ಸೋಮವಾರ, ಜನವರಿ 11, 2016

ಬುದ್ಧನನ್ನರಸುತ್ತಾ...


ಸಾಲು ಸಾಲು ಬೋಧಿವೃಕ್ಷ
ನೆಟ್ಟಿದ್ದಾನಂತೆ ಬುದ್ಧ
ಅದೆಲ್ಲೋ ಸಾವಿರ ಗಾವುದ ದೂರ
ತಿಳಿಯದ ಹಾದಿ, ಅರಿಯದ ದಾರಿ
ಪಯಣದುದ್ದಕ್ಕೂ ಎಡರುತೊಡರುಗಳೇ

ನನಗೆ ಜ್ಞಾನೋದಯದ ಹಂಬಲವಿಲ್ಲ
ಬುದ್ಧನೇ ಅಂದಿದ್ದಾನಲ್ಲಾ
ಅತಿ ಆಸೆ ಸಲ್ಲದೆಂದು

ಅವನ ಸ್ನಿಗ್ಧ ನಗುವಿನಲಿ
ಅರೆ ನಿಮೀಲಿತ ಕಣ್ಣುಗಳಲಿ
ದಿವ್ಯ ಸ್ಥಿತಪ್ರಜ್ಞತೆಯಲಿ
ಒಮ್ಮೆ ಕಳೆದುಹೋಗಬೇಕಿದೆ ಅಷ್ಟೆ

ದಾರಿಗುಂಟ ಸಿಕ್ಕಿದ ಕಲ್ಲು
ಚುಚ್ಚಿದ ಮುಳ್ಳು
ಒಸರಿಸುತ್ತಲೇ ಇದೆ ಹನಿ ರಕ್ತವನು
ಒರೆಸಿಕೊಳ್ಳುವ ಗೋಜಿಗೂ ಹೋಗಿಲ್ಲ ನಾನು

ರಕ್ತ!!! ಅದು ಅವನ ತತ್ವ
ಧಿಕ್ಕರಿಸಿದಂತೆ ಅನ್ನುತ್ತೀರೇನೋ ನೀವು
ನನಗೊತ್ತಿಲ್ಲ
ತರ್ಕಿಸುವಷ್ಟು ಬುದ್ಧಿವಂತೆಯಲ್ಲ ನಾನು

ಹಿಂಸೆ-ಅಹಿಂಸೆ, ಆಸೆ-ನಿರಾಸೆ, ಮೋಹ-ನಿರ್ಮೋಹ
ತತ್ವ, ಪ್ರತಿಪಾದನೆಗಳಾವುವೂ ದಕ್ಕದು
ನನಗೆ ಬುದ್ಧನೆಂದರೆ
ಸ್ಥಿತಪ್ರಜ್ಞತೆ, ಸ್ನಿಗ್ಧತೆಯಷ್ಟೇ

ದಾರಿಯುದ್ದಕ್ಕೂ ಸಿಕ್ಕಿದ ವೇಷಧಾರಿ
ಬುದ್ಧರನ್ನೇ ಅಸಲಿಯೆಂದು ಭ್ರಮಿಸಿದ್ದಿದೆ
ಅವರ ಅಸಲಿಯತ್ತಿಗೆ ಸವಾಲಾಗಿ
ಇದ್ದೇ ಇದೆಯಲ್ಲ ಅವನ ನಕಲು
ಮಾಡಲಾಗದ ನಗು

ಅವನೆಟ್ಟ ಬೋಧಿವೃಕ್ಷದ ಸಾಲು
ಇನ್ನೇನು ಬೆರಳತುದಿಗೆಟುಕಿತು
ಅನ್ನುವಷ್ಟರಲ್ಲಿ ಮತ್ತದೇ ಹಳೆ
ಭ್ರಮೆಯ ಪುನರ್ಮಿಲನ

ಅವನ ಹುಡುಕಾಟದಲಿ
ಆನೆ ನಡೆಯದ್ದೂ ದಾರಿಯೇ
ಕನಸು ಕವಲೊಡೆದಿದ್ದೂ ದಾರಿಯೇ
ಅವನ ದಕ್ಕಿಸಿಕೊಳ್ಳಬೇಕೆಂದಿದ್ದರೆ
ನಡಿಗೆ ನವಿಲಾಗಬೇಕು
ಅರ್ಥ ಅರಸುತ್ತಾ
ಅವನೊಳಂದಾಗಬೇಕು

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ