ಮಂಗಳವಾರ, ಏಪ್ರಿಲ್ 7, 2015

ಸಾವಿರದೊಂದು ಸಂಬಂಧ ಸಾಯುತ್ತಿರುವಾಗ...

     ಸಂಬಂಧಗಳನ್ನು ಇನ್ನಿಲ್ಲದಂತೆ ಶಿಥಿಲಗೊಳಿಸುವ ಸಂಗತಿ ಯಾವುದು? ಕಳೆದ ಕೆಲ ದಿನಗಳಿಂದ ನನ್ನ ಬಹಳವಾಗಿ ಕಾಡುತ್ತಿರುವ ಪ್ರಶ್ನೆ ಇದು. ಇಂತಹುದೊಂದು ಪ್ರಶ್ನೆಯ ಸುಳಿಗೆ ಸಿಲುಕಿ ಗರಗರನೆ ತಿರುಗಿ ರಭಸದಿಂದ ದಡಕ್ಕೆ ಅಪ್ಪಳಿಸಿ ಎದ್ದು ನಿಲ್ಲುವ ಮುನ್ನ ಮತ್ತದೇ ಸುಳಿಗೆ ಸಿಲುಕಲು ಕಾರಣವಾದ ಅಂಶ, ಪ್ರೇರಣೆಯಾದ ಘಟನೆ ಯಾವುದು ಅನ್ನುವುದು ನನಗಿನ್ನೂ ಸ್ಪಷ್ಟವಾಗಿಲ್ಲ. ಆದರೆ ಮನಸ್ಸು ಕೂತಲ್ಲಿ, ನಿಂತಲ್ಲಿ, ಏನೇ ಕೆಲಸ ಮಾಡುತ್ತಿದ್ದರೂ, ಕೊನೆಗೆ ಪ್ರಾರ್ಥನೆಯಲ್ಲೂ ಇದೇ ಪ್ರಶ್ನೆಯ ಸುತ್ತ ಗಿರಕಿ ಹೊಡೆಯುತ್ತಿದೆ.

ನಿಜಕ್ಕೂ ಸಂಬಂಧಗಳ ಮಧ್ಯ ಇರುವ ಆಪ್ತತೆಯನ್ನು ತೊಡೆದು ಹಾಕುವ ಅಂಶ ಯಾವುದು? ನಂಬಿಕೆ ದ್ರೋಹವೇ? ವಿಶ್ವಾಸಘಾತಕತನವೇ? ಆಲಸಿತನವೇ? ಕಳೆದುಹೋಗಲಾರದೆಂಬ ನಿರ್ಲಕ್ಷ್ಯತನವೇ? ನಮ್ಮೊಳಗೆ ಕೋಟೆ ಕಟ್ಟಿರುವ ಅಹಮ್ಮೇ? ಸಂಬಂಧಗಳ ಗುರುತಿಸಲಾರದ ಮದವೇ? ನಮ್ಮ ಸಾಮರ್ಥ್ಯದ ಮೇಲಿನ ಅತಿಯಾದ ನಂಬಿಕೆಯೇ? ಎಲ್ಲವೂ ನನ್ನಿಂದಲೇ ಅನ್ನುವ ದುರಹಂಕಾರವೇ? ಅಥವಾ ಇವೆಲ್ಲಾ ಕಾರಣಗಳು ಒಟ್ಟು ಸೇರಿ ಸಂಬಂಧ ಬಂಧ ಕಳೆದುಕೊಳ್ಳುತ್ತಿದೆಯೇ? ಸ್ಪಷ್ಟವಾಗುತ್ತಿಲ್ಲ. ಏನನ್ನೂ ಜನರಲೈಸ್ ಮಾಡಿ ’ಇದಮಿತ್ಥಂ’ ಅನ್ನುವ ತೀರ್ಮಾನಕ್ಕೆ ಬರಲಾಗುತ್ತಿಲ್ಲ.

ಈ ಸಂಬಂಧಗಳು ಸಂಕೀರ್ಣವಾಗಿರುವುದಕ್ಕೇ ಹೀಗಾಗುತ್ತಿದೆಯಾ? ಅಥವಾ ಸರಳವಾಗಿದ್ದ ಸಂಬಂಧಗಳ ಒಳ ಹರಿವನ್ನು ಸಂಕೀರ್ಣಗೊಳಿಸಿರುವ ಮನುಷ್ಯ ಸ್ವಭಾವ ಈಗ, ಅದರ ಆಳದಲ್ಲಾಗುತ್ತಿರುವ ಸಾಂಸ್ಕೃತಿಕ ಪಲ್ಲಟಗಳನ್ನು ಅರ್ಥೈಸಿಕೊಳ್ಳುವಲ್ಲಿ ಸೋಲುತ್ತಿದೆಯೇ? ಅಥವಾ  ಮಿತಿ ಮೀರಿದ ಧಾವಂತ ಸಂಬಂಧಗಳನ್ನು  ಗೋಜಲಾಗಿಸಿರುವುದರಿಂದ ಅದರ ಅಂತರಾಳಕ್ಕಿಳಿದು ಮಥಿಸಿ ಸುಸ್ಪಷ್ಟ ಉತ್ತರ ಪಡೆಯಲು ಸಾಧ್ಯವಾಗುತ್ತಿಲ್ಲವೇ?  ಇದೂ ಅರ್ಥ ಆಗುತ್ತಿಲ್ಲ.

ಸಂಬಂಧಗಳ ನಡುವಿನ ಸಂದಿಗ್ಧತೆಯನ್ನು ಪರಿಹರಿಸ ಹೊರಟಾಗೆಲ್ಲಾ ಹೀಗೆ ಒಂದಿದ್ದ ಪ್ರಶ್ನೆ ನೂರಾಗುತ್ತದೆ, ನೂರು ಸಾವಿರವಾಗುತ್ತದೆ, ಉತ್ತರ ಅತಂತ್ರವಾಗುತ್ತದೆ. ಆದರೆ ಮೂಲದಲ್ಲೆಲ್ಲೋ ಸಂಬಂಧಗಳ ಕ್ಷಯಕ್ಕೆ ಅಪನಂಬಿಕೆಯೇ ಕಾರಣ ಅನಿಸುತ್ತದೆ. ಪ್ರೀತಿ ಇರದ ಕಡೆ ಹಲ್ಲು ಕಚ್ಚಿ ಕಷ್ಟಪಟ್ಟಾದರೂ  ಸಹಿಸಿ ಬದುಕಬಹುದೇನೋ ಆದರೆ ನಂಬಿಕೆ ಇಲ್ಲದೆಡೆ ಬದುಕುವುದೆಂದರೆ ಅದು ಮೈ ಪೂರ್ತಿ ಚೇಳು ಹತ್ತಿಸಿಕೊಂಡಂತೆ. ಯಾವಾಗ ಕುಟುಕಿಸಿಕೊಳ್ಳುತ್ತೇವೆಯೋ ಅನ್ನುವ ಅಭದ್ರತೆಯಲ್ಲೇ ಬದುಕಬೇಕಾಗುತ್ತದೆ.

ಇಷ್ಟಕ್ಕೂ ಈ ಅಪನಂಬಿಕೆ ಜನ್ಮ ತಳೆಯುವುದೆಲ್ಲಿ? ಅವು ಮನುಷ್ಯ ಮನಸ್ಸುಗಳನ್ನು ಸದಾ ಬೆಚ್ಚಗಿಡುವ ಆಪ್ತತೆಯನ್ನೇ ಜಾಳಾಗಿಸುವಷ್ಟು ಶಕ್ತವಾಗುವುದಾದರೂ ಹೇಗೆ? ಬಹುಶಃ ಕಾರಣವಿದ್ದೋ ಇಲ್ಲದೆಯೋ ಆಡುವ ಸುಳ್ಳುಗಳೇ ಅಪನಂಬಿಕೆಯ ತಳಪಾಯವೆನಿಸುತ್ತದೆ. ಯಾಕೆಂದರೆ ತಮ್ಮಾಪ್ತರು ಸಾದರಪಡಿಸುವ ವಿಷಯಗಳನ್ನು ಹಿಂದು ಮುಂದು ಯೋಚಿಸದೆ, ಯಾವ ತರ್ಕವನ್ನೂ ಮಾಡದೆ ಮನಸ್ಸು ಒಪ್ಪಿಕೊಂಡು ಬಿಡುತ್ತದೆ. ಯಾಕೆಂದರೆ ಅವರ ಮೇಲೆ, ಅವರ ಮಾತುಗಳ ಮೇಲೆ ಬೆಟ್ಟದಷ್ಟು ನಂಬಿಕೆಯಿರುತ್ತದೆ, ತಮ್ಮ ಮುಂದೆ ಎಂದೂ ಸುಳ್ಳು ಹೇಳಲಾರರು ಅನ್ನುವಷ್ಟು ಗಾಢ ಭರವಸೆಯಿರುತ್ತದೆ. ಎಲ್ಲಕಿಂತ ಹೆಚ್ಚಾಗಿ ಪ್ರೀತಿ, ವಾತ್ಸಲ್ಯ, ಒಲವು, ಸ್ನೇಹಗಳೆಂಬ ಅಮೃತ ಬಿಂದುಗಳು ಪರಸ್ಪರರನ್ನು ಬಂಧಿಸಿಟ್ಟಿರುತ್ತವೆ. ಆ ಬಂಧವೇ ಸುಳ್ಳಾಡಲಾರರು ಅನ್ನುವ ಅಪರಿಮಿತ ನಂಬಿಕೆಯನ್ನು ಹುಟ್ಟಿಸಿರುತ್ತದೆ. ಭವಿಷ್ಯದಲ್ಲಿ ಎಂದಾದರೂ ಮೂರನೆಯವರ ಮುಖಾಂತರ ಅದು ಸುಳ್ಳೆಂದು ತಿಳಿದು, ಪ್ರಮಾಣೀಕರಣವಾದರೆ ನಂಬಿಕೆಯ ಸೌಧ ಕುಸಿದು ಬೀಳುತ್ತದೆ, ಪ್ರಾಮಾಣಿಕತೆ ಪ್ರಶ್ನಿಸಲ್ಪಡುತ್ತದೆ, ಎರಡು ಮನಸ್ಸುಗಳ ಮಧ್ಯೆ ಅವ್ಯಕ್ತ ಅಪನಂಬಿಕೆ ತಾಂಡವವಾಡತೊಡಗುತ್ತದೆ.

ಅನರ್ಥ, ಅಪಾರ್ಥಕ್ಕೆ ಅವಕಾಶವಿಲ್ಲದಷ್ಟು ಗಟ್ಟಿಯಾಗಿರುವ ಸಂಬಂಧಗಳ ಮಧ್ಯೆಯೂ ಸುಳ್ಳೇಕೆ ನುಸುಳುತ್ತದೆ? ಕಾರಣ ಹಲವು. ಕೆಲವರು ಇತರರಿಗೆ ನೋವಾಗದಿರಲೆಂದು ಸುಳ್ಳು ಹೇಳುತ್ತಾರೆ, ಇನ್ನು ಕೆಲವರು ಮಾಡಿದ ತಪ್ಪನ್ನು ಮುಚ್ಚಿ ಹಾಕಲು, ಕೆಲವರು ನಕಾರಾತ್ಮಕ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸಲಾಗದೆ, ಇನ್ನು ಕೆಲವರು ಪಲಾಯನವಾದದ ನೆಪವಾಗಿ, ಕೆಲವರು ತಮ್ಮನ್ನು ತಾವೇ ಸಜ್ಜನರೆಂದೋ, ಸಂಭಾವಿತರೆಂದೋ ಬಿಂಬಿಸಿಕೊಳ್ಳಲು, ಇನ್ನು ಕೆಲವರು ತಮ್ಮಲ್ಲಿರದ ಸಾಮರ್ಥ್ಯವನ್ನು ಇದೆಯೆಂದು ಪ್ರಚುರ ಪಡಿಸಿಕೊಳ್ಳಲು, ಕೆಲವರು ಇನ್ನೊಬ್ಬರಲ್ಲಿ ಅಸೊಯೆ ಹುಟ್ಟಿಸಲು, ಇನ್ನು ಕೆಲವರು ಮೊದಲು ಹೇಳಿದ ಸುಳ್ಳನ್ನು ಸಮರ್ಥಿಸಿಕೊಳ್ಳಲು ಸುಳ್ಳು ಹೇಳುತ್ತಾರೆ. ಕೆಲವರು ಅಕಾರಣ ಸುಳ್ಳು ಹೇಳಿದರೆ, ಕೆಲವರದು ನಿರುಪದ್ರವಿ ಸುಳ್ಳುಗಳು, ಇನ್ನೂ ಕೆಲವರದು ಉಪದ್ರವೀ ಸುಳ್ಳುಗಳು. ಸುಳ್ಳಿನ ಹಿನ್ನೆಲೆ, ಕಾರಣ, ಉದ್ದೇಶ ಏನೇ ಆಗಿದ್ದರೂ ಅವು ದೀರ್ಘಾವಧಿಯಲ್ಲಿ ಸಂಬಂಧಗಳನ್ನು ಬಿಟ್ಟೂ ಬಿಡದೆ ಬಾಧಿಸುತ್ತವೆ ಅನ್ನುವುದು ಮಾತ್ರ ಸುಳ್ಳಲ್ಲ.

ಸುಳ್ಳೊಂದೇ ಸಂಬಂಧಗಳನ್ನು ಶಿಥಿಲಗೊಳಿಸುವುದು ಅನ್ನಲಾಗದದಿದ್ದರೂ, ಸುಳ್ಳೂ ಸಂಬಂಧಗಳ ಕ್ಷಯಕ್ಕೆ ಕಾರಣವಾಗುತ್ತದೆ ಅನ್ನುವುದು ಸತ್ಯ. ಸುಳ್ಳು ಹೇಳಲು ಪ್ರತಿನಿತ್ಯ ಕಾರಣಗಳನ್ನು ಹುಡುಕುವವರಿಗೆ ಹೇಳಿದ ಸುಳ್ಳನ್ನು ದಕ್ಕಿಸಿಕೊಂಡೇನು ಅನ್ನುವ ಆತ್ಮವಿಶ್ವಾಸವೂ ಇರುತ್ತದೆ. ಆದ್ರೆ ಅದು ಮನುಷ್ಯ ಬದುಕಲ್ಲಿ ಸೃಷ್ಟಿಸುವ ಸಂಕೀರ್ಣತೆಯ ಪ್ರಮಾಣ  ಅಗಾಧವಾದದ್ದು. ಸುಳ್ಳು ನೀಡುವ ಆತ್ಮವಿಶ್ವಾಸವೂ ಸುಳ್ಳೇ ಅನ್ನುವುದು ಅರಿವಾಗುವ ಹೊತ್ತಿಗೆ ಬದುಕು ಬೇರೊಂದು ಘಟ್ಟಕ್ಕೆ ತಲುಪಿಯಾಗಿರುತ್ತದೆ, ಸಂಬಂಧಗಳು ಸತ್ವ ಕಳೆದುಕೊಂಡಾಗಿರುತ್ತದೆ, ನಂಬಿಕೆ ಆತ್ಮಹತ್ಯೆ ಮಾಡಿಕೊಂಡಾಗಿರುತ್ತದೆ. ಮತ್ತೆ ಸಂಬಂಧ ಸುಧಾರಿಸಲು ಎಷ್ಟೇ ಪ್ರಯತ್ನ ಪಟ್ಟರೂ ಅದು ಒಡೆದ ಕನ್ನಡಿಯಲ್ಲಿ ವಿರೂಪಗೊಳ್ಳದ ಬಿಂಬ ನೋಡಲು ಪ್ರಯತ್ನಿಸುವಷ್ಟೇ ವಿಫಲ ಯತ್ನವಾಗಿರುತ್ತದೆ.

ಇದರರ್ಥ ಯಾವತ್ತೂ ಸುಳ್ಳು ಹೇಳಲೇಬಾರದು ಅಥವಾ ಯಾವತ್ತೂ ಅಪ್ರಿಯ ಸತ್ಯಗಳನ್ನೇ ಹೇಳಬೇಕು ಎಂದಲ್ಲ. ಸಾಧ್ಯವಾದಷ್ಟು ಸುಳ್ಳನ್ನು ನಿವಾರಿಸಿಕೊಳ್ಳಬೇಕು, ಕನಿಷ್ಠಪಕ್ಷ ಅಕಾರಣ ಸುಳ್ಳು ಹೇಳುವುದನ್ನಾದರೂ ನಿಲ್ಲಿಸಿಬಿಡಬೇಕು. ಯಾಕೆಂದರೆ ನಮ್ಮ ಪ್ರೀತಿಸುವವರಿಗೆ ನಮ್ಮ ವ್ಯಕ್ತಿತ್ವವನ್ನು ಅರಿತುಕೊಳ್ಳುವ ಸ್ವೋಪಜ್ಞತೆ ಇರುತ್ತದೆ, ಸುಳ್ಳುಗಳ ಮೂಲಕ ವ್ಯಕ್ತಿತ್ವ ಪ್ರತಿಬಿಂಬಿಸುವ ಅಗತ್ಯತೆಯೇ ಬರುವುದಿಲ್ಲ ಮತ್ತು ನಮ್ಮ ಪ್ರೀತಿಸದವರಿಗೆ ನಮ್ಮ ವ್ಯಕ್ತಿತ್ವ ಹೇಗಿದ್ದರೂ ಅದು ಅಭಾದಿತ, ಹಾಗಾಗಿ ಅಲ್ಲೂ ಸುಳ್ಳುಗಳಿಂದ ನಮ್ಮನ್ನು ಸಮರ್ಥಿಸಿಕೊಳ್ಳಬೇಕಾಗಿಲ್ಲ.

ಈ ಜಗತ್ತಿನಲ್ಲಿ ಸಂಬಂಧಗಳ ಗೊಡವೆಯೇ ಬೇಕಿಲ್ಲ, ಪ್ರೀತಿಯ ಭರವಸೆ ಇಲ್ಲದೆಯೂ ಬದುಕಬಲ್ಲೆ, ನಂಬಿಕೆಯ ಶ್ರೀರಕ್ಷೆ ಇಲ್ಲದೆಯೂ ಜೀವನ ಸಾಗಿಸಬಲ್ಲೆ, ಈ ಪ್ರಪಂಚದೊಂದಿಗಿನ ನನ್ನ ಸಂಬಂಧವೇನಿದ್ದರೂ ಕೇವಲ ವ್ಯಾವಹಾರಿಕತೆ, ಅದಾರಚೆಗಿನ ಯಾವ ವಿಷಯಗಳೂ ನನ್ನ ಭಾದಿಸಲಾರವು ಅಂತಿದ್ದರೆ, ಸಂಬಂಧಗಳ, ಅದು ನೀಡುವ ಬೆಚ್ಚಗಿನ ಸುಭದ್ರ ಭಾವಗಳ ಹಂಗಿಲ್ಲದೆ ವಸ್ತುನಿಷ್ಠವಾಗಿ ಬದುಕಬಹುದು. ಆದರೆ ಸಕಲ ಜೀವಚರಗಳಲ್ಲೂ ಒಂದು ಗಮ್ಯ ಮತ್ತು ಅಗಮ್ಯ ಸಂಬಂಧಗಳನ್ನು ಹುಟ್ಟುಹಾಕುವ ಈ ಪ್ರಪಂಚವನ್ನು ಕೇವಲ ವಸ್ತುನಿಷ್ಠವಾಗಿ, ವೈಚಾರಿಕವಾಗಿ, ಒಂದು ಶುದ್ಧ ಸೈದ್ಧಾಂತಿಕ ನೆಲೆಗಟ್ಟಿನಲ್ಲಿ ಮಾತ್ರ ನೋಡುವುದಾದರೆ, ಅಂತಿಮವಾಗಿ ಮನುಷ್ಯ ಸಂಪೂರ್ಣ ಅನಾಥನಾಗಿ, ಅವನಿಗೆ ತನ್ನದು ಎಂದು ಹೇಳಿಕೊಳ್ಳಲು ಒಂದು ಜೀವವೂ ಇಲ್ಲದಂತಾಗಿ, ಹಿಡಿ ಪ್ರೀತಿಗಾಗಿ, ತುಸು ನೆಮ್ಮದಿಗಾಗಿ, ದಿಶೆಯಿಲ್ಲದವನಾಗಿ ಬೆಂಗಾಡ ಬಯಲಲಿ ಹನಿ ನೀರಿಗಾಗಿ ಬರಿಗಾಲಲಿ ಪರಿತಪಿಸುತ್ತಿರುವವನ ಮನಸ್ಥಿತಿ ಪ್ರಾಪ್ತವಾಗುತ್ತದೆ. 





ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ