ಬುಧವಾರ, ಡಿಸೆಂಬರ್ 30, 2015

ಕಾರಣವಿಲ್ಲದ ಈ ಇಷ್ಟವಾಗದಿರುವಿಕೆಗೆ ಏನು ಕಾರಣ?

ಕೆಲವೊಮ್ಮೆ ನಾವು ನೀವೆಲ್ಲರೂ ಕರಾರುವಕ್ಕಾಗಿ ಹೀಗೇ ಆಡಿಬಿಡುತ್ತೇವೆ...

ಪಂದ್ಯ ಮುಗಿಯಲು ಒಂದೇ ಒಂದು ಓವರ್ ಬಾಕಿ ಇರುತ್ತದೆ. ನಮ್ಮವರ ಗೆಲುವಿಗೆ ಬೇಕಾಗಿರುವುದು 8 ರನ್. ಎದುರಾಳಿ ಬೌಲರ್ ಡೇಲ್ ಸ್ಟೈನ್. ಕ್ರೀಸಲ್ಲಿರುವುದು ಕ್ಯಾಪ್ಟನ್ ಕೂಲ್, ಮತ್ತೊಂದು ಕಡೆ ಆರ್.ಅಶ್ವಿನ್. ಮೊದಲ ಬಾಲ್ ಗೆ ಎರಡು ರನ್. ಈಗುಳಿದಿರುವುದು ಐದೇ ಬಾಲ್. ಎರಡನೇ ಬಾಲ್ ವೇಸ್ಟ್ ಆಯ್ತು, ನೋಡ ನೋಡುತ್ತಿದ್ದಂತೆಯೇ ಮೂರನೆಯದೂ ವೇಸ್ಟ್. ತುದಿ ಬೆರಳಲ್ಲಿ ನೆಲ ಕೆರೆಯುತ್ತಾ ಒಂದು ಸಣ್ಣ ಅಸಹನೆ ಮತ್ತು ಚಡಪಡಿಕೆಯೊಂದಿಗೆ ಖುರ್ಚಿಗಂಟಿಕೊಂಡು ಕುಳಿತ ನಾವು ಒಮ್ಮೆ ಸಣ್ಣಗೆ ಕದಲುತ್ತೇವೆ. ನಾಲ್ಕನೆಯದೂ ವೇಸ್ಟ್. ಈಗ ಎರಡು ಬಾಲ್ ಗಳಲ್ಲಿ 6 ರನ್ ಬೇಕೇ ಬೇಕು. ಅಸಹನೆ ಸಿಡಿಮಿಡಿಗೆ ತಿರುಗುತ್ತದೆ. ಐದನೇ ಬಾಲ್ ಗೆ ಧೋನಿ ಬ್ಯಾಟನ್ನು ಗರಗರನೇ ತಿರುಗಿಸುತ್ತಾ ಹೆಲಿಕಾಫ್ಟರ್ ಶಾಟ್ ನೊಂದಿಗೆ ಬಾಲನ್ನು ಬೌಂಡರಿ ಗೆರೆಯಾಚೆ ದಾಟಿಸಿಬಿಡುತ್ತಾನೆ. ಅಂಪೈರ್ ಸಿಕ್ಸರ್ ಎಂದು ಕೈ ಎತ್ತುತ್ತಿದ್ದಂತೆ ಗೆಲುವು ಅಧಿಕೃತವಾಗಿ ಘೋಷಣೆಯಾಗಿಬಿಡುತ್ತದೆ. ಮನಸ್ಸು ’Waw! What a shot’ ಅಂತ ಉದ್ಗರಿಸುತ್ತದೆ. ಮರುಕ್ಷಣಾನೇ ’ಇದರಪ್ಪನಂತಹ ಸಿಕ್ಸರ್ ನಮ್ಮ ಗಂಗೂಲಿ ಬಾರಿಸುತ್ತಿರಲಿಲ್ಲವೇ? ಬಾಲ್ ಸ್ಟೇಡಿಯಂ ದಾಟಿ ರಸ್ತೆಯಲ್ಲಿ ಹೋಗುತ್ತಿದ್ದ ಕಾರಿನ ಗಾಜಿಗೆ ಬಡಿದು ಗಾಜು ಪುಡಿಯಾಗುತ್ತಿತ್ತು ಅನ್ನುವುದೇನು ಸಾಮಾನ್ಯ ವಿಷಯವೇ? ಇಷ್ಟಕ್ಕೂ ಗ್ಲೆನ್ ಮೆಕ್ ಗ್ರಾಥ್ ನಂತಹ ಬೌಲರ್ ಗಳಾಗಲೀ, ಜಾಂಟಿ ರೋಡ್ಸ್ ನಂತಹ ಫೀಲ್ಡರ್ ಗಳಾಗಲೀ ಈಗೆಲ್ಲಿದ್ದಾರೆ? ಸಮರ್ಥ ಎದುರಾಳಿಗಳಿಲ್ಲದಿದ್ದರೆ ಒಂದಲ್ಲ ಎಲ್ಲಾ ಮ್ಯಾಚ್ ಗಳನ್ನು ಗೆದ್ದು ಬಿಡಬಹುದು’ ಅಂತ ವಿತಂಡವಾದ ಮಾಡಿ ಮೊದಲು ಉದ್ಗರಿಸಿದ್ದ ಉದ್ಗಾರವನ್ನೇ ನಿವಾಳಿಸಿ ಎಸೆದು ಬಿಡುತ್ತದೆ.

ಪೂರ್ವಾಗ್ರಹಗಳನ್ನು ಬಿಟ್ಟು ಅವಲೋಕಿಸಿದರೆ ಮೆಕ್ ಗ್ರಾಥ್ ಗೂ ಡೇಲ್ ಸ್ಟೈನ್ ಗೂ ಮತ್ತು ಜಾಂಟಿ ರೋಡ್ಸ್ ಗೂ ಮೈಕಲ್ ಕ್ಲರ್ಕ್ ಗೂ ಅಂತಹ ವ್ಯತ್ಯಾಸವೇನೂ ಇಲ್ಲ ಅನ್ನುವುದು ವೇದ್ಯವಾಗುತ್ತದೆ. ಪವರ್ ಪ್ಲೇ ಐದು ಓವರ್ ಗಳಷ್ಟು ಹೆಚ್ಚಿದೆ ಅನ್ನುವುದನ್ನು ಬಿಟ್ಟರೆ ಆಟದ ನಿಯಮಗಳಲ್ಲೂ ಹೆಚ್ಚಿನ ಬದಲಾವಣೆಯೇನೂ ಆಗಿಲ್ಲ. ಮತ್ತದು ತುಂಬಾ ಸ್ಪಷ್ಟವಾಗಿ ಮನಸಿಗೂ ಗೊತ್ತಿರುತ್ತದೆ. ಆದರೆ ಅದನ್ನು ಒಪ್ಪಿಕೊಳ್ಳಲು ಮನಸ್ಸು ಸಿದ್ಧವಿರುವುದಿಲ್ಲ. ರಾಶಿ ರಾಶಿ ಸಾಕ್ಷಿಗಳನ್ನು ತಂದು ಕಣ್ಣೆದುರು ಗುಡ್ಡೆ ಹಾಕಿದರೂ ಅದರತ್ತ ಒಮ್ಮೆಯೂ ದೃಷ್ಟಿ ಹರಿಸದೆ ’ಅವನೇನು ಮಹಾ?’ ಅನ್ನುವ ವಾದಕ್ಕೆ ಜೋತುಬಿದ್ದು ಬಿಡುತ್ತದೆ.

ಹಾಗಂತ ಅವನ ಬಗ್ಗೆ ದ್ವೇಷವೇನೂ ಇರುವುದಿಲ್ಲ. ಆಳದಲ್ಲೆಲ್ಲೋ ಅಭಿಮಾನ ಬೆರೆತ ಹೆಮ್ಮೆಯೂ ಇರಬಹುದು. ಆದರೆ ಅದನ್ನೆಂದೂ ನಾವು ಒಪ್ಪಿಕೊಳ್ಳಲು ಸಿದ್ಧರಿರುವುದಿಲ್ಲ. ಅದು ಒಂಥರಾ ಪ್ರೀತಿಗೂ-ದ್ವೇಷಕ್ಕೂ ಮೀರಿದ ಭಾವ. ಅವನಿಂದ ನಮಗೆ ಯಾವ ತೊಂದರೆಯೂ ಆಗಿರುವುದಿಲ್ಲ, ಅಥವಾ ನಮ್ಮಿಂದ ಅವರೇನೂ ಕಿತ್ತುಕೊಂಡಿರುವುದೂ ಇಲ್ಲ. ಕೆಲವೊಮ್ಮೆ ನಮ್ಮ ಅಸ್ತಿತ್ವದ ಅರಿವೂ ಅವರಿಗಿರುವುದಿಲ್ಲ. ಇಷ್ಟಿದ್ದರೂ ಅವರು ನಮಗಿಷ್ಟವಲ್ಲ. ಯಾಕೆ? ಗೊತ್ತಿಲ್ಲ.

ಇದು ಕೇವಲ ಒಬ್ಬ ಧೋನಿ ಮತ್ತೊಬ್ಬ ಸೌರವ್ ಮಾತ್ರ ಅಂತಲ್ಲ. ಅಮೀರ್-ಶಾರುಖ್, ಪೇಸ್-ಭೂಪತಿ,  ಸೈನಾ-ಜ್ವಾಲಾ, ಫೆಡರರ್- ನಡಾಲ್, ಮೆಸ್ಸಿ-ಡೊನಾಲ್ಡೋ, ಧ್ಯಾನ್ ಚಂದ್- ಬಲ್ಬೀರ್ ಸಿಂಗ್, ತೇಜಸ್ವಿ-ಲಂಕೇಶ್, ಕುವೆಂಪು-ಬೇಂದ್ರೆ, ಆರ್ಯಭಟ- ಬ್ರಹ್ಮಗುಪ್ತ, ಸ್ಟಾಲಿನ್-ಲೆನಿನ್ ಹೀಗೆ ತಮ್ಮ ತಮ್ಮ ಕ್ಷೇತ್ರಗಳಲ್ಲಿ ದೈತ್ಯ ಸಾಧನೆ ಮಾಡಿದ ಇಬ್ಬರಲ್ಲಿ ಒಬ್ಬರನ್ನು  ಮನಸ್ಸು ಮುಕ್ತವಾಗಿ ಇಷ್ಟಪಡುತ್ತದೆ, for no reason. ಮತ್ತೊಬ್ಬರನ್ನು ಅದೇನೇ ಆದರೂ ಇಷ್ಟಪಡುವುದಿಲ್ಲ, once again for no reason. ಇಲ್ಲಿ ವೃತ್ತಿ, ಹೆಸರು ಬೇರೆ ಬೇರೆಯಾಗಿರಬಹುದಷ್ಟೆ, ಆದರೆ ನಮ್ಮ ಅರ್ಥೈಸುವಿಕೆವೆಯ ಪರಿಧಿಯ ಆಚೆಗಿರುವ ಮನಸಿನ ವ್ಯಾಪಾರ ಒಂದೇ ತರ.

ಈ ವೈರುಧ್ಯ ಇಷ್ಟಕ್ಕೇ ಸೀಮಿತವಲ್ಲ. ಗಮನಿಸಿ ನೋಡಿ, ಕೆಲವೊಮ್ಮೆ ನೀವು ಕಾಲೇಜಲ್ಲೋ, ಪಾರ್ಕಲ್ಲೋ, ಆಫೀಸಲ್ಲೋ ಅಥವಾ ಯಾವುದೋ ಹೋಟೆಲಲ್ಲೋ ಗೆಳೆಯನ ಜೊತೆ ಹರಟೆ ಹೊಡೆಯುತ್ತಲೋ, ಹಲವು ದಿನಗಳಿಂದ ಎದೆಯೊಳಗೆ ಬಚ್ಚಿಟ್ಟುಕೊಂದ ನೋವನ್ನು ಹಂಚಿ ಹಗುರಾಗುತ್ತಲೋ ಇರುತ್ತೀರಿ. ತೀರಾ ಅನಿರೀಕ್ಷಿತವಾಗಿ ಅಪರಿಚಿತನೊಬ್ಬ ಅಲ್ಲಿಗೆ ಬರುತ್ತಾನೆ. ಆತ ನಿಮ್ಮ ಗೆಳೆಯನ ಗೆಳೆಯನೋ, ಸಂಬಂಧಿಯೋ, ಅಣ್ಣನೋ, ತಮ್ಮನೋ, ಭಾವನೋ, ಸಹೋದ್ಯೋಗಿಯೋ ಆಗಿರುತ್ತಾನೆ. ಒಂದೆರಡು ನಿಮಿಷಗಳ ಮಟ್ಟಿಗೆ ನಿಮ್ಮ ಗೆಳೆಯನ ಜೊತೆ ಮಾತನಾಡಿ ಆತ ಹೊರಟು ಹೋಗುತ್ತಾನೆ. ಅದ್ಯಾಕೋ ಗೊತ್ತಿಲ್ಲ, ನಿಮ್ಮಲ್ಲೊಂದು ಸಣ್ಣದಾದ
ಅಸಹನೆ ಹುಟ್ಟಿಕೊಳ್ಳುತ್ತದೆ, ವಿನಾಕಾರಣ ಅವನ ಬಗ್ಗೆ ಒಂದು ತಾತ್ಸಾರ ಮೊಳಕೆಯೊಡೆಯುತ್ತದೆ. ಅವನ ಬಗ್ಗೆ ನಿಮಗೇನೂ ದ್ವೇಷವಿರುವುದಿಲ್ಲ, ಯಾವ ದಿಕ್ಕಿನಿಂದ ನೋಡಿದರೂ ನಿಮಗೂ ಅವನಿಗೂ ಯಾವ ಬಾದರಾಯಣ ಸಂಬಂಧವೂ ಇರುವುದಿಲ್ಲ.  ಅಸಲಿಗೆ ಹಿಂದೆಂದೂ ಅವನನ್ನು ನೀವು ನೋಡಿಯೇ ಇರುವುದಿಲ್ಲ ಮತ್ತು ಮುಂದೆಂದೂ ಅವನನ್ನು ಮತ್ತೆ ಭೇಟಿಯಾಗಬೇಕಾದ ಸಂಭವವೂ ಬರುವುದಿಲ್ಲ. ಕಣ್ಣಲ್ಲಿ ಕಣ್ಣಿಟ್ಟು ನೋಡಿದರೂ ಅವನ ನಡೆ-ನುಡಿ, ಭಾಷೆ-ಭಾವನೆ, ರೀತಿ ರಿವಾಜುಗಳಲ್ಲಿ ಒಂದಿನಿತೂ ತಪ್ಪು ಕಂಡುಹಿಡಿಯಲಾರಿರಿ. ಇಷ್ಟಿದ್ದರೂ ಆತ ನಿಮ್ಮೊಳಗೆ ಒಂದು ಅಸಹನೆ, ತಿರಸ್ಕಾರ, ತಾತ್ಸಾರ, ಅವ್ಯಕ್ತ ಕಿರಿಕಿರಿಯನ್ನು ಹುಟ್ಟುಹಾಕುತ್ತಾನೆ.

ಕಾರಣವಿಲ್ಲದ ಈ ’ಇಷ್ಟವಾಗದಿರುವಿಕೆಗೆ’ science ಇನ್ನೂ ಸರಿಯಾದ ವ್ಯಾಖ್ಯೆ ಕೊಟ್ಟಿಲ್ಲ, ಸಿಗ್ಮಂಡ್ ಫ್ರಾಯ್ಡ್ ನಂತಹ ಮಹಾ ಮನಶಾಸ್ತ್ರಜ್ಞರಿಗೂ ಈ ವಿಕರ್ಷಣೆಗಿರುವ ಅಸಲಿ ಕಾರಣ ಕಂಡುಹಿಡಿಯಲಾಗಿಲ್ಲ, ನ್ಯಾನೋ ಟೆಕ್ನಾಲಜಿಗೂ ನಿಲುಕದ ಸಂಗತಿಯಿದು. ಇಂಗ್ಲಿಷ್ ಬಲ್ಲ ಕೆಲವರು ಇದನ್ನು body chemistry ಅನ್ನುತ್ತಾರೆ. ಹಾಗಂತ Biologyಯಲ್ಲೋ, Chemistryಯಲ್ಲೋ ಈ ವೈಪರೀತ್ಯಕ್ಕೆ ಕಾರಣ ಹುಡುಕಹೋದರೆ ಅಲ್ಲಿಯೂ ನಿರಾಶೆಯ ಹೊರತು ಇನ್ನೇನೂ ದಕ್ಕದು.  ಕೆಲವು ಅತಿ ಬುದ್ಧಿವಂತರು ಜನ್ಮ ಜನ್ಮಾಂತರಗಳಷ್ಟು ಹಿಂದಕ್ಕೆ ಚಲಿಸಿ ಹಿಂದಿನ ಯಾವುದೋ ಒಂದು ಜನ್ಮದಲ್ಲಿ ಇಬ್ಬರ ಮಧ್ಯೆ ಇದ್ದ ಶತ್ರುತ್ವ ಹೀಗೆ ಪ್ರಕಟವಾಗಿದೆ ಅನ್ನುತ್ತಾರೆ. ಆದ್ರೆ ನಿಜಕ್ಕೂ ಮನಸ್ಸಿನ ಈ ವಿರೋಧಾಭಾಸಕ್ಕೆ ಕಾರಣವೇನು? ಅದು ಸುಪ್ತ ಮನಸ್ಸಿನ ವಿಹ್ವಲತೆಯೇ? ಒಳಗೆಲ್ಲೋ ಬೀಡು ಬಿಟ್ಟಿರುವ ಅಭದ್ರತಾ ಭಾವನೆಯ ಇನ್ನೊಂದು ರೂಪವೇ? ಅಥವಾ ಮತ್ಸರವೇ? ಅಥವಾ ಇವೆಲ್ಲವೂ ಒಟ್ಟುಗೂಡಿದ ಒಂದು ಸ್ಥಿತಿಯೇ? ನನಗೊತ್ತಿಲ್ಲ.

ನಿಮಗೇನಾದರೂ ಗೊತ್ತಿದ್ದರೆ ನನಗೂ ಹೇಳಿಬಿಡಿ...

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ