ಶನಿವಾರ, ಮೇ 2, 2015

ಅರ್ಥ

ಕಡುಗಪ್ಪ ಕಾರ್ಗತ್ತಲ ಕಾಂತಾರದಿಡೆಯಲಿ
ತಲೆ ಎತ್ತಿ ನಿಂತ ಕರಿಕಲ್ಲು
ಪಕ್ಕದಲ್ಲೊಂದು ಹೆಸರಿಲ್ಲದ ಮರ
ತಣ್ಣಗೆ ಜುಳುಜುಳು ಹರಿವ ತೊರೆ

ನೋಡನೋಡುತ್ತಿದ್ದಂತೆಯೇ;
ಬಂಡೆಯಾಳದಲಿ ಬೇರು ಬಿಟ್ಟ ಮರ
ಬಂಡೆಯೆದೆಯ ಸೀಳಿ ಇಬ್ಭಾಗವಾಗಿಸಿತು
ಅದುರಿಬಿದ್ದ ಭೂಮಿಯೊಮ್ಮೆ ಕಂಪಿಸಿತು
ಟೊಳ್ಳಾದ ಇಳೆಯೆಡೆಯಲಿ ಹರಡಿಕೊಂಡ
ಬೇರಿನ ಸುತ್ತ ಗೆದ್ದಲು ಹತ್ತಿತು
ಸೇರಿಕೊಂಡಿತು ಸರ್ಪವೊಂದು ಹುತ್ತದೊಳು
ಅದರ ರೋಷಾವೇಶದ ಪೂತ್ಕಾರಕೆ
ವಿಷಯುಕ್ತವಾಯಿತು ಪ್ರಶಾಂತ ವಾರಿಯೂ

ಅರಳಿತೊಂದು ರೋಜಾ ಹೂವು
ಅದ ಕುಡಿದ ಗಿಡದ ಶಿರದೊಳು
ನೇತ್ಯಾತ್ಮಕ ಪರಿಸರದೆಡೆಯಲೂ
ಇತ್ಯಾತ್ಮಕ ಭಾವವರಳಿದ
ಖುಶಿಯಲಿ ಮೇರೆ ಮೀರಿ
ಅದರ ಸುಕೋಮಲ ಮೈದಡವಿ
ಅಸಹಜ, ಅಸ್ವಾಭಾವಿಕ ಭೀಕರತೆಗೆ
ಬೆಚ್ಚಿ ಕೈ ಹಿಂದೆಗೆದೆ ರಭಸದಿ
ಹೂವಿಗೆ ಮುಳ್ಳೇ ಇರಲಿಲ್ಲ!

ಮೈ ಪೂರ್ತಿ ಬೆವರು
ಗದ್ಗದಿತ ಕಂಠ
ಢವಗುಡುವ ಹೃದಯ
ಧಿಗ್ಗನೆ ಎದ್ದು ಕೂತೆ
ಕಾಡಿದ ಕಾಡಿಲ್ಲ! ಸಂಪೂರ್ಣ ತಿಮಿರ

ಸ್ವಪ್ನ ಸಾಮ್ರಾಜ್ಯದೊಳು ಇದೆಂಥಾ
ಬಿರುಭೀಕರ ಭಯಾನಕತೆಯೆಂದು
ಕನಸ ಅರ್ಥ ತಿಳಿಸುವ ಹೊತ್ತಿಗೆಯ
ಪುಟವ ಪಟಪಟನೆ ತಿರುವಿದೆ
ಕನಸು ಮರೆಯುವ ಮುನ್ನ

ಮಸ್ತಕದಿ ಅಚ್ಚೊತಿದ ಕನಸಿಗೆ
ಪುಸ್ತಕದಿ ಅರ್ಥವಿರಲಿಲ್ಲ
ಅರ್ಥವಿದ್ದೀತೇ ಬದುಕ ಗ್ರಂಥದಲ್ಲಾದರೂ...?
ಕಾಯುತಿರುವೆ ಕಾತರದಿ
ಅರ್ಥ ತಿಳಿಯಲು...
ಕನಸ ಭೇದಿಸಲು...



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ