ಗುರುವಾರ, ಏಪ್ರಿಲ್ 7, 2016

ಕಾಡುವ ಪ್ರೇಮಕೆ ಕಾಡದ ಮರ

ಒಂದಿಷ್ಟು ಕಟ್ಟಿಗೆಯ ರಾಶಿ
ಹಾಕಿದ್ದೇನೆ ನೋಡು ಶಾಕುಂತಲೆ
ಶ್ರೀಗಂಧದ ತುಂಡುಗಳಲ್ಲ
ಅಡ್ಡಾದಿಡ್ಡಿ ಬೆಳೆದ
ಶುದ್ಧ ಕಾಡು ಮರಗಳು

ದಶದಿಕ್ಕುಗಳಿಗೂ ಚಂದನದ
ಪರಿಮಳ ಹೊಮ್ಮಬೇಕಿಲ್ಲ
ಯಾರ ನಾಸಿಕವೂ ಅರಳಬೇಕಿಲ್ಲ
ಒಂದು ವ್ಯರ್ಥ ಪ್ರೇಮಕಥೆಯ
ಸುಡಬೇಕಿದೆ ಅಷ್ಟೆ

ಮಾಡಿದ ಆಣೆ ಪ್ರಮಾಣ
ಇತ್ತ ಬೆಚ್ಚನೆಯ ಭರವಸೆಯ
ಮರೆತು ಹಾಯಾಗಿರುವವನ ಹಾದಿಯ
ಕಾಯುತ್ತಾ ಕೂತಿದ್ದಾಳೆ ಇಲ್ಲೊಬ್ಬ ಹುಡುಗಿ
ನದಿ ದಂಡೆಯ ಮೇಲೆ ಕಾಲು ಚಾಚಿ

ಮೀನ ಗರ್ಭ ಸೀಳಿ ಹೊಳೆವ
ಉಂಗುರ ಬಂದು ಅವಳೆದೆಯ
ಸಂಭ್ರಮಕ್ಕೆ ಜೊತೆಯಾಗುತ್ತದೆಂಬ
ನಿರೀಕ್ಷೆ ಇರಲೂಬಹುದೇನೋ
ಗೊತ್ತಿಲ್ಲ; ನನಗವಳ ಬದುಕು ಮುಖ್ಯ

ನಿನಗಾದರೂ ಪ್ರೀತಿಯ ಸಾಕ್ಷಿಗೆ
ರಾಜಮುದ್ರೆಯ ಉಂಗುರವಿತ್ತು ಶಾಕುಂತಲೆ
ಅವಳದೋ? ಸಾಕ್ಷಿಯಿಲ್ಲದ ಪ್ರೀತಿ
ಅರ್ಥವಿಲ್ಲದ ನಿರೀಕ್ಷೆ
ಸಾಬೀತುಪಡಿಸಲಾಗದ ಒಲವು

ನನಗೀಗ ತುರ್ತಾಗಿ ಅವಳ
ಬಹು ಅವಧಿಯ ಭ್ರಮೆಯನು ಒಡೆಯಬೇಕಿದೆ
ನಿನ್ನೆಗಳಲೇ ಹುದುಗಿರುವ ಅವಳನು
ಇಂದಿಗೆ ಎಳೆದು ತಂದು ನಿರ್ಮಲ
ನಾಳೆಗಳಿಗೆ ಮುಖಾಮುಖಿಯಾಗಲು ಸಜ್ಜಾಗಿಸಬೇಕಿದೆ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ