ಬುಧವಾರ, ಆಗಸ್ಟ್ 26, 2015

ಮತ್ತೆ ಮತ್ತೆ ನೆನಪಾಗುವಿ ಶಾಕುಂತಲೆ...


ನಡು ಮಧ್ಯಾಹ್ನ ಹೊಸ್ತಿಲ
ಮೇಲೆ ಬಿಡುಬೀಸಾಗಿ ಚೆಲ್ಲಿ
ಬೆಳೆಯುವ ಮುನ್ನವೇ ಸಾಯುವ
ನೆರಳ ಕಂಡಾಗೆಲ್ಲಾ ನೀನು
ಮತ್ತೆ ಮತ್ತೆ ನೆನಾಪಾಗುವಿ
ಶಾಕುಂತಲೆ

ಕಾಳಿದಾಸನೇನೋ ನಿನ್ನ
ಬೆಟ್ಟದಷ್ಟಿದ್ದ ಸಹನೆಯ
ದುಶ್ಯಂತನೆಡೆಗೆ ನಿನಗಿದ್ದ
ಅಗಾಧ ಬದ್ಧತೆಯ ಬಗ್ಗೆ
ಪುಟವೆಣಿಸಲು ಬಾರದಷ್ಟು ಬರೆದ

ಆದರೆ ನನಗೇಕೋ ಅವನ
ಮಹಾಕಾವ್ಯದ ಪ್ರತಿ ಸಾಲಿನಲೂ
ನೆರಳು-ಬೆಳಕು, ಮರೆವು-ನೆನಪುಗಳ
ಅಟ್ಟಹಾಸದಲಿ
ಸಾಯದೇ ಬದುಕಿದ ನಿನ್ನ
ನಿಷ್ಪಾಪಿ ಆತ್ಮದ ಕೊನೆಯಿಲ್ಲದ
ಆರ್ತನಾದ ಮಾತ್ರ ಕೇಳಿಸುತಿದೆ

ನೆನಪೇ ಇಲ್ಲವೆಂದಿದ್ದವನ ತೋಳ ತೆಕ್ಕೆಯಲಿ
ನೀ ಮತ್ತೆ ಕರಗಿಹೋಗಬೇಕಾಗಿ ಬಂದಾಗ
ನಿನ್ನ ಸ್ವಾಭಿಮಾನ ಪ್ರತಿಭಟಿಸಿರಲಿಲ್ಲವೇ?
ಇಲ್ಲ ಪ್ರತಿಭಟನೆ ಭರಿಸಲಾರದೆ
ಕುದಿ ಕುದಿದು ಆರಿಹೋದ
ಅಪರಿಮಿತ ಕಂಬನಿಗಳಲಿ
ಅದ ನೀನೇ ಹೂತುಬಿಟ್ಟೆಯಾ?

ದುಶ್ಯಂತನ ಕಣ್ಣಲಿ ತೊನೆಯುತ್ತಿದ್ದ ಅಹಂಕಾರದಲಿ
ಉಂಗುರದ ಪ್ರತಿಬಿಂಬ ಕಂಡು
ನಿನಗೊಮ್ಮೆಯೂ ರೇಜಿಗೆ ಹುಟ್ಟಲೇ ಇಲ್ಲವೇ?
ಇಲ್ಲ ನೆರಳು ಬೆಳೆಯಬಾರದೆಂದು
ಝಾಡಿಸಿ ಒದೆಯುವಷ್ಟಿದ್ದ ರೇಜಿಗೆಯನೂ
ತಣ್ಣನೆಯ ನಗುವಿನಲಿ ಮರೆಸಿಟ್ಟೆಯಾ?

ಬೆಳಕು ಮಾಸುವ ಮುನ್ನ
ನೆರಳು ಕಳೆಯುವ ಮುನ್ನ
ನೆನಪು ಮರೆಯುವ ಮುನ್ನ
ಹೇಳು ಸಖೀ,
ಮತ್ತೆ ಎರಡನೇ ಬಾರಿ ದುಶ್ಯಂತ
ನಿನ್ನೆಡೆಗೆ ಕೈಚಾಚಿದ ನಂತರ
ನೀನೊಮ್ಮೆಯೂ ನಿಡುಸುಯ್ಯಲೇ ಇಲ್ಲವೇ?

ಭಾನುವಾರ, ಆಗಸ್ಟ್ 23, 2015

ಅವಳ ಒಳಗುದಿಗಳನ್ನೂ ಸ್ವಲ್ಪ ಅರ್ಥ ಮಾಡ್ಕೊಳ್ಳಿ ಪ್ಲೀಸ್...

ಆ ಕಡೆಯಿಂದ ಹುಡುಗ ಅಸಹನೆಯಿಂದ ಹೇಳುತ್ತಾನೆ "ಇಷ್ಟು ಹೊತ್ತು  ಯಾರ್ಜೊತೆ ಹರಟೆ ಹೊಡೆಯುತ್ತಿದ್ದೆ, ಆಗದಿಂದ ಫೋನ್ ವೈಟಿಂಗ್ ಬರ್ತಿತ್ತು..". ಈ ಕಡೆಯಿಂದ ಹುಡುಗಿ, ಎರಡೇ ಎರಡು ನಿಮಿಷ ವೈಟಿಂಗ್ ಇದ್ದುದಕ್ಕೆ ಈ ಪರಿ ಅನುಮಾನನಾ ಅಂತಂದುಕೊಳ್ಳುತ್ತಾ ಅದರ ದುಪ್ಪಟ್ಟು ಅಸಹನೆಯಿಂದ "ನಿನಗೇ ಗೊತ್ತಿಲ್ಲದೆ ನನಗೊಬ್ಬ ಬಾಯ್ ಫ್ರೆಂಡ್ ಇದ್ದಾನೆ ಅವನ್ಜೊತೆ ಮಾತಾಡುತ್ತಿದ್ದೆ" ಅನ್ನುತ್ತಾ ಫೋನ್ ಕುಕ್ಕುತ್ತಾಳೆ. ಹತ್ತು-ಹದಿನೈದು ನಿಮಿಷ ಕಳೆಯುವಷ್ಟರಲ್ಲಿ ಇಬ್ಬರಿಗೂ ತಮ್ಮ ತಮ್ಮ ತಪ್ಪಿನ ಅರಿವಾಗುತ್ತದೆ. ಅಥವಾ ಇಬ್ಬರಲ್ಲಿ ಒಬ್ಬರಿಗಾದರೂ ಆಗುತ್ತೆ. ಆ ಕಡೆಯಿಂದ ಅವನು ಅನುನಯಿಸಿಕೊಂಡು ಬರುತ್ತಾನೆ, ಅಥವಾ ಈ ಕಡೆಯಿಂದ ಇವಳು ಅನುನಯಿಸಿಕೊಂಡು ಹೋಗುತ್ತಾಳೆ. ಒಂದು ಸಾರಿ ಕಣೇ/ಣೋ ಗೆ ಮುನಿಸು ಮುಗಿದು ಮತ್ತೆ ಮೊದಲಿನಂತಾಗುತ್ತಾರೆ. ಆದರೆ ಸಂಬಂಧ ಅವರಿಗೇ ಗೊತ್ತಿಲ್ಲದಷ್ಟು ಸೂಕ್ಷ್ಮವಾಗಿ ಬಿರುಕುಬಿಡುತ್ತದೆ, ಅಥವಾ ಬಿರುಕಿಗೆ ಆರಂಭದ ಅಂಕಿತ ಹಾಕಿ ಬಿಡುತ್ತದೆ.

ಹರೆಯವೆಂಬುವುದೇ ಹಾಗೆ. ಕಳ್ಳ ಬೆಳದಿಂಗಳ ಹಾಗೆ ಸದ್ದೇ ಇಲ್ಲದೆ ಮನದ ಹೊಸ್ತಿಲೊಳಗೆ ಬಂದು ಚಕ್ಕಳಮಕ್ಕಳ ಹಾಕಿ ಕುಳಿತುಕೊಂಡುಬಿಡುತ್ತದೆ. ಹಾಗೆ ಸದ್ದಿಲ್ಲದಂತೆ ಹರೆಯ ಬದುಕನ್ನು ಪ್ರವೇಶಿಸಿದಾಗಲೇ ಹರಟೆಗೆ, ಪಿಸುಮಾತಿಗೆ, ಸರಸಕ್ಕೆ, ವಿರಸಕ್ಕೆ, ಗುಟ್ಟುಗುಟ್ಟಾಗಿ ಸಾಂತ್ವನಿಸೋಕೆ, ಮುನಿಸಿಗೆ, ಹುಸಿಕೋಪಕ್ಕೆ, ಸುಳ್ಳೇ ಸುಳ್ಳು ನಾಚೋಕೆ, ನನಗವಳು/ನು ಅಂತ ಸಂಭ್ರಮಿಸೋಕೆ, ಖುಶಿಯಾದಾಗ ಹಂಚಿಕೊಳ್ಳೋದಕ್ಕೆ, ಬೇಜಾರಾದಾಗೆಲ್ಲಾ ಪರಸ್ಪರರನ್ನು ಸಂತೈಸೋಕೆ, ಸುಮ್ಮನೆ ಹೆಗಲಿಗೆ ತಲೆಯಾನಿಸಿ ಕುಳಿತು ಒಂದು ವಿವರಿಸಲಾಗದ ಸೆಕ್ಯೂರ್ ಫೀಲಿಂಗ್ ಅನುಭವಿಸೋಕೆ ಒಬ್ಬ/ಳು ಸಮಾನ ಮನಸ್ಕ ಜೊತೆಗಾತಿ ಬೇಕು ಅಂತ ಮನಸು ವರಾತ ಹಚ್ಚತೊಡಗುತ್ತದೆ. ಆಗಲೇ ಇಷ್ಟವಾದವರ ಮುಂದೆ ನಿಂತು ತಲೆ ತಗ್ಗಿಸಿ, ನೆಲ ಕೆರೆದುಕೊಳ್ಳುತ್ತಾ ಇದ್ದಬದ್ದ ಧೈರ್ಯವನ್ನೆಲ್ಲಾ ಒಟ್ಟು ಸೇರಿಸಿ" ಐ ಲವ್ ಯೂ" ಅಂದುಬಿಡುವುದು. ಅಥವಾ ಅವನು/ಳು ಆಫ್ ಲೈನ್ ಆದಮೇಲೆ "ಐ ಲವ್ ಯೂ" ಅಂತ ವಾಟ್ಸಾಪ್ ಮಾಡಿ ಬೆಳಗ್ಗಿನ ವರೆಗೂ ಅವಳು/ನು ಏನನ್ನುತ್ತಾಳೋ/ನೋ ಅನ್ನುವ ಪ್ರೀತಿ ತುಂಬಿದ ಕುತೂಹಲದಿಂದ ಜಾಗರಣೆ ಮಾಡುವುದು.

ಅವನೋ/ಳೋ ಸಕರಾತ್ಮಕವಾಗಿ ಪ್ರತಿಕ್ರಿಯಿಸಿದರೆ ಅಧಿಕೃತವಾಗಿ ಅವರಿಬ್ಬರು ಪ್ರೇಮಿಗಳಾಗುತ್ತಾರೆ. ಅಂದರೆ ಒಬ್ಬರ ಬಗ್ಗೆ ಇನ್ನೊಬ್ಬರು ಎಗ್ಗಿಲ್ಲದೆ ಕನಸು ಕಾಣೋದು, ಕಣ್ಣಲ್ಲೇ ನೂರು ಮಾತಾಡುವುದು, ಮೌನವಾಗಿದ್ದುಕೊಂಡೇ ಸಂವಹನ ನಡೆಸೋದು, ಸಿಗರೇಟು ಬಿಡು ಅಂತ ಅವಳನ್ನೋದು, ನಾಳೆ ಕ್ರೀಂ ಕಲರ್ ಚೂಡಿದಾರೇ ಹಾಕ್ಕೊಂಡು ಬಾ ಅಂತ ಇವನನ್ನುವುದು ಎಲ್ಲಾ ಆರಂಭವಾಗುವುದು ಆ ಕ್ಷಣದಿಂದಲೇ.

ಇವಿಷ್ಟೂ ಆದ ನಂತರ ಹುಡುಗರು ಹೇಗಿರುತ್ತಾರೋ ಗೊತ್ತಿಲ್ಲ. ಆದ್ರೆ ಹುಡುಗಿಯಂತೂ ಅವತ್ತಿನಿಂದ ತನ್ನಷ್ಟಕ್ಕೆ ತಾನೇ ನಗತೊಡಗುತ್ತಾಳೆ, ದಿನಕ್ಕೆ ನೂರು ಬಾರಿ ’ಮಧುರಾ ಪಿಸುಮಾತಿಗೆ...’ ಹಾಡು ನೋಡುತ್ತಾಳೆ, ಒಬ್ಬಳೇ ಮಾತಾಡಿಕೊಳ್ಳುತ್ತಾಳೆ, "ಕಾಲೇಜಿಂದ ಬರೋಕೆ ಯಾಕೆ ಲೇಟ್ ಆಯ್ತು?" ಅಂತ ಅಮ್ಮ ಕೇಳಿದಾಗ "ಬಸ್ ಲೇಟಮ್ಮಾ" ಅಂತ ಸಲೀಸಾಗಿ ಸುಳ್ಳು ಹೇಳಲು ಕಲಿಯುತ್ತಾಳೆ, ಅವನು ಒಂದಿನ ಫೋನ್ ಮಾಡದಿದ್ರೆ ರಾತ್ರಿಯಿಡೀ ಅತ್ತು, ಬೆಳಗ್ಗೆ ಅಪ್ಪ "ಕಣ್ಣೇಕೆ ಕೆಂಪಾಗಿದೆ ಮಗಳೇ?" ಅಂತ ಕೇಳಿದಾಗ "ವಿಪರೀತ ತಲೆ ನೋವು ಅಪ್ಪಾ" ಎಂದು ಹೇಳಿ ಕಣ್ಣು ತಪ್ಪಿಸಿ ಓಡಾಡುವುದನ್ನು ಕಲಿಯುತ್ತಾಳೆ, ಕೆರೆಯ ಬದಿಯ ಕೆಸರು ಮಣ್ಣಿನಲ್ಲಿ ಉಗುರಿಂದ ಅವನೆಸರು ಗೀಚಿ ಅತ್ತಿತ್ತ ಯಾರೂ ಇಲ್ಲ ಅನ್ನುವುದನ್ನು ಸ್ಪಷ್ಟಪಡಿಸಿಕೊಂಡು ಮೆಲ್ಲನೆ ಮುತ್ತಿಟ್ಟು ತುಟಿಗಂಟಿದ ಕೆಸರು ಒರೆಸಿಕೊಳ್ಳುತ್ತಾಳೆ, ಆಕಾಶದಲ್ಲಿ ಮಿನುಗುತ್ತಿರುವ ನಕ್ಷತ್ರವನ್ನು ಅವನೇ ಅಂದುಕೊಂಡು ಸುಮ್ಮನೇ ನಾಚುತ್ತಾಳೆ, ಕಾಲು ದಾರಿಯಲ್ಲಿ ಹೆಜ್ಜೆ ಹಾಕುವಾಗೆಲ್ಲಾ ಅವನು ಜೊತೆಗಿದ್ದಾನೆಂದು ಭ್ರಮಿಸಿ ನಿಧಾನವಾಗಿ ಹೆಜ್ಜೆ ಎತ್ತಿಡುತ್ತಾಳೆ, ನನ್ನ ಪ್ರೀತಿಯ ವಿಷಯ ಮನೆಯಲ್ಲಿ ಗೊತ್ತಾದರೆ... ಎಂದು ಸುಳ್ಳೇ ಸುಳ್ಳು ಕಲ್ಪಿಸಿಕೊಂಡು ಹೆದರಿಕೊಳ್ಳುತ್ತಾಳೆ, ತುಸು ಹೊತ್ತು ಕಳೆದು ಅವನಿಗೆ ಕರೆ ಮಾಡಿ ತನ್ನ ಭಯದ ಬಗ್ಗೆ ಹೇಳಿ ಅಳುತ್ತಾಳೆ, ಅವನು ಹಾಗೆಲ್ಲಾ ಏನೂ ಅಗುವುದಿಲ್ಲವೆಂದು ಭವಿಷ್ಯ ಹೇಳುತ್ತಾನೆ, ಇವಳು ಅಷ್ಟಕ್ಕೇ ಸಮಾಧಾನ ಪಟ್ಟುಕೊಂಡು "ಐ ಲವ್ ಯೂ ಕಣೋ" ಅಂತಂದು ಫೋನ್ ಕಟ್ ಮಾಡುತ್ತಾಳೆ. 

ಇಷ್ಟೆಲ್ಲಾ ಆಗುವಾಗ ಆರು-ಏಳು ತಿಂಗಳು ಕಳೆದು ಬಿಟ್ಟಿರುತ್ತದೆ. ಆ ವೇಳೆಗಾಗುವಾಗಲೇ ಇವಳ ಪ್ರೀತಿಯ ವಾಸನೆ ಸ್ವಲ್ಪೇ ಸ್ವಲ್ಪ ಮನೆಯವರಿಗೆ ಬಡಿದಿರುತ್ತದೆ. ಅಕ್ಕ ಇಲ್ಲದ ಕಾರಣ ಸೃಷ್ಟಿಸಿಕೊಂಡು ಫೋನ್ ಕೇಳುತ್ತಾಳೆ. ಅಮ್ಮ ಸುಖಾ ಸುಮ್ಮನೆ, ಪ್ರೀತಿಸಿ ಮದುವೆಯಾಗಿ ಮುಂದೆ ಶರಂಪರ ಜಗಳವಾಡಿ ಡೈವೋರ್ಸ್ ಪಡೆದುಕೊಂಡಿರುವುದರ ಬಗ್ಗೆ ಮಾತಾಡತೊಡಗುತ್ತಾರೆ. ಅಪ್ಪ ನೂರು ಮಗನನ್ನಾದರೂ ನೆಮ್ಮದಿಯಿಂದ ಸಾಕಬಹುದು ಆದರೆ ಒಬ್ಬ ಮಗಳನ್ನು ಸಾಕುವುದು ಕಷ್ಟ ಅಂತ ಇವಳಿಗೆ ಕೇಳಬೇಕೆಂದೇ ಲೊಚಗುಟ್ಟತೊಡಗುತ್ತಾನೆ. ಅಲ್ಲಿಗೆ ಮನೆಯಲ್ಲೇನೋ ಏರು ಪೇರು ನಡೆದಿದೆ ಎಂದು ಅವಳಿಗೆ ಸ್ಪಷ್ಟವಾಗುತ್ತದೆ. ಮರುದಿನ ಕಾಲೇಜ್ ಗೆ ಹೋಗಿ ತನ್ನ ಹುಡುಗನಿಗೆ ’ಮನೆಯಲ್ಲಿ ಹೀಗೀಗಾಯ್ತು ಕಣೋ, ಇನ್ಮುಂದೆ ಹುಶಾರಾಗಿರೋಣ’ ಅನ್ನುತ್ತಾಳೆ.

"ಏನೂ ಆಗಲ್ಲ  ಚಿನ್ನಾ" ಅಂತ ಭವಿಷ್ಯ ನುಡಿದಿದ್ದ ಹುಡುಗನೇ ಈಗ "ನಿಂಗೆ ನಂಜೊತೆ ಮಾತಾಡೋಕೆ ಇಷ್ಟ ಇಲ್ಲ, ಅದ್ಕೆ ಹೀಗ್ಮಾಡ್ತಿದ್ದೀಯ" ಅಂದು ಬಿಡ್ತಾನೆ. ಅಲ್ಲಿಗೆ  ’ನನ್ ಹುಡುಗ ತುಂಬಾ ಸ್ಪೆಷಲ್, ಎಲ್ಲರಂತಲ್ಲ, ನನ್ನ ಅರ್ಥ ಮಾಡಿಕೊಳ್ಳುತ್ತಾನೆ’ ಅಂತೆಲ್ಲಾ ಅಂದುಕೊಂಡಿದ್ದ ಹುಡುಗಿಯ ಕನಸು ಚದುರಿ ಚೆಲ್ಲಾಪಿಲ್ಲಿಯಾಗುತ್ತದೆ. ಅತ್ತ ಮನೆಯವರು, ಇತ್ತ ಹುಡುಗ. ಮಧ್ಯೆ ಅಡಕತ್ತರಿಯಲ್ಲಿ ಸಿಲುಕಿದ್ದೇನೆ ಅನಿಸತೊಡಗುತ್ತದೆ. ಸ್ವಲ್ಪ ದುರ್ಬಲ ಮನಸ್ಸಿನವಳಾದರೆ ಆತ್ಮಹತ್ಯೆಯ ಯೋಚನೆಯೂ ಒಮ್ಮೆ ಸುಳಿದು ಹೋಗುತ್ತದೆ.

ತಾನು ಬದಲಾಗಿಲ್ಲ ಅಂತ ಹುಡುಗನಿಗೆ ಸಾಬೀತುಪಡಿಸಬೇಕು ಅನ್ನುವ ತಹತಹದಲ್ಲಿ, ಹಿಂದೆ ಮನೆಯವರಿಗೆ ಗೊತ್ತಾಗಬಾರದೆಂದು ತನಗೆ ತಾನೇ ವಿಧಿಸಿಕೊಂಡಿದ್ದ ಜಾಗರೂಕತೆಗಳನ್ನೆಲ್ಲಾ ಗೊತ್ತೇ ಆಗದಂತೆ ಗಾಳಿಗೆ ತೂರಿ ಬಿಡುತ್ತಾಳೆ. ಸ್ವಲ್ಪವೇ ಸ್ವಲ್ಪ ಅನುಮಾನಿಸಿದ್ದ ಮನೆಯವರು ಮೂರೂ ಹೊತ್ತು ಅವಳು ಫೋನ್ ನಲ್ಲಿ ಮಾತಾಡುವುದನ್ನು ಗಮನಿಸಿಯೂ ಗಮನಿಸದಂತಿದ್ದುಬಿಡುತ್ತಾರೆ. ಆದ್ರೆ ಈ ಹಂತದಲ್ಲಿ ಬೆಡ್ ರೂಮಿನ ಗೋಡೆಗಳಿಗೂ, ಬಾತ್ ರೂಮಿನ ಬಾಗಿಲುಗಳಿಗೂ ಕಿವಿಗಳು ಹುಟ್ಟಿ ಬಿಡುತ್ತವೆ. ಅಷ್ಟೊತ್ತಿಗೆ ಹಿತಮಿತ್ರರು ಯಾರೋ ಅವಳು ಅವನೊಂದಿಗೆ ಇರುವ ವಿಷಯವನ್ನು ದಾಖಲೆ ಸಮೇತ ತಂದೆ, ತಾಯಿಯ ಕಿವಿಗೆ ಹಾಕಿಬಿಟ್ಟಿರುತ್ತಾರೆ.

ಆಮೇಲೆ ಹುಡುಗಿ ಅನುಭವಿಸುವ ಯಾತನೆಗಳು ಅಷ್ಟಿಷ್ಟಲ್ಲ. ಅತ್ತ ಹುಡುಗನನ್ನೂ ಬಿಡಲಾಗದೆ ಇತ್ತ ಮನೆಯವರನ್ನೂ ಬಿಡಲಾಗದ ತ್ರಿಶಂಕು ನರಕ ಅವಳೆದುರು ಸೃಷ್ಟಿಯಾಗುತ್ತದೆ. ಅವನ ಜೊತೆ ಮಾತಾಡಿದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆಂದು ಇಮೋಷನಲ್ ಬ್ಲಾಕ್ ಮೇಲ್ ಮಾಡುವ ಅಮ್ಮ, ನನ್ನ ಮರ್ಯಾದೆಯನ್ನು ಬೀದಿಯಲ್ಲಿ ಹರಾಜು ಹಾಕಲೆಂದೇ ಹುಟ್ಟಿದವಳು ನೀನು ಅಂತ ದಿನಕ್ಕೆ ಹತ್ತು ಸಲ ಹೇಳುವ ಅಪ್ಪ, ಅಪ್ಪ-ಅಮ್ಮನ ಸಾವು ಬದುಕು ನಿನ್ನ ಕೈಯಲ್ಲಿದೆ ಅಂತ ಬೆದರಿಸುವ ಸಂಬಂಧಿಕರು, ಅವಳಿಗೀಗ ತನ್ನ ಅವಶ್ಯಕತೆಯಿದೆ, ಮನೆ ವಾತಾವರಣ ತಿಳಿಯಾಗುವವರೆಗೂ ಸಂಯಮದಿಂದ ಇರಬೇಕೆಂಬ ಕನಿಷ್ಠ ಪ್ರಜ್ಞೆ ಇಲ್ಲದ, ಕ್ಷಣ ಕ್ಷಣಕ್ಕೂ ಅನುಮಾನಿಸುವ ಹುಡುಗ. ಈ ತಾಕಲಾಟಗಳ ಮಧ್ಯೆಯೇ ಒಂದು ದುರ್ಬಲ ಕ್ಷಣದಲ್ಲಿ ಕೊನೆ ಪಕ್ಷ ಮನೆಯವರಾದರೂ ಖುಶಿಯಾಗಿರಲಿ ಅನ್ನುವ ಕಾಳಜಿಗೋ, ಅಸಹಾಯಕತೆಗೋ ತನ್ನತನವನ್ನು, ಖುಶಿಯನ್ನು, ತಾನು ಇಷ್ಟಪಟ್ಟು ಪ್ರೀತಿಸಿದ ಪ್ರೀತಿಯನ್ನು ಕೊಂದುಕೊಂಡು, 'ಅವನೆಂಬ' ಅವಳ ಅಗಾಧ ಕನಸಿಗೆ ಕೊಳ್ಳಿಯಿಟ್ಟು ಮನೆಯವರು ತೋರಿಸಿದ ಹುಡುಗನನ್ನು ಮದುವೆಯಾಗಲು ತಾನು ರೆಡಿ ಅಂದುಬಿಡುತ್ತಾಳೆ. ಇತ್ತ ಹೆತ್ತವರು ಅವಳ ಮನಸು ಮತ್ತೊಮ್ಮೆ ಬದಲಾಗುವ ಮುನ್ನ ಮದುವೆ ಮಾಡಿಬಿಡಬೇಕೆಂದು ತರಾತುರಿಯಲ್ಲಿ ಮದುವೆ ಮಾಡಿ ಮುಗಿಸಿ ಕೈ ತೊಳೆದು ಬಿಡುತ್ತಾರೆ.


  

 ಅತ್ತ ಹುಡುಗ, ಹಿಂದೊಮ್ಮೆ ಅವಳು ಯಾವುದೋ ಅಸಹನೆಯಿಂದ ಬಾಯ್ ಫ್ರೆಂಡ್ ಜೊತೆ ಮಾತಾಡುತ್ತಿದ್ದೆ ಅಂದಿರುವುದನ್ನೇ ನೆಪವಾಗಿಟ್ಟುಕೊಂಡು ಆ ಹುಡುಗನೇ ಇವನು ಅಂತ ಎಣ್ಣೆಗೂ ಸೀಗೆಕಾಯಿಗೂ ಇಲ್ಲದ ಸಂಬಂಧ ಕಲ್ಪಿಸಿ ಹಿಂದು ಮುಂದು ಯೋಚಿಸದೆ ಅವಳಿಗೆ ಖಳನಾಯಕಿಯ ಪಟ್ಟ ಕಟ್ಟಿಬಿಡುತ್ತಾನೆ. ಅದಕ್ಕೆ ಸಾಥ್ ನೀಡುವ ಅವನ ಫ್ರೆಂಡ್ಸ್ ಇನ್ನೊಂದಿಷ್ಟು ಉಪ್ಪು ಖಾರ ಹಚ್ಚಿ "ನಿನ್ನಂತಹ ಒಳ್ಳೆಯ ಹುಡುಗನಿಗೆ ಹೀಗೆ ಮೋಸ ಮಾಡಿದ ಅವಳಿಗೆ ಒಳ್ಳೆಯದಾಗಲ್ಲ" ಅಂತ ಹಿಡಿ ಶಾಪ ಹಾಕುತ್ತಾರೆ. ಅಲ್ಲಿಗೆ ಅವನ ಮನಸ್ಸಲ್ಲಿ ಅವಳ ಚಿತ್ರ ಪ್ರೀತಿ ಕೊಂದ ಕೊಲೆಗಾತಿಯೆಂದು ಶಾಶ್ವತವಾಗಿ ದಾಖಲಾಗಿ ಬಿಡುತ್ತದೆ. ಮೊಬೈಲ್ ಸ್ಕ್ರೀನ್ ನಲ್ಲಿ ’ಪ್ರೀತಿಯಲ್ಲಿ ಮೊದಲಿಗ ನಾನು, ಮೋಸಕ್ಕೆ ಕೊನೆಯವಳು ನೀನಾಗು’ ಅನ್ನುವ ವಾಲ್ ಪೇಪರ್ ರಾರಾಜಿಸತೊಡಗುತ್ತದೆ.

ಮದುವೆಗೆ ಮುನ್ನ ತಮ್ಮ ಅನುಮತಿಯಿಲ್ಲದೆ ಯಾರನ್ನೋ  ಪ್ರೀತಿಸಿದಳು ಅನ್ನುವ ಕಾರಣಕ್ಕೆ ಹೆತ್ತವರ ಪಾಲಿಗೂ ಅವಳು ಖಳನಾಯಕಿ, ಹೆತ್ತವರಿಗೆ ನೋವಾಗದಿರಲೆಂದು ಮದುವೆ ಮಾಡಿಕೊಂಡ ಕಾರಣಕ್ಕೆ ಹುಡುಗನ ಪಾಲಿಗೂ ಅವಳು ಖಳನಾಯಕಿ. ಆದ್ರೆ ನಿಜಕ್ಕೂ ಪ್ರೀತಿ ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ಅವಳಿಗೂ ನೋವಿರುತ್ತದೆ. ಆದರೆ ಅದನ್ನವಳು ಬಹಿರಂಗವಾಗಿ ವ್ಯಕ್ತಪಡಿಸಲಾರಳು ಅಷ್ಟೆ. ಎಲ್ಲವನ್ನೂ ಮರೆತಿದ್ದೇನೆಂದು ಸೋಗು ಹಾಕಿದರೂ ಒಳಗೊಳಗೇ ಕೊರಗುತ್ತಿರುತ್ತಾಳೆ, ಕರಗುತ್ತಿರುತ್ತಾಳೆ. ’ತನ್ನವರು’ ಅಂತ ಸದಾ ತುಡಿಯುವ, ಕಾಳಜಿ ತೋರುವ, ಕನಿಕರಿಸುವ, ಪ್ರೀತಿಸುವ, ಒಲವ ಸುಧೆ ಹರಿಸುವ ಅವಳ ಒಳಗುದಿಗಳನ್ನೂ ಸ್ವಲ್ಪ ಅರ್ಥ ಮಾಡ್ಕೊಳ್ಳಿ ಪ್ಲೀಸ್...           

ಶನಿವಾರ, ಆಗಸ್ಟ್ 15, 2015

ಸ್ವಾತಂತ್ರ್ಯ



ಸ್ಟೇಜ್ ಹತ್ತಿ ಭಾಷಣ ಮಾಡಿ
ಪ್ರೈಝ್ ಗಿಟ್ಟಿಸಿ ನಗೆ ಬೀರಿ
ಹೆಮ್ಮೆಯಿಂದ ’ಜೈ ಹಿಂದ್’ ಅಂದ
ಬಾಲ್ಯದ ಸ್ವಾತಂತ್ರ್ಯವೇಕೋ
ನನ್ನ ಅಣಕಿಸುತ್ತಿದೆ ಇಂದು

ಮರ್ಯಾದಾ ಹತ್ಯೆಯ ಹೆಸರಲಿ
ಜೀವ ಕಳೆದುಕೊಂಡವರ
ಅಪರಿಮಿತ ನೋವುಗಳಲಿ
ಸ್ವಾತಂತ್ರ್ಯ ನಿಟ್ಟುಸಿರು ಬಿಡುತ್ತಿರುವಾಗ

ಕಾಮಪಿಪಾಸುಗಳ ಕರಾಳ ಹಸ್ತದಲಿ
ಮುರುಟಿಹೋದ ಕಂದಮ್ಮಗಳ
ಕಣ್ಣೀರ ಬೇಗೆಯಲಿ
ಸ್ವಾತಂತ್ರ್ಯ ಸದ್ದಿಲ್ಲದೆ ನಲುಗುತ್ತಿರುವಾಗ

ಸಾಲದ ಶೂಲದಲಿರುವ
ಬಡ ರೈತನ ಕರುಳಬೇನೆಯ
ಅಸಹನೀಯ ನಿರಾಸೆಯಲಿ
ಸ್ವಾತಂತ್ರ್ಯ ಆತ್ಮಹತ್ಯೆಗೆಯ್ಯುತಿರುವಾಗ

ದುರ್ಗಮ ಕೊಳ್ಳಗಳ
ಕಲ್ಲು ಕೋರೆಗಳಲಿ
ಜಗವರಿಯದ ಬಾಲಕಾರ್ಮಿಕರು
ರಕ್ತ ಸುರಿಸುತಿರುವಾಗ

ದಿನ ಬೆಳಗಾಗುತ್ತಿದ್ದಂತೆ
ಕಸದ ತೊಟ್ಟಿಯಲಿ
ಹಣ್ಣು ಹಸುಳೆಗಳು
ದಿಕ್ಕಿಲ್ಲದೆ ಕಣ್ಣು ಬಿಡುತ್ತಿರುವಾಗ

ಗಡಿಕಾಯ್ದು ಪ್ರಾಣ ತೆತ್ತ
ವೀರಯೋಧನ ಸಮಾಧಿಯ ಮೇಲೆ
ಅಧಿಕಾರಸ್ಥರು ಅಹಂಕಾರದ
ಠೇಂಕಾರ ಮೊಳಗಿಸುತಿರುವಾಗ

ಉಸಿರುಗಟ್ಟುವ ಭ್ರಷ್ಟಾಚಾರ
ಮೇರೆಮೀರಿರುವ ಅನಾಚರ
ನಜ್ಜುಗುಜ್ಜಾಗಿರುವ ಸಹಿಷ್ಣುತೆಯ
ನಡುವೆ ಸ್ವಾತಂತ್ರ್ಯ ತುಸು
ಉದಾರತೆಗಾಗಿ ಯಾಚಿಸುತಿರುವಾಗ

ಹೇಗೆ ಹೇಳಲಿ ನಾನು ನನ್ನದು
ಸರ್ವಸ್ವತಂತ್ರ ದೇಶವೆಂದು
ಹೇಗೆ ಆರೋಹಿಸಲಿ ನಾನು
ತ್ರಿವರ್ಣವನು ಮುಗಿಲೆತ್ತರಕೆ...?