ಬುಧವಾರ, ಏಪ್ರಿಲ್ 6, 2016

ಹಾಸಿಗೆ ಇದ್ದಷ್ಟೇ ಏಕೆ ಕಾಲು ಚಾಚಬೇಕು?

'ಈ ಕೆಳಗಿನ ಗಾದೆ ಮಾತನ್ನು ವಿಸ್ತರಿಸಿ ಬರೆಯಿರಿ'.
ಹಾಗಂತ ಪ್ರಶ್ನೆ ಪತ್ರಿಕೆಯಲ್ಲಿ  ದಪ್ಪ ಅಕ್ಷರದಲ್ಲಿ ಅಚ್ಚಾಗಿ ಬಂದ ಪ್ರಶ್ನೆಗೆ ಎಲ್ಲಿಂದೆಲ್ಲಿಗೋ ಸಂಬಂಧ ಕಲ್ಪಿಸಿ ನಾವೆಲ್ಲಾ ಉತ್ತರ ಬರೆದವರೇ. ಊರ ಅರಳಿಕಟ್ಟೆಯಡಿಯಲ್ಲಿ ಅನುಭವಕ್ಕೆ ದಕ್ಕಿಯೋ, ಮಾತಿನ ಮಧ್ಯೆ ನುಸುಳಿಯೋ ಹುಟ್ಟಿದ ಗಾದೆ ಮಾತಿಗೆ ಅದೆಲ್ಲೋ ದೂರದ ಅಮೇರಿಕಾದ ಶ್ವೇತಭವನದಲ್ಲಿ ಕಾಲಮೇಲೆ ಕಾಲು ಹಾಕಿ ಕುಳಿತ ಬಿಲ್ ಕ್ಲಿಂಟನ್‍ನ್ನು ಲಿಂಕಿಸಿ, ಎರಡು ಸಮಾಂತರ ರೇಖೆಗಳನ್ನು ಶೂನ್ಯದಲ್ಲಿ ಛೇದಿಸಿ ಎರಡೂ ಒಂದೇ ಎಂದು ಸಾಧಿಸಿದವರು ಅಥವಾ ಪ್ರಶ್ನೆಪತ್ರಿಕೆಯ ಭಾಷೆಯಲ್ಲೇ ಹೇಳುವುದಾದರೆ ವಿಸ್ತರಿಸಿ ಬರೆದವರು ನಾವು.

'ಕುರಿತೋದದೆಯುಂ ಕಾವ್ಯ ಪ್ರಯೋಗ ಪರಿಣಿತಮತಿಗಳ್' ಎಂದು ಆದಿಕವಿ ಪಂಪನಿಂದ ಹೊಗಳಿಸಿಕೊಂಡ ಒಂದು ಭವ್ಯತಲೆಮಾರಿನ ಹಿರೀಕರು ತಮ್ಮ ಅನುಭವದಿಂದ ಮಥಿಸಿ ತೆಗೆದ ನವನೀತಗಳೇ ಈ ಗಾದೆಗಳು. ಉದಾತ್ತ ಜೀವನ ಮೌಲ್ಯಗಳನ್ನು ಕೇವಲ ಒಂದು ಸಾಲಿನಲ್ಲಿ ಹೇಳಿಬಿಡುವ ಇವುಗಳು ಒಂದು ರೀತಿಯಲ್ಲಿ ನಮ್ಮ ಅತ್ಯುಚ್ಛ ಜನಪದ ಸಾಹಿತ್ಯಕ್ಕೆ, ಅದರ ಆಳದಲ್ಲಿನ ಸಾಂದ್ರ ಜೀವಾನನುಭವಕ್ಕೆ ಹಿಡಿಯುವ ಕೈಗನ್ನಡಿಗಳು.

ಇರಲಿ, ನಾನಿಲ್ಲಿ ಪ್ರಸ್ತಾಪಿಸಹೊರಟಿದ್ದ ಅಸಲಿ ವಿಷಯ ಅದಲ್ಲ. ನಿಜಕ್ಕೂ ನನ್ನ ತಕರಾರಿರುವುದೇ 'ಹಾಸಿಗೆ ಇದ್ದಷ್ಟೇ ಕಾಲು ಚಾಚು' ಅನ್ನುವ ಗಾದೆಯ ಬಗ್ಗೆ. ಹಾಸಿಗೆ ಇದ್ದಷ್ಟೇ ಕಾಲು ಚಾಚಿ ಅಲ್ಪತೃಪ್ತರಾಗುವುದಕ್ಕಿಂತ ಕಾಲಿರುವಷ್ಟು ಅಥವಾ ಕಾಲನ್ನೂ ಮೀರಿ ಹಾಸಿಗೆ ಹೊಲಿಸಿಕೊಳ್ಳಬಹುದಲ್ಲಾ?

ಹಾಸಿಗೆಯ ಗಾದೆಗೆ ಜೋತು ಬಿದ್ದ ಪ್ರತಿ ಮನುಷ್ಯ ತನ್ನ ಸುತ್ತ ಒಂದು ಕೋಟೆ ಕಟ್ಟಿಕೊಂಡು ಆ ಕೋಟೆಯೊಳಗೆ ತನ್ನನ್ನು ತಾನು safe ಅಂದುಕೊಂಡು ಬದುಕುತ್ತಿರುತ್ತಾನೆ. ಕೋಟೆಯ ಹೊರಗಡೆ ಒಂದಿಂಚು ಕಾಲಿಟ್ಟರೂ ಎಲ್ಲಿ ತನ್ನ ಬದುಕಿನ ಆಯ ತಪ್ಪಿಬಿಡುತ್ತದೋ ಅನ್ನುವ ಭಯಕ್ಕೆ ಬಿದ್ದುಬಿಡುತ್ತಾನೆ. ಪರಿಣಾಮ, ತಾವು ಕಟ್ಟಿಕೊಂಡ ಕಂಫರ್ಟ್ ಝೋನ್‍‍ನೊಳಗೆ ತಮ್ಮನ್ನು ಬಂಧಿಸಿಕೊಂಡು 'ಸುಖೀ' ಅನ್ನುವ ಭ್ರಮೆಯನ್ನು ಪ್ರತಿದಿನ ನವೀಕರಿಸುತ್ತಲೇ ಹೋಗುತ್ತಾನೆ.

ದಿನಾ ಬೆಳಗಾದ್ರೆ, ಅದೇ ಸ್ನಾನ, ಅದೇ ತಿಂಡಿ, ಅದೇ ಸಿಟಿ ಬಸ್, ಅದೇ ಧಾವಂತ, ಅದೇ ಆಫೀಸ್, ಮತ್ತೆ ಮಧ್ಯಾಹ್ನದ ಊಟ, ಒಂದಿಷ್ಟು ಹೊತ್ತು ವಿರಾಮ, ಮತ್ತೆ ಕಂಪ್ಯೂಟರ್, ಸಂಜೆಗೆ ಮತ್ತದೇ ಸಿಟಿ ಬಸ್, ಕಂಡಕ್ಟರ್ ಜೊತೆಗಿನ ವೃಥಾ ಜಗಳ, ಟೀ, ರಾತ್ರಿಯೂಟ, ಮತ್ತೆ ಬೆಳಗು, ಕೆಲವು ಅಲ್ಪತನಗಳು... ಹೀಗೆ ಬದುಕಿನ ಹಲವು ಅಮೂಲ್ಯ, ಮತ್ತೊಮ್ಮೆ ಹಿಂದಿರುಗಿ ಬರಲಾರದ ದಿನಗಳು ಅದೇ ಹಾಸಿಗೆಯಲ್ಲಿ ಕಾಲು ಚಾಚೋಕಾಗದೆ ಮುದುರಿಕೊಂಡು ಮಲಗಿಬಿಡುತ್ತವೆ. ಅಲ್ಲಿ ಹೊಸತನಕ್ಕೆ, ಹೊಸ ಅನುಭವಗಳಿಗೆ, ಹೊಸ ಸಂವೇದನೆಗಳಿಗೆ ಜಾಗವೇ ಇರುವುದಿಲ್ಲ.

ನೀವು ಗಮನಿಸಿರಲೂಬಹುದು, ಕೆಲವರು ಇನ್ನೂ ಮೂವತ್ತೈದು ದಾಟುವ ಮುನ್ನವೇ 'ಬದುಕು ಬೋರ್ ಕಣ್ರೀ' ಅಂತ ಗೊಣಗುತ್ತಿರುತ್ತಾರೆ. ನೀವೇನಾದ್ರೂ 'ಹೊಸತನ್ನು ಪ್ರಯತ್ನಿಸಿ' ಅಂತ ಸಲಹೆ ಕೊಡೋಕೆ ಹೋದ್ರೆ ನಿಮ್ಮ ಮುಖಕ್ಕೆ ರಾಚುವಂತೆ 'ನಾನು ನೆಮ್ಮದಿಯಾಗಿದ್ದೇನೆ, ಬಿಡಿ' ಅಂತಂದು ದೂರ್ವಾಸ ಮುನಿಯ ದೂರದ ಸಂಬಂಧಿಯೇನೋ ಎಂಬಂತೆ ಎದ್ದುಹೋಗುತ್ತಾರೆ. ಅಸಲಿಗೆ ಹಾಸಿಗೆ ಇದ್ದಷ್ಟೇ ಕಾಲುಚಾಚುವವರ ಕೆಟಗರಿಯ ಮೊದಲ ಸಾಲಲ್ಲಿ ಇರುವವರೇ ಅವರು.

ನಿಜ, ಬದುಕಲ್ಲಿ ಅನಗತ್ಯದ ಅಪಾಯ ಮೇಲೆಳೆದುಕೊಳ್ಳಬಾರದು. ಒಂದು ಪುಟ್ಟ ಬೆಟ್ಟ ಹತ್ತಲಾಗದವರು ಎವರೆಸ್ಟ್ ಏರುತ್ತೇನೆಂದು ಹೊರಡುವುದು, ಅಥವಾ ಆಪದ್ಧನವೆಂದು ಕೂಡಿಟ್ಟ ಬ್ಯಾಂಕ್ ಬ್ಯಾಲೆನ್ಸನ್ನು ಸುರಿದು ಒಂದು ಅಸಂಬದ್ಧ ಸಿನಿಮಾ ನಿರ್ಮಿಸುವುದು, ಇನ್ನೂ ಕಾಲೇಜು ಮಟ್ಟದಲ್ಲಿ ಆಡುತ್ತಿರುವ ಹುಡುಗ ಇನ್ನೆರಡೇ ದಿನಗಳಲ್ಲಿ ರಾಷ್ಟ್ರೀಯ ತಂಡ ಸೇರಿ ಸೆಂಚುರಿ ಬಾರಿಸುತ್ತೇನೆ ಅಂತಂದುಕೊಳ್ಳುವುದು, ಕೈಕಾಲು ನಡುಗೋ ವಯಸ್ಸಲ್ಲಿ ಹೊಸದಾಗಿ ಗಿಟಾರ್ ಕಲಿಯೋಕೆ ಹೋಗಿ ಒಂದೇ ದಿನದಲ್ಲಿ ರಾಕ್ ಸ್ಟಾರ್ ಆಗುತ್ತೇನೆ ಅಂದುಕೊಳ್ಳುವುದು ಎಲ್ಲಾ ಅವಿವೇಕ ಮತ್ತು ಮೂರ್ಖತನಗಳೇ. ಆದರೆ calculated risk ತೆಗೆದುಕೊಳ್ಳುವಲ್ಲೂ, ತೀರಾ ಸಾಮಾನ್ಯ ಅನ್ನುವಂತಹ ಅಪಾಯಗಳನ್ನು ಕೈಗೆತ್ತಿಕೊಳ್ಳುವಲ್ಲೂ ಹಾಸಿಗೆಯ ಉದ್ದ, ಅಗಲ ಅಳೆಯುವುದು ಎಷ್ಟು ಸರಿ?

ಒಂದಂತೂ ನಿಜ, ಹೊಸ ಅನುಭವದ ಜ್ಞಾತ-ಅಜ್ಞಾತ ಮಗ್ಗುಲುಗಳನ್ನು, ಸ್ಪಷ್ಟ-ಅಸ್ಪಷ್ಟ ಅರಿವುಗಳನ್ನು, ಸುಪ್ತ-ಜಾಗೃತ ಪದರುಗಳನ್ನು, ಕೂಡಿಕೊಂಡ-ಕವಲೊಡೆದ ದಾರಿಗಳನ್ನು, ಆರೋಹಣ-ಅವರೋಹಣಗಳ ವಿವಿಧ ಮುಖಗಳನ್ನು ಅರ್ಥಮಾಡಿಕೊಳ್ಳಬೇಕೆಂದರೆ ಹಾಸಿಗೆ ಮೀರಿ ಕಾಲುಚಾಚಲೇ ಬೇಕು. ಹಾಗೆ ಚಾಚಿದಾಗೆಲ್ಲಾ, ಮಹಾ ಎಂದರೆ ಒಂದಿಷ್ಟು ಬಿಸಿ ಅಥವಾ ತಣ್ಣನೆಯ ಅನುಭವವಾಗಬಹುದು ಅಷ್ಟೇ. ಅದೂ ಆಗಿ ಬಿಡಲಿ, ಯಾಕೆಂದರೆ ಬದುಕು ಪಕ್ವವಾಗುವುದು ಅಂತಹ ಅನುಭವಗಳಿಂದಲೇ. ಅಲ್ಲವೇ?

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ