ಬುಧವಾರ, ಡಿಸೆಂಬರ್ 26, 2018

ಮಣಿಕಂಠನ ನಂಬಿದ್ದ ಫಕೀರಮ್ಮ.

ಹಿಂದೆಲ್ಲಾ ನಮ್ಮ ಕರಾವಳಿಯಲ್ಲಿ ಸಂಜೆಯಾಗುತ್ತಿದ್ದಂತೆ ಹಿತ್ತಲುಗಳಿಗೆ ವಿಶೇಷ ಕಳೆ ಬಂದುಬಿಡುತ್ತಿದ್ದವು. ಆಚೀಚೆ ಮನೆಗಳ ನಾಲ್ಕು ಮಹಿಳಾಮಣಿಗಳು, ಗದ್ದೆ ಕೆಲಸ ಮುಗಿಸಿ ಈಗಷ್ಟೇ ಮನೆಗೆ ಮರಳುತ್ತಿರುವ ಹೆಂಗಸರು, ಕ್ಷಣ ಮಾತ್ರದಲ್ಲಿ ಅಡಕೆ ಸುಲಿಯುವ, ತೆಂಗಿನ ಸಿಪ್ಪೆ ಬಿಡಿಸುವ ಪ್ರತಿಭಾವಂತರು ಕಾರಣವಿಲ್ಲದೆಯೇ ಯಾವುದಾದರೊಂದು ಮನೆಯ ಜಗಲಿ ಸೇರಿಬಿಡುತ್ತಿದ್ದರು. ಅಲ್ಲಿ ಇಡೀ ಊರಿನ ಚರ್ಚೆ ಗಹನವಾಗಿ ನಡೆಯುತ್ತಿದ್ದರೆ ಇತ್ತ ಅಂಗಳದಲ್ಲಿ ಆ ಎಲ್ಲಾ ಮಹಿಳೆಯರ ಮಕ್ಕಳು ಒಂದು ಮಿನಿ‌ ಒಲಿಂಪಿಕ್ ಗ್ರಾಮವನ್ನೇ ಸೃಷ್ಟಿಸಿಬಿಡುತ್ತಿದ್ದರು.

ಆಗ ಆಡುತ್ತಿದ್ದ ಆಟಗಳಾದರೂ ಎಂಥವು? ಚಿನ್ನಿದಾಂಡು, ಮರಕೋತಿ ಆಟ, ಮುಟ್ಟಾಟ, ಗೋಲಿಯಾಟ, ಅಪ್ಪಟ ಮಣ್ಣಿನ ಘಮದ ಕಬಡ್ಡಿ, ಆಗಷ್ಟೇ ಹಳ್ಳಿಯ ಮನದ ಅಂಗಳ ಪ್ರವೇಶಿಸಿದ್ದ ಕ್ರಿಕೆಟ್... ಹೀಗೆ ತರಹೇವಾರಿ ಆಟಗಳು ಪಟ್ಟಿಯಲ್ಲಿದ್ದರೂ ಮೊದಲ ಆದ್ಯತೆ ಮಾತ್ರ ಲಗೋರಿಗೇ.

ಪ್ರತಿ ಗುಂಪಿನಲ್ಲೂ ಇರುತ್ತಿದ್ದ ಒಬ್ಬ ಚಾಣಾಕ್ಷ ಆಟಗಾರ, ಅವನನ್ನು ತಮ್ಮ ತಂಡಕ್ಕೇ ಸೇರಿಸಿಕೊಳ್ಳಬೇಕು ಅಂತ ಮಾಡುವ ಕಸರತ್ತುಗಳು, ಅವನಿಗೆ ಒಡ್ಡುವ ಮಾವಿನಕಾಯಿ, ಪೇರಳೆ ಹಣ್ಣುಗಳ ಲಂಚ, ಅವನ ಗತ್ತು ಗೈರತ್ತುಗಳದೇ ಒಂದು ತೂಕವಾದರೆ, ಅವನದೇ ತಂಡದಲ್ಲಿದ್ದು ಅವನ ವಿರುದ್ಧವೇ ಸೈಲೆಂಟಾಗಿ ಕತ್ತಿ ಮಸೆಯುವ ಹಿತಶತ್ರು, ಅವನ ಸುಳ್ಳು, ಸಣ್ಣಪುಟ್ಟ ಮಸಲತ್ತುಗಳದೇ ಒಂದು ತೂಕ.

ಏಳು ಬಿಲ್ಲೆಗಳು, ಕಾಗದವನ್ನು ಉಂಡೆ ಮಾಡಿ, ಅದರ ಮೇಲೆ ಪ್ಲಾಸ್ಟಿಕ್ ಸುತ್ತಿ, ಬಾಳೆ ಎಲೆಯ ಹಗ್ಗದಿಂದ ಬಲವಾಗಿ ಕಟ್ಟಿ, ಅಂಗಳದ ಮಧ್ಯದಲ್ಲಿ ವೃತ್ತ ಎಳೆದು, ಅಲ್ಲಿ ಬಿಲ್ಲೆಗಳನ್ನಿಟ್ಟು, ಸರಿಯಾಗಿ ಹದಿನೈದು ಹೆಜ್ಜೆಗಳಷ್ಟು ದೂರದಲ್ಲಿ ಮತ್ತೊಂದು ಗೆರೆ ಎಳೆದರೆ ನಮ್ಮ ಲಗೋರಿ ಅಂಕಣ ಸಿದ್ಧವಾಗಿಬಿಡುತ್ತಿತ್ತು.

ಆಮೇಲೆ ಶುರುವಾಗುತ್ತಿತ್ತು ಶುದ್ಧ ಟಪೋರಿ ಆಟ ಲಗೋರಿ. ಪ್ರತಿ ಪಾಯಿಂಟ್‌ ಗೂ ಏರುತ್ತಿದ್ದ ಉತ್ಸಾಹ, ನಿನ್ನಿಂದಾಗಿಯೇ ಸೋತೆವು ಅನ್ನುವ ಎದುರು ಟೀಮಿನ ಆರೋಪ, ಪ್ರತ್ಯಾರೋಪ, ನಗು, ಕೇಕೆ, ಕಿರುಚಾಟಗಳ ಗೊಂದಲದಲ್ಲಿ ಹೊತ್ತು ಮುಳುಗಿದ್ದೇ ಗೊತ್ತಾಗುತ್ತಿರಲಿಲ್ಲ. ಅಮ್ಮಂದಿರು ಬಂದು ಕಿವಿಹಿಡಿದು ಎಳೆದೊಯ್ಯವಾಗಲೇ ಮರುದಿನದ ಶಾಲೆ, ಬಾರದ ಮಗ್ಗಿ, ತಲೆ ಹುಣ್ಣಾಗಿಸುವ ಲೆಕ್ಕ ನೆನಪಾಗುತ್ತಿದ್ದುದು.

ಮೊದಲೇ ಒಂದು ಬಿಲ್ಲೆ ಎಗರಿಸಿ ಕಿಸೆಯಲ್ಲಿಟ್ಟುಕೊಳ್ಳುವುದು, ಒಂದು ಹೆಜ್ಜೆ ಮುಂದೆ ನಿಂತು ಕೊಂಡು ಬಿಲ್ಲೆಗಳಿಗೆ ಬಾಲ್ ಎಸೆಯುವುದು, ಮೈಗೆ ಚೆಂಡು ತಾಗಿಯೇ ಇಲ್ಲ ಅಂತ ಸುಳ್ಳು ಹೇಳುವುದು ಹೀಗೆ ಮೋಸದಾಟಗಳೂ ಧಾರಾಳವಾಗಿಯೇ ನಡೆಯುತ್ತಿದ್ದವು. ಆದರೆ ಇಂತಹ ಸಣ್ಣ ಪುಟ್ಟ ಸಂಗತಿಗಳು ನಮ್ಮ ಆಟದ ಉತ್ಸಾಹವನ್ನು ಕಸಿಯುವಷ್ಟು ಪ್ರಭಾವಶಾಲಿಯಾಗಿರಲಿಲ್ಲ. ಮೇಲಾಗಿ ಹಲವು ದಾಯಾದಿ ಕಲಹಗಳನ್ನು ಲಗೋರಿ ಅಂಕಣ ರಾಜಿಯಲ್ಲಿ ಕೊನೆಗೊಳಿಸಿದ್ದೂ ಇವೆ. ಜಗಳ, ಹೊಡದಾಟ, ಕಿತ್ತಾಟ ಏನೇ ಆದ್ರೂ ಆಟ ನಿಲ್ಲುತ್ತಿರಲಿಲ್ಲ. ಒಂದು ಪಕ್ಷದವರು ಜಗಳದ ಮೂಡಲ್ಲಿದ್ದರೆ ಮತ್ತೊಂದು ಪಕ್ಷದವರು ಜಗಳ ಕೊನೆಗೊಳಿಸಿ ಆಟ ಮುಂದುವರೆಸುವ ಮೂಡಲ್ಲಿರುತ್ತಿದ್ದರು.‌ ಆದರೆ ಊರ ಹೊರಗೆ ಕುಂಬಾರ ಮಹಿಳೆ ಫಕೀರಮ್ಮ‌ನ ಸ್ವರ ಕೇಳುತ್ತಿದ್ದಂತೆ ನಮ್ಮ ಉತ್ಸಾಹಕ್ಕೂ ಆಟಕ್ಕೂ ತಾತ್ಕಾಲಿಕ ಬ್ರೇಕ್!  ಅಮ್ಮನ ಚಾಟಿಯೇಟಿಗೂ ಬಗ್ಗದ ನಮ್ಮ ಮೊಂಡುತನ ಫಕೀರಮ‌್ಮನ ಮುಂದೆ ಮಂಡಿಯೂರಿಬಿಡುತ್ತಿದ್ದುದಾದರೂ ಹೇಗೆ ಅನ್ನುವುದೇ ಒಂದು ದೊಡ್ಡ ಅಚ್ಚರಿ ನನಗೀಗ.

ಸುಭಗರು, ಶಿಷ್ಟರು, ಸಭ್ಯರು ಅಂತೆಲ್ಲಾ ವಿಶೇಷಣ ಭಾರಗಳನ್ನು ನಮ್ಮ ಹೆಗಲ ಮೇಲೆ ನಾವೇ ಹೊತ್ತಿಕೊಂಡಿರುವ ದಕ್ಷಿಣ ಕನ್ನಡದ ಮಹಿಳೆಯರ ನಡುವೆ, ಉತ್ತರ ಕರ್ನಾಟಕದ ಯಾವುದೋ ಹಳ್ಳಿಯ, ಮಂಡಿಯವರೆಗೆ ಸೀರೆ ಎತ್ತಿಕಟ್ಟುತ್ತಿದ್ದ ಫಕೀರಮ್ಮ ನಮಗೆಲ್ಲಾ ಆಪ್ತ ಅನ್ನಿಸಿಬಿಡುತ್ತಿದ್ದಳು. ಯಾಕೋ ಗೊತ್ತಿಲ್ಲ ಅವಳ ಹಾವ ಭಾವ, ಮಾತು, ಕೆಲ ಪದಗಳು ಎಲ್ಲಾ ನಮ್ಮನ್ನು ಒಂದು ವಿಚಿತ್ರ ಆಕರ್ಷಣೆಗೆ ದೂಡಿದ್ದವು. ಅಮ್ಮಂದಿರೆಲ್ಲಾ ನಮ್ಮನ್ನು ಆಕೆಯಿಂದ ದೂರವಿಡಲು ಪ್ರಯತ್ನಿಸುತ್ತಿದ್ದರೆ ನಾವು ಆಕೆಗೆ ಮತ್ತಷ್ಟು ಹತ್ತಿರವಾಗುತ್ತಿದ್ದೆವು. ಮಡಕೆ ಮಾರುತ್ತಾ ಮಾರುತ್ತಾ ಆಕೆ ಬಂದು ಜಗಲಿಯಲ್ಲಿ ಕುಳಿತುಕೊಂಡು ಮಡಕೆ ಕೊಂಡರೂ, ಕೊಳ್ಳದಿದ್ದರೂ ಒಂದಿಷ್ಟು ಊರಿನ ಕಥೆಗಳನ್ನು ಹೇಳುತ್ತಿದ್ದಳು. ಆಕೆ ಮಾತಾಡಲು ಪ್ರಾರಂಭಿಸುತ್ತಿದ್ದರೆ ನಾವೇಕೆ , ದೊಡ್ಡವರೇ ಬಾಯಿ ತೆರೆದುಕೊಂಡು ಕೂತು ಬಿಡುತ್ತಿದ್ದರು.ಅವಳ ಬತ್ತಳಿಕೆಯಲ್ಲಿನ ಕಥೆಗಳಾದರೂ ಹಾಗೆಯೇ ಇರುತ್ತಿದ್ದವು.

ಆಕೆ ಅಯ್ಯಪ್ಪನ ಪರಮಭಕ್ತೆ. ಎಷ್ಟೆಂದರೆ ಮಣಿಕಂಠನ ಹೆಸರಿನ ಹಚ್ಚೆಯನ್ನು ಕತ್ತಿನ ಕೆಳಗೆ ಹಾಕಿಸಿಕೊಳ್ಳುವಷ್ಟು. ಆಕೆ ಮಡಕೆ ಮಾರಲು ಬಂದಾಗೆಲ್ಲಾ ಕತ್ತಿನ ಸೆರಗು ಸರಿಸಿ, ಹಚ್ಚೆ ತೋರಿಸಿ ಈ ಅಯ್ಯಪ್ಪ ನನ್ನನ್ನು ಕಾಯುತ್ತಾನೆ ನೋಡ್ತಾ ಇರಿ ಎಂದು ನಗುತ್ತಿದ್ದರೆ ನಾವವಳ ಮುಖ ನೋಡುತ್ತಾ ಸುಮ್ಮನೆ ಕುಳಿತುಕೊಳ್ಳುತ್ತಿದ್ದೆವು.

ನಮಗಾಕೆ ನಾವೆಂದೂ ಕಾಣದ ಕಥೆಗಳ ಜಗತ್ತು ಮತ್ತು ನಮ್ಮ ನಡುವಿನ ಕೊಡಿಯಂತಿದ್ದಳು. ಆಕೆ ಕೆಂಪು ಸಿಮೆಂಟ್ ನೆಲದ ಮೇಲೆ ಮಡಕೆಗಳ ಕಟ್ಟನ್ನಿಟ್ಟು ತಾನೂ ಕುಳಿತು ಸೆರಗಿನಿಂದ ಗಾಳಿ ಬೀಸಲು ಪ್ರಾರಂಭಿಸಿದಳೆಂದರೆ ಅಲ್ಲೊಂದು ಕಥಾಜಗತ್ತು ತಾನೇ ತಾನಾಗಿ ಹರವಿಕೊಳ್ಳುತ್ತಿತ್ತು. ಮಳೆ ಇರದ ತನ್ನೂರು ಮತ್ತು ಸುಖಾ ಸುಮ್ಮನೆ ನೀರು ಪೋಲು ಮಾಡುವ ನಮ್ಮೂರು ಎರಡನ್ನೂ ಹೋಲಿಸಿ ಅದೇ ಸೆರಗಿನ ತುದಿಯಿಂದ ಕಣ್ಣು ಒರೆಸಿಕೊಳ್ಳುತ್ತಿದ್ದಳು.

ಅವಳೆದೆಯೊಳಗೆ ಯಾವ ನೋವಿತ್ತೋ ಗೊತ್ತಿಲ್ಲ. ಒಮ್ಮೊಮ್ಮೆ ತನ್ನೂರನ್ನು, ತಾನು ಮದುವೆಯಾಗಿ ಬರುವಾಗ ತನ್ನ ಅಯ್ಯ ವರದಕ್ಷಿಣೆಯಾಗಿ ಕೊಟ್ಟಿದ್ದ ಜಮೀನನ್ನು, ನೀರಿಲ್ಲದ ಕೆರೆಯನ್ನು ನೆನೆಸಿಕೊಂಡು ಭಾವುಕಳಾಗುತ್ತಿದ್ದುದೂ ಇತ್ತು.  ಆದರೆ ಅವೆಲ್ಲಾ ಕ್ಷಣಮಾತ್ರದ ಭಾವದೇರಿಳಿತಗಳಷ್ಟೇ. ನಿಜಕ್ಕೂ ಆಕೆ ಉಸುಕಿನ ದಿಣ್ಣೆಯ ಮೇಲೂ ಹೆಜ್ಜೆ ಗುರುತು ಮೂಡಿವಸುವಂತಹ ದಿಟ್ಟೆ. ಅಷ್ಟಿಲ್ಲದಿದ್ದರೆ ಎಲ್ಲಿಂದಲೋ ಬಂದು ಇಲ್ಲಿ ಬದುಕು ಕಟ್ಟಿಕೊಳ್ಳಲಾಗುತ್ತಿತ್ತೇ?

ಕೆಲವೊಮ್ಮೆ ಅವಳು ಶುದ್ಧ ತತ್ವಜ್ಞಾನಿಯಂತೆ ಮಾತಾಡುತ್ತಿದ್ದಳು. ಮಣಿಕಂಠನೂ ತಿಳಿಸಿಕೊಡದ ನನ್ನ ಯೋಗ್ಯತೆಯನ್ನು ಈ ಮಣ್ಣು ನನಗೆ ತಿಳಿಸಿಕೊಟ್ಟಿದೆ. ಹಾಗಾಗಿಯೇ ನೆಲದ ನೆಂಟನ್ನು ನಾನಿನ್ನೂ ಕಳೆದುಕೊಂಡಿಲ್ಲ ಅನ್ನುತ್ತಿದ್ದಳು. ನಮಗಾಗ ತತ್ವಜ್ಞಾನವೊಂದೂ ಅರ್ಥವಾಗುವ ವಯಸ್ಸಲ್ಲ. ಅವಳ ಕೈಯಲ್ಲಿ ಮಣ್ಣು ಮಡಕೆಯಾಗುವುದಕ್ಕಿಂತ ದೊಡ್ಡ ತತ್ವಜ್ಞಾನ ನಮಗೆ ಬೇಕಿರಲೂ ಇಲ್ಲ. ಬರ್ತ್ಡೇ ಕಪ್ ಗಳಿನ್ನೂ ಚಾಲ್ತಿಯಲ್ಲಿರದ ಆ ಕಾಲದಲ್ಲಿ ಆಕೆ ಮಡಕೆಯ ಮೇಲೆ ನಮ್ಮ ಕಣ್ಣುಮುಂದೆಯೇ ನಾಲ್ಕು ಬಣ್ಣದ ಗೆರೆ ಎಳೆದು ಕೊಟ್ಟುಬಿಟ್ಟರೆ ನಮ್ಮ ಪಾಲಿಗದೇ ಅಮೂಲ್ಯ ಕಲಾಕೃತಿ.

ಒಂದು ಸಂಜೆ ಬೆಳಕಿನ ನಡುವೆ, ಏದುಸಿರು ಬಿಡುತ್ತಾ ಕ್ಷಣಕ್ಕೊಮ್ಮೆ ಯಾರಿಗೋ ಬಯ್ಯುತ್ತಾ ಧುಮುಗುಟ್ಟುತ್ತಾ ಬಂದ ಫಕೀರಮ್ಮ ನೆಲ ಯಾವುದು ಮಣ್ಣು ಯಾವುದು ಎಂದೂ ಯೋಚಿಸದೆ ದೊಪ್ಪನೆ ಕುಳಿತು ತೀರದ ದಾಹದಿಂದ ಬಳಲುತ್ತಿರುವಂತೆ "ಅಮ್ಮಾ ನೀರು" ಎಂದಳು. ಆ ಸಂಜೆ ಅವಳು ಎಂದಿನಂತಿರಲಿಲ್ಲ. ಹಣೆಯ ನೆರಿಗೆ, ಮೂಗಿನ ಕೆಳಗೆ ಹರಿಯುತ್ತಿದ್ದ ಬೆವರು, ಸಣ್ಣಗೆ ಉಬ್ಬಿದ ಗಂಟಲು ಅವಳಿಗೆ ಹೊಸ ಅವತಾರವನ್ನು ಕೊಟ್ಟಿತ್ತು.

ಅಜ್ಜಿ ಒಳಗಿಂದ ಹೆಸರು ಬೇಳೆಯ ಪಾನಕ ತಂದುಕೊಟ್ಟರು. ಅವಳು ಅವರೊನ್ನಮ್ಮೆ ಕೃತಜ್ಞತೆಯಿಂದ ಆಪಾದಮಸ್ತಕ ದಿಟ್ಟಿಸಿ ಗಟಗಟನೆ ಕುಡಿದು ಲೋಟ ಕೆಳಗಿಟ್ಟಳು. ನಮಗೆಲ್ಲಾ ಸಣ್ಣ ಅಚ್ಚರಿ. ಅಜ್ಜಿ ಅವಳ ಪಕ್ಕ ಕೂತು ಏನಾಯ್ತು ಅಂತ ಕೇಳಿದ್ರು. ಆಕೆ ಯಾವ ಪೀಠಿಕೆಯೂ ಇಲ್ಲದೆ "ನಾಚಿಕೆ ಇಲ್ಲದ ಈ ಗಂಡು ಜಾತಿಗೇ ವಿಷ ಇಕ್ಕಿಬಿಡಬೇಕು, ಪ್ರಪಂಚದಲ್ಲಿ ಒಂದೇ ಒಂದು ಗಂಡಸೂ ಉಳಿಯಬಾರದು" ಅಂದಳು. ನಾವು ನಮ್ಮ ಗುಂಪಿನಲ್ಲಿದ್ದ ಅಷ್ಟೂ ಗಂಡು ಮಕ್ಕಳನ್ನು ಪಿಳಿ ಪಿಳಿ ಕಣ್ಣುಬಿಡುತ್ತಾ ನೋಡುತ್ತಿದ್ದರೆ, ಆಕೆ "ಏನ್ರೇ, ಅವರನ್ಯಾಕೆ ನೋಡ್ತಿದೀರಿ, ಗಂಡು ಜಾತೀನ ಒಂದು ಚಣಕ್ಕೂ ನಂಬಬೇಡ್ರವ್ವಾ" ಎಂದು ಮತ್ತೆ ಉರಿದು ಬಿದ್ದಳು.

"ನನಗೇನಾದ್ರೂ ಅಯ್ಯಪ್ಪ ವರ ಕೊಟ್ರೆ ಇಡೀ ಗಂಡು ಕುಲವನ್ನು ಸುಟ್ಟುಬಿಡುವ ವರ ಕೇಳುತ್ತೇನೆ" ಎಂದು ಮತ್ತೆ ಅಜ್ಜಿ ಮುಖ ನೋಡಿದಳು. ಮಟ್ಟುಗತ್ತಿಯ ಮೇಲೆ ಕುಳಿತು ಅಡಕೆ ಸುಲಿಯುತ್ತಿದ್ದ ಅಮ್ಮನೂ ಕತ್ತಿ ಪಕ್ಕಕ್ಕಿಟ್ಟು ಅವಳ ಪಕ್ಕ ಬಂದು ಕೂತರು. ಅಷ್ಟಾಗುವಾಗ ನಮಗೂ ಇದ್ಯಾವುದೋ ಗಹನ ವಿಚಾರವೇ ಇರಬೇಕು ಅನ್ನಿಸಿ ಹುಡುಗರಿಗೆಲ್ಲಾ ದೂರ ಹೋಗುವಂತೆ ಸನ್ನೆ ಮಾಡಿ ನಾವು ಚಕ್ಕಳಮಕ್ಕಳ ಹಾಕಿ ಅಲ್ಲೇ ಕುಳಿತುಕೊಂಡೆವು. ಇಷ್ಟು ಸಿಟ್ಟಾಗಲು ಕಾರಣವಾದರೂ ಏನಿರಬಹುದು ಅನ್ನುವ ಪ್ರಶ್ನೆಗೆ ಉತ್ತರ ಸಿಗುವುದರ ಮುಂದೆ ಉಳಿದೆಲ್ಲಾ ಸಂಗತಿಗಳು ಗೌಣವಾಗಿಬಿಟ್ಟವು.

ಆದದ್ದಿಷ್ಟೇ... ಫಕೀರಮ್ಮ ಮಡಕೆ ಎತ್ತಿಕೊಂಡು ಬರಬೇಕಾದರೆ ಪಕ್ಕದಲ್ಲೇ ನಡೆಯುತ್ತಿದ್ದ ಕಟ್ಟಡ ಕೆಲಸಗಾರ ನಡು ವಯಸ್ಕನೊಬ್ಬ ಆಗಷ್ಟೇ ಲಂಗ ದಾವಣಿ ತೊಡಲಾರಂಭಿಸಿದ್ದ ಬಾಯಿ ಬರದ, ಕಿವಿ ಕೇಳದ ಹುಡುಗಿಯ ಮೈ ಮೇಲೆ ಕೈ ಹಾಕಿದ್ದ. ಪ್ರತಿಭಟಿಸಬೇಕು ಅನ್ನುವುದೂ ಗೊತ್ತಾಗದ ಆ ಹುಡುಗಿ ಸುಮ್ಮನೆ ಕೊಸರಾಡುತ್ತಿದ್ದಳು. ದೂರದಿಂದಲೇ ಇದನ್ನು ನೋಡಿದ್ದ ಫಕೀರಮ್ಮನ ಹೊಟ್ಟೆಯೊಳಗೆ ಬೆಂಕಿ ಹತ್ತಿಕೊಂಡಿತ್ತು. ಆಚೀಚೆ ನೋಡದ ಆಕೆ ಸೀದಾ ಅವನ ಬಳಿ ಧಾವಿಸಿ ಅವಳನ್ನು ಪಕ್ಕಕ್ಕೆಳೆದು ಅವನ ಕೆನ್ನೆಗೆರಡು ಬಾರಿಸಿದ್ದಳು. ಅಷ್ಟಕ್ಕೇ ಸುಮ್ಮನಾಗದೇ ಅಲ್ಲಿದ್ದ ಅಷ್ಟೂ ಮಂದಿಯನ್ನು ಸೇರಿಸಿ ಉಗಿದು ಬಂದಿದ್ದಳು. ಅಷ್ಟಾಗಿಯೂ ಅವಳ ಕೋಪ ತಣ್ಣಗಾದಂತೆ ಕಾಣುತ್ತಿರಲಿಲ್ಲ. ಗಂಡು ಜಾತಿಯ ಅಹಂಕಾರವನ್ನು ಮರ್ಯಾದೆಯ ಹೆಸರಲ್ಲಿ ಮೌನವಾಗಿ ಸಹಿಸಿಕೊಂಡೇ ಬಂದಿರುವ ಬುದ್ಧಿವಂತರ ಜಿಲ್ಲೆಯ ಎಲ್ಲಾ ಹೆಂಗಸರಿಗೆ ಸಹಸ್ರ ನಾಮಾರ್ಚನೆ ಮಾಡುತ್ತಿದ್ದರೆ ಅಜ್ಜಿ, ಅಮ್ಮ ಎದ್ದು ಒಳನಡೆದು ಅಡುಗೆ ಮನೆ ಸೇರಿಕೊಂಡರು. ಅಮ್ಮ ಅಡಕೆ ಸುಲಿಯುತ್ತಿದ್ದ ಮಟ್ಟುಗತ್ತಿ ತನ್ನ ಗಂಟಲಿಗೆ ಅಡಕೆ ಸಿಕ್ಕಿಸಿಕೊಂಡು ಸುಲಿಯಲೂ ಆಗದೆ ಸುಲಿಯದಿರಲೂ ಆಗದೆ ಒದ್ದಾಡುತ್ತಿತ್ತು.

ಆಕೆ ನೆನಪಾದಂತೆಲ್ಲಾ  ಈಗಿನ #metoo ಅಭಿಯಾನಕ್ಕೆ ಫಕೀರಮ್ಮನಂತಹ ಗಟ್ಟಿ ಧ್ವನಿಯ, ಮರ್ಯಾದೆಗಳಂತಹ ಕಾಟಾಚಾರಗಳಿಗೆ ಬಲಿಯಾಗದ, ಅನ್ಯಾಯವನ್ನು ಖಂಡಿಸುವ ಛಾತಿ ಮತ್ತು ಪ್ರಾಮಾಣಿಕತೆ ಇದ್ದ ಸ್ವತಂತ್ರ ಮಹಿಳೆಯರು ದಶಕಗಳಷ್ಟು ಹಿಂದೆಯೇ ಬೀಜ ಬಿತ್ತಿದ್ದರೇನೋ ಅನಿಸುತ್ತದೆ. ಇಂಟರ್ನೆಟ್, ಸೋಶಿಯಲ್ ಮೀಡಿಯಾ, ತಮಗಾದ ಅನ್ಯಾಯವನ್ನು ಹೇಳಿಕೊಳ್ಳಲು  ಶಿಷ್ಟ ಭಾಷೆ ಮುಂತಾದ ಯಾವ ಸವಲತ್ತುಗಳೂ ಇಲ್ಲದೆ ಅನಾಚಾರಗಳನ್ನೂ, ದೌರ್ಜನ್ಯವನ್ನೂ ಭಿಡೆಯಿಲ್ಲದೆ ಖಂಡಿಸುತ್ತಿದ್ದರು, ವಿರೋಧಿಸುತ್ತಿದ್ದರು.

ಓಡುತ್ತಿದ್ದ ಕಾಲುಗಳು ನಡೆಯಲು ಪ್ರಾರಂಭಿಸಿದಂತೆ ಬದುಕು ನಿಧಾನವಾಗಲಾರಂಭಿಸಿತು. ನಿರ್ಮಲ ಸಂಜೆಗಳನ್ನು ಮತ್ತು ಅದರೊಡಲಿನ‌ ಚೇತೋಹಾರಿ ಆಟಗಳನ್ನು ಬದುಕಿನ ಕಾರ್ಯತತ್ಪರತೆಗಳು ಕಬಳಿಸಿದಂತೆ ಫಕೀರಮ್ಮ ಮತ್ತವಳ ಕಥೆಗಳೂ ಆಕರ್ಷಣೆ ಕಳೆದುಕೊಂಡವು. ಇತ್ತ  ಅಜ್ಜಿ ಕಾಲವಾದ ನಂತರ ಮಣ್ಣಿನ ಮಡಕೆಯ ಬಳಕೆ ಬಹಳಷ್ಟು ಕಡಿಮೆಯಾಯಿತು. ತಳ ಹಿಡಿಯದ, ಎಣ್ಣೆ ಬೇಕಿಲ್ಲದ ನಾನ್-ಸ್ಟಿಕ್ ಪಾತ್ರೆ ಬಂದ ಮೇಲಂತೂ ಮಣ್ಣಿನ ಪಾತ್ರೆಗಳನ್ನು ಕೇಳುವವರೇ ಇಲ್ಲ, ಜೊತೆಗೆ ಫಕೀರಮ್ಮನ ಅಸ್ತಿತ್ವವೂ ನಮ್ಮ ಜೀವನದಿಂದ ಮರೆಯಾಗಿಹೋಯಿತು. ಅಮ್ಮ ಈಗಲೂ ಕೆಲವೊಮ್ಮೆ  ಫಕೀರಮ್ಮ‌ನನ್ನೂ, ಮಣ್ಣಿನ ಹೂಜಿಯನ್ನೂ,  ಅದರ ಮೇಲಿನ ಕುಸುರಿಯನ್ನೂ, ತಣ್ಣನೆಯ ನೀರನ್ನೂ, ಅವಳ ಕಥೆಗಳನ್ನೂ ನೆನಪಿಸಿಕೊಳ್ಳುತ್ತಾರೆ, ಮಣ್ಣಿನ ಮಡಕೆಯಲ್ಲಿ ಮೀನು ಸಾರು ಮಾಡಿದರಷ್ಟೇ ರುಚಿ ಎಂದು ಗೊಣಗುತ್ತಿರುತ್ತಾರೆ ಅನ್ನುವುದು ಹೊರತುಪಡಿಸಿದರೆ ನಮ್ಮ ನೆನಪಿನ ಕೋಶದಲ್ಲಿ ಅವಳಿಲ್ಲವೇ ಇಲ್ಲ ಅನ್ನಬಹುದು.

ಆದರೆ ಈ ಬಾರಿ ಊರಿಗೆ ಹೋಗಿದ್ದಾಗ, ಮುಂಜಾವು ಮೆಲ್ಲ ಮೆಲ್ಲನೆ ಕಣ್ಣುಬಿಡುವ ಹೊತ್ತು ಹಂಡೆಯೊಲೆಯ ಮುಂದೆ ಕೂತು ಚಳಿ ಕಾಯಿಸುತ್ತಿದ್ದಾಗ ಪಕ್ಕದ ಮದರಸದಲ್ಲಿ  ಹಿಂದಿನ ದಿನದ ಪಾಠವನ್ನು ಮಕ್ಕಳು ರಾಗವಾಗಿ ಒಪ್ಪಿಸುತ್ತಿದ್ದುದು ಕೇಳಿ ಬರುತ್ತಿತ್ತು. ಪಕ್ಕನೆ ನೆನಪು ಬಾಲ್ಯಕ್ಕೋಡಿತು. ಆ ದಿನಗಳ ಸಂಜೆ, ಹರಟೆ, ಆಟ, ಹೆಂಚಿನ ಮನೆಗಳು, ಫಕೀರಮ್ಮ, ಆಕೆಯ ಮಡಕೆ ಎಲ್ಲಾ ನೆನಪಾದವು. ಒಮ್ಮೆ ಆಕೆಯನ್ನು ಕಾಣಬೇಕು, ಮಾತಾಡಬೇಕು ಅಂತ ತೀವ್ರವಾಗಿ ಅನಿಸತೊಡಗಿತು. ಅವಳನ್ನು ಮತ್ತೆ ಹುಡುಕಬೇಕು ಅಂದುಕೊಳ್ಳುತ್ತಲೇ ಇದ್ದೆ, ಆದರೆ ಆ ದಿನ ಬರಲೇ ಇಲ್ಲ. ನಾನು ಊರಿನಿಂದ ಮತ್ತೆ ಮರಳುವ ಗಳಿಗೆಯೂ ಬಂತು. ಫಕೀರಮ್ಮನ ಹುಡುಕಾಟವನ್ನು ಮುಂದಿನ ಸಲಕ್ಕೆ ಮುಂದೂಡಿ ಕಾರು ಹತ್ತಿ ಕುಳಿತುಕೊಂಡೆ. 

ಆದರೆ ಆಕೆ ನನಗೆ ಸಿಗಲೇಬೇಕು ಅನ್ನುವುದು ಮೊದಲೇ ನಿರ್ಧಾರವಾಗಿದ್ದರೆ ಯಾರಾದರೂ ತಡೆಯಲು  ಸಾಧ್ಯವೇ?  ಒಂದೆರಡು ಕಿ.ಮೀ ಬರುವಷ್ಟರಲ್ಲಿ ಕಾರು ಕೆಟ್ಟು ನಿಂತಿತು. ಹೊತ್ತು ಬೇರೆ ಮೀರಿತ್ತು. ಮೆಕ್ಯಾನಿಕ್ ಅನ್ನು ಕರೆದುಕೊಂಡು ಬರುವಷ್ಟರಲ್ಲಿ ನನ್ನ ತಾಳ್ಮೆ ಸಂಪೂರ್ಣ ಒಡೆದುಹೋಗಿತ್ತು. ಒಳಗಿನ್ನು ಕೂತಿರಲಾರೆ ಅನ್ನಿಸಿ ಕೆಳಗಿಳಿದು ಅಲ್ಲೇ ಇದ್ದ ಮೈಲಿಗಲ್ಲೊಂದರ ಮೇಲೆ ಕುಳಿತುಕೊಂಡ.

ಮುಸ್ಸಂಜೆಯ ತಂಪುಗಾಳಿ ಕದಪುಗಳನ್ನು ಸವರುತ್ತಿದ್ದಂತೆ ಹಿತವಾದ ಅನುಭಾವವೊಂದು ಕಚಗುಳಿ ಇಡಲಾರಂಭಿಸಿತು. ಆ ಗಾಳಿಯಲ್ಲಿ, ಶೀತಲತೆಯಲ್ಲಿ ಕಳೆದುಹೋಗುವ ಮುನ್ನ ಒಂದು ನಿಡಿದಾದ ಉಸಿರುಬಿಟ್ಟು ಕಣ್ಣು ಮುಚ್ಚಬೇಕು ಅನ್ನುವಷ್ಟರಲ್ಲಿ ಅಸ್ಪಷ್ಟ ಆಕೃತಿ, ಪರಿಚಿತ ನಡಿಗೆಯೊಂದು ನಮ್ಮೆಡೆಗೆ ಬರುವುದು ಕಾಣಿಸಿತು. ಕಣ್ಣುಜ್ಜಿ ಮತ್ತೆ ನೋಡಿದೆ, ಕಾಲ ಒಂದು ಕ್ಷಣದ ಮಟ್ಟಿಗೆ ಸ್ತಂಭಿಸಿತು.

ಮರುಕ್ಷಣ ನಾನು ಆಕೆಯ ಪಕ್ಕದಲ್ಲಿದ್ದೆ. ಯಾವ ಫಕೀರಮ್ಮನನ್ನು ಹುಡುಕಲು ಕಾಲವನ್ನು ಮುಂದೂಡಿದ್ದೆನೋ ಅದೇ ಫಕೀರಮ್ಮ ಕಾಲವನ್ನು ಹಿಂದಿಕ್ಕಿ ನನ್ನ ಮುಂದೆ ನಿಂತಿದ್ದಳು. ಹೆಗಲಲ್ಲಿ ಮಡಕೆ ಇರಲಿಲ್ಲ ಅನ್ನುವುದು ಬಿಟ್ಟರೆ ಆಕೆ ಹಿಂದಿನಂತೆಯೇ ಇದ್ದಳು. ಕಂಡೂ ಕಾಣದಂತೆ ನೆರಿಗಟ್ಟಿದ ಮುಖ ಅವಳಿಗೆ ವಯಸ್ಸಾಗಿದೆ ಎಂದು ಸೂಚಿಸುತ್ತಿದ್ದರೂ ಅವಳೇನು ತೀರಾ ಇಳಿದು ಹೋಗಿರಲಿಲ್ಲ. ನಾನು ಪರಿಚಯ ಹೇಳಿ ಹಳೆಯ ಆತ್ಮೀಯತೆಯಿಂದ ಮಾತಿಗಿಳಿಯಲು ಯತ್ನಿಸಿದೆ. 

ಮೊದ-ಮೊದಲು ಆಕೆಗೆ ನಾನ್ಯಾರೆಂದು ತಿಳಿಯಲೇ ಇಲ್ಲ. ಅಜ್ಜಿ, ಅಮ್ಮ, ತೋಡು ಎಲ್ಲಾ ನೆನಪಿಸಿದಂತೆ ಅವಳಿಗೂ ನನ್ನ ನೆನಪಾಯಿತೇನೋ? ಅಮ್ಮನನ್ನೂ, ಅಜ್ಜಿಯನ್ನೂ ಪದೇ ಪದೇ ಕೇಳಿದಳು.‌ ಅವಳಿಲ್ಲ ಎಂದಾಗ ಮಾತ್ರ ಒಮ್ಮೆ ಬೆಚ್ಚಿದಂತೆ ಕಂಡುಬಂದಳು. ಅವಳ ಕತ್ತಿನ ಸೆರಗು ಸರಿಸಿ ಹಚ್ಚೆಯನ್ನು ನೋಡಬೇಕು ಅಂತ ಅನ್ನಿಸುತ್ತಿದ್ದರೂ ಯಾವುದೋ ಮುಜುಗರವೊಂದು ಅಡ್ಡ ಬಂದು ಕೇಳಲಾಗದೆ ಸುಮ್ಮನಿದ್ದೆ. 

ಆದರೆ ಆಕೆ ಮಾತಾಡುತ್ತಲೇ ಇದ್ದಳು. ಇಷ್ಟು ವರ್ಷಗಳ ಅಂತರ ಅವಳಲ್ಲಿ ಯಾವ ಬದಲಾವಣೆಯನ್ನೂ ಹುಟ್ಟುಹಾಕಿರಲಿಲ್ಲ. ನಾನು ಮಾತ್ರ ಇಷ್ಟು ಬೇಗ ಮಾತೆಲ್ಲಾ ಖಾಲಿಯಾದಂತೆ ಅವಳ ಮಾತಿಗೆ ಬರಿದೇ ಹೂಂಗುಟ್ಟುತ್ತಿದ್ದೆ. ನಡು ನಡುವೆ ಈಕೆ ಇಷ್ಟು ಜೀವನ್ಮುಖಿಯಾಗಿರಲು ಯಾವ ಅಂಶ ಕಾರಣವಾಗಿರಬಹುದು ಎಂದು ಅಚ್ಚರಿಯಿಂದ ಅವಳ ಮುಖ ನೋಡುತ್ತಿದ್ದೆ.

ಈ ನಡುವೆ ಯಾಕೋ ಗೊತ್ತಿಲ್ಲ, ಅವಳ ಊರು, ಜಮೀನು, ಕೆರೆ ನೆನಪಾದವು. ಊರಿಗೆ ಹೋಗಿಲ್ವಾ ಅಂತ ಕೇಳಿದೆ. ಆಕೆ ನನಗೀಗ ಇದೇ ನನ್ನೂರು,  ಅಲ್ಲಿ ಸಿಕ್ಕ ಬೆಲೆಗೆ ಎಲ್ಲಾ ಮಾರಿ ಇಲ್ಲೇ ಬಂದು ಇದ್ದೇನೆ ಈಗ ಅಂದಳು. ನನಗೋ ಎಲ್ಲಾ ಅಯೋಮಯ. ತನ್ನ ಅಪ್ಪ ಕೊಟ್ಟಿದ್ದ, ಅಷ್ಟೊಂದು ಪ್ರೀತಿಸುತ್ತಿದ್ದ ಜಮೀನನ್ನು ಆಕೆ ಮಾರುವಂತದ್ದು ಏನಾಯಿತು ಅಂತ ಅನಿಸಿತು. ಹಿಂದಿನಂತೆಯೇ ಮತ್ತೆ ಕೇಳಲಾಗದೆ ಸುಮ್ಮನಾದೆ. ಆದರೆ ಆಕೆಯೇ "ಇಲ್ಲಿನ ಬದುಕು ಸಾಕು ಅನ್ನಿಸಿ ಮತ್ತೆ ನಮ್ಮೂರಿಗೇ ಹೋಗಿದ್ದೆ. ಜಮೀನು, ಕಂಬಾರಿಕೆ ಅಂತ ಖುಶಿಯಾಗಿಯೇ ಇದ್ದೆ. ಆದರೆ ಇದ್ದೊಬ್ಬ ಮಗ ಯಾವಾಗ ಕುಡಿತ ಕಲಿತನೋ ಗೊತ್ತಿಲ್ಲ, ದಿನಪೂರ್ತಿ ಹಟ್ಟಿಯಲ್ಲಿ ಕುಡಿದು ಬಿದ್ದುಕೊಳ್ಳುತ್ತಿದ್ದ. ನೋಡುವಷ್ಟು ನೋಡಿ ಒಂದು ದಿನ ಕುಡಿದರೆ ಊಟ ಹಾಕಲಾರೆ ಎಂದು ಮಡಕೆ ಮಾರಲು ಹೋದೆ. ಕುಡಿದ ಅಮಲಿನಲ್ಲಿದ್ದನೋ ಅಥವಾ ನಿಜಕ್ಕೂ ಅವನಿಗೆ ಬದುಕು ಸಾಕೆನ್ನಿಸಿತ್ತೋ ಗೊತ್ತಿಲ್ಲ, ಸಂಜೆ ಬರುವಷ್ಟರಲ್ಲಿ ಅವನ ಹೆಣ ಮರದಲ್ಲಿ ನೇತಾಡುತ್ತಿತ್ತು. ಎಷ್ಟು ಅತ್ತರೂ ಕರೆದರೂ ಮಗ ಮರಳಿ ಬಾರನು ಎನ್ನುವ ಸತ್ಯ ತಿಳಿಯುತ್ತಿದ್ದಂತೆ ಎಲ್ಲಾ ಮಾರಿ ಆ ಊರಿನ ಋಣ ಹರಿದುಕೊಂಡು ಇಲ್ಲಿಗೇ ಮತ್ತೆ ಬಂದೆ.  ಈ ಬದುಕಿನ ಋಣ ಇರುವಷ್ಟು ದಿನ ಇಲ್ಲೇ ಇರುತ್ತೇನೆ" ಅಂದಳು. ಎಲ್ಲಾ ಮುಗಿದ ಮೇಲೂ ಯಾವುದೋ ಉಳಿದಿದೆ ಎಂಬಂತೆ ಬದುಕುವ ಫಕೀರಮ್ಮನಂಥವರು ಮತ್ತು ಸಣ್ಣ ಪುಟ್ಟ ವಿಚಾರಗಳಿಗೆಲ್ಲಾ ಮನಸು ಕೆಡಿಸಿಕೊಂಡು ಬದುಕು ಇಷ್ಟೇ ಅಂತ ನಿರ್ಧರಿಸಿಬಿಡುವ ನಮ್ಮಂಥವರು, ಮಧ್ಯೆ ಸಂಜೆಯ ಕುಳಿರ್ಗಾಳಿ... ಒಂದು ಕೇಂದ್ರದಿಂದ ಆರಂಭವಾದ ಬದುಕು ನಿಶ್ಚಿತ ಪರಿಧಿಯಲ್ಲೇ ಸಾಗಿ ಒಂದು ಸುತ್ತು ಬಂದಿತೇನೋ ಅಂತ ಅನಿಸಿತು. ಸುಮ್ಮನೆ ಅವಳ ಕತ್ತಿನ ಸೆರಗು ಸರಿಸಿದೆ, ಮಣಿಕಂಠ ಎಂದಿನಂತಿರದೆ ನಗುತ್ತಿದ್ದ, ಫಕೀರಮ್ಮನ ಮುಖ ನೋಡಿದೆ ಅವನಿಗಿಂತಲೂ ಚೆಂದ ಅವಳು ನಗುತ್ತಿದ್ದಳು.

ಮಂಗಳವಾರ, ಡಿಸೆಂಬರ್ 25, 2018

ಆಕೆ ನನ್ನ ರತ್ನಕ್ಕ ಆಗಿರಲಿಲ್ಲ.

"ರತ್ನಕ್ಕ..."
ಹಾಗಂತ ಆಕೆಯನ್ನು ಯಾರು ಮೊದಲು ಕರೆದಿದ್ದರೋ ಗೊತ್ತಿಲ್ಲ. ಆಕೆಯಂತೂ ಅಪ್ಪಟ ರತ್ನ; ಅಕ್ಕರೆಯ ಅಕ್ಕ. ತಿಳಿ ಹಸಿರು ಬಣ್ಣದ ಸೀರೆ, ಅದಕ್ಕೊಪ್ಪುವ ಅರ್ಧ ತೋಳಿನ ರವಿಕೆ, ಮಧ್ಯಕ್ಕೆ ತೆಗೆದ ಬೈತಲೆ, ಹುಬ್ಬುಗಳ ಮಧ್ಯೆ ಒಂದು ಸಣ್ಣ ಬೊಟ್ಟು.... ಇಷ್ಟಾದರೆ ಅವಳ ಅಲಂಕಾರ ಮುಗಿಯುತ್ತಿತ್ತು. ಅವಳ ನಿಜವಾದ ಹೆಸರೇನು? ಎಲ್ಲಿಯವಳು? ಸಂಸಾರ-ಮಕ್ಕಳಿವೆಯಾ? ವಿವರಗಳು ಯಾರಿಗೂ ಲಭ್ಯವಿರಲಿಲ್ಲ.

ವಾರಕ್ಕೆ ಮೂರು ದಿನವಷ್ಟೇ ಕಾಣಬರುತ್ತಿದ್ದ ಆಕೆ ಹಿತ್ತಲಲ್ಲಿ ನಿಂತು " ಅಕ್ಕಾ ಕಾಫಿ..." ಅನ್ನುತ್ತಿದ್ದರೆ ಅರಿಯದ ಸಂಭ್ರಮವೊಂದು ಅವಳೊಂದಿಗೆ ಮನೆಯೊಳಗೆ ಪ್ರವೇಶಿಸುತ್ತಿತ್ತು. ಕುಳಿತೇ ಅಡುಗೆ ಮಾಡಬೇಕಿದ್ದ ಒಲೆ, ಅದರ ಹತ್ತಿರವೇ ಇರುತ್ತಿದ್ದ ಸಣ್ಣ ಮಣೆಯಲ್ಲಿ ಕೂತು ಅಮ್ಮ ಅಡುಗೆ ಮಾಡುತ್ತಿದ್ದರೆ ಪಕ್ಕದಲ್ಲಿ ಮತ್ತೊಂದು ಮಣೆಯೆಳೆದು ಮಾತಿಗೆ ಕೂರುತ್ತಿದ್ದ ರತ್ನಕ್ಕಳೆಂದರೆ ನನಗೆ ಬಾಲಮಂಗಳದ 'ಲಂಬೋದರ' ಕಥೆಯ ವೈದ್ಯರಿಗಿತಲೂ ಒಂದು ತೂಕ ಜಾಸ್ತಿಯೇ ಕುತೂಹಲ.

ಸದಾ ತುರುಬು ಕಟ್ಟಿಯೇ ಇರುವ ರತ್ನಕ್ಕನ ಕೂದಲು ಎಷ್ಟುದ್ದ ಇರ್ಬಹುದು ಅನ್ನುವುದು ಮೊದಲ ಕುತೂಹಲವಾಗಿದ್ದರೆ,  ನನಗೆ ಮಲ್ಲಿಗೆ ಹೆಣೆದು ತರುವ ಈಕೆ ಯಾಕೆ ಹೂವು ಮುಡಿಯುವುದೇ ಇಲ್ಲ ಅನ್ನುವುದು ಎರಡನೆಯ ಪ್ರಶ್ನೆ. ದಿನಕ್ಕೆ ಎರಡು ಮೂರಾದರೂ ಕಥೆ ಹೇಳುತ್ತಿದ್ದ ಆಕೆಗೆ ಅಷ್ಟೊಂದು ಕಥೆಗಳು ಹೇಗೆ ಗೊತ್ತು ಅನ್ನುವುದು ನನಗೆ ಆಗ ಒಂದು ದೊಡ್ಡ ಬೆರಗು.  'ನಿನ್ನ ಮಗು ಎಲ್ಲಿ? ಆಟ ಆಡೋಕೆ ಕರ್ಕೊಂಡು ಬಾ' ಅಂದ್ರೆ 'ನೀನೇ ನನ್ನ ಮಗು' ಅಂತ ಬರಸೆಳೆದು ತಾಂಬೂಲ ಜಗಿದ ಬಾಯಲ್ಲೇ ನನ್ನ ಕೆನ್ನೆಗೊಂದು ಮುತ್ತಿಟ್ಟಾಗ ಮಾತ್ರ ಈ ರತ್ನಕ್ಕ ಕೊಳಕು ಅಂತ ನನಗೆ ಅನಿಸುತ್ತಿತ್ತು. ಅದನ್ನೇ ಒಂದೆರಡು ಬಾರಿ ಅಮ್ಮನಿಗೂ ಹೇಳಿ ಅವರಿಂದ ಬೈಸಿಕೊಂಡಿದ್ದೆ.

ಮಾತಿಗೆ ಕೂತರೆ  ರತ್ನಕ್ಕ ಮಹಾ ವಾಚಾಳಿ. ನನ್ನನ್ನು ಹೊರತುಪಡಿಸಿ ಮತ್ತೊಂದು ಹೆಣ್ಣು ಜೀವವಿಲ್ಲದ ಮನೆಯಲ್ಲಿ ಅಮ್ಮನಿಗೆ ಆಕೆಯೇ ಅಂತರಂಗದ ಸಖಿ. ಅಬ್ಬುಕಾಕ ಕೊಟ್ಟ ಕೊಳೆತ ಮೀನಿನ ಕಥೆ, ರಾತ್ರಿ ಊಟ ಮಾಡದೆ ಬಿಸ್ಕೆಟ್ ತಿಂದು ಮಲಗಿದ ನನ್ನ ಹಠ, ಅಪ್ಪ ಮನೆಗೆ ರಾತ್ರಿ ಲೇಟಾಗಿ ಬಂದದ್ದು, ಮುಂದಿನ ವಾರ ಊರಿಗೆ ಬರಲಿರುವ ಮಾವನಿಗೆ ಮಾಡಿಟ್ಟರಬೇಕಾದ ತಿಂಡಿಯ ಪಟ್ಟಿ, ಅಜ್ಜನ ಮಾತ್ರೆ, ಯಾರೋ ಕದ್ದುಕೊಂಡು ಹೋಗಿರುವ ಅಮ್ಮನ ಪ್ರೀತಿಯ ಹೇಂಟೆ, ತೋಟದ ಕೆಲಸಕ್ಕೆ ಹೇಳದೇ ಕೇಳದೇ ರಜೆ ಮಾಡಿದ ತಿಮ್ಮಣ್ಣ, ಕಾಲಿಗೆ ಮುಳ್ಳು ಚುಚ್ಚಿಸಿಕೊಂಡು ಬಂದು ಪಡಬಾರದ ಪಾಡು ಪಟ್ಟ ಮನೆಯ ದನ... ಹೀಗೆ ವಾರದ ಕಥೆಯನ್ನು ಅವಳ ಮುಂದೆ ಹೇಳಿಕೊಂಡರೆ ಅಮ್ಮನಿಗೆ ನಿರಾಳ.

ಅವಳಾದರೂ ಅಷ್ಟೆ, ಅಮ್ಮ ಮಾತಾಡುತ್ತಿದ್ದರೆ ಬರಿಯ ಹೂಂಗಟ್ಟದೆ, ಅಬ್ಬುಕಾಕ ತನಗೂ ಕೊಳೆತ ಮೀನು ಕೊಟ್ಟ ಬಗ್ಗೇನೋ, ಕೋಳಿ ಕಳ್ಳರ ಬಗ್ಗೆಯೋ, ಮುಳ್ಳು ಚುಚ್ಚಿಸಿಕೊಂಡ ದನಕ್ಕೆ ಮಾಡಬಹುದಾದ ಹಳ್ಳಿ ಮದ್ದು... ಹೀಗೆ ಅಮ್ಮನ ಮಾತಿಗೆ ಜೊತೆಯಾಗುತ್ತಿದ್ದಳು. ನಡು-ನಡುವೆ ನಾನು ಅದು-ಇದು ಅಂತ ಹೋದ್ರೆ ನನ್ನನ್ನು ಮಡಿಲಲ್ಲಿ ಕೂರಿಸಿ ಮುದ್ದುಗರೆಯುತ್ತಿದ್ದಳು.

ಸದಾ ನಗುವ ಆಕೆ ಒಮ್ಮೊಮ್ಮೆ ಮಾತ್ರ ಮುಖ ಗಂಟಿಕ್ಕಿಕೊಂಡೇ ಮನೆಯೊಳಗೆ ಬರುತ್ತಿದ್ದಳು.ಆಗೆಲ್ಲಾ ಅಮ್ಮನಿಗೆ ಅವಳ ನೋವು ಮೊದಲೇ ಗೊತ್ತಿತ್ತೇನೋ ಎಂಬಂತೆ ತಾನೇ ಮಣೆ ಎಳೆದು ಅವಳನ್ನು ಕೂರಿಸಿ ಕಾಫಿ, ನೀರು ದೋಸೆ, ಮೀನಿನ ಸಾರು ಕೊಟ್ಟು ತಿನ್ನು ಎಂದು ಅಕ್ಕರೆಯಿಂದ ಬೆನ್ನು ನೀವುತ್ತಿದ್ದಳು. ಮಾತಿನ ಮಲ್ಲಿ ರತ್ನಕ್ಕ ಮೌನವಾದರೆ ಅಮ್ಮನ ಕರುಳೂ ಚುರುಕ್ಕನ್ನುತ್ತಿತ್ತೇನೋ? ಅವಳೇ ಮಾತು ಶುರು ಹಚ್ಚಿಕೊಳ್ಳಲಿ ಎಂದು ಸುಮ್ಮನಾಗಿಬಿಡುತ್ತಿದ್ದರು.

ಹಾಗೆ ಅವಳು ನಾಸ್ಟಾ ಮಾಡಿ ಬಟ್ಟಲು ತೊಳೆದಿಟ್ಟು ಬರುವಷ್ಟರಲ್ಲಿ ಅಮ್ಮನ ಮಧ್ಯಾಹ್ನದ ಅಡುಗೆ ತಯಾರಿ ಶುರುವಾಗಿಬಿಡುತ್ತಿತ್ತು. ಒಮ್ಮೆ ಅತ್ತಿತ್ತ ನೋಡಿ, ಯಾರೂ ಇಲ್ಲ ಅನ್ನುವುದನ್ನು ಖಾತ್ರಿ ಪಡಿಸಿ, ನನ್ನನ್ನು ಆಟ ಆಡಿಕೋ ಎಂದು ದೂರ ಕಳುಹಿಸಿ ಇಬ್ಬರೂ ಮಾತಿಗೆ ಕೂರುತ್ತಿದ್ದರು. ನಡು ನಡುವೆ ರತ್ನಕ್ಕ ಬಿಕ್ಕುತ್ತಿದ್ದರೆ ಅಮ್ಮನ ಕಣ್ಣಲ್ಲೂ ತೆಳು ನೀರು. ಅಲ್ಲವಳ ಖಾಸಗಿ ಬದುಕಿನ ಖಾಸ್ ಬಾತ್ ಬಿಚ್ಚಿಕೊಳ್ಳುತ್ತಿದ್ದರೆ ಅಮ್ಮನ ಮನದಲ್ಲೂ ಕಡಲೊಂದು ಸುಮ್ಮನೆ ಹೊಯ್ದಾಡುತ್ತಿತ್ತೇನೋ? ಆಗ ಇವೆಲ್ಲಾ ಅರ್ಥ ಆಗುತ್ತಿರಲಿಲ್ಲ. ಒಲೆಯಲ್ಲಿ ಆರಿಹೋಗಿರುವ ಬೆಂಕಿಯನ್ನು ಮತ್ತೆ ಹೊತ್ತಿಸಲೆಂದು ಊದುಗೊಳವೆಯಲ್ಲಿ ಗಾಳಿ ಹಾಕಿದ್ದಕ್ಕೇ ಅಮ್ಮನ ಕಣ್ಣುಗಳು ಕೆಂಪುಂಡೆಗಳಾಗಿವೆ ಅಂತ ಅಂದುಕೊಳ್ಳುತ್ತಿದ್ದೆ. ''ನಾನು ಊದ್ಲಾ ಅಮ್ಮಾ'' ಅಂತ ಕೇಳಿದ್ರೆ, ಅವರಿಗಿಂತ ಮೊದಲು ರತ್ನಕ್ಕನೇ "ನಿನಗಿವೆಲ್ಲಾ ಬೇಡ" ಎಂದು ದೂರ ಕಳುಹಿಸಿಬಿಡುತ್ತಿದ್ದಳು. ಈಗ ಒಮ್ಮೊಮ್ಮೆ "ಏನಿತ್ತು ಅಂತಹಾ ಗುಟ್ಟು?" ಅಂತ ಅಮ್ಮನನ್ನು ಕೇಳಬೇಕು ಅನಿಸಿದರೂ ಕೇಳಲಾಗದೆ ಸುಮ್ಮನಾಗುತ್ತೇನೆ.

ಹೀಗಿರುವಾಗಲೇ ಒಂದು ದಿನ ರತ್ನಕ್ಕ ಎಂದಿಗಿಂತ ಬೇಗ ಮನೆಯ ದಾರಿ ಹಿಡಿದಿದ್ದಳು. ನಾನು ಅಜ್ಜನ ಕೈ ಹಿಡಿದುಕೊಂಡು ಅಂಗಳದಲ್ಲಿ ಅಡ್ಡಾಡುತ್ತಿರಬೇಕಾದರೆ ಆಕೆ ಓಡೋಡಿ ಬರುತ್ತಿದ್ದುದು ಕಾಣಿಸುತ್ತಿತ್ತು. ನನಗೋ ಅವಳಿಂದ ಕಥೆ ಹೇಳಿಸುವ ಉಮೇದು. ಅವಳು ನನ್ನ ಇರುವಿಕೆಯನ್ನು ಗಮನಿಸಲೇ ಇಲ್ಲವೇನೋ ಎಂಬಂತೆ ಅಮ್ಮನ ಹತ್ತಿರ ಹೋಗಿ ಪಿಸ ಪಿಸ ಮಾತಾಡತೊಡಗಿದಳು. ಹಣೆಯಲ್ಲಿ ಎಂದೂ ಕಾಣದ ಕುಂಕುಮ ಆವತ್ತು ಕಾಣಿಸಿತ್ತು. ಅಮ್ಮ ಏನೂ ಮಾತಾಡುತ್ತಲೇ ಇರಲಿಲ್ಲ. ನನಗೋ ಎಲ್ಲವೂ ಆಯೋಮಯ. ಸ್ವಲ್ಪ ಹೊತ್ತಾದ ಮೇಲೆ ಪೇಟೆಗೆ ಹೋದ ಅಪ್ಪ ವಾಪಾಸ್ ಬಂದ್ರು. ಅಜ್ಜನೂ ಈಸಿಛೇರಿನಲ್ಲಿ ಕೂತು ಏನನ್ನೋ ಓದುತ್ತಿದ್ದರು. ಅಮ್ಮ ಯಾವ ಪೀಠಿಕೆಯೂ ಇಲ್ಲದೆ ಒಂದು ನಿರ್ಧಾರದ ಧ್ವನಿಯಲ್ಲಿ "ರತ್ನಕ್ಕ ಇನ್ಮುಂದೆ ಇಲ್ಲೇ ಇರುತ್ತಾಳೆ. ತೋಟದಲ್ಲಿರುವ ಹಳೆ ಮನೆಯಲ್ಲಿ ಬದುಕು ಕಟ್ಟಿಕೊಳ್ಳಲಿ" ಅಂದರು. ಅಪ್ಪ "ಒಂಟಿ ಹೆಂಗಸನ್ನು ಹೇಗೆ ತೋಟದಲ್ಲಿ ಇರಿಸುವುದು, ಇವೆಲ್ಲಾ ಆಗದ ಮಾತು" ಅಂದರು. ಅಮ್ಮ ಮತ್ತೆ "ಆಕೆ ಒಂಟಿಯಲ್ಲ, ಅವಳ ಗಂಡನೂ ಜೊತೆಗಿರುತ್ತಾನೆ" ಅಂದರು. ಒಂದೆರಡು ಕ್ಷಣ ಯೋಚಿಸಿ, ಅಮ್ಮ ಯಾವ ಮಾತಿಗೂ ಜಗ್ಗಲಾರರು ಎಂದು ಅರ್ಥ ಮಾಡಿಕೊಂಡ ಅಪ್ಪ, ಅಜ್ಜ ರತ್ನಕ್ಕ ನಮ್ಮ ತೋಟದಲ್ಲಿ ಇರಲು ಒಪ್ಪಿಗೆ ಕೊಟ್ಟರು.

ನನಗೆ ರತ್ನಕ್ಕ ಪ್ರತಿ ದಿನ ನಮ್ಮ ಜೊತೆ ಇರುತ್ತಾಳೆ ಅನ್ನುವುದೇ ದೊಡ್ಡ ಸಂಭ್ರಮ. ಅಷ್ಟು ದಿನ ಇಲ್ಲದ ಗಂಡ ಈಗ ಧುತ್ತೆಂದು ಹೇಗೆ ಬಂದ? ಇಷ್ಟು ದಿನ ಎಲ್ಲಿದ್ದ? ಅವರ ನಡುವೆ ಏನಾದ್ರೂ ಜಗಳ ಆಗಿತ್ತಾ? ಅವೆಲ್ಲಾ ನನಗೆ ಆ ಹೊತ್ತಿಗೆ ಕಾಡುವ ಪ್ರಶ್ನೆಗಳು ಆಗಿರಲಿಲ್ಲ, ಆಗಿದ್ದರೂ ಅವೇನು ತುಂಬಾ ಮಹತ್ವದ ಸಂಗತಿಗಳು ಅನ್ನಿಸುತ್ತಿರಲಿಲ್ಲ. ಆದರೆ ಊರ ತುಂಬಾ ರತ್ನಕ್ಕಳ ಬಗ್ಗೆ, ಅವಳ ಗಂಡನ‌ ಬಗ್ಗೆ ಅತಿರಂಜಿತ ಸುದ್ದಿಗಳು ಓಡಾಡುತ್ತಿದ್ದವು. ಒಂದಿಬ್ಬರು ಅಮ್ಮನ ಹತ್ತಿರವೂ ಅವಳ ಬಗ್ಗೆ ಚಾಡಿ ಹೇಳಿದ್ದರು. ಅಮ್ಮನದು ಎಂದಿನ ನಿರ್ಲಿಪ್ತತೆ. ತನ್ನ ಅಂತರಂಗದ ಗೆಳತಿಯ ಬಗ್ಗೆ ಇದ್ದ ನಂಬಿಕೆಯ ಮುಂದೆ ಉಳಿದೆಲ್ಲಾ ಸಂಗತಿಗಳು ಗೌಣವಾಗಿದ್ದಿರಬೇಕು ಅಥವಾ ಕೆಲವು ತೀರಾ ಖಾಸಗಿ ಸಂಗತಿಗಳಲ್ಲಿ ಅತಿಕ್ರಮ ಪ್ರವೇಶ ಮಾಡಬಾರದು ಅಂತ ಅನ್ನಿಸಿರಬೇಕು.

ರತ್ನಕ್ಕ ತೋಟದ ಮನೆಗೆ ಬಂದ ನಂತರ ಅಮ್ಮನ ದಿನಚರಿಯಲ್ಲಿ ಸಾಕಷ್ಟು ಬದಲಾವಣೆಗಳಾಗಿದ್ದವು. ತೋಟದ ಕೇಲಸಗಾರರಿಗೆ ಬುತ್ತಿ ಒಯ್ಯುವುದು, ಕೊಟ್ಟಿಗೆಯ ಮೇಲೊಂದು ನಿಗಾ ಇಡುವುದು,  ದನಗಳಿಗೆ ಸೊಪ್ಪು, ಹುಲ್ಲು ತರುವುದು ಮುಂತಾದ ಕೆಲಸಗಳನ್ನೆಲ್ಲಾ ತಾನೇ ವಹಿಸಿಕೊಂಡು ಬಿಟ್ಟಿದ್ದಳು. ನನ್ನನ್ನು ಶಾಲೆಗೆ ಕರೆದೊಯ್ಯುವುದು ಮತ್ತು ಅಲ್ಲಿಂದ ಕರೆತರುವುದನ್ನೂ ಆಕೆಯೇ ಮಾಡುತ್ತಿದ್ದಳು. ಕಾಲುದಾರಿಯಲ್ಲಿ ಅವಳೊಂದಿಗೆ ಹೆಜ್ಜೆ ಹಾಕುತ್ತಿದ್ದರೆ ನನಗೆ ಅಮ್ಮನೇ ಕಿರುಬೆರಳಿಡಿದು ನಡೆಸುತ್ತಿದ್ದಾಳೇನೋ  ಅನ್ನುವ ಭಾವ.

ಸಂಜೆ ನಾಲ್ಕಾಗುತ್ತಿದ್ದಂತೆ ಎಲ್ಲಾ ಕೆಲಸ ಬದಿಗಿಟ್ಟು ಆಕೆ ಒಂದು ಹಿಡಿ ನೆಲಗಡಲೆಯೊಂದಿಗೆ ನಮ್ಮ‌ ಮನೆಗೆ ಬರುತ್ತಿದ್ದಳು. ಕೊಟ್ಟಿಗೆಯಲ್ಲಿನ ದನಗಳನ್ನೊಮ್ಮೆ ನೋಡಿ, ಮೈದಡವಿ ಹಿತ್ತಲು ಮನೆಯ ಮೆಟ್ಟಿಲ ಮೇಲೆ ಕೂತು ನನ್ನ ಕೂದಲು ಬಿಚ್ಚಿ, ಸಣ್ಣ ಕತ್ತರಿಯಲ್ಲಿ ಹೇನು ಹುಡುಕುತ್ತಾ ಕಥೆ ಹೇಳುತ್ತಿದ್ದಳು. ಒಮ್ಮೊಮ್ಮೆ ಅಮ್ಮನೂ ಪಕ್ಕ ಕೂತು ಅವಳ ಕಥೆಗೆ ಕಿವಿಯಾಗುತ್ತಿದ್ದರು. ಮತ್ತೂ ಕೆಲವೊಮ್ಮೆ ಕಥೆ ಹೇಳುತ್ತಾ ಹೇಳುತ್ತಾ ಅವಳೇ ಕಥೆಯ ಪಾತ್ರವಾಗಿಬಿಡುತ್ತಿದ್ದಳು. ಬಿಳಿ ಬಣ್ಣದ ಕುದುರೆ ಏರಿ ಏಳು ಸಮುದ್ರ ದಾಟಿ ಬಂದ ರಾಜಕುಮಾರ ಪಾಪದ ರಾಜಕುಮಾರಿಯನ್ನು ಹೊತ್ತೊಯ್ದ ಕಥೆ ಹೇಳಿದ ಮೇಲೆ ಪ್ರತಿ ಬಾರಿಯೂ ಆಕೆ ಹನಿಗಣ್ಣಾಗುತ್ತಿದ್ದಳು. ಆಗೆಲ್ಲಾ ಅಮ್ಮನೂ ಮಾತು ಬೇಡವೆಂದು ಸುಮ್ಮನಾಗುತ್ತಿದ್ದಳು. ಯಾರಿಗೆ ಗೊತ್ತು ರತ್ನಕ್ಕಳ ಬಾಲ್ಯವೂ ಫೇರಿಟೇಲ್ ಗಳ ರಾಜಕುಮಾರಿಯ ಬದುಕಿನಷ್ಟೇ ಸಂಭ್ರಮದಿಂದ ಕೂಡಿತ್ತೇನೋ?

ಈ ಮಧ್ಯೆ ಅವಳ ನಡವಳಿಕೆಯಲ್ಲಿ ಸೂಕ್ಷ್ಮ ಬದಲಾವಣೆ ಗೋಚರಿಸಿತ್ತು. ಅರ್ಧ ತೋಳಿನ ರವಕೆಯ ಜಾಗದಲ್ಲಿ ಕೈ ಪೂರ್ತಿ ಮುಚ್ಚುವ, ಬೆನ್ನು ಮುಚ್ಚುವ ರವಕೆ ತೊಡಲಾರಂಭಿಸಿದ್ದಳು.  ನನ್ನ ಶಾಲೆಗೆ ಕರೆದೊಯ್ಯವಲ್ಲೂ ಹಿಂದಿನ ಲವಲವಿಕೆ ಇರಲಿಲ್ಲ. ಅವಳ ಮನೆಯಲ್ಲಿ ಅರ್ಧರಾತ್ರಿಯವರೆಗೂ ಉರಿಯುತ್ತಿದ್ದ ದೀಪ, ಸದಾ ಬಾತುಕೊಂಡಿರುವ ಕಣ್ಣುಗಳು ನನಗೆ ಗೊತ್ತಿಲ್ಲದ ಕಥೆಯೊಂದಕ್ಕೆ ಮುನ್ನುಡಿ ಬರೆದಿತ್ತೇನೋ? ಯಾವ ನೋವನ್ನು ಮರೆಮಾಚಲೋ ಏನೋ ಸಹಜ ಸುಂದರಿ ರತ್ನಕ್ಕ ಕಣ್ಣಿಗೆ ಕಾಡಿಗೆ ಹಚ್ಚಲು ಶುರು ಮಾಡಿದ್ದಳು.‌ ಇವೆಲ್ಲದರ ಪರಿಣಾಮ ಅವಳ ಆರೋಗ್ಯದ ಮೇಲೂ ಬೀರಿತ್ತು. ಸದಾ ಲವಲವಿಕೆಯಿಂದಿರುತ್ತಿದ್ದವಳು ಮಂಕಾಗಿಬಿಟ್ಟಿದ್ದಳು. ಅಮ್ಮ ಅವಳ ಅಳಲಿಗೆ ಕಿವಿಯಾಗುವುದನ್ನು ಬಿಟ್ಟರೆ ಮತ್ತೇನೂ ಮಾಡಲು ಸಾಧ್ಯವಿರಲಿಲ್ಲ. ಒಮ್ಮೆ "ಇವೆಲ್ಲಾ ಯಾಕೆ ಬೇಕಿತ್ತು ರತ್ನಕ್ಕಾ" ಅಂತ ಅಮ್ಮ ಕೇಳಿದ್ದು ನನ್ನ ಕಿವಿಗೂ ಬಿದ್ದಿತ್ತು. ರತ್ನಕ್ಕ ಅಷ್ಟೇ ನೋವಿನಿಂದ "ನನ್ನ ಹಣೆಬರಹ ಅಕ್ಕಾ, ಬಿಡಿ" ಎಂದಿದ್ದಳು. 

ಒಮ್ಮೆ ಗಂಟೆ ನಾಲ್ಕೂವರೆಯಾದರೂ ರತ್ನಕ್ಕ ಮನೆಗೆ ಬರದಿದ್ದುದನ್ನು ಕಂಡು ಅವಳನ್ನು ಹುಡುಕುತ್ತಾ ನಾನೇ ಅವಳ ಮನೆಗೆ ಹೋಗಿದ್ದೆ. ಶಾಲೆಯಲ್ಲಿ ಟೀಚರ್ ಕಲಿಸಿದ್ದ 'ಒಂದು ಎರಡು ಬಾಳೆಲೆ ಹರಡು...' ಹಾಡನ್ನು ಅವಳಿಗೆ ಹಾಡಿ ತೋರಿಸಬೇಕು, ಅವಳಿಂದ ಶಹಬ್ಬಾಸ್ ಗಿಟ್ಟಿಸಿಕೊಳ್ಳಬೇಕು ಅನ್ನುವ ಹಿಡನ್ ಅಜೆಂಡಾವೂ ಇತ್ತು‌. ಆದರೆ ಅಲ್ಲಿನ ದೃಶ್ಯ ನೋಡಿದ ಮೇಲೆ ನನ್ನ ಉತ್ಸಾಹವೆಲ್ಲಾ ಜರ್ರನೆ ಇಳಿದುಹೋಯಿತು.

ನಾನು ಹೋಗುವ ಮುಂಚೆ ಅವಳ ಮನೆಯಲ್ಲಿ ಏನು ನಡೆದಿತ್ತೋ ಗೊತ್ತಿಲ್ಲ. ಗಟ್ಟಿಗಿತ್ತಿ ರತ್ನಕ್ಕ ಗೋಡೆಗೆ ಹಣೆ ಚಚ್ಚಿಕೊಡು ಅಳುತ್ತಿದ್ದಳು. ಅವಳ ಗಂಡ ತನಗೂ ಅದಕ್ಕೂ ಸಂಬಂಧವೇ ಇಲ್ಲವೇನೋ ಎಂಬಂತೆ ಬೀಡಿ ಎಳೆಯುತ್ತಾ ಎತ್ತಲೋ ನೋಡುತ್ತಿದ್ದ. ನಾನು ಸ್ವಲ್ಪ ಹೊತ್ತು ಅಲ್ಲೇ ನಿಂತೆ. ಮುಂದೇನು ಮಾಡಬೇಕು ಎನ್ನುವುದು ಅರ್ಥವಾಗದೆ ತಿರುಗಿ ಮನೆಗೆ ಬಂದೆ. ನನ್ನ ಅನ್ಯಮನಸ್ಕತೆಯನ್ನು ನೋಡಿ ಅಮ್ಮ "ಏನಾಯ್ತು? ರತ್ನಕ್ಕ ಎಲ್ಲಿ?" ಅಂತ ಕೇಳಿದ್ರು. ನಾನು ನಡೆದ ವೃತ್ತಾಂತವನ್ನೆಲ್ಲಾ ವಿವರಿಸಿದೆ. ಅಮ್ಮ ಏನೂ ಪ್ರತಿಕ್ರಿಯಿಸದೆ ನನ್ನ ಕರೆದುಕೊಂಡು ನಡುಮನೆಗೆ ಬಂದು ರೆಡಿಯೋ ಹಚ್ಚಿ ಕೂತರು.

ಮರುದಿನ ರತ್ನಕ್ಕ ಬಂದಾಗ ನಿನ್ನೆ ಯಾಕೆ ಅಳ್ತಿದ್ರಿ ಅಂತ ಕೇಳಬೇಕು ಅನ್ನಿಸುತ್ತಿತ್ತು. ಆದರೆ ಯಾಕೋ ಯಾವುದೋ ಅಂಜಿಕೆಯೊಂದು ನನ್ನನ್ನು ತಡೆಯುತ್ತಿತ್ತು. ಅಮ್ಮನ ಬಳಿ ಒಂದೆರಡು ಸಾರಿ ಕೇಳಿದೆನಾದರೂ ಅವರಿಂದಲೂ ಸ್ಪಷ್ಟ ಕಾರಣ ತಿಳಿಯಲಿಲ್ಲ. ಆದರೆ ಆ ಘಟನೆ ನಡೆದ ನಂತರ ಅವಳ ಮನೆಗೆ ನಾನು ಹೋಗುವುದಕ್ಕೆ ಅಮ್ಮ ಸಂಪೂರ್ಣ ನಿಷೇಧ ಹೇರಿದರು. ಇಷ್ಟಾಗಿಯೂ ನಮ್ಮ ಮತ್ತು ರತ್ನಕ್ಕಳ ಸಂಬಂಧ ಹಾಗೇ ಉಳಿದಿತ್ತು.

ಆದರೆ ಕಾರಣಾಂತರಗಳಿಂದ ಕೆಲವು ತಿಂಗಳುಗಳ ಬಳಿಕ ಆ ಊರನ್ನೂ, ತೋಟವನ್ನೂ, ಮನೆಯನ್ನೂ ಮಾರಬೇಕಾಗಿ ಬಂತು. ತೋಟಕ್ಕೆ ಹಿಡಿದ ಹುಳು ಭಾದೆ, ನಮ್ಮಿಬ್ಬರನ್ನೇ ಅಲ್ಲಿ ಉಳಿಸಲಾಗದ ಅನಿವಾರ್ಯತೆ ಎಲ್ಲವನ್ನೂ ತೊರೆದು ಬರುವಂತೆ ಮಾಡಿತು. ಅಜ್ಜ, ಅಪ್ಪ, ಅಮ್ಮ ಮನೆ ಖಾಲಿ ಮಾಡುತ್ತಿದ್ದರೆ ನನಗೆ ರತ್ನಕ್ಕಳನ್ನು ಬಿಟ್ಟು ಹೇಗೆ ಹೋಗಲಿ ಎನ್ನುವುದೇ ದೊಡ್ಡ ಚಿಂತೆಯಾಗಿತ್ತು. ಸಾಮಾನು ಪ್ಯಾಕ್ ಮಾಡುವುದರಲ್ಲಿ ರತ್ನಕ್ಕ ಅಮ್ಮನಿಗೆ ಸಹಾಯ ಮಾಡುತ್ತಿದ್ದಳಾದರೂ ಆಗಾಗ ದುಃಖ ತಡೆಯಲಾರದೆ ಧುಮುಗುಡುತ್ತಿದ್ದಳು. ಅಮ್ಮನಾದರೂ ಅಷ್ಟೇ, ಎಲ್ಲಾ ಭಾವಗಳಿಗೆ ಕಟ್ಟೆ ಕಟ್ಟಿರುವಂತೆ ಮುಗುಮ್ಮಾಗಿದ್ದರು. ಎಲ್ಲಾ ಮುಗಿಸಿ, ಆ ತೋಟಕ್ಕೆ, ಮನೆಗೆ, ಊರಿಗೆ ವಿದಾಯ ಹೇಳಿ ವ್ಯಾನ್ ಹತ್ತಬೇಕು ಅನ್ನುವಷ್ಟರಲ್ಲಿ ತನ್ನ ಮನೆಯಿಂದ ಓಡಿ ಬಂದ ರತ್ನಕ್ಕ ಒಂದು ಬೆಳ್ಳಿ ಕಾಲ್ಗೆಜ್ಜೆ ತಂದು ನನಗೆ ತೊಡಿಸಿ ನಕ್ಕಳು. ಅವಳ ಕಣ್ಣ ಕಾಡಿಗೆ ಕದಡಿತ್ತು, ಅವಳು ಹೇಳುತ್ತಿದ್ದ ಕಥೆಗಳಲ್ಲಿನ ಎಲ್ಲಾ ಕಷ್ಟ ಪರಿಹರಿಸುವ ದೇವತೆಯಂತೆಯೇ ನನಗವಳು ಕಾಣುತ್ತಿದ್ದಳು.

ಮುಂದೆ ಹೊಸ ಜಾಗ, ಹೊಸ ಮನೆ, ಹೊಸ ಕುತೂಹಲಗಳು ರತ್ನಕ್ಕಳ ನೆನಪುಗಳನ್ನು ಇಂಚಿಂಚಾಗಿ ಕಬಳಿಸಿದ್ದರೂ ಅವಳಿನ್ನೂ ನನ್ನ ಮನದಿಂದ ಪೂರ್ತಿಯಾಗಿ ಮಾಯವಾಗಿರಲಿಲ್ಲ. ಆಗೊಮ್ಮೆ ಈಗೊಮ್ಮೆ ಅವಳು ಕಾಡಿದಾಗೆಲ್ಲಾ ಝಲ್ಲೆಂದು ಸದ್ದು ಮಾಡುತ್ತಿದ್ದ ಕಾಲ್ಗೆಜ್ಜೆ ನಿಶಬ್ದವಾಗಿಬಿಡುತ್ತಿತ್ತು. ಸ್ವಲ್ಪ ದೊಡ್ಡವಳಾದಂತೆ ರತ್ನಕ್ಕ, ಅವಳ ಬದುಕು ನನಗೆ ಒಂದು ದೊಡ್ಡ ಮಿಸ್ಟರಿ ಅಂತ ಅನಿಸುತ್ತಿತ್ತು. ಈ ಬಗ್ಗೆ ಅಮ್ಮನ ಹತ್ರ ಕೇಳಿದರೆ ಹೆಚ್ಚಿನ ಮಾಹಿತಿಯೇನೂ ಸಿಗುತ್ತಿರಲಿಲ್ಲ.

ಈಗ್ಗೆ ಮೂರು ವರ್ಷಗಳ ಹಿಂದೆ ಒಂದು ಮುಂಜಾನೆ ಮನೆಯ ಬಾಲ್ಕನಿಯಲ್ಲಿ ಕೂತಿದ್ದಾಗ ಮನೆಗೆ ಬೆನ್ನು ಹಾಕಿ ತಿಳಿ ಹಸಿರು ಸೀರೆ ಉಟ್ಟ ಹೆಂಗಸೊಬ್ಬಳು ನಡೆಯುತ್ತಿದ್ದಳು. ನನ್ನ ಬಾಯಿಯಿಂದ ಅನಾಯಾಸವಾಗಿ "ರತ್ನಕ್ಕ" ಎನ್ನುವ ಪದ ಹೊರಬಿತ್ತು. ಅಲ್ಲೇ ಇದ್ದ ಅಮ್ಮ ತಿರುಗಿ ನೋಡಿದರು. ಓಡಿ ಹೋಗಿ ಆ ಹೆಂಗಸನ್ನು ನಿಲ್ಲಿಸಿ ನೋಡಿದರೆ ಆಕೆ ನನ್ನ ರತ್ನಕ್ಕ ಆಗಿರಲಿಲ್ಲ. ನಿರಾಸೆಯೊಂದು ಮೆದುಳನ್ನು ದಾಟಿ ಹೃದಯದಲ್ಲಿ ಸ್ಥಾಪಿತವಾಯಿತು.

ಅಲ್ಲಿಂದ ನಂತರ, ಒಮ್ಮೆ ರತ್ನಕ್ಕನನ್ನು ನೋಡಬೇಕು, ಮಾತಾಡಬೇಕು ಅಂತ ಬಲವಾಗಿ ಅನಿಸತೊಡಗಿತು. ಹೇಗೂ ಅಪ್ಪನನ್ನು ಒಪ್ಪಿಸಿ ಒಂದು ಶುಭ ಶುಕ್ರವಾರ ಅವಳನ್ನು ಹುಡುಕಿ ಕೊಂಡು ಹೊರಟೆವು. ತೊರೆದು ಬಂದ ಊರು, ಜನ, ತೋಟ ಮನದಂಗಳದಲ್ಲಿ ಹಾದುಹೋಗುತ್ತಿತ್ತು. ದಾರಿಗುಂಟ ರತ್ನಕ್ಕ ಸಿಗಲಿ ಅಂತ ಎಷ್ಟು ಬಾರಿ ದೇವರನ್ನು ಕೇಳಿಕೊಂಡಿದ್ದೇನೋ ಗೊತ್ತಿಲ್ಲ. 


ನಾವಿದ್ದ ಮನೆ ತಲುಪಿದಾಗ ಅಲ್ಲಿ ನಮ್ಮಿಂದ ಆ ಜಾಗ ಕೊಂಡವರು ಅಲ್ಲಿರಲಿಲ್ಲ. ಅದನ್ನು ಮತ್ಯಾರಿಗೋ ಮಾರಿ ಅವರೂ ಊರು ತೊರೆದಿದ್ದರು. ಪಕ್ಕದ ಮನೆಯವರಲ್ಲಿ ರತ್ನಕ್ಕಳ ಬಗ್ಗೆ ವಿಚಾರಿಸಿದಾಗ ಆಕೆ ಊರ ಹೊರವಲಯದಲ್ಲಿ ವಾಸಿಸುತ್ತಿದ್ದಾಳೆ ಅಂದರು. ಅಲ್ಲಿ ಹೋದಾಗ ಅವಳ ಗಂಡ ಇರಲಿಲ್ಲ. ಹರೆಯದ ಹುಡುಗನೊಬ್ಬ ಮಲಗಿದ್ದ ರತ್ನಕ್ಕನಿಗೆ ಊಟ ಮಾಡಿಸುತ್ತಿದ್ದ. ನಾವು ಹೋದದ್ದು ನೋಡಿ ಎದ್ದು ನಿಂತ, ಅಪ್ಪ ಅವನಿಗೆ ನಮ್ಮ ಪರಿಚಯ ಹೇಳಿ ಒಮ್ಮೆ ರತ್ನಕನನ್ನು ಮಾತಾಡಿಸಬೇಕಿತ್ತು ಅಂದರು. ಅವನು "ಅಮ್ಮ ನಿಮ್ಮ ಬಗ್ಗೆ ತುಂಬಾ ಹೇಳುತ್ತಿದ್ದಳು, ಆಕೆಯೀಗ ಮಾತಾಡುವ ಪರಿಸ್ಥಿತಿಯಲ್ಲಿಲ್ಲ, ಪಾರ್ಶ್ವವಾಯು ಅವಳ ಮಾತನ್ನು ಕಸಿದುಬಿಟ್ಟಿದೆ" ಅಂದ. ನಾನು ಅಷ್ಟು ಹೊತ್ತಿಗಾಗುವಾಗ ರತ್ನಕ್ಕ ಮಲಗಿದ್ದ ಹಾಸಿಗೆ ಬಳಿ ಕೂತಿದ್ದೆ. ನಡುಗುತ್ತಲೇ ಅವಳ ಕೈ ನನ್ನ ಕೈಯೊಳಗೆ ಇರಿಸಿಕೊಂಡು, ಮಾತಿನ ಮಲ್ಲಿ ರತ್ನಕ್ಕ ಈಗ ಮಾತಾಡಲಾರಳು ಅನ್ನುವ ಸತ್ಯವನ್ನು ಅರಗಿಸಿಕೊಳ್ಳಲಾಗದೆ ಮುಖ ತಿರುವಿದೆ. ಅಮ್ಮ ಅವಳ ಹೆಗಲು ಬಳಸಿ ಕೂರಿಸಿ "ರತ್ನಕ್ಕಾ" ಎಂದು ಆರ್ದ್ರವಾಗಿ ಕರೆದಳು. ಎಷ್ಟು ವರುಷಗಳಿಂದ ಇದೊಂದು ಕರೆಗಾಗಿ ಕಾಕಾಯುತ್ತಿದ್ದಳೇನೋ ಎಂಬಂತೆ ರತ್ನಕ್ಕ ಇಷ್ಟಗಲ ಬಾಯಿ ಬಿಟ್ಟು ನಕ್ಕಳು. ಅವಳ ನಗು ನೋಡಿ ನನಗೆ ಒಳಗೊಳಗೇ ಅಳು. ಅಪ್ಪ ನಮ್ಮ ಮೂವರನ್ನು ಬಿಟ್ಟು ಅವಳ ಮಗನನ್ನು ಕರೆದುಕೊಂಡು ಊರು ನೋಡಲು, ಹಳೆಯ ಗೆಳೆಯರನ್ನು ಭೇಟಿಯಾಗಲು ಹೋದ. ಅದೆಷ್ಟು ಹೊತ್ತು ನಾವು ಅವಳ ಬಳಿ ಕುಳಿತಿದ್ದೆವೋ ಗೊತ್ತಿಲ್ಲ, ಅಪ್ಪ ಬಂದು ಹೊರಡೋಣವೇ ಎಂದು ಕೇಳಿದಾಗಷ್ಟೇ ಸಮಯದ ಅರಿವಾದ್ದು. ಊರು ತೊರೆಯುವಾಗ ಅವಳು ಕೊಟ್ಟಿದ್ದ ಪುಟ್ಟ ಗೆಜ್ಜೆಯನ್ನು ಮತ್ತೆ ಅವಳೆದುರು ಹಿಡಿದೆ. ಮಗುವಂತೆ ನಕ್ಕು ಬಿಟ್ಟಳು. ಅವಳ ನಗುವನ್ನು ತುಂಬಿಕೊಂಡು ನಾವಲ್ಲಿಂದ ತಿರುಗಿ ನೋಡದೆ ಹೊರಟು ಬಂದೆವು. ನೋಡಿದರೆಲ್ಲಿ ಅವಳ ಕಣ್ಣ ಹನಿ ನನ್ನನ್ನು ಕಟ್ಟಿ ಹಾಕುತ್ತದೋ ಅನ್ನುವ ಭಯವದು.

ಮತ್ತೆ ಅವಳನ್ನು ಭೇಟಿಯಾಗಲು ಆಗಲೇ ಇಲ್ಲ. ಭೇಟಿಯಾಗಬೇಕು ಅಂದುಕೊಳ್ಳುತ್ತಲೇ ತಿಂಗಳುಗಳು ಉರುಳಿದವು. ಒಂದು ಸಂಜೆ ನಾನು ಎಕ್ಸಾಂ ಮುಗಿಸಿ ಮನೆಗೆ  ಬಂದಾಗ ಅಮ್ಮ "ರತ್ನಕ್ಕ ಹೋಗ್ಬಿಟ್ಳು, ಅಪ್ಪ ಅವಳ ಅಂತಿಮ ದರ್ಶನಕ್ಕೆ ಹೋಗಿದ್ದಾರೆ" ಅಂದಳು. ನನಗೆ ಕರುಳು ಬಳ್ಳಿ ಕಳಚಿದ ಭಾವ. ಅಳಲೂ ಆಗದೆ, ಅಳದಿರಲೂ ಆಗದ ವಿಚಿತ್ರ ಭಾವದಲ್ಲಿ ಬಿದ್ದು ಬಿಟ್ಟಿದ್ದೆ. ಅವಳೊಂದಿಗೆ ಕಳೆದ ಬಾಲ್ಯ, ಅವಳ ನೆನಪುಗಳೊಂದಿಗೆ ಕಳೆದ ಕೌಮಾರ್ಯ, ಅನಿರೀಕ್ಷಿತ ಭೇಟಿ ಇವೆಲ್ಲಾ ನನ್ನ ಬದುಕಿನ ಬುತ್ತಿಯ ಬೆಚ್ಚನೆಯ ಕೈ ತುತ್ತುಗಳು. ಫೇರಿಟೇಲ್ ಗಳ ರಾಜಕುಮಾರಿಯಾಗಿ, ಕಣ್ಣ ಕೊನೆಯ ಹನಿಯ ತೊಡೆವ ತೋರುಬೆರಳಾಗಿ, ಪ್ರಣತಿಯಾಗಿ, ನೂರು ಬಣ್ಣಗಳುಳ್ಳ ಚಿಟ್ಟೆಯ ರೆಕ್ಕೆಯಾಗಿ ರತ್ನಕ್ಕ ಸದಾ ತಾಕುತ್ತಿರುತ್ತಾಳೆ, ಥೇಟ್ ಅವಳು ಕೊಟ್ಟ ಕಾಲ್ಗೆಜ್ಜೆಯ ಘಲುವಂತೆ.