ಸೋಮವಾರ, ಏಪ್ರಿಲ್ 4, 2016

ಬದುಕು ಕಟ್ಟಿಕೊಟ್ಟ ಅವಳನ್ನು ಅವನೇಕೆ ದೂರ ಸರಿಸಿದ?

ಬಹುಶಃ ನಾವೆಲ್ಲರೂ ಸಿಂಡ್ರೆಲ್ಲಾ ಕಥೆ ಓದಿ/ಕೇಳಿ, ಅವಳಿಗಾಗಿ ಮರುಗುತ್ತಾ, ಅವಳ ಚಿಕ್ಕಮ್ಮನನ್ನು ನಖಶಿಖಾಂತ ದ್ವೇಷಿಸುತ್ತಾ ಬೆಳೆದವರೇ. ಮಲತಾಯಿಯೆಂದರೆ ಹೆಣ್ಣಿನ ರೂಪದ ರಾಕ್ಷಸಿ ಮತ್ತು ಒಳ್ಳೆಯತನಕ್ಕೆ ಕೊನೆಗಾದರೂ ಜಯ ಇದ್ದೇ ಇರುತ್ತದೆ ಅನ್ನುವ ಕಲ್ಪನೆ ಮೊಳಕೆಯೂಡೆಯಲು ಕಾರಣ ಸಿಂಡ್ರೆಲ್ಲಾ ಮತ್ತು ಅಂತಹ  happy ending fairy taleಗಳೇ. ಆದ್ರೆ ನಾನಿಲ್ಲಿ ನಿಮಗೆ ಹೇಳಹೊರಟಿರುವುದು ಸಿಂಡ್ರೆಲ್ಲಾ ಕಥೆಗೆ ತೀರಾ ವ್ಯತಿರಿಕ್ತವಾದ ಕಥೆ.

ನಮ್ಮೂರಿನ ಪಕ್ಕದ ಊರಿದೆಯಲ್ವಾ, ಅದರ ಪಕ್ಕದ ಊರಲ್ಲಿ ಜಾತಿಗಳ ಹಂಗಿಲ್ಲದೆ, ಅಂಧ ಧರ್ಮಾಭಿಮಾನವಿಲ್ಲದೆ, ಕೇವಲ ಮನುಷ್ಯತ್ವವನ್ನು ಮಾತ್ರ ಆದರಿಸುವ ಒಬ್ಬ ಅಪ್ಪಟ ಕರಾವಳಿ ಮಣ್ಣಿನ ಮಗನಿದ್ದಾರೆ. ಅವರ ಮನೆಯ ನಾಲ್ಕೂ ಸುತ್ತಲೂ ಭತ್ತದ ಗದ್ದೆ, ಗದ್ದೆಯ ಮಧ್ಯದಲ್ಲೊಂದು ಕೆರೆ, ತುಸು ಹಿಂದಕ್ಕೆ ಬಂದರೆ ಮನೆ ಹಿತ್ತಲಿಗೆ ಅಂಟಿಕೊಂಡಂತೆ ಕೊಟ್ಟಿಗೆ, ಅಲ್ಲಿ ಸಹಬಾಳ್ವೆ ನಡೆಸುವ ಆಡುಗಳು ಮತ್ತು ದನಗಳು, ಅದರ ಹೊರಗೆ ಗೂಟಕ್ಕೆ ಕಟ್ಟಿರುವ ಕಪ್ಪು ನಾಯಿ... ಆ ಮನೆಯಲ್ಲೊಬ್ಬ ಹಾಲುಮನಸ್ಸಿನ ಬೊಗಸೆ ಕಂಗಳ ಮುದ್ದು ರಾಜಕುಮಾರಿ. ಮನೆಯ ಅಟ್ಟದಲ್ಲಿಟ್ಟ ಭತ್ತದ ಮೂಟೆಗಳನ್ನು ಇಲಿಗಳು ತಿಂದು ಹಾಳುಮಾಡುತ್ತವೆ ಎಂದು ಅವಳಪ್ಪ ಇಲಿ ಬೋಣು ತಂದಿಟ್ರೆ ಮೂತಿ ಉದ್ದ ಮಾಡ್ಕೊಂಡು ಉಪವಾಸ ಸತ್ಯಾಗ್ರಹ ಮಾಡುವಷ್ಟು ಮುಗ್ಧೆ ಆಕೆ. ಇಲಿ ಬೋಣಿಂದ ನಿಂಗೇನಮ್ಮ ಕಷ್ಟ ಅಂತ ಕೇಳಿದ್ರೆ, ಆ ಬೋಣಲ್ಲೇನಾದ್ರೂ ಅಮ್ಮ ಇಲಿ ಸಿಕ್ಕಿಹಾಕಿಕೊಂಡು ಸತ್ತುಹೋದ್ರೆ ಮರಿ ಇಲಿಗಳೆಲ್ಲಾ ಅನಾಥವಾಗಿಬಿಡುತ್ತಲ್ಲಾ ಅನ್ನುತ್ತಿದ್ದಳವಳು.

ಹೀಗಿದ್ದ ನಮ್ಮ ರಾಜಕುಮಾರಿ ಇನ್ನೂ ಪದವಿ ಓದ್ತಿರ್‍ಬೇಕಾದ್ರೆ ದಸರೆ ರಜೆಗೆಂದು ಮೈಸೂರಲ್ಲಿದ್ದ ಗೆಳತಿ ಮನೆಗೆ ಹೋದ್ಳು. ಅಲ್ಲಿ ದಸರೆ ನೋಡಿದ್ಳೋ, ಬಿಟ್ಳೋ ಗೊತ್ತಿಲ್ಲ. ಆದ್ರೆ ಪಕ್ಕದ ಮನೆಯಲ್ಲಿದ್ದ ಹತ್ತು ವರ್ಷದ ತಾಯಿಯಿಲ್ಲದ ಮಗು ಅವಿನಾಶನನ್ನು ವಿಪರೀತ ಅನ್ನುವಷ್ಟು ಹಚ್ಚಿಕೊಂಡುಬಿಟ್ಳು.

ಅಲ್ಲಿಂದ ಊರಿಗೆ ಬಂದವ್ಳೇ, ತಾನು ಮದುವೆ ಅಂತ ಆಗುವುದಾದರೆ ಅವನಪ್ಪನನ್ನು ಮಾತ್ರ ಅಂತ ತನ್ನ ತೀರ್ಮಾನ ಹೇಳ್ಬಿಟ್ಳು. ಅಪ್ಪ-ಅಮ್ಮ ಅವಳನ್ನು ಎಷ್ಟೇ ಕೇಳಿಕೊಂಡರೂ ತನ್ನ ನಿರ್ಧಾರದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಅಂತ ಖಡಾಖಂಡಿತವಾಗಿ ನಿಂತಳು. ಎಂದೂ ಬಯ್ಯದ ಅಪ್ಪ ಎರಡೇಟು ಹೊಡೆದು ಬುದ್ಧಿ ಹೇಳೋಕೆ ಪ್ರಯತ್ನಿಸಿದ್ರು, ಅಮ್ಮ ಕಣ್ಣೇರು ಹಾಕುತ್ತಾ ಮೂಲೆ ಸೇರಿದ್ರು. ಕೊನೆಗೆ ಅವಳ ಮೈಸೂರಿನ ಗೆಳತಿಯನ್ನು ಕರೆಸಿ ಬುದ್ಧಿ ಹೇಳಿಸಿದ್ದೂ ಆಯಿತು. ಊಹೂಂ, ಅವಳು ಯಾರ ಮಾತನ್ನೂ ಕೇಳುವ ಪರಿಸ್ಥಿತಿಯಲ್ಲಿ ಇರಲೇ ಇಲ್ಲ.

ನೀನೇನೇ ತಿಪ್ಪರಲಾಗ ಹಾಕಿದ್ರೂ ಈ ಮದುವೆಯನ್ನು ಒಪ್ಪಿಕೊಳ್ಳೋಕೆ ಸಾಧ್ಯಾನೇ ಇಲ್ಲ ಅಂತ ಅಪ್ಪನೂ ಖಡಾಖಂಡಿತವಾಗಿ ನಿಂತ್ರು. ನಮ್ಮ ರಾಜಕುಮಾರಿ ಆದರ್ಶದ ಅಮಲಲ್ಲೋ ಅಥವಾ ಆ ಮಗುವಿನ ಮೇಲಿನ ಅವಳ ಸಹಜ ಅಂತಃಕರಣದಿಂದಲೋ ಹೇಳದೆ ಕೇಳದೆ ಒಂದು ರಾತ್ರಿ ಮನೆಬಿಟ್ಟು ಹೊರಟು ಹೋದಳು. ಹದಿನಾರಂಕದ ಆ ಮನೆಯ ಪೂರ್ತಿ ಸ್ಮಶಾನ ಮೌನ, ಆಗೊಮ್ಮೆ ಈಗೊಮ್ಮೆ ಬಿಕ್ಕಳಿಸುವ ಶಬ್ಧವೊಂದನ್ನು ಬಿಟ್ಟರೆ ಅಲ್ಲಿ ಇನ್ನಾವ ಸದ್ದಿಗೂ ಜಾಗವೇ ಇರ್ಲಿಲ್ಲ. ತನ್ನ ಒಡತಿಯ ವಿದಾಯವನ್ನು ಸಹಿಸಲಾರದ ಆಡು, ದನಗಳೂ ’ಅಂಬಾ’ ಅನ್ನುವುದನ್ನೇ ಮರೆತುಬಿಟ್ಟವು.

ಆಯ್ತಲ್ಲಾ, ಮನೆ ಬಿಟ್ಟು ಹೋದ್ಳು ಅಂದ್ನಲ್ಲಾ, ಹಾಗೆ ಹೋದವಳು ತನ್ನ ಗೆಳತಿಯ ಮನೆಗೂ ಹೋಗದೆ, ಅವಿನಾಶನ ಮನೆಗೇ ಹೊಗಿ, ಅವನಪ್ಪನ ಬಳಿ "ನೋಡಿ, ನಾನು ಮನೆಬಿಟ್ಟು ಬಂದಿದ್ದೇನೆ, ನಾಳೆ ಬೆಳಗ್ಗೆ ಎಲ್ಲಾದರೂ ಸರಿ ನಮ್ಮ ಮದುವೆ ಆಗ್ಲೇಬೇಕು" ಅಂದಳು. ಅವರಿಗೆ ನಿಜಕ್ಕೂ ಇವಳ ಮದುವೆಯಾಗುವ ಮನಸ್ಸಿತ್ತೋ ಇಲ್ವೋ ಗೊತ್ತಿಲ್ಲ, ಮರುದಿನ ಬೆಳಗ್ಗೆ ಆಗುತ್ತಿದ್ದಂತೆ ದೇವಸ್ಥಾನವೊಂದರಲ್ಲಿ ಹಾರ ಬದಲಾಯಿಸಿಕೊಂಡರು. ಅಲ್ಲಿಗೆ ವಿದ್ಯುಕ್ತವಾಗಿ ಆಕೆ ಅವಿನಾಶನ ತಾಯಿಯಾಗಿಬಿಟ್ಳು, ಅಂದರೆ ನಮ್ಮ ಸಿಂಡ್ರೆಲ್ಲಾ ಕಥೆಯಲ್ಲಿರುವಂತೆ ಚಿಕ್ಕಮ್ಮನಾದಳು.

ಆದ್ರೆ ಸಿಂಡ್ರೆಲ್ಲಾಳ ಚಿಕ್ಕಮ್ಮನಂತೆ ಮಲತಾಯಿಯಾಗದೆ, ಮಮತಾಮಯಿಯಾದಳು. ಮದುವೆಯ ಮೊದಲ ರಾತ್ರಿಯೇ ಗಂಡನ ಬಳಿ ’ ಅವಿನಾಶ ತಾನೇ ತಾನಾಗಿ ತಮ್ಮನೋ/ತಂಗಿಯೋ ಬೇಕು ಅನ್ನುವವವರೆಗೂ ನಮಗೆ ಮಕ್ಕಳಾಗೋದೇ ಬೇಡ’ ಅಂದ್ಳು. ಅವರೂ ಒಪ್ಪಿಕೊಂಡರು. ಆದ್ರೆ ಯಾವುದೂ ಅಲ್ಲಿ ಅವಳಂದುಕೊಂಡಂತೆ ಇರಲಿಲ್ಲ. ತನ್ನ ತಾಯಿಯ ಸ್ಥಾನದಲ್ಲಿ ಇನ್ಯಾರೋ ಬಂದಿರುವುದನ್ನು ಸಹಿಸಿಕೊಳ್ಳಲು ಅವಿನಾಶ ಸಿದ್ಧನಿರಲಿಲ್ಲ. ಮೊದಮೊದಲು ಅವಳ ಜೊತೆ ಜಗಳವಾಡಲು ಪ್ರಯತ್ನಿಸುತ್ತಾ, ಅಸಹಕಾರ ಚಳವಳಿ ಮಾಡಿ, ತಂದೆಯ ಬಳಿ ಅವಳ ದೂರು ಹೇಳಿ ಮನೆಯಿಂದ ಓಡಿಸಲು ಪ್ರಯತ್ನಪಟ್ಟ. ಅದ್ಯಾವುದೂ ಫಲಕಾರಿಯಾಗಲಿಲ್ಲ ಅಂತಾದಮೇಲೆ ಒಂದುದಿನ ಮೈ ಪೂರ್ತಿ ಬಾಸುಂಡೆ ಬರುವ ಹಾಗೆ ತಾನೇ ಅಪ್ಪನ ಬೆಲ್ಟಲ್ಲಿ ಹೊಡೆದುಕೊಂಡು, ಅಪ್ಪ ಬಂದಾಗ ಇದೆಲ್ಲಾ ಅಮ್ಮನೇ ಮಾಡಿದ್ದು ಅಂತ ಕಣ್ಣೀರಿಟ್ಟ.

ಅವನ ಕಣ್ಣೀರಿಗೆ ಕರಗಿದ ಅಪ್ಪ, ಹಿಂದು ಮುಂದು ಯೋಚಿಸದೆ, ಅವಳನ್ನು ಚೆನ್ನಾಗಿ ದಬಾಯಿಸಿಬಿಟ್ಟ. ಅಷ್ಟೂ ಸಾಲದೆಂಬಂತೆ ಎರಡೇಟು ಹೊಡೆದೂಬಿಟ್ಟ. ಇನ್ನೇನು ಚಿಕ್ಕಮ್ಮ ಇದೆಲ್ಲಾ ನಾನೇ ಮಾಡಿದ್ದು ಅಂತ ಅಂದುಬಿಡುತ್ತಾಳೇನೋ ಅಂತ ಭಯಪಡುತ್ತಿರಬೇಕಾದರೆ ನಮ್ಮ ರಾಜಕುಮಾರಿ ಮನೆಬಿಟ್ಟು ಬಂದನಂತರ ಮೊದಲಸಲ ಅಪ್ಪ ಅಮ್ಮನನ್ನು ನೆನೆಸಿಕೊಂಡಳು. ಅದೆಷ್ಟು ಮುದ್ದಿನಿಂದ, ಪ್ರೀತಿಯಿಂದ ನನ್ನ ಬೆಳೆಸಿದ್ದರಲ್ಲಾ ಅಂದುಕೊಂಡಳು. ಅಪ್ಪ-ಅಮ್ಮನ ಪ್ರೀತಿ, ಮಮತೆ ವಾತ್ಸಲ್ಯ ನೆನಪಾಗುತ್ತಲೆ ಅವಿನಾಶನ ಬಗೆಗೆ ಅವಳಿಗಿದ್ದ ಪ್ರೀತಿ ಮತ್ತಷ್ಟು ಸಾಂದ್ರವಾಯಿತು. ಗಂಡ ಬಯ್ಯುತ್ತಿದ್ದರೂ ಅವಳು ಎಲ್ಲವನ್ನೂ ತುಟಿಕಚ್ಚಿ ಸಹಿಸಿಕೊಂಡಳು.

ಆ ರಾತ್ರಿ ಮೊದಲ ಬಾರಿ ಅವಳ ಬಗ್ಗೆ ಅವಿನಾಶನಿಗೆ ಕನಿಕರ ಮೂಡಿತು. ತಾನು ಅಂದುಕೊಂಡಷ್ಟು ಆಕೆ ಕೆಟ್ಟವಳಲ್ಲ ಅನಿಸತೊಡಗಿತು. ದಿನ ಕಳೆದಂತೆ ಅವನ ಹಠ, ಕೋಪ, ಸಿಟ್ಟು, ಸೆಡವು ಕಡಿಮೆಯಾಗುತ್ತಾ ಬಂತು. ಒಂದಿನ ಪೂರ್ತಿಯಾಗಿ ಅವನು ಅವಳನ್ನು ಅಮ್ಮನೆಂದು ಒಪ್ಪಿಕೊಂಡ. ತಾನು ಇದುವರೆಗೆ ಮಾಡಿದ ತಪ್ಪುಗಳನ್ನೆಲ್ಲಾ ಅವನೆದೇ ಭಾಷೆಯಲ್ಲಿ ಅಪ್ಪನೆದುರು ಒಪ್ಪಿಕೊಂಡು ಕ್ಷಮೆ ಕೇಳಿದ. ಅವಳ ಕಣ್ಣಂಚಲ್ಲಿ ತೆಳುವಾಗಿ ನೀರು ಹರಡಿಕೊಂಡು ಸಾರ್ಥಕಭಾವ ಸೆರೆಯಾಗತೊಡಗಿತು, ಇತ್ತ ಊರ ಕೊಟ್ಟಿಗೆಯಲ್ಲಿ ಕಟ್ಟಿಹಾಕಿದ್ದ ಕರು ಹಗ್ಗ ಬಿಚ್ಚಿಸಿಕೊಂಡು ಅಮ್ಮನ ಕೆಚ್ಚಲಿಗೆ ಬಾಯಿಹಾಕಿತು.

ಇಷ್ಟಾಗುವಾಗಾಗಲೇ ಅವಳ ಅಪ್ಪ ಅಮ್ಮನಿಗೂ ಅವಳ ಮೇಲಿದ್ದ ಕೋಪ ಕರಗಿ ಅವಳನ್ನು ಯಾವಾಗೊಮ್ಮೆ ಕಾಣುತ್ತೇವೆಯೋ ಅನಿಸತೊಡಗಿತ್ತು. ಮಗ ತನ್ನನ್ನು ಅಮ್ಮನೆಂದು ಒಪ್ಪಿಕೊಂಡಮೇಲೆ ಇವಳಿಗೂ ಅಪ್ಪ-ಅಮ್ಮ, ಅವರ ಪ್ರೀತಿ, ತಾನು ಅವರಿಗೆ ಕೊಟ್ಟ ನೊವು ಬಹುವಾಗಿ ಕಾಡತೊಡಗಿತು. ಅಪರಾಧಿ ಪ್ರಜ್ಞೆ ಅವಳೊಳಗೆ ಬೆಳೆಯತೊಡಗಿದಂತೆ ಗಂಡನನ್ನೂ, ಮಗನನ್ನು ಕರೆದುಕೊಂಡು ಮತ್ತೆ ಊರಿಗೆ ಬಂದು ಅಪ್ಪನ ಮುಂದೆ ತಲೆ ಬಗ್ಗಿಸಿ ನಿಂತಳು. ಮೊದಮೊದಲು ಅಪ್ಪ ಬಿಗುಮಾನ ತೋರಿದರೂ, ಇಲ್ಲದ ಕೋಪವನ್ನು ಪ್ರದರ್ಶಿಸಿದರೂ, ಅವಳು ಬಂದು ಇನ್ನೂ ಪೂರ್ತಿ ಇಪ್ಪತ್ತನಾಲ್ಕು ತಾಸು ಕಳೆಯುವ ಮುನ್ನವೇ ಅವಳನ್ನು ಮತ್ತೆ ಒಪ್ಪಿಕೊಂಡರು. ಆಕೆ ತುಸು ಪ್ರೌಢವಾಗಿದ್ದಳು ಅನ್ನುವುದನ್ನು ಬಿಟ್ಟರೆ ಇನ್ನಾವ ಮಹತ್ತರ ಬದಲಾವಣೆಯೂ ಅವಳಲ್ಲಿ ಆಗಿರಲೇ ಇಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಅವಳ ಮುಗ್ಧತೆಯಿನ್ನೂ ಉಳಿದುಕೊಂಡಿತ್ತು.

ಅಪ್ಪ-ಅಮ್ಮನೂ ಒಪ್ಪಿಕೊಂಡಮೇಲೆ ಇನ್ನಾವ ನೋವೂ ಉಳಿದಿಲ್ಲ ಎಂಬಂತೆ ಅವಳು ತವರೂರಿನ ಇಂಚು ಇಂಚನ್ನೂ ಮಗನಿಗೆ ಪರಿಚಯಿಸಿದಳು, ಗೆಳತಿಯರ ಬಳಿ ಮೈಸೂರಿನ ಬಗ್ಗೆ ತುಸು ಹೆಚ್ಚೇ ಅನ್ನುವಷ್ಟು ಹೇಳಿಕೊಂಡಳು, ತಾನು ಕೈಯಾರೆ ಹುಲ್ಲು ತಿನ್ನಿಸುತ್ತಿದ್ದ ಆಡಿನ ಮರಿ ಅದೆಷ್ಟು ಬೇಗ ಬೆಳೆದು ದೊಡ್ಡದಾಗಿದೆಯಲ್ಲಾ ಎಂದು ಅಚ್ವರಿಪಟ್ಟಳು, ಮನೆಬಿಟ್ಟು ಹೋಗುವಾಗ ಇನ್ನೂ ಕಣ್ಣುಬಿಟ್ಟಿಲ್ಲದ ಕರುವಿಗೆ ಅದೆಷ್ಟು ಉದ್ದದ ಕೊಂಬು ಬೆಳೆದುಬಿಟ್ಟಿದೆಯಲ್ಲಾ ಎಂದು ಮುಟ್ಟಿ ಮುಟ್ಟಿ ನೋಡಿಕೊಂಡಳು, ಇಷ್ಟು ತಿಂಗಳುಗಳು ಕಳೆದರೂ ಮನೆಯ ನಾಯಿಗೆ ನನ್ನ ಪರಿಚಯ ಮರೆತು ಹೋಗಿಲ್ಲವಲ್ಲಾ ಎಂದು ಸಂತಸ ಪಟ್ಟಳು, ಬಾಗಿದ ಪೈರಿನ ಮಧ್ಯೆ ತಾನೂ ಓಡಿ, ಮಗನನ್ನೂ ಓಡಿಸಿ ದಣಿದಳು, ತಿಳಿನೀರ ಕೊಳದಲ್ಲಿ ಕಾಲು ಇಳಿಬಿಟ್ಟು ಮೀನುಗಳಿಂದ ಕಚ್ಚಿಸಿಕೊಂಡಳು. ಕೊನೆಗೊಂದು ದಿನ ಅಪ್ಪ ಅಮ್ಮನಿಗೆ ವಿದಾಯ ಹೇಳಿ ಮತ್ತೆ ಮೈಸೂರ ಬಸ್ ಹತ್ತಿ, ಕಣ್ಣು ಒರೆಸಿಕೊಳ್ಳುತ್ತಲೇ ಹುಟ್ಟಿದೂರಿಗೆ 'ಬಾಯ್' ಅಂದು ಕಿಟಕಿ ಪಕ್ಕದ ಸೀಟಿಗೆ ಒರಗಿ ಕೂತಳು. ಆ ಹದಿನಾರಂಕದ ಮನೆಯಲ್ಲಿ ಮತ್ತೆ ಸಂಭ್ರಮ, ನಗು ಮೊದಲಿಟ್ಟಿತು.

ಇಷ್ಟೇನಾ...? ಅನ್ನುತ್ತಿದ್ದೀರೇನೋ ನೀವು... ಇಷ್ಟೇ ಆಗಿದ್ದರೆ, ಖಂಡಿತಾ ಇದನ್ನು ಬರೆಯಬೇಕಿರಲಿಲ್ಲ. ಆ ನಂತರ ನಡೆದ ಘಟನೆಗಳು, ತಿರುವುಗಳು ಪದೇ ಪದೇ ಬದುಕಿನ ಅನೂಹ್ಯತೆಯನ್ನು ವಿಡಂಬಿಸುತ್ತಾ ಎಲ್ಲಕ್ಕೂ ಅತೀತವಾದ ಕೆಲವು ಪ್ರಶ್ನೆಗಳನ್ನು ಉಳಿಸಿರುವುದಕ್ಕೇ ಇದನ್ನು ಬರೆಯಬೇಕಾಯಿತು. ಬದುಕು ಕೆಲವೊಮ್ಮೆ ಎಂತಹ ಪ್ರಶ್ನೆ ಕೇಳಿಬಿಡುತ್ತದೆಂದರೆ ಯಾವ googleಗೂ ಉತ್ತರ ಕೊಡಲಾಗದೆ ಸ್ಥಬ್ಧವಾಗುತ್ತದೆ. ನಮ್ಮ ರಾಜಕುಮಾರಿಯ ಬದುಕಲ್ಲಿ ಆಗಿರುವುದೂ ಅದೇ.

ಅವಿನಾಶ ಬೆಳೆಯುತ್ತ ಬಂದಂತೆ ಅಮ್ಮನ ಬಗ್ಗೆ ಪ್ರೀತಿ, ಆದರ, ಅಭಿಮಾನ ಹೆಚ್ಚುತ್ತಾ ಹೋಯಿತು. ಅಮ್ಮನೆಂದರೆ ವಾತ್ಸಲ್ಯ, ಅಮ್ಮನೆಂದರೆ ಸಲುಗೆ... ಸ್ನಾನಕ್ಕೆ ಗೀಸರ್ ಆನ್ ಮಾಡುವಲ್ಲಿಂದ ಕಾಲೇಜ್ ಯುನಿಫಾರ್ಮ್‌ಗೆ ಇಸ್ತ್ರಿ ಹಾಕುವಲ್ಲಿಯವರೆಗೂ ಅಮ್ಮ ಅಮ್ಮ ಅಮ್ಮ... ತನ್ನ ಬದುಕಿಗೆ ಹಣತೆಯಾಗಿ ಬಂದವಳ ಕಣ್ಣಲ್ಲಿನ ಬೆಳಕು ಆರಬಾರದೆಂದು ಸದಾ ಶ್ರಮಿಸುತ್ತಿದ್ದ. ಹುಟ್ಟುತ್ತಲೇ ಜತೆಯಾಗಿದ್ದ ಅಪ್ಪನಿಗಿಂತಲೂ ಕೈ ಹಿಡಿದು ನಡೆಸಿದ ಅಮ್ಮನೇ ಅಚ್ಚುಮೆಚ್ಚೆನಿಸುತ್ತಿತ್ತವನಿಗೆ. ಅವಳಿಗೂ ಅಷ್ಟೆ, ಅವನ ಪ್ರೀತಿಯ ಪರಾಕಾಷ್ಠೆಯ ಮುಂದೆ ಇನ್ನೊಂದು ಮಗು ಬೇಕು ಅಂತ ಅನಿಸಲೇ ಇಲ್ಲ.

ತೆರೆದಿಟ್ಟ ಗಾಳಿಗೆ ಹಳೆಗಾಯ ಆರಿಹೋಗಿ ಬದುಕು ಪಕ್ವವಾಗುತ್ತಿತ್ತು. ಊರಲ್ಲಿ ಅಪ್ಪ ಅಮ್ಮನೂ ಮಗಳು ಸಂತೋಷವಾಗಿದ್ದಾಳಲ್ಲಾ ಅನ್ನುವ ಖುಶಿಯಲ್ಲಿ ಬದುಕುತ್ತಿದ್ದರು. ಹೀಗಿರುವಾಗ ಆ ಸಂತೋಷಕ್ಕೆಲ್ಲಾ ಕೊನೆ ಅನ್ನುವಂತೆ ಒಂದು ದಿನ ಅವಿನಾಶ ಅಮ್ಮನನ್ನು ಬೈಕಿನ ಹಿಂದೆ ಕೂರಿಸಿಕೊಂಡು ಯಾವುದೋ ಸಿಗ್ನಲ್ ಜಂಪ್ ಮಾಡುವಾಗ ಆಯ ತಪ್ಪಿ ಬಿದ್ದು ಬಿಟ್ಟ, ಹಿಂದಿಂದ ಬಂದ ಲಾರಿ ಅವನ ಮೇಲಿಂದ ಹಾದುಹೋಯಿತು. ಅಷ್ಟೇ, ಅವನು ಸ್ಥಳದಲ್ಲೇ ಪ್ರಾಣ ಬಿಟ್ಟ. ನಮ್ಮ ರಾಜಕುಮಾರಿಯ ಬದುಕು ಸ್ಥಬ್ಧವಾಯಿತು. ಮಾತಿಲ್ಲ, ಕಥೆಯಿಲ್ಲ, ಆಕೆ ಸಂಪೂರ್ಣವಾಗಿ ಮೌನವಾಗಿಬಿಟ್ಟಳು. ಮಾತು-ಕಥೆ ಬಿಡಿ, ಅವಿನಾಶನನ್ನು ಅಷ್ಟೊಂದು ಪ್ರೀತಿಸುತ್ತಿದ್ದವಳು ಅವನಿಗೋಸ್ಕರ ಒಂದು ಹನಿ ಕಣ್ಣೀರನ್ನೂ ಸುರಿಸಲಿಲ್ಲ. ಅವಳ ಗಂಡ ಅವನ ಚಿತಾಭಸ್ಮವನ್ನು ಅವಳ ಮುಂದೆ ಇಟ್ಟಾಗಲೂ ಆಕೆಯದೂ ಅದೇ ದಟ್ಟ ಮೌನ.

ಇತ್ತ ಊರಿಗೇ ಊರೇ ಅವಳಿಗೋಸ್ಕರ ಮರುಗಿತು. ಅವಳ ಅಪ್ಪ ಅಮ್ಮ ಮೈಸೂರಿಗೆ ಹೋಗಿ ಅವಳನ್ನು ಮಾತಾನಾಡಿಸಲು ಪ್ರಯತ್ನಪಟ್ಟರು. ಊಹೂಂ, ಅವಳು ಮೌನ ಮುರಿಯಲೇ ಇಲ್ಲ.

ಇಷ್ಟಕ್ಕಾದರೂ ಬದುಕಿನ ವೈಚಿತ್ರಗಳು ಮುಗಿಯಿತಾ ಅಂದುಕೊಂಡರೆ..? ಇಲ್ಲ, ಅದಿನ್ನೂ ಆರಂಭವಾಗಿತ್ತಷ್ಟೇ. ಅವಿನಾಶ ಸತ್ತ ನಂತರ ಅವಳು ಗಂಡನ ಮನೆಯಲ್ಲಿ ಆರು ತಿಂಗಳುಗಳಷ್ಟು ಇದ್ದಳಷ್ಟೇ, ಆಮೇಲೆ ಅದೇನಾಯ್ತೋ ಗೊತ್ತಿಲ್ಲ, ಒಂದಿನ ಊರಿಗೆ ಬಂದವನೇ, ಏನನ್ನೂ ಹೇಳದೆ, ಏನನ್ನೂ ಕೇಳದೆ ಅವಳನ್ನಿಲ್ಲೇ ಬಿಟ್ಟುಹೋದ. ಆ ಮನೆಯಲ್ಲಿ ಮತ್ತೆ ಸೂತಕದ ಛಾಯೆ.

ಊರವರು ಬಾಯಿಗೆ ಬಂದಂತೆ ಮಾತಾಡಿದರು, ಇವಳ ನಡತೆಯ ಬಗ್ಗೆ ಕೆಟ್ಟ ಕೆಟ್ಟದಾಗಿ ಹರಟೆಹೊಡೆಯತೊಡಗಿದರು, ಕೆಲವರಂತೂ ಅವಳಿಗೂ ಅವಿನಾಶನಿಗೂ ಇಲ್ಲದ ಸಂಬಂಧ ಕಟ್ಟಿ ತಮ್ಮ ವಿಕೃತಿಯನ್ನು ತೀರಿಸಿಕೊಂಡರು. ಇಷ್ಟಾದರೂ ಆಕೆ ಏನೂ ಮಾತಾಡಲೇ ಇಲ್ಲ. ಅವಳ ಮೌನದ ಕೋಟೆಯೊಳಗೆ ಯಾರಿಗೂ ಪ್ರವೇಶ ಕೊಡಲೇ ಇಲ್ಲ.

ಹೀಗಿರುವಾಗಲೇ ಒಂದು ದಿನ ಯಾರೋ ಅವಿನಾಶನ ಬಗ್ಗೆ ಮಾತನಾಡುತ್ತಾ ಅವನದು ಹೀನ ಜಾತಕ, ಅದಕ್ಕೇ ಹುಟ್ಟಿ ಕೆಲವರ್ಷಗಳಲ್ಲಿ ಹೆತ್ತಮ್ಮನನ್ನು ಕಳೆದುಕೊಂಡ, ಮತ್ತೂ ಕೆಲವರ್ಷಗಳಲ್ಲಿ ಬೆಳೆಸಿದ ಅಮ್ಮನ ಮಾತನ್ನೇ ಕಿತ್ತುಕೊಂಡ ಅಂದರು. ಅಷ್ಟೂ ತಿಂಗಳುಗಳಿಂದ ಮೌನಗೌರಿಯಾಗಿದ್ದ ನಮ್ಮ ರಾಜಕುಮಾರಿ ಸಿಡಿದುಬಿದ್ದಳು. ಅವಿನಾಶನ ಬಗ್ಗೆ ಕೆಟ್ಟದಾಗಿ ಒಂದೇ ಒಂದು ಮಾತಾಡಿದ್ರೂ ನಾನು ಸುಮ್ಮನಿರಲ್ಲ ಅಂದಳು, ಅಷ್ಟೂ ದಿನಗಳಿಂದ ಹಿಡಿದಿಟ್ಟುಕೊಂಡ ಅವಳ ಭಾವನೆಗಳೆಲ್ಲಾ ಕೋಡಿ ಕೋಡಿಯಾಗಿ ಹರಿಯತೊಡಗಿತು.

ಅಲ್ಲಿಂದಾಚೆ ಒಂದಿಷ್ಟು ಪದಗಳನ್ನು ಹೆಕ್ಕಿ ಮತ್ತೆ ಮಾತಾಡತೊಡಗಿದಳು. ಆದರೆ ಅವಳ ಹುಡುಗಾಟ, ತುಂಟಾಟ, ಮುದ್ದು, ಪ್ರಕೃತಿಯೊಂದಿನ ಒಡನಾಟ ಇವಕ್ಕೆಲ್ಲಾ ಶಾಶ್ವತ ಪೂರ್ಣವಿರಾಮ ಹಾಕಿಬಿಟ್ಟಳು. ಇವತ್ತಿಗೂ ಅಷ್ಟೆ, ಅವಳ ಗಂಡನ ಬಗ್ಗೆ ಪ್ರಶ್ನಿಸಿದಾಗೆಲ್ಲಾ ಆಕೆ, ಹಿಂದೊಮ್ಮೆ ತಾನು ದ್ವೇಷಿಸುತ್ತಿದ್ದ ಅದೇ ಇಲಿ ಬೋಣನ್ನು ಹಿಡಿದು ನಿರ್ಭಾವುಕವಾಗಿ ಅಟ್ಟ ಹತ್ತುತ್ತಾಳೆ, ಅಷ್ಟೆ.

ಆದ್ರೆ, ಎಲ್ಲರನ್ನೂ, ಎಲ್ಲವನ್ನೂ ಎದುರಿಸಿ ತನಗೆ ಬದುಕು ಕಟ್ಟಿಕೊಟ್ಟ ಅವಳನ್ನು ಅವನೇಕೆ ದೂರ ಸರಿಸಿದ...? ಈ ಕ್ಷಣದವರೆಗೂ ನನಗರ್ಥ ಆಗಿಲ್ಲ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ