ಶನಿವಾರ, ಏಪ್ರಿಲ್ 11, 2015

ಅಗಣಿತ ಕನಸು... ಅಪರಿಮಿತ ಭಾವ...

ಹರಡಿ ಕುಳಿತಿರುವೆ ಅಂಗಳದ ತುಂಬಾ
ಅಗಣಿತ ಕನಸುಗಳನು
ಅಪರಿಮಿತ ಭಾವಗಳನು
ಎಣಿಸಲಾಗುತ್ತಿಲ್ಲ ಬೆರಳ ತುದಿಯಲಿ
ಅಳೆಯಲಾಗುತ್ತಿಲ್ಲ ಕಣ್ಣ ಕೊನೆಯಲಿ

ನಡುವೆಯೊಂದು ಅಗ್ನಿಕುಂಡ ಉರಿಯುತಿದೆ
ಗಗನಕೆ ಕೆನ್ನಾಲೆ ಚಾಚುತಿದೆ
ಸುತ್ತ ಗರಿಗೆದರಿ ಹಾರುತಿವೆ
ಕೈ ಜಾರಿದ ಕನಸುಗಳು
ಕೈ ಬಿಟ್ಟುಹೋದ ಭಾವಗಳು

ಹಾರುತಿರೋ ಕನಸುಗಳ ಹಿಡಿದು
ಒಂದೊಂದಾಗಿ ಅರ್ಪಿಸಬೇಕಿದೆ
ನರ್ತಿಸುತಿಹ ಭಾವಗಳ ಬಡಿದು
ಬಿಡಿ ಬಿಡಿಯಾಗಿ ಸಮರ್ಪಿಸಬೇಕಿದೆ
ಕರುಣೆಯಿಲ್ಲದೆ ಉರಿವ ಬೆಂಕಿಯೊಡಲಿಗೆ

ಬಲುಹಠಮಾರಿ ಕನಸುಗಳಿವು
ಕೈಗೆ ಸಿಗಲಾರೆವೆಂಬಂತೆ
ಎತ್ತರೆತ್ತರಕೆ ಹಾರಿ
ಆಟ ಆಡಿಸಿ ಹೈರಾಣಗಿಸಿ
ಮತ್ತೆ ನನ್ನ ನೋಡಿ
ವಿಕಟಾಟ್ಟಹಾಸಗೈಯುತಿವೆ

ಅದರಪ್ಪನಂತಹ ಭಾವಗಳಿವು
ಹಿಡಿದೇಬಿಟ್ಟೆ ಅನ್ನುವಾಗೆಲ್ಲಾ
ಮುಷ್ಟಿಯೊಳಗಿಂದ ಹಾರಿಹೋಗಿ
ಗರ್ವದಿ ಮೆರೆದು
ಮತ್ತೆ ನನ್ನ ನೋಡಿ
ಪರಿಹಾಸ್ಯಗೈಯುತಿವೆ

ಕನಸುಗಳ ಕೈಗೂಡಿಸಲಾಗದ
ಭಾವಗಳ ಬದುಕಬಿಡಗೊಡಲಾಗದ
ಪರಮಹೇಡಿ ನಾನು
ಈಗ ಕನಸು-ಭಾವಗಳ ಸುಟ್ಟು
ಬಿಡಲೂ ಆಗದೆ ನನ್ನನೇ ದಹಿಸುತಿರುವೆ

ಹೈರಾಣಾದರೂ ಸೋತುಹೋದರೂ
ಬಿದ್ದರೂ ಕುಸಿದು
ಮತ್ತೆ ಏಳಲೇಬೇಕು
ಶಕ್ತಿ ಬಸಿದು
ಅಗ್ನಿಗಾಹುತಿ ಮಾಡಲೇಬೇಕು

ಮಾಡದಿರೆ ಏಳದಿರೆ
ನಾನೇ ಆಹುತಿಯಾಗುವೆ
ನನ್ನೊಳಗೆ ತಾಂಡವವಾಡುತಿರೋ
ಆಕ್ರೋಶವೆಂಬ ಅಗ್ನಿಗೆ
ಅಸಹಾಯಕತೆಯ ಕೆನ್ನಾಲೆಗೆ

ಕನಸುಗಳ ಕತ್ತು ಹಿಸುಕಿ
ಭಾವಗಳ ಉಸಿರುಗಟ್ಟಿಸಿ
ಅನುಕಂಪವಿಲ್ಲದೆ ಸುಟ್ಟುಹಾಕಿ
ಮತ್ತದೇ ಬೂದಿಯ ಮೆಟ್ಟಿ ನಿಂತು
ನಾನೀಗ ಬದುಕು ಕಟ್ಟಿಕೊಳ್ಳಲೇಬೇಕು
ಜೀವಂತ ಶವದಂತಾದರೂ...


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ