ಗುರುವಾರ, ಏಪ್ರಿಲ್ 7, 2016

ಆ ಸಂಬಂಧಕ್ಕೊಂದು ಗೌರವದ ತೆರೆಯೆಳೆದು ಮುಂದೆ ಸಾಗೋಣ.

ಬಹುಶಃ ಮನುಷ್ಯನ ಬದುಕಿನ ಕದನ, ಪ್ರತಿ ವೀರ್ಯಾಣು ಅಂಡಾಣುವನ್ನು ಸೇರಲು ನಡೆಸುವ ಸಮರದಿಂದಲೇ ಪ್ರಾರಂಭವಾಗುತ್ತದೆ. ಹಾಗಾಗಿಯೇ ಕೋಟ್ಯಾಂತರ ವೀರ್ಯಾಣುಗಳು ಗರ್ಭಕೋಶದ ಸುತ್ತ ಪರಸ್ಪರ ಯುದ್ಧ ಮಾಡುತ್ತಾ, ಗಮ್ಯ ಸೇರಿದ ಮೇಲೆ ಅಲ್ಲೂ ಒಂದಿಷ್ಟು ಹೋರಾಟ ನಡೆದ ಮೇಲೆ ಕೇವಲ ಒಂದು ಅಣುವಷ್ಟೆ ಅಂಡಾಣುವನ್ನು ಸೇರಿ ಭ್ರೂಣವಾಗುತ್ತದೆ. ಆ ಭ್ರೂಣ ವಿಕಸಿಸಿ, ತಾಯ ಗರ್ಭದಿಂದ ಗರ್ಭಚೀಲವನ್ನು ಒಡೆದು ಹೊರಬಂದಾಗಿನಿಂದಲೇ ಈ ಪ್ರಪಂಚದೊಂದಿಗಿನ ಮನುಷ್ಯನ ಸಂಬಂಧಕ್ಕೆ ಅಧಿಕೃತ ಚಾಲನೆ ದೊರಕಿಬಿಡುತ್ತದೆ. ಪ್ರತಿ ಮನುಷ್ಯನ ಹುಟ್ಟು ತನ್ನ ಜೊತೆ ಜೊತೆಗೆ ಸಂಬಂಧಗಳ ಹುಟ್ಟಿಗೂ ಕಾರಣವಾಗುತ್ತದೆ. ಸಂಬಂಧಗಳಿಲ್ಲದೆ ಮನುಷ್ಯನಿಗೆ ಸ್ವತಂತ್ರ ಅಸ್ತಿತ್ವವೇ ಇಲ್ಲವೇನೋ ಅನ್ನಿಸುವಷ್ಟರಮಟ್ಟಿಗೆ ಅವು ಅವನ ಜೀವನವನ್ನು ಪ್ರಭಾವಿಸುತ್ತವೆ.

ಹುಟ್ಟಿದ ತಕ್ಷಣ ಬೆಸೆಯುವ ಸಂಬಂಧಗಳಲ್ಲಿ ಆಯ್ಕೆಯ ಅವಕಾಶವಿರುವುದಿಲ್ಲ. ತಾಯಿಯೊಂದಿಗಿನ ಸಂಬಂಧ ಹುಟ್ಟಿಗಿಂತಲೂ ಮೊದಲೇ ಬೆಸೆದುಗೊಂಡಿದ್ದರೆ, ತಂದೆ, ಅಣ್ಣ, ಅಕ್ಕ, ಅಜ್ಜಿ, ಅಜ್ಜ... ಮುಂತಾದ ಸಂಬಂಧಗಳು ಮಗು ಇನ್ನೂ ಸರಿಯಾಗಿ ಕಣ್ಣು ಬಿಡುವ ಮುನ್ನವೇ, ಮುಷ್ಟಿ ಬಿಡಿಸಿಕೊಳ್ಳುವ ಮುನ್ನವೇ ಬೆಸೆದುಬಿಡುತ್ತವೆ. ಮುಂದೆ ಇವೇ ಸಂಬಂಧಗಳು, ಮತ್ತು ಅವು ನೀಡುವ ಸಂಸ್ಕಾರಗಳು ಆ ಮನುಷ್ಯನ ಸಮಾಜದ ಜೊತೆಗಿನ ಕೊಡುಕೊಳ್ಳುವಿಕೆಯನ್ನು, ನಡತೆಗಳನ್ನು ನಿರ್ಧರಿಸುತ್ತವೆ.

ಮನೆಯಾಚೆ ಕಾಲಿಡಲು ಕಲಿತಕೂಡಲೇ ಮಗು, ತನಗೆ ಹಿತವಾಗುವಂತೆ ತನ್ನದೇ ವಲಯಗಳೊಳಗೆ ತನ್ನಾಯ್ಕೆಯ ಸಂಬಂಧಗಳನ್ನು ಸೃಷ್ಟಿಸುತ್ತಾ ಸಾಗುತ್ತದೆ. ತಾನು ಬದುಕು ಕಟ್ಟಿಕೊಳ್ಳುವ ಪ್ರತಿ ಕ್ಷೇತ್ರದಲ್ಲಿಯೂ, ತನ್ನ ಬದುಕು ಹರಡಿಕೊಳ್ಳುವ ಪ್ರತಿ ಪರಿಸರದಲ್ಲೂ ಸಂಬಂಧಗಳಿಗೆ ತಾತ್ಕಾಲಿಕವಾಗಿ ಅಥವಾ ಶಾಶ್ವತವಾಗಿ ಶಿಲನ್ಯಾಸ ನೆರವೇರಿಸುತ್ತಾ, ಇನ್ನು ಕೆಲವೊಮ್ಮೆ ತಾನು ಕಟ್ಟಿದ ಸಂಬಂಧವನ್ನು ತಾನೇ ಕೆಡವುತ್ತಾ ಮುಂದುವರಿಯುತ್ತಿರುತ್ತದೆ.

ಬದುಕು ವಿಸ್ತಾರವಾದಂತೆ, ಅವಶ್ಯಕತೆಗಳು ಬೆಳೆದಂತೆ, ಬೆಳಗಾಗೆದ್ದು ಮನೆ ಮುಂದೆ ಪೇಪರ್ ಹಾಕುವ ಹುಡುಗ, ಪಕ್ಕದ್ಮನೆ ಆಂಟಿ, ಎದುರು ಮನೆ ಅಂಕಲ್, ಒಟ್ಟಿಗೆ ಆಡಿ ಬೆಳೆದ ಗೆಳೆಯ, ತನ್ನ ಗಲ್ಲಿಯ ಮೂಲೆಯ ಮರದಡಿಯಲ್ಲಿ ಕೂತು ಹೂವು ಮಾರುವ ಹೆಣ್ಣುಮಗಳು, ದಿನಾ ಪ್ರಯಾಣ ಮಾಡುವ ಬಸ್ಸಿನ ಡ್ರೈವರ್, ಚಿಲ್ಲರೆಗಾಗಿ ಜಗಳ ಕಾಯುವ ಕಂಡಕ್ಟರ್, ಪ್ರತಿ ಚುನಾವಣೆ ಸಂದರ್ಭದಲ್ಲೂ ಹಲ್ಲು ಗಿಂಜುತ್ತ ವೋಟ್ ಕೇಳಲು ಬರುವ ರಾಜಕಾರಣಿ, ಅವನ ಒಂದಿಷ್ಟು ಹಿಂಬಾಲಕರು, ಅಂಕಗಣಿತದಿಂದ ಬದುಕಿನ ಗಣಿತದವರೆಗೂ ಕಲಿಸಿದ, ನಿರ್ದೇಶಿಸಿದ ಗುರುಗಳು, ಹೊಟ್ಟೆ ನೋವೆಂದಾಗ ಪುಟ್ಟ ಸರ್ಜರಿ ಮಾಡಿ ನೋವಿಂದ ರಿಲೀಫ್ ಒದಗಿಸಿಕೊಟ್ಟ ದಪ್ಪ ಕನ್ನಡಕದ ಡಾಕ್ಟರ್... ಹೀಗೆ ಸಂಬಂಧಗಳ ಪಟ್ಟಿ ಅಗಾಧವಾಗುತ್ತಾ ಹೋಗುತ್ತದೆ. ಮತ್ತು ಆ ಅಗಾಧತೆಯೇ ಎಣೆಯಿಲ್ಲದ ಸಹನೆ, ಒಂದಿಷ್ಟು ಪ್ರೀತಿ, ನಿಭಾಯಿಸಿಕೊಳ್ಳುವ ಜಾಣತನ ಎಲ್ಲವನ್ನೂ ಬೇಡತೊಡಗುತ್ತದೆ.

ಇನ್ನು, ಮನೆಯೊಳಗಿನ ಅಥವಾ ಮನೆಯಾಚಿಗಿನ ಅಷ್ಟೂ ಸಂಬಂಧಗಳು, ಅದರ ಸುತ್ತ ಹಬ್ಬಿಕೊಂಡಿರುವ ನವಿರು ಭಾವಗಳು, ಅದರಾಳದ ತಲ್ಲಣಗಳು, ಅವು ನೀಡುವ ಭರವಸೆಗಳು ಅಷ್ಟೇಕೆ ಪ್ರಪಂಚದ ಅಸ್ತಿತ್ವವೇ ನಿಂತಿರುವುದು ನಂಬಿಕೆಯೆಂಬ ತಿಳಿಯಾದ ಒರತೆಯ ಮೇಲೆ. ಒಮ್ಮೆ ಆ ತಿಳಿ ಒರತೆಗೆ ಒಂದೇ ಒಂದು ಹನಿ ಹಾಲಾಹಲ ಬಿದ್ದುಬಿಟ್ಟರೆ ಸಾಕು ಎಲ್ಲವೂ ಅಲ್ಲೋಲಕಲ್ಲೋಲವಾಗಿಬಿಡುತ್ತದೆ. ಹುಟ್ಟುತ್ತಲೇ ಜತೆಯಾದ ರಕ್ತ ಸಂಬಂಧಗಳು, ಏಳೇಳು ಜನ್ಮಗಳಲ್ಲೂ ಜೊತೆಯಿರುತ್ತೇವೆ ಅಂತ ಆಣೆ ಪ್ರಮಾಣ ಮಾಡಿಸಿಕೊಂಡ ಪ್ರೀತಿ, ಗಳಸ್ಯ ಕಂಠಸ್ಯ ಎಂಬಂತಿದ್ದ ಸ್ನೇಹ, ಪೇಪರ್ ಹುಡುಗನ ಜೊತೆಗಿನ ವ್ಯಾವಹಾರಿಕ ಸಂಬಂಧ ಎಲ್ಲವೂ ಆಕ್ಷಣದಲ್ಲಿ ಮುರಿದು ಬೀಳುತ್ತವೆ. ಹಲವು ಬಾರಿ ದೇಶ ದೇಶಗಳೊಳಗಿನ ದ್ವೇಷಕ್ಕೂ, ಮಹಾಯುದ್ಧಗಳಿಗೂ, ಅನಗತ್ಯದ ರಕ್ತಪಾತಗಳಿಗೂ ನಂಬಿಕೆ ದ್ರೋಹವೇ ಕಾರಣವಾಗಿರುವುದೂ ಇದೆ.

ಒಂದು  ಬಾರಿ, ಕೇವಲ ಒಂದು ಬಾರಿ ನಂಬಿಕೆ ದ್ರೋಹದ ಬೀಜ ಅಂಕುರವಾಗಿ ದ್ವೇಷ ಉದ್ಭವವಾದರೆ ಸಾಕು ಆವರೆಗಿನ ಎಲ್ಲಾ ಬಾಂಧವ್ಯಗಳು, ಮಧುರ ಸಾಂಗತ್ಯಗಳು ಆತ್ಮಹತ್ಯೆ ಮಾಡಿಕೊಂಡು ಬಿಡುತ್ತವೆ. ಆಗೆಲ್ಲಾ ನಾವೂ ಮನಸು ಕೆಡಿಸಿಕೊಂಡು, ನಮ್ಮ ಸುತ್ತಲಿರುವವರ ಮನಸೂ ಕೆಡಿಸುವುದಕ್ಕಿಂತ ಆ ದ್ರೋಹವನ್ನೂ ಮೀರಿ ಸಂಬಂಧ ಮುಂದುವರೆಸೋಕೆ ಸಾಧ್ಯಾನಾ? ಹಾಗೊಂದು ವೇಳೆ ಮುಂದುವರೆಸಿದರೆ ನಮ್ಮಿಂದ ಆ ಸಂಬಂಧ ನ್ಯಾಯ ಸಲ್ಲಿಸೋಕೆ ಸಾಧ್ಯಾನಾ? ಅಂತ ತಣ್ಣಗೆ ಯೋಚಿಸಿ ಸಂಬಂಧವನ್ನು ಉಳಿಸಿಕೊಳ್ಳೋಕೆ ಪ್ರಯತ್ನಿಸುವುದು ಜಾಣತನ. ಇಲ್ಲ, ಅದು ಸಾಧ್ಯವೇ ಇಲ್ಲ ಅಂತ ಪ್ರಾಮಾಣಿಕವಾಗಿ ಅನಿಸಿದರೆ  ಹಾದಿ ಬೀದಿ ರಂಪ ಮಾಡದೇ, ಶರಂಪರ ಜಗಳವಾಡದೇ, ಮೂರನೇಯವರ ಬಳಿ ತನಗಾದ ಮೋಸದ ಬಗ್ಗೆ ಅಳವತ್ತುಕೊಳ್ಳದೆ, ಆ ಸಂಬಂಧಕ್ಕೊಂದು ಗೌರವದ ತೆರೆಯೆಳೆದು ಮುಂದೆ ಸಾಗೋಣ. ಏನಂತೀರಿ?

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ