ಸೋಮವಾರ, ಸೆಪ್ಟೆಂಬರ್ 7, 2015

ಅವನು, ಅವಳು ಮತ್ತು ನಾಗರಪಂಚಮಿ



ಶ್ರಾವಣ ಮಾಸ, ಅದರ ಬೆನ್ನ ಹಿಂದೆಯೇ ಓಡೋಡಿ ಬರುವ ನಾಗರಪಂಚಮಿ ಅಂದಾಗೆಲ್ಲಾ ನನಗೆ ಪಕ್ಕನೆ ನೆನಪಾಗುವುದು ಹೈಸ್ಕೂಲ್ ದಿನಗಳು. ಒಮ್ಮೆ ಬಂದು ನಿಂತು ಹೋಗುವ,  ಕೆಲ ಹೊತ್ತು ಬಿಟ್ಟು ಮತ್ತೆ ಬರುವ ಚಿಟಿಪಿಟಿ ಮಳೆಯಲ್ಲಿ ನೆನೆಯುವಾಗೆಲ್ಲಾ ಆ ದಿನಗಳ ನೆನಪಿನ ಹುಡಿಗಳು ಮನಸಿಗೆ ಅಂಟಿಕೊಂಡು ಬಿಡುತ್ತವೆ. ಅದೊಂಥರಾ ಅತ್ತ ಯೌವ್ವನವೂ ಅಲ್ಲದ, ಇತ್ತ ಬಾಲ್ಯವೂ ಅಲ್ಲದ ವಿಚಿತ್ರ ವಯಸ್ಸು. ಸುಮ್ಮನೆ ಅರಳಿರುವ ನೈದಿಲೆಯ ಮಾತಾಡಿಸಲು ಯತ್ನಿಸುವುದು, ಕೆಸುವಿನ ಎಲೆಯ ಮೇಲೆ ನಿಂತ ನೀರ ಹನಿಯಲಿ ಸೂರ್ಯನ ಪ್ರತಿಬಿಂಬ ಮೂಡಿಸಲು ಪ್ರಯತ್ನಿಸುವುದು, ಬೇಲಿ ಮೇಲೆ ಕುಳಿತ ದುಂಬಿಯ ಹಿಡಿಯಲಾಗದು ಅನ್ನುವುದು ಗೊತ್ತಿದ್ದರೂ ಅದರ ಹಿಂದೆ ಹೋಗಿ ಎಡವಿ ಬೀಳುವುದು, ಬಿಸಿಲು-ಮಳೆಯ ನಂತರ ಮೂಡಿದ ತೆಳು ಮೋಡ ಇನ್ನೇನು ಕಥೆ ಹೇಳುತ್ತದೆಂದು ಕಾಯುತ್ತಾ ಕೂರುವುದು, ಕಾಣದ ಕಡಲಿನ ಇನ್ನೊಂದು ತೀರಕ್ಕಾಗಿ ಹಂಬಲಿಸುವುದು, ಹುಡುಗಿಯರು ಉದ್ದ ಲಂಗಕ್ಕಾಗಿ ಮನೆಯಲ್ಲಿ ಜಗಳ ಮಾಡುವುದು,  ಅಪ್ಪ ಶೇವ್ ಮಾಡಿ ಅಲ್ಲೇ ಬಿಟ್ಟು ಹೋದ ಶೇವಿಂಗ್ ಕಿಟ್ ತಗೊಂಡು ಇಲ್ಲದ ಮೀಸೆಯನ್ನು ಶೇವ್ ಮಾಡೋಕೆ ಹೋಗಿ ಹುಡುಗರು ಗಾಯ ಮಾಡ್ಕೊಳ್ಳುವುದು ಎಲ್ಲಾ ಆ ವಯಸ್ಸಲ್ಲೇ.

ಅಂತಹ ಎಡೆಬಿಡಂಗಿ ವಯಸ್ಸಲ್ಲಿ ನನಗೊಬ್ಬಳು ಜೀವದ ಗೆಳತಿ ಇದ್ದಳು. ಮಾತಲ್ಲೇ ಮುದ್ದು ಬರಿಸೋ ಹುಡುಗಿ. ಎಷ್ಟೆಂದರೆ  " ರಾಕೆಟ್ ಹೇಗೆ ಚಲಿಸುತ್ತದೆ?" ಅನ್ನುವ ಭೌತವಿಜ್ಞಾನ ಸರ್ ಪ್ರಶ್ನೆಗೆ "ಸೊಂಯ್ಯನೆ ಹೋಗುತ್ತದೆ ಸಾರ್" ಅನ್ನುವಷ್ಟು ಮುದ್ದು. ಕೃಷ್ಣನ ಮೀರಾ ಇದ್ದಳಲ್ಲಾ, ಅವಳಿಗಿಂತಲೂ ಚೆಂದಗೆ ಹಾಡುತ್ತಿದ್ದಳು. ಅವಳು "ಹೂವೆ ಹೂವೆ ನಿನ್ನೀ ಚೆಲುವಿಗೆ ಕಾರಣರಾರೆ...." ಅಂತ ಹಾಡುತ್ತಿದ್ದರೆ ನಾವೆಲ್ಲಾ ಥೇಟ್ ದುಂಬಿಗಳಂತೆ ಅವಳ ಸುತ್ತ ನೆರೆಯುತ್ತಿದ್ದೆವು. ನಾವಷ್ಟೇ ಅಲ್ಲ, ಅವಳ, ಅವಳ ಹಾಡಿನ  ಅಭಿಮಾನಿ ಬಳಗದಲ್ಲಿ ಒಂದಿಷ್ಟು ಹುಡುಗರೂ ಇದ್ದರು. ಅಭಿಮಾನ ಇದ್ದಮೇಲೆ, ಅದು ಪ್ರೀತಿಯಾಗುವುದೇನೂ ಅಸಂಭವವಲ್ಲವಲ್ಲಾ? ಒಂದಿಬ್ಬರು ಹುಡುಗರು ತಮ್ಮ ಪ್ರೀತಿಯ ಬಗ್ಗೆ ಹೇಳಿಯೂ ಬಿಟ್ಟರು.  ಆದ್ರೆ ಅವಳಿಗೋ..? ಶಾಲೆಯ ಅಷ್ಟೂ ಹುಡುಗರನ್ನು ಬಿಟ್ಟು ಸ್ಕೂಲ್ ಪಕ್ಕದಲ್ಲಿದ್ದ ಕಿರಾಣಿ ಅಂಗಡಿ ಹುಡುಗನ ಮೇಲೆ ಒಂದು ಹೊತ್ತಲ್ಲದ ಹೊತ್ತಿನಲ್ಲಿ ಪ್ರೀತಿ ಆಯ್ತು. ವಾರಗಟ್ಟಲೆ ಕನ್ನಡಿ ಮುಂದೆ ನಿಂತು ಪ್ರಾಕ್ಟೀಸ್ ಮಾಡಿ ಒಂದು ಶುಭಮುಹೂರ್ತದಲ್ಲಿ ಅವನ ಮುಂದೆ ನಿಂತು "ಗೆಳೆಯಾ ಒಂದು ಕೇಳ್ತೀನಿ ಇಲ್ಲ ಅನ್ದೆ ಕೊಡ್ತೀಯಾ?" ಅಂತ ತನ್ನ ಪ್ರೀತಿ ನಿವೇದಿಸಿಯೇ ಬಿಟ್ಟಳು.

ಇವಳಂತಹುದೇ ಭಾವ ಅವನಿಗೂ ಇತ್ತಾ? ಸರಸಕ್ಕೆ, ವಿರಸಕ್ಕೆ, ಹುಸಿಮುನಿಸಿಗೆ ನನಗೂ ಒಬ್ಬ ಸಂಗಾತಿ ಬೇಕು ಅಂತ ಅವನಿಗೂ ಆ ಕ್ಷಣದಲ್ಲಿ ಅನಿಸಿತ್ತಾ? ಇವಳ ಹಾಡಿಗೆ, ಮುದ್ದಿಗೆ ಅವನು ಮನಸೋತನಾ? ಅಥವಾ ಅವನ ಮನಸ್ಸಲ್ಲಾಗ ಕೇವಲ ಗೊಂದಲಗಳಿದ್ದವೋ? ಗೊತ್ತಿಲ್ಲ. ಆದ್ರೆ ಅವನು "ಹೂಂ" ಅಂದದ್ದಂತೂ ಹೌದು. ಆ ಕ್ಷಣದಿಂದಲೇ ಇವಳು ಪೂರ್ತಿ ಬದಲಾಗಿ ಬಿಟ್ಳು. ಎಲ್ಲಿಂದಲೋ ಒಂದು ಪುಟ್ಟ ಕನ್ನಡಿ ಬಂದು ಅವಳ ಬ್ಯಾಗ್ ಸೇರಿತು. ಶಾಲೆ ಬಿಡುತ್ತಿದ್ದಂತೆ ಕನ್ನಡಿ ನೋಡಿ, ಕಾಡಿಗೆ ತೀಡಿ, ಸಣ್ಣಗೆ ಪೌಡರ್ ಹಚ್ಕೊಂಡು ಲಗುಬಗೆಯಿಂದ ಹೊರಡುತ್ತಿದ್ದಳು. ’ಅವನ ಬಗ್ಗೆ ನನಗೊಂದು ಕವಿತೆ ಬರೆದುಕೊಡೇ’ ಎಂದು ನನ್ನ ಪೀಡಿಸುತ್ತಿದ್ದಳು. ಹೂವಿನ ಹಾಡು ಹಾಡುತ್ತಿದ್ದ ಅವಳ ಹಾಡಿನ ಪೂರ್ತಿ ಈಗ ಅವನದೇ ನೆನಪು, ಅವನದೇ ಧ್ಯಾನ.

ಇಂತಿದ್ದ ಅವಳು ಅದೊಂದು ದಿನ ಶಾಲೆ ಬಿಟ್ಟಾಗ ನನ್ನ ಕೈ ಹಿಡಿದೆಳೆದು ಪಕ್ಕಕ್ಕೆ ಕರೆದೊಯ್ದು ಮುಖವನ್ನೆಲ್ಲಾ ಕೆಂಪು ಮಾಡ್ಕೊಂಡು ಗುಟ್ಟಲ್ಲಿ "ನಾಳೆ ನಾಗರಪಂಚಮಿ ಅಲ್ವಾ? ಸೀರೆ ಉಟ್ಕೊಂಡು ನಾಗನ ಕಟ್ಟೆಗೆ ಹೋಗೋಕಿದೆ. ಅವನೂ ಬರ್ತಾನೆ ಅಂದಿದ್ದಾನೆ. ನಾಗನಿಗೆ ಹಾಲು ಎರೆಯುವಾಗ ಅವನೇನಾದ್ರೂ ನನ್ನ ಕೈ ಹಿಡಿದ್ರೆ ನಿಂಗೇ ಮೊದ್ಲು ಹೇಳ್ತೇನಾಯ್ತಾ" ಅಂತಂದು ಕಣ್ಣುಹೊಡೆದಿದ್ಳು. ನಾನು "ಇದ್ಯಾಕೋ ಚೂರು ಅತಿ ಆಗ್ಲಿಲ್ವಾ?" ಅಂದೆ. ಅವಳು ಎಂದಿನಂತೆ ಮುದ್ದುಮುದ್ದಾಗಿ "ಲೆನಿನ್ ನ ಭೂತ ಹಿಡ್ದಿರೋ ನಿಂಗೆ ಇದೆಲ್ಲಾ ಎಲ್ಲಿ ಅರ್ಥ ಆಗುತ್ತೆ, ಹೋಗೇ " ಎಂದು ನನ್ನ ಮೂತಿ ತಿರುವಿ ಎದ್ದು ಹೋಗಿದ್ದಳು.

ಮರುದಿನ, ಬೆಳ್ಬೆಳಗ್ಗೆ ಯಾವುದೋ ಕಾಯಿನ್ ಬೂತಿಂದ ಫೋನ್ ಮಾಡಿ "ಸೀರೆ ಉಟ್ಟಿದ್ದೇನೆ, ಎಲ್ಲಿ ಜಾರಿ ಬೀಳುತ್ತೋ ಅಂತ ಭಯ ಆಗ್ತಿದೆ, ಆ ಕೋತಿ ಇನ್ನೂ ಬಂದಿಲ್ಲ" ಅಂದ್ಳು. ನನ್ನ ಪಕ್ಕದಲ್ಲೇ ಅಮ್ಮ ಇದ್ದಿದ್ದರಿಂದ ಹೆಚ್ಚೇನೂ ಮಾತಾಡದೇ "ಹಾಂಹೂಂ" ಎಂದಷ್ಟೇ ಹೇಳಿ ಫೋನ್ ಕಟ್ ಮಾಡಿದ್ದೆ. ಅದು ಈಗಿನಂತೆ ಮನೆಗೆ ನಾಲ್ಕು-ಐದರಂತೆ ಮೊಬೈಲ್ ಇದ್ದ ಕಾಲವಲ್ಲ. ನಡುಮನೆಯಲ್ಲಿರುತ್ತಿದ್ದ ಲ್ಯಾಂಡ್ ಫೋನೇ ನಮ್ಮೆಲ್ಲಾ ಸಂವಹನಗಳಿಗೆ ಮಾಧ್ಯಮವಾಗಿತ್ತು. ಪ್ರೈವೆಸಿ ಅನ್ನುವುದನ್ನು ಕನಸಲ್ಲೂ ಕಲ್ಪಿಸಿಕೊಳ್ಳಲು ಸಾಧ್ಯವಿರಲಿಲ್ಲ. ಹೀಗಿದ್ದರೂ ಮನಸ್ಸು  ಅವಳ ಸುತ್ತಲೇ ಗಿರಕಿ ಹೊಡೆಯುತ್ತಿತ್ತು, ಯಾವಾಗೊಮ್ಮೆ ಬೆಳಕು ಹರಿಯುವುದಿಲ್ಲ, ಅವಳನ್ನು ಮಾತಾಡಿಸುವುದಿಲ್ಲ ಅಂತ ಕಾತರಿಸುತಿತ್ತು.    

ಅಂತೂ ಇಂತೂ ಬೆಳಗಾಯ್ತು, ಸ್ಪೆಷಲ್ ಕ್ಲಾಸಿನ ಸುಳ್ಳು ನೆಪ ಹೇಳಿ ಯಾವತ್ತಿಗಿಂತ ಬೇಗ ಮನೆಯಿಂದ ಶಾಲೆಗೆಂದು ಹೊರಟಿದ್ದೂ ಆಯ್ತು. ದಾರಿಯುದ್ದಕ್ಕೂ ಅವಳ ಸಂಭ್ರಮವನ್ನು ಕಲ್ಪಿಸಿಕೊಂಡೇ ಶಾಲೆಗೆ ತಲುಪಿದೆ, ಆದ್ರೆ ನನ್ನೆಲ್ಲಾ ನಿರೀಕ್ಷೆಗಳನ್ನೂ ಮೀರಿ ಅವಳು ಕ್ಯಾಂಪಸ್ ನ ಮೂಲೆಯಲ್ಲಿದ್ದ ಒಂಟಿ ಮರದ ಕೆಳಗೆ ಕುಳಿತಿದ್ದಳು. ಕಣ್ಣ ಕಾಡಿಗೆ ಕದಡಿತ್ತು, ಕೆನ್ನೆಯ ತೇವ ಅವಳ ನೋವಿಗೆ ಸಾಕ್ಷಿಯೆಂಬಂತೆ ನಿಂತಿತ್ತು. ಹೆಗಲು ಮುಟ್ಟಿ "ಏನಾಯ್ತೇ?" ಅಂತ ಕೇಳಿದೆ. ಬಿಕ್ಕಿ ಬಿಕ್ಕಿ ಅಳತೊಡಗಿದಳು. ನನಗೋ ಗಾಬರಿ. "ನಿನ್ನೆ ಅವನು ಬರ್ಲೇ ಇಲ್ವಾ?" ಅಂತ ಮತ್ತೆ ಕೇಳಿದೆ. "ಅಪಶಕುನ ಮಾತಾಡ್ಬೇಡ. ನಾನು ಕರೆದ್ರೆ ಅವನು ಬರದೇ ಇರ್ತಾನಾ?" ಅಂದ್ಳು. "ಮತ್ತೇನಾಯ್ತು?" ಅಂದೆ. ಅವಳು ಬಿಕ್ಕುತ್ತಲೇ "ಬೆನ್ನ ತುಸು ಮೇಲೆ, ಕತ್ತಿನ ಇಳಿಜಾರಲ್ಲಿ ಅವನು ನನ್ನ ಹೆಸರಿನ ಹಚ್ಚೆ ಹಾಕಿಸ್ಕೊಂಡಿದ್ದಾನೆ. ಚರ್ಮ ಪೂರ್ತಿ ಕೆಂಪಗಾಗಿದೆ. ನೋವಿನಿಂದ ಎದ್ದು ನಡೆಯೋಕೂ ಅವನಿಗೆ ಆಗ್ತಿರ್ಲಿಲ್ಲ. ಆದ್ರೂ ಬಂದಿದ್ದ ಗೊತ್ತಾ?" ಅಂತಂದು ಮತ್ತೆ ಅಳು ಮುಂದುವರಿಸಿದಳು.

ಅವಳ ಹೆಗಲು ಬಳಸಿದ್ದ ನನ್ನ ಕೈ ತಟ್ಟನೆ ಕೆಳಗೆ ಬಿತ್ತು, ಅದುವರೆಗೆ ಪ್ರೀತಿ-ಪ್ರೇಮ ಅನ್ನುವುದೆಲ್ಲಾ ಹುಡುಗಿಯರ ಭಾವನೆಗಳ ಜೊತೆ ಚೆಲ್ಲಾಟವಾಡಲು ಹುಡುಗರು ನಡೆಸುವ ಭವ್ಯ ನಾಟಕವೆಂದೇ ತಿಳಿದಿದ್ದ ನನ್ನ ಕಲ್ಪನೆಗಳೆಲ್ಲವೂ ಕಳಚಿಬಿತ್ತು. ’ಪ್ರೀತಿ’ ಅನ್ನುವ ಎರಡೂವರೆ ಅಕ್ಷರದ ಭಾವಕ್ಕೆ ಇಷ್ಟೊಂದು ಗಾಢ ಶಕ್ತಿಯಿದೆಯಾ? ಕೇವಲ ಎರಡು ತಿಂಗಳ ಹಿಂದೆ ಪರಿಚಯವಾದ ಹುಡುಗಿಯ ಹೆಸರನ್ನು ಮೈ ಮೇಲೆ ಹಚ್ಚೆ ಹಾಕಿಸಿಕೊಳ್ಳುವಷ್ಟು..? ಪ್ರೀತಿ ನೋವನ್ನೂ ಉತ್ಕಟವಾಗಿ ಪ್ರೀತಿಸುವುದನ್ನು ಕಲಿಸುತ್ತದಾ? ಇಷ್ಟೊಂದು ಅಗಾಧ ಬದ್ಧತೆಯನ್ನು ಎರಡು ಹೃದಯಗಳಲಿ ಉದ್ದೀಪನಗೊಳಿಸುತ್ತದಾ? ಇಲ್ಲವೆಂದರೆ ಅಷ್ಟೊಂದು ನೋವನ್ನು ಸಹಿಸಿಕೊಳ್ಳುವುದಾದರೂ ಹೇಗೆ? ಇವಳ ಖುಷಿಗಾಗಿ ಅವನು ನೋವಲ್ಲೂ ನಗುತ್ತಾನೆ, ಅವನ ಕತ್ತಿನ ನೋವು ಇವಳ ಕೊರಳನ್ನುಬ್ಬಿಸುತ್ತದೆ, ಇವಳ ಹೆರಳ ಮಲ್ಲಿಗೆಯ ಕಂಪಿಗೆ ಅವನ ಸಂಭ್ರಮ ಜೋಕಾಲಿಯಾಡುತ್ತದೆ. ಏನಿದು ವಿಚಿತ್ರ? ಅನ್ನುವ ಪ್ರಶ್ನೆಗಳೆಲ್ಲಾ ಮೂಡಿ ಕೇಳಲೇಬೇಕು ಅಂದುಕೊಂಡಿದ್ದ "ಅವನು ನಿನ್ನೆ ನಿನ್ನ ಕೈ ಹಿಡಿದಿದ್ನಾ?" ಅನ್ನುವ ಪ್ರಶ್ನೆ ಗಂಟಲಲ್ಲೇ ಹುದುಗಿ ಹೋಯ್ತು. ಅವತ್ತು ಶಾಲೆ ಬಿಟ್ಟು ಮನೆಗೆ ಹೋಗುವಾಗ ಕಿರಾಣಿ ಅಂಗಡಿಯಲ್ಲಿ ಅವನನ್ನು ಮತ್ತೆ ನೋಡಿ ನಮ್ಮಿಬ್ಬರಿಗೂ ಅಚ್ಚರಿಯಾಯಿತು, ಜೊತೆಗೆ ಬದುಕಲ್ಲಿ ಮೊದಲ ಬಾರಿಗೆ ನನಗೆ ಪ್ರೀತಿಯ ಮೇಲೆ ತುಸು ನಂಬಿಕೆ ಮೂಡಿತು.

ಮುಂದಿನ ಮೂರು ವರ್ಷಗಳ ಕಾಲ ಇಬ್ಬರೂ ನಾಗರಪಂಚಮಿಯ ದಿನ ತಪ್ಪದೇ ಭೇಟಿಯಾಗುತ್ತಿದ್ದರು. ಅವನ ಹಚ್ಚೆಯ ನೋಡಿ ಇವಳು ಕಣ್ಣೀರುಗೆರೆಯುವುದು, ಅವನು ಅವಳನ್ನು ಹೆಗಲಿಗಾನಿಸಿ ಸಮಾಧಾನ ಪಡಿಸುವುದು, ನಾನು ಅವಳ ಫೋನ್ ಗಾಗಿ ಕಾಯುವುದು, ಅವಳು ನನಗೆ ಕರೆ ಮಾಡಿ ನಡೆದದ್ದನ್ನೆಲ್ಲಾ ಹೇಳುವುದು... ಹೀಗೆ ನಾಗರಪಂಚಮಿ ನಮ್ಮ ಮೂವರ ಬದುಕಲ್ಲೂ ಒಂದು ಮರೆಯಲಾರದ ಸಿಹಿ ನೆನಪಾಗಿ ಅಚ್ಚೊತ್ತಿಬಿಟ್ಟಿತ್ತು.

ಮುಂದೆ ಪಿ.ಯು.ಸಿ ಮುಗಿಸಿ ಮುಂದಕ್ಕೆ ಓದಲೆಂದು ಅವಳು ಪಟ್ಟಣ ಸೇರಿದಳು. ಅವನು ಊರಲ್ಲೇ ಉಳಿದ. ಇಬ್ಬರ ಬಂಧ ನಿಧಾನವಾಗಿ ಸಡಿಲವಾಗತೊಡಗಿತು. ಪ್ರೀತಿ ಇರಬೇಕಾದಲ್ಲಿ ಅಪನಂಬಿಕೆ ತಾಂಡವವಾಡತೊಡಗಿತು. ಎಲ್ಲ ಸಂಬಂಧಗಳನ್ನು ಮನೆಯಲ್ಲೇ ಬಿಟ್ಟು ದೂರದಲ್ಲಿ ಓದುತ್ತಿದ್ದ ಅವಳನ್ನು ಇವನು ವಿನಾಕಾರಣ ಸಂಶಯಿಸತೊಡಗಿದನಾ? ಅಥವಾ ಸಂಶಯಿಸುವಂತೆ ಅವಳೇ ನಡೆದುಕೊಂಡಳಾ?  ಗೊತ್ತಿಲ್ಲ, ಒಟ್ಟಿನಲ್ಲಿ ಅವನ ಕತ್ತಿನ ಹಚ್ಚೆ ಅರ್ಥ ಕಳೆದುಕೊಳ್ಳತೊಡಗಿತ್ತು, ಇವಳ ಹೆರಳ ಮಲ್ಲಿಗೆ ಬಾಡತೊಡಗಿತ್ತು. ಇಬ್ಬರ ನಡುವಿನ ಭಾಂದವ್ಯಕ್ಕೆ ಹೊಸ  ಭಾಷ್ಯ ಬರೆದ ನಾಗರಪಂಚಮಿಯಂದು ಊರಿಗೆ ಬರಲು  ರಜೆ ಇಲ್ಲವೆಂಬುವುದು ಅವಳ ನೆಪವಾದರೆ, ಅವಳಿಗೇ ಅಕ್ಕರೆ ಇಲ್ಲವೆಂದಾದರೆ ನಾನೇಕೆ ಅವಳ ನೋಡಲು ಹೋಗಲಿ ಅನ್ನುವ ಬಿಮ್ಮು ಇವನಿಗೆ ಮೊದಲಾಯಿತು. ಇತ್ತ ನಾನೂ ಕಾಲೇಜು, ಓದು, ಹೊಸ ಸ್ನೇಹ, ಅರಿಯದ ಪ್ರಪಂಚ ಎಂದು ನನ್ನದೇ ಬದುಕಿನಲ್ಲಿ ವ್ಯಸ್ತಳಾಗಿಬಿಟ್ಟೆ. ಕೈಗೊಂದು ಮೊಬೈಲೂ ಸಿಕ್ಕಿ ಲ್ಯಾಂಡ್ ಫೋನ್ ನೊಂದಿಗೆ ಇದ್ದ ಕರುಳಬಳ್ಳಿ ಸಂಬಂಧ ಕಡಿದು ಹೋಯಿತು. ಅದರ ಜೊತೆಜೊತೆಗೆ ಅವಳಿಗೂ ನನಗೂ ಇದ್ದ ಸಂಪರ್ಕವೂ ತಪ್ಪಿಹೋಯಿತು.

ಈಗ್ಗೆ ಒಂದಿಷ್ಟು ತಿಂಗಳಗಳಷ್ಟು ಹಿಂದೆ ಒಂದು ಮಾಗಿಯ ಚಳಿಯ ದಿವ್ಯ ಹೂಬಿಸಿಲಲ್ಲಿ, ನಾನು  ನಾನಾಗಿ ಉಳಿದಿಲ್ಲ, ಮುಖವಾಡಗಳ ಜಗತ್ತಲ್ಲಿ ಇನ್ನಾರದೋ ನೆರಳಂತೆ ಬದುಕುತ್ತಿದ್ದೇನೆ ಅನ್ನುವ ಅಸಹನೆಯಲ್ಲಿ ಅಸ್ತ್ರ ಒಲೆಯಂತೆ ಒಳಗೊಳಗೆ ಧುಮುಗುಟ್ಟುತ್ತಾ ನನ್ನ ಅಸ್ತಿತ್ವಕ್ಕಾಗಿ ತಡಕಾಡುತ್ತಿರುವಾಗ, ಅವಳು, ಅವನು ಮತ್ತು ನಾಗರಪಂಚಮಿ ಒಟ್ಟಿಗೆ ನೆನಪಾದವು. ಅದುವರೆಗೂ ಒಳಗೆಲ್ಲೋ ಸುಪ್ತವಾಗಿದ್ದ ಅವಳ ನೆನಪು ಬೆಂಬಿಡದೆ ಕಾಡತೊಡಗಿತು. ಫೇಸ್ಬುಕ್, ವಾಟ್ಸಪ್, ಟ್ವಿಟ್ಟರ್ ಅಂತೆಲ್ಲಾ ಇದ್ದ ಬದ್ದ ಸೋಶಿಯಲ್ ಮಿಡೀಯಾಗಳಲ್ಲಿ ಹುಡುಕಾಡಿ ಕೊನೆಗೂ ಅವಳ ನಂಬರ್ ಸಂಪಾದಿಸಿ ಫೋನ್ ಮಾಡಿ ಅವಳ ಧ್ವನಿ ಕೇಳಿಯಾದ ಮೇಲಷ್ಟೇ ನನ್ನೊಳಗೊಂದು ನಿರಾಳಭಾವ ಆವರಿಸಿದ್ದು.

ಈಗ ನಾನು ನಾನಾಗಿಯೇ ಉಳಿದಿದ್ದೇನೋ ಇಲ್ಲವೋ ಗೊತ್ತಿಲ್ಲ, ಆದ್ರೆ ಹಳೆ ಸ್ನೇಹ, ಪ್ರೀತಿ, ಮುದ್ದು, ಸಲಿಗೆ ನಮ್ಮಿಬ್ಬರ ಮಧ್ಯೆ ಮತ್ತೆ ನೆಲೆಗೊಂಡಿವೆ. ಆದ್ರೂ ಮಾತಿನ ಮಧ್ಯೆ ಅವನು, ಅವನ ಹಚ್ಚೆಯ ಪ್ರಸ್ತಾಪ ಬಂದಾಗೆಲ್ಲಾ ಇವಳು ಮಾತು ಮರೆಸುತ್ತಾಳೆ, ಮೌನದ ಮೊರೆ ಹೋಗುತ್ತಾಳೆ. ಹಳೆ ಸಂಬಂಧ ಬಿಟ್ಟು ಹೋದ ಬೆರಳುಗಳ ನಡುವಿನ ಅವಕಾಶವನ್ನು ಹೊಸ ಸಂಬಂಧ ಬೆಸೆದಿರುವಾಗ, ಹಳೆ ಕನಸು ಮುರುಟಿರುವಲ್ಲೇ ಹೊಸ ಕನಸು ಟಿಸಿಲೊಡೆದಿರುವಾಗ ಭೂತಕಾಲದ ಬಗ್ಗೆ ಹೆಚ್ಚು ನಾನೂ ಕೆದಕುವುದಿಲ್ಲ.

ಆದ್ರೆ ಮೊದಲ ನಾಗರಪಂಚಮಿಯಂದು ಇವಳು ಆಸೆ ಪಟ್ಟಂತೆ ಅವನು ಕೈ ಹಿಡಿದಿದ್ನಾ ಅನ್ನುವ ಕುತೂಹಲ ಮಾತ್ರ ಇನ್ನೂ ತಣಿದಿಲ್ಲ. ಹಲವು ಬಾರಿ ಕೇಳಲೇಬೇಕು ಅಂದುಕೊಂಡು ನಾಲಗೆ ತುದಿವರೆಗೆ ಬಂದ ಪ್ರಶ್ನೆಯನ್ನು ಹೇಳಲಾರದ ಯಾವುದೋ ಒಂದು ಮುಜುಗರಕ್ಕೆ ಸಿಲುಕಿ ಮತ್ತೆ ಗಂಟಲೊಳಕ್ಕೆ ತಳ್ಳಿದ್ದೇನೆ. ಮುಂದೆ ಯಾವತ್ತಾದ್ರೂ ಒಂದಿನ ಆ ಮುಜುಗರವನ್ನೂ ಮೀರಿ ನಾನು ಕೇಳಿ, ಅವಳು ನಿರ್ಬಿಢೆಯಿಂದ ಉತ್ತರಿಸಿದರೆ, ನಿಮ್ಗೂ ಹೇಳ್ತೀನಿ. ಆಯ್ತಾ?