ಗುರುವಾರ, ಮಾರ್ಚ್ 31, 2016

ಈ ಆರ್ದ್ರ ಭಾವಕ್ಕೆ ಸಾವಿಲ್ಲ.

ಇನ್ನೂ ಒಂದು ಕೈ ಮುಸುಕು ಮುಸುಕು ಬಣ್ಣದ, ಅಕ್ಷರಗಳು ಮಬ್ಬಾಗಿರುವ ಪತ್ರಗಳ ಕಟ್ಟಿನ ಮೇಲಿದೆ. ಅಂಗೈ ಪೂರ್ತಿ ನವಿರು ನೆನಪಿನ ಹುಡಿ. ಮನಸ್ಸಿನ ತುಂಬಾ  nostalogia ಗಳ ಕಲರವ. ಮೆದುಳಿನ ಪದರು ಪದರುಗಳಲ್ಲೂ ಒಂದು ಕಾಲಘಟ್ಟದ ಸ್ಥೂಲ ಚಿತ್ರಣ ತಣ್ಣಗೆ ಕದಲುತ್ತಿದೆ. ಪ್ರಪಂಚದ ಅಷ್ಟೂ ಮಧುರ ಅನುಭೂತಿಗಳು ನನ್ನೊಳಗೆ ಆವಿರ್ಭವಿಸಿ ನಾನೆಲ್ಲೋ ಗಾಳಿಯಲ್ಲಿ ತುಂಬಾ ಹಗುರಾಗಿ ತೇಲುತ್ತಿದ್ದೇನೇನೋ ಅನ್ನುವ ಭಾವ. ಅದೆಷ್ಟು ಹೊತ್ತಿಂದ ಹೀಗೆ ಪತ್ರಗಳ ಮೇಲೆ ಕೈಯಿಟ್ಟು ಒಂದು ಅನಿವರ್ಚನೀಯತೆಯನ್ನು ಅನುಭವಿಸುತ್ತಿದ್ದೇನೋ ನನಗೇ ಗೊತ್ತಿಲ್ಲ.

ಪತ್ರಗಳಿಗೆ, ಕೈ ಬರಹಗಳಿಗಿರುವ ಅಸಲೀ ತಾಕತ್ತೇ ಅದು. ಅದೆಷ್ಟು ವರ್ಷ ಕಳೆದ ಮೇಲೆ ಓದಿಕೊಂಡರೂ ಅವು ನಮ್ಮಲ್ಲೊಂದು ಆರ್ದ್ರ, ಆಪ್ತ ಭಾವವನ್ನು ಹುಟ್ಟಿಸುತ್ತವೆ. ಪತ್ರ ಬರೆದವರು ಇಲ್ಲೆಲ್ಲೋ ಇದ್ದರೇನೋ ಅನ್ನುವ ಮಧುರ ಅನುಭೂತಿಯನ್ನು ಸೃಷ್ಟಿಸುತ್ತದೆ. ಯಾಕೆಂದರೆ ಪತ್ರ ಬರೆಯುವಾಗ ಬರೆಯುವವನ ಮನಸ್ಥಿತಿಯಲ್ಲಿ ಏನು ಬರೆಯಬೇಕು, ಹೇಗೆ ಬರೆಯಬೇಕು ಅನ್ನುವ ಸ್ಪಷ್ಟ ಕಲ್ಪನೆಗಳಿರುತ್ತವೆ. ಪತ್ರ ಬರೆಯುವುದಕ್ಕಾಗಿಯೇ ಆತ ಒಂದು ಸಿದ್ಧತೆಯನ್ನು ಮಾಡಿಕೊಂಡಿರುತ್ತಾನೆ. ಆ ಸಿದ್ಧತೆಯೇ ಪತ್ರದ ಆಪ್ತತೆಯನ್ನು ವರ್ಷಗಟ್ಟಲೆ ಕಾಪಿಟ್ಟುಕೊಳ್ಳುವುದು.

ಈಗ ನನ್ನ ಕೈಯಲ್ಲಿರುವ ಪತ್ರಗಳು ಸರಿ ಸುಮಾರು ಮೂವತ್ತು ವರ್ಷಗಳಷ್ಟು ಹಿಂದಿನವು ಅಂದರೆ  1984-85 ರ ಆಸುಪಾಸಿನವು. ಅವಿನ್ನೂ ಅಮ್ಮನ ತಾರುಣ್ಯದ ದಿನಗಳು, ಬಹುಶಃ ಆಗಷ್ಟೇ ಮದುವೆಯಾಗಿ ಗಂಡನ ಮನೆಗೆ ಕಾಲಿಟ್ಟಿದ್ದರು. ’ಪ್ರೀತಿಯ ಮಗಳೇ’ ಅಂತ ಪ್ರಾರಂಭವಾಗುವ ಪತ್ರದ ಪೂರ್ತಿ ತುಂಬಿರುವುದು ಅಮ್ಮನೆಡೆಗೆ ಅಜ್ಜನಿಗಿರುವ ವಾತ್ಸಲ್ಯ ಮತ್ತು ಅಂತ:ಕರಣಗಳೇ. ಗಂಡನ ಮನೆಯಲ್ಲಿ ಹೇಗೆ ನಡ್ಕೊಳ್ಳಬೇಕು ಅಂತ ಎಲ್ಲೂ ನೇರವಾಗಿ ವಿವರಿಸದಿದ್ದರೂ ಪ್ರತಿ ಪತ್ರದ ಆಂತರ್ಯದಲ್ಲಿ ಸುತ್ತಿ ಬಳಸಿ ಸಂಸ್ಕಾರ, ಸಂಸ್ಕೃತಿಗಳ ಬಗ್ಗೆ ಒಂದು ಪುಟ್ಟ ಸಂದೇಶ ಇದ್ದೇ ಇದೆ. ಅತ್ತೆ, ಮಾವ, ನಾದಿನಿಯರು, ಮೈದುನಂದಿರು, ಓರಗಿತ್ತಿ ಹೀಗೆ ತುಂಬಿದ ಸಂಸಾರಕ್ಕೆ ಸೊಸೆಯಾಗಿ ಹೋದ ಮಗಳ ನಡೆ-ನುಡಿಯಲ್ಲಿ ಇರಬೇಕಾದ ನಾಜೂಕುತನ, ಹೊಂದಾಣಿಕೆಯ ಬದುಕಲ್ಲಿರುವ ಖುಶಿ, ತವರು ಮನೆಯೆಂಬ comfort zone ನಿಂದ ಹೊರಬಂದಾಗಾಗುವ ಸಹಜ ಚಡಪಡಿಕೆಗಳನ್ನು ಮೀರುವ ಬಗೆ, ನಾಲ್ಕು-ಐದು ಸಾಲುಗಳ ಪುಟ್ಟ ಪುಟ್ಟ ಝೆನ್ ಕಥೆಗಳು... ಹೀಗೆ ಅಕ್ಷರಗಳಲ್ಲೇ ಜೀವ, ಜೀವನ ಎರಡೂ ತುಂಬಿ ಕಳಿಸಿದಂತಿವೆ ಈ ಪತ್ರಗಳು. ಇನ್ನು ಅಮ್ಮ ಮೊದಲ ಬಾರಿ ಗರ್ಭಧರಿಸಿದಾಗಿನ ಪತ್ರಗಳ ತೂಕವೇ ಬೇರೆ. ಅವು ಹಾಲು ಕುಡಿ ಎಂಬಲ್ಲಿಂದ ಒಳ್ಳೆಯ ಪುಸ್ತಕಗಳನ್ನು ಓದು ಅನ್ನುವವರೆಗಿನ ಅತೀವ ಕಾಳಜಿ, ಇನ್ನೂ ಹುಟ್ಟದ ಮಗುವಿನ ಬಗ್ಗೆ ಅಜ್ಜ ನೇಯ್ದಿರಬಹುದಾದ ಕನಸಿನ ಕುಲಾವಿ, ಗರ್ಭಿಣಿ ಎಂದು ಗೊತ್ತಾದಮೇಲೂ ನೀನು ತವರಿಗೆ ಬಂದಿಲ್ಲ ಅನ್ನುವ ಹುಸಿಮುನಿಸು, ಮೊದಲ ಮೊಮ್ಮಗುವಿನ ನಿರೀಕ್ಷೆಯಲ್ಲಿ ಮನೆಯಲ್ಲಿ ಆರಂಭವಾಗಿರುವ ಸಿದ್ಧತೆ, ಹೊಟ್ಟೆಯಲ್ಲೊಂದು ಜೀವವಿದೆ ಅನ್ನುವುದನ್ನು ನೆನಪಿಟ್ಟುಕೊಂಡು ಇನ್ನಾದರೂ ಹತ್ತುವುದು-ಇಳಿಯುವುದನ್ನು ಕಡಿಮೆ ಮಾಡು ಅನ್ನುವ ಗದರಿಕೆಗಳ ಜೀವಂತ ಪ್ರತಿನಿಧಿಯಂತಿದೆ. ಉಳಿದಂತೆ ಮಾವನಿಗೆ ಪ್ರಮೋಷನ್ ಸಿಕ್ಕಿರುವುದು, ಚಿಕ್ಕಮ್ಮ ಋತುಮತಿಯಾಗಿರುವುದು, ಮನೆಯ ಕಪ್ಪು ಬೆಕ್ಕು ನಾಲ್ಕು ಮರಿ ಹಾಕಿರುವುದು, ಕೊಟ್ಟಿಗೆಯ ಮೂಲೆಯಲ್ಲಿ ಕಟ್ಟುವ ದನದ ಕಾಲಿಗೆ ಊರಿನ ಪೋಲಿ ಹುಡುಗರು ಕಲ್ಲೆಸೆದಿರುವುದು, ಮನೆಯ ಹಂಚು ಬದಲಾಯಿಸಿದ್ದು, ಪೆನ್ಷನ್ ಐವತ್ತು ರೂಪಾಯಿಗಳಷ್ಟು ಏರಿಕೆಯಾಗಿರುವುದು, ಪಂಚಾಯತ್ ಚುನಾವಣೆಯಲ್ಲಿ ಶಿಕ್ಷಿತರು ಆರಿಸಿ ಬಂದದ್ದು, ಊರ ಲೈಬ್ರೆರಿಯಲ್ಲಿ ಹೊಸ ಪುಸ್ತಕ ಬಂದಿರುವುದು, ಇನ್ನೂ ಓದಬೇಕಾಗಿರುವ ಅಬ್ರಹಾಂ ಲಿಂಕನ್ ನ ಜೀವನ ಚರಿತ್ರೆ... ಹೀಗೆ ಅಲ್ಲಿ ಉಲ್ಲೇಖವಾಗದ ವಿಷಯಗಳೇ ಇಲ್ಲ ಅನ್ನಬಹುದೇನೋ! ಅವನ್ನೆಲ್ಲಾ ಓದಿ ಸುಮ್ಮನೆ ಕಣ್ಣು ಮುಚ್ಚಿ ಕುಳಿತಾಗ, ನಾನು ಒಮ್ಮೆಯೂ ನೋಡಿಲ್ಲದ, ನೊಡಲಾಗದ ಕಾಲಘಟ್ಟದಲ್ಲೊಮ್ಮೆ ತಿರುಗಿ ಬಂದಂತಾಯಿತು. ಎಲ್ಲಕ್ಕಿಂತ ಹೆಚ್ಚಾಗಿ ನನ್ನನ್ನು ಹಿಡಿದಿಟ್ಟುಕೊಂಡದ್ದು ಆ ಪತ್ರಗಳಲ್ಲಿನ ಆಪ್ತತೆ ಮತ್ತು ಆರ್ದ್ರತೆ. ಅಸಂಘಟಿತ ಬದುಕು ಅದೆಷ್ಟು ಅರ್ಥಪೂರ್ಣವಾಗಿ ದಾಖಲಿಸಲ್ಪಟ್ಟಿದೆಯಲ್ಲಾ ಅನ್ನುವ ಅಚ್ಚರಿ. ಪತ್ರಗಳು ಬದುಕನ್ನು ಈ ಪರಿ ಬಂಧಿಸಿಟ್ಟ, ಪ್ರಭಾವಿಸಿದ್ದ ಕಾಲದಲ್ಲಿ ನಾನಿನ್ನೂ ಹುಟ್ಟಿರಲಿಲ್ಲವಲ್ಲಾ ಅನ್ನುವ ಪುಟ್ಟ ಅಸೊಯೆ.

ಎಲ್ಲಿ ಹೋಯ್ತು ಆ ಆತ್ಮೀಯತೆ? ಆರ್ದ್ರತೆ? ಸಲಿಗೆ? ಇನ್ನೇನು ಪತ್ರ ಬಂದೇ ಬಿಡುತ್ತದೆ ಅನ್ನುವ ಕಾತುರತೆ? ಅಂಚೆಯಣ್ಣನ ಸೈಕಲ್ ಗಂಟೆಯ ಸದ್ದು ಕೇಳಿಸಿದಾಗೆಲ್ಲಾ ಗೇಟಿನ ಬಳಿ ಓಡಿ ಹೋಗಿ "ಅಣ್ಣಾ, ಪತ್ರ ಇದೆಯಾ?" ಅಂತ ಕೇಳುವ ತನ್ನವರೆಡೆಗಿನ ನಿರ್ಮಲ ಕಾಳಜಿಗಳು? ಪತ್ರ ಬರೆಯುವಾಗಿನ ಪ್ರೀತಿ, ಸ್ನೇಹ, ಹಸಿ ಹಸಿ ಪ್ರೇಮ? ಪತ್ರ ತಲುಪಿದ ಕೂಡಲೇ ಆ ಕಡೆ ಇರುವವರು ಪಡಬಹುದಾದ ಸಂಭ್ರಮದ ರಮ್ಯ ಕಲ್ಪನೆ? ಕಲ್ಪನೆಗಳಿಗಷ್ಟೇ ದಕ್ಕಬಹುದಾದ ಅನೂಹ್ಯತೆ? ಇನ್‍ಲ್ಯಾಂಡ್ ಲೆಟರ್‌ನ ಸಂದುಗೊಂದುಗಳಲ್ಲೂ ಬರೆದು ಪತ್ರದ ಪೂರ್ತಿ ಅಕ್ಷರ ತುಂಬುವ ಖುಶಿ? ವರ್ಷಗಟ್ಟಲೆ ಉಳಿದುಕೊಳ್ಳುವ ಮಾಧುರ‍್ಯತೆ? ಪ್ರತಿ fullstopನ ನಂತರ ಹೊಸದಾಗಿ ಆರಂಭವಾಗುವ ವಾಕ್ಯಗಳಂತೆ ಹೊಸತನಗಳಿಗೆ ಬದುಕು ತೆರೆದುಕೊಳ್ಳುವ ಪ್ರಕ್ರಿಯೆ?

Phone, email, SMS, mobile, whtasapp...ಮುಂತಾದವುಗಳು ನಮ್ಮಿಂದ ಪತ್ರ ಬರೆಯುವ ಸಂಸ್ಕೃತಿಯನ್ನು ಕಿತ್ತುಕೊಂಡಿವೆ ಅಂತ ನಾವೇನೋ ಸುಲಭವಾಗಿ ಅನ್ನುತ್ತೇವೆ. ಆದ್ರೆ ಅವೆಲ್ಲಾ ನಮ್ಮ ಭಾವಶೂನ್ಯತೆಗಳನ್ನು ಮುಚ್ಚಿ ಹಾಕಲು ನಾವು ಮುಂದಿಡುವ ನೆಪಗಳಷ್ಟೆ. ಈ ಧಾವಂತದ ಜೀವನದಲ್ಲಿ ಎಲ್ಲರನ್ನೂ, ಎಲ್ಲವನ್ನೂ ಯಾಂತ್ರೀಕೃತವನ್ನಾಗಿಸಿದ ನಮ್ಮಲ್ಲೀಗ ಇಲ್ಲದಿರುವುದು, ಪತ್ರ ಬರೆಯಲು ಬೇಕಾಗಿರುವ ತನ್ಮಯತೆ, ಅದನ್ನು ತಲುಪಿಸುವಲ್ಲಿನ ತಾದಾತ್ಮ್ಯತೆ, ಪ್ರತಿಪತ್ರದ ನಿರೀಕ್ಷಣೆ ಬೇಡುವ ತಾಳ್ಮೆ... ಇವೇ ಮುಂತಾದ ಸಹಜ ಭಾವುಕ ಅಭಿವ್ಯಕ್ತಿಗಳು. ನಾವೀಗ ಕಳೆದುಕೊಂಡಿರುವುದು, ಪತ್ರಗಳ ಮುಖೇನ ಇದಿರುಗೊಳ್ಳುವ ಸಂಭ್ರಮದ ಗಳಿಗೆಗಳನ್ನು ಹಾಗೇ ಇಡಿಇಡಿಯಾಗಿ ಹೃದಯದೊಳಕ್ಕೆ ಇಳಿಸಿಕೊಳ್ಳುವ ಅನನ್ಯ ಕಲೆಗಾರಿಕೆಯನ್ನು. 

ಈಗಾಗಲೇ ಕಾಲದ ಹರಿವಿನೊಂದಿಗೆ ಟೆಲಿಗ್ರಾಂ ಕೊನೆಯುಸಿರೆಳೆದಿದೆ. ನಮ್ಮ ಅಜ್ಜ, ಅಜ್ಜಿ, ಅಪ್ಪ, ಅಮ್ಮನ ಜತೆಗೆ ಕರುಳುಬಳ್ಳಿಗಳಿರುವ ಪತ್ರವೂ ಇನ್ನೊಂದಿಷ್ಟು ವರ್ಷಗಳ ನಂತರ ಅಸುನೀಗದಿರಬಾರದೆಂದರೆ ಕನಿಷ್ಠಪಕ್ಷ ವರ್ಷಕ್ಕೊಂದೆರಡು ಬಾರಿಯಾದರೂ ನಮ್ಮಾಪ್ತರಿಗೆ ಪತ್ರ  ಬರೆಯುವ ಪ್ರಯತ್ನಮಾಡೋಣ. ಯಾರಿಗೆ ಗೊತ್ತು ಕಳೆದು ಹೋದ ಸಂಬಂಧಗಳ ಮಾಧುರ್ಯಗಳು ಮತ್ತೆ ದಕ್ಕಲೂಬಹುದು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ