ಅವಳು ತಪ್ಪಿಸಿಕೊಂಡಿದ್ದಳೋ ಗೊತ್ತಿಲ್ಲ, ಅಜ್ಜ ಲುಹುರ್
(ಮಧ್ಯಾಹ್ನದ) ನಮಾಜಿಗೆಂದು ಮಸೀದಿಗೆ ಹೊರಟಿದ್ದಾಗ ಪಕ್ಕದಲ್ಲಿ ಹರಿಯುತ್ತಿರುವ ತೋಡಿನ ಬದಿ
ಪೆಕರು ಪೆಕರಾಗಿ ನಿಂತುಕೊಂಡಿದ್ದಳಂತೆ. ಉಸ್ತಾದರನ್ನೂ, ಒಂದಿಬ್ಬರು ಮಕ್ಕಳನ್ನೂ ಸೇರಿಸಿ
ಅವಳ ಸುತ್ತ ಒಂದು ಹಗ್ಗ ಬಿಗಿದು ತೋಡು ದಾಟಿಸಿ ಮನೆಯ ಹಟ್ಟಿಯಲ್ಲಿ ಕಟ್ಟಿ ಹಾಕಿದ್ದರು.
ಆಮೇಲೆ ಚೆನ್ನಪ್ಪಣ್ಣ ಊರಿಗೆ ಬರುವವರೆಗೂ ಆಕೆ ನಮ್ಮ ಹಟ್ಟಿಯಲ್ಲೇ ಇರುತ್ತಾಳೆ ಅನ್ನುವ
ನಿರ್ಧಾರವನ್ನೂ ತೆಗೆದುಕೊಂಡು ಬಿಟ್ಟರು. ಈ ಹೊತ್ತು ಕೂತು, ಕೆಂಪಿ ನಮ್ಮ ಹಟ್ಟಿ ಸೇರಿದ
ಸನ್ನಿವೇಶವನ್ನು ನೆನೆಸಿದರೆ,  ಈವತ್ತಿನ ಕಾಲದಲ್ಲೇನಾದರೂ ಈ ಘಟನೆ ನಡೆದಿದ್ದರೆ ಅಜ್ಜ
ಹಸುಗಳ್ಳತನದ ಆರೋಪದಲ್ಲಿ ಜೈಲು ಸೇರುತ್ತಿದ್ದರೇನೋ ಅನಿಸುತ್ತದೆ.

ಕೆಲ ದಿನಗಳ ನಂತರ ಚೆನ್ನಪ್ಪಣ್ಣ ಊರಿಗೆ ಮರಳಿದರು. ನಡೆದ ವೃತ್ತಾಂತವನ್ನೆಲ್ಲಾ ತಿಳಿದು
ಸೀದಾ ನಮ್ಮನೆಗೆ ಬಂದು ಕೆಂಪಿಯನ್ನು ಕರೆದೊಯ್ಯುತ್ತೇನೆ ಅಂದರು. ಅಷ್ಟರಲ್ಲಾಗಲೇ ಅವಳು ನಮ್ಮ
ಹಟ್ಟಿಯ, ಮನೆಯ ಅವಿಭಾಜ್ಯ ಅಂಗವಾಗಿಬಿಟ್ಟಿದ್ದಳು. ಅಜ್ಜನಿಗಂತೂ ಅವಳು ಬಲು ಅಚ್ಚುಮೆಚ್ಚು.
ಬಿಸಿ ಬಿಸಿ ಅಕ್ಕಚ್ಚು, ಉಳಿದ ಅನ್ನ, ಬೇಯಿಸಿದ ಹುರುಳಿ ಅಂತೆಲ್ಲಾ ಆಗಾಗ ಅವಳಿಗೆ
ತಿನ್ನಿಸುವ ನೆಪದಲ್ಲಿ ಮೈ ದಡವಿ ಬರುತ್ತಿದ್ದರು. ನನಗೋ ಅಣ್ಣ ಶಾಲೆಗೆ ಹೋದ ನಂತರ ನನ್ನ
ಒಂಟಿತನವನ್ನು ನೀಗಿಸುತ್ತಿದ್ದ ಕಾಮಧೇನು ಆಕೆ. 'ಯಾಕಾದ್ರೂ ಈ ಚೆನ್ನಪ್ಪಣ್ಣ ಬಂದ್ರೋ' ಅಂತ
ಆಗ ಅನಿಸಿದ್ದು ಸುಳ್ಳೇನಲ್ಲ‌.

ಅವರು ಹಟ್ಟಿಯ ಒಳಗೆ ಹೋಗಿ ಅವಳನ್ನು ಕಟ್ಟಿದ ಹಗ್ಗಕ್ಕೆ ಕೈ ಇಡಬೇಕು ಅನ್ನುವಷ್ಟರಲ್ಲಿ ಅಜ್ಜ
'ಚೆನ್ನಪ್ಪಾ ಕೆಂಪೀನ ನಂಗೆ ಕೊಟ್ಟು ಬಿಡ್ತೀಯಾ? ಅದೆಷ್ಟಾದರೂ ಸರಿ, ಕೊಂಡುಕೊಳ್ಳುತ್ತೇನೆ'
ಅಂದರು. ಹಗ್ಗ ಬಿಚ್ಚಲು ಹೊರಟವರ ಕೈ ಒಮ್ಮೆ ತಡವರಿಸಿತೇನೋ. ಹಟ್ಟಿಯಿಂದ ನಿಧಾನವಾಗಿ ಹೊರಬಂದ
ಚೆನ್ನಪ್ಪಣ್ಣ " ನಿಮ್ಮ ಋಣದಲ್ಲಿ ಬದುಕುತ್ತಿರುವವನು ನಾನು. ನಿಮಗೇ ಕೆಂಪಿಯನ್ನು
ಮಾರುವುದೇ? ಸಾಧ್ಯವಾಗದ ಮಾತಿದು. ಕೆಂಪಿ ನಿಮ್ಮ ಬಳಿಯೇ ಇರಲಿ, ಅವಳ ಮೊದಲ ಕರುವನ್ನು ನನಗೆ
ಕೊಟ್ಟರಾಯಿತು, ದುಡ್ಡೇನೂ ಬೇಡ" ಎಂದು ತಲೆ ಆಡಿಸಿದರು. ಅಜ್ಜ ಒಂದೂ ಮಾತಾಡದೆ ಒಂದಿಷ್ಟು
ನೋಟುಗಳನ್ನು ಅವರ ಕಿಸೆಗೆ ತುರುಕಿ ಹೆಗಲು ತಟ್ಟಿದರು. ರಾಜಕಾರಣಿಗಳ, ದೊಡ್ಡದೊಡ್ಡವರ ಭಾಷಣದ
ಸರಕಾಗಿದ್ದ  'ಸೌಹಾರ್ದ' ನನ್ನ ಮುಂದೆ ಭೌತಿಕವಾಗಿ ಸಂಭವಿಸಿತ್ತು. ಕೆಂಪಿಗೆಷ್ಟು
ಅರ್ಥವಾಯಿತೋ ಗೊತ್ತಿಲ್ಲ, ಒಮ್ಮೆ 'ಅಂಬಾ' ಎಂದು ಕೂಗಿದಳು. ಅಂದಿನಿಂದ ಕೆಂಪಿ ನಮ್ಮ ಮನೆಯ
ಅಧಿಕೃತ ಸದಸ್ಯೆಯಾಗಿಬಿಟ್ಟಳು.

ಆಮೇಲೆ ಅವಳಿಗೆ ಸಿಗುತ್ತಿದ್ದ ಮರ್ಯಾದೆಗೆ ಮನೆಯ ಮುದ್ದಿನ ಬೆಕ್ಕಿಗೂ
ಅಸೊಯೆಯಾಗುತ್ತಿದ್ದರಬಹುದು. ಬೆಳಗ್ಗಿನ ನಮಾಜಿಗೆಂದು ಅಜ್ಜ ಏಳುವ ಮುನ್ನವೇ ಅವಳು ಎದ್ದು
ಬಿಡುತ್ತಿದ್ದಳು.  ಒಂದರ್ಥದಲ್ಲಿ ಅವಳ ಕೂಗಿಲ್ಲದೆ ಅಜ್ಜನಿಗೆ ಬೆಳಗಾಗುತ್ತಲೇ ಇರಲಿಲ್ಲ.
ಅವಳಿಗೋಸ್ಕರ ಎಂದೂ ಹುಲ್ಲು ಕೊಳ್ಳುವ ಪ್ರಸಂಗ ಬಂದೇ ಇಲ್ಲವೇನೋ. ಅವಳು ರಸ್ತೆ ಬದಿಯಲ್ಲೋ,
ಬೇಲಿ ಸಂಧಿಯಲ್ಲೋ, ಗುಡ್ಡದಲ್ಲೋ, ಹೊಳೆಬದಿಯಲ್ಲೋ ಹುಲ್ಲು ಸೊಪ್ಪು ತಿಂದು ಹೊಟ್ಟೆ
ತುಂಬಿಸಿಕೊಳ್ಳುತ್ತಿದ್ದಳು. ಎಷ್ಟೋ ಬಾರಿ ಅಜ್ಜ ಬಣವೆಯ ಹುಲ್ಲು ಕೊಯ್ದು ಅವಳ ಮುಂದಿಟ್ಟಾಗ
ಮುಖ ತಿರುಗಿಸಿದ್ದಳು ಕೆಂಪಿ. ಬಹುಶಃ ಅವಳಿಗೆ ತನ್ನ ಮೇವನ್ನು ನಿಸರ್ಗದತ್ತವಾಗಿ
ಪಡೆದುಕೊಳ್ಳುವುದೇ ಹೆಚ್ಚು ಇಷ್ಟವಾಗುತ್ತಿತ್ತೇನೋ.

ಒಂದು ದಿನ ಅಜ್ಜ ಊರಲ್ಲಿಲ್ಲದಿದ್ದಾಗ ಸಂಜೆ ಆರಾದರೂ ಕೆಂಪಿ ಮನೆಗೆ ಬರಲಿಲ್ಲ ಎಂದು ಕೆಲಸದವರ
ಬಳಿ ಅಮ್ಮ ಅಲವತ್ತುಕೊಳ್ಳುತ್ತಿದ್ದರೆ, ಅವರು "ಬರುತ್ತಾಳೆ ಬಿಡಿ ಅಕ್ಕಾ" ಎಂದು ಮಾತು
ತೇಲಿಸಿಬಿಡುತ್ತಿದ್ದರು. ಅಷ್ಟರಲ್ಲಿ ಅಪ್ಪನೂ ತೋಟದಿಂದ ಮರಳಿ ಬಂದರು. ಅವರಿಗೂ ವಿಷಯ
ತಿಳಿದು ಆತಂಕವಾಗಿ ಗುಡ್ಡ, ಗದ್ದೆಯಂಚು, ತೋಟ, ತೋಡಿನ ಬದಿ ಎಲ್ಲಾ ಕಡೆ ಅವಳನ್ನು
ಹುಡುಕಿದರು. ಆದರೂ ಅವಳ ಸುಳಿವೇ ಇಲ್ಲ. ಮುಸ್ಸಂಜೆ ಕರಗಿ ಕತ್ತಲು ಹುಟ್ಟಿಕೊಂಡಂತೆ ಅಜ್ಜನೂ
ಮರಳಿದರು. ಅವಳೆಲ್ಲಿ ಹೋಗಿರಬಹುದು ಅನ್ನುವ ಆತಂಕದಲ್ಲಿ ರಾತ್ರಿಯಿಡೀ ಜಾಗರಣೆಯಿದ್ದರು. 
ಆದರೆ ಮುಂಜಾನೆದ್ದು ಕೆಂಪಿಯ ಬಗ್ಗೆ ಯೋಚಿಸುತ್ತಾ ಬೆಳಗ್ಗಿನ ನಮಾಜಿಗೆಂದು ಹೊರಟಾಗ ಆಕೆ
ಗೇಟಿನ ಪಕ್ಕ ತಲೆತಗ್ಗಿಸಿ ನಿಂತುಕೊಂಡಿದ್ದಳು. ಅಜ್ಜ ಓಡಿ ಹೋಗಿ ಅವಳನ್ನು ಬರಸೆಳೆದು
ತಬ್ಬಿದರು. ಆ ಜಡಿ ಮಳೆಯನ್ನು ತಾಳಿಕೊಂಡು ರಾತ್ರಿಯಿಡೀ ಕೆಂಪಿ ಅಲ್ಲೇ ನಿಂತಿದ್ದಳಾ?
ಊಹೂಂ,  ಇವತ್ತಿಗೂ ಗೊತ್ತಾಗ್ತಿಲ್ಲ‌.



ಕೆಂಪಿಗೆ ಐದು ವರ್ಷ ತುಂಬಿ, ಆರು ಕಳೆದು ಏಳು ತುಂಬಿ ಒಂದೆರಡು ತಿಂಗಳಾದರೂ ಗರ್ಭ ಧರಿಸಿಲ್ಲ
ಎಂದಾದಾಗ ಕೊಂಚ ಅಧೀರರಾದ ಅಜ್ಜ ಅವಳನ್ನು ಪಶು ವೈದ್ಯರ ಬಳಿ ಕರೆದೊಯ್ದರು. ಅವಳನ್ನು
ಪರೀಕ್ಷಿಸಿದ ವೈದ್ಯರು ಆಕೆ ಗರ್ಭ ಧರಿಸುವ ಸಂಭವ ಕಡಿಮೆಯೆಂದರು. ಆಗೊಮ್ಮೆ ಅವರಿಗೆ
ಪಿಚ್ಚೆನಿಸಿದರೂ ಕೆಂಪಿಯನ್ನೆಂದೂ ಕಡೆಗಣಿಸಿರಲಿಲ್ಲ.

ಆದರೆ ಊರ ಕಸಾಯಿಯವರ ಕಿವಿಗೆ ಈ ಸಂಗತಿ ಹೇಗೆ ಬಿತ್ತೋ ಗೊತ್ತಿಲ್ಲ, ಆಗಲೇ ಮಸಾಲೆ
ಅರೆಯಲಾರಂಭಿಸಿದರು. ಒಂದೆರಡು ಬಾರಿ ಅಜ್ಜನಲ್ಲಿ ಕೆಂಪಿಯನ್ನು ಮಾರುತ್ತೀರಾ ಎಂದು ಕೇಳಿಯೂ
ಬಿಟ್ಟರು. ಆದರೆ ಮಾರಲಾರೆ ಎಂಬುವುದು ಅವರ ಅಚಲ ನಿರ್ಧಾರ. "ಹಾಗೆ ಕಸಾಯಿಯವರಿಗೆ ಕೊಟ್ಟರೆ
ಚೆನ್ನಪ್ಪನ ಕರುಳು ಕತ್ತರಿಸಿದಂತಾಗುತ್ತದೆ. ಕರುಳು ಬಳ್ಳಿಯ ಸಂಬಂಧ ನಿಮಗೆಲ್ಲಿ
ಅರ್ಥವಾಗಬೇಕು?" ಎಂದು ಉರಿದು ಬೀಳುತ್ತಿದ್ದರು.

ಕೆಂಪಿಯಿಂದ ಯಾವ ಉಪಯೋಗವೂ ಇಲ್ಲ ಎಂದು ನಿರ್ಧರಿಸಿಕೊಂಡ ಕೆಲಸದವರೆಲ್ಲಾ ಆಗಲೇ ಅವಳ ಬಗ್ಗೆ
ಅಸಡ್ಡೆ ತೋರಲಾರಂಭಿಸಿದ್ದರು. ಇದನ್ನು ಸೂಕ್ಷ್ಮವಾಗಿ ಅರ್ಥ ಮಾಡಿಕೊಂಡ ಅಜ್ಜ ಅವಳ ಸಂಪೂರ್ಣ
ಉಸ್ತುವಾರಿಯನ್ನು ತಮ್ಮ ಕೈಗೆ ತೆಗೆದುಕೊಂಡರು. ನನಗಾಗ ವ್ಯಾಪಾರ, ಕಸಾಯಿ, ಗೋ ರಾಜಕೀಯ
ಇವ್ಯಾವುವೂ ಅರ್ಥವಾಗುವ ವಯಸ್ಸಲ್ಲ. ನನಗೇನಿದ್ದರೂ ಆಗ ಅವಳ ಮೇಲೆ ಸವಾರಿ ಮಾಡುವುದು, ಅವಳು
ಈಜುತ್ತಿದ್ದರೆ ಚಪ್ಪಾಳೆ ತಟ್ಟಿ ನಗುವುದಷ್ಟೇ ಗೊತ್ತಿದ್ದುದು. ಅದರಾಚೆ ಅವಳದೂ ನನ್ನದೂ
ಶುದ್ಧ ಭಾವುಕ ಸಂಬಂಧ.

ಹಾಗಿರುವಾಗಲೇ, ಒಂದು ಆಷಾಢದ ಸಂಜೆ ಬಾನಿಗೆ ತೂತು ಬಿದ್ದಂತೆ ಮಳೆ ಸುರಿಯುತ್ತಿತ್ತು.
ಮಧ್ಯಾಹ್ನದ ಹೊತ್ತಿಗೇ ರಾತ್ರಿಯನ್ನು ಸೃಷ್ಟಿಸಿಬಿಡುವ ಮೋಡ , ಸಂಜೆಯಾಗುವಾಗ ಗವ್ವೆನ್ನುವ
ಕತ್ತಲೆಯನ್ನೇ ಸೃಷ್ಟಿಸಿಬಿಟ್ಟಿತ್ತು. ಭರ್ರೆಂದು ಬೀಸುವ ಗಾಳಿ, ಕೆಂಪು ನೀರಿನಿಂದ ತುಂಬಿ
ಹರಿಯುವ ತೋಡಿನ ಸದ್ದು, ಇನ್ನೇನು ಬಿದ್ದೇಬಿಡುತ್ತದೇನೋ ಅನ್ನುವಂತೆ ತೊನೆದಾಡುವ ತೆಂಗು,
ಒಲೆಯಲ್ಲಿ ಹಪ್ಪಳ ಸುಡುವ ಘಮ, ಹಂಡೆಯೊಲೆಯೊಳಗೆ 'ಚುರ್ ಚುರ್' ಸದ್ದು ಮಾಡುತ್ತಾ
ಉರಿಯಲೆತ್ನಿಸುವ ಹಸಿ ಕಟ್ಟಿಗೆ, ಮಳೆಯ ಸಪ್ಪಳವನ್ನೂ ಮೀರಿ ವಟರುಗುಟ್ಟುವ ಕಪ್ಪೆ.... ಎಲ್ಲಾ
ಸೇರಿ ಒಂದು ವಿಲಕ್ಷಣ ವಾತಾವರಣವನ್ನು ಸೃಷ್ಟಿ ಮಾಡಿತ್ತು. ಮಗ್ರಿಬ್ ಬಾಂಗ್ ಗೆ ಮುನ್ನ
ಹಟ್ಟಿ ಸೇರುವ ಕೆಂಪಿ ಆ ದಿನ ಬಂದಿರಲಿಲ್ಲ. ಅಜ್ಜ ಐದೈದು ನಿಮಿಷಕ್ಕೊಮ್ಮೆ ತಲೆಬಾಗಿಲಲ್ಲಿ
ನಿಂತು ಕತ್ತು ಉದ್ದಮಾಡಿ ನೋಡುತ್ತಿದ್ದರು. ಒಮ್ಮೆ ಕಾಲುದಾರಿಯತ್ತ, ಮತ್ತೊಮ್ಮೆ ಹಟ್ಟಿಯತ್ತ
ನೋಡಿ ನಿಟ್ಟುಸಿರು ಬಿಡುತ್ತಿದ್ದರು. ಮಳೆ ಇಳಿಯುವ ಲಕ್ಷಣಗಳೇ ಇರಲಿಲ್ಲ. ಲ್ಯಾಂಡ್ ಫೋನ್,
ಕರೆಂಟ್ ಬೇರೆ ಕೈಕೊಟ್ಟಿತ್ತು. ಸಾಲದಕ್ಕೆ ಅಲ್ಲಿ ಝರಿ ಕುಸಿಯಿತು, ಇಲ್ಲಿ ಗುಡ್ಡ ಜರಿದು
ಬಿತ್ತು ಅನ್ನುವ ಅಂತೆಕಂತೆಗಳೆಲ್ಲಾ ಚಿಂತೆಯನ್ನು ಮತ್ತಷ್ಟು ಹೆಚ್ಚಿಸಿತ್ತು. ಆ ದಿನ
ಮಗ್ರಿಬ್ ನ ಸೂರ್ಯ ಕಾಣಲೇ ಇಲ್ಲ. ರಾತ್ರಿಯಿಡೀ ಬಿಡದೆ ಸುರಿದ ಮಳೆ ಮಣ್ಣನ್ನು ಎಷ್ಟು
ಹದಗೊಳಿಸಿತ್ತೆಂದರೆ ಹೆಜ್ಜೆ ಊರಿದಲೆಲ್ಲಾ ಚಪ್ಪಲಿ ಮಣ್ಣೊಳಗೆ ಸೇರಿಕೊಳ್ಳುತ್ತಿತ್ತು.

ಮುಂಜಾನೆ ಆಗುವಷ್ಟರಲ್ಲಿ ಮಳೆಯ ಅಬ್ಬರ ಕೊಂಚ ಕಡಿಮೆಯಾಗಿತ್ತು. ಆದರೆ ಗಾಳಿ, ಮಿಂಚು,
ಗುಡುಗಿನ ಗದ್ದಲ ಹಾಗೇ ಮುಂದುವರಿದಿತ್ತು. ಹಿಂದಿನಂತೆಯೇ ಈ ಬಾರಿಯೂ ಕೆಂಪಿ ಬಂದೇ
ಬರುತ್ತಾಳೆ ಅನ್ನುವ ನಿರೀಕ್ಷೆಯಲ್ಲಿ ಗೇಟಿನ ಬಳಿ ಹೋದರೆ ಅವಳ ಪತ್ತೆಯೇ ಇಲ್ಲ. ಜರಿದು
ಬಿದ್ದ ಮಣ್ಣು, ಕೊಂಬೆ ಮುರಿದುಕೊಂಡ ಅಗಾಧ ಗಾತ್ರದ ಮಾವಿನ ಮರ, ಮಧ್ಯದಲ್ಲಿ ಕತ್ತರಿಸಿ
ಬಿದ್ದ ತೆಂಗು, ಗಾಳಿಯ ಒತ್ತಡ ತಾಳಲಾರದೆ ಮಗುಚಿ ಬಿದ್ದ ತಾಳೆ ಮರ ಆ ದಿನದ ಪ್ರಕೃತಿಗೆ ಒಂದು
ವಿಲಕ್ಷಣತೆಯನ್ನು ತಂದಿತ್ತು.

ಬೆಳಗ್ಗೆ ಹನ್ನೊಂದಾಗುವಾಗ ಊರು ಸ್ವಲ್ಪ ಬೆಳಗಿತ್ತು. ಮೋಡಗಳ ಮಧ್ಯೆ ತೂರಿಬಂದ ಸೂರ್ಯ ಜಗಲಿಯ
ಮೇಲೆ ಬಿಸಿಲನ್ನು ಚೆಲ್ಲಿದ್ದ. ಎರಡು ಆಳುಗಳನ್ನು ಒಟ್ಟುಗೂಡಿಸಿ, ಪಂಚೆ ಎತ್ತಿ ಕಟ್ಟಿ
ಕೆಂಪಿಯನ್ನು ಹುಡುಕಲು ಹೊರಟರು. ಆಕೆ ಸಿಗುತ್ತಾಳೆನ್ನುವ ಆಶಾವಾದದಲ್ಲಿ ನಾವೂ ಅವರ ದಾರಿ
ಕಾಯುತ್ತಿದ್ದೆವು.

ಆದರ ಅಜ್ಜ ಮರಳಿದ್ದು ಅವಳ ಹೆಣದೊಂದಿಗೆ.  ಹಿಂದಿನ ದಿನ ತುಂಬಿ ಹರಿಯುತ್ತಿದ್ದ ತೋಡು
ದಾಟಲಾರದೆ ಕೆಂಪಿ ತೇಲುತ್ತಿದ್ದುದನ್ನು ಊರ ಭಜನಾಮಂದಿರದ ಮುಖ್ಯಸ್ಥರು ನೋಡಿದ್ದರಂತೆ.
ಜಿರುಗುಟ್ಟುವ ಮಳೆಯಲ್ಲಿ ಅವಳನ್ನು ರಕ್ಷಿಸಲಾರದ ಅಸಹಾಯಕತೆ ಅವರನ್ನು ಎಷ್ಟು ಹಣ್ಣು
ಮಾಡಿತ್ತೆಂದರೆ ಗಳಗಳನೆ ಅತ್ತುಬಿಟ್ಟರಂತೆ. ತನ್ನ ಪ್ರೀತಿಯ ಕೆಂಪಿ ಬದುಕಿಲ್ಲ ಅನ್ನುವ
ಕಟುಸತ್ಯವನ್ನು ಅರಗಿಸಿಕೊಳ್ಳಲಾಗದ ಅಜ್ಜ ಅಲ್ಲೇ ಕುಸಿದು ಕುಳಿತರು.  ಕೆಲ ಹೊತ್ತಾದ ಬಳಿಕ
"ನನ್ನ ಕೆಂಪಿ ಅನಾಥೆಯಲ್ಲ, ಹೇಗಾದರೂ ಅವಳನ್ನು ಹುಡುಕಿ ಸಂಸ್ಕಾರ ಮಾಡುತ್ತೇನೆ"  ಎಂದು
ಹುಡುಕಲಾರಂಭಿಸಿದರು. ಸಂಜೆ ಹೊತ್ತಿಗಾಗುವಾಗ ಆಕೆ ಊರಾಚೆಯ ಹೊಳೆಯಲ್ಲಿ ಸತ್ತು
ತೇಲುತ್ತಿದ್ದುದು ಪತ್ತೆಯಾಯಿತು. ಅಜ್ಜ, ಅವಳನ್ನು ಅಲ್ಲಿಂದ ಎತ್ತಿಕೊಂಡು ಬಂದು ಹಟ್ಟಿಯ
ಮುಂದೆ ಮಲಗಿಸಿ ಮೌನವಾಗಿ ಕಣ್ಣೀರಿಡುತ್ತಿದ್ದರು. ಅವರ ಕಣ್ಣೀರು ಸಾವಿರದ ಕಥೆಗಳನ್ನು
ಹೇಳುತ್ತಿದ್ದರೆ ನಾವು ಮೌನವಾಗುಳಿದೆವು.

ಮತ್ತೆ ಜೋರು ಮಳೆಸುರಿಯಲಾರಂಭಿಸಿತು. ಅವರನ್ನು ಕೈ ಹಿಡಿದು ಎಬ್ಬಿಸಿದ ಅಪ್ಪ, ಜಗಲಿಯಲ್ಲಿ
ಕೂರಿಸಿ, ನೆರಮನೆಯವರ ಸಹಾಯದಿಂದ ಆಳೆತ್ತರದ ಹೊಂಡ ತೋಡಿ ಅವಳನ್ನು ಮೆತ್ತಗೆ ಮಲಗಿಸಿ ಮಣ್ಣು
ಹಾಕಿ ಮುಚ್ಚಿದರು. ಅಜ್ಜನಿಗೆ ಏನನಿಸಿತೋ ಗೊತ್ತಿಲ್ಲ, ಕಣ್ಣೀರೊರೆಸಿಕೊಂಡು ಎದ್ದು, ಅವಳ
ಸಮಾಧಿಯ ಮೇಲೆ ಒಂದು ಮದರಂಗಿ ಗಿಡವನ್ನೂ ಮತ್ತೊಂದು ಬೇವಿನ ಗಿಡವನ್ನೂ ನೆಟ್ಟು ನಮ್ಮತ್ತ
ನೋಡಿ, "ಎಲ್ಲಾ ಅವನ ನಿರ್ಧಾರ" ಎಂದು ಒಳ ನಡೆದರು.

ಈಗ ಅಜ್ಜ ಬದುಕಿಲ್ಲ. ಆದರೆ ಅವರು ನೆಟ್ಟ ಮದರಂಗಿ ಗಿಡ ಹಲವು ಮದುಮಕ್ಕಳ ಕೈ ಕೆಂಪಾಗಿಸಿದೆ.
ಅವರೆಲ್ಲರ ಕಣ್ಣಕನಸಿನಲ್ಲಿ‌ ಕೆಂಪಿ ನಿರ್ಮಲವಾಗಿ ತೊನೆಯುತ್ತಿರುತ್ತಾಳೆ‌ ಅಂತ ನನಗೆ ಆಗಾಗ
ಅನ್ನಿಸುತ್ತಿರುತ್ತದೆ.

(ಕೆಂಡ ಸಂಪಿಗೆ ಇ-ಪೇಪರ್ ನಲ್ಲಿ ಪ್ರಕಟಿತ)
(ಚಿತ್ರ ಕೃಪೆ: ಕೆಂಡಸಂಪಿಗೆ)