ಭಾನುವಾರ, ಏಪ್ರಿಲ್ 26, 2015

ಹೂವು ಅರಳುವ ಸಮಯ

ಹತ್ತು ವರ್ಷಗಳ ಹಿಂದೆ ಯಾವುದೋ ಮ್ಯಾಗಸಿನ್ ಒಂದರಲ್ಲಿ ಪೂಲನ್ ದೇವಿಯ ಜೀವನ ಚರಿತ್ರೆಯ ಸಣ್ಣ ತುಣುಕೊಂದನ್ನು ಓದಿ ತಲೆನೋವಿನ ನೆಪ ಹೇಳಿ ಕ್ಲಾಸಿಂದ ಹೊರಬಂದು ಬರೆದ ಬರಹ ಇದು. ಇವತ್ತು ಏನನ್ನೂ ಹುಡುಕುತ್ತಿರುವಾಗ ಇದು ಸಿಕ್ತು. ಒಂದಕ್ಷರವನ್ನೂ ಬದಲಾಯಿಸದೆ ಇದ್ದುದ್ದನ್ನು ಇದ್ದ ಹಾಗೆ ಇಲ್ಲಿ ಟೈಪಿಸಿದ್ದೇನೆ. ಸ್ತ್ರೀ ಪರ ಮತ್ತು ಬಂಡಾಯ ಸಾಹಿತ್ಯ ನನ್ಮೇಲೆ ತುಂಬಾ ಪ್ರಭಾವ ಬೀರಿದ್ದ ಕಾಲ ಅದು. ಒಂದು ಹಂತದಲ್ಲಿ ನಕ್ಸಲೈಟ್ ಆಗಿಬಿಡುವ ಅನಾಹುತಕಾರಿ ಆಲೋಚನೆಯನ್ನೂ ಮಾಡಿದ್ದೆ. ಓದುಗರೇ, ಹದಿನಾಲ್ಕರ ಹುಡುಗಿಯೊಬ್ಬಳ ಅಪಕ್ವ ನಿಲುವುಗಳು ಮತ್ತು ಅಸಂಬದ್ಧ ಬರಹ ಇದು. ದಯವಿಟ್ಟು ಇದನ್ನು ಯಾರೂ ಗಂಭೀರವಾಗಿ ಪರಿಗಣಿಸಬೇಡಿ.

ಕೀಳಲ್ಪಡುವ ಹೂವಿನ ವೇದನೆ ಈಗಷ್ಟೇ ಅರಳುತ್ತಿರುವ ಮೊಗ್ಗಿಗೆ ತಿಳಿಯುವಂತಿದ್ದರೆ ಯಾವ ಮೊಗ್ಗೂ ಅರಳಲು ಬಯಸುತ್ತಲೇ ಇರಲಿಲ್ಲ. ಅರಳಿ ನಿಂತ ಹೂವಿನ ಸೌಂದರ್ಯ, ದುಂಬಿಯೊಂದಿಗೆ ನಡೆಸುತ್ತಿರುವ ಮೌನ ಸಂಭಾಷಣೆ, ಚಿಟ್ಟೆಯೊಂದಿಗಿನ ಮಧುರ ಸಾಂಗತ್ಯ, ಪ್ರತಿಯೊಬ್ಬರನ್ನೂ ತನ್ನ ಕಡೆಗೊಮ್ಮೆ ನೋಡಿಸುವ ಹೂವಿನ ಚುಂಬಕ ಶಕ್ತಿ ಎಲ್ಲವನ್ನೂ ಓರೆ ಕಣ್ಣಿನಿಂದಲೇ ಗಮನಿಸುವ ಮೊಗ್ಗು ತನಗೇ ಗೊತ್ತಿಲ್ಲದಂತೆ ಅರಳಿಸಿಕೊಳ್ಳುವ ಪ್ರಕ್ರಿಯೆಯಲ್ಲಿ ತೊಡಗಿಕೊಳ್ಳುತ್ತದೆ.

ಮೊಗ್ಗೊಂದು ಮುಂಜಾನೆ ಅರಳಿದ ಮೇಲೆ, ಜಗತ್ತಿನ ಸಂಭ್ರಮವನ್ನೆಲ್ಲಾ ಕಣ್ಣಲ್ಲೇ ತುಂಬಿಸಿಕೊಂದ ಮೇಲೆ, ವಿಶ್ವ ಸೌಂದರ್ಯವನ್ನೆಲ್ಲಾ ತನ್ನಲ್ಲೇ ಅಡಗಿಸಿ ಬಿಮ್ಮನೆ ನಕ್ಕ ಮೇಲೆ ಮುಸ್ಸಂಜೆಯಲಿ ಬಾಡಲೇ ಬೇಕು, ಮತ್ತೊಂದು ಸೌಂದರ್ಯದ ಉದಯಕ್ಕೆ ಹಾದಿ ತೋರಲೇಬೇಕು, ಕಾರಣವಾಗಲೇಬೇಕು. ಇದು ಪ್ರಕೃತಿ ನಿಯಮ. ಬಾಡುತ್ತಿರುವ ಹೂವಿನ ಬಾಳಿಗೆ ಅಲ್ಲಿ ಸಾರ್ಥ್ಯಕವಿದ್ದರೆ, ಅರಳಬೇಕಿರುವ ಮೊಗ್ಗಿನ ಮನಸ್ಸಿಗೆ ಅಲ್ಲಿ ಸಂಭ್ರಮವಿರುತ್ತದೆ. ತುಂಬು ಜೀವನದ ಪ್ರತಿಕ್ಷಣವೂ ಹೇಳಲಾಗದಂತಹ, ನಿರೂಪಿಸಲಾಗದಂತಹ ಚೆಲುವಿನ ವ್ಯಾಖ್ಯೆ ಇರುತ್ತದೆ, ಬದುಕಿನ ಪೂರ್ತಿ ಜಗತ್ತಿಗೆಲ್ಲಾ ಖುಶಿ ಹಂಚಿದ ನೆಮ್ಮದಿ ಇರುತ್ತದೆ. ಇನ್ನೇನು ಬಾಡಿ ಧರಾಶಾಹಿಯಾಗುತ್ತೇನೆ ಎನ್ನುವಾಗಲೂ ವೇದನೆಯನ್ನೂ ಮೀರಿದ ಸಂತೃಪ್ತಿಯ ನಗೆ ಇರುತ್ತದೆ.

ಆದ್ರೆ ಪ್ರಕೃತಿ ನಿಯಮಕ್ಕೆ ತಲೆಬಾಗುವ ಮೊದಲೇ ಯಾರದೋ ಕಾಲಡಿಗೆ ಸಿಲುಕಿ ನಲುಗಿ ಹೋಗುವ ಅದೆಷ್ಟೋ ಸಾವಿರ ಹೂವುಗಳಿವೆ ಈ ಜಗತ್ತಿನಲ್ಲಿ. ದುಂಬಿಯೊಂದಿಗೆ ಸಂಭಾಷಿಸಲಾಗದ ನೋವು, ಚಿಟ್ಟೆಯ ಜೊತೆ ಬೆರೆಯಲಾಗದ ವೇದನೆ, ಗತ್ತಿನಿಂದ ಅರಳಿ ನಿಂತು ನಗಲಾಗದ ವಿಷಾದ ಎಲ್ಲವೂ ಆ ಹೂವಿನ ಒಡಲೊಳಗೆ ಬಚ್ಚಿಕೊಂಡಿರುತ್ತದೆ. ಇಷ್ಟಾಗಿಯೂ ಅರಳಲು, ನಗಲು ಪ್ರಯತ್ನಿಸಿದರೆ ಸಮಾಜದಲ್ಲಿರೋ ಕ್ರೌರ್ಯದ ಎಳೆಯೊಂದು ಸದ್ದಿಲ್ಲದೆ  ಸಾವಿನ ಷರಾ ಬರೆದುಬಿಡುತ್ತದೆ. ಮತ್ತೂ ಬದುಕುತ್ತೇನೆಂಬ ಹಠದೊಂದಿಗೆ, ಜೀವಿಸಲೇಬೇಕೆಂಬ ಜೀವಸೆಲೆಯೊಂದಿಗೆ ಬದುಕಲು ಪ್ರಯತ್ನಿಸಿದರೆ ಬಾಳಲು ಪ್ರಯತ್ನಿಸಿದರೆ ಅಲ್ಲೂ ಅವಮಾನ, ಅವಹೇಳನಗಳ ಭಾರ ಅರಳಬೇಕಾಗಿರುವ ಹೂವಿನ ಕವಚದಂತಿರುವ ಚಿಗುರೆಲೆಗಳನ್ನೇ ಜಗ್ಗಿಸಿಬಿಡುತ್ತದೆ. ಅಲ್ಲಿಗೆ ಸುಂದರ ಬದುಕಿನ ಕನಸಿನ ಕಲ್ಪನೆಯೊಂದರ ಸಮಾಪ್ತಿಯಾಗುತ್ತದೆ.

ಯಾವ ಕ್ರೌರ್ಯವು ಅರಳಬೇಕಾಗಿದ್ದ ಹೂವನ್ನು ಅರಳುವ ಮೊದಲೇ ಮುದುಡಿ ಹಾಕಿತೋ, ಯಾವ ಕ್ರೌರ್ಯವು ಅರಳಿದಮೇಲೂ ಸಂಭ್ರಮದಿಂದ ನಗಲು ಬಿಡಲಿಲ್ಲವೋ, ಯಾವ ಕ್ರೌರ್ಯವು ಅವಮಾನ, ಅವಹೇಳನಗಳ ಮೂಲಕ ಮತ್ತೆ ಮತ್ತೆ ತುಳಿಯಿತೋ ಅದೇ ಕ್ರೌರ್ಯದ ಮೇಲೆ ಅಂಥದೇ ಕ್ರೂರತೆಯನ್ನು ಸಾಧಿಸಬೇಕಾದರೆ ತನ್ನೆದೆಯೊಳಗೂ ಕ್ರೌರ್ಯವೊಂದು ಹುಟ್ಟಿಕೊಳ್ಳಬೇಕು ಅಂದುಕೊಳ್ಳುತ್ತದೆ ಅವಮಾನ, ಅವಹೇಳನಗಳ ಬೆಂಕಿಯಲ್ಲಿ ಬೆಂದ ಹೂವು. ತನ್ನ ಸಹಜ ಸ್ವಭಾವಕ್ಕೆ ವಿರುದ್ಧವಾಗಿ ತನ್ನೊಡಲೊಳಗೆ ಕ್ರೌರ್ಯವನ್ನು ಬೆಳೆಸಿಕೊಳ್ಳುತ್ತದೆ. ಸುತ್ತಲೂ ಕವಚದಂತೆ ಮುಳ್ಳುಗಳನ್ನು ಬೆಳೆಯಗೊಡತೊಡಗುತ್ತದೆ. ನಿಧಾನವಾಗಿ, ಅಷ್ಟೇ ದೃಢವಾಗಿ ಕೆಕ್ಕರಿಸಿ ನೋಡುತ್ತಿದ್ದ ಸಮಾಜವನ್ನೇ ಧಿಕ್ಕರಿಸಿ ಬದುಕುವಂತಹ ಭಂಡತನ ಬೆಳೆಸಿಕೊಳ್ಳುತ್ತದೆ. ಶೋಷಣೆಯಲ್ಲೇ ವಿಕೃತಾನಂದ ಪಡೆಯುತ್ತಿದ್ದ ಸಮಾಜವೂ ಬೆಚ್ಚಿಬಿದ್ದು ಈ ಬೆಳವಣಿಗೆಯನ್ನು ಒಪ್ಪಿಕೊಳ್ಳುತ್ತದೆ, ಸಹಿಸಿಕೊಳ್ಳುತ್ತದೆ, ಸಹಿಸಲೇಬೇಕಾದ ಅನಿವಾರ್ಯತೆ ಸೃಷ್ಟಿಯಾಗುತ್ತದೆ. ಹೂವಿನ ಕಣ್ಣುಗಳಲೂ ಕನಸುಗಳು ಸತ್ತು ಹೋಗಿ ಕ್ರೌರ್ಯ ಮತ್ತೆ ಸ್ಥಾನ ಪಡೆದುಕೊಳ್ಳುತ್ತದೆ. ದಿನ ಕಳೆದಂತೆ ಮನಸಿನ ಮೂಲೆಯಲ್ಲಿ ಅಲ್ಲೊಂದಿಷ್ಟು, ಇಲ್ಲೊಂದಿಷ್ಟು ಅಂತ ಉಳಿದುಕೊಂಡಿದ್ದ ಸಹಜತೆಯೂ ಮಾಯವಾಗಿ ನೇವರಿಸ ಬಯಸುವ ಕೈಗಳಿಗೂ ಮೃದು, ಮಧುರ ಅನುಭವವಾಗದೆ ಅಪನಂಬಿಕೆಯ ಮುಳ್ಳುಗಳು ಚುಚ್ಚತೊಡಗುತ್ತವೆ. ಸಂಭ್ರಮ, ಸಂತೋಷವಿರಬೇಕಾದಲ್ಲಿ ಅಪನಂಬಿಕೆ, ಅಸಂತೃಪ್ತಿ, ಅಭದ್ರತೆಯ ಭಾವಗಳು ತಾಂಡವವಾಡತೊಡಗುತ್ತವೆ.

ಯಾರು ಕಾರಣರು ಇದಕ್ಕೆ? ಅರಳುವ ಮೊದಲೇ ಮುದುಡಿ ಹೋದ, ಸಂಭ್ರಮಿಸುವ ಮುನ್ನವೇ ಸಂತಾಪಕ್ಕೆಡೆಯಾದ, ನಗಲು ಪ್ರಯತ್ನಿಸಿ ಸೋತು ಹೋದ, ಅಪಮಾನಗಳ ಬೆಂಕಿಯಲ್ಲಿ ತನ್ನತನ ಕಳೆದುಕೊಂಡ ಮೊಗ್ಗಿನ ಬದುಕಿನ ವಿಷಾದ ಗೀತೆಗೆ ಧ್ವನಿಯಾಗುವವರಾರು? ಸಹಜತೆ ಕಳೆದುಕೊಂಡು ಸಮಾಜ ಘಾತುಕ ಶಕ್ತಿಯಾಗಿ ಬೆಳೆಯಲು ಕಾರಣವಾದ ಅದೇ ಸಮಾಜಕ್ಕೆ ಶಿಕ್ಷೆ ನಿರ್ಧರಿಸುವವರಾರು? ಶಿಕ್ಷೆ ನೀಡುವವರಾರು? ಅದಕ್ಕೂ ಮೀರಿದ ನೈತಿಕ ಪ್ರಶ್ನೆಯೆಂದರೆ, ಆ ಶಿಕ್ಷೆ ಅರಳಬೇಕಿದ್ದ ಹೂವಿನ ಕನಸುಗಳನ್ನು, ಯೌವ್ವನವನ್ನು, ಸಹಜತೆಯನ್ನು ಮರಳಿ ತಂದುಕೊಡಬಲ್ಲುದೇ? ಕಲ್ಲಾಗಿಸಿದ ಹೃದಯವನ್ನು ಮತ್ತೆ ಹೂವಾಗಿಸಬಹುದೇ? ಉತ್ತರವಿಲ್ಲ...

ಎಷ್ಟಾದರೂ "ನೊಂದ ಜೀವದ ನೋವ ನೋಯದವರೆತ್ತ ಬಲ್ಲರು...?"

2 ಕಾಮೆಂಟ್‌ಗಳು:

  1. ಅಹ್ ! ೧೪ರ ಪೋರಿಯೊಬ್ಬಳ ವಿಲಾಪ ಅಧ್ಭುತತೆಯ ಪರಿಧಿ ದಾಟಿದೆ .
    ಅರಳುವ ಮೊದಲೇ ಮುದುಡಿ ಹೋದ, ಸಂಭ್ರಮಿಸುವ ಮುನ್ನವೇ ಸಂತಾಪಕ್ಕೆಡೆಯಾದ, ನಗಲು ಪ್ರಯತ್ನಿಸಿ ಸೋತು ಹೋದ, ಅಪಮಾನಗಳ ಬೆಂಕಿಯಲ್ಲಿ ತನ್ನತನ ಕಳೆದುಕೊಂಡ ಮೊಗ್ಗಿನ ಬದುಕಿನ ವಿಷಾದ ಗೀತೆಗೆ ಧ್ವನಿಯಾಗುವವರಾರು? ಎಂಬ ಪ್ರಶ್ನೆ ಬಹುವಾಗಿ ಕಾಡಿತು... ಕನ್ನಡಕ್ಕೆ ಬಹುದೊಡ್ಡ ಆಸ್ತಿಯಾಗಬಲ್ಲ ಸೂಕ್ಷ ಸಂವೇದನೆಯ ಬರಹರಾರ್ತಿ ನೀವು.. ಶುಭವಾಗಲಿ

    ಪ್ರತ್ಯುತ್ತರಅಳಿಸಿ