ಬುಧವಾರ, ಏಪ್ರಿಲ್ 15, 2015

ಮರಳಿ ಮಣ್ಣಿಗೆ

ಅದು ೧೯೯೦. ದೇಶದೆಲ್ಲೆಡೆ ಧರ್ಮ-ಧರ್ಮಗಳ ಮಧ್ಯೆ ಸಾಮರಸ್ಯ ಮೂಡಿಸಿ ಆಂತರಿಕವಾಗಿ ದೇಶವನ್ನು ಬಲಿಷ್ಠಗೊಳಿಸುವ ಸಕಲ ಪ್ರಯತ್ನಗಳೂ ನಡೆಯುತ್ತಿದ್ದವಂತೆ. ಶಾಲಾ-ಕಾಲೇಜುಗಳಲ್ಲಿ ಪ್ರತಿಯೊಂದು ಧರ್ಮಗಳ ಮಧ್ಯೆ ಇರುವ ಸಾಮ್ಯತೆಯನ್ನು, ಸಮಾನ ವಿಚಾರಧಾರೆಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟು ವಿದ್ಯಾರ್ಥೀ ನೆಲೆಯಲ್ಲೇ ಪ್ರತಿಯೊಬ್ಬರನ್ನೂ ಪರಧರ್ಮ ಸಹಿಷ್ಣುಗಳನ್ನಾಗಿ ಮಾಡುವ ಒಂದು ಅದ್ಭುತ ಕಾರ್ಯಯೋಜನೆ ಜಾರಿಯಲ್ಲಿತ್ತಂತೆ. ಜೊತೆಗೆ ಆ ಹೊತ್ತಿಗಾಗುವಾಗಲೇ ವಿದ್ಯಾವಂತರ ಸಂಖ್ಯೆಯಲ್ಲಿ ಹೆಚ್ಚಳವಾಗಿ ಆ ಮೊದಲಿದ್ದ ಹಲವು ಕಂದಕಗಳು ಮಾಯವಾಗಿ ಮೂಲಭೂತವಾದಿತನವನ್ನು ಮೆಟ್ಟಿ ನಿಂತು ಎಲ್ಲರೊಳಗೊಂದಾಗುವ ಮನಸ್ಥಿತಿ ನಿಧಾನವಾಗಿ ಜನರ ಮಧ್ಯೆ ಬೆಳೆಯುತ್ತಿತ್ತಂತೆ. ಇಷ್ಟೆಲ್ಲಾ ಬೆಳವಣಿಗೆಗಳು ನಡೆಯುತ್ತಿದ್ದ ಮಧ್ಯೆಯೇ ಇಡಿಯ ಕಾಶ್ಮೀರ ಒಂದು ವಿಲಕ್ಷಣ ಘಟನೆಗೆ ಸಾಕ್ಷಿಯಾಗಬೇಕಾಯಿತಂತೆ. ಅಚಾನಕ್ಕಾಗಿ ’ಕಾಶ್ಮೀರ ಕೇವಲ ನಮ್ಮದು, ಉಳಿದವರೆಲ್ಲರೂ ಇಲ್ಲಿಂದ ಹೊರ ಹೋಗಿ’ ಅನ್ನುವ ಬಲವಾದ ಕೂಗು ಕಣಿವೆಯಲ್ಲಿ ಪ್ರತಿಧ್ವನಿಸತೊಡಗಿದವಂತೆ. ಮಾತ್ರವಲ್ಲ ಇದನ್ನು ಒಪ್ಪದೆ ಅಲ್ಲೇ ಉಳಿಯಲು ಪ್ರಯತ್ನಿಸಿದವರ ಮೇಲೆ ಅವ್ಯಾಹತ ಅತ್ಯಾಚಾರ, ಅನಾಚಾರಗಳು ನಡೆದು ಬಲವಂತವಾಗಿ ಮತ್ತು ಅತ್ಯಂತ ಕ್ರೂರವಾಗಿ ಅವರೆಲ್ಲರನ್ನು ಅಲ್ಲಿಂದ ಹೊರದಬ್ಬಲಾಯಿತಂತೆ. 

ನನ್ನ ಬಾಲ್ಯದಲ್ಲಿ ಹಲವು ಬಾರಿ ನಾನು ಅಜ್ಜ-ಮಾವಂದಿರ ಗಂಭೀರ ಚರ್ಚೆಯ ಮಧ್ಯೆ ಕೇಳಲ್ಪಟ್ಟ ಕಥೆ ಇದು. ಇದಾಗಿ ಸರಿಸುಮಾರು ಇಪ್ಪತ್ತೈದು ವರ್ಷಗಳೇ ಕಳೆದುಹೋಗಿವೆ. ಅದೆಷ್ಟೋ ಮಿಲಿಯಗಟ್ಟಲೆ ಗ್ಯಾಲನ್ ನೀರು ಝೇಲಂ ನದಿಯಲ್ಲಿ ಹರಿದುಹೋಗಿದೆ. ಒಂದು ತಲೆಮಾರು ಸಂಪೂರ್ಣವಾಗಿ ಅಳಿದುಹೋಗಿದೆ. ಮತ್ತೊಂದು ತಲೆಮಾರು ತಪ್ಪು-ಒಪ್ಪುಗಳನ್ನು ನಿರ್ಧರಿಸುವಷ್ಟು ಪರಿಪಕ್ವವಾಗಿದೆ. ಇನ್ನೊಂದು ತಲೆಮಾರು  ಈಗಷ್ಟೇ ಕಣ್ಣು ಬಿಡುತ್ತಿದೆ. ಆವತ್ತು ನಮ್ಮ ಮನೆಯಲ್ಲಿ ಚರ್ಚೆಗೆ ನಾಂದಿ ಹಾಡಿದ್ದ ಅಜ್ಜನೂ ಈಗ ಬದುಕಿಲ್ಲ, ಆಗಿನ್ನೂ ಯುವಕರೇ ಆಗಿದ್ದ ಮಾವಂದಿರು ಈಗ ನಿವೃತ್ತಿಯ ಅಂಚಿನಲ್ಲಿ ಬಂದು ನಿಂತಿದ್ದಾರೆ, ಆ ಚರ್ಚೆಯನ್ನು ಕೇವಲ ಕಣ್ಣು ಪಿಳಿ-ಪಿಳಿ ಮಾಡುತ್ತಾ ನೋಡುತ್ತಿದ್ದ ನಾನೂ ಈಗ ಸ್ವತಂತ್ರವಾಗಿ ಒಂದಿಷ್ಟಾದರೂ ಅರ್ಥೈಸಿಕೊಳ್ಳುವಷ್ಟು ದೊಡ್ಡವಳಾಗಿದ್ದೇನೆ. ಈ  ಇಪ್ಪತ್ತೈದು ವರ್ಷಗಳಲ್ಲಿ ಆಗೊಮ್ಮೆ ಈಗೊಮ್ಮೆ ಕಾಶ್ಮೀರಿ ಪಂಡಿತರ ಯಾತನಾದಾಯಕ ಬದುಕಿನ ಬಗ್ಗೆ ಅಲ್ಲೊಮ್ಮೆ ಇಲ್ಲೊಮ್ಮೆ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿತ್ತೇ ಹೊರತು ಅದೊಂದು ಮುಖ್ಯವಾಹಿನಿಯ ಚರ್ಚೆಯಾಗಿ, ಅವರಿಗೆ ನ್ಯಾಯ ಒದಗಿಸುವ ಮಾರ್ಗವಾಗಿ ಯಾವತ್ತೂ ಚರ್ಚೆ ಆಗಲೇ ಇಲ್ಲ. ಮಾನವ ಹಕ್ಕಿನ ಕುರಿತಾಗಿ ಮಾತಾಡುವ ಯಾವ ಬುದ್ಧಿ ಜೀವಿಗಳಿಗೂ ಕಾಶ್ಮೀರೀ ಪಂಡಿತರೂ ಮಾನವರೇ ಮತ್ತು ಅವರಿಗೂ ಹಕ್ಕುಗಳಿವೆ ಅನ್ನುವುದು ಅರ್ಥ ಆಗಲೇ ಇಲ್ಲ.

ಈಗ ದೇಶದಲ್ಲೆಡೆ ಮತ್ತೊಮ್ಮೆ ಕಾಶ್ಮೀರಿ ಪಂಡಿತರ ಬಗ್ಗೆ ಚರ್ಚೆಗಳಾಗುತ್ತಿವೆ. ಬಲವಂತವಾಗಿ ವಲಸೆ ಹೋದ ಕಾಶ್ಮೀರಿಗಳನ್ನು ಮತ್ತೆ ಕಾಶ್ಮೀರಕ್ಕೆ ಕರೆತರುವ ಕೇಂದ್ರ ಸರಕಾರದ ಮಹತ್ತರ ಯೋಚನೆ ಇಡೀ ದೇಶದೊಳಗೆ ಒಂದು ಹೊಸ ಸಂಚಲವನ್ನು ಹುಟ್ಟುಹಾಕಿದೆ. ಮೂರು ತಿಂಗಳ ಹಿಂದೆ ಕಾಶ್ಮೀರದಲ್ಲಿ ಚುನಾವಣೆ ಘೋಷಣೆಯಾದಗಲೇ ಇಂತಹ ಒಂದು ನಿರೀಕ್ಷೆ ಕಾಶ್ಮೀರಿಗಳಲ್ಲಿ ಗರಿಗೆದರಿತ್ತು, ಅದಕ್ಕೆ ಸರಿಯಾಗಿ ಅಧಿಕಾರಕ್ಕೆ ಬಂದರೆ ಕಾಶ್ಮೀರೀ ಪಂಡಿತರಿಗೆ  ಮತ್ತೆ ತಮ್ಮ ಮೂಲ ಸ್ಥಾನದಲ್ಲಿ ವಸತಿ ಕಲ್ಪಿಸಲಾಗುವುದು ಅನ್ನುವ ಆಶ್ವಾಸನೆಯನ್ನೂ ನೀಡಲಾಗಿತ್ತು. ಈಗ ಅದರ ಮುಂದುವರಿದ ಭಾಗವಾಗಿ ಅವರನ್ನು ಗೌರಯುತವಾಗಿ ಕಾಶ್ಮೀರಕ್ಕೆ ಮತ್ತೆ ಕರೆ ತರುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.

ನಿಜಕ್ಕೂ ಇದು ಸರಕಾರದ ಒಂದು ಅತ್ಯುತ್ತಮ ನಿರ್ಧಾರ ಮತ್ತಿದು ಆಗಲೇ ಬೇಕಾದ ಕಾರ್ಯ. ಇಂತಹದೊಂದು ನಿರ್ಧಾರಕ್ಕೆ ಬರಲು ಅಖಂಡ ಇಪ್ಪತ್ತೈದು ವರ್ಷ ಕಾಯಬೇಕಾದ ಅನಿವಾರ್ಯತೆಯೇ ಇರಲಿಲ್ಲ. ತಮ್ಮದಲ್ಲದ ನೆಲದಲ್ಲಿ ತಮ್ಮದಲ್ಲದ ಬದುಕನ್ನು ಕಟ್ಟಿಕೊಳ್ಳಲು ಪಂಡಿತರು ಅದೆಷ್ಟು ಹೆಣಗಾಡಿರಬೇಕು ಅನ್ನುವ ಕಲ್ಪನೆಯೇ ನಮ್ಮನ್ನು ಅಧೀರರನ್ನಾಗಿಸುವಾಗ ನಮ್ಮನ್ನಾಳಿದವರಿಗೇಕೆ ಅವರ ನೋವು ಅರ್ಥವಾಗಿಲ್ಲ ಅನ್ನುವುದು ಯಕ್ಷ ಪ್ರಶ್ನೆಯಾಗಿಯೇ ಉಳಿಯುತ್ತದೆ.

ಅಸಲಿಗೆ ೨೦೦೫ರಲ್ಲೇ ಇಂತಹುದೊಂದು ಪ್ರಯತ್ನ ನಡೆದಿತ್ತು. ಉದ್ಯೋಗದ ಆಮಿಷವೊಡ್ಡಿ ಕಾಶ್ಮೀರಿಗಳನ್ನು ಮತ್ತೆ ಮೂಲಸ್ಥಾನಕ್ಕೆ ಕರೆ ತರುವ ಬಗ್ಗೆ ಮಾತುಕಥೆಗಳು ನಡೆದಿತ್ತು. ಆಮೇಲೆ ಅದೇನಾಯ್ತೋ ಗೊತ್ತಿಲ್ಲ, ವೋಟ್ ಬ್ಯಾಂಕ್ ರಾಜಕಾರಣದ ಪ್ರಭಾವವೋ, ಇಚ್ಚಾ ಶಕ್ತಿಯ ಕೊರತೆಯೋ, ಅದು ಮಾತುಕಥೆಯ ಹಂತದಲ್ಲೇ ನಿಂತು ಹೋಯ್ತು. ಈಗ ಈಗಿನ ಸರಕಾರ ಮತ್ತೊಮ್ಮೆ ಅಂತಹುದೊಂದು ಇಚ್ಛಾಶಕ್ತಿ ತೋರುತ್ತಿದೆ. ಈಗಲಾದರೂ ಕಾಶ್ಮೀರಿಗಳ ಬವಣೆ ತೀರಿ ಮತ್ತೆ ಮೂಲಸ್ಥಾನಕ್ಕೆ ಬಂದು ನೆಮ್ಮದಿಯಿಂದ ನೆಲೆ ನಿಲ್ಲುವಂತಾಗಬಹುದೇ? ಆಗಲಿ ಅನ್ನುವುದೇ ನಮ್ಮ ಹಾರೈಕೆ.

ಆದರೆ ಇಲ್ಲಿ ಕೇಳಿಕೊಳ್ಳಬೇಕಾದ ಪ್ರಶ್ನೆಯೇನೆಂದರೆ, ನಿಜಕ್ಕೂ ಕಾಶ್ಮೀರಿ ಪಂಡಿತರಿಗೆ ಪ್ರತ್ಯೇಕವಾದ ವಸತಿ ಪ್ರದೇಶ ನಿರ್ಮಿಸುವ ಅಗತ್ಯವಿದೆಯೇ? ಅವರು ಕಾಶ್ಮೀರಕ್ಕೆ ಮತ್ತೆ ಹಿಂದಿರುಗಬೇಕು ನಿಜ, ತಮ್ಮ ಪೂರ್ವಿಕರು ನೆಲೆ ನಿಂತಿದ್ದ ಜಾಗದಲ್ಲಿ ಮತ್ತೆ ಅವರು ನೆಲೆಯೂರಬೇಕು ನಿಜ, ಆ ಮಣ್ಣಿನೊಂದಿಗೆ ಅವರಿಗಿರುವ ಭಾವುಕ ನಂಟು ಮತ್ತೊಮ್ಮೆ ಅವರನುಭವಕ್ಕೆ ದಕ್ಕಬೇಕು ನಿಜ. ಅವರಿಗೆ ಕೊಡಲೇಬೇಕಾದ ಪ್ಯಾಕೇಜ್ ಗಳನ್ನು, ಅನುದಾನಗಳನ್ನು ಅಗತ್ಯವಾಗಿ ಕೊಡಲೇ ಬೇಕು, ಅವರ ಬದುಕು ಅರಳಿಸಲು ಸರಕಾರ ಏನೆಲ್ಲಾ ಮಾಡಬೇಕೋ ಅದನ್ನೆಲ್ಲಾ ಮಾಡಲೇಬೇಕು, ಅವರೊಳಗೆ ಮನೆ ಮಾಡಿಕೊಂಡಿರುವ ಅಭದ್ರ ಭಾವನೆಯನ್ನು ಕೊನೆಗಾಣಿಸಿ ಸುರಕ್ಷಿತ ಭಾವನೆಯನ್ನು ಮೂಡಿಸಲೇಬೇಕು.  ಹಾಗಂತ ಅವರಿಗೋಸ್ಕರ ’ಪ್ರತ್ಯೇಕ ವಸತಿ’ ನಿರ್ಮಿಸಿ, ಉಳಿದೆಲ್ಲರಿಂದ ದೂರವಿಟ್ಟು ತಾವು ಪ್ರತ್ಯೇಕರು ಅನ್ನುವ ಭಾವನೆ ಮೂಡಿಸಬೇಕಾ? ಹಾಗೆ ಮಾಡಿದರೆ ಕಾಶ್ಮೀರದೊಳಗೆ ಮತ್ತೊಂದು ಕಾಶ್ಮೀರವನ್ನು ನಿರ್ಮಿಸಿದಂತಾಗುವುದಿಲ್ಲವೇ? ಈಗಾಗಲೇ ಹಿಂದು, ಮುಸ್ಲಿಂ, ಭಾರತಕ್ಕೆ ನಿಷ್ಠರು, ಪಾಕಿಸ್ತಾನೀ ಪರ ಇರುವವರು, ಆಜಾದಿಗಳು ಎಂದೆಲ್ಲಾ ಹರಿದು ಹಂಚಿ ಹೋಗಿರುವ ಕಾಶ್ಮೀರೀ ಮನಸ್ಸುಗಳ ಮಧ್ಯೆ ಈ ಮೂಲಕ ಮತ್ತಷ್ಟು ಒಡಕು ಮೂಡಿಸಿದಂತಾಗುವುದಿಲ್ಲವೇ?  ಹಲವು ಆಮಿಷಗಳಿಗೆ, ವಿಭ್ರಾಂತಿಗಳಿಗೆ ಒಳಗಾಗಿ ವಿವೇಚನಾ ಶಕ್ತಿಯನ್ನೇ ಕಳೆದುಕೊಂಡಿರುವ ಹಲವು ಯುವ ಮನಸ್ಸುಗಳನ್ನು ಮತ್ತಷ್ಟು ಕ್ಷುಬ್ಧವಾಗಿಸಲು ಪಕ್ಕದ ಪಾಕಿಸ್ತಾನಕ್ಕೋ, ನೆರೆಯ ಚೈನಾಕ್ಕೋ ನಾವೇ ಅವಕಾಶ ಮಾಡಿಕೊಟ್ಟಂತಾಗುವುದಿಲ್ಲವೇ? ಕೆಲವು ದಶಕಗಳ ಹಿಂದೆ ವರ್ಣಭೇದ ನೀತಿ ಉಚ್ಛ್ರಾಯ ಸ್ಥಿತಿಯಲ್ಲಿದ್ದಾಗ ದಕ್ಷಿಣ ಆಫ್ರಿಕಾದಲ್ಲಿ ಕರಿಯರಿಗೊಂದು, ಬಿಳಿಯರಿಗೊಂದು ಅಂತ ಪ್ರತ್ಯೇಕ ಕಾಲೊನಿಗಳು ಅಸ್ತಿತ್ವದಲ್ಲಿದ್ದವು, ಕರಿಯರು ಬಿಳಿಯರ ಕಾಲೊನಿಗಳತ್ತ ಕಣ್ಣು ಹಾಯಿಸುವುದೂ ತಪ್ಪು ಅನ್ನುವ ಬರ್ಬರತೆ ಇತ್ತು. ಕಾಶ್ಮೀರದಲ್ಲೂ ಮುಂದೆ ಈ ’ಪ್ರತ್ಯೇಕ ವಸತಿ ನಿಲಯ’ ಅನ್ನುವ ಕಲ್ಪನೆ ಇಂತಹ ಅವಿವೇಕಿತನಗಳಿಗೆ ದಾರಿ ಮಾಡಿಕೊಡಲಾರದು ಎಂದು ಹೇಗೆ ಹೇಳುವುದು? ಇಷ್ಟಕ್ಕೂ ಯು.ಜಿ.ಸಿ ನಡೆಸಿದ ಸಮೀಕ್ಷೆಯೊಂದರಲ್ಲಿ ಶೇಕಡಾ ಅರವತ್ತರಷ್ಟು ಸಂತ್ರಸ್ತ ಕಾಶ್ಮೀರಿ ಪಂಡಿತರು ತಾವು ಎಲ್ಲರದೊಂದಿಗೆ ಬದುಕಲು ಇಚ್ಛಿಸುತ್ತೇವೆ, ಕಾಶ್ಮೀರಕ್ಕೆ ಮರಳಲು ಅವಕಾಶವಿದ್ದರೆ ಸಾಕು, ಪ್ರತ್ಯೇಕವಾಗಿ ನೆಲೆಸುವ ಇಚ್ಛೆಯಿಲ್ಲ ಎಂದಿರುವಾಗ ನಮಗೇಕೆ ಅವರನ್ನು ಪ್ರತ್ಯೇಕವಾಗಿ ಇರಿಸುವ ಹಪಹಪಿ?          

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ