ಸೋಮವಾರ, ಆಗಸ್ಟ್ 8, 2016

ಹೂ ಮಾರುವ ಹುಡುಗಿ

ಮಲ್ಲಿಗೆ ಬಿರಿವ ಸದ್ದಿಗೆ
ಸದ್ದಾಗದೆ ನಗುತ್ತಾಳೆ
ಹೂ ಮಾರುವ ಹುಡುಗಿ

ಮೋಟು ಗೋಡೆಯ
ಮುರಿದ ಮನೆಯ
ಒಳಗೊಂದು ಸಣ್ಣ ಬಿಕ್ಕಳಿಕೆ

ತಂಗಿಗೊಂದು ಫ್ರಿಲ್ಲಿನ ಫ್ರಾಕು
ತಮ್ಮನಿಗೊಂದು ಗಾಳಿಪಟ
ಬೊಗಸೆಯಷ್ಟೇ ಇರುವ ಕನಸದು

ಗುಡಿ ದರ್ಗಾ ಚರ್ಚು ಊರು ಕೇರಿ
ಟಾರಿಲ್ಲದ ಹಾದಿಯ ಬೆಂಜರುಗಲ್ಲುಗಳ
ರುದ್ರ ನರ್ತನ ಅವಳ ಬರಿಗಾಲ ಮೇಲೆ

ಹಸಿರು ಶಾಲು, ಉದ್ದ ನಾಮ, ಬಿಳಿ ನಿಲುವಂಗಿಯ
ಮಂದಿಯ ದಾಟಿ ಹೋಗುವಾಗೆಲ್ಲಾ
ಹೂವು ಮುಳ್ಳಾಗುತ್ತದೆ, ಬುಟ್ಟಿ  ಭಾರ ಭಾರ

ಸಂಜೆಯಾಗುತ್ತಿದ್ದಂತೆ ಕನಸಿದ
ನುಣುಪಿಗಾಗಿ ಬುಟ್ಟಿಯೊಳಗೆ
ಕೈಯಾಡಿಸಿದರೆ ಘೋರ ನಿರಾಸೆ

ಸಂಚಿಯ ತಳದ ಇಷ್ಟೇ ಇಷ್ಟು
ನಾಣ್ಯಗಳು ಅವಳ ಬೊಗಸೆಯಷ್ಟರ
ಕನಸನು ಲೇವಡಿ ಮಾಡುತ್ತದೆ

ಮುರಿದ ಮನೆಯ ಮೋಟು
ಗೋಡೆಯೊಳಗಿನ ಬಿಕ್ಕಳಿಕೆ
ಗಂಟಲೊಳಗೆ ಮತ್ತೆ ಮತ್ತೆ ಹುದುಗುತ್ತದೆ

ನಾನು ಪದ ಕುಟ್ಟುತ್ತೇನೆ
ಕವನ ಕಟ್ಟುತ್ತೇನೆ ಮತ್ತೆ
ಅವಳ ಮನೆಯ ಚಾವಡಿಯಿಂದ
ಎದ್ದು ಹೋಗುತ್ತೇನೆ

ಅವಳಂತಹ ಮತ್ತೊಬ್ಬ ಹುಡುಗಿಯ
ಬದುಕಿಗಾಗಿ ಅರಸುತ್ತೇನೆ
ಮತ್ತೆ ಕವಿತೆ ಮೈದಾಳುತ್ತದೆ

ನೀವು ನನ್ನ ಹೊಗಳುತ್ತೀರಿ
ಸಂವೇದನಾಶೀಲೆ ಅನ್ನುತ್ತೀರಿ
ನಾನು ಉಬ್ಬುತ್ತೇನೆ, ಉಬ್ಬುತ್ತಲೇ ಹೋಗುತ್ತೇನೆ

ಕೊನೆಗೊಂದು ದಿನ,
ಟಪ್ಪೆಂದು ಒಡೆದು  ಸತ್ತು ಹೋಗುತ್ತೇನೆ
ಹೂ ಮಾರುವ ಹುಡುಗಿಯ
ಬುಟ್ಟಿಯೊಳಗಿನ ಹೂವು
ಛಿಲ್ಲನೆ ನಗುತ್ತದೆ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ