ಸೋಮವಾರ, ಆಗಸ್ಟ್ 8, 2016

ಹೂ ಮಾರುವ ಹುಡುಗಿ

ಮಲ್ಲಿಗೆ ಬಿರಿವ ಸದ್ದಿಗೆ
ಸದ್ದಾಗದೆ ನಗುತ್ತಾಳೆ
ಹೂ ಮಾರುವ ಹುಡುಗಿ

ಮೋಟು ಗೋಡೆಯ
ಮುರಿದ ಮನೆಯ
ಒಳಗೊಂದು ಸಣ್ಣ ಬಿಕ್ಕಳಿಕೆ

ತಂಗಿಗೊಂದು ಫ್ರಿಲ್ಲಿನ ಫ್ರಾಕು
ತಮ್ಮನಿಗೊಂದು ಗಾಳಿಪಟ
ಬೊಗಸೆಯಷ್ಟೇ ಇರುವ ಕನಸದು

ಗುಡಿ ದರ್ಗಾ ಚರ್ಚು ಊರು ಕೇರಿ
ಟಾರಿಲ್ಲದ ಹಾದಿಯ ಬೆಂಜರುಗಲ್ಲುಗಳ
ರುದ್ರ ನರ್ತನ ಅವಳ ಬರಿಗಾಲ ಮೇಲೆ

ಹಸಿರು ಶಾಲು, ಉದ್ದ ನಾಮ, ಬಿಳಿ ನಿಲುವಂಗಿಯ
ಮಂದಿಯ ದಾಟಿ ಹೋಗುವಾಗೆಲ್ಲಾ
ಹೂವು ಮುಳ್ಳಾಗುತ್ತದೆ, ಬುಟ್ಟಿ  ಭಾರ ಭಾರ

ಸಂಜೆಯಾಗುತ್ತಿದ್ದಂತೆ ಕನಸಿದ
ನುಣುಪಿಗಾಗಿ ಬುಟ್ಟಿಯೊಳಗೆ
ಕೈಯಾಡಿಸಿದರೆ ಘೋರ ನಿರಾಸೆ

ಸಂಚಿಯ ತಳದ ಇಷ್ಟೇ ಇಷ್ಟು
ನಾಣ್ಯಗಳು ಅವಳ ಬೊಗಸೆಯಷ್ಟರ
ಕನಸನು ಲೇವಡಿ ಮಾಡುತ್ತದೆ

ಮುರಿದ ಮನೆಯ ಮೋಟು
ಗೋಡೆಯೊಳಗಿನ ಬಿಕ್ಕಳಿಕೆ
ಗಂಟಲೊಳಗೆ ಮತ್ತೆ ಮತ್ತೆ ಹುದುಗುತ್ತದೆ

ನಾನು ಪದ ಕುಟ್ಟುತ್ತೇನೆ
ಕವನ ಕಟ್ಟುತ್ತೇನೆ ಮತ್ತೆ
ಅವಳ ಮನೆಯ ಚಾವಡಿಯಿಂದ
ಎದ್ದು ಹೋಗುತ್ತೇನೆ

ಅವಳಂತಹ ಮತ್ತೊಬ್ಬ ಹುಡುಗಿಯ
ಬದುಕಿಗಾಗಿ ಅರಸುತ್ತೇನೆ
ಮತ್ತೆ ಕವಿತೆ ಮೈದಾಳುತ್ತದೆ

ನೀವು ನನ್ನ ಹೊಗಳುತ್ತೀರಿ
ಸಂವೇದನಾಶೀಲೆ ಅನ್ನುತ್ತೀರಿ
ನಾನು ಉಬ್ಬುತ್ತೇನೆ, ಉಬ್ಬುತ್ತಲೇ ಹೋಗುತ್ತೇನೆ

ಕೊನೆಗೊಂದು ದಿನ,
ಟಪ್ಪೆಂದು ಒಡೆದು  ಸತ್ತು ಹೋಗುತ್ತೇನೆ
ಹೂ ಮಾರುವ ಹುಡುಗಿಯ
ಬುಟ್ಟಿಯೊಳಗಿನ ಹೂವು
ಛಿಲ್ಲನೆ ನಗುತ್ತದೆ

ಅವನೆಂದರೆ...

ಅವನೆಂದರೆ...
ಕಣ್ಣ ಕೊನೆಯ ಹನಿಗೂ
ಬೆರಳ ತುದಿಗೂ ಇರುವ
ಅವಿಚ್ಛಿನ್ನ ನಂಟು

ಅವನೆಂದರೆ...
ಮುಗಿಲೆದೆಯ ಬಿರಿದು
ಸುರಿವ ಮೊದಲ ಮಳೆಗೂ
ತೆರೆವ ಮಣ್ಣಿನ ಘಮಕ್ಕೂ
ಇರುವ ಐಚ್ಛಿಕ ಬಂಧ

ಅವನೆಂದರೆ...
ತೊರೆಯ ಚಾಂಚಲ್ಯಕ್ಕೂ
ಶರಧಿಯ ಗೂಢತೆಗೂ
ಇರುವ ತೀಕ್ಷ್ಣ ಭೇದ

ಅವನೆಂದರೆ...
ಅಂಗೈ ತೊಗಲಿಗೂ
ಕಂದು ಮಚ್ಛೆಗೂ
ನಡುವಿನ ನಿರ್ವಾಣ

ಅವನೆಂದರೆ...
ಪದಗಳಾಗೆವೆಂದು ರಚ್ಚೆ ಹಿಡಿವ
ನನ್ನ ಭಾವಗಳಿಗೂ
ಸರಾಗವಾಗಿ ಮೈದಾಳುವ
ಕವಿತೆಗಳಿಗೂ
ನಡುವಣ ತೂಗುಸೇತುವೆ

ಅವನೆಂದರೆ...
ನಾನು ನನ್ನೊಳಗಿರುವಾಗಿನ
ಅಹಂಕಾರಕ್ಕೂ
ನಾನು ಅವನೊಳಗಿರುವಾಗಿನ
ಪರಾರ್ಥತೆಗೂ
ನಡುವಿನ ಪ್ರಖರ ಪ್ರಭೆ

ಅವನೆಂದರೆ...
ನಾನೆಂಬ ಪ್ರಕ್ಷುಬ್ಧತೆಗೂ
ಅವನ ನಾನೆಂಬ ನಿರ್ಮಲತೆಗೂ
ಮಧ್ಯೆ ಇರುವ ಅಗಾಧ ಕಂದಕ

ಗುರುವಾರ, ಆಗಸ್ಟ್ 4, 2016

ಸಂಜೆ ಮಲ್ಲಿಗೆ

ಸಂಜೆ ಮಲ್ಲಿಗೆಯ ಕಂಪು
ಮೆತ್ತನೆ ಅಡರುತ್ತಿದ್ದಂತೆ
ಇಲ್ಲೆಲ್ಲೋ ನೀನಿದ್ದಿ ಅನ್ನುವ ಭಾವ
ಮತ್ತೆ ಮೊಳಕೆಯೊಡೆಯುತ್ತದೆ

ಮಲ್ಲಿಗೆಗೇನು ಗೊತ್ತು ನನ್ನ ವಿರಹ
ಅದರ ಪಾಡಿಗದು ಅರಳುತ್ತದೆ
ಸುತ್ತಲೂ ಘಮ್ಮೆನ್ನುತ್ತದೆ
ಪಶ್ಚಿಮದ ಪೂರ್ತಿ ರಂಗಿನ ಚಿತ್ತಾರ

ನಾನು ಮತ್ತೆ ಎಂದೂ ದಕ್ಕದ
ನಿನ್ನ ಹುಡುಕಲಾರಂಭಿಸುತ್ತೇನೆ
ಬಿರಿಯದೆ ಉದುರಿದ
ನಿನ್ನೆಯ ಅಂಕುರಗಳಲಿ

ನೀರು ಬತ್ತಿದ ನದಿಯಲಿ
ಹಾಯಿ ದೋಣಿ ನಡೆಸುವ
ಎಂದೂ ನನಸಾಗಲಾರದ
ಹುಚ್ಚು ಕನಸು ನನ್ನದು

ನದಿ ಎಂದಾದರೂ ತುಂಬೀತೇನೋ
ನನ್ನ ಮೇಲೆ ದಯೆ ತೋರಿ
ನಿನ್ನ ಕಾಯುವ ಕಪಟ ಹಾದಿಯ
ಕಲ್ಲು ಮುಳ್ಳುಗಳಿಗೆಲ್ಲಿದೆ ಕರುಣೆ

ಈ ಮುಸ್ಸಂಜೆಯ ವಿಷಣ್ಣತೆಯಲಿ
ಅರೆಬೆಂದ ಕನಸುಗಳ ಕಮಟು
ಎದೆಯ ಕುಲುಮೆಯೊಳಗೆ
ಕುದಿದು ಆವಿಯಾಗುವಾಗೆಲ್ಲಾ

ಕೈ ಹಿಡಿಯುವುದು, ಹೆಗಲಾಗುವುದು
ಎಂದೂ ತೀರದ ಅಕ್ಷರಗಳು
ಮತ್ತು ಒಂದಿಷ್ಟು ಕವಿತೆಗಳು
ಮಾತ್ರ.

ರೋಹಿಂಗ್ಯಾ ತತ್ತರಿಸುತ್ತಿದೆ..

ಅಮ್ಮ ಬೆಳೆಸಿದ ಸಾಸಿವೆ ಗಿಡ
ಬುಡ ಸಮೇತ ಕಿತ್ತು ಬಿದ್ದಿದೆ
ರೋಹಿಂಗ್ಯಾ ತತ್ತರಿಸುತ್ತಿದೆ
ಬುದ್ಧನ ಕಣ್ಣಲ್ಲೂ ತೆಳು ನೀರು

ಕಾಳರಿಸಿ ನೆಲಕ್ಕಿಳಿದ ಹಕ್ಕಿಯ
ರೆಕ್ಕೆ ಕಳಚಿ ಬಿದ್ದಿದೆ ಇಲ್ಲಿ
ಭೀತಿಗೆ ಸಿಕ್ಕ ಹಸುಳೆಯ
ಆಕ್ರಂದನ ಮುಗಿಲು ಮುಟ್ಟಿದೆ ಅಲ್ಲಿ

ನೀರು ಕುದಿಯುತ್ತಿದೆ ಅನ್ನದ ಪಾತ್ರೆಯಲಿ
ಸೋರುವ ಮನೆಯ ಮಾಡಿನಡಿಯಲಿ
ಸುತ್ತ ಬೆಂಕಿ ಹಬ್ಬಿದರೂ
ಬದುಕು ಬೇಯುತ್ತಿಲ್ಲ; ಉರಿಯುತ್ತಿದೆ

ಮರಣ ಮೃದಂಗದ ರುದ್ರ ನಾದದಲಿ
ಬೇರು ಸಂಧಿಸಿದೆ ರಕ್ತ ಕಾಲುವೆಯ
ಬ್ರಹ್ಮಾಂಡಕ್ಕೆಲ್ಲಾ ಗಾಢ ನಿದ್ದೆ
ಶಾಂತಿದೂತರಿಗೂ ಜಾಣ ಕುರುಡು

ದೇಶ ಭಾಷೆ ಧರ್ಮ ಬಣ್ಣಗಳ
ಮೀರಿ ಜೀವವೆಂದರೆ ಜೀವವಷ್ಟೆ
ಬಡಿತ ಮಿಡಿತಗಳಲ್ಲೂ ಭಿನ್ನತೆಯಿಲ್ಲ
ಉಸಿರಿನ ಲಯ ಏರಿಳಿತಗಳೂ ಒಂದೇ

ಕ್ರೌರ್ಯಮುಖೀ ಅಹಂಕಾರದ ಆಕ್ರಮಣಶೀಲತೆಗೆ
ಕರಗುವ ಮರುಗುವ ಮನಸ್ಸುಗಳೇ
ಗುಟುಕು ಕರುಣೆಗಾಗಿ ಯಾಚಿಸುವವರ
ಬಗೆಗೂ ಹಿಡಿಯಷ್ಟು ದಯೆಯಿರಲಿ.

ಬುಧವಾರ, ಆಗಸ್ಟ್ 3, 2016

ಕನಸುಗಳ ಬಿಕರಿ...

ನನ್ನದೆಯ ಬಗೆದು
ಕನಸುಗಳ ಬಿಕರಿಗಿಟ್ಟಿದ್ದೇನೆ
ಹೆಚ್ಚೇನಿಲ್ಲ; ಸಗಟು ದರವಷ್ಟೆ

ಅಲ್ಲಲ್ಲಿ ರಕ್ತದ ಕಲೆ
ಬೆವರಿನ ಕಮಟಿದೆ
ಅಸಹ್ಯಿಸಿಕೊಳ್ಳದಿರಿ

ಉಕ್ಕಿದ ಲಾವಾರಸಗಳು
ಸಿಡಿದ ಜ್ವಾಲಾಮುಖಿಗಳು
ಒಂದಿಷ್ಟು ವ್ರುಣಗಳ ಉಳಿಸಿವೆ

ಇರಲಿ ಬಿಡಿ, ಬಿಸಿಲಿಗಿಟ್ಟರೆ
ಒಣಗಿ ಸುಕ್ಕಾಗಿ ಕಲೆಯೂ
ಉಳಿಯದಂತೆ ಮಾಯವಾಗುತ್ತದೆ

ಬನ್ನಿ ಕನಸ
ಕೊಲ್ಲುವವರೇ, ಕೊಳ್ಳುವವರೇ
ನಾನೀಗ ಶಾಂತ ಸಮುದ್ರ

ಲಾವಾರಸವಿಲ್ಲ, ಜ್ವಾಲಾಮುಖಿಯಿಲ್ಲ
ಆತ್ಮಗ್ಲಾನಿಯ ಎಳೆಯೂ ಇಲ್ಲ
ಒಂದು ನಿರ್ಲಿಪ್ತತೆಯಷ್ಟೇ

ಸೋಮವಾರ, ಆಗಸ್ಟ್ 1, 2016

ಕಣ್ಣ ಚಿಟ್ಟೆಯ ರೆಕ್ಕೆ

ಇಲ್ಲೇ ಮೂಲೆಯಲ್ಲಿ
ಸುರುಳಿ ಸುತ್ತಿಟ್ಟ
ಬೊಚ್ಚು ಬಾಯಿಯ ನಿಷ್ಕಳಂಕ
ನಗುವೊಂದು ಕಾಣೆಯಾಗಿದೆ

ನಿನ್ನೆ ಮೊನ್ನೆಯಷ್ಟೆ ನನ್ನ
ಮನದ ಜೋಳಿಗೆಯಲಿ
ಬೆಚ್ಚಗಿತ್ತು
ಕಚಗುಳಿಯಿಡುತ್ತಿತ್ತು

ಇಂದಿಲ್ಲವೆನ್ನುವ ನಿಚ್ಚಳ ದಿಟದಲಿ
ನಿನ್ನೆ ಮೊನ್ನೆ ನಾಳೆಗಳೆಲ್ಲಾ
ಬರಿ ಕಲ್ಪನೆ ಕನವರಿಕೆಗಳ
ಮಿಥ್ಯ ಮಾಲೆಯಾಗುತ್ತಿವೆ

ಪಟ ಪಟ ಬಡಿಯುತ್ತಿದ್ದ
ಕಣ್ಣ ಚಿಟ್ಟೆಯ ರೆಕ್ಕೆಯೀಗ
ಕಳಚಿಬಿದ್ದಿದೆ
ಹನಿ ರಕ್ತದಲಿ ಬ್ರಹ್ಮಾಂಡ ನೋವು

ಖಾಲಿ ಜೋಳಿಗೆಯ ಇಂಚಿಂಚಲೂ
ನೀವು ತುಂಬಿರುವ ತಿರಸ್ಕಾರ
ಪಕ್ಕೆಲುಬಿನ ಪಕ್ಕದಲೇ ಹರಿದು
ಹೃದಯ ಸೇರಿದೆ

ತುಡಿತ ಮಿಡಿತವೊಂದೂ
ಸಂವೇದನೆ ಉಳಿಸಿಕೊಂಡಿಲ್ಲ
ನಿಷ್ಕ್ರಿಯ ಗುಂಡಿಗೆಯ ಆಲಾಪವ
ಒಮ್ಮೆ ಆಲಿಸಿ ನೋಡಿ

ಇರುವ ರಕ್ತವ ಬಸಿದು
ಉರಿವ ಉಸಿರನು ಬಿಗಿಹಿಡಿದು
ನಿಮಗೆ, ನಿಮ್ಮ ತಿರಸ್ಕಾರಕೆ
ಕೃತಜ್ಞತೆ ಅರ್ಪಿಸುತಿದೆ
ಆಲಿಸಿ ಧನ್ಯರಾಗಿ