ಶುಕ್ರವಾರ, ಜುಲೈ 29, 2016

ಮಧುರ ಸಂಬಂಧವೊಂದು ಉಳಿಯುತ್ತದೆ ಅಂತಾದರೆ ವಿನೀತರಾಗುವುದರಲ್ಲಿ ತಪ್ಪೇನಿದೆ?

ಒಮ್ಮೊಮ್ಮೆ ಹೀಗಾಗುತ್ತದೆ ನೋಡಿ...
ತುಂಬಾ ಹಚ್ಚಿಕೊಂಡ ಗೆಳೆಯ/ತಿ ಸಣ್ಣದಾಗಿ ನಮ್ಮನ್ನು ಅವಾಯ್ಡ್ ಮಾಡುತ್ತಿದ್ದಾರೆ ಅನಿಸಿಬಿಡುತ್ತದೆ. ಒಂದೆರಡು ದಿನ ಕಾದು ನಿಧಾನವಾಗಿ ಮಾತಾಡಿಸೋಣ ಅಂದರೆ ಕೈಗೆ ಸಿಗುವುದೇ ಇಲ್ಲ. ಹೋಗಲಿ ಫೋನ್‍ನಲ್ಲಾದರೂ ಮಾತಾಡೋಣ ಅಂದುಕೊಂಡು ಕರೆ ಮಾಡಿದರೆ ಅದನ್ನೂ ಸ್ವೀಕರಿಸುವುದಿಲ್ಲ. ವಾಟ್ಸಾಪ್ ಮೆಸೇಜ್‍ಗಳಿಗೂ, ಎಫ್.ಬಿ ಕಮೆಂಟ್‍ಗಳಿಗೂ, ಈ-ಮೈಲ್‍ಗಳಿಗೂ ಸರಿಯಾದ ಉತ್ತರವಿಲ್ಲ.

ಹೀಗಾದಾಗೆಲ್ಲಾ, ಎಷ್ಟೇ ಬೇಡ ಬೇಡ ಅಂದರೂ ಮನಸ್ಸು ಅಳುಕಿಗೆ ಬಿದ್ದು ಬಿಡುತ್ತದೆ. ಯಾಕೆ ಹೀಗೆ ಅವಾಯ್ಡ್ ಮಾಡುತ್ತಿದ್ದಾರೆ ಅನ್ನುವ ಪ್ರಶ್ನೆಗೆ ಸುಳಿಗೆ ಬಿದ್ದು ಚಡಪಡಿಸತೊಡಗುತ್ತದೆ. ಪದೇ ಪದೇ ಆ ಗೆಳೆಯ/ತಿಯ ಜೊತೆಗಿದ್ದ ಮಧುರ ಸಂಬಂಧವನ್ನೂ, ಅದು ಈಗಿಲ್ಲ ಅನ್ನುವ ಕೊರಗನ್ನೂ ಹಚ್ಚಿಕೊಂಡು ಹಳಹಳಿಸತೊಡಗುತ್ತದೆ. ಆ ಕಡೆ ಇರುವವರ ಮನಸ್ಥಿತಿ, ಪರಿಸ್ಥಿತಿ ಯಾವುದನ್ನೂ ವಿವೇಚಿಸದೆ ನಾಲ್ಕು ಜನರ ಬಳಿ ಅದರ ಬಗ್ಗೆ ಮಾತಾಡಿಯೂ ಬಿಡುತ್ತೇವೆ.

ಆಮೇಲೆ, ಒಂದಿಷ್ಟು ದಿನಗಳ ಕಾಲ ನಮ್ಮಿಂದೇನಾದರೂ ತಪ್ಪಾಗಿರಬಹುದಾ? ಅವನ/ಳ ಬಗ್ಗೆ ಆಡಬಾರದ ಮಾತು ಆಡಿದ್ದೀನಾ? ವೃಥಾ ನಾಲಗೆ ಹರಿಯಬಿಟ್ಟು ಅವನ/ಳನ್ನೇನಾದರೂ ನೋಯಿಸಿದ್ದೇನಾ? ಹಾಸ್ಯ ಮಾಡಲು ಹೋಗಿ ಅದು ಎಲ್ಲರೆದುರು ಅಪಹಾಸ್ಯವಾಗಿದೆಯಾ? ನನ್ನೊಬ್ಬನಲ್ಲಿ ಹಂಚಿಕೊಂಡ ವಿಷಯವನ್ನು ಇನ್ನಾರದೋ ಕಿವಿಗೆ ಹಾಕಿದ್ದೇನಾ? ಅನ್ನುವ ಪ್ರಶ್ನೆಗಳನ್ನೆಲ್ಲಾ ನಮಗೆ ನಾವೇ ಹಾಕಿಕೊಂಡು, ಇಲ್ಲ ಅಂತಹದ್ದೇನೂ ಮಾಡೇ ಇಲ್ಲ ಎಂದು ನಮ್ಮ ನಾವೇ ಸಮಾಧಾನಿಸಿಕೊಳ್ಳುತ್ತೇವೆ.

ಈ ಹಂತದಲ್ಲಿ, ನಮ್ಮದೇನೂ ತಪ್ಪಿಲ್ಲ ಅಂದಮೇಲೆ, ನಾನೇಕೆ ಅವನ/ಳ ಬೆನ್ನು ಹತ್ತಿ ಕಾಡಿಸಿ, ಪೀಡಿಸಿ ಮಾತಾಡಬೇಕು? ಅವನಿ/ಳಿಗೆ ಬೇಕಿಲ್ಲದ ಸಂಬಂಧ ನನಗೇಕೆ ಬೇಕು? ಅನ್ನುವ ಪುಟ್ಟ ಅಹಂ ತಲೆಯೆತ್ತುತ್ತದೆ. ಆ ಕಡೆಯ ನಿರಂತರ ಅವಾಯ್ಡೆನ್ಸ್ ಆ ಅಹಂಗೆ ತುಪ್ಪ ಸುರಿಯುತ್ತದೆ. ಬೆಂಕಿ ಭಗ್ಗನೆ ಹತ್ತಿಕೊಂಡು ಉರಿಯತೊಡಗುತ್ತದೆ. ನಮಗೇ ಗೊತ್ತಾಗದಂತೆ ಅವರ ಬಗ್ಗೆ ಒಂದು ಉಡಾಫೆ ಬೆಳೆದು ಬಿಡುತ್ತದೆ. ಬೇಕಿದ್ದರೆ ಅವನೇ/ಳೇ ಬಂದು ಮಾತಾಡಿಸಲಿ ಅಂದುಕೊಂಡು ಸುಮ್ಮನಾಗುತ್ತೇವೆ.

ಆ ಕಡೆ ಅವನ/ಳ ಕಿವಿಗೆ, ನಾವು ಇನ್ಯಾರ ಜೊತೆಗೋ ಮಾತಾಡುತ್ತಾ, ವಿನಾಕಾರಣ ನನ್ನ ಅವಾಯ್ಡ್ ಮಾಡುತ್ತಿದ್ದಾರೆ ಅಂತ ಹೇಳಿರುವುದೇ ಮತ್ತೊಂದಿಷ್ಟು ಉಪ್ಪು ಖಾರಗಳೊಂದಿಗೆ ಬಿದ್ದಿರುತ್ತದೆ. ಏನನ್ನೂ ಹೇಳಲಾಗದ, ಕೇಳಲಾಗದ ಮನಸ್ಥಿತಿಯಲ್ಲಿ ಒಂದಿಷ್ಟು ಮೌನವಾಗಿದ್ದುದನ್ನೇ ಅವಾಯ್ಡೆನ್ಸ್ ಅಂದುಕೊಂಡು ಅದನ್ನು ಮೂರನೆಯವರ ಬಳಿ ಹಂಚಿಕೊಳ್ಳೋದೇನಿತ್ತು? ನನ್ನ ಮೇಲೆ ನಿಜಕ್ಕೂ ಅಷ್ಟೊಂದು ಕಾಳಜಿ ಇರುವುದಾದರೆ ನನ್ನನ್ನೇ ಕೇಳಬಹುದಿತ್ತಲ್ಲಾ? ಅಷ್ಟೂ ಬೇಕೆನಿಸಿದರೆ, ನಿಜಕ್ಕೂ ನನ್ನ ಫ್ರೆಂಡೇ ಆಗಿದ್ದರೆ ಅವರೇ ಬಂದು ಮಾತಾಡಿಸಲಿ ಅನ್ನುವ ಸೆಡವಿಗೆ ಅವರೂ ಬಿದ್ದು ಬಿಡುತ್ತಾರೆ.

ಪರಿಣಾಮ, ಮಧುರ ಸಂಬಂಧವೊಂದರ ಅಕಾಲ ಮೃತ್ಯು. ಅಹಮಿಕೆಯ ಕೋಟೆಯೊಳಗೆ ಬಂಧಿಯಾಗಿ ಇಷ್ಟು ಪ್ರೀತಿ, ಅಷ್ಟೂ ಸ್ನೇಹ,  ಹಿಡಿಯಷ್ಟರ ಒಲವು ಉಸಿರಾಡಲಾಗದೆ ವಿಲವಿಲ ಒದ್ದಾಡತೊಡಗುತ್ತವೆ. ಒಣ ಪ್ರತಿಷ್ಠೆ ಸಾವಿರದೊಂದು ಸಂಬಂಧವನ್ನು ಮಾತಿಲ್ಲದೆ ಸಾಯಿಸಿಬಿಡುತ್ತದೆ.

ಆಗಲೇ ವಾಟ್ಸಾಪ್ ಗ್ರೂಪ್‍ಗಳು ಅದಲು ಬದಲಾಗುವುದು. ಆಗಲೇ ಫೇಸ್‍ಬುಕ್‍ನ ಪ್ರತೀ ಸ್ಟೇಟಸ್‍ನಲ್ಲೂ ಕೊಂಕು ಕಾಣಿಸತೊಡಗುವುದು. ಈಕಡೆ ಇರುವವನು/ಳು ತನ್ನಿಂದ ಅವರಿಗಾದ ಉಪಕಾರಗಳ ಪಟ್ಟಿ ತಯಾರಿಸಿಕೊಂಡು ಬೊಂಬಡ ಬಜಾಯಿಸುವುದು, ಆಕಡೆ ಇರುವವನು ಅವನಿ/ಳಿಗೋಸ್ಕರ ತಾನು ಮಾಡಿದ ತ್ಯಾಗಗಳ ಕುರಿತು ಹೇಳಲಾರಂಭಿಸುವುದು. ತೀರಾ ವೈಯಕ್ತಿಕ ಮಟ್ಟಕ್ಕಿಳಿದು ಪರಸ್ಪರರ ಮೇಲೆ ಕೆಸರೆರಚಿಕೊಳ್ಳುವುದು, ಸಾರ್ವಜನಿಕವಾಗಿ ಕಿತ್ತಾಡಿಕೊಂಡು ಮನಸ್ಸನ್ನು ಅಶಾಂತಿ, ಗೊಂದಲಗಳ ಗೂಡಾಗಿಸಿಕೊಳ್ಳುವುದು.

ಅಹಮಿಕೆಯ, ಸಲ್ಲದ ಪ್ರತಿಷ್ಠೆಯ ಕೈಗೆ ಬುದ್ದಿ ಕೊಟ್ಟಾಗೆಲ್ಲಾ ಆಗುವುದಿಷ್ಟೇ. ನಮ್ಮನ್ನೂ ಸೇರಿಸಿ, ಈ ಜಗತ್ತಿನಲ್ಲಿ ಯಾರೂ ಪರಿಪೂರ್ಣರಲ್ಲ ಅನ್ನುವ ಸಣ್ಣ ಸತ್ಯವನ್ನು ಅರಿತುಕೊಂಡು, ಗೆಳೆಯ/ತಿಯನ್ನೋ ಎದುರಾ ಎದುರು ಕೂರಿಸಿಕೊಂಡು ಮಾತಾಡಿ ಸಮಸ್ಯೆ ಬಗೆಹರಿಸಿಕೊಂಡರೆ ಸಂಬಂಧವೂ ಉಳಿಯುತ್ತದೆ, ಮನಶ್ಯಾಂತಿಯೂ ಹಾಳಾಗುವುದಿಲ್ಲ. ಇಷ್ಟಾಗಿಯೂ ಆತ/ಕೆ ನಿಮ್ಮ ಮಾತು ಕೇಳಲು ತಯಾರಿಲ್ಲ ಅಂದರೆ, ಸುಮ್ಮನೆ ಕೈಕಟ್ಟಿ ನಿಂತು ಒಂದು sorry ಹೇಳಿಬಿಡಿ. ಮತ್ತೂ ಅದೇ ಸೆಡವಿನಲ್ಲಿದ್ದರೆ ಮತ್ತೊಮ್ಮೆ  sorry ಕೇಳಿ. ಮತ್ತೂ ಕನ್ವಿನ್ಸ್ ಆಗದಿದ್ದರೆ ನಿನ್ನೊಂದಿಗಿನ ಸಂಬಂಧವನ್ನು ಉಳಿಸಿಕೊಳ್ಳಬೇಕಿದ್ದರೆ ನಾನು ಮತ್ತಷ್ಟು ವಿನಮ್ರನಾಗಬೇಕು ಅಂತಿದ್ದರೆ ಅದಕ್ಕೂ ಸಿದ್ಧ ಅಂದುಬಿಡಿ. ನಿಮ್ಮ ಒಳ್ಳೆಯತನದ ಮುಂದೆ, ನಿಸ್ಪೃಹತೆಯ ಮುಂದೆ, ನಿರ್ವಾಜ್ಯ ಸ್ನೇಹದ ಮುಂದೆ, ಅದು ಎಂತಹ ಅಹಂಕಾರವೇ ಆದರೂ ಪೊರೆ ಕಳಚಿ ಬಿದ್ದೇ ಬಿಡುತ್ತದೆ, ಬೀಳಲೇ ಬೇಕು.

ಇಷ್ಟಕ್ಕೂ, ಮಧುರ ಸಂಬಂಧವೊಂದು ಉಳಿಯುತ್ತದೆ ಅಂತಾದರೆ, ಒಂದು sorry ಕೇಳುವುದರಲ್ಲಿ, ವಿನೀತರಾಗುವುದರಲ್ಲಿ ತಪ್ಪೇನಿದೆ, ಅಲ್ಲವೇ? 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ