ಗುರುವಾರ, ಜನವರಿ 7, 2016

ಅಂದಹಾಗೆ, ನಿಮ್ಮ ನ್ಯೂ ಇಯರ್ ರೆಸಲ್ಯೂಷನ್ ಏನು?

ಇನ್ನು ಎರಡೇ ಎರಡು ದಿನಗಳು... 2016  ನಮ್ಮುಂದೆ ಓಡೋಡಿ ಬಂದು ಕುಳಿತುಕೊಂಡುಬಿಟ್ಟು ಏಳು ದಿನಗಳಷ್ಟೆ ಕಳೆದಿವೆ.. ನಾವೂ ಅಷ್ಟೇ ಮುಚ್ಚಟೆಯಿಂದ, ಹೊಸ ಹುಮ್ಮಸ್ಸಿನಿಂದ ಅದರ ಮೈದಡವಿ ಅಪ್ಪಿಕೊಂಡಿದ್ದೇವೆ,. ಕುಳಿತಲ್ಲಿಂದ ಅಮೂಲಾಗ್ರವಾಗಿ ಎಬ್ಬಿಸಿ ಬದುಕಿನೊಳಕ್ಕೆ ಬಿಟ್ಟುಕೊಂಡಿದ್ದೇವೆ. ಒಂದು ಚೆಂದದ ಮುಗಳ್ನಗೆಯೊಂದಿಗೆ ಅದರ ಹೆಗಲ ಮೇಲೆ ಕೈ ಹಾಕಿ ನಡೆಯಲು ಪ್ರಾರಂಭಿಸಿದ್ದೇವೆ.

ಆಮೇಲೆ...? ಒಂದೆರಡು ವಾರಗಳ ಕಾಲ ನಿಯಮಿತವಾಗಿ ಕೂತು ಶ್ರದ್ಧೆಯಿಂದ ಡೈರಿ ಬರೆಯುತ್ತೇವೆ. ಕೆಲವು ದಿನ ಸಹಿ ಹಾಕುವಾಗ, ನೋಟ್ಸ್ ಬರೆದಿಟ್ಟುಕೊಳ್ಳುವಾಗೆಲ್ಲಾ ದಿನಾಂಕ ಬರೆಯುವಲ್ಲಿ 2015  ಎಂದೇ ಬರೆದು, ಮತ್ತೆ ಅದನ್ನು ತಿದ್ದಿ 2016  ಮಾಡುತ್ತೇವೆ. ಮತ್ತೂ ಒಂದಿಷ್ಟು ದಿನಗಳವೆರೆಗೆ ಹೊಸ ವರ್ಷಕ್ಕೆಂದು ಮಾಡಿರೋ ಪ್ರತಿಜ್ಞೆಗಳನ್ನು ನೆನಪಿಟ್ಟುಕೊಂಡು ಅದರ ಪ್ರಕಾರವೇ ನಡೆಯುತ್ತೇವೆ. ಕೆಲ ದಿನಗಳು ಕಳೆದಂತೆ, ಜನವರಿ ಫೆಬ್ರವರಿಯಾದಂತೆ, ಡೈರಿ, ಪ್ರತಿಜ್ಞೆ ಎಲ್ಲಾ ಮರೆತು, ಎಲ್ಲಾ ವರ್ಷಗಳಂತೆ 2016  ಕೂಡ ಹಳತಾಗುತ್ತದೆ.

ಇರಲಿ, ನಾನಿಲ್ಲಿ ಪ್ರಸ್ತಾಪಿಸಹೊರಟಿದ್ದ ವಿಷಯ ಅದಲ್ಲವೇ ಅಲ್ಲ. ಹೊಸ ವರ್ಷದ ಆಚರಣೆಯ ಅಗತ್ಯತೆ, ಅನಿವಾರ್ಯತೆಗಳ ಬಗೆಗಿನ ವಾದ, ವಿಭಿನ್ನ ಖಂಡವೊಂದರ ಸಂಸ್ಕೃತಿಯನ್ನು ನಮ್ಮದಾಗಿಸಿಕೊಳ್ಳುತ್ತಿದ್ದೇವೆ ಅನ್ನುವ ತಕರಾರು, ತಡರಾತ್ರಿಯ ಪಾರ್ಟಿ, ಕುಡಿತ, ಸುಟ್ಟು ಹಾಕುವ ಮುದುಕನ ಪ್ರತಿಮೆ, Drink and Driveಗಳಂತಹ ಅತಿರೇಕದ ಅಸಂಬದ್ಧಗಳನ್ನು ಪಕ್ಕಕ್ಕಿಟ್ಟು, ಹೊಸ ವರ್ಷದ ಸ್ವಾಗತವನ್ನು ಧನಾತ್ಮಕವಾಗಿ ನೋಡಿದಾಗೆಲ್ಲಾ ಡಿಸೆಂಬರ್ 31ರ ರಾತ್ರಿ ಗೈಯಲ್ಪಡುವ ಶಪಥಗಳು ಹೆಚ್ಚು ಆಪ್ತವೆನಿಸುತ್ತದೆ.

ಅದೆಷ್ಟು ವೈವಿಧ್ಯತೆ ಇರುತ್ತದೆ ಈ ಹೊಸ ವರ್ಷದ ಶಪಥಗಳಲ್ಲಿ! ಹೊಸ ವರ್ಷದ ಆರಂಭದಿಂದಲೇ ಬೆಳಗ್ಗೆ ಐದು ಗಂಟೆಗೆ ಏಳುತ್ತೇನೆ, ಹಲ್ಲುಜ್ಜದೆ ಕಾಫಿ ಕುಡಿಯುವುದಿಲ್ಲ, ದಿನಾ ಅರ್ಧ ಗಂಟೆ ವಾಕಿಂಗ್ ಮಾಡ್ತೇನೆ, ಫ್ಯಾಮಿಲಿ ಜೊತೆ ಸಮಯ ಕಳೀತೇನೆ, ದಿನಪೂರ್ತಿ ಫೇಸ್ಬುಕ್ನಲ್ಲಿ ಮುಳುಗುವುದನ್ನು ನಿಲ್ಲಿಸ್ತೇನೆ, ದಿನಕ್ಕೆರಡೇ ಗಂಟೆ ವಾಟ್ಸಾಪ್ ಬಳಸುತ್ತೇನೆ..ಗಳಂತಹ ಪ್ರತಿಜ್ಞೆಗಳದು ಒಂದು ತೂಕವಾದರೆ, ಈ ವರ್ಷ ಹೆಚ್ಚು ಸಾಲ ಮಾಡ್ಕೊಳ್ಳುವುದಿಲ್ಲ, ಮಾಡುವ ಕೆಲಸವನ್ನು ಶ್ರದ್ಧೆಯಿಂದ ಮತ್ತು ಆತ್ಮ ಸಮರ್ಪಣೆಯಿಂದ ಮಾಡುತ್ತೇನೆ, ಜಂಕ್ ಫುಡ್ ತಿನ್ನುವುದನ್ನು ಕಡಿಮೆ ಮಾಡುತ್ತೇನೆ, ಸಿಗರೇಟ್ ಬಿಡುತ್ತೇನೆ, ಕುಡಿತ ನಿಲ್ಲಿಸುತ್ತೇನೆ, ಬಾಯ್ಫ್ರೆಂಡ್ ಗೆ ಸುಳ್ಳು ಹೇಳುವುದಿಲ್ಲ, ಗರ್ಲ್ ಫ್ರೆಂಡ್ಗೆ ನಿಯ್ಯತ್ತಾಗಿರುವುತ್ತೇನೆ, ಅಮ್ಮನನ್ನು ಯಾಮಾರಿಸುವುದಿಲ್ಲ, ಅಪ್ಪನ ಕಣ್ಣು ತಪ್ಪಿಸಿ ಓಡಾಡುವುದನ್ನು ಕಡಿಮೆ ಮಾಡುತ್ತೇನೆ, ಆಫೀಸ್ ಸಿಸ್ಟಮ್ನಲ್ಲಿ ಸಾಮಾಜಿಕ ಜಾಲತಾಣ ಓಪನ್ ಮಾಡಿ ಫ್ರೆಂಡ್ಸ್ ಜೊತೆ ಹರಟೆ ಕೊಚ್ಚುವುದಿಲ್ಲ...ಗಳಂತಹ ಪ್ರತಿಜ್ಞೆಗಳದೇ ಮತ್ತೊಂದು ತೂಕ.

ಇನ್ನು, ವಾರಕ್ಕೊಂದರಂತೆ ವರ್ಷಕ್ಕೆ ಕನಿಷ್ಟ 52 ಪುಸ್ತಕಗಳನ್ನಾದರೂ ಓದುತ್ತೇನೆ, ವರ್ಷ ಮುಗಿಯುವ ಮುನ್ನ ಇಬ್ಬರು ಸಾಹಿತಿಗಳನ್ನಾದರೂ ಭೇಟಿಯಾಗುತ್ತೇನೆ, ಪ್ರತಿ ದಿನ ಕನಿಷ್ಟ ಒಂದು ಪುಟದಷ್ಟಾದರೂ ಬರೆಯುತ್ತೇನೆ, ಹಾಗೆ ಬರೆಯಲು ಸಾಧ್ಯವಾಗದ ಮರುದಿನ ಎರಡು ಪುಟ ಬರೆಯುತ್ತೇನೆ... ಮುಂತಾದವುಗಳೆಲ್ಲಾ ಬರಹಗಾರರ, ಪುಸ್ತಕ ಪ್ರೇಮಿಗಳ ಬತ್ತಳಿಕೆಯಲ್ಲಿನ ಕೆಲ ಪ್ರತಿಜ್ಞೆಗಳು. ರಸ್ತೆಯಲ್ಲಿ ಕಸ ಹಾಕುವುದಿಲ್ಲ, ಮನೆಯನ್ನು ಸ್ವಚ್ಛವಾಗಿಟ್ಟುಕೊಂಡಷ್ಟೇ ಸಹಜವಾಗಿ ನನ್ನ ಬೀದಿಯನ್ನೂ ಸ್ವಚ್ಛವಾಗಿಟ್ಟುಕೊಳ್ಳುತ್ತೇನೆ, ಹಾಗೆ ಇಟ್ಟುಕೊಳ್ಳುವಂತೆ ಇತರರನ್ನೂ ಪ್ರೇರೇಪಿಸುತ್ತೇನೆ, ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ಮಾಡುವುದಿಲ್ಲ, ಇಬ್ಬರ ಜಗಳದ ಮಧ್ಯೆ ತುಪ್ಪ ಸುರಿಯೋಕೆ ಹೋಗುವುದಿಲ್ಲ, ಫೇಸ್ಬುಕ್ನ ಅನಗತ್ಯದ ಚರ್ಚೆಗಳಲ್ಲಿ ಭಕ್ತರ ಗುಂಪಿಗೂ ಸೇರದೆ, ರಾಯಲ್ ಫ್ಯಾಮಿಲಿಯ ಫಾಲೋವರ್ಸ್ಗಳ ವರ್ಗಕ್ಕೂ ಸೇರದೆ ತಟಸ್ಥವಾಗಿರುತ್ತೇನೆ, ಅದೆಷ್ಟೇ ದೂರದೂರಲ್ಲಿದ್ದರೂ, ಪಂಚಾಯತ್ ಚುನಾವಣೆ ಸಂದರ್ಭ ಊರಿಗೆ ಬಂದು ಮತ ಚಲಾಯಿಸುತ್ತೇನೆ ಮುಂತಾದ ಸಾಮಾಜಿಕ ಕಳಕಳಿಯ ಪ್ರತಿಜ್ಞೆ ಕೈಗೊಳ್ಳುವವರೂ ಇದ್ದಾರೆ.

ಆದರೆ, ವಿಚಿತ್ರ ಏನು ಗೊತ್ತಾ? ಹೀಗೆ ಡಿಸೆಂಬರ್31ರ ರಾತ್ರಿ ಮೇಣದ ಬತ್ತಿಯ ಬೆಳಕಿನ ಮುಂದೆ, ಕೈಯಲ್ಲೊಂದು ಡೈರಿ ಮತ್ತು ಪೆನ್ ಹಿಡಿದು ಗಂಭೀರವಾಗಿ ಕೂತು ಅರಿಭಯಂಕರ ಪ್ರತಿಜ್ಞೆ ಮಾಡಿದ ಬಹುತೇಕರೆಲ್ಲಾ ಫೆಬ್ರವರಿ1ರ ಹೊತ್ತಿಗೆ ಅದನ್ನು ಮರೆತಿರುತ್ತಾರೆ. ಅಷ್ಟು ಹೊತ್ತಿಗೆ ಹೊಸವರ್ಷವೂ ಹಳತಾಗಿರುತ್ತದೆ ಮತ್ತು 31ರ ರಾತ್ರಿ ಯಾರಿಗೆಲ್ಲಾ ಕರೆ ಮಾಡಿ, ಮೆಸೇಜ್ ಮಾಡಿ ಅಥವಾ ಮುಂದೆ ಕೂರಿಸಿಕೊಂಡು  ನ್ಯೂ ಇಯರ್ ರೆಸಲ್ಯೂಷನ್ಸ್ ಬಗ್ಗೆ ಹೇಳಿಕೊಂಡಿರುತ್ತೇವೆಯೋ ಅವರೂ ನಮ್ಮ ರೆಸಲ್ಯೂಷನ್ಗಳನ್ನೂ ನಮಗದನ್ನು ನೆನಪಿಸಬೇಕಾಗಿರುವ ಅವರ ’ಪರಮ ಕರ್ತವ್ಯ’ವನ್ನೂ ಮರೆತಿರುತ್ತಾರೆ.

ಅಲ್ಲಿಗೆ, ನಿರ್ಧಾರಗಳು, ಅವುಗಳ ಪಾಲನೆಗೆ ಇದ್ದ ಕಮಿಟ್ಮೆಂಟ್ಗಳೂ ಮಕಾಡೆ ಮಲಗುತ್ತವೆ. ಮತ್ತೆ ಅವು ನೆನಪಾಗಬೇಕಾದರೆ, ಮತ್ತೊಂದು ಡಿಸೆಂಬರ್ ಮೂವತ್ತೊಂದೋ ಇಲ್ಲ ಜನವರಿ ಒಂದೋ ನಮ್ಮ ಕಣ್ಣೆದುರು ಬರಬೇಕು. ಹಾಗೆಂದು ಹೊಸ ವರ್ಷದ ಸಂದರ್ಭಗಳಲ್ಲಿ ಮಾಡಿದ ಪ್ರತಿಜ್ಞೆಗಳನ್ನು ಯಾರೂ ಪಾಲಿಸುವುದೇ ಇಲ್ಲ ಅಂತಲ್ಲ. ಆದ್ರೆ ಜಾಗತಿಕ ಸಮೀಕ್ಷೆಯೊಂದರ ಪ್ರಕಾರ ಹಾಗೆ ಪಾಲಿಸುವವರು ಶೇಕಡ ಹತ್ತರಷ್ಟು ಮಾತ್ರ.

ನಿಜಕ್ಕೂ ಒಂದು ಒಳ್ಳೆಯ ನಿರ್ಧಾರವನ್ನು ಕೈಗೊಳ್ಳಲು, ನಮ್ಮಲ್ಲಿರುವ ಕೆಟ್ಟತನವನ್ನು ಬಿಟ್ಟು ಬಿಡಲು, ಹಳೆ ಭ್ರಮೆಗಳಿಂದ ಹೊರಬರಲು, ಕೆಲವು ಕಹಿ ಘಟನೆಗಳನ್ನು ಮರೆಯಲು, ಹೊಸ ಬದುಕಿನ ನೀಲನಕ್ಷೆ ಸಿದ್ಧಪಡಿಸಲು ಹೊಸ ವರ್ಷ ಒಳ್ಳೆಯ ಸಂದರ್ಭವೇ. ಆದರೆ, ನಿರ್ಧಾರಗಳನ್ನು ಕೈಗೊಳ್ಳುವಾಗ ವಾಸ್ತವಿಕ ಮತ್ತು ಪೂರೈಸಲು ಸಾಧ್ಯವಿರುವಂತಹ ನಿರ್ಧಾರಗಳನ್ನು ಕೈಗೊಳ್ಳಬೇಕು. ಈಗಷ್ಟೇ ನೌಕರಿಗೆ ಸೇರಿಕೊಂಡವ, ವರ್ಷಾಂತ್ಯದಲ್ಲಿ ಐ.ಪಿ.ಎಲ್ ಟೀಂ ಒಂದನ್ನು ಖರೀದಿಸುತ್ತೇನೆ ಅನ್ನುವ ಶಪಥ ಮಾಡುವುದು, ನಿನ್ನೆಯಷ್ಟೇ ಕಬಡ್ಡಿಯ ಪಟ್ಟುಗಳನ್ನು ಕಲಿಯತೊಡಗಿದ ಹುಡುಗ ವರ್ಷ ಮುಗಿಯುವಷ್ಟರಲ್ಲಿ ಬೆಂಗಳೂರು ಬುಲ್ಸ್ ಟೀಮಿನ ಕ್ಯಾಪ್ಟನ್ ಆಗುತ್ತೇನೆ ಅನ್ನುವ ಪ್ರತಿಜ್ಞೆ ಕೈಗೊಳ್ಳುವುದು, ಈ ಕ್ಷಣದವರೆಗೂ ಉಸಿರಿನಂತೆ ಅಂಟಿಕೊಂಡಿರುವ ಸಿಗರೇಟ್ ಸೇದುವ ಚಟವನ್ನು ನಾಳೆ ಒಂದೇ ದಿನದಲ್ಲಿ ಸಂಪೂರ್ಣವಾಗಿ ನಿಲ್ಲಿಸುತ್ತೇನೆ ಅಂದುಕೊಳ್ಳುವುದು... ಮುಂತಾದವೆಲ್ಲಾ ತೀರಾ ಬಾಲಿಶ ಮತ್ತು ಅಸಂಭವ. ಹಾಗಾಗಿ ಅಂತಹ ಅಸಂಭವ ಮತ್ತು ಕಾರ್ಯ ಸಾಧ್ಯವಲ್ಲದ ನಿರ್ಧಾರಗಳನ್ನು ಕೈಗೊಂಡು, ಮುಂದೆ ಅದನ್ನು ಪೂರೈಸಲಾಗದೆ ಪ್ರತಿಜ್ಞೆಗಳ ಬಗ್ಗೆಯೇ ಸಿನಿಕತನ ಬೆಳೆಸಿಕೊಳ್ಳುವುದಕ್ಕಿಂತ ನಮ್ಮ ಸಾಮರ್ಥ್ಯಕ್ಕೆ ಕಾರ್ಯಸಾಧ್ಯವಾಗಬಲ್ಲ ಶಪಥ ಮಾಡೋಣ ಮತ್ತದನ್ನು ಪೂರೈಸೋಣ.

ಅಂದ್ಹಾಗೆ, ಹೈಸ್ಕೂಲ್ ಓದುತ್ತಿದ್ದಾಗಿನ ಎಲ್ಲಾ ಗೆಳತಿಯರನ್ನು, ಕಾಟಕೊಡುತ್ತಿದ್ದ ಸೀನಿಯರ್ ಹುಡುಗಿಯರನ್ನು, ಲೆಕ್ಕ ಹೇಳಿಸಿಕೊಳ್ಳುತ್ತಿದ್ದ ಜೂನಿಯರ್ ಹುಡುಗಿಯರನ್ನು, ಮತ್ತೊಂದಿಬ್ಬರು ಕ್ಲಾಸ್ಮೇಟ್ ಹುಡುಗರನ್ನೂ ಭೇಟಿಯಾಗಿ, ಜೀವನಪೂರ್ತಿ ನೆನಪಿಸಿಕೊಳ್ಳಲು ನೂರಾರು ಸಿಹಿ ನೆನಪುಗಳನ್ನು ಒದಗಿಸಿಕೊಟ್ಟ ಅವರಿಗೊಂದು ಚೆಂದದ ತ್ಯಾಂಕ್ಸ್ ಹೇಳಿ, ದೂರ ಆಗಿರುವ ಸಂಬಂಧಗಳನ್ನು ಮತ್ತೆ ಹತ್ತಿರವಾಗಿಸುವುದು ನನ್ನ ಈ ವರ್ಷದ ರೆಸಲ್ಯೂಷನ್. ಮತ್ತೆ ನಿಮ್ಮದು...?

2 ಕಾಮೆಂಟ್‌ಗಳು: