ಭಾನುವಾರ, ಏಪ್ರಿಲ್ 5, 2015

ಸಂಬಂಧಗಳ ಸಹಜತೆಯನ್ನು ಉಳಿಸಿಕೊಳ್ಳುವ ನನ್ನ ಆಯ್ಕೆ

ಬೆತ್ತಲೆ ಬೆನ್ನು, ಓರೆ ನೋಟ, ಬಾಚದ ತಲೆ, ಮಾದಕ ಭಂಗಿ,  ಮುಕ್ತ ಕಾಮ, ಸಂಜೆ ಆರರ ನಂತರದ ಪಾರ್ಟಿ, ಅರೆಬರೆ ಬಟ್ಟೆ, ವಿವಸ್ತ್ರತೆ... ಸ್ತ್ರೀ-ಸ್ವಾತಂತ್ರ್ಯ, ಸ್ತ್ರೀ ವಿಮೋಚನೆ ಅಂದರೆ ಇಷ್ಟೇನಾ? ಒಂದು ವೇಳೆ ಪುರುಷರೂ ನನ್ನ ಆಯ್ಕೆಯ ಹೆಸರಲ್ಲಿ ವಿವಾಹೇತರ ಸಂಬಂಧಕ್ಕೆ ಹಾತೊರೆದು ಇದು ನನ್ನ ಬದುಕು, ನನ್ನಿಚ್ಛೆ ಅಂದರೆ ಈ ತಥಾಕಥಿತ ಸ್ತ್ರೀವಾದ ಅದನ್ನು ಮರು ಮಾತಿಲ್ಲದೆ ಒಪ್ಪಿಕೊಂಡು ಬಿಡುತ್ತದೆಯೇ? ಸಬಲೀಕರಣದ ವ್ಯಾಪ್ತಿ ಕೇವಲ ತೊಡುವ ಬಟ್ಟೆ, ವಿವಾಹಪೂರ್ವ ಅಥವಾ ವಿವಾಹೇತರ ಸಂಬಂಧಗಳಿಗಷ್ಟೇ ಸೀಮಿತವಾದ ಪರಿಕಲ್ಪನೆಯೇ? ಆಯ್ಕೆಯೊಂದೇ ಮಹಿಳೆಯನ್ನು ಸಬಲಗೊಳಿಸಬಲ್ಲುದೇ? ಸ್ವಾತಂತ್ರ್ಯಪೂರ್ವದಲ್ಲಿ ಇಂತಹ ಯಾವ ಆಯ್ಕೆಗಳೂ ಇಲ್ಲದೆ ರಾಣಿ ಚೆನ್ನಮ್ಮ, ಅಬ್ಬಕ್ಕ, ಲಕ್ಷ್ಮೀಬಾಯಿ, ಸಾಮಾನ್ಯ ವನಿತೆ ಓಬವ್ವ ಇವರೆಲ್ಲಾ ಪ್ರಚಂಡವಾಗಿ ಹೋರಾಡಲಿಲ್ಲವೇ? ತಾವು ನಂಬಿದ ಆದರ್ಶಗಳಿಗಾಗಿ ಬದುಕಲಿಲ್ಲವೇ? ಮೇಲಿನ ಒಬ್ಬಳೇ ಒಬ್ಬ ಮಹಿಳೆಯೂ ಸಂಬಂಧಗಳನ್ನೆಲ್ಲಾ ಧಿಕ್ಕರಿಸಿ ನಾನೇ ಸಮಷ್ಟಿ ಅಂದವರಲ್ಲ. ಅಂದರೆ ಅವರ್ಯಾರೂ ಸಬಲರಲ್ಲವೇ...? ದೀಪಿಕಾ ಪಡುಕೋಣೆಯವರ ’ಮೈ ಚಾಯ್ಸ್’ ವಿಡಿಯೋ ನೋಡಿದಾಗ ನನ್ನೊಳಗೆ ಮೂಡಿದ ಪ್ರಶ್ನೆಗಳಿವು.

ನಿಜಕ್ಕೂ ಆ ವಿಡಿಯೋದಲ್ಲಿ ಎತ್ತಿದ ಪ್ರಶ್ನೆಗಳು, ಚರ್ಚಿಸಿದ ವಿಷಯಗಳು ಸಮಂಜಸವಾಗಿಯೇ ಇವೆ. ಪ್ರತಿಯೊಂದು ಹೆಣ್ಣಿಗೂ ಅವಳದೇ ಆದ ಸ್ವಾತಂತ್ರ್ಯವಿದೆ, ಅವಳದೇ ಆದ ಆಯ್ಕೆ ಇರುತ್ತದೆ, ಅವಳದೇ ಆದ ವ್ಯಕ್ತಿತ್ವ ಇರುತ್ತದೆ. ಅದನ್ನು ಪುರುಷ ಸಮಾಜ ಅರ್ಥ ಮಾಡಿಕೊಳ್ಳಲೇಬೇಕು. ಆದರೆ ನಾನೇ ಸಮಷ್ಟಿ, ನಾನೇ ಅನಂತ, ನನಗಿಷ್ಟ ಬಂದಂತೆ ನಾನಿರುತ್ತೇನೆ, ಅದನ್ನು ಯಾರಿಗೂ ಪ್ರಶ್ನಿಸುವ ಅಧಿಕಾರವಿಲ್ಲ, ನಿನ್ನ ಸೋಲು ನನ್ನ ಗೆಲುವು ಅನ್ನುವುದೆಲ್ಲವೂ ಅತಿರೇಕಗಳಲ್ಲವೇ? ನಾನು ಪ್ರಶ್ನಾತೀತ, ನಾನೇ ಸರಿ ಅಂತೆಲ್ಲಾ ಅಂದುಕೊಳ್ಳುವುದು ಆಯ್ಕೆಯಾ ಅಥವಾ ಅಹಂಕಾರವಾ? ಎಲ್ಲವೂ ನನ್ನಿಚ್ಛೆಯಂತೆ ಅನ್ನುವುದು ಅರಜಾಕತೆಯನ್ನು ಸೃಷ್ಟಿಸುವುದಿಲ್ಲವೇ?

ಕೆಲವು ಶತಮಾನಗಳಷ್ಟು ಹಿಂದೆ ಕೇರಳದಲ್ಲಿ ಅಸಹ್ಯ, ಅಮಾನವೀಯ ಪದ್ಧತಿಯೊಂದಿತ್ತು. ಕೆಳಜಾತಿಯ ಮಹಿಳೆಯರು ಯಾರೂ ಸೊಂಟದ ಮೇಲೆ ಬಟ್ಟೆ ಧರಿಸುವಂತಿರಲಿಲ್ಲ. ಹಾಗೊಂದು ವೇಳೆ ಎಲ್ಲಾ ಕಟ್ಟುಪಾಡುಗಳನ್ನು ಧಿಕ್ಕರಿಸಿ ಬಟ್ಟೆ ತೊಟ್ಟುಕೊಂಡರೆ ಎಲ್ಲರೆದುರೇ ಅವರನ್ನು ಅತ್ಯಂತ ಕ್ರೂರವಾಗಿ ಅತ್ಯಾಚಾರವೆಸಗಲಾಗುತ್ತಿತ್ತು. ಸೂಕ್ಶ್ಮವಾಗಿ ಅವಲೋಕಿಸಿದರೆ ಬಟ್ಟೆ ತೊಡದಿರುವುದೇ ಸ್ವಾತಂತ್ರ್ಯ ಅನ್ನುವ ಮನಸ್ಥಿತಿಗೂ ಬಟ್ಟೆ ತೊಡಲು ಬಿಡಲಾರೆವು ಅನ್ನುವ ಪ್ರತಿಷ್ಟೆಗೂ ಹೆಚ್ಚಿನ ವ್ಯತ್ಯಾಸವೇನಿಲ್ಲ ಅನಿಸುತ್ತದೆ.

ಇನ್ನು ಈ ವಿಡಿಯೋ ಕತ್ತಲೆ, ಬೆತ್ತಲೆಗಳನ್ನೇ ಸ್ವಾತಂತ್ರ್ಯದ ಸರಕಾಗಿಸುವ ಭರದಲ್ಲಿ ನಿಜಕ್ಕೂ ಮಹಿಳೆ ಸಬಲೆಯಾಗಬೇಕಾದ ಕ್ಷೇತ್ರಗಳನ್ನು ನಗಣ್ಯವಾಗಿಸಿದೆ ಅನ್ನುವುದು ನನ್ನ ಭಾವನೆ. ಪರದೆಯ ಹಿಂದಿನ ಕಣ್ಣೀರನ್ನು, ಬಿಚ್ಚಿಟ್ಟ ಅರಶಿನದ ಕೊಂಬಿನ ಹಿಂದಿನ ನೋವನ್ನು, ಯಾರದೋ ಬಲವಂತಕ್ಕೆ ಬಲಿಯಾಗಿ ಬಿಳಿ ವಸ್ತ್ರ ತೊಟ್ಟವರ ಅಸಹಾಯಕತೆಯನ್ನು ಆಯ್ಕೆಯಾಗಿಸುವಲ್ಲಿ ನಿಜಕ್ಕೂ ಈ ವಿಡಿಯೋ ಸೋತಿದೆ. ಅದೆಷ್ಟೋ ಹೆಣ್ಣು ಮಕ್ಕಳು ಪರಿಸ್ಥಿತಿಯ ಒತ್ತಡಕ್ಕೆ ಸಿಲುಕಿ ವ್ಯೇಶ್ಯಾ ಗೃಹವೆಂಬ ಕುಲುಮೆಯಲ್ಲಿ ನಿತ್ಯ ಸಾಯುತ್ತಾ ಬದುಕುತ್ತಿದ್ದಾರೆ, ಅದೆಷ್ಟೋ ಹೆಣ್ಣು ಮಕ್ಕಳು ಯಾರದೋ ದುಡ್ಡಿನ ದಾಹಕ್ಕೆ, ವರದಕ್ಷಿಣೆಯ ಪೆಡಂಭೂತಕ್ಕೆ ಪ್ರತಿನಿತ್ಯ ಬಲಿಯಾಗುತ್ತಿದ್ದಾರೆ, ಇನ್ನಷ್ಟೇ ಅರಳಬೇಕಿರುವ ಅದೆಷ್ಟೋ ಹೆಣ್ಣು ಮಕ್ಕಳು ಇನ್ಯಾರದೋ ವಿಕೃತ ವಾಂಛೆಗಳಿಗೆ ಆಹಾರವಾಗುತ್ತಿದ್ದಾರೆ, ಹಳ್ಳಿಗಾಡಿನ ಅದೆಷ್ಟೋ ಮಹಿಳೆಯರಿಗೆ ಈಗಲೂ ಬಹಿರ್ದೆಸೆಗೂ ಬಯಲನ್ನೇ ಆಶ್ರಯಿಸಬೇಕಾದ ಅನಿವಾರ್ಯತೆ ಇದೆ, ಅದೆಷ್ಟೋ ಕಟ್ಟಡ ಕಾರ್ಮಿಕೆಯರಿಗೆ ದಿನ ರಾತ್ರಿ ದುಡಿದರೂ ತನ್ನ ಮೂಲಭೂತ ಅವಶ್ಯಕತೆಗಳನ್ನೂ ಪೂರೈಸಿಕೊಳ್ಳಲಾಗದಷ್ಟು ಬಡತನವಿದೆ... ಇವ್ರ್ಯಾರನ್ನೂ ’ಮೈ ಚಾಯ್ಸ್’ ಪ್ರತಿನಿಧಿಸುವುದೇ ಇಲ್ಲ. ಅದೇನಿದ್ದರೂ ’ಆಯ್ಕೆ’ ನಗರದ ಸುಶಿಕ್ಷಿತ ಮಹಿಳೆಗೆ ಮಾತ್ರ ಸೀಮಿತ ಅನ್ನುವಂತಿದೆ.

ಒಬ್ಬ ಮಹಿಳೆಯ ಆರ್ಥಿಕ, ಬೌದ್ಧಿಕ, ಸಾಮಾಜಿಕ, ನ್ಯಾಯ ಸಮ್ಮತ ಬೇಡಿಕೆಯ ಬಗ್ಗೆ ಸೊಲ್ಲೆತ್ತದ, ಹಲವು ಕಷ್ಟಗಳ ನಡುವೆಯೂ ಬದುಕನ್ನು ತಮ್ಮದೇ ಆದ ನೆಲೆಗಟ್ಟಿನಲ್ಲಿ ನಡೆಸುತ್ತಾ ಒಂದಿಷ್ಟು ನೊಂದಿರೋ ಜೀವಗಳಿಗೆ ಸಾಂತ್ವನ ನೀಡುವ ನಿಜವಾದ ಸಬಲ ಮಹಿಳೆಯ ಬಗ್ಗೆ ಒಂದಕ್ಷರವೂ ಮಾತಾಡದ ವಿಡಿಯೋ ಕೇವಲ ’ನಾನು ಪ್ರಶ್ನಾತೀತ’ ಅನ್ನುವುದನ್ನೇ ಪರಮೋಚ್ಛ ಸ್ವಾತಂತ್ರ್ಯದ ಸಂಕೇತವೆಂಬಂತೆ ಬಿಂಬಿಸಿ ಸಬಲೀಕರಣದ ಪರಿಕಲ್ಪನೆಯನ್ನೇ ಜಾಳಾಗಿಸಿದೆ ಅನಿಸುತ್ತದೆ ನನಗೆ. ಇಲ್ಲ ಅದೇ ಆಯ್ಕೆ, ಅದೇ ಸಬಲೀಕರಣವೆನ್ನುವುದಾದರೆ... ನನ್ನ ಸುತ್ತಲಿನ ಪುರುಷ ಪ್ರಪಂಚ ಅಂದರೆ ನನ್ನ ಅಪ್ಪ, ಅಣ್ಣ, ಗೆಳೆಯರು, ಹಿತೈಷಿಗಳು ನನ್ನನ್ನು ನನ್ನಷ್ಟಕ್ಕೆ ಬಿಡದೇ, ನಾ ತಪ್ಪು ದಾರಿಯಲ್ಲಿ ನಡೆದಾಗೆಲ್ಲಾ ನಿಲ್ಲಿಸಿ ಬಿಡದೆ ಪ್ರಶ್ನಿಸುವುದನ್ನು ಒಪ್ಪಿಕೊಳ್ಳುವುದೇ ನನ್ನ ಆಯ್ಕೆಯಾಗಿರುತ್ತದೆ, ಅತಿರೇಕದ ಸಮಾನತೆಯ ವಿತಂಡ ವಾದಗಳ ಮಧ್ಯೆ ಸಂಬಂಧಗಳ ಸಹಜತೆಯನ್ನು ಉಳಿಸಿಕೊಳ್ಳುವುದೇ ನನ್ನಾಯ್ಕೆಯಾಗಿರುತ್ತದೆ, ನಾನು-ನನ್ನದು-ನನ್ನಿಂದಾಗಿ ನೀನು ಅನ್ನುವ ಅಹಂಕಾರವನ್ನು ಮೆಟ್ಟಿ ನಿಲ್ಲುವುದೇ ನನ್ನ ಆಯ್ಕೆಯಾಗಿರುತ್ತದೆ. ಸೋ ಕಾಲ್ಡ್ ಸ್ತ್ರೀವಾದ ಇದನ್ನು,  ಕೈಲಾಗದವರ ವಾದ, ಸ್ವಾತಂತ್ರ್ಯದ ಹಂಬಲವಿಲ್ಲದವರ ಮಾತು, ಅಶಕ್ತರ ನಡವಳಿಕೆ, ಅಬಲತೆಯ ಪ್ರತೀಕ ಎಂದೆಲ್ಲಾ ಅನ್ನುವುದಾದರೆ well, ನಾನೂ ಅಬಲೆಯೇ...

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ