ಶುಕ್ರವಾರ, ಜನವರಿ 1, 2016

ಬದುಕು ಅರಳುವುದು ಸೋಲು ಗೆಲುವುಗಳಾಚೆಗಿನ ಮನುಷ್ಯ ಸಂವೇದನೆಗಳಲ್ಲಿ ಮಾತ್ರ. ಅಲ್ಲವೇ?

ಕೆಲವರಿರುತ್ತಾರೆ...
ಸೋಲು ಅನ್ನುವುದು ಅವರನ್ನು ಕಿರುಬೆರಳಿನಿಂದಲೂ ಸೋಕಿರುವುದಿಲ್ಲ. ಆಟ, ಪಾಠ, ಗೆಳೆತನ, ಪ್ರೇಮ, ಸಂಬಂಧ, ಉದ್ಯೋಗ, ಯಶಸ್ಸು ಹೀಗೆ ಯಾವ ದಿಕ್ಕಿನಿಂದ ನೋಡಿದರೂ ಅವರು ಸೋತ ಉದಾಹರಣೆಗಳೇ ಸಿಗುವುದಿಲ್ಲ. ಏನನ್ನೇ ಆಯ್ಕೆ ಮಾಡಿಕೊಳ್ಳುವುದಾದರೂ, ಏನೇ ಕೆಲಸ ಕೈಗೆತ್ತಿಕೊಳ್ಳುವುದಾದರೂ ನೂರು ಬಾರಿ ಯೋಚಿಸಿ, ಅಳೆದೂ ತೂಗಿಯೇ ಮುಂದಡಿಯಿಡುತ್ತಾರೆ. ದಿನ ಬೆಳಗಾಗೆದ್ದು ಓದುವ ದಿನಪತ್ರಿಕೆಯಿಂದ ಜೀವನ ಸಂಗಾತಿಯನ್ನು ಆಯ್ದುಕೊಳ್ಳುವವರೆಗೂ ಅವರ ಆಯ್ಕೆಗಳೆಲ್ಲವೂ ಒಂದು ಪರ್ಫೆಕ್ಟ್ ಸರಳರೇಖೆಯಲ್ಲೇ ಇರುತ್ತದೆ.

ಎಷ್ಟು ಚೆನ್ನಾಗಿರುತ್ತಲ್ವಾ ಅವರ ಬದುಕು? ನಮ್ಮನ್ನು ಭಾದಿಸುವ ಯಾವ ಸಂಗತಿಗಳೂ ಅವರನ್ನು ಭಾದಿಸಲಾರವು. ಸೋಲು ಸನಿಹಕ್ಕೂ ಸುಳಿಯುವುದಿಲ್ಲ ಅಂದಮೇಲೆ ಸೋಲಿನ ನಿರಾಶೆಗಳಿಗೆ, ವೈಫಲ್ಯದ ನೋವುಗಳಿಗೆ ಜಾಗವೇ ಇರುವುದಿಲ್ಲ. ಮುರಿದು ಬಿದ್ದ ಕನಸುಗಳು ಪದೇ ಪದೇ ಕಾಡುವಾಗ ಆಗೋ ಚಡಪಡಿಕೆಗಳಾಗಲೀ, ಜೀವನ ಪೂರ್ತಿ ಜೊತೆಗಿರುತ್ತೆ ಅಂತ ಅಂದುಕೊಂಡಿದ್ದ ಸಂಬಂಧವೊಂದು ಕಣ್ಣಮುಂದೆಯೇ ಕೈತಪ್ಪಿ ಹೋದ ಅಸಹಾಯಕತೆಯನ್ನಾಗಲೀ ಜೀವನ ಪೂರ್ತಿ ಅನುಭವಿಸಬೇಕಾದ ಯಾವ ದರ್ದೂ ಅವರಿಗಿರುವುದಿಲ್ಲ.



ಹಾಗಂತ ನಾವಂದುಕೊಳ್ಳುತ್ತೇವೆ. ಆದ್ರೆ ನಿಜಕ್ಕೂ ಅಂತಹ ’ಗೆಲುವಿನ ಸರದಾರರ’ ಬದುಕು ನಾವಂದುಕೊಂಡಿರುವಷ್ಟು ಸುಂದವಾಗಿರುತ್ತದಾ? ಸುಖವಾಗಿರುತ್ತದಾ? ಸಂತಸ ಮಾತ್ರ ತುಳುಕಾಡುತ್ತಿರುತ್ತದಾ? ನೋವು ಅಲ್ಲಿ ಕಾಲಿಡುವುದೇ ಇಲ್ವಾ?

ಕೇವಲ ಗೆಲುವಿಗಾಗಿ ಬದುಕುತ್ತಿರುತ್ತೇನೆ ಅಂತ ಭಾವಿಸಿಕೊಂಡವರು ಪ್ರತಿ ಕ್ಷಣ ಸೋಲಿನ ಭಯದಲ್ಲಿ ನರಳುತ್ತಿರುತ್ತಾರೆ. ಎತ್ತಲಿಂದ ಸೋಲು ಮೇಲೆರಗಿ ಬರಬಹುದೆಂದು ಸದಾ ಜಾಗೃತ ಸ್ಥಿತಿಯಲ್ಲಿರುತ್ತಾರೆ. ಒಂದು ಗೆಲುವು ದಕ್ಕಿಸಿಕೊಂಡ ಮರು ಕ್ಷಣದಲ್ಲಿ ಮತ್ತೊಂದು ಗೆಲುವಿಗಾಗಿ ಹಪಹಪಿಸತೊಡಗುತ್ತಾರೆ, ಯೋಜನೆ ರೂಪಿಸತೊಡಗುತ್ತಾರೆ. ದಕ್ಕಿಸಿಕೊಂಡ ಗೆಲುವನ್ನು ಸಣ್ಣದಾಗಿಯೇ ಆದರೂ ಸಂಭ್ರಮಿಸಿಕೊಳ್ಳಲು ಅವರ ಬಳಿ ಸಮಯವೇ ಇರುವುದಿಲ್ಲ, ಇದ್ದರೂ ಮತ್ತೊಂದು ಗೆಲುವಿನೆಡೆಗಿನ ತುಡಿತ, ’ಸೋತು ಬಿಟ್ಟೇನು’ ಅನ್ನುವ ಭಯ ಆ ಸಂಭ್ರಮವನ್ನು ಬುಡ ಸಮೇತ ಕಿತ್ತೊಗೆದಿರುತ್ತದೆ. ಒಟ್ಟಿನಲ್ಲಿ ಅವರು ’ಹೀಗೆಯೇ’ ಬದುಕಬೇಕು, ಬದುಕುತ್ತೇನೆ ಅನ್ನುವ ಸೂತ್ರಕ್ಕೆ ತಮ್ಮನ್ನು ತಾವೇ ಬಂಧಿಸಿಕೊಂಡು ಅವುಡುಗಚ್ಚಿ ಬದುಕುತ್ತಿರುತ್ತಾರೆ. ಯಂತ್ರದ ಚಕ್ರದಂತೆ ಒಂದು ಸಿದ್ಧ ಸೂತ್ರಕ್ಕೆ ಒಳಪಟ್ಟು ಅವರು ಬದುಕು ಸದಾ ತಿರುಗುತ್ತಲೇ ಇರುತ್ತದೆ. ಪ್ರತಿ ದಿನ ಅದೇ ಯಂತ್ರ, ಅದೇ ಚಕ್ರ! ಗೆಲುವೊಂದನ್ನು ಬಿಟ್ಟು ಪ್ರಪಂಚದ ಯಾವ ಸಂಗತಿಗಳೂ ಅಲ್ಲಿ ಮುಖ್ಯವೆನಿಸುವುದೇ ಇಲ್ಲ.

ಒಮ್ಮೆ ಸೂತ್ರ ತಪ್ಪಿ ಚಕ್ರ ನಿಂತು ಬಿಟ್ಟರೋ...? ಅಲ್ಲಿಗೆ ಎಲ್ಲವೂ ಮುಗಿಯುತ್ತದೆ. ಬದುಕು ಸ್ಥಬ್ಧವಾಗಿಬಿಡುತ್ತದೆ. ನಿಂತಿರೋ ಚಕ್ರವನ್ನು ಮತ್ತೆ ತಿರುಗಿಸುವ, ಸೋತಲ್ಲಿಂದಲೇ ಎದ್ದು ಬದುಕು ಕಟ್ಟಿಕೊಳ್ಳುವ ಯಾವ ಚೈತನ್ಯವೂ ಉಳಿದಿರುವುದಿಲ್ಲ. ಪದೇ ಪದೇ ಸೋಲುವವರು, ಸೋತು ಗೆಲ್ಲುವವರು ಸೋಲನ್ನು ನಿಭಾಯಿಸುವುದು, ಎದುರಿಸುವುದು ಹೇಗೆ ಎಂಬುದನ್ನು ಕಲಿತಿರುತ್ತಾರೆ, ಅಥವಾ ಬದುಕು ಸದ್ದಿಲ್ಲದಂತೆ ಅಂಥದ್ದೊಂದು ಪಾಠವನ್ನು ಕಲಿಸಿರುತ್ತದೆ. ಆದ್ರೆ ಈ ಸೋಲಿಗೆ ಎಂದೂ ಮುಖಾಮುಖಿಯಾಗದವರಿರುತ್ತಾರಲ್ಲಾ, ಅವರು ಸೋತು ಬಿಟ್ಟರೆ ಮುಗಿಯಿತು, ಮತ್ತೆಂದೂ ಗೆಲ್ಲಲಾರೆ ಅನ್ನುವ ನಿರ್ಧಾರಕ್ಕೆ ಬಂದು ಬಿಡುತ್ತಾರೆ. ನಿರಂತರ ಗೆಲುವು ಹಂತ ಹಂತವಾಗಿ ಅವರೊಳಗೆ ರೂಪಿಸಿದ ದಾರ್ಷ್ಟ್ಯವನ್ನು ಸೋಲು ಒಮ್ಮೆಲೇ ಕೆಡವಿಬಿಡುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ಸೋಲನ್ನು ಅವಮಾನ ಅಂದುಕೊಂಡು ಆ ಸೋಲಿಗೆ ಇಲ್ಲದ ಕಾರಣಗಳನ್ನೂ, ಸಮಜಾಯಿಷಿಗಳನ್ನೂ ಕೊಟ್ಟುಕೊಳ್ಳುತ್ತಾ ತಮಗೆ ತಾವೇ ವಂಚನೆ ಮಾಡಿಕೊಳ್ಳಲಾರಂಭಿಸುತ್ತಾರೆ, ಅಸಲಿಗೆ ನಾನು ಸೋತೆ ಇಲ್ಲ ಅನ್ನುವ ಭ್ರಮೆಯಲ್ಲಿ ಬದಕತೊಡಗುತ್ತಾರೆ. ಅಲ್ಲಿಗೆ ಮುಂದೆಂದಾದರೂ ತೆರೆದುಕೊಳ್ಳಬಹುದಾಗಿದ್ದ ಗೆಲುವಿನ ಬಾಗಿಲು ಶಾಶ್ವತವಾಗಿ ಮುಚ್ಚಿಹೋಗುತ್ತದೆ.

ನಿಜ. ಪದೇ ಪದೇ ಸೋಲುವುದು, ದೈವೇಚ್ಛೆ, ವಿಧಿ, ಹಣೆಬರಹ ಎಂದೆಲ್ಲಾ ನಮ್ಮ ವ್ಯಾಪ್ತಿ ಮೀರಿದ ಸಂಗತಿಗಳ ಹೆಸರಲ್ಲಿ ಗೆಲುವಿಗಾಗಿ ಪ್ರಯತ್ನಿಸದೆ ಇರುವುದು ಖಂಡಿತಾ ಪಲಾಯನವಾದವೇ. ಹಾಗಂತ ಕೇವಲ ಗೆಲುವಿಗಾಗಿ ಬದುಕುತ್ತೇನೆ ಅಂತ ನಿರ್ಧರಿಸುವುದು ಎಷ್ಟು ಸರಿ? ಎಷ್ಟು ಸಂಭವನೀಯ? ಬದುಕೆಂದಮೇಲೆ ಗೆಲುವೂ ಬರಬೇಕು, ಸೋಲೂ ಇರಬೇಕು. ಸೋಲಿನ ನಿರಾಶೆಗಳು, ವೈಫಲ್ಯದ ನೋವುಗಳಿಲ್ಲದ ಬದುಕಿನಲ್ಲಿ ಗೆಲುವಿನ ಸಂಭ್ರಮವೂ, ಸಾಫಲ್ಯತೆಯ ಸಾರ್ಥಕ ಭಾವವೂ ಇರಲಾರವು. ಗೆಲುವಿನ ಖುಶಿ, ಸಾಫಲ್ಯತೆಯ ತೃಪ್ತಿ ಇರದ ಬದುಕಿನಲ್ಲಿ ಸೋಲು ಹುಟ್ಟು ಹಾಕುವ ಗೆಲ್ಲಬೇಕೆಂಬ ಹಠವೂ, ವೈಫಲ್ಯದ ಗರ್ಭದಿಂದ ಜನ್ಮ ತಾಳುವ ಸಫಲತೆಯ ಬಗೆಗಿನ ಹಂಬಲವೂ ಇರಲಾರವು.

ಇಷ್ಟಕ್ಕೂ ಬದುಕು ಆಡಂಬರ, ಹುಸಿ ತೋರಿಕೆ, ಒಣ ಅಹಂ, ಡಂಬಾಚಾರಗಳ ಹಂಗಿಲ್ಲದೆ ಸರಳವಾಗಿ ಅರಳುವುದು, ಅರಳುವ ಪ್ರಕ್ರಿಯೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳುವುದು, ಈ ಸೋಲು ಗೆಲುವುಗಳ ಲೆಕ್ಕಾಚಾರಗಳಾಚೆಗಿನ ಅಪ್ಪಟ ಮನುಷ್ಯ ಸಂವೇದನೆಗಳಲ್ಲಿ ಮಾತ್ರ. ಅಲ್ಲವೇ?

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ