ಬುಧವಾರ, ಆಗಸ್ಟ್ 26, 2015

ಮತ್ತೆ ಮತ್ತೆ ನೆನಪಾಗುವಿ ಶಾಕುಂತಲೆ...


ನಡು ಮಧ್ಯಾಹ್ನ ಹೊಸ್ತಿಲ
ಮೇಲೆ ಬಿಡುಬೀಸಾಗಿ ಚೆಲ್ಲಿ
ಬೆಳೆಯುವ ಮುನ್ನವೇ ಸಾಯುವ
ನೆರಳ ಕಂಡಾಗೆಲ್ಲಾ ನೀನು
ಮತ್ತೆ ಮತ್ತೆ ನೆನಾಪಾಗುವಿ
ಶಾಕುಂತಲೆ

ಕಾಳಿದಾಸನೇನೋ ನಿನ್ನ
ಬೆಟ್ಟದಷ್ಟಿದ್ದ ಸಹನೆಯ
ದುಶ್ಯಂತನೆಡೆಗೆ ನಿನಗಿದ್ದ
ಅಗಾಧ ಬದ್ಧತೆಯ ಬಗ್ಗೆ
ಪುಟವೆಣಿಸಲು ಬಾರದಷ್ಟು ಬರೆದ

ಆದರೆ ನನಗೇಕೋ ಅವನ
ಮಹಾಕಾವ್ಯದ ಪ್ರತಿ ಸಾಲಿನಲೂ
ನೆರಳು-ಬೆಳಕು, ಮರೆವು-ನೆನಪುಗಳ
ಅಟ್ಟಹಾಸದಲಿ
ಸಾಯದೇ ಬದುಕಿದ ನಿನ್ನ
ನಿಷ್ಪಾಪಿ ಆತ್ಮದ ಕೊನೆಯಿಲ್ಲದ
ಆರ್ತನಾದ ಮಾತ್ರ ಕೇಳಿಸುತಿದೆ

ನೆನಪೇ ಇಲ್ಲವೆಂದಿದ್ದವನ ತೋಳ ತೆಕ್ಕೆಯಲಿ
ನೀ ಮತ್ತೆ ಕರಗಿಹೋಗಬೇಕಾಗಿ ಬಂದಾಗ
ನಿನ್ನ ಸ್ವಾಭಿಮಾನ ಪ್ರತಿಭಟಿಸಿರಲಿಲ್ಲವೇ?
ಇಲ್ಲ ಪ್ರತಿಭಟನೆ ಭರಿಸಲಾರದೆ
ಕುದಿ ಕುದಿದು ಆರಿಹೋದ
ಅಪರಿಮಿತ ಕಂಬನಿಗಳಲಿ
ಅದ ನೀನೇ ಹೂತುಬಿಟ್ಟೆಯಾ?

ದುಶ್ಯಂತನ ಕಣ್ಣಲಿ ತೊನೆಯುತ್ತಿದ್ದ ಅಹಂಕಾರದಲಿ
ಉಂಗುರದ ಪ್ರತಿಬಿಂಬ ಕಂಡು
ನಿನಗೊಮ್ಮೆಯೂ ರೇಜಿಗೆ ಹುಟ್ಟಲೇ ಇಲ್ಲವೇ?
ಇಲ್ಲ ನೆರಳು ಬೆಳೆಯಬಾರದೆಂದು
ಝಾಡಿಸಿ ಒದೆಯುವಷ್ಟಿದ್ದ ರೇಜಿಗೆಯನೂ
ತಣ್ಣನೆಯ ನಗುವಿನಲಿ ಮರೆಸಿಟ್ಟೆಯಾ?

ಬೆಳಕು ಮಾಸುವ ಮುನ್ನ
ನೆರಳು ಕಳೆಯುವ ಮುನ್ನ
ನೆನಪು ಮರೆಯುವ ಮುನ್ನ
ಹೇಳು ಸಖೀ,
ಮತ್ತೆ ಎರಡನೇ ಬಾರಿ ದುಶ್ಯಂತ
ನಿನ್ನೆಡೆಗೆ ಕೈಚಾಚಿದ ನಂತರ
ನೀನೊಮ್ಮೆಯೂ ನಿಡುಸುಯ್ಯಲೇ ಇಲ್ಲವೇ?

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ