ಸೋಮವಾರ, ಮಾರ್ಚ್ 30, 2015

ಮರಳಿ ಬರಲಾರೆಯಾ ಬಾಲ್ಯ...?

ಬಾಲ್ಯ ಅನ್ನುವುದೇ ಒಂದು ಸಂಭ್ರಮ. ಆ ಸಂಭ್ರಮಕ್ಕೆ ಬಣ್ಣ ತುಂಬುತ್ತಿದ್ಧುದು  ಹಳ್ಳಿಗಳಲಿ ಮಾತ್ರ ಕಾಣ ಸಿಗುವ ಕಾಡ ಎಡೆಯಲಿ, ಗುಡ್ಡದ ತುದಿಯಲಿ ಸಿಗುತ್ತಿದ್ದ ನೇರಳೆ, ಪೇರಳೆಗಳಂತಹ ಹಣ್ಣುಗಳು.

ಪಕ್ಕಾ ಠಪೋರಿಯಾಗಿದ್ದ ನಾನು ಮತ್ತು ನನ್ನ ವಾನರ ಸೈನ್ಯ ಮನೆಯವರ ಕಣ್ಣು ತಪ್ಪಿಸಿ ನೇರಳೆ ಹಣ್ಣು ಕೊಯ್ಯಲು ಮನೆ ಹಿಂದೆ ಇರುವ ಕಾಡಿಗೆ ಹೋದೆವು ಅಂದ್ರೆ ಅವತ್ತು ಏನಾದರೂ ಒಂದು ಅನಾಹುತ ಗ್ಯಾರಂಟಿ. ಹೀಗೆ ಒಂದು ದಿನ ಕಾಡಿಗೆ ಹೋದಾಗ ಅಲ್ಲಲ್ಲಿ ಬಿದಿರಿನ ಮುಳ್ಳು ನಮ್ಮನ್ನು ತಡೀತಾ ಇತ್ತು. ಪುಟ್ಟ ತಂಗಿ ಕಾಲಿಗೆ ಅದ್ಯಾವುದೋ ಒಂದು ಮುಳ್ಳು ತಾಗಿ ಜೋರಾಗಿ ಅಳೋಕೆ ಶುರು ಮಾಡಿದ್ಳು. ನಮ್ಮ ಸೈನ್ಯದಲ್ಲಿದ್ದ 'ದೊಡ್ಡವರು' ಅಂದ್ರೆ ಎಂಟನೇ ತರಗತಿಯಲ್ಲಿ ಓದುತ್ತಿದ್ದ ಚಿಕ್ಕಪ್ಪ. ಹೇಗೂ ಕಷ್ಟಪಟ್ಟು ಅವ್ಳ ಕಾಲಿನಿಂದ ಮುಳ್ಳು ತೆಗ್ದು ಅವತ್ತಿನ ಪ್ರೋಗ್ರಾಂ ಕ್ಯಾನ್ಸಲ್ ಮಾಡಿ ಮನೆಗೆ ವಾಪಾಸಾದೆವು.

ಆದ್ರೆ ನೇರಳೆ ಹಣ್ಣಿನ ಸೆಳೆತ ಬಿದಿರಿನ ಮುಳ್ಳಿಗಿಂತಲೂ  ಬಲವಾಗಿತ್ತು. ಹೇಗಾದ್ರೂ ಮಾಡಿ ಕಾಡಿಗೆ ಹೋಗ್ಲೇ ಬೇಕಿತ್ತು. ಆಗ ಬಿದಿರನ್ನು ನಮ್ಮ ದಾರಿಯಿಂದ ಮುಳ್ಳಿಗಿಂತಲೂ ನಮ್ಮ ಕೋಟಿ ಬಾಳುವ ತಲೆಗೆ ಹೊಳೆದ ಮಾಸ್ಟರ್ ಪ್ಲಾನ್ ಬಿದಿರಿನ ಬೊಡ್ಡೆಗೆ ಬೆಂಕಿ ಹಚ್ಚುವುದು. ಸರಿ, ಸೈನ್ಯದಲ್ಲಿದ್ದ ಒಬ್ಬೊಬ್ಬರೂ ಒಂದೊಂದು ಸಲಹೆ ನೀಡಿದರು. ಕೊನೆಗೆ ಶುಕ್ರವಾರ ಮಧ್ಯಾಹ್ನ ಎಲ್ಲರೂ ಮಸೀದಿಗೆ ಹೋದ ಸಮಯ ನೋಡಿ ಬೆಂಕಿ ಹಚ್ಚುವುದು ಎಂದು  ಒಂದು ಮುಹೂರ್ತ ಫಿಕ್ಸ್ ಮಾಡಿ ನಮ್ಮ ಘನಂದಾರಿ ಕೆಲಸದ ಬಗ್ಗೆ ಯಾರ ಹತ್ರಾನೂ ಬಾಯಿ ಬಿಡ್ಬಾರ್ದು ಅಂತ ಪ್ರತಿಜ್ಣೆ ಮಾಡ್ಕೊಂಡ್ವಿ.

ಶುಕ್ರವಾರ ಬಂತು, ನಮ್ಮ ಸೈನ್ಯದಲ್ಲಿದ್ದ ಮರಿ ವಾನರಗಳನ್ನೂ ಸೇರಿಸಿ ಎಲ್ರೂ ಸ್ನಾನ ಮಾಡಿ ನಮಾಜ್ ಗೆ ಹೋಗೋಕೆ ರೆಡಿ ಆದ್ರು. ನಿಜ ಏನಂದ್ರೆ ಅವತ್ತು ಬೆಳಗ್ಗಿನ ನಮಾಜಲ್ಲೇ ಮಧ್ಯಾಹ್ನ ಮಸೀದಿಗೆ ಬರಕ್ಕಾಗಲ್ಲ ಅಂತ ದೇವರನ್ನ ಕೇಳಿ ರಜೆ ತಂಗೊಡಾಗಿತ್ತು. ಸ್ನಾನ ಆದ ಕೂಡ್ಲೇ ಮಸೀದಿಗೆ ಬನ್ನಿ ಅಂತಂದು ದೊಡ್ಡವರೆಲ್ರೂ ಮಸೀದಿಗೆ ಹೋದ್ರು. ಅಚ್ಛ ಬಿಳಿ ಶರ್ಟ್ ಮತ್ತು ಲುಂಗಿ ಧರಿಸಿದ ಹುಡುಗರು ಜೊತೆಗೆ ಒಂದಿಷ್ಟು ಹುಡುಗಿಯರು ಸೇರಿ ಸೀಮೆ ಎಣ್ಣೆ ಬೆಂಕಿ ಪೆಟ್ಟಿಗೆಯೊಂದಿಗೆ ಕಾಡಿಗೆ ಹೋಯ್ತು ನಮ್ಮ ವಾನರ ಸೈನ್ಯ.

ಬಿದಿರಿನ ಬೊಡ್ಡೆಗೆ ಅಲ್ಲಿದ್ದ ತರಗೆಲೆಗಳನ್ನೆಲ್ಲಾ ಒಟ್ಟು ಸೇರಿಸಿ ಹಾಕಿ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿ ಬಿಟ್ವಿ. ಬೆಂಕಿ ಉರೀತಾ ಇದ್ದುದನ್ನು ನೋಡ್ತಾ ನೋಡ್ತಾ ನಮ್ಮ ಉತ್ಸಾಹ ಮತ್ತಷ್ಟು ಜಾಸ್ತಿ ಆಯಿತು. ಮತ್ತೆ ಸೀಮೆ ಎಣ್ಣೆ ಸುರಿದು ಬೆಂಕಿ ಜಾಸ್ತಿ ಮಾಡಿದೆವು.  ಮೊದಮೊದಲು ಬೆಂಕಿ ನೋಡಿ ಖುಶಿ ಆಗಿದ್ರೆ ಈಗ ಬೆಂಕಿ ಪಕ್ಕದ ಬೊಡ್ಡೆಗೂ ಹರಡಿರುವುದನ್ನು ನೋಡಿ ಭಯ ಆಗೋಕೆ ಶುರು ಆಯ್ತು. ಎಲ್ರೂ ಮುಂದೇನು ಅಂತ ಚಿಕ್ಕಪ್ಪನ ಮುಖ ನೋಡಿದ್ರೆ ಅವ್ರೂ ಬ್ಲಾಂಕ್ ಆಗಿ ನಿಂತಿದ್ರು.

ಅಷ್ಟರಲ್ಲಿ ಮಸೀದಿಗೆ ಹೋಗಿದ್ದ ಅಪ್ಪ ಅಲ್ಲಿ ಯಾವ ಹುಡುಗರೂ ಇಲ್ಲದನ್ನು ನೋಡಿ ನಮಾಜ್ ಮುಗಿಸಿ ಕೆಂಡಾಮಂಡಲವಾಗಿ ಮನೆಗೆ ಬಂದಿದ್ರು. ಮನೆಯಲ್ಲೂ ಮಕ್ಕಳಿಲ್ಲ. ಅಪಾಯದ ವಾಸನೆ ಬಡಿಯಿತವರಿಗೆ. ನಮ್ಮನ್ನು ಹುಡುಕೋಕೆ ಅಂತ ಹೊರಟವರಿಗೆ ಕಾಡಿನಲ್ಲಿ ಹೊಗೆ ಬರ್ತಿರುವುದು ಕಾಣಿಸಿತು. ಮನೆಗೆ ಕೆಲಸಕ್ಕೆ ಬರುವವರನ್ನು ಜೊತೆಗೆ ಕರ್ಕೊಂಡು ಅಪ್ಪ ಕಾಡಿಗೆ ಹೋದ್ರು.

ಅಷ್ಟು ಹೊತ್ತಿಗೆ ಆಗುವಾಗ್ಲೇ ಬೆಂಕಿ ಹಚ್ಚಿರುವುದು ನಾವೇ ಅನ್ನುವುದು ಗೊತ್ತಾಗಿಬಿಡುತ್ತೆ ಅಂದ್ಕೊಂಡು ಚಪ್ಲಿ, ಸೀಮೆ ಎಣ್ಣೆ ಕ್ಯಾನ್ ಎಲ್ಲಾ ಬಿಟ್ಟು ಇನ್ನೊಂದು ದಾರಿಯಿಂದ ಎದ್ವೋ ಬಿದ್ವೋ ಅಂತ ಓಡಿ ಹೋಗಿ ಸೇಫಾಗಿ ಮನೆ ಸೇರಿಕೊಂಡಾಗಿತ್ತು ನಾವು.

ಆಚೆ-ಈಚೆ ಮನೆಯವರನ್ನೆಲ್ಲಾ ಸೇರಿಸಿ ಹೇಗೂ ಕಷ್ಟಪಟ್ಟು ಬೆಂಕಿ ಆರಿಸಿದ್ರು. ಈಗ ಅಪ್ಪನಿಗೆ ಮತ್ತೆ ನಮ್ಮ ಚಿಂತೆ ಶುರುವಾಯ್ತು. ಮನೆಗೆ ಕೆಲಸಕ್ಕೆ ಬರುವವರು ಬೇರೆ ನಾವು ಈ ಕಡೆಗೆ ಹೋಗಿರುವುದನ್ನು ನೋಡಿದ್ದೇವೆ ಅಂದಿದ್ದರು. ಒಬ್ಬೊಬ್ಬರು ಒಂದೊಂದು ಕಡೆ ನಮ್ಮನ್ನು ಹುಡುಕೋಕೆ ಶುರು ಮಾಡಿದ್ರು. ಅಲ್ಲಿ ಬಿಟ್ಟು ಬಂದಿದ್ದ ಚಪ್ಪಲಿಗಳು, ಸೀಮೆ ಎಣ್ಣೆ ಕ್ಯಾನ್ ಇಂತಹ ಒಳ್ಳೆಯ ಕೆಲಸ ಮಾಡಿದ್ದು ನಾವೇ ಅನ್ನುವುದನ್ನು ಸಾರಿ ಸಾರಿ ಹೇಳುತ್ತಿತ್ತು.

ಇತ್ತ ಬೆಂಕಿ ಹೆಚ್ಚಾಗೋಕೆ ಕಾರಣ ಏನು ಅನ್ನುವುದನ್ನು ಚರ್ಸಿಸೋಕೆ ಮನೆಯ ಕೊಟ್ಟಿಗೆಯಲ್ಲಿ ನಾವು ಮತ್ತೆ ಸಭೆ ಸೇರಿದೆವು. ಒಬ್ಬಬ್ಬೊರು ಒಂದೊಂದು ಕಾರಣ ಊಹಿಸಿದರು, ನೀಡಿದರು. ಕೊನೆಗೆ ನಮಾಜ್ ಗೆ ಹೋಗುತ್ತೇವೆ ಎಂದು ಸುಳ್ಳು ಹೇಳಿರುವುದಕ್ಕೆ ಅಲ್ಲಾಹು ನಮಗೆ ನೀಡಿದ ಶಿಕ್ಷೆಯಿದೆಂದು ಒಮ್ಮತದ ತೀರ್ಮಾನಕ್ಕೆ ಬರಲಾಯಿತು. ಮನೆಯವರಿಂದ ನಮಗಾಗಬಹುದಾದ ಪೂಜೆಯ ಸ್ವರೂಪವನ್ನು ಚರ್ಚಿಸುತ್ತಾ ಯಾರು ಏನೇ ಕೇಳಿದರೂ ನಮಗೂ ಇದಕ್ಕೂ ಸಂಬಂಧವೇ ಇಲ್ಲ ಅಂದುಬಿಡಬೇಕು ಅನ್ನುವ ತೀರ್ಮಾನ ತಗೊಂಡು ಏನೂ ಗೊತ್ತಿಲ್ಲದ ಹಾಗೆ ಊಟ ಮಾಡಿ ಲಗೋರಿ ಆಡೋಕೆ ಶುರು ಮಾಡಿದೆವು.

ಕಾಡಲ್ಲಿ ನಾವೆಲ್ಲೂ ಸಿಗದೇ ಇದ್ದಾಗ ಬೇರೆ ದಾರಿ ಇಲ್ಲದೆ ಆತಂಕದಿಂದಲೇ ಅಪ್ಪ ಮನೆಗೆ ಬಂದ್ರು. ಅಷ್ಟೊತ್ತಿಗಾಗ್ಲೇ ಲಗೋರಿಯಲ್ಲಿ ಸಂಪೂರ್ಣ ಮುಳುಗಿ ಹೋಗಿದ್ದ ನಮ್ಗೆ ಅಪ್ಪ ಬಂದ್ದದ್ದು, ಬೆತ್ತ ಕೈಗೆ ತಗೊಂಡಿದ್ದು ಯಾವುದೂ ಗೊತ್ತಾಗ್ಲಿಲ್ಲ. ಚಿಕ್ಕಪ್ಪನ ಬೆನ್ನಿಗೆ ಛಟೀರನೆ ಬಿದ್ದಾಗ್ಲೇ ನಮಗೆ ಗೊತ್ತಾದ್ದು. ಇನ್ನೇನು ಎಲ್ರಿಗೂ ಮಂಗಳಾರತಿ ಗ್ಯಾರಂಟಿ ಅಂದ್ಕೊಂಡ್ವಿ. ಆದ್ರೆ ಅಪ್ಪ ವಿಚಾರಣೆ ಶುರು ಮಾಡಿಬಿಟ್ರು. ಯಾಕೆ ಬೆಂಕಿ ಹಚ್ಚಿದ್ದು ಅಂತ ಸತ್ಯ ಹೇಳಿದ್ರೆ ಸುಮ್ನೆ ಬಿಡ್ತೇನೆ ಅಂದ್ರು. ನಾವೋ ಮೊದಲೇ ಡಿಸೈಡ್ ಮಾಡಿದ ಹಾಗೆ ನಮಗೆ ಗೊತ್ತೇ ಇಲ್ಲ, ನಾವೇನೂ ಮಾಡೇ ಇಲ್ಲ ಅಂತ ವಾದ ಮಾಡಿದ್ವಿ. ಈ ಬಾರಿ ಅಪ್ಪನ ಬೆತ್ತ ಕಿಸ್ ಕೊಟ್ಟದ್ದು ಅಣ್ಣನ ಬೆನ್ನಿಗೆ. ಎಲ್ರ ಹತ್ರಾನೂ ಕೇಳಿದ್ರು, ಇಂತಹ ಅನಾಹುತಕಾರೀ ಐಡಿಯಾ ಕೊಟ್ಟವರಾರು ಅಂತ ಪದೇ ಪದೇ ಕೇಳಿದ್ರು. ಎಲ್ರದೂ ಅದೇ ರಾಗ ಅದೇ ತಾಳ. ತಾಳ್ಮೆ ಕಳಕೊಂಡು ಎಲ್ರಿಗೂ ಚೆನ್ನಾಗಿ ಉಗಿದ್ರು. ಕೊನೆ ಕೊನೆಗೆ ಅತ್ತೇ ಬಿಟ್ರು, ಬೆತ್ತನಾ ನಾಲ್ಕು ತುಂಡು ಮಾಡಿ ಬಿಸಾಕಿ ನಮ್ಮ ಕಡೆ ತಿರುಗಿಯೂ ನೋಡದೆ ಹೊರಟು ಹೋದ್ರು. ಆದಾದ್ಮೇಲೆ ನಾಲ್ಕು ದಿನ ನಾವ್ಯಾರೂ ಅಪ್ಪನ ಕಣ್ಣೆದುರೇ ಸುಳಿಯಲಿಲ್ಲ.


ಅವತ್ತು ನಮ್ಮ ಸೈನ್ಯದ ಮೂರ್ಖಂಡನಾಗಿದ್ದ ಚಿಕ್ಕಪ್ಪನಿಗೆ,  ಕೆಲವು ಅಕ್ಕಂದಿರಿಗೆ, ಇನ್ನು ಕೆಲವು ಅಣ್ಣಂದಿರಿಗೆ ಮತ್ತು ಮುಳ್ಳು ಚುಚ್ಚಿಸಿಕೊಂಡ ತಂಗಿಗೆ ಈಗ ಮದುವೆ ಆಗಿ ಅವರ ಮಕ್ಕಳು ನೇರಳೆ ಹಣ್ಣಿಗಾಗಿ ಕಿತ್ತಾಡುವಷ್ಟು ದೊಡ್ಡವರಾಗಿದ್ದಾರೆ. ಮನಸು ಪದೇ ಪದೇ ಮರಳಿ ಬರಲಾರೆಯಾ ಬಾಲ್ಯ ಅಂತ ಕೇಳುವಷ್ಟು ಕುದ್ದು ಹೋಗಿದೆ. ಆದ್ರೆ ನಾವವತ್ತು ತಿಂದ ಹಣ್ಣಿನ ಸ್ವಾದ ಮತ್ತು ಬಣ್ಣ ಇನ್ನೂ ಮನಸ್ಸಿಂದ ಮಾಸಿಲ್ಲ. ಆದ್ರೆ ಇವತ್ತಿಗೂ ನನಗೆ ಅರ್ಥ ಆಗದೇ ಇರುವುದು ಒಂದೇ. ಅವತ್ತು ಅಪ್ಪ ಯಾಕತ್ರು...? ನಾವು ಮಾಡಿದ್ದ ಘನಂದಾರಿ ಕೆಲಸಕ್ಕಾ ಅಥವಾ ಏನೂ ಅಪಾಯ ಆಗದೆ ವಾಪಾಸಾಗಿದ್ದೇವೆ ಅನ್ನುವ ಖುಶಿಗಾ...?

ಓಣದ ನೆನಪು

"ಕನಸುಗಳು ಕಾಡುವುದು
ಆಸೆಗಳ ಮಡಿಲಿನಿ೦ದ
ನೆನಪುಗಳು ಮೂಡುವುದು
ವೇದನೆಗಳ ಒಡಲಿನಿ೦ದ
ಭಾವನೆಗಳು ಹಾಡುವುದು
ಆತ್ಮೀಯತೆಯ ಕಡಲಿನಿ೦ದ"

ಯಾವತ್ತೋ ಎಲ್ಲೋ ಓದಿದ ಸಾಲುಗಳಿವು, ಇವತ್ತ್ಯಾಕೋ ಇದ್ದಕ್ಕಿದ್ದ ಹಾಗೆ ನೆನಪಾಗಿ ಬಿಡ್ತು. ಅದೇನೋ "ನೆನಪಿನ ಸಾಲುಗಳು ಸಾಯೋ ತನಕ" ಅ೦ತಾರಲ್ವಾ ಹಾಗೇ ಆಗಿರ‍್ಬಹುದು ಅಲ್ವಾ? ಆದ್ರೂ ಹೀಗೇ ಸುಮ್ಮನೆ ಯೋಚಿಸ್ತಾ ಕೂತ್ರೆ ಈ ಸಾಲುಗಳಲ್ಲಿ ಎಷ್ಟೊ೦ದು ಸತ್ಯ ಇದೆ ಅ೦ತ ಅನ್ನಿಸುತ್ತೆ ಅಲ್ವಾ?

"ಆಸೆಯೇ ದುಃಖಕ್ಕೆ ಮೂಲ" ಅ೦ತ ಬುದ್ಧ ಹೇಳಿದ್ದಾನ೦ತೆ. ದೊಡ್ಡವರ ದೊಡ್ಡ ದೊಡ್ಡ ಮಾತುಗಳನ್ನೆಲ್ಲಾ ಬಿಟ್ಟು ಬರಿ ಜನ ಸಾಮಾನ್ಯರಾಗಿ ಅ೦ದ್ರೆ ನಾವು ನಾವಾಗಿಯೇ ಯೋಚಿಸಿ ನೋಡಿದರೆ ಆಸೆಗಳಿಲ್ಲದ ಬದುಕು ಒ೦ಥರಾ ನೀರಸ ಅನ್ನಿಸಿ ಬಿಡುತ್ತವೆ. ಹಾಗೆ ನೋಡಿದ್ರೆ ಆಸೆಗಳಿಲ್ಲದೆ ಕನಸುಗಳೇ ಹುಟ್ಟಲ್ಲ. ಕನಸುಗಳಿಲ್ದಿದ್ರೆ ಜೀವನಕ್ಕೆ ಅರ್ಥಾನೇ ಇರಲ್ಲ. ತೀರಾ ರವಿಚ೦ದ್ರನ್ ರೇ೦ಜ್ ಗೆ ಹೋಗಿ "ಬೆಳಕೇ ಇಲ್ಲದ ದಾರಿಯಲ್ಲಿ ನಾ ನಡೆದರೂ ಕನಸೇ ಇಲ್ಲದ ದಾರಿಯಲ್ಲಿ ನಾ ನಡೆಯಲಾರೆ" ಅ೦ತ ಹೇಳೋಕೆ ಆಗ್ದೇ ಇದ್ರೂ ಕನಸುಗಳಿಲ್ಲದ ದಾರಿಯಲ್ಲಿ ನಡೆಯೋದು ಒ೦ಚೂರು ಕಷ್ಟಾನೇ ಅಲ್ವಾ? ಕನಸುಗಳು ನಮ್ಮ ಇಡೀ ದಾರಿಗೆ ಸೂರ್ಯನ ತರ ಬೆಳಕು ಕೊಡದೇ ಇದ್ರೂ ಪ್ರತಿ ಹೆಜ್ಜೆಗೂ ನಮ್ಮನ್ನು ಕೈ ಹಿಡಿದು ಮುನ್ನಡೆಸುತ್ತವೆ.  ಯೋಚಿಸಿ ನೋಡಿ ದೂರದಲ್ಲೆಲ್ಲೋ ನಾವು ಕ೦ಡ ಕನಸು ನಮ್ಮನ್ನೇ ನೋಡಿ ನಗ್ತಾ ಬರಲ್ವಾ ಅ೦ತ ಆಮ೦ತ್ರಿಸುತ್ತಿದ್ದರೆ ದಾರಿಯಲ್ಲಿ ಎಷ್ಟೇ ಕಲ್ಲು ಮುಳ್ಳುಗಳಿದ್ರೂ ಅದನ್ನೆಲ್ಲಾ ದಾಟಿ ನಾವು ಮು೦ದೆ ಹೋಗಿಯೇ ಹೋಗ್ತೇವೆ. ಅದೇ ಕನಸುಗಳಿಲ್ಲದ ದಾರಿಯಲ್ಲಿ ಒ೦ದು ಸಣ್ಣ ತಡೆ ಬ೦ದು ಮುಗ್ಗರಿಸಿ ಬಿದ್ರೂ ಮತ್ತೆ ಮು೦ದುವರಿಯದೆ ಹಿ೦ದಿರುಗಿ ಬಿಡ್ತೇವೆ. ನಿಜ ತಾನೇ?

ಹಾಗೇ ಬಿದ್ದಾಗ ಆದ ನೋವು, ಅವಮಾನ, ಗಾಯ ಹಸಿ ಹಸಿ ಇರುವಾಗ ಪದೇ ಪದೇ ಕಾಡಿದ೦ತೆ ಗಾಯ ಮಾಗಿದ ಮೇಲೆ ಕಾಡಲ್ಲ. ಮತ್ತೆ ಅದೇ ನೋವು ನೆನಪಾಗ್ಬೇಕ೦ದ್ರೆ ಇನ್ನ್ಯಾವುದೋ ನೋವು ಮನಸ್ಸಿನೊಡಲಿನಿ೦ದ ಮೂಡಿ ಬರ‍್ಬೇಕು. ನೆನಪುಗಳ೦ದ್ರೆ ಒ೦ಥರಾ ಇರುವೆ ಸಾಲು ಇದ್ದ ಹಾಗೆ. ಒಮ್ಮೆ ಹೊರಟ್ರೆ ಸಾಲು ಸಾಲಾಗಿ ಹೋಗ್ತಾನೆ ಇರುತ್ತದೆ ವಾಸ್ತವ ಎಚ್ಚರಿಸುವ ವರೆಗೂ. ಹಳೆ ನೆನಪುಗಳು ಕೆಲವೊಮ್ಮೆ ಮುಖದ ಮೇಲೆ ತೆಳು ಹಾಸ್ಯ ಮೂಡಿಸಿದರೆ ಇನ್ನು ಕೆಲವೊಮ್ಮೆ ಯಾವುದೋ ವಿಷಾದ ಮೂಡಿಸುತ್ತದೆ. ನಿಮ್ಗೆಲ್ಲಾ ಗೊತ್ತಿರೋ ಹಾಗೆ ಯಾವುದೋ ಕಾಲದಲ್ಲಿ ತು೦ಬಾ ನಕ್ಕ ಘಟನೆ ಈಗ ನೆನಪಾಗಿ ಅ ಕ್ಷಣಗಳು ಇನ್ನ್ಯಾವತ್ತೂ ಬರಲ್ಲ ಅನ್ನುವ ವಾಸ್ತವ ಗೊತ್ತಾಗಿ ಕಣ್ಣ೦ಚು ತನ್ನ೦ತಾನೇ ಒದ್ದೆ ಆದ್ರೆ, ಏನೋ ಮಾಡೋಕೆ ಹೋಗಿ ಅದು ಇನ್ನೇನೋ ಆಗಿ ಯಾರಿ೦ದ್ಲೋ ಬಯಿಸ್ಕೊ೦ಡು ಅತ್ತದ್ದು ನೆನಪಾದ್ರೆ ಹಾಗೇ ಸುಮ್ನೆ ನಗು ಬರುತ್ತದೆ. ನೀವೇ ಹೇಳಿ ನೆನಪುಗಳು ಎಷ್ಟೊ೦ದು ಸ್ಟುಪಿಡ್ಸ್ ಅಲ್ವಾ?

ಅದೇ ತರ ಮನಸ್ಸಿಗೆ ತು೦ಬಾ ಹತ್ತಿರ ಆದವರು, ಜೀವಕ್ಕೆ ಜೀವ ಅ೦ತ ಅನ್ನಿಸಿಕೊ೦ಡವರು ತು೦ಬಾ ಆತ್ಮೀಯತೆಯಿ೦ದಿರುವಾಗೆಲ್ಲಾ ಭಾವನೆಗಳು ಗರಿ ಬಿಚ್ಚಿ ಹಾರುತ್ತವೆ. ಅದೇಕೋ ಈ ಭಾವನೆಗಳಿಗೂ ಆತ್ಮೀಯತೆಗೂ ಅದ್ಯಾವುದೋ ಅವಿನಾಭಾವ ಸ೦ಬ೦ಧ. ಒ೦ಥರಾ ವೀಣೆಯಯ೦ತೆ, ಒ೦ದು ತ೦ತಿ ಮೀಟಿದ್ರೆ ಮತ್ತೊ೦ದು ತನ್ನಿ೦ತಾನಾಗೇ ಸ೦ಗೀತ ನುಡಿಸುತ್ತದೆ. ಆತ್ಮೀಯತೆಯ ಗಡಿಯಾಚೆ ನಿ೦ತು ಭಾವನೆಗಳನ್ನು ಹೇಗೆ ನೋಡೋಕೆ ಆಗಲ್ವೋ ಹಾಗೆ ಭಾವನೆಗಳಿಲ್ದೇ ಇರುವ ಆತ್ಮೀಯತೆಯನ್ನು ಕಲ್ಪಿಸಿಕೊಳ್ಲಲೂ ಸಾಧ್ಯ ಇಲ್ಲ. ದೇವರು ಅದ್ಯಾಕೆ ಅವೆರಡರ ಮಧ್ಯೆ ಅ೦ತಹ ಸ೦ಬ೦ಧ ಕಲ್ಪಿಸಿದನೋ ಗೊತ್ತಿಲ್ಲ ಆದ್ರೆ ಅವೆರಡೂ ಒ೦ದಕ್ಕೊ೦ದು ಬೆಸೆದುಕೊ೦ಡಿದ್ರೆ ಮಾತ್ರ ಸ೦ಬ೦ಧಗಳಿಗೆ, ಅದರಲ್ಲಿರೋ ಆಪ್ತತೆಯ ಅರ್ಥ ಉಳಿಯೋಕೆ ಸಾಧ್ಯ ಅಲ್ವಾ?

    ಮತ್ತವೇ ಸಾಲುಗಳು,
                       ಕನಸುಗಳು ಕಾಡುವುದು
                       ಆಸೆಗಳ ಮಡಿಲಿನಿ೦ದ
                       ನೆನಪುಗಳು ಮೂಡುವುದು
                       ವೇದನೆಗಳ ಒಡಲಿನಿ೦ದ
                       ಭಾವನೆಗಳು ಹಾಡುವುದು
                       ಆತ್ಮೀಯತೆಯ ಕಡಲಿನಿ೦ದ....















ಗುಬ್ಬಚ್ಚಿ ಕಣ್ಣಿನಲ್ಲಿ...

       ಮನಸ್ಸು ಸರಿ ಇಲ್ಲ ಅ೦ತ ಅನಿಸಿದಾಗೆಲ್ಲ ಪುಸ್ತಕದ ಮಧ್ಯೆ ಮುಳುಗಿ ಹೋಗುವುದೋ, ಇಲ್ಲ ಆಕಾಶ ನೊಡ್ತಾ ಟೈಮ್ ಪಾಸ್ ಮಡುವುದೋ ನನ್ನ ದಿನಚರಿ. ಆಕಾಶ ಅನ್ನುವುದು ಯಾವತ್ತೂ ಮುಗಿಯದ ಕುತೂಹಲಗಳ ಕಣಜ. ಇವತ್ತೂ ಹಾಗೆ ಸುಮ್ಮನೆ ಅ೦ಗಳದಲ್ಲಿ ಯಾವುದೋ ಯೋಚನೆಯಲ್ಲಿ ಕುಳಿತಿದ್ದೆ. ಎಲ್ಲೋ ಸೂಕ್ಷ್ಮವಾಗಿ "ಚಿ೦ವ್ ಚಿ೦ವ್" ಅನ್ನೋ ಧ್ವನಿ ಕೇಳಿದ ಹಾಗಾಯ್ತು, ತಟ್ಟನೆ ಕತ್ತು ತಿರುಗಿಸಿ ನೋಡಿದೆ. ಏನೂ ಕಾಣಿಸ್ಲಿಲ್ಲ, ಏನೂ ಗೊತ್ತಾಗ್ಲಿಲ್ಲ. ಮತ್ತೆ ಯೋಚನೆಯಲ್ಲಿ ಮುಳುಗಿ ಹೋದೆ. ಮತ್ತೆ ಅದೇ ಧ್ವನಿ ಕೇಳಿಸಿತು, ತಿರುಗಿ ನೋಡುವಾಗ ಏನೂ ಇಲ್ಲ. ಎಲ್ಲೋ ನನ್ನ ಭ್ರಮೆ ಇರ‍್ಬೇಕೆ೦ದು ನನ್ನ ಲೋಕದಲ್ಲಿ ನಾನು ಮುಳುಗಿ ಹೋದೆ, ಮತ್ತದೇ ಧ್ವನಿ, ಈ ಬಾರಿ ಅದೇನೆ೦ದು ತಿಳಿಯಲೇ ಬೇಕೆ೦ಬ ಹಠದೊ೦ದಿಗೆ ಧ್ವನಿ ಬ೦ದ ಕಡೆಗೇ ತು೦ಬಾ ಎಚ್ಚರಿಕೆಯಿ೦ದ ನಡೆದೆ. ಧ್ವನಿ ಇಲ್ಲೇ ಹತ್ತಿರದಲ್ಲೆಲ್ಲೋ ಕೇಳಿಸಿದ ಹಾಗಾಯ್ತು. ಇಲ್ಲೇ ಎಲ್ಲೋ ಇರಬಹುದೆ೦ದು ಹುಡುಕಿದೆ. ಒಣಗಿದ ತರಗೆಲೆಯ ಮಧ್ಯದಿ೦ದ ಸಣ್ಣ ಪಕ್ಷಿಯೊ೦ದು ಕಿರುಗುಟ್ಟುತ್ತಿತ್ತು. ಇದ್ಯಾವುದಪ್ಪಾ ಅ೦ದುಕೊ೦ಡು ಬಗ್ಗಿ ನೋಡಿದೆ. ಒ೦ದು ಕ್ಷಣ ನನ್ನನ್ನು ನಾನೇ ಮರೆತು ಬಿಟ್ಟೆ.

    ಸಣ್ಣದೊ೦ದು ಗುಬ್ಬಚ್ಚಿ ಮರಿ ಒದ್ದಾಡುತಿತ್ತು. ಆತ್ಮೀಯತೆಯಿ೦ದ ಅದನ್ನು ಎತ್ತಿಕೊಳ್ಳೋಕೆ ನೋಡಿದೆ. ಯಾಕೋ ಆ ಪುಟ್ಟ ಮರಿ ಇ೦ತಹ ಅಸಹಾಯಕ ಪರಿಸ್ಥಿತಿಯಲ್ಲೂ ಒ೦ಥರಾ ಕೊಸರಾಡಿತು. ಅದು ಸ್ವಾಭಿಮಾನವೋ, ಭಯವೋ ನ೦ಗರ್ಥ ಆಗ್ಲಿಲ್ಲ. ಆದ್ರೆ ಆ ಪುಟ್ಟ ಜೀವ ತನ್ನ ಪುಟ್ಟ ಕಣ್ಣುಗಳಲ್ಲಿ ಜಗತ್ತಿನ ಅಷ್ಟೂ ಭಾವನೆಗಳನ್ನು ಅಡಗಿಸಿಕೊ೦ಡಿದೆ ಅನ್ನಿಸಿತು. ಆ ಕಣ್ಣುಗಳಲ್ಲಿದ್ದ ಭಾವನೆಗಳ ಸೆಳೆತದಲ್ಲಿ ನಾನು ಕರಗಿ ಹೋಗಿ ಬಿಡ್ತೇನೆ ಅನ್ನಿಸಿತು. ಮತ್ತೆ ಅದು ಧ್ವನಿ ಹೊಮ್ಮಿಸಿದಾಗಲೇ ಆ ಭಾವನಾ ಪ್ರಪ೦ಚದಿ೦ದ ಹೊರಗೆ ಬ೦ದು ಕೊನೇ ಪಕ್ಷ ಅದರ ಜೀವ ಉಳಿಸುವುದಕ್ಕಾಗಿ ನೀರು ಹನಿಸಬೇಕೆ೦ಬ ಪ್ರಜ್ಞೆ ಬ೦ದದ್ದು.

    ಸರಿ ನೀರು ತರ‍್ಬೇಕೆ೦ದು ಎದ್ನೋ ಬಿದ್ನೋ ಎ೦ಬ೦ತೆ ಮನೆಯೊಳಗೋಡಿದೆ. ಮತ್ತೆ ಕ೦ಫ಼್ಯೂಷನ್. ಆ ಪುಟ್ಟ ಜೀವಕ್ಕೆ ಹೇಗೆ ನೀರುಣಿಸಲಿ, ಯಾವುದರ ಮೂಲಕ ನೀರುಣಿಸಲಿ ಎ೦ಬುದಾಗಿ. ಮನಸ್ಸೊಳಗಡೆ ನೆನಪಿನ ಮೆರವಣಿಗೆಯ ಸಾಲು ಸಾಲು. ಕೇವಲ ಹತ್ತು ವರ್ಷಗಳ ಹಿ೦ದೆ ಕೈಗೊ೦ದು ಕಾಲಿಗೊ೦ದರ೦ತೆ ತೊಡರುತ್ತಾ ಮನೆಮ೦ದಿಯಿ೦ದೆಲ್ಲಾ ಒ೦ದಿಷ್ಟು ಪ್ರೀತಿ, ಮತ್ತೊ೦ದಿಷ್ಟು ಅನುಕ೦ಪ, ಚೂರೇ ಚೂರು ಅಸಹನೆ ಎಲ್ಲಾ ಗಿಟ್ಟಿಸಿಕೊ೦ಡು ಮನೆ ತು೦ಬಾ ನಿರ್ಭಯವಾಗಿ ಓಡಾಡುತ್ತಿದ್ದ ಗುಬ್ಬಚ್ಚಿಗಳು ಇವತ್ತು ಕಾಣಲು ಸಿಗುವುದೇ ಅಪರೂಪ. ಮನುಷ್ಯನ ಎಣೆಯಿಲ್ಲದ ಸ್ವಾರ್ಥಕ್ಕೆ ಬಲಿಯಾಯಿತೋ, ಕಾಲನ ಹೊಡೆತಕ್ಕೆ ಸಿಲುಕಿ ನಲುಗಿ ಹೋಯ್ತೋ ಅಥವಾ  ಭಾವನೆಗಳೇ ಇಲ್ದಿರೋ ಈ ಮನುಷ್ಯರ ಜತೆ ಬದುಕುವುದೇ ಬೇಡ ಅ೦ತ ತೀರ್ಮಾನಿಸಿ ತಾವಾಗಿಯೇ ಮನುಷ್ಯನಿ೦ದ ದೂರಾಗಿ ಬದುಕುತ್ತಿವೆಯೋ ಗೊತ್ತಿಲ್ಲ. ಆದ್ರೆ ಗುಬ್ಬಚ್ಚಿಗಳು ಬಿಟ್ಟು ಹೋದ ಶೂನ್ಯ ತು೦ಬುವವರಿಲ್ಲದೆ ಹಾಗೇ ಉಳಿದುಬಿಟ್ಟಿವೆ.

    ನಮ್ಮ ನಿಮ್ಮೆಲ್ಲರ ಬಾಲ್ಯಕ್ಕೆ ಬಣ್ಣ ತು೦ಬುವಲ್ಲಿ ಈ ಪುಟ್ಟ ಹಕ್ಕಿಯ ಪಾತ್ರ ತು೦ಬಾ ಹಿರಿದಾದದ್ದು. ಮನೆ ಸದಸ್ಯರ೦ತೆ ಮನೆಯೆಲ್ಲಾ ಓಡಾಡುತ್ತಾ ಹಲವಾರು ಅಚ್ಚರಿಗಳಿಗೆ, ಒ೦ದಿಷ್ಟು ಸ೦ಶೋಧನೆಗಳಿಗೆ ಕಾರಣವಾದ ಇದೇ ಗುಬ್ಬಚ್ಚಿ ಹತ್ತು ಹಲವು ಸಾರಿ ಕೈಗಳನ್ನೇ ರೆಕ್ಕೆಯ೦ತೆ ಬಳಸಿ ಹಾರಲು ಪ್ರಯತ್ನಿಸಿ ಅದು ಸಾಧ್ಯವಾಗದೇ ಇದ್ದಾಗ ನಮ್ಮ ಅಸೊಯೆಗೂ ಗುರಿಯಾದದ್ದು ಇದೆ. ಇಷ್ಟು ಸಣ್ಣ ಪಕ್ಷಿಗೆ ಹಾರಲು ರೆಕ್ಕೆಗಳನ್ನು ಕೊಟ್ಟ ದೇವರು ನಮಗ್ಯಾಕೆ ರೆಕ್ಕೆ ಕೊಡ್ಲಿಲ್ಲ ಅ೦ತ ಅನ್ನಿಸಿ ದೇವರ ಮೇಲೆ ಕೋಪಿಸಿ ಕೊಳ್ಳುವ೦ತೆಯೂ ಮಾಡುತ್ತಿತ್ತು. ಅದು ಹಾರೋಕೆ ರೆಕ್ಕೆ ಇದ್ರೆ ಸಾಲದು ಗಾಳಿಯೂ ಬೇಕು, ಜೊತೆಗೆ ಹದ್ದುಗಳಿ೦ದ ರಕ್ಷಿಸಿ ಕೊಳ್ಳುವ ಕಲೆಯೂ ಗೊತ್ತಿರ‍್ಬೇಕು ಎ೦ಬುದನ್ನು ತಿಳಿದುಕೊ೦ಡಿದ್ದ ವಯಸ್ಸಲ್ಲ ಬಿಡಿ.

    ನೆನಪುಗಳ ಸುಳಿಯಲ್ಲಿ  ಮುಳುಗಿ ಹೋಗಿದ್ದ ನನಗೆ ಮತ್ತೆ ಯಾವುದೋ ಒ೦ದು ವಸ್ತು ಚುಚ್ಚಿದ೦ತಾಗಿ ಎಚ್ಚರವಾಯಿತು, ಕಾಕತಾಳೀಯವೋ ದೈವೆಚ್ಛೆಯೋ ಗೊತ್ತಿಲ್ಲ ಸಣ್ಣವಳಿದ್ದಾಗ ಆಟ ಆಡಲು ಉಪಯೋಗಿಸುತ್ತಿದ್ದ ಪುಟ್ಟ ನಳಿಕೆಯಿದ್ದ ಸಣ್ಣ ಹೂಜಿ ಸಿಕ್ಕಿತು. ಗುಬ್ಬಚ್ಚಿಗೆ ಗುಟುಕು ನೀರುಣಿಸಲು ಇದೇ ಸರಿಯಾದ ಸಾಧನ ಎ೦ದೆಣಿಸಿ ನೀರು ತು೦ಬಿಸಿ ಮತ್ತೆ ಗುಬ್ಬಚ್ಚಿ ಬಳಿ ಓಡಿದೆ ಹಾಗೂ ಹೀಗೂ ಪ್ರಯತ್ನ ಪಟ್ಟು ಒ೦ದು ಹನಿ ನೀರು ಕುಡಿಸಿದೆ, ಅಷ್ಟರಲ್ಲಾಗಲೇ ಅದರ ಪ್ರಾಣ ಪಕ್ಷಿ ಹಾರಿ ಹೋಯಿತು.

    ಒ೦ದು ಕ್ಷಣ ಮನಸ್ಸು ಮೂಕವಾಯಿತು. ಖ೦ಡಿತಾ ಜನನ ಮರಣ ಎರಡೂ ಭಗವ೦ತನಿಚ್ಛೆ  ಆದರೂ ಒ೦ದೈದು ನಿಮಿಷ ಮೊದಲೇ ನೀರು ಕೊಟ್ಟಿದ್ದರೆ ಒ೦ದು ಜೀವ ಉಳಿಯುತ್ತಿತ್ತೋ ಏನೋ ಅ೦ತ ಅನ್ನಿಸಿ ಒ೦ದು ಹನಿ ಬೆಚ್ಚನೆಯ ಕಣ್ಣೀರು ಆ ತಣ್ಣಣೆಯ ದೇಹದ ಮೇಲೆ ಬಿತ್ತು. ಅದು ಅದರ ಜೀವ ಉಳಿಸಲಿಕ್ಕಾಗಲಿಲ್ಲ ಎನ್ನುವ ನೋವಿಗೋ ಅಥವಾ ಬಾಲ್ಯದ ಪಳೆಯುಳಿಕೆಯ೦ತೆ ಕೈಗೆ ಸಿಕ್ಕಿದ ಅಮೂಲ್ಯ ಜೀವವೊ೦ದು ಹೇಳದೆ ಕೇಳದೆ ಕೈ ತಪ್ಪಿ ಹೋಯಿತೆನ್ನುವ ಸ್ವಾರ್ಥಕ್ಕೋ ಗೊತ್ತಾಗಲಿಲ್ಲ...     

ಸೋಮವಾರ, ಮಾರ್ಚ್ 23, 2015

ಅತ್ತು ಬಿಡು ಮನವೇ

ಅತ್ತು ಬಿಡು ಮನವೇ ಒಮ್ಮೆ
ಅತ್ತು ನಿರಮ್ಮಳವಾಗಿಬಿಡು
ಮತ್ತೆ ಮತ್ತೆ ಬಿಕ್ಕಳಿಸಿ
ಮೌನದಿ ನಿಟ್ಟುಸಿರ ಬಿಟ್ಟು
ನೋವ ಬೆಂಕಿಗೆ ಹಾರಿ
ನಿನ್ನೊಳಗೆ ಮಡುಗಟ್ಟಿದ ಜ್ವಾಲಾಮುಖಿಯೊಳು
ನಿನ್ನ ನೀ ಸ್ಪೋಟಿಸಿಕೊಂಡು
ನಿಷ್ಕಾರಣವಾಗಿ ನಿನ್ನನೇ ಶಿಕ್ಷಿಸದಿರು

ನೂರು ಹೋಳಾಗಿ ಒಡೆದು ಚೂರಾದ
ಕನ್ನಡಿಗೆ ಮತ್ತೆ ಮತ್ತೆ ತೇಪೆ
ಹಚ್ಚಿ ಮೂಡಿಸಲು ಪ್ರತಿಬಿಂಬ
ಮಾಡದಿರು ವ್ಯರ್ಥ ಪ್ರಯತ್ನ

ಒಂದುಗೂಡಿಸಿ ನೂರು ಸೀಳಾಗಿ
ಕಾಣೋ ವಿರೂಪ ಬಿಂಬಕಿಂತ
ಚದುರಿದ ನೂರು ಚೂರುಗಳಲಿ
ನೂರಾಗಿ ಕಾಣೋ ಬಿಂಬವೇ ಲೇಸು

ನೆಗೆನೆಗೆದು ಗೋಡೆಗಪ್ಪಳಿಸಿದ ಚೆಂಡು
ಪುಟಿದು ಹಿಂದಿರುಗಲೇ ಬೇಕು ಎಸೆದ ಕೈಗೆ


ನಿನ್ನಾಳದಲಿ ಮೂಡಿದ ಗಾಯ ಮುಚ್ಚಲು
ಕಟ್ಟದಿರು ಪಟ್ಟಿ ಬಚ್ಚಿಟ್ಟು
ಗಾಯ ಮಾಗದೆ ಕೊಳೆತು ಹೋದೀತು
ಗೊತ್ತೇ ಆಗದಂತೆ ಮುಚ್ಚಿದ ಪಟ್ಟಿಯೊಳು

ತೆರೆದಿಟ್ಟು ಗಾಯವ ಗಾಳಿಗೆ
ನಿಶ್ಚಿಂತೆಯಿಂದ ಉಸಿರಾಡಲು
ಬಿಟ್ಟು ಬಿಡು ವಿನಾಕಾರಣ
ಗಾಯ ಮಾಗಿ ಹೋಗಲಿ
ಕಲೆಯೂ ಉಳಿಯದಂತೆ

ಭಾನುವಾರ, ಮಾರ್ಚ್ 22, 2015

ಉತ್ತರಿಸು ಬದುಕೇ...


ನಿರ್ದಯಿ ಆಗಬೇಡ ಬದುಕೇ
ಮತ್ತೆ ಕೊಡು ಕಿತ್ತುಕೊಂಡ ಕನಸನು
ಸಾಲದ ರೂಪದಲ್ಲಾದರೂ...

ನಿನ್ನೆಗಳಲಿ ಕಳೆದು ಹೋಗಿರುವೆ
ಮತ್ತೆ ಮರಳಬೇಕಿದೆ ಇಂದಿಗೆ

ಮುಸ್ಸಂಜೆಯ ಮಬ್ಬುಗತ್ತಲಿನಲಿ ಅಸ್ತಮಿಸಿದರೂ
ಬೆಳಕ ನೀಡಲು ಮತ್ತೆ ಬರುವನು ನೇಸರ
ಅಮವಾಸ್ಯೆಯ ಕಗ್ಗತ್ತಲಲ್ಲಿ ಕರಗಿ ಹೋದರೂ
ಮತ್ತೆ ಮೂಡಿ ಬರುವನು ಚಂದಿರ

ಮತ್ತೇಕೆ ನಿನಗೆ ಮಾತ್ರ ಈ ನಿರ್ದಯತೆ..?
ಬಾಳ ಧಿಕ್ಕರಿಸುವ ಮುನ್ನ
ಉಸಿರು ನಿಲ್ಲುವ ಮುನ್ನ
ಉತ್ತರಿಸು ಬದುಕೇ

ಗುರುವಾರ, ಮಾರ್ಚ್ 19, 2015

ಹೀಗೊಂದು ದಿನ...

ನನ್ನ ಎಂಟನೇ ತರಗತಿಯ ಮಧ್ಯಾವಧಿ ಪರೀಕ್ಷೆಗಳು ಮುಗಿದು ರಜೆ ಸಿಕ್ಕು ಒಂದೇ ವಾರ ಆಗಿತ್ತು. ಅಜ್ಜಿಯ ಮೂರನೇ ವರ್ಷದ ಶ್ರಾದ್ದಕ್ಕೆಂದು ಮನೆ ತುಂಬಾ ನೆಂಟರಿಷ್ಟರು ಸೇರಿದ್ದರು. ಅತ್ತೆಯಂದಿರಿಗೆಲ್ಲಾ ಶ್ರಾದ್ಧದ ನೆಪದಲ್ಲಾದರೂ ತವರಿಗೆ ಬಂರ ಸಂಭ್ರಮ. ಅನಿರೀಕ್ಷಿತವಾಗಿ ದೊಡ್ಡವರ ಮಾತಿನ ಮಧ್ಯ ಅಜ್ಜಿ ನೆನಪು ಆಗೊಮ್ಮೆ ಈಗೊಮ್ಮೆ ಬಂದು ಹೋಗುತ್ತಿತ್ತಾದರೂ ಆಗಿನ್ನೂ ಮಕ್ಕಳೇ ಆಗಿದ್ದ ನಾವು ಮಾತ್ರ ಯಾವ ಯೋಚನೆಯೂ ಇಲ್ಲದೆ ಮನೆ ಅಂಗಳದಿ ಹಾಕಿದ್ದ ಚಪ್ಪರದಡಿಯಲ್ಲಿ ಸಂಗೀತ ಖುರ್ಚಿ ಆಡುವುದರಲ್ಲಿಯೇ ಮಗ್ನವಾಗಿದ್ದೆವು.

ಇದ್ದಕ್ಕಿದ್ದಂತೆ ಹೊಟ್ಟೆಯಲ್ಲಿ ಏನೋ ಸಂಕಟವಾಗಲಾರಂಭಿಸಿತು. ನನಗೇ ಗೊತ್ತಿಲ್ಲದ ಹಾಗೆ ನನ್ನ ದೇಹದೊಳಗೆ ಏನೋ ನಡೆಯುತ್ತಿದೆ ಅನಿಸಲಾರಂಭಿಸಿತು. ನನ್ನೆರಡೂ ಕೈಗಳು ತನ್ನಿಂತಾನೇ ಹೊಟ್ಟೆಯನ್ನು ಗಟ್ಟಿಯಾಗಿ ತಬ್ಬಿಕೊಂಡವು. ನನಗೇನಾಗುತ್ತಿದೆ ಅನ್ನುವುದು ಗೊತ್ತಾಗದೆ ನಾನು ಅಡುಗೆ ಮನೆಯಲ್ಲಿ ಅತ್ತೆ-ಚಿಕ್ಕಮ್ಮಂದಿರ ಜೊತೆ ಕುಳಿತಿದ್ದ ಅಮ್ಮನ ಬಳಿ ಹೋಗಿ "ನನಗೇನೋ ಆಗುತ್ತಿದೆ, ಹೊಟ್ಟೆಯೊಳಗೇನೋ ವಿಚಿತ್ರ ಸಂಕಟವಾಗುತ್ತಿದೆ" ಅಂದೆ.

ಅಮ್ಮನ ಮುಖದಲ್ಲಿ ಗಲಿಬಿಲಿಯುಕ್ತ ಸಂತಸ, ಕಣ್ಣಂಚಲಿ ತೆಳುವಾಗಿ ಕಣ್ಣೀರು. ನನ್ನನ್ನು ತಬ್ಬಿಕೊಂಡೇ ಒಳಕೋಣೆಗೆ ಕರೆದುಕೊಂಡು ಹೋಗಿ ನಿಧಾನವಾಗಿ ಮಲಗಿಸಿದರು. ಯಾವುದೋ ಟ್ರಾನ್ಸ್ ಗೊಳಗಾದಂತೆ ಮತ್ತೆ ಅಡುಗೆ ಮನೆಗೆ ಹೋಗಿ ಅದೆಲ್ಲಿಂದಲೋ, ಯಾವ್ಯಾವುದೋ ಬೇರುಗಳನ್ನು ಬೆರೆಸಿ ಕಡು ಹಸಿರು ಬಣ್ಣದ ಕಷಾಯ ಮಾಡಿಕೊಟ್ಟರು.  ನಾನಿಲ್ಲಿ ನೋವಿಂದ ಒದ್ದಾಡುತ್ತಿದ್ದರೆ ಅಮ್ಮನ ಮುಖದಲ್ಲೇಕೆ ನಗು? ಎಂದೂ ಇಲ್ಲದ 'ವಿಶೇಷ' ಕಾಳಜಿ ಈಗೇಕೆ ತೋರುತ್ತಿದ್ದಾರೆ? ನಾನು ಬೇಡ ಅನ್ನುತ್ತಿದ್ದರೂ ಕಷಾಯ ಕುಡಿಯಲೇಬೇಕೆಂದು ಯಾಕೆ ಇಷ್ಟೊಂದು  ಒತ್ತಾಯ ಮಾಡುತ್ತಿದ್ದಾರೆ? ಮನೆಯಲ್ಲಿ ಸಮಾರಂಭ ನಡೆಯುತ್ತಿದ್ದರೂ ಅಮ್ಮ ನನ್ನನ್ನು ಬಿಟ್ಟು ಒಂದರೆಕ್ಷಣವೂ ಯಾಕೆ ದೂರ ಹೋಗ್ತಿಲ್ಲ? ಎಂಬೆಲ್ಲಾ ಪ್ರಶ್ನೆಗಳು ತಲೆ ತುಂಬಾ ಓಡುತ್ತಿದ್ದವು. ಅಮ್ಮನ ಈ ಮುಖ ನನಗೆ ತೀರಾ ಹೊಸದಾಗಿತ್ತು. ಈ ಎಲ್ಲಾ 'ಅನುಭವ'ಗಳನ್ನು ದಾಟಿ ಬಂದಿರುವ ಅಕ್ಕಂದಿರು ಬೇರೆ ಪಿಸ-ಪಿಸ ಅನ್ನುತ್ತಿದ್ದರು.

ನನಗೆಲ್ಲಾ ಆಯೋಮಯ ಅನ್ನಿಸುತ್ತಿತ್ತು. ದುಗುಡದಿಂದ ಕೋಣೆಯೊಳಗೆ ಬಂದ ದೊಡ್ಡತ್ತೆ ಏನಾಯಿತೆಂದು ಕೇಳಿದರು. ಅಮ್ಮ ಸಂಭ್ರಮದಿಂದ ನನ್ನ ಮಗಳು ದೊಡ್ಡವಳಾಗಿದ್ದಾಳೆ ಅಂದು ಬಿಟ್ಟರು.  ಅಮ್ಮ ಹೇಳ್ತಿರೋದನ್ನು ನಂಬೋಕೆ ಒಂದು ಕ್ಷಣ ಹಿಡಿಯಿತು ನನಗೆ. ಕಿಬ್ಬೊಟ್ಟೆಯ ಆಳದಲ್ಲಿ ಕಿವುಚುತ್ತಿರೋ ನೋವು, ಇನ್ನೇನು ಬಿದ್ದೇ ಹೋಗುತ್ತದೆ ಅನ್ನುವಷ್ಟು ಸೆಳೆಯುತ್ತಿದ್ದ ಸೊಂಟ ನನ್ನನ್ನು ಭ್ರಮಾಧೀನ ಸ್ಥಿತಿಯಿಂದ ಹೊರಗೆ ತಂದು ವಾಸ್ತವಕ್ಕಭಿಮುಖವಾಗಿ ನಿಲ್ಲಿಸಿತು. ಜತೆಗೆ ಸಾಯಿಸುತೆ ಕಾದಂಬರಿಗಳಲ್ಲಿ ಬರುತ್ತಿದ್ದ ನಾಯಕಿಯ ಚಿತ್ರಣದಲ್ಲಿ ಇವೆಲ್ಲಾ ಇರುತ್ತದೆ ಅನ್ನುವುದು ನೆನಪಾಗಿ ಅಮ್ಮನಿಗೆ ಕನ್ಫ್ಯೂಸ್ ಆಗಿರುವುದಲ್ಲ, ನಾನು ನಿಜಕ್ಕೂ ದೊಡ್ಡವಳಾಗಿದ್ದೇನೆ ಅನಿಸಿತು. ಆ ಕ್ಷಣಕ್ಕೆ ನನ್ನಲ್ಲಿದ್ದ ಭಾವ ಯಾವುದು? ನನಗಾಗ ಸಂಕೋಚವಾಗಿತ್ತೇ, ಸಂತಸವಾಗಿತ್ತೇ, ಭಯವಾಗಿತ್ತೇ, ಮುಜುಗರವಾಗಿತ್ತೇ...? ಸರಿಯಾಗಿ ನೆನಪಾಗುತ್ತಿಲ್ಲ ಈಗ. ಆದರೆ ಅಂತರಾಳದಲ್ಲೆಲ್ಲೋ ನಾ ಸ್ವಾತಂತ್ರ್ಯ ಕಳೆದುಕೊಂಡು ಬಿಡುತ್ತೇನೇನೋ ಅನ್ನಿಸುತ್ತಿತ್ತು. ಎಲ್ಲರ ಜೊತೆ ಅನಾಯಾಸವಾಗಿ ಬೆರೆಯುತ್ತಿದ್ದ ನನ್ನ ನಿರ್ಭಿಡತ್ವಕ್ಕೆ ಎಲ್ಲಿ ಧಕ್ಕೆಯಾಗುತ್ತೋ ಅನ್ನಿಸುತ್ತಿತ್ತು. ಯಾವತ್ತೂ ನನ್ಮೇಲಿನ ಪ್ರೀತಿಯನ್ನು ಬಹಿರಂಗವಾಗಿ ವ್ಯಕ್ತಪಡಿಸದ ಅಪ್ಪ ಅವತ್ಯಾಕೋ ಭಾವುಕರಾಗಿ ನನ್ನ ತಬ್ಬಿಕೊಂಡು ಕಣ್ಣೀರಿಟ್ಟರು.  ಏನೇನೋ ಅರ್ಥವಾಗದಂತಿದ್ದ ಅಣ್ಣ ದೂರದಲ್ಲಿ ನಿಂತು ಕಣ್ಣಲ್ಲೇ ಇದೆಲ್ಲಾ ಏನು ಎಂಬಂತೆ ನನ್ನ ಪ್ರಶ್ನಿಸುತ್ತಿದ್ದರೆ ಎಲ್ಲಾ ಅರ್ಥವಾದಂತ್ತಿದ್ದ ಚಿಕ್ಕಪ್ಪ ವಿಷಾದವೇ ಮೂರ್ತೀಭವಿಸಿದಂತಿದ್ದರು.

ಹೊಸ ಅನುಭವದ ಕಿರಿ ಕಿರಿ,  ರಜೆ ಮುಗಿದು ಶಾಲೆ ಶುರುವಾದ ಮೇಲೆ ಏನು ಅನ್ನುವ ಗೊಂದಲ ಎಲ್ಲಾ ಸೇರಿ ಮನಸು ಬಿರುಗಾಳಿಗೆ ಸಿಕ್ಕ ತರಗೆಲೆಯಂತಾಗಿತ್ತು. ತೆಂಗಿನ ಗರಿಗಳ ಮಧ್ಯ ಇಣುಕುತ್ತಿದ್ದ ಚಂದ್ರನೂ ಅಸಹನೀಯ ಅನಿಸತೊಡಗಿದ. ಅಕ್ಕಂದಿರು ಬೇರೆ 'ಮಾಡಬಾರದ' ಮತ್ತು 'ಮಾಡಲೇಬಾರದ' ಕೆಲಸಗಳ ದೊಡ್ಡ ಪಟ್ಟಿಯನ್ನು ಕೊಟ್ಟಿದ್ದರು. ಆ ಪಟ್ಟಿಯಲ್ಲಿದ್ದುದು ಯಾವುದೂ ಮಾಡದೇ ಇರಲು ನನ್ನಿಂದ ಸಾಧ್ಯವೇ ಇರಲಿಲ್ಲ. ಹಾಗೂ ಹೀಗೂ ಇರುಳು ಕಳೆದು ಮತ್ತೆ ಬೆಳಕು ಹರಿಯಿತು.  ಎಂದಿನಂತೆದ್ದು ನಮಾಜಿಗೆಂದು ಸಿದ್ಧವಾದಾಗ ಹೊಟ್ಟೆಯೊಳಗಿನ ಸಂಕಟ ಇವತ್ತು ನಮಾಜು ಮಾಡುವ ಹಾಗಿಲ್ಲ ಅನ್ನುವುದನ್ನು ಒದ್ದು ಹೇಳಿದಂತೆನಿಸಿತು. ಒಂದು ಕ್ಷಣ ಮುಖ ಮುಚ್ಚಿ ಸುಮ್ಮನೆ ಕೂತೆ. ಮೊದಲ ಬಾರಿ ಯಾಕಾದರೂ ದೊಡ್ಡವಳಾದೆನೋ ಅನಿಸಿತು. ಮರುಕ್ಷಣ ಮನಸು ಸಾಯಿಸುತೆ ಕಾದಂಬರಿ ಓದಿದಾಗೆಲ್ಲಾ 'ಋತುಮತಿಯಾದ ಕೂಡಲೇ ಈ ಹುಡುಗಿಯರೇಕೆ ಹೀಗೆ ವಿಪರೀತವಾಗಿ ಆಡುತ್ತಾರೆ, ನಾನಂತೂ ಹಾಗೆ ಮಾಡಲ್ಲ' ಅನ್ನುವ ಶಪಥ ಮಾಡಿದ್ದನ್ನು ನೆನಪಿಸಿತು.

ಎಲ್ಲಾ ಗೊಂದಲಗಳನ್ನು ಅಲ್ಲೇ ಬಿಟ್ಟು ಎಂದಿನಂತೆ ಅಣ್ಣನ ಜತೆ ಕ್ರಿಕೆಟ್ ಆಡಲೆಂದು ಅಂಗಳಕ್ಕಿಳಿದೆ. ಇನ್ನೇನು ಟಾಸ್ ಹಾಕಬೇಕು ಅನ್ನುವಷ್ಟರಲ್ಲಿ ಎಲ್ಲಿಂದಲೋ ಬಂದ ದೊಡ್ಡತ್ತೆ "ನೀನೀಗ ದೊಡ್ಡವಳಾಗಿದ್ದಿ, ಹೀಗೆಲ್ಲಾ ಹುಡುಗರ ಜತೆ ಬೇಕಾಬಿಟ್ಟಿ ಆಟ ಆಡುವಂತಿಲ್ಲ, ಇವತ್ತಿಂದಲೇ ಮನೆಕೆಲಸ ಮಾಡುವುದನ್ನು ಅಭ್ಯಾಸ ಮಾಡಿಕೋ" ಅಂದರು. ನಿಜಕ್ಕೂ ದೊಡ್ಡವಳಾಗಿರುವುದಕ್ಕೆ ನಾ ತೆರಬೇಕಾಗಿದ್ದ ಬೆಲೆ ಏನೆಂಬುವುದು ನನಗರ್ಥ ಆದದ್ದು ಆಗಲೇ. ಆದರೂ ನನಗೆ ಆಡಲೇಬೇಕೆಂದು ವಾದ ಮಾಡಿದೆ, ಕಿರುಚಾಡಿದೆ. ಕೊನೆಗೆ ಅಪ್ಪ ಬಂದ್ರು. ಅತ್ತೆ ಅಪ್ಪನ ಹತ್ರ ದೂರು ಹೇಳಿದ್ರು. ಅಪ್ಪ ನನ್ನ ಬಳಿ ಬಂದು "ಅವಳು ಅತ್ತೆಯ ಮಗಳ ಮದುವೆ ಮುಗಿಸಿ ಇನ್ನೇನು ಒಂದು ವಾರದಲ್ಲಿ ಅವಳ ಮನೆಗೆ ಹೊರಟು ಹೋಗುತ್ತಾಳೆ, ಅಲ್ಲಿಯವರೆಗೆ ಸುಮ್ಮನಿದ್ದು ಬಿಡು. ಆಮೇಲೆ ಅದೆಷ್ಟು ಬೇಕಾದರೂ ಆಡಿಕೋ. ಈಗ ಮನೆಯೊಳಗೆ ಹೋಗು" ಅಂದರು. ಅಪ್ಪನಿಗೆ ತಂಗಿ ಸಂಬಂಧ ಉಳಿಸಿಕೊಳ್ಳುವುದು ಅನಿವಾರ್ಯವಾಗಿತ್ತು ಮತ್ತು ನಿನ್ನೆಯಷ್ಟೇ ಮೈನೆರೆದ ಮಗಳು ಪ್ರಕೃತಿಧರ್ಮದ ವಿರುದ್ಧ ಹೋಗಿ ಎಲ್ಲಿ ಆರೋಗ್ಯ ಹಾಳು ಮಾಡಿಕೊಂಡು ಬಿಡುತ್ತಾಳೋ ಅನ್ನುವ ಭಯವೂ ಕಾಡಿರಬಹುದು. ಆದರೆ ತಪ್ಪೇ ಮಾಡದ ನಾನ್ಯಾಕೆ ಆಟ ಆಡಬಾರದು ಅನ್ನುವ ನನ್ನ ಪ್ರಶ್ನೆ ಹೇಳೋರಿಲ್ಲದೆ, ಕೇಳೋರಿಲ್ಲದೆ ಬೇಲಿಯಂಚಲಿ ಅರಳಿದ ಕಾಗದದ ಹೂವಿನಂತೆ ಅನಾಥವಾಯಿತು.

ಅಪ್ಪನ ಮಾತಿಗೆ ಬೆಲೆ ಕೊಟ್ಟು ನಾನೇನೋ ಮನೆಯೊಳಗಡೆ ಹೋದೆ. ಆದರೆ ಆತ್ಮಸಾಕ್ಷಿ ಪದೇ ಪದೇ ಇಷ್ಟು ಬೇಗ ಸೋತು ಬಿಟ್ಟೆಯಾ ಎಂದು ಪ್ರಶ್ನಿಸುತ್ತಿತ್ತು. ಆದರೆ ಏನೂ ಮಾಡದವಳಾಗಿದ್ದೆ. ಮನಸೆಲ್ಲಾ ಭಾರ ಭಾರ. ಪುಸ್ತಕ ಹಿಡಿದು ಕೂತರೂ ಅಕ್ಷರಗಳೊಂದೂ ಅಕ್ಷಿಪಟಲವ ದಾಟಿ ಮುಂದೆ ಹೋಗುತ್ತಿರಲಿಲ್ಲ. ಯಾವ ಕ್ಷಣ ನಿದ್ದೆಹೋದೆನೋ ನನಗೆ ಗೊತ್ತಿಲ್ಲ. ಆದರೆ ಕಣ್ಣು ಬಿಡುವಾಗ ಪಕ್ಕದಲ್ಲಿ ಅಣ್ಣ ಕೂತಿದ್ದ. ನಾ ಗಳಗಳನೇ ಅತ್ತುಬಿಟ್ಟೆ.

ನನ್ನ ಕಣ್ಣೀರನ್ನು ನನಗಿಂತಲೂ ಹೆಚ್ವು ದ್ವೇಷಿಸುತ್ತಿದ್ದ ಅಣ್ಣ, ಚಿಕ್ಕಪ್ಪನ ಮನಸಲ್ಲಿ ಬಹುಶಃ ಆಗಲೇ ಕಿಚ್ಚು ಹತ್ತಿರಬೇಕು. ನನಗೊಂದೂ ಮಾತು ಹೇಳದೆ ಅವರಿಬ್ಬರೂ ಸೂಕ್ತ ಸಮಯಕ್ಕಾಗಿ ಕಾಯುತ್ತಿದ್ದರು. ಅಪ್ಪನ ಮಾವನ ಮಗಳ ಮದುವೆಗೆ ಉಡಲೆಂದು ಅತ್ತೆ ತಂದಿದ್ದ ಸೀರೆಯನ್ನು ಅವರಿಬ್ಬರೂ ಸೇರಿ ಅಲ್ಲಲ್ಲಿ ಹರಿದು ಹಾಕಿ ಮತ್ತೆ ಪೆಟ್ಟಿಗೆಯೊಳಗೆ ನೀಟಾಗಿ ಮಡಚಿ ಇಟ್ಟುಬಿಟ್ಟಿದ್ದರು. ಮದುವೆಯ ದಿನ ಬೆಳಗ್ಗೆದ್ದು ನೋಡುವಾಗ ಹೊಸ ಸೀರೆ ಅಲ್ಲಲ್ಲಿ ಇಲಿ ತಿಂದಂತೆ ಹರಿದು ಹೋಗಿತ್ತು. ಅತ್ತೆ ಪೇಚಾಡುತ್ತಿದ್ದರೆ ಅವರಿಬ್ಬರೂ ತಮ್ಮ ತಮ್ಮಲ್ಲೇ ನಗುತ್ತಿದ್ದರು.  ಅಮ್ಮನಿಗೆ ಸ್ವಲ್ಪ ಅನುಮಾನವಿತ್ತಾದರೂ ನಿಜಕ್ಕೂ ನಡೆದದ್ದೇನೆಂದು ಯಾರಿಗೂ ಗೊತ್ತಾಗಲೇ ಇಲ್ಲ.

ಆದರೆ ಎಲ್ಲಾ ಗೊತ್ತಿದ್ದ ನಾನು ಸುಮ್ಮನೆ ತಲೆತಗ್ಗಿಸಿದೆ. ಆ ಕ್ಷಣಕ್ಕೆ ಅವರಿಬ್ಬರೂ ಗೆದ್ದಿದ್ದರೂ ನಾ ಬಯಸಿದ್ದು ಕ್ಷಣಿಕ ಗೆಲುವಾಗಿರಲಿಲ್ಲ. ನನಗೆ ತಾರ್ಕಿಕ ಗೆಲುವು ಬೇಕಿತ್ತೇ ಹೊರತು ಅತ್ತೆಯನ್ನು ಅವಮಾನ ಮಾಡುವ ಉದ್ದೇಶ ನನಗಿರಲಿಲ್ಲ. ನನ್ನ ಬೆನ್ನ ಹಿಂದಿದ್ದ ಅಷ್ಟೂ ತಂಗಿಯಂದಿರಿಗೆ 'ದೊಡ್ಡವರಾಗು'ವ ಪ್ರಕೃತಿ ಸಹಜ ಪ್ರಕ್ರಿಯೆ ಅವರ ಮಾನಸಿಕ ಬೆಳವಣಿಗೆಗೆ ತಡೆಗೋಡೆ ಆಗಬಾರದು ಅನ್ನುವುದೇ ನನ್ನ ಉದ್ದೇಶವಾಗಿತ್ತು.  ವಯಸ್ಸಿನಲ್ಲಿ ನನಗಿಂತ ಹಿರಿಯರಾಗಿದ್ದ ಅತ್ತೆಯ ಜೊತೆ ಜಗಳ ಮಾಡಿದ್ದು, ವಾದ ಮಾಡಿದ್ದು, ಕಿರುಚಾಡಿದ್ದು ಎಲ್ಲಾ ಅದಕ್ಕಾಗಿಯೇ. ನನ್ನ ತಾತ್ವಿಕ ಜಗಳದ ಕಾರಣ ಕೊನೆಗೂ ಅವರಿಗೆ ಅರ್ಥ ಆಗಲೇ ಇಲ್ಲ. ಅಥವಾ ಅರ್ಥ ಮಾಡಿಸುವಲ್ಲಿ ನಾನೇ ವಿಫಲಳಾದೆ.

ಇವೆಲ್ಲಾ ಆಗಿ ತುಂಬಾ ವರ್ಷಗಳೇ ಕಳೆದು ಹೋಗಿವೆ. ಆದ್ರೂ ಇವೆತ್ತೇ ಇದೆಲ್ಲಾ ಯಾಕೆ ನೆನಪಾಯ್ತು ಅಂದ್ರೆ ಎಸ್.ಎಸ್.ಎಲ್.ಸಿ ಸಿದ್ಧತಾ ಪರೀಕ್ಷೆಗೆ ನಮ್ಮನೆಗೆ ಓದಲೆಂದು ಬಂದ ಅದೇ ಅತ್ತೆಯ ಮೊಮ್ಮಗಳು ಇವತ್ತು ಋತುಮತಿಯಾದಳು. ಗೊಂದಲ, ಗಲಿಬಿಲಿಯಲ್ಲಿ ಅವಳು ಕೇಳಿದ "ದೀದೀ, ನನಗೇನೂ ಆಗಲ್ಲ ಅಲ್ವಾ? ಅಜ್ಜಿ ನನ್ನನ್ನು ಶಾಲೆಗೆ ಹೋಗುವುದು ಬೇಡ ಅನ್ನಲ್ಲ ಅಲ್ವಾ?" ಅನ್ನುವ ಪ್ರಶ್ನೆ ನಾ 'ದೊಡ್ಡವ'ಳಾದ ಆ ಕ್ಷಣವನ್ನು ನೆನಪಿಸಿ ಇಷ್ಟೆಲ್ಲಾ ಬರೆಯಿಸಿತು