ಸೋಮವಾರ, ಅಕ್ಟೋಬರ್ 26, 2015

"ಹುಡುಗರೇ ಹೀಗೆ...." ಅನ್ನುವ ನಿರ್ಧಾರಕ್ಕೆ ಬರುವ ಮುನ್ನ



 "ನೀವು ಹುಡುಗರೇ ಹೀಗೆ, ಒಪ್ಪಿಕೊಳ್ಳುವವರೆಗೂ ನಮ್ಮ ಹಿಂದೆ ಮುಂದೆ ಸುತ್ತುತ್ತಾ, ನೀನೆ ಪ್ರಾಣ, ನೀನೇ ಜೀವ, ನೀನಿಲ್ಲದೆ ಬದುಕಲಾರೆ, ನಿನಗೋಸ್ಕರ ಸೂರ್ಯ, ಚಂದ್ರರನ್ನೂ ಕೈಲಿ ಹಿಡಿದು ತರಬಲ್ಲೆ, ಹರಿಯೋ ನದಿಯನ್ನು ನಿಲ್ಲಿಸಬಲ್ಲೆ, ನೀನು ಸಂಗಾತಿಯಾದರೆ ಒಂದಿಷ್ಟು ದಿನಗಳಾದರೂ ಹೆಚ್ಚಿಗೆ ಬದುಕಬಲ್ಲೆ. ಒಪ್ಪಿಕೋ ಹುಡುಗಿ ಅಂತೆಲ್ಲಾ ನಮ್ಮನ್ನು ಮರುಳು ಮಾಡುತ್ತೀರಿ. ಒಮ್ಮೆ ಒಪ್ಪಿಕೊಂಡರೋ...? ಮುಗಿಯಿತು.  Taken for granted  ಅನ್ನೋ ರೀತಿ ವರ್ತಿಸತೊಡಗುತ್ತೀರಿ. ಹಿಂದೆ ಮಾಡಿದ್ದ ಆಣೆ-ಪ್ರಮಾಣ, ನಡುರಾತ್ರಿಯ ಗೋಗರೆತಗಳು, ಸಿಹಿ ಮುಂಜಾನೆಯ ಶುಭಾಶಯಗಳು, ಮುಸ್ಸಂಜೆಯ ಕಾಳಜಿಗಳು ಎಲ್ಲಾ ಮಾಯವಾಗಿಬಿಡುತ್ತದೆ. ’ಅವಳಾ..?’ ಅನ್ನುವ ನಿರ್ಲಕ್ಷ್ಯ ಜೊತೆಯಾಗಿಬಿಡುತ್ತದೆ. ಗೆಳೆಯ ಅಂತಲೋ,  cousine brother  ಅಂತಲೋ ಇನ್ನೊಬ್ಬ ಹುಡುಗನ ಜೊತೆ ಮಾತಾಡಿದರಂತೂ ಮುಗಿದೇ ಹೋಯಿತು, ಅಕಾರಣ ನಮ್ಮ ಕ್ಯಾರಕ್ಟರನ್ನೇ ಸಂಶಯಿಸುತ್ತೀರಿ. ಅಲ್ಲಿಗೆ ನಿಮ್ಮ ಮೇಲೆ ನಾವು ಹುಡುಗಿಯರು ಅಮಾಯಕವಾಗಿ ಇಟ್ಟ ನಂಬುಗೆ, ಪ್ರೀತಿ ಬಿರುಕುಬಿಡುತ್ತದೆ. ನಿಮ್ಮನ್ನು ನಂಬಿದ್ದ ನಮ್ಮ ಮೂರ್ಖತನದ ಬಗ್ಗೆ ನಮಗೇ ಅಸಹ್ಯ ಹುಟ್ಟಿ ಬಿಡುತ್ತದೆ. ಅಲ್ಲಿಂದಾಚೆ ಬದುಕು ನೀರಸ ಅನಿಸತೊಡಗೊತ್ತದೆ" ಅಂತೆಲ್ಲಾ ನಾವು ಹುಡುಗಿಯರು ಆಗಾಗ ಹುಡುಗರ ಮೇಲೆ, ಅವರ ಪ್ರೀತಿಯ ಮೇಲೆ ಆರೋಪಗಳ ದೊಡ್ಡ ಪಟ್ಟಿಯನ್ನೇ ಹೊರಿಸುತ್ತಿರುತ್ತೇವೆ.

ಅದ್ರೆ ನಿಜಕ್ಕೂ ಹುಡುಗರು ಪ್ರೀತಿ ಒಪ್ಪಿಕೊಳ್ಳುವವರೆಗೆ ಒಂದು ರೀತಿ, ಆಮೇಲೆ ಒಂದು ರೀತಿ ಇರುತ್ತಾರಾ? ವಿನಾಕಾರಣ ಪ್ರೀತಿಸಿದವಳನ್ನು ಸಂಶಯಿಸತೊಡಗುತ್ತಾರಾ?  ಪ್ರೀತಿ, ನಂಬಿಕೆ ಬಿರುಕು  ಬಿಡಲು ಹುಡುಗರು ಮಾತ್ರ ಕಾರಣವಾ? ನಾವು ಹುಡುಗಿಯರು ನಿಜಕ್ಕೂ  ಹೇಳಿಕೊಳ್ಳುವಷ್ಟು ಅಮಾಯಕರಾ? ನಾವೆಂದೂ ಕೃತಿಮರಾಗುವುದೇ ಇಲ್ಲವೇ? ಹೆಚ್ಚಿನ ಎಲ್ಲಾ ಸಂದರ್ಭಗಳಲ್ಲಿ ಈ ಎಲ್ಲಾ ಪ್ರಶ್ನೆಗಳ ಉತ್ತರ ’ಅಲ್ಲ’ ಅನ್ನುವುದೇ ಆಗಿರುತ್ತದೆ.

ಬದುಕು ಬಾಲ್ಯದಿಂದ ಹರಯಕ್ಕೆ ಮಗ್ಗುಲು ಬದಲಿಸಿದಾಗ ಪ್ರತಿ ಹುಡುಗನ ಎದೆಯಲ್ಲೂ ಹೂವರಳುತ್ತದೆ, ಕೋಗಿಲೆ ಹಾಡತೊಡಗುತ್ತದೆ, ಬಣ್ಣಬಣ್ಣದ ಕನಸುಗಳು ಗಾಳಿಪಟವಾಡತೊಡಗುತ್ತವೆ. ಅವನೆದೆಯ ಅಷ್ಟೂ ತಲ್ಲಣಗಳಿಗೆ ಮುಕುಟವಿಟ್ಟಂತೆ,  ಸಂಜೆಯ ವಾಕ್ ಗೆ, ನೀರವ ರಾತ್ರಿಯ ಪಿಸುಮಾತುಗಳಿಗೆ, ಬಿರುಮಳೆಯಲ್ಲಿ ಒಂಟಿ ಕೊಡೆಯಡಿ ನಡೆಯೋಕೆ, ನಿದ್ರೆಯಿಂದ ಏಳುವ ಮುನ್ನವೇ  Good morning  ಹೇಳೋಕೆ,  photo ನೋಡ್ಕೊಂಡು miss you ಕಣೇ ಅನ್ನೋಕೆ, ಅಂಗೈಯಲ್ಲಿ ಅಂಗೈಯನ್ನಿಟ್ಟು ಕನಸು ಕಾಣೋಕೆ,  ಪರಸ್ಪರರ ಕಣ್ಣೋಟದಲ್ಲೇ ಕಳೆದುಹೋಗೋಕೆ, ಗೆಳೆಯರ ಮುಂದೆ ನನ್ನ ಹುಡುಗಿ ಕಣೋ ಅಂತ ಬೀಗೋಕೆ  ಅವಳು ಜೊತೆಗಿರಬೇಕು ಮತ್ತು ಹಾಗೆಲ್ಲಾ ಅವಳು ಜೊತೆಗಿರಬೇಕಾದರೆ ಅವಳ ಮುಂದೆ ನಿಂತು  I Love You   ಅಂದುಬಿಡಬೇಕು ಅಂತ ಅವನ ಮನಸಿನ ಸಹಸ್ರ ಝೇಂಕಾರದ ವೀಣೆ ಮಿಡಿಯತೊಡಗುತ್ತದೆ.

ಹಾಗಾದಾಗಲೆ ಇಡೀ ಕಾಲೇಜಲ್ಲೇ ಧೈರ್ಯವಂತ ಅನ್ನಿಸಿಕೊಂಡ ಹುಡುಗ ಅವಳೆದುರು ನಿಂತು ಮಾತಿಗೆ ತಡಬಡಾಯಿಸುವುದು, ಮಾತಿನ ಮಲ್ಲ ಅನ್ನಿಸಿಕೊಂಡವನು ಬೆಬ್ಬೆಬ್ಬೆ ಅನ್ನುವುದು, ವಿಪರೀತ ಮೌನಿ ಅನ್ನಿಸಿಕೊಂಡವನು ಮಾತು ಶುರುಹಚ್ಚಿಕೊಳ್ಳುವುದು, ಪರಮ ವಾಸ್ತವವಾದಿ ಭಾವುಕನಾಗುವುದು, ಭಾವುಕ ತತ್ವಜ್ಞಾನಿಯಾಗುವುದು. ಹುಡುಗಿ ಒಪ್ಪಿಕೊಂಡು ಬಿಡಲಿ ಅಂತ ಸೂರ್ಯ, ಚಂದ್ರ, ನದಿ, ಆಕಾಶ, ನಕ್ಷತ್ರ ಅಂತೆಲ್ಲಾ ಅಂಗೈಯಲ್ಲೆ ಅರಮನೆ ತೋರಿಸುತ್ತಾನೆ. ಕೊನೆಗೊಮ್ಮೆ ಹುಡುಗಿ ಒಪ್ಪಿಬಿಟ್ಟರೆ ಸ್ವರ್ಗಕ್ಕೆ ಮೂರು ಅಲ್ಲಲ್ಲಾ ಒಂದೇ ಗೇಣು ಅನ್ನುವಂತೆ ಸಂಭ್ರಮಿಸುತ್ತಾನೆ.

ಇಷ್ಟಾದಮೇಲೆ...? "ಇಷ್ಟಾದಮೇಲಾ? ಜೊತೆಗೊಂದು ಸೆಲ್ಫಿ ತಗೊಂಡು, ಅದನ್ನು ಪ್ರೊಫೈಲ್  ಪಿಕ್ಚರ್ ಗೆ ಹಾಕಿ,  'Love U Forever Baby '  ಅಂತ ಸ್ಟೇಟಸ್ ಬರ್ಕೊಂಡು, ನಾಲ್ಕು ಗೆಳೆಯರಿಗೆ ಪಾರ್ಟಿ ಕೊಡಿಸುತ್ತಾನೆ. ಅಲ್ಲಿಗೆ ಅವನ ಸಂಭ್ರಮ ಮುಗಿಯುತ್ತದೆ. ಆಮೇಲೆ ನಮ್ಮೆಡೆಗೆ ಅವನಿಗಿರುವುದು ಒಂದು ದಿವ್ಯ ನಿರ್ಲಕ್ಷ್ಯ ಮಾತ್ರ. ಅವನ ಪ್ರೀತಿ ಒಪ್ಪಿಕೊಂಡ ತಪ್ಪಿಗೆ ಆಗಾಗ ಮೊಬೈಲ್ ಪರೀಕ್ಷಿಸುತ್ತಾ ಅವನ ಕರೆ, ಮೆಸೇಜ್ ಗಳಿಗಾಗಿ ಕಾಯುತ್ತಾ ಕೂರಬೇಕು. ಆದ್ರೆ ನಮ್ಮ ಪ್ರೀತಿ, ಅವನೆಡೆಗಿನ ತುಡಿತ ಅವನಿಗೆಲ್ಲಿ ಅರ್ಥ ಆಗಬೇಕು? ಅವನು ಅವನದೇ ಪ್ರಪಂಚದಲ್ಲಿ ಮುಳುಗಿ ನಮ್ಮ ಇರವನ್ನೇ ಸಂಪೂರ್ಣವಾಗಿ ಮರೆತುಬಿಡುತ್ತಾನೆ" ಅಂತನ್ನುತ್ತಾ ಮಗುಮ್ಮಾಗುತ್ತಾರೆ ಹುಡುಗಿಯರು. ಆದ್ರೆ ವಾಸ್ತವ ಹಾಗಿರುವುದಿಲ್ಲ. ಅವನಿಗೆ ಅವನದೇ ಆದ ಜವಾಬ್ದಾರಿಗಳಿರುತ್ತವೆ. ತಮ್ಮನ ಓದು, ತಂಗಿ ಮದುವೆ, ಅಪ್ಪನ ವ್ಯಾಪಾರ, ವರದಕ್ಷಿಣೆ ಕಾರಣದಿಂದ ಗಂಡನ ಮನೆ ಬಿಟ್ಟು ಬಂದಿರುವ ಅಕ್ಕನ ಬದುಕು, ಅಮ್ಮನ ಆಸ್ಪತ್ರೆ ವಾಸ ಅಥವಾ ಗೆಳೆಯನ ಸಾಲ ಅಂತ ಅವನು ನೂರಾರು ಕಡೆ ಕಮಿಟ್ ಆಗಿರುತ್ತಾನೆ. ಇವೆಲ್ಲದರ ಮಧ್ಯೆ ಅವಳನ್ನು ಮನಸ್ವೀ ಪ್ರೀತಿಸಿರುತ್ತಾನೆ, ಅವಳು ಒಪ್ಪಿಕೊಳ್ಳುವವರೆಗೂ ಅವಳ ಹಿಂದೆ ಮುಂದೆ ಸುತ್ತುತ್ತಿರುತ್ತಾನೆ, ಕೊನೆಗೊಂದು ದಿನ ಅವಳನ್ನು ಒಪ್ಪಿಸಿಯೂ ಬಿಡುತ್ತಾನೆ. ಆಮೇಲೆ ಅವಳು ಒಪ್ಪಿದಳಲ್ಲಾ ಅನ್ನುವ ನಿರಾಳತೆ ಅವನನ್ನು ಆವರಿಸುತ್ತದೆ. ಆ ನಿರಾಳತೆಯನ್ನೇ ನಾವು ಹುಡುಗಿಯರು ’ನಿರ್ಲಕ್ಷ್ಯ’ ಅನ್ನುವುದು.

ತನ್ನ ಕಮಿಟ್ಮೆಂಟ್ ಗಳ ಮಧ್ಯೆಯೂ ಅವಳಿಗಾಗಿ ಸಮಯ ಮುಡಿಪಿಡುವ ಅವನ ಪ್ರೀತಿ,  ತನ್ನೆಲ್ಲಾ ಜವಾಬ್ದಾರಿಗಳ ಮಧ್ಯೆಯೂ ಕೆಲವು ಖಾಸಗಿ ಕ್ಷಣಗಳನ್ನು ಅವಳಿಗೋಸ್ಕರ ಆಸ್ಥೆಯಿಂದ ಎತ್ತಿಡುವ ಅವನ ಒಲವು, ಅವಳಿನ್ನೂ ಉಂಡಿದ್ದಾಳೋ ಇಲ್ಲವೋ ಅನ್ನುವ ಯೋಚನೆಯಲ್ಲೇ ಮಧ್ಯಾಹ್ನದ ಊಟವನ್ನು ಅರ್ಧಕ್ಕೇ ನಿಲ್ಲಿಸಿ ಎದ್ದುಬಿಡುವ ಅವನ ತಲ್ಲಣ, ಅವಳ ತಿಂಗಳ ನೋವಿಗೆ ಕಣ್ಣೀರಾಗುವ ಅವನ ಮಮತೆ, ತನ್ನ ಪ್ರತಿ ಪ್ರಾರ್ಥನೆಯಲ್ಲೂ ’ಅವಳಿಗೇನೂ ಆಗದಿರಲಿ’ ಅಂತ ವಿಶೇಷವಾಗಿ ಬೇಡಿಕೊಳ್ಳುವ ಅವನ ತುಡಿತ... ಯಾವುದೂ ಅವಳಿಗರ್ಥವಾಗುವುದೇ ಇಲ್ಲ ಅಥವಾ ಅರ್ಥವಾದರೂ ಅವನಿನ್ನೂ ತನ್ನ ಹಿಂದೆ ಮುಂದೆ ಸುತ್ತುತ್ತಲೇ ಇರಬೇಕು ಅನ್ನುವ ಅಹಮಿಕೆಯಲ್ಲಿ ಅವನ ಎಲ್ಲಾ ನವಿರು ಭಾವಗಳು ಅರ್ಥ ಕಳೆದುಕೊಳ್ಳುವಂತೆ ಮಾಡುತ್ತಾಳೆ.

ಇನ್ನು, ವಿನಾಕಾರಣ ನನ್ನನ್ನು ಸಂಶಯಿಸುತ್ತಾನೆ ಅಂತ ಪದೇ ಪದೇ ದೂರುವ ಹುಡುಗಿ ತಾನು ಬೇಕೆಂದೇ, ಅವನಿಗೆ ಅಸೊಯೆಯಾಗಲಿ ಎಂದೇ ಇನ್ನೊಬ್ಬ ಹುಡುಗನ ಜೊತೆ  ಅಗತ್ಯಕ್ಕಿಂತ ಹೆಚ್ಚು ಸಲಿಗೆಯಿಂದ ನಡೆದುಕೊಳ್ಳುವ ಬಗ್ಗೆ ಒಂದು ಮಾತೂ ಆಡುವುದಿಲ್ಲ. ಅವಳು ಅಂದುಕೊಂಡಂತೆ ಆತನಿಗೆ ಅಸೊಯೆ ಆದರೆ ಅಥವಾ ಇನ್ನಾವುದೋ ಅಂತದೇ ಭಾವ ಕಾಡಿದರೆ ಅವಳವನಿಗೆ 'ವಿಪರೀತ ಪೊಸಸಿವ್' ಅನ್ನುವ ಪಟ್ಟ ಕಟ್ಟುತ್ತಾಳೆ. ಹೋಗಲಿ ಬಿಡಿ, ಅವಳು ಇನ್ನೊಬ್ಬ ಹುಡುಗನ ಜೊತೆ ಮಾತಾಡಿದರೆ ಗಂಟೇನು ಹೋಗುತ್ತೆ ಅಂದುಕೊಂಡು ಅವನೇನಾದರೂ ಸುಮ್ಮನಿದ್ದುಬಿಟ್ಟರೆ  ತನ್ನ ಬಗ್ಗೆ ಅವನಿಗೆ ಕಾಳಜಿಯೇ ಇಲ್ಲ ಎಂದು ಮತ್ತೆ ದೂರುತ್ತಾಳೆ.

ಇಷ್ಟಕ್ಕೂ ಆತ ಅವಳನ್ನು ಸಂಶಯಿಸತೊಡಗುವುದಾದರೂ ಯಾವಾಗ? ತನ್ನ ಗೆಳೆಯರ ಪ್ರೀತಿಯ ಮೆಲ್ಲುಸಿರುಗಳು ಹಾಡಿರುವ ಸವಿಗಾನಗಳನ್ನೂ, ಈಗ ಮೂರನೆಯವರ ಪ್ರವೇಶದಿಂದ ಅದೇ ಪ್ರೀತಿ ಬಿಡುತ್ತಿರುವ ನಿಟ್ಟುಸಿರುಗಳನ್ನೂ ಕೇಳಿರುವ ಅವನಿಗೆ ಎಲ್ಲಿ ನನ್ನ ಪ್ರೀತಿಯೂ ಹಾಗೆಯೇ ಆಗುಬಿಡುತ್ತದೋ ಅನ್ನುವ ಭಯ ಕಾಡಲು ಶುರುವಾಗುತ್ತದೆ. "ಹಿಮಗರ್ಭದಲ್ಲಿ ಹುಟ್ಟಿ ಅದೆಷ್ಟೇ ತಿರುವು-ಮುರುವು, ಬೆಟ್ಟ-ಗುಡ್ಡ, ಊರು-ಗಲ್ಲಿ, ಕಾನನಗಳನ್ನು ಬಳಸಿ ಹರಿದರೂ ಪರಿಶುದ್ಧವಾಗೇ ಇರುವ ಗಂಗೆಯಂತಹ ಪ್ರೀತಿ ಕಣೋ ನನ್ನದು" ಅಂತಂದಿದ್ದ ಹುಡುಗಿಯೇ ಎಲ್ಲಿ ಕೈಬಿಟ್ಟು ಹೋಗುತ್ತಾಳೋ ಅಂತ ದಿಗಿಲಿಗೆ ಬೀಳುತ್ತಾನೆ. ಅವಳಿಲ್ಲದೆ ಹೇಗೆ ಬದುಕಿರಲಿ ಅಂತ ಹಳಹಳಿಸತೊಡಗುತ್ತಾನೆ. ಸಂಶಯ ಅನ್ನುವ ಅಭದ್ರತಾ ಭಾವ ಗರ್ಭತಾಳುವುದೇ ಆ ದಿಗಿಲು ಮತ್ತು ಹಳಹಳಿಕೆಗಳಲ್ಲಿ.

ಆಗೇನಾದರೂ ಹುಡುಗಿ "ನಿನ್ನೆಡೆಗೆ, ನಿನ್ನ ಪ್ರೀತಿಯೆಡೆಗೆ ನನಗಿರುವ ಅಪಾರ ಬದ್ಧತೆಯನ್ನು ಯಕಶ್ಚಿತ್ ಮೂರನೆಯವನೊಬ್ಬ ಕದಲಿಸಲಾರ. ನಿನ್ನೆಲ್ಲಾ ಜವಾಬ್ದಾರಿಗಳನ್ನು, commitmentಗಳನ್ನು ಅರಿತುಕೊಂಡೇ ನಿನ್ನ ಜೊತೆ ಹೆಜ್ಜೆ ಹಾಕುತ್ತಿದ್ದೇನೆ. ನಾನು ನಿನ್ನವಳು ಅನ್ನುವ ಭರವಸೆ ಒಂದಿರಲಿ ಸಾಕು" ಅಂತ ಆತ್ಮೀಯತೆಯಿಂದ ಅವನಿಗೆ ಭರವಸೆಯಿತ್ತು ಬಿಟ್ಟರೆ ಸಾಕು ಅವನೆಲ್ಲಾ ಅನುಮಾನಗಳು ಕೊಚ್ಚಿಹೋಗಿಬಿಡುತ್ತವೆ. ಅಷ್ಟೇ ಅಲ್ಲ ಅವಳನ್ನು ಅವನು ಮತ್ತಷ್ಟು ಸಾಂದ್ರವಾಗಿ ಪ್ರೀತಿಸತೊಡಗುತ್ತಾನೆ. ಆದರೆ ಹೆಚ್ಚಿನ ಸಂದರ್ಭಗಳಲ್ಲಿ ಹುಡುಗಿ 'ನಾನೇಕೆ ಇದನ್ನೆಲ್ಲಾ ಅವನಿಗೆ ವಿವರಿಸಲಿ' ಅನ್ನುವ ಹಮ್ಮಿನಲ್ಲಿ ಇದ್ದುಬಿಡುತ್ತಾಳೆ. ಅತ್ತ ಪ್ರತಿಕ್ಷಣ ಅಭದ್ರತಾ ಭಾವದಿಂದ ನರಳುವ ಅವನು ಅವಳಿಗೆ ಬೇಲಿ ಕಟ್ಟತೊಡಗುತ್ತಾನೆ, ಅವಳು ಆ ಬೇಲಿ ಹಾರಿ ಹೋಗಬಯಸುತ್ತಾಳೆ. ಪ್ರೀತಿ ವಿಲವಿಲ ಒದ್ದಾಡತೊಡಗುತ್ತದೆ.

ಹಾಗಾಗಬಾರದು ಅಂತಿದ್ದರೆ, ವಿಫಲ ಪ್ರೇಮದ ಆಳಗಾಯ ಬದುಕಿಡೀ ಮಗ್ಗುಲ ಮುಳ್ಳಾಗಿ ಕಾಡಬಾರದು ಅಂತಿದ್ದರೆ, ಇಬ್ಬರೂ ಜೊತೆಗೂಡಿ ಕಂಡ ಮಧುರ ಕನಸುಗಳು ಕಣ್ಣೆದುರೇ ಚಲ್ಲಾಪಿಲ್ಲಿಯಾಗಿ ಹೋಗಬಾರದು ಅಂತಿದ್ದರೆ, ಹುಡುಗಿಯರೇ  "ಹುಡುಗರೇ ಹೀಗೆ..." ಅನ್ನುವ ತಪ್ಪು ನಿರ್ಧಾರಕ್ಕೆ ಬರುವ ಮುನ್ನ ತಣ್ಣಗೆ ಕೂತು ಒಂದಿಷ್ಟಾದರೂ ಯೋಚಿಸಿ ಪ್ಲೀಸ್.