ಮಂಗಳವಾರ, ಜನವರಿ 12, 2016

ಸುನೀಲ ವಿಸ್ತರ ತರಂಗಶೋಭಿತ...

ಬಾನಂಚು ಕೆಂಪಾಗಿತ್ತು. ಸೂರ್ಯ ಇನ್ನೇನು ಪಡುವಣದಲ್ಲಿ ಕರಗೇ ಬಿಡುತ್ತೇನೆ ಅನ್ನುವ ಧಾವಂತದಲ್ಲಿ ಕಡಲಿನಾಳಕ್ಕೆ ಇಳಿಯುತ್ತಿದ್ದ. ಕಡಲ ಕಿನಾರೆಯಿಡೀ ಹೊಂಬಣ್ಣದಲ್ಲಿ ತೊಯ್ದು ಹೋಗಿತ್ತು. ದಾರಿ ಬದಿಯ ಹಸಿರು ಕಾಡಿನಲ್ಲೂ ಬಣ್ಣ ಓಕುಳಿಯಾಡಿತ್ತು. ಸೂರ್ಯ ಸಂಪೂರ್ಣವಾಗಿ ಮುಳುಗುವ ಮುನ್ನ ಕಿನಾರೆ ತಲುಪಿಬಿಡಬೇಕೆಂದು ನೇತ್ರಾ ಮಗುವಿನ ಕೈಯನ್ನು ಭದ್ರವಾಗಿ ತನ್ನ ಅಂಗೈಯಲ್ಲಿ ಮುಚ್ಚಿಟ್ಟು ಬೇಗ ಬೇಗ ನಡೆಯುತ್ತಿದ್ದಳು.

ಒಂದು ವಾರದಿಂದಲೂ ಮಗು ಒಂದೇ ಸಮನೆ ಸಮುದ್ರ ನೋಡಬೇಕೆಂದು ಹಠ ಹಿಡಿಯುತ್ತಿತ್ತು. ಏನೇ ಆದರೂ ಸರಿ, ಇವತ್ತು ಮಗುವಿನ ಆಸೆ ಪೂರೈಸಲೇಬೇಕೆಂದು ತನ್ನ ಕೆಲಸಗಳನ್ನೆಲ್ಲಾ ಬೇಗ ಬೇಗನೇ ಮುಗಿಸಿ ಉಳಿದ ಮಕ್ಕಳನ್ನು ಆಯಾ ಕೈಗೊಪ್ಪಿಸಿ ಸಂಜೆಯಾಗುತ್ತಿದ್ದಂತೆ ತೀರ ಹುಡುಕಿ ಬಂದಿದ್ದಳು ನೇತ್ರಾ. ಮಗು ಅಂತಲ್ಲ, ತನಗಾದರೂ ಅಷ್ಟೆ... ಕಡಲೆಂದರೆ, ಅದರ ವಿಸ್ತಾರವೆಂದರೆ ಏನೋ ಒಂದು ಆಕರ್ಷಣೆ. ತನಗೇ ಏಕೆ, ಬಹುಶಃ ಕರವಾಳಿಗರಿಗೆಲ್ಲರಿಗೂ ಈ ತುಡಿತ ಇರಬಹುದೆನೋ ಅಂತಂದುಕೊಳ್ಳುತ್ತಿದ್ದಾಗಲೇ ಅವರಿಬ್ಬರು ಕಡಲ ತೀರ ತಲುಪಿಯಾಗಿತ್ತು.

ಏಕಾಂತವನ್ನರಸುತ್ತಾ ಜನ ಜಂಗುಳಿಯಿಂದ ತುಸು ದೂರ ಹೋಗಿ, ಒಂಟಿ ಕಲ್ಲ ಮೇಲೆ ಕುಳಿತು, ಮಗುವನ್ನೂ ಮಡಿಲಲ್ಲಿ ಕೂರಿಸಿ ಕಡಲು, ಅದರ ಲಯಬದ್ಧ ಅಲೆಗಳ ಅಬ್ಬರ ವೀಕ್ಷಿಸತೊಡಗಿದಳು. ಎತ್ತ ನೋಡಿದರೂ ಜಲ ರಾಶಿ. ಕಡಲಿನ ಸೌಂದರ್ಯಕ್ಕೆ ಮುಕುಟವಿಟ್ಟಂತೆ ನೇಸರ ಹೊಂಬಣ್ಣವನ್ನು ಅದರ ಪೂರ್ತಿ ಚೆಲ್ಲಿ ನಿರಾಳವಾಗಿಬಿಟ್ಟಿದ್ದ. ಎಷ್ಟು ಚೆನ್ನಾಗಿದೆ ಪ್ರಕೃತಿ ಅಂದುಕೊಂಡಳು. ಅವಳ ಯೋಚನಾ ಸರಣಿಯನ್ನು ತುಂಡರಿಸುವಂತೆ ಮಗು "ಯಾಕಮ್ಮಾ ಕಡಲು ಇಷ್ಟೊಂದು ದೊಡ್ಡದಿದೆ?" ಅಂತ ಕೇಳಿತು. ನೇತ್ರಾ "ನಂಗೊತ್ತಿಲ್ಲ ಕಂದಾ" ಎಂದಳು. ಮಗು ಮತ್ತೆ ಕೇಳಿತು "ನಿಂಗೂ ಗೊತ್ತಿಲ್ವಾ?" ಇವಳು "ಉಹೂಂ" ಅಂದು ಮನಸ್ಸಲ್ಲೇ "ಕಡಲು ದೋಡ್ದದಾಗಿರುವುದಷ್ಟೇ ಅಲ್ಲ ಕಂದಾ, ನಮ್ಮ ಕಣ್ಣಿನ ದೃಷ್ಟಿ ಪರಿಧಿಯಾಚೆಗಿರುವುದನ್ನು ದಿಟ್ಟಿಸಲಾರದು, ಅದಕ್ಕೆ ಅದರ ವಿಸ್ತೀರ್ಣ ನಮಗೆ ದಕ್ಕುತ್ತಿಲ್ಲ. ಅದು ಅಮ್ಮನಂತೆ, ಎಷ್ಟು ಅರ್ಥ ಮಾಡಿಕೊಂಡೆ ಅಂದುಕೊಂಡರೂ ಅರ್ಥವಾಗದೇ ಉಳಿದುಬಿಡುವ ಅವಳ ಪ್ರೀತಿಯಂತೆ" ಅಂತ ಹೇಳಿಕೊಂಡಳು. ಮರುಕ್ಷಣ "ಸುನೀಲ ವಿಸ್ತರ ತರಂಗಶೋಭಿತ ಗಂಭೀರಾಂಬುಧಿ ತಾನಂತೆ, ಮುನ್ನೀರಂತೆ ಅಪಾರವಂತೆ" ಅನ್ನುವ ಶಿವರುದ್ರಪ್ಪನವರ ಕವನದ ಸಾಲು ಮನಸ್ಸಲ್ಲೊಮ್ಮೆ ಹಾದು ಹೊಯಿತು.

ತನ್ನ ಯೋಚನೆಗಳಿಂದ ಹೊರಬರಲೆಂಬತೆ ತಲೆ ಕೊಡವಿಕೊಂಡು ತುಸು ದೂರ ದೃಷ್ಟಿ ನೆಟ್ಟಾಗ ಬರಿ ಮರಳ ಮೇಲೆ ಹುಡುಗಿಯೊಬ್ಬಳು ಏನನ್ನೋ ಯೋಚಿಸುತ್ತಾ ಕುಳಿತಿರುವುದು ಕಾಣಿಸಿತು. ಹತ್ತು ವರ್ಷಗಳ ಹಿಂದೆ ನಾನೂ ಹೀಗೆ ಒಂಟಿಯಾಗಿ ಕೂತು ಕಡಲಿನ ಇನ್ನೊದು ತೀರಕ್ಕಾಗಿ ಎಷ್ಟೊಂದು ಹಂಬಲಿಸುತ್ತಿದ್ದೆನಲ್ಲಾ ಅನಿಸಿತು. ಮತ್ತಷ್ಟು ಸೂಕ್ಷ್ಮವಾಗಿ ದಿಟ್ಟಿಸಿದಾಗ ಆಕೆ ಮರಳ ಮೇಲೆ ಏನನ್ನೋ ಬರೆದು, ಅಳಿಸಿ, ಮತ್ತೆ ಬರೆಯುತ್ತಿದ್ದಂತೆ ತೋರಿತು. ಕಣ್ಣಂಚಲ್ಲಿ ತೆಳುವಾಗಿ ನೀರು ಹರಡಿದ್ದರೂ ಹರಡಿರಬಹುದು ಅನಿಸಿತು. ಅಷ್ಟರಲ್ಲಿ ಮಗು ಅವಳ ಕೈ ಹಿಡಿದೆಳೆಯುತ್ತಾ "ಮರಳ ಮನೆ ಮಾಡುವುದನ್ನು ಕಲಿಸಿಕೊಡಮ್ಮಾ" ಅನ್ನತೊಡಗಿತು.

ಹೌದಲ್ವಾ! ಈ ಕಡಲ ತಡಿಯಲಿ ಅದೆಷ್ಟು ಬಾರಿ ನಾನು ಮರಳ ಮನೆಯ ಮಾಡಿ, ಅದಕ್ಕೊಂದು ಚೆಂದದ ಹೆಸರಿಟ್ಟು ಆಟ ಆಡಿದ್ದಿದೆ. ಈಗ ಮರಳು, ಮನೆ, ಅದಕ್ಕೊಂದು ಹೆಸರು ಯಾವುದೂ ಬೇಕೆನಿಸುವುದಿಲ್ಲ.ಹಿಂದೊಮ್ಮೆ ಖುಶಿ ಕೊಡುತ್ತಿದ್ದ ಯಾವ ಸಂಗತಿಗಳೂ ಈಗ ಖುಶಿ ಕೊಡುತ್ತಿಲ್ಲ, ಹಿಂದೆ ಅಳಿಸುತ್ತಿದ್ದ ಯಾವ ಸಂಗತಿಗಳೂ ಈಗ ಅಳಿಸುವುದೂ ಇಲ್ಲ. ಎಷ್ಟು ವಿಚಿತ್ರವಲ್ವಾ ಈ ಬದುಕು? ಅಂತೆಲ್ಲಾ ಅನಿಸುತ್ತಿದ್ದಂತೆ ಅವಳ ಮಡಿಲಿಂದ ಇಳಿದ ಮಗು ಮತ್ತೆ ಅವಳ ಕೈ ಹಿಡಿದೆಳೆಯತೊಡಗಿತು.

ಇವತ್ತೇಕೆ ನಾನು ಇಷ್ಟೊಂದು ನೆನಪುಗಳಲ್ಲಿ ಮುಳುಗಿ ಹೋಗುತ್ತಿದ್ದೇನೆ ಅಂದುಕೊಳ್ಳುತ್ತಲೇ ಅವಳು ಮಗಳನ್ನು ಹಿಂಬಾಲಿಸತೊಡಗಿದಳು. ಮಗು ಮೈಕೈಗೆಲ್ಲಾ ಮರಳು ಮೆತ್ತಿಕೊಂಡು ಮನೆ ಮಾಡುತ್ತಿದ್ದರೆ ನೇತ್ರಾಳ ಕಣ್ಣು ಮತ್ತೆ ಆ ಹುಡುಗಿಯತ್ತ ಹೊರಳಿತು. ಶೂನ್ಯದಲ್ಲಿ ಎಲ್ಲೋ ಕಳೆದುಹೋದಂತಿದ್ದಳವಳು. ಕಣ್ಣ ಚಕ್ರತೀರ್ತದಲ್ಲಿ ದುಖಃ ಮಡುಗಟ್ಟಿತ್ತು. ಮುಖದಲ್ಲಿ ಆಗೊಮ್ಮೆ, ಈಗೊಮ್ಮೆ ವ್ಯಕ್ತವಾಗುತ್ತಿದ್ದ ಭಾವ ಯಾವುದು? ನಿರಾಸೆಯೋ? ಬೇಸರವೋ? ಅಸಹಾಯಕತೆಯೋ? ನಿರ್ಧರಿಸಲಾಗಲಿಲ್ಲ.

ಆಡುತ್ತಿದ್ದ ಮಗುವನ್ನು ಅಲ್ಲೆ ಬಿಟ್ಟು ಅವಳ ಬಳಿ ಹೋಗಿ "ಯಾರು ನೀನು? ನಿನ್ನ ಹೆಸರೇನು? ಒಂಟಿಯಾಗಿ ಇಲ್ಲೇನು ಮಾಡುತ್ತಿದ್ದಿ?" ಅಂತ ಕೇಳಿದಳು. ಆಕೆ " ಮಾನ್ವಿ" ಅಂತಷ್ಟೇ ಹೇಳಿ, ಉಳಿದ ಪ್ರಶ್ನೆಗಳಿಗೂ ತನಗೂ ಯಾವುದೇ ಸಂಬಂಧವಿಲ್ಲ ಅನ್ನುವ ಭಾವವನ್ನು ಮುಖದಲ್ಲೇ ವ್ಯಕ್ತಪಡಿಸಿ ಮತ್ತೆ ಶೂನ್ಯದಲ್ಲಿ ಕಳೆದುಹೋದಳು.

ಇನ್ನಿವಳನ್ನು ಮಾತಾಡಿಸಿ ಪ್ರಯೋಜನವಿಲ್ಲವೆಂದು ಅರಿತ ನೇತ್ರಾ ಅವಳ ಪಕ್ಕದಲ್ಲೇ ಕೂತು "ನಿನ್ನ ನೋಡುತ್ತಿದ್ದರೆ ಒಂದಿಷ್ಟು ವರ್ಷಗಳ ಹಿಂದಿನ ನನ್ನನ್ನೇ ನೋಡಿದಂತಾಗುತ್ತದೆ. ಹತ್ತು ವರ್ಷಗಳ ಹಿಂದೆ ನಿನ್ನಂತೆಯೇ ನಾನೂ ಮುಖದಲ್ಲಿ ಅಭೋದ ಕಳೆಹೊತ್ತು ಹೀಗೆಯೇ ಕಡಲ ಕಿನಾರೆಯಲ್ಲಿ ಬಂದು ಕುಳಿತುಕೊಳ್ಳುತ್ತಿದ್ದೆ. ಅಲೆಗಳ ರುದ್ರ ರಮಣೀಯತೆಯ ಮುಂದೆ ನನ್ನನ್ನು ನಾನೇ ಕಳೆದುಕೊಳ್ಳುತ್ತಿದ್ದೆ. ನನ್ನ ಕಣ್ಣುಗಳಲ್ಲಿ ಮೂಡುವ ಸಾವಿರದ ಕನಸುಗಳನ್ನು ಇದೇ ಕಡಲ ಮುಂದೆ ನಿಂತು ಹೇಳಿಕೊಳ್ಳುತ್ತಿದ್ದೆ. ನೀನೀಗ ಕೂತಿದ್ದಿಯಲ್ಲಾ ಅಲ್ಲೇ ಮರಳ ಮನೆ ಮಾಡಿ ಸಂಭ್ರಮಿಸುತ್ತಿದ್ದೆ" ಅಂದಳು. ಮಾನ್ವಿ ಅದಕ್ಕೆ ನಾನೀಗ ಎನ್ನು ಮಾಡಬೇಕು ಅನ್ನುವ ಭಾವದಲ್ಲಿ ಅವಳಿಂದ ತುಸು ದೂರ ಸರಿದು ಮತ್ತದೇ ಮರಳ ಮೇಲೆ ಕೂತಳು.

ನೇತ್ರಾ "ಹೆಜ್ಜೆ ಮೂಡದ ಹಾದಿಯಲ್ಲಿ ಅದೆಷ್ಟು ಗಾವುದ ದೂರ ನಡೆದರೂ ಪ್ರಯೋಜನವಿಲ್ಲ" ಅನ್ನುತ್ತಾ ಅವಳ ಬಳಿ ಹೋಗಿ "ನಿನ್ನ ಸಮಸ್ಯೆಯೇನೆಂದು ನನಗೊತ್ತಿಲ್ಲ, ಆದ್ರೆ ಖಂಡಿತಾ ನಿನ್ನ ದುಗುಡಗಳನ್ನು ಅರ್ಥ ಮಾಡಿಕೊಳ್ಳಬಲ್ಲೆ" ಅಂದಳು. ಮಾನ್ವಿ ವ್ಯಂಗ್ಯವಾಗಿ "ಅರ್ಥ ಮಾಡ್ಕೊಂಡು ಆಮೇಲೇನು ಮಾಡ್ತೀರಿ?" ಅಂತ ಪ್ರಶ್ನಿಸಿದಳು. ಅವಳ ಪ್ರಶ್ನೆಯಲ್ಲಿದ್ದ ಅಮಾಯಕತೆಗೆ ಒಳಗೊಳಗೇ ನಗುತ್ತಾ ಮತ್ತಷ್ಟು ಅವಳ ಬಳಿ ಸರಿದು "ಏನೂ ಮಾಡಲ್ಲ" ಅಂದಳು. ಮಾನ್ವಿ "ನಾನಿಲ್ಲಿ ಸಾಯೋಕೆ ಬಂದಿದ್ದೇನೆ" ಅನ್ನುತ್ತಾ ಅವಳ ಪ್ರತಿಕ್ರಿಯೆಯೇನು ಎಂಬಂತೆ ಅವಳತ್ತ ದಿಟ್ಟಿಸಿದಳು. ಅದೇನೂ ದೊಡ್ಡ ಸಂಗತಿಯಲ್ಲವೆಂಬಂತೆ ನೇತ್ರಾ "ಹೌದಾ? ಸರಿ. ಸಾಯಬೇಕೆಂಬ ನಿರ್ಧಾರ ತಗೊಂಡಮೇಲೆ ಅದನ್ನು ಪ್ರಶ್ನಿಸುವ ಅಧಿಕಾರ ನನಗೆಲ್ಲಿದೆ? ಸಾಯುವಂತಹ ಕಷ್ಟ ನಿನಗೇನಿದೆಯೋ ಏನೋ? ಇಷ್ಟಕ್ಕೂ ಸಾಯಹೊರಟವರನ್ನು ತಡೆದು ಬದುಕಿಸುವ ಇರಾದೆಯೂ ನನಗಿಲ್ಲ" ಅಂತಂದು ಮೌನವಾದಳು.

ಮಾನ್ವಿ ತುಸು ಅಚ್ಚರಿಯಿಂದ "ಹಾಗಾದ್ರೆ ನಾನು ಸಾಯ್ಲಾ?" ಅಂತ ಮತ್ತೆ ಪ್ರಶ್ನಿಸಿದಳು. ನೇತ್ರಾ "ಹುಂ. ಸಾಯುವುದೇ ನಿನ್ನ ನಿರ್ಧಾರವೆಂದಮೇಲೆ ನಾನದನ್ನು ತಡೆಯೋದಿಲ್ಲ. ಆದ್ರೆ ಇಷ್ಟೊಂದು ಜನಜಂಗುಳಿ ಇರುವಾಗ ಸಮುದ್ರಕ್ಕೆ ಹಾರಿದ್ರೆ ಯಾರದ್ರೂ ನಿನ್ನ ಬದುಕಿಸಬಹುದು. ಅದಕ್ಕೇ ಈ ಕಿನಾರೆ ನಿರ್ಜನವಾಗುವವರೆಗೂ ನನ್ನ ಕಥೆ ಹೇಳುತ್ತೇನೆ. ಕೇಳುತ್ತಿಯಾ?" ಅಂತ ಮರು ಪ್ರಶ್ನಿಸಿದಳು. ಮಾನ್ವಿ ಸುಮ್ಮನೆ ತಲೆಯಾಡಿಸಿದಳು.

ನೇತ್ರಾ ಹೇಳತೊಡಗಿದಳು "ಇಲ್ಲಿಂದ ತುಂಬಾ ದೂರ ಇರುವ ಒಂದು ಪುಟ್ಟ ಹಳ್ಳಿಯಲ್ಲಿ ಹುಟ್ಟಿದವಳು ನಾನು. ಮನೆಗೆ ಮೊದಲನೇ ಮಗು. ಹುಟ್ಟಿ ಮೂರು ತಿಂಗಳಾಗುವಷ್ಟರಲ್ಲಿ ಅಪ್ಪ ತೆಂಗಿನ ಮರದಿಂದ ಬಿದ್ದು ಸತ್ತು ಹೋದ. ಅಪ್ಪ ಅಂದ್ರೆ ಏನು ಅನ್ನುವುದು ಅರ್ಥವಾಗುವ ಮೊದಲೇ ’ಅಪ್ಪನಿಲ್ಲದ ಮಗು’ ಅನ್ನುವ ಹಣೆಪಟ್ಟಿ ನನಗೆ ಅಂಟಿತ್ತು. ಅಪ್ಪ ಸತ್ಮೇಲೆ ನನ್ನ ಬೆಳೆಸಲು ಅಮ್ಮ ಪಟ್ಟ ಕಷ್ಟ ಅಷ್ಟಿಷ್ಟಲ್ಲ.

ಆಗಷ್ಟೇ ಹೆರಿಗೆ, ಬಾಣಂತನ ಮುಗಿಸಿದ್ದ, ಮೈಯ ಹಸಿ ಇನ್ನೂ ಆರಿರದ ಅಮ್ಮ ನನ್ನನ್ನು ಬೆನ್ನಿಗೆ ಕಟ್ಟಿಕೊಂಡು ಅರ್ಧ ಮೈಲು ದೂರದ ಸಾಹುಕಾರರ ಮನೆಗೆ ಕೆಲಸಕ್ಕೆ ಹೋಗುತ್ತಿದ್ದಳಂತೆ. ಅವರ ತೋಟದಲ್ಲಿ ಒಂದು ಮರದ ಕೆಳಗೆ ನನ್ನನ್ನು ಮಲಗಿಸಿ ಹನಿಗಣ್ಣಾಗುತ್ತಲೇ ಕೆಲಸ ಮಾಡುತ್ತಿದ್ದಳಂತೆ. ಬೆಚ್ಚನೆಯ ಮನೆಯಲ್ಲಿ ಹಾಲು ಚೀಪುತ್ತಾ ತೊಟ್ಟಿಲಲ್ಲಿ ಮಲಗಿರಬೇಕಾದ ಮಗು ತೋಟದ ಮಧ್ಯೆ ಹರಕಲು ಚಾಪೆಯಲ್ಲಿ ಬೆರಳು ಚೀಪುತ್ತಾ ಮಲಗಿರಬೇಕಾದರೆ ತಾಯಿ ಕರುಳಿಗೆ ಅದೆಷ್ಟು ಸಂಕಟವಾಗಿರಬಹುದು? ಈಗ ಅದೆಲ್ಲಾ ಯೋಚಿಸಲೂ ತುಂಬಾ ಕಷ್ಟವಾಗುತ್ತದೆ.

ಬುದ್ಧಿ ತಿಳಿದಾಗಿಂದಲೂ ಅಮ್ಮನ ನಗುವಿಗಿಂತಲೂ ಕಣ್ಣೀರನ್ನೇ ಹೆಚ್ಚು ಕಂಡವಳು ನಾನು. ನನಗೆ 4-5 ವರ್ಷವಾಗುತ್ತಿದ್ದಂತೆ ಅಮ್ಮ ನನ್ನನ್ನು ಮನೆಯಲ್ಲೇ ಬಿಟ್ಟು ಒಬ್ಬಳೇ ಕೆಲಸಕ್ಕೆ ಹೋಗತೊಡಗಿದಳು. ನಾನು ಹೊಸ ಬಟ್ಟೆ, ಆಟಿಕೆ ಅಂತ ಅಳುತ್ತಿದ್ದಾಗೆಲ್ಲಾ ಆಕೆ ಆಕಾಶ ನೋಡಿ ನನಗೇಕಪ್ಪಾ ಇಂತಹ ಶಿಕ್ಷೆ ಅಂತ ಕಣ್ಣೀರಾಗುತ್ತಿದ್ದುದು ನನಗೀಗಲೂ ಕಣ್ಣಿಗೆ ಕಟ್ಟಿದಂತಿದೆ.

ಅದೇನಾಯ್ತೋ ಗೊತ್ತಿಲ್ಲ, ಒಂದಿನ ಸಂಜೆ ಕೆಲಸದಿಂದ ಧುಮುಗುಟ್ಟುತ್ತಾ ಬಂದವಳೇ, ಗುಡಿಸಲು ಖಾಲಿ ಮಾಡಿ, ನನ್ನನ್ನೂ ಕಟ್ಟಿಕೊಂಡು ರಾತ್ರೋ ರಾತ್ರಿ ಊರು ಬಿಟ್ಟು ಈ  ಊರಿಗೆ ಬಂದ್ಳು. ತೀರಾ ಸಣ್ಣವಳಿದ್ದಾಗ ಈ ಬಗ್ಗೆ ಕೇಳಿದಾಗೆಲ್ಲಾ ಎರಡೇಟು ಹೊಡೆದು ನನ್ನ ಸುಮ್ಮನಾಗಿಸುತ್ತಿದ್ದಳು, ದೊಡ್ಡವಳಾದಮೇಲೆ ಪ್ರಶ್ನಿಸಿದಾಗೆಲ್ಲಾ ಆಕೆ ಸುಮ್ಮನೆ ಆಕಾಶ ದಿಟ್ಟಿಸುತ್ತಾ ಮಾತು ಮರೆಸುತ್ತಿದ್ದಳು. ಇವತ್ತಿಗೂ ನನಗೆ ಅವಳೇಕೆ ಊರು ಬಿಟ್ಟು ಬಂದಳು, ಬರುವಂಥದ್ದು ಅಲ್ಲೇನಾಯ್ತು ಅನ್ನುವುದು ಗೊತ್ತಿಲ್ಲ.

ಈ ಊರಿಗೆ ಬಂದಮೇಲೆ ಅಮ್ಮನಲ್ಲಾದ ಬಹುದೊಡ್ಡ ಬದಲಾವಣೆಯೆಂದರೆ ಅವಳ ಸಿಡುಕು. ಸದಾ ಎಲ್ಲರನ್ನೂ ನಗುನಗುತ್ತಲೇ ಮಾತಾಡಿಸುತ್ತಿದ್ದ, ಸಹನೆಯ ಅಪರಾವತಾರ ಎಂಬಂತಿದ್ದ ಅಮ್ಮ ಇಲ್ಲಿ ಎಲ್ಲರ ಮೇಲೂ ರೇಗಾಡುತ್ತಿದ್ದಳು. ಅಕ್ಕ ಪಕ್ಕದ ಮನೆಯ ಯಾರ ಬಳಿಯೂ ಹೆಚ್ಚು ಮಾತಾಡುತ್ತಲೇ ಇರಲಿಲ್ಲ. ಎಲ್ಲರ ಮಧ್ಯೆ ಇದ್ದೂ ಆಕೆ ದ್ವೀಪದಂತಿದ್ದಳು. ಯಾಕಮ್ಮಾ ಹೀಗೆ ಅಂತ ಪ್ರಶ್ನಿಸಿದರೆ ನನ್ನ ಬರಸೆಳೆದು ತಬ್ಬಿಕೊಂಡು ಹೀಗಿದ್ದರೇ ಚೆನ್ನ, ಇಲ್ಲಾಂದ್ರೆ ಜನ ಹರ್ಕೊಂಡು ತಿನ್ತಾರೆ ಮಗಾ, ನೀನೂ ಹೀಗೆ ಇರ್ಬೇಕು ಅನ್ನುತ್ತಿದ್ದಳು. ನನಗೆ ಅವಳೇನು ಹೇಳುತ್ತಿದ್ದಾಳೆ ಅನ್ನುವುದು ಅರ್ಥವಾಗದೇ ಅವಳ ಮುಖವನ್ನೆ ದಿಟ್ತಿಸುತ್ತಾ ಕುಳಿತುಕೊಳ್ಳುತ್ತಿದ್ದೆ.

ಹೀಗಿದ್ದ ಅಮ್ಮ ಒಂದಿನ, ನನ್ನನ್ನು ಊರ ಹೊರಗಿದ್ದ ಸರಕಾರಿ ಶಾಲೆಗೆ ದಾಖಲು ಮಾಡಿ ಬಂದಿದ್ದಳು. ಬಹುಶಃ ಅವತ್ತವಳು ತುಸು ಭಾವುಕಳಾಗಿದ್ದಳು. ನಾನು ಶಾಲೆಯಲ್ಲಿ ಕೂರಲಾರೆ ಎಂದು ರಚ್ಚೆ ಹಿಡಿದಾಗ ಕಲೀಬೇಕು ಮಗಾ, ನನ್ನಂತಾಗಬಾರದು. ಒಂದು ಹೊತ್ತಿನ ತುತ್ತಿಗೆ ಇನ್ನೊಬ್ಬರ ಮುಂದೆ ಕೈ ಚಾಚುವಂತಾಗಬಾರದು ಅಂದಿದ್ದಳು. ನನಗವತ್ತು ಅವಳ ಮಾತು ಎಷ್ಟರ ಮಟ್ಟಿಗೆ ಅರ್ಥವಾಗಿತ್ತೋ ಗೊತ್ತಿಲ್ಲ ಆದ್ರೆ ಓದಿನ ವಿಷಯದಲ್ಲಿ ನಾನು ಅವಳಿಗೆಂದೂ ನಿರಾಶೆ ಮಾಡಿದವಳೇ ಅಲ್ಲ.

ದಿನ ಕಳೆಯುತ್ತಿದ್ದಂತೆ ಅಮ್ಮ ಈ ಊರಿನವಳೇ ಆಗಿ ಹೋದಳು. ಕೆಕ್ಕರಿಸಿ ನೋಡುತ್ತಿದ್ದ ಸಮಾಜವನ್ನೇ ಧಿಕ್ಕರಿಸುವಂತಹ ಭಂಡತನ ಬೆಳೆಸಿಕೊಂಡಳು. ಇತ್ತ ನಾನೂ ಓದು ಮುಗಿಸಿ ಕೆಲಸಕ್ಕೆ ಸೇರಿಕೊಂಡೆ. ಅವತ್ತವಳು ತನ್ನ ಎಂದಿನ ಸಿಡುಕನ್ನು ಬಿಟ್ಟು ಇಡೀ ಕೇರಿಗೆ ಸಿಹಿ ಹಂಚಿದ್ದಳು. ನಾನು ಹುಟ್ಟಿದಂದಿನಿಂದ ಅವತ್ತಿನವರೆಗೆ ಅವಳು ಮನಸ್ಪೂರ್ತಿಯಾಗಿ ನಕ್ಕಿರುವುದನ್ನು ಅದೇ ಮೊದಲ ಬಾರಿ ನೋಡಿದೆ; ಬಹುಶಃ ಕೊನೆಯ ಬಾರಿ ಕೂಡ.

ಆಯ್ತಲ್ಲಾ, ಕೆಲಸಕ್ಕೆ ಸೇರಿದೆ ಅಂದ್ನಲ್ಲಾ...? ಅವತ್ತಿಂದ ಆರಂಭವಾದದ್ದು ನನ್ನ ಬದುಕಿನ ವಿನಾಶ ಪರ್ವ. ತಾನು ದುಡಿಯುವವಳು ಅನ್ನುವ ಧಿಮಾಕು ಮೊದಲು ತಲೆಗೇರಿತು, ಅದರ ಬೆನ್ನಲ್ಲೇ ಅಮ್ಮ ಔಟ್ ಡೇಟೆಡ್ ಅನಿಸತೊಡಗಿದಳು. ಮೊಣಕಾಲವರೆಗೆ ಸೀರೆ ಎತ್ತಿಕಟ್ಟಿಕೊಳ್ಳುತ್ತಿದ್ದ ಅಮ್ಮನನ್ನು ಸಹೋದ್ಯೋಗಿಗಳಿಗೆ, ಸ್ನೇಹಿತರಿಗೆ ಪರಿಚಯಿಸುವುದೇ ಅವಮಾನ ಎಂದು ಅನ್ನಿಸಲಾರಂಭಿಸಿತು.

ಈ ಮಧ್ಯೆ ಸಹೋದ್ಯೋಗಿ ಒಬ್ಬರ ಜೊತೆಗಿದ್ದ ಪರಿಚಯ ಸ್ನೇಹವಾಯ್ತು, ಸ್ನೇಹ ಪ್ರೀತಿಯಾಯ್ತು. ಒಂದಿನ ಅಮ್ಮನ ಮುಂದೆ ಬಂದು ನಿಂತು ನಾವಿಬ್ಬರು ಮದುವೆ ಮಾಡಿಕೊಳ್ಳುತ್ತೇವೆ ಅಂದೆ. ಅಮ್ಮ ಬೇಡ ಅಂದ್ಳು, ಅತ್ಳು, ಕೈ ಮುಗಿದ್ಳು, ನನಗಿಂತ ವಯಸ್ಸಲ್ಲಿ ದೊಡ್ಡವಳು ಅನ್ನುವುದನ್ನೂ ಮರೆತು ಕಾಲಿಗೆ ಬಿದ್ದು ಬೇಡ್ಕೊಂಡ್ಳು. ನನಗೆ ಔಟ್ ಡೇಟೆಡ್ ಅಮ್ಮನ ಕೂಗು ಕೇಳಿಸಲೇ ಇಲ್ಲ.

ಒಂದು ದೇವಸ್ಥಾನದಲ್ಲಿ ನಾವಿಬ್ಬರೂ ಮದುವೆಯಾಗಿ ಅಮ್ಮನ ಮುಂದೆ ಬಂದು ನಿಂತೆವು. ಅಮ್ಮ ಗತ್ಯಂತರವಿಲ್ಲದೆ ನಮ್ಮನ್ನು ಒಪ್ಪಿಕೊಂಡಳು ಅಥವಾ ಹಾಗೆ ನಟಿಸಿ ಮನಸ್ಸಲ್ಲೇ ಕೊರಗುತ್ತಿದ್ದಳು. ಅದೇ ಕೊರಗಲ್ಲಿ ಹಾಸಿಗೆ ಹಿಡಿದಳು. ನನಗೆ ಅವಳ ಬಗ್ಗೆ ಅಸಡ್ಡೆ ಬೆಳೆಯತೊಡಗಿತು.  ಮತ್ತೊಂದಿಷ್ಟು ದಿನಗಳು ಕಳೆದ ಮೇಲೆ ಅವಳಿಗೆ ಪಾರ್ಶ್ವವಾಯು ಬಡಿಯಿತು. ಆಗಂತೂ  ಅವಳು ಮಾತು, ಕಥೆ, ಸಿಡುಕು ಏನೂ ಇಲ್ಲದೆ ಜೀವಚ್ಛಯವಾಗಿ ಹಾಸಿಗೆಯಲ್ಲೇ ಇರತೊಡಗಿದಳು. ಒಂದು ಅಗುಳು ಗಂಟಲೊಳಗೆ ಇಳಿಯಬೇಕಿದ್ದರೂ ನನ್ನ ನೆರವು ಅವಳಿಗೆ ಬೇಕಿತ್ತು.

ನಾನು ಅವಳಿಗಾಗಿ ಮರುಕ ಪಡಲಿಲ್ಲ, ಕರುಣೆ ತೋರಲಿಲ್ಲ, ಮಗುವಂತೆ ನೋಡಿಕೊಳ್ಳಲಿಲ್ಲ, ಬದಲಾಗಿ ಅಸಹ್ಯಿಸತೊಡಗಿದೆ. ನನ್ನ ಸುಖ ಬದುಕಿಗೆ ಅವಳು ಅಡ್ದಿ ಎಂದು ಅವಳನ್ನು ಮೂದಲಿಸತೊಡಗಿದೆ. ಕೊನೆಗೊಂದಿನ, ಒಂದೊಮ್ಮೆ ನನಗೆ ಗಂಜಿ ಕುಡಿಸಿ ತಾನು ಅರೆಹೊಟ್ಟೆಯಲ್ಲಿರುತ್ತಿದ್ದ ಅಮ್ಮನನ್ನು, ನಾನು ಓದಿ ಮುಗಿಸುವವರೆಗೂ ಚಿಮಿಣಿ ದೀಪಕ್ಕೆ ಎಣ್ಣೆ ಹೊಯ್ಯುತ್ತಲೇ ರಾತ್ರಿ ಬೆಳಗಾಗಿಸುತ್ತಿದ್ದ ಅಮ್ಮನನ್ನು, ನನಗೋಸ್ಕರ ತನ್ನ ಗಂಡ ಬಾಳಿದ್ದ ಊರನ್ನೇ ಬಿಟ್ಟು ಬಂದ ಅಮ್ಮನನ್ನು ವೃದ್ಧಾಶ್ರಮದಲ್ಲಿ ಬಿಟ್ಟು ಬಂದೆ. ದಾರಿಯುದ್ದಕ್ಕೂ ನಾನವಳಿಗೆ ಅವಳನ್ನಲ್ಲಿ ಎಷ್ಟು ಚೆನ್ನಾಗಿ ನೋಡಿಕೊಳ್ಳುತ್ತಾರೆ ಅನ್ನುವುದನ್ನು ವಿವರಿಸುತ್ತಲೇ ಹೋದೆ. ಅವಳ ಕಣ್ಣುಗಳು ನಿರ್ಭಾವುಕವಾಗಿದ್ದವು.

ಅಮ್ಮನನ್ನು ವೃದ್ಧಾಶ್ರಮಕ್ಕೆ ಸೇರಿಸಿದ ಮೇಲೆ ಮನೆಯಲ್ಲಿ ನಾನು ಮತ್ತು ನನ್ನ ಗಂಡ ಇಬ್ಬರೇ. ಆ ಬದುಕು ತುಂಬಾ ಚೆನ್ನಾಗಿತ್ತು. ಸ್ವರ್ಗಕ್ಕೆ ಮೂರೇ ಗೇಣು ಅಂತಾರಲ್ವಾ ಹಾಗಿತ್ತು. ಕೈ ತುಂಬಾ ಕೆಲಸ, ಗಂಡನ ಸಾನಿಧ್ಯ ನನಗೆ ಹಿಂದೆಂದೂ ಕಂಡರಿಯದಂತಹ ಖುಶಿ ನೀಡಿತ್ತು. ಆ ಖುಶಿ ಹಳೆ ಬದುಕನ್ನೂ, ಅದರಲ್ಲಿ ಅಮ್ಮನನ್ನೂ ಸಂಪೂರ್ಣವಾಗಿ ಮರೆಸಿತ್ತು.

ಆದ್ರೆ ಅಮ್ಮನೊಂದಿಗೆ ನಾನು ನಡೆದುಕೊಂಡ ರೀತಿಗೆ, ಕೇವಲ ನನ್ನ ಆಸರೆಯನ್ನಷ್ಟೇ ಬಯಸಿದ್ದ ಅವಳನ್ನು ವೃದ್ಧಾಶ್ರಮಕ್ಕೆ ಅಟ್ಟಿದ ಕ್ರೌರ್ಯಕ್ಕೆ ನಾನು ಒಂದಲ್ಲ ಒಂದು ದಿನ ಕಂದಾಯ ಕಟ್ಟಲೇಬೇಕಿತ್ತು. ಬದುಕು ನಿರ್ದಯವಾಗಿ ನನ್ನಿಂದ ಕಂದಾಯ ಕಟ್ಟಿಸಿಯೇಬಿಟ್ಟಿತು. ಅಮ್ಮನಿಲ್ಲದ ಬದುಕು ಸುಂದರ ಅನ್ನಿಸುತ್ತಿದ್ದಂತೆಯೇ ಅತ್ತ ಗಂಡನ ನಡವಳಿಕೆ ನಿಧಾನವಾಗಿ ಬದಲಾಗತೊಡಗಿತು. ಗೆಳೆಯರು, ಪಾರ್ಟಿ ಅಂತ ಮನೆಯಿಂದ ಹೆಚ್ಚು ಹೊರಗೇ ಇರತೊಡಗಿದ. ತಡರಾತ್ರಿ ಮನೆಗೆ ಬರುವುದು, ವಿಪರೀತ ಕುಡಿಯುವುದು ಎಲ್ಲಾ ಶುರು ಹಚ್ಚಿಕೊಂಡ. ಪ್ರಶ್ನಿಸಹೋದರೆ ಎಲ್ಲಾ ನಿನ್ನಿಂದಲೇ ಅನ್ನುತ್ತಿದ್ದ. ಕಣ್ಣೀರು ನನ್ನ ನಿತ್ಯ ಸಂಗಾತಿಯಾಯ್ತು. ಆದ್ರೆ ಮಾನ್ವಿ, ಆಗ್ಲೂ ನಂಗೆ ಅಮ್ಮ ನೆನಪಾಗ್ಲೇ ಇಲ್ಲ ನೋಡು.

ಈ ಮಧ್ಯೆ ಒಂದು ಮುಂಜಾನೆ ತಲೆಸುತ್ತು, ವಾಂತಿಯಾಗಿ ಒಂದು ಹೆಜ್ಜೆಯೂ ಮುಂದಿಡಲಾರದಷ್ಟು ನಿಶ್ಯಕ್ತಿಯಾಯಿತು. ಮನೆಯಲ್ಲಿ ನನ್ನ ಬಿಟ್ಟು ಮನುಷ್ಯರು ಅಂತ ಯಾರೂ ಇರ್ಲಿಲ್ಲ. ಹೇಗೂ ಕಷ್ಟಪಟ್ಟು ಪಕ್ಕದ ಮನೆಯಲ್ಲಿದ್ದ ಡಾಕ್ಟರ್ ಅನ್ನು ಮನೆಗೆ ಕರೆಸಿದೆ, ನನ್ನ ಪರೀಕ್ಷಿಸಿದ ಅವರು ನಾನು ಅಮ್ಮನಾಗುತ್ತಿದ್ದೇನೆ ಅಂದ್ರು. ನಾನು ನನ್ನ ನಿಶ್ಯಕ್ತಿಯನ್ನೂ ಮರೆತು ಗಂಡನಿಗೋಸ್ಕರ ಹಬ್ಬದಡುಗೆ ಮಾಡಿ ಮನೆಯ ತಲೆಬಾಗಿಲಲ್ಲಿ ಅವನಿಗೋಸ್ಕರ ಕಾಯತೊಡಗಿದೆ. ತುಂಬಾ ಒಳ್ಳೆಯ ಮೂಡಲ್ಲಿದ್ದ ಅವನು ಅವತ್ತು ನನಗೆ ಮತ್ತದೇ ಹಳೆ ಪ್ರೀತಿ ತೋರಿದ.

ಅಲ್ಲಿಂದಾಚೆ ಅವನ ಕುಡಿತ, ತಡರಾತ್ರಿಯ ಪಾರ್ಟಿಗಳಿಗೆ ಫುಲ್ ಸ್ಟಾಪ್ ಬಿತ್ತು. ಹೆಚ್ಚು ಹೆಚ್ಚು ಸಮಯ ನನ್ನ ಜೊತೆ ಕಳೆಯತೊಡಗಿದ. ಅವನ ಕಾಳಜಿ, ಪ್ರೀತಿ ನೋಡುವಾಗೆಲ್ಲಾ ಸಂತಸ ಮಗುವಿನ ಮೂಲಕ ಮತ್ತೆ ನನ್ನ ಬದುಕಿನೊಳಕ್ಕೆ ಕಾಲಿಟ್ಟಿದೆ ಅನಿಸುತ್ತಿತ್ತು. ನಾನು ಇನ್ನೂ ನೋಡೇ ಇಲ್ಲದ, ಕೈಗೆತ್ತಿಕೊಳ್ಳಲೇ ಇಲ್ಲದ ಮಗುವನ್ನು ಹೆಚ್ಚು ಹೆಚ್ಚು ಪ್ರೀತಿಸತೊಡಗಿದೆ. ಆಗಲೂ ಅಷ್ಟೆ ಅಮ್ಮನೂ ನನ್ನನ್ನು ಹೀಗೆ ಪ್ರೀತಿಸಿರಬಹುದು ಅಂತ ಒಮ್ಮೆಯೂ ಅನಿಸಲೇ ಇಲ್ಲ.

ಒಂದು ಮುಸ್ಸಂಜೆ ಇದೇ ರೀತಿ ಕಡಲತಡಿಯಲಿ ಅಲೆಗಳಿಂದ ಕಾಲು ಸೋಕಿಸಿಕೊಳ್ಳುತ್ತಾ ಅವನೆದೆಗೆ ಒರಗಿ ಕೂತು ಭವಿಷ್ಯದ ಕನಸು ಕಾಣುತ್ತಿದ್ದಾಗ ಅವನು, ನಾಳೆ ನಾವು ಬೇರೆ ಡಾಕ್ಟರ್ ಬಳಿ ಹೋಗಿ ಬರೋಣ, ಮಗುವಿನ ಬೆಳವಣಿಗೆಯ ಬಗ್ಗೆ ಒಬ್ಬರಿಗಿಂತ ಹೆಚ್ಚು ವೈದ್ಯರಿಂದ ಖಚಿತ ಪಡಿಸಿಕೊಂಡರೆ ಒಳ್ಳೆಯದಲ್ವಾ ಅಂದ. ಅವನ ಮಾತಿನಲ್ಲಿದ್ದ ಕಾಳಜಿಗೆ, ಮಗುವಿನ ಮೇಲಿನ ಪ್ರೀತಿಗೆ ಪರವಶಳಾಗಿ ನಾನು ಹೂಂಗುಟ್ಟಿದೆ. ಆ ಕ್ಷಣದಲ್ಲಿ ನನಗೇನನಿಸಿತೋ ಏನೋ, ನನ್ನ ಸಂಸಾರವನ್ನು ಹೀಗೆ ಉಳಿಸು ದೇವರೇ ಎಂದು ಕಣ್ಣುಮುಚ್ಚಿದೆ. ಆದ್ರೆ ಅಸ್ತು ಅನ್ನೋಕೆ ಅಲ್ಲಿ ಯಾವ ಅಶ್ವಿನಿ ದೇವತೆಗಳೂ ಇರಲಿಲ್ಲ.

ಮರುದಿನ ಲಗುಬಗೆಯಿಂದ ಸಿದ್ಧಳಾಗಿ ಅವನ ಜೊತೆ ಹೊರಟು ಆಸ್ಪತ್ರೆ ತಲುಪಿದೆ. ನನ್ನನ್ನು ಸ್ಕಾನಿಂಗಿಗೆಂದು ಒಳ ಕರೆದರು. ಮತ್ತೇನಾಯ್ತೋ ನನಗೊಂದೂ ಗೊತ್ತಿಲ್ಲ. ಕಣ್ಣುಬಿಟ್ಟು ನೋಡುವಾಗ ನಾನು ಮನೆಯಲ್ಲಿದ್ದೆ. ಸ್ಕಾನಿಂಗ್ ಮುಗಿಸಿ ನಿತ್ರಾಣಳಾದವಳನ್ನು ಗಂಡನೇ ಮನೆಗೆ ಕರೆತಂದು ಮಲಗಿಸಿರಬಹುದು ಅಂದುಕೊಂಡೆ. ಎದ್ದು ನಿಲ್ಲಲು ಪ್ರಯತ್ನಿಸಿದೆ. ಊಹೂಂ ಆಗಲೇ ಇಲ್ಲ. ಕಿಬ್ಬೊಟ್ಟೆಯಾಳದಿಂದ ಎದ್ದು ಬರುತ್ತಿದ್ದ ಯಾವುದೋ ಸಂಕಟವೊಂದು ಇಡೀ ದೇಹವನ್ನು ವ್ಯಾಪಿಸಿದೆ ಅನಿಸುತ್ತಿತ್ತು. ಸೊಂಟ ಇನ್ನೇನು ಬಿದ್ದೇ ಹೋಗುತ್ತದೆ ಅನ್ನುವಷ್ಟು ನೋವಾಗುತ್ತಿತ್ತು. ನೀರಿಗೆ ಗ್ಲೂಕೋಸ್ ಬೆರೆಸಿ ಕುಡಿಯೋಣ ಅಂತ ಅಂದುಕೊಂಡು ಮತ್ತೆ ಎದ್ದು ನಿಲ್ಲಲು ಪ್ರಯತ್ನಿಸಿದೆ. ಆದ್ರೆ ಎದ್ದು ನಿಲ್ಲಲಾಗಲೇ ಇಲ್ಲ. ದಿನಪೂರ್ತಿ ಮಲಗಲೂ ಆಗದೆ, ಏಳಲೂ ಆಗದೆ ಒದ್ದಾಡಿದೆ.

ಮರುದಿನ ಬೆಳಗ್ಗೆಯೂ ಅದೇ ಸ್ಥಿತಿ ಮುಂದುವರೆದಾಗ ಇನ್ನು ಸುಮ್ಮನಿದ್ದರೆ ಹೊಟ್ಟೆಯಲ್ಲಿರುವ ಮಗುವಿಗೆ ತೊಂದರೆಯಾದೀತು ಅಂದುಕೊಂಡು ಕಷ್ಟಪಟ್ಟು ಎದ್ದು ಮತ್ತದೇ ಡಾಕ್ಟರ್ ಮನೆಗೆ ಎಡತಾಕಿದೆ. ನನ್ನನ್ನು ಕೂಲಕುಂಶವಾಗಿ ಪರೀಕ್ಷಿಸಿದ ಅವರು, ಇನ್ನೂ ಸರಿಯಾಗಿ ಬೆಳೆದೇ ಇಲ್ಲದ ಮಗುವನ್ನು ಹೊಟ್ಟೆಯಲ್ಲೇ ಸಾಯಿಸಿಬಿಡುವ ನಿಮ್ಮಂತವರು ಹೆಣ್ಣು ಅಂತ ಕರೆಸಿಕೊಳ್ಳುವುದಾದರೂ ಯಾಕೆ? ತಾಯ್ತನ, ಅದರ ಅನುಭೂತಿ ಏನು ಅನ್ನುವುದಾದರೂ ಗೊತ್ತಿದೆಯಾ ನಿಮಗೆ...? ಅಂತೆಲ್ಲಾ ಹೇಳುತ್ತಲೇ ಹೋದರು. ಮುಂದಿನದೊಂದೂ ನನಗೆ ಅರ್ಥವಾಗಲೇ ಇಲ್ಲ. ನನ್ನ ಹೊಟ್ಟೆಯಲ್ಲಿ ಮಗು ಇಲ್ಲ ಅನ್ನುವುದನ್ನು ಅರಗಿಸಿಕೊಳ್ಳಲಾಗದೇ ನಾನು ತಡವರಿಸುತ್ತಲೇ ಡಾಕ್ಟ್ರೇ ಪ್ಲೀಸ್ ಮತ್ತೊಮ್ಮೆ ಸರಿಯಾಗಿ ಪರೀಕ್ಷಿಸಿ ನೋಡಿ ಅಂತ ಅಂಗಲಾಚಿದೆ. ಅವರಿಗೂ ಎಲ್ಲೋ ಏನೋ ತಪ್ಪಾಗಿದೆ ಅಂತ ಅನಿಸಿತೋ ಏನೋ. ಮತ್ತೊಮ್ಮೆ ಪರೀಕ್ಷಿಸಿ ಅಬಾರ್ಷನ್ ಆಗಿದೆ ಅನ್ನುವ ಸತ್ಯವನ್ನು ದೃಢೀಕರಿಸಿದರು.

ಇದ್ದ ಬದ್ದ ಶಕ್ತಿಯನ್ನೆಲ್ಲಾ ಬಸಿದು ಆಟೋ ಹತ್ತಿ ಆಫೀಸಿಗೆ ಹೋದೆ. ಅಲ್ಲಿ ಅವನಿರಲಿಲ್ಲ. ಎರಡು ವಾರಗಳ ರಜೆ ಹಾಕಿ ಊರಿಗೆ ಹೋಗಿದ್ದಾನೆಂದು ಬಾಸ್ ತಿಳಿಸಿದರು. ಅಲ್ಲಿಂದ ಅವನ ಮನೆಯ ವಿಳಾಸ ತೆಗೆದು ಅವನನ್ನು ಹುಡುಕುತ್ತಾ ಹೊರಟೆ. ನಿಂಗೊತ್ತಾ ಮಾನ್ವಿ? ತಾಳಿ ಕಟ್ಟಿಸಿಕೊಳ್ಳುವಾಗಲೂ ನಿನ್ನ ಮನೆ ಎಲ್ಲಿ ಎಂದು ನಾನವನನ್ನು ಕೇಳಿರಲಿಲ್ಲ. ಅಂತೂ ಇಂತು ಸೂರ್ಯ ನೆತ್ತಿಗೇರುವ ಹೊತ್ತಿಗೆ ಅವನ ಮನೆ ಹುಡುಕಿ ಬಾಗಿಲಲ್ಲಿ ನಿಂತು ಕಾಲಿಂಗ್ ಬೆಲ್ ಒತ್ತಿದೆ . ಅವನೇ ಬಂದು ಬಾಗಿಲು ತೆರೆದ. ನಾನು ರೋಷದಿಂದ ನನಗೇಕೆ ಅಬಾರ್ಷನ್ ಮಾಡಿಸಿದೆ ಅಂತ ಕೇಳಬೇಕೆನ್ನುವಷ್ಟರಲ್ಲಿ ಮನೆಯೊಳಗಿಂದ ಮಹಿಳೆಯೊಬ್ಬರು ನಡೆದು ಬಂದರು.

ನನ್ನ ಸಂಸಾರದ ಗುಟ್ಟು ಅವರೆದುರು ರಟ್ಟಾಗುವುದು ಬೇಡವೆಂದು ಸುಮ್ಮನಾದೆ. ಅವನು ಬಾ ನೇತ್ರಾ ಅಂತ ನನ್ನ ಒಳ ಕರೆದ. ನಾನು ಒಳಹೋಗಿ ಕೂತೆ. ಆ ಮಹಿಳೆಗೆ ನನ್ನನ್ನವನು, ಇವಳು ನೇತ್ರಾ ನನ್ನ ಕೊಲೀಗ್ ಅಂತ ಪರಿಚಯಿಸಿದ. ನಂತರ ನನ್ನ ಕಡೆಗೆ ತಿರುಗಿ ಈಕೆ ನನ್ನ ಅರ್ಧಾಂಗಿ, ಮದುವೆ ಆಗಿ ಮೂರು ವರ್ಷ ಆಯ್ತು ಅಂತ ಅವರನ್ನು ಪರಿಚಯಿಸಿದ.

ಕ್ಷಣ ಹೊತ್ತು ನನ್ನ ಕಣ್ಣೆದುರು ನಡೆಯುತ್ತಿರುವುದು ಏನೆಂದೇ ನನಗರ್ಥ ಆಗಲಿಲ್ಲ. ಯಾರ ಮುಂದೆ ನಾನು ನನ್ನ ಸಂಸಾರದ ಗುಟ್ಟು ರಟ್ಟಾಗಬಾರದೆಂದು ಸುಮ್ಮನಿದ್ದೆನೋ ಅವರು ನನ್ನ ಗಂಡನ ಅಧಿಕೃತ ಪತ್ನಿಯಾಗಿದ್ದರು. ನನ್ನ ಗಂಡ ನನ್ನನ್ನು ಮದುವೆಯಾಗುವುದಕ್ಕಿಂತ ಮೂರು ವರ್ಷಗಳಷ್ಟು ಹಿಂದೆಯೇ ಅವರನ್ನು ಮದುವೆಯಾಗಿದ್ದ. ಕಾನೂನಿನ ಪ್ರಕಾರ ನನ್ನ ಮದುವೆ ಊರ್ಜಿತವೇ ಅಲ್ಲ. ಮೇಲಾಗಿ ಅವನ ಮೇಲಿನ ಹುಚ್ಚು ಪ್ರೀತಿಯಿಂದ ಅಮ್ಮನನ್ನೂ ಕರೆಯದೆ, ಸಹೋದ್ಯೋಗಿಗಳಿಗೂ ತಿಳಿಸದೆ ದೇವಸ್ಥಾನದಲ್ಲಿ ತಾಳಿ ಕಟ್ಟಿಸಿಕೊಂಡಿದ್ದೆ. ದೇವರೇನೂ ಕೋರ್ಟಿಗೆ ಬಂದು ಸಾಕ್ಷಿ ಹೇಳುವುದಿಲ್ಲವಲ್ಲಾ?  ಮದುವೆಯಾಗಿದೆ ಅನ್ನುವುದಕ್ಕೆ ನನ್ನ ಬಳಿ ಯಾವ ಸಾಕ್ಷಿಯೂ ಇರಲಿಲ್ಲ. ಹೊಟ್ಟೆಯಲ್ಲಿ ಮಗು ಇದ್ದಿದ್ದರೆ ಮುಂದೆಂದಾದರೂ ಸಾಬೀತುಪಡಿಸಬಹುದಿತ್ತೇನೋ? ಆದ್ರೆ ನಾನು ಪಾಪಿ ನೋಡು ಮಗುವನ್ನೂ ಉಳಿಸಿಕೊಳ್ಳಲಾಗಲಿಲ್ಲ ನನಗೆ" ಎಂದು ಹೇಳಿ ನೇತ್ರಾ ಮಾತು ನಿಲ್ಲಿಸಿದಳು.

ಸಾಯಲೆಂದು ತಾನು ಬಂದವಳು ಅನ್ನುವುದನ್ನೇ ಮರೆತು ತದೇಕಚಿತ್ತಳಾಗಿ ಅವಳ ಮಾತುಗಳನ್ನೇ ಕೇಳುತ್ತಿದ್ದ ಮಾನ್ವಿಯ ನಾಲಗೆಯಿಂದ "ಮುಂದೇನು ಮಾಡಿದ್ರ್ರಿ?" ಅನ್ನುವ ಪ್ರಶ್ನೆ ಅನಾಯಾಚಿತವಾಗಿ ಹೊರಬಿತ್ತು. ನೇತ್ರಾ "ಮಾಡುವುದೇನು? ನನ್ನ ಮುಂದಿದ್ದ ಬಾಗಿಲುಗಳೆಲ್ಲವೂ ಮುಚ್ಚಿಬಿಟ್ಟಿದ್ದವು. ನಾನು ಬೆಳಕಿಗೋಸ್ಕರ ಕಿಟಕಿಯ ಕಡೆ ಮುಖ ಮಾಡಲೇಬೇಕಿತ್ತು. ಆಗ ನೆನಪಾದ್ಳು ನೋಡು,
'ಅಮ್ಮ'

ನನ್ನ ಬದುಕಿಂದ ನಾನು ಯಾರನ್ನು ನಿಷ್ಕರುಣೆಯಿಂದ ಅಳಿಸಿಹಾಕಿದ್ದೆನೋ, ಯಾರ ಬಗ್ಗೆ ನಾನು ಅಸಹ್ಯಪಟ್ಟುಕೊಳ್ಳುತ್ತಿದ್ದೆನೋ, ಯಾರನ್ನು ನಾನು, ನನಗೂ ನನ್ನ ಸುಖಕ್ಕೂ ಇರುವ ಅಡ್ಡಿ ಅಂದುಕೊಂಡಿದ್ದೆನೋ ಅದೇ ಅಮ್ಮ ನೆನಪಾದ್ಳು. ಅವನೆಡೆಗೊಂದು ನಿರ್ಭಾವುಕ ನೋಟ ಬೀರಿ ಅಲ್ಲಿಂದ ಹೊರಬಂದು ಅಮ್ಮನಿದ್ದ ಆಶ್ರಮದ ಬಳಿ ಓಡಿದೆ. ಅಮ್ಮನನ್ನು ಹೇಗೆ ಎದುರಿಸಲಿ ಅನ್ನುವ ತಲ್ಲಣಗಳನ್ನೆಲ್ಲಾ ಅವಿತಿಟ್ಟು ಆಶ್ರಮದ ಬಾಗಿಲಲ್ಲಿ ನಿಂತು ’ಅಮ್ಮಾ’ ಎಂದು ಚೀರಿ ಕಣ್ಣುಮುಚ್ಚಿದೆ. ಒಳಗಿಂದ ಹಿರಿಜೀವವೊಂದು ಭಾರವಾದ ಹೆಜ್ಜೆ ಇಟ್ಟುಕೊಂಡು ನನ್ನೆಡೆಗೆ ಬರುತ್ತಿರುವುದು ಒಳಗಣ್ಣಿಗೆ ಸ್ಪಷ್ಟವಾಗಿ ಗೋಚರವಾಗುತ್ತಿತ್ತು.

ಆದ್ರೆ ಆಕೆ ನನ್ನಮ್ಮ ಆಗಿರ್ಲಿಲ್ಲ. ನಿಮ್ಮಮ್ಮ ಸತ್ತು ಹೋಗಿ ಎರಡು ವಾರಗಳಾಯ್ತು, ನಿಮ್ಮನ್ನು ಸಂಪರ್ಕಿಸಲು ತುಂಬಾ ಪ್ರಯತ್ನಪಟ್ವಿ, ಆದ್ರೆ ನೀವು ನಮ್ಮ ಕರೆ ಸ್ವೀಕರಿಸಲೇ ಇಲ್ಲ. ಕೊನೆಗೆ ಅನಾಥ ಶವವೆಂದು ನಾವೇ ಸಂಸ್ಕಾರ ಮಾಡಿಬಿಟ್ಟೆವು ಅನ್ನುವ ಮಾತುಕೇಳಿ ನಾನು ಕಣ್ತೆರೆದೆ. ಆಶ್ರಮದ ಹಿರಿಯ ಪರಿಚಾರಿಕೆಯೊಬ್ಬರು ನನ್ಮುಂದೆ ನಿಂತಿದ್ದರು. ನಾನು ಆರ್ದ್ರಳಾಗಿ ಅವರತ್ತ ನೋಡಿದೆ. ಅವರ ಕಣ್ಣುಗಳಲ್ಲಿದ್ದುದು ನನ್ನೆಡೆಗೆ ಬರಿ ತಿರಸ್ಕಾರ ಮಾತ್ರ. ಅವತ್ತಿನ ದಿನ ನಾನು ಡಾಕ್ಟರ್, ಗಂಡ ಮತ್ತು ಪರಿಚಾರಿಕೆ ಎಂದು ಮೂವರಿಂದ ತಿರಸ್ಕೃತಳಾಗಿದ್ದೆ. ಬದುಕಲ್ಲಿ ಮೊದಲ ಬಾರಿ ತಿರಸ್ಕಾರದ ನೋವನ್ನು ಅನುಭವಿಸಿದೆ. ಆದರೆ ಆ ನೋವಿಗಿಂತಲೂ ಹೆಚ್ಚಾಗಿ ನನ್ನನ್ನು ಪಾಪಪ್ರಜ್ಞೆ ಕಾಡತೊಡಗಿತು. ಬದುಕಲು ನನಗೆ ಇನ್ನಾವ ಕಾರಣಗಳೂ ಉಳಿದಿಲ್ಲ ಅನ್ನುವ ಭಾವನೆಯಲ್ಲಿ ಮತ್ತಿದೇ ಕಡಲ ತೀರಕ್ಕೆ ಬಂದೆ" ಅನ್ನುತ್ತಾ ಮತ್ತೆ ಮಾತು ನಿಲ್ಲಿಸಿದಳು.

ಅವಳು "ಮುಂದೇನು?" ಅನ್ನುವಂತೆ ನೇತ್ರಾಳ ಮುಖ ನೋಡಿದಳು. "ಒಮ್ಮೆ ಇಲ್ಲಿ ತಲುಪಿದೆ ನೋಡು, ಈ ಕಡಲು, ಇದರ ವಿಶಾಲತೆ ನನಗೆ ಬದುಕು ಇನ್ನೂ ಮುಗಿದಿಲ್ಲ ಅನ್ನುವ ಅಭಯ ನೀಡುತ್ತಿದೆ ಅನಿಸಿತು. ಅಮ್ಮ ಇಲ್ಲೇ ಎಲ್ಲೋ ಇದ್ದಾಳೆ ಅನ್ನುವ ಭಾವ ಕಾಡತೊಡಗಿತು. ತೀರದ ಪೂರ್ತಿ ನಡೆದೆ. ಚಪ್ಪಲಿ ಬಿಚ್ಚಿಟ್ಟು ಕಡಲಿನೊಳಕ್ಕೆ ಇಳಿದು ಮೂರು ಬಾರಿ ಮುಳುಗು ಹಾಕಿ ಮೇಲೆದ್ದೆ. ನನ್ನೊಳಗಿನ ದುಗುಡಗಳನ್ನೆಲ್ಲಾ ಕಡಲು ತೊಡೆದು ಹಾಕಿದಂತಾಯಿತು. ಇಲ್ಲಿಂದ ನೇರ ಮನೆಗೆ ನಡೆದು ಒಪ್ಪವಾಗಿ ಕೂತು ಕೆಲಸ ಮಾಡುತ್ತಿದ್ದ ಕಛೇರಿಗೆ ರಾಜೀನಾಮೆ ಪತ್ರ ಬರೆದೆ. ನನಗೆ ನಿಜಕ್ಕೂ ಅವನಿಂದ ದೂರ ಹೋಗಬೇಕು ಅಂತಿರಲಿಲ್ಲ, ಆದ್ರೆ ಅವನ ನೆನಪುಗಳಿಂದ ದೂರ ಹೋಗ್ಲೇಬೇಕಿತ್ತು. ಅವನೊಂದಿಗಿನ ನನ್ನ ಬದುಕಲ್ಲಿದ್ದ ಕತ್ತಲೆಯನ್ನು ಓಡಿಸಲೇಬೇಕೆಂಬ ಜಿದ್ದಿಗೆ ಬಿದ್ದವಳಂತೆ ಮನೆಯಿಡೀ ದೀಪ ಹಚ್ಚಿ, ಆ ಬೆಳಕಲ್ಲಿ ಅದೆಲ್ಲೋ ಧೂಳು ತುಂಬಿ ಇದ್ದ ಅಮ್ಮನ ಫೋಟೋವನ್ನು ತಂದು ಎದುರಿಗಿಟ್ಟು ಸುಮ್ಮನೆ ನೋಡುತ್ತಾ ಕುಳಿತೆ.

ಅಲ್ಲಿಂದಾಚೆ ಪ್ರತಿ ರಾತ್ರಿ ಮಲಗುವ ಮುನ್ನ ’ನನಗಿವತ್ತು ಅವನು ಒಮ್ಮೆಯೂ ನೆನಪಾಗಲೇ ಇಲ್ಲ’ ಅನ್ನುವ ಅತಿ ಚಿಕ್ಕ ಸುಳ್ಳನ್ನು ನನಗೆ ನಾನೇ ಹೇಳಿಕೊಂಡು ಮಲಗಲಾರಂಭಿಸಿದೆ. ಆರು-ಏಳು ತಿಂಗಳುಗಳು ಕಳೆಯುವಷ್ಟರಲ್ಲಿ ಆ ಸುಳ್ಳೇ ಸತ್ಯ ಆಯ್ತು. ಕಿತ್ತು ತಿನ್ನುವ ಹಳೆ ನೆನಪುಗಳಿಂದ ನಿಧಾನವಾಗಿ ಬಿಡುಗಡೆ ಪಡೆದುಕೊಂಡೆ. ಅಷ್ಟು ಹೊತ್ತಿಗಾಗುವಾಗಲೇ ಬೇರೊಂದು ಕಂಪೆನಿಯಲ್ಲಿ ಕೆಲಸ ಗಿಟ್ಟಿಸಿಕೊಂಡುಬಿಟ್ಟಿದ್ದೆ. ಮೈಯಲ್ಲಿ ದುಡಿಯುವ ಕಸುವು, ಕೈಯಲ್ಲಿ ಕೆಲಸ, ಬದುಕಲ್ಲಿ ಅಮ್ಮ ಕೊಟ್ಟ ವಿದ್ಯೆ... ಇಷ್ಟಿರುವಾಗ ಅವನಾದರೂ ಯಾಕೆ ನೆನಪಾಗಬೇಕು?" ಅಂತ ಪ್ರಶ್ನಿಸಿ ಹೊರಡಲೆಂದು ಎದ್ದು ನಿಂತಳು ನೇತ್ರಾ. ಅವಳ ಮಾತುಗಳಲ್ಲಿ ನೀನೀಗ ಮಾಡಬಹುದಾಗಿರುವುದಾದರೂ ಇಷ್ಟೇ ಅನ್ನುವ ಭಾವ ಎದ್ದು ಕಾಣುತ್ತಿತ್ತು.

ಹೊರಟವಳನ್ನು ತಡೆದು ನಿಲ್ಲಿಸಿದ ಮಾನ್ವಿ "ಹಾಗಾದ್ರೆ ಹಳೆ ಪ್ರೀತಿಯನ್ನು ಮರೆತು ಬೇರೆ ಮದುವೆ ಆದ್ರಾ? ಅವನು ಮಾಡಿದ್ದು ಮೋಸವೇ ಆಗಿದ್ದರೂ ಅಷ್ಟೊಂದು ಸುಲಭವಾಗಿ ಇನ್ನೊಬ್ಬನ ಜೊತೆ ಹೇಗೆ ಬದುಕು ಹಂಚಿಕೊಂಡಿರಿ?" ಅಂತ ಪ್ರಶ್ನಿಸಿದಳು. "ಅವನನ್ನು ಮರೆತದ್ದೇನೋ ನಿಜ, ಆದ್ರೆ ಇನ್ನೊಂದು ಮದುವೆಯಾಗಬೇಕು ಅಂತ ನನಗೆ ಅನ್ನಿಸಲೇ ಇಲ್ಲ. ಅಮ್ಮನನ್ನು ಬೀದಿಪಾಲು ಮಾಡಿದ್ನಲ್ಲಾ, ಅದಕ್ಕೆ ಪ್ರಾಯಶ್ಚಿತ್ತ ಬೇರೆ ಮಾಡ್ಕೊಳ್ಬೇಕಿತ್ತು. ಮೇಲಾಗಿ ನನ್ನೊಳಗೆ ಪ್ರತಿಷ್ಠಾನವಾಗಿದ್ದ ಪ್ರೀತಿಯನ್ನು ಮರೆಯಲು ಯತ್ನಿಸಿದ್ದ ಆ ಆರು ತಿಂಗಳುಗಳಿವೆಯಲ್ಲಾ, ಆ ಅವಧಿಯಲ್ಲಿ ನನಗೆ ’ಈ ಕ್ಷಣದಲ್ಲಿ ಇಲ್ಲೊಂದು ಪ್ರೀತಿ ಕಣ್ಣು ಬಿಡುವಾಗ ಈ ಜಗತ್ತಿನ ಇನ್ನಾವುದೋ ಒಂದು ಮೂಲೆಯಲ್ಲಿ ಹುಡುಗಿಯೊಬ್ಬಳು ಬಟಾಬಯಲಲ್ಲಿ ತನಗಾದ ಮೋಸಕ್ಕಾಗಿ ತತ್ತರಿಸುತ್ತಿರುತ್ತಾಳೆ, ಇದೇ ಕಡಲಿನ ಮತ್ಯಾವುದೋ ಒಂದು ತೀರದಲ್ಲಿ ಹುಡುಗಿಯೊಬ್ಬಳು ಹೆಣೆದ ವಂಚನೆಯ ಜಾಲದಲ್ಲಿ ಹುಡುಗನೊಬ್ಬ ವಿಲ ವಿಲ ಒದ್ದಾಡುತ್ತಿರುತ್ತಾನೆ, ಇಲ್ಲಿ ಹುಟ್ಟಿದ ಪ್ರೀತಿಯ ಆತ್ಮ ಅದೆಲ್ಲೋ ಮಗ್ಗುಲು ಬದಲಿಸುತ್ತಿರುತ್ತದೆ’ ಅನ್ನುವುದು ತುಂಬಾ ಸ್ಪಷ್ಟವಾಗಿ ಅರ್ಥವಾಗಿಹೋಗಿತ್ತು. ಹಾಗಾಗಿ ಮತ್ತೊಮ್ಮೆ ಇನ್ನೊಂದು ಸಂಬಂಧದೆಡೆಗೆ ಕೈ ಚಾಚಬೇಕು ಅಂತ ಅನಿಸಲೇ ಇಲ್ಲ" ಅಂದಳು ನೇತ್ರಾ. "ಹಾಗಾದ್ರೆ ಈ ಮಗು?" ಅವಳ ಗೊಂದಲಗಳಿನ್ನೂ ಮುಗಿದಿರಲಿಲ್ಲ.

"ಇದಾ? ಇಡೀ ಮನೆಯಲ್ಲಿ ಹಣತೆ ಹಚ್ಚಿ ಕುಳಿತುಕೊಂಡೆ ಅಂದೆನಲ್ಲಾ, ಅವತ್ತೇ ರಾತ್ರಿ ಈ ಮನೆಯಲ್ಲೇ ನಾನು ಅಮ್ಮನಾಗಬೇಕು ಅನ್ನುವ ನಿರ್ಧಾರಕ್ಕೆ ಬಂದೆ. ಅಲ್ಲಿಂದಾಚೆ, ಸ್ವಂತ ತಾಯಿಯಿಂದ, ಸಮಾಜದಿಂದ ತಿರಸ್ಕೃತರಾಗಿ ಕಸದ ತೂಟಿಯಲ್ಲಿ, ಬೀದಿಬದಿಯಲ್ಲಿ, ಚರಂಡಿಗಳಲ್ಲಿ, ಹೊಳೆ ಸಂದಿಗಳಲ್ಲಿ ಕಣ್ಣು ಬಿಡುತ್ತಿರುವ ಹಾಲುಗಲ್ಲದ ಹಸುಳೆಗಳನ್ನು ಮನೆಗೆ ಕರೆತಂದು ಸಾಕತೊಡಗಿದೆ. ಮಕ್ಕಳಿಲ್ಲದ ನನಗೆ ಅವರೇ ಮಕ್ಕಳು, ತಾಯಿಯಿಲ್ಲದ ಅವರಿಗೆ ನಾನೇ ತಾಯಿ. ನಾನು ಕೆಲಸಕ್ಕೆ ಹೋಗುವಾಗ ಮಕ್ಕಳನ್ನು ನೋಡಿಕೊಳ್ಳಲೆಂದು ನಿಸ್ಪೃಹ ಮನಸ್ಸಿನ ಇಬ್ಬರು ಆಯಾಗಳನ್ನು ಗೊತ್ತು ಮಾಡಿದ್ದೇನೆ, ಅವರು ನನಗಿಂತಲೂ ಚೆನ್ನಾಗಿ ಅವರನ್ನು ನೋಡಿಕೊಳ್ಳುತ್ತಾರೆ. ಈ ಮಗುವಿನಂತಹ ಇನ್ನೂ ಹನ್ನೆರಡು ಮಕ್ಕಳು ನಮ್ಮ ಮನೆಯನ್ನೀಗ ನಂದಗೋಕುಲವನ್ನಾಗಿಸಿದ್ದಾರೆ. ಆ ಮಕ್ಕಳ ಮುಗ್ಧ ಕಣ್ಣುಗಳಲ್ಲಿ, ಪುಟ್ಟ ಪುಟ್ಟ ಪಾದಗಳಲ್ಲಿ, ಇನ್ನೂ ಹಸಿ ಆರಿರದ ಅಂಗೈಗಳಲ್ಲಿ ಅಮ್ಮನನ್ನು ಕಾಣುತ್ತೇನೆ. ಅವರೆಲ್ಲಾ ನನ್ನ ತಬ್ಬಿಕೊಂಡು ಅಮ್ಮಾ ಎಂದು ಕರೆವಾಗ, ರಾತ್ರಿ ಕಥೆ ಹೇಳೆಂದು ಪೀಡಿಸುವಾಗ, ಗುಮ್ಮ ಬಂದ ಎಂದು ನನ್ನ ಮಡಿಲಲ್ಲಿ ಮುಖ ಮುಚ್ಚಿಕೊಳ್ಳುವಾಗೆಲ್ಲಾ ಅಮ್ಮನೇ ಎದ್ದು ಬಂದು ನನ್ನ ತಲೆ ನೇವರಿಸಿದಂತಾಗುತ್ತದೆ" ಅಂತಂದು ನೇತ್ರಾ ಮಗುವಿನ ಕೈ ಹಿಡಿದು ಹೇಳಾಬೇಕಾದ್ದನ್ನೆಲ್ಲಾ ಹೇಳಿದ್ದೇನೆ ಅನ್ನುವ ಭಾವದಲ್ಲಿ "ನಾವಿನ್ನು ಹೊರಡುತ್ತೇವೆ, ಸಾಯುವ ಕೊನೆ ಕ್ಷಣದಲ್ಲಿ ನನ್ನ ಬದುಕಿನ ಕಥೆ ಕೇಳುವಂತಹ ಸಹನೆಯನ್ನು ತೋರಿದ್ದಿಯಲ್ಲಾ, ನಿನಗೆ ನಾನೆಂದೂ ಋಣಿಯಾಗಿರುತ್ತೇನೆ. ನೀನೀಗ ನಿಶ್ಚಿಂತೆಯಿಂದ ಸಾಯಬಹುದು" ಅಂದು ಕಡಲಿಂದ ದೂರ ದೂರ ನಡೆಯತೊಡಗಿದಳು.

ಹಿಂದಿನಿಂದ ತುಸು ಉದ್ವೇಗ ತುಂಬಿದ  "ಒಂದ್ನಿಮಿಷ" ಅನ್ನುವ ಮಾತು ಕೇಳಿತು. ತನಗಿದೇ ಬೇಕಾಗಿತ್ತೇನೋ ಅನ್ನುವಂತೆ ನೇತ್ರಾ ತನ್ನ ನಡಿಗೆಯನ್ನು ನಿಧಾನಗೊಳಿಸಿದಳು. ಓಡುತ್ತಾ ಬಂದ ಮಾನ್ವಿ ಅವಳನ್ನು ತಬ್ಬಿಕೊಂಡು "ನಾನು ಸಾಯುವುದಿಲ್ಲ, ಬದುಕುತ್ತೇನೆ, ಅದೂ ನನ್ನ ತಿರಸ್ಕರಿಸಿದವನ ಮುಂದೆ ತಲೆ ಎತ್ತಿ ಬದುಕುತ್ತೇನೆ " ಅಂತಂದು ಒಂದು ಕ್ಷಣ ತಡೆದು "ಈ ಮಕ್ಕಳಿಗೆಲ್ಲಾ ಅಮ್ಮನಾಗಿರುವ ನೀವು ನನಗೆ ಅಕ್ಕ ಆಗಲಾರಿರಾ?" ಎಂದು ಕೇಳಿದಳು. ನೇತ್ರಾ ಆಗಲಿ ಎಂಬಂತೆ ಅವಳ ಬರಸೆಳೆದು ಅಪ್ಪಿ ತಲೆನೇವರಿಸಿದಳು. ದೂರದಲ್ಲೆಲ್ಲೋ ಶಕುನದ ಹಕ್ಕಿ ಶುಭಂ ಹಾಡಿತು.

(ಸುಧಾ ವಾರಪತ್ರಿಕೆಯಲ್ಲಿ ಪ್ರಕಟಿತ)   

ಸೋಮವಾರ, ಜನವರಿ 11, 2016

ಬುದ್ಧನನ್ನರಸುತ್ತಾ...


ಸಾಲು ಸಾಲು ಬೋಧಿವೃಕ್ಷ
ನೆಟ್ಟಿದ್ದಾನಂತೆ ಬುದ್ಧ
ಅದೆಲ್ಲೋ ಸಾವಿರ ಗಾವುದ ದೂರ
ತಿಳಿಯದ ಹಾದಿ, ಅರಿಯದ ದಾರಿ
ಪಯಣದುದ್ದಕ್ಕೂ ಎಡರುತೊಡರುಗಳೇ

ನನಗೆ ಜ್ಞಾನೋದಯದ ಹಂಬಲವಿಲ್ಲ
ಬುದ್ಧನೇ ಅಂದಿದ್ದಾನಲ್ಲಾ
ಅತಿ ಆಸೆ ಸಲ್ಲದೆಂದು

ಅವನ ಸ್ನಿಗ್ಧ ನಗುವಿನಲಿ
ಅರೆ ನಿಮೀಲಿತ ಕಣ್ಣುಗಳಲಿ
ದಿವ್ಯ ಸ್ಥಿತಪ್ರಜ್ಞತೆಯಲಿ
ಒಮ್ಮೆ ಕಳೆದುಹೋಗಬೇಕಿದೆ ಅಷ್ಟೆ

ದಾರಿಗುಂಟ ಸಿಕ್ಕಿದ ಕಲ್ಲು
ಚುಚ್ಚಿದ ಮುಳ್ಳು
ಒಸರಿಸುತ್ತಲೇ ಇದೆ ಹನಿ ರಕ್ತವನು
ಒರೆಸಿಕೊಳ್ಳುವ ಗೋಜಿಗೂ ಹೋಗಿಲ್ಲ ನಾನು

ರಕ್ತ!!! ಅದು ಅವನ ತತ್ವ
ಧಿಕ್ಕರಿಸಿದಂತೆ ಅನ್ನುತ್ತೀರೇನೋ ನೀವು
ನನಗೊತ್ತಿಲ್ಲ
ತರ್ಕಿಸುವಷ್ಟು ಬುದ್ಧಿವಂತೆಯಲ್ಲ ನಾನು

ಹಿಂಸೆ-ಅಹಿಂಸೆ, ಆಸೆ-ನಿರಾಸೆ, ಮೋಹ-ನಿರ್ಮೋಹ
ತತ್ವ, ಪ್ರತಿಪಾದನೆಗಳಾವುವೂ ದಕ್ಕದು
ನನಗೆ ಬುದ್ಧನೆಂದರೆ
ಸ್ಥಿತಪ್ರಜ್ಞತೆ, ಸ್ನಿಗ್ಧತೆಯಷ್ಟೇ

ದಾರಿಯುದ್ದಕ್ಕೂ ಸಿಕ್ಕಿದ ವೇಷಧಾರಿ
ಬುದ್ಧರನ್ನೇ ಅಸಲಿಯೆಂದು ಭ್ರಮಿಸಿದ್ದಿದೆ
ಅವರ ಅಸಲಿಯತ್ತಿಗೆ ಸವಾಲಾಗಿ
ಇದ್ದೇ ಇದೆಯಲ್ಲ ಅವನ ನಕಲು
ಮಾಡಲಾಗದ ನಗು

ಅವನೆಟ್ಟ ಬೋಧಿವೃಕ್ಷದ ಸಾಲು
ಇನ್ನೇನು ಬೆರಳತುದಿಗೆಟುಕಿತು
ಅನ್ನುವಷ್ಟರಲ್ಲಿ ಮತ್ತದೇ ಹಳೆ
ಭ್ರಮೆಯ ಪುನರ್ಮಿಲನ

ಅವನ ಹುಡುಕಾಟದಲಿ
ಆನೆ ನಡೆಯದ್ದೂ ದಾರಿಯೇ
ಕನಸು ಕವಲೊಡೆದಿದ್ದೂ ದಾರಿಯೇ
ಅವನ ದಕ್ಕಿಸಿಕೊಳ್ಳಬೇಕೆಂದಿದ್ದರೆ
ನಡಿಗೆ ನವಿಲಾಗಬೇಕು
ಅರ್ಥ ಅರಸುತ್ತಾ
ಅವನೊಳಂದಾಗಬೇಕು

ಭಾನುವಾರ, ಜನವರಿ 10, 2016

ನಿನ್ನೆದೆಯ ಕಲ್ಲು ಮಾಡಿಕೊಂಡ ವಿದ್ಯೆಯ ನನಗೂ ದಯಪಾಲಿಸು


ಅನುಮಾನ ಅವಮಾನಗಳ ಬೆಂಕಿಯಲಿ
ಬೇಯುವಾಗೆಲ್ಲಾ ಈ ಬದುಕು
ಸಾಕೆಂದು ನಿಡುಸುಯ್ಯತ್ತಿರುತ್ತೇನೆ

ಮುರಿದ ಕನಸುಗಳ
ಇಟ್ಟಿಗೆಯಾಗಿಸಿ ಬದುಕ
ಕಟ್ಟಿಕೊಳ್ಳುವ ಚೈತನ್ಯ ಇಲ್ಲವೆಂದಲ್ಲ

ಹಾಗೆ ಕಟ್ಟಿಕೊಳ್ಳಹೊರಟಾಗೆಲ್ಲಾ
ಗೋರಿಯ ಬಗೆದು
ಅರಮನೆ ಕಟ್ಟುತ್ತಿರುವೆ
ಅನ್ನುವ ತಾಕಲಾಟಕ್ಕೆ ಬಿದ್ದು ಬಿಡುತ್ತೇನೆ

ಮತ್ತೆ ಮುರಿದ ಸಂಬಂಧಗಳು
ಕಾಡತೊಡಗುತ್ತವೆ
ಹಗಲಲ್ಲೂ ದುಃಸ್ವಪ್ನ
ಕಂಡಂತಾಗಿ ಬೆಚ್ಚಿ ಬೀಳುತ್ತೇನೆ

ಈಗೀಗ ಅಮ್ಮಂದಿರ ಎದೆಯಿಂದಲೂ
ಒಡೆದ ಹಾಲು ಒಸರುತ್ತದೇನೋ
ಅನ್ನಿಸಿ ದಿಗಿಲುಗೊಳ್ಳುತ್ತೇನೆ
ಆಗೆಲ್ಲಾ ನೀನು ಬೆಂಬಿಡದೆ ಕಾಡುತ್ತಿ ಅಹಲ್ಯೆ

ಅದೆಷ್ಟು ಋತುಗಳ
ಕಲ್ಲಾಗಿ ಕಳೆದುಬಿಟ್ಟೆಯಲ್ಲಾ
ರಾಮ ಪಾದ ಸ್ಪರ್ಶವಾಗುವವರೆಗೂ

ನಿನ್ನೆದೆಯ ಕಲ್ಲು ಮಾಡಿಕೊಂಡ
ವಿದ್ಯೆಯ ನನಗೂ ದಯಪಾಲಿಸು
ಒಂದಿಷ್ಟು ದಿನ ಬದುಕಬೇಕಿದೆ
ನನ್ನೆದೆಯ ಆಕ್ರೋಶ ನಿರಾಶೆಗಳನ್ನೆಲ್ಲಾ
ಮರೆತಂತೆ ನಟಿಸಿ

ಗುರುವಾರ, ಜನವರಿ 7, 2016

ಅಂದಹಾಗೆ, ನಿಮ್ಮ ನ್ಯೂ ಇಯರ್ ರೆಸಲ್ಯೂಷನ್ ಏನು?

ಇನ್ನು ಎರಡೇ ಎರಡು ದಿನಗಳು... 2016  ನಮ್ಮುಂದೆ ಓಡೋಡಿ ಬಂದು ಕುಳಿತುಕೊಂಡುಬಿಟ್ಟು ಏಳು ದಿನಗಳಷ್ಟೆ ಕಳೆದಿವೆ.. ನಾವೂ ಅಷ್ಟೇ ಮುಚ್ಚಟೆಯಿಂದ, ಹೊಸ ಹುಮ್ಮಸ್ಸಿನಿಂದ ಅದರ ಮೈದಡವಿ ಅಪ್ಪಿಕೊಂಡಿದ್ದೇವೆ,. ಕುಳಿತಲ್ಲಿಂದ ಅಮೂಲಾಗ್ರವಾಗಿ ಎಬ್ಬಿಸಿ ಬದುಕಿನೊಳಕ್ಕೆ ಬಿಟ್ಟುಕೊಂಡಿದ್ದೇವೆ. ಒಂದು ಚೆಂದದ ಮುಗಳ್ನಗೆಯೊಂದಿಗೆ ಅದರ ಹೆಗಲ ಮೇಲೆ ಕೈ ಹಾಕಿ ನಡೆಯಲು ಪ್ರಾರಂಭಿಸಿದ್ದೇವೆ.

ಆಮೇಲೆ...? ಒಂದೆರಡು ವಾರಗಳ ಕಾಲ ನಿಯಮಿತವಾಗಿ ಕೂತು ಶ್ರದ್ಧೆಯಿಂದ ಡೈರಿ ಬರೆಯುತ್ತೇವೆ. ಕೆಲವು ದಿನ ಸಹಿ ಹಾಕುವಾಗ, ನೋಟ್ಸ್ ಬರೆದಿಟ್ಟುಕೊಳ್ಳುವಾಗೆಲ್ಲಾ ದಿನಾಂಕ ಬರೆಯುವಲ್ಲಿ 2015  ಎಂದೇ ಬರೆದು, ಮತ್ತೆ ಅದನ್ನು ತಿದ್ದಿ 2016  ಮಾಡುತ್ತೇವೆ. ಮತ್ತೂ ಒಂದಿಷ್ಟು ದಿನಗಳವೆರೆಗೆ ಹೊಸ ವರ್ಷಕ್ಕೆಂದು ಮಾಡಿರೋ ಪ್ರತಿಜ್ಞೆಗಳನ್ನು ನೆನಪಿಟ್ಟುಕೊಂಡು ಅದರ ಪ್ರಕಾರವೇ ನಡೆಯುತ್ತೇವೆ. ಕೆಲ ದಿನಗಳು ಕಳೆದಂತೆ, ಜನವರಿ ಫೆಬ್ರವರಿಯಾದಂತೆ, ಡೈರಿ, ಪ್ರತಿಜ್ಞೆ ಎಲ್ಲಾ ಮರೆತು, ಎಲ್ಲಾ ವರ್ಷಗಳಂತೆ 2016  ಕೂಡ ಹಳತಾಗುತ್ತದೆ.

ಇರಲಿ, ನಾನಿಲ್ಲಿ ಪ್ರಸ್ತಾಪಿಸಹೊರಟಿದ್ದ ವಿಷಯ ಅದಲ್ಲವೇ ಅಲ್ಲ. ಹೊಸ ವರ್ಷದ ಆಚರಣೆಯ ಅಗತ್ಯತೆ, ಅನಿವಾರ್ಯತೆಗಳ ಬಗೆಗಿನ ವಾದ, ವಿಭಿನ್ನ ಖಂಡವೊಂದರ ಸಂಸ್ಕೃತಿಯನ್ನು ನಮ್ಮದಾಗಿಸಿಕೊಳ್ಳುತ್ತಿದ್ದೇವೆ ಅನ್ನುವ ತಕರಾರು, ತಡರಾತ್ರಿಯ ಪಾರ್ಟಿ, ಕುಡಿತ, ಸುಟ್ಟು ಹಾಕುವ ಮುದುಕನ ಪ್ರತಿಮೆ, Drink and Driveಗಳಂತಹ ಅತಿರೇಕದ ಅಸಂಬದ್ಧಗಳನ್ನು ಪಕ್ಕಕ್ಕಿಟ್ಟು, ಹೊಸ ವರ್ಷದ ಸ್ವಾಗತವನ್ನು ಧನಾತ್ಮಕವಾಗಿ ನೋಡಿದಾಗೆಲ್ಲಾ ಡಿಸೆಂಬರ್ 31ರ ರಾತ್ರಿ ಗೈಯಲ್ಪಡುವ ಶಪಥಗಳು ಹೆಚ್ಚು ಆಪ್ತವೆನಿಸುತ್ತದೆ.

ಅದೆಷ್ಟು ವೈವಿಧ್ಯತೆ ಇರುತ್ತದೆ ಈ ಹೊಸ ವರ್ಷದ ಶಪಥಗಳಲ್ಲಿ! ಹೊಸ ವರ್ಷದ ಆರಂಭದಿಂದಲೇ ಬೆಳಗ್ಗೆ ಐದು ಗಂಟೆಗೆ ಏಳುತ್ತೇನೆ, ಹಲ್ಲುಜ್ಜದೆ ಕಾಫಿ ಕುಡಿಯುವುದಿಲ್ಲ, ದಿನಾ ಅರ್ಧ ಗಂಟೆ ವಾಕಿಂಗ್ ಮಾಡ್ತೇನೆ, ಫ್ಯಾಮಿಲಿ ಜೊತೆ ಸಮಯ ಕಳೀತೇನೆ, ದಿನಪೂರ್ತಿ ಫೇಸ್ಬುಕ್ನಲ್ಲಿ ಮುಳುಗುವುದನ್ನು ನಿಲ್ಲಿಸ್ತೇನೆ, ದಿನಕ್ಕೆರಡೇ ಗಂಟೆ ವಾಟ್ಸಾಪ್ ಬಳಸುತ್ತೇನೆ..ಗಳಂತಹ ಪ್ರತಿಜ್ಞೆಗಳದು ಒಂದು ತೂಕವಾದರೆ, ಈ ವರ್ಷ ಹೆಚ್ಚು ಸಾಲ ಮಾಡ್ಕೊಳ್ಳುವುದಿಲ್ಲ, ಮಾಡುವ ಕೆಲಸವನ್ನು ಶ್ರದ್ಧೆಯಿಂದ ಮತ್ತು ಆತ್ಮ ಸಮರ್ಪಣೆಯಿಂದ ಮಾಡುತ್ತೇನೆ, ಜಂಕ್ ಫುಡ್ ತಿನ್ನುವುದನ್ನು ಕಡಿಮೆ ಮಾಡುತ್ತೇನೆ, ಸಿಗರೇಟ್ ಬಿಡುತ್ತೇನೆ, ಕುಡಿತ ನಿಲ್ಲಿಸುತ್ತೇನೆ, ಬಾಯ್ಫ್ರೆಂಡ್ ಗೆ ಸುಳ್ಳು ಹೇಳುವುದಿಲ್ಲ, ಗರ್ಲ್ ಫ್ರೆಂಡ್ಗೆ ನಿಯ್ಯತ್ತಾಗಿರುವುತ್ತೇನೆ, ಅಮ್ಮನನ್ನು ಯಾಮಾರಿಸುವುದಿಲ್ಲ, ಅಪ್ಪನ ಕಣ್ಣು ತಪ್ಪಿಸಿ ಓಡಾಡುವುದನ್ನು ಕಡಿಮೆ ಮಾಡುತ್ತೇನೆ, ಆಫೀಸ್ ಸಿಸ್ಟಮ್ನಲ್ಲಿ ಸಾಮಾಜಿಕ ಜಾಲತಾಣ ಓಪನ್ ಮಾಡಿ ಫ್ರೆಂಡ್ಸ್ ಜೊತೆ ಹರಟೆ ಕೊಚ್ಚುವುದಿಲ್ಲ...ಗಳಂತಹ ಪ್ರತಿಜ್ಞೆಗಳದೇ ಮತ್ತೊಂದು ತೂಕ.

ಇನ್ನು, ವಾರಕ್ಕೊಂದರಂತೆ ವರ್ಷಕ್ಕೆ ಕನಿಷ್ಟ 52 ಪುಸ್ತಕಗಳನ್ನಾದರೂ ಓದುತ್ತೇನೆ, ವರ್ಷ ಮುಗಿಯುವ ಮುನ್ನ ಇಬ್ಬರು ಸಾಹಿತಿಗಳನ್ನಾದರೂ ಭೇಟಿಯಾಗುತ್ತೇನೆ, ಪ್ರತಿ ದಿನ ಕನಿಷ್ಟ ಒಂದು ಪುಟದಷ್ಟಾದರೂ ಬರೆಯುತ್ತೇನೆ, ಹಾಗೆ ಬರೆಯಲು ಸಾಧ್ಯವಾಗದ ಮರುದಿನ ಎರಡು ಪುಟ ಬರೆಯುತ್ತೇನೆ... ಮುಂತಾದವುಗಳೆಲ್ಲಾ ಬರಹಗಾರರ, ಪುಸ್ತಕ ಪ್ರೇಮಿಗಳ ಬತ್ತಳಿಕೆಯಲ್ಲಿನ ಕೆಲ ಪ್ರತಿಜ್ಞೆಗಳು. ರಸ್ತೆಯಲ್ಲಿ ಕಸ ಹಾಕುವುದಿಲ್ಲ, ಮನೆಯನ್ನು ಸ್ವಚ್ಛವಾಗಿಟ್ಟುಕೊಂಡಷ್ಟೇ ಸಹಜವಾಗಿ ನನ್ನ ಬೀದಿಯನ್ನೂ ಸ್ವಚ್ಛವಾಗಿಟ್ಟುಕೊಳ್ಳುತ್ತೇನೆ, ಹಾಗೆ ಇಟ್ಟುಕೊಳ್ಳುವಂತೆ ಇತರರನ್ನೂ ಪ್ರೇರೇಪಿಸುತ್ತೇನೆ, ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ಮಾಡುವುದಿಲ್ಲ, ಇಬ್ಬರ ಜಗಳದ ಮಧ್ಯೆ ತುಪ್ಪ ಸುರಿಯೋಕೆ ಹೋಗುವುದಿಲ್ಲ, ಫೇಸ್ಬುಕ್ನ ಅನಗತ್ಯದ ಚರ್ಚೆಗಳಲ್ಲಿ ಭಕ್ತರ ಗುಂಪಿಗೂ ಸೇರದೆ, ರಾಯಲ್ ಫ್ಯಾಮಿಲಿಯ ಫಾಲೋವರ್ಸ್ಗಳ ವರ್ಗಕ್ಕೂ ಸೇರದೆ ತಟಸ್ಥವಾಗಿರುತ್ತೇನೆ, ಅದೆಷ್ಟೇ ದೂರದೂರಲ್ಲಿದ್ದರೂ, ಪಂಚಾಯತ್ ಚುನಾವಣೆ ಸಂದರ್ಭ ಊರಿಗೆ ಬಂದು ಮತ ಚಲಾಯಿಸುತ್ತೇನೆ ಮುಂತಾದ ಸಾಮಾಜಿಕ ಕಳಕಳಿಯ ಪ್ರತಿಜ್ಞೆ ಕೈಗೊಳ್ಳುವವರೂ ಇದ್ದಾರೆ.

ಆದರೆ, ವಿಚಿತ್ರ ಏನು ಗೊತ್ತಾ? ಹೀಗೆ ಡಿಸೆಂಬರ್31ರ ರಾತ್ರಿ ಮೇಣದ ಬತ್ತಿಯ ಬೆಳಕಿನ ಮುಂದೆ, ಕೈಯಲ್ಲೊಂದು ಡೈರಿ ಮತ್ತು ಪೆನ್ ಹಿಡಿದು ಗಂಭೀರವಾಗಿ ಕೂತು ಅರಿಭಯಂಕರ ಪ್ರತಿಜ್ಞೆ ಮಾಡಿದ ಬಹುತೇಕರೆಲ್ಲಾ ಫೆಬ್ರವರಿ1ರ ಹೊತ್ತಿಗೆ ಅದನ್ನು ಮರೆತಿರುತ್ತಾರೆ. ಅಷ್ಟು ಹೊತ್ತಿಗೆ ಹೊಸವರ್ಷವೂ ಹಳತಾಗಿರುತ್ತದೆ ಮತ್ತು 31ರ ರಾತ್ರಿ ಯಾರಿಗೆಲ್ಲಾ ಕರೆ ಮಾಡಿ, ಮೆಸೇಜ್ ಮಾಡಿ ಅಥವಾ ಮುಂದೆ ಕೂರಿಸಿಕೊಂಡು  ನ್ಯೂ ಇಯರ್ ರೆಸಲ್ಯೂಷನ್ಸ್ ಬಗ್ಗೆ ಹೇಳಿಕೊಂಡಿರುತ್ತೇವೆಯೋ ಅವರೂ ನಮ್ಮ ರೆಸಲ್ಯೂಷನ್ಗಳನ್ನೂ ನಮಗದನ್ನು ನೆನಪಿಸಬೇಕಾಗಿರುವ ಅವರ ’ಪರಮ ಕರ್ತವ್ಯ’ವನ್ನೂ ಮರೆತಿರುತ್ತಾರೆ.

ಅಲ್ಲಿಗೆ, ನಿರ್ಧಾರಗಳು, ಅವುಗಳ ಪಾಲನೆಗೆ ಇದ್ದ ಕಮಿಟ್ಮೆಂಟ್ಗಳೂ ಮಕಾಡೆ ಮಲಗುತ್ತವೆ. ಮತ್ತೆ ಅವು ನೆನಪಾಗಬೇಕಾದರೆ, ಮತ್ತೊಂದು ಡಿಸೆಂಬರ್ ಮೂವತ್ತೊಂದೋ ಇಲ್ಲ ಜನವರಿ ಒಂದೋ ನಮ್ಮ ಕಣ್ಣೆದುರು ಬರಬೇಕು. ಹಾಗೆಂದು ಹೊಸ ವರ್ಷದ ಸಂದರ್ಭಗಳಲ್ಲಿ ಮಾಡಿದ ಪ್ರತಿಜ್ಞೆಗಳನ್ನು ಯಾರೂ ಪಾಲಿಸುವುದೇ ಇಲ್ಲ ಅಂತಲ್ಲ. ಆದ್ರೆ ಜಾಗತಿಕ ಸಮೀಕ್ಷೆಯೊಂದರ ಪ್ರಕಾರ ಹಾಗೆ ಪಾಲಿಸುವವರು ಶೇಕಡ ಹತ್ತರಷ್ಟು ಮಾತ್ರ.

ನಿಜಕ್ಕೂ ಒಂದು ಒಳ್ಳೆಯ ನಿರ್ಧಾರವನ್ನು ಕೈಗೊಳ್ಳಲು, ನಮ್ಮಲ್ಲಿರುವ ಕೆಟ್ಟತನವನ್ನು ಬಿಟ್ಟು ಬಿಡಲು, ಹಳೆ ಭ್ರಮೆಗಳಿಂದ ಹೊರಬರಲು, ಕೆಲವು ಕಹಿ ಘಟನೆಗಳನ್ನು ಮರೆಯಲು, ಹೊಸ ಬದುಕಿನ ನೀಲನಕ್ಷೆ ಸಿದ್ಧಪಡಿಸಲು ಹೊಸ ವರ್ಷ ಒಳ್ಳೆಯ ಸಂದರ್ಭವೇ. ಆದರೆ, ನಿರ್ಧಾರಗಳನ್ನು ಕೈಗೊಳ್ಳುವಾಗ ವಾಸ್ತವಿಕ ಮತ್ತು ಪೂರೈಸಲು ಸಾಧ್ಯವಿರುವಂತಹ ನಿರ್ಧಾರಗಳನ್ನು ಕೈಗೊಳ್ಳಬೇಕು. ಈಗಷ್ಟೇ ನೌಕರಿಗೆ ಸೇರಿಕೊಂಡವ, ವರ್ಷಾಂತ್ಯದಲ್ಲಿ ಐ.ಪಿ.ಎಲ್ ಟೀಂ ಒಂದನ್ನು ಖರೀದಿಸುತ್ತೇನೆ ಅನ್ನುವ ಶಪಥ ಮಾಡುವುದು, ನಿನ್ನೆಯಷ್ಟೇ ಕಬಡ್ಡಿಯ ಪಟ್ಟುಗಳನ್ನು ಕಲಿಯತೊಡಗಿದ ಹುಡುಗ ವರ್ಷ ಮುಗಿಯುವಷ್ಟರಲ್ಲಿ ಬೆಂಗಳೂರು ಬುಲ್ಸ್ ಟೀಮಿನ ಕ್ಯಾಪ್ಟನ್ ಆಗುತ್ತೇನೆ ಅನ್ನುವ ಪ್ರತಿಜ್ಞೆ ಕೈಗೊಳ್ಳುವುದು, ಈ ಕ್ಷಣದವರೆಗೂ ಉಸಿರಿನಂತೆ ಅಂಟಿಕೊಂಡಿರುವ ಸಿಗರೇಟ್ ಸೇದುವ ಚಟವನ್ನು ನಾಳೆ ಒಂದೇ ದಿನದಲ್ಲಿ ಸಂಪೂರ್ಣವಾಗಿ ನಿಲ್ಲಿಸುತ್ತೇನೆ ಅಂದುಕೊಳ್ಳುವುದು... ಮುಂತಾದವೆಲ್ಲಾ ತೀರಾ ಬಾಲಿಶ ಮತ್ತು ಅಸಂಭವ. ಹಾಗಾಗಿ ಅಂತಹ ಅಸಂಭವ ಮತ್ತು ಕಾರ್ಯ ಸಾಧ್ಯವಲ್ಲದ ನಿರ್ಧಾರಗಳನ್ನು ಕೈಗೊಂಡು, ಮುಂದೆ ಅದನ್ನು ಪೂರೈಸಲಾಗದೆ ಪ್ರತಿಜ್ಞೆಗಳ ಬಗ್ಗೆಯೇ ಸಿನಿಕತನ ಬೆಳೆಸಿಕೊಳ್ಳುವುದಕ್ಕಿಂತ ನಮ್ಮ ಸಾಮರ್ಥ್ಯಕ್ಕೆ ಕಾರ್ಯಸಾಧ್ಯವಾಗಬಲ್ಲ ಶಪಥ ಮಾಡೋಣ ಮತ್ತದನ್ನು ಪೂರೈಸೋಣ.

ಅಂದ್ಹಾಗೆ, ಹೈಸ್ಕೂಲ್ ಓದುತ್ತಿದ್ದಾಗಿನ ಎಲ್ಲಾ ಗೆಳತಿಯರನ್ನು, ಕಾಟಕೊಡುತ್ತಿದ್ದ ಸೀನಿಯರ್ ಹುಡುಗಿಯರನ್ನು, ಲೆಕ್ಕ ಹೇಳಿಸಿಕೊಳ್ಳುತ್ತಿದ್ದ ಜೂನಿಯರ್ ಹುಡುಗಿಯರನ್ನು, ಮತ್ತೊಂದಿಬ್ಬರು ಕ್ಲಾಸ್ಮೇಟ್ ಹುಡುಗರನ್ನೂ ಭೇಟಿಯಾಗಿ, ಜೀವನಪೂರ್ತಿ ನೆನಪಿಸಿಕೊಳ್ಳಲು ನೂರಾರು ಸಿಹಿ ನೆನಪುಗಳನ್ನು ಒದಗಿಸಿಕೊಟ್ಟ ಅವರಿಗೊಂದು ಚೆಂದದ ತ್ಯಾಂಕ್ಸ್ ಹೇಳಿ, ದೂರ ಆಗಿರುವ ಸಂಬಂಧಗಳನ್ನು ಮತ್ತೆ ಹತ್ತಿರವಾಗಿಸುವುದು ನನ್ನ ಈ ವರ್ಷದ ರೆಸಲ್ಯೂಷನ್. ಮತ್ತೆ ನಿಮ್ಮದು...?

ಶುಕ್ರವಾರ, ಜನವರಿ 1, 2016

ಬದುಕು ಅರಳುವುದು ಸೋಲು ಗೆಲುವುಗಳಾಚೆಗಿನ ಮನುಷ್ಯ ಸಂವೇದನೆಗಳಲ್ಲಿ ಮಾತ್ರ. ಅಲ್ಲವೇ?

ಕೆಲವರಿರುತ್ತಾರೆ...
ಸೋಲು ಅನ್ನುವುದು ಅವರನ್ನು ಕಿರುಬೆರಳಿನಿಂದಲೂ ಸೋಕಿರುವುದಿಲ್ಲ. ಆಟ, ಪಾಠ, ಗೆಳೆತನ, ಪ್ರೇಮ, ಸಂಬಂಧ, ಉದ್ಯೋಗ, ಯಶಸ್ಸು ಹೀಗೆ ಯಾವ ದಿಕ್ಕಿನಿಂದ ನೋಡಿದರೂ ಅವರು ಸೋತ ಉದಾಹರಣೆಗಳೇ ಸಿಗುವುದಿಲ್ಲ. ಏನನ್ನೇ ಆಯ್ಕೆ ಮಾಡಿಕೊಳ್ಳುವುದಾದರೂ, ಏನೇ ಕೆಲಸ ಕೈಗೆತ್ತಿಕೊಳ್ಳುವುದಾದರೂ ನೂರು ಬಾರಿ ಯೋಚಿಸಿ, ಅಳೆದೂ ತೂಗಿಯೇ ಮುಂದಡಿಯಿಡುತ್ತಾರೆ. ದಿನ ಬೆಳಗಾಗೆದ್ದು ಓದುವ ದಿನಪತ್ರಿಕೆಯಿಂದ ಜೀವನ ಸಂಗಾತಿಯನ್ನು ಆಯ್ದುಕೊಳ್ಳುವವರೆಗೂ ಅವರ ಆಯ್ಕೆಗಳೆಲ್ಲವೂ ಒಂದು ಪರ್ಫೆಕ್ಟ್ ಸರಳರೇಖೆಯಲ್ಲೇ ಇರುತ್ತದೆ.

ಎಷ್ಟು ಚೆನ್ನಾಗಿರುತ್ತಲ್ವಾ ಅವರ ಬದುಕು? ನಮ್ಮನ್ನು ಭಾದಿಸುವ ಯಾವ ಸಂಗತಿಗಳೂ ಅವರನ್ನು ಭಾದಿಸಲಾರವು. ಸೋಲು ಸನಿಹಕ್ಕೂ ಸುಳಿಯುವುದಿಲ್ಲ ಅಂದಮೇಲೆ ಸೋಲಿನ ನಿರಾಶೆಗಳಿಗೆ, ವೈಫಲ್ಯದ ನೋವುಗಳಿಗೆ ಜಾಗವೇ ಇರುವುದಿಲ್ಲ. ಮುರಿದು ಬಿದ್ದ ಕನಸುಗಳು ಪದೇ ಪದೇ ಕಾಡುವಾಗ ಆಗೋ ಚಡಪಡಿಕೆಗಳಾಗಲೀ, ಜೀವನ ಪೂರ್ತಿ ಜೊತೆಗಿರುತ್ತೆ ಅಂತ ಅಂದುಕೊಂಡಿದ್ದ ಸಂಬಂಧವೊಂದು ಕಣ್ಣಮುಂದೆಯೇ ಕೈತಪ್ಪಿ ಹೋದ ಅಸಹಾಯಕತೆಯನ್ನಾಗಲೀ ಜೀವನ ಪೂರ್ತಿ ಅನುಭವಿಸಬೇಕಾದ ಯಾವ ದರ್ದೂ ಅವರಿಗಿರುವುದಿಲ್ಲ.



ಹಾಗಂತ ನಾವಂದುಕೊಳ್ಳುತ್ತೇವೆ. ಆದ್ರೆ ನಿಜಕ್ಕೂ ಅಂತಹ ’ಗೆಲುವಿನ ಸರದಾರರ’ ಬದುಕು ನಾವಂದುಕೊಂಡಿರುವಷ್ಟು ಸುಂದವಾಗಿರುತ್ತದಾ? ಸುಖವಾಗಿರುತ್ತದಾ? ಸಂತಸ ಮಾತ್ರ ತುಳುಕಾಡುತ್ತಿರುತ್ತದಾ? ನೋವು ಅಲ್ಲಿ ಕಾಲಿಡುವುದೇ ಇಲ್ವಾ?

ಕೇವಲ ಗೆಲುವಿಗಾಗಿ ಬದುಕುತ್ತಿರುತ್ತೇನೆ ಅಂತ ಭಾವಿಸಿಕೊಂಡವರು ಪ್ರತಿ ಕ್ಷಣ ಸೋಲಿನ ಭಯದಲ್ಲಿ ನರಳುತ್ತಿರುತ್ತಾರೆ. ಎತ್ತಲಿಂದ ಸೋಲು ಮೇಲೆರಗಿ ಬರಬಹುದೆಂದು ಸದಾ ಜಾಗೃತ ಸ್ಥಿತಿಯಲ್ಲಿರುತ್ತಾರೆ. ಒಂದು ಗೆಲುವು ದಕ್ಕಿಸಿಕೊಂಡ ಮರು ಕ್ಷಣದಲ್ಲಿ ಮತ್ತೊಂದು ಗೆಲುವಿಗಾಗಿ ಹಪಹಪಿಸತೊಡಗುತ್ತಾರೆ, ಯೋಜನೆ ರೂಪಿಸತೊಡಗುತ್ತಾರೆ. ದಕ್ಕಿಸಿಕೊಂಡ ಗೆಲುವನ್ನು ಸಣ್ಣದಾಗಿಯೇ ಆದರೂ ಸಂಭ್ರಮಿಸಿಕೊಳ್ಳಲು ಅವರ ಬಳಿ ಸಮಯವೇ ಇರುವುದಿಲ್ಲ, ಇದ್ದರೂ ಮತ್ತೊಂದು ಗೆಲುವಿನೆಡೆಗಿನ ತುಡಿತ, ’ಸೋತು ಬಿಟ್ಟೇನು’ ಅನ್ನುವ ಭಯ ಆ ಸಂಭ್ರಮವನ್ನು ಬುಡ ಸಮೇತ ಕಿತ್ತೊಗೆದಿರುತ್ತದೆ. ಒಟ್ಟಿನಲ್ಲಿ ಅವರು ’ಹೀಗೆಯೇ’ ಬದುಕಬೇಕು, ಬದುಕುತ್ತೇನೆ ಅನ್ನುವ ಸೂತ್ರಕ್ಕೆ ತಮ್ಮನ್ನು ತಾವೇ ಬಂಧಿಸಿಕೊಂಡು ಅವುಡುಗಚ್ಚಿ ಬದುಕುತ್ತಿರುತ್ತಾರೆ. ಯಂತ್ರದ ಚಕ್ರದಂತೆ ಒಂದು ಸಿದ್ಧ ಸೂತ್ರಕ್ಕೆ ಒಳಪಟ್ಟು ಅವರು ಬದುಕು ಸದಾ ತಿರುಗುತ್ತಲೇ ಇರುತ್ತದೆ. ಪ್ರತಿ ದಿನ ಅದೇ ಯಂತ್ರ, ಅದೇ ಚಕ್ರ! ಗೆಲುವೊಂದನ್ನು ಬಿಟ್ಟು ಪ್ರಪಂಚದ ಯಾವ ಸಂಗತಿಗಳೂ ಅಲ್ಲಿ ಮುಖ್ಯವೆನಿಸುವುದೇ ಇಲ್ಲ.

ಒಮ್ಮೆ ಸೂತ್ರ ತಪ್ಪಿ ಚಕ್ರ ನಿಂತು ಬಿಟ್ಟರೋ...? ಅಲ್ಲಿಗೆ ಎಲ್ಲವೂ ಮುಗಿಯುತ್ತದೆ. ಬದುಕು ಸ್ಥಬ್ಧವಾಗಿಬಿಡುತ್ತದೆ. ನಿಂತಿರೋ ಚಕ್ರವನ್ನು ಮತ್ತೆ ತಿರುಗಿಸುವ, ಸೋತಲ್ಲಿಂದಲೇ ಎದ್ದು ಬದುಕು ಕಟ್ಟಿಕೊಳ್ಳುವ ಯಾವ ಚೈತನ್ಯವೂ ಉಳಿದಿರುವುದಿಲ್ಲ. ಪದೇ ಪದೇ ಸೋಲುವವರು, ಸೋತು ಗೆಲ್ಲುವವರು ಸೋಲನ್ನು ನಿಭಾಯಿಸುವುದು, ಎದುರಿಸುವುದು ಹೇಗೆ ಎಂಬುದನ್ನು ಕಲಿತಿರುತ್ತಾರೆ, ಅಥವಾ ಬದುಕು ಸದ್ದಿಲ್ಲದಂತೆ ಅಂಥದ್ದೊಂದು ಪಾಠವನ್ನು ಕಲಿಸಿರುತ್ತದೆ. ಆದ್ರೆ ಈ ಸೋಲಿಗೆ ಎಂದೂ ಮುಖಾಮುಖಿಯಾಗದವರಿರುತ್ತಾರಲ್ಲಾ, ಅವರು ಸೋತು ಬಿಟ್ಟರೆ ಮುಗಿಯಿತು, ಮತ್ತೆಂದೂ ಗೆಲ್ಲಲಾರೆ ಅನ್ನುವ ನಿರ್ಧಾರಕ್ಕೆ ಬಂದು ಬಿಡುತ್ತಾರೆ. ನಿರಂತರ ಗೆಲುವು ಹಂತ ಹಂತವಾಗಿ ಅವರೊಳಗೆ ರೂಪಿಸಿದ ದಾರ್ಷ್ಟ್ಯವನ್ನು ಸೋಲು ಒಮ್ಮೆಲೇ ಕೆಡವಿಬಿಡುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ಸೋಲನ್ನು ಅವಮಾನ ಅಂದುಕೊಂಡು ಆ ಸೋಲಿಗೆ ಇಲ್ಲದ ಕಾರಣಗಳನ್ನೂ, ಸಮಜಾಯಿಷಿಗಳನ್ನೂ ಕೊಟ್ಟುಕೊಳ್ಳುತ್ತಾ ತಮಗೆ ತಾವೇ ವಂಚನೆ ಮಾಡಿಕೊಳ್ಳಲಾರಂಭಿಸುತ್ತಾರೆ, ಅಸಲಿಗೆ ನಾನು ಸೋತೆ ಇಲ್ಲ ಅನ್ನುವ ಭ್ರಮೆಯಲ್ಲಿ ಬದಕತೊಡಗುತ್ತಾರೆ. ಅಲ್ಲಿಗೆ ಮುಂದೆಂದಾದರೂ ತೆರೆದುಕೊಳ್ಳಬಹುದಾಗಿದ್ದ ಗೆಲುವಿನ ಬಾಗಿಲು ಶಾಶ್ವತವಾಗಿ ಮುಚ್ಚಿಹೋಗುತ್ತದೆ.

ನಿಜ. ಪದೇ ಪದೇ ಸೋಲುವುದು, ದೈವೇಚ್ಛೆ, ವಿಧಿ, ಹಣೆಬರಹ ಎಂದೆಲ್ಲಾ ನಮ್ಮ ವ್ಯಾಪ್ತಿ ಮೀರಿದ ಸಂಗತಿಗಳ ಹೆಸರಲ್ಲಿ ಗೆಲುವಿಗಾಗಿ ಪ್ರಯತ್ನಿಸದೆ ಇರುವುದು ಖಂಡಿತಾ ಪಲಾಯನವಾದವೇ. ಹಾಗಂತ ಕೇವಲ ಗೆಲುವಿಗಾಗಿ ಬದುಕುತ್ತೇನೆ ಅಂತ ನಿರ್ಧರಿಸುವುದು ಎಷ್ಟು ಸರಿ? ಎಷ್ಟು ಸಂಭವನೀಯ? ಬದುಕೆಂದಮೇಲೆ ಗೆಲುವೂ ಬರಬೇಕು, ಸೋಲೂ ಇರಬೇಕು. ಸೋಲಿನ ನಿರಾಶೆಗಳು, ವೈಫಲ್ಯದ ನೋವುಗಳಿಲ್ಲದ ಬದುಕಿನಲ್ಲಿ ಗೆಲುವಿನ ಸಂಭ್ರಮವೂ, ಸಾಫಲ್ಯತೆಯ ಸಾರ್ಥಕ ಭಾವವೂ ಇರಲಾರವು. ಗೆಲುವಿನ ಖುಶಿ, ಸಾಫಲ್ಯತೆಯ ತೃಪ್ತಿ ಇರದ ಬದುಕಿನಲ್ಲಿ ಸೋಲು ಹುಟ್ಟು ಹಾಕುವ ಗೆಲ್ಲಬೇಕೆಂಬ ಹಠವೂ, ವೈಫಲ್ಯದ ಗರ್ಭದಿಂದ ಜನ್ಮ ತಾಳುವ ಸಫಲತೆಯ ಬಗೆಗಿನ ಹಂಬಲವೂ ಇರಲಾರವು.

ಇಷ್ಟಕ್ಕೂ ಬದುಕು ಆಡಂಬರ, ಹುಸಿ ತೋರಿಕೆ, ಒಣ ಅಹಂ, ಡಂಬಾಚಾರಗಳ ಹಂಗಿಲ್ಲದೆ ಸರಳವಾಗಿ ಅರಳುವುದು, ಅರಳುವ ಪ್ರಕ್ರಿಯೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳುವುದು, ಈ ಸೋಲು ಗೆಲುವುಗಳ ಲೆಕ್ಕಾಚಾರಗಳಾಚೆಗಿನ ಅಪ್ಪಟ ಮನುಷ್ಯ ಸಂವೇದನೆಗಳಲ್ಲಿ ಮಾತ್ರ. ಅಲ್ಲವೇ?