ಬುಧವಾರ, ಡಿಸೆಂಬರ್ 2, 2015

ಅಳುವ ಈ ದಿಟ್ಟ ಹುಡುಗಿ ನಿಮ್ಮದೇ ಮನೆ ಮಗಳಾಗಿರಬಹುದು...

ಅದೊಂದು ಕಾಲೇಜ್ ವಾರ್ಷಿಕೋತ್ಸವ ಸಮಾರಂಭ. ಅಲ್ಲೊಬ್ಬ ಹುಡುಗಿ. ಹೆಸರು...? ಕೌಸಲ್ಯಾ, ಕೌಸರ್, ಕ್ಯಾಟ್ಲಿನ್   ಅಥವಾ ಇನ್ನಾವುದೋ ಒಂದು. ನಿಮಗಿಷ್ಟ ಬಂದ ಹೆಸರು ಇಟ್ಕೊಳ್ಳಿ. ಗೆಳತಿಯರ ಒತ್ತಡ ತಾಳಲಾರದೆ ಮೊದಲ ಬಾರಿ ಸೀರೆ ಉಟ್ಟು, ತನ್ನ ಸ್ವಭಾವಕ್ಕೆ ಒಗ್ಗಿ ಬರದ ಹೈಹೀಲ್ಡ್ ಚಪ್ಪಲಿ ಮೆಟ್ಟಿದ್ದಳು. ಕೈಗೊಮ್ಮೆ, ಕಾಲಿಗೊಮ್ಮೆ ತೊಡರಿಕೊಳ್ಳುತ್ತಿದ್ದ ಸೀರೆಯನ್ನು ಮನಸ್ಸಲ್ಲೇ ಶಪಿಸುತ್ತಾ ಪದೇ ಪದೇ ತನ್ನ ಗೆಳತಿಯ ಬಳಿ "ಇದನ್ನು ಬಿಚ್ಚಿ ಹಾಕಿ ಚೂಡಿದಾರ್ ಹಾಕ್ಕೊಳ್ಳಾ?" ಅಂತ ಕೇಳುತ್ತಿದ್ದಳು.  ಅವಳ ಗೆಳತಿ ಅವಳಷ್ಟೇ ಮುನಿಯುತ್ತಾ "ಇದೊಂದಿನ ಅಡ್ಜಸ್ಟ್ ಮಾಡ್ಕೊಳ್ಳೇ ಮಾರಾಯ್ತಿ" ಅನ್ನುತ್ತಾ ಅವಳನ್ನು ಸುಮ್ಮನಿರಿಸಲು ಪ್ರಯತ್ನಿಸುತ್ತಿದ್ದಳು. ಅಷ್ಟರಲ್ಲಿ ಸಮಾರಂಭದ ಅತಿಥಿಗಳ ಪಟ್ಟಿಯಲ್ಲಿದ್ದ ಹಿರಿಯರೊಬ್ಬರು ವೇದಿಕೆ ಹತ್ತಲು ಕಷ್ಟಪಡುತ್ತಿದ್ದುದು ನಮ್ಮ ಕಥಾನಾಯಕಿಯ ಕಣ್ಣಿಗೆ ಬಿತ್ತು. ತಾನು ಸೀರೆ ಉಟ್ಟಿದ್ದೇನೆ ಅನ್ನುವುದನ್ನೂ ಮರೆತು ಆಕೆ ಸ್ಟೇಜ್ ಬಳಿ ಓಡಿ ಹೋಗಿ, ಅವರ ಕೈಹಿಡಿದು ವೇದಿಕೆ ಹತ್ತಿಸಿ ಖುರ್ಚಿಯಲ್ಲಿ ಕೂರಿಸಿದಳು. ಇನ್ನೇನು ವೇದಿಕೆ ಇಳಿಯಬೇಕು ಅನ್ನುವಷ್ಟರಲ್ಲಿ ಯಾಕೋ ಅವರಿಗೊಮ್ಮೆ ನಮಸ್ಕರಿಸಬೇಕು ಅನ್ನಿಸಿ ಮತ್ತೆ ಹಿಂದಿರುಗಿ ಬಂದು ಕೈ ಜೋಡಿಸಿದಳು. ಆ ಹಿರಿಯರು "ಹತ್ತು ಗಂಡು ಮಕ್ಕಳನ್ನು ಹೆತ್ತು ಸುಖವಾಗಿ ಬಾಳು ತಾಯಿ" ಅಂದರು. ಜೋಡಿಸಿದ್ದ ಕೈಯನ್ನು ಇಳಿಸಿ " ಯಾಕೆ ಅಂಕಲ್, ಹೆಣ್ಣು ಮಗೂನ ಹೆತ್ರೆ ಸುಖವಾಗಿರೋಕೆ ಆಗಲ್ವಾ?" ಅಂತ ಪ್ರಶ್ನಿಸಿದಳು. ಒಮ್ಮೆ ಗಲಿಬಿಲಿಗೊಂಡ ಅವರು "ನೀನು ಸ್ತ್ರೀವಾದಿಯಾ?" ಅಂತ ಮತ್ತೆ ಪ್ರಶ್ನಿಸಿದರು. ಇವಳು " ಇಲ್ಲ, ನಾನು ಮಾನವತಾವಾದಿ" ಅಂತಂದು ಸ್ಟೇಜ್ ಇಳಿದಳು. ಅವಳ ದಿಟ್ಟತೆಗೆ, ಹೆಣ್ಣಿಂದ ಅಸುಖ ಅನ್ನುವ ವಿವೇಚನಾರಹಿತ ಯೋಚನೆಯ ಹಿಂದಿರುವ ಮನಸ್ಥಿತಿಯ ಬಗ್ಗೆ ಅವಳಿಗಿರುವ ಸೂಕ್ಷ್ಮ ಅಸಹನೆಗೆ ಅವತ್ತು ಇಡೀ ವೇದಿಕೆ ತಲೆದೂಗಿತ್ತು.

ಹೀಗಿದ್ದ ಆ ಹುಡುಗಿ ಒಂದಿನ, ಕಾಲೇಜ್ ಪಕ್ಕದಲ್ಲಿರುವ ಕಾಲು ದಾರಿಯಲ್ಲಿ ನಡೆದು ಬರುವ ಜೂನಿಯರ್ ಹುಡುಗಿಯೊಬ್ಬಳನ್ನು ಚುಡಾಯಿಸಿದ ಅನ್ನುವ ಕಾರಣಕ್ಕಾಗಿ ಸ್ಟುಡೆಂಟ್ ಸೆಕ್ರೆಟರಿಗೆ ಇಡೀ ಕಾಲೇಜಿನ ಮುಂದೆ ಚೆನ್ನಾಗಿ ಝಾಡಿಸಿದಳು. ಆ ಹುಡುಗನೋ...? ಅವಕಾಶ ಸಿಕ್ಕಾಗೆಲ್ಲಾ ಪರಮ ಸಂಭಾವಿತನಂತೆ ಫೋಸ್ ಕೊಡುತ್ತಾ, ಆತ್ಮರತಿಗಾಗಿ ಒಂದಿಷ್ಟು ಹುಡುಗರ ಗ್ಯಾಂಗ್ ಕಟ್ಟಿಕೊಂಡು, ತನ್ನಲ್ಲಿ ಇಲ್ಲದಿರುವ ಗುಣಗಳು ಇದೆಯೆಂದು ಮತ್ತೊಬ್ಬರನ್ನು ನಂಬಿಸುತ್ತಾ ಕಾಲ ಕಳೆಯುತ್ತಿದ್ದ ಧೂರ್ತ. ಹೈಸ್ಕೂಲಿನಿಂದಲೂ ಅವನದೇ ಶಾಲೆಯಲ್ಲಿ ಓದಿದ ಆ ಹುಡುಗಿಗೆ ಅವನ ಧೂರ್ತತನದ ಬಗ್ಗೆ ಚೆನ್ನಾಗಿ ಗೊತ್ತಿದ್ದುದರಿಂದ ಆಕೆ ಇವಳನ್ನು ತಡೆಯಲು ತುಂಬಾ ಪ್ರಯತ್ನಪಟ್ಟಳು. ಆದ್ರೆ ನಮ್ಮ ಈ ಕಥಾನಾಯಕಿ ಅದ್ಯಾವುದನ್ನೂ ಲೆಕ್ಕಿಸದೆ ಎಲ್ಲರ ಮುಂದೆ ಅವನ ಮುಖದ ನೀರಿಳಿಸಿದ್ದಳು. ಆತನೂ ಅಷ್ಟೆ, ತಪ್ಪು ಒಪ್ಪಿಕೊಳ್ಳುವವನಂತೆ ತಲೆ ತಗ್ಗಿಸಿ "sorry sister" ಅಂದು ತನ್ನ ಬೈಕ್ ಸ್ಟಾರ್ಟ್ ಮಾಡಿ ಮನೆಗೆ ಮರಳಿದ್ದ. ಅಲ್ಲಿಗೆ ಎಲ್ಲವೂ ಮುಗಿಯಿತೆಂದು ಎಲ್ಲರೂ ಭಾವಿಸಿದ್ದರು.

ಆದ್ರೆ ಅದು ಅಷ್ಟಕ್ಕೆ ಮುಗಿದಿರಲಿಲ್ಲ. ಮರುದಿನ ಆಕೆ ಕಾಲೇಜಿಗೆ ಬರುವ ಹೊತ್ತಿಗೆ, ಬ್ಲ್ಯಾಕ್ ಬೋರ್ಡ್, ಟಾಯ್ಲೆಟ್ ಗೋಡೆ, ಪ್ರಯೋಗಾಲಯ, ಕ್ಯಾಂಪಸ್ ನ ಮರಗಳು, ಕ್ಲಾಸ್ ರೂಮ್ ಕಾರ್ನರ್ ಅಂತ ಸಿಕ್ಕ ಸಿಕ್ಕಲ್ಲೆಲ್ಲಾ ಅವಳ ಬಗ್ಗೆ, ಅವಳ ನಡತೆಯ ಬಗ್ಗೆ, ಅವಳಿಗೂ ಅವಳ ಮೆಚ್ಚಿನ ಸರ್ ಗೂ ಇಲ್ಲದ ಸಂಬಂಧ ಕಲ್ಪಿಸಿ ಅಸಹ್ಯವಾಗಿ ಯಾರೋ ಗೀಚಿ ಬಿಟ್ಟಿದ್ದರು. ಹಿಂದಿನ ದಿನ ನಡೆದುದರ ಪರಿಣಾಮವಿದು ಅನ್ನುವುದು ಅರ್ಥವಾಗಲು ಆಕೆಗೆ ಹೆಚ್ಚು ಸಮಯವೇನೂ ಹಿಡಿಯಲಿಲ್ಲ. ಆದ್ರೆ ಇಂಥವರದೇ ಕೆಲಸವೆಂದು ಬೊಟ್ಟು ಮಾಡಿ ತೋರಿಸಲು ಆಕೆಯ ಬಳಿ ಯಾವುದೇ ಸಾಕ್ಷಿಗಳಿರಲಿಲ್ಲ.

ಇಷ್ಟಾದರೂ ಆಕೆ ಧೃತಿಗೆಡಲಿಲ್ಲ. ಎಲ್ಲಾ ಮುಗಿದೇ ಹೋಯಿತು ಎಂಬಂತೆ ಅಳುತ್ತಾ ಕೂರಲಿಲ್ಲ. ಇಷ್ಟೆಲ್ಲಾ ಆಗಿದ್ದು ನನ್ನಿಂದಲೇ ಅಂತ ಅಳುತ್ತಿದ್ದ ಜೂನಿಯರ್ ಹುಡುಗಿಯ ಬಳಿ ಹೋಗಿ "ಬರ್ದಿರೋದು ನನ್ನ ಬಗ್ಗೆ, ನಾನೇ ಆರಾಮವಾಗಿರುವಾಗ ನೀನೇಕೆ ಸುಮ್ಮನೆ ತಪ್ಪೆಲ್ಲಾ ನಿನ್ನದು ಅನ್ನುವಂತೆ ಅಳ್ತಿದ್ದಿಯಾ? Be a brave girl" ಅಂದು ಬೆನ್ನು ತಟ್ಟಿ ಎದ್ದು ಹೋಗಿ ಪ್ರತಿ ಗೋಡೆ, ಕಾರ್ನರ್, ಮರಗಳ ಮೇಲಿದ್ದ ಬರಹಗಳನ್ನು ಒಂದಕ್ಷರಾನೂ ಬಿಡದೆ ಓದಿ, ಏನೂ ಆಗೇ ಇಲ್ಲವೆಂಬಂತೆ ನಸುನಗುತ್ತಾ ಕ್ಲಾಸಿಗೆ ನಡೆದುಬಂದಳು. ಸದಾ ಆತ್ಮವಿಶ್ವಾಸದಿಂದಿರುವ ಈ ಹುಡುಗಿಯ ಕಣ್ಣಲ್ಲಿ ಇವತ್ತಾದರೂ ಹನಿ ಜಿನುಗಿರಬಹುದಾ ಅಂತ ಅವಲೋಕಿಸಿದರೆ, ಊಹೂಂ, ಅಲ್ಲಿ ನೀರ ಪಸೆಯೂ ಇರಲಿಲ್ಲ. ಅವಳು ಎಂದಿಗಿಂತಲೂ ತುಸು ಹೆಚ್ಚೇ ಅನ್ನುವಷ್ಟು ದೃಢವಾಗಿದ್ದಳು.

ಅಷ್ಟೇ ಅಲ್ಲ, ಬ್ರೇಕ್ ಆಗುತ್ತಿದ್ದಂತೆ ಸ್ಟಾಫ್ ರೂಮಿಗೆ ಹೋಗಿ, ತಲೆ ಮೇಲೆ ಕೈ ಹೊತ್ತು ಕುಳಿತ ತನ್ನ ಉಪನ್ಯಾಸಕರನ್ನು ಕುರಿತು " ಯಾರೋ ಅವಿವೇಕಿಗಳು ಏನೋ ಗೀಚಿದ್ರು ಅಂತ ನೀವ್ಯಾಕೆ ಸರ್ ತಲೆಕೆಡಿಸ್ಕೋತೀರಾ? ಅವ್ರೆಲ್ಲಾ ಮುಂದೆ ನಿಂತು ಹೋರಾಡೋಕೆ ಧೈರ್ಯವಿಲ್ಲದ ಹೇಡಿಗಳು. ಅಂಥವರಿಗೆ ನಾವ್ಯಾಕೆ ಬೆಲೆ ಕೊಡ್ಬೇಕು?" ಅಂದಳು. ತನ್ನ ಇಮೇಜ್ಗಿಂತಲೂ ಅವಳೇನು ಮಾಡಿಕೊಳ್ಳುತ್ತಾಳೋ ಅಂತ ಹೆದರಿದ್ದ ಅವರು ಇವಳ ಮಾತು ಕೇಳಿ "ನಿಂಗೇನೂ ಅನ್ನಿಸುವುದೇ ಇಲ್ವಾ? ಸಮಾಜ ನಿನ್ನ ಬಗ್ಗೆ ಏನೇನೋ ಮಾತಾಡಿಬಿಡುತ್ತೆ ಅಂತ ಭಯವಾಗುವುದಿಲ್ವಾ?" ಅಂತ ಕೇಳಿದರು. ಅವಳು "ನನ್ನ ಆತ್ಮಶುದ್ಧಿಯ ಬಗ್ಗೆ ನಂಗೆ ಅನುಮಾನಗಳೇ ಇಲ್ಲದಿರುವಾಗ ಯಾರೋ ಏನೋ ಅಂದ ಮಾತ್ರಕ್ಕೆ ನಾನೇಕೆ ಭಯಪಟ್ಟುಕೊಳ್ಳಬೇಕು? ನಂಗೆ ಯಾಕಾದ್ರೂ ಏನೇನೋ ಅನ್ನಿಸಬೇಕು?" ಅಂತ ಮರು ಪ್ರಶ್ನಿಸಿದಳು. ಮತ್ತು ಆ ಮೂಲಕವೇ ತಾನೇನೂ ಮಾಡಿಕೊಳ್ಳುವುದಿಲ್ಲ ಅಲ್ಲಿದ್ದ ಎಲ್ಲರಿಗೂ ಪರೋಕ್ಷವಾಗಿ ತಿಳಿಸಿ ಹೊರಬಂದಳು.

ಇತ್ತ, ಇನ್ನೇನು ಅಳುತ್ತಾಳೆ, ರಂಪ ಮಾಡುತ್ತಾಳೆ, ’ನನ್ನಿಂದ ತಪ್ಪಾಯ್ತು, ಕ್ಷಮಿಸಿ’ ಅಂತ ನಮ್ಮ ಮುಂದೆ ನಿಂತು ಗೋಗರೆಯುತ್ತಾಳೆ, ಗೋಡೆಯ ಮೇಲಿನ ಅಷ್ಟೂ ಬರಹಗಳನ್ನು ಅಳಿಸಲು ಇನ್ನಿಲ್ಲದಂತೆ ಪ್ರಯತ್ನಿಸುತ್ತಾಳೆ ಅಂತೆಲ್ಲಾ ಮನಸ್ಸಲ್ಲೇ ಮಂಡಿಗೆ ಮೆಲ್ಲುತ್ತಿದ್ದವರಿಗೆ, ಹಾಗೇನೂ ಆಗದೆ, ಆಕೆ ಆ ಘಟನೆಗೂ ನನಗೂ ಸಂಬಧವೇ ಇಲ್ಲ ಅನ್ನುವಂತೆ ನಡೆದುಕೊಂಡದ್ದು ನುಂಗಲಾರದ ತುತ್ತಾಗಿತ್ತು. ಅವಳ ರೇಗಿಸಬೇಕೆಂದುಕೊಂಡಿದ್ದ, ತಮ್ಮ ಅಹಂಕಾರದ ಮುಂದೆ ಅವಳನ್ನು ಮಂಡಿಯೂರಿಸಬೇಕೆಂದು ಕೊಂಡಿದ್ದ, ಇನ್ನೆಂದೂ ಅವಳು ನಮ್ಮನ್ನು ಪ್ರಶ್ನಿಸಿದಂತೆ ಮಾಡಬೇಕು ಅಂದುಕೊಂಡಿದ್ದ ಯಾವ ಅವಕಾಶಗಳನ್ನು ಆಕೆ ಅವರಿಗೆ ಒದಗಿಸಿರಲಿಲ್ಲ. ಅತ್ಯಂತ ಪ್ರಬುದ್ಧವಾಗಿ ಪರಿಸ್ಥಿತಿಯನ್ನು ನಿರ್ವಹಿಸಿದ ಅವಳು ’ನಿಮ್ಮ ಅಹಂಕಾರಕ್ಕೆ ತಲೆಬಾಗುವಷ್ಟು ದುರ್ಬಲ ವ್ಯಕ್ತಿತ್ವವಲ್ಲ ನನ್ನದು’ ಅನ್ನುವ ಸಂದೇಶವನ್ನು ತನ್ನ ಉದಾಸೀನತೆಯ ಮೂಲಕವೇ ರವಾನಿಸಿದ್ದಳು.

ಆದ್ರೆ ಇನ್ನೇನು ಅವತ್ತಿನ ಕೊನೆಯ ಅವಧಿ ಮುಗಿಯಲು ಹತ್ತು ನಿಮಿಷಗಳಿವೆ ಅನ್ನುವಾಗ ಕಾಲೇಜ್ ಮ್ಯಾನೇಜರ್ ಅವಳನ್ನು ತನ್ನ ಛೇಂಬರ್ ಗೆ ಕರೆಸಿಕೊಂಡು "ನೋಡಮ್ಮಾ, ಪೊಲೀಸ್, ಕೇಸು, ಕೋರ್ಟ್, ಕಛೇರಿ ಅಂತೆಲ್ಲಾ ಹೋದ್ರೆ ಕಾಲೇಜಿನ ಪ್ರತಿಷ್ಠೆಗೆ ಕುಂದು. ಹಾಗಾಗಿ ಈ ಪ್ರಕರಣ ಠಾಣೆ ಮೆಟ್ಟಿಲು ಹತ್ತುವುದು ಬೇಡ. ನಾವೇ ಆಂತರಿಕ ತನಿಖೆ ಮಾಡಿ ತಪ್ಪಿತಸ್ಥರನ್ನು ಡಿಬಾರ್ ಮಾಡುತ್ತೇವೆ" ಅಂತ ಅವಳು ಠಾಣೆಯ ಮೆಟ್ಟಿಲು ಹತ್ತಬಾರದೆಂದು ಪರೋಕ್ಷವಾಗಿ ಎಚ್ಚರಿಕೆ ನೀಡಿದರು. ಕಾಲೇಜಿನ ಪ್ರತಿಷ್ಠೆಗೋಸ್ಕರ ಒಬ್ಬ ಹೆಣ್ಣಿನ , ಅದೂ ತನ್ನದೇ ಕಾಲೇಜಿನ ವಿದ್ಯಾರ್ಥಿನಿಯೊಬ್ಬಳ ಮಾನವನ್ನೂ ಪಣಕ್ಕಿಡಲು ಸಿದ್ಧವಿರುವ ಅವರ ವ್ಯಾಪಾರೀ ಮನೋವೃತ್ತಿಯ ಬಗ್ಗೆ ಹೊಟ್ಟೆಯಾಳದಿಂದ ಎದ್ದು ಬಂದ ಅಸಹ್ಯವನ್ನು ಸಾಧ್ಯವಾದಷ್ಟು ಅದುಮಿಡಲು ಪ್ರಯತ್ನಿಸುತ್ತಾ " ಆಂತರಿಕ ತನಿಖೆಗಳೆಂಬ ನಾಟಕಗಳೇ ಬೇಡ ಸರ್. ನನ್ನ ಮಾನಸಿಕ ಸ್ಥೈರ್ಯವನ್ನು ಕುಗ್ಗಿಸುವ ಮೂಲಕ ಅವರನ್ನು ಪ್ರಶ್ನಿಸುವ ಮನಸ್ಥಿತಿ ಇರುವವರೇ ಇಲ್ಲವಾಗಬೇಕು ಅನ್ನುವುದೇ ಅವರ ಉದ್ದೇಶವಾಗಿತ್ತು. ಅದೇ ಅವರಿಂದ ಸಾಧ್ಯವಾಗಿಲ್ಲ ಅಂದಮೇಲೆ ನಾನೇಕೆ ಹೊಲಸನ್ನು ಮೈಮೇಲೆ ಎರಚಿಕೊಳ್ಳುವ ಅಸಹ್ಯ ಮಾಡಿಕೊಳ್ಳಲಿ? ಆದ್ರೆ ಸರ್, ಹೀಗೆ ಹೆಣ್ಣೊಬ್ಬಳ ನಡತೆಯ ಬಗ್ಗೆ ಹೀಗೆಲ್ಲಾ ಗೀಚಿ ತಮ್ಮ ಮನಸ್ಸಿನ ವಿಕೃತಿ ಹೊರಹಾಕಿದವರ ಬಗ್ಗೆ ಒಂದು ಮಾತೂ ಆಡದೆ ಕಾಲೇಜಿನ ಪ್ರತಿಷ್ಠೆ ಅಂತ ನನಗೇ ಎಚ್ಚರಿಕೆ ನೀಡುತ್ತಿದ್ದೀರಲ್ಲಾ? ಒಂದು ವೇಳೆ ಇದೇ ರೀತಿ ನಿಮ್ಮ ಮನೆಯಲ್ಲೊಬ್ಬರ ಬಗ್ಗೆ ಹೀಗೆ ಯಾರೋ ಸಾರ್ವಜನಿಕವಾಗಿ ಕೆಸರೆರೆಚಿದರೆ ಆಗಲೂ ನೀವು ಇಷ್ಟೇ ನಿಷ್ಠುರವಾಗಿ ಮಾತಾಡುತ್ತಿದ್ದಿರಾ?" ಎಂದು ಪ್ರಶ್ನಿಸಿ ಅವರ ಛೇಂಬರ್ ನಿಂದ ಹೊರಗಡಿಯಿಟ್ಟಳು.

ಹಾಗೆ ಬಂದವಳು ಕಾಲೇಜು ನಿರ್ಮಾನುಷ್ಯವಾಗಿದೆ ಅನ್ನುವುದನ್ನು ಖಚಿತಪಡಿಸಿಕೊಂಡು ಅಲ್ಲೇ ಇದ್ದ ಲೇಡೀಸ್ ರೂಮ್ ಹೊಕ್ಕು ಒಳಗಿಂದ ಅಗುಳಿ ಹಾಕಿ ಬೋರಿಟ್ಟು ಅಳತೊಡಗಿದಳು. ಬೆಳಗ್ಗಿನಿಂದ ತಡೆಹಿಡಿದುಕೊಂಡಿದ್ದ ಕಣ್ಣೀರು ಬಿರುಸು ಭರಿಸಲಾಗದೆ ಇನ್ನು ಸಾಧ್ಯವೇ ಇಲ್ಲ ಎಂಬಂತೆ ಎರಡೂ ಕಣ್ಣುಗಳಿಂದ ದಳದಳನೆ ಉರುಳತೊಡಗಿತು. ಇಡೀ ಕಾಲೇಜಲ್ಲಿ brave girl ಅಂತ ಅನ್ನಿಸಿಕೊಂಡವಳು ’ತನ್ನನ್ನು ಸಾಂತ್ವನಿಸಲು ಹೆಗಲೊಂದು ಇರುತ್ತಿದ್ದರೆ...?’ ಅಂತ ಒಂಟಿಯಾಗಿ ಹಂಬಲಿಸತೊಡಗಿದಳು. ’ಇಷ್ಟು ದೊಡ್ಡ ಪ್ರಪಂಚದಲ್ಲಿ ನಾನು ಎಷ್ಟೊಂದು ಒಂಟಿ, ಕೆಲವರ ಪಾಲಿಗೆ ನಾನು "ಅವಳಾ? ಸಹಿಸ್ಕೋತಾಳೆ ಬಿಡು" ಅನ್ನುವ ನಿರ್ಲಕ್ಷ್ಯ, ಇನ್ನು ಕೆಲವರ ಪಾಲಿಗೆ "ಎಲ್ಲವನ್ನೂ ಎದುರಿಸುವ ಧೈರ್ಯ ದೇವರು ಅವಳಿಗೆ ನೀಡಿದ್ದಾನೆ, ನಮಗೇಕೆ ಅವಳ ಉಸಾಬರಿ?" ಅನ್ನುವ ಮತ್ಸರ. ಆದ್ರೆ ನನಗೇನು ಬೇಕು ಅನ್ನುವುದನ್ನು ಕೇಳುವ ಒಂದು ಜೀವವೂ ನನ್ನ ಜೊತೆಗಿಲ್ಲ. ಅಳಬೇಕೆನಿಸಿದಾಗೆಲ್ಲಾ ಅಳಲಾಗದ, ಏನೇ ಆದರೂ ಏನೂ ಆಗಿಲ್ಲವಂಬತೇ ಇರಬೇಕಾದ ನನ್ನ ಅಸಹಾಯಕತೆ, ಧೈರ್ಯ, ಸ್ಥೈರ್ಯ, ಬುದ್ಧಿವಂತಿಕೆಗಳಂತಹ ದೊಡ್ಡ ದೊಡ್ದ ಮಾತುಗಳಾಚೆ ನಾನೂ ಮನುಷ್ಯಳೇ, ಎಲ್ಲರಂತೆ ನನಗೂ ನೋವಾಗುತ್ತದೆ, ನನ್ನೊಳಗೂ ವಿಷಾದಗಳಿವೆ ಅನ್ನುವ ಸತ್ಯ ಯಾರೂ ಅರ್ಥಮಾಡಿಕೊಳ್ಳುವುದೇ ಇಲ್ಲ’ ಅಂತೆಲ್ಲಾ ಅವಳಿಗೆ ಅನ್ನಿಸತೊಡಗಿತು. ಮರುಕ್ಷಣ, ’ಹೀಗೆಲ್ಲಾ ಒಂಟಿಯಾಗಿ ಕೂತು ಅತ್ತರೆ ನನ್ನೆಲ್ಲಾ ಸಮಸ್ಯೆಗಳು ಬಗೆಹರಿಯುತ್ತಾ? ಹೀಗೆ ಆತ್ಮವಿಶ್ವಾಸ ಕಳ್ಕೊಂಡು ಮೂಲೆ ಸೇರಿ ಅತ್ರೆ ನಗುವವರ ಮುಂದೆ ಎಡವಿ ಬಿದ್ದಂತಾಗುದಿಲ್ಲವೇ? ಇಷ್ಟಕ್ಕೂ ನಾನು ತಪ್ಪು ಮಾಡಿಲ್ಲ ಅಂದಮೇಲೆ ಅಳುವುದಾದರೂ ಯಾಕೆ? ಕೇವಲ ಗೋಡೆಯ ಮೇಲಿನ ಬರಹ ನನ್ನ ಸ್ಥಿರತೆಯನ್ನೇ ಕದಡಿ ಹಾಕುವಷ್ಟು ಶಕ್ತಿಯುತವಾಗಿದೆಯೇ?  ಅಂದ್ರೆ ಸಣ್ಣದೊಂದು ಸವಾಲನ್ನು ಎದುರಿಸಲಾರದಷ್ಟು ನನ್ನ ಆಂತರ್ಯ ಬಲಹೀನವಾಗಿದೆಯಾ? ಅಥವಾ ಇವತ್ತಿನ ಘಟನೆಯ negative waves  ನನ್ನ ಮೇಲೆ ಈ ರೀತಿ ಪ್ರಭಾವ ಬೀರುತ್ತಿದೆಯೇ? ಇಲ್ಲ, ಹಾಗಾಗಬಿಡಕೂಡದು, ಯಾವ ಕಾರಣಕ್ಕೂ ನನ್ನ ವ್ಯಕ್ತಿತ್ವ ದುರ್ಬಲವಾಗಬಾರದು’ ಅಂತಂದುಕೊಂಡು ಕಣ್ಣೀರು ಒರೆಸಿ ಮತ್ತೆ ಹಳೆ ಆತ್ಮವಿಶ್ವಾಸದಿಂದ ಕೋಣೆಯಿಂದ ಹೊರಬಂದಳು. ಕ್ಲಾಸ್ ರೂಮಿಗೆ ಹೋಗಿ ತನ್ನ ಬ್ಯಾಗ್ ಎತ್ತಿಕೊಂಡು, ಗೋಡೆ ಬರಹಗಳನ್ನು ಅಳಿಸಲು ಪೈಂಟರ್ ಗಳಿಗೆ ನಿರ್ದೇಶನ ನೀಡುತ್ತಿದ್ದ ಕಾಲೇಜ್ ಕ್ಲರ್ಕ್ ಬಳಿ ಹೋಗಿ "ಅಣ್ಣಾ, ಅರ್ಜೆಂಟೇನೂ ಇಲ್ಲ, ನಿಧಾನಕ್ಕೆ ಮಾಡಿ ಸಾಕು. ತುಂಬಾ ಹೊತ್ತಾಯ್ತು. ನಿಮ್ಮನೆಯಲ್ಲಿ ನಿಮಗೋಸ್ಕರ ಕಾಯುವವವರನ್ನು ಇನ್ನೂ ಕಾಯಿಸಬೇಡಿ. ಮನೆಗೆ ಹೋಗಿ" ಅಂತಂದು ಮುಗಳ್ನಗೆ ಬೀರಿ ಅಲ್ಲಿಂದ ಹೊರಟು ಹೋದಳು.  

Now, my dear readers.... ಇಷ್ಟು ಓದಿಯಾದ ಮೇಲೆ ನಿಮ್ಮಲ್ಲಿ ಕೆಲವರಿಗಾದರೂ 'ಅರೆ! ಆ ಹುಡುಗಿಯಂಥವರು ಇಲ್ಲೇ ಎಲ್ಲೋ ಇದ್ದಾರಲ್ಲಾ' ಅಂತನ್ನಿಸಿರಬಹುದು. ಹಾಗೆ ಅನ್ನಿಸಿದ್ದೇ ಆದಲ್ಲಿ ಬನ್ನಿ, ಒಂದೆರಡು ನಿಮಿಷ ಕೂತು ಮಾತಾಡೋಣ, ಜೊತೆಗೆ ಒಂದು ಕಪ್ ಟೀ/ಕಾಫಿ ಇರಲಿ ಅಂತಂದರೂ ನನ್ನದೇನೂ ಅಭ್ಯಂತರವಿಲ್ಲ.

ನಿಜ ನಮ್ಮ, ನಿಮ್ಮೆಲ್ಲರ ನಡುವೆ 'ದಿಟ್ಟೆ' ಅಂತನ್ನಿಸಿಕೊಂಡು ಬದುಕುತ್ತಿರುವ ಹುಡುಗಿಯರಿರುತ್ತಾರೆ . ತಾನುಂಟು, ಮೂರು ಲೋಕವುಂಟು ಎಂಬಂತಿರುತ್ತಾರೆ ಅವರು. ತುಂಬಾ ದೂರವೇನೂ ಹೋಗಬೇಕಿಲ್ಲ, 'ಆಕೆ' ನಮ್ಮದೇ ಮನೆ ಮಗಳಾಗಿರಬಹುದು, ನಮ್ಮ ಸ್ನೇಹಿತನ/ತೆಯ ತಂಗಿಯೋ ಅಕ್ಕನೋ ಆಗಿರಬಹುದು, ನಮ್ಮ ಕಣ್ಣೆದುರಲ್ಲೇ ಬೆಳೆದ ಪಕ್ಕದ ಮನೆಯ ಪುಟಾಣಿಯಾಗಿರಬಹುದು ಇಲ್ಲ ನಮ್ಮ ಪತ್ನಿಯೋ,ಗೆಳತಿಯೋ, ಪ್ರೇಯಸಿಯೋ, ನಾದಿನಿಯೋ, ಅತ್ತಿಗೆಯೋ, ಅಮ್ಮನೋ,  ಸಂಬಂಧಿಕಳೋ ಆಗಿರಬಹುದು. ಆಕೆ ಎಲ್ಲವನ್ನೂ, ಎಲ್ಲರನ್ನೂ ಎದುರಿಸುತ್ತಾಳೆ, ಸಹಿಸಿಕೊಳ್ಳುತ್ತಾಳೆ ಅಂದ್ರೆ ಅವಳಿಗೆ ಭಾವನೆಗಳೇ ಇಲ್ಲ, ನೋವಾಗುವುದೇ ಇಲ್ಲ ಎಂದರ್ಥವಲ್ಲ. ಬದಲಾಗಿ ಆಕೆ ನೋವಲ್ಲೂ ನಗುತ್ತಾಳೆ,  ತಾನಗಾಗುವ ನೋವು ತನ್ನವರ ಕಣ್ಣಲ್ಲಿ ನೀರು ತರಿಸಬಾರದು ಎಂದು ತನ್ನ ನೋವನ್ನು ಬಚ್ಚಿಟ್ಟುಕೊಳ್ಳುತ್ತಾಳೆ ಎಂದರ್ಥ. ಎಂತಹ ಧೀಶಕ್ತಿ ಇರುವ ಹುಡುಗಿಯಾದರೂ ಕೆಲವೊಮ್ಮೆ ಮತ್ತೊಬ್ಬರ ಆಸರೆಗಾಗಿ ಕೈ ಚಾಚುತ್ತಾಳೆ, ಒಂದು ಪುಟ್ಟ ಕಂಫರ್ಟ್ ಗಾಗಿ ಹಂಬಲಿಸುತ್ತಾಳೆ. ಆಗ 'ನಿನ್ನ ಯೂಸ್ಲೆಸ್ ಧೈರ್ಯ ಈಗೆಲ್ಲಿ ಹೋಯಿತು?' ಅಂತ ಹಂಗಿಸದಿರೋಣ. ಅವಳ ಮನಸ್ಥಿತಿಯನ್ನು ಅರ್ಥಮಾಡ್ಕೊಂಡು ಅವಳು ಬಯಸುವ ಆಸರೆ, ಕಂಫರ್ಟ್ ಕೊಡಲು ಪ್ರಯತ್ನಿಸೋಣ, ಅದು ಸಾಧ್ಯವಾಗದಿದ್ದರೆ ಅವಳನ್ನು ಅವಳಷ್ಟಕ್ಕೆ ಬಿಟ್ಟುಬಿಡುವ. ತನ್ನನ್ನು ತಾನೇ ಸಂಭಾಳಿಸಿಕೊಳ್ಳುತ್ತಾಳವಳು. ಅದು ಬಿಟ್ಟು ಹಂಗಿಸಿ, ರೇಗಿಸಿ 'ಅವಳತನ'ದ ಹತ್ಯೆ ಮಾಡಹೊರಡುವುದು ಬೇಡ. ಹಾಂ! ಕೊನೆಯದಾಗಿ ಮತ್ತೊಂದು ಮಾತು, ನಮ್ಮ ನಡುವೆ ಇರುವ ಇಂತಹ 'ದಿಟ್ಟ ಹುಡುಗಿ'ಯರು ಕಣ್ಣೆದುರಾಗುತ್ತಿರುವ ಅನ್ಯಾಯವನ್ನು ಪ್ರತಿಭಟಿಸಹೊರಟರೆ 'ನಿನಗೇಕೆ ಊರ ಉಸಾಬರಿ' ಅಂತಂದು ಅವಳ ಸದುದ್ದೇಶದ ಪ್ರಯತ್ನಕ್ಕೆ ತಣ್ಣೀರೆರಚಿ ಅವಳ ಆತ್ಮಾರ್ಥತೆಯ ಭಂಜಕರಾಗದಿರೋಣ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ