ಗುರುವಾರ, ಮಾರ್ಚ್ 21, 2019

ತೇಲಿ ಬಂದ ಪುಟಗಳು

ಪ್ರಪಂಚದ ಎಲ್ಲಾ ಸವಲತ್ತುಗಳು ಮೊಮ್ಮಗಳಿಗೆ ಸುಲಭವಾಗಿ ಸಿಗಲಿ ಎಂಬ ಅಭಿಲಾಷೆಯ ಅಜ್ಜಿ ಮತ್ತು ಅರ್ಹತೆ ಗಳಿಸಿಕೊಂಡು ತನಗೆ ಬೇಕಾದ್ದನ್ನು ಪಡೆದುಕೊಳ್ಳಲಿ ಎಂದು ಆಶಿಸುವ ಅಜ್ಜ... ಮಧ್ಯೆ ನಾನು ಬರೆಯಲು ಕಲಿತದ್ದು ಯಾವಾಗ? ಅಸಲಿಗೆ ನಾನು ಕಲಿತದ್ದಾ ಅಥವಾ ಬದುಕೇ ಕಲಿಸಿತಾ? ಯಾವ ದಿನ, ಯಾವ ಕ್ಷಣ ಬದುಕು ಬರಹವನ್ನು ನನ್ನ ಜೊತೆಯಾಗಿಸಿತು? ಲೆಕ್ಕ ಹಾಕಿದರೆ ಎಲ್ಲಾ ಗೋಜಲು ಗೋಜಲು.

ಮೂರನೇ ತರಗತಿಯಲ್ಲಿ ಓದುತ್ತಿದ್ದಾಗ ನಮ್ಮ ಟೀಚರ್ 'ಪರಿಸರ ಮಾಲಿನ್ಯ'ದ ಬಗ್ಗೆ ಅರ್ಧ ಪುಟ ಮೀರದಂತೆ ಪ್ರಬಂಧ ಬರೆದು ತರಲು ತಿಳಿಸಿದ್ದರು. 'ರಿಟೈರ್ಡ್' ಮೇಷ್ಟ್ರು ಮನೆಯಲ್ಲಿರಬೇಕಾದರೆ, ಅರ್ಧ ಪುಟ ಯಾಕೆ ಒಂದು ಪುಸ್ತಕ ಬೇಕಿದ್ದರೂ ಬರೆಯಬಲ್ಲೆ ಅನ್ನುವ ಧಿಮಾಕಿನಿಂದ ಮನೆಗೆ ಬಂದು ಅಜ್ಜನ ಕೈಗೆ ಪೆನ್ನು ಪುಸ್ತಕ ಕೊಟ್ಟು ಸಲೀಸಾಗಿ ಆಟ ಆಡಲು ಹೋದೆ. ಆಡಿ ಬರುವಷ್ಟರಲ್ಲಿ ಪ್ರಬಂಧ ರೆಡಿಯಾಗಿರುತ್ತದೆ ಅನ್ನುವ ಅತಿ ನಂಬಿಕೆ ನನ್ನದು. ಆದರೆ ಆಡಿ ಕೈಕಾಲು ಮುಖ ತೊಳೆದು ಬಂದಾಗ ಅಜ್ಜ, ನಾಲ್ಕು ಪಾಯಿಂಟ್ ಬರೆದಿಟ್ಟು ಗಂಭೀರವಾಗಿ ಉರ್ದು ಶಾಯರಿ ಓದುತ್ತಾ ಕುಳಿತಿದ್ದರು. ನಾನು ಪ್ರಬಂಧ ಎಲ್ಲಿ ಎಂದು ಕೇಳಿದಾಗ, ಪುಸ್ತಕ ಕೈಗಿಟ್ಟು "ಈ ನಾಲ್ಕು ಪಾಯಿಂಟ್ ಗಳನ್ನು ಆಧಾರವಾಗಿಟ್ಟುಕೊಂಡು ನೀನೇ ಬರಿ" ಎಂದು ತಮ್ಮ ಓದು ಮುಂದುವರೆಸಿದರು. ನನ್ನ ಗೋಗರೆತ, ಅಳು ಯಾವುದೂ ಫಲ ನೀಡದಿದ್ದಾಗ ಅಜ್ಜಿ ಮೆತ್ತಗೆ "ಪಾಪ ಮಗು, ಅಷ್ಟು ಆಸೆಯಿಂದ ಕೇಳುತ್ತಿರುವಾಗ ಬರೆದು ಕೊಡಬಾರದಾ?" ಎಂದು ಕಕ್ಕುಲಾತಿಯಿಂದ ಕೇಳಿದರು. ಅಜ್ಜ ಅಷ್ಟೇ ನಿರ್ಲಕ್ಷ್ಯದಿಂದ "ಬರೆದುಕೊಳ್ಳುತ್ತಾಳೆ ಬಿಡು" ಎಂದು ಮತ್ತೆ ಜೋರಾಗಿ ಶಾಯರಿ ಓದತೊಡಗಿದರು. ಆ ಕ್ಷಣಕ್ಕೆ ನನಗೆ ಬಂದ ಸಿಟ್ಟು, ಕಾಡಿದ ಅಸಹಾಯಕತೆಯನ್ನು ಇಷ್ಟು ವರ್ಷಗಳಾದ ಮೇಲೂ ಪದಗಳಲ್ಲಿ ಹಿಡಿದಿಡಲಾಗುವುದಿಲ್ಲ. ಆ ಹೊತ್ತು ಅಜ್ಜನ ನಿರಾಕರಣೆ ನನ್ನ ಸ್ವಾಭಿಮಾನಕ್ಕೆ ದೊಡ್ಡ ಪೆಟ್ಟು ಕೊಟ್ಟಿತ್ತು. ಮತ್ತು ಆ ತೀವ್ರತೆ ನನ್ನಿಂದ ಒಂದು ಪುಟದಷ್ಟಿದ್ದ ಪ್ರಬಂಧ ಬರೆಯಿಸಿತ್ತು. ಅಜ್ಜ ಆವತ್ತು ಮೀಸೆಯಡಿಯಲ್ಲಿಯೇ ನಕ್ಕಿದ್ದರಾ? ಗೊತ್ತಿಲ್ಲ. ಆ ಕ್ಷಣ ನಾನು ಬರೆಯಲು ಕಲಿತೆನಾ? ಅರ್ಥವಾಗುತ್ತಿಲ್ಲ.

ಅಜ್ಜ ನನ್ನ ಬದುಕಿನ ಮೊದಲ ಗುರು. ಊರವರು, ಪರಿಚಿತರು ಸಲಹೆಗಳಿಗಾಗಿ, ವ್ಯಾಜ್ಯ ಪರಿಹಾರಕ್ಕಾಗಿ, ಪತ್ರ ಓದಿಸಲು ಮತ್ತು ಬರೆಯಿಸಲಿಕ್ಕಾಗಿ ಅಜ್ಜನನ್ನು ಭೇಟಿಯಾಗುತ್ತಿದ್ದರೆ ನನ್ನ ಕಣ್ಣೊಳಗೆ ಒಂದು ಅರಿಯದ ಬೆರಗು. ನಾನೂ ದೊಡ್ಡವಳಾದರೆ ಅಜ್ಜನಂತೆಯೇ ಎಲ್ಲರಿಗೂ ಬೇಕಾದವಳಾಗಿ ಬದುಕಬೇಕು ಅಂದುಕೊಳ್ಳುತ್ತಿದ್ದೆ. ನನಗೆ ಪುಸ್ತಕಗಳನ್ನು ಪರಿಚಯಿಸಿದ್ದು, ಓದಿನ ರುಚಿ ಹತ್ತಿಸಿದ್ದು ಅಜ್ಜನೇ. ಮನೆಯಲ್ಲಿದ್ದ ರಾಶಿ ಪುಸ್ತಕಗಳು, ವಿವಿಧ ಮ್ಯಾಗಜಿನ್ಗಳು, ದಿನಪತ್ರಿಕೆಗಳು ಒಂದು ರೀತಿಯಲ್ಲಿ ಮನೆಯಲ್ಲಿ ಸಾಹಿತ್ಯಿಕ ಪರಿಸರವನ್ನು ಸೃಷ್ಟಿಸಿದ್ದರೆ, ಅಜ್ಜನ ಓದು, ಆಳ ಅಧ್ಯಯನ, ಸವಿಸ್ತಾರ ವಿಮರ್ಶೆ, ವಿವಿಧ ಭಾಷೆಗಳ ಸಾಹಿತ್ಯದ ಮೇಲೆ ಅವರಿಗಿದ್ದ ಆಸಕ್ತಿ, ಅತುಲ್ಯ ಭಾಷಾ ಪ್ರೌಢಿಮೆ ಮತ್ತೊದು ರೀತಿಯಲ್ಲಿ ಓದಲು, ಬರೆಯಲು ಪ್ರೇರೇಪಣೆ ನೀಡುತ್ತಿದ್ದವು‌.

ಬದುಕಿದರೆ 'ಹೀಗೆಯೇ' ಬದುಕಬೇಕು ಎಂಬುವುದಕ್ಕೆ ಒಂದು ಮಾದರಿಯಂತಿದ್ದ ಅಜ್ಜ, ಒಂದು ದಿನ ಯಾವ ಅನಾರೋಗ್ಯವೂ ಇಲ್ಲದೆ, ಯಾವ ಮುನ್ಸೂಚನೆಯೂ ಇಲ್ಲದೆ ಮರಣವಪ್ಪಿದರು. ನನಗಾಗ ದೊಡ್ಡ ಆಘಾತ. ಬೇರು ಅಳಿದು ನಿನ್ನೆಯಷ್ಟೇ ಚಿಗುರಿದ ಚಿಗುರು ಉಳಿದ ಭಾವ. ಏನಾಗುತ್ತಿದೆ ಎಂದು ಅರಿವಾಗುವ ಮುನ್ನವೇ ನನ್ನ ಇಡೀ ಸಪೋರ್ಟ್ ಸಿಸ್ಟಮ್ ಕುಸಿದು ಬಿದ್ದಿತ್ತು. ಮರುಳುಗಾಡಿನ ಮಧ್ಯೆ ಬರಿಗಾಲಲ್ಲಿ ನಿಂತಂತಹ ಅನುಭವ. ನೆತ್ತಿ ಸುಡುವ ಸೂರ್ಯ, ಕಾಲು ಚುರುಗುಟ್ಟಿಸುವ ಮರಳು, ಮಧ್ಯೆ ಅನಾಥೆ ನಾನು. ಅಜ್ಜನೇ ಸರ್ವಸ್ವ ಆಗಿದ್ದ ನನ್ನ ಬದುಕೀಗ ಅಜ್ಜನಿಲ್ಲದ ವಾಸ್ತವವನ್ನು ಒಪ್ಪಿಕೊಳ್ಳಲಾಗದೆ ಲೇಖನಿಯ ಮೊರೆ ಹೋಗಿತ್ತು. ಆ ಆಘಾತ, ನೋವು, ಸಂಕಟ, ಕಠೋರತೆ ನನ್ನಿಂದ ಕವಿತೆ ಬರೆಯಿಸಿತು. ನಾನು ಬರೆದ ಮೊದಲ ಪದ್ಯ ಸಾವಿನ ಕುರಿತಾದ್ದು. ಪ್ರತೀ ಆರಂಭವೂ ಅಂತ್ಯವಾಗಲೇಬೇಕೇನೋ ಅಥವಾ ಪ್ರತಿ ಅಂತ್ಯವೂ ಮತ್ತೊಂದು ಆರಂಭವೇ ಏನೋ? ನಾನು ಡೈರಿ ಬರೆಯಲು ಪ್ರಾರಂಭಿಸಿದ್ದೂ ಆವತ್ತೇ. ಅಜ್ಜನ ಸಾವಿನ ಆ ದಿನ ಬದುಕು ನನಗೆ ಬರೆಯುವುದನ್ನು ಕಲಿಸಿತಾ? ಇರಬಹುದೇನೋ. ಅಜ್ಜ ಬದುಕಿದ್ದಾಗ ನಾನು ಆ ಕವಿತೆಯನ್ನು ಬರೆದಿದ್ದರೆ ಅವರು ಇವತ್ತಿನವರೆಗೂ ಅದನ್ನು ನನ್ನ ಮೊದಲ ಕವಿತೆ ಎಂದು ಜತನದಿಂದ ಕಾಪಿಟ್ಟುಕೊಳ್ಳುತ್ತಿದ್ದರು ಅಂತ ನನಗೆ ಅನ್ನಿಸುತ್ತಿರುತ್ತದೆ.

ಮೊದಲ ಕವಿತೆ ಬರೆದ ನಂತರ ನಿರಂತರ ಬರೆಯುತ್ತಾ ಹೋದೆ. ಅಜ್ಜನಿಲ್ಲದ ಬದುಕಿನ ಖಾಲಿತನವನ್ನು ಬರಹ ಒಂದಿಷ್ಟಾದರೂ ತುಂಬುತ್ತಾ ಹೋಯಿತು. ವಯಸ್ಸು ಮಾಗುತ್ತಿದ್ದಂತೆ ತನ್ನಿಂತಾನಾಗೇ ಮನಸ್ಸು ಅವರಿಲ್ಲದ ನೋವನ್ನು ಭರಿಸುವುದನ್ನು ಕಲಿತುಕೊಂಡಿತು. ಆದರೆ ನಾನು ಎಂದೂ ಕಥೆ ಬರೆಯಲು ಪ್ರಯತ್ನಿಸಿದವಳೇ ಅಲ್ಲ.

ನೋವು, ಸಂಕಟ, ಅವಮಾನ, ತಿರಸ್ಕಾರ, ಅಸಹಾಯಕತೆ, ಅಭದ್ರತೆ ಕವಿತೆಗಳ ಕಥೆಗಳ ಹುಟ್ಟಿಗೆ ಕಾರಣವಾದಷ್ಟು ಸಹಜವಾಗಿ ಖುಶಿ, ಸಂಭ್ರಮ ಕಾರಣವಾಗದು ಎಂದು ಹಲವು ಲೇಖನಗಳಲ್ಲಿ ಓದಿದ್ದೆ. ಅವೆಲ್ಲಾ ಫೂರ್ತಿ ನಿಜ ಎಂದು ಮನಸ್ಸು ಯಾವತ್ತೂ ಒಪ್ಪಿರಲಿಲ್ಲ. ಆದರೆ, ಬದುಕು ನಾನು ಒಪ್ಪಿಕೊಳ್ಳದಿರುವುದನ್ನೆಲ್ಲಾ ಒಪ್ಪಿಕೊಳ್ಳಲೇಬೇಕಾದ ಪರಿಸ್ಥಿತಿಯನ್ನು ಕಾಲ ಕಾಲಕ್ಕೆ ಸೃಷ್ಟಿಸುತ್ತಿತ್ತು ಅಥವಾ ಸೃಷ್ಟಿಸುತ್ತಿದೆ ಎಂದು ನಾನು ಅಂದುಕೊಂಡಿದ್ದೆ. ಲೇಖನ, ಕವಿತೆಗಳನ್ನು ಬರೆದಷ್ಟು ಸುಲಭವಾಗಿ ಕಥೆ ಬರೆಯಲಾರೆ, ಎಷ್ಟಾದರೂ ಕಥಾಪ್ರಪಂಚ ಸುಲಭವಾಗಿ‌ ನನಗೆ ದಕ್ಕುವಂತದಲ್ಲ, ಆ ಪ್ರಪಂಚದ ಬೇಲಿಯ ಹೊರಗೆ ನಿಂತುಕೊಂಡೇ ನಾನು ಕಥೆಗಳನ್ನು ಆಸ್ವಾದಿಸಬೇಕು, ಅವು ಎಂ‌ದಿಗೂ ನನ್ನ ಅನುಭಾವದೊಳಕ್ಕೆ ಬರಲಾರವು ಅಂತಲೇ ತೀರ್ಮಾನಿಸಿಕೊಂಡಿದ್ದೆ.

ಹಾಗೆ ತೀರ್ಮಾನಿಸಿಕೊಂಡ ಹೊತ್ತಲ್ಲೇ ಹರೆಯ ಸದ್ದಿಲ್ಲದೆ ಬದುಕಿನೊಳಕ್ಕೆ ಕಾಲಿಟ್ಟಿತ್ತು.  ಹರೆಯದ ಜೊತೆ ಜೊತೆಗೆ ಹೊಸ ಗೆಳೆತನ, ಸಂಬಂಧಗಳೂ, ಆಪ್ತತೆಗಳೂ ಬೆಳೆದಿದ್ದವು. ಅದರಲ್ಲೊಬ್ಬಳು ಜೀವದ ಗೆಳತಿ . ಬದುಕು ಸಂತೋಷದ ಉಯ್ಯಾಲೆಯಲ್ಲಿ ಜೀಕುತ್ತಿರಬೇಕಾದರೆ ಅವಳ ಬದುಕನ್ನು, ಅವಳ ಪ್ರೀತಿಯನ್ನು ಮೋಸವೊಂದು ನಡುಬೀದಿಯಲ್ಲಿ ತಂದು ನಿಲ್ಲಿಸಿತ್ತು. ಅವನಿಲ್ಲದೆ ಬದುಕುವುದು ಮತ್ತು ಅವನಿಗಾಗಿ ಸಾಯುವುದು, ತಕ್ಕಡಿಯಲ್ಲಿಟ್ಟು ತೂಗಿದಾಗ  ಒಂದು ಬದಿ ಭಾರವಾಯಿತು. ಖಾಲಿತನದ ಭಾರ ಹೊರುವುದಕ್ಕಿಂತ ಸಾಯುವುದೇ ಮೇಲೆಂದು ಆತ್ಮಹತ್ಯೆಯ ಪ್ರಯತ್ನವೂ ನಡೆದುಹೋಯಿತು. ಆದರೆ ಬದುಕು ಅಷ್ಟು ಸುಲಭದಲ್ಲಿ ಮುಗಿಸಿಬಿಡುವಂಥದ್ದಲ್ಲ, ಅವಳು ಉಳಿದುಕೊಂಡಳು. ಹಾಗೆ ತಾನು ಸತ್ತಿಲ್ಲ ಅನ್ನುವುದು ಅವಳಿಗೆ ತಿಳಿದ ಮರುಕ್ಷಣ ನನ್ನ ಕರೆದು "ನನ್ನ ಬದುಕಿನ ಬಗ್ಗೆ ಒಂದು ಕಥೆ ಬರೆಯುತ್ತೀಯಾ?" ಎಂದು ಕೇಳಿದಳು. ನಾನು ಹೂಂಗುಟ್ಟಿ, ಎರಡೇ ದಿನಗಳಲ್ಲಿ ಕಥೆ ಬರೆದು ಅವಳ ಕೈಗಿಟ್ಟೆ. ನಾನು ಕಥೆಗಾರ್ತಿಯಾದೆನಾ? ಊಹೂಂ, ಆಗಿರಲಿಲ್ಲ.

ಯಾಕೆಂದರೆ ನಾನು ಓದಿರುವ ಪುಸ್ತಕಗಳ ಋಣ ಇವೆಲ್ಲಕ್ಕಿಂತ ದೊಡ್ಡದು. ಅವು ನನ್ನ ಭಾಷೆಯ, ಬರಹದ, ಬದುಕಿನ ಮೇಲೆ ಬೀರಿರುವ ಪ್ರಭಾವ ಅಷ್ಟಿಷ್ಟಲ್ಲ. ಹಾಗೆ ಹೇಳುವುದಾದರೆ ನನಗೆ ಬರೆಯಲು ಕಲಿಸಿದ್ದೇ ಪುಸ್ತಕಗಳು ಮತ್ತು ಅವುಗಳ ಜೊತೆ ಉತ್ಕಟತೆಯಿಂದ ಕಳೆದ ಕ್ಷಣಗಳು. ನನ್ನ ಆಲೋಚನೆಗಳನ್ನು ಬರಹಕ್ಕಿಳಿಸಲು ಪ್ರಚೋದಿಸಿದ್ದೂ ಪುಸ್ತಕಗಳೊಳಗಿನ ಅದ್ಭುತ ಲೋಕವೇ.

'ಬಾಲಮಂಗಳ'ದ ಕಥಾಜಗತ್ತಿನಿಂದ  ಆರಂಭವಾದ ಪುಸ್ತಕಗಳೊಂದಿನ ನನ್ನ ನಂಟು ಸದಾ ಹರಿವ ನದಿ. ಇಂಟರ್ನೆಟ್, ಇ-ಪೇಪರ್, ಅಮೆಜಾನ್ ಕಿಂಡಲ್ ಮುಂತಾದ ಜಟಿಲ ಕಾನನಗಳನ್ನು ದಾಟಿದ ಮೇಲೂ ಓದೆಂಬ ಸರಾಗ ನದಿ ಸೇರುವುದು ಪುಸ್ತಕವೆಂಬ ಅಗಾಧ ಕಡಲಿಗೇ. ಪ್ರತೀ ಪುಸ್ತಕದ ವಾಸನೆ, ಸ್ಪರ್ಶ, ಅವನ್ನು ಕೈಯಲ್ಲಿ ಹಿಡಿವಾಗಿನ ಅನುಭೂತಿ, ಓದಿದಾಗ ಅವು ನಮ್ಮೊಳಗೆ ಸ್ಪುರಿಸುವ ವಿಚಾರಗಳು ಎಲ್ಲವೂ ಪುಸ್ತಕಗಳಿಂದ ಪುಸ್ತಕಗಳಿಗೆ ಭಿನ್ನವಾಗಿರುತ್ತವೆ. ಆ ಭಿನ್ನತೆಯೇ ಪ್ರತೀ ಪುಸ್ತಕವನ್ನೂ ನಮ್ಮ ಮೆದುಳಿನ ಕೋಶಗಳಲ್ಲಿ ಎಂದೂ ಅಳಿಯದಂತೆ ಛಾಪೊತ್ತುವುದು.

ಶಾಲೆ-ಕಾಲೇಜಿನ ಲೈಬ್ರರಿ, ಅಜ್ಜನ ಕಪಾಟು, ಅಮ್ಮನ ಹಳೆ ಟ್ರಂಕು, ಮನೆಯ ಅಟ್ಟ ಹೀಗೆ ನನ್ನ ಓದಿನ ಹಸಿವೆಗೆ ಆಹಾರ ಒದಗಿಸಿದ ಆಕರಗಳ ಪಟ್ಟಿ ದೊಡ್ಡದು. ನಾನು ಓದಿದ ಅಷ್ಟೂ ಪುಸ್ತಕಗಳಲ್ಲಿ ನನ್ನನ್ನು ಪದೇ ಪದೇ ಓದಿಸಿದ, ಪ್ರತಿ ಬಾರಿ ಓದಿದಾಗಲೂ ಹೊಸತನ್ನು ಕಲಿಸಿದ ಪುಸ್ತಕಗಳೆಂದರೆ- ಕರ್ವಾಲೋ, ಮಲೆಗಳಲ್ಲಿ ಮದುಮಗಳು, ಚೋಮನ ದುಡಿ, ಅಣ್ಣನ ನೆನಪುಗಳು, ಚಿದಂಬರ ರಹಸ್ಯ ಮುಂತಾದ ಕನ್ನಡದ ಕ್ಲಾಸಿಕ್ ಕೃತಿಗಳು. ಅದರಲ್ಲೂ ಕರ್ವಾಲೋ ನನ್ನ ಹಲವು ಬೇಸರದ ಸಂಜೆಗಳ ಸಂಗಾತಿ‌. ಪುಸ್ತಕಗಳು ನನಗೆ ಬರೆಯಲು ಮಾತ್ರ ಅಲ್ಲ ಬದುಕಲೂ ಕಲಿಸಿವೆ. ಹಾಗಾಗಿಯೇ ನಾನು 'ಬದುಕಲು ಕಲಿಸಿದ ಪುಸ್ತಕಗಳಿಗೆ ಸದಾ ಋಣಿಯಾಗಿರುತ್ತೇನೆ' ಅನ್ನುತ್ತಿರುತ್ತೇನೆ.

ಅವೆಲ್ಲಾ ಸರಿ, ಆದರೆ ಹೀಗೆ ಬರೆಯಲು ಕಲಿತ ನಾನು ಇಷ್ಟು ವರ್ಷಗಳ ಕಾಲ ನನ್ನ ಬರಹಗಳನ್ನು ಯಾಕೆ ಪ್ರಕಟಿಸುವ ಆಸ್ಥೆ ತೋರಲಿಲ್ಲ? ಯಾವ ಅನಿವಾರ್ಯತೆ ಹೆಸರು ಬದಲಾಯಿಸುವ, ಅರ್ಧ ಹೆಸರಿನಲ್ಲಷ್ಟೇ ಬರೆಯುವ ಪರಿಸ್ಥಿತಿಯನ್ನು ಸೃಷ್ಟಿಸಿತು?  ಅಷ್ಟು ಮಾತ್ರದ ಸ್ವಾತಂತ್ರ್ಯ ನನಗಿರಲಿಲ್ಲ ಅನ್ನುವುದು ಶುದ್ಧ ಸುಳ್ಳಾಗುತ್ತದೆ. ಪೋಷಕರು ನನ್ನ ಓದನ್ನೂ ಬರಹವನ್ನೂ ನಿರಂತರವಾಗಿ ಪೋಷಿಸುತ್ತಾ ಬಂದಿದ್ದರೂ ಯಾಕೆ ಹೀಗಾಯಿತು? ಬಹುಶಃ ಈ ಸಮಾಜ ಹುಡುಗಿಯೊಬ್ಬಳು ಖುಲ್ಲಂಖುಲ್ಲಾ ಬರೆಯುವುದನ್ನು ಸ್ವೀಕರಿಸದು ಅನ್ನುವ ಅಂಜಿಕೆ ಕಾಡಿತು. ನನ್ನ ಹಾಗೆ ಎಷ್ಟು ಹುಡುಗಿಯರು ಚಿಪ್ಪೊಳಗೆ ಬಂಧಿಯಾಗಿದ್ದಾರೆ? ಎಷ್ಟು ಬರಹಗಾರ್ತಿಯರು ತಮ್ಮ ಬರವಣಿಗೆಗಳನ್ನು ಮುಚ್ಚಿಟ್ಟಿದ್ದಾರೆ? ಕಲ್ಪನೆಗೂ ನಿಲುಕದು.

ಎಲ್ಲಾ ಸ್ವವಿಮರ್ಶೆಯ ನಂತರ ತಿಳಿಯುವುದಿಷ್ಟೇ- ಮಾಡುವ ಕೆಲಸದಲ್ಲಿ ತೃಪ್ತಿ ಮತ್ತು ಸರಿ-ತಪ್ಪುಗಳ ವಿವೇಚನೆಯಿದ್ದರೆ ಎಲ್ಲವನ್ನೂ ಸಮಾಜ ಮುಕ್ತವಾಗಿಯೇ ಸ್ವೀಕರಿಸುತ್ತದೆ. ಹಾಗೊಂದುವೇಳೆ ಸ್ವೀಕರಿಸದಿದ್ದರೂ ನಾವು ತಪ್ಪು ಮಾಡುತ್ತಿಲ್ಲ ಅನ್ನುವ ಖಾತ್ರಿ ನಮಗಿರಬೇಕು ಅಷ್ಟೇ. ಯಾಕೆಂದರೆ ನಾವು ಸಮಾಜಕ್ಕಿಂತಲೂ ಮುಖ್ಯವಾಗಿ ತಲೆಬಾಗಬೇಕಿರುವುದು ನಮ್ಮ ಆತ್ಮಸಾಕ್ಷಿಗೆ.